Shanti Parva: Chapter 234

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೩೪

ಬ್ರಹ್ಮಚರ್ಯಾಶ್ರಮ ವರ್ಣನೆ (1-29).

12234001 ಶುಕ ಉವಾಚ|

12234001a ಕ್ಷರಾತ್ ಪ್ರಭೃತಿ ಯಃ ಸರ್ಗಃ ಸಗುಣಾನೀಂದ್ರಿಯಾಣಿ ಚ|

12234001c ಬುದ್ಧ್ಯೈಶ್ವರ್ಯಾಭಿಸರ್ಗಾರ್ಥಂ ಯದ್ಧ್ಯಾನಂ ಚಾತ್ಮನಃ ಶುಭಮ್||

ಶುಕನು ಹೇಳಿದನು: “ಪ್ರಕೃತಿಯಿಂದ ಮೊದಲ್ಗೊಂಡು ಇಪ್ಪತ್ನಾಲ್ಕು ತತ್ತ್ವಾತ್ಮಕ ಸಾಧಾರಣ ಸೃಷ್ಟಿ ಮತ್ತು ವಿಷಯಯುಕ್ತ ಇಂದ್ರಿಯ ಮತ್ತು ಬುದ್ಧಿ-ಐಶ್ವರ್ಯಗಳ ಅದ್ಭುತ ಸೃಷ್ಟಿ – ಇವೆರಡೂ ಶುಭ ಆತ್ಮನದೇ ಎಂದು ಕೇಳಿದ್ದೇನೆ.

12234002a ಭೂಯ ಏವ ತು ಲೋಕೇಽಸ್ಮಿನ್ಸದ್ವೃತ್ತಿಂ ವೃತ್ತಿಹೈತುಕೀಮ್|

12234002c ಯಯಾ ಸಂತಃ ಪ್ರವರ್ತಂತೇ ತದಿಚ್ಚಾಮ್ಯನುವರ್ಣಿತಮ್||

ಈ ಲೋಕದಲ್ಲಿರುವ ಸದ್ವೃತ್ತಿ ಮತ್ತು ಆ ಸದ್ವೃತ್ತಿಯ ಕಾರಣಗಳ ಹಾಗೂ ಸತ್ಪುರುಷರ ಸದಾಚಾರಗಳ ವರ್ಣನೆಯನ್ನು ಇನ್ನೂ ಹೆಚ್ಚು ಕೇಳಬಯಸುತ್ತೇನೆ.

12234003a ವೇದೇ ವಚನಮುಕ್ತಂ ತು ಕುರು ಕರ್ಮ ತ್ಯಜೇತಿ ಚ|

12234003c ಕಥಮೇತದ್ವಿಜಾನೀಯಾಂ ತಚ್ಚ ವ್ಯಾಖ್ಯಾತುಮರ್ಹಸಿ||

ವೇದಗಳು ಕರ್ಮವನ್ನು ಮಾಡು ಮತ್ತು ಕರ್ಮವನ್ನು ತ್ಯಜಿಸು ಈ ಎರಡೂ ವಾಕ್ಯಗಳನ್ನು ಹೇಳುತ್ತವೆ. ಯಾವುದನ್ನು ಮಾಡಬೇಕು ಮತ್ತು ಯಾವುದನ್ನು ಬಿಡಬೇಕು ಎನ್ನುವುದನ್ನು ಹೇಗೆ ತಿಳಿದುಕೊಳ್ಳಬೇಕು[1]? ಅದರ ಕುರಿತು ವಿವರಿಸಬೇಕು.

12234004a ಲೋಕವೃತ್ತಾಂತತತ್ತ್ವಜ್ಞಃ ಪೂತೋಽಹಂ ಗುರುಶಾಸನಾತ್|

12234004c ಕೃತ್ವಾ ಬುದ್ಧಿಂ ವಿಯುಕ್ತಾತ್ಮಾ ತ್ಯಕ್ಷ್ಯಾಮ್ಯಾತ್ಮಾನಮವ್ಯಥಃ||

ಗುರುವಿನ ಉಪದೇಶದಿಂದ ನಾನು ಪವಿತ್ರನಾಗಿದ್ದೇನೆ. ಲೋಕವೃತ್ತಾಂತದ ತತ್ತ್ವಗಳನ್ನು ತಿಳಿದುಕೊಂಡಿದ್ದೇನೆ. ಬುದ್ಧಿಯ ಮೂಲಕ ಆತ್ಮನನ್ನು ಶರೀರದಿಂದ ಬೇರ್ಪಡಿಸಿ, ಆ ಅವ್ಯಯನನ್ನು ಪಡೆದುಕೊಳ್ಳುತ್ತೇನೆ.”

