Shanti Parva: Chapter 168

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೧೬೮

ಸೇನಜಿತ್-ಬ್ರಾಹ್ಮಣ ಸಂವಾದ; ಪಿಂಗಲ ಗೀತೆ

ಶೋಕಾಕುಲ ಚಿತ್ತದ ಶಾಂತಿಗಾಗಿ ರಾಜಾ ಸೇನಜಿತ್ ಮತ್ತು ಬ್ರಾಹ್ಮಣ ಸಂವಾದದಲ್ಲಿ ಪಿಂಗಲಗೀತೆ (೧-೫೩).

12168001 ಯುಧಿಷ್ಠಿರ ಉವಾಚ|

12168001a ಧರ್ಮಾಃ ಪಿತಾಮಹೇನೋಕ್ತಾ ರಾಜಧರ್ಮಾಶ್ರಿತಾಃ ಶುಭಾಃ|

12168001c ಧರ್ಮಮಾಶ್ರಮಿಣಾಂ ಶ್ರೇಷ್ಠಂ ವಕ್ತುಮರ್ಹಸಿ ಪಾರ್ಥಿವ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಪಾರ್ಥಿವ! ಇದೂವರೆಗೆ ನೀನು ರಾಜಧರ್ಮವನ್ನು ಆಶ್ರಯಿಸಿದವರ ಶುಭ ಧರ್ಮಗಳ ಕುರಿತು ಹೇಳಿದೆ. ಈಗ ಆಶ್ರಮಿಗಳ ಶ್ರೇಷ್ಠ ಧರ್ಮದ ಕುರಿತು ಹೇಳಬೇಕು.”

12168002 ಭೀಷ್ಮ ಉವಾಚ|

12168002a ಸರ್ವತ್ರ ವಿಹಿತೋ ಧರ್ಮಃ ಸ್ವರ್ಗ್ಯಃ ಸತ್ಯಫಲಂ ತಪಃ|

12168002c ಬಹುದ್ವಾರಸ್ಯ ಧರ್ಮಸ್ಯ ನೇಹಾಸ್ತಿ ವಿಫಲಾ ಕ್ರಿಯಾ||

ಭೀಷ್ಮನು ಹೇಳಿದನು: “ಸರ್ವತ್ರ ಸ್ವರ್ಗಸಂಬಂಧೀ ಸತ್ಯಫಲವನ್ನು ನೀಡುವ ತಪಸ್ಸಿನ ಉಲ್ಲೇಖವಿದೆ. ಧರ್ಮಕ್ಕೆ ಅನೇಕ ದ್ವಾರಗಳಿವೆ. ಇಲ್ಲಿ ಯಾವ ಕ್ರಿಯೆಗಳೂ ವಿಫಲವಾಗುವುದಿಲ್ಲ.

12168003a ಯಸ್ಮಿನ್ಯಸ್ಮಿಂಸ್ತು ವಿನಯೇ[1] ಯೋ ಯೋ ಯಾತಿ ವಿನಿಶ್ಚಯಮ್|

12168003c ಸ ತಮೇವಾಭಿಜಾನಾತಿ ನಾನ್ಯಂ ಭರತಸತ್ತಮ||

ಭರತಸತ್ತಮ! ಯಾರ್ಯಾರು ಯಾವ್ಯಾವ ವಿಷಯಗಳ ಕುರಿತು ಪೂರ್ಣ ನಿಶ್ಚಯವನ್ನು ಪಡೆದಿರುತ್ತಾರೋ ಅವನ್ನೇ ಅವರು ಕರ್ತವ್ಯಗಳೆಂದು ತಿಳಿಯುತ್ತಾರೆ. ಅನ್ಯವನ್ನು ಕರ್ತ್ಯವ್ಯಗಳೆಂದು ತಿಳಿಯುವುದಿಲ್ಲ.

12168004a ಯಥಾ ಯಥಾ ಚ ಪರ್ಯೇತಿ ಲೋಕತಂತ್ರಮಸಾರವತ್|

12168004c ತಥಾ ತಥಾ ವಿರಾಗೋಽತ್ರ ಜಾಯತೇ ನಾತ್ರ ಸಂಶಯಃ||

ಸಂಸಾರದ ವಿಷಯಗಳು ಸಾರಹೀನವೆಂದು ಅರಿತುಕೊಂಡು ಬಂದಂತೆ ವೈರಾಗ್ಯವು ಹುಟ್ಟಿಕೊಳ್ಳುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

12168005a ಏವಂ ವ್ಯವಸಿತೇ ಲೋಕೇ ಬಹುದೋಷೇ ಯುಧಿಷ್ಠಿರ|

12168005c ಆತ್ಮಮೋಕ್ಷನಿಮಿತ್ತಂ ವೈ ಯತೇತ ಮತಿಮಾನ್ನರಃ||

ಯುಧಿಷ್ಠಿರ! ಹೀಗೆ ಈ ಲೋಕದಲ್ಲಿ ಅನೇಕ ದೋಷಗಳಿವೆ ಎಂದು ತಿಳಿದುಕೊಂಡು ಮನುಷ್ಯನು ತನ್ನ ಮೋಕ್ಷಕ್ಕೆ ಪ್ರಯತ್ನಿಸಬೇಕು.”

12168006 ಯುಧಿಷ್ಠಿರ ಉವಾಚ|

12168006a ನಷ್ಟೇ ಧನೇ ವಾ ದಾರೇ ವಾ ಪುತ್ರೇ ಪಿತರಿ ವಾ ಮೃತೇ|

12168006c ಯಯಾ ಬುದ್ಧ್ಯಾ ನುದೇಚ್ಚೋಕಂ ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಧನನಷ್ಟವಾದಾಗ ಅಥವಾ ಪತ್ನಿ, ಪುತ್ರ ಅಥವಾ ತಂದೆಯ ಮೃತ್ಯುವಾದಾಗ ಯಾವ ಬುದ್ಧಿಯಿಂದ ಮನುಷ್ಯನು ತನ್ನ ಶೋಕವನ್ನು ನಿವಾರಿಸಿಕೊಳ್ಳಬೇಕು. ಅದರ ಕುರಿತು ನನಗೆ ಹೇಳು.”

12168007 ಭೀಷ್ಮ ಉವಾಚ|

12168007a ನಷ್ಟೇ ಧನೇ ವಾ ದಾರೇ ವಾ ಪುತ್ರೇ ಪಿತರಿ ವಾ ಮೃತೇ|

12168007c ಅಹೋ ದುಃಖಮಿತಿ ಧ್ಯಾಯನ್ ಶೋಕಸ್ಯಾಪಚಿತಿಂ ಚರೇತ್||

ಭೀಷ್ಮನು ಹೇಳಿದನು: “ಧನವು ನಷ್ಟವಾದರೆ ಅಥವಾ ಪತ್ನಿ, ಪುತ್ರ ಅಥವಾ ತಂದೆಯು ಮೃತರಾದರೆ “ಅಯ್ಯೋ ದುಃಖವೇ!” ಎಂದು ಯೋಚಿಸಿ ಶೋಕವನ್ನು ದೂರಗೊಳಿಸುವಂಥದ್ದನ್ನು ಮಾಡಬೇಕು.

12168008a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12168008c ಯಥಾ ಸೇನಜಿತಂ ವಿಪ್ರಃ ಕಶ್ಚಿದಿತ್ಯಬ್ರವೀದ್ವಚಃ||

ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಓರ್ವ ವಿಪ್ರನು ಸೇನಜಿತನಿಗೆ ಹೇಳಿದುದನ್ನು ಉದಾಹರಿಸುತ್ತಾರೆ.

