Shanti Parva: Chapter 200

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೦೦

ಕೇಶವ ಮಹಾತ್ಮೆ

ಕೇಶವನಿಂದಲೇ ಆಗಿರುವ ಸಂಪೂರ್ಣ ಸೃಷ್ಟಿಯ ವರ್ಣನೆ ಮತ್ತು ಕೃಷ್ಣನ ಮಹಿಮೆ (೧-೪೩).

12200001 ಯುಧಿಷ್ಠಿರ ಉವಾಚ|

12200001a ಪಿತಾಮಹ ಮಹಾಪ್ರಾಜ್ಞ ಪುಂಡರೀಕಾಕ್ಷಮಚ್ಯುತಮ್|

12200001c ಕರ್ತಾರಮಕೃತಂ ವಿಷ್ಣುಂ ಭೂತಾನಾಂ ಪ್ರಭವಾಪ್ಯಯಮ್||

12200002a ನಾರಾಯಣಂ ಹೃಷೀಕೇಶಂ ಗೋವಿಂದಮಪರಾಜಿತಮ್|

12200002c ತತ್ತ್ವೇನ ಭರತಶ್ರೇಷ್ಠ ಶ್ರೋತುಮಿಚ್ಚಾಮಿ ಕೇಶವಮ್||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಹಾಪ್ರಾಜ್ಞ! ಕಮಲದಂತೆ ಕಣ್ಣುಗಳುಳ್ಳ, ತನ್ನ ಸ್ಥಾನದಿಂದ ಯಾವಾಗಲೂ ಚ್ಯುತನಾಗದ, ಎಲ್ಲವನ್ನು ಮಾಡಿಯೂ ಏನೂ ಮಾಡದಂತೆ ಇರುವ, ಸರ್ವತ್ರ ವ್ಯಾಪಕನಾದ, ಇರುವ ಎಲ್ಲವುಗಳ ಉತ್ಪತ್ತಿ-ಲಯಗಳಿಗೆ ಕಾರಣನಾದ, ನರರಿಗೆ ಏಕಮಾತ್ರ ಗತಿಯಾಗಿರುವ, ಜ್ಞಾನೇಂದ್ರಿಯಗಳಿಗೆ ಸ್ವಾಮಿಯಾದ, ಇಂದ್ರನಿಂದ ಗೋವಿಂದನೆಂಬ ಹೆಸರನ್ನು ಪಡೆದಿರುವ, ಸೋಲೆನ್ನುವುದನ್ನೇ ಕಾಣದ, ಕೇಶವನ ನಿಜಸ್ವರೂಪನನ್ನು ಯಥಾರ್ಥವಾಗಿ ಕೇಳಬಯಸುತ್ತೇನೆ.”

12200003 ಭೀಷ್ಮ ಉವಾಚ|

12200003a ಶ್ರುತೋಽಯಮರ್ಥೋ ರಾಮಸ್ಯ ಜಾಮದಗ್ನ್ಯಸ್ಯ ಜಲ್ಪತಃ|

12200003c ನಾರದಸ್ಯ ಚ ದೇವರ್ಷೇಃ ಕೃಷ್ಣದ್ವೈಪಾಯನಸ್ಯ ಚ||

12200004a ಅಸಿತೋ ದೇವಲಸ್ತಾತ ವಾಲ್ಮೀಕಿಶ್ಚ ಮಹಾತಪಾಃ|

12200004c ಮಾರ್ಕಂಡೇಯಶ್ಚ ಗೋವಿಂದೇ ಕಥಯತ್ಯದ್ಭುತಂ ಮಹತ್||

ಭೀಷ್ಮನು ಹೇಳಿದನು: “ನಾನು ಈ ವಿಷಯವನ್ನು ಜಮದಗ್ನಿಯ ಮಗ ರಾಮನ ಬಾಯಿಂದಲೂ, ದೇವರ್ಷಿ ನಾರದರಿಂದಲೂ, ಕೃಷ್ಣದ್ವೈಪಾಯನನಿಂದಲೂ ಕೇಳಿದ್ದೇನೆ. ಅಸಿತ, ದೇವಲ, ಮಹಾತಪಸ್ವೀ ವಾಲ್ಮೀಕಿ, ಮಾರ್ಕಂಡೇಯರೂ ಕೂಡ ಗೋವಿಂದನ ಈ ಅದ್ಭುತ ಮಹಾಕಥೆಯನ್ನು ಹೇಳಿದ್ದಾರೆ.

12200005a ಕೇಶವೋ ಭರತಶ್ರೇಷ್ಠ ಭಗವಾನೀಶ್ವರಃ ಪ್ರಭುಃ|

12200005c ಪುರುಷಃ ಸರ್ವಮಿತ್ಯೇವ ಶ್ರೂಯತೇ ಬಹುಧಾ ವಿಭುಃ||

ಭರತಶ್ರೇಷ್ಠ! ಭಗವಾನ್ ಕೇಶವನು ಈಶ್ವರನು. ಪ್ರಭುವು. ಸರ್ವವ್ಯಾಪಕನಾದ ಅವನೇ ವೇದಪ್ರತಿಪಾದ್ಯ ಪುರುಷನು. ಅವನೇ ಸರ್ವನು. ಪುರುಷ ಏವೇದಗುಂ ಸರ್ವಂ ಮುಂತಾದ ಅನೇಕ ವಾಕ್ಯಗಳನ್ನು ನಾವು ವೇದಗಳಲ್ಲಿ ಕೇಳುತ್ತೇವೆ.

12200006a ಕಿಂ ತು ಯಾನಿ ವಿದುರ್ಲೋಕೇ ಬ್ರಾಹ್ಮಣಾಃ ಶಾರ್ಙ್ಗಧನ್ವನಃ|

12200006c ಮಾಹಾತ್ಮ್ಯಾನಿ ಮಹಾಬಾಹೋ ಶೃಣು ತಾನಿ ಯುಧಿಷ್ಠಿರ||

ಮಹಾಬಾಹೋ! ಯುಧಿಷ್ಠಿರ! ಲೋಕದಲ್ಲಿ ಬ್ರಾಹ್ಮಣರು ಶಾರ್ಙ್ಗಧನ್ವಿಯ ಯಾವ ಮಾಹಾತ್ಮ್ಯೆಗಳನ್ನು ತಿಳಿದಿರುವರೋ ಅವುಗಳನ್ನು ಕೇಳು.

