Shanti Parva: Chapter 218

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೧೮

ಇಂದ್ರ-ಶ್ರೀಯರ ಸಂವಾದ (1-19); ಬಲಿಯನ್ನು ತ್ಯಜಿಸಿ ಬಂದ ಶ್ರೀಯನ್ನು ಇಂದ್ರನು ಪ್ರತಿಷ್ಠಾಪಿಸಿದುದು (20-38).

12218001 ಭೀಷ್ಮ ಉವಾಚ|

12218001a ಶತಕ್ರತುರಥಾಪಶ್ಯದ್ಬಲೇರ್ದೀಪ್ತಾಂ ಮಹಾತ್ಮನಃ|

12218001c ಸ್ವರೂಪಿಣೀಂ ಶರೀರಾದ್ಧಿ ತದಾ ನಿಷ್ಕ್ರಾಮತೀಂ ಶ್ರಿಯಮ್||

ಭೀಷ್ಮನು ಹೇಳಿದನು: “ಆಗ ಶತಕ್ರತುವು ಮಹಾತ್ಮ ಬಲಿಯ ಶರೀರದಿಂದ ಹೊರಬರುತ್ತಿದ್ದ ಪರಮಸುಂದರಿ ಪ್ರಕಾಶಮಾನ ಶ್ರೀಯನ್ನು ನೋಡಿದನು.

12218002a ತಾಂ ದೀಪ್ತಾಂ ಪ್ರಭಯಾ ದೃಷ್ಟ್ವಾ ಭಗವಾನ್ ಪಾಕಶಾಸನಃ|

12218002c ವಿಸ್ಮಯೋತ್ಫುಲ್ಲನಯನೋ ಬಲಿಂ ಪಪ್ರಚ್ಚ ವಾಸವಃ||

ಪ್ರಭೆಯಿಂದ ಬೆಳಗುತ್ತಿದ್ದ ಅವಳನ್ನು ನೋಡಿ ಭಗವಾನ್ ಪಾಕಶಾಸನ ವಾಸವನು ವಿಸ್ಮಿತನಾಗಿ ತೆರೆದ ಕಣ್ಣುಗಳಿಂದ ಬಲಿಯನ್ನು ಕೇಳಿದನು:

12218003a ಬಲೇ ಕೇಯಮಪಕ್ರಾಂತಾ ರೋಚಮಾನಾ ಶಿಖಂಡಿನೀ|

12218003c ತ್ವತ್ತಃ ಸ್ಥಿತಾ ಸಕೇಯೂರಾ ದೀಪ್ಯಮಾನಾ ಸ್ವತೇಜಸಾ||

“ಬಲೇ! ಜಡೆಯನ್ನು ಕಟ್ಟಿ ಕೇಯೂರಗಳನ್ನು ಧರಿಸಿ ತನ್ನದೇ ತೇಜಸ್ಸಿನಿಂದ ಬೆಳಗುತ್ತಾ ನಿನ್ನ ಶರೀರದಿಂದ ಹೊರಬರುತ್ತಿರುವ ಇವಳು ಯಾರು?”

12218004 ಬಲಿರುವಾಚ|

12218004a ನ ಹೀಮಾಮಾಸುರೀಂ ವೇದ್ಮಿ ನ ದೈವೀಂ ನ ಚ ಮಾನುಷೀಮ್|

12218004c ತ್ವಮೇವೈನಾಂ ಪೃಚ್ಚ ಮಾ ವಾ ಯಥೇಷ್ಟಂ ಕುರು ವಾಸವ||

ಬಲಿಯು ಹೇಳಿದನು: “ವಾಸವ! ಇವಳು ಆಸುರಿಯೋ, ದೇವಿಯೋ ಅಥವಾ ಮನುಷ್ಯಳೋ ನನಗೆ ತಿಳಿದಿಲ್ಲ. ಬೇಕಾದರೆ ನೀನೇ ಇವಳನ್ನು ಪ್ರಶ್ನಿಸು.”

12218005 ಶಕ್ರ ಉವಾಚ|

12218005a ಕಾ ತ್ವಂ ಬಲೇರಪಕ್ರಾಂತಾ ರೋಚಮಾನಾ ಶಿಖಂಡಿನೀ|

12218005c ಅಜಾನತೋ ಮಮಾಚಕ್ಷ್ವ ನಾಮಧೇಯಂ ಶುಚಿಸ್ಮಿತೇ||

ಶಕ್ರನು ಹೇಳಿದನು: “ಜಡೆಕಟ್ಟಿಕೊಂಡು ಬೆಳಗುತ್ತಾ ಬಲಿಯಿಂದ ಹೊರಬರುತ್ತಿರುವ ನೀನು ಯಾರು? ಶುಚಿಸ್ಮಿತೇ! ನನಗೆ ನಿನ್ನನ್ನು ಗುರುತಿಸಲಾಗುತ್ತಿಲ್ಲ. ನಿನ್ನ ನಾಮಧೇಯವನ್ನು ಹೇಳು.

