Shanti Parva: Chapter 317

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೧೭

ನಾರದನು ಶುಕನಿಗೆ ಆಧ್ಯಾತ್ಮವಿಷಯಗಳನ್ನು ಉಪದೇಶಿಸಿದುದು (1-30).

12317001 ನಾರದ ಉವಾಚ|

12317001a ಅಶೋಕಂ ಶೋಕನಾಶಾರ್ಥಂ ಶಾಸ್ತ್ರಂ ಶಾಂತಿಕರಂ ಶಿವಮ್|

12317001c ನಿಶಮ್ಯ ಲಭತೇ ಬುದ್ಧಿಂ ತಾಂ ಲಬ್ಧ್ವಾ ಸುಖಮೇಧತೇ||

ನಾರದನು ಹೇಳಿದನು: “ಶೋಕನಾಶಕ್ಕಾಗಿ ಶೋಕವಿಲ್ಲದ ಶಾಂತಿಕರ ಮಂಗಳ ಶಾಸ್ತ್ರವನ್ನು ಕೇಳುವವನು ಉತ್ತಮ ಬುದ್ಧಿಯನ್ನು ಪಡೆದುಕೊಂಡು ಸುಖವನ್ನು ಹೊಂದುತ್ತಾನೆ.

12317002a ಶೋಕಸ್ಥಾನಸಹಸ್ರಾಣಿ ಭಯಸ್ಥಾನಶತಾನಿ ಚ|

12317002c ದಿವಸೇ ದಿವಸೇ ಮೂಢಮಾವಿಶಂತಿ ನ ಪಂಡಿತಮ್||

ಸಾವಿರಾರು ಶೋಕ ಪ್ರಸಂಗಗಳೂ ನೂರಾರು ಭಯಪ್ರಸಂಗಗಳೂ ದಿನ ದಿನವೂ ಮೂಢನನ್ನು ಆಕ್ರಮಿಸುತ್ತವೆ. ಪಂಡಿತನನ್ನಲ್ಲ.

12317003a ತಸ್ಮಾದನಿಷ್ಟನಾಶಾರ್ಥಮಿತಿಹಾಸಂ ನಿಬೋಧ ಮೇ|

12317003c ತಿಷ್ಠತೇ ಚೇದ್ವಶೇ ಬುದ್ಧಿರ್ಲಭತೇ ಶೋಕನಾಶನಮ್||

ಆದುದರಿಂದ ಅನಿಷ್ಟವನ್ನು ನಿವಾರಿಸಿಕೊಳ್ಳಲು ಈ ಇತಿಹಾಸವನ್ನು ಕೇಳು. ಬುದ್ಧಿಯು ವಶದಲ್ಲಿದ್ದುದೇ ಆದರೆ ಶೋಕವು ವಿನಾಶವಾಗುತ್ತದೆ.

12317004a ಅನಿಷ್ಟಸಂಪ್ರಯೋಗಾಚ್ಚ ವಿಪ್ರಯೋಗಾತ್ ಪ್ರಿಯಸ್ಯ ಚ|

12317004c ಮನುಷ್ಯಾ ಮಾನಸೈರ್ದುಃಖೈರ್ಯುಜ್ಯಂತೇ ಅಲ್ಪಬುದ್ಧಯಃ||

ಅಲ್ಪಬುದ್ಧಿಯ ಮನುಷ್ಯರು ಅನಿಷ್ಟಗಳನ್ನು ಪಡೆದುಕೊಂಡಿದುದರಿಂದಲೂ ಪ್ರಿಯವಾದುದನ್ನು ಕಳೆದುಕೊಂಡಿದುದರಿಂದಲೂ ಮಾನಸಿಕ ದುಃಖಗಳನ್ನು ಅನುಭವಿಸುತ್ತಾರೆ.

12317005a ದ್ರವ್ಯೇಷು ಸಮತೀತೇಷು ಯೇ ಗುಣಾಸ್ತಾನ್ನ ಚಿಂತಯೇತ್|

12317005c ತಾನನಾದ್ರಿಯಮಾಣಸ್ಯ ಸ್ನೇಹಬಂಧಃ ಪ್ರಮುಚ್ಯತೇ||

ದ್ರವ್ಯಗಳು ಕಳೆದುಹೋದ ನಂತರ ಅವುಗಳಲ್ಲಿದ್ದ ಗುಣಗಳ ಕುರಿತೇ ಚಿಂತಿಸಬಾರದು. ಅದರಕುರಿತು ಚಿಂತಿಸುತ್ತಾ ಇದ್ದರೆ ಸ್ನೇಹಬಂಧನವು ಬಿಟ್ಟುಹೋಗುವುದಿಲ್ಲ.