12200007a ಯಾನಿ ಚಾಹುರ್ಮನುಷ್ಯೇಂದ್ರ ಯೇ ಪುರಾಣವಿದೋ ಜನಾಃ|

12200007c ಅಶೇಷೇಣ ಹಿ ಗೋವಿಂದೇ ಕೀರ್ತಯಿಷ್ಯಾಮಿ ತಾನ್ಯಹಮ್||

ಮನುಷ್ಯೇಂದ್ರ! ಪುರಾಣಗಳನ್ನು ತಿಳಿದಿರುವ ಜನರು ಗೋವಿಂದನ ಕುರಿತು ಏನನ್ನು ಹೇಳವರೋ ಅದನ್ನು ಸಂಪೂರ್ಣವಾಗಿ ಹೇಳುತ್ತೇನೆ.

12200008a ಮಹಾಭೂತಾನಿ ಭೂತಾತ್ಮಾ ಮಹಾತ್ಮಾ ಪುರುಷೋತ್ತಮಃ|

12200008c ವಾಯುರ್ಜ್ಯೋತಿಸ್ತಥಾ ಚಾಪಃ ಖಂ ಗಾಂ ಚೈವಾನ್ವಕಲ್ಪಯತ್||

ಭೂತಾತ್ಮಾ ಮಹಾತ್ಮಾ ಪುರುಷೋತ್ತಮನು ವಾಯು, ಜ್ಯೋತಿ, ಆಪ, ಆಕಾಶ ಮತ್ತು ಭೂಮಿಗಳೆಂಬ ಮಹಾಭೂತಗಳನ್ನು ಸೃಷ್ಟಿಸಿದನು.

12200009a ಸ ದೃಷ್ಟ್ವಾ[1] ಪೃಥಿವೀಂ ಚೈವ ಸರ್ವಭೂತೇಶ್ವರಃ ಪ್ರಭುಃ|

12200009c ಅಪ್ಸ್ವೇವ ಶಯನಂ ಚಕ್ರೇ ಮಹಾತ್ಮಾ ಪುರುಷೋತ್ತಮಃ||

ಅ ಸರ್ವಭೂತೇಶ್ವರ ಪ್ರಭು ಮಹಾತ್ಮಾ ಪುರುಷೋತ್ತಮನು ಪೃಥ್ವಿಯನ್ನು ಸೃಷ್ಟಿಸಿ ನೀರನ್ನೇ ಹಾಸಿಗೆಯನ್ನಾಗಿ ಮಾಡಿಕೊಂಡನು.

12200010a ಸರ್ವತೇಜೋಮಯಸ್ತಸ್ಮಿನ್ ಶಯಾನಃ ಶಯನೇ ಶುಭೇ|

12200010c ಸೋಽಗ್ರಜಂ ಸರ್ವಭೂತಾನಾಂ ಸಂಕರ್ಷಣಮಚಿಂತಯತ್||

12200011a ಆಶ್ರಯಂ ಸರ್ವಭೂತಾನಾಂ ಮನಸೇತಿ ವಿಶುಶ್ರುಮ|

12200011c ಸ ಧಾರಯತಿ ಭೂತಾತ್ಮಾ ಉಭೇ ಭೂತಭವಿಷ್ಯತೀ||

ಆ ಶುಭ ಶಯನದಲ್ಲಿ ಮಲಗಿದ್ದ ಸರ್ವತೇಜೋಮಯನು ಸರ್ವಭೂತಗಳ ಅಗ್ರಜ, ಸರ್ವಭೂತಗಳ ಆಶ್ರಯ ಸಂಕರ್ಷಣನನ್ನು ಮನಸ್ಸಿನಲ್ಲಿಯೇ ಸ್ಮರಿಸಿದನು ಎಂದು ಕೇಳಿದ್ದೇವೆ. ಆ ಭೂತಾತ್ಮನು ಭೂತ-ಭವಿಷ್ಯತ್ತುಗಳನ್ನೂ ಧರಿಸಿರುತ್ತಾನೆ.

12200012a ತತಸ್ತಸ್ಮಿನ್ಮಹಾಬಾಹೋ ಪ್ರಾದುರ್ಭೂತೇ ಮಹಾತ್ಮನಿ|

12200012c ಭಾಸ್ಕರಪ್ರತಿಮಂ ದಿವ್ಯಂ ನಾಭ್ಯಾಂ ಪದ್ಮಮಜಾಯತ||

ಮಹಾಬಾಹೋ! ಆ ಮಹಾತ್ಮ ಸಂಕರ್ಷಣನ ಪ್ರಾದುರ್ಭಾವವಾಗಲು ಅವನ ನಾಭಿಯಿಂದ ಭಾಸ್ಕರನ ಪ್ರಭೆಯಿದ್ದ ದಿವ್ಯ ಪದ್ಮವು ಹುಟ್ಟಕೊಂಡಿತು.

12200013a ಸ ತತ್ರ ಭಗವಾನ್ದೇವಃ ಪುಷ್ಕರೇ ಭಾಸಯನ್ದಿಶಃ|

12200013c ಬ್ರಹ್ಮಾ ಸಮಭವತ್ತಾತ ಸರ್ವಭೂತಪಿತಾಮಹಃ||

ಅಯ್ಯಾ! ಆ ಕಮಲದಲ್ಲಿ ಸರ್ವಭೂತಪಿತಾಮಹ ಭಗವಾನ್ ದೇವ ಬ್ರಹ್ಮನು ದಿಕ್ಕುಗಳೆಲ್ಲವನ್ನೂ ಬೆಳಗಿಸುತ್ತಾ ಪ್ರಾದುರ್ಭವಿಸಿದನು.

12200014a ತಸ್ಮಿನ್ನಪಿ ಮಹಾಬಾಹೋ ಪ್ರಾದುರ್ಭೂತೇ ಮಹಾತ್ಮನಿ|

12200014c ತಮಸಃ ಪೂರ್ವಜೋ ಜಜ್ಞೇ ಮಧುರ್ನಾಮ ಮಹಾಸುರಃ||

ಮಹಾಬಾಹೋ! ಅದರಲ್ಲಿ ಆ ಮಹಾತ್ಮನ ಪ್ರಾದುರ್ಭಾವಾಗಲು ತಮಸ್ಸಿನಿಂದ ಅಸುರರ ಪೂರ್ವಜ ಮಧು ಎಂಬ ಹೆಸರಿನ ಮಹಾಸುರನು ಹುಟ್ಟಿಕೊಂಡನು.

