Shanti Parva: Chapter 199

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೧೯೯

ಪರಮಾತ್ಮ ತತ್ತ್ವನಿರೂಪಣೆ (೧-೩೨).

12199001 ಮನುರುವಾಚ|

12199001a ಯದಾ ತೇ ಪಂಚಭಿಃ ಪಂಚ ವಿಮುಕ್ತಾ ಮನಸಾ ಸಹ|

12199001c ಅಥ ತದ್ದ್ರಕ್ಷ್ಯಸೇ ಬ್ರಹ್ಮ ಮಣೌ ಸೂತ್ರಮಿವಾರ್ಪಿತಮ್||

ಮನುವು ಹೇಳಿದನು: “ಶಬ್ದವೇ ಮೊದಲಾದ ಐದು ವಿಷಯಯುಕ್ತವಾದ ಐದು ಜ್ಞಾನೇಂದ್ರಿಯಗಳು ಮನಸ್ಸಿನೊಡನೆ ಸೇರಿಕೊಂಡಾಗ ಮಣಿಗಳಿಂದ ಪೋಣಿತವಾದ ದಾರದಂತಿರುವ ಪರಮಾತ್ಮನನ್ನು ಮಾನವನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ.

12199002a ತದೇವ ಚ ಯಥಾ ಸೂತ್ರಂ ಸುವರ್ಣೇ ವರ್ತತೇ ಪುನಃ|

12199002c ಮುಕ್ತಾಸ್ವಥ ಪ್ರವಾಲೇಷು ಮೃನ್ಮಯೇ ರಾಜತೇ ತಥಾ||

12199003a ತದ್ವದ್ಗೋಷು ಮನುಷ್ಯೇಷು ತದ್ವದ್ಧಸ್ತಿಮೃಗಾದಿಷು|

12199003c ತದ್ವತ್ಕೀಟಪತಂಗೇಷು ಪ್ರಸಕ್ತಾತ್ಮಾ ಸ್ವಕರ್ಮಭಿಃ||

ಒಂದೇ ದಾರವು ಸುವರ್ಣದ ಮಣಿಗಳಲ್ಲಿಯೂ, ಮುತ್ತುಗಳಲ್ಲಿಯೂ, ಹವಳಗಳಲ್ಲಿಯೂ, ಮಣ್ಣಿನ ಮಣಿಗಳಲ್ಲಿಯೂ ಮತ್ತು ಬೆಳ್ಳಿಯ ಮಣಿಗಳಲ್ಲಿಯೂ ಪೋಣಿಸಲ್ಪಟ್ಟು ವಿರಾಜಿಸುವಂತೆ ಒಬ್ಬನೇ ಪರಮಾತ್ಮನು ಗೋವುಗಳಲ್ಲಿಯೂ, ಕುದುರೆಗಳಲ್ಲಿಯೂ, ಮನುಷ್ಯರಲ್ಲಿಯೂ, ಆನೆಗಳಲ್ಲಿಯೂ, ಮೃಗಗಳಲ್ಲಿಯೂ, ಕೀಟ-ಪತಂಗಾದಿಗಳಲ್ಲಿಯೂ ವ್ಯಾಪ್ತನಾಗಿರುತ್ತಾನೆ. ವಿಷಯಾಸಕ್ತನಾದ ಜೀವಾತ್ಮನು ತನ್ನ ಕರ್ಮಫಲಗಳಿಗನುಸಾರವಾಗಿ ಬೇರೆ ಬೇರೆ ಶರೀರಗಳನ್ನು ಧಾರಣೆಮಾಡುತ್ತಿರುತ್ತಾನೆ.

12199004a ಯೇನ ಯೇನ ಶರೀರೇಣ ಯದ್ಯತ್ಕರ್ಮ ಕರೋತ್ಯಯಮ್|

12199004c ತೇನ ತೇನ ಶರೀರೇಣ ತತ್ತತ್ಫಲಮುಪಾಶ್ನುತೇ||

ಜೀವನು ಯಾವ ಯಾವ ಶರೀರಗಳಲ್ಲಿ ಯಾವ ಯಾವ ಕರ್ಮಗಳನ್ನು ಮಾಡಿರುತ್ತಾನೋ ಅವೇ ಶರೀರಗಳಿಂದ ಅದೇ ಕರ್ಮಗಳ ಫಲವನ್ನು ಪಡೆದುಕೊಳ್ಳುತ್ತಾನೆ.

