Shanti Parva: Chapter 217

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೧೭

ಕಾಲದ ಮಹಿಮೆಯನ್ನು ಪ್ರಶಂಸಿಸುತ್ತಾ ಬಲಿಯು ಇಂದ್ರನನ್ನು ತೆಗಳಿದುದು (1-59).

12217001 ಭೀಷ್ಮ ಉವಾಚ|

12217001a ಪುನರೇವ ತು ತಂ ಶಕ್ರಃ ಪ್ರಹಸನ್ನಿದಮಬ್ರವೀತ್|

12217001c ನಿಃಶ್ವಸಂತಂ ಯಥಾ ನಾಗಂ ಪ್ರವ್ಯಾಹಾರಾಯ ಭಾರತ||

ಭೀಷ್ಮನು ಹೇಳಿದನು: “ಭಾರತ! ಪುನಃ ಶಕ್ರನು ನಾಗದಂತೆ ಭುಸುಗುಟ್ಟುತ್ತಾ ಬಲಿಯನ್ನು ನೋಡಿ ಗಹಗಹಿಸಿ ನಗುತ್ತಾ ತನ್ನ ಉತ್ಕರ್ಷವನ್ನು ಮತ್ತಷ್ಟು ತೋರಿಸಿಕೊಳ್ಳಲು ಹೀಗೆ ಹೇಳಿದನು:

12217002a ಯತ್ತದ್ಯಾನಸಹಸ್ರೇಣ ಜ್ಞಾತಿಭಿಃ ಪರಿವಾರಿತಃ|

12217002c ಲೋಕಾನ್ಪ್ರತಾಪಯನ್ಸರ್ವಾನ್ಯಾಸ್ಯಸ್ಮಾನವಿತರ್ಕಯನ್||

12217003a ದೃಷ್ಟ್ವಾ ಸುಕೃಪಣಾಂ ಚೇಮಾಮವಸ್ಥಾಮಾತ್ಮನೋ ಬಲೇ|

12217003c ಜ್ಞಾತಿಮಿತ್ರಪರಿತ್ಯಕ್ತಃ ಶೋಚಸ್ಯಾಹೋ ನ ಶೋಚಸಿ||

“ಸಹಸ್ರಾರು ಯಾನಗಳಲ್ಲಿ ಜ್ಞಾತಿಗಳಿಂದ ಪರಿವೃತನಾಗಿ ಲೋಕಗಳನ್ನು ತಾಪಗೊಳಿಸುತ್ತಾ ನಮ್ಮನ್ನು ತಿರಸ್ಕರಿಸಿ ಸಂಚರಿಸುತ್ತಿದ್ದೆ! ಬಲೇ! ಜ್ಞಾತಿ-ಮಿತ್ರರಿಂದ ಪರಿತ್ಯಕ್ತನಾದ ನೀನು ಈ ದೀನ ಪರಿಸ್ಥಿತಿಯಲ್ಲಿರುವುದನ್ನು ನೋಡಿ ಶೋಕಿಸುತ್ತಿರುವೆಯೋ ಅಥವಾ ಶೋಕಿಸುತ್ತಿಲ್ಲವೋ?

12217004a ಪ್ರೀತಿಂ ಪ್ರಾಪ್ಯಾತುಲಾಂ ಪೂರ್ವಂ ಲೋಕಾಂಶ್ಚಾತ್ಮವಶೇ ಸ್ಥಿತಾನ್|

12217004c ವಿನಿಪಾತಮಿಮಂ ಚಾದ್ಯ ಶೋಚಸ್ಯಾಹೋ ನ ಶೋಚಸಿ||

ಹಿಂದೆ ಲೋಕಗಳನ್ನು ನಿನ್ನ ವಶಮಾಡಿಕೊಂಡು ಅತುಲ ಸಂತೋಷವನ್ನು ಹೊಂದಿದ್ದೆ. ಆದರೆ ಇಂದು ಈ ಘೋರ ಪತನವನ್ನು ನೋಡಿ ಶೋಕಿಸುತ್ತಿರುವೆಯೋ ಅಥವಾ ಶೋಕಿಸುತ್ತಿಲ್ಲವೋ?”

12217005 ಬಲಿರುವಾಚ|

12217005a ಅನಿತ್ಯಮುಪಲಕ್ಷ್ಯೇದಂ ಕಾಲಪರ್ಯಾಯಮಾತ್ಮನಃ[1]|

12217005c ತಸ್ಮಾಚ್ಚಕ್ರ ನ ಶೋಚಾಮಿ ಸರ್ವಂ ಹ್ಯೇವೇದಮಂತವತ್||

ಬಲಿಯು ಹೇಳಿದನು: “ಶಕ್ರ! ನನ್ನ ಈ ಕಾಲಪಲ್ಲಟವನ್ನು ಮತ್ತು ಅನಿತ್ಯತೆಯನ್ನು ನೋಡುತ್ತಿದ್ದೇನೆ. ಇವೆಲ್ಲವೂ ಅಂತ್ಯಗೊಳ್ಳುವುದೆಂದು ನಾನು ಶೋಕಿಸುತ್ತಿಲ್ಲ.

12217006a ಅಂತವಂತ ಇಮೇ ದೇಹಾ ಭೂತಾನಾಮಮರಾಧಿಪ|

12217006c ತೇನ ಶಕ್ರ ನ ಶೋಚಾಮಿ ನಾಪರಾಧಾದಿದಂ ಮಮ||

ಅಮರಾಧಿಪ! ಭೂತಗಳ ಈ ದೇಹವೆಲ್ಲವೂ ಅಂತ್ಯಗೊಳ್ಳುವವು. ಈ ಶರೀರವೂ ಕೂಡ ನನ್ನ ಅಪರಾಧದಿಂದ ನನಗೆ ದೊರೆತಿದ್ದುದಲ್ಲ[2]. ಇದರಿಂದ ನಾನು ಶೋಕಿಸುವುದಿಲ್ಲ.

12217007a ಜೀವಿತಂ ಚ ಶರೀರಂ ಚ ಪ್ರೇತ್ಯ ವೈ[3] ಸಹ ಜಾಯತೇ|

12217007c ಉಭೇ ಸಹ ವಿವರ್ಧೇತೇ ಉಭೇ ಸಹ ವಿನಶ್ಯತಃ||

ಮರಣಾನಂತರ ಜೀವ ಮತ್ತು ಶರೀರಗಳು ಜೊತೆ-ಜೊತೆಯಲ್ಲಿಯೇ ಹುಟ್ಟುತ್ತವೆ. ಜೊತೆಯಲ್ಲಿಯೇ ವೃದ್ಧಿಯನ್ನು ಹೊಂದುತ್ತವೆ. ಮತ್ತು ಜೊತೆಯಲ್ಲಿಯೇ ನಾಶವನ್ನೂ ಹೊಂದುತ್ತವೆ.

12217008a ತದೀದೃಶಮಿದಂ ಭಾವಮವಶಃ ಪ್ರಾಪ್ಯ ಕೇವಲಮ್|

12217008c ಯದ್ಯೇವಮಭಿಜಾನಾಮಿ ಕಾ ವ್ಯಥಾ ಮೇ ವಿಜಾನತಃ||

ನಾನು ಈ ಕತ್ತೆಯ ಶರೀರವನ್ನು ಧರಿಸಿದ್ದರೂ ವಿವಶನಾಗಿಲ್ಲ. ನಾನು ಯಾರೆಂಬುದನ್ನು ಚೆನ್ನಾಗಿ ಅರಿತಿದ್ದೇನೆ. ದೇಹದ ಅನಿತ್ಯತೆಯನ್ನೂ ಅತ್ಮದ ನಿತ್ಯತೆಯನ್ನೂ ತಿಳಿದಿರುವಾಗ ನಾನೇಕೆ ವ್ಯಥೆಪಡಲಿ?

