Shanti Parva: Chapter 171

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೧೭೧

ಮಂಕಿಗೀತಾ

ಧನಾದಿಗಳ ತೃಷ್ಣೆಯೇ ದುಃಖ ಮತ್ತು ತೃಷ್ಣತ್ಯಾಗವೇ ಸುಖ ಎಂದು ಪ್ರತಿಪಾದಿಸುವ ಮಂಕಿಗೀತಾ (೧-೫೪). ಜನಕನ ಉಕ್ತಿ ಮತ್ತು ರಾಜಾ ನಹುಷನ ಪ್ರಶ್ನೆಗಳಿಗೆ ಉತ್ತರ ರೂಪೀ ಬೋಧ್ಯಗೀತಾ (೫೫-೬೧).

12171001 ಯುಧಿಷ್ಠಿರ ಉವಾಚ|

12171001a ಈಹಮಾನಃ ಸಮಾರಂಭಾನ್ಯದಿ ನಾಸಾದಯೇದ್ಧನಮ್|

12171001c ಧನತೃಷ್ಣಾಭಿಭೂತಶ್ಚ ಕಿಂ ಕುರ್ವನ್ಸುಖಮಾಪ್ನುಯಾತ್||

ಯುಧಿಷ್ಠಿರನು ಹೇಳಿದನು: “ಧನದಾಹಿಯು ವಿವಿಧ ಉದ್ಯೋಗಗಳಿಂದಲೂ ಬಯಸಿದಷ್ಟು ಧನವನ್ನು ಪಡೆಯಲಾಗದಿದ್ದರೆ ಏನು ಮಾಡುವುದರಿಂದ ಅವನಿಗೆ ಸುಖವುಂಟಾಗುತ್ತದೆ?”

12171002 ಭೀಷ್ಮ ಉವಾಚ|

12171002a ಸರ್ವಸಾಮ್ಯಮನಾಯಾಸಃ ಸತ್ಯವಾಕ್ಯಂ ಚ ಭಾರತ|

12171002c ನಿರ್ವೇದಶ್ಚಾವಿವಿತ್ಸಾ ಚ ಯಸ್ಯ ಸ್ಯಾತ್ಸ ಸುಖೀ ನರಃ||

ಭೀಷ್ಮನು ಹೇಳಿದನು: “ಭಾರತ! ಸರ್ವರಲ್ಲಿಯೂ ಸಮಭಾವ, ಅನಾಯಾಸ, ಸತ್ಯವಾಕ್ಯ, ವೈರಾಗ್ಯ ಮತ್ತು ಕಾಮ್ಯಕರ್ಮಗಳಲ್ಲಿ ನಿರಾಸಕ್ತಿ – ಇವುಗಳಿರುವ ನರನೇ ಸುಖಿಯು.

12171003a ಏತಾನ್ಯೇವ ಪದಾನ್ಯಾಹುಃ ಪಂಚ ವೃದ್ಧಾಃ ಪ್ರಶಾಂತಯೇ|

12171003c ಏಷ ಸ್ವರ್ಗಶ್ಚ ಧರ್ಮಶ್ಚ ಸುಖಂ ಚಾನುತ್ತಮಂ ಸತಾಮ್[1]||

ವೃದ್ಧರು ಈ ಐದನ್ನೇ ಶಾಂತಿಸಾಧನಕ್ಕೆ ಹೆಜ್ಜೆಗಳೆಂದು ಹೇಳಿದ್ದಾರೆ. ಇದೇ ಸ್ವರ್ಗ, ಇದೇ ಧರ್ಮ ಮತ್ತು ಇದೇ ಸತ್ಪುರುಷರ ಉತ್ತಮ ಸುಖವೆಂದು ಹೇಳಿದ್ದಾರೆ.

12171004a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12171004c ನಿರ್ವೇದಾನ್ಮಂಕಿನಾ ಗೀತಂ ತನ್ನಿಬೋಧ ಯುಧಿಷ್ಠಿರ||

ಯುಧಿಷ್ಠಿರ! ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಭೋಗಮುಕ್ತ ಮುನಿ ಮಂಕಿಯ ಗೀತೆಯನ್ನು ಉದಾಹರಿಸುತ್ತಾರೆ. ಅದನ್ನು ಕೇಳು.

12171005a ಈಹಮಾನೋ ಧನಂ ಮಂಕಿರ್ಭಗ್ನೇಹಶ್ಚ ಪುನಃ ಪುನಃ|

12171005c ಕೇನ ಚಿದ್ಧನಶೇಷೇಣ ಕ್ರೀತವಾನ್ದಮ್ಯಗೋಯುಗಮ್||

ಧನಕ್ಕಾಗಿ ಮಂಕಿಯ ಅನೇಕ ಪ್ರಯತ್ನಗಳು ಪುನಃ ಪುನಃ ವ್ಯರ್ಥವಾಗುತ್ತಿದ್ದವು. ಉಳಿದಿದ್ದ ಸ್ವಲ್ಪವೇ ಧನದಿಂದ ಅವನು ಎರಡು ಹಸುವಿನ ಕರುಗಳನ್ನು ಕೊಂಡುಕೊಂಡನು.

12171006a ಸುಸಂಬದ್ಧೌ ತು ತೌ ದಮ್ಯೌ ದಮನಾಯಾಭಿನಿಃಸೃತೌ|

12171006c ಆಸೀನಮುಷ್ಟ್ರಂ ಮಧ್ಯೇನ ಸಹಸೈವಾಭ್ಯಧಾವತಾಮ್||

ಒಮ್ಮೆ ಅವನು ಆ ಎರಡು ಕರುಗಳನ್ನೂ ಜೋಡಿಯಾಗಿ ಕಟ್ಟಿ ನೇಗಿಲು ನಡೆಸುವುದನ್ನು ಕಲಿಸಲು ಕರೆದುಕೊಂಡು ಹೋದನು. ನಡುದಾರಿಯಲ್ಲಿ ಕುಳಿತಿದ್ದ ಒಂದು ಒಂಟೆಯನ್ನು ಮಧ್ಯದಲ್ಲಿ ಬಿಟ್ಟುಕೊಂಡು ಎರಡು ಹೋರಿಗಳೂ ಬಹಳ ಬೇಗ ಮುಂದೆ ಹೋದವು.

12171007a ತಯೋಃ ಸಂಪ್ರಾಪ್ತಯೋರುಷ್ಟ್ರಃ ಸ್ಕಂಧದೇಶಮಮರ್ಷಣಃ|

12171007c ಉತ್ಥಾಯೋತ್ಕ್ಷಿಪ್ಯ ತೌ ದಮ್ಯೌ ಪ್ರಸಸಾರ ಮಹಾಜವಃ||

ಆ ಎರಡು ಹೋರಿಗಳೂ ಒಂಟೆಯ ಹೆಗಲನ್ನು ಸಮೀಪಿಸುತ್ತಲೇ ಕೋಪದಿಂದ ಒಂಟೆಯು ಮೇಲೆದ್ದಿತು. ತನ್ನ ಕುತ್ತಿಗೆಯ ಮೇಲೆ ಬಂದು ಕುಳಿತಿದ್ದ ಆ ನೊಗವನ್ನು ಹೋರಿಗಳ ಸಹಿತ ಮೇಲಕ್ಕೆತ್ತಿ ಒಂಟೆಯು ವೇಗದಿಂದ ಓಡ ತೊಡಗಿತು.

12171008a ಹ್ರಿಯಮಾಣೌ ತು ತೌ ದಮ್ಯೌ ತೇನೋಷ್ಟ್ರೇಣ ಪ್ರಮಾಥಿನಾ|

12171008c ಮ್ರಿಯಮಾಣೌ ಚ ಸಂಪ್ರೇಕ್ಷ್ಯ ಮಂಕಿಸ್ತತ್ರಾಬ್ರವೀದಿದಮ್||

ಬಲಿಷ್ಠ ಒಂಟೆಯು ತನ್ನ ಎರಡೂ ಹೋರಿಗಳನ್ನು ಎಳೆದುಕೊಂಡು ಹೋಗುತ್ತಿರುವುದನ್ನು ನೋಡಿ ಸ್ವಲ್ಪ ಸಮಯದಲ್ಲಿ ತನ್ನ ಹೋರಿಗಳು ಸಾಯುವವು ಎಂದು ನಿಶ್ಚಯಿಸಿ ಮಂಕಿಯು ಹೇಳಿದನು:

12171009a ನ ಚೈವಾವಿಹಿತಂ ಶಕ್ಯಂ ದಕ್ಷೇಣಾಪೀಹಿತುಂ ಧನಮ್|

12171009c ಯುಕ್ತೇನ ಶ್ರದ್ಧಯಾ ಸಮ್ಯಗೀಹಾಂ ಸಮನುತಿಷ್ಠತಾ||

“ಮನುಷ್ಯನು ಎಷ್ಟೇ ದಕ್ಷನಾಗಿದ್ದರೂ ಮತ್ತು ಎಷ್ಟೇ ಶ್ರದ್ಧೆಯಿಂದ ಧನಸಂಪಾದನೆಗೆ ಪ್ರಯತ್ನಿಸಿದರೂ ದೈವವು ನೀಡದ ಧನವನ್ನು ಅವನು ಸಂಪಾದಿಸಲಾರನು.

12171010a ಕೃತಸ್ಯ ಪೂರ್ವಂ ಚಾನರ್ಥೈರ್ಯುಕ್ತಸ್ಯಾಪ್ಯನುತಿಷ್ಠತಃ|

12171010c ಇಮಂ ಪಶ್ಯತ ಸಂಗತ್ಯಾ ಮಮ ದೈವಮುಪಪ್ಲವಮ್||

ಹಿಂದೆ ನಾನು ಅರ್ಥಸಂಪಾದನೆಗಾಗಿ ಮಾಡಿದ ಪ್ರಯತ್ನಗಳೆಲ್ಲವೂ ಅನರ್ಥದಲ್ಲಿಯೇ ಕೊನೆಗೊಂಡವು. ಆದರೂ ನಿರಾಶನಾಗದೇ ಪ್ರಯತ್ನವನ್ನು ಮುಂದುವರಿಸಿ ಧನಸಂಪಾದನೆಗೆಂದು ತಂದ ಈ ಹೋರಿಗಳ ಸಹವಾಸದಿಂದ ನನಗಾದ ದೈವದ ಉಪದ್ರವವನ್ನಾದರೂ ನೋಡಿ!