12218006a ಕಾ ತ್ವಂ ತಿಷ್ಠಸಿ ಮಾಯೇವ ದೀಪ್ಯಮಾನಾ ಸ್ವತೇಜಸಾ|

12218006c ಹಿತ್ವಾ ದೈತ್ಯೇಶ್ವರಂ ಸುಭ್ರು ತನ್ಮಮಾಚಕ್ಷ್ವ ತತ್ತ್ವತಃ||

ಸುಭ್ರು! ದೈತ್ಯೇಶ್ವರನನ್ನು ತ್ಯಜಿಸಿ ನಿನ್ನದೇ ತೇಜಸ್ಸಿನಿಂದ ಬೆಳಗುತ್ತಾ ನನ್ನ ಬಳಿ ನಿಂತಿರುವ ನೀನು ಯಾರು? ತತ್ತ್ವತಃ ನನಗೆ ಹೇಳು.”

12218007 ಶ್ರೀರುವಾಚ|

12218007a ನ ಮಾ ವಿರೋಚನೋ ವೇದ ನ ಮಾ ವೈರೋಚನೋ ಬಲಿಃ|

12218007c ಆಹುರ್ಮಾಂ ದುಃಸಹೇತ್ಯೇವಂ ವಿಧಿತ್ಸೇತಿ ಚ ಮಾಂ ವಿದುಃ||

ಶ್ರೀಯು ಹೇಳಿದಳು: “ವಿರೋಚನನೂ ನಾನ್ಯಾರೆಂದು ತಿಳಿದಿರಲಿಲ್ಲ. ವೈರೋಚನ ಬಲಿಯೂ ನಾನ್ಯಾರೆಂದು ತಿಳಿದಿಲ್ಲ. ನನ್ನನ್ನು ದುಃಸಹಾ ಎಂದು ಕರೆಯುತ್ತಾರೆ. ಕೆಲವರು ನನ್ನನ್ನು ವಿಧಿತ್ಸಾ ಎಂದೂ ತಿಳಿದಿದ್ದಾರೆ.

12218008a ಭೂತಿರ್ಲಕ್ಷ್ಮೀತಿ ಮಾಮಾಹುಃ ಶ್ರೀರಿತ್ಯೇವಂ ಚ ವಾಸವ|

12218008c ತ್ವಂ ಮಾಂ ಶಕ್ರ ನ ಜಾನೀಷೇ ಸರ್ವೇ ದೇವಾ ನ ಮಾಂ ವಿದುಃ||

ವಾಸವ! ತಿಳಿದವರು ನನ್ನನ್ನು ಭೂತಿ, ಲಕ್ಷ್ಮಿ, ಮತ್ತು ಶ್ರೀ ಎಂದೂ ಕರೆಯುತ್ತಾರೆ. ಶಕ್ರ! ನೀನೂ ನನ್ನನ್ನು ತಿಳಿದಿಲ್ಲ. ಸರ್ವ ದೇವತೆಗಳೂ ನಾನ್ಯಾರೆಂದು ತಿಳಿಯರು.”

12218009 ಶಕ್ರ ಉವಾಚ|

12218009a ಕಿಮಿದಂ ತ್ವಂ ಮಮ ಕೃತೇ ಉತಾಹೋ ಬಲಿನಃ ಕೃತೇ|

12218009c ದುಃಸಹೇ ವಿಜಹಾಸ್ಯೇನಂ ಚಿರಸಂವಾಸಿನೀ ಸತೀ||

ಶಕ್ರನು ಹೇಳಿದನು: “ದುಃಸಹೇ! ಬಹಳಕಾಲದಿಂದ ಬಲಿಯ ಶರೀರದಲ್ಲಿಯೇ ವಾಸಿಸುತ್ತಿದ್ದ ನೀನು ಈಗ ನನ್ನ ಹಿತಕ್ಕಾಗಿ ಬಲಿಯನ್ನು ತ್ಯಜಿಸಿ ಬಂದಿದ್ದೀಯಾ ಅಥವಾ ಬಲಿಯ ಹಿತದ ಸಲುವಾಗಿಯೇ ಅವನನ್ನು ತ್ಯಜಿಸಿದ್ದೀಯಾ?”

12218010 ಶ್ರೀರುವಾಚ|

12218010a ನ ಧಾತಾ ನ ವಿಧಾತಾ ಮಾಂ ವಿದಧಾತಿ ಕಥಂ ಚನ|

12218010c ಕಾಲಸ್ತು ಶಕ್ರ ಪರ್ಯಾಯಾನ್ಮೈನಂ ಶಕ್ರಾವಮನ್ಯಥಾಃ||

ಶ್ರೀಯು ಹೇಳಿದಳು: “ಶಕ್ರ! ಧಾತನಾಗಲೀ ವಿಧಾತನಾಗಲೀ ನನ್ನನ್ನು ಎಂದೂ ಯಾವ ಕಾರ್ಯಕ್ಕೂ ನಿಯೋಜಿಸುವುದಿಲ್ಲ. ಕಾಲವು ನನ್ನ ಚಲನೆಯನ್ನು ನಿರ್ಧರಿಸುತ್ತದೆ. ಶಕ್ರ! ಅದನ್ನು ನೀನು ಅಪಮಾನಿಸಬೇಡ!”[1]

12218011 ಶಕ್ರ ಉವಾಚ|

12218011a ಕಥಂ ತ್ವಯಾ ಬಲಿಸ್ತ್ಯಕ್ತಃ ಕಿಮರ್ಥಂ ವಾ ಶಿಖಂಡಿನಿ|

12218011c ಕಥಂ ಚ ಮಾಂ ನ ಜಹ್ಯಾಸ್ತ್ವಂ ತನ್ಮೇ ಬ್ರೂಹಿ ಶುಚಿಸ್ಮಿತೇ||

ಶಕ್ರನು ಹೇಳಿದನು: “ಸುಂದರ ಜಡೆಯನ್ನು ಧರಿಸಿದವಳೇ! ಬಲಿಯನ್ನು ಏಕೆ ಮತ್ತು ಹೇಗೆ ತ್ಯಜಿಸಿದೆ? ಶುಚಿಸ್ಮಿತೇ! ಹೇಗೆ ನೀನು ನನ್ನನ್ನೂ ತ್ಯಜಿಸದೇ ಇರುವೆ? ಅದನ್ನು ನನಗೆ ಹೇಳು.”

