Shanti Parva: Chapter 219

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೧೯

ಶಕ್ರ-ನಮುಚಿ ಸಂವಾದ

ಶ್ರೀಯಿಂದ ವಿಹೀನನಾಗಿದ್ದ ನಮುಚಿಯೊಂದಿಗೆ ಶಕ್ರನ ಸಂಭಾಷಣೆ (1-23).

12219001 ಭೀಷ್ಮ ಉವಾಚ|

12219001a ಅತ್ರೈವೋದಾಹರಂತೀಮಮಿತಿಹಾಸಂ ಪುರಾತನಮ್|

12219001c ಶತಕ್ರತೋಶ್ಚ ಸಂವಾದಂ ನಮುಚೇಶ್ಚ ಯುಧಿಷ್ಠಿರ||

ಭೀಷ್ಮನು ಹೇಳಿದನು: “ಯುಧಿಷ್ಠಿರ! ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಶತಕ್ರತು ಮತ್ತು ನಮುಚಿಯರ ಸಂವಾದವನ್ನು ಉದಾಹರಿಸುತ್ತಾರೆ.

12219002a ಶ್ರಿಯಾ ವಿಹೀನಮಾಸೀನಮಕ್ಷೋಭ್ಯಮಿವ ಸಾಗರಮ್|

12219002c ಭವಾಭವಜ್ಞಂ ಭೂತಾನಾಮಿತ್ಯುವಾಚ ಪುರಂದರಃ||

ಶ್ರೀಯಿಂದ ವಿಹೀನನಾಗಿದ್ದರೂ ಸಾಗರದಂತೆ ಕ್ಷೋಭೆಗೊಳ್ಳದೇ ಗಂಭೀರನಾಗಿದ್ದ, ಮತ್ತು ಭೂತಗಳ ಅಭ್ಯುದಯ-ಪರಾಭವಗಳನ್ನು ತಿಳಿದಿದ್ದ ನಮುಚಿಯನ್ನು ಪುರಂದರನು ಕೇಳಿದನು:

12219003a ಬದ್ಧಃ ಪಾಶೈಶ್ಚ್ಯುತಃ ಸ್ಥಾನಾದ್ದ್ವಿಷತಾಂ ವಶಮಾಗತಃ|

12219003c ಶ್ರಿಯಾ ವಿಹೀನೋ ನಮುಚೇ ಶೋಚಸ್ಯಾಹೋ ನ ಶೋಚಸಿ||

“ನಮುಚೇ! ಶ್ರೀಯಿಂದ ವಿಹೀನನಾಗಿ, ಪಾಶಗಳಿಂದ ಬಂಧಿತನಾಗಿ, ಉಚ್ಛಸ್ಥಾನದಿಂದ ಕೆಳಗುರುಳಿ ಶತ್ರುಗಳ ವಶನಾಗಿರುವ ನೀನು ಶೋಕಿಸುತ್ತಿರುವೆಯೋ ಅಥವಾ ಶೋಕಿಸುತ್ತಿಲ್ಲವೋ?”

12219004 ನಮುಚಿರುವಾಚ|

12219004a ಅನವಾಪ್ಯಂ ಚ ಶೋಕೇನ[1] ಶರೀರಂ ಚೋಪತಪ್ಯತೇ|

12219004c ಅಮಿತ್ರಾಶ್ಚ ಪ್ರಹೃಷ್ಯಂತಿ ನಾಸ್ತಿ ಶೋಕೇ ಸಹಾಯತಾ||

ನಮುಚಿಯು ಹೇಳಿದನು: “ಶೋಕವನ್ನು ತಡೆಯದೇ ಇದ್ದರೆ ಶರೀರವು ತಪಿಸುತ್ತದೆ ಮತ್ತು ಶತ್ರುಗಳು ಹರ್ಷಿತರಾಗುತ್ತಾರೆ. ವಿಪತ್ತು ಬಂದೊದಗಿದಾಗ ಶೋಕವು ಯಾವ ಸಹಾಯಕ್ಕೂ ಬರುವುದಿಲ್ಲ.