12200015a ತಮುಗ್ರಮುಗ್ರಕರ್ಮಾಣಮುಗ್ರಾಂ ಬುದ್ಧಿಂ ಸಮಾಸ್ಥಿತಮ್|

12200015c ಬ್ರಹ್ಮಣೋಪಚಿತಿಂ ಕುರ್ವನ್ ಜಘಾನ ಪುರುಷೋತ್ತಮಃ||

ಆ ಉಗ್ರಕರ್ಮಿ ಉಗ್ರಬುದ್ಧಿಯ ಮಧುವನ್ನು ಪುರುಷೋತ್ತಮನು ಕೊಂದು ಬ್ರಹ್ಮನಿಗೆ ಹಿತವನ್ನುಂಟುಮಾಡಿದನು.

12200016a ತಸ್ಯ ತಾತ ವಧಾತ್ಸರ್ವೇ ದೇವದಾನವಮಾನವಾಃ|

12200016c ಮಧುಸೂದನಮಿತ್ಯಾಹುರ್ವೃಷಭಂ ಸರ್ವಸಾತ್ವತಾಮ್||

ಅಯ್ಯಾ! ಅವನ ವಧೆಯಿಂದಾಗಿ ಸರ್ವಸಾತ್ವತರ ವೃಷಭನನ್ನು ದೇವ-ದಾನವ-ಮಾನವರೆಲ್ಲರೂ ಮಧುಸೂದನ ಎಂದು ಕರೆಯುತ್ತಾರೆ.

12200017a ಬ್ರಹ್ಮಾ ತು ಸಸೃಜೇ ಪುತ್ರಾನ್ಮಾನಸಾನ್ದಕ್ಷಸಪ್ತಮಾನ್|

12200017c ಮರೀಚಿಮತ್ರ್ಯಂಗಿರಸೌ ಪುಲಸ್ತ್ಯಂ ಪುಲಹಂ ಕ್ರತುಮ್||

ಬ್ರಹ್ಮನಾದರೋ ದಕ್ಷನೇ ಮೊದಲಾದ ಏಳು ಪುತ್ರರನ್ನು ಮನಸ್ಸಿನಿಂದಲೇ ಸೃಷ್ಟಿಸಿದನು: ಮರೀಚಿ, ಅತ್ರಿ, ಅಂಗಿರಸ, ಪುಲಸ್ತ್ಯ, ಪುಲಹ ಮತ್ತು ಕ್ರತು.

12200018a ಮರೀಚಿಃ ಕಶ್ಯಪಂ ತಾತ ಪುತ್ರಂ ಚಾಸೃಜದಗ್ರಜಮ್|

12200018c ಮಾನಸಂ ಜನಯಾಮಾಸ ತೈಜಸಂ ಬ್ರಹ್ಮಸತ್ತಮಮ್||

ಅಯ್ಯಾ! ಮರೀಚಿಯು ತನ್ನ ಹಿರಿಯ ಪುತ್ರ ಬ್ರಹ್ಮಸತ್ತಮ ಕಶ್ಯಪನನ್ನು ತೇಜಸ್ಸಿನಿಂದ ಸಂಕಲ್ಪಮಾತ್ರದಿಂದಲೇ ಹುಟ್ಟಿಸಿದನು.

12200019a ಅಂಗುಷ್ಠಾದಸೃಜದ್ಬ್ರಹ್ಮಾ ಮರೀಚೇರಪಿ ಪೂರ್ವಜಮ್|

12200019c ಸೋಽಭವದ್ಭರತಶ್ರೇಷ್ಠ ದಕ್ಷೋ ನಾಮ ಪ್ರಜಾಪತಿಃ||

ಮರೀಚಿಗಿಂತಲೂ ಮೊದಲು ಬ್ರಹ್ಮನು ಅವನ ಅಣ್ಣನನ್ನು ತನ್ನ ಅಂಗುಷ್ಠದಿಂದ ಸೃಷ್ಟಿಸಿದ್ದನು. ಭರತಶ್ರೇಷ್ಠ! ಅವನು ದಕ್ಷ ಎಂಬ ಹೆಸರಿನ ಪ್ರಜಾಪತಿಯಾದನು.

12200020a ತಸ್ಯ ಪೂರ್ವಮಜಾಯಂತ ದಶ ತಿಸ್ರಶ್ಚ ಭಾರತ|

12200020c ಪ್ರಜಾಪತೇರ್ದುಹಿತರಸ್ತಾಸಾಂ ಜ್ಯೇಷ್ಠಾಭವದ್ದಿತಿಃ||

ಭಾರತ! ಪ್ರಜಾಪತಿ ದಕ್ಷನಿಗೆ ಮೊದಲು ಹದಿಮೂರು ಕನ್ಯೆಯರು ಜನಿಸಿದರು. ಅವರಲ್ಲಿ ದಿತಿಯೇ ಹಿರಿಯವಳಾಗಿದ್ದಳು.

12200021a ಸರ್ವಧರ್ಮವಿಶೇಷಜ್ಞಃ ಪುಣ್ಯಕೀರ್ತಿರ್ಮಹಾಯಶಾಃ|

12200021c ಮಾರೀಚಃ ಕಶ್ಯಪಸ್ತಾತ ಸರ್ವಾಸಾಮಭವತ್ಪತಿಃ||

ಅಯ್ಯಾ! ಸರ್ವಧರ್ಮವಿಶೇಷಗಳನ್ನು ತಿಳಿದಿದ್ದ, ಪುಣ್ಯಕೀರ್ತಿ, ಮಹಾಯಶಸ್ವೀ, ಮರೀಚಿಯ ಮಗ ಕಶ್ಯಪನು ಅವರೆಲ್ಲರಿಗೆ ಪತಿಯಾದನು.

12200022a ಉತ್ಪಾದ್ಯ ತು ಮಹಾಭಾಗಸ್ತಾಸಾಮವರಜಾ ದಶ|

12200022c ದದೌ ಧರ್ಮಾಯ ಧರ್ಮಜ್ಞೋ ದಕ್ಷ ಏವ ಪ್ರಜಾಪತಿಃ||

ಅನಂತರ ಮಹಾಭಾಗ ಪ್ರಜಾಪತಿ ದಕ್ಷನು ಅವರಿಗಿಂತಲೂ ಕಿರಿಯರಾದ ಹತ್ತು ಕನ್ಯೆಯರನ್ನು ಹುಟ್ಟಿಸಿ ಅವರನ್ನು ಧರ್ಮಜ್ಞ ಧರ್ಮನಿಗೆ ಕೊಟ್ಟನು.