12218012 ಶ್ರೀರುವಾಚ|

12218012a ಸತ್ಯೇ ಸ್ಥಿತಾಸ್ಮಿ ದಾನೇ ಚ ವ್ರತೇ ತಪಸಿ ಚೈವ ಹಿ|

12218012c ಪರಾಕ್ರಮೇ ಚ ಧರ್ಮೇ ಚ ಪರಾಚೀನಸ್ತತೋ ಬಲಿಃ||

ಶ್ರೀಯು ಹೇಳಿದಳು: “ನಾನು ಸತ್ಯ, ದಾನ, ವ್ರತ, ತಪಸ್ಸು, ಪರಾಕ್ರಮ ಮತ್ತು ಧರ್ಮದಲ್ಲಿ ನೆಲೆಸಿರುತ್ತೇನೆ. ಈಗ ಬಲಿಯು ಈ ಎಲ್ಲದರಿಂದಲೂ ವಿಮುಖನಾಗಿದ್ದಾನೆ.

12218013a ಬ್ರಹ್ಮಣ್ಯೋಽಯಂ ಸದಾ ಭೂತ್ವಾ ಸತ್ಯವಾದೀ ಜಿತೇಂದ್ರಿಯಃ|

12218013c ಅಭ್ಯಸೂಯದ್ಬ್ರಾಹ್ಮಣಾನ್ವೈ ಉಚ್ಚಿಷ್ಟಶ್ಚಾಸ್ಪೃಶದ್ ಘೃತಮ್||

ಇವನು ಸದಾ ಬ್ರಹ್ಮಣ್ಯನಾಗಿದ್ದುಕೊಂಡು ಸತ್ಯವಾದಿಯೂ ಜಿತೇಂದ್ರಿಯನೂ ಆಗಿದ್ದನು. ನಂತರ ಇವನಿಗೆ ಬ್ರಾಹ್ಮಣರ ಮೇಲೆ ಅಸೂಯೆಯುಂಟಾಯಿತು. ಉಚ್ಚಿಷ್ಟ ಕೈಯಿಂದ ತುಪ್ಪವನ್ನು ಮುಟ್ಟುತ್ತಿದ್ದನು.

12218014a ಯಜ್ಞಶೀಲಃ ಪುರಾ ಭೂತ್ವಾ ಮಾಮೇವ ಯಜತೇತ್ಯಯಮ್|

12218014c ಪ್ರೋವಾಚ ಲೋಕಾನ್ಮೂಢಾತ್ಮಾ ಕಾಲೇನೋಪನಿಪೀಡಿತಃ||

ಮೊದಲು ಯಜ್ಞಶೀಲನಾಗಿದ್ದನು. ಆದರೆ ನಂತರ ಈ ಮೂಢಾತ್ಮನು ಕಾಲಪೀಡಿತನಾಗಿ “ನನ್ನ ಸಲುವಾಗಿಯೇ ಯಜ್ಞಮಾಡಿರಿ!” ಎಂದು ಲೋಕಗಳಿಗೆ ಹೇಳಿದನು.

12218015a ಅಪಾಕೃತಾ ತತಃ ಶಕ್ರ ತ್ವಯಿ ವತ್ಸ್ಯಾಮಿ ವಾಸವ|

12218015c ಅಪ್ರಮತ್ತೇನ ಧಾರ್ಯಾಸ್ಮಿ ತಪಸಾ ವಿಕ್ರಮೇಣ ಚ||

ವಾಸವ! ಶಕ್ರ! ಅವನನ್ನು ಪರಿತ್ಯಜಿಸಿ ನಿನ್ನಲ್ಲಿ ವಾಸಿಸುತ್ತೇನೆ. ಅಪ್ರಮತ್ತತೆ, ತಪಸ್ಸು ಮತ್ತು ವಿಕ್ರಮದಿಂದ ನನ್ನನ್ನು ಧರಿಸಬಲ್ಲೆ.”

12218016 ಶಕ್ರ ಉವಾಚ|

12218016a ಅಸ್ತಿ ದೇವಮನುಷ್ಯೇಷು ಸರ್ವಭೂತೇಷು ವಾ ಪುಮಾನ್|

12218016c ಯಸ್ತ್ವಾಮೇಕೋ ವಿಷಹಿತುಂ ಶಕ್ನುಯಾತ್ಕಮಲಾಲಯೇ||

ಶಕ್ರನು ಹೇಳಿದನು: “ಕಮಲವಾಸಿನಿಯೇ! ದೇವತೆಗಳಲ್ಲಿ, ಮನುಷ್ಯರಲ್ಲಿ ಅಥವಾ ಸರ್ವಭೂತಗಳಲ್ಲಿ ತಾನೊಬ್ಬನೇ ಸದಾಕಾಲ ನಿನ್ನನ್ನು ಧರಿಸಿಕೊಂಡಿರುವ ಪುರುಷನು ಯಾರೂ ಇಲ್ಲ.”

