Shanti Parva: Chapter 172

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೧೭೨

ಪ್ರಹ್ರಾದ-ಆಜಗರ ಸಂವಾದ

ಪ್ರಹ್ರಾದ ಮತ್ತು ಆಜಗರ ವೃತ್ತಿಯನ್ನಾಚರಿಸುತ್ತಿದ್ದ ಮುನಿಯ ಸಂವಾದ (೧-೩೭).

12172001 ಯುಧಿಷ್ಠಿರ ಉವಾಚ|

12172001a ಕೇನ ವೃತ್ತೇನ ವೃತ್ತಜ್ಞ ವೀತಶೋಕಶ್ಚರೇನ್ಮಹೀಮ್|

12172001c ಕಿಂ ಚ ಕುರ್ವನ್ನರೋ ಲೋಕೇ ಪ್ರಾಪ್ನೋತಿ ಪರಮಾಂ ಗತಿಮ್||

ಯುಧಿಷ್ಠಿರನು ಹೇಳಿದನು: “ಸದಾಚಾರವನ್ನು ತಿಳಿದಿರುವ ಪಿತಾಮಹ! ಮನುಷ್ಯನು ಯಾವ ಆಚಾರ-ವ್ಯವಹಾರಗಳಿಂದ ಶೋಕರಹಿತನಾಗಿ ಪ್ರಪಂಚಪರ್ಯಟನ ಮಾಡಬಲ್ಲನು ಮತ್ತು ಯಾವ ಕರ್ಮವನ್ನು ಮಾಡುವುದರಿಂದ ಪರಮ ಗತಿಯನ್ನು ಹೊಂದುತ್ತಾನೆ?”

12172002 ಭೀಷ್ಮ ಉವಾಚ|

12172002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12172002c ಪ್ರಹ್ರಾದಸ್ಯ ಚ ಸಂವಾದಂ ಮುನೇರಾಜಗರಸ್ಯ ಚ||

ಭೀಷ್ಮನು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಪ್ರಹ್ರಾದ[1] ಮತ್ತು ಅಜಗರ ವೃತ್ತಿಯ ಮುನಿಯ ನಡುವಿನ ಸಂವಾದವನ್ನು ಉದಾಹರಿಸುತ್ತಾರೆ.

12172003a ಚರಂತಂ ಬ್ರಾಹ್ಮಣಂ ಕಂ ಚಿತ್ಕಲ್ಯಚಿತ್ತಮನಾಮಯಮ್[2]|

12172003c ಪಪ್ರಚ್ಚ ರಾಜನ್ಪ್ರಹ್ರಾದೋ ಬುದ್ಧಿಮಾನ್ಪ್ರಾಜ್ಞಸಂಮತಃ||

ರಾಜನ್! ಪ್ರಪಂಚಪರ್ಯಟನೆ ಮಾಡುತ್ತಿದ್ದ ಓರ್ವ ಸುದೃಢಚಿತ್ತ ದುಃಖ-ಶೋಕರಹಿತ ಮತ್ತು ಪ್ರಾಜ್ಞಸಮ್ಮತ ಬುದ್ಧಿಮಾನ್ ಬ್ರಾಹ್ಮಣನನ್ನು ಪ್ರಹ್ರಾದನು ಕೇಳಿದನು:

12172004a ಸ್ವಸ್ಥಃ ಶಕ್ತೋ ಮೃದುರ್ದಾಂತೋ ನಿರ್ವಿವಿತ್ಸೋಽನಸೂಯಕಃ|

12172004c ಸುವಾಗ್ಬಹುಮತೋ ಲೋಕೇ ಪ್ರಾಜ್ಞಶ್ಚರಸಿ ಬಾಲವತ್||

“ಸ್ವಸ್ಥ, ಶಕ್ತಿವಂತ, ಮೃದು, ದಾಂತ, ಕರ್ಮಾರಂಭಗಳನ್ನು ಮಾಡದ, ಅನಸೂಯಕ, ಸುಂದರವಾಗಿ ಮಾತನಾಡುವ, ಬಹುಮತ ಪ್ರಾಜ್ಞನಾದ ನೀನು ಬಾಲಕನಂತೆ ಲೋಕದಲ್ಲಿ ಸಂಚರಿಸುತ್ತಿರುವೆ.

12172005a ನೈವ ಪ್ರಾರ್ಥಯಸೇ ಲಾಭಂ ನಾಲಾಭೇಷ್ವನುಶೋಚಸಿ|

12172005c ನಿತ್ಯತೃಪ್ತ ಇವ ಬ್ರಹ್ಮನ್ನ ಕಿಂ ಚಿದವಮನ್ಯಸೇ[3]||

ಬ್ರಹ್ಮನ್! ನೀನು ಯಾವ ಲಾಭವನ್ನೂ ಬಯಸುತ್ತಿಲ್ಲ ಮತ್ತು ಹಾನಿಯಾದಾಗ ಅದಕ್ಕಾಗಿ ಶೋಕಿಸುವುದೂ ಇಲ್ಲ. ನಿತ್ಯತೃಪ್ತನಾಗಿರುವ ನೀನು ಯಾವುದನ್ನೂ ಪರಿಗಣಿಸುವುದಿಲ್ಲ.

12172006a ಸ್ರೋತಸಾ ಹ್ರಿಯಮಾಣಾಸು ಪ್ರಜಾಸ್ವವಿಮನಾ ಇವ|

12172006c ಧರ್ಮಕಾಮಾರ್ಥಕಾರ್ಯೇಷು ಕೂಟಸ್ಥ ಇವ ಲಕ್ಷ್ಯಸೇ||

ಎಲ್ಲರೂ ಕಾಮಾಕ್ರೋಧಾದಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವಾಗ ನೀನು ಅವುಗಳಲ್ಲಿ ಉದಾಸೀನನಂತಿದ್ದು ಧರ್ಮಕಾಮಾರ್ಥಕಾರ್ಯಗಳಲ್ಲಿಯೂ ಕೂಟಸ್ಥನಂತೆ[4] ಕಾಣುತ್ತಿರುವೆ.

