Shanti Parva: Chapter 167

ಶಾಂತಿ ಪರ್ವ: ಆಪದ್ಧರ್ಮ ಪರ್ವ

೧೬೭

ರಾಜಧರ್ಮ ಮತ್ತು ಗೌತಮರು ಪುನಃ ಜೀವಿತರಾಗುವುದು (೧-೨೪).

12167001 ಭೀಷ್ಮ ಉವಾಚ|

12167001a ತತಶ್ಚಿತಾಂ ಬಕಪತೇಃ ಕಾರಯಾಮಾಸ ರಾಕ್ಷಸಃ|

12167001c ರತ್ನೈರ್ಗಂಧೈಶ್ಚ ಬಹುಭಿರ್ವಸ್ತ್ರೈಶ್ಚ ಸಮಲಂಕೃತಾಮ್||

ಭೀಷ್ಮನು ಹೇಳಿದನು: “ಅನಂತರ ವಿರೂಪಾಕ್ಷನು ಬಕರಾಜನಿಗೆ ಒಂದು ಚಿತೆಯನ್ನು ಸಿದ್ಧಗೊಳಿಸಿದನು. ಅದನ್ನು ಅನೇಕ ರತ್ನಗಳಿಂದ, ಸುಗಂಧಿತ ಚಂದನಗಳಿಂದ ಮತ್ತು ವಸ್ತ್ರಗಳಿಂದ ಅಲಂಕರಿಸಲಾಗಿತ್ತು.

12167002a ತತ್ರ ಪ್ರಜ್ವಾಲ್ಯ ನೃಪತೇ ಬಕರಾಜಂ ಪ್ರತಾಪವಾನ್|

12167002c ಪ್ರೇತಕಾರ್ಯಾಣಿ ವಿಧಿವದ್ರಾಕ್ಷಸೇಂದ್ರಶ್ಚಕಾರ ಹ||

ನೃಪತೇ! ಅದರ ಮೇಲೆ ಬಕರಾಜನನ್ನಿಟ್ಟು ಚಿತೆಯನ್ನು ಪ್ರಜ್ವಲಿಸಿ ಪ್ರತಾಪವಾನ್ ರಾಕ್ಷಸೇಂದ್ರನು ವಿಧಿವತ್ತಾಗಿ ಅವನ ಪ್ರೇತಕಾರ್ಯಗಳನ್ನು ನಡೆಸಿದನು.

12167003a ತಸ್ಮಿನ್ಕಾಲೇಽಥ ಸುರಭಿರ್ದೇವೀ ದಾಕ್ಷಾಯಣೀ ಶುಭಾ|

12167003c ಉಪರಿಷ್ಟಾತ್ತತಸ್ತಸ್ಯ ಸಾ ಬಭೂವ ಪಯಸ್ವಿನೀ||

ಆ ಸಮಯದಲ್ಲಿ ದಿವ್ಯ ಧೇನು ದಕ್ಷಕನ್ಯೆ ಸುರಭಿಯು ಅಲ್ಲಿಗೆ ಬಂದು ಆಕಾಶದಲ್ಲಿ ನೇರವಾಗಿ ಚಿತೆಯ ಮೇಲೆ ನಿಂತುಕೊಂಡಳು. 

12167004a ತಸ್ಯಾ ವಕ್ತ್ರಾಚ್ಚ್ಯುತಃ ಫೇನಃ ಕ್ಷೀರಮಿಶ್ರಸ್ತದಾನಘ|

12167004c ಸೋಽಪತದ್ವೈ ತತಸ್ತಸ್ಯಾಂ ಚಿತಾಯಾಂ ರಾಜಧರ್ಮಣಃ||

ಅವಳ ಮುಖದಿಂದ ಬಿದ್ದ ಧೂಮಮಿಶ್ರಿತ ಹಾಲಿನ ನೊರೆಯು ಕೆಳಗೆ ಬಿದ್ದು ರಾಜಧರ್ಮನ ಚಿತೆಯ ಮೇಲೆ ಬಿದ್ದಿತು.