12200023a ಧರ್ಮಸ್ಯ ವಸವಃ ಪುತ್ರಾ ರುದ್ರಾಶ್ಚಾಮಿತತೇಜಸಃ|

12200023c ವಿಶ್ವೇದೇವಾಶ್ಚ ಸಾಧ್ಯಾಶ್ಚ ಮರುತ್ವಂತಶ್ಚ ಭಾರತ||

ಭಾರತ! ಧರ್ಮನಿಗೆ ವಸುಗಳು, ಅಮಿತತೇಜಸ್ವೀ ರುದ್ರರು, ವಿಶ್ವೇದೇವರು, ಸಾಧ್ಯರು ಮತ್ತು ಮರುತ್ತರು ಪುತ್ರರಾದರು.

12200024a ಅಪರಾಸ್ತು ಯವೀಯಸ್ಯಸ್ತಾಭ್ಯೋಽನ್ಯಾಃ ಸಪ್ತವಿಂಶತಿಃ|

12200024c ಸೋಮಸ್ತಾಸಾಂ ಮಹಾಭಾಗಃ ಸರ್ವಾಸಾಮಭವತ್ಪತಿಃ||

ಅವರಿಗೂ ಕಿರಿಯರಾದ ಇಪ್ಪತ್ತೇಳು ಅನ್ಯ ಕನ್ಯೆಯರನ್ನು ದಕ್ಷನು ಪಡೆದುಕೊಂಡನು. ಮಹಾಭಾಗ ಸೋಮನು ಅವರೆಲ್ಲರಿಗೂ ಪತಿಯಾದನು.

12200025a ಇತರಾಸ್ತು ವ್ಯಜಾಯಂತ ಗಂಧರ್ವಾಂಸ್ತುರಗಾನ್ದ್ವಿಜಾನ್|

12200025c ಗಾಶ್ಚ ಕಿಂಪುರುಷಾನ್ಮತ್ಸ್ಯಾನೌದ್ಭಿದಾಂಶ್ಚ ವನಸ್ಪತೀನ್||

ಕಶ್ಯಪನ ಪತ್ನಿಯರು ಗಂಧರ್ವರು, ತುರಗರು, ಆನೆಗಳು, ಗೋವುಗಳು, ಕಿಂಪುರುಷರು, ಮೀನುಗಳು ಮತ್ತು ಔಷಧಿ-ವನಸ್ಪತಿಗಳಿಗೂ ಜನ್ಮವಿತ್ತರು.

12200026a ಆದಿತ್ಯಾನದಿತಿರ್ಜಜ್ಞೇ ದೇವಶ್ರೇಷ್ಠಾನ್ಮಹಾಬಲಾನ್|

12200026c ತೇಷಾಂ ವಿಷ್ಣುರ್ವಾಮನೋಽಭೂದ್ಗೋವಿಂದಶ್ಚಾಭವತ್ಪ್ರಭುಃ||

ಅದಿತಿಯು ದೇವಶ್ರೇಷ್ಠ ಮಹಾಬಲ ಆದಿತ್ಯರನ್ನು ಹುಟ್ಟಿಸಿದಳು. ಅವಳಲ್ಲಿಯೇ ಗೋವಿಂದ ಪ್ರಭು ವಿಷ್ಣುವು ವಾಮನನಾಗಿ ಹುಟ್ಟಿದನು.

12200027a ತಸ್ಯ ವಿಕ್ರಮಣಾದೇವ ದೇವಾನಾಂ ಶ್ರೀರ್ವ್ಯವರ್ಧತ|

12200027c ದಾನವಾಶ್ಚ ಪರಾಭೂತಾ ದೈತೇಯೀ ಚಾಸುರೀ ಪ್ರಜಾ||

ಅವನ ವಿಕ್ರಮದಿಂದಲೇ ದೇವತೆಗಳ ಶ್ರೀಯು ವೃದ್ಧಿಸಿದಳು. ದಾನವರು ಮತ್ತು ದೈತ್ಯ-ಅಸುರ ಪ್ರಜೆಗಳು ಸೋತರು.

12200028a ವಿಪ್ರಚಿತ್ತಿಪ್ರಧಾನಾಂಶ್ಚ ದಾನವಾನಸೃಜದ್ದನುಃ|

12200028c ದಿತಿಸ್ತು ಸರ್ವಾನಸುರಾನ್ಮಹಾಸತ್ತ್ವಾನ್ವ್ಯಜಾಯತ||

ಕಶ್ಯಪನ ಪತ್ನಿ ದನುವು ವಿಪ್ರಚಿತ್ತಿಯೇ ಮೊದಲಾದ ದಾನವರನ್ನು ಹುಟ್ಟಸಿದಳು. ಕಶ್ಯಪನ ಪತ್ನಿ ದಿತಿಯು ಮಹಾಸತ್ತ್ವಯುಕ್ತರಾದ ಮಹಾಸುರರೆಲ್ಲರನ್ನೂ ಹುಟ್ಟಿಸಿದಳು.

12200029a ಅಹೋರಾತ್ರಂ ಚ ಕಾಲಂ ಚ ಯಥರ್ತು ಮಧುಸೂದನಃ|

12200029c ಪೂರ್ವಾಹ್ಣಂ ಚಾಪರಾಹ್ಣಂ ಚ ಸರ್ವಮೇವಾನ್ವಕಲ್ಪಯತ್||

ಮಧುಸೂದನನು ಹಗಲು-ರಾತ್ರಿಗಳನ್ನೂ, ಋತುಕಾಲಗಳನ್ನೂ, ಪೂರ್ವಾಹ್ಣ-ಅಪರಾಹ್ಣಗಳೆಲ್ಲವನ್ನೂ ಸೃಷ್ಟಿಸಿದನು.