12218017 ಶ್ರೀರುವಾಚ|

12218017a ನೈವ ದೇವೋ ನ ಗಂಧರ್ವೋ ನಾಸುರೋ ನ ಚ ರಾಕ್ಷಸಃ|

12218017c ಯೋ ಮಾಮೇಕೋ ವಿಷಹಿತುಂ ಶಕ್ತಃ ಕಶ್ಚಿತ್ಪುರಂದರ||

ಶ್ರೀಯು ಹೇಳಿದಳು: “ಪುರಂದರ! ದೇವತೆಗಳಲ್ಲಾಗಲೀ, ಗಂಧರ್ವರಲ್ಲಾಗಲೀ, ಅಸುರರಲ್ಲಾಗಲೀ, ರಾಕ್ಷಸರಲ್ಲಾಗಲೀ ತಾನೊಬ್ಬನೇ ನನ್ನನ್ನು ಚಿರಕಾಲ ಧರಿಸಿಕೊಳ್ಳಬಹುದಾದವರು ಯಾರೂ ಇಲ್ಲ.”

12218018 ಶಕ್ರ ಉವಾಚ|

12218018a ತಿಷ್ಠೇಥಾ ಮಯಿ ನಿತ್ಯಂ ತ್ವಂ ಯಥಾ ತದ್ಬ್ರೂಹಿ ಮೇ ಶುಭೇ|

12218018c ತತ್ಕರಿಷ್ಯಾಮಿ ತೇ ವಾಕ್ಯಮೃತಂ ತ್ವಂ ವಕ್ತುಮರ್ಹಸಿ||

ಶಕ್ರನು ಹೇಳಿದನು: “ಶುಭೇ! ನಾನು ಹೇಗಿದ್ದರೆ ನೀನು ನನ್ನಲ್ಲಿ ನಿತ್ಯವೂ ನೆಲೆಸಿರುವೆ ಎನ್ನುವುದನ್ನು ಹೇಳು. ನಿನ್ನ ಮಾತಿನಂತೆಯೇ ನಾನು ನಡೆದುಕೊಳ್ಳುತ್ತೇನೆ. ನನಗೆ ನೀನು ಸತ್ಯವನ್ನು ಹೇಳಬೇಕು.”

12218019 ಶ್ರೀರುವಾಚ|

12218019a ಸ್ಥಾಸ್ಯಾಮಿ ನಿತ್ಯಂ ದೇವೇಂದ್ರ ಯಥಾ ತ್ವಯಿ ನಿಬೋಧ ತತ್|

12218019c ವಿಧಿನಾ ವೇದದೃಷ್ಟೇನ ಚತುರ್ಧಾ ವಿಭಜಸ್ವ ಮಾಮ್||

ಶ್ರೀಯು ಹೇಳಿದಳು: “ದೇವೇಂದ್ರ! ನಿತ್ಯವೂ ನಿನ್ನಲ್ಲಿ ಹೇಗೆ ನಾನು ನಿಲ್ಲಬಲ್ಲೆ ಎನ್ನುವುದನ್ನು ಹೇಳುತ್ತೇನೆ. ಕೇಳು. ವೇದದೃಷ್ಟ ವಿಧಿಯಿಂದ ನನ್ನನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸು.”

12218020 ಶಕ್ರ ಉವಾಚ|

12218020a ಅಹಂ ವೈ ತ್ವಾ ನಿಧಾಸ್ಯಾಮಿ ಯಥಾಶಕ್ತಿ ಯಥಾಬಲಮ್|

12218020c ನ ತು ಮೇಽತಿಕ್ರಮಃ ಸ್ಯಾದ್ವೈ ಸದಾ ಲಕ್ಷ್ಮಿ ತವಾಂತಿಕೇ||

ಶಕ್ರನು ಹೇಳಿದನು: “ಲಕ್ಷ್ಮಿ! ಶಕ್ತಿ ಮತ್ತು ಬಲಗಳಿಗನುಗುಣವಾಗಿ ನಾನು ನಿನ್ನನ್ನು ಪ್ರತಿಷ್ಠಾಪಿಸುತ್ತೇನೆ. ನೀನು ನನ್ನೊಡನಿರುವವರೆಗೆ ನಾನು ನಿನ್ನನ್ನು ಅತಿಕ್ರಮಿಸುವುದಿಲ್ಲ.

12218021a ಭೂಮಿರೇವ ಮನುಷ್ಯೇಷು ಧಾರಣೀ ಭೂತಭಾವಿನೀ|

12218021c ಸಾ ತೇ ಪಾದಂ ತಿತಿಕ್ಷೇತ ಸಮರ್ಥಾ ಹೀತಿ ಮೇ ಮತಿಃ||

ಭೂತಭಾವಿನೀ! ಮನುಷ್ಯರಲ್ಲಿ ಭೂಮಿಯು ನಿನ್ನನ್ನು ಧರಿಸುತ್ತಾಳೆ. ಅವಳು ನಿನ್ನ ಒಂದು ಕಾಲು ಭಾಗವನ್ನು ಹೊರಲು ಸಮರ್ಥಳು ಎಂದು ನನ್ನ ಅಭಿಪ್ರಾಯವು.”