12234005 ವ್ಯಾಸ ಉವಾಚ|

12234005a ಯೈಷಾ ವೈ ವಿಹಿತಾ ವೃತ್ತಿಃ ಪುರಸ್ತಾದ್ಬ್ರಹ್ಮಣಾ ಸ್ವಯಮ್|

12234005c ಏಷಾ ಪೂರ್ವತರೈಃ ಸದ್ಭಿರಾಚೀರ್ಣಾ ಪರಮರ್ಷಿಭಿಃ||

ವ್ಯಾಸನು ಹೇಳಿದನು: “ಹಿಂದೆ ಸ್ವಯಂ ಬ್ರಹ್ಮನು ಯಾವ ಆಚಾರ-ವ್ಯವಹಾರಗಳನ್ನು ವಿಹಿಸಿದ್ದನೋ ಅವನ್ನೇ ಹಿಂದಿನ ಸತ್ಪುರುಷರು ಮತ್ತು ಪರಮ ಋಷಿಗಳು ಆಚರಿಸುತ್ತಿದ್ದರು.

12234006a ಬ್ರಹ್ಮಚರ್ಯೇಣ ವೈ ಲೋಕಾನ್ ಜಯಂತಿ ಪರಮರ್ಷಯಃ|

12234006c ಆತ್ಮನಶ್ಚ ಹೃದಿ ಶ್ರೇಯಸ್ತ್ವನ್ವಿಚ್ಚ ಮನಸಾತ್ಮನಿ||

ಪರಮಋಷಿಗಳು ಬ್ರಹ್ಮಚರ್ಯದಿಂದ ಲೋಕಗಳನ್ನು ಜಯಿಸಿದರು. ಮನಸ್ಸಿನ ಮೂಲಕ ಬುದ್ಧಿಯನ್ನು ಬಳಸಿ ತಮ್ಮ ಶ್ರೇಯಸ್ಸಿನ್ನು ಇಚ್ಛಿಸಿದರು.

12234007a ವನೇ ಮೂಲಫಲಾಶೀ ಚ ತಪ್ಯನ್ಸುವಿಪುಲಂ ತಪಃ|

12234007c ಪುಣ್ಯಾಯತನಚಾರೀ ಚ ಭೂತಾನಾಮವಿಹಿಂಸಕಃ||

ವನಗಳಲ್ಲಿ ಫಲಮೂಲಗಳನ್ನು ತಿಂದುಕೊಂಡು ವಿಪುಲ ತಪಸ್ಸನ್ನು ತಪಿಸಿ ತೀರ್ಥಕ್ಷೇತ್ರಗಳಲ್ಲಿ ಸಂಚರಿಸುತ್ತಾ ಭೂತಗಳಿಗೆ ಅಹಿಂಸಕರಾಗಿರಬೇಕು.

12234008a ವಿಧೂಮೇ ಸನ್ನಮುಸಲೇ ವಾನಪ್ರಸ್ಥಪ್ರತಿಶ್ರಯೇ|

12234008c ಕಾಲೇ ಪ್ರಾಪ್ತೇ ಚರನ್ ಭೈಕ್ಷಂ ಕಲ್ಪತೇ ಬ್ರಹ್ಮಭೂಯಸೇ||

ಮನೆಯಲ್ಲಿ ಹೊಗೆಯು ಕಾಣದೇ ಇರುವಾಗ ಮತ್ತು ಒನಕೆಯ ಶಬ್ದವು ಕೇಳದೇ ಇರುವಾಗ ಭಿಕ್ಷೆಯನ್ನು ಬೇಡಿ ಜೀವಿಸುವ ವಾನಪ್ರಸ್ಥಾಶ್ರಮಿಯು ಕಾಲಪ್ರಾಪ್ತವಾದಾಗ ಬ್ರಹ್ಮಭಾವವನ್ನು ಹೊಂದುತ್ತಾನೆ.