12167005a ತತಃ ಸಂಜೀವಿತಸ್ತೇನ ಬಕರಾಜಸ್ತದಾನಘ|

12167005c ಉತ್ಪತ್ಯ ಚ ಸಮೇಯಾಯ ವಿರೂಪಾಕ್ಷಂ ಬಕಾಧಿಪಃ||

ಅನಘ! ಅದರಿಂದ ಆಗ ಬಕರಾಜನು ಜೀವಿತಗೊಂಡು ಮೇಲೆದ್ದನು ಮತ್ತು ವಿರೂಪಾಕ್ಷನನ್ನು ಕೂಡಿದನು.

12167006a ತತೋಽಭ್ಯಯಾದ್ದೇವರಾಜೋ ವಿರೂಪಾಕ್ಷಪುರಂ ತದಾ|

12167006c ಪ್ರಾಹ ಚೇದಂ ವಿರೂಪಾಕ್ಷಂ ದಿಷ್ಟ್ಯಾಯಂ ಜೀವತೀತ್ಯುತ||

ಆಗ ದೇವರಾಜ ಇಂದ್ರನು ವಿರೂಪಾಕ್ಷನ ಪುರಕ್ಕೆ ಬಂದನು ಮತ್ತು ವಿರೂಪಾಕ್ಷನಿಗೆ ಹೇಳಿದನು: “ಅದೃಷ್ಟವಶಾತ್ ನಿನ್ನಿಂದಾಗಿ ಬಕರಾಜನು ಜೀವಿತನಾದನು.”

12167007a ಶ್ರಾವಯಾಮಾಸ ಚೇಂದ್ರಸ್ತಂ ವಿರೂಪಾಕ್ಷಂ ಪುರಾತನಮ್|

12167007c ಯಥಾ ಶಾಪಃ ಪುರಾ ದತ್ತೋ ಬ್ರಹ್ಮಣಾ ರಾಜಧರ್ಮಣಃ||

ಇಂದ್ರನು ಆಗ ವಿರೂಪಾಕ್ಷನಿಗೆ ಹಿಂದೆ ರಾಜಧರ್ಮನಿಗೆ ಬ್ರಹ್ಮನಿತ್ತಿದ್ದ ಶಾಪದ ಘಟನೆಯನ್ನು ಹೇಳಿದನು.

12167008a ಯದಾ ಬಕಪತೀ ರಾಜನ್ ಬ್ರಹ್ಮಾಣಂ ನೋಪಸರ್ಪತಿ|

12167008c ತತೋ ರೋಷಾದಿದಂ ಪ್ರಾಹ ಬಕೇಂದ್ರಾಯ ಪಿತಾಮಹಃ||

ರಾಜನ್! ಒಮ್ಮೆ ಬಕರಾಜನು ಬ್ರಹ್ಮಸಭೆಯಲ್ಲಿ ಉಪಸ್ಥಿತನಾಗಿರಲಿಲ್ಲ. ಆಗ ಪಿತಾಮಹನು ರೋಷದಿಂದ ಬಕೇಂದ್ರನಿಗೆ ಹೀಗೆ ಹೇಳಿದ್ದನು:

12167009a ಯಸ್ಮಾನ್ಮೂಢೋ ಮಮ ಸದೋ ನಾಗತೋಽಸೌ ಬಕಾಧಮಃ|

12167009c ತಸ್ಮಾದ್ವಧಂ ಸ ದುಷ್ಟಾತ್ಮಾ ನಚಿರಾತ್ಸಮವಾಪ್ಸ್ಯತಿ||

“ಆ ಮೂರ್ಖ ಬಕಾಧಮನು ನನ್ನ ಸಭೆಗೆ ಬರಲಿಲ್ಲ. ಆದುದರಿಂದ ಶೀಘ್ರವೇ ಆ ದುಷ್ಟಾತ್ಮನಿಗೆ ವಧೆಯ ಕಷ್ಟವನ್ನು ಅನುಭವಿಸಬೇಕಾಗುತ್ತದೆ!”

12167010a ತದಾಯಂ ತಸ್ಯ ವಚನಾನ್ನಿಹತೋ ಗೌತಮೇನ ವೈ|

12167010c ತೇನೈವಾಮೃತಸಿಕ್ತಶ್ಚ ಪುನಃ ಸಂಜೀವಿತೋ ಬಕಃ||

ಬ್ರಹ್ಮನ ಆ ಮಾತಿನಂತೆಯೇ ಗೌತಮನು ಅವನನ್ನು ವಧಿಸಿದನು ಮತ್ತು ಬ್ರಹ್ಮನು ಪುನಃ ಅಮೃತವನ್ನು ಸಿಂಪಡಿಸಿ ರಾಜಧರ್ಮನಿಗೆ ಜೀವದಾನವನ್ನು ನೀಡಿದನು.