12218022 ಶ್ರೀರುವಾಚ|

12218022a ಏಷ ಮೇ ನಿಹಿತಃ ಪಾದೋ ಯೋಽಯಂ ಭೂಮೌ ಪ್ರತಿಷ್ಠಿತಃ|

12218022c ದ್ವಿತೀಯಂ ಶಕ್ರ ಪಾದಂ ಮೇ ತಸ್ಮಾತ್ಸುನಿಹಿತಂ ಕುರು||

ಶ್ರೀಯು ಹೇಳಿದಳು: “ಇದೋ! ನನ್ನ ಈ ಒಂದು ಪಾದವನ್ನು ಭೂಮಿಯ ಮೇಲೆ ಪ್ರತಿಷ್ಠಾಪಿಸಿದ್ದೇನೆ. ಶಕ್ರ! ನನ್ನ ಎರಡನೆಯ ಪಾದವನ್ನು ಎಲ್ಲಿಡಬೇಕೆಂದು ನಿಶ್ಚಯಮಾಡು.”

12218023 ಶಕ್ರ ಉವಾಚ|

12218023a ಆಪ ಏವ ಮನುಷ್ಯೇಷು ದ್ರವಂತ್ಯಃ ಪರಿಚಾರಿಕಾಃ|

12218023c ತಾಸ್ತೇ ಪಾದಂ ತಿತಿಕ್ಷಂತಾಮಲಮಾಪಸ್ತಿತಿಕ್ಷಿತುಮ್||

ಶಕ್ರನು ಹೇಳಿದನು: “ಮನುಷ್ಯರಲ್ಲಿ ಜಲವೇ ದ್ರವ್ಯರೂಪದಲ್ಲಿ ಸೇವೆಸಲ್ಲಿಸುತ್ತದೆ. ನಿನ್ನ ಒಂದು ಕಾಲುಭಾಗವು ಜಲದಲ್ಲಿ ಪ್ರತಿಷ್ಠಿತಗೊಳ್ಳಲಿ. ಜಲವು ನಿನ್ನನ್ನು ಹೊರಬಲ್ಲದು.”

12218024 ಶ್ರೀರುವಾಚ|

12218024a ಏಷ ಮೇ ನಿಹಿತಃ ಪಾದೋ ಯೋಽಯಮಪ್ಸು ಪ್ರತಿಷ್ಠಿತಃ|

12218024c ತೃತೀಯಂ ಶಕ್ರ ಪಾದಂ ಮೇ ತಸ್ಮಾತ್ಸುನಿಹಿತಂ ಕುರು||

ಶ್ರೀಯು ಹೇಳಿದಳು: “ಇದೋ! ನನ್ನ ಈ ಒಂದು ಪಾದವನ್ನು ಜಲದಲ್ಲಿ ಪ್ರತಿಷ್ಠಾಪಿಸಿದ್ದೇನೆ. ಶಕ್ರ! ನನ್ನ ಮೂರನೆಯ ಪಾದವನ್ನು ಎಲ್ಲಿಡಬೇಕೆಂದು ನಿಶ್ಚಯಮಾಡು.”

12218025 ಶಕ್ರ ಉವಾಚ|

12218025a ಯಸ್ಮಿನ್ದೇವಾಶ್ಚ ಯಜ್ಞಾಶ್ಚ ಯಸ್ಮಿನ್ವೇದಾಃ ಪ್ರತಿಷ್ಠಿತಾಃ|

12218025c ತೃತೀಯಂ ಪಾದಮಗ್ನಿಸ್ತೇ ಸುಧೃತಂ ಧಾರಯಿಷ್ಯತಿ||

ಶಕ್ರನು ಹೇಳಿದನು: “ಯಾರಲ್ಲಿ ದೇವತೆಗಳೂ, ಯಜ್ಞಗಳೂ ಮತ್ತು ವೇದಗಳು ಪ್ರತಿಷ್ಠಿತವಾಗಿವೆಯೋ ಆ ಅಗ್ನಿಯು ನಿನ್ನ ಮೂರನೆಯ ಕಾಲುಭಾಗವನ್ನು ಚೆನ್ನಾಗಿ ಧರಿಸಿಕೊಳ್ಳುತ್ತಾನೆ.”

12218026 ಶ್ರೀರುವಾಚ|

12218026a ಏಷ ಮೇ ನಿಹಿತಃ ಪಾದೋ ಯೋಽಯಮಗ್ನೌ ಪ್ರತಿಷ್ಠಿತಃ|

12218026c ಚತುರ್ಥಂ ಶಕ್ರ ಪಾದಂ ಮೇ ತಸ್ಮಾತ್ಸುನಿಹಿತಂ ಕುರು||

ಶ್ರೀಯು ಹೇಳಿದಳು: “ಇದೋ! ನನ್ನ ಈ ಒಂದು ಪಾದವನ್ನು ಅಗ್ನಿಯಲ್ಲಿ ಪ್ರತಿಷ್ಠಾಪಿಸಿದ್ದೇನೆ. ಶಕ್ರ! ನನ್ನ ನಾಲ್ಕನೆಯ ಪಾದವನ್ನು ಎಲ್ಲಿಡಬೇಕೆಂದು ನಿಶ್ಚಯಮಾಡು.”

