Shanti Parva: Chapter 232

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೩೨

ಯೋಗದಿಂದ ಪರಮಾತ್ಮಪ್ರಾಪ್ತಿ (1-34)

12232001 ವ್ಯಾಸ ಉವಾಚ|

12232001a ಪೃಚ್ಚತಸ್ತವ ಸತ್ಪುತ್ರ ಯಥಾವದಿಹ ತತ್ತ್ವತಃ|

12232001c ಸಾಂಖ್ಯನ್ಯಾಯೇನ ಸಂಯುಕ್ತಂ ಯದೇತತ್ಕೀರ್ತಿತಂ ಮಯಾ||

ವ್ಯಾಸನು ಹೇಳಿದನು: “ಸತ್ಪುತ್ರ! ನೀನು ಕೇಳಿದಂತೆ ಇದೂವರೆಗೆ ನಾನು ಸಾಂಖ್ಯನ್ಯಾಯಯುಕ್ತವಾದ ತತ್ತ್ವವನ್ನು ಹೇಳಿದೆನು.

12232002a ಯೋಗಕೃತ್ಯಂ ತು ತೇ ಕೃತ್ಸ್ನಂ ವರ್ತಯಿಷ್ಯಾಮಿ ತಚ್ಚೃಣು|

12232002c ಏಕತ್ವಂ ಬುದ್ಧಿಮನಸೋರಿಂದ್ರಿಯಾಣಾಂ ಚ ಸರ್ವಶಃ|

12232002e ಆತ್ಮನೋ ಧ್ಯಾಯಿನಸ್ತಾತ ಜ್ಞಾನಮೇತದನುತ್ತಮಮ್||

ಈಗ ಯೋಗಕೃತ್ಯವನ್ನು ಸಂಪೂರ್ಣವಾಗಿ ವರ್ಣಿಸುತ್ತೇನೆ. ಅದನ್ನು ಕೇಳು. ಮಗೂ! ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ – ಇವುಗಳೆಲ್ಲವನ್ನೂ ಏಕತ್ವಗೊಳಿಸಿ ಆತ್ಮನನ್ನು ಧ್ಯಾನಿಸುವವನು ಅನುತ್ತಮ ಜ್ಞಾನವನ್ನು ಪಡೆಯುತ್ತಾನೆ.

12232003a ತದೇತದುಪಶಾಂತೇನ ದಾಂತೇನಾಧ್ಯಾತ್ಮಶೀಲಿನಾ|

12232003c ಆತ್ಮಾರಾಮೇಣ ಬುದ್ಧೇನ ಬೋದ್ಧವ್ಯಂ ಶುಚಿಕರ್ಮಣಾ||

ಶಾಂತನಾಗಿರುವವನು, ಇಂದ್ರಿಯಗಳನ್ನು ನಿಗ್ರಹಿಸಿರುವವನು, ಆಧ್ಯಾತ್ಮಶೀಲನು ಮತ್ತು ಆತ್ಮನಲ್ಲಿಯೇ ರಮಿಸುವ ಶುಚಿಕರ್ಮಿಯು ಯಾವುದನ್ನು ತಿಳಿಯಬೇಕೋ ಅದನ್ನು ತಿಳಿದುಕೊಳ್ಳುತ್ತಾನೆ.

12232004a ಯೋಗದೋಷಾನ್ಸಮುಚ್ಚಿದ್ಯ ಪಂಚ ಯಾನ್ಕವಯೋ ವಿದುಃ|

12232004c ಕಾಮಂ ಕ್ರೋಧಂ ಚ ಲೋಭಂ ಚ ಭಯಂ ಸ್ವಪ್ನಂ ಚ ಪಂಚಮಮ್||

ಯೋಗಕ್ಕೆ ಸಂಬಂಧಿಸಿದಂತೆ ಐದು ದೋಷಗಳನ್ನು ಕಡಿದುಕೊಳ್ಳಬೇಕು ಎಂದು ವಿದ್ವಾಂಸರು ತಿಳಿದುಕೊಂಡಿದ್ದಾರೆ: ಕಾಮ, ಕ್ರೋಧ, ಲೋಭ, ಭಯ, ಮತ್ತು ಐದನೆಯದಾದ ನಿದ್ರೆ.

