Shanti Parva: Chapter 162

ಶಾಂತಿ ಪರ್ವ: ಆಪದ್ಧರ್ಮ ಪರ್ವ

೧೬೨

ಕೃತಘ್ನಗೌತಮೋಪಾಖ್ಯಾನ

ಮಿತ್ರನಾಗಲು ಯೋಗ್ಯನಾದ ಪುರುಷನ ಲಕ್ಷಣಗಳು ಮತ್ತು ಕೃತಘ್ನ ಗೌತಮನ ಕಥೆಯ ಪ್ರಾರಂಭ (೧-೪೯).

12162001 ಯುಧಿಷ್ಠಿರ ಉವಾಚ |

12162001a ಪಿತಾಮಹ ಮಹಾಪ್ರಾಜ್ಞ ಕುರೂಣಾಂ ಕೀರ್ತಿವರ್ಧನ|

12162001c ಪ್ರಶ್ನಂ ಕಂ ಚಿತ್ಪ್ರವಕ್ಷ್ಯಾಮಿ ತನ್ಮೇ ವ್ಯಾಖ್ಯಾತುಮರ್ಹಸಿ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಹಾಪ್ರಾಜ್ಞ! ಕುರುಗಳ ಕೀರ್ತಿವರ್ಧನ! ನಾನು ಇನ್ನೂ ಕೆಲವು ಪ್ರಶ್ನೆಗಳನ್ನಿಡುತ್ತೇನೆ. ಅವುಗಳ ಕುರಿತು ಹೇಳಬೇಕು.

12162002a ಕೀದೃಶಾ ಮಾನವಾಃ ಸೌಮ್ಯಾಃ ಕೈಃ ಪ್ರೀತಿಃ ಪರಮಾ ಭವೇತ್|

12162002c ಆಯತ್ಯಾಂ ಚ ತದಾತ್ವೇ ಚ ಕೇ ಕ್ಷಮಾಸ್ತಾನ್ವದಸ್ವ ಮೇ||

ಸೌಮ್ಯ ಸ್ವಭಾವದ ಮನುಷ್ಯರು ಹೇಗಿರುತ್ತಾರೆ? ಯಾರೊಂದಿಗೆ ಪರಮ ಪ್ರೀತಿಯಿಂದಿರಬೇಕು? ವರ್ತಮಾನದಲ್ಲಿ ಮತ್ತು ಭವಿಷ್ಯದಲ್ಲಿ ಎಂಥಹ ಮನುಷ್ಯರು ಉಪಕಾರ ಮಾಡಲು ಸಮರ್ಥರಾಗಿರುತ್ತಾರೆ? ಅದರ ಕುರಿತು ನನಗೆ ಹೇಳು.

12162003a ನ ಹಿ ತತ್ರ ಧನಂ ಸ್ಫೀತಂ ನ ಚ ಸಂಬಂಧಿಬಾಂಧವಾಃ|

12162003c ತಿಷ್ಠಂತಿ ಯತ್ರ ಸುಹೃದಸ್ತಿಷ್ಠಂತೀತಿ ಮತಿರ್ಮಮ||

ಸುಹೃದರ ಸ್ಥಾನವನ್ನು ಸಮೃದ್ಧ ಧನವಾಗಲೀ ಮತ್ತು ಸಂಬಂಧಿ ಬಾಂಧವರಾಗಲೀ ತುಂಬಲಾರರು ಎಂದು ನನ್ನ ಅಭಿಪ್ರಾಯ.

12162004a ದುರ್ಲಭೋ ಹಿ ಸುಹೃಚ್ಚ್ರೋತಾ ದುರ್ಲಭಶ್ಚ ಹಿತಃ ಸುಹೃತ್|

12162004c ಏತದ್ಧರ್ಮಭೃತಾಂ ಶ್ರೇಷ್ಠ ಸರ್ವಂ ವ್ಯಾಖ್ಯಾತುಮರ್ಹಸಿ||

ಶಾಸ್ತ್ರಗಳನ್ನು ತಿಳಿದಿರುವ ಸ್ನೇಹಿತನು ದುರ್ಲಭನು ಮತ್ತು ಹಿತಕಾರೀ ಸ್ನೇಹಿತನೂ ದುರ್ಲಭನೇ. ಧರ್ಮಭೃತರಲ್ಲಿ ಶ್ರೇಷ್ಠ! ಈ ಎಲ್ಲ ಪ್ರಶ್ನೆಗಳಿಗೂ ವ್ಯಾಖ್ಯಾನಮಾಡಬೇಕು.”

12162005 ಭೀಷ್ಮ ಉವಾಚ |

12162005a ಸಂಧೇಯಾನ್ಪುರುಷಾನ್ರಾಜನ್ನಸಂಧೇಯಾಂಶ್ಚ ತತ್ತ್ವತಃ|

12162005c ವದತೋ ಮೇ ನಿಬೋಧ ತ್ವಂ ನಿಖಿಲೇನ ಯುಧಿಷ್ಠಿರ||

ಭೀಷ್ಮನು ಹೇಳಿದನು: “ರಾಜನ್! ಯುಧಿಷ್ಠಿರ! ಯಾರೊಡನೆ ಮೈತ್ರಿಯನ್ನು ಮಾಡಿಕೊಳ್ಳಬೇಕು ಮತ್ತು ಯಾರನ್ನು ಮಿತ್ರನನ್ನಾಗಿ ಮಾಡಿಕೊಳ್ಳಬಾರದು ಇದರ ಕುರಿತು ತತ್ತ್ವತಃ ಹೇಳುತ್ತೇನೆ. ಅದನ್ನು ಸಂಪೂರ್ಣವಾಗಿ ಮನವಿಟ್ಟು ಕೇಳು.