12217009a ಭೂತಾನಾಂ ನಿಧನಂ ನಿಷ್ಠಾ ಸ್ರೋತಸಾಮಿವ ಸಾಗರಃ|

12217009c ನೈತತ್ಸಮ್ಯಗ್ವಿಜಾನಂತೋ ನರಾ ಮುಹ್ಯಂತಿ ವಜ್ರಭೃತ್||

ವಜ್ರಧಾರಿಯೇ! ನದಿಗಳಿಗೆಲ್ಲ ಸಮುದ್ರವು ಅಂತಿಮ ಆಶ್ರಯವಾಗಿರುವಂತೆ ಎಲ್ಲ ಭೂತಗಳಿಗೂ ಮೃತ್ಯುವು ಅಂತಿಮ ಆಶ್ರಯವು. ಇದನ್ನು ಚೆನ್ನಾಗಿ ತಿಳಿದುಕೊಂಡಿರುವ ನರನು ಮೋಹಗೊಳ್ಳುವುದಿಲ್ಲ.

12217010a ಯೇ ತ್ವೇವಂ ನಾಭಿಜಾನಂತಿ ರಜೋಮೋಹಪರಾಯಣಾಃ|

12217010c ತೇ ಕೃಚ್ಚ್ರಂ ಪ್ರಾಪ್ಯ ಸೀದಂತಿ ಬುದ್ಧಿರ್ಯೇಷಾಂ ಪ್ರಣಶ್ಯತಿ||

ಇದನ್ನು ತಿಳಿಯದೇ ರಜೋಮೋಹಪರಾಯಣರಾದವರು ಕಷ್ಟ ಬಂದಾಗ ಕುಸಿಯುತ್ತಾರೆ ಮತ್ತು ಅವರ ಬುದ್ಧಿಯು ನಾಶವಾಗುತ್ತದೆ.

12217011a ಬುದ್ಧಿಲಾಭೇ ಹಿ ಪುರುಷಃ ಸರ್ವಂ ನುದತಿ ಕಿಲ್ಬಿಷಮ್|

12217011c ವಿಪಾಪ್ಮಾ ಲಭತೇ ಸತ್ತ್ವಂ ಸತ್ತ್ವಸ್ಥಃ ಸಂಪ್ರಸೀದತಿ||

ಸದ್ಬುದ್ಧಿಯು ಪ್ರಾಪ್ತವಾದಾಗ ಪುರುಷನು ಸರ್ವ ಪಾಪಗಳನ್ನೂ ಕಳೆದುಕೊಳ್ಳುತ್ತಾನೆ. ಪಾಪಹೀನನಾಗಿ ಸತ್ತ್ವಗುಣವನ್ನು ಪಡೆದುಕೊಳ್ಳುತ್ತಾನೆ ಮತ್ತು ಸತ್ತ್ವಗುಣದಲ್ಲಿ ಸ್ಥಿತನಾಗಿ ಪ್ರಸನ್ನತೆಯನ್ನು ಹೊಂದುತ್ತಾನೆ.

12217012a ತತಸ್ತು ಯೇ ನಿವರ್ತಂತೇ ಜಾಯಂತೇ ವಾ ಪುನಃ ಪುನಃ|

12217012c ಕೃಪಣಾಃ ಪರಿತಪ್ಯಂತೇ ತೇಽನರ್ಥೈಃ ಪರಿಚೋದಿತಾಃ||

ಆ ಸತ್ತ್ವಗುಣದಿಂದ ಜಾರಿದ ಬಡಜೀವಿಗಳು ಪುನಃ ಪುನಃ ಹುಟ್ಟುತ್ತಾರೆ ಮತ್ತು ರಜೋಮೋಹ ಪ್ರೇರಣೆಗೆ ಒಳಪಟ್ಟು ಬಹಳವಾಗಿ ಪರಿತಪಿಸುತ್ತಾರೆ.

12217013a ಅರ್ಥಸಿದ್ಧಿಮನರ್ಥಂ ಚ ಜೀವಿತಂ ಮರಣಂ ತಥಾ|

12217013c ಸುಖದುಃಖಫಲಂ ಚೈವ ನ ದ್ವೇಷ್ಮಿ ನ ಚ ಕಾಮಯೇ||

ಅರ್ಥಸಿದ್ಧಿಯಾಗಲೀ ಅಥವಾ ಸಿದ್ಧಿಯಾಗದೇ ಇರಲಿ, ಜೀವಿತವಾಗಿರಲಿ ಅಥವಾ ಮರಣಬಂದೊದಗಲಿ, ಸುಖವಾಗಲೀ ದುಃಖವಾಗಲೀ – ಇವುಗಳನ್ನು ನಾನು ಬೇಕೆಂದು ಬಯಸುವುದೂ ಇಲ್ಲ; ಬೇಡವೆಂದು ದ್ವೇಷಿಸುವುದೂ ಇಲ್ಲ.

12217014a ಹತಂ ಹಂತಿ ಹತೋ ಹ್ಯೇವ ಯೋ ನರೋ ಹಂತಿ ಕಂ ಚನ|

12217014c ಉಭೌ ತೌ ನ ವಿಜಾನೀತೋ ಯಶ್ಚ ಹಂತಿ ಹತಶ್ಚ ಯಃ||

ಇನ್ನೊಬ್ಬನನ್ನು ಕೊಲ್ಲುವವನು ಸ್ವಯಂ ತಾನೇ ಸತ್ತಿರುವವನಾಗಿದ್ದುಕೊಂಡು ಸತ್ತುಹೋದವನನ್ನೇ ಕೊಲ್ಲುತ್ತಾನೆ. ಕೊಲ್ಲುವವನು ಮತ್ತು ಕೊಲ್ಲಲ್ಪಟ್ಟವನು ಇಬ್ಬರೂ ನಿಜವಾದ ಕರ್ತೃವು ಯಾರೆಂದು ತಿಳಿದಿಲ್ಲ.

12217015a ಹತ್ವಾ ಜಿತ್ವಾ ಚ ಮಘವನ್ಯಃ ಕಶ್ಚಿತ್ಪುರುಷಾಯತೇ|

12217015c ಅಕರ್ತಾ ಹ್ಯೇವ ಭವತಿ ಕರ್ತಾ ತ್ವೇವ ಕರೋತಿ ತತ್||

ಮಘವನ್! ಅನ್ಯರನ್ನು ಕೊಂದು ಅಥವಾ ಗೆದ್ದು ಪೌರುಷ ಕೊಚ್ಚಿಕೊಳ್ಳುವವನು ಅದರ ಕರ್ತೃವೇ ಆಗಿರುವುದಿಲ್ಲ. ಜಗತ್ಕರ್ತನಾದ ಪರಮಾತ್ಮನೇ ಅದನ್ನು ಮಾಡುತ್ತಾನೆ[4].

12217016a ಕೋ ಹಿ ಲೋಕಸ್ಯ ಕುರುತೇ ವಿನಾಶಪ್ರಭವಾವುಭೌ|

12217016c ಕೃತಂ ಹಿ ತತ್ಕೃತೇನೈವ ಕರ್ತಾ ತಸ್ಯಾಪಿ ಚಾಪರಃ||

ಲೋಕದ ಸೃಷ್ಟಿ-ಸಂಹಾರಗಳೆರಡನ್ನೂ ಯಾರು ಮಾಡುತ್ತಾರೆ? ಇದನ್ನೂ ಯಾರೋ ಮಾಡಿದ್ದಿರಬಹುದೆಂದು ಯೋಚಿಸಬಹುದು. ಆದರೆ ಇವುಗಳ ಕರ್ತೃವು ಬೇರೆಯೇ ಇದ್ದಾನೆ.