12168009a ಪುತ್ರಶೋಕಾಭಿಸಂತಪ್ತಂ ರಾಜಾನಂ ಶೋಕವಿಹ್ವಲಮ್|

12168009c ವಿಷಣ್ಣವದನಂ ದೃಷ್ಟ್ವಾ ವಿಪ್ರೋ ವಚನಮಬ್ರವೀತ್||

ಪುತ್ರಶೋಕಾಭಿಸಂತಪ್ತನಾದ ಮತ್ತು ಶೋಕವಿಹ್ವಲನಾದ ಹಾಗೂ ವಿಷಣ್ಣವದನನಾಗಿದ್ದ ರಾಜನನ್ನು ನೋಡಿ ವಿಪ್ರನು ಈ ಮಾತನ್ನಾಡಿದನು:

12168010a ಕಿಂ ನು ಖಲ್ವಸಿ ಮೂಢಸ್ತ್ವಂ[2] ಶೋಚ್ಯಃ ಕಿಮನುಶೋಚಸಿ|

12168010c ಯದಾ ತ್ವಾಮಪಿ ಶೋಚಂತಃ ಶೋಚ್ಯಾ ಯಾಸ್ಯಂತಿ ತಾಂ ಗತಿಮ್||

“ನೀನು ಮೂಢನಲ್ಲವೇ? ನೀನೇ ಶೋಚನೀಯನಾಗಿರುವಾಗ ಯಾರಿಗಾಗಿ ಶೋಕಿಸುತ್ತಿರುವೆ? ಮುಂದೆ ಒಂದು ದಿನ ಇನ್ನೊಬ್ಬ ಶೋಚನೀಯ ಮನುಷ್ಯನು ನಿನಗೋಸ್ಕರವಾಗಿ ಶೋಕಿಸುತ್ತಾ ಇದೇ ಗತಿಯನ್ನು ಹೊಂದುತ್ತಾನೆ.

12168011a ತ್ವಂ ಚೈವಾಹಂ ಚ ಯೇ ಚಾನ್ಯೇ ತ್ವಾಂ ರಾಜನ್ಪರ್ಯುಪಾಸತೇ|

12168011c ಸರ್ವೇ ತತ್ರ ಗಮಿಷ್ಯಾಮೋ ಯತ ಏವಾಗತಾ ವಯಮ್||

ರಾಜನ್! ನಾನು, ನೀನು ಮತ್ತು ನಿನ್ನ ಬಳಿ ಇಲ್ಲಿ ಕುಳಿತಿರುವ ಎಲ್ಲರೂ ಎಲ್ಲಿಂದ ನಾವೆಲ್ಲರೂ ಬಂದಿದ್ದೇವೋ ಅಲ್ಲಿಗೇ ಹೋಗುತ್ತೇವೆ.”

12168012 ಸೇನಜಿದುವಾಚ|

12168012a ಕಾ ಬುದ್ಧಿಃ ಕಿಂ ತಪೋ ವಿಪ್ರ ಕಃ ಸಮಾಧಿಸ್ತಪೋಧನ|

12168012c ಕಿಂ ಜ್ಞಾನಂ ಕಿಂ ಶ್ರುತಂ ವಾ ತೇ ಯತ್ಪ್ರಾಪ್ಯ ನ ವಿಷೀದಸಿ[3]||

ಸೇನಜಿತುವು ಹೇಳಿದನು: “ತಪೋಧನ! ವಿಪ್ರ! ನಿನ್ನಲ್ಲಿ ಯಾವ ಬುದ್ಧಿಯಿದೆ ಅಥವಾ ತಪಸ್ಸಿದೆ ಅಥವಾ ಸಮಾಧಿ ಅಥವಾ ಜ್ಞಾನ, ಶಾಸ್ತ್ರವಿದೆ ಎಂದು ನಿನಗೆ ಯಾವುದೇ ತರಹದ ವಿಷಾದವೂ ಆಗುತ್ತಿಲ್ಲ?”

12168013 ಬ್ರಾಹ್ಮಣ ಉವಾಚ| 

12168013a ಪಶ್ಯ ಭೂತಾನಿ ದುಃಖೇನ ವ್ಯತಿಷಕ್ತಾನಿ ಸರ್ವಶಃ|

[4]12168013c ಆತ್ಮಾಪಿ ಚಾಯಂ ನ ಮಮ ಸರ್ವಾ ವಾ ಪೃಥಿವೀ ಮಮ||

ಬ್ರಾಹ್ಮಣನು ಹೇಳಿದನು: “ನೋಡು! ಈ ಪೃಥ್ವಿಯಲ್ಲಿ ಎಲ್ಲ ಭೂತಗಳೂ ದುಃಖಗ್ರಸ್ತರಾಗುತ್ತಿರುವುದನ್ನು ನೋಡು. ಈ ಶರೀರವೂ ನನ್ನದಲ್ಲ ಅಥವಾ ಇಡೀ ಪೃಥ್ವಿಯೂ ನನ್ನದಲ್ಲ.

12168014a ಯಥಾ ಮಮ ತಥಾನ್ಯೇಷಾಮಿತಿ ಬುದ್ಧ್ಯಾ ನ ಮೇ ವ್ಯಥಾ|

12168014c ಏತಾಂ ಬುದ್ಧಿಮಹಂ ಪ್ರಾಪ್ಯ ನ ಪ್ರಹೃಷ್ಯೇ ನ ಚ ವ್ಯಥೇ||

ಈ ಎಲ್ಲ ವಸ್ತುಗಳು ನನ್ನವು ಹೇಗೋ ಹಾಗೆ ಇತರರಿಗೂ ಸೇರಿವೆ. ಹೀಗಿ ಯೋಚಿಸಿದರೆ ಇವುಗಳಿಗಾಗಿ ನನ್ನ ಮನಸ್ಸಿನಲ್ಲಿ ಯಾವ ವ್ಯಥೆಯೂ ಉಂಟಾಗುವುದಿಲ್ಲ. ಇದೇ ವಿಚಾರದಿಂದ ನನಗೆ ಹರ್ಷವಾಗುತ್ತದೆಯೇ ಹೊರತು ಶೋಕವಾಗುವುದಿಲ್ಲ.

12168015a ಯಥಾ ಕಾಷ್ಠಂ ಚ ಕಾಷ್ಠಂ ಚ ಸಮೇಯಾತಾಂ ಮಹೋದಧೌ|

12168015c ಸಮೇತ್ಯ ಚ ವ್ಯಪೇಯಾತಾಂ ತದ್ವದ್ ಭೂತಸಮಾಗಮಃ||

ಸಮುದ್ರದಲ್ಲಿ ಹೇಗೆ ಒಂದು ಕಟ್ಟಿಗೆಯ ತುಂಡು ಇನ್ನೊಂದು ಕಟ್ಟಿಗೆಯ ತುಂಡನ್ನು ಸೇರಿ ಮತ್ತೆ ಬೇರಾಗುವುದೋ ಹಾಗೆ ಈ ಲೋಕದಲ್ಲಿ ಪ್ರಾಣಿಗಳ ಸಮಾಗಮವು ನಡೆಯುತ್ತಿರುತ್ತದೆ.

12168016a ಏವಂ ಪುತ್ರಾಶ್ಚ ಪೌತ್ರಾಶ್ಚ ಜ್ಞಾತಯೋ ಬಾಂಧವಾಸ್ತಥಾ|

12168016c ತೇಷು ಸ್ನೇಹೋ ನ ಕರ್ತವ್ಯೋ ವಿಪ್ರಯೋಗೋ ಹಿ ತೈರ್ಧ್ರುವಮ್||

ಹೀಗೆಯೇ ಪುತ್ರರು, ಪೌತ್ರರು, ಜ್ಞಾತಿ-ಬಾಂಧವರು ಸಿಗುತ್ತಾರೆ. ಅವರ ಕುರಿತು ಎಂದೂ ಹೆಚ್ಚಿನ ಆಸಕ್ತಿಯನ್ನು ತೋರಿಸಬಾರದು. ಏಕೆಂದರೆ ಒಂದು ದಿನ ಅವರು ಬಿಟ್ಟುಹೋಗುವುದು ನಿಶ್ಚಿತವಾಗಿದೆ.

