Shanti Parva: Chapter 163

ಶಾಂತಿ ಪರ್ವ: ಆಪದ್ಧರ್ಮ ಪರ್ವ

೧೬೩

ಗೌತಮನು ಸಮುದ್ರದ ಕಡೆ ಪ್ರಯಾಣಬೆಳೆಸುವುದು, ಸಂಜೆ ಒಂದು ದಿವ್ಯ ಬಕಪಕ್ಷಿಗಳ ರಾಜ ರಾಜಧರ್ಮನ ಮನೆಯಲ್ಲಿ ಅತಿಥಿಯಾಗಿ ಉಳಿಯುವುದು (೧-೨೩).

12163001 ಭೀಷ್ಮ ಉವಾಚ|

12163001a ತಸ್ಯಾಂ ನಿಶಾಯಾಂ ವ್ಯುಷ್ಟಾಯಾಂ ಗತೇ ತಸ್ಮಿನ್ದ್ವಿಜೋತ್ತಮೇ|

12163001c ನಿಷ್ಕ್ರಮ್ಯ ಗೌತಮೋಽಗಚ್ಚತ್ಸಮುದ್ರಂ ಪ್ರತಿ ಭಾರತ||

ಭೀಷ್ಮನು ಹೇಳಿದನು: “ಭಾರತ! ರಾತ್ರಿಯು ಕಳೆಯಲು ಆ ದ್ವಿಜೋತ್ತಮನು ಹೊರಟು ಹೋಗನು ಮತ್ತು ಗೌತಮನೂ ಕೂಡ ಹೊರಟು ಸಮುದ್ರದ ಕಡೆ ಪ್ರಯಾಣಬೆಳೆಸಿದನು.

12163002a ಸಾಮುದ್ರಕಾನ್ಸ ವಣಿಜಸ್ತತೋಽಪಶ್ಯತ್ ಸ್ಥಿತಾನ್ಪಥಿ|

12163002c ಸ ತೇನ ಸಾರ್ಥೇನ ಸಹ ಪ್ರಯಯೌ ಸಾಗರಂ ಪ್ರತಿ||

ಮಾರ್ಗದಲ್ಲಿ ಸಮುದ್ರದ ಹತ್ತಿರ ಕೆಲವು ವಣಿಜರು ತಂಗಿದ್ದುದನ್ನು ನೋಡಿದನು. ಅವರ ಜೊತೆಗೂಡಿ ಅವನು ಸಾಗರದ ಕಡೆ ಪ್ರಯಾಣಿಸಿದನು.

12163003a ಸ ತು ಸಾರ್ಥೋ ಮಹಾರಾಜ ಕಸ್ಮಿಂಶ್ಚಿದ್ಗಿರಿಗಹ್ವರೇ|

12163003c ಮತ್ತೇನ ದ್ವಿರದೇನಾಥ ನಿಹತಃ ಪ್ರಾಯಶೋಽಭವತ್||

ಮಹಾರಾಜ! ಯಾವುದೋ ಒಂದು ಗಿರಿಯ ಗುಹೆಯಲ್ಲಿ ತಂಗಿದ್ದ ಆ ವೈಶ್ಯರನ್ನು ಒಂದು ಮದಿಸಿದ ಆನೆಯು ಆಕ್ರಮಣಿಸಿ ದಳದ ಬಹಳಷ್ಟು ಮಂದಿ ಹತರಾದರು.

12163004a ಸ ಕಥಂ ಚಿತ್ತತಸ್ತಸ್ಮಾತ್ಸಾರ್ಥಾನ್ಮುಕ್ತೋ ದ್ವಿಜಸ್ತದಾ|

12163004c ಕಾಂದಿಗ್ಭೂತೋ ಜೀವಿತಾರ್ಥೀ ಪ್ರದುದ್ರಾವೋತ್ತರಾಂ ದಿಶಮ್||

ಹೇಗೋ ಮಾಡಿ ಆ ದ್ವಿಜನು ದಳದಿಂದ ವಿಮುಕ್ತನಾಗಿ ಜೀವನವನ್ನು ಉಳಿಸಿಕೊಳ್ಳಲು ಯಾವ ದಿಕ್ಕಿನಲ್ಲಿ ಹೋಗಬೇಕು ಎಂದು ನಿರ್ಣಯಿಸಿ ಉತ್ತರ ದಿಕ್ಕಿನ ಕಡೆ ಓಡಿದನು.