12162006a ಲುಬ್ಧಃ ಕ್ರೂರಸ್ತ್ಯಕ್ತಧರ್ಮಾ ನಿಕೃತಃ ಶಠ ಏವ ಚ|

12162006c ಕ್ಷುದ್ರಃ ಪಾಪಸಮಾಚಾರಃ ಸರ್ವಶಂಕೀ ತಥಾಲಸಃ||

12162007a ದೀರ್ಘಸೂತ್ರೋಽನೃಜುಃ ಕಷ್ಟೋ[1] ಗುರುದಾರಪ್ರಧರ್ಷಕಃ|

12162007c ವ್ಯಸನೇ ಯಃ ಪರಿತ್ಯಾಗೀ ದುರಾತ್ಮಾ ನಿರಪತ್ರಪಃ||

12162008a ಸರ್ವತಃ ಪಾಪದರ್ಶೀ ಚ ನಾಸ್ತಿಕೋ ವೇದನಿಂದಕಃ|

12162008c ಸಂಪ್ರಕೀರ್ಣೇಂದ್ರಿಯೋ ಲೋಕೇ ಯಃ ಕಾಮನಿರತಶ್ಚರೇತ್||

12162009a ಅಸತ್ಯೋ ಲೋಕವಿದ್ವಿಷ್ಟಃ ಸಮಯೇ ಚಾನವಸ್ಥಿತಃ|

12162009c ಪಿಶುನೋಽಥಾಕೃತಪ್ರಜ್ಞೋ ಮತ್ಸರೀ ಪಾಪನಿಶ್ಚಯಃ||

12162010a ದುಃಶೀಲೋಽಥಾಕೃತಾತ್ಮಾ ಚ ನೃಶಂಸಃ ಕಿತವಸ್ತಥಾ|

12162010c ಮಿತ್ರೈರರ್ಥಕೃತೀ[2] ನಿತ್ಯಮಿಚ್ಚತ್ಯರ್ಥಪರಶ್ಚ ಯಃ||

12162011a ವಹತಶ್ಚ[3] ಯಥಾಶಕ್ತಿ ಯೋ ನ ತುಷ್ಯತಿ ಮಂದಧೀಃ|

12162011c ಅಮಿತ್ರಮಿವ ಯೋ ಭುಂಕ್ತೇ ಸದಾ ಮಿತ್ರಂ ನರರ್ಷಭ||

12162012a ಅಸ್ಥಾನಕ್ರೋಧನೋ ಯಶ್ಚ ಅಕಸ್ಮಾಚ್ಚ ವಿರಜ್ಯತೇ|

12162012c ಸುಹೃದಶ್ಚೈವ ಕಲ್ಯಾಣಾನಾಶು ತ್ಯಜತಿ ಕಿಲ್ಬಿಷೀ||

12162013a ಅಲ್ಪೇಽಪ್ಯಪಕೃತೇ ಮೂಢಸ್ತಥಾಜ್ಞಾನಾತ್ಕೃತೇಽಪಿ ಚ|

12162013c ಕಾರ್ಯೋಪಸೇವೀ ಮಿತ್ರೇಷು ಮಿತ್ರದ್ವೇಷೀ ನರಾಧಿಪ||

12162014a ಶತ್ರುರ್ಮಿತ್ರಮುಖೋ ಯಶ್ಚ ಜಿಹ್ಮಪ್ರೇಕ್ಷೀ ವಿಲೋಭನಃ|

12162014c ನ ರಜ್ಯತಿ ಚ ಕಲ್ಯಾಣೇ ಯಸ್ತ್ಯಜೇತ್ ತಾದೃಶಂ ನರಮ್||

12162015a ಪಾನಪೋ ದ್ವೇಷಣಃ ಕ್ರೂರೋ ನಿರ್ಘೃಣಃ ಪರುಷಸ್ತಥಾ|

12162015c ಪರೋಪತಾಪೀ ಮಿತ್ರಧ್ರುಕ್ತಥಾ ಪ್ರಾಣಿವಧೇ ರತಃ||

12162016a ಕೃತಘ್ನಶ್ಚಾಧಮೋ ಲೋಕೇ ನ ಸಂಧೇಯಃ ಕಥಂ ಚನ|

12162016c ಚಿದ್ರಾನ್ವೇಷೀ ನ ಸಂಧೇಯಃ ಸಂಧೇಯಾನಪಿ ಮೇ ಶೃಣು||

ನರರ್ಷಭ! ಲೋಭಿ, ಕ್ರೂರ, ಅಧರ್ಮಿ, ಕಪಟಿ, ಶಠ, ಕ್ಷುದ್ರ, ಪಾಪಾಚಾರೀ, ಎಲ್ಲರನ್ನೂ ಶಂಕಿಸುವ, ಆಲಸಿ, ದೀರ್ಘಸೂತ್ರೀ, ಕುಟಿಲ, ಕಷ್ಟಕರ, ಗುರುಪತ್ನಿಯನ್ನು ಉಲ್ಲಂಘಿಸಿದ, ಸಂಕಟದ ಸಮಯದಲ್ಲಿ ಬಿಟ್ಟು ಹೋಗುವ, ದುರಾತ್ಮ, ನಿರ್ಲಜ್ಜ, ಎಲ್ಲ ಕಡೆ ಪಾಪದೃಷ್ಟಿಯನ್ನೇ ಬೀರುವ, ನಾಸ್ತಿಕ, ವೇದನಿಂದಕ, ಇಂದ್ರಿಯಗಳನ್ನು ಸ್ವಚ್ಛಂದವನ್ನಾಗಿಸಿ ಜಗತ್ತಿನಲ್ಲಿ ಕಾಮನಿರತನಾಗಿ ಸಂಚರಿಸುವ, ಅಸತ್ಯ, ಎಲ್ಲರ ದ್ವೇಷಕ್ಕೂ ಪಾತ್ರನಾದ, ತನ್ನ ಪ್ರತಿಜ್ಞೆಯಂತೆ ನಡೆದುಕೊಳ್ಳದೇ ಇರುವ, ಚಾಡಿಹೇಳುವ, ಅಪವಿತ್ರ ಬುದ್ಧಿಯುಳ್ಳ, ಅಸೂಯೆಪಡುವ, ಪಾಪಪೂರ್ಣ ವಿಚಾರಗಳನ್ನಿಟ್ಟುಕೊಂಡಿರುವ, ಕೆಟ್ಟ ನಡತೆಯುಳ್ಳ, ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡಿಲ್ಲದ, ಕ್ರೂರಿ, ಧೂರ್ತ, ಮಿತ್ರರಿಗೆ ಅಪಕಾರವನ್ನೆಸಗುವ, ನಿತ್ಯವೂ ಪರರ ಧನವನ್ನು ಬಯಸುವ, ಯಥಾಶಕ್ತಿಯಾಗಿ ಕೊಡುವವನ ಮೇಲೂ ಸಂತುಷ್ಟನಾಗಿರದ, ಮಂದಬುದ್ಧಿ, ಮಿತ್ರರನ್ನೂ ಧೈರ್ಯದಿಂದ ವಿಚಲಿತರನ್ನಾಗಿ ಮಾಡುವ, ಸಾವಧಾನವಿಲ್ಲದ, ಅಕಾರಣವಾಗಿ ಸಿಟ್ಟಾಗುವ, ಅಕಸ್ಮಾತ್ತಾಗಿ ವಿರೋಧಿಯಾಗಿ ಕಲ್ಯಾಣಕಾರೀ ಮಿತ್ರರನ್ನೂ ಶೀಘ್ರದಲ್ಲಿಯೇ ಬಿಟ್ಟುಬಿಡುವ, ತಿಳಿಯದೇ ಅಲ್ಪ ಅಪರಾಧವನ್ನು ಮಾಡಿದ್ದರೂ ಮಿತ್ರನಿಗೆ ಅನಿಷ್ಟವನ್ನುಂಟುಮಾಡುವ, ತನ್ನ ಸ್ವಾರ್ಥಸಾಧನೆಗಾಗಿ ಮೈತ್ರಿಯನ್ನು ಇಟ್ಟುಕೊಳ್ಳುವ, ವಾಸ್ತವವಾಗಿಯೂ ಮಿತ್ರದ್ವೇಷಿಯಾಗಿರುವ, ಬಾಯಲ್ಲಿ ಮೈತ್ರಿಯ ಮಾತನಾಡುತ್ತಾ ಒಳಗೆ ಶತ್ರುಭಾವವನ್ನಿಟ್ಟುಕೊಂಡಿರುವ, ಕುಟಿಲ ದೃಷ್ಟಿಯಿಂದ ನೋಡುವ, ವಿಪರೀತದರ್ಶೀ, ಯಾವಾಗಲೂ ಹಿತಕಾರಿಯಾಗಿರುವ ಮಿತ್ರನನ್ನೂ ತ್ಯಜಿಸುವ, ಕುಡುಕ, ದ್ವೇಷೀ, ಕ್ರೋಧೀ, ನಿರ್ದಯೀ, ಕ್ರೂರ, ಇತರರನ್ನು ಪೀಡಿಸುವ, ಮಿತ್ರದ್ರೋಹೀ, ಪ್ರಾಣಿಗಳನ್ನು ಹಿಂಸಿಸುವ, ಕೃತಘ್ನ, ನೀಚ - ಇಂಥವರೊಂದಿಗೆ ಸಂಸಾರದಲ್ಲಿ ಎಂದೂ ಮೈತ್ರಿಯನ್ನು ಮಾಡಿಕೊಳ್ಳಬಾರದು. ಇನ್ನೊಬ್ಬರಲ್ಲಿ ದುರ್ಬಲತೆಯನ್ನೇ ಹುಡುಕುವವನೊಂದಿಗೂ ಎಂದೂ ಮೈತ್ರಿಯನ್ನು ಮಾಡಿಕೊಳ್ಳಬಾರದು. ಈಗ ಮೈತ್ರಿಗೆ ಯೋಗ್ಯರಾದ ಪುರುಷರ ಕುರಿತು ಕೇಳು.

