Shanti Parva: Chapter 164

ಶಾಂತಿ ಪರ್ವ: ಆಪದ್ಧರ್ಮ ಪರ್ವ

೧೬೪

ರಾಜಧರ್ಮನು ಗೌತಮನನ್ನು ಸತ್ಕರಿಸಿದುದು; ಅವನ ಸೂಚನೆಯಂತೆ ಧನವನ್ನರಸಿಬಂದಿದ್ದ ಗೌತಮನು ರಾಜಧರ್ಮನ ಮಿತ್ರ ರಾಕ್ಷಸರಾಜ ವಿರೂಪಾಕ್ಷನ ನಗರಕ್ಕೆ ಹೋದುದು (೧-೨೩).

12164001 ಭೀಷ್ಮ ಉವಾಚ|

12164001a ಗಿರಂ ತಾಂ ಮಧುರಾಂ ಶ್ರುತ್ವಾ ಗೌತಮೋ ವಿಸ್ಮಿತಸ್ತದಾ|

12164001c ಕೌತೂಹಲಾನ್ವಿತೋ ರಾಜನ್ರಾಜಧರ್ಮಾಣಮೈಕ್ಷತ||

ಭೀಷ್ಮನು ಹೇಳಿದನು: “ರಾಜನ್! ಪಕ್ಷಿಯ ಮಧುರ ವಾಣಿಯನ್ನು ಕೇಳಿದ ಗೌತಮನು ವಿಸ್ಮಿತನಾದನು. ಕುತೂಹಲಗೊಂಡ ಅವನು ರಾಜಧರ್ಮನನ್ನು ವೀಕ್ಷಿಸಿದನು.

12164002 ರಾಜಧರ್ಮೋವಾಚ|

12164002a ಭೋಃ ಕಶ್ಯಪಸ್ಯ ಪುತ್ರೋಽಹಂ ಮಾತಾ ದಾಕ್ಷಾಯಣೀ ಚ ಮೇ|

12164002c ಅತಿಥಿಸ್ತ್ವಂ ಗುಣೋಪೇತಃ ಸ್ವಾಗತಂ ತೇ ದ್ವಿಜರ್ಷಭ||

ರಾಜಧರ್ಮನು ಹೇಳಿದನು: “ಭೋ! ದ್ವಿಜರ್ಷಭ! ಕಶ್ಯಪನ ಪುತ್ರನು ನಾನು. ನನ್ನ ಮಾತೆಯು ದಾಕ್ಷಾಯಣಿಯು. ನೀನು ಗುಣವಂತ ಅತಿಥಿಯಾಗಿರುವೆ. ನಿನಗೆ ಸ್ವಾಗತವು.””

12164003 ಭೀಷ್ಮ ಉವಾಚ|

12164003a ತಸ್ಮೈ ದತ್ತ್ವಾ ಸ ಸತ್ಕಾರಂ ವಿಧಿದೃಷ್ಟೇನ ಕರ್ಮಣಾ|

12164003c ಶಾಲಪುಷ್ಪಮಯೀಂ ದಿವ್ಯಾಂ ಬೃಸೀಂ ಸಮುಪಕಲ್ಪಯತ್||

ಭೀಷ್ಮನು ಹೇಳಿದನು: “ಹೀಗೆ ಹೇಳಿ ರಾಜಧರ್ಮನು ಶಾಸ್ತ್ರವಿಧಿಗನುಸಾರವಾಗಿ ಅವನನ್ನು ಸತ್ಕರಿಸಿದನು. ಶಾಲವೃಕ್ಷದ ಹೂವನ್ನು ಹಾಸಿ ದಿವ್ಯ ಆಸನವನ್ನು ರಚಿಸಿ ಅವನಿಗೆ ಕುಳಿತುಕೊಳ್ಳಲು ನೀಡಿದನು.

12164004a ಭಗೀರಥರಥಾಕ್ರಾಂತಾನ್ದೇಶಾನ್ಗಂಗಾನಿಷೇವಿತಾನ್|

12164004c ಯೇ ಚರಂತಿ ಮಹಾಮೀನಾಸ್ತಾಂಶ್ಚ ತಸ್ಯಾನ್ವಕಲ್ಪಯತ್||

ಭಗೀರಥನ ರಥವು ಹೋಗಿದ್ದ ಪ್ರದೇಶದಲ್ಲಿ ಹರಿಯುತ್ತಿದ ಗಂಗೆಯಲ್ಲಿ ಸಂಚರಿಸುತ್ತಿದ್ದ ಮೀನುಗಳನ್ನು ತಂದು ರಾಜಧರ್ಮನು ಗೌತಮನಿಗೆ ಭೋಜನದ ವ್ಯವಸ್ಥೆಯನ್ನು ಮಾಡಿದನು.