12232005a ಕ್ರೋಧಂ ಶಮೇನ ಜಯತಿ ಕಾಮಂ ಸಂಕಲ್ಪವರ್ಜನಾತ್|

12232005c ಸತ್ತ್ವಸಂಸೇವನಾದ್ಧೀರೋ ನಿದ್ರಾಮುಚ್ಚೇತ್ತುಮರ್ಹತಿ||

ಶಾಂತಿಯು ಕ್ರೋಧವನ್ನು ಜಯಿಸುತ್ತದೆ. ಸಂಕಲ್ಪವನ್ನು ತ್ಯಜಿಸುವುದರಿಂದ ಕಾಮವನ್ನು ಜಯಿಸಬೇಕು. ಸತ್ತ್ವಗುಣವನ್ನು ಸೇವಿಸುವುದರಿಂದ ಧೀರನು ನಿದ್ರೆಯನ್ನು ಜಯಿಸಬೇಕು.

12232006a ಧೃತ್ಯಾ ಶಿಶ್ನೋದರಂ ರಕ್ಷೇತ್ಪಾಣಿಪಾದಂ ಚ ಚಕ್ಷುಷಾ|

12232006c ಚಕ್ಷುಃ ಶ್ರೋತ್ರೇ ಚ ಮನಸಾ ಮನೋ ವಾಚಂ ಚ ಕರ್ಮಣಾ||

ಧೃತಿಯಿಂದ ಶಿಶ್ನ-ಉದರಗಳನ್ನು ರಕ್ಷಿಸಿಕೊಳ್ಳಬೇಕು. ಕಣ್ಣುಗಳಿಂದ ಕೈಕಾಲುಗಳನ್ನು ರಕ್ಷಿಸಿಕೊಳ್ಳಬೇಕು. ಮನಸ್ಸಿನಿಂದ ಕಣ್ಣು-ಕಿವಿಗಳನ್ನು ರಕ್ಷಿಸಿಕೊಳ್ಳಬೇಕು. ಮತ್ತು ಮಾತು-ಕರ್ಮಗಳಿಂದ ಮನಸ್ಸನ್ನು ರಕ್ಷಿಸಿಕೊಳ್ಳಬೇಕು.

12232007a ಅಪ್ರಮಾದಾದ್ಭಯಂ ಜಹ್ಯಾಲ್ಲೋಭಂ ಪ್ರಾಜ್ಞೋಪಸೇವನಾತ್|

12232007c ಏವಮೇತಾನ್ಯೋಗದೋಷಾನ್ ಜಯೇನ್ನಿತ್ಯಮತಂದ್ರಿತಃ||

ಅಪ್ರಮತ್ತತೆಯಿಂದ ಭಯವನ್ನು ಜಯಿಸಬೇಕು. ಪ್ರಾಜ್ಞರ ಸೇವೆಯಿಂದ ಲೋಭವನ್ನು ಜಯಿಸಬೇಕು. ಈ ರೀತಿ ಆಲಸ್ಯರಹಿತನಾಗಿ ನಿತ್ಯವೂ ಈ ಯೋಗದೋಷಗಳನ್ನು ಜಯಿಸುತ್ತಿರಬೇಕು.

12232008a ಅಗ್ನೀಂಶ್ಚ ಬ್ರಾಹ್ಮಣಾಂಶ್ಚಾರ್ಚೇದ್ದೇವತಾಃ ಪ್ರಣಮೇತ ಚ|

12232008c ವರ್ಜಯೇದ್ರುಷಿತಾಂ ವಾಚಂ ಹಿಂಸಾಯುಕ್ತಾಂ ಮನೋನುಗಾಮ್||

ಅಗ್ನಿಗಳನ್ನೂ ಬ್ರಾಹ್ಮಣರನ್ನೂ ಅರ್ಚಿಸಬೇಕು. ದೇವತೆಗಳಿಗೆ ನಮಸ್ಕರಿಸಬೇಕು. ಮನಸ್ಸಿಗೆ ಪೀಡೆಯನ್ನುಂಟುಮಾಡುವ ಹಿಂಸಾಯುಕ್ತ ಕಠೋರ ಮಾತುಗಳನ್ನು ವರ್ಜಿಸಬೇಕು.

12232009a ಬ್ರಹ್ಮ ತೇಜೋಮಯಂ ಶುಕ್ರಂ ಯಸ್ಯ ಸರ್ವಮಿದಂ ರಸಃ|

12232009c ಏಕಸ್ಯ ಭೂತಂ ಭೂತಸ್ಯ ದ್ವಯಂ ಸ್ಥಾವರಜಂಗಮಮ್||

ತೇಜೋಮಯ ಬ್ರಹ್ಮನೇ ಬೀಜವು ಮತ್ತು ಎಲ್ಲದರ ರಸವು. ಸ್ಥಾವರ-ಜಂಗಮಗಳೆರಡರಲ್ಲಿಯೂ ಇರುವ ಒಂದೇ ಒಂದು ತತ್ತ್ವವು ಅವನು.