12219005a ತಸ್ಮಾಚ್ಚಕ್ರ ನ ಶೋಚಾಮಿ ಸರ್ವಂ ಹ್ಯೇವೇದಮಂತವತ್|

12219005c ಸಂತಾಪಾದ್ ಭ್ರಶ್ಯತೇ ರೂಪಂ ಧರ್ಮಶ್ಚೈವ ಸುರೇಶ್ವರ[2]||[3]

ಶಕ್ರ! ಸುರೇಶ್ವರ! ಆದುದರಿಂದ ನಾನು ಶೋಕಿಸುತ್ತಿಲ್ಲ. ಏಕೆಂದರೆ ಸರ್ವವೂ ಅಂತ್ಯವುಳ್ಳವುಗಳು. ಸಂತಾಪದಿಂದ ರೂಪ ಮತ್ತು ಧರ್ಮವೂ ನಾಶವಾಗುತ್ತದೆ.

12219006a ವಿನೀಯ ಖಲು ತದ್ದುಃಖಮಾಗತಂ ವೈಮನಸ್ಯಜಮ್|

12219006c ಧ್ಯಾತವ್ಯಂ ಮನಸಾ ಹೃದ್ಯಂ ಕಲ್ಯಾಣಂ ಸಂವಿಜಾನತಾ||

ಇದನ್ನು ತಿಳಿದಿರುವವನು ವೈಮನಸ್ಯದ ಕಾರಣದಿಂದ ಪ್ರಾಪ್ತವಾದ ದುಃಖವನ್ನು ದೂರೀಕರಿಸಿ ಹೃದಯಸ್ಥನಾಗಿರುವ ಕಲ್ಯಾಣಮಯ ಪರಮಾತ್ಮನನ್ನು ಮನಸ್ಸಿನಲ್ಲಿಯೇ ಧ್ಯಾನಿಸಬೇಕು.

12219007a ಯಥಾ ಯಥಾ[4] ಹಿ ಪುರುಷಃ ಕಲ್ಯಾಣೇ ಕುರುತೇ ಮನಃ|

12219007c ತದೈವಾಸ್ಯ ಪ್ರಸೀದಂತಿ[5] ಸರ್ವಾರ್ಥಾ ನಾತ್ರ ಸಂಶಯಃ||

ಪುರುಷನು ಹೇಗೆ ಹೇಗೆ ಮನಸ್ಸಿನಲ್ಲಿ ಕಲ್ಯಾಣಸ್ವರೂಪ ಪರಮಾತ್ಮನ ಚಿಂತನೆಯನ್ನು ಮಾಡುತ್ತಾನೋ ಹಾಗೆಯೇ ಅವನ ಸರ್ವ ಮನೋರಥಗಳೂ ಪ್ರಸೀದಗೊಳ್ಳುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ.

12219008a ಏಕಃ ಶಾಸ್ತಾ ನ ದ್ವಿತೀಯೋಽಸ್ತಿ ಶಾಸ್ತಾ

ಗರ್ಭೇ ಶಯಾನಂ ಪುರುಷಂ ಶಾಸ್ತಿ ಶಾಸ್ತಾ|

12219008c ತೇನಾನುಶಿಷ್ಟಃ ಪ್ರವಣಾದಿವೋದಕಂ

ಯಥಾ ನಿಯುಕ್ತೋಽಸ್ಮಿ ತಥಾ ವಹಾಮಿ||

ಶಾಸಕನು ಒಬ್ಬನೇ ಇದ್ದಾನೆ. ಇನ್ನೊಬ್ಬನಿಲ್ಲ. ಆ ಶಾಸಕನೇ ಗರ್ಭದಲ್ಲಿ ಮಲಗಿರುವ ಪುರುಷನಿಗೂ ಶಾಸಕನು. ನೀರು ಹೇಗೆ ಇಳಿಜಾರು ಪ್ರದೇಶದ ಕಡೆಗೇ ಹರಿದು ಹೋಗುತ್ತದೆಯೋ ಹಾಗೆ ಶಾಸಕನು ನಿಯುಕ್ತಿಗೊಳಿಸಿದ ಹಾಗೆಯೇ ನಾನು ನಡೆಯುತ್ತೇನೆ.

