Shanti Parva: Chapter 170

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೧೭೦

ಶಮ್ಯಾಕಗೀತಾ[1]

 ತ್ಯಾಗದ ಮಹತ್ವವನ್ನು ತಿಳಿಸುವ ಶಮ್ಯಾಕಗೀತೆ (೧-೨೧).

12170001 ಯುಧಿಷ್ಠಿರ ಉವಾಚ|

12170001a ಧನಿನೋ ವಾಧನಾ ಯೇ ಚ ವರ್ತಯಂತಿ ಸ್ವತಂತ್ರಿಣಃ|

12170001c ಸುಖದುಃಖಾಗಮಸ್ತೇಷಾಂ ಕಃ ಕಥಂ ವಾ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಧನಿಕ ಮತ್ತು ನಿರ್ಧನಿಕ ಇಬ್ಬರೂ ಸ್ವತಂತ್ರತಾಪೂರ್ವಕ ವ್ಯವಹರಿಸಿದರೆ ಅವರಿಗೆ ಯಾವ ರೂಪದಲ್ಲಿ ಮತ್ತು ಹೇಗೆ ಸುಖದುಃಖಗಳುಂಟಾಗುತ್ತವೆ?”

12170002 ಭೀಷ್ಮ ಉವಾಚ|

12170002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12170002c ಶಮ್ಯಾಕೇನ ವಿಮುಕ್ತೇನ[2] ಗೀತಂ ಶಾಂತಿಗತೇನ ಹ||

ಭೀಷ್ಮನು ಹೇಳಿದನು: “ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಶಾಂತಿಯನ್ನು ಪಡೆದುಕೊಂಡು ವಿಮುಕ್ತನಾದ ಶಮ್ಯಾಕನ ಗೀತೆಯನ್ನು ಉದಾಹರಿಸುತ್ತಾರೆ.

12170003a ಅಬ್ರವೀನ್ಮಾಂ ಪುರಾ ಕಶ್ಚಿದ್ಬ್ರಾಹ್ಮಣಸ್ತ್ಯಾಗಮಾಸ್ಥಿತಃ|

12170003c ಕ್ಲಿಶ್ಯಮಾನಃ ಕುದಾರೇಣ ಕುಚೈಲೇನ ಬುಭುಕ್ಷಯಾ||

ಹಿಂದೊಮ್ಮೆ ಕುಪತ್ನಿ ಮತ್ತು ಹಸಿವೆಯಿಂದ ಅತ್ಯಂತ ಕಷ್ಟವನ್ನು ಅನುಭವಿಸುತ್ತಿದ್ದ, ಹಳೆಯ ಹರಿದ ವಸ್ತ್ರಗಳನ್ನುಟ್ಟಿದ್ದ ತ್ಯಾಗೀ ಬ್ರಾಹ್ಮಣನೋರ್ವನು ನನ್ನ ಬಳಿಬಂದು ಹೇಳಿದನು:

12170004a ಉತ್ಪನ್ನಮಿಹ ಲೋಕೇ ವೈ ಜನ್ಮಪ್ರಭೃತಿ ಮಾನವಮ್|

12170004c ವಿವಿಧಾನ್ಯುಪವರ್ತಂತೇ ದುಃಖಾನಿ ಚ ಸುಖಾನಿ ಚ||

“ಈ ಲೋಕದಲ್ಲಿ ಹುಟ್ಟಿದ ಮನುಷ್ಯನಿಗೆ ಹುಟ್ಟಿದಾಗಿನಿಂದ ವಿವಿಧ ಸುಖ ದುಃಖಗಳು ಒಂದರ ನಂತರ ಇನ್ನೊಂದು ಪ್ರಾಪ್ತವಾಗುತ್ತಲೇ ಇರುತ್ತವೆ.