12172007a ನಾನುತಿಷ್ಠಸಿ ಧರ್ಮಾರ್ಥೌ ನ ಕಾಮೇ ಚಾಪಿ ವರ್ತಸೇ|

12172007c ಇಂದ್ರಿಯಾರ್ಥಾನನಾದೃತ್ಯ ಮುಕ್ತಶ್ಚರಸಿ ಸಾಕ್ಷಿವತ್||

ನೀನು ಧರ್ಮಾರ್ಥ ಸಂಬಂಧೀ ಕಾರ್ಯಗಳ ಅನುಷ್ಠಾನಮಾಡುತ್ತಿಲ್ಲ ಮತ್ತು ಕಾಮದಲ್ಲಿಯೂ ನಿನ್ನ ಪ್ರವೃತ್ತಿಯಿಲ್ಲ. ನೀನು ಇಂದ್ರಿಯಗಳ ಸಂಪೂರ್ಣ ವಿಷಯಗಳನ್ನೂ ಉಪೇಕ್ಷಿಸಿ ಸಾಕ್ಷಿಯಂತೆ ಮುಕ್ತರೂಪದಲ್ಲಿ ಸಂಚರಿಸುತ್ತಿರುವೆ.

12172008a ಕಾ ನು ಪ್ರಜ್ಞಾ ಶ್ರುತಂ ವಾ ಕಿಂ ವೃತ್ತಿರ್ವಾ ಕಾ ನು ತೇ ಮುನೇ|

12172008c ಕ್ಷಿಪ್ರಮಾಚಕ್ಷ್ವ ಮೇ ಬ್ರಹ್ಮನ್ ಶ್ರೇಯೋ ಯದಿಹ ಮನ್ಯಸೇ||

ಬ್ರಹ್ಮನ್! ಮುನೇ! ನಿನ್ನ ಪ್ರಜ್ಞೆಯು ಎಂಥಹುದು? ನೀನು ಏನನ್ನು ಅಧ್ಯಯನಮಾಡಿರುವೆಯೆಂದು ಹೀಗಿರುವೆ? ನಿನ್ನ ವೃತ್ತಿಯು ಯಾವುದು? ಇಲ್ಲಿ ನನಗೆ ಶ್ರೇಯಸ್ಸನ್ನುಂಟುಮಾಡುವುದು ಯಾವುದು ಎಂದು ನಿನ್ನ ಮತ? ಬೇಗನೇ ಹೇಳು.”

12172009a ಅನುಯುಕ್ತಃ ಸ ಮೇಧಾವೀ ಲೋಕಧರ್ಮವಿಧಾನವಿತ್|

12172009c ಉವಾಚ ಶ್ಲಕ್ಷ್ಣಯಾ ವಾಚಾ ಪ್ರಹ್ರಾದಮನಪಾರ್ಥಯಾ||

ಪ್ರಹ್ರಾದನು ಹೀಗೆ ಪ್ರಾರ್ಥಿಸಲು ಲೋಕಧರ್ಮದ ವಿಧಾನವನ್ನು ತಿಳಿದಿದ್ದ ಮೇಧಾವೀ ಮುನಿಯು ಮಧುರವಾದ ಅರ್ಥಯುಕ್ತವಾದ ಈ ಮಾತುಗಳನ್ನಾಡಿದನು:

12172010a ಪಶ್ಯನ್ ಪ್ರಹ್ರಾದ ಭೂತಾನಾಮುತ್ಪತ್ತಿಮನಿಮಿತ್ತತಃ|

12172010c ಹ್ರಾಸಂ ವೃದ್ಧಿಂ ವಿನಾಶಂ ಚ ನ ಪ್ರಹೃಷ್ಯೇ ನ ಚ ವ್ಯಥೇ||

“ಪ್ರಹ್ರಾದ! ನೋಡು! ಪ್ರಪಂಚದಲ್ಲಿ ಭೂತಗಳ ಉತ್ಪತ್ತಿ, ವೃತ್ತಿ, ಅವನತಿ ಮತ್ತು ವಿನಾಶ – ಇವುಗಳೆಲ್ಲವೂ ಕಾರಣವಿಲ್ಲದೆಯೇ ನಡೆಯುತ್ತವೆ. ಅದಕ್ಕಾಗಿ ನಾನು ಹರ್ಷಪಡುವುದೂ ಇಲ್ಲ. ವ್ಯಥೆಪಡುವುದೂ ಇಲ್ಲ.

12172011a ಸ್ವಭಾವಾದೇವ ಸಂದೃಶ್ಯ ವರ್ತಮಾನಾಃ ಪ್ರವೃತ್ತಯಃ|

12172011c ಸ್ವಭಾವನಿರತಾಃ ಸರ್ವಾಃ ಪರಿತಪ್ಯೇ[5] ನ ಕೇನ ಚಿತ್||

ಪೂರ್ವಕೃತ ಕರ್ಮಾನುಸಾರ ಉಂಟಾಗಿರುವ ಸ್ವಭಾವದಿಂದಲೇ ಪ್ರಾಣಿಗಳ ವರ್ತಮಾನ ಪ್ರವೃತ್ತಿಗಳು ಪ್ರಕಟವಾಗುತ್ತವೆ. ಆದುದರಿಂದ ಸಮಸ್ತ ಪ್ರಜೆಗಳೂ ಸ್ವಭಾವದಲ್ಲಿಯೇ ತತ್ಪರರಾಗಿರುತ್ತಾರೆ. ಅವರಿಗೆ ಬೇರೆ ಯಾವ ಆಶ್ರಯವೂ ಇಲ್ಲ. ಈ ರಹಸ್ಯವನ್ನು ತಿಳಿದು ಮನುಷ್ಯನಿಗೆ ಯಾವುದೇ ಪರಿಸ್ಥಿತಿಯಲ್ಲಿಯೂ ಪರಿತಪಿಸಬೇಕಾಗಿಲ್ಲ.