12219009a ಭಾವಾಭಾವಾವಭಿಜಾನನ್ಗರೀಯೋ

ಜಾನಾಮಿ ಶ್ರೇಯೋ[6] ನ ತು ತತ್ಕರೋಮಿ|

12219009c ಆಶಾಃ ಸುಶರ್ಮ್ಯಾಃ ಸುಹೃದಾಂ ಸುಕುರ್ವನ್[7]

ಯಥಾ ನಿಯುಕ್ತೋಽಸ್ಮಿ ತಥಾ ವಹಾಮಿ||

ಪ್ರಾಣಿಗಳ ಅಭ್ಯುದಯ-ಪರಾಭವಗಳನ್ನು ಮತ್ತು ಗರೀಯಸವಾದುದನ್ನು ತಿಳಿದುಕೊಂಡಿದ್ದೇನೆ. ಶ್ರೇಯಸ್ಸಾದುದು ಯಾವುದು ಎಂದೂ ತಿಳಿದಿದ್ದೇನೆ. ಆದರೂ ಅದರಂತೆ ನಾನು ಮಾಡುತ್ತಿಲ್ಲ. ಆಶಯಗಳು, ಧರ್ಮ ಮತ್ತು ಸುಹೃದಯರಲ್ಲಿ ಮುಳುಗಿ ನಾನು ಪುಣ್ಯ-ಪಾಪಕರ್ಮಗಳನ್ನೆಸಗುತ್ತೇನೆ. ನಿಯುಕ್ತಗೊಂಡಂತೆ ನಡೆಯುತ್ತೇನೆ.

12219010a ಯಥಾ ಯಥಾಸ್ಯ ಪ್ರಾಪ್ತವ್ಯಂ ಪ್ರಾಪ್ನೋತ್ಯೇವ ತಥಾ ತಥಾ|

12219010c ಭವಿತವ್ಯಂ ಯಥಾ ಯಚ್ಚ ಭವತ್ಯೇವ ತಥಾ ತಥಾ||

ಯಾವುದು ಯಾವರೀತಿಯಲ್ಲಿ ಪ್ರಾಪ್ತವಾಗಬೇಕೋ ಅದು ಆಯಾ ರೀತಿಯಲ್ಲಿಯೇ ಪ್ರಾಪ್ತವಾಗುತ್ತದೆ. ಹೇಗೆ ನಡೆಯಬೇಕೋ ಅದು ಹಾಗೆಯೇ ನಡೆಯುತ್ತದೆ.

12219011a ಯತ್ರ ಯತ್ರೈವ ಸಂಯುಂಕ್ತೇ ಧಾತಾ[8] ಗರ್ಭಂ ಪುನಃ ಪುನಃ|

12219011c ತತ್ರ ತತ್ರೈವ ವಸತಿ ನ ಯತ್ರ ಸ್ವಯಮಿಚ್ಚತಿ||

ವಿಧಾತನು ಯಾವ ಯಾವ ಗರ್ಭದಲ್ಲಿ ಪುನಃ ಪುನಃ ಜೋಡಿಸುತ್ತಾನೋ ಜೀವನು ಆಯಾಯಾ ಗರ್ಭಗಳಲ್ಲಿಯೇ ವಾಸಿಸುತ್ತಾನೆ. ಅದರಲ್ಲಿ ಸ್ವ-ಇಚ್ಛೆಯೆನ್ನುವುದು ಇಲ್ಲ.

12219012a ಭಾವೋ ಯೋಽಯಮನುಪ್ರಾಪ್ತೋ ಭವಿತವ್ಯಮಿದಂ ಮಮ|

12219012c ಇತಿ ಯಸ್ಯ ಸದಾ ಭಾವೋ ನ ಸ ಮುಹ್ಯೇತ್ಕದಾ ಚನ||

“ನನಗೇನು ಅವಸ್ಥೆಯು ಬಂದೊದಗಿದೆಯೋ ಅದು ಆಗಬೇಕಾಗಿದ್ದುದೇ” ಎಂದು ಸದಾ ಭಾವಿಸುವವನು ಎಂದೂ ಮೋಹಗೊಳ್ಳುವುದಿಲ್ಲ.

12219013a ಪರ್ಯಾಯೈರ್ಹನ್ಯಮಾನಾನಾಮಭಿಯೋಕ್ತಾ ನ ವಿದ್ಯತೇ|

12219013c ದುಃಖಮೇತತ್ತು ಯದ್ದ್ವೇಷ್ಟಾ ಕರ್ತಾಹಮಿತಿ ಮನ್ಯತೇ||

ಮಾನ-ಅಪಮಾನಗಳು ಒಂದಾದ ಮೇಲೆ ಒಂದರಂತೆ ಬರುತ್ತಿರುತ್ತವೆ. ಇವೆರಡಕ್ಕೂ ತಾನೇ ಕರ್ತನೆಂದು ಭಾವಿಸುವವನಿಗೆ ದುಃಖವುಂಟಾಗುತ್ತದೆ[9].