12232010a ಧ್ಯಾನಮಧ್ಯಯನಂ ದಾನಂ ಸತ್ಯಂ ಹ್ರೀರಾರ್ಜವಂ ಕ್ಷಮಾ|

12232010c ಶೌಚಮಾಹಾರಸಂಶುದ್ಧಿರಿಂದ್ರಿಯಾಣಾಂ ಚ ನಿಗ್ರಹಃ||

12232011a ಏತೈರ್ವಿವರ್ಧತೇ ತೇಜಃ ಪಾಪ್ಮಾನಂ ಚಾಪಕರ್ಷತಿ|

12232011c ಸಿಧ್ಯಂತಿ ಚಾಸ್ಯ ಸರ್ವಾರ್ಥಾ ವಿಜ್ಞಾನಂ ಚ ಪ್ರವರ್ತತೇ||

ಧ್ಯಾನ, ಅಧ್ಯಯನ, ದಾನ, ಸತ್ಯ, ಲಜ್ಜೆ, ಸರಳತೆ, ಕ್ಷಮೆ, ಶೌಚ, ಆಹಾರಸಂಶುದ್ಧಿ, ಮತ್ತು ಇಂದ್ರಿಯಗಳ ನಿಗ್ರಹ – ಇವು ತೇಜಸ್ಸನ್ನು ವರ್ಧಿಸುತ್ತವೆ ಮತ್ತು ಪಾಪಗಳನ್ನು ಅಪಕರ್ಷಿಸುತ್ತವೆ. ಅವನಿಗೆ ಸರ್ವಾರ್ಥಗಳೂ ಸಿದ್ಧಿಸುತ್ತವೆ ಮತ್ತು ವಿಜ್ಞಾನವೂ ಉಂಟಾಗುತ್ತದೆ.

12232012a ಸಮಃ ಸರ್ವೇಷು ಭೂತೇಷು ಲಬ್ಧಾಲಬ್ಧೇನ ವರ್ತಯನ್|

12232012c ಧುತಪಾಪ್ಮಾ ತು ತೇಜಸ್ವೀ ಲಘ್ವಾಹಾರೋ ಜಿತೇಂದ್ರಿಯಃ|

12232012e ಕಾಮಕ್ರೋಧೌ ವಶೇ ಕೃತ್ವಾ ನಿನೀಷೇದ್ ಬ್ರಹ್ಮಣಃ ಪದಮ್||

ಸರ್ವಭೂತಗಳಲ್ಲಿಯೂ ಸಮಭಾವದಿಂದಿರಬೇಕು. ಸಿಕ್ಕಲಿ ಅಥವಾ ಸಿಕ್ಕದಿರಲಿ ಸಂತುಷ್ಟನಾಗಿರಬೇಕು. ಪಾಪಗಳನ್ನು ಕಳೆದುಕೊಂಡು ತೇಜಸ್ವಿಯಾಗಬೇಕು. ಲಘು ಆಹಾರಿಯಾಗಿಯೂ ಜಿತೇಂದ್ರಿಯನೂ ಆಗಿದ್ದು ಕಾಮ-ಕ್ರೋಧಗಳನ್ನು ವಶಪಡಿಸಿಕೊಂಡು ಬ್ರಹ್ಮಪದವಿಯನ್ನು ಹೊಂದಲು ಇಚ್ಛಿಸಬೇಕು.

12232013a ಮನಸಶ್ಚೇಂದ್ರಿಯಾಣಾಂ ಚ ಕೃತ್ವೈಕಾಗ್ರ್ಯಂ ಸಮಾಹಿತಃ|

12232013c ಪ್ರಾಗ್ರಾತ್ರಾಪರರಾತ್ರೇಷು ಧಾರಯೇನ್ಮನ ಆತ್ಮನಾ||

ಮನಸ್ಸು ಮತ್ತು ಇಂದ್ರಿಯಗಳನ್ನು ಏಕಾಗ್ರಗೊಳಿಸಿ ರಾತ್ರಿಯ ಮೊದಲನೆಯ ಮತ್ತು ಕಡೆಯ ಯಾಮಗಳಲ್ಲಿ ಧ್ಯಾನಸ್ಥನಾಗಿ ಮನಸ್ಸನ್ನು ಆತ್ಮನಲ್ಲಿ ನೆಲೆಗೊಳಿಸಬೇಕು.