12171011a ಉದ್ಯಮ್ಯೋದ್ಯಮ್ಯ ಮೇ ದಮ್ಯೌ ವಿಷಮೇಣೇವ ಗಚ್ಚತಿ|

12171011c ಉತ್ಕ್ಷಿಪ್ಯ ಕಾಕತಾಲೀಯಮುನ್ಮಾಥೇನೇವ ಜಂಬುಕಃ||

12171012a ಮಣೀ ವೋಷ್ಟ್ರಸ್ಯ ಲಂಬೇತೇ ಪ್ರಿಯೌ ವತ್ಸತರೌ ಮಮ|

12171012c ಶುದ್ಧಂ ಹಿ ದೈವಮೇವೇದಮತೋ ನೈವಾಸ್ತಿ ಪೌರುಷಮ್||

ಉದ್ಯಮೆಗೆ ಉಪಯೋಗಿಸಬೇಕಾದ ಹೋರಿಗಳನ್ನು ಒಂಟೆಯು ಮೇಲೆತ್ತಿಕೊಂಡು ಹಳ್ಳ-ತಿಟ್ಟುಗಳಿರುವ ಮಾರ್ಗದಲ್ಲಿ ಹೋಗುತ್ತಿದೆ. ಕಾಕತಾಳೀಯ ನ್ಯಾಯ[2]ದಂತೆ ಹಾದಿಯಲ್ಲಿದ್ದ ಒಂಟೆಯ ಮೇಲೆಯೇ ನನ್ನ ಹೋರಿಗಳು ಹೋದವು ಮತ್ತು ಒಡನೆಯೇ ಒಂಟೆಯು ಮೇಲೆದ್ದು ನೊಗದೊಡನೆ ಎರಡು ಹೋರಿಗಳನ್ನೂ ಎತ್ತಿಕೊಂಡು ಮನಬಂದಂತೆ ಓಡುತ್ತಿದೆ. ನನ್ನ ಪ್ರಿಯ ಹೋರಿಗಳು ಒಂಟೆಯ ಎರಡು ಕಿವಿಗಳಲ್ಲಿರುವ ಮಣಿಗಳಂತೆ ನೇತಾಡುತ್ತಿವೆ. ನಿಶ್ಚಯವಾಗಿಯೂ ಇದು ದೈವಲೀಲೆಯು. ಆದುದರಿಂದ ಹಠದಿಂದ ಮಾಡುವ ಪುರುಷಪ್ರಯತ್ನದಲ್ಲಿ ಯಾವ ಪ್ರಯೋಜನವೂ ಇಲ್ಲ.

12171013a ಯದಿ ವಾಪ್ಯುಪಪದ್ಯೇತ ಪೌರುಷಂ ನಾಮ ಕರ್ಹಿ ಚಿತ್|

12171013c ಅನ್ವಿಷ್ಯಮಾಣಂ ತದಪಿ ದೈವಮೇವಾವತಿಷ್ಠತೇ||

ಯಾವಾಗಲಾದರೊಮ್ಮೆ ಪುರುಷಪ್ರಯತ್ನವು ಸಫಲವಾಯಿತೆಂದು ಕಂಡುಬಂದರೂ ಫಲಿತಾಂಶದ ಕಾರಣವನ್ನು ಸಂಪೂರ್ಣವಾಗಿ ವಿವೇಚಿದರೆ ಅಲ್ಲಿಯೂ ದೈವದ ಸಹಯೋಗವಿದೆಯೆಂದು ನಮಗೆ ಸ್ಪಷ್ಟವಾಗಿ ಕಾಣುತ್ತದೆ.

12171014a ತಸ್ಮಾನ್ನಿರ್ವೇದ ಏವೇಹ ಗಂತವ್ಯಃ ಸುಖಮೀಪ್ಸತಾ|

12171014c ಸುಖಂ ಸ್ವಪಿತಿ ನಿರ್ವಿಣ್ಣೋ ನಿರಾಶಶ್ಚಾರ್ಥಸಾಧನೇ||

ಆದುದರಿಂದ ಸುಖವನ್ನು ಬಯಸುವವನು ಧನಾದಿಗಳಿಂದ ವಿರಕ್ತಿಯನ್ನು ಹೊಂದಬೇಕು. ಅರ್ಥಸಾಧನೆಯ ಆಸೆಗಳಿಲ್ಲದೇ ನಿರ್ವಿಣ್ಣನಾದವನು ಸುಖವಾಗಿ ನಿದ್ರಿಸುತ್ತಾನೆ.

12171015a ಅಹೋ ಸಮ್ಯಕ್ಶುಕೇನೋಕ್ತಂ ಸರ್ವತಃ ಪರಿಮುಚ್ಯತಾ|

12171015c ಪ್ರತಿಷ್ಠತಾ ಮಹಾರಣ್ಯಂ ಜನಕಸ್ಯ ನಿವೇಶನಾತ್||

ಅಹೋ! ಶುಕಮುನಿಯು ಜನಕನ ನಿವೇಶನದಿಂದ[3] ಮಹಾರಣ್ಯಕ್ಕೆ ಹೊರಡುವಾಗ ಸರ್ವಪ್ರಕಾರದಲ್ಲಿಯೂ ಬಂಧನಮುಕ್ತನಾಗಿ ಎಂಥಹ ಉತ್ತಮ ಮಾತನ್ನಾಡಿದ್ದನು!

12171016a ಯಃ ಕಾಮಾನ್ಪ್ರಾಪ್ನುಯಾತ್ಸರ್ವಾನ್ಯಶ್ಚೈನಾನ್ಕೇವಲಾಂಸ್ತ್ಯಜೇತ್|

12171016c ಪ್ರಾಪಣಾತ್ಸರ್ವಕಾಮಾನಾಂ ಪರಿತ್ಯಾಗೋ ವಿಶಿಷ್ಯತೇ||

“ಸರ್ವಕಾಮನೆಗಳನ್ನೂ ಪೂರೈಸಿಕೊಳ್ಳುವುದು ಮತ್ತು ಎಲ್ಲವನ್ನೂ ಕೇವಲ ತ್ಯಾಗಮಾಡುವುದು – ಇವೆರಡರಲ್ಲಿ ಸರ್ವಕಾಮನೆಗಳನ್ನು ಪಡೆದುಕೊಳ್ಳುವುದಕ್ಕಿಂತ ಅವುಗಳನ್ನು ತ್ಯಜಿಸುವುದೇ ಶ್ರೇಷ್ಠವು.

12171017a ನಾಂತಂ ಸರ್ವವಿವಿತ್ಸಾನಾಂ ಗತಪೂರ್ವೋಽಸ್ತಿ ಕಶ್ಚನ|

12171017c ಶರೀರೇ ಜೀವಿತೇ ಚೈವ ತೃಷ್ಣಾ ಮಂದಸ್ಯ ವರ್ಧತೇ||

ಸಕಲವಿಧದ ಕಾಮನೆಗಳನ್ನೂ ಪೂರೈಸಿಕೊಳ್ಳುವುದರ ಅಂತ್ಯವನ್ನು ತಲುಪಿದವರ್ಯಾರೂ ಇಲ್ಲ. ಶರೀರ ಮತ್ತು ಜೀವನದಲ್ಲಿ ಮೂರ್ಖನ ತೃಷ್ಣೆಯು ಹೆಚ್ಚಾಗುತ್ತಲೇ ಇರುತ್ತದೆ.”

12171018a ನಿವರ್ತಸ್ವ ವಿವಿತ್ಸಾಭ್ಯಃ ಶಾಮ್ಯ ನಿರ್ವಿದ್ಯ ಮಾಮಕ[4]|

12171018c ಅಸಕೃಚ್ಚಾಸಿ ನಿಕೃತೋ ನ ಚ ನಿರ್ವಿದ್ಯಸೇ ತನೋ||

ಮಾಮಕ! ಸಕಲ ಕಾಮನೆಗಳಿಂದಲೂ ವಿಮುಕ್ತನಾಗು. ವೈರಾಗ್ಯದಿಂದ ಶಾಂತಿಯನ್ನು ಪಡೆದುಕೋ. ಧನಸಂಗ್ರಹಕ್ಕೆ ಪ್ರಯತ್ನಪಟ್ಟು ಹಲವು ಬಾರಿ ವಂಚಿತನಾಗಿರುವೆ. ಹೀಗಿದ್ದರೂ ನಿನಗೆ ವೈರಾಗ್ಯವುಂಟಾಗಿಲ್ಲ. ಧನಸಂಗ್ರಹದ ಪ್ರಯತ್ನವನ್ನು ಮುಂದುವರೆಸುತ್ತಲೇ ಇದ್ದೀಯೆ!

12171019a ಯದಿ ನಾಹಂ ವಿನಾಶ್ಯಸ್ತೇ ಯದ್ಯೇವಂ ರಮಸೇ ಮಯಾ|

12171019c ಮಾ ಮಾಂ ಯೋಜಯ ಲೋಭೇನ ವೃಥಾ ತ್ವಂ ವಿತ್ತಕಾಮುಕ||

ವಿತ್ತಕಾಮುಕ ಮನಸ್ಸೇ! ನನ್ನನ್ನು ನಾಶಪಡಿಸುವ ಅಭಿಲಾಷೆಯು ಇಲ್ಲದಿದ್ದರೆ ಮತ್ತು ನನ್ನೊಡನೆ ಆನಂದದಿಂದಿರಲು ಇಚ್ಛಿಸಿದರೆ ನನ್ನನ್ನು ವೃಥಾ ಲೋಭದಲ್ಲಿ ತೊಡಗಿಸಬೇಡ.