12172012a ಪಶ್ಯನ್ಪ್ರಹ್ರಾದ ಸಂಯೋಗಾನ್ವಿಪ್ರಯೋಗಪರಾಯಣಾನ್|

12172012c ಸಂಚಯಾಂಶ್ಚ ವಿನಾಶಾಂತಾನ್ನ ಕ್ವ ಚಿದ್ವಿದಧೇ ಮನಃ||

ಪ್ರಹ್ರಾದ! ನೋಡು! ಸಂಯೋಗಗಳು ವಿಯೋಗಗಳಲ್ಲಿಯೇ ಕೊನೆಗೊಳ್ಳುತ್ತವೆ. ಸಂಚಯಗಳೆಲ್ಲವೂ ವಿನಾಶದಲ್ಲಿಯೇ ಅಂತ್ಯವಾಗುತ್ತವೆ. ಇದನ್ನು ನೋಡಿ ನನ್ನ ಮನಸ್ಸು ಸಂಯೋಗ-ಸಂಚಯಗಳಿಂದ ದೂರಸರಿದಿದೆ. ಯಾವುದರಲ್ಲಿಯೂ ಪ್ರವೃತ್ತವಾಗಿಲ್ಲ.

12172013a ಅಂತವಂತಿ ಚ ಭೂತಾನಿ ಗುಣಯುಕ್ತಾನಿ ಪಶ್ಯತಃ|

12172013c ಉತ್ಪತ್ತಿನಿಧನಜ್ಞಸ್ಯ ಕಿಂ ಕಾರ್ಯಮವಶಿಷ್ಯತೇ||

ಸತ್ತ್ವ-ರಜೋ-ತಮೋಗುಣಯುಕ್ತವಾದ ಭೂತಗಳೆಲ್ಲವೂ ಅಂತ್ಯವಾಗುವುದನ್ನು ನೋಡುತ್ತಿರುವವನಿಗೆ ಮತ್ತು ಉತ್ಪತ್ತಿ-ನಿಧನಗಳನ್ನು ತಿಳಿದಿರುವವನಿಗೆ ಇಲ್ಲಿ ಮಾಡಬೇಕಾದ ಕಾರ್ಯವಾದರೂ ಏನು ಉಳಿದುಕೊಂಡಿದೆ?

12172014a ಜಲಜಾನಾಮಪಿ ಹ್ಯಂತಂ ಪರ್ಯಾಯೇಣೋಪಲಕ್ಷಯೇ|

12172014c ಮಹತಾಮಪಿ ಕಾಯಾನಾಂ ಸೂಕ್ಷ್ಮಾಣಾಂ ಚ ಮಹೋದಧೌ||

ಮಹಾಸಾಗರದಲ್ಲಿ ಹುಟ್ಟಿ ವಾಸಿಸುತ್ತಿರುವ ವಿಶಾಲ ಶರೀರಗಳ ತಿಮಿಂಗಿಲಗಳೂ ಮತ್ತು ಸೂಕ್ಷ್ಮ ಕ್ರಿಮಿ-ಕೀಟಗಳೂ ಮತ್ತೆ ಮತ್ತೆ ವಿನಾಶಗೊಳ್ಳುವುದನ್ನು ನಾನು ನೋಡುತ್ತೇನೆ.

12172015a ಜಂಗಮಸ್ಥಾವರಾಣಾಂ ಚ ಭೂತಾನಾಮಸುರಾಧಿಪ|

12172015c ಪಾರ್ಥಿವಾನಾಮಪಿ ವ್ಯಕ್ತಂ ಮೃತ್ಯುಂ ಪಶ್ಯಾಮಿ ಸರ್ವಶಃ||

ಅಸುರಾಧಿಪ! ಭೂಮಿಯ ಮೇಲಿರುವ ಸ್ಥಾವರ-ಜಂಗಮ ಪ್ರಾಣಿಗಳೆಲ್ಲವೂ ಮೃತ್ಯುಹೊಂದುವುದನ್ನು ನಾನು ಸ್ಪಷ್ಟವಾಗಿ ನೋಡುತ್ತಿದ್ದೇನೆ.

12172016a ಅಂತರಿಕ್ಷಚರಾಣಾಂ ಚ ದಾನವೋತ್ತಮ ಪಕ್ಷಿಣಾಮ್|

12172016c ಉತ್ತಿಷ್ಠತಿ ಯಥಾಕಾಲಂ ಮೃತ್ಯುರ್ಬಲವತಾಮಪಿ||

ದಾನವೋತ್ತಮ! ಆಕಾಶದಲ್ಲಿ ಸಂಚರಿಸುವ ಮಹಾಬಲಶಾಲೀ ಪಕ್ಷಿಗಳಿಗೂ ಕಾಲಾನುಕ್ರಮವಾಗಿ ಮೃತ್ಯುವು ಪ್ರಾಪ್ತವಾಗುತ್ತದೆ.

12172017a ದಿವಿ ಸಂಚರಮಾಣಾನಿ ಹ್ರಸ್ವಾನಿ ಚ ಮಹಾಂತಿ ಚ|

12172017c ಜ್ಯೋತೀಂಷಿ ಚ ಯಥಾಕಾಲಂ ಪತಮಾನಾನಿ ಲಕ್ಷಯೇ||

ಆಕಾಶದಲ್ಲಿ ಸಂಚರಿಸುವ ಚಿಕ್ಕ ಮತ್ತು ದೊಡ್ಡ ಜ್ಯೋತಿರ್ಮಯ ನಕ್ಷತ್ರಗಳೂ ಯಥಾಕಾಲದಲ್ಲಿ ಕೆಳಕ್ಕೆ ಬೀಳುವುದು ತೋರುತ್ತದೆ.

12172018a ಇತಿ ಭೂತಾನಿ ಸಂಪಶ್ಯನ್ನನುಷಕ್ತಾನಿ ಮೃತ್ಯುನಾ|

12172018c ಸರ್ವಸಾಮಾನ್ಯತೋ ವಿದ್ವಾನ್ ಕೃತಕೃತ್ಯಃ ಸುಖಂ ಸ್ವಪೇ||

ಹೀಗೆ ನಾನು ಸರ್ವ ಭೂತಗಳೂ ಮೃತ್ಯುವಿನಿಂದ ಬಂಧಿತವಾಗಿರುವುದನ್ನು ನೋಡುತ್ತೇನೆ. ಇದಕ್ಕಾಗಿಯೇ ತತ್ತ್ವವನ್ನು ತಿಳಿದು ಕೃತಕೃತ್ಯನಾಗಿ ಎಲ್ಲದರ ಕುರಿತು ಸಮಾನ ಭಾವವನ್ನಿಟ್ಟುಕೊಂಡು ಸುಖವಾಗಿ ನಿದ್ರಿಸುತ್ತೇನೆ.