12168017a ಅದರ್ಶನಾದಾಪತಿತಃ ಪುನಶ್ಚಾದರ್ಶನಂ ಗತಃ|

12168017c ನ ತ್ವಾಸೌ ವೇದ ನ ತ್ವಂ ತಂ ಕಃ ಸನ್ಕಮನುಶೋಚಸಿ||

ನಿನ್ನ ಮಗನು ಕಾಣದಲ್ಲಿಂದ ಬಂದಿದ್ದನು ಮತ್ತು ಪುನಃ ಕಾಣದಲ್ಲಿಗೇ ಹೋಗಿದ್ದಾನೆ. ಅವನು ನಿನಗೆ ಪರಿಚಿತನಾಗಿರಲಿಲ್ಲ ಮತ್ತು ನೀನು ಅವನಿಗೆ ಪರಿಚಿತನಾಗಿರಲಿಲ್ಲ. ಆದರೂ ನೀನು ಅವನಿಗೆ ಏನೆಂದು ಶೋಕಿಸುತ್ತಿರುವೆ?

12168018a ತೃಷ್ಣಾರ್ತಿಪ್ರಭವಂ ದುಃಖಂ ದುಃಖಾರ್ತಿಪ್ರಭವಂ ಸುಖಮ್|

12168018c ಸುಖಾತ್ಸಂಜಾಯತೇ ದುಃಖಮೇವಮೇತತ್ಪುನಃ ಪುನಃ|

12168018e ಸುಖಸ್ಯಾನಂತರಂ ದುಃಖಂ ದುಃಖಸ್ಯಾನಂತರಂ ಸುಖಮ್[5]||

ತೃಷ್ಣಾರ್ತಿಯಿಂದ ದುಃಖವು ಹುಟ್ಟುತ್ತದೆ ಮತ್ತು ದುಃಖದ ನಾಶವೇ ಸುಖವು. ಸುಖದ ನಂತರ ದುಃಖವು ಹುಟ್ಟುತ್ತದೆ. ಹೀಗೆ ಪುನಃ ಪುನಃ ದುಃಖವೇ ಆಗುತ್ತಿರುತ್ತದೆ. ಸುಖದ ನಂತರ ದುಃಖವುಂಟಾಗುತ್ತದೆ ಮತ್ತು ದುಃಖದ ನಂತರ ಸುಖವುಂಟಾಗುತ್ತದೆ.

12168019a ಸುಖಾತ್ತ್ವಂ ದುಃಖಮಾಪನ್ನಃ ಪುನರಾಪತ್ಸ್ಯಸೇ ಸುಖಮ್|

12168019c ನ ನಿತ್ಯಂ ಲಭತೇ ದುಃಖಂ ನ ನಿತ್ಯಂ ಲಭತೇ ಸುಖಮ್||

ಈಗ ನೀನು ಸುಖದಿಂದ ದುಃಖವನ್ನು ಪಡೆದುಕೊಂಡಿದ್ದೀಯೆ. ಪುನಃ ನಿನಗೆ ಸುಖವುಂಟಾಗುತ್ತದೆ. ಇಲ್ಲಿ ಯಾರಿಗೂ ನಿತ್ಯವೂ ದುಃಖವು ದೊರೆಯುವುದಿಲ್ಲ ಮತ್ತು ನಿತ್ಯ ಸುಖವೂ ದೊರೆಯುವುದಿಲ್ಲ.

[6]12168020a ನಾಲಂ ಸುಖಾಯ ಸುಹೃದೋ ನಾಲಂ ದುಃಖಾಯ ಶತ್ರವಃ|

12168020c ನ ಚ ಪ್ರಜ್ಞಾಲಮರ್ಥಾನಾಂ ನ ಸುಖಾನಾಮಲಂ ಧನಮ್||

ಸುಹೃದನು ಸುಖವನ್ನು ನೀಡಲು ಸಮರ್ಥನಾಗಿರುವುದಿಲ್ಲ. ಶತ್ರುವು ದುಃಖವನ್ನು ನೀಡಲು ಸಮರ್ಥನಾಗಿರುವುದಿಲ್ಲ. ಬುದ್ಧಿಯಲ್ಲಿ ಧನವನ್ನು ನೀಡುವ ಶಕ್ತಿಯಿರುವುದಿಲ್ಲ ಮತ್ತು ಧನಕ್ಕೆ ಸುಖವನ್ನು ನೀಡುವ ಶಕ್ತಿಯಿರುವುದಿಲ್ಲ.

12168021a ನ ಬುದ್ಧಿರ್ಧನಲಾಭಾಯ ನ ಜಾಡ್ಯಮಸಮೃದ್ಧಯೇ|

12168021c ಲೋಕಪರ್ಯಾಯವೃತ್ತಾಂತಂ ಪ್ರಾಜ್ಞೋ ಜಾನಾತಿ ನೇತರಃ||

ಬುದ್ಧಿಯು ಧನಲಾಭಕ್ಕೆ ಕಾರಣವಲ್ಲ ಮತ್ತು ಮೂರ್ಖತನವು ಬಡತನಕ್ಕೆ ಕಾರಣವಲ್ಲ. ವಾಸ್ತವವಾಗಿ ಸಂಸಾರಚಕ್ರದ ಗತಿಯ ವೃತ್ತಾಂತವನ್ನು ಪ್ರಾಜ್ಞನು ಮಾತ್ರ ತಿಳಿದಿರುತ್ತಾನೆ. ಇತರರಿಗೆ ಇದು ತಿಳಿಯುವುದಿಲ್ಲ.

12168022a ಬುದ್ಧಿಮಂತಂ ಚ ಮೂಢಂ ಚ ಶೂರಂ ಭೀರುಂ ಜಡಂ ಕವಿಮ್|

12168022c ದುರ್ಬಲಂ ಬಲವಂತಂ ಚ ಭಾಗಿನಂ ಭಜತೇ ಸುಖಮ್||

ಬುದ್ಧಿವಂತನಾಗಿರಲಿ, ಮೂಢನಾಗಿರಲಿ, ಶೂರನಾಗಿರಲಿ, ಹೇಡಿಯಾಗಿರಲಿ, ಮೂರ್ಖನಾಗಿರಲಿ, ಕವಿಯಾಗಿರಲಿ, ದುರ್ಬಲನಾಗಿರಲಿ ಮತ್ತು ಬಲವಂತನಾಗಿರಲಿ – ದೈವವು ಯಾರಿಗೆ ಅನುಕೂಲವಾಗಿರುವುದೋ ಅವರಿಗೆ ಪ್ರಯತ್ನವಿಲ್ಲದೇ ಸುಖವು ಪ್ರಾಪ್ತವಾಗುತ್ತದೆ.

12168023a ಧೇನುರ್ವತ್ಸಸ್ಯ ಗೋಪಸ್ಯ ಸ್ವಾಮಿನಸ್ತಸ್ಕರಸ್ಯ ಚ|

12168023c ಪಯಃ ಪಿಬತಿ ಯಸ್ತಸ್ಯಾ ಧೇನುಸ್ತಸ್ಯೇತಿ ನಿಶ್ಚಯಃ||

ಹಾಲುನೀಡುವ ಹಸುವು ಅದರ ಕರುವಿನದ್ದೋ? ಅಥವಾ ಅದರ ಹಾಲುಕರೆಯುವವನದ್ದೋ? ಅದರ ಮಾಲೀಕನದ್ದೋ? ಅದನ್ನು ಕದ್ದುಕೊಂಡು ಹೋದವನದ್ದೋ? ವಾಸ್ತವವಾಗಿ ಯಾರು ಅದರ ಹಾಲನ್ನು ಕುಡಿಯುತ್ತಾನೋ ಹಸುವು ಅವನದಾಗುತ್ತದೆ ಎಂದು ವಿದ್ವಾಂಸರ ನಿಶ್ಚಯವು.