12171020a ಸಂಚಿತಂ ಸಂಚಿತಂ ದ್ರವ್ಯಂ ನಷ್ಟಂ ತವ ಪುನಃ ಪುನಃ|

12171020c ಕದಾ ವಿಮೋಕ್ಷ್ಯಸೇ ಮೂಢ ಧನೇಹಾಂ ಧನಕಾಮುಕ||

ಧನಕಾಮುಕನೇ! ಧನವನ್ನು ಸಂಚಯಿಸುತ್ತಲೇ ಇರುವೆ. ಸಂಚಯಿಸಿದಂತೆ ಧನವು ಪುನಃ ಪುನಃ ನಷ್ಟವಾಗುತ್ತಲೇ ಇದೆ. ಓ ಮೂಢ ಮನಸ್ಸೇ! ಎಂದು ನೀನು ಈ ಧನದ ಆಸೆಯಿಂದ ಮುಕ್ತನಾಗುತ್ತೀಯೆ?

12171021a ಅಹೋ ನು ಮಮ ಬಾಲಿಶ್ಯಂ ಯೋಽಹಂ ಕ್ರೀಡನಕಸ್ತವ|

12171021c ಕಿಂ ನೈವ ಜಾತು ಪುರುಷಃ ಪರೇಷಾಂ ಪ್ರೇಷ್ಯತಾಮಿಯಾತ್||

ಅಯ್ಯೋ! ನನ್ನದು ಎಂಥಹ ಮೂರ್ಖತನ! ಮನಸ್ಸೇ! ನೀನು ನನ್ನನ್ನು ಆಟದ ಬೊಂಬೆಯನ್ನಾಗಿ ಮಾಡಿಕೊಂಡು ತಕ-ತಕನೆ ಕುಣಿಸುತ್ತಿರುವೆ. ಇಲ್ಲವಾದರೆ ವಿವೇಕಿ ಪುರುಷನು ಯಾವಾಗಲಾದರೂ ಇತರರಿಗೆ ದಾಸನಾಗುತ್ತಾನೆಯೇ?

12171022a ನ ಪೂರ್ವೇ ನಾಪರೇ ಜಾತು ಕಾಮಾನಾಮಂತಮಾಪ್ನುವನ್|

12171022c ತ್ಯಕ್ತ್ವಾ ಸರ್ವಸಮಾರಂಭಾನ್ ಪ್ರತಿಬುದ್ಧೋಽಸ್ಮಿ ಜಾಗೃಮಿ||

ಹಿಂದಾಗಲೀ ಈಗಾಗಲೀ ಯಾರೂ ಯಾವಾಗಲೂ ಕಾಮನೆಗಳ ಕೊನೆಯೆಂಬುದನ್ನು ಕಂಡಿದ್ದೇ ಇಲ್ಲ. ಇದೂವರೆಗೂ ಯಾರೂ ಕಾಮನೆಗಳಿಂದ ಸಂಪೂರ್ಣ ತೃಪ್ತಿಯನ್ನು ಹೊಂದಿಲ್ಲ. ಕಾಮನೆಗಳನ್ನು ಉಪಭೋಗಿಸಿದರೆ ಇನ್ನೂ ಉಪಭೋಗಿಸಬೇಕು ಎಂಬ ಆಸೆಯು ಹೆಚ್ಚುತ್ತಲೇ ಇರುತ್ತದೆ. ಆದುದರಿಂದ ನಾನು ಸರ್ವ ವ್ಯವಹಾರಗಳನ್ನೂ ಪರಿತ್ಯಜಿಸಿ ಎಚ್ಚರಗೊಂಡಿದ್ದೇನೆ. ಪುನಃ ಆಸೆಯು ತಲೆದೋರದಂತೆ ಜಾಗರೂಕನಾಗಿದ್ದೇನೆ.

12171023a ನೂನಂ ತೇ ಹೃದಯಂ ಕಾಮ ವಜ್ರಸಾರಮಯಂ ದೃಢಮ್|

12171023c ಯದನರ್ಥಶತಾವಿಷ್ಟಂ ಶತಧಾ ನ ವಿದೀರ್ಯತೇ||

ಕಾಮವೇ! ನಿನ್ನ ಹೃದಯವು ವಜ್ರಸಾರಮಯವಾಗಿ ದೃಢವಾಗಿದೆಯಲ್ಲವೇ? ಅದಕ್ಕಾಗಿಯೇ ನೂರಾರು ಅನರ್ಥಗಳನ್ನು ಎದುರಿಸಿದರೂ ಆ ನಿನ್ನ ಹೃದಯವು ಒಡೆದುಹೋಗುತ್ತಿಲ್ಲ.

12171024a ತ್ಯಜಾಮಿ[5] ಕಾಮ ತ್ವಾಂ ಚೈವ ಯಚ್ಚ ಕಿಂ ಚಿತ್ ಪ್ರಿಯಂ ತವ|

12171024c ತವಾಹಂ ಸುಖಮನ್ವಿಚ್ಚನ್ನಾತ್ಮನ್ಯುಪಲಭೇ ಸುಖಮ್||

ಕಾಮವೇ! ನಾನು ನಿನ್ನನ್ನು ತ್ಯಜಿಸುತ್ತೇನೆ. ನಿನಗೆ ಪ್ರಿಯವಾದುದನ್ನೂ ತ್ಯಜಿಸುತ್ತೇನೆ. ಯಾವಾಗಲೂ ನಿನಗೆ ಪ್ರಿಯವನ್ನುಂಟುಮಾಡಲು ಪ್ರಯತ್ನಿಸುತ್ತಿದ್ದೆ. ಆದರೆ ನನಗೆ ಮಾತ್ರ ಎಂದೂ ಸುಖಾನುಭವವೇ ಆಗಿಲ್ಲ.

12171025a ಕಾಮ ಜಾನಾಮಿ ತೇ ಮೂಲಂ ಸಂಕಲ್ಪಾತ್ಕಿಲ ಜಾಯಸೇ|

12171025c ನ ತ್ವಾಂ ಸಂಕಲ್ಪಯಿಷ್ಯಾಮಿ ಸಮೂಲೋ ನ ಭವಿಷ್ಯಸಿ||

ಕಾಮವೇ! ನಾನು ನಿನ್ನನ್ನು ಅರಿತುಕೊಂಡಿದ್ದೇನೆ. ನೀನು ಸಂಕಲ್ಪದಿಂದ ಹುಟ್ಟುತ್ತೀಯಲ್ಲವೇ? ನಾನಿನ್ನು ನಿನ್ನ ವಿಷಯದಲ್ಲಿ ಸಂಕಲ್ಪವನ್ನೇ ಮಾಡುವುದಿಲ್ಲ. ಅದರಿಂದ ನೀನು ಸಮೂಲವಾಗಿ ನಾಶಹೊಂದುತ್ತೀಯೆ.

12171026a ಈಹಾ ಧನಸ್ಯ ನ ಸುಖಾ ಲಬ್ಧ್ವಾ ಚಿಂತಾ ಚ ಭೂಯಸೀ|

12171026c ಲಬ್ಧನಾಶೋ ಯಥಾ ಮೃತ್ಯುರ್ಲಬ್ಧಂ ಭವತಿ ವಾ ನ ವಾ||

ಧನವನ್ನು ಬಯಸುವುದು ಅಥವಾ ಸಂಗ್ರಹಿಸುವುದು ಸುಖಕರವಲ್ಲ. ಧನವನ್ನೂ ಪಡೆದರೂ ಮತ್ತೆ ಚಿಂತೆಯಾಗುತ್ತಿರುತ್ತದೆ. ಸಂಗ್ರಹಿಸಿದ ಧನವು ನಾಶವಾದರೆ ಮೃತ್ಯುವನ್ನು ಹೊಂದಿದಷ್ಟೇ ಸಂಕಟವಾಗುತ್ತದೆ. ಪ್ರಯತ್ನಿಸಿದರೂ ಧನವು ದೊರಕಬಹುದು ಅಥವಾ ದೊರಕದೆಯೂ ಇರಬಹುದು.

12171027a ಪರೇತ್ಯ ಯೋ ನ ಲಭತೇ[6] ತತೋ ದುಃಖತರಂ ನು ಕಿಮ್|

12171027c ನ ಚ ತುಷ್ಯತಿ ಲಬ್ಧೇನ ಭೂಯ ಏವ ಚ ಮಾರ್ಗತಿ||

ಶರೀರವನ್ನು ತ್ಯಜಿಸಿದರೂ ಧನವು ಲಭಿಸಲಾರದೆಂದರೆ ಅದಕ್ಕಿಂತಲೂ ದುಃಖತರವಾದುದು ಯಾವುದಿದೆ? ದೊರಕಿದುದಷ್ಟರಲ್ಲೇ ಮನಸ್ಸು ತೃಪ್ತಿಯಾಗುವುದಿಲ್ಲ. ಅದನ್ನು ಇನ್ನೂ ಹೆಚ್ಚಿಸುವ ಮಾರ್ಗವನ್ನು ಹುಡುಕುತ್ತಲೇ ಇರುತ್ತದೆ.

12171028a ಅನುತರ್ಷುಲ ಏವಾರ್ಥಃ ಸ್ವಾದು ಗಾಂಗಮಿವೋದಕಮ್|

12171028c ಮದ್ವಿಲಾಪನಮೇತತ್ತು ಪ್ರತಿಬುದ್ಧೋಽಸ್ಮಿ ಸಂತ್ಯಜ||

ರುಚಿಯಾದ ಗಂಗಾಜಲದಂತೆ ಧನವು ಧನದ ತೃಷ್ಣೆಯನ್ನು ನಿಜವಾಗಿಯೂ ಹೆಚ್ಚಿಸುತ್ತದೆ. ಅದು ನನ್ನ ವಿನಾಶಕ್ಕೇ ಕಾರಣ ಎನ್ನುವುದನ್ನು ನಾನು ತಿಳಿದುಕೊಂಡಿದ್ದೇನೆ. ಆದುದರಿಂದ ನನ್ನನ್ನು ತ್ಯಜಿಸಿ ಹೊರಟುಹೋಗು.