12217017a ಪೃಥಿವೀ ವಾಯುರಾಕಾಶಮಾಪೋ ಜ್ಯೋತಿಶ್ಚ ಪಂಚಮಮ್|

12217017c ಏತದ್ಯೋನೀನಿ ಭೂತಾನಿ ತತ್ರ ಕಾ ಪರಿದೇವನಾ||

ಪೃಥ್ವೀ, ವಾಯು, ಆಕಾಶ, ಜಲ ಮತ್ತು ಐದನೆಯ ಜ್ಯೋತಿ – ಈ ಭೂತಗಳೇ ಸಮಸ್ತ ಶರೀರಗಳಿಗೆ ಕಾರಣವಾಗಿರುವಾಗ ಇವುಗಳಿಗಾಗಿ ಏಕೆ ಶೋಕಿಸಬೇಕು?

12217018a ಮಹಾವಿದ್ಯೋಽಲ್ಪವಿದ್ಯಶ್ಚ ಬಲವಾನ್ದುರ್ಬಲಶ್ಚ ಯಃ|

12217018c ದರ್ಶನೀಯೋ ವಿರೂಪಶ್ಚ ಸುಭಗೋ ದುರ್ಭಗಶ್ಚ ಯಃ||

12217019a ಸರ್ವಂ ಕಾಲಃ ಸಮಾದತ್ತೇ ಗಂಭೀರಃ ಸ್ವೇನ ತೇಜಸಾ|

12217019c ತಸ್ಮಿನ್ಕಾಲವಶಂ ಪ್ರಾಪ್ತೇ ಕಾ ವ್ಯಥಾ ಮೇ ವಿಜಾನತಃ||

ಮಹಾ ವಿದ್ವಾಂಸನಾಗಿರಲಿ ಅಲ್ಪವಿದ್ವಾಂಸನಾಗಿರಲಿ, ಬಲಶಾಲಿಯಾಗಿರಲಿ ದುರ್ಬಲನಾಗಿರಲಿ, ಸುಂದರನಾಗಿರಲಿ ಕುರೂಪಿಯಾಗಿರಲಿ, ಸೌಭಾಗ್ಯಶಾಲಿಯಾಗಿರಲಿ ದೌರ್ಭಾಗ್ಯಶಾಲಿಯಾಗಿರಲಿ – ಎಲ್ಲರನ್ನೂ ಗಂಭೀರ ಕಾಲವು ತನ್ನ ತೇಜಸ್ಸಿನಿಂದ ಎಳೆದುಕೊಂಡುಬಿಡುತ್ತದೆ. ಎಲ್ಲವೂ ಕಾಲವಶವಾಗಿರುವಾಗ ಇದನ್ನು ತಿಳಿದುಕೊಂಡಿರುವ ನನಗೇಕೆ ವ್ಯಥೆಯಾಗುತ್ತದೆ?

12217020a ದಗ್ಧಮೇವಾನುದಹತಿ ಹತಮೇವಾನುಹಂತಿ ಚ|

12217020c ನಶ್ಯತೇ ನಷ್ಟಮೇವಾಗ್ರೇ ಲಬ್ಧವ್ಯಂ ಲಭತೇ ನರಃ||

ಕಾಲವು ಮೊದಲೇ ಸುಟ್ಟಿರುವುದು ಅನಂತರ ಸುಡುತ್ತದೆ. ಕಾಲವು ಮೊದಲೇ ಕೊಂದಿರುವುದು ನಂತರ ಸಾಯುತ್ತದೆ. ಮೊದಲೇ ನಷ್ಟವಾಗಿರುವುದು ನಶಿಸುತ್ತದೆ. ದೊರೆಯಬೇಕಾಗಿದ್ದುದೇ ನರನಿಗೆ ದೊರೆಯುತ್ತದೆ[5].

12217021a ನಾಸ್ಯ ದ್ವೀಪಃ ಕುತಃ ಪಾರಂ ನಾವಾರಃ ಸಂಪ್ರದೃಶ್ಯತೇ|

12217021c ನಾಂತಮಸ್ಯ ಪ್ರಪಶ್ಯಾಮಿ ವಿಧೇರ್ದಿವ್ಯಸ್ಯ ಚಿಂತಯನ್||

ಎಷ್ಟೇ ಯೋಚಿಸಿದರೂ ಕಾಲದ ಕೊನೆಯು ಕಾಣುತ್ತಿಲ್ಲ. ಈ ಕಾಲಸಮುದ್ರದ ನಡುವೆ ಯಾವ ದ್ವೀಪವೂ ಕಾಣುತ್ತಿಲ್ಲ. ಇನ್ನು ದಡವೆಲ್ಲಿ ಸಿಕ್ಕೀತು? ಈಚೆಯ ದಡವೂ ಕೂಡ ಕಾಣಿಸುತ್ತಿಲ್ಲ.

12217022a ಯದಿ ಮೇ ಪಶ್ಯತಃ ಕಾಲೋ ಭೂತಾನಿ ನ ವಿನಾಶಯೇತ್|

12217022c ಸ್ಯಾನ್ಮೇ ಹರ್ಷಶ್ಚ ದರ್ಪಶ್ಚ ಕ್ರೋಧಶ್ಚೈವ ಶಚೀಪತೇ||

ಶಚೀಪತೇ! ಕಾಲನು ನನ್ನ ಕಣ್ಣೆದುರಿಗೇ ಭೂತಗಳನ್ನು ನಾಶಗೊಳಿಸದೇ ಇದ್ದಿದ್ದರೆ ನನಗೆ ಹರ್ಷವಾಗುತ್ತಿತ್ತು, ದರ್ಪವಾಗುತ್ತಿತ್ತು ಮತ್ತು ಕ್ರೋಧವೂ ಉಂಟಾಗುತ್ತಿತ್ತು.

12217023a ತುಷಭಕ್ಷಂ ತು ಮಾಂ ಜ್ಞಾತ್ವಾ ಪ್ರವಿವಿಕ್ತಜನೇ ಗೃಹೇ|

12217023c ಬಿಭ್ರತಂ ಗಾರ್ದಭಂ ರೂಪಮಾದಿಶ್ಯ ಪರಿಗರ್ಹಸೇ||

ಹೀಗಿರುವಾಗ ಕತ್ತೆಯ ರೂಪವನ್ನು ಪಡೆದುಕೊಂಡು ಈ ನಿರ್ಜನ ಗೃಹದಲ್ಲಿ ತವುಡನ್ನು ತಿಂದುಕೊಂಡು ಇರುವ ನನ್ನನ್ನು ನೋಡಿ ಹೀಗೆ ನಿಂದಿಸುತ್ತಿರುವೆಯಲ್ಲಾ!

12217024a ಇಚ್ಚನ್ನಹಂ ವಿಕುರ್ಯಾಂ ಹಿ ರೂಪಾಣಿ ಬಹುಧಾತ್ಮನಃ|

12217024c ವಿಭೀಷಣಾನಿ ಯಾನೀಕ್ಷ್ಯ ಪಲಾಯೇಥಾಸ್ತ್ವಮೇವ ಮೇ||

ಈಗಲೂ ಕೂಡ ನಾನು ಇಚ್ಛಿಸಿದರೆ ಅನೇಕ ರೂಪಗಳನ್ನು ಧರಿಸಬಲ್ಲೆನು. ನೀನು ನೋಡಿ ಪಲಾಯನಮಾಡುವಂಥಹ ವಿಭೀಷಣ ರೂಪವನ್ನೂ ತಾಳಬಲ್ಲೆನು.