12170005a ತಯೋರೇಕತರೇ ಮಾರ್ಗೇ ಯದ್ಯೇನಮಭಿಸಂನಯೇತ್|

12170005c ನ ಸುಖಂ ಪ್ರಾಪ್ಯ ಸಂಹೃಷ್ಯೇನ್ನ ದುಃಖಂ ಪ್ರಾಪ್ಯ ಸಂಜ್ವರೇತ್||

ಒಂದು ವೇಳೆ ವಿಧಾತನು ಅವರನ್ನು ಒಂದೇ ಮಾರ್ಗದಲ್ಲಿ ಕೊಂಡೊಯ್ಯುತ್ತಿದ್ದರೆ ಕೇವಲ ಸುಖವನ್ನು ಪಡೆದವನು ಹರ್ಷಿತನಾಗುತ್ತಿರಲಿಲ್ಲ ಮತ್ತು ಕೇವಲ ದುಃಖವನ್ನು ಪಡೆದವನು ಪರಿತಪಿಸುತ್ತಿರಲಿಲ್ಲ.

12170006a ನ ವೈ ಚರಸಿ ಯಚ್ಚ್ರೇಯ ಆತ್ಮನೋ ವಾ ಯದೀಹಸೇ|

12170006c ಅಕಾಮಾತ್ಮಾಪಿ ಹಿ ಸದಾ ಧುರಮುದ್ಯಮ್ಯ ಚೈವ ಹಿ||

ನೀನು ಕಾಮನಾರಹಿತನಾಗಿದ್ದರೂ ಆತ್ಮಕಲ್ಯಾಣ ಸಾಧಕ ಕಾರ್ಯಗಳನ್ನು ಮಾಡುತ್ತಿಲ್ಲ ಮತ್ತು ನಿನ್ನ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡಿಲ್ಲ. ಏಕೆಂದರೆ ನೀನು ರಾಜ್ಯಭಾರದ ಸಂಪೂರ್ಣ ಹೊಣೆಯನ್ನು ಹೊತ್ತಿಕೊಂಡಿರುವೆ.

12170007a ಅಕಿಂಚನಃ ಪರಿಪತನ್ಸುಖಮಾಸ್ವಾದಯಿಷ್ಯಸಿ|

12170007c ಅಕಿಂಚನಃ ಸುಖಂ ಶೇತೇ ಸಮುತ್ತಿಷ್ಠತಿ ಚೈವ ಹಿ||

ನಿನ್ನಲ್ಲಿರುವ ಎಲ್ಲವನ್ನೂ ತ್ಯಜಿಸಿ ಅಕಿಂಚನನಾದರೆ ನೀನು ನಿಶ್ಚಿಂತೆಯಿಂದ ಎಲ್ಲಕಡೆ ತಿರುಗುತ್ತಾ ಸುಖವನ್ನು ಅನುಭವಿಸುತ್ತೀಯೆ. ಅಕಿಂಚನನ ಬಳಿ ಏನೂ ಇರುವುದಿಲ್ಲದಿರುವುದರಿಂದಲೇ ಅವನು ಸುಖವಾಗಿ ನಿದ್ರಿಸುತ್ತಾನೆ ಮತ್ತು ಸುಖವಾಗಿ ಎಚ್ಚರಗೊಳ್ಳುತ್ತಾನೆ.

12170008a ಆಕಿಂಚನ್ಯಂ ಸುಖಂ ಲೋಕೇ ಪಥ್ಯಂ ಶಿವಮನಾಮಯಮ್|

12170008c ಅನಮಿತ್ರಮಥೋ ಹ್ಯೇತದ್ದುರ್ಲಭಂ ಸುಲಭಂ ಸತಾಮ್[3]||

ಲೋಕದಲ್ಲಿ ಏನೂ ಇಲ್ಲದೇ ಇರುವುದು ಸುಖಕರವಾದುದು. ಹಿತಕರವಾದುದು ಮತ್ತು ಕಲ್ಯಾಣಕರವಾದುದು. ಇದು ಶತ್ರುಗಳಿಲ್ಲದಿರುವಂಥಹುದು. ಇದು ದುರ್ಲಭವಾದುದು ಮತ್ತು ಸತ್ಪುರುಷರಿಗೇ ಸಾಧ್ಯವಾಗುವಂಥಹುದು.