12232014a ಜಂತೋಃ ಪಂಚೇಂದ್ರಿಯಸ್ಯಾಸ್ಯ ಯದೇಕಂ ಚಿದ್ರಮಿಂದ್ರಿಯಮ್|

12232014c ತತೋಽಸ್ಯ ಸ್ರವತಿ ಪ್ರಜ್ಞಾ ದೃತೇಃ ಪಾದಾದಿವೋದಕಮ್||

ಒಂದೇ ಸಣ್ಣ ತೂತಿದ್ದರೂ ಚರ್ಮದ ಚೀಲದಿಂದ ನೀರು ಸೋರಿಹೋಗುವಂತೆ ಮನುಷ್ಯನ ಪಂಚೇಂದ್ರಿಯಗಳಲ್ಲಿ ಒಂದೇ ಒಂದು ಇಂದ್ರಿಯವು ಛಿದ್ರವಾಗಿ ಹೋದರೂ ಮನುಷ್ಯನ ಪ್ರಜ್ಞೆಯು ಕ್ಷೀಣಿಸುತ್ತದೆ.

12232015a ಮನಸ್ತು ಪೂರ್ವಮಾದದ್ಯಾತ್ಕುಮೀನಾನಿವ ಮತ್ಸ್ಯಹಾ|

12232015c ತತಃ ಶ್ರೋತ್ರಂ ತತಶ್ಚಕ್ಷುರ್ಜಿಹ್ವಾಂ ಘ್ರಾಣಂ ಚ ಯೋಗವಿತ್||

ಬೆಸ್ತನು ತಂಟೆಮಾಡುವ ಮೀನನ್ನು ಮೊದಲು ಹಿಡಿದು ಬುಟ್ಟಿಯಲ್ಲಿಟ್ಟುಕೊಳ್ಳುವಂತೆ ಯೋಗವಿದುವು ಮೊದಲು ಮನಸ್ಸನ್ನು ನಿಗ್ರಹಿಸಿ ವಶಪಡಿಸಿಕೊಂಡು ನಂತರ ಕಿವಿ, ಕಣ್ಣು, ನಾಲಿಗೆ ಮತ್ತು ಮೂಗನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು.

12232016a ತತ ಏತಾನಿ ಸಂಯಮ್ಯ ಮನಸಿ ಸ್ಥಾಪಯೇದ್ಯತಿಃ|

12232016c ತಥೈವಾಪೋಹ್ಯ ಸಂಕಲ್ಪಾನ್ಮನೋ ಹ್ಯಾತ್ಮನಿ ಧಾರಯೇತ್||

ಯತಿಯು ಈ ಇಂದ್ರಿಯಗಳನ್ನು ವಶಪಡಿಸಿಕೊಂಡು ಮನಸ್ಸಿನಲ್ಲಿ ಇರಿಸಬೇಕು. ಹಾಗೆಯೇ ಸಂಕಲ್ಪಗಳನ್ನು ದೂರೀಕರಿಸಿ ಮನಸ್ಸನ್ನು ಬುದ್ಧಿಯಲ್ಲಿ ಲೀನಗೊಳಿಸಬೇಕು.

12232017a ಪಂಚ ಜ್ಞಾನೇನ ಸಂಧಾಯ ಮನಸಿ ಸ್ಥಾಪಯೇದ್ಯತಿಃ|

12232017c ಯದೈತಾನ್ಯವತಿಷ್ಠಂತೇ ಮನಃಷಷ್ಠಾನಿ ಚಾತ್ಮನಿ|

12232017e ಪ್ರಸೀದಂತಿ ಚ ಸಂಸ್ಥಾಯ ತದಾ ಬ್ರಹ್ಮ ಪ್ರಕಾಶತೇ||

ಯತಿಯು ಪಂಚ ಜ್ಞಾನೇಂದ್ರಿಯಗಳನ್ನು ನಿಯಂತ್ರಿಸಿ ಅವುಗಳನ್ನು ಮನಸ್ಸಿನಲ್ಲಿ ಸ್ಥಾಪಿಸಬೇಕು. ಯಾವಾಗ ಆರನೆಯದಾದ ಮನಸ್ಸಿನೊಡನೆ ಇವು ಬುದ್ಧಿಯಲ್ಲಿ ಸೇರಿ ಪ್ರಸನ್ನವಾಗುವವೋ ಆಗ ಬ್ರಹ್ಮವು ಪ್ರಕಾಶಿಸುತ್ತದೆ.