12200030a ಬುದ್ದ್ಯಾಪಃ[2] ಸೋಽಸೃಜನ್ಮೇಘಾಂಸ್ತಥಾ ಸ್ಥಾವರಜಂಗಮಾನ್|

12200030c ಪೃಥಿವೀಂ ಸೋಽಸೃಜದ್ವಿಶ್ವಾಂ ಸಹಿತಾಂ ಭೂರಿತೇಜಸಾ||

ಅನಂತರ ಆ ಭೂರಿತೇಜಸನು ಬುದ್ಧಿಯಿಂದ ನೀರನ್ನು ಸೃಷ್ಟಿಸಿದನು. ಹಾಗೆಯೇ ಮೇಘಗಳು ಮತ್ತು ಸ್ಥಾವರಜಂಗಮಗಳನ್ನು ಸೃಷ್ಟಿಸಿದನು. ಭೂಮಿಯೊಂದಿಗೆ ವಿಶ್ವವನ್ನು ಸೃಷ್ಟಿಸಿದನು.

12200031a ತತಃ ಕೃಷ್ಣೋ ಮಹಾಬಾಹುಃ ಪುನರೇವ ಯುಧಿಷ್ಠಿರ|

12200031c ಬ್ರಾಹ್ಮಣಾನಾಂ ಶತಂ ಶ್ರೇಷ್ಠಂ ಮುಖಾದಸೃಜತ ಪ್ರಭುಃ||

ಯುಧಿಷ್ಠಿರ! ಅನಂತರ ಮಹಾಬಾಹು ಪ್ರಭೂ ಕೃಷ್ಣನು ತನ್ನ ಮುಖದಿಂದ ನೂರು ಶ್ರೇಷ್ಠ ಬ್ರಾಹ್ಮಣರನ್ನು ಸೃಷ್ಟಿಸಿದನು.

12200032a ಬಾಹುಭ್ಯಾಂ ಕ್ಷತ್ರಿಯಶತಂ ವೈಶ್ಯಾನಾಮೂರುತಃ ಶತಮ್|

12200032c ಪದ್ಭ್ಯಾಂ ಶೂದ್ರಶತಂ ಚೈವ ಕೇಶವೋ ಭರತರ್ಷಭ||

ಭರತರ್ಷಭ! ಕೇಶವನು ತನ್ನ ಬಾಹುಗಳಿಂದ ನೂರು ಕ್ಷತ್ರಿಯರನ್ನೂ, ತೊಡೆಯಿಂದ ನೂರು ವೈಶ್ಯರನ್ನೂ, ಮತ್ತು ಪಾದಗಳಿಂದ ನೂರು ಶೂದ್ರರನ್ನೂ ಸೃಷ್ಟಿಸಿದನು.

12200033a ಸ ಏವಂ ಚತುರೋ ವರ್ಣಾನ್ಸಮುತ್ಪಾದ್ಯ ಮಹಾಯಶಾಃ|

12200033c ಅಧ್ಯಕ್ಷಂ ಸರ್ವಭೂತಾನಾಂ ಧಾತಾರಮಕರೋತ್ ಪ್ರಭುಃ||

ಹೀಗೆ ನಾಲ್ಕು ವರ್ಣದವರನ್ನೂ ಉತ್ಪತ್ತಿಮಾಡಿ ಮಹಾಯಶಸ್ವೀ ಪ್ರಭುವು ಧಾತಾರನನ್ನು ಸರ್ವಭೂತಗಳಿಗೂ ಅಧ್ಯಕ್ಷನನ್ನಾಗಿ ಮಾಡಿದನು.

[3]12200034a ಯಾವದ್ಯಾವದಭೂಚ್ಚ್ರದ್ಧಾ ದೇಹಂ ಧಾರಯಿತುಂ ನೃಣಾಮ್|

12200034c ತಾವತ್ತಾವದಜೀವಂಸ್ತೇ ನಾಸೀದ್ಯಮಕೃತಂ ಭಯಮ್||

ಆಗ ಮನುಷ್ಯರು ಎಲ್ಲಿಯ ವರೆಗೆ ದೇಹಧಾರಣೆಮಾಡಿಕೊಂಡಿರಲು ಬಯಸುತ್ತಿದ್ದರೋ ಅಲ್ಲಿಯವರೆಗೆ ಜೀವಿಸುತ್ತಿದ್ದರು. ಅವರಿಗೆ ಯಮನ ಭಯವೇ ಇರಲಿಲ್ಲ.

12200035a ನ ಚೈಷಾಂ ಮೈಥುನೋ ಧರ್ಮೋ ಬಭೂವ ಭರತರ್ಷಭ|

12200035c ಸಂಕಲ್ಪಾದೇವ ಚೈತೇಷಾಮಪತ್ಯಮುದಪದ್ಯತ||

ಭರತರ್ಷಭ! ಆಗ ಮೈಥುನ ಧರ್ಮವೇ ಇರಲಿಲ್ಲ. ಸಂಕಲ್ಪಮಾತ್ರದಿಂದಲೇ ಅವರಿಗೆ ಸಂತಾನೋತ್ಪತ್ತಿಯಾಗುತ್ತಿತ್ತು.

12200036a ತತ್ರ ತ್ರೇತಾಯುಗೇ ಕಾಲೇ ಸಂಕಲ್ಪಾಜ್ಜಾಯತೇ[4] ಪ್ರಜಾ|

12200036c ನ ಹ್ಯಭೂನ್ಮೈಥುನೋ ಧರ್ಮಸ್ತೇಷಾಮಪಿ ಜನಾಧಿಪ||

ನಂತರ ತ್ರೇತಾಯುಗದ ಕಾಲದಲ್ಲಿ ಸ್ಪರ್ಶಮಾತ್ರದಿಂದ ಮಕ್ಕಳು ಹುಟ್ಟುತ್ತಿದ್ದರು. ಜನಾಧಿಪ! ಆಗಿನ ಕಾಲದವರಲ್ಲಿಯೂ ಮೈಥುನ ಧರ್ಮವು ಇರಲಿಲ್ಲ.

12200037a ದ್ವಾಪರೇ ಮೈಥುನೋ ಧರ್ಮಃ ಪ್ರಜಾನಾಮಭವನ್ನೃಪ|

12200037c ತಥಾ ಕಲಿಯುಗೇ ರಾಜನ್ದ್ವಂದ್ವಮಾಪೇದಿರೇ ಜನಾಃ||

ರಾಜನ್! ದ್ವಾಪರದಲ್ಲಿ ಮೈಥುನದಿಂದ ಮಕ್ಕಳು ಹುಟ್ಟಿದರು. ಹಾಗೆಯೇ ಕಲಿಯುಗದಲ್ಲಿ ಜನರು ಸಂತಾನೋತ್ಪತ್ತಿಗೆ ಮೈಥುನವನ್ನೇ ಆಶ್ರಯಿಸುತ್ತಾರೆ.