12170009a ಅಕಿಂಚನಸ್ಯ ಶುದ್ಧಸ್ಯ ಉಪಪನ್ನಸ್ಯ ಸರ್ವಶಃ|

12170009c ಅವೇಕ್ಷಮಾಣಸ್ತ್ರೀಽಲ್ಲೋಕಾನ್ನ ತುಲ್ಯಮುಪಲಕ್ಷಯೇ||

ಮೂರು ಲೋಕಗಳಲ್ಲಿ ನೋಡಿದರೂ ನಾನು ಶುದ್ಧ, ವೈರಾಗ್ಯ ಸಂಪನ್ನ ಅಕಿಂಚನನ ಸಮಾನ ಪುರುಷನನ್ನು ಇದೂವರೆಗೂ ಕಂಡಿಲ್ಲ.

12170010a ಆಕಿಂಚನ್ಯಂ ಚ ರಾಜ್ಯಂ ಚ ತುಲಯಾ ಸಮತೋಲಯಮ್|

12170010c ಅತ್ಯರಿಚ್ಯತ ದಾರಿದ್ರ್ಯಂ ರಾಜ್ಯಾದಪಿ ಗುಣಾಧಿಕಮ್||

ಅಕಿಂಚನನನ್ನೂ ರಾಜ್ಯವನ್ನೂ ತಕ್ಕಡಿಯಲ್ಲಿಟ್ಟು ತೂಗಿದರೆ ರಾಜ್ಯಕ್ಕಿಂತ ಅಕಿಂಚನನ ಭಾರವೇ ಹೆಚ್ಚಾಗಿರುತ್ತದೆ.

12170011a ಆಕಿಂಚನ್ಯೇ ಚ ರಾಜ್ಯೇ ಚ ವಿಶೇಷಃ ಸುಮಹಾನಯಮ್|

12170011c ನಿತ್ಯೋದ್ವಿಗ್ನೋ ಹಿ ಧನವಾನ್ಮೃತ್ಯೋರಾಸ್ಯಗತೋ ಯಥಾ||

ಅಕಿಂಚನನಿಗೂ ರಾಜ್ಯಕ್ಕೂ ಇರುವ ವಿಶೇಷವಾದ ಒಂದು ಅಂತರವೆಂದರೆ – ಧನವಂತನು ಮೃತ್ಯುವಿನ ಬಾಯಲ್ಲಿ ಬಿದ್ದವನಂತೆ ಸದಾ ಉದ್ವಿಗ್ನನಾಗಿಯೇ ಇರುತ್ತಾನೆ.

12170012a ನೈವಾಸ್ಯಾಗ್ನಿರ್ನ ಚಾದಿತ್ಯೋ ನ ಮೃತ್ಯುರ್ನ ಚ ದಸ್ಯವಃ|

12170012c ಪ್ರಭವಂತಿ ಧನಜ್ಯಾನಿನಿರ್ಮುಕ್ತಸ್ಯ ನಿರಾಶಿಷಃ||

ಆದರೆ ಧನವನ್ನು ತ್ಯಜಿಸಿ ಧನಸಂಗ್ರಹಣೆಯ ಆಸಕ್ತಿಯಿಂದ ವಿಮುಕ್ತನಾಗಿರುವ ಮತ್ತು ಮನಸ್ಸಿನಲ್ಲಿ ಯಾವವಿಧದ ಕಾಮನೆಗಳನ್ನೂ ಇಟ್ಟುಕೊಂಡಿರದವನಿಗೆ ಅಗ್ನಿಯಿಂದಲೂ ಭಯವಿಲ್ಲ, ಅಶುಭಗಳೂ ಇಲ್ಲ, ಮೃತ್ಯುವಿನ ಭಯವೂ ಇಲ್ಲ ಮತ್ತು ಕಳ್ಳರ ಭಯವೂ ಇಲ್ಲ.

12170013a ತಂ ವೈ ಸದಾ ಕಾಮಚರಮನುಪಸ್ತೀರ್ಣಶಾಯಿನಮ್|

12170013c ಬಾಹೂಪಧಾನಂ ಶಾಮ್ಯಂತಂ ಪ್ರಶಂಸಂತಿ ದಿವೌಕಸಃ||

ಸ್ವೇಚ್ಛೆಯಿಂದ ಸಂಚರಿಸುತ್ತಿರುವ, ಹಾಸಲು ಯಾವುದೇ ಹಚ್ಚಡವಾಗಲೀ ಹೊದೆಯಲು ಹೊದಿಕೆಯಾಗಲೀ ಇಲ್ಲದೇ ತೋಳುಗಳನ್ನೇ ತಲೆದಿಂಬನ್ನಾಗಿಟ್ಟುಕೊಂಡು ನೆಲದ ಮೇಲೆ ಮಲಗುವ ಶಾಂತಸ್ವಭಾವದ ಮನುಷ್ಯನನ್ನು ದೇವತೆಗಳೂ ಪ್ರಶಂಸಿಸುತ್ತಾರೆ.

