Shanti Parva: Chapter 233

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೩೩

ಕರ್ಮ ಮತ್ತು ಜ್ಞಾನಗಳ ಅಂತರ; ಮೋಕ್ಷಪ್ರಾಪ್ತಿಯ ಉಪಾಯ (1-20).

12233001 ಶುಕ ಉವಾಚ|

12233001a ಯದಿದಂ ವೇದವಚನಂ ಕುರು ಕರ್ಮ ತ್ಯಜೇತಿ ಚ|

12233001c ಕಾಂ ದಿಶಂ ವಿದ್ಯಯಾ ಯಾಂತಿ ಕಾಂ ಚ ಗಚ್ಚಂತಿ ಕರ್ಮಣಾ||

ಶುಕನು ಹೇಳಿದನು: “ಕರ್ಮವನ್ನು ಮಾಡು ಮತ್ತು ತ್ಯಜಿಸು ಎನ್ನುವ ಎರಡೂ ವಾಕ್ಯಗಳು ವೇದಗಳಲ್ಲಿವೆ. ಜ್ಞಾನದ ಮೂಲಕ ಸಾಧಕರು ಯಾವ ಕಡೆಗೆ ಹೋಗುತ್ತಾರೆ? ಕರ್ಮಮಾಡುವವರು ಯಾವ ಕಡೆ ಹೋಗುತ್ತಾರೆ?

12233002a ಏತದ್ವೈ ಶ್ರೋತುಮಿಚ್ಚಾಮಿ ತದ್ಭವಾನ್ ಪ್ರಬ್ರವೀತು ಮೇ|

12233002c ಏತತ್ತ್ವನ್ಯೋನ್ಯವೈರೂಪ್ಯೇ ವರ್ತತೇ ಪ್ರತಿಕೂಲತಃ||

ನಾನು ಇದನ್ನು ಕೇಳಬಯಸುತ್ತೇನೆ. ನೀನು ಅದನ್ನು ನನಗೆ ಹೇಳಬೇಕು. ಈ ಎರಡೂ ವಾಕ್ಯಗಳೂ ಒಂದಕ್ಕೊಂದು ಅನುರೂಪವಾಗಿಲ್ಲದೇ ಪ್ರತಿಕೂಲವೇ ಆಗಿವೆ.””

12233003 ಭೀಷ್ಮ ಉವಾಚ|

12233003a ಇತ್ಯುಕ್ತಃ ಪ್ರತ್ಯುವಾಚೇದಂ ಪರಾಶರಸುತಃ ಸುತಮ್|

12233003c ಕರ್ಮವಿದ್ಯಾಮಯಾವೇತೌ ವ್ಯಾಖ್ಯಾಸ್ಯಾಮಿ ಕ್ಷರಾಕ್ಷರೌ||

ಭೀಷ್ಮನು ಹೇಳಿದನು: “ಹೀಗೆ ಪ್ರಶ್ನಿಸಲು ಪರಾಶರಸುತನು ತನ್ನ ಸುತನಿಗೆ ಹೀಗೆ ಉತ್ತರಿಸಿದನು: “ಕರ್ಮಮಾರ್ಗವು ಕ್ಷರವು. ಜ್ಞಾನಮಾರ್ಗವು ಅಕ್ಷರವು. ಇವೆರಡನ್ನೂ ವಿವರಿಸುತ್ತೇನೆ.

12233004a ಯಾಂ ದಿಶಂ ವಿದ್ಯಯಾ ಯಾಂತಿ ಯಾಂ ಚ ಗಚ್ಚಂತಿ ಕರ್ಮಣಾ|

12233004c ಶೃಣುಷ್ವೈಕಮನಾಃ ಪುತ್ರ ಗಹ್ವರಂ ಹ್ಯೇತದಂತರಮ್||

ಪುತ್ರ! ಜ್ಞಾನಿಗಳು ಯಾವ ದಿಕ್ಕಿನಲ್ಲಿ ಹೋಗುತ್ತಾರೆ ಮತ್ತು ಕರ್ಮಮಾಡುವವರು ಎಲ್ಲಿಗೆ ಹೋಗುತ್ತಾರೆ ಎನ್ನುವುದನ್ನು ಏಕಮನಸ್ಕನಾಗಿ ಕೇಳು. ಇವೆರಡರ ಅಂತರವು ಗಹನವಾಗಿದೆ.