12317006a ದೋಷದರ್ಶೀ ಭವೇತ್ತತ್ರ ಯತ್ರ ರಾಗಃ ಪ್ರವರ್ತತೇ|

12317006c ಅನಿಷ್ಟವದ್ಧಿತಂ ಪಶ್ಯೇತ್ತಥಾ ಕ್ಷಿಪ್ರಂ ವಿರಜ್ಯತೇ||

ಯಾವುದರ ಮೇಲೆ ಬಯಕೆಯು ಹೆಚ್ಚಾಗುತ್ತದೆಯೋ ಅದರಲಿ ದೋಷವಿದೆಯೆಂದು ಕಂಡುಕೊಳ್ಳಬೇಕು. ಮನಸ್ಸು ಹೋದ ಕಡೆ ತಾನೂ ಹೋಗುತ್ತಿದ್ದರೆ ಅನಿಷ್ಟವು ಹೆಚ್ಚಾಗುತ್ತದೆ ಎನ್ನುವುದನ್ನು ಮನಗಾಣಬೇಕು. ಆ ದೃಷ್ಟಿಯಿಂದ ವಿಷಯಗಳನ್ನು ನೋಡುತ್ತಿದ್ದರೆ ಅನುರಾಗವಿರುವ ವಿಷಯ/ವಸ್ತುಗಳಲ್ಲಿ ಕ್ಷಿಪ್ರವಾಗಿ ವೈರಾಗ್ಯವುಂಟಾಗುತ್ತದೆ.

12317007a ನಾರ್ಥೋ ನ ಧರ್ಮೋ ನ ಯಶೋ ಯೋಽತೀತಮನುಶೋಚತಿ|

12317007c ಅಪ್ಯಭಾವೇನ ಯುಜ್ಯೇತ ತಚ್ಚಾಸ್ಯ ನ ನಿವರ್ತತೇ||

ಕಳೆದುಹೋದುದರ ಕುರಿತು ಶೋಕಪಡುತ್ತಿರುವವನಿಗೆ ಅರ್ಥವೂ ಸಿಕ್ಕುವುದಿಲ್ಲ; ಧರ್ಮವೂ ಲಭಿಸುವುದಿಲ್ಲ; ಯಶಸ್ಸೂ ದೊರೆಯುವುದಿಲ್ಲ. ಕಳೆದುಹೋದುದನ್ನು ನೆನೆದು ಶೋಕಪಡುತ್ತಿದ್ದರೆ ಆ ವಸ್ತುವಿನ ಅಭಾವದ ಅನುಭವವಾಗುತ್ತದೆಯೇ ಹೊರತು ಆ ವಸ್ತುವನ್ನು ಅವನು ಪುನಃ ಪಡೆದುಕೊಳ್ಳಲಾರನು.

12317008a ಗುಣೈರ್ಭೂತಾನಿ ಯುಜ್ಯಂತೇ ವಿಯುಜ್ಯಂತೇ ತಥೈವ ಚ|

12317008c ಸರ್ವಾಣಿ ನೈತದೇಕಸ್ಯ ಶೋಕಸ್ಥಾನಂ ಹಿ ವಿದ್ಯತೇ||

ಎಲ್ಲ ಜೀವಿಗಳಿಗೂ ಪ್ರಿಯವಾದವುಗಳ ಸಂಯೋಗ-ವಿಯೋಗಗಳು ಆಗುತ್ತಲೇ ಇರುತ್ತವೆ. ಒಬ್ಬನಿಗೆ ಯಾವಾಗಲೂ ಕೇವಲ ಶೋಕವಾಗುತ್ತದೆ ಅಥವಾ ಸಂತೋಷವಾಗುತ್ತದೆ ಎನ್ನುವುದಿಲ್ಲ. ಪ್ರತಿಯೊಬ್ಬನಿಗೂ ಸುಖ-ಶೋಕ ಪ್ರಸಂಗಗಳು ಅನುಕ್ರಮವಾಗಿ ಬಂದು ಹೋಗುತ್ತಲೇ ಇರುತ್ತವೆ.