12163005a ಸ ಸರ್ವತಃ ಪರಿಭ್ರಷ್ಟಃ ಸಾರ್ಥಾದ್ದೇಶಾತ್ತಥಾರ್ಥತಃ|

12163005c ಏಕಾಕೀ ವ್ಯದ್ರವತ್ತತ್ರ ವನೇ ಕಿಂಪುರುಷೋ ಯಥಾ||

ವರ್ತಕರ ದಳವನ್ನೂ ಬಿಟ್ಟು ಏಕಾಕಿಯಾದ ಅವನು ಆ ದೇಶದಿಂದ ಭ್ರಷ್ಟನಾಗಿ, ಕಿಂಪುರುಷನೋ ಎನ್ನುವಂತೆ ಓರ್ವನೇ ವನದಲ್ಲಿ ತಿರುಗಾಡತೊಡಗಿದನು.

12163006a ಸ ಪಂಥಾನಮಥಾಸಾದ್ಯ ಸಮುದ್ರಾಭಿಸರಂ ತದಾ|

12163006c ಆಸಸಾದ ವನಂ ರಮ್ಯಂ ಮಹತ್ಪುಷ್ಪಿತಪಾದಪಮ್[1]||

ಅಲ್ಲಿ ಅವನಿಗೆ ಸಮುದ್ರದ ಕಡೆ ಹೋಗುವ ಮಾರ್ಗವು ದೊರಕಲು ಅದೇ ಮಾರ್ಗವನ್ನು ಹಿಡಿದು ಅನೇಕ ಪುಷ್ಪಭರಿತ ಮರಗಳಿಂದ ಕೂಡಿದ್ದ ಒಂದು ರಮ್ಯ ವನಕ್ಕೆ ಬಂದನು.

12163007a ಸರ್ವರ್ತುಕೈರಾಮ್ರವನೈಃ ಪುಷ್ಪಿತೈರುಪಶೋಭಿತಮ್|

12163007c ನಂದನೋದ್ದೇಶಸದೃಶಂ ಯಕ್ಷಕಿನ್ನನರಸೇವಿತಮ್||

ಸರ್ವಋತುಗಳಲ್ಲಿಯೂ ಹೂಬಿಡುವ ಮಾವಿನ ಮರಗಳ ಸಾಲಿನಿಂದ ಅದು ಶೋಭಿಸುತ್ತಿತ್ತು. ಯಕ್ಷ-ಕಿನ್ನರರು ಬಳಸುತ್ತಿದ್ದ ಆ ವನವು ನಂದನವನದಂತೆ ತೋರುತ್ತಿತ್ತು.