12233005a ಅಸ್ತಿ ಧರ್ಮ ಇತಿ ಪ್ರೋಕ್ತಂ ನಾಸ್ತೀತ್ಯತ್ರೈವ ಯೋ ವದೇತ್|

12233005c ತಸ್ಯ ಪಕ್ಷಸ್ಯ ಸದೃಶಮಿದಂ ಮಮ ಭವೇದಥ[1]||

ಧರ್ಮವು ಇದೆ ಎಂದು ಹೇಳುವ ಶಾಸ್ತ್ರದಲ್ಲಿ ಧರ್ಮವಿಲ್ಲ ಎಂದು ಹೇಳಿದಂತೆ ಕರ್ಮವನ್ನು ಮಾಡು ಮತ್ತು ಕರ್ಮವನ್ನು ಬಿಡು ಎನ್ನುವ ಈ ವಾಕ್ಯಗಳು ಗೊಂದಲಕ್ಕೀಡುಮಾಡುತ್ತದೆ ಎಂದು ತೋರುತ್ತದೆ.

12233006a ದ್ವಾವಿಮಾವಥ ಪಂಥಾನೌ ಯತ್ರ ವೇದಾಃ ಪ್ರತಿಷ್ಠಿತಾಃ|

12233006c ಪ್ರವೃತ್ತಿಲಕ್ಷಣೋ ಧರ್ಮೋ ನಿವೃತ್ತೌ ಚ ಸುಭಾಷಿತಃ||

ಪ್ರವೃತ್ತಿ ಲಕ್ಷಣವುಳ್ಳ ಧರ್ಮ ಮತ್ತು ನಿವೃತ್ತಿ ಲಕ್ಷಣವುಳ್ಳ ಧರ್ಮ ಈ ಎರಡೂ ಮಾರ್ಗಗಳು ವೇದಗಳಲ್ಲಿ ಚೆನ್ನಾಗಿ ಪ್ರತಿಷ್ಠಿತವಾಗಿವೆ.

12233007a ಕರ್ಮಣಾ ಬಧ್ಯತೇ ಜಂತುರ್ವಿದ್ಯಯಾ ತು ಪ್ರಮುಚ್ಯತೇ|

12233007c ತಸ್ಮಾತ್ಕರ್ಮ ನ ಕುರ್ವಂತಿ ಯತಯಃ ಪಾರದರ್ಶಿನಃ||

ಕರ್ಮಗಳಿಂದ ಜಂತುವು ಬಂಧನಕ್ಕೊಳಗಾಗುತ್ತದೆ ಮತ್ತು ಜ್ಞಾನದಿಂದ ಬಂಧನಮುಕ್ತವಾಗುತ್ತದೆ. ಆದುದರಿಂದ ಸಂಸಾರದ ದಡವನ್ನು ಕಂಡುಕೊಂಡಿರುವ ಯತಿಗಳು ಕರ್ಮಗಳನ್ನು ಮಾಡುವುದಿಲ್ಲ.

12233008a ಕರ್ಮಣಾ ಜಾಯತೇ ಪ್ರೇತ್ಯ ಮೂರ್ತಿಮಾನ್ ಷೋಡಶಾತ್ಮಕಃ|

12233008c ವಿದ್ಯಯಾ ಜಾಯತೇ ನಿತ್ಯಮವ್ಯಯೋ ಹ್ಯವ್ಯಯಾತ್ಮಕಃ||

ಕರ್ಮಗಳನ್ನು ಮಾಡುವವನು ಮರಣಾನಂತರ ಷೋಡಶಾತ್ಮಕ ಮೂರ್ತ ಶರೀರವನ್ನು ಪಡೆದುಕೊಳ್ಳುತ್ತಾನೆ. ಜ್ಞಾನದಿಂದ ಅವನು ನಿತ್ಯನೂ, ಅವ್ಯಯನೂ, ಅವ್ಯಯಾತ್ಮಕನೂ ಆಗುತ್ತಾನೆ.