12199005a ಯಥಾ ಹ್ಯೇಕರಸಾ ಭೂಮಿರೋಷಧ್ಯಾತ್ಮಾನುಸಾರಿಣೀ|

12199005c ತಥಾ ಕರ್ಮಾನುಗಾ ಬುದ್ಧಿರಂತರಾತ್ಮಾನುದರ್ಶಿನೀ||

ಒಂದೇ ವಿಧದ ಸಾರವಿರುವ ಭೂಮಿಯು ಹೇಗೆ ತನ್ನಲ್ಲಿ ಬಿತ್ತಿದ ಬೀಜಕ್ಕನುಗುಣವಾಗಿ ವಿಧವಿಧದ ಸಸ್ಯಗಳನ್ನು ನೀಡುತ್ತದೆಯೋ ಹಾಗೆ ಬುದ್ಧಿಯು ಏಕರಸವಾಗಿ ಪರಮಾತ್ಮನಿಂದಲೇ ಪ್ರಕಾಶಿತವಾದ ಚೈತನ್ಯವನ್ನು ಪಡೆದಿದ್ದರೂ ಹಿಂದೆ ಮಾಡಿದ ಕರ್ಮವನ್ನೇ ಸದಾ ಅನುಸರಿಸುತ್ತಿರುತ್ತದೆ.

12199006a ಜ್ಞಾನಪೂರ್ವೋದ್ಭವಾ ಲಿಪ್ಸಾ ಲಿಪ್ಸಾಪೂರ್ವಾಭಿಸಂಧಿತಾ|

12199006c ಅಭಿಸಂಧಿಪೂರ್ವಕಂ ಕರ್ಮ ಕರ್ಮಮೂಲಂ ತತಃ ಫಲಮ್||

ಮನುಷ್ಯನಿಗೆ ಮೊದಲು ವಿಷಯಗಳ ಅರಿವಾಗುತ್ತದೆ. ನಂತರ ಬಯಕೆಯ ವಸ್ತುಗಳನ್ನು ಪಡೆಯಬೇಕೆನ್ನುವ ಅಭಿಲಾಷೆಯುಂಟಾಗುತ್ತದೆ. ಬಳಿಕ ಆ ವಸ್ತುವನ್ನು ಹೇಗಾದರೂ ಮಾಡಿ ಪಡೆದುಕೊಳ್ಳಲೇಬೇಕೆಂಬ ಸಂಕಲ್ಪವಾಗಿ ಕಾರ್ಯವು ಪ್ರಾರಂಭವಾಗುತ್ತದೆ. ಅನಂತರ ಕರ್ಮದಿಂದ ಫಲವು ದೊರಕುತ್ತದೆ.

12199007a ಫಲಂ ಕರ್ಮಾತ್ಮಕಂ ವಿದ್ಯಾತ್ಕರ್ಮ ಜ್ಞೇಯಾತ್ಮಕಂ ತಥಾ|

12199007c ಜ್ಞೇಯಂ ಜ್ಞಾನಾತ್ಮಕಂ ವಿದ್ಯಾಜ್ಜ್ಞಾನಂ ಸದಸದಾತ್ಮಕಮ್||

ಫಲವು ಕರ್ಮಾತ್ಮಕವೆಂದೂ ಕರ್ಮವು ಜ್ಞೇಯಾತ್ಮಕವೆಂದೂ ತಿಳಿಯಬೇಕು. ಜ್ಞೇಯವು ಜ್ಞಾನಾತ್ಮಕವೆಂದೂ ಜ್ಞಾನವು ಸದಸದಾತ್ಮಕವೆಂದೂ ತಿಳಿಯಬೇಕು.

12199008a ಜ್ಞಾನಾನಾಂ ಚ ಫಲಾನಾಂ ಚ ಜ್ಞೇಯಾನಾಂ ಕರ್ಮಣಾಂ ತಥಾ|

12199008c ಕ್ಷಯಾಂತೇ ತತ್ಫಲಂ ದಿವ್ಯಂ ಜ್ಞಾನಂ ಜ್ಞೇಯಪ್ರತಿಷ್ಠಿತಮ್||

ಜ್ಞಾನ, ಫಲ, ಜ್ಞೇಯ ಮತ್ತು ಕರ್ಮಗಳು ಅಂತ್ಯವಾದಾಗ ಉಳಿದುಕೊಳ್ಳುವ ದಿವ್ಯ ಜ್ಞಾನಫಲವೇ ಜ್ಞೇಯಸ್ವರೂಪ ಪರಮಾತ್ಮನೆಂದು ತಿಳಿ.