12219014a ಋಷೀಂಶ್ಚ ದೇವಾಂಶ್ಚ ಮಹಾಸುರಾಂಶ್ಚ

ತ್ರೈವಿದ್ಯವೃದ್ಧಾಂಶ್ಚ ವನೇ ಮುನೀಂಶ್ಚ|

12219014c ಕಾನ್ನಾಪದೋ ನೋಪನಮಂತಿ ಲೋಕೇ

ಪರಾವರಜ್ಞಾಸ್ತು ನ ಸಂಭ್ರಮಂತಿ||

ಋಷಿಗಳು, ದೇವತೆಗಳು, ಮಹಾಸುರರು, ಮೂರು ವೇದಗಳನ್ನು ತಿಳಿದಿರುವ ವೃದ್ಧರು, ವನದಲ್ಲಿರುವ ಮುನೀಂದ್ರರು – ಲೋಕದ ಇವರಲ್ಲಿ ಯಾರನ್ನು ತಾನೇ ಆಪತ್ತು ಆಕ್ರಮಣಿಸುವುದಿಲ್ಲ? ಆದರೆ ಪರಾವರಜ್ಞರು ಆಪತ್ತುಗಳಿಂದ ಭ್ರಾಂತರಾಗುವುದಿಲ್ಲ.

12219015a ನ ಪಂಡಿತಃ ಕ್ರುಧ್ಯತಿ ನಾಪಿ ಸಜ್ಜತೇ[10]

ನ ಚಾಪಿ ಸಂಸೀದತಿ ನ ಪ್ರಹೃಷ್ಯತಿ|

12219015c ನ ಚಾರ್ಥಕೃಚ್ಚ್ರವ್ಯಸನೇಷು ಶೋಚತಿ

ಸ್ಥಿತಃ ಪ್ರಕೃತ್ಯಾ ಹಿಮವಾನಿವಾಚಲಃ||

ಪಂಡಿತನು ಕೃದ್ಧನಾಗುವುದಿಲ್ಲ. ಸಜ್ಜಾಗುವುದೂ ಇಲ್ಲ. ಕುಗ್ಗುವುದಿಲ್ಲ ಮತ್ತು ಹಿಗ್ಗುವುದಿಲ್ಲ. ಆರ್ಥಿಕ ಕಷ್ಟಗಳಲ್ಲಿಯೂ ವ್ಯಸನಗಳಲಿಯೂ ಶೋಕಿಸುವುದಿಲ್ಲ. ಹಿಮಾಲಯದಂತೆ ಸ್ಥಿರಸ್ವಭಾವದವನಾಗಿರುತ್ತಾನೆ.

12219016a ಯಮರ್ಥಸಿದ್ಧಿಃ ಪರಮಾ ನ ಹರ್ಷಯೇತ್[11]

ತಥೈವ ಕಾಲೇ ವ್ಯಸನಂ ನ ಮೋಹಯೇತ್|

12219016c ಸುಖಂ ಚ ದುಃಖಂ ಚ ತಥೈವ ಮಧ್ಯಮಂ

ನಿಷೇವತೇ ಯಃ ಸ ಧುರಂಧರೋ ನರ||

ಪರಮ ಅರ್ಥಸಿದ್ಧಿಯನ್ನು ಹೊಂದಿದಾಗ ಹರ್ಷಿಸದ, ಹಾಗೆಯೇ ವ್ಯಸನದ ಕಾಲದಲ್ಲಿ ಮೋಹಗೊಳ್ಳದ, ಸುಖ-ದುಃಖ ಮತ್ತು ಅವುಗಳ ಮಧ್ಯದ ಅವಸ್ಥೆಗಳನ್ನು ಸಮಾನಭಾವದಿಂದ ಅನುಭವಿಸುವ ನರನು ಧುರಂಧರನು.