12162017a ಕುಲೀನಾ ವಾಕ್ಯಸಂಪನ್ನಾ ಜ್ಞಾನವಿಜ್ಞಾನಕೋವಿದಾಃ|

12162017c ಮಿತ್ರಜ್ಞಾಶ್ಚ[4] ಕೃತಜ್ಞಾಶ್ಚ ಸರ್ವಜ್ಞಾಃ ಶೋಕವರ್ಜಿತಾಃ[5]||

12162018a ಮಾಧುರ್ಯಗುಣಸಂಪನ್ನಾಃ ಸತ್ಯಸಂಧಾ ಜಿತೇಂದ್ರಿಯಾಃ|

12162018c ವ್ಯಾಯಾಮಶೀಲಾಃ ಸತತಂ ಭೃತಪುತ್ರಾಃ ಕುಲೋದ್ಗತಾಃ[6]||

12162019a ರೂಪವಂತೋ ಗುಣೋಪೇತಾಸ್ತಥಾಲುಬ್ಧಾ ಜಿತಶ್ರಮಾಃ|

12162019c ದೋಷೈರ್ವಿಯುಕ್ತಾಃ ಪ್ರಥಿತೈಸ್ತೇ ಗ್ರಾಹ್ಯಾಃ ಪಾರ್ಥಿವೇನ ಹ||

ಕುಲೀನ, ವಾಕ್ಯಸಂಪನ್ನ, ಜ್ಞಾನವಿಜ್ಞಾನಕೋವಿದ, ಮಿತ್ರಜ್ಞ, ಕೃತಜ್ಞ, ಸರ್ವಜ್ಞ, ಶೋಕವರ್ಜಿತ, ಮಾದುರ್ಯಗುಣಸಂಪನ್ನ, ಸತ್ಯಸಂಧ, ಜಿತೇಂದ್ರಿಯ, ವ್ಯಾಯಾಮಶೀಲ, ಸತತವೂ ಪತ್ನೀ-ಪುತ್ರರನ್ನು ಪಾಲಿಸುವ, ಕುಲವನ್ನು ಉದ್ಧರಿಸುವ, ರೂಪವಂತ, ಗುಣೋಪೇತ, ಅಲುಬ್ಧ, ಜಿತಶ್ರಮಿ, ದೋಷಗಳಿಂದ ವಿಮುಕ್ತನಾದ ಮತ್ತು ಲೋಕದಲ್ಲಿ ಪ್ರಸಿದ್ಧನಾದವನೊಂದಿಗೆ ರಾಜನು ಮಿತ್ರತ್ವವನ್ನು ಕಲ್ಪಿಸಿಕೊಳ್ಳಬೇಕು.