12167011a ರಾಜಧರ್ಮಾ ತತಃ ಪ್ರಾಹ ಪ್ರಣಿಪತ್ಯ ಪುರಂದರಮ್|

12167011c ಯದಿ ತೇಽನುಗ್ರಹಕೃತಾ ಮಯಿ ಬುದ್ಧಿಃ ಪುರಂದರ|

12167011e ಸಖಾಯಂ ಮೇ ಸುದಯಿತಂ ಗೌತಮಂ ಜೀವಯೇತ್ಯುತ||

ಆಗ ರಾಜಧರ್ಮನು ಪುರಂದರನನ್ನು ನಮಸ್ಕರಿಸಿ ಹೇಳಿದನು: “ಪುರಂದರ! ನನ್ನಮೇಲೆ ಅನುಗ್ರಹವನ್ನು ಮಾಡುವ ಬುದ್ಧಿಯಿದ್ದರೆ ನನ್ನ ಪ್ರೀತಿಯ ಸಖ ಗೌತಮನು ಜೀವಿಸಲಿ!”

12167012a ತಸ್ಯ ವಾಕ್ಯಂ ಸಮಾಜ್ಞಾಯ ವಾಸವಃ ಪುರುಷರ್ಷಭ|

12167012c ಸಂಜೀವಯಿತ್ವಾ ಸಖ್ಯೇ ವೈ ಪ್ರಾದಾತ್ತಂ ಗೌತಮಂ ತದಾ||

ಪುರುಷರ್ಷಭ! ಅವನ ಮಾತನ್ನು ತಿಳಿದ ವಾಸವನು ಗೌತಮನನ್ನು ಪುನಃ ಜೀವಗೊಳಿಸಿ ಸಖನಿಗಿತ್ತನು.

12167013a ಸಭಾಂಡೋಪಸ್ಕರಂ ರಾಜಂಸ್ತಮಾಸಾದ್ಯ ಬಕಾಧಿಪಃ|

12167013c ಸಂಪರಿಷ್ವಜ್ಯ ಸುಹೃದಂ ಪ್ರೀತ್ಯಾ ಪರಮಯಾ ಯುತಃ||

ರಾಜನ್! ಪಾತ್ರೆಗಳು ಮತ್ತು ಸುವರ್ಣ ಮೊದಲಾದ ಎಲ್ಲ ಸಾಮಾಗ್ರಿಸಹಿತ ಪ್ರಿಯ ಸುಹೃದ ಗೌತಮನನ್ನು ಪಡೆದ ಬಕರಾಜನು ಅತ್ಯಂತ ಪ್ರೇಮದಿಂದ ಅವನನ್ನು ಹೃದಯಪೂರ್ವಕವಾಗಿ ಆಲಂಗಿಸಿದನು.

12167014a ಅಥ ತಂ ಪಾಪಕರ್ಮಾಣಂ ರಾಜಧರ್ಮಾ ಬಕಾಧಿಪಃ|

12167014c ವಿಸರ್ಜಯಿತ್ವಾ ಸಧನಂ ಪ್ರವಿವೇಶ ಸ್ವಮಾಲಯಮ್||

ಆಗ ಬಕರಾಜ ರಾಜಧರ್ಮನು ಆ ಪಾಪಚಾರಿಯನ್ನು ಧನಸಹಿತ ಬೀಳ್ಕೊಟ್ಟು ತನ್ನ ಮನೆಯನ್ನು ಪ್ರವೇಶಿಸಿದನು.

12167015a ಯಥೋಚಿತಂ ಚ ಸ ಬಕೋ ಯಯೌ ಬ್ರಹ್ಮಸದಸ್ತದಾ|

12167015c ಬ್ರಹ್ಮಾ ಚ ತಂ ಮಹಾತ್ಮಾನಮಾತಿಥ್ಯೇನಾಭ್ಯಪೂಜಯತ್||

ನಂತರ ಬಕನು ಯಥೋಚಿತವಾಗಿ ಬ್ರಹ್ಮಸದನಕ್ಕೆ ಹೋದನು. ಬ್ರಹ್ಮನೂ ಕೂಡ ಆ ಮಹಾತ್ಮನ ಅತಿಥಿಸತ್ಕಾರವನ್ನು ನಡೆಸಿದನು.