12164005a ವಹ್ನಿಂ ಚಾಪಿ ಸುಸಂದೀಪ್ತಂ ಮೀನಾಂಶ್ಚೈವ ಸುಪೀವರಾನ್|

12164005c ಸ ಗೌತಮಾಯಾತಿಥಯೇ ನ್ಯವೇದಯತ ಕಾಶ್ಯಪಃ||

ಕಾಶ್ಯಪ ರಾಜಧರ್ಮನು ಚೆನ್ನಾಗಿ ಅಗ್ನಿಯನ್ನು ಹೊತ್ತಿಸಿ ದೊಡ್ಡ ದೊಡ್ಡ ಮೀನುಗಳನ್ನು ಇಟ್ಟು ಅತಿಥಿ ಗೌತಮನಿಗೆ ನಿವೇದಿಸಿದನು.

12164006a ಭುಕ್ತವಂತಂ ಚ ತಂ ವಿಪ್ರಂ ಪ್ರೀತಾತ್ಮಾನಂ ಮಹಾಮನಾಃ|

12164006c ಕ್ಲಮಾಪನಯನಾರ್ಥಂ ಸ ಪಕ್ಷಾಭ್ಯಾಮಭ್ಯವೀಜಯತ್||

ಆ ಮೀನುಗಳನ್ನು ಬೇಯಿಸಿ ತಿಂದು ಅವನ ಅಂತರಾತ್ಮವು ತೃಪ್ತವಾದ ನಂತರ ಆ ಮಹಾತಪಸ್ವೀ ಪಕ್ಷಿಯು ಅವನ ಆಯಾಸವನ್ನು ದೂರಗೊಳಿಸಲು ತನ್ನ ರೆಕ್ಕೆಗಳಿಂದ ಗಾಳಿಬೀಸತೊಡಗಿದನು.

12164007a ತತೋ ವಿಶ್ರಾಂತಮಾಸೀನಂ ಗೋತ್ರಪ್ರಶ್ನಮಪೃಚ್ಚತ|

12164007c ಸೋಽಬ್ರವೀದ್ಗೌತಮೋಽಸ್ಮೀತಿ ಬ್ರಾಹ್ಮ ನಾನ್ಯದುದಾಹರತ್||

ವಿಶ್ರಾಂತಿಪಡೆದು ಎದ್ದು ಕುಳಿತಿದ್ದಾಗ ರಾಜಧರ್ಮನು ಅವನ ಗೋತ್ರವನ್ನು ಪ್ರಶ್ನಿಸಿದನು. “ಗೌತಮ ಗೋತ್ರದ ಬ್ರಾಹ್ಮಣನು” ಎಂದು ಹೇಳಿ ಅದಕ್ಕಿಂತಲೂ ಹೆಚ್ಚಿನ ಏನನ್ನೂ ಅವನು ಹೇಳಲಿಲ್ಲ.

12164008a ತಸ್ಮೈ ಪರ್ಣಮಯಂ ದಿವ್ಯಂ ದಿವ್ಯಪುಷ್ಪಾಧಿವಾಸಿತಮ್|

12164008c ಗಂಧಾಢ್ಯಂ ಶಯನಂ ಪ್ರಾದಾತ್ಸ ಶಿಶ್ಯೇ ತತ್ರ ವೈ ಸುಖಮ್||

ನಂತರ ಪಕ್ಷಿಯು ಅವನಿಗೆ ಎಲೆಗಳನ್ನು ಹಾಸಿ ದಿವ್ಯಪುಷ್ಪಗಳ ಸುವಾಸನೆಯಿಂದ ಕೂಡಿದ ದಿವ್ಯ ಹಾಸಿಗೆಯನ್ನು ಅವನಿಗೆ ನೀಡಿದನು. ಗೌತಮನು ಅದರ ಮೇಲೆ ಸುಖಪೂರ್ವಕವಾಗಿ ನಿದ್ರಿಸಿದನು.