12162020a ಯಥಾಶಕ್ತಿಸಮಾಚಾರಾಃ ಸಂತಸ್ತುಷ್ಯಂತಿ ಹಿ ಪ್ರಭೋ|

12162020c ನಾಸ್ಥಾನೇ ಕ್ರೋಧವಂತಶ್ಚ ನ ಚಾಕಸ್ಮಾದ್ವಿರಾಗಿಣಃ||

12162021a ವಿರಕ್ತಾಶ್ಚ ನ ರುಷ್ಯಂತಿ ಮನಸಾಪ್ಯರ್ಥಕೋವಿದಾಃ|

12162021c ಆತ್ಮಾನಂ ಪೀಡಯಿತ್ವಾಪಿ ಸುಹೃತ್ಕಾರ್ಯಪರಾಯಣಾಃ|

12162021e ನ ವಿರಜ್ಯಂತಿ ಮಿತ್ರೇಭ್ಯೋ ವಾಸೋ ರಕ್ತಮಿವಾವಿಕಮ್||

12162022a ದೋಷಾಂಶ್ಚ ಲೋಭಮೋಹಾದೀನರ್ಥೇಷು ಯುವತಿಷ್ವಥ|

12162022c ನ ದರ್ಶಯಂತಿ ಸುಹೃದಾಂ ವಿಶ್ವಸ್ತಾ ಬಂಧುವತ್ಸಲಾಃ||

12162023a ಲೋಷ್ಟಕಾಂಚನತುಲ್ಯಾರ್ಥಾಃ ಸುಹೃತ್ಸ್ವಶಠಬುದ್ಧಯಃ|

12162023c ಯೇ ಚರಂತ್ಯನಭೀಮಾನಾ ನಿಸೃಷ್ಟಾರ್ಥವಿಭೂಷಣಾಃ|

12162023e ಸಂಗೃಹ್ಣಂತಃ ಪರಿಜನಂ ಸ್ವಾಮ್ಯರ್ಥಪರಮಾಃ ಸದಾ||

12162024a ಈದೃಶೈಃ ಪುರುಷಶ್ರೇಷ್ಠೈಃ ಸಂಧಿಂ ಯಃ ಕುರುತೇ ನೃಪಃ|

12162024c ತಸ್ಯ ವಿಸ್ತೀರ್ಯತೇ ರಾಷ್ಟ್ರಂ ಜ್ಯೋತ್ಸ್ನಾ ಗ್ರಹಪತೇರಿವ||

ಪ್ರಭೋ! ಯಥಾಶಕ್ತಿನಡೆದುಕೊಳ್ಳುವ, ಸದಾ ತೃಪ್ತಿಯಿಂದಿರುವ, ಕಾರಣವಿಲ್ಲದೇ ಕೋಪಗೊಳ್ಳದಿರುವ, ಅಕಸ್ಮಾತ್ತಾಗಿ ಸ್ನೇಹವನ್ನು ತ್ಯಜಿಸದೇ ಇರುವ, ಮನಸ್ಸಿನಲ್ಲಿ ಉದಾಸೀನರಾದರೂ ರೋಷಗೊಳ್ಳದ, ಅರ್ಥದ ತತ್ತ್ವವನ್ನು ತಿಳಿದುಕೊಂಡಿರುವ, ತಮ್ಮನ್ನು ತಾವೇ ಕಷ್ಟದಲ್ಲಿ ಬಿದ್ದು ಹಿತೈಷಿಯ ಕಾರ್ಯಸಿದ್ಧಿಯನ್ನು ಮಾಡುವ, ಕೆಂಪುಬಣ್ಣದ ವಸ್ತ್ರವು ಹೇಗೆ ತನ್ನ ಬಣ್ಣವನ್ನು ಬಿಡುವುದಿಲ್ಲವೋ ಹಾಗೆ ಮಿತ್ರನನ್ನೂ ಬಿಡದಿರದ, ಕ್ರೋಧವಶನಾಗಿ ಮಿತ್ರನಿಗೆ ಅನರ್ಥವನ್ನುಂಟುಮಾಡದ, ಲೋಭ-ಮೋಹಗಳ ವಶನಾಗಿ ಮಿತ್ರನ ಯುವತಿಯರ ಮೇಲೇ ಆಸಕ್ತನಾಗಿರದ, ಮಿತ್ರನ ವಿಶ್ವಾಸಪಾತ್ರನೂ, ಧರ್ಮಾನುರಕ್ತನೂ ಆಗಿರುವ, ಲೋಷ್ಠ-ಕಾಂಚನಗಳನ್ನು ಒಂದೇ ಸಮನಾಗಿ ಕಾಣುವ, ಮಿತ್ರರಮೇಲೆ ಸುಸ್ಥಿರ ಬುದ್ಧಿಯನ್ನಿಟ್ಟಿರುವ, ಸರ್ವರೊಂದಿಗೂ ಪ್ರಮಾಣಭೂತ ಶಾಸ್ತ್ರಗಳ ಅನುಸಾರವಾಗಿ ವರ್ತಿಸುವ, ಪ್ರಾರಬ್ಧವಶ ಪ್ರಾಪ್ತವಾದ ಧನದಲ್ಲಿಯೇ ಸಂತುಷ್ಟನಾಗಿರುವ, ಕುಟುಂಬದವರೊಂದಿಗೆ ಸದಾ ಮಿತ್ರ ಮತ್ತು ಸ್ವಾಮಿಯ ಕಾರ್ಯಸಾಧನೆಗಳಲ್ಲಿ ತತ್ಪರನಾಗಿರುವ ಶ್ರೇಷ್ಠ ಪುರುಷರೊಂದಿಗೆ ರಾಜನು ಮೈತ್ರಿಯನ್ನಿಟ್ಟುಕೊಂಡಿರಬೇಕು. ಅಂಥವರ ರಾಜ್ಯವು ಪೂರ್ಣಿಮೆಯ ಚಂದ್ರನಂತೆ ವೃದ್ಧಿಯಾಗುತ್ತದೆ.

12162025a ಶಾಸ್ತ್ರನಿತ್ಯಾ ಜಿತಕ್ರೋಧಾ ಬಲವಂತೋ ರಣಪ್ರಿಯಾಃ|

12162025c ಕ್ಷಾಂತಾಃ ಶೀಲಗುಣೋಪೇತಾಃ ಸಂಧೇಯಾಃ ಪುರುಷೋತ್ತಮಾಃ||

ನಿತ್ಯವೂ ಶಾಸ್ತ್ರಗಳ ಸ್ವಾಧ್ಯಾಯದಲ್ಲಿ ನಿರತರಾಗಿರುವ, ಜಿತಕ್ರೋಧ, ಬಲವಂತ, ರಣಪ್ರಿಯ, ಕ್ಷಮಾಶೀಲ, ಶೀಲಗುಣೋಪೇತ ಪುರುಷೋತ್ತಮರು ಮಿತ್ರರಾಗಿರಲು ಯೋಗ್ಯರು.

12162026a ಯೇ ಚ ದೋಷಸಮಾಯುಕ್ತಾ ನರಾಃ ಪ್ರೋಕ್ತಾ ಮಯಾನಘ|

12162026c ತೇಷಾಮಪ್ಯಧಮೋ ರಾಜನ್ ಕೃತಘ್ನೋ ಮಿತ್ರಘಾತಕಃ|

12162026e ತ್ಯಕ್ತವ್ಯಃ ಸ ದುರಾಚಾರಃ ಸರ್ವೇಷಾಮಿತಿ ನಿಶ್ಚಯಃ||

ಅನಘ! ನಾನು ಯಾವ ದೋಷಸಮಾಯುಕ್ತ ನರರ ಕುರಿತು ಹೇಳಿದೆನೋ ಅವರಲ್ಲಿಯೇ ಅತ್ಯಂತ ಅಧಮನು ಕೃತಘ್ನ ಮತ್ತು ಮಿತ್ರಘಾತಕನು. ಈ ದುರಾಚಾರಿಯನ್ನು ಎಲ್ಲರಕ್ಕಿಂತಲೂ ದೂರವಿಡಬೇಕು. ಇದು ಎಲ್ಲ ಶಾಸ್ತ್ರಗಳ ನಿಶ್ಚಯವು.”