12232018a ವಿಧೂಮ ಇವ ದೀಪ್ತಾರ್ಚಿರಾದಿತ್ಯ ಇವ ದೀಪ್ತಿಮಾನ್|

12232018c ವೈದ್ಯುತೋಽಗ್ನಿರಿವಾಕಾಶೇ ಪಶ್ಯತ್ಯಾತ್ಮಾನಮಾತ್ಮನಾ|

12232018e ಸರ್ವಂ ಚ ತತ್ರ ಸರ್ವತ್ರ ವ್ಯಾಪಕತ್ವಾಚ್ಚ ದೃಶ್ಯತೇ||

ಆಗ ಅವನು ತನ್ನ ಅಂತಃಕರಣದಲ್ಲಿ ಹೊಗೆಯಿಲ್ಲದೇ ಪ್ರಜ್ವಲಿಸುವ ಅಗ್ನಿಯಂತೆ, ಪ್ರಕಾಶಮಾನ ಸೂರ್ಯನಂತೆ ಮತ್ತು ಆಕಾಶದಲ್ಲಿ ಹೊಳೆಯುವ ಮಿಂಚಿನ ಬೆಳಕಿನಂತೆ ಇರುವ ಆತ್ಮಜ್ಯೋತಿಯನ್ನು ಕಾಣುತ್ತಾನೆ.

12232019a ತಂ ಪಶ್ಯಂತಿ ಮಹಾತ್ಮಾನೋ ಬ್ರಾಹ್ಮಣಾ ಯೇ ಮನೀಷಿಣಃ|

12232019c ಧೃತಿಮಂತೋ ಮಹಾಪ್ರಾಜ್ಞಾಃ ಸರ್ವಭೂತಹಿತೇ ರತಾಃ||

ವಿದ್ವಾಂಸರಾದ, ಧೃತಿಮಂತರಾದ ಮತ್ತು ಸರ್ವಭೂತಹಿತದಲ್ಲಿ ನಿರತರಾದ ಮಹಾಪ್ರಾಜ್ಞ ಮಹಾತ್ಮ ಬ್ರಾಹ್ಮಣರು ಅದನ್ನು ನೋಡುತ್ತಾರೆ.

12232020a ಏವಂ ಪರಿಮಿತಂ ಕಾಲಮಾಚರನ್ಸಂಶಿತವ್ರತಃ|

12232020c ಆಸೀನೋ ಹಿ ರಹಸ್ಯೇಕೋ ಗಚ್ಚೇದಕ್ಷರಸಾತ್ಮ್ಯತಾಮ್||

ಹೀಗೆ ಪ್ರತಿದಿನವೂ ನಿಯತ ಕಾಲದವರೆಗೆ ಏಕಾಂತಸ್ಥಳದಲ್ಲಿ ಒಬ್ಬನೇ ಕುಳಿತುಕೊಂಡು ಕಠೋರವ್ರತನಿಷ್ಠನಾಗಿ ಯೋಗಾಭ್ಯಾಸವನ್ನು ಮಾಡುವ ಯೋಗಿಯು ಅಕ್ಷರಬ್ರಹ್ಮನೊಡನೆ ತಾದಾತ್ಮ್ಯವನ್ನು ಹೊಂದುತ್ತಾನೆ.

12232021a ಪ್ರಮೋಹೋ ಭ್ರಮ ಆವರ್ತೋ ಘ್ರಾಣಶ್ರವಣದರ್ಶನೇ|

12232021c ಅದ್ಭುತಾನಿ ರಸಸ್ಪರ್ಶೇ ಶೀತೋಷ್ಣೇ ಮಾರುತಾಕೃತಿಃ||

ಯೋಗಾಭ್ಯಾಸವನ್ನು ಮುಂದುವರಿಸುವಾಗ ಮೋಹ, ಭ್ರಮೆ, ಅವರ್ತಗಳೆಂಬ ವಿಘ್ನಗಳುಂಟಾಗುತ್ತವೆ. ಅದ್ಭುತ ರಸಸ್ಪರ್ಶ, ಶೀತೋಷ್ಣ ವಾತಾವರಣಗಳ ಅನುಭವವಾಗುತ್ತವೆ.

12232022a ಪ್ರತಿಭಾಮುಪಸರ್ಗಾಂಶ್ಚಾಪ್ಯುಪಸಂಗೃಹ್ಯ ಯೋಗತಃ|

12232022c ತಾಂಸ್ತತ್ತ್ವವಿದನಾದೃತ್ಯ ಸ್ವಾತ್ಮನೈವ ನಿವರ್ತಯೇತ್||

ದಿವ್ಯ ಪ್ರತಿಭೆಗಳು ಉಂಟಾಗುತ್ತವೆ. ದಿವ್ಯಭೋಗಗಳು ತಾವೇ ತಾವಾಗಿ ಸನ್ನಿಹಿತವಾಗುತ್ತವೆ. ಈ ಎಲ್ಲ ಸಿದ್ಧಿಗಳೂ ಯೋಗಬಲದಿಂದ ಪ್ರಾಪ್ತವಾದರೂ ಇವು ಆತ್ಮದರ್ಶನಕ್ಕೆ ವಿಘ್ನಕಾರಕಗಳೆಂದು ತಿರಸ್ಕರಿಸಿ ಆತ್ಮನಲ್ಲಿ ಮನಸ್ಸನ್ನು ಸ್ಥಿರಗೊಳಿಸಬೇಕು.