12199009a ಮಹದ್ಧಿ ಪರಮಂ ಭೂತಂ ಯುಕ್ತಾಃ ಪಶ್ಯಂತಿ ಯೋಗಿನಃ|

12199009c ಅಬುಧಾಸ್ತಂ ನ ಪಶ್ಯಂತಿ ಹ್ಯಾತ್ಮಸ್ಥಾ ಗುಣಬುದ್ಧಯಃ||

ಆ ಮಹಾತತ್ತ್ವವನ್ನು ಪರಮ ಯೋಗಿಗಳು ಮಾತ್ರ ನೋಡಬಲ್ಲರು. ಗಣಬುದ್ಧಿಗಳಾದ ಅಬುದ್ಧರು ತಮ್ಮಲ್ಲಿಯೇ ಇರುವ ಪರಮಾತ್ಮನನ್ನು ನೋಡಲಾರರು.

12199010a ಪೃಥಿವೀರೂಪತೋ ರೂಪಮಪಾಮಿಹ ಮಹತ್ತರಮ್|

12199010c ಅದ್ಭ್ಯೋ ಮಹತ್ತರಂ ತೇಜಸ್ತೇಜಸಃ ಪವನೋ ಮಹಾನ್||

12199011a ಪವನಾಚ್ಚ ಮಹದ್ವ್ಯೋಮ ತಸ್ಮಾತ್ಪರತರಂ ಮನಃ|

12199011c ಮನಸೋ ಮಹತೀ ಬುದ್ಧಿರ್ಬುದ್ಧೇಃ ಕಾಲೋ ಮಹಾನ್ ಸ್ಮೃತಃ||

12199012a ಕಾಲಾತ್ಸ ಭಗವಾನ್ವಿಷ್ಣುರ್ಯಸ್ಯ ಸರ್ವಮಿದಂ ಜಗತ್|

12199012c ನಾದಿರ್ನ ಮಧ್ಯಂ ನೈವಾಂತಸ್ತಸ್ಯ ದೇವಸ್ಯ ವಿದ್ಯತೇ||

ಪೃಥ್ವಿಯ ರೂಪಕ್ಕಿಂತಲೂ ಜಲದ ರೂಪವು ಮಹತ್ತರವಾದುದು. ಜಲಕ್ಕಿಂತಲೂ ತೇಜಸ್ಸು ಮಹತ್ತರವಾದುದು ಮತ್ತು ತೇಜಸ್ಸಿಗಿಂತಲೂ ವಾಯುವು ಮಹತ್ತರವಾದುದು. ವಾಯುವಿಗಿಂತಲೂ ಆಕಾಶವು ಮಹತ್ತರವಾದುದು. ಆಕಾಶಕ್ಕಿಂತಲೂ ಮಹತ್ತರವಾದುದು ಮನಸ್ಸು. ಮನಸ್ಸಿಗಿಂತಲೂ ಬುದ್ಧಿಯು ಮಹತ್ತರವಾದುದು. ಬುದ್ಧಿಗಿಂತಲೂ ಕಾಲವು ಮಹತ್ತರವಾದುದೆಂದು ಹೇಳುತ್ತಾರೆ. ಕಾಲಕ್ಕಿಂತಲೂ ಭಗವಾಣನ್ ವಿಷ್ಣುವು ಮಹತ್ತರನು. ಈ ಜಗತ್ತೆಲ್ಲವೂ ಅವನದ್ದೇ. ಆ ದೇವನಿಗೆ ಆದಿ ಮಧ್ಯ ಅಂತ್ಯಗಳಿಲ್ಲ.

12199013a ಅನಾದಿತ್ವಾದಮಧ್ಯತ್ವಾದನಂತತ್ವಾಚ್ಚ ಸೋಽವ್ಯಯಃ|

12199013c ಅತ್ಯೇತಿ ಸರ್ವದುಃಖಾನಿ ದುಃಖಂ ಹ್ಯಂತವದುಚ್ಯತೇ||

ಅನಾದಿತ್ವದಿಂದ, ಅಮಧ್ಯತ್ವದಿಂದ ಮತ್ತು ಅನಂತತ್ತ್ವದಿಂದ ಅವನು ಅವ್ಯಯನು. ಅಂತ್ಯವಾಗುವುದಕ್ಕೆ ಮಾತ್ರ ಎಲ್ಲ ತರಹದ ದುಃಖಗಳುಂತಾಗುತ್ತವೆ ತಾನೇ? ಅಂತ್ಯವೇ ಇಲ್ಲದವನಿಗೆ ದುಃಖವೆಲ್ಲಿಂದ? ಎಂದು ಹೇಳುತ್ತಾರೆ.