12162027 ಯುಧಿಷ್ಠಿರ ಉವಾಚ|

12162027a ವಿಸ್ತರೇಣಾರ್ಥಸಂಬಂಧಂ ಶ್ರೋತುಮಿಚ್ಚಾಮಿ ಪಾರ್ಥಿವ|

12162027c ಮಿತ್ರದ್ರೋಹೀ ಕೃತಘ್ನಶ್ಚ ಯಃ ಪ್ರೋಕ್ತಸ್ತಂ ಚ ಮೇ ವದ||

ಯುಧಿಷ್ಠಿರನು ಹೇಳಿದನು: “ಪಾರ್ಥಿವ! ಮಿತ್ರದ್ರೋಹೀ ಮತ್ತು ಕೃತಘ್ನ ಎಂದು ನೀನು ಹೇಳಿದೆಯಲ್ಲ ಅದರ ಯಥಾರ್ಥ ಇತಿಹಾಸವೇನು? ಇದರ ಅರ್ಥಸಂಬಂಧವನ್ನು ವಿಸ್ತಾರದಿಂದ ಕೇಳಬೇಕೆಂದು ಬಯಸುತ್ತೇನೆ. ಅದರ ಕುರಿತು ನನಗೆ ಹೇಳು.”

12162028 ಭೀಷ್ಮ ಉವಾಚ|

12162028a ಹಂತ ತೇ ವರ್ತಯಿಷ್ಯೇಽಹಮಿತಿಹಾಸಂ ಪುರಾತನಮ್|

12162028c ಉದೀಚ್ಯಾಂ ದಿಶಿ ಯದ್ವೃತ್ತಂ ಮ್ಲೇಚ್ಚೇಷು ಮನುಜಾಧಿಪ||

ಭೀಷ್ಮನು ಹೇಳಿದನು: “ಮನುಜಾಧಿಪ! ನಿಲ್ಲು! ನಿನಗೆ ನಾನು ಉತ್ತರ ದಿಕ್ಕಿನ ಮ್ಲೇಚ್ಛ ದೇಶದಲ್ಲಿ ನಡೆದ ಈ ಪುರಾತನ ಇತಿಹಾಸವನ್ನು ಹೇಳುತ್ತೇನೆ.

12162029a ಬ್ರಾಹ್ಮಣೋ ಮಧ್ಯದೇಶೀಯಃ ಕೃಷ್ಣಾಂಗೋ[7] ಬ್ರಹ್ಮವರ್ಜಿತಃ|

12162029c ಗ್ರಾಮಂ ಪ್ರೇಕ್ಷ್ಯ ಜನಾಕೀರ್ಣಂ[8] ಪ್ರಾವಿಶದ್ ಭೈಕ್ಷಕಾಂಕ್ಷಯಾ||

ವೇದವರ್ಜಿತನಾದ ಮಧ್ಯದೇಶೀಯ ಕೃಷ್ಣಾಂಗ ಬ್ರಾಹ್ಮಣನೋರ್ವನು ಜನಸಂಪನ್ನ ಗ್ರಾಮವನ್ನು ನೋಡಿ ಭಿಕ್ಷೆಗಾಗಿ ಅದನ್ನು ಪ್ರವೇಶಿಸಿದನು.

12162030a ತತ್ರ ದಸ್ಯುರ್ಧನಯುತಃ ಸರ್ವವರ್ಣವಿಶೇಷವಿತ್|

12162030c ಬ್ರಹ್ಮಣ್ಯಃ ಸತ್ಯಸಂಧಶ್ಚ ದಾನೇ ಚ ನಿರತೋಽಭವತ್||

ಅಲ್ಲಿ ಸರ್ವವರ್ಣದವರ ವಿಶೇಷಗಳನ್ನೂ ತಿಳಿದಿದ್ದ ಧನವಾನ ದಸ್ಯುವೋರ್ವನಿದ್ದನು. ಅವನು ಬ್ರಹ್ಮಣ್ಯನೂ, ಸತ್ಯಸಂಧನೂ, ದಾನಪರಾಯಣನೂ ಆಗಿದ್ದನು.

12162031a ತಸ್ಯ ಕ್ಷಯಮುಪಾಗಮ್ಯ ತತೋ ಭಿಕ್ಷಾಮಯಾಚತ|

12162031c ಪ್ರತಿಶ್ರಯಂ ಚ ವಾಸಾರ್ಥಂ ಭಿಕ್ಷಾಂ ಚೈವಾಥ ವಾರ್ಷಿಕೀಮ್||

12162032a ಪ್ರಾದಾತ್ತಸ್ಮೈ ಸ ವಿಪ್ರಾಯ ವಸ್ತ್ರಂ ಚ ಸದೃಶಂ ನವಮ್|

12162032c ನಾರೀಂ ಚಾಪಿ ವಯೋಪೇತಾಂ ಭರ್ತ್ರಾ ವಿರಹಿತಾಂ ತದಾ||

ಬ್ರಾಹ್ಮಣನು ಅವನ ಮನೆಗೆ ಹೋಗಿ ಭಿಕ್ಷೆಯನ್ನು ಬೇಡಿದನು. ದಸ್ಯುವು ಬ್ರಾಹ್ಮಣನಿಗೆ ವಾಸಿಸಲು ಮನೆ, ಒಂದು ವರ್ಷಕ್ಕೆ ಸಾಕಾಗುವಷ್ಟು ಭಿಕ್ಷೆ, ಹೊಸ ವಸ್ತ್ರಗಳು, ಮತ್ತು ಅವನ ಸೇವೆಯಲ್ಲಿ ಪತಿಯನ್ನು ಬಿಟ್ಟಿದ್ದ ಓರ್ವ ಯುವತಿ ದಾಸಿಯನ್ನೂ ನೀಡಿದನು.