12171029a ಯ ಇಮಂ ಮಾಮಕಂ ದೇಹಂ ಭೂತಗ್ರಾಮಃ ಸಮಾಶ್ರಿತಃ|

12171029c ಸ ಯಾತ್ವಿತೋ ಯಥಾಕಾಮಂ ವಸತಾಂ ವಾ ಯಥಾಸುಖಮ್||

ನನ್ನ ದೇಹದಲ್ಲಿರುವ ಈ ಭೂತಗ್ರಾಮಗಳು ಬಯಸಿದರೆ ಹೊರಟುಹೋಗಲಿ ಅಥವಾ ಇಲ್ಲಿಯೇ ಇರಲಿ. ನನಗಂತೂ ಅವುಗಳಲ್ಲಿ ಆಸೆ-ಆಸಕ್ತಿಗಳಿಲ್ಲ.

12171030a ನ ಯುಷ್ಮಾಸ್ವಿಹ ಮೇ ಪ್ರೀತಿಃ ಕಾಮಲೋಭಾನುಸಾರಿಷು|

12171030c ತಸ್ಮಾದುತ್ಸೃಜ್ಯ ಸರ್ವಾನ್ವಃ ಸತ್ಯಮೇವಾಶ್ರಯಾಮ್ಯಹಮ್[7]||

ಕಾಮ-ಲೋಭಗಳನ್ನೇ ಅನುಸರಿಸಿ ಹೋಗುವ ನಿಮ್ಮ ಮೇಲೂ ನನಗೆ ಪ್ರೀತಿಯಿಲ್ಲ. ಆದುದರಿಂದ ನಿಮ್ಮೆಲ್ಲರನ್ನೂ ತ್ಯಜಿಸಿ ನಾನು ಸತ್ಯವನ್ನೇ ಆಶ್ರಯಿಸುತ್ತೇನೆ.

12171031a ಸರ್ವಭೂತಾನ್ಯಹಂ ದೇಹೇ ಪಶ್ಯನ್ಮನಸಿ ಚಾತ್ಮನಃ|

12171031c ಯೋಗೇ ಬುದ್ಧಿಂ ಶ್ರುತೇ ಸತ್ತ್ವಂ ಮನೋ ಬ್ರಹ್ಮಣಿ ಧಾರಯನ್||

12171032a ವಿಹರಿಷ್ಯಾಮ್ಯನಾಸಕ್ತಃ ಸುಖೀ ಲೋಕಾನ್ನಿರಾಮಯಃ|

12171032c ಯಥಾ ಮಾ ತ್ವಂ ಪುನರ್ನೈವಂ ದುಃಖೇಷು ಪ್ರಣಿಧಾಸ್ಯಸಿ||

ನಾನು ನನ್ನ ದೇಹದಲ್ಲಿ ಮನಸ್ಸಿನೊಳಗೇ ಸಂಪೂರ್ಣ ಭೂತಗಳನ್ನು ಕಾಣುತ್ತಾ ಬುದ್ಧಿಯನ್ನು ಯೋಗದಲ್ಲಿ, ಏಕಾಗ್ರಚಿತ್ತವನ್ನು ಶ್ರವಣ-ಮನನ ಮೊದಲಾದ ಸಾಧನಗಳಲ್ಲಿ ಮತ್ತು ಮನಸ್ಸನ್ನು ಪರಮಾತ್ಮನಲ್ಲಿ ಇರಿಸಿ ರೋಗ-ಶೋಕರಹಿತನಾಗಿ ಸುಖಿಯಾಗಿ ಸಂಪೂರ್ಣ ಲೋಕಗಳಲ್ಲಿ ಅನಾಸಕ್ತ ಭಾವದಿಂದ ಸಂಚರಿಸುತ್ತೇನೆ. ಹೀಗೆ ಮಾಡುವುದರಿಂದ ನೀನು ನನ್ನನ್ನು ಈ ರೀತಿಯಲ್ಲಿ ಪುನಃ ದುಃಖಗಳಲ್ಲಿ ಮುಳುಗಿಸಲಾರೆ.

12171033a ತ್ವಯಾ ಹಿ ಮೇ ಪ್ರಣುನ್ನಸ್ಯ ಗತಿರನ್ಯಾ ನ ವಿದ್ಯತೇ|

12171033c ತೃಷ್ಣಾಶೋಕಶ್ರಮಾಣಾಂ ಹಿ ತ್ವಂ ಕಾಮ ಪ್ರಭವಃ ಸದಾ||

ಕಾಮವೇ! ತೃಷ್ಣೆ, ಶೋಕ ಮತ್ತು ಪರಿಶ್ರಮಗಳಿಗೆ ನೀನು ಉತ್ಪತ್ತಿ ಸ್ಥಾನವಾಗಿರುವೆ. ಎಲ್ಲಿಯವರೆಗೆ ನೀನು ನನ್ನನ್ನು ಪ್ರೇರೇಪಿಸಿ ಅಲ್ಲಲ್ಲಿ ಎಳೆದುಕೊಂಡು ಹೋಗುತ್ತಿರುತ್ತೀಯೋ ಅಲ್ಲಿಯವರೆಗೆ ನನಗೆ ಬೇರೆ ಯಾವ ಗತಿಯೂ ಇಲ್ಲ.

12171034a ಧನನಾಶೋಽಧಿಕಂ ದುಃಖಂ ಮನ್ಯೇ ಸರ್ವಮಹತ್ತರಮ್|

12171034c ಜ್ಞಾತಯೋ ಹ್ಯವಮನ್ಯಂತೇ ಮಿತ್ರಾಣಿ ಚ ಧನಚ್ಯುತಮ್[8]||

ಧನನಾಶದಿಂದಾಗುವ ದುಃಖವು ಎಲ್ಲಕ್ಕಿಂತಲೂ ಹೆಚ್ಚಿನದೆಂದು ನಾನು ತಿಳಿಯುತ್ತೇನೆ. ಏಕೆಂದರೆ ಧನದಿಂದ ಚ್ಯುತನಾದವನನ್ನು ಜ್ಞಾತಿಬಾಂಧವರು ಮತ್ತು ಮಿತ್ರರು ಅಪಮಾನಿಸುತ್ತಾರೆ.

12171035a ಅವಜ್ಞಾನಸಹಸ್ರೈಸ್ತು ದೋಷಾಃ ಕಷ್ಟತರಾಧನೇ|

12171035c ಧನೇ ಸುಖಕಲಾ ಯಾ ಚ ಸಾಪಿ ದುಃಖೈರ್ವಿಧೀಯತೇ||

ದರಿದ್ರನಿಗೆ ಸಹಸ್ರಾರು ತಿರಸ್ಕಾರಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಆದುದರಿಂದ ನಿರ್ಧನನಾಗಿರುವುದು ಬಹಳ ಕಷ್ಟಕರ ದೋಷವು. ಧನದಿಂದ ಯಾವ ಸುಖದ ಲೇಶವು ದೊರೆಯುತ್ತದೆಯೋ ಅದೂ ಕೂಡ ದುಃಖದಿಂದಲೇ ದೊರೆಯುತ್ತದೆ.

12171036a ಧನಮಸ್ಯೇತಿ ಪುರುಷಂ ಪುರಾ ನಿಘ್ನಂತಿ ದಸ್ಯವಃ|

12171036c ಕ್ಲಿಶ್ಯಂತಿ ವಿವಿಧೈರ್ದಂಡೈರ್ನಿತ್ಯಮುದ್ವೇಜಯಂತಿ ಚ||

ಧನವಿರುವುದೆಂದು ಮೊದಲೇ ತಿಳಿದುಕೊಂಡು ದಸ್ಯುಗಳು ಪುರುಷನನ್ನು ಕೊಲ್ಲುತ್ತಾರೆ. ವಿವಿಧ ದಂಡಗಳಿಂದ ಪೀಡಿಸಿ ಅವನನ್ನು ನಿತ್ಯವೂ ಉದ್ವೇಗಗೊಳಿಸುತ್ತಿರುತ್ತಾರೆ.

12171037a ಮಂದಲೋಲುಪತಾ[9] ದುಃಖಮಿತಿ ಬುದ್ಧಂ ಚಿರಾನ್ಮಯಾ|

12171037c ಯದ್ಯದಾಲಂಬಸೇ ಕಾಮ ತತ್ತದೇವಾನುರುಧ್ಯಸೇ||

ಮೂರ್ಖ ಧನದಾಸೆಯು ದುಃಖಕ್ಕೆ ಕಾರಣವು ಎಂದು ನನಗೆ ತಡವಾಗಿ ತಿಳಿಯಿತು. ನೀನು ಯಾವುದನ್ನು ಆಶ್ರಯಿಸಿರುವೆಯೋ ಅವುಗಳನ್ನೇ ಅನುಸರಿಸುತ್ತೀಯೆ ಮತ್ತು ಅವುಗಳನ್ನು ಪಡೆದುಕೊಳ್ಳಲು ನನ್ನನ್ನು ಪ್ರೇರೇಪಿಸುತ್ತೀಯೆ.