12170014a ಧನವಾನ್ ಕ್ರೋಧಲೋಭಾಭ್ಯಾಮಾವಿಷ್ಟೋ ನಷ್ಟಚೇತನಃ|

12170014c ತಿರ್ಯಗೀಕ್ಷಃ ಶುಷ್ಕಮುಖಃ ಪಾಪಕೋ ಭ್ರುಕುಟೀಮುಖಃ||

ಧನವಂತನು ಕ್ರೋಧ-ಲೋಭಗಳಿಂದ ಆವಿಷ್ಟನಾಗಿ ಬುದ್ಧಿಗೆಟ್ಟಿರುತ್ತಾನೆ. ಯಾವಾಗಲೂ ಕುಟಿಲದೃಷ್ಟಿಯಿಂದಲೇ ಇತರರನ್ನು ನೋಡುತ್ತಿರುತ್ತಾನೆ ಮತ್ತು ಅವನ ಮುಖವು ಯಾವಾಗಲೂ ಬಾಡಿಯೇ ಇರುತ್ತದೆ. ಪಾಪಕಾರ್ಯಗಳಲ್ಲಿ ಮಗ್ನನಾದ ಅವನು ಹುಬ್ಬುಗಳನ್ನು ಗಂಟಿಕ್ಕಿಕೊಂಡಿರುತ್ತಾನೆ.

12170015a ನಿರ್ದಶಂಶ್ಚಾಧರೋಷ್ಠಂ ಚ ಕ್ರುದ್ಧೋ ದಾರುಣಭಾಷಿತಾ|

12170015c ಕಸ್ತಮಿಚ್ಚೇತ್ಪರಿದ್ರಷ್ಟುಂ ದಾತುಮಿಚ್ಚತಿ ಚೇನ್ಮಹೀಮ್||

ಕ್ರುದ್ಧನಾದ ಅಂತಹ ಧನವಂತನು ಯಾವಾಗಲೂ ಕೆಳತುಟಿಯನ್ನು ಕಡಿಯುತ್ತಿರುತ್ತಾನೆ. ಕಠೋರವಾಗಿ ಮಾತನಾಡುತ್ತಾನೆ. ಅಂಥವನು ಇಡೀ ಭೂಮಿಯನ್ನೇ ದಾನವಾಗಿ ಕೊಡಲು ಬಂದರೂ ಯಾರು ತಾನೇ ಅವನನ್ನು ನೋಡಲು ಇಚ್ಛಿಸುತ್ತಾರೆ?

12170016a ಶ್ರಿಯಾ ಹ್ಯಭೀಕ್ಷ್ಣಂ ಸಂವಾಸೋ ಮೋಹಯತ್ಯವಿಚಕ್ಷಣಮ್|

12170016c ಸಾ ತಸ್ಯ ಚಿತ್ತಂ ಹರತಿ ಶಾರದಾಭ್ರಮಿವಾನಿಲಃ||

ಧನಸಂಪತ್ತಿಯ ನಿರಂತರ ಸಹವಾಸವು ಮೂರ್ಖನನ್ನು ಮೋಹಗೊಳಿಸುತ್ತದೆ. ಗಾಳಿಯು ಶರತ್ಕಾಲದ ಮೇಘಗಳನ್ನು ಚದುರಿಸಿಕೊಂಡು ಹೋಗುವಂತೆ ಅಪಾರ ಸಂಪತ್ತಿಯು ಮೂರ್ಖನ ಬುದ್ಧಿಯನ್ನು ಅಪಹರಿಸಿಬಿಡುತ್ತದೆ.