12219017a ಯಾಂ ಯಾಮವಸ್ಥಾಂ ಪುರುಷೋಽಧಿಗಚ್ಚೇತ್

ತಸ್ಯಾಂ ರಮೇತಾಪರಿತಪ್ಯಮಾನಃ|

12219017c ಏವಂ ಪ್ರವೃದ್ಧಂ ಪ್ರಣುದೇನ್ಮನೋಜಂ

ಸಂತಾಪಮಾಯಾಸಕರಂ ಶರೀರಾತ್[12]||

ಪುರುಷನು ಯಾವ ಯಾವ ಅವಸ್ಥೆಗಳನ್ನು ಪಡೆಯುತ್ತಾನೋ ಆಯಾ ಅವಸ್ಥೆಗಳಲ್ಲಿ ಪರಿತಪಿಸದೇ, ಸಂತಾಪವನ್ನುಂಟುಮಾಡುವ ಮನಸ್ಸಿನಲ್ಲಿಯೇ ವೃದ್ಧಿಸುವ ಆಯಾಸಕರ ಕಾಮನೆಗಳನ್ನು ಶರೀರದಿಂದ ಹೊರಹಾಕಬೇಕು.

12219018a ತತ್ಸದಃ ಸ ಪರಿಷತ್ಸಭಾಸದಃ

ಪ್ರಾಪ್ಯ ಯೋ ನ ಕುರುತೇ ಸಭಾಭಯಮ್|

12219018c ಧರ್ಮತತ್ತ್ವಮವಗಾಹ್ಯ ಬುದ್ಧಿಮಾನ್

ಯೋಽಭ್ಯುಪೈತಿ ಸ ಪುಮಾನ್ ಧುರಂಧರಃ||

ಯಾವ ಸಭೆಯಲ್ಲಿ ಮನುಷ್ಯನು ಭಯಪಟ್ಟುಕೊಳ್ಳುವುದಿಲ್ಲವೋ ಅದು ಸದಸ್ಸಲ್ಲ. ಒಳ್ಳೆಯ ಪರಿಷತ್ತಲ್ಲ. ಸಭೆಯೂ ಅಲ್ಲ. ಸಭೆಯು ತೀರ್ಮಾನಿಸಿದ ಧರ್ಮತತ್ತ್ವದಲ್ಲಿ ಮುಳುಗಿ ಅದನ್ನು ಅನುಸರಿಸುವ ಪುರುಷನೇ ಧುರಂಧರನು.

12219019a ಪ್ರಾಜ್ಞಸ್ಯ ಕರ್ಮಾಣಿ ದುರನ್ವಯಾನಿ

ನ ವೈ ಪ್ರಾಜ್ಞೋ ಮುಹ್ಯತಿ ಮೋಹಕಾಲೇ|

12219019c ಸ್ಥಾನಾಚ್ಚ್ಯುತಶ್ಚೇನ್ನ ಮುಮೋಹ ಗೌತಮಸ್

ತಾವತ್ ಕೃಚ್ಚ್ರಾಮಾಪದಂ ಪ್ರಾಪ್ಯ ವೃದ್ಧಃ||

ಪ್ರಾಜ್ಞನ ಕರ್ಮಗಳನ್ನು ಅನುಸರಿಸುವುದು ಕಷ್ಟ. ಏಕೆಂದರೆ ಪ್ರಾಜ್ಞನು ಮೋಹಕಾಲದಲ್ಲಿ ಮೋಹಿತನಾಗುವುದಿಲ್ಲ. ವೃದ್ಧ ಗೌತಮನು ತನ್ನ ಸ್ಥಾನದಿಂದ ಚ್ಯುತನಾಗಿ ಅತ್ಯಂತ ಕಷ್ಟಕರ ಆಪತ್ತುಗಳನ್ನು ಪಡೆದ ಮೋಹಿತನಾಗಲಿಲ್ಲ.