12163008a ಶಾಲತಾಲಧವಾಶ್ವತ್ಥತ್ವಚಾಗುರುವನೈಸ್ತಥಾ[2]|

12163008c ಚಂದನಸ್ಯ ಚ ಮುಖ್ಯಸ್ಯ ಪಾದಪೈರುಪಶೋಭಿತಮ್|

12163008e ಗಿರಿಪ್ರಸ್ಥೇಷು ರಮ್ಯೇಷು ಶುಭೇಷು ಸುಸುಗಂಧಿಷು||

12163009a ಸಮಂತತೋ ದ್ವಿಜಶ್ರೇಷ್ಠಾ ವಲ್ಗು ಕೂಜಂತಿ ತತ್ರ ವೈ|

12163009c ಮನುಷ್ಯವದನಾಸ್ತ್ವನ್ಯೇ ಭಾರುಂಡಾ ಇತಿ ವಿಶ್ರುತಾಃ|

12163009e ಭೂಲಿಂಗಶಕುನಾಶ್ಚಾನ್ಯೇ ಸಮುದ್ರಂ ಸರ್ವತೋಽಭವನ್[3]||

ಶಾಲ, ತಾಲ, ಧವಾ, ಅಶ್ವತ್ಥ, ಅಗುರುವಿನ ವನ, ಹಾಗೂ ಶ್ರೇಷ್ಠ ಚಂದನ ವೃಕ್ಷಗಳು ಆ ವನಕ್ಕೆ ಶೋಭೆನೀಡುತ್ತಿದ್ದವು. ಅಲ್ಲಿಯ ರಮಣೀಯ ಮತ್ತು ಸುಗಂಧಿತ ಪರ್ವತ ತಪ್ಪಲು ಪ್ರದೇಶಗಳಲ್ಲಿ ಎಲ್ಲಕಡೆ ಉತ್ತಮೋತ್ತಮ ಪಕ್ಷಿಗಳು ಕಲರವ ಮಾಡುತ್ತಿದ್ದವು. ಕೆಲವು ಮನುಷ್ಯನ ಮುಖವುಳ್ಳ ಭಾರುಂಡ ಎಂಬ ಪಕ್ಷಿಗಳಿದ್ದವು. ಇನ್ನು ಕೆಲವು ಸಮುದ್ರದ ಸುತ್ತಲೂ ಇರುವ ಭೂಲಿಂಗಪಕ್ಷಿಗಳು ಇದ್ದವು.

12163010a ಸ ತಾನ್ಯತಿಮನೋಜ್ಞಾನಿ ವಿಹಂಗಾಭಿರುತಾನಿ ವೈ|

12163010c ಶೃಣ್ವನ್ಸುರಮಣೀಯಾನಿ ವಿಪ್ರೋಽಗಚ್ಚತ ಗೌತಮಃ||

ಪಕ್ಷಿಗಳ ಆ ಮಧುರ ಮನೋಹರ ಮತ್ತು ರಮಣೀಯ ಕಲರವಗಳನ್ನು ಕೇಳುತ್ತಾ ವಿಪ್ರ ಗೌತಮನು ಮುಂದೆ ನಡೆದನು.

12163011a ತತೋಽಪಶ್ಯತ್ಸುರಮ್ಯೇ ಸ ಸುವರ್ಣಸಿಕತಾಚಿತೇ|

12163011c ದೇಶಭಾಗೇ ಸಮೇ ಚಿತ್ರೇ ಸ್ವರ್ಗೋದ್ದೇಶಸಮಪ್ರಭೇ||

12163012a ಶ್ರಿಯಾ ಜುಷ್ಟಂ ಮಹಾವೃಕ್ಷಂ ನ್ಯಗ್ರೋಧಂ ಪರಿಮಂಡಲಮ್|

12163012c ಶಾಖಾಭಿರನುರೂಪಾಭಿರ್ಭೂಷಿತಂ ಚತ್ರಸಂನಿಭಮ್||

ಆಗ ಅವನಿಗೆ ಚಿನ್ನದ ಮರಳಿನ ರಾಶಿಗಳಿಂದ ಸಮಾವೃತವಾಗಿದ್ದ ಒಂದು ಸಮತಲ ಸುರಮ್ಯ ಸ್ಥಳವು ಸಿಕ್ಕಿತು. ಸುಖದಾಯಕವಾದ ಆ ಸ್ಥಳವು ವಿಚಿತ್ರವಾಗಿಯೂ ಸ್ವರ್ಗಕ್ಕೆ ಸಮನಾಗಿಯೂ ಇತ್ತು. ಅಲ್ಲಿ ಮಂಡಲಾಕಾರದ ಅತ್ಯಂತ ಕಾಂತಿಯುಕ್ತವಾದ ಒಂದು ಆಲದ ಮಹಾವೃಕ್ಷವನ್ನು ಕಂಡನು. ತಕ್ಕುದಾದ ದೊಡ್ಡ ದೊಡ್ಡ ರೆಂಬೆಗಳಿಂದ ಕೂಡಿದ್ದ ಆ ವೃಕ್ಷವು ತೆರೆದಿಟ್ಟ ಛತ್ರಿಯಂತೆಯೇ ತೋರುತ್ತಿತ್ತು.