12199014a ತದ್ಬ್ರಹ್ಮ ಪರಮಂ ಪ್ರೋಕ್ತಂ ತದ್ಧಾಮ ಪರಮಂ ಸ್ಮೃತಮ್|

12199014c ತದ್ಗತ್ವಾ ಕಾಲವಿಷಯಾದ್ವಿಮುಕ್ತಾ ಮೋಕ್ಷಮಾಶ್ರಿತಾಃ||

ಅವನನ್ನೇ ಪರಬ್ರಹ್ಮ ಎನ್ನುತ್ತಾರೆ. ಅವನೇ ಪರಮಧಾಮನೆಂದು ಹೇಳುತ್ತಾರೆ. ಅವನನ್ನು ತಿಳಿದು ಕಾಲವಿಷಯದಿಂದ ಮುಕ್ತನಾದವನು ಮೋಕ್ಷವನ್ನೇ ಹೊಂದುತ್ತಾನೆ.

12199015a ಗುಣೈಸ್ತ್ವೇತೈಃ ಪ್ರಕಾಶಂತೇ ನಿರ್ಗುಣತ್ವಾತ್ತತಃ ಪರಮ್|

12199015c ನಿವೃತ್ತಿಲಕ್ಷಣೋ ಧರ್ಮಸ್ತಥಾನಂತ್ಯಾಯ ಕಲ್ಪತೇ||

ಗುಣಗಳಿಂದ ಕಾಲವೇ ಮೊದಲಾದವುಗಳು ಪ್ರಕಾಶಿತಗೊಳ್ಳುತ್ತವೆ. ಆದರೆ ನಿರ್ಗುಣದಿಂದ ಅವೆಲ್ಲಕ್ಕಿಂತಲೂ ಪರಮ ಶ್ರೇಷ್ಠವಾದುದು ಪ್ರಕಾಶಿತಗೊಳ್ಳುತ್ತದೆ. ನಿವೃತ್ತಿಲಕ್ಷಣವೇ ಗುಣಗಳನ್ನು ಅಂತ್ಯಗೊಳಿಸುವ ಧರ್ಮವೆಂದು ಹೇಳಿದ್ದಾರೆ.

12199016a ಋಚೋ ಯಜೂಂಷಿ ಸಾಮಾನಿ ಶರೀರಾಣಿ ವ್ಯಪಾಶ್ರಿತಾಃ|

12199016c ಜಿಹ್ವಾಗ್ರೇಷು ಪ್ರವರ್ತಂತೇ ಯತ್ನಸಾಧ್ಯಾ ವಿನಾಶಿನಃ||

ಋಗ್ಯಜುಸ್ಸಾಮಗಳು ಶರೀರಗಳನ್ನೇ ಆಶ್ರಯಿಸಿವೆ. ಅವು ಸಾಧಕನ ನಾಲಿಗೆಯ ಮೇಲೆಯೇ ಇರುತ್ತವೆ. ಆದರೆ ಪ್ರಯತ್ನಿಸದೇ ಇದ್ದರೆ ಅವು ನಾಶವಾಗುತ್ತವೆ.

12199017a ನ ಚೈವಮಿಷ್ಯತೇ ಬ್ರಹ್ಮ ಶರೀರಾಶ್ರಯಸಂಭವಮ್|

12199017c ನ ಯತ್ನಸಾಧ್ಯಂ ತದ್ಬ್ರಹ್ಮ ನಾದಿಮಧ್ಯಂ ನ ಚಾಂತವತ್||

ಆದರೆ ಪರಬ್ರಹ್ಮಪರಮಾತ್ಮ ವಸ್ತುವು ವೇದಗಳಂತೆ ಶರೀರವನ್ನೇ ಆಶ್ರಯಿಸಿದ್ದರೂ ಅದನ್ನು ಪ್ರಯತ್ನದಿಂದ ತಿಳಿದುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಅದಕ್ಕೆ ಆದಿ, ಮಧ್ಯ, ಅಂತ್ಯಗಳಿಲ್ಲ.

12199018a ಋಚಾಮಾದಿಸ್ತಥಾ ಸಾಮ್ನಾಂ ಯಜುಷಾಮಾದಿರುಚ್ಯತೇ|

12199018c ಅಂತಶ್ಚಾದಿಮತಾಂ ದೃಷ್ಟೋ ನ ಚಾದಿರ್ಬ್ರಹ್ಮಣಃ ಸ್ಮೃತಃ||

ಋಗ್ವೇದಕ್ಕೆ ಆದಿಯಿದೆ. ಸಾಮ-ಯಜುರ್ವೇದಗಳಿವೆ ಆದಿಗಳಿವೆಯೆಂದು ಹೇಳಿದ್ದಾರೆ. ಆದಿಯಿದ್ದವುಗಳಿಗೆ ಅಂತ್ಯವಿರುವುದು ದೃಷ್ಟವಾಗಿದೆ. ಆದರೆ ಬ್ರಹ್ಮವಸ್ತುವಿಗೆ ಮಾತ್ರ ಆದಿಯಿದೆಯೆಂದು ಹೇಳಿಲ್ಲ.