12164009a ಅಥೋಪವಿಷ್ಟಂ ಶಯನೇ ಗೌತಮಂ ಬಕರಾಟ್ತದಾ[1]|

12164009c ಪಪ್ರಚ್ಚ ಕಾಶ್ಯಪೋ ವಾಗ್ಮೀ ಕಿಮಾಗಮನಕಾರಣಮ್||

ಅವನು ಹಾಸಿಗೆಯ ಮೇಲೆ ಕುಳಿತುಕೊಂಡಾಗ ಕಾಶ್ಯಪ ವಾಗ್ಮೀ ಬಕರಾಜನು ಗೌತಮನನ್ನು ಅಲ್ಲಿಗೆ ಆಗಮಿಸಿದುದರ ಕಾರಣವನ್ನು ಕೇಳಿದನು.

12164010a ತತೋಽಬ್ರವೀದ್ಗೌತಮಸ್ತಂ ದರಿದ್ರೋಽಹಂ ಮಹಾಮತೇ|

12164010c ಸಮುದ್ರಗಮನಾಕಾಂಕ್ಷೀ ದ್ರವ್ಯಾರ್ಥಮಿತಿ ಭಾರತ||

ಭಾರತ! ಗೌತಮನು ಅವನಿಗೆ ಹೇಳಿದನು: “ಮಹಾಮತೇ! ನಾನು ದರಿದ್ರನು. ದ್ರವ್ಯವನ್ನು ಅರಸಿ ಸಮುದ್ರತೀರಕ್ಕೆ ಹೋಗಲು ಬಯಸಿ ಹೊರಟಿದ್ದೇನೆ.”

12164011a ತಂ ಕಾಶ್ಯಪೋಽಬ್ರವೀತ್ಪ್ರೀತೋ ನೋತ್ಕಂಠಾಂ ಕರ್ತುಮರ್ಹಸಿ|

12164011c ಕೃತಕಾರ್ಯೋ ದ್ವಿಜಶ್ರೇಷ್ಠ ಸದ್ರವ್ಯೋ ಯಾಸ್ಯಸೇ ಗೃಹಾನ್||

ಕಾಶ್ಯಪನು ಅವನಿಗೆ ಹೇಳಿದನು: “ದ್ವಿಜಶ್ರೇಷ್ಠ! ಅಲ್ಲಿಯವರೆಗೆ ಹೋಗಬೇಕಾಗಿಲ್ಲ. ಇಲ್ಲಿಯೇ ನಿನ್ನ ಕೆಲಸವು ಆಗುವುದು. ನೀನು ಇಲ್ಲಿಂದಲೇ ಧನವನ್ನು ತೆಗೆದುಕೊಂಡು ನಿನ್ನ ಮನೆಗೆ ಹಿಂದಿರುಗು!

12164012a ಚತುರ್ವಿಧಾ ಹ್ಯರ್ಥಗತಿರ್ಬೃಹಸ್ಪತಿಮತಂ ಯಥಾ|

12164012c ಪಾರಂಪರ್ಯಂ ತಥಾ ದೈವಂ ಕರ್ಮ ಮಿತ್ರಮಿತಿ ಪ್ರಭೋ||

ಪ್ರಭೋ! ಬೃಹಸ್ಪತಿಯ ಮತದಂತೆ ನಾಲ್ಕು ಪ್ರಕಾರಗಳಲ್ಲಿ ಅರ್ಥಸಿದ್ಧಿಯಾಗುತ್ತದೆ: ಪಾರಂಪರಿಕವಾಗಿ, ಪ್ರಾರಬ್ಧದ ಅನುಕೂಲದಿಂದಾಗಿ, ಧನವನ್ನು ಉದ್ದೇಶಿಸಿ ಮಾಡಿದ ಕರ್ಮದಿಂದ ಮತ್ತು ಮಿತ್ರನ ಸಹಯೋಗದಿಂದ.

12164013a ಪ್ರಾದುರ್ಭೂತೋಽಸ್ಮಿ ತೇ ಮಿತ್ರಂ ಸುಹೃತ್ತ್ವಂ ಚ ಮಮ ತ್ವಯಿ|

12164013c ಸೋಽಹಂ ತಥಾ ಯತಿಷ್ಯಾಮಿ ಭವಿಷ್ಯಸಿ ಯಥಾರ್ಥವಾನ್||

ನಾನು ನಿನ್ನ ಮಿತ್ರನಾಗಿಬಿಟ್ಟಿದ್ದೇನೆ. ನನಗೆ ನಿನ್ನ ಮೇಲೆ ಸೌಹಾರ್ದತೆಯು ಹೆಚ್ಚಾಗಿದೆ. ಆದುದರಿಂದ ನೀನು ಅರ್ಥವಾನನಾಗುವಂತೆ ಪ್ರಯತ್ನಿಸುತ್ತೇನೆ.”