12233009a ಕರ್ಮ ತ್ವೇಕೇ ಪ್ರಶಂಸಂತಿ ಸ್ವಲ್ಪಬುದ್ಧಿತರಾ ನರಾಃ|

12233009c ತೇನ ತೇ ದೇಹಜಾಲಾನಿ ರಮಯಂತ ಉಪಾಸತೇ||

ಅಲ್ಪಬುದ್ಧಿಯ ನರರು ಕರ್ಮವೊಂದನ್ನೇ ಪ್ರಶಂಸಿಸುತ್ತಾರೆ. ಏಕೆಂದರೆ ಅವರು ದೇಹಜಾಲಗಳಲ್ಲಿ ರಮಿಸುವುದನ್ನೇ ಬಯಸಿ, ಅದನ್ನೇ ಉಪಾಸಿಸುತ್ತಾರೆ.

12233010a ಯೇ ತು ಬುದ್ಧಿಂ ಪರಾಂ ಪ್ರಾಪ್ತಾ ಧರ್ಮನೈಪುಣ್ಯದರ್ಶಿನಃ|

12233010c ನ ತೇ ಕರ್ಮ ಪ್ರಶಂಸಂತಿ ಕೂಪಂ ನದ್ಯಾಂ ಪಿಬನ್ನಿವ||

ಆದರೆ ಶ್ರೇಷ್ಠ ಬುದ್ಧಿಯನ್ನು ಪಡೆದು ಧರ್ಮನೈಪುಣ್ಯತೆಯನ್ನು ಕಂಡುಕೊಂಡವರು ನದಿಯ ನೀರನ್ನು ಕುಡಿಯುವವನು ಬಾವಿಯ ನೀರನ್ನು ಪ್ರಶಂಸಿಸದಂತೆ ಕರ್ಮಗಳನ್ನು ಪ್ರಶಂಸಿಸುವುದಿಲ್ಲ.

12233011a ಕರ್ಮಣಃ ಫಲಮಾಪ್ನೋತಿ ಸುಖದುಃಖೇ ಭವಾಭವೌ|

12233011c ವಿದ್ಯಯಾ ತದವಾಪ್ನೋತಿ ಯತ್ರ ಗತ್ವಾ ನ ಶೋಚತಿ||

ಕರ್ಮಗಳಿಂದ ಸುಖ-ದುಃಖ, ಹುಟ್ಟು-ಸಾವು ಮೊದಲಾದ ಫಲಗಳು ದೊರೆಯುತ್ತವೆ. ಜ್ಞಾನದಿಂದ ಮನುಷ್ಯನು ಎಲ್ಲಿಗೆ ಹೋದರೆ ಶೋಕವಿಲ್ಲವೋ ಅಲ್ಲಿಗೆ ಹೋಗುತ್ತಾನೆ.

12233012a ಯತ್ರ ಗತ್ವಾ ನ ಮ್ರಿಯತೇ ಯತ್ರ ಗತ್ವಾ ನ ಜಾಯತೇ|

12233012c ನ ಜೀರ್ಯತೇ ಯತ್ರ ಗತ್ವಾ ಯತ್ರ ಗತ್ವಾ ನ ವರ್ಧತೇ||

ಎಲ್ಲಿ ಹೋಗಿ ನಾಶವಾಗುವುದಿಲ್ಲವೋ, ಎಲ್ಲಿ ಹೋಗಿ ಪುನಃ ಹುಟ್ಟುವುದಿಲ್ಲವೋ, ಎಲ್ಲಿ ಹೋಗಿ ಜೀರ್ಣನಾಗುವುದಿಲ್ಲವೋ ಮತ್ತು ಎಲ್ಲಿ ಹೋಗಿ ವರ್ಧಿಸುವುದಿಲ್ಲವೋ ಅಲ್ಲಿಗೆ ಜ್ಞಾನಿಯು ಹೋಗುತ್ತಾನೆ.

12233013a ಯತ್ರ ತದ್ ಬ್ರಹ್ಮ ಪರಮಮವ್ಯಕ್ತಮಜರಂ ಧ್ರುವಮ್|

12233013c ಅವ್ಯಾಹತಮನಾಯಾಸಮಮೃತಂ ಚಾವಿಯೋಗಿ ಚ||

ಎಲ್ಲಿ ಅವ್ಯಕ್ತವಾದ, ಅಚಲವಾದ, ಸ್ಥಿರವಾದ, ಅವಿಕಾರಿಯಾದ, ಅಯಾಸರಹಿತವಾದ ಮತ್ತು ವಿಯೋಗರಹಿತವಾದ ಪರಬ್ರಹ್ಮವಸ್ತುವಿರುವುದೋ ಆ ಪರಮಪದವನ್ನು ಜ್ಞಾನಿಯು ಪಡೆಯುತ್ತಾನೆ.