12163013a ತಸ್ಯ ಮೂಲಂ ಸುಸಂಸಿಕ್ತಂ ವರಚಂದನವಾರಿಣಾ|

12163013c ದಿವ್ಯಪುಷ್ಪಾನ್ವಿತಂ ಶ್ರೀಮತ್ಪಿತಾಮಹಸದೋಪಮಮ್||

ಅದರ ಬುಡವು ಶ್ರೇಷ್ಠ ಚಂದನದ ನೀರಿನಿಂದ ಒದ್ದೆಯಾಗಿತ್ತು. ಪಿತಾಮಹ ಬ್ರಹ್ಮನ ಸಭೆಯಂತೆ ಶೋಭಾಯಮಾನವಾಗಿದ್ದ ಆ ಆಲದ ಮರವು ದಿವ್ಯ ಪುಷ್ಪಗಳಿಂದ ಕೂಡಿತ್ತು.

12163014a ತಂ ದೃಷ್ಟ್ವಾ ಗೌತಮಃ ಪ್ರೀತೋ ಮುನಿಕಾಂತಮನುತ್ತಮಮ್[4]|

12163014c ಮೇಧ್ಯಂ ಸುರಗೃಹಪ್ರಖ್ಯಂ ಪುಷ್ಪಿತೈಃ ಪಾದಪೈರ್ವೃತಮ್|

12163014e ತಮಾಗಮ್ಯ ಮುದಾ ಯುಕ್ತಸ್ತಸ್ಯಾಧಸ್ತಾದುಪಾವಿಶತ್||

ಮನಸ್ಸಿಗೆ ಆಹ್ಲಾದಕರವಾಗಿದ್ದ ಆ ಅನುತ್ತಮ ವೃಕ್ಷವನ್ನು ನೋಡಿ ಗೌತಮನು ಪ್ರೀತನಾದನು. ಸುಪುಷ್ಪಿತ ವೃಕ್ಷಗಳಿಂದ ಸುತ್ತುವರೆಯಲ್ಪಟ್ಟಿದ್ದ ಆ ಆಲದಮರವು ಪವಿತ್ರ ದೇವಗೃಹಕ್ಕೆ ಸಮಾನವಾಗಿತ್ತು. ಗೌತಮನು ಆ ವೃಕ್ಷದ ಸಮೀಪ ಹೋಗಿ ಆಶ್ಚರ್ಯದಿಂದ ನೋಡುತ್ತಾ ಅದರ ಕೆಳಗೆ ಕುಳಿತುಕೊಂಡನು.

12163015a ತತ್ರಾಸೀನಸ್ಯ ಕೌರವ್ಯ ಗೌತಮಸ್ಯ ಸುಖಃ ಶಿವಃ|

12163015c ಪುಷ್ಪಾಣಿ ಸಮುಪಸ್ಪೃಶ್ಯ ಪ್ರವವಾವನಿಲಃ ಶುಚಿಃ|

12163015e ಹ್ಲಾದಯನ್ಸರ್ವಗಾತ್ರಾಣಿ ಗೌತಮಸ್ಯ ತದಾ ನೃಪ||

ಕೌರವ್ಯ! ನೃಪ! ಗೌತಮನು ಅಲ್ಲಿ ಕುಳಿತುಕೊಳ್ಳಲು ಸುಖಕರ ಮತ್ತು ಮಂಗಳಮಯನಾದ ಶುಭ ಶುಚಿ ಅನಿಲನು ಹೂವುಗಳನ್ನು ಸ್ಪರ್ಶಿಸಿ ಗೌತಮನ ಸರ್ವಾಂಗಗಳನ್ನೂ ಆಹ್ಲಾದಗೊಳಿಸುತ್ತಾ ಮಂದಮಂದವಾಗಿ ಅವನ ಮೇಲೆ ಬೀಸತೊಡಗಿದನು.

12163016a ಸ ತು ವಿಪ್ರಃ ಪರಿಶ್ರಾಂತಃ ಸ್ಪೃಷ್ಟಃ ಪುಣ್ಯೇನ ವಾಯುನಾ|

12163016c ಸುಖಮಾಸಾದ್ಯ ಸುಷ್ವಾಪ ಭಾಸ್ಕರಶ್ಚಾಸ್ತಮಭ್ಯಗಾತ್||

ಪುಣ್ಯ ವಾಯುವಿನ ಸ್ಪರ್ಶದಿಂದ ಪರಿಶ್ರಾಂತನಾಗಿದ್ದ ವಿಪ್ರನು ಸುಖವನ್ನು ಹೊಂದಿ ಅಲ್ಲಿಯೇ ಮಲಗಿಬಿಟ್ಟನು. ಅಷ್ಟರಲ್ಲಿಯೇ ಸೂರ್ಯನೂ ಮುಳುಗಿದನು.