12164014a ತತಃ ಪ್ರಭಾತಸಮಯೇ ಸುಖಂ ಪೃಷ್ಟ್ವಾಬ್ರವೀದಿದಮ್|

12164014c ಗಚ್ಚ ಸೌಮ್ಯ ಪಥಾನೇನ ಕೃತಕೃತ್ಯೋ ಭವಿಷ್ಯಸಿ||

12164015a ಇತಸ್ತ್ರಿಯೋಜನಂ ಗತ್ವಾ ರಾಕ್ಷಸಾಧಿಪತಿರ್ಮಹಾನ್|

12164015c ವಿರೂಪಾಕ್ಷ ಇತಿ ಖ್ಯಾತಃ ಸಖಾ ಮಮ ಮಹಾಬಲಃ||

ಅನಂತರ ಪ್ರಭಾತಸಮಯದಲ್ಲಿ ಬ್ರಾಹ್ಮಣನ ಸುಖದ ಕುರಿತು ಕೇಳಿ ಪಕ್ಷಿಯು ಇದನ್ನು ಹೇಳಿದನು: “ಸೌಮ್ಯ! ಇದೇ ದಾರಿಯಲ್ಲಿ ಹೋಗು. ಕೃತಕೃತ್ಯನಾಗುತ್ತೀಯೆ. ಇಲ್ಲಿಂದ ಮೂರು ಯೋಜನೆಯಲ್ಲಿ ನನ್ನ ಸಖ ಮಹಾಬಲ ವಿರೂಪಾಕ್ಷ ಎಂದು ಖ್ಯಾತನಾದ ಮಹಾನ್ ರಾಕ್ಷಸಾಧಿಪನಿದ್ದಾನೆ.

12164016a ತಂ ಗಚ್ಚ ದ್ವಿಜಮುಖ್ಯ ತ್ವಂ ಮಮ ವಾಕ್ಯಪ್ರಚೋದಿತಃ|

12164016c ಕಾಮಾನಭೀಪ್ಸಿತಾಂಸ್ತುಭ್ಯಂ ದಾತಾ ನಾಸ್ತ್ಯತ್ರ ಸಂಶಯಃ||

ದ್ವಿಜಮುಖ್ಯ! ಅವನಲ್ಲಿಗೆ ನೀನು ಹೋಗು. ಅವನು ನನ್ನ ಮಾತಿನಂತೆ ನಿನಗೆ ಬೇಕಾದಷ್ಟು ಧನವನ್ನು ಕೊಡುತ್ತಾನೆ ಮತ್ತು ಮನೋವಾಂಛಿತ ಕಾಮನೆಗಳೆಲ್ಲವನ್ನೂ ಪೂರೈಸುತ್ತಾನೆ. ಅದರಲ್ಲಿ ಸಂಶಯವಿಲ್ಲ.”

12164017a ಇತ್ಯುಕ್ತಃ ಪ್ರಯಯೌ ರಾಜನ್ಗೌತಮೋ ವಿಗತಕ್ಲಮಃ|

12164017c ಫಲಾನ್ಯಮೃತಕಲ್ಪಾನಿ ಭಕ್ಷಯನ್ಸ್ಮ ಯಥೇಷ್ಟತಃ||

12164018a ಚಂದನಾಗುರುಮುಖ್ಯಾನಿ ತ್ವಕ್ಪತ್ರಾಣಾಂ ವನಾನಿ ಚ|

12164018c ತಸ್ಮಿನ್ಪಥಿ ಮಹಾರಾಜ ಸೇವಮಾನೋ ದ್ರುತಂ ಯಯೌ||

ರಾಜನ್! ಮಹಾರಾಜ! ಅವನು ಹೀಗೆ ಹೇಳಲು ಗೌತಮನು ಅಲ್ಲಿಂದ ಹೊರಟನು. ಅವನ ಎಲ್ಲ ಆಯಾಸಗಳೂ ದೂರವಾಗಿದ್ದವು. ಮಾರ್ಗದಲ್ಲಿ ಅವನು ಚಂದನ ಮತ್ತು ಅಗುರುಗಳ ವೃಕ್ಷಗಳು ಪ್ರಧಾನವಾಗಿದ್ದ ತೇಜಪತ್ತಿಗಳ ವನದಲ್ಲಿ ವಿಶ್ರಮಿಸಿ, ಇಚ್ಛಾನುಸಾರವಾಗಿ ಅಮೃತಸಮಾನ ಮಧುರ ಫಲಗಳನ್ನು ತಿನ್ನುತ್ತಾ ಅತಿ ವೇಗದಿಂದ ಮುಂದೆ ನಡೆದನು.