12171038a ಅತತ್ತ್ವಜ್ಞೋಽಸಿ ಬಾಲಶ್ಚ ದುಸ್ತೋಷೋಽಪೂರಣೋಽನಲಃ|

12171038c ನೈವ ತ್ವಂ ವೇತ್ಥ ಸುಲಭಂ ನೈವ ತ್ವಂ ವೇತ್ಥ ದುರ್ಲಭಮ್||

ಕಾಮವೇ! ನೀನು ತತ್ತ್ವಜ್ಞನಲ್ಲ. ಬಾಲಬುದ್ಧಿಯಾಗಿರುವೆ. ನಿನ್ನನ್ನು ತೃಪ್ತಿಗೊಳಿಸುವುದು ದುಷ್ಕರವಾದುದು. ಅಗ್ನಿಯಂತೆ ನಿನ್ನ ಹೊಟ್ಟೆಯನ್ನು ತುಂಬಿಸಲು ಸಾಧ್ಯವಿಲ್ಲ. ಯಾವುದನ್ನು ಪಡೆದುಕೊಳ್ಳುವುದು ಸುಲಭ ಮತ್ತು ಯಾವುದು ಕಷ್ಟ ಎನ್ನುವುದು ನಿನಗೆ ತಿಳಿದಿಲ್ಲ. ಸುಲಭವಾದವುಗಳನ್ನೂ ಬಯಸುತ್ತೀಯೆ ಮತ್ತು ದುರ್ಲಭವಾದುದನ್ನೂ ಬಯಸುತ್ತೀಯೆ. ದೊರೆಯದ ವಸ್ತುವಾದರೂ ಮಹಾಕಷ್ಟವನ್ನು ಪಟ್ಟಾದರೂ ತಂದೊಪ್ಪಿಸುವಂತೆ ಪ್ರೇರೇಪಿಸುತ್ತೀಯೆ.

12171039a ಪಾತಾಲಮಿವ ದುಷ್ಪೂರೋ ಮಾಂ ದುಃಖೈರ್ಯೋಕ್ತುಮಿಚ್ಚಸಿ|

12171039c ನಾಹಮದ್ಯ ಸಮಾವೇಷ್ಟುಂ ಶಕ್ಯಃ ಕಾಮ ಪುನಸ್ತ್ವಯಾ||

ತುಂಬಲಾರದ ಪಾತಾಳದಂತೆ ನಿನ್ನ ಆಸೆಗಳನ್ನು ಪೂರೈಸುವುದು ದುಸ್ಸಾಧ್ಯವು. ಪುನಃ ಪುನಃ ನನ್ನನ್ನು ದುಃಖಭಾಗಿಯನ್ನಾಗಿ ಮಾಡುತ್ತೀಯೆ. ಕಾಮವೇ! ಇಂದು ನನ್ನನ್ನು ಪುನಃ ಸೇರಿಕೊಳ್ಳಲು ನಿನಗೆ ಸಾಧ್ಯವಾಗುವುದಿಲ್ಲ.

12171040a ನಿರ್ವೇದಮಹಮಾಸಾದ್ಯ ದ್ರವ್ಯನಾಶಾದ್ಯದೃಚ್ಚಯಾ|

12171040c ನಿರ್ವೃತಿಂ ಪರಮಾಂ ಪ್ರಾಪ್ಯ ನಾದ್ಯ ಕಾಮಾನ್ವಿಚಿಂತಯೇ||

ದೈವೇಚ್ಛೆಯಂತೆ ಅಕಸ್ಮಾತ್ತಾಗಿ ದ್ರವ್ಯರೂಪದ ಹೋರಿಗಳ ನಾಶವಾದುದರಿಂದ ನನಗೆ ವೈರಾಗ್ಯವುಂಟಾಗಿ ಪರಮ ಸುಖವು ಪ್ರಾಪ್ತವಾಗಿದೆ. ಇನ್ನು ನಾನು ಕಾಮಗಳ ಕುರಿತು ಚಿಂತಿಸುವುದಿಲ್ಲ.

12171041a ಅತಿಕ್ಲೇಶಾನ್ಸಹಾಮೀಹ ನಾಹಂ ಬುಧ್ಯಾಮ್ಯಬುದ್ಧಿಮಾನ್|

12171041c ನಿಕೃತೋ ಧನನಾಶೇನ ಶಯೇ ಸರ್ವಾಂಗವಿಜ್ವರಃ||

ಹಿಂದೆ ನಾನು ನಿನಗಾಗಿ ಬಹಳ ಕ್ಲೇಶಗಳನ್ನು ಸಹಿಸಿಕೊಳ್ಳುತ್ತಿದ್ದೆನು. ಮೂರ್ಖನಾದ ನಾನು ಈ ಕಷ್ಟಗಳನ್ನು ನಿನ್ನಿಂದಾಗಿ ಅನುಭವಿಸುತ್ತಿದ್ದೆ ಎನ್ನುವುದನ್ನು ಈ ಮೊದಲು ತಿಳಿದುಕೊಳ್ಳಲೇ ಇಲ್ಲ. ಈ ಧನನಾಶದಿಂದ ವಂಚಿತನಾಗಿ ನಾನು ಸರ್ವಾಂಗಗಳ ತಾಪವನ್ನೂ ಕಳೆದುಕೊಂಡು ಸುಖವಾಗಿ ನಿದ್ರಿಸುತ್ತೇನೆ.

12171042a ಪರಿತ್ಯಜಾಮಿ ಕಾಮ ತ್ವಾಂ ಹಿತ್ವಾ ಸರ್ವಮನೋಗತೀಃ|

12171042c ನ ತ್ವಂ ಮಯಾ ಪುನಃ ಕಾಮ ನಸ್ಯೋತೇನೇವ ರಂಸ್ಯಸೇ||

ಕಾಮವೇ! ನನ್ನ ಸರ್ವ ಮನೋಗತಿಗಳನ್ನೂ ಬಿಟ್ಟು ನಿನ್ನನ್ನು ಪರಿತ್ಯಜಿಸುತ್ತೇನೆ. ಇನ್ನುಮುಂದೆ ನೀನು ನನ್ನೊಡನಿರಲಾರೆ ಮತ್ತು ನನ್ನೊಡನೆ ರಮಿಸಲಾರೆ.

12171043a ಕ್ಷಮಿಷ್ಯೇಽಕ್ಷಮಮಾಣಾನಾಂ[10] ನ ಹಿಂಸಿಷ್ಯೇ ಚ ಹಿಂಸಿತಃ|

12171043c ದ್ವೇಷ್ಯಮುಕ್ತಃ ಪ್ರಿಯಂ ವಕ್ಷ್ಯಾಮ್ಯನಾದೃತ್ಯ ತದಪ್ರಿಯಮ್||

ಕ್ಷಮಿಸದೇ ಇಲ್ಲದವರನ್ನೂ ಕ್ಷಮಿಸುತ್ತೇನೆ. ಹಿಂಸೆಮಾಡುವವರನ್ನೂ ಹಿಂಸಿಸುವುದಿಲ್ಲ. ದ್ವೇಷದಿಂದ ಮಾತನಾಡುವವನೊಂದಿಗೂ ಅವನ ಆ ಮಾತುಗಳನ್ನು ಅಲಕ್ಷಿಸಿ ಪ್ರೀತಿಯಿಂದಲೇ ಮಾತನಾಡುತ್ತೇನೆ.

12171044a ತೃಪ್ತಃ ಸ್ವಸ್ಥೇಂದ್ರಿಯೋ ನಿತ್ಯಂ ಯಥಾಲಬ್ಧೇನ ವರ್ತಯನ್|

12171044c ನ ಸಕಾಮಂ ಕರಿಷ್ಯಾಮಿ ತ್ವಾಮಹಂ ಶತ್ರುಮಾತ್ಮನಃ||

ತೃಪ್ತನಾಗಿ, ಇಂದ್ರಿಯಗಳನ್ನು ಶಾಂತಗೊಳಿಸಿ, ನಿತ್ಯವೂ ಯಾವುದು ದೊರೆಯುತ್ತದೋ ಅದರಿಂದಲೇ ಜೀವಿಸುತ್ತೇನೆ. ನನ್ನ ಶತ್ರುವಾಗಿರುವ ನಿನ್ನನ್ನು ನಾನು ಸಕಾಮನನ್ನಾಗಿಸುವುದಿಲ್ಲ.

12171045a ನಿರ್ವೇದಂ ನಿರ್ವೃತಿಂ ತೃಪ್ತಿಂ ಶಾಂತಿಂ ಸತ್ಯಂ ದಮಂ ಕ್ಷಮಾಮ್|

12171045c ಸರ್ವಭೂತದಯಾಂ ಚೈವ ವಿದ್ಧಿ ಮಾಂ ಶರಣಾಗತಮ್[11]||

ನಾನೀಗ ವೈರಾಗ್ಯ, ಸುಖ, ತೃಪ್ತಿ, ಶಾಂತಿ, ಸತ್ಯ, ದಮ, ಕ್ಷಮೆ, ಸರ್ವಭೂತದಯೆಗಳಿಗೆ ಶರಣಾಗತನಾಗಿದ್ದೇನೆ ಎನ್ನುವುದನ್ನು ತಿಳಿದುಕೋ.

12171046a ತಸ್ಮಾತ್ಕಾಮಶ್ಚ ಲೋಭಶ್ಚ ತೃಷ್ಣಾ ಕಾರ್ಪಣ್ಯಮೇವ ಚ|

12171046c ತ್ಯಜಂತು ಮಾಂ ಪ್ರತಿಷ್ಠಂತಂ ಸತ್ತ್ವಸ್ಥೋ ಹ್ಯಸ್ಮಿ ಸಾಂಪ್ರತಮ್||

ಆದುದರಿಂದ ಕಾಮ, ಲೋಭ, ತೃಷ್ಣೆ ಮತ್ತು ಕಾರ್ಪಣ್ಯಗಳು ಮೋಕ್ಷಮಾರ್ಗವನ್ನು ಹಿಡಿದಿರುವ ನನ್ನನ್ನು ಬಿಟ್ಟು ಹೊರಟು ಹೋಗಲಿ. ನಾನೀಗ ಸತ್ತ್ವದಲ್ಲಿಯೇ ಸ್ಥಿರಚಿತ್ತನಾಗಿದ್ದೇನೆ.

