Shanti Parva: Chapter 245

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೪೫

ಸ್ಥೂಲ, ಸೂಕ್ಷ್ಮ ಮತ್ತು ಕಾರಣ ಶರೀರಗಳಿಂದ ಭಿನ್ನರಾದ ಜೀವಾತ್ಮ-ಪರಮಾತ್ಮರನ್ನು ಯೋಗದ ಮೂಲಕ ಸಾಕ್ಷಾತ್ಕರಿಸುವ ವಿಧಾನ (1-14).

12245001 ವ್ಯಾಸ ಉವಾಚ|

12245001a ಶರೀರಾದ್ವಿಪ್ರಮುಕ್ತಂ ಹಿ ಸೂಕ್ಷ್ಮಭೂತಂ ಶರೀರಿಣಮ್|

12245001c ಕರ್ಮಭಿಃ ಪರಿಪಶ್ಯಂತಿ ಶಾಸ್ತ್ರೋಕ್ತೈಃ ಶಾಸ್ತ್ರಚೇತಸಃ||

ವ್ಯಾಸನು ಹೇಳಿದನು: “ಶಾಸ್ತ್ರಚೇತಸನು ಶರೀರದಿಂದ ಹೊರ ಬರುವ ಸೂಕ್ಷ್ಮಭೂತ ಜೀವಾತ್ಮನನ್ನು ಶಾಸ್ತ್ರೋಕ್ತ ಕರ್ಮಗಳಿಂದ ನೋಡುತ್ತಾರೆ.

12245002a ಯಥಾ ಮರೀಚ್ಯಃ ಸಹಿತಾಶ್ಚರಂತಿ

ಗಚ್ಚಂತಿ ತಿಷ್ಠಂತಿ ಚ ದೃಶ್ಯಮಾನಾಃ|

12245002c ದೇಹೈರ್ವಿಮುಕ್ತಾ ವಿಚರಂತಿ ಲೋಕಾಂಸ್

ತಥೈವ ಸತ್ತ್ವಾನ್ಯತಿಮಾನುಷಾಣಿ||

ಸೂರ್ಯಕಿರಣಗಳು ಹೇಗೆ ಒಂದಕ್ಕೊಂದು ಹೊಂದಿಕೊಂಡು ಎಲ್ಲಕಡೆ ಚಲಿಸುತ್ತವೆಯೋ ಹಾಗೂ ನಿಂತಿರುವಂತೆ ಹೋಗುತ್ತಿರುವಂತೆ ಕಾಣುತ್ತವೆಯೋ ಹಾಗೆ ದೇಹದಿಂದ ಹೊರಟ ಅಮಾನುಷ ಸತ್ತ್ವಗಳು ಲೋಕಗಳಲ್ಲಿ ಸಂಚರಿಸುತ್ತಿರುತ್ತವೆ.

12245003a ಪ್ರತಿರೂಪಂ ಯಥೈವಾಪ್ಸು ತಾಪಃ ಸೂರ್ಯಸ್ಯ ಲಕ್ಷ್ಯತೇ|

12245003c ಸತ್ತ್ವವಾಂಸ್ತು ತಥಾ ಸತ್ತ್ವಂ ಪ್ರತಿರೂಪಂ ಪ್ರಪಶ್ಯತಿ||

ನೀರಿನಲ್ಲಿ ಹೇಗೆ ಸೂರ್ಯನ ಪ್ರತಿರೂಪ ಮತ್ತು ತಾಪವು ಕಾಣುತ್ತವೆಯೋ ಹಾಗೆ ಯೋಗಿಯು ಶರೀರಗಳಲ್ಲಿ ಜೀವಾತ್ಮನ ಪ್ರತಿರೂಪವನ್ನು ಕಾಣುತ್ತಾನೆ.