12167016a ಗೌತಮಶ್ಚಾಪಿ ಸಂಪ್ರಾಪ್ಯ ಪುನಸ್ತಂ ಶಬರಾಲಯಮ್|

12167016c ಶೂದ್ರಾಯಾಂ ಜನಯಾಮಾಸ ಪುತ್ರಾನ್ ದುಷ್ಕೃತಕಾರಿಣಃ||

ಗೌತಮನೂ ಕೂಡ ಶಬರಾಲಯಕ್ಕೆ ಹೋಗಿ ಪುನಃ ಅಲ್ಲಿಯೇ ವಾಸಿಸತೊಡಗಿದನು. ಅಲ್ಲಿ ಅವನು ಶೂದ್ರಕನ್ಯೆಯಲ್ಲಿಯೇ ಪಾಪಚಾರೀ ಪುತ್ರರನ್ನು ಹುಟ್ಟಿಸಿದನು.

12167017a ಶಾಪಶ್ಚ ಸುಮಹಾಂಸ್ತಸ್ಯ ದತ್ತಃ ಸುರಗಣೈಸ್ತದಾ|

12167017c ಕುಕ್ಷೌ ಪುನರ್ಭ್ವಾಂ ಭಾರ್ಯಾಯಾಂ ಜನಯಿತ್ವಾ ಚಿರಾತ್ಸುತಾನ್|

12167017e ನಿರಯಂ ಪ್ರಾಪ್ಸ್ಯತಿ ಮಹತ್ ಕೃತಘ್ನೋಽಯಮಿತಿ ಪ್ರಭೋ||

ಆಗ ಸುರಗಣಗಳು ಗೌತಮನಿಗೆ ಮಹಾ ಶಾಪವನ್ನಿತ್ತರು: “ಇವನು ಕೃತಘ್ನನು. ಇತರ ಪತಿಗಳನ್ನು ಸ್ವೀಕರಿಸುವ ಶೂದ್ರಕನ್ಯೆಯ ಹೊಟ್ಟೆಯಲ್ಲಿ ಅನೇಕ ಸಮಯದವರೆಗೆ ಪುತ್ರರನ್ನು ಹುಟ್ಟಿಸುತ್ತಿದ್ದಾನೆ. ಈ ಪಾಪದ ಕಾರಣದಿಂದ ಇವನು ನರಕದಲ್ಲಿ ಬೀಳುತ್ತಾನೆ.”

12167018a ಏತತ್ಪ್ರಾಹ ಪುರಾ ಸರ್ವಂ ನಾರದೋ ಮಮ ಭಾರತ|

12167018c ಸಂಸ್ಮೃತ್ಯ ಚಾಪಿ ಸುಮಹದಾಖ್ಯಾನಂ ಪುರುಷರ್ಷಭ|

12167018e ಮಯಾಪಿ ಭವತೇ ಸರ್ವಂ ಯಥಾವದುಪವರ್ಣಿತಮ್||

ಭಾರತ! ಇವೆಲ್ಲವನ್ನೂ ಹಿಂದೆ ನನಗೆ ನಾರದನು ಹೇಳಿದನು. ಪುರುಷರ್ಷಭ! ಈ ಸುಮಹದಾಖ್ಯಾನವನ್ನು ನೆನಪಿಸಿಕೊಂಡು ನಿನಗೆ ಯಥಾವತ್ತಾಗಿ ಸರ್ವವನ್ನೂ ಹೇಳಿದ್ದೇನೆ.

12167019a ಕುತಃ ಕೃತಘ್ನಸ್ಯ ಯಶಃ ಕುತಃ ಸ್ಥಾನಂ ಕುತಃ ಸುಖಮ್|

12167019c ಅಶ್ರದ್ಧೇಯಃ ಕೃತಘ್ನೋ ಹಿ ಕೃತಘ್ನೇ ನಾಸ್ತಿ ನಿಷ್ಕೃತಿಃ||

ಕೃತಘ್ನನಿಗೆ ಎಲ್ಲಿಯ ಯಶಸ್ಸು? ಅವನಿಗೆ ಹೇಗೆ ಸ್ಥಾನ ಸುಖಗಳು ದೊರೆಯುತ್ತವೆ? ಕೃತಘ್ನನು ವಿಶ್ವಾಸಕ್ಕೆ ಯೋಗ್ಯನಾಗುವುದಿಲ್ಲ. ಕೃತಘ್ನನ ಉದ್ಧಾರಕ್ಕಾಗಿ ಶಾಸ್ತ್ರಗಳಲ್ಲಿಯೂ ಯಾವ ಪ್ರಾಯಶ್ಚಿತ್ತಗಳೂ ಇಲ್ಲ.