12168024a ಯೇ ಚ ಮೂಢತಮಾ ಲೋಕೇ ಯೇ ಚ ಬುದ್ಧೇಃ ಪರಂ ಗತಾಃ|

12168024c ತೇ ನರಾಃ ಸುಖಮೇಧಂತೇ ಕ್ಲಿಶ್ಯತ್ಯಂತರಿತೋ ಜನಃ||

ಈ ಲೋಕದಲ್ಲಿ ಅತ್ಯಂತ ಮೂಢನಾಗಿರುವವನು ಮತ್ತು ಅತ್ಯಂತ ಬುದ್ಧಿವಂತನಾಗಿರುವವನು ಇವರಿಬ್ಬರೇ ಸುಖವನ್ನು ಅನುಭವಿಸುತ್ತಾರೆ. ಮಧ್ಯದಲ್ಲಿರುವ ಜನರು ಕಷ್ಟವನ್ನೇ ಅನುಭವಿಸುತ್ತಾರೆ.

12168025a ಅಂತ್ಯೇಷು ರೇಮಿರೇ ಧೀರಾ ನ ತೇ ಮಧ್ಯೇಷು ರೇಮಿರೇ|

12168025c ಅಂತ್ಯಪ್ರಾಪ್ತಿಂ ಸುಖಾಮಾಹುರ್ದುಃಖಮಂತರಮಂತಯೋಃ||

ಜ್ಞಾನಿಗಳು ಅಂತ್ಯದಲ್ಲಿ ರಮಿಸುತ್ತಾರೆ. ಮಧ್ಯದಲ್ಲಿ ರಮಿಸುವುದಿಲ್ಲ. ಅಂತ್ಯಪ್ರಾಪ್ತಿಯು ಸುಖವೆಂದು ಹೇಳುತ್ತಾರೆ ಮತ್ತು ಆದಿ ಮತ್ತು ಅಂತ್ಯಗಳ ಮಧ್ಯವು ದುಃಖರೂಪವೆಂದು ಹೇಳುತ್ತಾರೆ.

[7]12168026a ಯೇ ತು ಬುದ್ಧಿಸುಖಂ ಪ್ರಾಪ್ತಾ ದ್ವಂದ್ವಾತೀತಾ ವಿಮತ್ಸರಾಃ|

12168026c ತಾನ್ನೈವಾರ್ಥಾ ನ ಚಾನರ್ಥಾ ವ್ಯಥಯಂತಿ ಕದಾ ಚನ||

ಆದರೆ ದ್ವಂದ್ವಾತೀತರಾದ ಮತ್ತು ವಿಮತ್ಸರರಾದ ಅವರಿಗೆ ಜ್ಞಾನಜನಿತ ಸುಖವು ಪ್ರಾಪ್ತವಾಗುತ್ತದೆ. ಅಂಥವರನ್ನು ಅರ್ಥ ಮತ್ತು ಅನರ್ಥ ಎರಡೂ ಎಂದೂ ಪೀಡಿಸುವುದಿಲ್ಲ.

12168027a ಅಥ ಯೇ ಬುದ್ಧಿಮಪ್ರಾಪ್ತಾ ವ್ಯತಿಕ್ರಾಂತಾಶ್ಚ ಮೂಢತಾಮ್|

12168027c ತೇಽತಿವೇಲಂ ಪ್ರಹೃಷ್ಯಂತಿ ಸಂತಾಪಮುಪಯಾಂತಿ ಚ||

ಮೂಢತೆಯನ್ನು ದಾಟಿರುವ ಆದರೆ ಇನ್ನೂ ಜ್ಞಾನವನ್ನು ಪಡೆದುಕೊಂಡಿರದ ಜನರು ಸುಖದ ಪರಿಸ್ಥಿತಿ ಬಂದಾಗ ಅತ್ಯಂತ ಹರ್ಷದಿಂದ ಬೀಗುತ್ತಾರೆ ಮತ್ತು ದುಃಖದ ಪರಿಸ್ಥಿತಿ ಬಂದಾಗ ಅತಿಶಯ ಸಂತಾಪವನ್ನು ಅನುಭವಿಸುತ್ತಾರೆ.

12168028a ನಿತ್ಯಪ್ರಮುದಿತಾ ಮೂಢಾ ದಿವಿ ದೇವಗಣಾ ಇವ|

12168028c ಅವಲೇಪೇನ ಮಹತಾ ಪರಿದೃಬ್ಧಾ[8] ವಿಚೇತಸಃ||

ಮೂಢರು ಸ್ವರ್ಗದಲ್ಲಿರುವ ದೇವತೆಗಳಂತೆ ಸದಾ ವಿಷಯಸುಖದಲ್ಲಿ ಮಗ್ನರಾಗಿರುತ್ತಾರೆ. ಏಕೆಂದರೆ ಅವರ ಚಿತ್ತವು ವಿಷಯಾಸಕ್ತಿಯ ಕೆಸರನ್ನು ಲೇಪಿಸಿಕೊಂಡು ಮಹಾ ಮೋಹಿತಗೊಂಡಿರುತ್ತದೆ.

12168029a ಸುಖಂ ದುಃಖಾಂತಮಾಲಸ್ಯಂ ದುಃಖಂ ದಾಕ್ಷ್ಯಂ ಸುಖೋದಯಮ್|

12168029c ಭೂತಿಶ್ಚೈವ ಶ್ರಿಯಾ ಸಾರ್ಧಂ ದಕ್ಷೇ ವಸತಿ ನಾಲಸೇ||

ಮೊದಮೊದಲು ಆಲಸ್ಯವು ಸುಖವೆಂದೆನಿಸುತ್ತದೆ. ಆದರೆ ಅದು ಅಂತ್ಯದಲ್ಲಿ ದುಃಖದಾಯಿಯಾಗುತ್ತದೆ. ಕಾರ್ಯಕೌಶಲವು ದುಃಖಕರವೆಂದು ತೋರುತ್ತದೆ ಆದರೆ ಅದು ಸುಖವನ್ನು ನೀಡುತ್ತದೆ. ಕಾರ್ಯಕುಶಲ ಪುರುಷನಲ್ಲಿಯೇ ಲಕ್ಷ್ಮೀಸಹಿತ ಐಶ್ವರ್ಯವು ನಿವಾಸಿಸುತ್ತದೆ; ಆಲಸಿಯಲ್ಲಲ್ಲ.

12168030a ಸುಖಂ ವಾ ಯದಿ ವಾ ದುಃಖಂ ದ್ವೇಷ್ಯಂ ವಾ ಯದಿ ವಾ ಪ್ರಿಯಮ್|

12168030c ಪ್ರಾಪ್ತಂ ಪ್ರಾಪ್ತಮುಪಾಸೀತ ಹೃದಯೇನಾಪರಾಜಿತಃ||

ಆದುದರಿಂದ ಸುಖವಾಗಲೀ, ದುಃಖವಾಗಲೀ, ಪ್ರಿಯವಾಗಲೀ, ಅಪ್ರಿಯವಾದುದಾಗಲೀ, ಯಾವುದು ಪ್ರಾಪ್ತವಾಗುತ್ತದೆಯೋ ಅದನ್ನು ಬುದ್ಧಿವಂತನು ಹೃದಯಪೂರ್ವಕವಾಗಿ ಸ್ವಾಗತಿಸಬೇಕು. ಎಂದೂ ಸೋಲಬಾರದು.

12168031a ಶೋಕಸ್ಥಾನಸಹಸ್ರಾಣಿ ಹರ್ಷಸ್ಥಾನಶತಾನಿ[9] ಚ|

12168031c ದಿವಸೇ ದಿವಸೇ ಮೂಢಮಾವಿಶಂತಿ ನ ಪಂಡಿತಮ್[10]||

ಶೋಕದ ಸಾವಿರಾರು ಸ್ಥಾನಗಳಿವೆ ಮತ್ತು ಹರ್ಷದ ನೂರಾರು ಸ್ಥಾನಗಳಿವೆ. ಆದರೆ ಅವು ಪ್ರತಿದಿನವೂ ಮೂರ್ಖರ ಮೇಲೆ ಪ್ರಭಾವ ಬೀರುತ್ತವೆಯೇ ಹೊರತು ಜ್ಞಾನಿಯನ್ನಲ್ಲ.