12245004a ತಾನಿ ಸೂಕ್ಷ್ಮಾಣಿ ಸತ್ತ್ವಸ್ಥಾ ವಿಮುಕ್ತಾನಿ ಶರೀರತಃ|

12245004c ಸ್ವೇನ ತತ್ತ್ವೇನ ತತ್ತ್ವಜ್ಞಾಃ ಪಶ್ಯಂತಿ ನಿಯತೇಂದ್ರಿಯಾಃ||

ಶರೀರತತ್ತ್ವವನ್ನು ತಿಳಿದಿರುವ ಜಿತೇಂದ್ರಿಯ ಯೋಗಿಗಳು ಸ್ಥೂಲಶರೀರದಿಂದ ಹೊರಟು ಸೂಕ್ಷ್ಮ ಲಿಂಗಶರೀರವನ್ನು ಧರಿಸಿರುವ ಜೀವಗಳನ್ನು ತಮ್ಮ ಆತ್ಮನ ಮೂಲಕವಾಗಿಯೇ ನೋಡುತ್ತಾರೆ.

12245005a ಸ್ವಪತಾಂ ಜಾಗ್ರತಾಂ ಚೈವ ಸರ್ವೇಷಾಮಾತ್ಮಚಿಂತಿತಮ್|

12245005c ಪ್ರಧಾನದ್ವೈಧಯುಕ್ತಾನಾಂ ಜಹತಾಂ ಕರ್ಮಜಂ ರಜಃ||

12245006a ಯಥಾಹನಿ ತಥಾ ರಾತ್ರೌ ಯಥಾ ರಾತ್ರೌ ತಥಾಹನಿ|

12245006c ವಶೇ ತಿಷ್ಠತಿ ಸತ್ತ್ವಾತ್ಮಾ ಸತತಂ ಯೋಗಯೋಗಿನಾಮ್||

ಕರ್ಮಜನಿತ ರಜೋಗುಣವನ್ನು ಪರಿತ್ಯಜಿಸಿರುವ ಮತ್ತು ಪ್ರಕೃತಿಸಂಬಂಧ ದ್ವಂದ್ವಗಳಿಂದ ವಿಮುಕ್ತರಾಗಿರುವ ಯೋಗಿಗಳಿಗೆ ಮಲಗಿದ್ದಾಗ ಮತ್ತು ಎಚ್ಚೆತ್ತಿರುವಾಗ ಆತ್ಮನು ವಶನಾಗುತ್ತಾನೆ. ಅವರಿಗೆ ಹಗಲಿನಂತೆ ರಾತ್ರಿಯಲ್ಲಿಯೂ, ರಾತ್ರಿಯಂತೆ ಹಗಲಿನಲ್ಲಿಯೂ ನಿರಂತರವಾಗಿ ಆತ್ಮದರ್ಶನವಾಗುತ್ತಿರುತ್ತದೆ.

12245007a ತೇಷಾಂ ನಿತ್ಯಂ ಸದಾನಿತ್ಯೋ ಭೂತಾತ್ಮಾ ಸತತಂ ಗುಣೈಃ|

12245007c ಸಪ್ತಭಿಸ್ತ್ವನ್ವಿತಃ ಸೂಕ್ಷ್ಮೈಶ್ಚರಿಷ್ಣುರಜರಾಮರಃ||

ಅಂಥವರಿಗೆ ನಿತ್ಯನೂ, ಏಳು ಸೂಕ್ಷ್ಮಗುಣಗಳಿಂದ[1] ಕೂಡಿರುವವನೂ, ಸಂಚರಿಸುವ ಸ್ವಭಾವವುಳ್ಳವನೂ, ಮುಪ್ಪು-ಸಾವುಗಳಿಲ್ಲದವನೂ ಮತ್ತು ಸರ್ವವ್ಯಾಪಕನೂ ಆದ ಭೂತಾತ್ಮನು ಕಾಣಿಸಿಕೊಳ್ಳುತ್ತಾನೆ.