12170017a ಅಥೈನಂ ರೂಪಮಾನಶ್ಚ ಧನಮಾನಶ್ಚ ವಿಂದತಿ|

12170017c ಅಭಿಜಾತೋಽಸ್ಮಿ ಸಿದ್ಧೋಽಸ್ಮಿ ನಾಸ್ಮಿ ಕೇವಲಮಾನುಷಃ|

12170017e ಇತ್ಯೇಭಿಃ ಕಾರಣೈಸ್ತಸ್ಯ ತ್ರಿಭಿಶ್ಚಿತ್ತಂ ಪ್ರಸಿಚ್ಯತೇ||

ಆಗ ಅವನನ್ನು ರೂಪ ಮತ್ತು ಧನದ ಅಭಿಮಾನಗಳು ಆವರಿಸುತ್ತವೆ. ಉತ್ತಮ ಕುಲದಲ್ಲಿ ಹುಟ್ಟಿದ್ದೇನೆ, ಸಾಧಿಸಿದವನಾಗಿದ್ದೇನೆ, ಮತ್ತು ನಾನು ಸಾಧಾರಣ ಮನುಷ್ಯನಲ್ಲ ಎಂಬ ಈ ಮೂರು ಕಾರಣಗಳಿಂದ ಅವನ ಮನಸ್ಸು ಎಚ್ಚರತಪ್ಪುತ್ತದೆ.

12170018a ಸ ಪ್ರಸಿಕ್ತಮನಾ ಭೋಗಾನ್ವಿಸೃಜ್ಯ ಪಿತೃಸಂಚಿತಾನ್|

12170018c ಪರಿಕ್ಷೀಣಃ ಪರಸ್ವಾನಾಮಾದಾನಂ ಸಾಧು ಮನ್ಯತೇ||

ಭೋಗಾಸಕ್ತನಾಗಿ ದುಂದುವೆಚ್ಚಮಾಡುತ್ತಾ ಪಿತ್ರಾರ್ಜಿತ ಸಂಪತ್ತನ್ನು ಕಳೆದುಕೊಂಡು ದರಿದ್ರನಾಗಿ ಇತರರ ಸ್ವತ್ತನ್ನು ಅಪಹರಿಸುವುದೇ ಯೋಗ್ಯವೆಂದು ಭಾವಿಸುತ್ತಾನೆ.

12170019a ತಮತಿಕ್ರಾಂತಮರ್ಯಾದಮಾದದಾನಂ ತತಸ್ತತಃ|

12170019c ಪ್ರತಿಷೇಧಂತಿ ರಾಜಾನೋ ಲುಬ್ಧಾ ಮೃಗಮಿವೇಷುಭಿಃ||

ಹೀಗೆ ಲೋಕಮರ್ಯಾದೆಯನ್ನೂ ಅತಿಕ್ರಮಿಸಿ ಅಲ್ಲಲ್ಲಿ ಕಳ್ಳತನ ಮಾಡಿ ಧನಸಂಪಾದನೆಯನ್ನು ಪ್ರಾರಂಭಿಸುವ ಮನುಷ್ಯನನ್ನು ಬೇಡರು ಜಿಂಕೆಯನ್ನು ಬಾಣಗಳಿಂದ ಪ್ರಹರಿಸುವಂತೆ ರಾಜರು ದಂಡನೆಗಳಿಂದ ತಡೆಯುತ್ತಾರೆ.

12170020a ಏವಮೇತಾನಿ ದುಃಖಾನಿ ತಾನಿ ತಾನೀಹ ಮಾನವಮ್|

12170020c ವಿವಿಧಾನ್ಯುಪವರ್ತಂತೇ ಗಾತ್ರಸಂಸ್ಪರ್ಶಜಾನಿ ಚ||

ಹೀಗೆ ಮನಸ್ಸಿಗೆ ಪರಿತಾಪವನ್ನುಂಟುಮಾಡುವ ಮತ್ತು ಶರೀರಕ್ಕೂ ಘಾಸಿಯಾಗುವಂತೆ ಮಾಡುವ ವಿವಿಧ ದುಃಖಗಳು ಮನುಷ್ಯನಿಗಾಗುತ್ತವೆ.