12218027 ಶಕ್ರ ಉವಾಚ|

12218027a ಯೇ ವೈ ಸಂತೋ ಮನುಷ್ಯೇಷು ಬ್ರಹ್ಮಣ್ಯಾಃ ಸತ್ಯವಾದಿನಃ|

12218027c ತೇ ತೇ ಪಾದಂ ತಿತಿಕ್ಷಂತಾಮಲಂ ಸಂತಸ್ತಿತಿಕ್ಷಿತುಮ್||

ಶಕ್ರನು ಹೇಳಿದನು: “ಮನುಷ್ಯರಲ್ಲಿ ಬ್ರಹ್ಮಣ್ಯರೂ ಸತ್ಯವಾದಿಗಳೂ ಆದ ಸಂತರಿದ್ದಾರೆ. ಆ ಅಮಲ ಸಂತರು ನಿನ್ನನ್ನು ಧರಿಸಲು ಸಮರ್ಥರಾಗಿದ್ದಾರೆ. ಅವರು ನಿನ್ನ ಒಂದು ಪಾದವನ್ನು ಧರಿಸುತ್ತಾರೆ.”

12218028 ಶ್ರೀರುವಾಚ|

12218028a ಏಷ ಮೇ ನಿಹಿತಃ ಪಾದೋ ಯೋಽಯಂ ಸತ್ಸು ಪ್ರತಿಷ್ಠಿತಃ|

12218028c ಏವಂ ವಿನಿಹಿತಾಂ ಶಕ್ರ ಭೂತೇಷು ಪರಿಧತ್ಸ್ವ ಮಾಮ್||

ಶ್ರೀಯು ಹೇಳಿದಳು: “ಇದೋ! ನನ್ನ ಈ ಒಂದು ಪಾದವನ್ನು ಸತ್ಪುರುಷರಲ್ಲಿ ಪ್ರತಿಷ್ಠಾಪಿಸಿದ್ದೇನೆ. ಶಕ್ರ! ಹೀಗೆ ಭೂತಗಳಲ್ಲಿ ಇರಿಸಲ್ಪಟ್ಟ ನನ್ನನ್ನು ನೀನು ರಕ್ಷಿಸು.”

12218029 ಶಕ್ರ ಉವಾಚ|

12218029a ಭೂತಾನಾಮಿಹ ವೈ ಯಸ್ತ್ವಾ ಮಯಾ ವಿನಿಹಿತಾಂ ಸತೀಮ್|

12218029c ಉಪಹನ್ಯಾತ್ಸ ಮೇ ದ್ವಿಷ್ಯಾತ್ತಥಾ ಶೃಣ್ವಂತು ಮೇ ವಚಃ||

ಶಕ್ರನು ಹೇಳಿದನು: “ಹೀಗೆ ನಾನು ನಿನ್ನನ್ನು ವಿಂಗಡಿಸಿ ಭೂತಗಳಲ್ಲಿ ಇರಿಸಿದ್ದೇನೆ. ನನ್ನ ಈ ಮಾತನ್ನು ಕೇಳು. ನಿನ್ನನ್ನು ಹಿಂಸಿಸುವವರನ್ನು ನಾನು ಕೊಲ್ಲುತ್ತೇನೆ.””

12218030 ಭೀಷ್ಮ ಉವಾಚ|

12218030a ತತಸ್ತ್ಯಕ್ತಃ ಶ್ರಿಯಾ ರಾಜಾ ದೈತ್ಯಾನಾಂ ಬಲಿರಬ್ರವೀತ್|

12218030c ಯಾವತ್ಪುರಸ್ತಾತ್ ಪ್ರತಪೇತ್ತಾವದ್ವೈ ದಕ್ಷಿಣಾಂ ದಿಶಮ್||

12218031a ಪಶ್ಚಿಮಾಂ ತಾವದೇವಾಪಿ ತಥೋದೀಚೀಂ ದಿವಾಕರಃ|

12218031c ತಥಾ ಮಧ್ಯಂದಿನೇ ಸೂರ್ಯೋ ಅಸ್ತಮೇತಿ[2] ಯದಾ ತದಾ|

12218031e ಪುನರ್ದೇವಾಸುರಂ ಯುದ್ಧಂ ಭಾವಿ ಜೇತಾಸ್ಮಿ ವಸ್ತದಾ||

ಭೀಷ್ಮನು ಹೇಳಿದನು: “ಹೀಗೆ ಶ್ರೀಯಿಂದ ತ್ಯಕ್ತನಾದ ದೈತ್ಯರ ರಾಜ ಬಲಿಯು ಹೇಳಿದನು: “ಸೂರ್ಯನು ಎಲ್ಲಿಯವರೆಗೆ ಪೂರ್ವದಿಕ್ಕಿನಲ್ಲಿ ಪ್ರಕಾಶಮಾನನಾಗಿರುತ್ತಾನೋ ಅಂದಿನವರೆಗೂ ಅವನು ದಕ್ಷಿಣ, ಉತ್ತರ, ಮತ್ತು ಪಶ್ಚಿಮ ದಿಕ್ಕುಗಳನ್ನೂ ಬೆಳಗುತ್ತಿರುತ್ತಾನೆ. ಸೂರ್ಯನು ಯಾವಾಗ ಮಧ್ಯಾಹ್ನದಲ್ಲಿಯೇ ಇದ್ದು ಅಸ್ತಂಗತನಾಗುವುದಿಲ್ಲವೋ ಆಗ ಪುನಃ ದೇವಾಸುರರ ಯುದ್ಧವಾಗುತ್ತದೆ. ಆಗ ನಾನು ನಿನ್ನನ್ನು ಗೆಲ್ಲುತ್ತೇನೆ.[3]