12245008a ಮನೋಬುದ್ಧಿಪರಾಭೂತಃ ಸ್ವದೇಹಪರದೇಹವಿತ್|

12245008c ಸ್ವಪ್ನೇಷ್ವಪಿ ಭವತ್ಯೇಷ ವಿಜ್ಞಾತಾ ಸುಖದುಃಖಯೋಃ||

ಮನೋಬುದ್ಧಿಗಳಿಗೆ ಸೋತ ಮತ್ತು ಸ್ವದೇಹ-ಪರದೇಹಗಳನ್ನು ತಿಳಿದಿರುವವನು ಕನಸಿನಲ್ಲಿಯೂ ಸುಖ-ದುಃಖಗಳನ್ನು ಅರಿಯುತ್ತಾನೆ.

12245009a ತತ್ರಾಪಿ ಲಭತೇ ದುಃಖಂ ತತ್ರಾಪಿ ಲಭತೇ ಸುಖಮ್|

12245009c ಕ್ರೋಧಲೋಭೌ ತು ತತ್ರಾಪಿ ಕೃತ್ವಾ ವ್ಯಸನಮರ್ಚತಿ||

ಅಂಥವನು ಕನಸಿನಲ್ಲಿಯೂ ದುಃಖವನ್ನು ಅನುಭವಿಸುತ್ತಾನೆ. ಸುಖವನ್ನೂ ಅನುಭವಿಸುತ್ತಾನೆ. ನಿದ್ರೆಯಲ್ಲಿಯೂ ಕೂಡ ಕ್ರೋಧ-ಲೋಭಗಳಿಗೆ ಅಧೀನನಾಗಿ ವ್ಯಸನವನ್ನು ಹೊಂದುತ್ತಾನೆ.

12245010a ಪ್ರೀಣಿತಶ್ಚಾಪಿ ಭವತಿ ಮಹತೋಽರ್ಥಾನವಾಪ್ಯ ಚ|

12245010c ಕರೋತಿ ಪುಣ್ಯಂ ತತ್ರಾಪಿ ಜಾಗ್ರನ್ನಿವ ಚ ಪಶ್ಯತಿ||

ಸ್ವಪ್ನಾವಸ್ಥೆಯಲ್ಲಿಯೇ ಮಹಾ ಐಶ್ವರ್ಯವನ್ನು ಪಡೆದು ಸಂತೋಷಪಡುತ್ತಾನೆ. ಅಲ್ಲಿಯೇ ಪುಣ್ಯ ಕಾರ್ಯಗಳನ್ನೂ ಮಾಡುತ್ತಾನೆ. ಜಾಗ್ರತಾವಸ್ಥೆಯಲ್ಲಿರುವವನಂತೆ ಅಲ್ಲಿಯೂ ಎಲ್ಲವನ್ನೂ ನೋಡುತ್ತಾನೆ ಮತ್ತು ಅನುಭವಿಸುತ್ತಾನೆ.

12245011a ತಮೇವಮತಿತೇಜೋಂಶಂ ಭೂತಾತ್ಮಾನಂ ಹೃದಿ ಸ್ಥಿತಮ್|

12245011c ತಮೋರಜೋಭ್ಯಾಮಾವಿಷ್ಟಾ ನಾನುಪಶ್ಯಂತಿ ಮೂರ್ತಿಷು||

ತಮಸ್ಸು ಮತ್ತು ರಜೋಗುಣಗಳಿಂದ ಆವಿಷ್ಟರಾದವರು ಶರೀರದಲ್ಲಿರುವ, ಹೃದಯದಲ್ಲಿ ಸ್ಥಿತನಾಗಿರುವ, ಅತಿತೇಜೋಂಶಭೂತನಾದ ಭೂತಾತ್ಮನನ್ನು ಕಾಣಲಾರರು.