12233014a ದ್ವಂದ್ವೈರ್ಯತ್ರ ನ ಬಾಧ್ಯಂತೇ ಮಾನಸೇನ ಚ ಕರ್ಮಣಾ|

12233014c ಸಮಾಃ ಸರ್ವತ್ರ ಮೈತ್ರಾಶ್ಚ ಸರ್ವಭೂತಹಿತೇ ರತಾಃ||

ಅಲ್ಲಿ ಮನಸ್ಸಿನ ಕರ್ಮಗಳಿಂದಾದ ದ್ವಂದ್ವಗಳ ಭಾದೆಗಳಿರುವುದಿಲ್ಲ. ಸರ್ವತ್ರ ಸಮನಾದ ಮಿತ್ರಭಾವದಿಂದ ಅವರು ಅಲ್ಲಿ ಸರ್ವಭೂತಹಿತರತರಾಗಿ ಇರುತ್ತಾರೆ.

12233015a ವಿದ್ಯಾಮಯೋಽನ್ಯಃ ಪುರುಷಸ್ತಾತ ಕರ್ಮಮಯೋಽಪರಃ|

12233015c ವಿದ್ಧಿ ಚಂದ್ರಮಸಂ ದರ್ಶೇ ಸೂಕ್ಷ್ಮಯಾ ಕಲಯಾ ಸ್ಥಿತಮ್||

ಮಗೂ! ಇವನು ಜ್ಞಾನಿ ಪುರುಷನು. ಅನ್ಯ ಇನ್ನೊಬ್ಬನು ಕರ್ಮಮಯ ಪುರುಷ. ಅವನು ಕೃಷ್ಣಪಕ್ಷದಲ್ಲಿ ಒಂದೊಂದೇ ಕಲೆಯನ್ನು ಅನುದಿನವೂ ಕಳೆದುಕೊಳ್ಳುತ್ತಾ ಅಮವಾಸ್ಯೆಯಂದು ಸೂಕ್ಷ್ಮ ಕಲಾಯುಕ್ತನಾಗಿ ಪುನಃ ಶುಕ್ಲಪಕ್ಷದಲ್ಲಿ ಒಂದೊಂದೇ ಕಲೆಯನ್ನು ಅನುದಿನವೂ ಸಂಗ್ರಹಿಸಿಕೊಂಡು ಪೂರ್ಣಿಮೆಯಲ್ಲಿ ಪೂರ್ಣರೂಪದಲ್ಲಿ ಬೆಳಗುವ ಚಂದ್ರನಂತೆ ಎಂದು ತಿಳಿ.

12233016a ತದೇತದೃಷಿಣಾ ಪ್ರೋಕ್ತಂ ವಿಸ್ತರೇಣಾನುಮೀಯತೇ|

12233016c ನವಜಂ ಶಶಿನಂ ದೃಷ್ಟ್ವಾ ವಕ್ರಂ ತಂತುಮಿವಾಂಬರೇ||

ಅಮವಾಸ್ಯೆಯ ನಂತರ ಪ್ರತಿಪದೆಯ ರಾತ್ರಿ ವಕ್ರವಾದ ದಾರದಂತೆ ಕಾಣುವ ಚಂದ್ರನನ್ನು ನೋಡಿ ಋಷಿಯೊಬ್ಬನು ಇದನ್ನು ವಿಸ್ತರಿಸಿ ಹೇಳಿದ್ದಾನೆ.

12233017a ಏಕಾದಶವಿಕಾರಾತ್ಮಾ ಕಲಾಸಂಭಾರಸಂಭೃತಃ|

12233017c ಮೂರ್ತಿಮಾನಿತಿ ತಂ ವಿದ್ಧಿ ತಾತ ಕರ್ಮಗುಣಾತ್ಮಕಮ್||

ಅಯ್ಯಾ! ಹದಿನಾರು ಕಲೆಗಳ ಭಾರವನ್ನು ಹೊತ್ತುಕೊಂಡ ಕರ್ಮಾಸಕ್ತನು ಹನ್ನೊಂದು ವಿಕಾರಗಳಿಂದ ಯುಕ್ತನಾಗಿ ಅಮವಾಸ್ಯೆಯ ನಂತರದ ಪಾಡ್ಯದ ಚಂದ್ರನ ರೂಪದಲ್ಲಿ ಕರ್ಮಗುಣಾತ್ಮಕ ಶರೀರವನ್ನು ಪಡೆದು ಹುಟ್ಟುತ್ತಾನೆ ಎಂದು ತಿಳಿ.