12218032a ಸರ್ವಾಽಲ್ಲೋಕಾನ್ಯದಾದಿತ್ಯ ಏಕಸ್ಥಸ್ತಾಪಯಿಷ್ಯತಿ|

12218032c ತದಾ ದೇವಾಸುರೇ ಯುದ್ಧೇ ಜೇತಾಹಂ ತ್ವಾಂ ಶತಕ್ರತೋ||

ಶತಕ್ರತೋ! ಯಾವಾಗ ಸೂರ್ಯನು ಒಂದೇ ಸ್ಥಾನದಲ್ಲಿದ್ದುಕೊಂಡು ಎಲ್ಲ ಲೋಕಗಳನ್ನೂ ಬೆಳಗುತ್ತಾನೋ ಆಗ ನಡೆಯುವ ದೇವಾಸುರ ಯುದ್ಧದಲ್ಲಿ ನಾನು ನಿನ್ನನ್ನು ಗೆಲ್ಲುತ್ತೇನೆ.”

12218033 ಶಕ್ರ ಉವಾಚ|

12218033a ಬ್ರಹ್ಮಣಾಸ್ಮಿ ಸಮಾದಿಷ್ಟೋ ನ ಹಂತವ್ಯೋ ಭವಾನಿತಿ|

12218033c ತೇನ ತೇಽಹಂ ಬಲೇ ವಜ್ರಂ ನ ವಿಮುಂಚಾಮಿ ಮೂರ್ಧನಿ||

ಶಕ್ರನು ಹೇಳಿದನು: “ಬಲೇ! ನಿನ್ನನ್ನು ನಾನು ಕೊಲ್ಲಕೂಡದೆಂದು ಬ್ರಹ್ಮನು ನನಗೆ ಆಜ್ಞೆಯಿತ್ತಿದ್ದಾನೆ. ಆದುದರಿಂದ ನಿನ್ನ ತಲೆಯ ಮೇಲೆ ವಜ್ರವನ್ನು ಪ್ರಹರಿಸುತ್ತಿಲ್ಲ.

12218034a ಯಥೇಷ್ಟಂ ಗಚ್ಚ ದೈತ್ಯೇಂದ್ರ ಸ್ವಸ್ತಿ ತೇಽಸ್ತು ಮಹಾಸುರ|

12218034c ಆದಿತ್ಯೋ ನಾವತಪಿತಾ ಕದಾ ಚಿನ್ಮಧ್ಯತಃ ಸ್ಥಿತಃ||

ದೈತ್ಯೇಂದ್ರ! ಮಹಾಸುರ! ಇಷ್ಟವಾದಲ್ಲಿಗೆ ಹೋಗು. ನಿನಗೆ ಮಂಗಳವಾಗಲಿ. ಆದಿತ್ಯನು ಎಂದೂ ಮಧ್ಯದಲ್ಲಿ ಸ್ಥಿತನಾಗುವುದಿಲ್ಲ.

12218035a ಸ್ಥಾಪಿತೋ ಹ್ಯಸ್ಯ ಸಮಯಃ ಪೂರ್ವಮೇವ ಸ್ವಯಂಭುವಾ|

12218035c ಅಜಸ್ರಂ ಪರಿಯಾತ್ಯೇಷ ಸತ್ಯೇನಾವತಪನ್ ಪ್ರಜಾಃ||

ಹಿಂದೆಯೇ ಸ್ವಯಂಭುವು ಅವನಿಗೆ ಮರ್ಯಾದೆಯನ್ನು ಸ್ಥಾಪಿಸಿದ್ದಾನೆ. ಅದೇ ಸತ್ಯಮರ್ಯಾದೆಯ ಅನುಸಾರ ಸೂರ್ಯನು ಸಂಪೂರ್ಣ ಲೋಕಗಳಿಗೆ ತಾಪವನ್ನು ನೀಡುತ್ತಾ ನಿರಂತರ ಪರಿಭ್ರಮಿಸುತ್ತಿರುತ್ತಾನೆ.

12218036a ಅಯನಂ ತಸ್ಯ ಷಣ್ಮಾಸಾ ಉತ್ತರಂ ದಕ್ಷಿಣಂ ತಥಾ|

12218036c ಯೇನ ಸಂಯಾತಿ ಲೋಕೇಷು ಶೀತೋಷ್ಣೇ ವಿಸೃಜನ್ರವಿಃ||

ಅವನಿಗೆ ಆರು ಮಾಸಗಳ ಉತ್ತರ ಮತ್ತು ದಕ್ಷಿಣ ಮಾರ್ಗಗಳಿವೆ. ಇದರಿಂದಲೇ ರವಿಯು ಸಂಪೂರ್ಣ ಜಗತ್ತಿನಲ್ಲಿ ಛಳಿ ಮತ್ತು ಬೇಸಗೆ ಕಾಲಗಳನ್ನು ಸೃಷ್ಟಿಸುತ್ತಾನೆ.””