12200038a ಏಷ ಭೂತಪತಿಸ್ತಾತ ಸ್ವಧ್ಯಕ್ಷಶ್ಚ ಪ್ರಕೀರ್ತಿತಃ|

12200038c ನಿರಧ್ಯಕ್ಷಾಂಸ್ತು[5] ಕೌಂತೇಯ ಕೀರ್ತಯಿಷ್ಯಾಮಿ ತಾನಪಿ||

ಕೌಂತೇಯ! ಅಯ್ಯಾ! ಈ ಕೃಷ್ಣನೇ ಭೂತಪತಿಯೆಂದೂ ಅಧ್ಯಕ್ಷನೆಂದೂ ಹೇಳುತ್ತಾರೆ. ಈಗ ನಾನು ನಿರಧ್ಯಕ್ಷರ ಕುರಿತೂ ಹೇಳುತ್ತೇನೆ.

12200039a ದಕ್ಷಿಣಾಪಥಜನ್ಮಾನಃ ಸರ್ವೇ ತಲವರಾಂಧ್ರಕಾಃ[6]|

12200039c ಉತ್ಸಾಃ[7] ಪುಲಿಂದಾಃ ಶಬರಾಶ್ಚೂಚುಪಾ ಮಂಡಪೈಃ ಸಹ[8]||

ದಕ್ಷಿಣಾಪಥದಲ್ಲಿರುವ ಎಲ್ಲ ತಲವರು, ಆಂಧ್ರಕರು, ಉತ್ಸರು, ಪುಲಿಂದರು, ಶಬರರು, ಚೂಚುಪರು ಮತ್ತು ಮಂಡಪರು ನಿರಧ್ಯಕ್ಷರು.

12200040a ಉತ್ತರಾಪಥಜನ್ಮಾನಃ ಕೀರ್ತಯಿಷ್ಯಾಮಿ ತಾನಪಿ|

12200040c ಯೌನಕಾಂಬೋಜಗಾಂಧಾರಾಃ ಕಿರಾತಾ ಬರ್ಬರೈಃ ಸಹ||

ಉತ್ತರಾಪಥದಲ್ಲಿ ಹುಟ್ಟಿದ ನಿರಧ್ಯಕ್ಷರ ಕುರಿತು ಹೇಳುತ್ತೇನೆ. ಯೌನರು, ಕಾಂಬೋಜರು, ಗಾಂಧಾರರು, ಕಿರಾತರು ಮತ್ತು ಬರ್ಬರರು.

12200041a ಏತೇ ಪಾಪಕೃತಸ್ತಾತ ಚರಂತಿ ಪೃಥಿವೀಮಿಮಾಮ್|

12200041c ಶ್ವಕಾಕಬಲಗೃಧ್ರಾಣಾಂ ಸಧರ್ಮಾಣೋ ನರಾಧಿಪ||

ಅಯ್ಯಾ! ನರಾಧಿಪ! ಈ ಪಾಪಕೃತರು ಭೂಮಿಯಲ್ಲಿ ಸಂಚರಿಸುತ್ತಾರೆ. ಇವರು ನಾಯಿಯ ಮಾಂಸವನ್ನು ತಿನ್ನುತ್ತಾರೆ. ಕಾಗೆ-ಹದ್ದುಗಳ ಧರ್ಮವನ್ನು ಆಚರಿಸುತ್ತಾರೆ.

12200042a ನೈತೇ ಕೃತಯುಗೇ ತಾತ ಚರಂತಿ ಪೃಥಿವೀಮಿಮಾಮ್|

12200042c ತ್ರೇತಾಪ್ರಭೃತಿ ವರ್ತಂತೇ[9] ತೇ ಜನಾ ಭರತರ್ಷಭ||

ಅಯ್ಯಾ! ಭರತರ್ಷಭ! ಕೃತಯುಗದಲ್ಲಿ ಇವರು ಭೂಮಿಯಲ್ಲಿ ಸಂಚರಿಸುತ್ತಿರುವುದಿಲ್ಲ. ತ್ರೇತಾಯುಗದಿಂದ ಈ ಜನರ ವೃದ್ಧಿಯಾಗುತ್ತದೆ.

12200043a ತತಸ್ತಸ್ಮಿನ್ಮಹಾಘೋರೇ ಸಂಧ್ಯಾಕಾಲೇ ಯುಗಾಂತಿಕೇ|

12200043c ರಾಜಾನಃ ಸಮಸಜ್ಜಂತ ಸಮಾಸಾದ್ಯೇತರೇತರಮ್||

ಆ ಯುಗಾಂತಿಕ ಮಹಾಘೋರ ಸಂಧ್ಯಾಕಾಲದಲ್ಲಿ ಇತರೇತರರೊಡನೆ ಯುದ್ಧಮಾಡಲು ರಾಜರು ಸಜ್ಜಾಗುತ್ತಾರೆ.

12200044a ಏವಮೇಷ ಕುರುಶ್ರೇಷ್ಠ ಪ್ರಾದುರ್ಭಾವೋ ಮಹಾತ್ಮನಃ|

[10]12200044c ದೇವಂ ದೇವರ್ಷಿರಾಚಷ್ಟ ನಾರದಃ ಸರ್ವಲೋಕದೃಕ್||

ಕುರುಶ್ರೇಷ್ಠ! ಹೀಗೆ ಎಲ್ಲವೂ ಮಹಾತ್ಮ ಕೇಶವನಿಂದ ಹುಟ್ಟಿಕೊಂಡಿತು. ಸರ್ವಲೋಕಗಳನ್ನೂ ನೋಡಬಲ್ಲ ದೇವರ್ಷಿ ನಾರದನು ಈ ದೇವನ ಕುರಿತು ಹೇಳಿದನು.