12234009a ನಿಃಸ್ತುತಿರ್ನಿರ್ನಮಸ್ಕಾರಃ ಪರಿತ್ಯಜ್ಯ ಶುಭಾಶುಭೇ|

12234009c ಅರಣ್ಯೇ ವಿಚರೈಕಾಕೀ ಯೇನ ಕೇನ ಚಿದಾಶಿತಃ||

ಯಾರ ಸ್ತುತಿಯನ್ನೂ ಮಾಡದೇ, ಯಾರಿಗೂ ನಮಸ್ಕರಿಸದೇ, ಶುಭಾಶುಭಗಳನ್ನು ಪರಿತ್ಯಜಿಸಿ, ಅರಣ್ಯದಲ್ಲಿ ಏಕಾಕಿಯಾಗಿ ಸಂಚರಿಸುತ್ತಾ ಯಾರಿಂದ ಏನನ್ನೂ ಆಶಿಸಬಾರದು.”

12234010 ಶುಕ ಉವಾಚ|

12234010a ಯದಿದಂ ವೇದವಚನಂ ಲೋಕವಾದೇ ವಿರುಧ್ಯತೇ|

12234010c ಪ್ರಮಾಣೇ ಚಾಪ್ರಮಾಣೇ ಚ ವಿರುದ್ಧೇ ಶಾಸ್ತ್ರತಾ ಕುತಃ||

ಶುಕನು ಹೇಳಿದನು: “ಲೋಕವಾದದ ಪ್ರಕಾರ ವೇದವಚನಗಳು ಒಂದಕ್ಕೊಂದು ವಿರೋಧಿಸುವಂತಿವೆ. ಇವಕ್ಕೆ ಪ್ರಮಾಣವಿರಲಿ ಅಥವಾ ಪ್ರಮಾಣವಿಲ್ಲದಿರಲಿ, ಶಾಸ್ತ್ರತಃ ಇವು ವಿರುದ್ಧವಾಗಿರಲು ಹೇಗೆ ಸಾಧ್ಯ?

12234011a ಇತ್ಯೇತಚ್ಚ್ರೋತುಮಿಚ್ಚಾಮಿ ಭಗವಾನ್ ಪ್ರಬ್ರವೀತು ಮೇ|

12234011c ಕರ್ಮಣಾಮವಿರೋಧೇನ ಕಥಮೇತತ್ ಪ್ರವರ್ತತೇ||

ಭಗವನ್! ಇದನ್ನು ಕೇಳಬಯಸುತ್ತೇನೆ. ನನಗೆ ಹೇಳಬೇಕು. ಶಾಸ್ತ್ರಗಳಲ್ಲಿ ಹೇಳಿರುವ ಕರ್ಮಗಳನ್ನು ವಿರೋಧಿಸದೇ ಹೇಗೆ ನಡೆದುಕೊಳ್ಳಬೇಕು?””

12234012 ಭೀಷ್ಮ ಉವಾಚ|

12234012a ಇತ್ಯುಕ್ತಃ ಪ್ರತ್ಯುವಾಚೇದಂ ಗಂಧವತ್ಯಾಃ ಸುತಃ ಸುತಮ್|

12234012c ಋಷಿಸ್ತತ್ಪೂಜಯನ್ವಾಕ್ಯಂ ಪುತ್ರಸ್ಯಾಮಿತತೇಜಸಃ||

ಭೀಷ್ಮನು ಹೇಳಿದನು: “ಇದನ್ನು ಕೇಳಿದ ಗಂಧವತಿಯ ಸುತ ಋಷಿಯು ಅಮಿತ ತೇಜಸ್ವೀ ಮಗನ ಮಾತನ್ನು ಗೌರವಿಸುತ್ತಾ ಸುತನಿಗೆ ಹೇಳಿದನು.

12234013a ಗೃಹಸ್ಥೋ ಬ್ರಹ್ಮಚಾರೀ ಚ ವಾನಪ್ರಸ್ಥೋಽಥ ಭಿಕ್ಷುಕಃ|

12234013c ಯಥೋಕ್ತಕಾರಿಣಃ ಸರ್ವೇ ಗಚ್ಚಂತಿ ಪರಮಾಂ ಗತಿಮ್||

ಗೃಹಸ್ಥ, ಬ್ರಹ್ಮಚಾರಿ, ವಾನಪ್ರಸ್ಥ ಮತ್ತು ಸಂನ್ಯಾಸಿ – ಇವರೆಲ್ಲರೂ ತಮ್ಮ ತಮ್ಮ ಆಶ್ರಮಗಳಿಗೆ ಹೇಳಿರುವ ಕರ್ಮಗಳನ್ನು ಮಾಡುವುದರಿಂದಲೇ ಪರಮ ಗತಿಯನ್ನು ಹೊಂದುತ್ತಾರೆ.