12232023a ಕುರ್ಯಾತ್ಪರಿಚಯಂ ಯೋಗೇ ತ್ರೈಕಾಲ್ಯಂ ನಿಯತೋ ಮುನಿಃ|

12232023c ಗಿರಿಶೃಂಗೇ ತಥಾ ಚೈತ್ಯೇ ವೃಕ್ಷಾಗ್ರೇಷು ಚ ಯೋಜಜೇತ್||

ಮುನಿಯು ನಿತ್ಯವೂ ನಿಯಮದಲ್ಲಿದ್ದುಕೊಂಡು ಪರ್ವತ ಶಿಖರದಲ್ಲಾಗಲೀ, ದೇವಾಲಯದಲ್ಲಾಗಲೀ, ಅಥವಾ ಮರಗಳ ಮೇಲಾಗಲೀ ದೃಷ್ಟಿಯನ್ನು ಏಕಾಗ್ರಗೊಳಿಸಿ ದಿನಕ್ಕೆ ಮೂರು ಬಾರಿ[1] ಯೋಗಾಭ್ಯಾಸವನ್ನು ಮಾಡಬೇಕು.

12232024a ಸಂನಿಯಮ್ಯೇಂದ್ರಿಯಗ್ರಾಮಂ ಗೋಷ್ಠೇ ಭಾಂಡಮನಾ ಇವ|

12232024c ಏಕಾಗ್ರಶ್ಚಿಂತಯೇನ್ನಿತ್ಯಂ ಯೋಗಾನ್ನೋದ್ವೇಜಯೇನ್ಮನಃ||

ಹಣದ ಭಂಡಾರವನ್ನು ತುಂಬಿಸಲು ಇಚ್ಛಿಸುವವನು ಭಾಂಡಾಗಾರದಲ್ಲಿ ದ್ರವ್ಯವನ್ನು ಸಂಗ್ರಹಿಸಿ ಇಡುವಂತೆ ಯೋಗ ಸಾಧಕನು ಇಂದ್ರಿಯ ಸಮುದಾಯವನ್ನು ಮನಸ್ಸಿನೊಡನೆ ಹೃದಯಪುಂಡರೀಕದಲ್ಲಿರಿಸಿಕೊಂಡು ಆತ್ಮನನ್ನು ಏಕಾಗ್ರತೆಯಿಂದ ಧ್ಯಾನಿಸಬೇಕು. ಯೋಗದಿಂದ ಮನಸ್ಸನ್ನು ಉದ್ವೇಗಗೊಳಿಸಬಾರದು.

12232025a ಯೇನೋಪಾಯೇನ ಶಕ್ಯೇತ ಸಂನಿಯಂತುಂ ಚಲಂ ಮನಃ|

12232025c ತಂ ತಂ ಯುಕ್ತೋ ನಿಷೇವೇತ ನ ಚೈವ ವಿಚಲೇತ್ತತಃ||

ಚಂಚಲ ಮನಸ್ಸನ್ನು ಯಾವ ಉಪಾಯದಿಂದ ನಿಯಂತ್ರಿಸಲು ಸಾಧ್ಯವಾಗುತ್ತದೆಯೋ ಆ ಉಪಾಯವನ್ನು ಬಳಸಬೇಕು. ಸಾಧನೆಯಿಂದ ವಿಚಲಿತನಾಗಬಾರದು.

12232026a ಶೂನ್ಯಾ ಗಿರಿಗುಹಾಶ್ಚೈವ ದೇವತಾಯತನಾನಿ ಚ|

12232026c ಶೂನ್ಯಾಗಾರಾಣಿ ಚೈಕಾಗ್ರೋ ನಿವಾಸಾರ್ಥಮುಪಕ್ರಮೇತ್||

ಏಕಾಗ್ರನಾಗಿ ನಿರ್ಜನ ಗಿರಿಗುಹೆಯನ್ನೋ, ದೇವಾಲಯವನ್ನೋ, ಅಥವಾ ಶೂನ್ಯ ಗ್ರಹಗಳನ್ನೋ ನಿವಾಸಕ್ಕಾಗಿ ಆರಿಸಿಕೊಳ್ಳಬೇಕು.