12199019a ಅನಾದಿತ್ವಾದನಂತತ್ವಾತ್ತದನಂತಮಥಾವ್ಯಯಮ್|

12199019c ಅವ್ಯಯತ್ವಾಚ್ಚ ನಿರ್ದ್ವಂದ್ವಂ ದ್ವಂದ್ವಾಭಾವಾತ್ತತಃ ಪರಮ್||

ಅನಾದಿತ್ವದಿಂದಾಗಿ ಮತ್ತು ಅನಂತತ್ವದಿಂದಾಗಿ ಬ್ರಹ್ಮವಸ್ತುವು ಅನಂತವು ಮತ್ತು ಅವ್ಯಯವು. ಅವ್ಯಯವಾಗಿರುವುದರಿಂದ ಅದು ನಿರ್ದ್ವಂದ್ವವು. ದ್ವಂದ್ವಗಳಿಲ್ಲದೇ ಇರುವುದರಿಂದ ಅದು ಎಲ್ಲಕ್ಕಿಂತ ಶ್ರೇಷ್ಠವು.

12199020a ಅದೃಷ್ಟತೋಽನುಪಾಯಾಚ್ಚ ಅಪ್ಯಭಿಸಂಧೇಶ್ಚ ಕರ್ಮಣಃ|

12199020c ನ ತೇನ ಮರ್ತ್ಯಾಃ ಪಶ್ಯಂತಿ ಯೇನ ಗಚ್ಚಂತಿ ತತ್ಪರಮ್||

ಅದು ಚರ್ಮದ ಕಣ್ಣುಗಳಿಗೆ ಕಾಣುವಂಥಾದ್ದಲ್ಲ. ಸಾಮಾನ್ಯರಿಗೆ ಅದು ಕಾಣುವುದಿಲ್ಲ. ಫಲಗಳನ್ನುದ್ದೇಶಿಸಿ ಕರ್ಮಮಾಡುವುದರಿಂದ ಸಾಧಾರಣ ಮನುಷ್ಯರಿಗೆ  ಆ ಪರಮಪದವನ್ನು ಪಡೆಯುವ ದಾರಿಯು ಕಾಣುವುದಿಲ್ಲ.

12199021a ವಿಷಯೇಷು ಚ ಸಂಸರ್ಗಾಚ್ಚಾಶ್ವತಸ್ಯ ಚ ದರ್ಶನಾತ್|

12199021c ಮನಸಾ ಚಾನ್ಯದಾಕಾಂಕ್ಷನ್ಪರಂ ನ ಪ್ರತಿಪದ್ಯತೇ||

ವಿಷಯಗಳ ಸಂಸರ್ಗವೇ ಶಾಶ್ವತವೆಂದು ಮನಸ್ಸಿಗೆ ಕಾಣುವುದರಿಂದ ಹಾಗೂ ಮನಸ್ಸು ಪರಮಾತ್ಮನಲ್ಲದೇ ಬೇರೆಯದನ್ನು ಆಕಾಂಕ್ಷಿಸುವುದರಿಂದ ಅದಕ್ಕೆ ಪರಮಾತ್ಮನು ಕಾಣುವುದಿಲ್ಲ.

12199022a ಗುಣಾನ್ಯದಿಹ ಪಶ್ಯಂತಿ ತದಿಚ್ಚಂತ್ಯಪರೇ ಜನಾಃ|

12199022c ಪರಂ ನೈವಾಭಿಕಾಂಕ್ಷಂತಿ ನಿರ್ಗುಣತ್ವಾದ್ಗುಣಾರ್ಥಿನಃ||

ಯಾವ ಯಾವ ವಿಷಯಗುಣಗಳನ್ನು ನೋಡುತ್ತಾರೋ ಅದನ್ನೇ ಜನರು ಪಡೆಯಲು ಬಯಸುತ್ತಾರೆ. ಪರಮಾತ್ಮನನ್ನು ಪಡೆದುಕೊಳ್ಳಲು ಬಯಸುವುದಿಲ್ಲ. ಗುಣಾರ್ಥಿಗಳು ನಿರ್ಗುಣನನ್ನು ಕಾಣಲಿಕ್ಕಾಗುವುದಿಲ್ಲ.