12234014a ಏಕೋ ಯ ಆಶ್ರಮಾನೇತಾನನುತಿಷ್ಠೇದ್ಯಥಾವಿಧಿ|

12234014c ಅಕಾಮದ್ವೇಷಸಂಯುಕ್ತಃ ಸ ಪರತ್ರ ಮಹೀಯತೇ||

ರಾಗ-ದ್ವೇಷಗಳನ್ನು ತೊರೆದು ಇವುಗಳಲ್ಲಿ ಯಾವುದೇ ಒಂದು ಆಶ್ರಮದಲ್ಲಿ ಯಥಾವಿಧಿಯಾಗಿ ನಡೆದುಕೊಂಡರೆ ಅಂಥವನು ಮರಣಾನಂತರ ಮೆರೆಯುತ್ತಾನೆ.

12234015a ಚತುಷ್ಪದೀ ಹಿ ನಿಃಶ್ರೇಣೀ ಬ್ರಹ್ಮಣ್ಯೇಷಾ ಪ್ರತಿಷ್ಠಿತಾ|

12234015c ಏತಾಮಾಶ್ರಿತ್ಯ ನಿಃಶ್ರೇಣೀಂ ಬ್ರಹ್ಮಲೋಕೇ ಮಹೀಯತೇ||

ಬ್ರಹ್ಮನಲ್ಲಿಯೇ ಪ್ರತಿಷ್ಠಿತವಾಗಿರುವ ಈ ನಾಲ್ಕು ಆಶ್ರಮಗಳು ಬ್ರಹ್ಮನನ್ನು ಸೇರಲಿಕ್ಕಿರುವ ನಾಲ್ಕು ಪಾದಗಳ ಏಣಿಯಂತೆ. ಈ ಏಣಿಯನ್ನು ಹತ್ತಿ ಹೋದವನು ಬ್ರಹ್ಮಲೋಕದಲ್ಲಿ ಮೆರೆಯುತ್ತಾನೆ.

12234016a ಆಯುಷಸ್ತು ಚತುರ್ಭಾಗಂ ಬ್ರಹ್ಮಚಾರ್ಯನಸೂಯಕಃ|

12234016c ಗುರೌ ವಾ ಗುರುಪುತ್ರೇ ವಾ ವಸೇದ್ಧರ್ಮಾರ್ಥಕೋವಿದಃ||

ಆಯುಸ್ಸಿನ ನಾಲ್ಕನೆಯ ಒಂದು ಭಾಗವನ್ನು ಅನಸೂಯಕನಾಗಿ ಬ್ರಹ್ಮಚರ್ಯವನ್ನು ಪಾಲಿಸುತ್ತಾ ಕಳೆಯಬೇಕು. ಗುರು ಅಥವಾ ಗುರುಪುತ್ರನ ಬಳಿಯಲ್ಲಿ ವಾಸಿಸಿಕೊಂಡು ಧರ್ಮಾರ್ಥಕೋವಿದನಾಗಬೇಕು.

12234017a ಕರ್ಮಾತಿರೇಕೇಣ ಗುರೋರಧ್ಯೇತವ್ಯಂ ಬುಭೂಷತಾ|

12234017c ದಕ್ಷಿಣೋ ನಾಪವಾದೀ ಸ್ಯಾದಾಹೂತೋ ಗುರುಮಾಶ್ರಯೇತ್||

ಕರ್ಮಗಳನ್ನು ಮುಗಿಸಿ ಅವನು ಗುರುವು ಕರೆದಾಗ ಮಾತ್ರ ಗುರುವಿನ ಬಳಿ ಹೋಗಿ ಅಧ್ಯಯನ ಮಾಡಬೇಕು. ಎಲ್ಲರ ವಿಷಯದಲ್ಲಿಯೂ ಉದಾರಿಯಾಗಿರಬೇಕು. ಯಾರ ಮೇಲೂ ಅಪವಾದವನ್ನು ಹೊರಿಸಬಾರದು.