12172019a ಸುಮಹಾಂತಮಪಿ ಗ್ರಾಸಂ ಗ್ರಸೇ ಲಬ್ಧಂ ಯದೃಚ್ಚಯಾ|

12172019c ಶಯೇ ಪುನರಭುಂಜಾನೋ ದಿವಸಾನಿ ಬಹೂನ್ಯಪಿ||

ದೈವೇಚ್ಛೆಯಿಂದ ಆಕಸ್ಮಿಕವಾಗಿ ಹೆಚ್ಚಿನ ಆಹಾರವು ಸಿಕ್ಕಿದರೆ ಅಷ್ಟನ್ನೂ ತಿಂದುಬಿಡುತ್ತೇನೆ. ಅದೂ ಸಿಕ್ಕದಿದ್ದರೆ ಅನೇಕ ದಿವಸಗಳ ವರೆಗೆ ಆಹಾರವಿಲ್ಲದೇ ಮಲಗುತ್ತೇನೆ.

12172020a ಆಸ್ರವತ್ಯಪಿ[6] ಮಾಮನ್ನಂ ಪುನರ್ಬಹುಗುಣಂ ಬಹು|

12172020c ಪುನರಲ್ಪಗುಣಂ ಸ್ತೋಕಂ ಪುನರ್ನೈವೋಪಪದ್ಯತೇ||

ಕೆಲವೊಮ್ಮೆ ಬಹುಗುಣಯುಕ್ತ ಸಮೃದ್ಧ ಮೃಷ್ಟಾನ್ನ ಭೋಜನವು ದೊರೆಯುತ್ತದೆ. ಕೆಲವೊಮ್ಮೆ ಸ್ವಲ್ಪವೇ ಆಹಾರವು ದೊರೆಯುತ್ತದೆ. ಕೆಲವೊಮ್ಮೆ ಅತ್ಯಲ್ಪ ಆಹಾರವು ದೊರಕಿದರೆ ಇನ್ನು ಕೆಲವೊಮ್ಮೆ ಆಹಾರವೇ ದೊರಕುವುದಿಲ್ಲ.

12172021a ಕಣಾನ್ಕದಾ ಚಿತ್ಖಾದಾಮಿ ಪಿಣ್ಯಾಕಮಪಿ ಚ ಗ್ರಸೇ|

12172021c ಭಕ್ಷಯೇ ಶಾಲಿಮಾಂಸಾನಿ ಭಕ್ಷಾಂಶ್ಚೋಚ್ಚಾವಚಾನ್ಪುನಃ||

ಒಮ್ಮೊಮ್ಮೆ ಕಾಳಿನ ಕಿರುನುಚ್ಚನ್ನೇ ತಿನ್ನುತ್ತೇನೆ. ಕೆಲವೊಮ್ಮೆ ಎಣ್ಣೆತೆಗೆದ ಹಿಂಡಿಯನ್ನೇ ತಿನ್ನುತ್ತೇನೆ. ಕೆಲವೊಮ್ಮೆ ಶಾಲ್ಯಾನ್ನಾದಿಗಳನ್ನು ತಿನ್ನುತ್ತೇನೆ. ಇನ್ನು ಕೆಲವೊಮ್ಮೆ ಭಕ್ಷಗಳು ದೊರಕಿದಾಗ ಅವನ್ನೂ ತಿನ್ನುತ್ತೇನೆ.

12172022a ಶಯೇ ಕದಾ ಚಿತ್ಪರ್ಯಂಕೇ ಭೂಮಾವಪಿ ಪುನಃ ಶಯೇ|

12172022c ಪ್ರಾಸಾದೇಽಪಿ ಚ ಮೇ ಶಯ್ಯಾ ಕದಾ ಚಿದುಪಪದ್ಯತೇ||

ಕೆಲವೊಮ್ಮೆ ಪರ್ಯಂಕದ ಮೇಲೆ ಮಲಗುತ್ತೇನೆ. ಪುನಃ ಇನ್ನೊಮ್ಮೆ ನೆಲದ ಮೇಲೆ ಮಲಗುತ್ತೇನೆ. ಕೆಲವೊಮ್ಮೆ ಮಲಗಲು ಭವನಗಳಲ್ಲಿ ಪ್ರಾಸಾದಗಳೂ ದೊರೆಯುತ್ತವೆ.

12172023a ಧಾರಯಾಮಿ ಚ ಚೀರಾಣಿ ಶಾಣೀಂ ಕ್ಷೌಮಾಜಿನಾನಿ ಚ|

12172023c ಮಹಾರ್ಹಾಣಿ ಚ ವಾಸಾಂಸಿ ಧಾರಯಾಮ್ಯಹಮೇಕದಾ||

ನಾರುಮಡಿಯನ್ನುಡುತ್ತೇನೆ. ಸೆಣಬಿನ ಬಟ್ಟೆಗಳನ್ನು ಧರಿಸುತ್ತೇನೆ. ಕೆಲವೊಮ್ಮೆ ರೇಷ್ಮೆ ವಸ್ತ್ರಗಳನ್ನೂ, ಕೆಲವೊಮ್ಮೆ ಮೃಗಚರ್ಮವನ್ನೂ ಧರಿಸುತ್ತೇನೆ. ಕೆಲವೊಮ್ಮೆ ಪೀತಾಂಬರಗಳನ್ನೂ ಉಡುತ್ತೇನೆ.