12199023a ಗುಣೈರ್ಯಸ್ತ್ವವರೈರ್ಯುಕ್ತಃ ಕಥಂ ವಿದ್ಯಾದ್ಗುಣಾನಿಮಾನ್|

12199023c ಅನುಮಾನಾದ್ಧಿ ಗಂತವ್ಯಂ ಗುಣೈರವಯವೈಃ ಸಹ||

ತುಚ್ಛಗುಣಗಳನ್ನು ಹೊಂದಿದವುಗಳಲ್ಲಿ ಆಸಕ್ತಿಯಾದವನಿಗೆ ಪರಮ ಶ್ರೇಷ್ಠ ಗುಣಗಳು ಹೇಗೆ ಅರ್ಥವಾಗುತ್ತವೆ? ಅಲ್ಲಲ್ಲಿ ಉತ್ತಮ ಗುಣಗಳು ಕಂಡುಬರುವುದರಿಂದ ಅವುಗಳಿಗೆ ಕಾರಣನಾದವನು ಇರಬೇಕೆಂದು ಅನುಮಾನದಿಂದಲೇ ತಿಳಿಯಬಹುದು.

12199024a ಸೂಕ್ಷ್ಮೇಣ ಮನಸಾ ವಿದ್ಮೋ ವಾಚಾ ವಕ್ತುಂ ನ ಶಕ್ನುಮಃ|

12199024c ಮನೋ ಹಿ ಮನಸಾ ಗ್ರಾಹ್ಯಂ ದರ್ಶನೇನ ಚ ದರ್ಶನಮ್||

ಸೂಕ್ಷ್ಮಮನಸ್ಸಿನಿಂದ ತಿಳಿಯಬಹುದಾದುದನ್ನು ಮಾತುಗಳಿಂದ ವರ್ಣಿಸಲು ಶಕ್ಯವಿಲ್ಲ. ಮನಸ್ಸಿನಿಂದಲೇ ಮನಸ್ಸನ್ನು ಗ್ರಹಿಸಬೇಕು. ಮತ್ತು ದರ್ಶನದಿಂದಲೇ ದರ್ಶನವನ್ನು ಕಾಣಬೇಕು.

12199025a ಜ್ಞಾನೇನ ನಿರ್ಮಲೀಕೃತ್ಯ ಬುದ್ಧಿಂ ಬುದ್ಧ್ಯಾ ತಥಾ ಮನಃ|

12199025c ಮನಸಾ ಚೇಂದ್ರಿಯಗ್ರಾಮಮನಂತಂ ಪ್ರತಿಪದ್ಯತೇ||

ಜ್ಞಾನದಿಂದ ಬುದ್ಧಿಯನ್ನು ನಿರ್ಮಲಗೊಳಿಸಿ, ಬುದ್ಧಿಯಿಂದ ಮನಸ್ಸನ್ನು ನಿರ್ಮಲಗೊಳಿಸಿ, ಮನಸ್ಸಿನಿಂದ ಇಂದ್ರಿಯಗ್ರಾಮಗಳನ್ನು ನಿರ್ಮಲಗೊಳಿಸಿದ ನಂತರ ಅನಂತನನ್ನು ಕಾಣುತ್ತೇವೆ.

12199026a ಬುದ್ಧಿಪ್ರಹೀಣೋ ಮನಸಾಸಮೃದ್ಧಸ್

ತಥಾ ನಿರಾಶೀರ್ಗುಣತಾಮುಪೈತಿ|

12199026c ಪರಂ ತ್ಯಜಂತೀಹ ವಿಲೋಭ್ಯಮಾನಾ

ಹುತಾಶನಂ ವಾಯುರಿವೇಂಧನಸ್ಥಮ್||

ಬುದ್ಧಿಪ್ರವೀಣನೂ ಮನೋಬಲಯುಕ್ತನೂ ಆದವನು ಸಮಸ್ತ ಬಯಕೆಗಳಿಗೂ ಅತೀತನಾದ ನಿರ್ಗುಣತ್ವವನ್ನು ಪಡೆದುಕೊಳ್ಳುತ್ತಾನೆ. ಇಂಧನದಲ್ಲಿರುವ ಅಗ್ನಿಯನ್ನು ಬೆಳಗಿಸಲು ಅಸಮರ್ಥನಾದ ವಾಯುವು ಕಟ್ಟಿಗೆಯನ್ನು ಬಿಟ್ಟುಹೋಗುವಂತೆ ಬುದ್ಧಿ-ಮನಸ್ಸುಗಳು ಸುದೃಢವಾಗಿಲ್ಲದವರು ಪರಮಾತ್ಮನನ್ನು ತಿಳಿಯಲು ಅಸಮರ್ಥರಾಗಿಯೇ ಶರೀರವನ್ನು ತ್ಯಜಿಸುತ್ತಾರೆ.