12162033a ಏತತ್ಸಂಪ್ರಾಪ್ಯ ಹೃಷ್ಟಾತ್ಮಾ ದಸ್ಯೋಃ ಸರ್ವಂ ದ್ವಿಜಸ್ತದಾ|

12162033c ತಸ್ಮಿನ್ಗೃಹವರೇ ರಾಜಂಸ್ತಯಾ ರೇಮೇ ಸ ಗೌತಮಃ||

ರಾಜನ್! ದಸ್ಯುವಿನಿಂದ ಈ ಎಲ್ಲವನ್ನೂ ಪಡೆದುಕೊಂಡು ದ್ವಿಜ ಗೌತಮನು ಹೃಷ್ಟಾತ್ಮನಾಗಿ ಆ ಸುಂದರ ಮನೆಯಲ್ಲಿ ದಾಸಿಯೊಂದಿಗೆ ಆನಂದದಿಂದ ಇರತೊಡಗಿದನು.

12162034a ಕುಟುಂಬಾರ್ಥೇಷು ದಸ್ಯೋಃ ಸ[9] ಸಾಹಾಯ್ಯಂ ಚಾಪ್ಯಥಾಕರೋತ್|

12162034c ತತ್ರಾವಸತ್ಸೋಽಥ ವರ್ಷಾಃ ಸಮೃದ್ಧೇ ಶಬರಾಲಯೇ|

12162034e ಬಾಣವೇಧ್ಯೇ ಪರಂ ಯತ್ನಮಕರೋಚ್ಚೈವ ಗೌತಮಃ||

ಅವನು ದಸ್ಯುವಿನ ಕುಟುಂಬಕ್ಕೂ ಸ್ವಲ್ಪ ಸಹಾಯವನ್ನು ಮಾಡತೊಡಗಿದನು. ಆ ಸಮೃದ್ಧ ಶಬರಾಲಯದಲ್ಲಿ ಅವನು ಅನೇಕ ವರ್ಷಗಳು ವಾಸಿಸಿದನು ಮತ್ತು ಆ ಗೌತಮನು ಬಾಣಪ್ರಯೋಗಮಾಡಿ ಲಕ್ಷ್ಯವನ್ನು ಭೇದಿಸುವುದನ್ನು ಪ್ರಯತ್ನಪಟ್ಟು ಅಭ್ಯಾಸಮಾಡಿಕೊಂಡನು.

12162035a ವಕ್ರಾಂಗಾಂಸ್ತು ಸ ನಿತ್ಯಂ ವೈ[10] ಸರ್ವತೋ ಬಾಣಗೋಚರೇ|

12162035c ಜಘಾನ ಗೌತಮೋ ರಾಜನ್ಯಥಾ ದಸ್ಯುಗಣಸ್ತಥಾ||

ರಾಜನ್! ದಸ್ಯುಗಣದಂತೆ ಗೌತಮನೂ ಕೂಡ ನಿತ್ಯವೂ ಎಲ್ಲಕಡೆ ಸುತ್ತಾಡಿ ಬಾಣಕ್ಕೆ ಸಿಗುವ ಹಂಸಗಳನ್ನು ಕೊಲ್ಲುತ್ತಿದ್ದನು.

12162036a ಹಿಂಸಾಪರೋ ಘೃಣಾಹೀನಃ ಸದಾ ಪ್ರಾಣಿವಧೇ ರತಃ|

12162036c ಗೌತಮಃ ಸಂನಿಕರ್ಷೇಣ ದಸ್ಯುಭಿಃ ಸಮತಾಮಿಯಾತ್||

ಹಿಂಸಾಪರನಾಗಿ ಸ್ವಲ್ಪವೂ ದಯೆಯಿಲ್ಲದವನಾಗಿ ಆ ಗೌತಮನು ಸದಾ ಪ್ರಾಣಿವಧೆಯಲ್ಲಿಯೇ ನಿರತನಾದನು. ದಸ್ಯುಗಳ ಸಂಪರ್ಕದಲ್ಲಿದ್ದ ಅವನೂ ಕೂಡ ಅವರಂತೆಯೇ ಸಂಪೂರ್ಣವಾಗಿ ದಸ್ಯುವೇ ಆಗಿಬಿಟ್ಟನು.

12162037a ತಥಾ ತು ವಸತಸ್ತಸ್ಯ ದಸ್ಯುಗ್ರಾಮೇ ಸುಖಂ ತದಾ|

12162037c ಅಗಚ್ಚನ್ಬಹವೋ ಮಾಸಾ ನಿಘ್ನತಃ ಪಕ್ಷಿಣೋ ಬಹೂನ್||

ಹಾಗೆಯೇ ಅನೇಕ ಪಕ್ಷಿಗಳನ್ನು ಕೊಲ್ಲುತ್ತಾ ಅವನು ಆ ದಸ್ಯುಗ್ರಾಮದಲ್ಲಿ ಸುಖವಾಗಿ ವಾಸಿಸುತ್ತಿರಲು ಅನೇಕ ಮಾಸಗಳೇ ಕಳೆದುಹೋದವು.

12162038a ತತಃ ಕದಾ ಚಿದಪರೋ ದ್ವಿಜಸ್ತಂ ದೇಶಮಾಗಮತ್|

12162038c ಜಟೀ ಚೀರಾಜಿನಧರಃ ಸ್ವಾಧ್ಯಾಯಪರಮಃ ಶುಚಿಃ||

ಆಗ ಒಮ್ಮೆ ಯಾವನೋ ಒಬ್ಬ ಅನ್ಯ ಬ್ರಾಹ್ಮಣನು ಆ ಪ್ರದೇಶಕ್ಕೆ ಆಗಮಿಸಿದನು. ಅವನು ಜಟೆ ಚೀರ-ಜಿನಗಳನ್ನು ಧರಿಸಿದ್ದನು. ಸ್ವಾಧ್ಯಾಯಿಯಾದ ಅವನು ಪರಮ ಶುಚಿಯಾಗಿದ್ದನು.

12162039a ವಿನೀತೋ ನಿಯತಾಹಾರೋ ಬ್ರಹ್ಮಣ್ಯೋ ವೇದಪಾರಗಃ|

12162039c ಸಬ್ರಹ್ಮಚಾರೀ ತದ್ದೇಶ್ಯಃ ಸಖಾ ತಸ್ಯೈವ ಸುಪ್ರಿಯಮ್|

12162039e ತಂ ದಸ್ಯುಗ್ರಾಮಮಗಮದ್ಯತ್ರಾಸೌ ಗೌತಮೋಽಭವತ್||

ಅವನು ವಿನೀತನೂ, ನಿಯತಾಹಾರಿಯೂ, ಬ್ರಹ್ಮಣ್ಯನೂ ಮತ್ತು ವೇದಪಾರಂಗತನೂ ಆಗಿದ್ದನು. ಆ ಬ್ರಹ್ಮಚಾರಿಯು ಗೌತಮನ ಊರಿನವನೇ ಆಗಿದ್ದನು ಮತ್ತು ಅವನಿಗೆ ಪ್ರಿಯನಾದ ಸಖನೂ ಆಗಿದ್ದನು. ಅವನು ಗೌತಮನು ಎಲ್ಲಿ ವಾಸಿಸುತ್ತಿದ್ದನೋ ಅದೇ ದಸ್ಯುಗ್ರಾಮಕ್ಕೆ ಆಗಮಿಸಿದನು.