12172024a ನ ಸಂನಿಪತಿತಂ ಧರ್ಮ್ಯಮುಪಭೋಗಂ ಯದೃಚ್ಚಯಾ|

12172024c ಪ್ರತ್ಯಾಚಕ್ಷೇ ನ ಚಾಪ್ಯೇನಮನುರುಧ್ಯೇ ಸುದುರ್ಲಭಮ್||

ದೈವೇಚ್ಛೆಯಿಂದ ನನಗೆ ಧರ್ಮಾನುಕೂಲವಾದ ಭೋಗ್ಯಪದಾರ್ಥಗಳು ದೊರಕಿದರೆ ಅವನ್ನು ನಾನು ದ್ವೇಷಿಸುವುದಿಲ್ಲ. ಉಪಭೋಗಿಸುತ್ತೇನೆ. ಅಂಥಹ ಭೋಗ್ಯವಸ್ತುಗಳನ್ನು ನಾನು ನಿರೀಕ್ಷಿಸುವುದಿಲ್ಲ. ದುರ್ಲಭವಾದ ಭೋಗ್ಯವಸ್ತುಗಳನ್ನು ಪಡೆದುಕೊಳ್ಳಲು ಎಂದೂ ಬಯಸುವುದೂ ಇಲ್ಲ.

12172025a ಅಚಲಮನಿಧನಂ ಶಿವಂ ವಿಶೋಕಂ

ಶುಚಿಮತುಲಂ ವಿದುಷಾಂ ಮತೇ ನಿವಿಷ್ಟಮ್|

12172025c ಅನಭಿಮತಮಸೇವಿತಂ ಚ ಮೂಢೈರ್

ವ್ರತಮಿದಮಾಜಗರಂ ಶುಚಿಶ್ಚರಾಮಿ||

ನಾನು ಯಾವಾಗಲೂ ಶುಚಿಯಾಗಿದ್ದು, ಸುದೃಢವಾದ, ಅಮೃತರೂಪವಾದ, ಮಂಗಳಕರವಾದ, ಶೋಕರಹಿತವಾದ, ಪರಿಶುದ್ಧವಾದ, ಅನುಪಮವಾದ, ವಿದ್ವಾಂಸರ ಅಭಿಮತಕ್ಕೆ ಅನುಗುಣವಾದ, ಮೂಢರು ಅನುಮೋದಿಸದ, ಮತ್ತು ಆಚರಿಸಲು ಕಷ್ಟಸಾಧ್ಯವಾದ ಆಜಗರವ್ರತ[7]ವನ್ನು ಆಚರಿಸುತ್ತೇನೆ.

12172026a ಅಚಲಿತಮತಿರಚ್ಯುತಃ ಸ್ವಧರ್ಮಾತ್

ಪರಿಮಿತಸಂಸರಣಃ ಪರಾವರಜ್ಞಃ|

12172026c ವಿಗತಭಯಕಷಾಯಲೋಭಮೋಹೋ

ವ್ರತಮಿದಮಾಜಗರಂ ಶುಚಿಶ್ಚರಾಮಿ||

ಅಚಲಿತ ಬುದ್ಧಿಯನ್ನು ಹೊಂದಿ, ಸ್ವಧರ್ಮದಿಂದ ಚ್ಯುತನಾಗದೇ, ಪ್ರಾಪಂಚಿಕ ವಿಷಯಗಳಲ್ಲಿ ಪರಿಮಿತವಾದ ವ್ಯವಹಾರವನ್ನು ಮಾತ್ರವೇ ಇಟ್ಟುಕೊಂಡು, ಭಯ-ಅನುರಾಗ-ಲೋಭ ಮತ್ತು ಮೋಹಗಳಿಲ್ಲದವನಾಗಿ ಪರಮಶ್ರೇಷ್ಠ ಪರಬ್ರಹ್ಮವನ್ನು ತಿಳಿದುಕೊಂಡು ಪರಿಶುದ್ಧನಾಗಿ ಈ ಆಜಗರವ್ರತವನ್ನು ಆಚರಿಸುತ್ತೇನೆ.

12172027a ಅನಿಯತಫಲಭಕ್ಷ್ಯಭೋಜ್ಯಪೇಯಂ

ವಿಧಿಪರಿಣಾಮವಿಭಕ್ತದೇಶಕಾಲಮ್|

12172027c ಹೃದಯಸುಖಮಸೇವಿತಂ ಕದರ್ಯೈರ್

ವ್ರತಮಿದಮಾಜಗರಂ ಶುಚಿಶ್ಚರಾಮಿ||

ಈ ಆಜಗರ ವ್ರತವು ನನ್ನ ಹೃದಯಕ್ಕೆ ಸುಖವನ್ನು ನೀಡುತ್ತಿದೆ. ಇದರಲ್ಲಿ ಭಕ್ಷ್ಯ-ಭೋಜ್ಯ, ಪೇಯ ಮತ್ತು ಫಲ ಮೊದಲಾದವುಗಳು ದೊರೆಯಲು ಯಾವುದೇ ನಿಯತ ವ್ಯವಸ್ಥೆಯಿರುವುದಿಲ್ಲ. ಅನಿಯತರೂಪದಲ್ಲಿ ಯಾವುದು ಸಿಕ್ಕಿದರೂ ಅದರಿಂದಲೇ ನಿರ್ವಾಹಿಸಬೇಕಾಗುತ್ತದೆ. ಈ ವ್ರತದಲ್ಲಿ ಪ್ರಾರಬ್ಧದ ಪರಿಣಾಮವನ್ನು ಅನುಸರಿಸಿ ದೇಶ ಮತ್ತು ಕಾಲಗಳ ವಿಭಾಗವು ನಿಯತವಾಗಿರುತ್ತದೆ. ವಿಷಯಲೋಲುಪ ನೀಚ ಮನುಷ್ಯನು ಈ ವ್ರತವನ್ನು ನಡೆಸಲಾರನು. ನಾನು ಪವಿತ್ರ ಭಾವದಿಂದ ಇದೇ ವ್ರತವನ್ನು ಅನುಸರಿಸುತ್ತೇನೆ.