12168032a ಬುದ್ಧಿಮಂತಂ ಕೃತಪ್ರಜ್ಞಂ ಶುಶ್ರೂಷುಮನಸೂಯಕಮ್|

12168032c ದಾಂತಂ ಜಿತೇಂದ್ರಿಯಂ ಚಾಪಿ ಶೋಕೋ ನ ಸ್ಪೃಶತೇ ನರಮ್||

ಬುದ್ಧಿವಂತ, ಕೃತಪ್ರಜ್ಞ, ಕೇಳುವ, ಅನಸೂಯಕ, ದಾಂತ, ಮತ್ತು ಜಿತೇಂದ್ರಿಯ ನರನನ್ನು ಶೋಕವು ಮುಟ್ಟುವುದೂ ಇಲ್ಲ.

12168033a ಏತಾಂ ಬುದ್ಧಿಂ ಸಮಾಸ್ಥಾಯ ಗುಪ್ತಚಿತ್ತಶ್ಚರೇದ್ಬುಧಃ|

12168033c ಉದಯಾಸ್ತಮಯಜ್ಞಂ ಹಿ ನ ಶೋಕಃ ಸ್ಪ್ರಷ್ಟುಮರ್ಹತಿ||

ವಿದ್ವಾಂಸನು ಇದೇ ಬುದ್ಧಿಯನ್ನು ಆಶ್ರಯಿಸಿ ಕಾಮ-ಕ್ರೋಧಾದಿ ಶತ್ರುಗಳಿಂದ ಚಿತ್ತವನ್ನು ರಕ್ಷಿಸಿಕೊಂಡು ವರ್ತಿಸಬೇಕು. ಉತ್ಪತ್ತಿ ಮತ್ತು ವಿನಾಶಗಳನ್ನು ತತ್ತ್ವತಃ ತಿಳಿದುಕೊಂಡವನನ್ನು ಶೋಕವು ಮುಟ್ಟುವುದಿಲ್ಲ.

12168034a ಯನ್ನಿಮಿತ್ತಂ ಭವೇಚ್ಚೋಕಸ್ತ್ರಾಸೋ[11] ವಾ ದುಃಖಮೇವ ವಾ|

12168034c ಆಯಾಸೋ ವಾ ಯತೋಮೂಲಸ್ತದೇಕಾಂಗಮಪಿ ತ್ಯಜೇತ್||

ಯಾವುದರಿಂದ ಶೋಕ, ಸಂಕಟ ಅಥವಾ ದುಃಖವುಂಟಾಗುವುದೋ ಅಥವಾ ಆಯಾಸವಾಗುವುದೋ ಅದರ ಮೂಲವು ದೇಹದ ಒಂದು ಅಂಗವೇ ಆಗಿದ್ದರೂ ಅದನ್ನು ತ್ಯಜಿಸಬೇಕು.

12168035a ಯದ್ಯತ್ತ್ಯಜತಿ ಕಾಮಾನಾಂ ತತ್ಸುಖಸ್ಯಾಭಿಪೂರ್ಯತೇ|

12168035c ಕಾಮಾನುಸಾರೀ ಪುರುಷಃ ಕಾಮಾನನು ವಿನಶ್ಯತಿ||

ಯಾವ ಯಾವ ಕಾಮನೆಗಳನ್ನು ತ್ಯಜಿಸುತ್ತೇವೋ ಅವೇ ಸುಖವನ್ನು ನೀಡುವಂಥಹುದಾಗುತ್ತವೆ. ಕಾಮನೆಗಳನ್ನು ಅನುಸರಿಸಿ ಹೋಗುವ ಪುರುಷನು ಕಾಮನೆಗಳೊಂದಿಗೆ ನಾಶಹೊಂದುತ್ತಾನೆ.

12168036a ಯಚ್ಚ ಕಾಮಸುಖಂ ಲೋಕೇ ಯಚ್ಚ ದಿವ್ಯಂ ಮಹತ್ಸುಖಮ್|

12168036c ತೃಷ್ಣಾಕ್ಷಯಸುಖಸ್ಯೈತೇ ನಾರ್ಹತಃ ಷೋಡಶೀಂ ಕಲಾಮ್||

ಈ ಲೋಕದಲ್ಲಾಗುವ ಕಾಮ ಸುಖ ಮತ್ತು ಸ್ವರ್ಗಲೋಕದಲ್ಲಿ ದೊರೆಯುವ ಮಹಾ ಸುಖ ಇವುಗಳು ತೃಷ್ಣಾಕ್ಷಯದ ಸುಖದ ಹದಿನಾರನೇ ಒಂದು ಭಾಗಕ್ಕೂ ಹೋಲುವುದಿಲ್ಲ.

12168037a ಪೂರ್ವದೇಹಕೃತಂ ಕರ್ಮ ಶುಭಂ ವಾ ಯದಿ ವಾಶುಭಮ್|

12168037c ಪ್ರಾಜ್ಞಂ ಮೂಢಂ ತಥಾ ಶೂರಂ ಭಜತೇ ಯಾದೃಶಂ ಕೃತಮ್||

ಮನುಷ್ಯನು ಪ್ರಾಜ್ಞನಾಗಿರಲಿ, ಮೂಢನಾಗಿರಲಿ ಅಥವಾ ಶೂರನಾಗಿರಲಿ ಹಿಂದಿನ ಜನ್ಮದಲ್ಲಿ ಮಾಡಿದ ಶುಭಾಶುಭಕರ್ಮಗಳ ಫಲವನ್ನು ಆ ಕರ್ಮಗಳಿಗೆ ತಕ್ಕಂತೆ ಅನುಭವಿಸಲೇ ಬೇಕಾಗುತ್ತದೆ.

12168038a ಏವಮೇವ ಕಿಲೈತಾನಿ ಪ್ರಿಯಾಣ್ಯೇವಾಪ್ರಿಯಾಣಿ ಚ|

12168038c ಜೀವೇಷು ಪರಿವರ್ತಂತೇ ದುಃಖಾನಿ ಚ ಸುಖಾನಿ ಚ||

ಹೀಗೆ ಜೀವಿಗಳಿಗೆ ಪ್ರಿಯ-ಅಪ್ರಿಯ ಮತ್ತು ಸುಖ-ದುಃಖಗಳು ಮತ್ತೆ ಮತ್ತೆ ಕ್ರಮಬದ್ಧವಾಗಿ ಉಂಟಾಗುತ್ತಿರುತ್ತವೆ. ಇದರಲ್ಲಿ ಸಂದೇಹವೇ ಇಲ್ಲ.

12168039a ತದೇವಂ ಬುದ್ಧಿಮಾಸ್ಥಾಯ ಸುಖಂ ಜೀವೇದ್ಗುಣಾನ್ವಿತಃ|

12168039c ಸರ್ವಾನ್ಕಾಮಾನ್ಜುಗುಪ್ಸೇತ ಸಂಗಾನ್ಕುರ್ವೀತ ಪೃಷ್ಠತಃ|

12168039e ವೃತ್ತ ಏಷ ಹೃದಿ ಪ್ರೌಢೋ ಮೃತ್ಯುರೇಷ ಮನೋಮಯಃ[12]||

ಇದೇ ಬುದ್ಧಿಯನ್ನು ಆಶ್ರಯಿಸಿದವನು ಗುಣಾನ್ವಿತನಾಗಿ ಸುಖದಿಂದ ಜೀವಿಸುತ್ತಾನೆ. ಆದುದರಿಂದ ಸರ್ವ ಕಾಮನೆಯಗಳನ್ನೂ ಜುಗುಪ್ಸೆಯಿಂದ ನೋಡಿ ಅದಕ್ಕೆ ಬೆನ್ನು ತೋರಿಸಬೇಕು. ಹೃದಯದಲ್ಲಿ ಉತ್ಪನ್ನವಾದ ಕಾಮನೆಗಳು ಹೃದಯದಲ್ಲಿಯೇ ಪುಷ್ಟಿಗೊಂಡು ಅದೇ ಮನಸ್ಸಿನಲ್ಲಿ ಹುಟ್ಟಿಕೊಳ್ಳುವ ಮೃತ್ಯುವಾಗುತ್ತದೆ.