12217025a ಕಾಲಃ ಸರ್ವಂ ಸಮಾದತ್ತೇ ಕಾಲಃ ಸರ್ವಂ ಪ್ರಯಚ್ಚತಿ|

12217025c ಕಾಲೇನ ವಿಧೃತಂ[6] ಸರ್ವಂ ಮಾ ಕೃಥಾಃ ಶಕ್ರ ಪೌರುಷಮ್||

ಶಕ್ರ! ಕಾಲವೇ ಎಲ್ಲವನ್ನೂ ಕಸಿದುಕೊಳ್ಳುತ್ತದೆ. ಕಾಲವೇ ಎಲ್ಲವನ್ನೂ ನೀಡುತ್ತದೆ. ಕಾಲವು ಎಲ್ಲವನ್ನೂ ಆವರಿಸಿದೆ. ನಿನ್ನ ಪೌರುಷವನ್ನು ಕೊಚ್ಚಿಕೊಳ್ಳಬೇಡ.

12217026a ಪುರಾ ಸರ್ವಂ ಪ್ರವ್ಯಥತೇ ಮಯಿ ಕ್ರುದ್ಧೇ ಪುರಂದರ|

12217026c ಅವೈಮಿ ತ್ವಸ್ಯ ಲೋಕಸ್ಯ ಧರ್ಮಂ ಶಕ್ರ ಸನಾತನಮ್||

ಪುರಂದರ! ಶಕ್ರ! ಹಿಂದೆ ನನ್ನ ಕ್ರೋಧಧಿಂದ ಎಲ್ಲರೂ ವ್ಯಥಿತರಾಗಿದ್ದರು[7]. ಈ ಲೋಕದ ವೃದ್ಧಿ-ಕ್ಷಯದ ಸನಾತನ ಧರ್ಮವನ್ನು ನಾನು ಚೆನ್ನಾಗಿ ತಿಳಿದುಕೊಂಡಿದ್ದೇನೆ.

12217027a ತ್ವಮಪ್ಯೇವಮಪೇಕ್ಷಸ್ವ ಮಾತ್ಮನಾ ವಿಸ್ಮಯಂ ಗಮಃ|

12217027c ಪ್ರಭವಶ್ಚ ಪ್ರಭಾವಶ್ಚ ನಾತ್ಮಸಂಸ್ಥಃ ಕದಾ ಚನ||

ನೀನೂ ಕೂಡ ಇದನ್ನು ತಿಳಿದುಕೋ. ನಿನಗೆ ನೀನು ವಿಸ್ಮಿತನಾಗಬೇಡ. ಉತ್ಪತ್ತಿಯಾಗಲೀ ಪ್ರಭುತ್ವವಾಗಲೀ ನಮ್ಮ ಅಧೀನದಲ್ಲಿಲ್ಲ.

12217028a ಕೌಮಾರಮೇವ ತೇ ಚಿತ್ತಂ ತಥೈವಾದ್ಯ ಯಥಾ ಪುರಾ|

12217028c ಸಮವೇಕ್ಷಸ್ವ ಮಘವನ್ಬುದ್ಧಿಂ ವಿಂದಸ್ವ ನೈಷ್ಠಿಕೀಮ್||

ನಿನ್ನ ಚಿತ್ತವು ಇನ್ನೂ ಬಾಲಕನ ಚಿತ್ತದಂತೆಯೇ ಇದೆ. ಹಿಂದೆ ಹೇಗಿದ್ದೆಯೋ ಈಗಲೂ ಹಾಗೆಯೇ ಇದ್ದೀಯೆ. ಮಘವನ್! ಇದನ್ನು ಸರಿಯಾಗಿ ಆಲೋಚಿಸು. ನೈಷ್ಠಿಕ ಬುದ್ಧಿಯನ್ನು ಹೊಂದು.

12217029a ದೇವಾ ಮನುಷ್ಯಾಃ ಪಿತರೋ ಗಂಧರ್ವೋರಗರಾಕ್ಷಸಾಃ|

12217029c ಆಸನ್ಸರ್ವೇ ಮಮ ವಶೇ ತತ್ಸರ್ವಂ ವೇತ್ಥ ವಾಸವ||

ವಾಸವ! ದೇವತೆಗಳು, ಮನುಷ್ಯರು, ಪಿತೃಗಳು, ಗಂಧರ್ವ-ಉರಗ-ರಾಕ್ಷಸರು ಎಲ್ಲರೂ ನನ್ನ ವಶದಲ್ಲಿದ್ದರು. ಇವೆಲ್ಲವನ್ನೂ ನೀನು ತಿಳಿದಿರುವೆ.

12217030a ನಮಸ್ತಸ್ಯೈ ದಿಶೇಽಪ್ಯಸ್ತು ಯಸ್ಯಾಂ ವೈರೋಚನೋ ಬಲಿಃ|

12217030c ಇತಿ ಮಾಮಭ್ಯಪದ್ಯಂತ ಬುದ್ಧಿಮಾತ್ಸರ್ಯಮೋಹಿತಾಃ||

ಬುದ್ಧಿ-ಮಾತ್ಸರ್ಯಮೋಹಿತರಾದ ಅವರು “ಯಾವ ದಿಕ್ಕಿನಲ್ಲಿ ವೈರೋಚನ ಬಲಿಯಿರುವನೋ ಆ ದಿಕ್ಕಿಗೆ ನಮಸ್ಕಾರ” ಎಂದು ಹೇಳಿಕೊಂಡು ನನ್ನ ಬಳಿ ಬರುತ್ತಿದ್ದರು.

12217031a ನಾಹಂ ತದನುಶೋಚಾಮಿ ನಾತ್ಮಭ್ರಂಶಂ ಶಚೀಪತೇ|

12217031c ಏವಂ ಮೇ ನಿಶ್ಚಿತಾ ಬುದ್ಧಿಃ ಶಾಸ್ತುಸ್ತಿಷ್ಠಾಮ್ಯಹಂ ವಶೇ||

ಶಚೀಪತೇ! ನನ್ನ ಈ ಪತನದ ಕುರಿತಾಗಿ ನನಗೆ ಸ್ವಲ್ಪವೂ ಶೋಕವಿಲ್ಲ. ಸದಾ ನಾನು ಶಾಸಕನ ವಶದಲ್ಲಿರುತ್ತೇನೆ ಎಂದು ನನ್ನ ಬುದ್ಧಿಯು ನಿಶ್ಚಯಿಸಿಬಿಟ್ಟಿದೆ.[8]

12217032a ದೃಶ್ಯತೇ ಹಿ ಕುಲೇ ಜಾತೋ ದರ್ಶನೀಯಃ ಪ್ರತಾಪವಾನ್|

12217032c ದುಃಖಂ ಜೀವನ್ಸಹಾಮಾತ್ಯೋ ಭವಿತವ್ಯಂ ಹಿ ತತ್ತಥಾ||

ಉತ್ತಮ ಕುಲದಲ್ಲಿ ಹುಟ್ಟಿದ ಸುಂದರ ಪ್ರತಾಪವಾನನೂ ಕೂಡ ಅಮಾತ್ಯರೊಂದಿಗೆ ದುಃಖದ ಜೀವನವನ್ನು ನಡೆಸುವುದು ಕಂಡುಬರುತ್ತದೆ. ಏಕೆಂದರೆ ಅವನ ಭವಿತವ್ಯವೇ ಹಾಗಿದೆ.