12233018a ದೇವೋ ಯಃ ಸಂಶ್ರಿತಸ್ತಸ್ಮಿನ್ನಬ್ಬಿಂದುರಿವ ಪುಷ್ಕರೇ|

12233018c ಕ್ಷೇತ್ರಜ್ಞಂ ತಂ ವಿಜಾನೀಯಾನ್ನಿತ್ಯಂ ತ್ಯಾಗಜಿತಾತ್ಮಕಮ್[2]||

ಸರೋವರದ ಕಮಲದೆಲೆಯ ಮೇಲಿನ ಜಲಬಿಂದುವಿನಂತೆ ಅಂಟಿಯೂ ಅಂಟದಂತೆ ಅಂತಃಕರಣವನ್ನು ಆಶ್ರಯಿಸಿರುವ ದೇವನೇ ಕ್ಷೇತ್ರಜ್ಞನೆಂದು ತಿಳಿ. ಅವನನ್ನು ನಿತ್ಯ ತ್ಯಾಗದ ಮೂಲಕ ಗೆಲ್ಲಬಹುದಾಗಿದೆ.

12233019a ತಮೋ ರಜಶ್ಚ ಸತ್ತ್ವಂ ಚ ವಿದ್ಧಿ ಜೀವಗುಣಾನಿಮಾನ್|

12233019c ಜೀವಮಾತ್ಮಗುಣಂ ವಿದ್ಯಾದಾತ್ಮಾನಂ ಪರಮಾತ್ಮನಃ||

ಸತ್ವ, ರಜ ಮತ್ತು ತಮಗಳು ಜೀವದ ಗುಣಗಳೆಂದು ತಿಳಿ. ಜೀವವು ಆತ್ಮನ ಗುಣವೆಂದೂ ಆತ್ಮನು ಪರಮಾತ್ಮನ ಗುಣವೆಂದೂ ತಿಳಿಯಬೇಕು.

12233020a ಸಚೇತನಂ ಜೀವಗುಣಂ ವದಂತಿ

ಸ ಚೇಷ್ಟತೇ ಚೇಷ್ಟಯತೇ ಚ ಸರ್ವಮ್|

12233020c ತತಃ ಪರಂ ಕ್ಷೇತ್ರವಿದೋ ವದಂತಿ

ಪ್ರಾವರ್ತಯದ್ಯೋ ಭುವನಾನಿ ಸಪ್ತ||

ಚೈತ್ಯನ್ಯಯುಕ್ತನಾದ ಆತ್ಮನನ್ನು ಜೀವಗುಣವುಳ್ಳವನು ಎನ್ನುತ್ತಾರೆ. ಆ ಅತ್ಮನೇ ಶರೀರದ ಮೂಲಕ ಕೆಲಸಮಾಡುತ್ತಾನೆ. ಎಲ್ಲವನ್ನೂ ಕರ್ಮಗಳಲ್ಲಿ ತೊಡಗಿಸುತ್ತಾನೆ. ಈ ಸಪ್ತ ಭುವನಗಳನ್ನು ಸೃಷ್ಟಿಸಿರುವ ಪರಮಾತ್ಮನು ಜೀವಾತ್ಮನಿಗಿಂತಲೂ ಶ್ರೇಷ್ಠನೆಂದು ಕ್ಷೇತ್ರವನ್ನು ತಿಳಿದವರು ಹೇಳುತ್ತಾರೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ತ್ರಿಸ್ತ್ರಿಂಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾಮೂವತ್ಮೂರನೇ ಅಧ್ಯಾಯವು.

[1] ಭವೇದ್ವ್ಯಥಾ| (ಭಾರತ ದರ್ಶನ).

[2] ಯೋಗಜಿತಾತ್ಮಕಮ್| (ಭಾರತ ದರ್ಶನ).

Comments are closed.