12234018a ಜಘನ್ಯಶಾಯೀ ಪೂರ್ವಂ ಸ್ಯಾದುತ್ಥಾಯೀ ಗುರುವೇಶ್ಮನಿ|

12234018c ಯಚ್ಚ ಶಿಷ್ಯೇಣ ಕರ್ತವ್ಯಂ ಕಾರ್ಯಂ ದಾಸೇನ ವಾ ಪುನಃ||

ಗುರುವು ಮಲಗಿದ ನಂತರ ಅವನಿಗಿಂತಲೂ ಕೆಳ ಸ್ಥಾನದಲ್ಲಿ ಮಲಗಬೇಕು. ಗುರುವು ಏಳುವುದಕ್ಕಿಂತಲೂ ಮೊದಲು ಏಳಬೇಕು. ಪುನಃ ಶಿಷ್ಯ ಅಥವಾ ದಾಸನು ಮಾಡಬೇಕಾದ ಎಲ್ಲ ಕಾರ್ಯಗಳನ್ನು ಮಾಡಬೇಕು.

12234019a ಕೃತಮಿತ್ಯೇವ ತತ್ಸರ್ವಂ ಕೃತ್ವಾ ತಿಷ್ಠೇತ ಪಾರ್ಶ್ವತಃ|

12234019c ಕಿಂಕರಃ ಸರ್ವಕಾರೀ ಚ ಸರ್ವಕರ್ಮಸು ಕೋವಿದಃ||

ಎಲ್ಲ ಕೆಲಸಗಳನ್ನೂ ಮಾಡಿ ಮಾಡಿಯಾಯಿತು ಎಂದು ಹೇಳಿ ಗುರುವಿನ ಪಾರ್ಶ್ವದಲ್ಲಿ ನಿಂತುಕೊಳ್ಳಬೇಕು. ಎಲ್ಲ ಕರ್ಮಗಳಲ್ಲಿಯೂ ಕೋವಿದನಾಗಿ ಕಿಂಕರನಂತೆ ಎಲ್ಲವನ್ನೂ ಮಾಡಬೇಕು.

12234020a ಶುಚಿರ್ದಕ್ಷೋ ಗುಣೋಪೇತೋ ಬ್ರೂಯಾದಿಷುರಿವಾತ್ವರಃ|

12234020c ಚಕ್ಷುಷಾ ಗುರುಮವ್ಯಗ್ರೋ ನಿರೀಕ್ಷೇತ ಜಿತೇಂದ್ರಿಯಃ||

ಶುಚಿಯೂ, ದಕ್ಷನೂ, ಗುಣವಂತನೂ ಆಗಿರಬೇಕು. ಮಾತು ಕಡಿಮೆಯಾಗಿರಬೇಕು ಮತ್ತು ಪ್ರಿಯವಾಗಿರಬೇಕು. ಜಿತೇಂದ್ರಿಯನಾಗಿ ಏಕಾಗ್ರಚಿತ್ತನಾಗಿ ಗುರುವನ್ನು ಅವ್ಯಗ್ರನಾಗಿಯೇ ನೋಡುತ್ತಿರಬೇಕು.

12234021a ನಾಭುಕ್ತವತಿ ಚಾಶ್ನೀಯಾದಪೀತವತಿ ನೋ ಪಿಬೇತ್|

12234021c ನ ತಿಷ್ಠತಿ ತಥಾಸೀತ ನಾಸುಪ್ತೇ ಪ್ರಸ್ವಪೇತ ಚ||

ಗುರುವು ಊಟಮಾಡದಿರುವಾಗ ತಾನೂ ಊಟಮಾಡಬಾರದು. ಗುರುವು ಕುಡಿಯದಿದ್ದರೆ ತಾನೂ ಕುಡಿಯಬಾರದು. ಗುರುವು ನಿಂತಿರುವಾಗ ತಾನು ಕುಳಿತುಕೊಳ್ಳಬಾರದು. ಗುರುವು ಮಲಗದೇ ಇರುವಾಗ ತಾನೂ ಮಲಗಬಾರದು.