12232027a ನಾಭಿಷ್ವಜೇತ್ಪರಂ ವಾಚಾ ಕರ್ಮಣಾ ಮನಸಾಪಿ ವಾ|

12232027c ಉಪೇಕ್ಷಕೋ ಯತಾಹಾರೋ ಲಬ್ಧಾಲಬ್ಧೇ ಸಮೋ ಭವೇತ್||

ಮಾತು, ಮನಸ್ಸು ಮತ್ತು ಕರ್ಮಗಳ ಮೂಲಕ ಇತರರೊಂದಿಗೆ ಹೆಚ್ಚಾದ ಸಂಗವನ್ನು ಇಟ್ಟುಕೊಳ್ಳಬಾರದು. ಎಲ್ಲವನ್ನೂ ಉಪೇಕ್ಷಿಸಬೇಕು. ಯತಾಹಾರಿಯಾಗಿರಬೇಕು. ಸಿಕ್ಕಿದುದು ಮತ್ತು ಸಿಕ್ಕದೇ ಇರುವವುಗಳಲ್ಲಿ ಸಮನಾಗಿರಬೇಕು.

12232028a ಯಶ್ಚೈನಮಭಿನಂದೇತ ಯಶ್ಚೈನಮಪವಾದಯೇತ್|

12232028c ಸಮಸ್ತಯೋಶ್ಚಾಪ್ಯುಭಯೋರ್ನಾಭಿಧ್ಯಾಯೇಚ್ಚುಭಾಶುಭಮ್||

ಅಭಿನಂದಿಸುವವರಲ್ಲಿ ಮತ್ತು ನಿಂದಿಸುವವರಲ್ಲಿ ಸಮಭಾವದಿಂದಿರಬೇಕು. ಹೊಗಳಿದವನಿಗೆ ಶುಭವನ್ನಾಗಲೀ ನಿಂದಿಸಿದವನಿಗೆ ಅಶುಭವನ್ನಾಗಲೀ ಕೋರಬಾರದು.

12232029a ನ ಪ್ರಹೃಷ್ಯೇತ ಲಾಭೇಷು ನಾಲಾಭೇಷು ಚ ಚಿಂತಯೇತ್|

12232029c ಸಮಃ ಸರ್ವೇಷು ಭೂತೇಷು ಸಧರ್ಮಾ ಮಾತರಿಶ್ವನಃ||

ಲಾಭವಾದರೆ ಸಂತೋಷಪಡಬಾರದು. ನಷ್ಟವಾದರೆ ಚಿಂತಿಸಬಾರದು. ಗಾಳಿಯು ಎಲ್ಲರಲ್ಲಿಯೂ ಒಂದೇ ಸಮನಾಗಿ ನಡೆದುಕೊಳ್ಳುವಂತೆ ಸರ್ವಭೂತಗಳಲ್ಲಿ ಸಮನಾಗಿರಬೇಕು.

12232030a ಏವಂ ಸರ್ವಾತ್ಮನಃ ಸಾಧೋಃ ಸರ್ವತ್ರ ಸಮದರ್ಶಿನಃ|

12232030c ಷಣ್ಮಾಸಾನ್ನಿತ್ಯಯುಕ್ತಸ್ಯ ಶಬ್ದಬ್ರಹ್ಮಾತಿವರ್ತತೇ||

ಹೀಗೆ ಸರ್ವಾತ್ಮನಾಗಿ ಸರ್ವತ್ರ ಸಮದರ್ಶಿಯಾಗಿ ಆರು ತಿಂಗಳು ಯೋಗಾಭ್ಯಾಸ ನಿರತನಾಗಿರುವ ಸಾಧುವಿಗೆ ಶಬ್ದಬ್ರಹ್ಮವು ಚೆನ್ನಾಗಿ ಪ್ರಕಾಶಗೊಳ್ಳುತ್ತದೆ.

12232031a ವೇದನಾರ್ತಾಃ ಪ್ರಜಾ ದೃಷ್ಟ್ವಾ ಸಮಲೋಷ್ಟಾಶ್ಮಕಾಂಚನಃ|

12232031c ಏತಸ್ಮಿನ್ನಿರತೋ ಮಾರ್ಗೇ ವಿರಮೇನ್ನ ವಿಮೋಹಿತಃ||

ವೇದನೆಗಳಿಂದ ಆರ್ತರಾದ ಪ್ರಜೆಗಳನ್ನು ನೋಡಿ ವಿರಕ್ತನಾಗಬೇಕು. ಮಣ್ಣುಹೆಂಟೆ-ಕಲ್ಲು-ಚಿನ್ನಗಳನ್ನು ಸಮನಾಗಿ ಕಾಣಬೇಕು. ಯೋಗಮಾರ್ಗದಿಂದ ವಿರತನಾಗಬಾರದು ಮತ್ತು ಮೋಹಗೊಳ್ಳಬಾರದು.