12317009a ಮೃತಂ ವಾ ಯದಿ ವಾ ನಷ್ಟಂ ಯೋಽತೀತಮನುಶೋಚತಿ|

12317009c ದುಃಖೇನ ಲಭತೇ ದುಃಖಂ ದ್ವಾವನರ್ಥೌ ಪ್ರಪದ್ಯತೇ||

ಮೃತಗೊಂಡು ಅಥವಾ ನಷ್ಟವಾಗಿ ಕಳೆದುಹೋದುದಕ್ಕೆ ಶೋಕಿಸುತ್ತಿದ್ದವನಿಗೆ ದುಃಖವು ಪ್ರಾಪ್ತವಾಗುವುದಲ್ಲದೇ ಆ ಸಮಯದಲ್ಲಿ ಮಾಡಬೇಕಾದುದನ್ನು ಮಾಡದೇ ಇದ್ದುದಕ್ಕೆ ಅನರ್ಥವನ್ನೂ ಹೊಂದುತ್ತಾನೆ.

12317010a ನಾಶ್ರು ಕುರ್ವಂತಿ ಯೇ ಬುದ್ಧ್ಯಾ ದೃಷ್ಟ್ವಾ ಲೋಕೇಷು ಸಂತತಿಮ್|

12317010c ಸಮ್ಯಕ್ ಪ್ರಪಶ್ಯತಃ ಸರ್ವಂ ನಾಶ್ರುಕರ್ಮೋಪಪದ್ಯತೇ||

ಲೋಕಗಳಲ್ಲಿಯ ಸಂತತಿಯನ್ನು ಬುದ್ಧಿಪೂರ್ವಕವಾಗಿ ನೋಡಿದವನು ಕಣ್ಣೀರು ಸುರಿಸುವುದಿಲ್ಲ. ಎಲ್ಲವನ್ನೂ ಚೆನ್ನಾಗಿ ವಿಮರ್ಶಿಸುವವನು ಮರಣ-ನಷ್ಟಗಳಿಗೆ ಕಣ್ಣೀರು ಸುರಿಸಬೇಕಾಗುವುದಿಲ್ಲ.

12317011a ದುಃಖೋಪಘಾತೇ ಶಾರೀರೇ ಮಾನಸೇ ವಾಪ್ಯುಪಸ್ಥಿತೇ|

12317011c ಯಸ್ಮಿನ್ನ ಶಕ್ಯತೇ ಕರ್ತುಂ ಯತ್ನಸ್ತನ್ನಾನುಚಿಂತಯೇತ್||

ಶಾರೀರಿಕವಾದ ಅಥವಾ ಮಾನಸಿಕವಾದ ದುಃಖವು ಪ್ರಾಪ್ತವಾದಗ ಮತ್ತು ಅದನ್ನು ಯಾವ ಪ್ರಯತ್ನದಿಂದಲೂ ದೂರೀಕರಿಸಲು ಸಾಧ್ಯವಾಗದೇ ಇದ್ದಾಗ ಆ ವಿಷಯದ ಕುರಿತು ಚಿಂತಿಸಬಾರದು.

12317012a ಭೈಷಜ್ಯಮೇತದ್ದುಃಖಸ್ಯ ಯದೇತನ್ನಾನುಚಿಂತಯೇತ್|

12317012c ಚಿಂತ್ಯಮಾನಂ ಹಿ ನ ವ್ಯೇತಿ ಭೂಯಶ್ಚಾಪಿ ಪ್ರವರ್ಧತೇ||

ದುಃಖದ ಕುರಿತು ಚಿಂತಿಸದೇ ಇರುವುದೇ ದುಃಖಕ್ಕೆ ಮದ್ದು. ದುಃಖವು ಸಂಭವಿಸಿದಾಗ ಅದರ ಕುರಿತೇ ಚಿಂತಿಸುತ್ತಿದ್ದರೆ ದುಃಖವು ಬಿಟ್ಟು ಹೋಗುವುದಿಲ್ಲ. ಚಿಂತಿಸುತ್ತಿದ್ದಂತೆಲ್ಲಾ ದುಃಖವು ಹೆಚ್ಚಾಗುತ್ತಾ ಹೋಗುತ್ತದೆ.