12171047a ಪ್ರಹಾಯ ಕಾಮಂ ಲೋಭಂ ಚ ಕ್ರೋಧಂ ಪಾರುಷ್ಯಮೇವ ಚ[12]|

12171047c ನಾದ್ಯ ಲೋಭವಶಂ ಪ್ರಾಪ್ತೋ ದುಃಖಂ ಪ್ರಾಪ್ಸ್ಯಾಮ್ಯನಾತ್ಮವಾನ್||

ಇಂದು ನಾನು ಕಾಮ, ಲೋಭ, ಕ್ರೋಧ ಮತ್ತು ಪೌರುಷಗಳನ್ನು ಪರಿತ್ಯಜಿಸಿ ಪುನಃ ಲೋಭವಶನಾಗಿ ದುಃಖಕ್ಕೆ ಭಾಗಿಯಾಗುವುದಿಲ್ಲ.

12171048a ಯದ್ಯತ್ತ್ಯಜತಿ ಕಾಮಾನಾಂ ತತ್ಸುಖಸ್ಯಾಭಿಪೂರ್ಯತೇ|

12171048c ಕಾಮಸ್ಯ ವಶಗೋ ನಿತ್ಯಂ ದುಃಖಮೇವ ಪ್ರಪದ್ಯತೇ||

ಮನುಷ್ಯನು ಯಾವ ಯಾವ ಕಾಮನೆಗಳನ್ನು ತ್ಯಜಿಸುತ್ತಾನೋ ನಿರಸ್ತವಾದ ಆ ಕಾಮನೆಗಳು ಅವನಿಗೆ ಸುಖವಾಗಿಯೇ ಪರಿಣಮಿಸುತ್ತವೆ. ಕಾಮಕ್ಕೆ ವಶನಾದವನು ಸದಾ ದುಃಖವನ್ನೇ ಅನುಭವಿಸುತ್ತಾನೆ.

12171049a ಕಾಮಾನ್ವ್ಯುದಸ್ಯ ಧುನುತೇ[13] ಯತ್ಕಿಂ ಚಿತ್ಪುರುಷೋ ರಜಃ|

12171049c ಕಾಮಕ್ರೋಧೋದ್ಭವಂ ದುಃಖಮಹ್ರೀರರತಿರೇವ ಚ||

ಕಾಮಕ್ಕೆ ಬಂಧಿಸುವ ಸ್ವಲ್ಪವಾದರೂ ರಜೋಗುಣವಿದ್ದರೆ ಮನುಷ್ಯನು ಅದನ್ನು ದೂರೀಕರಿಸಬೇಕು. ದುಃಖ, ನಿರ್ಲಜ್ಜೆ ಮತ್ತು ಅಸಂತೋಷ ಇವು ಕಾಮ-ಕ್ರೋಧಗಳಿಂದಲೇ ಹುಟ್ಟಿಕೊಳ್ಳುವವು[14].

12171050a ಏಷ ಬ್ರಹ್ಮಪ್ರವಿಷ್ಟೋಽಹಂ ಗ್ರೀಷ್ಮೇ ಶೀತಮಿವ ಹ್ರದಮ್|

12171050c ಶಾಮ್ಯಾಮಿ ಪರಿನಿರ್ವಾಮಿ ಸುಖಮಾಸೇ ಚ ಕೇವಲಮ್||

ಗ್ರೀಷ್ಮಋತುವಿನ ಉರಿಬಿಸಿಲಿನಲ್ಲಿ ಶೀತಲ ಸರೋವರವನ್ನು ಪ್ರವೇಶಿಸಿ ಆನಂದ ಪಡುವಂತೆ ನಾನು ಸಂಸಾರದ ಬೇಗೆಯನ್ನು ತಪ್ಪಿಸಿಕೊಂಡು ಪರಬ್ರಹ್ಮದಲ್ಲಿ ಪ್ರತಿಷ್ಠಿತನಾಗಿದ್ದೇನೆ. ಕರ್ಮಗಳಲ್ಲಿ ಆಸಕ್ತಿರಹಿತನಾಗಿದ್ದೇನೆ. ಶಾಂತನಾಗಿದ್ದೇನೆ. ದುಃಖರಹಿತನಾಗಿದ್ದೇನೆ. ಈಗ ಕೇವಲ ಸುಖವನ್ನೇ ಪಡೆದಿದ್ದೇನೆ.

12171051a ಯಚ್ಚ ಕಾಮಸುಖಂ ಲೋಕೇ ಯಚ್ಚ ದಿವ್ಯಂ ಮಹತ್ಸುಖಮ್|

12171051c ತೃಷ್ಣಾಕ್ಷಯಸುಖಸ್ಯೈತೇ ನಾರ್ಹತಃ ಷೋಡಶೀಂ ಕಲಾಮ್[15]||

ಲೋಕದಲ್ಲಿ ಯಾವ ಕಾಮಸುಖ ಮತ್ತು ದಿವ್ಯ ಮಹಾಸುಖಗಳಿಯೋ ಅವುಗಳು ತೃಷ್ಣೆಯನ್ನು ಕ್ಷಯಮಾಡಿಕೊಂಡ ಸುಖದ ಹದಿನಾರನೆಯ ಒಂದು ಅಂಶಕ್ಕೂ ಸಮನಾಗಿರುವುದಿಲ್ಲ.

12171052a ಆತ್ಮನಾ ಸಪ್ತಮಂ ಕಾಮಂ ಹತ್ವಾ ಶತ್ರುಮಿವೋತ್ತಮಮ್|

12171052c ಪ್ರಾಪ್ಯಾವಧ್ಯಂ ಬ್ರಹ್ಮಪುರಂ ರಾಜೇವ ಸ್ಯಾಮಹಂ ಸುಖೀ||

ಆತ್ಮನಿಂದ ಏಳನೆಯವನಾದ[16] ಮತ್ತು ಉತ್ತಮ ಶತ್ರುವಾದ ಕಾಮನನ್ನು ಸಂಹರಿಸಿ ಅವಿನಾಶಿಯಾದ ಬ್ರಹ್ಮಪುರವನ್ನು ಸೇರಿ ರಾಜನಂತೆ ಸುಖಿಯಾಗಿರುತ್ತೇನೆ.”

12171053a ಏತಾಂ ಬುದ್ಧಿಂ ಸಮಾಸ್ಥಾಯ ಮಂಕಿರ್ನಿರ್ವೇದಮಾಗತಃ|

12171053c ಸರ್ವಾನ್ಕಾಮಾನ್ಪರಿತ್ಯಜ್ಯ ಪ್ರಾಪ್ಯ ಬ್ರಹ್ಮ ಮಹತ್ಸುಖಮ್||

ಈ ಬುದ್ಧಿಯನ್ನೇ ಆಶ್ರಯಿಸಿ ಮಂಕಿಯು ಸರ್ವ ಕಾಮನೆಗಳನ್ನೂ ಪರಿತ್ಯಜಿಸಿ ವೈರಾಗ್ಯವನ್ನು ತಾಳಿ ಬ್ರಹ್ಮಸಾಕ್ಷಾತ್ಕಾರವನ್ನು ಹೊಂದಿ ಪರಮ ಸುಖಿಯಾದನು.

12171054a ದಮ್ಯನಾಶಕೃತೇ ಮಂಕಿರಮರತ್ವಂ ಕಿಲಾಗಮತ್|

12171054c ಅಚ್ಚಿನತ್ಕಾಮಮೂಲಂ ಸ ತೇನ ಪ್ರಾಪ ಮಹತ್ಸುಖಮ್||

ತನ್ನ ಪ್ರೀತಿಯ ಹೋರಿಗಳು ನಾಶವಾದುದರಿಂದ ಮಂಕಿಯು ಅಮೃತತ್ತ್ವವನ್ನೇ ಪಡೆದುಕೊಂಡನು. ಅವನು ಕಾಮದ ಮೂಲವನ್ನೇ ಕತ್ತರಿಸಿ ಹಾಕಿ ಮಹಾಸುಖವನ್ನು ಪಡೆದುಕೊಂಡನು.

[17]12171055a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12171055c ಗೀತಂ ವಿದೇಹರಾಜೇನ ಜನಕೇನ ಪ್ರಶಾಮ್ಯತಾ||

ಇದೇ ವಿಷಯದಲ್ಲಿ ಪುರಾತನ ಇತಿಹಾಸವಾದ ವಿದೇಹರಾಜ ಜನಕನು ಶಾಂತಭಾವವನ್ನು ಹೊಂದಿ ಹಾಡಿದ ಗೀತೆಯನ್ನು ಉದಾಹರಿಸುತ್ತಾರೆ.

12171056a ಅನಂತಂ ಬತ ಮೇ ವಿತ್ತಂ ಯಸ್ಯ ಮೇ ನಾಸ್ತಿ ಕಿಂ ಚನ[18]|

12171056c ಮಿಥಿಲಾಯಾಂ ಪ್ರದೀಪ್ತಾಯಾಂ ನ ಮೇ ದಹ್ಯತಿ ಕಿಂ ಚನ||

“ನನ್ನಲ್ಲಿ ಅನಂತ ಧನ-ವೈಭವಗಳಿವೆ. ಆದರೂ ನನ್ನಲ್ಲಿ ಏನೂ ಇಲ್ಲ. ಈ ಮಿಥಿಲಾಪುರಿಗೆ ಬೆಂಕಿಹತ್ತಿಕೊಂಡರೂ ನನ್ನದಾದ ಏನೂ ಸುಟ್ಟುಹೋಗುವುದಿಲ್ಲ.”

12171057a ಅತ್ರೈವೋದಾಹರಂತೀಮಂ ಬೋಧ್ಯಸ್ಯ ಪದಸಂಚಯಮ್|

12171057c ನಿರ್ವೇದಂ ಪ್ರತಿ ವಿನ್ಯಸ್ತಂ ಪ್ರತಿಬೋಧ ಯುಧಿಷ್ಠಿರ||

ಯುಧಿಷ್ಠಿರ! ಈ ವಿಷಯದಲ್ಲಿ ವೈರಾಗ್ಯವನ್ನು ಲಕ್ಷ್ಯದಲ್ಲಿಟ್ಟುಕೊಂಡು ಬೋಧ್ಯಮುನಿಯು ಹೇಳಿದ ಪದಸಂಚಯವನ್ನು ಉದಾಹರಿಸುತ್ತಾರೆ. ಅದನ್ನು ಕೇಳು.