12167020a ಮಿತ್ರದ್ರೋಹೋ ನ ಕರ್ತವ್ಯಃ ಪುರುಷೇಣ ವಿಶೇಷತಃ|

12167020c ಮಿತ್ರಧ್ರುಙ್ನಿರಯಂ ಘೋರಮನಂತಂ ಪ್ರತಿಪದ್ಯತೇ||

ಪುರುಷನು ವಿಶೇಷವಾಗಿ ಮಿತ್ರದ್ರೋಹವನ್ನು ಮಾಡಬಾರದು. ಮಿತ್ರದ್ರೋಹಿಯು ಅನಂತಕಾಲದ ವರೆಗೆ ಘೋರ ನರಕದಲ್ಲಿ ಬೀಳುತ್ತಾನೆ.

12167021a ಕೃತಜ್ಞೇನ ಸದಾ ಭಾವ್ಯಂ ಮಿತ್ರಕಾಮೇನ ಚಾನಘ|

12167021c ಮಿತ್ರಾತ್ ಪ್ರಭವತೇ ಸತ್ಯಂ ಮಿತ್ರಾತ್ ಪ್ರಭವತೇ ಬಲಮ್[1]|

[2]12167021e ಸತ್ಕಾರೈರುತ್ತಮೈರ್ಮಿತ್ರಂ ಪೂಜಯೇತ ವಿಚಕ್ಷಣಃ||

ಅನಘ! ಸದಾ ಕೃತಜ್ಞನಾಗಿರಬೇಕು. ಮಿತ್ರನ ಇಚ್ಛೆಯನ್ನಿರಿಸಿಕೊಂಡಿರಬೇಕು. ಏಕೆಂದರೆ ಮಿತ್ರನಿಂದ ಸರ್ವವೂ ದೊರೆಯುತ್ತದೆ. ಮಿತ್ರನಿಂದ ಬಲವೂ ದೊರೆಯುತ್ತದೆ. ಆದುದರಿಂದ ಬುದ್ಧಿವಂತನು ಉತ್ತಮ ಸತ್ಕಾರಗಳಿಂದ ಮಿತ್ರನನ್ನು ಪೂಜಿಸಬೇಕು.

12167022a ಪರಿತ್ಯಾಜ್ಯೋ ಬುಧೈಃ ಪಾಪಃ ಕೃತಘ್ನೋ ನಿರಪತ್ರಪಃ|

12167022c ಮಿತ್ರದ್ರೋಹೀ ಕುಲಾಂಗಾರಃ ಪಾಪಕರ್ಮಾ ನರಾಧಮಃ||

ಪಾಪಿ, ಕೃತಘ್ನ, ನಿರ್ಲಜ್ಜ, ಮಿತ್ರದ್ರೋಹೀ, ಕುಲಾಂಗಾರ ಮತು ಪಾಪಕರ್ಮಿ ನರಾಧಮನನ್ನು ವಿದ್ವಾಂಸರು ಸದಾ ಪರಿತ್ಯಜಿಸುತ್ತಾರೆ.

12167023a ಏಷ ಧರ್ಮಭೃತಾಂ ಶ್ರೇಷ್ಠ ಪ್ರೋಕ್ತಃ ಪಾಪೋ ಮಯಾ ತವ|

12167023c ಮಿತ್ರದ್ರೋಹೀ ಕೃತಘ್ನೋ ವೈ ಕಿಂ ಭೂಯಃ ಶ್ರೋತುಮಿಚ್ಚಸಿ||

ಧರ್ಮಭೃತರಲ್ಲಿ ಶ್ರೇಷ್ಠ! ಹೀಗೆ ನಾನು ನಿನಗೆ ಪಾಪೀ, ಮಿತ್ರದ್ರೋಹೀ ಕೃತಘ್ನನ ಕುರಿತು ಹೇಳಿದೆ. ಇನ್ನೂ ಏನನ್ನು ಕೇಳಲು ಬಯಸುತ್ತೀಯೆ?””