12317013a ಪ್ರಜ್ಞಯಾ ಮಾನಸಂ ದುಃಖಂ ಹನ್ಯಾಚ್ಚಾರೀರಮೌಷಧೈಃ|

12317013c ಏತದ್ವಿಜ್ಞಾನಸಾಮರ್ಥ್ಯಂ ನ ಬಾಲೈಃ ಸಮತಾಮಿಯಾತ್||

ಪ್ರಜ್ಞೆಯಿಂದ ಮಾನಸಿಕ ದುಃಖವನ್ನೂ ಔಷಧಿಗಳಿಂದ ಶಾರೀರಿಕ ದುಃಖವನ್ನೂ ಹೋಗಲಾಡಿಸಿಕೊಳ್ಳಬೇಕು. ಜ್ಞಾನಕ್ಕೆ ಈ ಸಾಮರ್ಥ್ಯವಿದೆ. ಮಗುವಂತೆ ರೋದಿಸಬಾರದು.

12317014a ಅನಿತ್ಯಂ ಯೌವನಂ ರೂಪಂ ಜೀವಿತಂ ದ್ರವ್ಯಸಂಚಯಃ|

12317014c ಆರೋಗ್ಯಂ ಪ್ರಿಯಸಂವಾಸೋ ಗೃಧ್ಯೇತ್ತತ್ರ ನ ಪಂಡಿತಃ||

ಯೌವನ, ರೂಪ, ಜೀವಿತ, ದ್ರವ್ಯ ಸಂಚಯ, ಆರೋಗ್ಯ, ಮತ್ತು ಪ್ರಿಯಸಂವಾಸಗಳು ಅನಿತ್ಯವಾದವುಗಳು. ಪಂಡಿತನಾದವನು ಅವುಗಳಲ್ಲಿ ಆಸಕ್ತನಾಗಿರುವುದಿಲ್ಲ.

12317015a ನ ಜಾನಪದಿಕಂ ದುಃಖಮೇಕಃ ಶೋಚಿತುಮರ್ಹತಿ|

12317015c ಅಶೋಚನ್ ಪ್ರತಿಕುರ್ವೀತ ಯದಿ ಪಶ್ಯೇದುಪಕ್ರಮಮ್||

ದೇಶಕ್ಕೇ ದುಃಖವು ಪ್ರಾಪ್ತವಾದಾಗ ಒಬ್ಬನೇ ಶೋಕಿಸಬಾರದು. ಒಂದು ವೇಳೆ ಉಪಾಯಗಳಿದ್ದರೆ ಶೋಕಿಸದೇ ಅವುಗಳನ್ನು ಮಾಡಬೇಕು.

12317016a ಸುಖಾದ್ ಬಹುತರಂ ದುಃಖಂ ಜೀವಿತೇ ನಾತ್ರ ಸಂಶಯಃ|

12317016c ಸ್ನಿಗ್ಧತ್ವಂ ಚೇಂದ್ರಿಯಾರ್ಥೇಷು ಮೋಹಾನ್ಮರಣಮಪ್ರಿಯಮ್||

ಜೀವಿತದಲ್ಲಿ ಸುಖಕ್ಕಿಂತ ದುಃಖವೇ ಅಧಿಕಾವಿರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಇಂದ್ರಿಯ ವಿಷಯಗಳ ಮೇಲಿನ ಅನುರಾಗದಿಂದ ಮೋಹವುಂಟಾಗಿ ಮರಣವು ಅಪ್ರಿಯವಾಗುತ್ತದೆ.

12317017a ಪರಿತ್ಯಜತಿ ಯೋ ದುಃಖಂ ಸುಖಂ ವಾಪ್ಯುಭಯಂ ನರಃ|

12317017c ಅಭ್ಯೇತಿ ಬ್ರಹ್ಮ ಸೋಽತ್ಯಂತಂ ನ ತಂ ಶೋಚಂತಿ ಪಂಡಿತಾಃ||

ದುಃಖವನ್ನು, ಸುಖವನ್ನು ಮತ್ತು ಇವೆರಡನ್ನೂ ಪರಿತ್ಯಜಿಸುವ ನರನು ಅಕ್ಷಯ ಬ್ರಹ್ಮಪದಕ್ಕೆ ಹೋಗುತ್ತಾನೆ. ಪಂಡಿತರು ಅವನಿಗಾಗಿ ಶೋಕಿಸುವುದಿಲ್ಲ.