12217033a ದೌಷ್ಕುಲೇಯಸ್ತಥಾ ಮೂಢೋ ದುರ್ಜಾತಃ ಶಕ್ರ ದೃಶ್ಯತೇ|

12217033c ಸುಖಂ ಜೀವನ್ಸಹಾಮಾತ್ಯೋ ಭವಿತವ್ಯಂ ಹಿ ತತ್ತಥಾ||

ಶಕ್ರ! ಕೆಟ್ಟ ಕುಲದಲ್ಲಿ ಹುಟ್ಟಿದ ಮೂಢ ಹೀನಜಾತಿಯವನು ಅಮಾತ್ಯರೊಂದಿಗೆ ಸುಖದ ಜೀವನವನ್ನು ನಡೆಸುತ್ತಿರುವುದು ಕಂಡುಬರುತ್ತದೆ. ಏಕೆಂದರೆ ಅವನ ಭವಿತವ್ಯವೇ ಹಾಗಿರುತ್ತದೆ.

12217034a ಕಲ್ಯಾಣೀ ರೂಪಸಂಪನ್ನಾ ದುರ್ಭಗಾ ಶಕ್ರ ದೃಶ್ಯತೇ|

12217034c ಅಲಕ್ಷಣಾ ವಿರೂಪಾ ಚ ಸುಭಗಾ ಶಕ್ರ ದೃಶ್ಯತೇ||

ಶಕ್ರ! ರೂಪಸಂಪನ್ನೆ ಕಲ್ಯಾಣಿಯು ದೌರ್ಭಾಗ್ಯವತಿಯಾಗಿರುವುದು ಕಂಡುಬರುತ್ತದೆ. ಶಕ್ರ! ಲಕ್ಷಣವೇ ಇಲ್ಲದ ಕುರೂಪಿಯು ಸೌಭಾಗ್ಯವತಿಯಾಗಿರುವುದು ಕಂಡುಬರುತ್ತದೆ.

12217035a ನೈತದಸ್ಮತ್ಕೃತಂ ಶಕ್ರ ನೈತಚ್ಚಕ್ರ ತ್ವಯಾ ಕೃತಮ್|

12217035c ಯತ್ತ್ವಮೇವಂಗತೋ ವಜ್ರಿನ್ಯದ್ವಾಪ್ಯೇವಂಗತಾ ವಯಮ್||

ಶಕ್ರ! ವಜ್ರಿನ್! ಇಂದು ನಾವು ಯಾವ ಅವಸ್ಥೆಯನ್ನು ಪಡೆದುಕೊಂಡಿದ್ದೇವೋ ಅದರಲ್ಲಿ ನಾವು ಮಾಡಿದ್ದುದೇನೂ ಇಲ್ಲ. ನೀನೂ ಕೂಡ ಈ ವಿಷಯದಲ್ಲಿ ಏನನ್ನೂ ಮಾಡಿಲ್ಲ.

12217036a ನ ಕರ್ಮ ತವ ನಾನ್ಯೇಷಾಂ ಕುತೋ ಮಮ ಶತಕ್ರತೋ[9]|

12217036c ಋದ್ಧಿರ್ವಾಪ್ಯಥ ವಾ ನರ್ದ್ಧಿಃ ಪರ್ಯಾಯಕೃತಮೇವ ತತ್||

ಶತಕ್ರತೋ! ನನ್ನ ವೃದ್ಧಿ ಅಥವಾ ಕ್ಷೀಣ ಪರಿಸ್ಥಿತಿಯುಂಟಾಗಲು ನೀನಾಗಲೀ ಅನ್ಯರಾಗಲೀ ಅಥವಾ ನಾನಾಗಲೀ ಮಾಡಿದ್ದೇನೂ ಇಲ್ಲ. ಇವು ಒಂದಾದ ಮೇಲೆ ಒಂದರಂತೆ ಬಂದು ಹೋಗುತ್ತಿರುತ್ತವೆ.[10]

12217037a ಪಶ್ಯಾಮಿ ತ್ವಾ ವಿರಾಜಂತಂ ದೇವರಾಜಮವಸ್ಥಿತಮ್|

12217037c ಶ್ರೀಮಂತಂ ದ್ಯುತಿಮಂತಂ ಚ ಗರ್ಜಂತಂ ಚ ಮಮೋಪರಿ||

ದೇವರಾಜನ ಪದವಿಯಲ್ಲಿ ಪ್ರತಿಷ್ಠಿತನಾಗಿರುವ ನೀನು ವಿರಾಜಿಸುವುದನ್ನು ನಾನು ನೋಡುತ್ತಿದ್ದೇನೆ. ಕಾಂತಿಯುಕ್ತನಾಗಿಯೂ ಶ್ರೀಮಂತನಾಗಿಯೂ ಇರುವ ನೀನು ನನ್ನ ಮೇಲೆ ಗರ್ಜಿಸುತ್ತಿದ್ದೀಯೆ.

12217038a ಏತಚ್ಚೈವಂ ನ ಚೇತ್ಕಾಲೋ ಮಾಮಾಕ್ರಮ್ಯ ಸ್ಥಿತೋ ಭವೇತ್|

12217038c ಪಾತಯೇಯಮಹಂ ತ್ವಾದ್ಯ ಸವಜ್ರಮಪಿ ಮುಷ್ಟಿನಾ||

ಆದರೆ ಈ ಕಾಲವು ನನ್ನನ್ನು ಆಕ್ರಮಣಿಸಿ ಅದುಮಿಟ್ಟಿರದೇ ಇದ್ದಿದ್ದರೆ ಇಂದು ವಜ್ರಧಾರಿಯಾದ ನಿನ್ನನ್ನೂ ನನ್ನ ಮುಷ್ಟಿಯಿಂದಲೇ ಹೊಡೆದು ಉರುಳಿಸುತ್ತಿದ್ದೆ!

12217039a ನ ತು ವಿಕ್ರಮಕಾಲೋಽಯಂ ಕ್ಷಮಾಕಾಲೋಽಯಮಾಗತಃ|

12217039c ಕಾಲಃ ಸ್ಥಾಪಯತೇ ಸರ್ವಂ ಕಾಲಃ ಪಚತಿ ವೈ ತಥಾ||

ಆದರೆ ಇದು ವಿಕ್ರಮವನ್ನು ತೋರಿಸುವ ಕಾಲವಲ್ಲ. ಕ್ಷಮೆಯ ಕಾಲವು ಬಂದೊದಗಿಬಿಟ್ಟಿದೆ. ಕಾಲವೇ ಎಲ್ಲರನ್ನೂ ಬೇರೆ ಬೇರೆ ಪರಿಸ್ಥಿತಿಗಳಲ್ಲಿ ಇರಿಸುತ್ತದೆ. ಹಾಗೆಯೇ ಕಾಲವೇ ಎಲ್ಲವನ್ನೂ ಬೇಯಿಸುತ್ತದೆ.

12217040a ಮಾಂ ಚೇದಭ್ಯಾಗತಃ ಕಾಲೋ ದಾನವೇಶ್ವರಮೂರ್ಜಿತಮ್[11]|

12217040c ಗರ್ಜಂತಂ ಪ್ರತಪಂತಂ ಚ ಕಮನ್ಯಂ ನಾಗಮಿಷ್ಯತಿ||

ಒಂದು ಕಾಲದಲ್ಲಿ ನಾನೂ ದಾನವೇಶ್ವರನಾಗಿ ಅಭಿಷಿಕ್ತನಾಗಿದ್ದೆ. ಗರ್ಜಿಸುತ್ತಿದ್ದೆ ಮತ್ತು ಪ್ರತಾಪವನ್ನು ತೋರಿಸುತ್ತಿದ್ದೆ. ಕಾಲವು ಬದಲಾಗಿರುವಾಗ ಈಗ ನಾನು ಅನ್ಯ ಯಾರ ಮೇಲೆ ಗರ್ಜಿಸಬಲ್ಲೆನು?

