Shanti Parva: Chapter 161

ಶಾಂತಿ ಪರ್ವ: ಆಪದ್ಧರ್ಮ ಪರ್ವ

೧೬೧

ಷಡ್ಜಗೀತಾ

ಧರ್ಮಾರ್ಥಕಾಮಗಳ ವಿಷಯದಲ್ಲಿ ವಿದುರ-ಪಾಂಡವರ ಪ್ರತ್ಯೇಕ ವಿಚಾರಗಳು ಮತ್ತು ಅಂತ್ಯದಲ್ಲಿ ಯುಧಿಷ್ಠಿರನ ನಿರ್ಣಯ (೧-೪೮).

12161001 ವೈಶಂಪಾಯನ ಉವಾಚ|

12161001a ಇತ್ಯುಕ್ತವತಿ ಭೀಷ್ಮೇ ತು ತೂಷ್ಣೀಂಭೂತೇ ಯುಧಿಷ್ಠಿರಃ|

12161001c ಪಪ್ರಚ್ಚಾವಸರಂ ಗತ್ವಾ[1] ಭ್ರಾತೃನ್ವಿದುರಪಂಚಮಾನ್||

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಭೀಷ್ಮನು ಸುಮ್ಮನಾಗಲು ಯುಧಿಷ್ಠಿರನು ಆ ಸಮಯದಲ್ಲಿ ತನ್ನ ಐವರು ಸಹೋದರರು ಮತ್ತು ವಿದುರನ ಬಳಿಸಾರಿ ಕೇಳಿದನು:

12161002a ಧರ್ಮೇ ಚಾರ್ಥೇ ಚ ಕಾಮೇ ಚ ಲೋಕವೃತ್ತಿಃ ಸಮಾಹಿತಾ|

12161002c ತೇಷಾಂ ಗರೀಯಾನ್ಕತಮೋ ಮಧ್ಯಮಃ ಕೋ ಲಘುಶ್ಚ ಕಃ||

“ಜನರ ಪ್ರವೃತ್ತಿಯು ಸಾಮಾನ್ಯವಾಗಿ ಧರ್ಮ, ಅರ್ಥ, ಮತ್ತು ಕಾಮಗಳಲ್ಲಿಯೇ ನೆಲೆಸಿದೆ. ಈ ಮೂರರಲ್ಲಿ ಗರಿಷ್ಠವಾದುದು ಯಾವುದು? ಮಧ್ಯಮವಾದುದು ಯಾವುದು? ಮತ್ತು ಕನಿಷ್ಠವಾದುದು ಯಾವುದು?

12161003a ಕಸ್ಮಿಂಶ್ಚಾತ್ಮಾ ನಿಯಂತವ್ಯಸ್ತ್ರಿವರ್ಗವಿಜಯಾಯ ವೈ|

12161003c ಸಂತುಷ್ಟಾ ನೈಷ್ಠಿಕಂ ವಾಕ್ಯಂ ಯಥಾವದ್ವಕ್ತುಮರ್ಹಥ||

ಧರ್ಮ-ಅರ್ಥ-ಕಾಮಗಳೆಂಬ ಈ ತ್ರಿವರ್ಗವನ್ನು ಜಯಿಸಲಿಚ್ಛಿಸುವವನು ಯಾವುದರ ಮೇಲೆ ಮನಸ್ಸನ್ನಿಡಬೇಕು? ಹರ್ಷೋತ್ಸಾಹಗಳಿಂದ ಕೂಡಿರುವ ನೀವು ಯಥಾವತ್ತಾಗಿ ಈ ಪ್ರಶ್ನೆಗೆ ಉತ್ತರವನ್ನು ನೀಡಬೇಕು ಮತ್ತು ನಿಮಗೆ ಸಂಪೂರ್ಣ ನಿಷ್ಠೆಯಿದ್ದ ವಿಷಯವನ್ನೇ ಹೇಳಬೇಕು.”

12161004a ತತೋಽರ್ಥಗತಿತತ್ತ್ವಜ್ಞಃ ಪ್ರಥಮಂ ಪ್ರತಿಭಾನವಾನ್|

12161004c ಜಗಾದ ವಿದುರೋ ವಾಕ್ಯಂ ಧರ್ಮಶಾಸ್ತ್ರಮನುಸ್ಮರನ್||

ಆಗ ಮೊದಲು ಅರ್ಥಗತಿತತ್ತ್ವಜ್ಞ ಪ್ರತಿಭಾವಂತ ವಿದುರನು ಧರ್ಮಶಾಸ್ತ್ರಗಳನ್ನು ಸ್ಮರಿಸಿಕೊಂಡು ಈ ಮಾತನ್ನಾಡಿದನು:

12161005a ಬಾಹುಶ್ರುತ್ಯಂ ತಪಸ್ತ್ಯಾಗಃ ಶ್ರದ್ಧಾ ಯಜ್ಞಕ್ರಿಯಾ ಕ್ಷಮಾ|

12161005c ಭಾವಶುದ್ಧಿರ್ದಯಾ ಸತ್ಯಂ ಸಂಯಮಶ್ಚಾತ್ಮಸಂಪದಃ||

“ಅನೇಕ ಶಾಸ್ತ್ರಗಳ ಅನುಶೀಲನೆ, ತಪಸ್ಸು, ತ್ಯಾಗ, ಶ್ರದ್ಧೆ, ಯಜ್ಞಕರ್ಮಗಳು, ಕ್ಷಮೆ, ಭಾವಶುದ್ಧಿ, ದಯೆ, ಸತ್ಯ ಮತ್ತು ಸಂಯಮಗಳು ಆತ್ಮಸಂಪತ್ತುಗಳು.