12317018a ದುಃಖಮರ್ಥಾ ಹಿ ತ್ಯಜ್ಯಂತೇ ಪಾಲನೇ ನ ಚ ತೇ ಸುಖಾಃ|

12317018c ದುಃಖೇನ ಚಾಧಿಗಮ್ಯಂತೇ ನಾಶಮೇಷಾಂ ನ ಚಿಂತಯೇತ್||

ಸಂಪಾದಿಸಿದ ಹಣವನ್ನು ತೊರೆಯುವಾಗ ದುಃಖವಾಗುತ್ತದೆ. ಅದನ್ನು ರಕ್ಷಿಸಿಕೊಳ್ಳುವಾಗಲೂ ಸುಖವಾಗುವುದಿಲ್ಲ. ಅದನ್ನು ಗಳಿಸುವಾಗಲೂ ದುಃಖವೇ ಉಂಟಾಗಿರುತ್ತದೆ. ಆದುದರಿಂದ ದುಃಖವನ್ನೇ ತರುವ ಹಣದ ಕುರಿತು ಚಿಂತಿಸಬಾರದು.

12317019a ಅನ್ಯಾಮನ್ಯಾಂ ಧನಾವಸ್ಥಾಂ ಪ್ರಾಪ್ಯ ವೈಶೇಷಿಕೀಂ ನರಾಃ|

12317019c ಅತೃಪ್ತಾ ಯಾಂತಿ ವಿಧ್ವಂಸಂ ಸಂತೋಷಂ ಯಾಂತಿ ಪಂಡಿತಾಃ||

ಇನ್ನೂ ಹೆಚ್ಚಿನ ಧನವನ್ನು ಗಳಿಸಲು ಬಯಸುವ ನರರು ಅತೃಪ್ತರಾಗಿದ್ದುಕೊಂಡೇ ಸಾಯುತ್ತಾರೆ. ಆದರೆ ಪಂಡಿತರು ಯಾವಾಗಲೂ ಸಂತುಷ್ಟರಾಗಿಯೇ ಇರುತ್ತಾರೆ.

12317020a ಸರ್ವೇ ಕ್ಷಯಾಂತಾ ನಿಚಯಾಃ ಪತನಾಂತಾಃ ಸಮುಚ್ಚ್ರಯಾಃ|

12317020c ಸಂಯೋಗಾ ವಿಪ್ರಯೋಗಾಂತಾ ಮರಣಾಂತಂ ಹಿ ಜೀವಿತಮ್||

ಸಂಪಾದಿಸಿದುದೆಲ್ಲವೂ ಕ್ಷಯಹೊಂದುತ್ತವೆ. ಮೇಲೆ ಏರಿದವು ಅಂತ್ಯದಲ್ಲಿ ಕೆಳಗೆ ಬೀಳುತ್ತವೆ. ಸಂಯೋಗಗಳು ವಿಯೋಗದಲ್ಲಿ ಕೊನೆಗೊಳ್ಳುತ್ತವೆ. ಜೀವಿತವು ಮರಣದಲ್ಲಿ ಅಂತ್ಯವಾಗುತ್ತದೆ.

12317021a ಅಂತೋ ನಾಸ್ತಿ ಪಿಪಾಸಾಯಾಸ್ತುಷ್ಟಿಸ್ತು ಪರಮಂ ಸುಖಮ್|

12317021c ತಸ್ಮಾತ್ ಸಂತೋಷಮೇವೇಹ ಧನಂ ಪಶ್ಯಂತಿ ಪಂಡಿತಾಃ||

ಆಸೆಗೆ ಕೊನೆಯೆಂಬುದೇ ಇಲ್ಲ. ಆದುದರಿಂದ ತೃಪ್ತಿಯೇ ಪರಮ ಸುಖವು. ಆದುದರಿಂದ ಪಂಡಿತರು ಸಂತೋಷವೇ ಧನವೆಂದು ತಿಳಿಯುತ್ತಾರೆ.

12317022a ನಿಮೇಷಮಾತ್ರಮಪಿ ಹಿ ವಯೋ ಗಚ್ಚನ್ನ ತಿಷ್ಠತಿ|

12317022c ಸ್ವಶರೀರೇಷ್ವನಿತ್ಯೇಷು ನಿತ್ಯಂ ಕಿಮನುಚಿಂತಯೇತ್||

ಓಡುತ್ತಿರುವ ಆಯುಸ್ಸು ಕಣ್ಣುರೆಪ್ಪೆಗಳನ್ನು ಮುಚ್ಚಿ ತೆಗೆಯುವಷ್ಟು ಕಾಲವೂ ನಿಲ್ಲುವುದಿಲ್ಲ. ತಮ್ಮ ಶರೀರಗಳೇ ಅನಿತ್ಯವಾಗಿರುವಾಗ ಯಾವುದು ನಿತ್ಯವಾದುದು ಎಂದು ಯೋಚಿಸಬೇಕು.