12168040a ಯದಾ ಸಂಹರತೇ ಕಾಮಾನ್ಕೂರ್ಮೋಽಂಗಾನೀವ ಸರ್ವಶಃ|

12168040c ತದಾತ್ಮಜ್ಯೋತಿರಾತ್ಮಾ ಚ ಆತ್ಮನ್ಯೇವ ಪ್ರಸೀದತಿ||

ಆಮೆಯು ಹೇಗೆ ತನ್ನ ಅಂಗಾಗಳನ್ನು ಎಲ್ಲ ಕಡೆಗಳಿಂದ ಒಳಗೆ ಸೆಳೆದುಕೊಳ್ಳುತ್ತದೆಯೋ ಹಾಗೆ ಈ ಜೀವವು ತನ್ನ ಎಲ್ಲ ಕಾಮನೆಗಳನ್ನೂ ಸಂಕೋಚಗೊಳಿಸಿಕೊಂಡಾಗ ತನ್ನ ವಿಶುದ್ಧ ಅಂತಃಕರಣದಲ್ಲಿಯೇ ಸ್ವಯಂ ಪ್ರಕಾಶಿತವಾದ ಪರಮಾತ್ಮನ ಸಾಕ್ಷಾತ್ಕಾರವನ್ನು ಮಾಡಿಕೊಳ್ಳುತ್ತದೆ.

12168041a ಕಿಂ ಚಿದೇವ ಮಮತ್ವೇನ ಯದಾ ಭವತಿ ಕಲ್ಪಿತಮ್|

12168041c ತದೇವ ಪರಿತಾಪಾರ್ಥಂ ಸರ್ವಂ ಸಂಪದ್ಯತೇ ತದಾ||

ಯಾವುದೇ ವಿಷಯದಲ್ಲಿ ಮಮತ್ವವನ್ನು ಕಲ್ಪಿಸಿಕೊಂಡಾಗ ಮನುಷ್ಯನೇ ಆ ವಿಷಯಕ್ಕೆ ಸಮಾನವಾದ ದುಃಖಕ್ಕೆ ಕಾರಣನಾಗುತ್ತಾನೆ.

12168042a ನ ಬಿಭೇತಿ ಯದಾ ಚಾಯಂ ಯದಾ ಚಾಸ್ಮಾನ್ನ ಬಿಭ್ಯತಿ|

12168042c ಯದಾ ನೇಚ್ಚತಿ ನ ದ್ವೇಷ್ಟಿ ಬ್ರಹ್ಮ ಸಂಪದ್ಯತೇ ತದಾ||

ಯಾವಾಗ ಮನುಷ್ಯನಿಗೆ ಯಾರೊಡನೆಯೂ ಭಯವಿಲ್ಲವೋ ಅಥವಾ ಯಾರೂ ಅವನಿಗೆ ಹೆದರುವುದಿಲ್ಲವೋ, ಯಾವಾಗ ಅವನು ಯಾವುದನ್ನೂ ಬಯಸುವುದಿಲ್ಲವೋ ಮತ್ತು ಯಾರನ್ನೂ ದ್ವೇಷಿಸುವುದಿಲ್ಲವೋ ಆಗ ಅವನು ಪರಬ್ರಹ್ಮ ಪರಮಾತ್ಮನನ್ನು ಸೇರುತ್ತಾನೆ.

12168043a ಉಭೇ ಸತ್ಯಾನೃತೇ ತ್ಯಕ್ತ್ವಾ ಶೋಕಾನಂದೌ ಭಯಾಭಯೇ|

12168043c ಪ್ರಿಯಾಪ್ರಿಯೇ ಪರಿತ್ಯಜ್ಯ ಪ್ರಶಾಂತಾತ್ಮಾ ಭವಿಷ್ಯಸಿ||

ಸತ್ಯ-ಅಸತ್ಯ, ಶೋಕ-ಆನಂದ, ಭಯ-ಅಭಯ ಮತ್ತು ಪ್ರಿಯ-ಅಪ್ರಿಯವಾದವುಗಳನ್ನು ಪರಿತ್ಯಜಿದವನು ಪ್ರಶಾಂತಾತ್ಮನಾಗುತ್ತಾನೆ.

12168044a ಯದಾ ನ ಕುರುತೇ ಧೀರಃ ಸರ್ವಭೂತೇಷು ಪಾಪಕಮ್|

12168044c ಕರ್ಮಣಾ ಮನಸಾ ವಾಚಾ ಬ್ರಹ್ಮ ಸಂಪದ್ಯತೇ ತದಾ||

ಯಾವ ಧೀರನು ಸರ್ವಭೂತಗಳಿಗೂ ಮನಸಾ-ವಾಚಾ ಮತ್ತು ಕರ್ಮಣಾ ಪಾಪವನ್ನೆಸಗುವುದಿಲ್ಲವೋ ಅವನು ಬ್ರಹ್ಮನನ್ನು ಪಡೆದುಕೊಳ್ಳುತ್ತಾನೆ.

12168045a ಯಾ ದುಸ್ತ್ಯಜಾ ದುರ್ಮತಿಭಿರ್ಯಾ ನ ಜೀರ್ಯತಿ ಜೀರ್ಯತಃ|

12168045c ಯೋಽಸೌ ಪ್ರಾಣಾಂತಿಕೋ ರೋಗಸ್ತಾಂ ತೃಷ್ಣಾಂ ತ್ಯಜತಃ ಸುಖಮ್||

ದುರ್ಮತಿಗಳಿಗೆ ತ್ಯಜಿಸಲು ಕಷ್ಟಸಾಧ್ಯವಾದ, ಶರೀರವು ಜೀರ್ಣವಾದರೂ ಜೀರ್ಣವಾಗದ, ಮತ್ತು ಪ್ರಾಣಾಂತಿಕ ರೋಗದಂತಿರುವ ತೃಷ್ಣೆಯನ್ನು ತ್ಯಜಿಸುವವನಿಗೆ ಸುಖವುಂಟಾಗುತ್ತದೆ.

12168046a ಅತ್ರ ಪಿಂಗಲಯಾ ಗೀತಾ ಗಾಥಾಃ ಶ್ರೂಯಂತಿ ಪಾರ್ಥಿವ|

12168046c ಯಥಾ ಸಾ ಕೃಚ್ಚ್ರಕಾಲೇಽಪಿ ಲೇಭೇ ಧರ್ಮಂ ಸನಾತನಮ್||

ಪಾರ್ಥಿವ! ಈ ವಿಷಯದಲ್ಲಿ ಪಿಂಗಲೆಯು ಹಾಡಿದ್ದ ಗಾಥೆಗಳು ಕೇಳಿಬರುತ್ತವೆ. ಇದನ್ನು ಅನುಸರಿಸಿ ಅವಳು ಸಂಕಟಕಾಲದಲ್ಲಿಯೂ ಸನಾತನ ಧರ್ಮವನ್ನು ಪಡೆದುಕೊಂಡಿದ್ದಳು.