12245012a ಶಾಸ್ತ್ರಯೋಗಪರಾ ಭೂತ್ವಾ ಸ್ವಮಾತ್ಮಾನಂ ಪರೀಪ್ಸವಃ|

12245012c ಅನುಚ್ಚ್ವಾಸಾನ್ಯಮೂರ್ತೀನಿ ಯಾನಿ ವಜ್ರೋಪಮಾನ್ಯಪಿ||

ಆತ್ಮದರ್ಶನದ ಇಚ್ಛುಕ ಶಾಸ್ತ್ರಯೋಗಪರರು ಜಡವಾದ ಸ್ಥೂಲ ಶರೀರವನ್ನೂ, ಅಮೂರ್ತವಾದ ಸೂಕ್ಷ್ಮಶರೀರವನ್ನೂ ಮತ್ತು ವಜ್ರದಂತೆ ಸುದೃಢವಾದ ಕಾರಣಶರೀರವನ್ನೂ ದಾಟಬಲ್ಲರು.

12245013a ಪೃಥಗ್ಭೂತೇಷು ಸೃಷ್ಟೇಷು ಚತುರ್ಷ್ವಾಶ್ರಮಕರ್ಮಸು|

12245013c ಸಮಾಧೌ ಯೋಗಮೇವೈತಚ್ಚಾಂಡಿಲ್ಯಃ ಶಮಮಬ್ರವೀತ್||

ಸಂನ್ಯಾಸಾಶ್ರಮದ ಕರ್ಮಗಳನ್ನು ಭಿನ್ನ-ಭಿನ್ನ ರೀತಿಯಲ್ಲಿ ಹೇಳಿದ್ದಾರೆ. ಸಮಾಧಿಯ ಯೋಗವನ್ನೇ ಶಾಂಡಿಲ್ಯನು ಶಮ ಎಂಬ ಹೆಸರಿನಿಂದ ಕರೆದಿದ್ದಾನೆ[2].

12245014a ವಿದಿತ್ವಾ ಸಪ್ತ ಸೂಕ್ಷ್ಮಾಣಿ ಷಡಂಗಂ ಚ ಮಹೇಶ್ವರಮ್|

12245014c ಪ್ರಧಾನವಿನಿಯೋಗಸ್ಥಃ ಪರಂ ಬ್ರಹ್ಮಾಧಿಗಚ್ಚತಿ||

ಪಂಚತನ್ಮಾತ್ರಗಳು, ಮನಸ್ಸು ಮತ್ತು ಬುದ್ಧಿಗಳೆಂಬ ಏಳು ಸೂಕ್ಷ್ಮ ತತ್ತ್ವಗಳನ್ನು ತಿಳಿದುಕೊಂಡು, ಷಡ್ಗುಣೈಶ್ವರ್ಯ ಸಂಪನ್ನನಾದ ಮಹೇಶ್ವರನ ಜ್ಞಾನವನ್ನು ಪಡೆದು, ತ್ರಿಗುಣಾತ್ಮಿಕವಾದ ಪ್ರಕೃತಿಯ ಪರಿಣಾಮವೇ ಈ ಜಗತ್ತೆಂಬುದನ್ನು ತಿಳಿದುಕೊಂಡವನು ಪರಬ್ರಹ್ಮವಸ್ತುವನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ಪಂಚಚತ್ವಾರಿಂಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾನಲ್ವತ್ತೈದನೇ ಅಧ್ಯಾಯವು.

[1] ಮಹತ್ತತ್ತ್ವ, ಅಹಂಕಾರ ಮತ್ತು ಪಂಚಮಹಾಭೂತಗಳು (ಭಾರತ ದರ್ಶನ).

[2] ಛಾಂದೋಗ್ಯೋಪನಿಷತ್ತಿನ ಶಾಂಡಿಲ್ಯ ಬ್ರಾಹ್ಮಣದಲ್ಲಿ ಇದು ಬರುತ್ತದೆ (ಭಾರತ ದರ್ಶನ).

Comments are closed.