12317023a ಭೂತೇಷ್ವಭಾವಂ ಸಂಚಿಂತ್ಯ ಯೇ ಬುದ್ಧ್ವಾ ತಮಸಃ ಪರಮ್[1]|

12317023c ನ ಶೋಚಂತಿ ಗತಾಧ್ವಾನಃ ಪಶ್ಯಂತಃ ಪರಮಾಂ ಗತಿಮ್||

ಬುದ್ಧಿಯ ಮೂಲಕ ಭೂತಗಳಲ್ಲಿ ಇಲ್ಲದಿರುವ ಪರಮ ತಮಸ್ಸಿನ ಕುರಿತು ಚಿಂತಿಸಿ ಮೋಕ್ಷಮಾರ್ಗದಲ್ಲಿ ಹೋಗುತ್ತಿರುವವರು ಶೋಕಿಸುವುದಿಲ್ಲ. ಅವರು ಪರಮ ಗತಿಯನ್ನೇ ಕಾಣುತ್ತಾರೆ.

12317024a ಸಂಚಿನ್ವಾನಕಮೇವೈನಂ ಕಾಮಾನಾಮವಿತೃಪ್ತಕಮ್|

12317024c ವ್ಯಾಘ್ರಃ ಪಶುಮಿವಾಸಾದ್ಯ ಮೃತ್ಯುರಾದಾಯ ಗಚ್ಚತಿ||

ಹುಲ್ಲು ಮೇಯುತ್ತಿದ್ದ ಹಸುವನ್ನು ಹುಲಿಯು ಕೊಂಡೊಯ್ಯುವಂತೆ ಸಂಗ್ರಹಮಾಡುವುದರಲ್ಲಿಯೇ ಆಸಕ್ತನಾದ ಮತ್ತು ಕಾಮಗಳಿಂದ ಅತೃಪ್ತನಾದವನನ್ನು ಮೃತ್ಯುವು ಕೊಂಡೊಯ್ಯುತ್ತದೆ.

12317025a ಅಥಾಪ್ಯುಪಾಯಂ ಸಂಪಶ್ಯೇದ್ದುಃಖಸ್ಯ ಪರಿಮೋಕ್ಷಣೇ|

12317025c ಅಶೋಚನ್ನಾರಭೇತೈವ ಯುಕ್ತಶ್ಚಾವ್ಯಸನೀ ಭವೇತ್||

ಹೀಗಿದ್ದರೂ ಸಂಸಾರ ದುಃಖದಿಂದ ಪಾರಾಗಲೂ ಯಾವುದಾದರೂ ಉಪಾಯವನ್ನು ಹುಡುಕಲೇ ಬೇಕು. ಶೋಕವನ್ನು ತೊರೆದು ಆತ್ಮಸಾಧನೆಯನ್ನು ಪ್ರಾರಂಭಿಸುವವನು ಯಾವ ವಿಧದ ವ್ಯಸನಗಳೂ ಇಲ್ಲದೇ ಮುಕ್ತನಾಗುತ್ತಾನೆ.

12317026a ಶಬ್ದೇ ಸ್ಪರ್ಶೇ ಚ ರೂಪೇ ಚ ಗಂಧೇಷು ಚ ರಸೇಷು ಚ|

12317026c ನೋಪಭೋಗಾತ್ ಪರಂ ಕಿಂ ಚಿದ್ಧನಿನೋ ವಾಧನಸ್ಯ ವಾ||

ಧನಿಕನೇ ಆಗಲಿ ದ್ರರಿದ್ರನೇ ಆಗಲಿ – ಶಬ್ಧ-ಸ್ಪರ್ಶ-ರೂಪ-ಗಂಧ-ರಸಗಳನ್ನು ಉಪಭೋಗಿಸುವಾಗ ಸಂತೋಷ ಪಡುತ್ತಾನೆ ಮತ್ತು ಉಪಭೋಗಿಸಿಯಾದ ನಂತರ ದುಃಖಿಸುತ್ತಾನೆ.