12172028a ಇದಮಿದಮಿತಿ ತೃಷ್ಣಯಾಭಿಭೂತಂ

ಜನಮನವಾಪ್ತಧನಂ ವಿಷೀದಮಾನಮ್|

12172028c ನಿಪುಣಮನುನಿಶಾಮ್ಯ ತತ್ತ್ವಬುದ್ಧ್ಯಾ

ವ್ರತಮಿದಮಾಜಗರಂ ಶುಚಿಶ್ಚರಾಮಿ||

ಇದು ಬೇಕು, ಅದು ಬೇಕು, ಎಲ್ಲವೂ ಬೇಕು ಎಂದು ತೃಷ್ಣೆಯಿಂದ ಕೂಡಿದವರನ್ನೂ, ಧನವು ಸಿಗದೇ ಇರುವ ಕಾರಣದಿಂದ ನಿರಂತರ ವಿಷಾದಹೊಂದುವವರ ದಶೆಯನ್ನೂ ಚೆನ್ನಾಗಿ ನೋಡಿ ತಾತ್ತ್ವಿಕ ಬುದ್ಧಿಯಿಂದ ಸಂಪನ್ನನಾದ ನಾನು ಪವಿತ್ರಭಾವದಿಂದ ಈ ಆಜಗರವ್ರತವನ್ನು ಆಚರಿಸುತ್ತಿದ್ದೇನೆ.

12172029a ಬಹುವಿಧಮನುದೃಶ್ಯ ಚಾರ್ಥಹೇತೋಃ

ಕೃಪಣಮಿಹಾರ್ಯಮನಾರ್ಯಮಾಶ್ರಯಂತಮ್|

12172029c ಉಪಶಮರುಚಿರಾತ್ಮವಾನ್ ಪ್ರಶಾಂತೋ

ವ್ರತಮಿದಮಾಜಗರಂ ಶುಚಿಶ್ಚರಾಮಿ||

ಧನಕ್ಕಾಗಿ ಶ್ರೇಷ್ಠ ಪುರುಷರೂ ನೀಚ ಪುರುಷರನ್ನು ಆಶ್ರಯಿಸುವುದನ್ನು ನೋಡಿ ಧನದಲ್ಲಿರುವ ನನ್ನ ರುಚಿಯು ಪ್ರಶಾಂತವಾಗಿಬಿಟ್ಟಿದೆ. ಆದುದರಿಂದ ನಾನು ನನ್ನ ಸ್ವರೂಪವನ್ನು ಪಡೆದುಕೊಂಡು ಸರ್ವಥಾ ಶಾಂತನಾಗಿಬಿಟ್ಟಿದ್ದೇನೆ ಮತ್ತು ಪವಿತ್ರಭಾವದಿಂದ ಈ ಆಜಗರ ವ್ರತವನ್ನು ಪಾಲಿಸುತ್ತಿದ್ದೇನೆ.

12172030a ಸುಖಮಸುಖಮನರ್ಥಮರ್ಥಲಾಭಂ

ರತಿಮರತಿಂ ಮರಣಂ ಚ ಜೀವಿತಂ ಚ|

12172030c ವಿಧಿನಿಯತಮವೇಕ್ಷ್ಯ ತತ್ತ್ವತೋಽಹಂ

ವ್ರತಮಿದಮಾಜಗರಂ ಶುಚಿಶ್ಚರಾಮಿ||

ಸುಖ-ಅಸುಖ, ಲಾಭ-ಹಾನಿ, ಅನುಕೂಲ-ಪ್ರತಿಕೂಲ ಹಾಗೂ ಜೀವನ-ಮರಣ – ಇವೆಲ್ಲವೂ ದೈವಕ್ಕೆ ಅಧೀನವಾಗಿವೆ. ಇದನ್ನು ಯಥಾರ್ಥರೂಪದಲ್ಲಿ ತಿಳಿದುಕೊಂಡು ನಾನು ಶುದ್ಧಭಾವದಿಂದ ಈ ಆಜಗರವ್ರತವನ್ನು ಪಾಲಿಸುತ್ತಿದ್ದೇನೆ.

12172031a ಅಪಗತಭಯರಾಗಮೋಹದರ್ಪೋ

ಧೃತಿಮತಿಬುದ್ಧಿಸಮನ್ವಿತಃ ಪ್ರಶಾಂತಃ|

12172031c ಉಪಗತಫಲಭೋಗಿನೋ ನಿಶಾಮ್ಯ

ವ್ರತಮಿದಮಾಜಗರಂ ಶುಚಿಶ್ಚರಾಮಿ||

ನನ್ನ ಭಯ, ರಾಗ, ಮೋಹ ಮತ್ತು ಅಭಿಮಾನಗಳು ನಷ್ಟವಾಗಿಬಿಟ್ಟಿವೆ. ನಾನು ಧೃತಿ, ಮತಿ, ಮತ್ತು ಬುದ್ಧಿಸಂಪನ್ನನಾಗಿ ಪ್ರಶಾಂತನಾಗಿಬಿಟ್ಟಿದ್ದೇನೆ. ಪ್ರಾರಬ್ಧವಶ ತಾನಾಗಿಯೇ ನನ್ನ ಸಮೀಪ ಬರುವ ವಸ್ತುವನ್ನೇ ಉಪಭೋಗಮಾಡುವವರನ್ನು ನೋಡಿ ನಾನು ಪವಿತ್ರಭಾವದಿಂದ ಈ ಆಜಗರ ವ್ರತವನ್ನು ಪಾಲಿಸುತ್ತಿದ್ದೇನೆ.