12168047a ಸಂಕೇತೇ ಪಿಂಗಲಾ ವೇಶ್ಯಾ ಕಾಂತೇನಾಸೀದ್ವಿನಾಕೃತಾ|

12168047c ಅಥ ಕೃಚ್ಚ್ರಗತಾ ಶಾಂತಾಂ ಬುದ್ಧಿಮಾಸ್ಥಾಪಯತ್ತದಾ||

ಒಮ್ಮೆ ವೇಶ್ಯಾ ಪಿಂಗಲೆಯು ಬಹಳ ಹೊತ್ತು ಸಂಕೇತಿಸಿದ ಸ್ಥಾನದಲ್ಲಿ ಕುಳಿತುಕೊಂಡಿದ್ದರೂ ಅವಳ ಪ್ರಿಯತಮನು ಅವಳ ಬಳಿ ಬರಲಿಲ್ಲ. ಆಗ ಸಂಕಟದಲ್ಲಿದ್ದರೂ ಶಾಂತಳಾಗಿದ್ದುಕೊಂಡು ಅವಳು ಹೀಗೆ ಯೋಚಿಸತೊಡಗಿದಳು:

12168048 ಪಿಂಗಲೋವಾಚ|

12168048a ಉನ್ಮತ್ತಾಹಮನುನ್ಮತ್ತಂ ಕಾಂತಮನ್ವವಸಂ ಚಿರಮ್|

12168048c ಅಂತಿಕೇ ರಮಣಂ ಸಂತಂ ನೈನಮಧ್ಯಗಮಂ ಪುರಾ||

ಪಿಂಗಲೆಯು ಹೇಳಿದಳು: “ನನ್ನ ನಿಜವಾದ ಪ್ರಿಯತಮನು ದೀರ್ಘಕಾಲದಿಂದ ನನ್ನ ಹತ್ತಿರವೇ ಇದ್ದಾನೆ. ಸದಾ ನಾನು ಅವನ ಜೊತೆಯೇ ಇದ್ದೇನೆ. ಅವನು ಎಂದೂ ಉನ್ಮತ್ತನಾಗುವುದಿಲ್ಲ. ಆದರೆ ನಾನು ಎಷ್ಟು ಉನ್ಮತ್ತಳಾಗಿದ್ದೇನೆಂದರೆ ಇದಕ್ಕೂ ಮೊದಲು ಅವನನ್ನು ನಾನು ಗುರುತಿಸಲೇ ಇಲ್ಲ!

12168049a ಏಕಸ್ಥೂಣಂ ನವದ್ವಾರಮಪಿಧಾಸ್ಯಾಮ್ಯಗಾರಕಮ್|

12168049c ಕಾ ಹಿ ಕಾಂತಮಿಹಾಯಾಂತಮಯಂ ಕಾಂತೇತಿ ಮಂಸ್ಯತೇ||

ಒಂದೇ ಕಂಭವಿರುವ ಮತ್ತು ಒಂಭತ್ತು ದ್ವಾರಗಳಿರುವ ಈ ಶರೀರವೆಂಬ ಮನೆಯನ್ನು ಇಂದಿನಿಂದ ಇತರರಿಗೆ ಮುಚ್ಚಿಬಿಡುತ್ತೇನೆ. ಇಲ್ಲಿಗೆ ಬಂದಿರುವ ಆ ಸತ್ಯ ಪ್ರಿಯತಮನನ್ನು ತಿಳಿದೂ ಕೂಡ ಯಾವ ನಾರಿಯು ಬೇರೆ ಯಾವುದೋ ಎಲುಬು-ಮಾಂಸಗಳ ಗೊಂಬೆಯನ್ನು ತನ್ನ ಪ್ರಾಣವಲ್ಲಭನೆಂದು ಸ್ವೀಕರಿಸಿಯಾಳು?

12168050a ಅಕಾಮಾಃ ಕಾಮರೂಪೇಣ ಧೂರ್ತಾ ನರಕರೂಪಿಣಃ|

12168050c ನ ಪುನರ್ವಂಚಯಿಷ್ಯಂತಿ ಪ್ರತಿಬುದ್ಧಾಸ್ಮಿ ಜಾಗೃಮಿ||

ಈಗ ನಾನು ಮೋಹನಿದ್ರೆಯಿಂದ ಎಚ್ಚೆತ್ತಿದ್ದೇನೆ ಮತ್ತು ನಿರಂತರವಾಗಿ ಎಚ್ಚೆತ್ತೇ ಇರುತ್ತೇನೆ. ಕಾಮನೆಗಳನ್ನೂ ತ್ಯಜಿಸಿದ್ದೇನೆ. ಆದುದರಿಂದ ಆ ನರಕರೂಪೀ ಧೂರ್ತ ಮನುಷ್ಯರು ಕಾಮದ ರೂಪವನ್ನು ಧರಿಸಿ ಇನ್ನು ನನಗೆ ಮೋಸಮಾಡಲಾರರು.

12168051a ಅನರ್ಥೋಽಪಿ ಭವತ್ಯರ್ಥೋ ದೈವಾತ್ಪೂರ್ವಕೃತೇನ ವಾ|

12168051c ಸಂಬುದ್ಧಾಹಂ ನಿರಾಕಾರಾ ನಾಹಮದ್ಯಾಜಿತೇಂದ್ರಿಯಾ||

ಭಾಗ್ಯದಿಂದ ಅಥವಾ ಪೂರ್ವಕೃತ ಶುಭಕರ್ಮಗಳ ಪ್ರಭಾವದಿಂದ ಒಮ್ಮೊಮ್ಮೆ ಅನರ್ಥವೂ ಅರ್ಥರೂಪವಾಗುತ್ತದೆ. ನಿರಾಶಳಾದ ನಾನು ಇಂದು ಉತ್ತಮ ಜ್ಞಾನವನ್ನು ಪಡೆದುಕೊಂಡಿದ್ದೇನೆ. ಇಂದು ನಾನು ಅಜಿತೇಂದ್ರಿಯಳಾಗಿಲ್ಲ.

12168052a ಸುಖಂ ನಿರಾಶಃ ಸ್ವಪಿತಿ ನೈರಾಶ್ಯಂ ಪರಮಂ ಸುಖಮ್|

12168052c ಆಶಾಮನಾಶಾಂ ಕೃತ್ವಾ ಹಿ ಸುಖಂ ಸ್ವಪಿತಿ ಪಿಂಗಲಾ||

ಆಶಯಗಳಿಲ್ಲದವನು ಸುಖವಾಗಿ ನಿದ್ರಿಸುತ್ತಾನೆ. ಆಶಯಗಳಿಲ್ಲದಿರುವುದೇ ಪರಮ ಸುಖವು. ಆಶಯಗಳನ್ನು ನಿರಾಶಯಗಳನ್ನಾಗಿ ಮಾಡಿಕೊಂಡು ಪಿಂಗಲೆಯು ಸುಖವಾಗಿ ನಿದ್ರಿಸುತ್ತಾಳೆ.”””

12168053 ಭೀಷ್ಮ ಉವಾಚ|

12168053a ಏತೈಶ್ಚಾನ್ಯೈಶ್ಚ ವಿಪ್ರಸ್ಯ ಹೇತುಮದ್ಭಿಃ ಪ್ರಭಾಷಿತೈಃ|

12168053c ಪರ್ಯವಸ್ಥಾಪಿತೋ ರಾಜಾ ಸೇನಜಿನ್ಮುಮುದೇ ಸುಖಮ್||

ಭೀಷ್ಮನು ಹೇಳಿದನು: “ಬ್ರಾಹ್ಮಣನ ಈ ಮತ್ತು ಅನ್ಯ ಯುಕ್ತಿಯುಕ್ತ ಮಾತುಗಳಿಂದ ರಾಜಾ ಸೇತಜಿತುವಿನ ಚಿತ್ತವು ಸ್ಥಿರಗೊಂಡಿತು. ಅವನು ಶೋಕವನ್ನು ತ್ಯಜಿಸಿ ಸುಖಿಯಾದನು ಮತ್ತು ಪ್ರಸನ್ನನಾಗಿರತೊಡಗಿದನು.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಬ್ರಾಹ್ಮಣಸೇನಜಿತ್ಸಂವಾದಕಥನೇ ಅಷ್ಟಷಷ್ಟ್ಯಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಬ್ರಾಹ್ಮಣಸೇನಜಿತ್ಸಂವಾದಕಥನ ಎನ್ನುವ ನೂರಾಅರವತ್ತೆಂಟನೇ ಅಧ್ಯಾಯವು.