12167024 ವೈಶಂಪಾಯನ ಉವಾಚ|

12167024a ಏತಚ್ಚ್ರುತ್ವಾ ತದಾ ವಾಕ್ಯಂ ಭೀಷ್ಮೇಣೋಕ್ತಂ ಮಹಾತ್ಮನಾ|

12167024c ಯುಧಿಷ್ಠಿರಃ ಪ್ರೀತಮನಾ ಬಭೂವ ಜನಮೇಜಯ||

ವೈಶಂಪಾಯನನು ಹೇಳಿದನು: “ಜನಮೇಜಯ! ಮಹಾತ್ಮ ಭೀಷ್ಮನಾಡಿದ ಈ ಮಾತನ್ನು ಕೇಳಿ ಯುಧಿಷ್ಠಿರನು ಪ್ರೀತಮನಸ್ಕನಾದನು.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಆಪದ್ಧರ್ಮಪರ್ವಣಿ ಕೃತಘ್ನೋಪಾಖ್ಯಾನೇ ಸಪ್ತಷಷ್ಟ್ಯಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಆಪದ್ಧರ್ಮಪರ್ವದಲ್ಲಿ ಕೃತಘ್ನೋಪಾಖ್ಯಾನ ಎನ್ನುವ ನೂರಾಅರವತ್ತೇಳನೇ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ಆಪದ್ಧರ್ಮಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಆಪದ್ಧರ್ಮಪರ್ವವು|

ಇದೂವರೆಗಿನ ಒಟ್ಟು ಮಹಾಪರ್ವಗಳು – ೧೧/೧೮, ಉಪಪರ್ವಗಳು-೮೫/೧೦೦, ಅಧ್ಯಾಯಗಳು-೧೪೯೫/೧೯೯೫, ಶ್ಲೋಕಗಳು-೫೬೦೮೦/೭೩೭೮೪

ಸ್ವಸ್ತಿಪ್ರಜಾಭ್ಯಃ ಪರಿಪಾಲಯಂತಾಮ್

ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ|

ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ

ಲೋಕಾಃ ಸಮಸ್ತಾಃ ಸುಖಿನೋ ಭವಂತು||

ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ|

ದೇಶೋಽಯಂ ಕ್ಷೋಭರಹಿತೋ ಬ್ರಾಹ್ಮಣಾಃ ಸಂತು ನಿರ್ಭಯಾಃ||

ಅಪುತ್ರಾಃ ಪುತ್ರಿಣಃ ಸಂತು ಪುತ್ರಿಣಃ ಸಂತು ಪೌತ್ರಿಣಃ|

ಅಧನಾಃ ಸಧನಾಃ ಸಂತು ಜೀವಂತು ಶರದಾಂ ಶತಮ್||

ಕಾಯೇನ ವಾಚಾ ಮನಸೇಂದ್ರಿಯೈರ್ವಾ

ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್|

ಕರೋಮಿ ಯದ್ಯತ್ಸಕಲಂ ಪರಸ್ಮೈ

ನಾರಾಯಣಾಯೇತಿ ಸಮರ್ಪಯಾಮಿ||

ಯದಕ್ಷರಪದಭ್ರಷ್ಟಂ ಮಾತ್ರಾಹೀನಂ ತು ಯದ್ಭವೇತ್|

ತತ್ಸರ್ವಂ ಕ್ಷಮ್ಯತಾಂ ದೇವ ನಾರಾಯಣ ನಮೋಽಸ್ತು ತೇ||

|| ಹರಿಃ ಓಂ ಕೃಷ್ಣಾರ್ಪಣಮಸ್ತು ||

[1] ಮಿತ್ರಾತ್ ಪೂಜಾಂ ಲಭೇತ ಚ|| (ಗೀತಾ ಪ್ರೆಸ್).

[2] ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಮಿತ್ರಾದ್ ಭೋಗಾಂಶ್ಚ ಭುಂಜೀತ ಮಿತ್ರೇಣಾಪತ್ಸು ಮುಚ್ಯತೇ| (ಗೀತಾ ಪ್ರೆಸ್).

Comments are closed.