12199027a ಗುಣಾದಾನೇ ವಿಪ್ರಯೋಗೇ ಚ ತೇಷಾಂ

ಮನಃ ಸದಾ ಬುದ್ಧಿಪರಾವರಾಭ್ಯಾಮ್|

12199027c ಅನೇನೈವ ವಿಧಿನಾ ಸಂಪ್ರವೃತ್ತೋ

ಗುಣಾದಾನೇ[1] ಬ್ರಹ್ಮಶರೀರಮೇತಿ||

ಶಮ-ದಮಾದಿ ಗುಣಯುಕ್ತನಾಗಿ ವಿಷಯಸುಖಗಳಿಂದ ಇಂದ್ರಿಯಗಳನ್ನು ಹಿಂತೆಗೆದುಕೊಂಡವನ ಮನಸ್ಸು-ಬುದ್ಧಿಗಳು ಸದಾ ಪರಮಾತ್ಮನಲ್ಲಿ ನೆಲೆಸಿರುತ್ತದೆ. ಇದೇ ವಿಧಿಯಿಂದ ಪ್ರವೃತ್ತನಾದವನು ಸತ್ತ್ವ-ರಜೋ-ತಮಗುಣಗಳನ್ನು ಕಳೆದುಕೊಂಡು ಬ್ರಹ್ಮಶರೀರಿಯಾಗುತ್ತಾನೆ.

12199028a ಅವ್ಯಕ್ತಾತ್ಮಾ ಪುರುಷೋಽವ್ಯಕ್ತಕರ್ಮಾ

ಸೋಽವ್ಯಕ್ತತ್ವಂ ಗಚ್ಚತಿ ಹ್ಯಂತಕಾಲೇ|

12199028c ತೈರೇವಾಯಂ ಚೇಂದ್ರಿಯೈರ್ವರ್ಧಮಾನೈರ್

ಗ್ಲಾಯದ್ಭಿರ್ವಾ ವರ್ತತೇ ಕರ್ಮರೂಪಃ||

ಪುರುಷನು ಅವ್ಯಕ್ತಾತ್ಮನು. ಕರ್ಮಗಳು ವ್ಯಕ್ತವಾದವುಗಳು. ಅಂತ್ಯಕಾಲದಲ್ಲಿ ಅವನು ಅವ್ಯಕ್ತತ್ವವನ್ನೇ ಹೊಂದುತ್ತಾನೆ. ವೃದ್ಧಿ-ಕ್ಷಯಗಳನ್ನು ಹೊಂದುತ್ತಿರುವ ಇಂದ್ರಿಯಗಳೊಂದಿಗೆ ಕಾಮರೂಪಿಯಾದಾಗ ಅವನು ಸಂಸಾರಕ್ಕೆ ಮತ್ತೆ ಮತ್ತೆ ಹಿಂದಿರುಗುತ್ತಾನೆ.

12199029a ಸರ್ವೈರಯಂ ಚೇಂದ್ರಿಯೈಃ ಸಂಪ್ರಯುಕ್ತೋ

ದೇಹಃ ಪ್ರಾಪ್ತಃ ಪಂಚಭೂತಾಶ್ರಯಃ ಸ್ಯಾತ್|

12199029c ನಾಸಾಮರ್ಥ್ಯಾದ್ಗಚ್ಚತಿ ಕರ್ಮಣೇಹ

ಹೀನಸ್ತೇನ ಪರಮೇಣಾವ್ಯಯೇನ||

ಸರ್ವ ಇಂದ್ರಿಯಗಳಿಂದ ಕೂಡಿ ದೇಹವನ್ನು ಪಡೆದು ಪಂಚಭೂತಗಳನ್ನು ಆಶ್ರಯಿಸಿ ಕಾಮ್ಯಕರ್ಮಗಳಲ್ಲೇ ತೊಡಗಿರುವವನು ಪರಮ ಅವ್ಯಯದ ಕುರಿತು ಯೋಚಿಸದೇ ಸಾಕ್ಷಾತ್ಕಾರದಿಂದ ವಂಚಿತನಾಗಿರುತ್ತಾನೆ.