[1] ವಿಷಯೇ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ಈ ಅನುವಾದದಲ್ಲಿ ವಿಷಯೇ ಎನ್ನುವುದನ್ನೇ ಸರಿಯೆಂದು ಪರಿಗಣಿಸಿದ್ದೇನೆ.

[2] ಕಿಂ ನು ಮುಹ್ಯಸಿ ಮೂಢಸ್ತ್ವಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[3] ಗೀತಾ ಪ್ರೆಸ್ ನಲ್ಲಿ ಇದರ ನಂತರ ಇನ್ನೊಂದು ಅಧಿಕ ಶ್ಲೋಕವಿದೆ: ಹೃಷ್ಯಂತಮವಸೀದಂತಂ ಸುಖದುಃಖವಿಪರ್ಯಯೇ| ಆತ್ಮಾನಮನುಶೋಚಾಮಿ ಮಮೈಷ ಹೃದಿ ಸಂಸ್ಥಿತಃ||

[4] ಇದಕ್ಕೆ ಮೊದಲು ಈ ಅಧಿಕ ಶ್ಲೋಕಗಳಿವೆ: ಉತ್ತಮಾಧಮಮಧ್ಯಾನಿ ತೇಷು ತೇಷ್ವಿಹ ಕರ್ಮಸು| ಅಹಮೇಕೋ ನ ಮೇ ಕಶ್ಚಿನ್ನಾಹಮನ್ಯಸ್ಯ ಕಸ್ಯಚಿತ್| ನ ತಂ ಪಶ್ಯಾಮಿ ಯಸ್ಯಾಹಂ ತಂ ನ ಪಶ್ಯಾಮಿ ಯೋ ಮಮ|| (ಗೀತಾ ಪ್ರೆಸ್).

[5] ಇದರ ನಂತರ ಈ ಒಂದು ಅಧಿಕ ಶ್ಲೋಕಾರ್ಧವಿದೆ: ಸುಖದುಃಖೇ ಮನುಷ್ಯಾಣಾಂ ಚಕ್ರವತ್ ಪರಿವರ್ತತಃ|| (ಗೀತಾ ಪ್ರೆಸ್).

[6] ಗೀತಾ ಪ್ರೆಸ್ ನಲ್ಲಿ ಇದಕ್ಕೆ ಮೊದಲು ಈ ೮ ಅಧಿಕ ಶ್ಲೋಕಗಳಿವೆ: ಶರೀರಮೇವಾಯತನಂ ಸುಖಸ್ಯ ದುಃಖಸ್ಯ ಚಾಪ್ಯಾಯತನಂ ಶರೀರಮ್| ಯದ್ಯಚ್ಛರೀರೇಣ ಕರೋತಿ ಕರ್ಮ ತೇನೈವ ದೇಹೀ ಸಮುಪಾಶ್ನುತೇ ತತ್|| ಜೀವಿತಂ ಚ ಶರೀರೇಣ ಜಾತ್ಯೈವ ಸಹ ಜಾಯತೇ| ಉಭೇ ಸಹ ವಿವರ್ತೇತೇ ಉಭೇ ಸಹ ವಿನಶ್ಯತ|| ಸ್ನೇಹಪಾಶೈರ್ಬಹುವಿಧೈರಾವಿಷ್ಟವಿಷಯಾ ಜನಾಃ| ಅಕೃತಾರ್ಥಾಶ್ಚ ಸೀದಂತೇ ಜಲೈಃ ಸೈಕತಸೇತವಃ|| ಸ್ನೇಹೇನ ತಿಲವತ್ಸರ್ವಂ ಸರ್ಗಚಕ್ರೇ ನಿಪೀಡ್ಯತೇ| ತಿಲಪೀಡೈರಿವಾಕ್ರಮ್ಯ ಕ್ಲೇಶೈರಜ್ಞಾನಸಂಭವೈಃ|| ಸಂಚಿನೋತ್ಯಶುಭಂ ಕರ್ಮ ಕಲತ್ರಾಪೇಕ್ಷಯಾ ನರಃ| ಏಕಃ ಕ್ಲೇಶಾನವಾಪ್ನೋತಿ ಪರತ್ರೇಹ ಚ ಮಾನವಃ|| ಪುತ್ರದಾರಕುಟುಂಬೇಷು ಪ್ರಸಕ್ತಾಃ ಸರ್ವಮಾನವಾಃ| ಶೋಕಪಂಕಾರ್ಣವೇ ಮಗ್ನಾ ಜೀರ್ಣಾ ವನಗಜಾ ಇವ|| ಪುತ್ರನಾಶೇ ವಿತ್ತನಾಶೇ ಜ್ಞಾತಿಸಂಬಂಧಿನಾಮಪಿ| ಪ್ರಾಪ್ಯತೇ ಸುಮಹದ್ದುಃಖಂ ದಾವಾಗ್ನಿಪ್ರತಿಮಂ ವಿಭೋ| ದೈವಾಯತ್ತಮಿದಂ ಸರ್ವಂ ಸುಖದುಃಖೇ ಭವಾಭವೌ|| ಅಸುಹೃತ್ಸಸುಹೃಚ್ಚಾಪಿ ಸಶತ್ರುರ್ಮಿತ್ರವಾನಪಿ| ಸಪ್ರಜ್ಞಃ ಪ್ರಜ್ಞಯಾ ಹೀನೋ ದೈವೇನ ಲಭತೇ ಸುಖಮ್||

[7] ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ದಕ್ಷಿಣಾತ್ಯ ಪಾಠವೆಂದು ಈ ಒಂದು ಶ್ಲೋಕಾರ್ಧವಿದೆ: ಸುಖಂ ಸ್ವಪಿತಿ ದುರ್ಮೇಧಾಃ ಸ್ವಾನಿ ಕರ್ಮಾಣ್ಯಚಿಂತಯನ್| ಅವಿಜ್ಞಾನೇನ ಮಹತಾ ಕಂಬಲೇನೇವ ಸಂವೃತಃ||

[8] ಪರಿಭೂತ್ಯಾ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[9] ಭಯಸ್ಥಾನಶತಾನಿ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[10] ಇದೇ ಶ್ಲೋಕವು ಮಹಾಭಾರತದಲ್ಲಿ ಇತರ ನಾಲ್ಕು ಕಡೆ ಬರುತ್ತದೆ: ಅರಣ್ಯಕ ಪರ್ವದ ಎರಡನೇ ಅಧ್ಯಾಯದಲ್ಲಿ, ಸ್ತ್ರೀಪರ್ವದ ಎರಡನೇ ಅಧ್ಯಾಯದಲ್ಲಿ ಮತ್ತು ಇದೇ ಶಾಂತಿಪರ್ವದ ಅಧ್ಯಾಯ ೨೬ರಲ್ಲಿ ಮತ್ತು ೩೧೭ನೇ ಅಧ್ಯಾಯದಲ್ಲಿ.

[11] ಭವೇಚ್ಛೋಕಸ್ತಾಪೋ (ಗೀತಾ ಪ್ರೆಸ್).

[12] ಇದರ ನಂತರ ಈ ಒಂದು ಶ್ಲೋಕಾರ್ಧವಿದೆ: ಕ್ರೋಧೋ ನಾಮ ಶರೀರಸ್ಥೋ ದೇಹಿನಾಂ ಪ್ರೋಚ್ಯತೇ ಬುಧೈಃ| (ಗೀತಾ ಪ್ರೆಸ್).

Comments are closed.