12163017a ತತೋಽಸ್ತಂ ಭಾಸ್ಕರೇ ಯಾತೇ ಸಂಧ್ಯಾಕಾಲ ಉಪಸ್ಥಿತೇ|

12163017c ಆಜಗಾಮ ಸ್ವಭವನಂ ಬ್ರಹ್ಮಲೋಕಾತ್ಖಗೋತ್ತಮಃ||

ಭಾಸ್ಕರನು ಮುಳುಗಿ ಸಂಧ್ಯಾಕಾಲವಾಗಲು ಬ್ರಹ್ಮಲೋಕದಿಂದ ಪಕ್ಷಿಶ್ರೇಷ್ಠನು ಬ್ರಹ್ಮಲೋಕದಿಂದ ತನ್ನ ಮನೆಗೆ ಹಿಂದಿರುಗಿದನು.

12163018a ನಾಡೀಜಂಘ ಇತಿ ಖ್ಯಾತೋ ದಯಿತೋ ಬ್ರಹ್ಮಣಃ ಸಖಾ|

12163018c ಬಕರಾಜೋ ಮಹಾಪ್ರಾಜ್ಞಃ ಕಶ್ಯಪಸ್ಯಾತ್ಮಸಂಭವಃ||

ನಾಡೀಜಂಘ ಎಂದು ಖ್ಯಾತನಾಗಿದ್ದ ಅವನು ಬ್ರಹ್ಮನ ಸಖನಾಗಿದ್ದನು. ಕಶ್ಯಪನ ಮಗನಾಗಿದ್ದ ಅವನು ಬಕಪಕ್ಷಿಗಳ ರಾಜನೂ ಆಗಿದ್ದನು.

12163019a ರಾಜಧರ್ಮೇತಿ ವಿಖ್ಯಾತೋ ಬಭೂವಾಪ್ರತಿಮೋ ಭುವಿ|

12163019c ದೇವಕನ್ಯಾಸುತಃ ಶ್ರೀಮಾನ್ವಿದ್ವಾನ್ದೇವಪತಿಪ್ರಭಃ||

ಅವನು ರಾಜಧರ್ಮನೆಂದು ವಿಖ್ಯಾತನಾಗಿ ಭುವಿಯಲ್ಲಿಯೇ ಅಪ್ರತಿಮನೆನಿಸಿಕೊಂಡಿದ್ದನು. ದೇವಕನ್ಯೆಯ ಸುತನಾಗಿದ್ದ ಆ ಶ್ರೀಮಾನನು ವಿದ್ವತ್ತನ್ನೂ ದೇವಪತಿಯ ಕಾಂತಿಯನ್ನೂ ಹೊಂದಿದ್ದನು.

12163020a ಮೃಷ್ಟಹಾಟಕಸಂಚನ್ನೋ ಭೂಷಣೈರರ್ಕಸಂನಿಭೈಃ|

12163020c ಭೂಷಿತಃ ಸರ್ವಗಾತ್ರೇಷು ದೇವಗರ್ಭಃ ಶ್ರಿಯಾ ಜ್ವಲನ್||

ಅವನು ಅಂಗಾಂಗಗಳಲ್ಲಿ ಸೂರ್ಯನಂತೆ ಹೊಳೆಯುತ್ತಿದ್ದ ಭೂಷಣಗಳನ್ನು ಧರಿಸಿದ್ದನು. ಆ ದೇವಗರ್ಭನು ತನ್ನ ಸರ್ವ ಅಂಗಾಂಗಗಳಲ್ಲಿಯೂ ದಿವ್ಯ ಆಭರಣಗಳನ್ನು ಧರಿಸಿ ದಿವ್ಯಕಾಂತಿಯಿಂದ ದೇದೀಪ್ಯಮಾನನಾಗಿದ್ದನು.