12172032a ಅನಿಯತಶಯನಾಸನಃ ಪ್ರಕೃತ್ಯಾ

ದಮನಿಯಮವ್ರತಸತ್ಯಶೌಚಯುಕ್ತಃ|

12172032c ಅಪಗತಫಲಸಂಚಯಃ ಪ್ರಹೃಷ್ಟೋ

ವ್ರತಮಿದಮಾಜಗರಂ ಶುಚಿಶ್ಚರಾಮಿ||

ನನಗೆ ಮಲಗಿಕೊಳ್ಳಲು ಅಥವಾ ಕುಳಿತುಕೊಳ್ಳಲು ನಿಯತ ಸ್ಥಾನವ್ಯಾವುದೂ ಇಲ್ಲ. ನಾನು ಸ್ವಭಾವತಃ ದಮ, ನಿಯಮ, ವ್ರತ, ಸತ್ಯ ಮತ್ತು ಶೌಚಾಚಾರ ಸಂಪನ್ನನು. ನನ್ನ ಕರ್ಮಫಲಸಂಚಯವು ನಾಶವಾಗಿಬಿಟ್ಟಿದೆ. ನಾನು ಪ್ರಸನ್ನತಾಪೂರ್ವಕವಾಗಿ ಪವಿತ್ರಭಾವದಿಂದ ಈ ಆಜಗರ ವ್ರತವನ್ನು ಪಾಲಿಸುತ್ತಿದ್ದೇನೆ.

12172033a ಅಭಿಗತ[8]ಮಸುಖಾರ್ಥಮೀಹನಾರ್ಥೈರ್

ಉಪಗತಬುದ್ಧಿರವೇಕ್ಷ್ಯ ಚಾತ್ಮಸಂಸ್ಥಃ|

12172033c ತೃಷಿತಮನಿಯತಂ ಮನೋ ನಿಯಂತುಂ

ವ್ರತಮಿದಮಾಜಗರಂ ಶುಚಿಶ್ಚರಾಮಿ||

ದುಃಖಕ್ಕೆ ಕಾರಣವಾದ ಕಾಮ್ಯಪ್ರಯೋಜನಗಳಿಂದ ವಿರಕ್ತರಾದ ಆತ್ಮನಿಷ್ಠ ಮಹಾಪುರುಷರನ್ನು ನೋಡಿ ನಾನು ಸುಜ್ಞಾನವನ್ನು ಪಡೆದುಕೊಂಡಿದ್ದೇನೆ. ಆಸೆಯಿಂದ ಬದ್ಧವಾಗಿರುವ ಮತ್ತು ಚಂಚಲವಾಗಿರುವ ಮನಸ್ಸನ್ನು ನಿಯಂತ್ರಿಸಲೋಸುಗ ನಾನು ಈ ಆಜಗರ ವ್ರತವನ್ನು ಪಾಲಿಸುತ್ತಿದ್ದೇನೆ.

12172034a ನ ಹೃದಯಮನುರುಧ್ಯತೇ ಮನೋ ವಾ[9]

ಪ್ರಿಯಸುಖದುರ್ಲಭತಾಮನಿತ್ಯತಾಂ ಚ|

12172034c ತದುಭಯಮುಪಲಕ್ಷಯನ್ನಿವಾಹಂ

ವ್ರತಮಿದಮಾಜಗರಂ ಶುಚಿಶ್ಚರಾಮಿ||

ಹೃದಯವನ್ನಾಗಲೀ ಮನಸ್ಸನ್ನಾಗಲೀ ನಿರೋಧಿಸದೇ ಪ್ರಿಯವನ್ನುಂಟುಮಾಡುವ ವಿಷಯಸುಖಗಳಿಗಾಗಿಯೇ ಹಾತೊರೆಯುವವರನ್ನೂ ಮತ್ತು ಆ ವಿಷಯಸುಖಗಳು ಅವರಿಗೆ ಲಭಿಸದೇ ಇರುವುದನ್ನೂ, ಲಭಿಸಿದರೂ ಶಾಶ್ವತವಾಗಿ ಉಳಿಯದೇ ಇರುವುದನ್ನೂ – ಈ ಎರಡನ್ನು ಲಕ್ಷ್ಯವಿಟ್ಟು ನೋಡುವವನಂತೆ ನಾನು ಅವೇಕ್ಷಿಸಿ ಇದಕ್ಕೆ ಔಷಧಪ್ರಾಯವಾಗಿರುವ ಈ ಆಜಗರವ್ರತವನ್ನು ಪವಿತ್ರಭಾವದಿಂದ ಆಚರಿಸುತ್ತಿದ್ದೇನೆ.

12172035a ಬಹು ಕಥಿತಮಿದಂ ಹಿ ಬುದ್ಧಿಮದ್ಭಿಃ

ಕವಿಭಿರಭಿಪ್ರಥಯದ್ಭಿರಾತ್ಮಕೀರ್ತಿಮ್|

12172035c ಇದಮಿದಮಿತಿ ತತ್ರ ತತ್ರ ತತ್ತತ್

ಸ್ವಪರಮತೈರ್ಗಹನಂ ಪ್ರತರ್ಕಯದ್ಭಿಃ||

ತಮ್ಮ ಕೀರ್ತಿಯನ್ನು ವಿಸ್ತಾರಗೊಳಿಸುವ ಬುದ್ಧಿವಂತರು ತಮ್ಮ ಮತ್ತು ಇತರರ ಅಭಿಪ್ರಾಯಗಳಿಂದ ಗಹನವಾದ ಈ ವ್ರತದ ವಿಷಯವಾಗಿ ತರ್ಕ-ವಿತರ್ಕಗಳನ್ನು ಮಾಡುತ್ತಾ ಇದು ಹೀಗೆಯೇ ಸರಿ, ಇದನ್ನು ಹೀಗೆಯೇ ಆಚರಿಸಬೇಕು ಎಂದು ತಮ್ಮ ವಿಚಾರಗಳನ್ನು ಅಲ್ಲಲ್ಲಿ ಹೇಳಿರುತ್ತಾರೆ.