12200045a ನಾರದೋಽಪ್ಯಥ ಕೃಷ್ಣಸ್ಯ ಪರಂ ಮೇನೇ ನರಾಧಿಪ|

12200045c ಶಾಶ್ವತತ್ವಂ ಮಹಾಬಾಹೋ ಯಥಾವದ್ಭರತರ್ಷಭ||

ನರಾಧಿಪ! ಮಹಾಬಾಹೋ! ಭರತರ್ಷಭ! ನಾರದನಾದರೋ ಕೃಷ್ಣನನ್ನು ಪರಮಾತ್ಮನೆಂದೂ ಶಾಶ್ವತನೆಂದೂ ತಿಳಿದಿದ್ದಾನೆ.

12200046a ಏವಮೇಷ ಮಹಾಬಾಹುಃ ಕೇಶವಃ ಸತ್ಯವಿಕ್ರಮಃ|

12200046c ಅಚಿಂತ್ಯಃ ಪುಂಡರೀಕಾಕ್ಷೋ ನೈಷ ಕೇವಲಮಾನುಷಃ||

ಮಹಾಬಾಹು ಸತ್ಯವಿಕ್ರಮಿ ಕೇಶವನು ಹೀಗೆ ಅಚಿಂತ್ಯ ಪುಂಡರೀಕಾಕ್ಷನು. ಇವನು ಕೇವಲ ಮನುಷ್ಯನಲ್ಲ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಸರ್ವಭೂತೋತ್ಪತ್ತಿಕಥನೇ ದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಸರ್ವಭೂತೋತ್ಪತ್ತಿಕಥನ ಎನ್ನುವ ಇನ್ನೂರನೇ ಅಧ್ಯಾಯವು.

[1] ಸೃಷ್ಟ್ವಾ (ಗೀತಾ ಪ್ರೆಸ್).

[2] ಪ್ರಧ್ಯಾಯ (ಗೀತಾ ಪ್ರೆಸ್).

[3] ಇದಕ್ಕೆ ಮೊದಲು ಈ ಅಧಿಕ ಶ್ಲೋಕಗಳಿವೆ: ವೇದವಿದ್ಯಾವಿಧಾತಾರಂ ಬ್ರಹ್ಮಣಾಮಮಿತದ್ಯುತಿಮ್| ಭೂತಮಾತೃಗಣಾಧ್ಯಕ್ಷಂ ವಿರೂಪಾಕ್ಷಂ ಚ ಸೋಽಸೃಜತ್|| ಶಾಸಿತಾರಂ ಚ ಪಾಪಾನಾಂ ಪಿತೄಣಾಂ ಸಮವರ್ತಿನಮ್| ಅಸಜತ್ಸರ್ವಭೂತಾತ್ಮಾ ನಿಧಿಪಂ ಚ ಧನೇಶ್ವರಮ್|| ಯಾದಸಾಮಸೃಜನ್ನಾಥಂ ವರುಣಂ ಚ ಜಲೇಶ್ವರಮ್| ವಾಸವಂ ಸರ್ವದೇವಾನಾಮಧ್ಯಕ್ಷಮಕರೋತ್ಪ್ರಭುಃ|| (ಗೀತಾ ಪ್ರೆಸ್).

[4] ಸಂಸ್ಪರ್ಶಾಜ್ಜಾಯತೇ (ಗೀತಾ ಪ್ರೆಸ್/ಭಾರತ ದರ್ಶನ).

[5] ನಿರಪೇಕ್ಷಾಂಶ್ಚ (ಭಾರತ ದರ್ಶನ/ಗೀತಾ ಪ್ರೆಸ್).

[6] ನರವರಾಂಧ್ರಕಾಃ (ಭಾರತ ದರ್ಶನ/ಗೀತಾ ಪ್ರೆಸ್).

[7] ಗುಹಾಃ (ಭಾರತ ದರ್ಶನ/ಗೀತಾ ಪ್ರೆಸ್).

[8] ಶಬರಾಶ್ಚೂಚುಕಾ ಮದ್ರಕೈಃ ಸಹ|| (ಭಾರತ ದರ್ಶನ/ಗೀತಾ ಪ್ರೆಸ್).

[9] ವರ್ಧಂತೇ (ಗೀತಾ ಪ್ರೆಸ್).