12162040a ಸ ತು ವಿಪ್ರಗೃಹಾನ್ವೇಷೀ ಶೂದ್ರಾನ್ನಪರಿವರ್ಜಕಃ|

12162040c ಗ್ರಾಮೇ ದಸ್ಯುಜನಾಕೀರ್ಣೇ ವ್ಯಚರತ್ಸರ್ವತೋದಿಶಮ್||

ಶೂದ್ರರ ಅನ್ನವನ್ನು ಪರಿತ್ಯಜಿಸಿದ್ದ ಅವನು ವಿಪ್ರರ ಮನೆಯನ್ನು ಹುಡುಕುತ್ತಾ ಆ ದಸ್ಯುಜನರು ತುಂಬಿದ್ದ ಆ ಗ್ರಾಮದಲ್ಲಿ ಎಲ್ಲ ಕಡೆ ಸುತ್ತಾಡುತ್ತಿದ್ದನು.

12162041a ತತಃ ಸ ಗೌತಮಗೃಹಂ ಪ್ರವಿವೇಶ ದ್ವಿಜೋತ್ತಮಃ|

12162041c ಗೌತಮಶ್ಚಾಪಿ ಸಂಪ್ರಾಪ್ತಸ್ತಾವನ್ಯೋನ್ಯೇನ ಸಂಗತೌ||

ಆಗ ಆ ದ್ವಿಜೋತ್ತಮನು ಗೌತಮನ ಮನೆಯನ್ನು ಪ್ರವೇಶಿಸಿದನು. ಅಷ್ಟರಲ್ಲಿಯೇ ಗೌತಮನೂ ಕೂಡ ಬೇಟೆಯಾಡಿ ಮನೆಗೆ ತಲುಪಿದ್ದನು. ಅಲ್ಲಿ ಪರಸ್ಪರರ ಭೇಟಿಯಾಯಿತು.

12162042a ವಕ್ರಾಂಗಭಾರಹಸ್ತಂ[11] ತಂ ಧನುಷ್ಪಾಣಿಂ ಕೃತಾಗಸಮ್[12]|

12162042c ರುಧಿರೇಣಾವಸಿಕ್ತಾಂಗಂ ಗೃಹದ್ವಾರಮುಪಾಗತಮ್||

12162043a ತಂ ದೃಷ್ಟ್ವಾ ಪುರುಷಾದಾಭಮಪಧ್ವಸ್ತಂ ಕ್ಷಯಾಗತಮ್|

12162043c ಅಭಿಜ್ಞಾಯ ದ್ವಿಜೋ ವ್ರೀಡಾಮಗಮದ್ವಾಕ್ಯಮಾಹ ಚ||

ಮನೆಯ ದ್ವಾರದಲ್ಲಿದ್ದ ಅವನು ಹಂಸಗಳ ಮೃತದೇಹಗಳನ್ನು ಹಿಡಿದಿದ್ದನು. ಧನುಷ್ಪಾಣಿಯಾಗಿದ್ದನು ರಕ್ತದಿಂದ ಅವನ ಶರೀರವು ತೋಯ್ದುಹೋಗಿತ್ತು. ನರಭಕ್ಷಕಣಂತೆ ಕಾಣುತ್ತಿದ್ದ ಅವನು ಬ್ರಾಹ್ಮಣತ್ವದಿಂದ ಭ್ರಷ್ಟನಾಗಿಬಿಟ್ಟಿದ್ದನು. ಅವನನ್ನು ಆ ಅವಸ್ಥೆಯಲ್ಲಿ ನೋಡಿದ ಬ್ರಾಹ್ಮಣನು ಅವನನ್ನು ಗುರುತಿಸಿ ಬಹಳ ಲಜ್ಜಿತನಾಗಿ ಅವನಿಗೆ ಈ ರೀತಿ ಹೇಳಿದನು:

12162044a ಕಿಮಿದಂ ಕುರುಷೇ ಮೌಢ್ಯಾದ್ವಿಪ್ರಸ್ತ್ವಂ ಹಿ ಕುಲೋದ್ಗತಃ|

12162044c ಮಧ್ಯದೇಶಪರಿಜ್ಞಾತೋ ದಸ್ಯುಭಾವಂ ಗತಃ ಕಥಮ್||

“ಮೂಢತನದಿಂದ ನೀನು ಇದೇನು ಮಾಡುತ್ತಿರುವೆ? ನೀನಾದರೋ ಮಧ್ಯದೇಶದ ವಿಖ್ಯಾತ ಮತ್ತು ಕುಲೀನ ಬ್ರಾಹ್ಮಣನಾಗಿದ್ದೆ. ಇಲ್ಲಿ ದಸ್ಯುಭಾವವನ್ನು ಹೇಗೆ ಪಡೆದುಕೊಂಡೆ?

12162045a ಪೂರ್ವಾನ್ಸ್ಮರ ದ್ವಿಜಾಗ್ರ್ಯಾಂಸ್ತಾನ್ಪ್ರಖ್ಯಾತಾನ್ವೇದಪಾರಗಾನ್|

12162045c ಯೇಷಾಂ ವಂಶೇಽಭಿಜಾತಸ್ತ್ವಮೀದೃಶಃ ಕುಲಪಾಂಸನಃ||

ಯಾರ ವಂಶದಲ್ಲಿ ನೀನು ಹುಟ್ಟಿದ್ದೆಯೋ ಆ ಪೂರ್ವಜ ಪ್ರಖ್ಯಾತ ವೇದಪಾರಂಗತ ದ್ವಿಜಾಗ್ರರನ್ನು ಸ್ಮರಿಸಿಕೋ! ಅಂಥವರ ಕುಲದಲ್ಲಿ ಹುಟ್ಟಿದ ನೀನು ಈ ರೀತಿ ಕುಲಪಾಂಸಕನಾಗಿಬಿಟ್ಟೆಯಲ್ಲ!