12199030a ಪೃಥ್ವ್ಯಾ ನರಃ ಪಶ್ಯತಿ ನಾಂತಮಸ್ಯಾ

ಹ್ಯಂತಶ್ಚಾಸ್ಯಾ ಭವಿತಾ ಚೇತಿ ವಿದ್ಧಿ|

12199030c ಪರಂ ನಯಂತೀಹ ವಿಲೋಭ್ಯಮಾನಂ

ಯಥಾ ಪ್ಲವಂ ವಾಯುರಿವಾರ್ಣವಸ್ಥಮ್||

ಮನುಷ್ಯನು ಭೂಮಿಯ ಕೊನೆಯನ್ನು ಕಾಣದೇ ಇದ್ದರೂ ಅದಕ್ಕೊಂದು ಕೊನೆಯು ಇದೆ ಎನ್ನುವುದನ್ನು ತಿಳಿದುಕೋ. ಸಮುದ್ರದಲ್ಲಿ ದಾರಿದಪ್ಪಿ ಹೋಗುತ್ತಿರುವ ನೌಕೆಯನ್ನು ಗಾಳಿಯು ಒಂದಲ್ಲಾ ಒಂದು ದಿನ ದಡಕ್ಕೆ ತಲುಪಿಸುವಂತೆ ಜ್ಞಾನವು ಸಂಸಾರಸಾಗರದಲ್ಲಿ ಅಲೆಯುತ್ತಿರುವವರನ್ನು ಒಂದಲ್ಲ ಒಂದು ದಿನ ಪಾರುಮಾಡುತ್ತದೆ.

12199031a ದಿವಾಕರೋ ಗುಣಮುಪಲಭ್ಯ ನಿರ್ಗುಣೋ

ಯಥಾ ಭವೇದ್ವ್ಯಪಗತರಶ್ಮಿಮಂಡಲಃ|

12199031c ತಥಾ ಹ್ಯಸೌ ಮುನಿರಿಹ ನಿರ್ವಿಶೇಷವಾನ್

ಸ ನಿರ್ಗುಣಂ ಪ್ರವಿಶತಿ ಬ್ರಹ್ಮ ಚಾವ್ಯಯಮ್||

ದಿವಾಕರನು ಗುಣಗಳನ್ನು ಪಡೆದುಕೊಂಡು ನಂತರ ತನ್ನ ರಶ್ಮಿಮಂಡಲವನ್ನು ಹಿಂತೆಗೆದುಕೊಂಡು ಹೇಗೆ ನಿರ್ಗುಣನಾಗುತ್ತಾನೋ ಹಾಗೆ ಮುನಿಯೂ ಕೂಡ ಗುಣವಿಶೇಷಗಳನ್ನು ತೊರೆದು ನಿರ್ಗುಣ ಅವ್ಯಯ ಬ್ರಹ್ಮನನ್ನು ಪ್ರವೇಶಿಸುತ್ತಾನೆ.

12199032a ಅನಾಗತಿಂ ಸುಕೃತಿಮತಾಂ ಪರಾಂ ಗತಿಂ

ಸ್ವಯಂಭುವಂ ಪ್ರಭವನಿಧಾನಮವ್ಯಯಮ್|

12199032c ಸನಾತನಂ ಯದಮೃತಮವ್ಯಯಂ ಪದಂ

ವಿಚಾರ್ಯ ತಂ ಶಮಮಮೃತತ್ವಮಶ್ನುತೇ||

ಎಲ್ಲಿಂದಲೂ ಬಂದಿರದ, ಪುಣ್ಯವಂತರಿಗೆ ಪರಮ ಗತಿಯಾದ, ಸ್ವಯಂಭು, ಸೃಷ್ಟಿ-ಲಯಕರ್ತ, ಅವ್ಯಯ, ಸನಾತನ, ಅಮೃತ, ಅವ್ಯಯಪದದ ಜ್ಞಾನವನ್ನು ಪಡೆದು ಮನುಷ್ಯನು ಪರಮಮೋಕ್ಷವನ್ನು ಹೊಂದುತ್ತಾನೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಮನುಬೃಹಸ್ಪತಿಸಂವಾದೇ ನವನವತ್ಯಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಮನುಬೃಹಸ್ಪತಿಸಂವಾದ ಎನ್ನುವ ನೂರಾತೊಂಭತ್ತೊಂಭತ್ತನೇ ಅಧ್ಯಾಯವು.

[1] ಗುಣಾಪಾಯೇ (ಭಾರತ ದರ್ಶನ/ಗೀತಾ ಪ್ರೆಸ್).

Comments are closed.