12164019a ತತೋ ಮೇರುವ್ರಜಂ ನಾಮ ನಗರಂ ಶೈಲತೋರಣಮ್|

12164019c ಶೈಲಪ್ರಾಕಾರವಪ್ರಂ ಚ ಶೈಲಯಂತ್ರಾರ್ಗಲಂ ತಥಾ||

ನಂತರ ಅವನು ಮೇರುವ್ರಜ ಎಂಬ ಹೆಸರಿನ ನಗರವನ್ನು ತಲುಪಿದನು. ಶೈಲಗಳೇ ಅದಕ್ಕೆ ತೋರಣವಾಗಿದ್ದವು. ಶೈಲಗಳೇ ಅದಕ್ಕೆ ಕೋಟೆಗಳಾಗಿದ್ದವು. ಶೈಲಯಂತ್ರಗಳನ್ನು ಹೊಂದಿತ್ತು.

12164020a ವಿದಿತಶ್ಚಾಭವತ್ತಸ್ಯ ರಾಕ್ಷಸೇಂದ್ರಸ್ಯ ಧೀಮತಃ|

12164020c ಪ್ರಹಿತಃ ಸುಹೃದಾ ರಾಜನ್ಪ್ರೀಯತಾ ವೈ ಪ್ರಿಯಾತಿಥಿಃ||

ಗೌತಮನು ಧೀಮತ ರಾಕ್ಷಸೇಂದ್ರ ವಿರೂಪಾಕ್ಷನಿಗೆ ಸೇವಕರ ಮೂಲಕ ಈ ಸೂಚನೆಯನ್ನು ಕಳುಹಿಸಿದನು: “ರಾಜನ್! ನಿನ್ನ ಮಿತ್ರನು ತನ್ನ ಓರ್ವ ಪ್ರಿಯ ಅತಿಥಿಯನ್ನು ನಿನ್ನ ಬಳಿ ಕಳುಹಿಸಿದ್ದಾನೆ. ಅವನ ಮೇಲೆ ಅವನು ಅತಿ ಪ್ರಸನ್ನನಾಗಿದ್ದಾನೆ.”

12164021a ತತಃ ಸ ರಾಕ್ಷಸೇಂದ್ರಃ ಸ್ವಾನ್ ಪ್ರೇಷ್ಯಾನಾಹ ಯುಧಿಷ್ಠಿರ|

12164021c ಗೌತಮೋ ನಗರದ್ವಾರಾಚ್ಚೀಘ್ರಮಾನೀಯತಾಮಿತಿ||

ಯುಧಿಷ್ಠಿರ! ಈ ಸಮಾಚರವು ಸಿಗುತ್ತಲೇ ರಾಕ್ಷಸೇಂದ್ರನು ತನ್ನ ಸೇವಕರಿಗೆ “ಗೌತಮನನ್ನು ನಗರದ್ವಾರದಿಂದ ಶೀಘ್ರವೇ ಕರೆದುಕೊಂಡು ಬನ್ನಿ” ಎಂದು ಹೇಳಿದನು.

12164022a ತತಃ ಪುರವರಾತ್ತಸ್ಮಾತ್ಪುರುಷಾಃ ಶ್ವೇತವೇಷ್ಟನಾಃ[2]|

12164022c ಗೌತಮೇತ್ಯಭಿಭಾಷಂತಃ ಪುರದ್ವಾರಮುಪಾಗಮನ್||

ಅವನ ಆದೇಶವು ಸಿಗುತ್ತಲೇ ಬಿಳೀವಸ್ತ್ರಗಳನ್ನುಟ್ಟಿದ್ದ ರಾಜಸೇವಕರು ಗೌತಮನನ್ನು ಕರೆಯುತ್ತಾ ಪುರದ್ವಾರಕ್ಕೆ ಆಗಮಿಸಿದರು.