12170021a ತೇಷಾಂ ಪರಮದುಃಖಾನಾಂ ಬುದ್ಧ್ಯಾ ಭೈಷಜ್ಯಮಾಚರೇತ್|

12170021c ಲೋಕಧರ್ಮಂ ಸಮಾಜ್ಞಾಯ[4] ಧ್ರುವಾಣಾಮಧ್ರುವೈಃ ಸಹ||

ಅನಿತ್ಯವಾದ ಶರೀರದೊಡನೆ ಸೇರಿಬಂದಿರುವ ಆ ಪರಮದುಃಖಗಳಿಗೆ ಲೋಕಧರ್ಮವನ್ನು ತಿಳಿದುಕೊಂಡು ಬುದ್ಧಿಯ ಮೂಲಕ ಶಾಶ್ವತ ಚಿಕಿತ್ಸೆಯನ್ನು ನಡೆಸಬೇಕು.

12170022a ನಾತ್ಯಕ್ತ್ವಾ ಸುಖಮಾಪ್ನೋತಿ ನಾತ್ಯಕ್ತ್ವಾ ವಿಂದತೇ ಪರಮ್|

12170022c ನಾತ್ಯಕ್ತ್ವಾ ಚಾಭಯಃ ಶೇತೇ ತ್ಯಕ್ತ್ವಾ ಸರ್ವಂ ಸುಖೀ ಭವ||

ತ್ಯಾಗಮಾಡದೇ ಸುಖವನ್ನು ಹೊಂದುವುದಿಲ್ಲ. ತ್ಯಾಗಮಾಡದೇ ಪರಮ ಪದವನ್ನು ಪಡೆಯುವುದಿಲ್ಲ. ತ್ಯಾಗಮಾಡದೇ ಅಭಯನಾಗಿ ನಿದ್ರಿಸುವುದಿಲ್ಲ. ಆದುದರಿಂದ ಎಲ್ಲವನ್ನೂ ತ್ಯಜಿಸಿ ಸುಖಿಯಾಗಿರು.”

12170023a ಇತ್ಯೇತದ್ಧಾಸ್ತಿನಪುರೇ ಬ್ರಾಹ್ಮಣೇನೋಪವರ್ಣಿತಮ್|

12170023c ಶಮ್ಯಾಕೇನ ಪುರಾ ಮಹ್ಯಂ ತಸ್ಮಾತ್ತ್ಯಾಗಃ ಪರೋ ಮತಃ||

ಹಿಂದೆ ನಾನು ಹಸ್ತಿನಾಪುರದಲ್ಲಿದ್ದಾಗ ಬ್ರಾಹ್ಮಣ ಶಮ್ಯಾಕನು ನನಗೆ ತ್ಯಾಗದ ಮಹಿಮೆಯನ್ನು ಹೀಗೆ ಹೇಳಿದ್ದನು. ಆದುದರಿಂದ ತ್ಯಾಗವೇ ಪರಮಶ್ರೇಷ್ಠವೆಂಬ ಮತವಿದೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶಮ್ಯಾಕಗೀತಾಯಾಂ ಸಪ್ತತ್ಯಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶಮ್ಯಾಕಗೀತಾ ಎನ್ನುವ ನೂರಾಎಪ್ಪತ್ತನೇ ಅಧ್ಯಾಯವು.

[1] ಶಂಪಾಕಗೀತಾ ಎಂಬ ಪಾಠಾಂತರವೂ ಇದೆ (ಗೀತಾ ಪ್ರೆಸ್; ಭಾರತ ದರ್ಶನ).

[2] ಶಂಪೇಕೇನೇಹ ಮುಕ್ತೇನ (ಗೀತಾ ಪ್ರೆಸ್).

[3] ಅನಮಿತ್ರಪಥೋ ಹ್ಯೇಷ ದುರ್ಲಭಃ ಸುಲಭೋ ಮನಃ| (ಗೀತಾ ಪ್ರೆಸ್; ಭಾರತ ದರ್ಶನ).

[4] ಲೋಕಧರ್ಮಮವಜ್ಞಾಯ (ಗೀತಾ ಪ್ರೆಸ್, ಭಾರತ ದರ್ಶನ).

Comments are closed.