12217041a ದ್ವಾದಶಾನಾಂ ಹಿ ಭವತಾಮಾದಿತ್ಯಾನಾಂ ಮಹಾತ್ಮನಾಮ್|

12217041c ತೇಜಾಂಸ್ಯೇಕೇನ ಸರ್ವೇಷಾಂ ದೇವರಾಜ ಹೃತಾನಿ[12] ಮೇ||

ದೇವರಾಜ! ಮಹಾತ್ಮರಾದ ದ್ವಾದಶ ಆದಿತ್ಯರು ನಿಮ್ಮೆಲ್ಲರ ತೇಜಸ್ಸುಗಳನ್ನೂ ನಾನೊಬ್ಬನೇ ಅಪಹರಿಸಿದ್ದೆ.

12217042a ಅಹಮೇವೋದ್ವಹಾಮ್ಯಾಪೋ ವಿಸೃಜಾಮಿ ಚ ವಾಸವ|

12217042c ತಪಾಮಿ ಚೈವ ತ್ರೈಲೋಕ್ಯಂ ವಿದ್ಯೋತಾಮ್ಯಹಮೇವ ಚ||

ವಾಸವ! ನಾನೇ ನೀರನ್ನು ಮೇಲಕ್ಕೊಯ್ದು ಮಳೆಯಾಗಿ ಸುರಿಸುತ್ತಿದ್ದೆ. ನಾನೇ ತ್ರಿಲೋಕಗಳಿಗೂ ತಾಪವನ್ನಿತ್ತು ವಿದ್ಯುತ್ತಾಗಿ ಬೆಳಗಿಸುತ್ತಿದ್ದೆ.

12217043a ಸಂರಕ್ಷಾಮಿ ವಿಲುಂಪಾಮಿ ದದಾಮ್ಯಹಮಥಾದದೇ|

12217043c ಸಂಯಚ್ಚಾಮಿ ನಿಯಚ್ಚಾಮಿ ಲೋಕೇಷು ಪ್ರಭುರೀಶ್ವರಃ||

ಸಂರಕ್ಷಿಸುತ್ತಿದ್ದೆ. ಅಪಹರಿಸುತ್ತಿದ್ದೆ. ದಾನಮಾಡುತ್ತಿದ್ದೆ. ತೆಗೆದುಕೊಳ್ಳುತ್ತಿದ್ದೆ. ಲೋಕದಲ್ಲಿ ಪ್ರಭು ಈಶ್ವರನಾಗಿ ಶಾಸನಮಾಡುತ್ತಿದ್ದೆ. ನಿಯಂತ್ರಿಸುತ್ತಿದ್ದೆ.

12217044a ತದದ್ಯ ವಿನಿವೃತ್ತಂ ಮೇ ಪ್ರಭುತ್ವಮಮರಾಧಿಪ|

12217044c ಕಾಲಸೈನ್ಯಾವಗಾಢಸ್ಯ ಸರ್ವಂ ನ ಪ್ರತಿಭಾತಿ ಮೇ||

ಅಮರಾಧಿಪ! ಇಂದು ನಾನು ಆ ಪ್ರಭುತ್ವದಿಂದ ನಿವೃತ್ತನಾಗಿದ್ದೇನೆ. ಕಾಲದ ಸೇನೆಯಿಂದ ಆಕ್ರಮಣಿಸಲ್ಪಟ್ಟಿದ್ದೇನೆ. ಆದುದರಿಂದ ನನ್ನ ಸರ್ವವೂ ಕಾಂತಿಹೀನವಾಗಿಬಿಟ್ಟಿದೆ.

12217045a ನಾಹಂ ಕರ್ತಾ ನ ಚೈವ ತ್ವಂ ನಾನ್ಯಃ ಕರ್ತಾ ಶಚೀಪತೇ|

12217045c ಪರ್ಯಾಯೇಣ ಹಿ ಭುಜ್ಯಂತೇ ಲೋಕಾಃ ಶಕ್ರ ಯದೃಚ್ಚಯಾ||

ಶಚೀಪತೇ! ನಾನು ಕರ್ತನಲ್ಲ. ನೀನೂ ಕರ್ತನಲ್ಲ. ಬೇರೆ ಯಾರೂ ಕರ್ತರಲ್ಲ. ಶಕ್ರ! ಕಾಲನ ಇಚ್ಛೆಯಂತೆಯೇ ಲೋಕಗಳು ಪರ್ಯಾಯವಾಗಿ ಭೋಗಿಸುತ್ತವೆ.

12217046a ಮಾಸಾರ್ಧಮಾಸವೇಶ್ಮಾನಮಹೋರಾತ್ರಾಭಿಸಂವೃತಮ್|

12217046c ಋತುದ್ವಾರಂ ವರ್ಷಮುಖಮಾಹುರ್ವೇದವಿದೋ ಜನಾಃ||

ವೇದವಿದ ಜನರು ಮಾಸ-ಪಕ್ಷಗಳನ್ನು ಕಾಲನ ಶರೀರವೆಂದೂ, ಹಗಲು-ರಾತ್ರಿಗಳನ್ನು ಶರೀರವನ್ನು ಮುಚ್ಚಿರುವ ವಸ್ತ್ರವೆಂದೂ, ಋತುವನ್ನು ದ್ವಾರವೆಂದೂ, ವರ್ಷವನ್ನು ಮುಖವೆಂದೂ ಹೇಳುತ್ತಾರೆ.

12217047a ಆಹುಃ ಸರ್ವಮಿದಂ ಚಿಂತ್ಯಂ ಜನಾಃ ಕೇ ಚಿನ್ಮನೀಷಯಾ|

12217047c ಅಸ್ಯಾಃ ಪಂಚೈವ ಚಿಂತಾಯಾಃ ಪರ್ಯೇಷ್ಯಾಮಿ ಚ ಪಂಚಧಾ||

ಇನ್ನು ಕೆಲವರು ಮನೀಷಿಣರು ಎಲ್ಲವೂ ಕಾಲವೆಂದೇ ತಿಳಿಯಬೇಕೆಂದು ಹೇಳುತ್ತಾರೆ. ಈ ಐದು ಆವರಣಗಳು ಕಾಲನ ಐದು ಅಂಶಗಳು ಮಾತ್ರ.

12217048a ಗಂಭೀರಂ ಗಹನಂ ಬ್ರಹ್ಮ ಮಹತ್ತೋಯಾರ್ಣವಂ ಯಥಾ|

12217048c ಅನಾದಿನಿಧನಂ ಚಾಹುರಕ್ಷರಂ ಪರಮೇವ ಚ||

ಕಾಲರೂಪವಾದ ಆ ಬ್ರಹ್ಮವು ಅನಂತ ಜಲರಾಶಿಯಿಂದ ತುಂಬಿರುವ ಮಹಾಸಾಗರದಂತೆ ಗಂಭೀರವೂ ಆಳವೂ ಆಗಿದೆ. ಅದಕ್ಕೆ ಆದಿಯಾಗಲೀ ಅಂತವಾಗಲಿ ಇಲ್ಲ. ಇದನ್ನು ಅಕ್ಷರವೆಂದೂ ಪರಮವೆಂದೂ ಹೇಳುತ್ತಾರೆ.