12164023a ತೇ ತಮೂಚುರ್ಮಹಾರಾಜ ಪ್ರೇಷ್ಯಾ ರಕ್ಷಃಪತೇರ್ದ್ವಿಜಮ್|

12164023c ತ್ವರಸ್ವ ತೂರ್ಣಮಾಗಚ್ಚ ರಾಜಾ ತ್ವಾಂ ದ್ರಷ್ಟುಮಿಚ್ಚತಿ||

ಮಹಾರಾಜ! ರಾಜನು ಕಳುಹಿಸಿದ ರಕ್ಷಪತಿಗಳು ಬ್ರಾಹ್ಮಣನಿಗೆ ಹೇಳಿದರು: “ತ್ವರೆಮಾಡಬೇಕು. ಬೇಗನೇ ಬರಬೇಕು. ರಾಜನು ನಿನ್ನನ್ನು ನೋಡಬಯಸುತ್ತಾನೆ.

12164024a ರಾಕ್ಷಸಾಧಿಪತಿರ್ವೀರೋ ವಿರೂಪಾಕ್ಷ ಇತಿ ಶ್ರುತಃ|

12164024c ಸ ತ್ವಾಂ ತ್ವರತಿ ವೈ ದ್ರಷ್ಟುಂ ತತ್ಕ್ಷಿಪ್ರಂ ಸಂವಿಧೀಯತಾಮ್||

ವೀರ ವಿರೂಪಾಕ್ಷನೆಂದು ಖ್ಯಾತನಾಗಿರುವ ರಾಕ್ಷಸಾಧಿಪನು ನಿನ್ನನ್ನು ನೋಡಲು ತ್ವರೆಮಾಡುತ್ತಿದ್ದಾನೆ. ಆದುದರಿಂದ ಅವನನ್ನು ಕ್ಷಿಪ್ರವಾಗಿ ಭೇಟಿಮಾಡಬೇಕು.”

12164025a ತತಃ ಸ ಪ್ರಾದ್ರವದ್ವಿಪ್ರೋ ವಿಸ್ಮಯಾದ್ವಿಗತಕ್ಲಮಃ|

12164025c ಗೌತಮೋ ನಗರರ್ದ್ಧಿಂ ತಾಂ ಪಶ್ಯನ್ಪರಮವಿಸ್ಮಿತಃ||

ಕರೆಯನ್ನು ಕೇಳಿದ ಕೂಡಲೇ ವಿಸ್ಮಯವಾಗಿ ಗೌತಮನ ಆಯಾಸವು ಕಳೆದುಹೋಯಿತು. ಆ ಸಮೃದ್ಧ ನಗರಿಯನ್ನು ಕಂಡು ಅವನು ಪರಮ ವಿಸ್ಮಿತನಾದನು.

12164026a ತೈರೇವ ಸಹಿತೋ ರಾಜ್ಞೋ ವೇಶ್ಮ ತೂರ್ಣಮುಪಾದ್ರವತ್|

12164026c ದರ್ಶನಂ ರಾಕ್ಷಸೇಂದ್ರಸ್ಯ ಕಾಂಕ್ಷಮಾಣೋ ದ್ವಿಜಸ್ತದಾ||

ರಾಕ್ಷಸೇಂದ್ರನನ್ನು ಕಾಣಲು ಉತ್ಸುಕನಾಗಿ ಆ ಬ್ರಾಹ್ಮಣನು ಸೇವಕರೊಂದಿಗೆ ಶೀಘ್ರವಾಗಿಯೇ ರಾಜಭವನವನ್ನು ತಲುಪಿದನು.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಆಪದ್ಧರ್ಮಪರ್ವಣಿ ಕೃತಘ್ನೋಪಾಖ್ಯಾನೇ ಚತುಃಷಷ್ಟ್ಯಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಆಪದ್ಧರ್ಮಪರ್ವದಲ್ಲಿ ಕೃತಘ್ನೋಪಾಖ್ಯಾನ ಎನ್ನುವ ನೂರಾಅರವತ್ನಾಲ್ಕನೇ ಅಧ್ಯಾಯವು.

[1] ಧರ್ಮರಾಟ್ ತದಾ (ಗೀತಾ ಪ್ರೆಸ್).

[2] ಶ್ಯೇನಚೇಷ್ಟನಾಃ (ಗೀತಾ ಪ್ರೆಸ್).

Comments are closed.