12171058a ಬೋಧ್ಯಂ ದಾಂತಮೃಷಿಂ ರಾಜಾ ನಹುಷಃ ಪರ್ಯಪೃಚ್ಚತ|

12171058c ನಿರ್ವೇದಾಚ್ಚಾಂತಿಮಾಪನ್ನಂ ಶಾಂತಂ ಪ್ರಜ್ಞಾನತರ್ಪಿತಮ್||

ವೈರಾಗ್ಯದಿಂದ ಶಾಂತಿಯನ್ನು ಪಡೆದಿದ್ದ ಶಾಂತ, ಪ್ರಜ್ಞೆಯಿಂದ ಪರಿತೃಪ್ತನಾಗಿದ್ದ ದಾಂತ ಋಷಿ ಬೋಧ್ಯನನ್ನು ರಾಜಾ ನಹುಷನು ಪ್ರಶ್ನಿಸಿದನು:

12171059a ಉಪದೇಶಂ ಮಹಾಪ್ರಾಜ್ಞ ಶಮಸ್ಯೋಪದಿಶಸ್ವ ಮೇ|

12171059c ಕಾಂ ಬುದ್ಧಿಂ ಸಮನುಧ್ಯಾಯ ಶಾಂತಶ್ಚರಸಿ ನಿರ್ವೃತಃ||

“ಮಹಾಪ್ರಾಜ್ಞ! ನನಗೆ ಶಾಂತಿಯ ಉಪದೇಶವನ್ನು ನೀಡು. ಯಾವ ಬುದ್ಧಿಯನ್ನು ಆಶ್ರಯಿಸಿ ನೀನು ಶಾಂತಿ ಮತ್ತು ಸಂತೋಷದಿಂದ ಸಂಚರಿಸುತ್ತಿದ್ದೀಯೆ?”

12171060 ಬೋಧ್ಯ ಉವಾಚ|

12171060a ಉಪದೇಶೇನ ವರ್ತಾಮಿ ನಾನುಶಾಸ್ಮೀಹ ಕಂ ಚನ|

12171060c ಲಕ್ಷಣಂ ತಸ್ಯ ವಕ್ಷ್ಯೇಽಹಂ ತತ್ಸ್ವಯಂ ಪ್ರವಿಮೃಶ್ಯತಾಮ್||

ಬೋಧ್ಯನು ಹೇಳಿದನು: “ನಾನು ಯಾರಿಗೂ ಉಪದೇಶವನ್ನು ಮಾಡುವುದಿಲ್ಲ. ನನಗೆ ಪ್ರಾಪ್ತವಾಗಿರುವ ಉಪದೇಶದಂತೆ ಆಚರಿಸುತ್ತೇನೆ. ಯಾರಿಂದ ಸ್ವಯಂ ನಾನು ಉಪದೇಶವನ್ನು ಪಡೆದುಕೊಂಡಿರುವೆನೋ ಅವರ ಲಕ್ಷಣವನ್ನು ಹೇಳುತ್ತೇನೆ.

12171061a ಪಿಂಗಲಾ ಕುರರಃ ಸರ್ಪಃ ಸಾರಂಗಾನ್ವೇಷಣಂ ವನೇ|

12171061c ಇಷುಕಾರಃ ಕುಮಾರೀ ಚ ಷಡೇತೇ ಗುರವೋ ಮಮ[19]||

ವೇಶ್ಯೆ ಪಿಂಗಲಾ, ಕುರರಪಕ್ಷಿ, ಸರ್ಪ, ಅರಣ್ಯದಲ್ಲಿ ಸಾರಂಗದ ಅನ್ವೇಷಣೆ, ಬಾಣವನ್ನು ತಯಾರಿಸುವವನು ಮತ್ತು ಕುಮಾರೀ – ಇವರೇ ನನ್ನ ಆರು ಗುರುಗಳು.””

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಮಂಕಿಗೀತಾಯಾಂ ಏಕಸಪ್ತತ್ಯಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಮಂಕಿಗೀತಾ ಎನ್ನುವ ನೂರಾಎಪ್ಪತ್ತೊಂದನೇ ಅಧ್ಯಾಯವು.

[1] ಮತಮ್| (ಗೀತಾ ಪ್ರೆಸ್, ಭಾರತ ದರ್ಶನ).

[2] ತಾಳೆಯ ಮರದ ಕೆಳಗೆ ಕುಳಿತಿರುವಾಗ ಎಲ್ಲಿಂದಲೋ ಬಂದ ಕಾಗೆಯೊಂದು ಮರದ ಮೇಲೆ ಕುಳಿತುಕೊಂಡಾಗ, ಮತ್ತು ಆಗಲೇ ಮಾಗಿದ ತಾಳೇಹಣ್ಣು ಕೆಳಕ್ಕೆ ಬಿದ್ದಾಗ ಕೆಳಗೆ ಕುಳಿತಿದ್ದವನು ಕಾಗೆಯು ಬಂದಿರುವುದರಿಂದಲೇ ತಾಳೇ ಹಣ್ಣು ಬಿದ್ದಿತು ಎಂದು ತಿಳಿಯುವುದೇ ಕಾಕತಾಳೀಯ ನ್ಯಾಯ. ಎರಡು ಘಟನೆಗಳಿಗೂ ಸಂಬಂಧವಿಲ್ಲದೇ ಅಕಸ್ಮಾತ್ತಾಗಿ ನಡೆಯುವ ಕಾರ್ಯಫಲ.

[3] ಜನಕಸ್ಯ ನಿವೇಶನಾತ್ ಎನ್ನುವುದಕ್ಕೆ ತಂದೆ ವ್ಯಾಸನ ಆಶ್ರಮ ಎಂದೂ ಅನುವಾದಿಸಿದ್ದಾರೆ (ಭಾರತ ದರ್ಶನ). ಆದರೆ ಇಲ್ಲಿ ರಾಜಾ ಜನಕನ ಭವನವೆನ್ನುವುದೇ (ಗೀತಾ ಪ್ರೆಸ್) ಸರಿಯೆಂದು ತೋರುತ್ತದೆ.

[4] ಕಾಮುಕ (ಗೀತಾ ಪ್ರೆಸ್/ಭಾರತ ದರ್ಶನ).

[5] ಜಾನಾಮಿ (ಗೀತಾ ಪ್ರೆಸ್/ಭಾರತ ದರ್ಶನ).

[6] ಪರಿತ್ಯಾಗೇ ನ ಲಭ್ಯತೇ (ಗೀತಾ ಪ್ರೆಸ್/ಭಾರತ ದರ್ಶನ).

[7] ಸತ್ತ್ವಮೇವಾಶ್ರಯಾಮ್ಯಹಮ್|| (ಗೀತಾ ಪ್ರೆಸ್/ಭಾರತ ದರ್ಶನ).

[8] ಧನಾಚ್ಚ್ಯುತಮ್| (ಗೀತಾ ಪ್ರೆಸ್/ಭಾರದ ದರ್ಶನ).

[9] ಅರ್ಥಲೋಲುಪತಾ (ಗೀತಾ ಪ್ರೆಸ್/ಭಾರತ ದರ್ಶನ).

[10] ಕ್ಷಮಿಷ್ಯೇ ಕ್ಷಿಪಮಾಣಾನಾಂ (ಗೀತಾ ಪ್ರೆಸ್/ಭಾರತ ದರ್ಶನ).

[11] ಸಮುಪಾಗತಮ್|| (ಗೀತಾ ಪ್ರೆಸ್/ಭಾರತ ದರ್ಶನ).

[12] ಸುಖಂ ಪ್ರಾಪ್ತೋಽಸ್ಮಿ ಸಾಂಪ್ರತಮ್| (ಗೀತಾ ಪ್ರೆಸ್/ಭಾರತ ದರ್ಶನ).

[13] ಕಾಮಾನುಬಂಧಂ ನುದತೇ (ಗೀತಾ ಪ್ರೆಸ್/ಭಾರತ ದರ್ಶನ).

[14] ರಜಸ್ಸು ಪ್ರವೃತ್ತಿಗೆ ಕಾರಣವಾದ ಗುಣ. ಇದು ಕಾಮನಾಸಂಬಂಧವನ್ನು ಹೊಂದಿರುತ್ತದೆ. ಕಾಮ-ಕ್ರೋಧಗಳೇ ದುಃಖಕ್ಕೆ ಕಾರಣ. ಆದುದರಿಂದ ಪುರುಷನು ನಾಚಿಕೆಯನ್ನೂ ಸಂಸಾರದಲ್ಲಿ ಆಸಕ್ತಿಯನ್ನೂ ಬಿಟ್ಟು ಸರ್ವಾನರ್ಥಮೂಲವಾದ ರಜೋಗುಣವು ಸ್ವಲ್ಪವೂ ಇಲ್ಲದಂತೆ ಅದನ್ನು ದೂರಮಾಡಬೇಕು. (ಭಾರತ ದರ್ಶನ).

[15] ಇದೇ ಶ್ಲೋಕವು ಮುಂದೆ ಹರಿವಂಶದಲ್ಲಿ ೩೦ನೇ ಅಧ್ಯಾಯದಲ್ಲಿ ಯಯಾತಿಯು ಹಾಡಿದ ಗೀತೆಯಲ್ಲಿ ಬರುತ್ತದೆ.