12234022a ಉತ್ತಾನಾಭ್ಯಾಂ ಚ ಪಾಣಿಭ್ಯಾಂ ಪಾದಾವಸ್ಯ ಮೃದು ಸ್ಪೃಶೇತ್|

12234022c ದಕ್ಷಿಣಂ ದಕ್ಷಿಣೇನೈವ ಸವ್ಯಂ ಸವ್ಯೇನ ಪೀಡಯೇತ್||

ಗುರುವನ್ನು ನಮಸ್ಕರಿಸುವಾಗ ಎರಡೂ ಕೈಗಳನ್ನು ಮೇಲೆತ್ತಿ ಗುರುಗಳ ಎರಡೂ ಪಾದಗಳನ್ನು ಮೃದುವಾಗಿ ಮುಟ್ಟಬೇಕು. ಹಾಗೆ ಮುಟ್ಟುವಾಗ ಬಲಗೈಯಿಂದ ಗುರುವಿನ ಬಲಗಾಲನ್ನೂ ಎಡಗೈಯಿಂದ ಅವನ ಎಡಗಾಲನ್ನೂ ಒತ್ತಬೇಕು.

12234023a ಅಭಿವಾದ್ಯ ಗುರುಂ ಬ್ರೂಯಾದಧೀಷ್ವ ಭಗವನ್ನಿತಿ|

12234023c ಇದಂ ಕರಿಷ್ಯೇ ಭಗವನ್ನಿದಂ ಚಾಪಿ ಕೃತಂ ಮಯಾ||

ಹೀಗೆ ಗುರುವಿಗೆ ನಮಸ್ಕರಿಸಿ “ಭಗವನ್! ನನಗೆ ವಿದ್ಯೆಯನ್ನು ಹೇಳಿಕೊಡಿ! ನಿಮ್ಮ ಕೆಲಸವನ್ನು ಮಾಡಿದ್ದೇನೆ. ಇನ್ನು ಬೇರೆ ಯಾವುದಾದರೂ ಇದ್ದರೆ ಅದನ್ನೂ ಮಾಡುತ್ತೇನೆ.” ಎಂದು ಹೇಳಬೇಕು.

12234024a ಇತಿ ಸರ್ವಮನುಜ್ಞಾಪ್ಯ ನಿವೇದ್ಯ ಗುರವೇ ಧನಮ್|

12234024c ಕುರ್ಯಾತ್ಕೃತ್ವಾ ಚ ತತ್ಸರ್ವಮಾಖ್ಯೇಯಂ ಗುರವೇ ಪುನಃ||

ಹೀಗೆ ಎಲ್ಲವನ್ನೂ ಗುರುವಿಗೆ ನಿವೇದಿಸಿ ಗುರುವಿಗೆ ಧನವನ್ನೂ ಒಪ್ಪಿಸಬೇಕು. ಮಾಡಿದ ಕೆಲಸಗಳನ್ನೆಲ್ಲಾ ನಿವೇದಿಸಿ ಪುನಃ ಕೆಲಸವನ್ನು ಹೇಳಬೇಕೆಂದು ಗುರುವಲ್ಲಿ ಕೇಳಿಕೊಳ್ಳಬೇಕು.

12234025a ಯಾಂಸ್ತು ಗಂಧಾನ್ರಸಾನ್ವಾಪಿ ಬ್ರಹ್ಮಚಾರೀ ನ ಸೇವತೇ|

12234025c ಸೇವೇತ ತಾನ್ಸಮಾವೃತ್ತ ಇತಿ ಧರ್ಮೇಷು ನಿಶ್ಚಯಃ||

ಗಂಧಗಳನ್ನೂ ರಸಗಳನ್ನು ಬ್ರಹ್ಮಚಾರಿಯು ಸೇವಿಸಬಾರದು. ಸಮಾವರ್ತನೆಯಾದ ನಂತರ ಇವನ್ನು ಸೇವಿಸಬಹುದು ಎಂದು ಧರ್ಮ ನಿಶ್ಚಯವಿದೆ.

12234026a ಯೇ ಕೇ ಚಿದ್ವಿಸ್ತರೇಣೋಕ್ತಾ ನಿಯಮಾ ಬ್ರಹ್ಮಚಾರಿಣಃ|

12234026c ತಾನ್ಸರ್ವಾನನುಗೃಹ್ಣೀಯಾದ್ಭವೇಚ್ಚಾನಪಗೋ ಗುರೋಃ||

ಬ್ರಹ್ಮಚಾರಿಯ ಏನೆಲ್ಲ ನಿಯಮಗಳನ್ನು ಶಾಸ್ತ್ರಗಳಲ್ಲಿ ಹೇಳಿವೆಯೋ ಅವೆಲ್ಲವನ್ನೂ ಪಾಲಿಸಬೇಕು. ಯಾವಾಗಲೂ ಗುರುವಿನ ಬಳಿಯೇ ಇರಬೇಕು.