12217049a ಸತ್ತ್ವೇಷು ಲಿಂಗಮಾವೇಶ್ಯ ನಲಿಂಗಮಪಿ ತತ್ಸ್ವಯಮ್|

12217049c ಮನ್ಯಂತೇ ಧ್ರುವಮೇವೈನಂ ಯೇ ನರಾಸ್ತತ್ತ್ವದರ್ಶಿನಃ||

ಶಾಶ್ವತನಾದ ಕಾಲನೇ, ತಾನು ನಿರಾಕಾರನಾಗಿದ್ದರೂ, ಜೀವವು ಲಿಂಗದೇಹವನ್ನು ಪ್ರವೇಶಿಸುವಂತೆ ಮಾಡುತ್ತಾನೆ ಎಂದು ತತ್ತ್ವದರ್ಶೀ ನರರು ಹೇಳುತ್ತಾರೆ.

12217050a ಭೂತಾನಾಂ ತು ವಿಪರ್ಯಾಸಂ ಮನ್ಯತೇ ಗತವಾನಿತಿ[13]|

12217050c ನ ಹ್ಯೇತಾವದ್ಭವೇದ್ಗಮ್ಯಂ ನ ಯಸ್ಮಾತ್ಪ್ರಕೃತೇಃ ಪರಃ||

ಅವನೇ ಭೂತಗಳ ಸಮೃದ್ಧಿ ಮತ್ತು ಅಸಮೃದ್ಧಿಗಳ ವಿಪರ್ಯಾಸವನ್ನು ಮಾಡುತ್ತಾನೆ. ಯಾರೂ ಇವನ ಮಹಾತ್ಮ್ಯೆಯನ್ನು ತಿಳಿಯಲಾರನು. ಕಾಲವನ್ನು ಯಾರೂ ಗೆಲ್ಲಲಾರರು.

12217051a ಗತಿಂ ಹಿ ಸರ್ವಭೂತಾನಾಮಗತ್ವಾ ಕ್ವ ಗಮಿಷ್ಯಸಿ|

12217051c ಯೋ ಧಾವತಾ ನ ಹಾತವ್ಯಸ್ತಿಷ್ಠನ್ನಪಿ ನ ಹೀಯತೇ|

12217051e ತಮಿಂದ್ರಿಯಾಣಿ ಸರ್ವಾಣಿ ನಾನುಪಶ್ಯಂತಿ ಪಂಚಧಾ||

ಸರ್ವಭೂತಗಳ ಗತಿಯಾಗಿರುವ ಕಾಲನನ್ನು ಅತಿಕ್ರಮಿಸಿ ನೀನು ಎಲ್ಲಿ ಹೋಗುತ್ತೀಯೆ? ಮನುಷ್ಯನು ಓಡಿ ಹೋದರೂ ಅವನನ್ನು ಬಿಟ್ಟು ಹೋಗಲಿಕ್ಕಾಗುವುದಿಲ್ಲ ಮತ್ತು ನಿಂತುಕೊಂಡರೂ ಅವನಿಂದ ಬಿಡಿಸಿಕೊಳ್ಳಲಿಕ್ಕಾಗುವುದಿಲ್ಲ. ಮಾಸ-ಪಕ್ಷ-ಋತು-ಆಯನ ಮತ್ತು ಸಂವತ್ಸರಗಳೆಂಬ ಐದು ಅಂಗಗಳನ್ನುಳ್ಳ ಅವನನ್ನು ನಾವು ಕಾಣಲಾರೆವು. 

12217052a ಆಹುಶ್ಚೈನಂ ಕೇ ಚಿದಗ್ನಿಂ ಕೇ ಚಿದಾಹುಃ ಪ್ರಜಾಪತಿಮ್|

12217052c ಋತುಮಾಸಾರ್ಧಮಾಸಾಂಶ್ಚ ದಿವಸಾಂಸ್ತು ಕ್ಷಣಾಂಸ್ತಥಾ||

12217053a ಪೂರ್ವಾಹ್ಣಮಪರಾಹ್ಣಂ ಚ ಮಧ್ಯಾಹ್ನಮಪಿ ಚಾಪರೇ|

12217053c ಮುಹೂರ್ತಮಪಿ ಚೈವಾಹುರೇಕಂ ಸಂತಮನೇಕಧಾ|

12217053e ತಂ ಕಾಲಮವಜಾನೀಹಿ ಯಸ್ಯ ಸರ್ವಮಿದಂ ವಶೇ||

ಕೆಲವರು ಇವನನ್ನು ಅಗ್ನಿಯೆಂದೂ ಕೆಲವರು ಪ್ರಜಾಪತಿಯೆಂದೂ ಹೇಳುತ್ತಾರೆ. ಇನ್ನು ಕೆಲವರು ಇವನನ್ನು ಋತು, ಮಾಸ, ಪಕ್ಷ, ದಿನ, ಕ್ಷಣ, ಪೂರ್ವಾಹ್ಣ, ಅಪರಾಹ್ಣ, ಮಧ್ಯಾಹ್ನ ಎಂದೂ ಕರೆಯುತ್ತಾರೆ. ಇವನನ್ನು ಮುಹೂರ್ತವೆಂದೂ ಕರೆಯುತ್ತಾರೆ. ಹೀಗೆ ಕಾಲವು ಒಂದೇ ಆಗಿದ್ದರೂ ಅದನ್ನು ಅನೇಕ ಪ್ರಕಾರವಾಗಿ ಜನರು ಕರೆಯುತ್ತಾರೆ. ಈ ಎಲ್ಲವೂ ಯಾರ ವಶದಲ್ಲಿಯೋ ಅದೇ ಕಾಲವೆಂದು ತಿಳಿ.

12217054a ಬಹೂನೀಂದ್ರಸಹಸ್ರಾಣಿ ಸಮತೀತಾನಿ ವಾಸವ|

12217054c ಬಲವೀರ್ಯೋಪಪನ್ನಾನಿ ಯಥೈವ ತ್ವಂ ಶಚೀಪತೇ||

ವಾಸವ! ಶಚೀಪತೇ! ನಿನ್ನಂತೆಯೇ ಬಲವೀರ್ಯಸಂಪನ್ನರಾಗಿದ್ದ ಸಹಸ್ರಾರು ಇಂದ್ರರು ಆಗಿ ಹೋಗಿದ್ದಾರೆ.

12217055a ತ್ವಾಮಪ್ಯತಿಬಲಂ ಶಕ್ರಂ ದೇವರಾಜಂ ಬಲೋತ್ಕಟಮ್|

12217055c ಪ್ರಾಪ್ತೇ ಕಾಲೇ ಮಹಾವೀರ್ಯಃ ಕಾಲಃ ಸಂಶಮಯಿಷ್ಯತಿ||

ಶಕ್ರ! ನಿನ್ನನ್ನು ನೀನು ಅತಿಬಲ ಬಲೋತ್ಕಟ ದೇವರಾಜನೆಂದು ಭಾವಿಸಿರುವೆ. ಆದರೆ ಕಾಲವು ಪ್ರಾಪ್ತವಾಗಲು ಕಾಲವು ಆ ಮಹಾವೀರ್ಯವನ್ನೂ ಶಾಂತಗೊಳಿಸಿಬಿಡುತ್ತದೆ.