12163021a ತಮಾಗತಂ ದ್ವಿಜಂ ದೃಷ್ಟ್ವಾ ವಿಸ್ಮಿತೋ ಗೌತಮೋಽಭವತ್|

12163021c ಕ್ಷುತ್ಪಿಪಾಸಾಪರೀತಾತ್ಮಾ ಹಿಂಸಾರ್ಥೀ ಚಾಪ್ಯವೈಕ್ಷತ||

ಆಗಮಿಸಿದ ಪಕ್ಷಿಯನ್ನು ನೋಡಿ ಗೌತಮನು ವಿಸ್ಮಿತನಾದನು. ಹಸಿವು-ಬಾಯಾರಿಕೆಗಳಿಂದ ಬಳಲಿದ್ದ ಅವನು ಆ ಪಕ್ಷಿಯನ್ನು ಕೊಲ್ಲುವ ಇಚ್ಛೆಯಿಂದ ಅವನ ಕಡೆ ನೋಡಿದನು.

12163022 ರಾಜಧರ್ಮೋವಾಚ|

12163022a ಸ್ವಾಗತಂ ಭವತೇ ವಿಪ್ರ ದಿಷ್ಟ್ಯಾ ಪ್ರಾಪ್ತೋಽಸಿ ಮೇ ಗೃಹಮ್|

12163022c ಅಸ್ತಂ ಚ ಸವಿತಾ ಯಾತಃ ಸಂಧ್ಯೇಯಂ ಸಮುಪಸ್ಥಿತಾ||

ರಾಜಧರ್ಮನು ಹೇಳಿದನು: “ವಿಪ್ರ! ನಿನಗೆ ಸ್ವಾಗತ! ಒಳ್ಳೆಯದಾಯಿತು ನೀನು ನನ್ನ ಮನೆಗೆ ಬಂದಿದ್ದೀಯೆ. ಸೂರ್ಯನೂ ಮುಳುಗಿದ್ದಾನೆ. ಸಾಯಂಕಾಲವಾಗಿಬಿಟ್ಟಿದೆ.

12163023a ಮಮ ತ್ವಂ ನಿಲಯಂ ಪ್ರಾಪ್ತಃ ಪ್ರಿಯಾತಿಥಿರನಿಂದಿತಃ|

12163023c ಪೂಜಿತೋ ಯಾಸ್ಯಸಿ ಪ್ರಾತರ್ವಿಧಿದೃಷ್ಟೇನ ಕರ್ಮಣಾ||

ನೀನು ನನ್ನ ಮನೆಗೆ ಬಂದಿರುವ ಪ್ರೀತಿಯ ಮತ್ತು ಉತ್ತಮ ಅತಿಥಿಯು. ಬೆಳಿಗ್ಗೆ ನಾನು ವಿಧಿವತ್ತಾದ ಕರ್ಮಗಳಿಂದ ನಿನ್ನನ್ನು ಪೂಜಿಸಿದ ನಂತರ ನೀನು ಹೊರಡಬಹುದು.””

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಕೃತಘ್ನೋಪಾಖ್ಯಾನೇ ತ್ರಿಷಷ್ಟ್ಯಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ಕೃತಘ್ನೋಪಾಖ್ಯಾನ ಎನ್ನುವ ನೂರಾಅರವತ್ಮೂರನೇ ಅಧ್ಯಾಯವು.

[1] ದಿವ್ಯಂ ಪುಶ್ಪಿತಪಾದಪಮ್| (ಗೀತಾ ಪ್ರೆಸ್).

[2] ಶಾಲೈಸ್ತಾಲೈಸ್ತಮಾಲೈಶ್ಚ ಕಾಲಾಗುರುವನೈಸ್ತಥಾ| (ಗೀತಾ ಪ್ರೆಸ್).

[3] ಸಮುದ್ರಾಃ ಪರ್ವತೋದ್ಭವಾಃ|| (ಗೀತಾ ಪ್ರೆಸ್).

[4] ಮನಃಕಾಂತಮನುತ್ತಮಮ್| (ಗೀತಾ ಪ್ರೆಸ್).

Comments are closed.