[16] ಆತ್ಮನಾ ಸಪ್ತಮಂ ಎನ್ನುವುದಕ್ಕೆ ವ್ಯಾಖ್ಯಾನಕಾರರು ಹೀಗೆ ಹೇಳಿದ್ದಾರೆ: ಆತ್ಮನಾ – ಸ್ಥೂಲದೇಹೇನ ಸಹ ಗಣನಾಯಾಂ – ಸ್ಥೂಲದೇಹವನ್ನು ಸೇರಿಸಿ ಗಣನೆ ಮಾಡಿದರೆ, ಸಪ್ತಮಃ ಕಾಮಃ – ಏಳನೆಯವನು ಕಾಮನಾಗುತ್ತಾನೆ. ಹೇಗೆಂದರೆ: ಅನ್ನಮಯ ಪ್ರಾಣಮಯ ಮನೋಮಯ ವಿಜ್ಞಾನಮಯಾಶ್ಚತ್ವಾರಃ ಕೋಶಾಃ ಪ್ರವೃತ್ತಿಮತ್ತ್ವದ್ರಜಃ ಪ್ರಧಾನಾಃ – ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯಗಳೆಂಬ ನಾಲ್ಕು ಕೋಶಗಳು ಪ್ರವೃತ್ತಿ ಮಾರ್ಗವನ್ನು ಉತ್ತೇಜಿಸುವುದರಿಂದ ರಜೋಗುಣ ಪ್ರಧಾನವಾದವುಗಳು. ಆನಂದಮಯಃ ಆವರಣರೂಪತ್ತ್ವಾತ್ತಮಃ ಪ್ರಧಾನಃ ಪಂಚಮಃ – ಆನಂದಮಯ ಕೋಶವು ಆವರಣರೂಪವಾಗಿರುವುದರಿಂದ ತಪಃ ಪ್ರಧಾನವಾದುದು. ಇದು ಐದನೆಯದು. ತತಃ ಶುದ್ಧ ಸತ್ತ್ವಪ್ರಧಾನ್ಯಾತ್ ಸಜೀವಸಮಧಿಃ ಆನಂದಾಖ್ಯಃ ಷಷ್ಠಃ – ಶುದ್ಧ ಸತ್ತ್ವಪ್ರಧಾನವಾಗಿರುವ ಆನಂದ ಎಂಬ ಹೆಸರಿನ ಸಜೀವ ಸಮಾಧಿಯು ಆರನೆಯದು. ತಸ್ಯಾಪಿ ಮೂಲಮಸ್ಮೀತಿ ಪ್ರತ್ಯಯಮಾತ್ರಶರೀರೋ ಮಹತ್ತತ್ತ್ವಾಖ್ಯಃ ಸರ್ವಾನರ್ಥಬೀಜಭೂತಃ ಚರಮಃ ಕಾಮಃ ಸಪ್ತಮಃ – ಆನಂದಾಖ್ಯವಾದ ಸಜೀವ ಸಮಾಧಿಗೂ ಮೂಲವೆಂದು ಹೇಳಿಕೊಳ್ಳುವ ಅಸ್ಮಿ ಎಂಬ ಪ್ರತ್ಯಯಮಾತ್ರ ಶರೀರವನ್ನು ಹೊಂದಿರುವ, ಮಹತ್ತತ್ತ್ವವೆಂದು ಹೆಸರು ಪಡೆದಿರುವ, ಸಕಲ ವಿಧದ ಅನರ್ಥಗಳಿಗೂ ಬೀಜಭೂತವಾದ ಕಡೆಯದಾದ ಕಾಮವೇ ಏಳನೆಯದು. ಸಾಮಾನ್ಯವಾಗಿ ಹೇಳುವ ಕಾಮ-ಕ್ರೋಧಾದಿ ಅರಿಷಡ್ವರ್ಗಗಳ ಸರಣಿಯಲ್ಲಿ ಕಾಮವೇ ಮೊದಲನೆಯದಾಗುತ್ತದೆ. ಇಲ್ಲಿ ಆತ್ಮನಿಂದ ಅಂದರೆ ದೇಹದಿಂದ ಕಾಮನು ಸಪ್ತಮನು ಎಂದು ವ್ಯಾಖ್ಯಾನಕಾರರು ವಿವರಿಸಿದ್ದಾರೆ.

ಆದರೆ ಇದು ಕ್ಲಿಷ್ಟ ಕಲ್ಪನೆ. ಕಾಮವು ಸಮಾಧಿಯ ಆನಂದಕ್ಕೂ ಮೂಲವಾದುದು ಎಂದು ಹೇಳುವುದು ಸರಿಯಾಗಿ ಕಾಣುವುದಿಲ್ಲ. ಗೀತೆಯ ಈ ಶ್ಲೋಕದಲ್ಲಿ ಇದಕ್ಕೆ ಸರಳವೂ ಸಾಧುವೂ ಆದ ಉತ್ತರವಿದೆ: ವಿಷಯಾ ವಿನಿವರ್ತಂತೇ ನೀರಾಹಾರಸ್ಯ ದೇಹಿನಃ| ರಸವರ್ಜಂ ಸರೋಽಪ್ಯಸ್ಯ ಪರಂ ದೃಷ್ಟ್ವಾ ನಿವರ್ತತೇ|| (ಭೀಷ್ಮಪರ್ವ, ಅಧ್ಯಾಯ ೨೪, ಶ್ಲೋಕ ೫೯). ವಿಷಯಗಳು ಐದು. ಆರನೆಯದು ರಸ ಎಂದು ಕರೆಯಲ್ಪಟ್ಟಿರುವ ರಾಗ. ಆತ್ಮನಾ ಸಪ್ತಮಂ ಕಾಮಂ ಎಂಬಂತೆ ಆತ್ಮವನ್ನೂ ಸೇರಿಸಿಕೊಂಡರೆ ಕಾಮವು ಏಳನೆಯದಾಗುತ್ತದೆ. ಐದು ಇಂದ್ರಿಯಗಳು, ಆರನೆಯ ಮನಸ್ಸು, ಮತ್ತು ಏಳನೆಯದು ಇವಕ್ಕೆ ಮೂಲವಾದ ಕಾಮ ಅಥವಾ ರಸ.

ಆತ್ಮ ಶಬ್ಧವನ್ನು ಅವರೋಹಣ ಕ್ರಮದಿಂದ ವ್ಯಾಖ್ಯಾನಿಸಿ “ಪರಮಾತ್ಮ” ಎಂಬ ಅಭಿಪ್ರಾಯದಿಂದ ಹೇಳಿದರೂ ಕಾಮವು ಏಳನೆಯದಾಗುತ್ತದೆ: ಪರಮಾತ್ಮ, ಜೀವ, ಪ್ರಕೃತಿ, ಮಹತ್ತು, ಅಹಂಕಾರ, ಮನಸ್ಸು ಮತ್ತು ಅದರಲ್ಲಿ ಜನಿಸಿದ ಕಾಮ (ಭಾರತ ದರ್ಶನ).

[17] ಮುಂದಿನ ೬ ಶ್ಲೋಕಗಳನ್ನು ಗೀತಾ ಪ್ರೆಸ್/ಭಾರತ ದರ್ಶನಗಳಲ್ಲಿ ಬೋಧ್ಯಗೀತೆಯೆಂದು ಬೇರೆಯೇ ಅಧ್ಯಾಯದಲ್ಲಿ ಕೊಟ್ಟಿದ್ದಾರೆ.

[18] ಈ ಶ್ಲೋಕಾರ್ಧಕ್ಕೆ ಇನ್ನೊಂದು ರೀತಿಯ ಅನುವಾದವೂ ಇದೆ: ನಾನು ಭೌತಿಕವಾಗಿ ಏನೂ ಇಲ್ಲದ ದರಿದ್ರನು. ಆದರೆ ನನ್ನಲ್ಲಿ ಆಧ್ಯಾತ್ಮವೆಂಬ ಅನಂತವಾದ ಸಂಪತ್ತು ತುಂಬಿದೆ (ಭಾರತ ದರ್ಶನ).

[19] ಇದರ ನಂತರ ಈ ಕೆಳಗಿನ ೬ ಅಧಿಕ ಶ್ಲೋಕಗಳಿವೆ: ಭೀಷ್ಮ ಉವಾಚ| ಆಶಾ ಬಲವತೀ ರಜನ್ನೈರಾಶ್ಯಂ ಪರಮಂ ಸುಖಮ್| ಆಶಾಂ ನಿರಾಶಾಂ ಕೃತ್ವಾ ತು ಸುಖಂ ಸ್ವಪಿತಿ ಪಿಂಗಲಾ|| ಸಾಮಿಷಂ ಕುರರಂ ದೃಷ್ಟ್ವಾ ವದ್ಯಮಾನಂ ನಿರಾಮಿಷೈಃ| ಆಮಿಷಸ್ಯ ಪರಿತ್ಯಾಗತ್ ಕುರರಃ ಸುಖಮೇಧತೇ|| ಗೃಹಾರಂಭೋ ಹಿ ದುಃಖಾಯ ನ ಸುಖಾಯ ಕದಾಚನ| ಸರ್ಪಃ ಪರಕೃತಂ ವೇಶ್ಮ ಪ್ರವಿಶ್ಯ ಸುಖಮೇಧತೇ|| ಸುಖಂ ಜೀವಂತಿ ಮುನಯೋ ಭೈಕ್ಷ್ಯವೃತ್ತಿಂ ಸಮಾಶ್ರಿತಾಃ| ಅದ್ರೋಹೇಣೈವ ಭೂತಾನಾಮ್ ಸಾರಂಗಾ ಇವ ಪಕ್ಷಿಣಃ|| ಇಷುಕಾರೋ ನರಃ ಕಶ್ಚಿದಿಷಾವಾಸಕ್ತಮಾನಸಃ| ಸಮೀಪೇನಾಪಿ ಗಚ್ಛಂತಂ ರಾಜಾನಂ ನಾವಬುದ್ಧವಾನ್|| ಬಹೂನಾಂ ಕಲಹೋ ನಿತ್ಯಂ ದ್ವಯೋಃ ಸಂಕಥನಂ ಧೃವಮ್| ಏಕಾಕೀ ವಿಚರಿಷ್ಯಾಮಿ ಕುಮಾರೀಸಂಖಕೋ ಯಥಾ|| (ಗೀತಾ ಪ್ರೆಸ್/ಭಾರತ ದರ್ಶನ).

Comments are closed.