12162046a ಅವಬುಧ್ಯಾತ್ಮನಾತ್ಮಾನಂ ಸತ್ಯಂ ಶೀಲಂ ಶ್ರುತಂ ದಮಮ್|

12162046c ಅನುಕ್ರೋಶಂ ಚ ಸಂಸ್ಮೃತ್ಯ ತ್ಯಜ ವಾಸಮಿಮಂ ದ್ವಿಜ||

ಈಗಲಾದರೂ ನಿನ್ನನ್ನು ನೀನು ಗುರುತಿಸಿಕೊಳ್ಳು! ನೀನು ದ್ವಿಜ. ಆದುದರಿಂದ ದ್ವಿಜೋಚಿತ ಸತ್ಯ, ಶೀಲ, ಶಾಸ್ತ್ರಜ್ಞಾನ, ಸಂಯಮ, ಅನುಕ್ರೋಶ ಇವುಗಳನ್ನು ನೆನಪಿಸಿಕೊಂಡು ಈ ನಿವಾಸಸ್ಥಾನವನ್ನು ತೊರೆ.”

12162047a ಏವಮುಕ್ತಃ ಸ ಸುಹೃದಾ ತದಾ ತೇನ ಹಿತೈಷಿಣಾ|

12162047c ಪ್ರತ್ಯುವಾಚ ತತೋ ರಾಜನ್ವಿನಿಶ್ಚಿತ್ಯ ತದಾರ್ತವತ್||

ರಾಜನ್! ತನ್ನ ಹಿತೈಷೀ ಸುಹೃದನು ಹೀಗೆ ಹೇಳಲು ಆರ್ತನಾಗಿ ಯೋಚಿಸಿ ಗೌತಮನು ಇಂತೆಂದನು:

12162048a ಅಧನೋಽಸ್ಮಿ ದ್ವಿಜಶ್ರೇಷ್ಠ ನ ಚ ವೇದವಿದಪ್ಯಹಮ್|

12162048c ವೃತ್ತ್ಯರ್ಥಮಿಹ[13] ಸಂಪ್ರಾಪ್ತಂ ವಿದ್ಧಿ ಮಾಂ ದ್ವಿಜಸತ್ತಮ||

“ದ್ವಿಜಶ್ರೇಷ್ಠ! ನಾನು ನಿರ್ಧನನು ಮತ್ತು ವೇದಗಳನ್ನೂ ಅರಿತವನಲ್ಲ. ದ್ವಿಜಸತ್ತಮ! ವೃತ್ತಿಗೋಸ್ಕರವಾಗಿ ನಾನು ಇಲ್ಲಿಗೆ ಬಂದಿದ್ದೆನು ಎಂದು ತಿಳಿ.

12162049a ತ್ವದ್ದರ್ಶನಾತ್ತು ವಿಪ್ರರ್ಷೇ ಕೃತಾರ್ಥಂ ವೇದ್ಮ್ಯಹಂ ದ್ವಿಜ|

12162049c ಆತ್ಮಾನಂ ಸಹ ಯಾಸ್ಯಾವಃ ಶ್ವೋ ವಸಾದ್ಯೇಹ ಶರ್ವರೀಮ್[14]||

ವಿಪ್ರರ್ಷೇ! ದ್ವಿಜ!  ನಿನ್ನ ದರ್ಶನದಿಂದ ಇಂದು ನಾನು ಕೃತಾರ್ಥನಾದೆನು. ಇಂದಿನ ರಾತ್ರಿಯನ್ನು ಇಲ್ಲಿಯೇ ಕಳೆಯಬೇಕು. ನಾಳೆ ಬೆಳಿಗ್ಗೆ ಇಬ್ಬರೂ ಒಟ್ಟಿಗೇ ಹೊರಡೋಣ.””

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಆಪದ್ಧರ್ಮಪರ್ವಣಿ ಕೃತಘ್ನೋಪಾಖ್ಯಾನೇ ದ್ವಾಷಷ್ಟ್ಯಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಆಪದ್ಧರ್ಮಪರ್ವದಲ್ಲಿ ಕೃತಘ್ನೋಪಾಖ್ಯಾನ ಎನ್ನುವ ನೂರಾಅರವತ್ತೆರಡನೇ ಅಧ್ಯಾಯವು.

[1] ಕ್ರುಷ್ಟೋ (ಗೀತಾ ಪ್ರೆಸ್).

[2] ಮಿತ್ರೈರಪಕೃತಿಃ (ಗೀತಾ ಪ್ರೆಸ್).

[3] ದದತಶ್ಚ (ಗೀತಾ ಪ್ರೆಸ್).

[4] ಸನ್ಮಿತ್ರಾಶ್ಚ (ಗೀತಾ ಪ್ರೆಸ್).

[5] ಲೋಭವರ್ಜಿತಾಃ (ಗೀತಾ ಪ್ರೆಸ್).

[6] ಕುಲಪುತ್ರಾಃ ಕುಲೋದ್ದಹಾಃ| (ಗೀತಾ ಪ್ರೆಸ್).

[7] ಕಶ್ಚಿದ್ ವೈ (ಗೀತಾ ಪ್ರೆಸ್).

[8] ಗ್ರಾಮಂ ವೃದ್ಧಿಯುತಂ ವೀಕ್ಷ್ಯ (ಗೀತಾ ಪ್ರೆಸ್).

[9] ಕುಟುಂಬಾರ್ಥಂ ಚ ದಾಸ್ಯಾಶ್ಚ (ಗೀತಾ ಪ್ರೆಸ್).

[10] ಚಕ್ರಾಂಗಾನ್ಸ ಚ ನಿತ್ಯಂ ವೈ (ಗೀತಾ ಪ್ರೆಸ್).

[11] ಚಕ್ರಾಂಗಭಾರಸ್ಕಂಧಂ (ಗೀತಾ ಪ್ರೆಸ್).

[12] ಧೃತಾಯುಧಮ್| (ಗೀತಾ ಪ್ರೆಸ್).

[13] ವಿತಾರ್ಥಮಿಹ (ಗೀತಾ ಪ್ರೆಸ್).

[14] ಇದರ ನಂತರ ಈ ಒಂದು ಅಧಿಕ ಶ್ಲೋಕವಿದೆ: ಸ ತತ್ರ ನ್ಯವಸದ್ವಿಪ್ರೋ ಘೃಣೀ ಕಿಂಚಿದಸಂಸ್ಪೃಷನ್| ಕ್ಷುದಸ್ಚಂದ್ಯಮಾನೋಽಪಿ ಭೋಜನಂ ನಾಭ್ಯನಂದತ|| (ಗೀತಾ ಪ್ರೆಸ್).

Comments are closed.