[10] ಇದಕ್ಕೆ ಮೊದಲು ಈ ಅಧಿಕ ಶ್ಲೋಕಗಳಿವೆ: ತಪಃಸ್ವರೂಪೋ ಮಹಾದೇವಃ ಕೃಷ್ಣೋ ದೇವಕಿನಂದನಃ| ತಸ್ಯ ಪ್ರಸಾದಾದ್ದುಃಖಸ್ಯ ನಾಶಂ ಪ್ರಾಪ್ಸ್ಯಸಿ ಮಾನದ|| ಏಕಃ ಕರ್ತಾ ಸ ಕೃಷ್ಣಶ್ಚ ಜ್ಞಾನಿನಾಂ ಪರಮಾ ಗತಿಃ| ಇದಮಾಶ್ರಿತ್ಯ ದೇವೇಂದ್ರೋ ದೇವಾ ರುದ್ರಾಸ್ತಥಾಶ್ವಿನೌ| ಸ್ವೇ ಸ್ವೇ ಪದೇ ವಿವಿಶಿರೇ ಭುಕ್ತಿಮುಕ್ತಿವಿದೋ ಜನಾಃ|| ಶ್ರೂಯತಾಮಸ್ಯ ಸದ್ಭಾವಃ ಸಮ್ಯಗ್ಜ್ಞಾನಂ ಯಥಾ ತವ| ಭೂತಾನಾಮಂತರಾತ್ಮಾಸೌ ಸ ನಿತ್ಯಪದಸಂವೃತಃ|| ಪುರಾ ದೇವರೃಷಿಃ ಶ್ರೀಮಾನ್ನಾರದಃ ಪರಮಾರ್ಥವಾನ್| ಚಚಾರ ಪೃಥಿವೀಂ ಕೃತ್ಸಾಂ ತೀರ್ಥಾನ್ಯನುಚರನ್ ಪ್ರಭುಃ|| ಹಿಮವತ್ಪಾದಮಾಶ್ರಿತ್ಯ ವಿಚಾರ್ಯ ಚ ಪುನಃ ಪುನಃ| ಸ ದದರ್ಶ ಹೃದಂ ತತ್ರ ಪದ್ಮೋತ್ಪಲಸಮಾಕುಲಮ್|| ತತಃ ಸ್ನಾತ್ವಾ ಮಹಾತೇಜಾ ವಾಗ್ಯತೋ ನಿಯತೇಂದ್ರಿಯಃ| ತುಷ್ಟಾವ ಪುರುಷವ್ಯಾಘ್ರೋ ಜಿಜ್ಞಾಸುಶ್ಚ ತದದ್ಭುತಮ್|| ತತೋ ವರ್ಷಶತೇ ಪೂರ್ಣೇ ಭಗವಾನ್ಲೋಕಭಾವನಃ| ಪ್ರಾದುಶ್ಚಕಾರ ವಿಶ್ವಾತ್ಮಾ ಋಷೇಃ ಪರಮಸೌಹೃದಾತ್|| ತಮಾಗತಂ ಜಗನ್ನಾಥಂ ಸರ್ವಕಾರಣಕಾರಣಮ್| ಅಖಿಲಾಮರಮೌಲ್ಯಂಗರುಕ್ಮಾರುಣಪದದ್ವಯಮ್|| ವೈನತೇಯಪದಸ್ಪರ್ಶಕಿಣಶೋಭಿತಜಾನುಕಮ್| ಪೀತಾಂಬರಲಸತ್ಕಾಂಚೀದಾಮಬದ್ಧಕಟಿತಟಮ್|| ಶ್ರೀವತ್ಸವಕ್ಷಸಂ ಚಾರುಮಣಿಕೌಸ್ತುಭಕಂಧರಮ್| ಮಂದಸ್ಮಿತಮುಖಾಂಭೋಜಂ ಜಲದಾಯತಲೋಚನಮ್|| ನಮ್ರಚಾಪಾನುಕರಣನಮ್ರಭ್ರೂಯುಗಶೋಭಿತಮ್| ನಾನಾರತ್ನಮಣಿವಜ್ರಸ್ಪುರನ್ಮಕರಕುಂಡಲಮ್|| ಇಂದ್ರನೀಲನಿಭಾಭಂ ತಂ ಕೇಯೂರಮುಕುಟೋಜ್ಜ್ವಲಮ್| ದೇವೈರಿಂದ್ರಪುರೋಗೈಶ್ಚ ಋಷಿಸಂಘೈರಭಷ್ಟುತಮ್|| ನಾರದೋ ಜಯಶಬ್ದೇನ ವವಂದೇ ಶಿರಸಾ ಹರಿಮ್| ತತಃ ಸ ಭಗವಾನ್ ಶ್ರೀಮಾನ್ಮೇಘಗಂಭೀರಯಾ ಗಿರಃ|| ಪ್ರಾಹೇಶಃ ಸರ್ವಭೂತನಾಂ ನಾರದಂ ಪತಿತಂ ಕ್ಷಿತೌ| ಶ್ರೀ ಭಗವಾನುವಾಚ| ಭದ್ರಮಸ್ತು ಋಷೇ ತುಭ್ಯಂ ವರಂ ವರಯ ಸುವ್ರತ| ಯತ್ತೇ ಮನಸಿ ಸುವ್ಯಕ್ತಮಸ್ತಿ ಚ ಪ್ರದದಮ ತತ್|| ಭೀಷ್ಮ ಉವಾಚ| ಸ ಚೇಮಂ ಜಯಶಬ್ದೇನ ಪ್ರಸೀದೇತ್ಯಾತುರೋ ಮುನಿಃ| ಪ್ರೋವಾಚ ಹೃದಿ ಸಂರೂಢಂ ಶಂಖಚಕ್ರಗಧಾಧರಮ್|| ವಿವಕ್ಷಿತಂ ಜಗನ್ನಾಥ ಮಯಾ ಜ್ಞಾತಂ ತ್ವಯಾಚ್ಯುತ| ತತ್ಪ್ರಸೀದ ಹೃಷೀಕೇಶ ಶ್ರೋತುಮಿಚ್ಛಾಮಿ ತದ್ಧರೇ|| ತತಃ ಸ್ಮಯನ್ ಮಹಾವಿಷ್ಣುರಭ್ಯಭಾಷತ ನಾರದಮ್| ನಿರ್ದ್ವಂದ್ವಾ ನಿರಹಂಕಾರಾಃ ಶುಚಯಃ ಶುದ್ಧಲೋಚನಾಃ|| ತೇ ಮಾಂ ಪಶ್ಯಂತಿ ಸತತಂ ತಾನ್ ಪೃಚ್ಛ ಯದಿಹೇಚ್ಛಸಿ| ಯೋ ಯೋಗಿನೋ ಮಹಾಪ್ರಾಜ್ಞಾ ಮದಂಶಾ ಯೇ ವ್ಯವಸ್ಥಿತಾಃ| ತೇಷಾಂ ಪ್ರಸಾದಂ ದೇವರ್ಷೇ ಮತ್ಪ್ರಸಾದಮವೈಹಿ ತತ್|| ಇತ್ಯುಕ್ತ್ವಾ ಸ ಜಗಾಮಾಥ ಭಗವಾನ್ ಭೂತಭಾವನಃ| ತಸ್ಮಾದ್ ವ್ರಜ ಹೃಷೀಕೇಶಂ ಕೃಷ್ಣಂ ದೇವಕಿನಂದನಮ್|| ಏತಮಾರಾಧ್ಯ ಗೋವಿಂದಂ ಗತಾ ಮುಕ್ತಿಂ ಮಹರ್ಷಯಃ| ಏಷ ಕರ್ತಾ ವಿಕರ್ತಾ ಚ ಸರ್ವಕಾರಣಕಾರಣಮ್|| ಮಯಾಪ್ಯೇತಚ್ಛೃತಂ ರಾಜನ್ ನಾರದಾತ್ತು ನಿಬೋಧ ತತ್| ಸ್ವಯಮೇವ ಸಮಾಚಷ್ಟ ನಾರದೋ ಭಗವಾನ್ಮುನಿಃ|| ಸಮಸ್ತಸಂಸಾರವಿಘಾತಕಾರಣಮ್| ಭಜಂತಿ ಯೇ ವಿಷ್ಣುಮನ್ಯಮಾನಸಾಃ| ತೇ ಯಾಂತಿ ಸಾಯುಜ್ಯಮತೀವ ದುರ್ಲಭಮ್ ಇತೀವ ನಿತ್ಯಂ ಹೃದಿ ವರ್ಣಯಂತಿ|| (ದಕ್ಷಿಣಾತ್ಯ ಪಾಠದಲ್ಲಿರುವಂತೆ, ಗೀತಾ ಪ್ರೆಸ್).

Comments are closed.