12232032a ಅಪಿ ವರ್ಣಾವಕೃಷ್ಟಸ್ತು ನಾರೀ ವಾ ಧರ್ಮಕಾಂಕ್ಷಿಣೀ|

12232032c ತಾವಪ್ಯೇತೇನ ಮಾರ್ಗೇಣ ಗಚ್ಚೇತಾಂ ಪರಮಾಂ ಗತಿಮ್||

ನೀಚವರ್ಣದ ಪುರುಷನಾಗಿದ್ದರೂ, ಧರ್ಮವನ್ನು ಬಯಸುವ ಸ್ತ್ರೀಯಾಗಿದ್ದರೂ ಇದೇ ಯೋಗಮಾರ್ಗವನ್ನು ಆಶ್ರಯಿಸಿ ಪರಮ ಗತಿಯನ್ನು ಪಡೆಯಬಲ್ಲರು.

12232033a ಅಜಂ ಪುರಾಣಮಜರಂ ಸನಾತನಂ

ಯದಿಂದ್ರಿಯೈರುಪಲಭತೇ ನರೋಽಚಲಃ|

12232033c ಅಣೋರಣೀಯೋ ಮಹತೋ ಮಹತ್ತರಂ

ತದಾತ್ಮನಾ ಪಶ್ಯತಿ ಯುಕ್ತ ಆತ್ಮವಾನ್||

ಚಿತ್ತವನ್ನು ಜಯಿಸಿ ಯೋಗಾಭ್ಯಾಸದಲ್ಲಿ ಯುಕ್ತನಾದ ಯೋಗಿಯು ತನ್ನ ನಿಶ್ಚಲ ಇಂದ್ರಿಯಗಳು ಮತ್ತು ಬುದ್ಧಿಯ ಮೂಲಕ ಹುಟ್ಟಿಲ್ಲದವನೂ, ಸನಾತನನೂ, ಮುಪ್ಪಿಲ್ಲದವನೂ, ಅಣುವಿಗಿಂತ ಅಣುವೂ, ಮಹತ್ತಿಗಿಂತ ಮಹತ್ತರನೂ ಆದ ಪರಮಾತ್ಮನನ್ನು ಕಂಡುಕೊಳ್ಳುತ್ತಾನೆ.”

12232034a ಇದಂ ಮಹರ್ಷೇರ್ವಚನಂ ಮಹಾತ್ಮನೋ

ಯಥಾವದುಕ್ತಂ ಮನಸಾನುದೃಶ್ಯ ಚ|

12232034c ಅವೇಕ್ಷ್ಯ ಚೇಯಾತ್ಪರಮೇಷ್ಠಿಸಾತ್ಮ್ಯತಾಂ

ಪ್ರಯಾಂತಿ ಯಾಂ ಭೂತಗತಿಂ ಮನೀಷಿಣಃ||

ಮಹಾತ್ಮ ಮಹರ್ಷಿಯು ಯಥಾವತ್ತಾಗಿ ಹೇಳಿದ ಈ ಮಾತನ್ನು ಮನಸಾ ವಿಚಾರಿಸಿ ಇದು ಯುಕ್ತವಾದುದೆಂದು ಭಾವಿಸಿ ಅದರಂತೆಯೇ ಯಾರು ಯೋಗಾಭ್ಯಾಸ ಮಾಡುವರೋ ಅಂಥಹ ಜ್ಞಾನಿಗಳು ಸಾಮಾನ್ಯಜೀವಿಗಳು ಹೊಂದಲು ಅಸಾಧ್ಯವಾದ ಬ್ರಹ್ಮಸಾಮ್ಯವನ್ನು ಹೊಂದುತ್ತಾರೆ.

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ದ್ವಿತ್ರಿಂಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾಮೂವತ್ತೆರಡನೇ ಅಧ್ಯಾಯವು.

[1] ಪ್ರಾತಃಕಾಲದಲ್ಲಿ ಹಾಗೂ ರಾತ್ರಿಯ ಮೊದಲನೇ ಮತ್ತು ಕಡೆಯ ಯಾಮಗಳಲ್ಲಿ (ಭಾರತ ದರ್ಶನ).

Comments are closed.