12317027a ಪ್ರಾಕ್ಸಂಪ್ರಯೋಗಾದ್ಭೂತಾನಾಂ ನಾಸ್ತಿ ದುಃಖಮನಾಮಯಮ್|

12317027c ವಿಪ್ರಯೋಗಾತ್ತು ಸರ್ವಸ್ಯ ನ ಶೋಚೇತ್ ಪ್ರಕೃತಿಸ್ಥಿತಃ||

ಪರಸ್ಪರ ಸೇರುವ ಮೊದಲು ಯಾವ ದುಃಖವೂ ಇರುವುದಿಲ್ಲ. ಸೇರಿ ನಂತರ ವಿಯೋಗವಾದರೆ ದುಃಖವುಂಟಾಗುತ್ತದೆ. ತನ್ನ ಸ್ವರೂಪವನ್ನು ತಿಳಿದುಕೊಂಡಿರುವ ವಿವೇಕಿಯು ವಿಯೋಗವಾದಾಗಲೂ ದುಃಖಿಸಬಾರದು.

12317028a ಧೃತ್ಯಾ ಶಿಶ್ನೋದರಂ ರಕ್ಷೇತ್ ಪಾಣಿಪಾದಂ ಚ ಚಕ್ಷುಷಾ|

12317028c ಚಕ್ಷುಃಶ್ರೋತ್ರೇ ಚ ಮನಸಾ ಮನೋ ವಾಚಂ ಚ ವಿದ್ಯಯಾ||

ಧೈರ್ಯದಿಂದ ಶಿಶ್ನೋದರಗಳನ್ನು ರಕ್ಷಿಸಿಕೊಳ್ಳಬೇಕು. ಕೈ-ಕಾಲುಗಳನ್ನು ಕಣ್ಣಿನಿಂದ ರಕ್ಷಿಸಿಕೊಳ್ಳಬೇಕು. ಕಣ್ಣುಗಳನ್ನೂ ಕಿವಿಗಳನ್ನೂ ಮನಸ್ಸಿನಿಂದ ರಕ್ಷಿಸಿಕೊಳ್ಳಬೇಕು. ಮತ್ತು ಮಾತನ್ನು ವಿದ್ಯೆಯಿಂದ ರಕ್ಷಿಸಿಕೊಳ್ಳಬೇಕು.

12317029a ಪ್ರಣಯಂ ಪ್ರತಿಸಂಹೃತ್ಯ ಸಂಸ್ತುತೇಷ್ವಿತರೇಷು ಚ|

12317029c ವಿಚರೇದಸಮುನ್ನದ್ಧಃ ಸ ಸುಖೀ ಸ ಚ ಪಂಡಿತಃ||

ಪ್ರಣಯವನ್ನು ಮತ್ತು ಇತರರ ಸಂಸ್ತುತಿಗಳನ್ನು ತೊರೆದು ವಿನೀತನಾಗಿ ಯಾವನು ವ್ಯವಹರಿಸುವನೋ ಅವನೇ ಸುಖಿಯು ಮತ್ತು ಅವನೇ ಪಂಡಿತನು.

12317030a ಅಧ್ಯಾತ್ಮರತಿರಾಸೀನೋ ನಿರಪೇಕ್ಷೋ ನಿರಾಮಿಷಃ|

12317030c ಆತ್ಮನೈವ ಸಹಾಯೇನ ಯಶ್ಚರೇತ್ ಸ ಸುಖೀ ಭವೇತ್||

ಆಧ್ಯಾತ್ಮದಲ್ಲಿ ಅನುರಕ್ತನಾಗಿ, ಅಪೇಕ್ಷೆಗಳಿಲ್ಲದೇ, ಆಸೆಗಳಿಲ್ಲದೇ, ತನ್ನದೇ ಸಹಾಯದಿಂದ ನಡೆದುಕೊಳ್ಳುವವನು ಪರಮಸುಖಿಯಾಗುತ್ತಾನೆ.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಶುಕಾಭಿಪತನೇ ಸಪ್ತದಶಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಶುಕಾಭಿಪತನ ಎನ್ನುವ ಮುನ್ನೂರಾಹದಿನೇಳನೇ ಅಧ್ಯಾಯವು.

File:Flower on white Background.jpg - Wikimedia Commons

[1] ಭೂತೇಷು ಭಾವಂ ಸಂಚಿಂತ್ಯ ಯೇ ಬುದ್ಧ್ವಾ ಮನಸಃ ಪರಮ್| ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.