12172036a ತದಹಮನುನಿಶಾಮ್ಯ ವಿಪ್ರಯಾತಂ

ಪೃಥಗಭಿಪನ್ನಮಿಹಾಬುಧೈರ್ಮನುಷ್ಯೈಃ|

12172036c ಅನವಸಿತಮನಂತದೋಷಪಾರಂ

ನೃಷು ವಿಹರಾಮಿ ವಿನೀತರೋಷತೃಷ್ಣಃ||

ಮೂರ್ಖಮನುಷ್ಯರು ಈ ವ್ರತದ ನಿಯಮಾನುಷ್ಠಾನಗಳನ್ನು ಕೇಳಿಯೇ ಪ್ರಪಾತದಲ್ಲಿ ಬಿದ್ದವರಂತೆ ಭಯಗೊಳ್ಳುತ್ತಾರೆ. ಮಹಾವಿದ್ವಾಂಸರು ಇದರ ವಿಷಯದಲ್ಲಿ ಬೇರೆ ಅಭಿಪ್ರಾಯವುಳ್ಳವರಾಗಿದ್ದಾರೆ. ಇದು ಅಜ್ಞಾನನಾಶಕವೆಂದೂ ಸಮಸ್ತ ದೋಷಗಳಿಂದ ಪಾರುಮಾಡುವುದೆಂದೂ ನಾನು ತಿಳಿದಿದ್ದೇನೆ. ಆದುದರಿಂದ ತೃಷ್ಣಾದೋಷದಿಂದ ವಿಮುಕ್ತನಾಗಿ ನಾನು ಮನುಷ್ಯರ ಮಧ್ಯೆ ಸಂಚರಿಸುತ್ತೇನೆ.””

12172037 ಭೀಷ್ಮ ಉವಾಚ|

12172037a ಅಜಗರಚರಿತಂ ವ್ರತಂ ಮಹಾತ್ಮಾ

ಯ ಇಹ ನರೋಽನುಚರೇದ್ವಿನೀತರಾಗಃ|

12172037c ಅಪಗತಭಯಮನ್ಯುಲೋಭಮೋಹಃ

ಸ ಖಲು ಸುಖೀ ವಿಹರೇದಿಮಂ ವಿಹಾರಮ್||

ಭೀಷ್ಮನು ಹೇಳಿದನು: “ಯಾವ ಮಹಾಪುರುಷನು ರಾಗ, ಭಯ, ಲೋಭ, ಮೋಹ ಮತ್ತು ಕ್ರೋಧಗಳನ್ನು ತ್ಯಜಿಸಿ ಈ ಆಜಗರ ವ್ರತವನ್ನು ಆಚರಿಸುತ್ತಾನೋ ಅವನು ಈ ಪ್ರಪಂಚದಲ್ಲಿ ಆನಂದದಿಂದ ವಿಹರಿಸುತ್ತಾನೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಅಜಗರಪ್ರಹ್ಲಾದಸಂವಾದೇ ದ್ವಿಸಪ್ತತ್ಯಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಅಜಗರಪ್ರಹ್ಲಾದಸಂವಾದ ಎನ್ನುವ ನೂರಾಎಪ್ಪತ್ತೆರಡನೇ ಅಧ್ಯಾಯವು.

[1] ಪ್ರಹ್ಲಾದ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್/ಭಾರತ ದರ್ಶನ).

[2] ಕಲ್ಪಚಿತ್ತಮನಾಮಯಮ್| (ಗೀತಾ ಪ್ರೆಸ್).

[3] ಕಿಂಚಿದಿವ ಮನ್ಯಸೇ| (ಗೀತಾ ಪ್ರೆಸ್/ಭಾರತ ದರ್ಶನ).

[4] ನಿರ್ವ್ಯಾಪಾರನಂತೆ (ಭಾರತ ದರ್ಶನ).

[5] ಪರಿತುಷ್ಯೇ (ಗೀತಾ ಪ್ರೆಸ್/ಭಾರತ ದರ್ಶನ).

[6] ಅಶಯಂತ್ಯಪಿ (ಗೀತಾ ಪ್ರೆಸ್/ಭಾರತ ದರ್ಶನ).

[7] ಪ್ರಯತ್ನವೇ ಇಲ್ಲದೇ ಜೀವಿಸುವ ಹೆಬ್ಬಾವಿನ ವ್ರತವನ್ನು ಹೋಲುವ ವ್ರತ, ಹೆಬ್ಬಾವಿನ ವ್ರತ. ಅಜಗರ ಎಂದರೆ ಹೆಬ್ಬಾವು. ಕಾಡಿನಲ್ಲಿ ಎಲ್ಲಿಯೋ ಮರದ ಕೆಳಗೆ ಹೆಬ್ಬಾವು ಬಿದ್ದುಕೊಂಡಿರುತ್ತದೆ. ಸ್ಥೂಲಶರೀರಿಯಾದ ಅದು ಎಲ್ಲಿಗೂ ಹೋಗದೇ ಯಾವಾಗಲೂ ಒಂದೇ ಜಾಗದಲ್ಲಿ ಮರದ ಕೊರಡಿನಂತೆಯೇ ಬಿದ್ದುಕೊಂಡಿರುತ್ತದೆ. ಆದರೆ ಅದರ ಪರಿಸರದಲ್ಲಿ ಯಾವುದೇ ಪ್ರಾಣಿಯು ಸಿಕ್ಕಿದರೂ ಅದನ್ನು ಬಿಡದೇ ನುಂಗಿಬಿಡುತ್ತದೆ. ಆ ಪ್ರಾಣಿಯು ಯಾವಾಗ ಬರುತ್ತದೆ, ಹೇಗೆ ಅದಕ್ಕೆ ಆಹಾರವಾಗುತ್ತದೆ ಎಂಬ ಪ್ರತೀಕ್ಷೇಯೇನೂ ಅದಕ್ಕಿರುವುದಿಲ್ಲ. ಅದೃಷ್ಟಾಯುಕ್ತವಾಗಿ ಯಾವುದಾದರೂ ಪ್ರಾಣಿಯು ಯಾವಾಗಲೋ ಬಂದು ಆ ಹಾವಿಗೆ ಆಹಾರವಾಗುತ್ತದೆ. ಅದರಂತೆ ಆಚರಿಸುವುದಕ್ಕೆ ಆಜಗರವ್ರತವೆಂದು ಹೆಸರು (ಭಾರತ ದರ್ಶನ).

[8] ಅಪಗತ (ಗೀತಾ ಪ್ರೆಸ್/ಭಾರತ ದರ್ಶನ).

[9] ನ ಹೃದಯಮನುರುಧ್ಯ ವಾಙ್ಮನೋ ವಾ| (ಗೀತಾ ಪ್ರೆಸ್/ಭಾರತ ದರ್ಶನ).

Comments are closed.