12234027a ಸ ಏವಂ ಗುರವೇ ಪ್ರೀತಿಮುಪಹೃತ್ಯ ಯಥಾಬಲಮ್|

12234027c ಆಶ್ರಮೇಷ್ವಾಶ್ರಮೇಷ್ವೇವಂ ಶಿಷ್ಯೋ ವರ್ತೇತ ಕರ್ಮಣಾ||

ಹೀಗೆ ಗುರುವಿಗೆ ಯಥಾಶಕ್ತಿ ಸೇವೆಗೈದು ಗುರುವಿನ ಪ್ರೀತಿಯನ್ನು ಗಳಿಸಬೇಕು. ಇದಾದ ನಂತರ ಶಿಷ್ಯನು ಬ್ರಹ್ಮಚರ್ಯಾಶ್ರಮವನ್ನು ಬಿಟ್ಟು ಬೇರೊಂದು ಆಶ್ರಮವನ್ನು ಪ್ರಾರಂಭಿಸಬೇಕು. ಆ ಆಶ್ರಮದಲ್ಲಿಯೂ ಧರ್ಮಾನುಸಾರವಾಗಿ ಕರ್ಮಗಳನ್ನು ಮಾಡಬೇಕು.

12234028a ವೇದವ್ರತೋಪವಾಸೇನ ಚತುರ್ಥೇ ಚಾಯುಷೋ ಗತೇ|

12234028c ಗುರವೇ ದಕ್ಷಿಣಾಂ ದತ್ತ್ವಾ ಸಮಾವರ್ತೇದ್ಯಥಾವಿಧಿ||

ಹೀಗೆ ವೇದಾಧ್ಯಯನ, ವ್ರತ ಮತ್ತು ಉಪವಾಸಗಳಿಂದ ಆಯುಸ್ಸಿನ ನಾಲ್ಕನೆಯ ಒಂದು ಭಾಗವನ್ನು ಕಳೆದು ಗುರುವಿಗೆ ದಕ್ಷಿಣೆಯನ್ನಿತ್ತು ಯಥಾವಿಧಿಯಾಗಿ ಸಮಾವರ್ತನೆಯನ್ನು ಮಾಡಿಕೊಳ್ಳಬೇಕು.

12234029a ಧರ್ಮಲಬ್ಧೈರ್ಯುತೋ ದಾರೈರಗ್ನೀನುತ್ಪಾದ್ಯ ಧರ್ಮತಃ|

12234029c ದ್ವಿತೀಯಮಾಯುಷೋ ಭಾಗಂ ಗೃಹಮೇಧಿವ್ರತೀ ಭವೇತ್||

ಧರ್ಮಾನುಕೂಲವಾಗಿ ದೊರೆದ ಕನ್ಯೆಯನ್ನು ಪಾಣಿಗ್ರಹಣ ಮಾಡಿಕೊಂಡು ಅವಳೊಂದಿಗೆ ಧರ್ಮತಃ ಅಗ್ನಿಗಳನ್ನು ಪ್ರತಿಷ್ಠಾಪಿಸಬೇಕು. ಹೀಗೆ ತನ್ನ ಆಯುಸ್ಸಿನ ಎರಡನೇ ಭಾಗವನ್ನು ಉತ್ತಮ ಶೀಲವ್ರತನಾಗಿ ಗೃಹಸ್ಥನಾಗಿ ಕಳೆಯಬೇಕು.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ಚತುಸ್ತ್ರಿಂಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾಮೂವತ್ನಾಲ್ಕನೇ ಅಧ್ಯಾಯವು.

[1] ಅಥವಾ ಕರ್ಮವನ್ನು ಮಾಡು ಅಥವಾ ಕರ್ಮವನ್ನು ತ್ಯಜಿಸು – ಇವೆರಡರಲ್ಲಿ ಯಾವುದು ಶ್ರೇಯಸ್ಕರವೆಂದು ಹೇಗೆ ತಿಳಿದುಕೊಳ್ಳಬೇಕು?

Comments are closed.