12218037 ಭೀಷ್ಮ ಉವಾಚ|

12218037a ಏವಮುಕ್ತಸ್ತು ದೈತ್ಯೇಂದ್ರೋ ಬಲಿರಿಂದ್ರೇಣ ಭಾರತ|

12218037c ಜಗಾಮ ದಕ್ಷಿಣಾಮಾಶಾಮುದೀಚೀಂ ತು ಪುರಂದರಃ||

ಭೀಷ್ಮನು ಹೇಳಿದನು: “ಭಾರತ! ಇಂದ್ರನು ಹೀಗೆ ಹೇಳಲು ದೈತ್ಯೇಂದ್ರ ಬಲಿಯು ದಕ್ಷಿಣಾಭಿಮುಖನಾಗಿ ಹೋದನು. ಪುರಂದರನು ಉತ್ತರ ದಿಕ್ಕಿನಲ್ಲಿ ಹೋದನು.

12218038a ಇತ್ಯೇತದ್ಬಲಿನಾ ಗೀತಮನಹಂಕಾರಸಂಜ್ಞಿತಮ್|

12218038c ವಾಕ್ಯಂ ಶ್ರುತ್ವಾ ಸಹಸ್ರಾಕ್ಷಃ ಖಮೇವಾರುರುಹೇ ತದಾ||

ಅನಹಂಕಾರವನ್ನು ಸೂಚಿಸುವ ಬಲಿಯ ಈ ಗೀತೆಯನ್ನು ಕೇಳಿ ಸಹಸ್ರಾಕ್ಷನು ಆಕಾಶವನ್ನೇರಿದನು.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶ್ರೀಸನ್ನಿಧಾನೋ ನಾಮ ಅಷ್ಟಾದಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶ್ರೀಸನ್ನಿಧಾನ ಎನ್ನುವ ಇನ್ನೂರಾಹದಿನೆಂಟನೇ ಅಧ್ಯಾಯವು.

[1] ಕಾಲದ ಆದೇಶವನ್ನು ನಾನು ಮನ್ನಿಸುತ್ತೇನೆ. ಈಗ ಕಾಲನು ಬಲಿಯನ್ನು ಪರಿತ್ಯಜಿಸಲು ನನ್ನನ್ನು ಪ್ರೇರೇಪಿಸಿದ್ದಾನೆ. ಆದುದರಿಂದ ನಾನು ಬಲಿಯ ಶರೀರದಿಂದ ಹೊರಬಂದಿದ್ದೇನೆ. ಆದುದರಿಂದ ನೀನು ಬಲಿಯನ್ನು ಯಾವ ಕಾರಣದಿಂದಲೂ ಅವಹೇಳನ ಮಾಡಬೇಡ. (ಭಾರತ ದರ್ಶನ).

[2] ನಾಸ್ತಮೇತಿ (ಭಾರತ ದರ್ಶನ/ಗೀತಾ ಪ್ರೆಸ್).

[3] ಈಗ ವೈವಸ್ವತ ಮನ್ವಂತರವು ನಡೆಯುತ್ತಿದೆ. ಇದರ ನಂತರದ ಸಾವರ್ಣಿಕ ಮನ್ವಂತರದಲ್ಲಿ ಬಲಿಯೇ ಇಂದ್ರನಾಗುವನೆಂದೂ ಅದನ್ನು ಸೂಚಿಸಿಯೇ ಬಲಿಯು ಈ ಮಾತನ್ನು ಹೇಳಿರುವನೆಂದು ವ್ಯಾಖ್ಯಾನಕಾರರ ಅಭಿಪ್ರಾಯವು (ಭಾರತ ದರ್ಶನ). ವೈವಸ್ವತ ಮನ್ವಂತರವನ್ನು ಎಂಟು ಭಾಗಗಳಲ್ಲಿ ವಿಂಗಡಿಸಿ ಎಂಟನೇ ಭಾಗವು ಕಳೆಯುತ್ತಾ ಬರುವಾಗ ಪೂರ್ವಾದಿ ನಾಲ್ಕೂ ದಿಕ್ಕುಗಳಲ್ಲಿರುವ ಇಂದ್ರ, ಯಮ, ವರುಣ ಮತ್ತು ಕುಬೇರರ ನಾಲ್ಕೂ ಪುರಿಗಳು ನಷ್ಟವಾಗುತ್ತವೆ. ಆ ಸಮಯದಲ್ಲಿ ಕೇವಲ ಬ್ರಹ್ಮಲೋಕದಲ್ಲಿ ಸ್ಥಿತನಾಗಿ ಸೂರ್ಯನು ಕೆಳಗಿನ ಸಂಪೂರ್ಣ ಲೋಕಗಳನ್ನು ಪ್ರಕಾಶಿಸುತ್ತಾನೆ. ಆ ಸಮಯದಲ್ಲಿ ಸಾವರ್ಣಿಕ ಮನ್ವಂತರದ ಆರಂಭವಾಗುತ್ತದೆ ಮತ್ತು ಆಗ ರಾಜಾ ಬಲಿಯು ಇಂದ್ರನಾಗುತ್ತಾನೆ. (ನೀಲಕಂಠೀ, ಗೀತಾ ಪ್ರೆಸ್).

Comments are closed.