12219020a ನ ಮಂತ್ರಬಲವೀರ್ಯೇಣ ಪ್ರಜ್ಞಯಾ ಪೌರುಷೇಣ ವಾ|

[13]12219020c ಅಲಭ್ಯಂ ಲಭತೇ ಮರ್ತ್ಯಸ್ತತ್ರ ಕಾ ಪರಿದೇವನಾ||

ಮನುಷ್ಯನಿಗೆ ದೊರೆಯಬಾರದೆಂದಿರುವಂಥಹುದನ್ನು ಮಂತ್ರದಿಂದಾಗಲೀ, ಬಲ-ವೀರ್ಯಗಳಿಂದಾಗಲೀ, ಪ್ರಜ್ಞೆ-ಪೌರುಷಗಳಿಂದಾಗಲೀ ಪಡೆಯಲಿಕ್ಕಾಗುವುದಿಲ್ಲ. ಅದರಲ್ಲಿ ಶೋಕಪಡಬೇಕಾದುದು ಏನಿದೆ?

12219021a ಯದೇವಮನುಜಾತಸ್ಯ ಧಾತಾರೋ ವಿದಧುಃ ಪುರಾ|

12219021c ತದೇವಾನುಭವಿಷ್ಯಾಮಿ ಕಿಂ ಮೇ ಮೃತ್ಯುಃ ಕರಿಷ್ಯತಿ||

ಕರ್ಮಾನುಗುಣವಾಗಿ ಹುಟ್ಟಿರುವ ನಾನು ಹಿಂದೆ ಧಾತಾರನು ವಿಹಿಸಿದುದನ್ನೇ ಅನುಭವಿಸುತ್ತಿದ್ದೇನೆ. ಅದರಲ್ಲಿ ಮೃತ್ಯುವು ಏನು ಮಾಡೀತು?

12219022a ಲಬ್ಧವ್ಯಾನ್ಯೇವ ಲಭತೇ ಗಂತವ್ಯಾನ್ಯೇವ ಗಚ್ಚತಿ|

12219022c ಪ್ರಾಪ್ತವ್ಯಾನ್ಯೇವ ಪ್ರಾಪ್ನೋತಿ ದುಃಖಾನಿ ಚ ಸುಖಾನಿ ಚ||

ಮನುಷ್ಯನು ಯಾವುದನ್ನು ಪಡೆದುಕೊಳ್ಳಬೇಕೋ ಅದನ್ನೇ ಪಡೆದುಕೊಳ್ಳುತ್ತಾನೆ. ಎಲ್ಲಿಗೆ ಹೋಗಬೇಕೋ ಅಲ್ಲಿಗೇ ಹೋಗುತ್ತಾನೆ. ದುಃಖವನ್ನು ಪಡೆಯಬೇಕೆಂದಿದ್ದರೆ ದುಃಖವನ್ನೇ ಪಡೆಯುತ್ತಾನೆ. ಸುಖವನ್ನು ಪಡೆಯಬೇಕೆಂದಿದ್ದರೆ ಸುಖವನ್ನೇ ಪಡೆಯುತ್ತಾನೆ.

12219023a ಏತದ್ವಿದಿತ್ವಾ ಕಾರ್ತ್ಸ್ನ್ಯೇನ ಯೋ ನ ಮುಹ್ಯತಿ ಮಾನವಃ|

12219023c ಕುಶಲಃ ಸುಖದುಃಖೇಷು ಸ ವೈ ಸರ್ವಧನೇಶ್ವರಃ||

ಇದನ್ನು ಸಂಪೂರ್ಣವಾಗಿ ತಿಳಿದು ಸುಖ-ದುಃಖಗಳಲ್ಲಿ ಕುಶಲನಾಗಿ ಮೋಹಗೊಳ್ಳದ ಮಾನವನು ಸರ್ವಧನೇಶ್ವರನಾಗುತ್ತಾನೆ.””

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶಕ್ರನಮುಚಿಸಂವಾದೋ ನಾಮ ಏಕೋನವಿಂಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶಕ್ರನಮುಚಿಸಂವಾದ ಎನ್ನುವ ಇನ್ನೂರಾಹತ್ತೊಂಭತ್ತನೇ ಅಧ್ಯಾಯವು.

[1] ಅನಿವಾರ್ಯೇಣ ಶೋಕೇನ (ಗೀತಾ ಪ್ರೆಸ್/ಭಾರತ ದರ್ಶನ).

[2] ಸಂತಾಪಾದ್ ಭ್ರಶ್ಯತೇ ಶ್ರಿಯಃ| (ಗೀತಾ ಪ್ರೆಸ್/ಭಾರತ ದರ್ಶನ).