12217056a ಯ ಇದಂ ಸರ್ವಮಾದತ್ತೇ ತಸ್ಮಾಚ್ಚಕ್ರ ಸ್ಥಿರೋ ಭವ|

12217056c ಮಯಾ ತ್ವಯಾ ಚ ಪೂರ್ವೈಶ್ಚ ನ ಸ ಶಕ್ಯೋಽತಿವರ್ತಿತುಮ್||

ಕಾಲವೇ ಎಲ್ಲವನ್ನೂ ತನ್ನ ವಶದಲ್ಲಿರಿಸಿಕೊಂಡಿದೆ. ಆದುದರಿಂದ ಶಕ್ರ! ಸ್ಥಿರನಾಗಿರು. ನನ್ನಿಂದಾಗಲೀ ನಿನ್ನಿಂದಾಗಲೀ ಕಾಲವನ್ನು ಅತಿಕ್ರಮಿಸಿ ನಡೆಯಲು ಸಾಧ್ಯವಿಲ್ಲ. ಹಿಂದಿನವರಿಂದಲೂ ಕಾಲವನ್ನು ಅತಿಕ್ರಮಿಸಲು ಸಾಧ್ಯವಾಗಿಲ್ಲ.

12217057a ಯಾಮೇತಾಂ ಪ್ರಾಪ್ಯ ಜಾನೀಷೇ ರಾಜಶ್ರಿಯಮನುತ್ತಮಾಮ್|

12217057c ಸ್ಥಿತಾ ಮಯೀತಿ ತನ್ಮಿಥ್ಯಾ ನೈಷಾ ಹ್ಯೇಕತ್ರ ತಿಷ್ಠತಿ||

ಈ ಅನುತ್ತಮ ರಾಜಶ್ರೀಯನ್ನು ಪಡೆದುಕೊಂಡು ಇದು ನನ್ನಲ್ಲಿಯೇ ಸದಾ ಸ್ಥಿರವಾಗಿರುತ್ತದೆ ಎಂದು ತಿಳಿದುಕೊಂಡಿರುವೆ. ಇದು ಸುಳ್ಳು. ಶ್ರೀಯು ಒಂದೇ ಕಡೆ ನಿಲ್ಲುವುದಿಲ್ಲ.

12217058a ಸ್ಥಿತಾ ಹೀಂದ್ರಸಹಸ್ರೇಷು ತ್ವದ್ವಿಶಿಷ್ಟತಮೇಷ್ವಿಯಮ್|

12217058c ಮಾಂ ಚ ಲೋಲಾ ಪರಿತ್ಯಜ್ಯ ತ್ವಾಮಗಾದ್ವಿಬುಧಾಧಿಪ||

ವಿಬುಧಾಧಿಪ! ಈ ರಾಜ್ಯಶ್ರೀಯು ನಿನಗಿಂತಲೂ ಶ್ರೇಷ್ಠರಾದ ಸಾವಿರಾರು ಇಂದ್ರರ ಬಳಿಯಿದ್ದಿತ್ತು. ಚಂಚಲಳಾದ ಅವಳು ನನ್ನನ್ನು ಬಿಟ್ಟು ನಿನ್ನನ್ನು ಸೇರಿರುವಳು.

12217059a ಮೈವಂ ಶಕ್ರ ಪುನಃ ಕಾರ್ಷೀಃ ಶಾಂತೋ ಭವಿತುಮರ್ಹಸಿ|

12217059c ತ್ವಾಮಪ್ಯೇವಂಗತಂ ತ್ಯಕ್ತ್ವಾ ಕ್ಷಿಪ್ರಮನ್ಯಂ ಗಮಿಷ್ಯತಿ||

ಶಕ್ರ! ಪುನಃ ನೀನು ಈ ರೀತಿ ಹೀನನಾಗಿ ವರ್ತಿಸಬೇಡ. ಶಾಂತಿಯಿಂದಿರುವುದು ನಿನಗೆ ಯೋಗ್ಯವಾಗಿದೆ. ಹೀನನಾಗಿ ವರ್ತಿಸಿದರೆ ಶ್ರೀಯು ನಿನ್ನನ್ನೂ ಬಿಟ್ಟು ಅನ್ಯರಲ್ಲಿಗೆ ಹೊರಟುಹೋಗುತ್ತಾಳೆ.””

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಬಲಿವಾಸವಸಂವಾದೇ ಸಪ್ತದಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಬಲಿವಾಸವಸಂವಾದ ಎನ್ನುವ ಇನ್ನೂರಾಹದಿನೇಳನೇ ಅಧ್ಯಾಯವು.

[1] ಕಾಲಪರ್ಯಾಯಧರ್ಮತಃ| (ಭಾರತ ದರ್ಶನ/ಗೀತಾ ಪ್ರೆಸ್).

[2] ಕಾಲನಿಯಮದಂತೆ ನನಗೆ ಕತ್ತೆಯ ದೇಹವು ಒದಗಿಬಂದಿದೆ. ಆ ನಿಯಮವನ್ನು ನಾನು ಗೌರವಿಸುತ್ತೇನೆ. ಆದುದರಿಂದ ನಾನು ಶೋಕಿಸುತ್ತಿಲ್ಲ. (ಭಾರತ ದರ್ಶನ)

[3] ಜಾತ್ಯೈವ (ಭಾರತ ದರ್ಶನ/ಗೀತಾ ಪ್ರೆಸ್).

[4] ಕರ್ತೃವಾದ ಕಾಲವೇ ಅದನ್ನೆಲ್ಲಾ ಮಾಡಿದೆ (ಭಾರತ ದರ್ಶನ). The actor who has done this es elsewhere. (Bibek Debroy)

[5] What is being burnt is soemething that has already been burnt. What is being slain is something that has already been slain. What is being destroyed is somethig that has been destroyed earlier. A man gets what is already been obtained for him. (Bibek Debroy)

[6] ವಿಹಿತಂ (ಭಾರತ ದರ್ಶನ/ಗೀತಾ ಪ್ರೆಸ್).

[7] ಹಿಂದೆ ನಾನೇನಾದರೂ ಕುಪಿತನಾದೆನೆಂದರೆ ಪ್ರಪಂಚವೇ ಬಹಳವಾಗಿ ವ್ಯಥೆಪಡುತ್ತಿತ್ತು (ಭಾರತ ದರ್ಶನ).

[8] ನಾನು ಯಾವಾಗಲೂ ಸರ್ವರಿಗೂ ನಿಯಾಮಕನಾದ ಕಾಲನ ಅಧೀನನಾಗಿಯೇ ಇರುತ್ತೇನೆ ಎನ್ನುವುದು ನನ್ನ ನಿಶ್ಚಿತ ಬುದ್ಧಿಯು. (ಭಾರತ ದರ್ಶನ)

[9] ನ ಕರ್ಮ ಭವಿತಾಪ್ಯೇತತ್ಕೃತಂ ಮಮ ಶತಕ್ರತೋ| (ಭಾರತ ದರ್ಶನ/ಗೀತಾ ಪ್ರೆಸ್).

[10] ಸಮೃದ್ಧಿಯೂ ಶಾಶ್ವತವಾಗಿರುವುದಿಲ್ಲ; ಅಸಮೃದ್ಧಿಯೂ ಶಾಶ್ವತವಾಗಿರುವುದಿಲ್ಲ. (ಭಾರತ ದರ್ಶನ)

[11] ದಾನವೇಶ್ವರಪೂಜಿತಮ್| (ಗೀತಾ ಪ್ರೆಸ್/ಭಾರತ ದರ್ಶನ).

[12] ಧೃತಾನಿ (ಗೀತಾ ಪ್ರೆಸ್/ಭಾರತ ದರ್ಶನ).

[13] ಕುರುತೇ ಭಗವಾನಿತಿ| (ಭಾರತ ದರ್ಶನ/ಗೀತಾ ಪ್ರೆಸ್).

Comments are closed.