[3] ಇದರ ನಂತರ ಈ ಒಂದು ಅಧಿಕ ಶ್ಲೋಕಾರ್ಧವಿದೆ: ಸಂತಾಪಾದ್ ಭ್ರಶ್ಯತೇ ಚಾರುರ್ಧರ್ಮಶ್ಚೈವ ಸುರೇಶ್ವರ| (ಗೀತಾ ಪ್ರೆಸ್/ಭಾರತ ದರ್ಶನ).

[4] ಯದಾ ಯದಾ (ಗೀತಾ ಪ್ರೆಸ್/ಭಾರತ ದರ್ಶನ).

[5] ತದಾ ತಸ್ಯ ಪ್ರಸಿಧ್ಯಂತಿ (ಗೀತಾ ಪ್ರೆಸ್/ಭಾರತ ದರ್ಶನ).

[6] ಜ್ಞಾನಾಚ್ಛ್ರೇಯೋ (ಗೀತಾ ಪ್ರೆಸ್/ಭಾರತ ದರ್ಶನ).

[7] ಆಶಾಸು ಧರ್ಮ್ಯಾಸು ಪರಾಸು ಕುರ್ವನ್ (ಗೀತಾ ಪ್ರೆಸ್/ಭಾರತ ದರ್ಶನ).

[8] ಧಾತ್ರಾ (ಭಾರತ ದರ್ಶನ/ಗೀತಾ ಪ್ರೆಸ್).

[9] ಪರ್ಯಾಯವಾಗಿ ಬರುವ ಕಷ್ಟಗಳಿಂದ ಪೀಡಿತರಾದವರಲ್ಲಿ ಆ ಕಷ್ಟಗಳು ಬರದಂತೆ ಯಾರೂ ಪ್ರತಿಭಟಿಸಲಾರರು. ಸ್ವಭಾವತಃ ಸುಖದ ಅನಂತರ ಕಷ್ಟವೂ, ಕಷ್ಟದ ನಂತರ ಸುಖವೂ ಪರ್ಯಾಯವಾಗಿ ಬರುತ್ತಲೇ ಇರುತ್ತವೆ. ದುಃಖವನ್ನು ಯಾರು ದ್ವೇಷಿಸುವನೋ ಅವನು ಕಷ್ಟವು ಒದಗಿದಾಗ ಆ ಕಷ್ಟಕ್ಕೆ ತಾನೇ ಕರ್ತೃವೆಂದು ಭಾವಿಸುತ್ತಾನೆ. ಕರ್ತೃತ್ವಾಭಿಮಾನವೇ ದುಃಖಕ್ಕೆ ಕಾರಣವಾಗುತ್ತದೆ. (ಭಾರತ ದರ್ಶನ). ಕಾಲಕ್ರಮಮಾಗಿ ಪ್ರಾಪ್ತವಾಗುವ ಸುಖ-ದುಃಖಗಳ ಆಹತಕ್ಕೊಳಗಾಗುವ ಜನರ ದುಃಖಕ್ಕೆ ಬೇರೆ ಯಾರೂ ದೋಷೀ ಅಥವಾ ಅಪರಾಧಿಯಲ್ಲ. ಪುರುಷನು ವರ್ತಮಾನ ದುಃಖವನ್ನು ದ್ವೇಷಿಸಿ ತನ್ನನ್ನೇ ಅದರ ಕರ್ತೃವೆಂದು ಭಾವಿಸುವುದೇ ದುಃಖಕ್ಕೆ ಕಾರಣವು (ಗೀತಾ ಪ್ರೆಸ್).

[10] ನಾಭಿಪದ್ಯತೇ (ಭಾರತ ದರ್ಶನ/ಗೀತಾ ಪ್ರೆಸ್).

[11] ಮೋಹಯೇತ್ (ಭಾರತ ದರ್ಶನ/ಗೀತಾ ಪ್ರೆಸ್).

[12] ಸಂತಾಪನೀಯಂ ಸಕಲಂ ಶರೀರಾತ್ (ಭಾರತ ದರ್ಶನ/ಗೀತಾ ಪ್ರೆಸ್).

[13] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ನ ಶೀಲೇನ ನ ವೃತ್ತೇನ ತಥಾ ನೈವಾರ್ಥಸಂಪದಾ| (ಭಾರತ ದರ್ಶನ/ಗೀತಾ ಪ್ರೆಸ್).

Comments are closed.