12161006a ಏತದೇವಾಭಿಪದ್ಯಸ್ವ ಮಾ ತೇ ಭೂಚ್ಚಲಿತಂ ಮನಃ|

12161006c ಏತನ್ಮೂಲೌ ಹಿ ಧರ್ಮಾರ್ಥಾವೇತದೇಕಪದಂ ಹಿತಮ್||

ನೀನು ಇವುಗಳನ್ನೇ ಸಾಧಿಸು. ಇವುಗಳಿಂದ ನಿನ್ನ ಮನಸ್ಸು ವಿಚಲಿತವಾಗದಿರಲಿ. ಇವೇ ಧರ್ಮಾರ್ಥಗಳಿಗೆ ಮೂಲಕಾರಣಗಳಾಗಿವೆ. ನನ್ನ ಅಭಿಪ್ರಾಯದಲ್ಲಿ ಇದೇ ಒಂದು ಪರಮ ಹಿತಕರವಾದುದು.

12161007a ಧರ್ಮೇಣೈವರ್ಷಯಸ್ತೀರ್ಣಾ ಧರ್ಮೇ ಲೋಕಾಃ ಪ್ರತಿಷ್ಠಿತಾಃ|

12161007c ಧರ್ಮೇಣ ದೇವಾ ದಿವಿಗಾ[2] ಧರ್ಮೇ ಚಾರ್ಥಃ ಸಮಾಹಿತಃ||

ಧರ್ಮದಿಂದಲೇ ಋಷಿಗಳು ಸಂಸಾರಸಾಗರವನ್ನು ಪಾರುಮಾಡಿದ್ದಾರೆ. ಧರ್ಮದ ಮೇಲೆಯೇ ಲೋಕಗಳೆಲ್ಲವೂ ಪ್ರತಿಷ್ಠಿತವಾಗಿವೆ. ಧರ್ಮದಿಂದಲೇ ದೇವತೆಗಳು ದಿವಿಗರಾದರು ಮತ್ತು ಧರ್ಮದಲ್ಲಿಯೇ ಅರ್ಥವೂ ಒಳಗೊಂಡಿದೆ.

12161008a ಧರ್ಮೋ ರಾಜನ್ಗುಣಶ್ರೇಷ್ಠೋ ಮಧ್ಯಮೋ ಹ್ಯರ್ಥ ಉಚ್ಯತೇ|

12161008c ಕಾಮೋ ಯವೀಯಾನಿತಿ ಚ ಪ್ರವದಂತಿ ಮನೀಷಿಣಃ|

12161008e ತಸ್ಮಾದ್ಧರ್ಮಪ್ರಧಾನೇನ ಭವಿತವ್ಯಂ ಯತಾತ್ಮನಾ[3]||

ರಾಜನ್! ಧರ್ಮವೇ ಶ್ರೇಷ್ಠ ಗುಣವು. ಅರ್ಥವು ಮಧ್ಯಮ ಎಂದು ಹೇಳಿದ್ದಾರೆ. ಕಾಮವು ಇವೆರಡಕ್ಕಿಂತಲೂ ಹೀನವಾದುದು ಎಂದು ಮನೀಷಿಣರು ಹೇಳುತ್ತಾರೆ. ಆದುದರಿಂದ ಯತಾತ್ಮನಾಗಿದ್ದುಕೊಂಡು ಧರ್ಮವನ್ನೇ ತನ್ನ ಪ್ರಧಾನ ಧ್ಯೇಯವನ್ನಾಗಿರಿಸಿಕೊಳ್ಳಬೇಕು.”

12161009a ಸಮಾಪ್ತವಚನೇ ತಸ್ಮಿನ್ನರ್ಥಶಾಸ್ತ್ರವಿಶಾರದಃ|

12161009c ಪಾರ್ಥೋ ವಾಕ್ಯಾರ್ಥತತ್ತ್ವಜ್ಞೋ ಜಗೌ ವಾಕ್ಯಮತಂದ್ರಿತಃ[4]||

ಆ ಅರ್ಥಶಾಸ್ತ್ರವಿಶಾರದನು ತನ್ನ ಮಾತನ್ನು ಮುಗಿಸಲು ವಾಕ್ಯಾರ್ಥತತ್ತ್ವಜ್ಞನಾದ ಪಾರ್ಥನು ಆಲಸ್ಯವಿಲ್ಲದೇ ಈ ಮಾತನ್ನಾಡಿದನು:

12161010a ಕರ್ಮಭೂಮಿರಿಯಂ ರಾಜನ್ನಿಹ ವಾರ್ತ್ತಾ ಪ್ರಶಸ್ಯತೇ|

12161010c ಕೃಷಿವಾಣಿಜ್ಯಗೋರಕ್ಷ್ಯಂ ಶಿಲ್ಪಾನಿ ವಿವಿಧಾನಿ ಚ||

“ರಾಜನ್! ಇದು ಕರ್ಮಭೂಮಿಯು. ಇಲ್ಲಿ ಜೀವನಕ್ಕೆ ಸಾಧನಭೂತ ಕರ್ಮಗಳನ್ನೇ ಪ್ರಶಂಸಿಸುತ್ತಾರೆ. ಕೃಷಿ, ವಾಣಿಜ್ಯ, ಗೋರಕ್ಷೆ, ವಿವಿಧ ಶಿಲ್ಪಗಳು ಇವೆಲ್ಲವೂ ಜೀವನಕ್ಕೆ ಸಾಧನಭೂತ ಕರ್ಮಗಳಾಗಿವೆ.

12161011a ಅರ್ಥ ಇತ್ಯೇವ ಸರ್ವೇಷಾಂ ಕರ್ಮಣಾಮವ್ಯತಿಕ್ರಮಃ|

12161011c ನ ಋತೇಽರ್ಥೇನ ವರ್ತೇತೇ ಧರ್ಮಕಾಮಾವಿತಿ ಶ್ರುತಿಃ||

ಅರ್ಥವೇ ಸಮಸ್ತ ಕರ್ಮಗಳ ಮರ್ಯಾದೆಗಳನ್ನು ಪಾಲಿಸಲು ಸಹಾಯಕವಾಗುತ್ತದೆ. ಅರ್ಥವಿಲ್ಲದೇ ಧರ್ಮ-ಕಾಮಗಳೂ ಸಿದ್ಧಿಸುವುದಿಲ್ಲ ಎಂದು ಶ್ರುತಿವಾಕ್ಯವಿದೆ.

12161012a ವಿಜಯೀ[5] ಹ್ಯರ್ಥವಾನ್ಧರ್ಮಮಾರಾಧಯಿತುಮುತ್ತಮಮ್|

12161012c ಕಾಮಂ ಚ ಚರಿತುಂ ಶಕ್ತೋ ದುಷ್ಪ್ರಾಪಮಕೃತಾತ್ಮಭಿಃ||

ಇಂದ್ರಿಯ ವಿಜಯೀ ಅರ್ಥವಾನನು ಧರ್ಮವನ್ನು ಉತ್ತಮವಾಗಿ ಆರಾಧಿಸಲು ಶಕ್ತನಾಗುತ್ತಾನೆ. ಅಕೃತಾತ್ಮರೂ ಕೂಡ ಅರ್ಥವಾನರಾಗಿದ್ದರೆ ಪಡೆಯಲು ಕಷ್ಟವಾದ ಕಾಮನೆಗಳನ್ನೂ ಪೂರೈಸಿಕೊಳ್ಳಲು ಶಕ್ತರಾಗುತ್ತಾರೆ.

12161013a ಅರ್ಥಸ್ಯಾವಯವಾವೇತೌ ಧರ್ಮಕಾಮಾವಿತಿ ಶ್ರುತಿಃ|

12161013c ಅರ್ಥಸಿದ್ಧ್ಯಾ ಹಿ ನಿರ್ವೃತ್ತಾವುಭಾವೇತೌ ಭವಿಷ್ಯತಃ||

ಧರ್ಮ ಮತ್ತು ಕಾಮಗಳು ಅರ್ಥದ ಎರಡು ಅವಯವಗಳೆಂದು ಶ್ರುತಿಗಳು ಹೇಳುತ್ತವೆ. ಅರ್ಥಸಿದ್ಧಿಯಿಂದ ಇವೆರಡರ ನಿವೃತ್ತಿಯೂ ಆಗುತ್ತದೆ.

12161014a ಉದ್ಭೂತಾರ್ಥಂ ಹಿ ಪುರುಷಂ ವಿಶಿಷ್ಟತರಯೋನಯಃ|

12161014c ಬ್ರಹ್ಮಾಣಮಿವ ಭೂತಾನಿ ಸತತಂ ಪರ್ಯುಪಾಸತೇ||

ಸರ್ವಭೂತಗಳೂ ಸತತವೂ ಬ್ರಹ್ಮನನ್ನೇ ಉಪಾಸಿಸುವಂತೆ ಉತ್ತಮ ಜಾತಿಯ ಮನುಷ್ಯರು ಸದಾ ಧನವಾನ ಪುರುಷನನ್ನೇ ಗೌರವಿಸುತ್ತಾರೆ.

12161015a ಜಟಾಜಿನಧರಾ ದಾಂತಾಃ ಪಂಕದಿಗ್ಧಾ ಜಿತೇಂದ್ರಿಯಾಃ|

12161015c ಮುಂಡಾ ನಿಸ್ತಂತವಶ್ಚಾಪಿ ವಸಂತ್ಯರ್ಥಾರ್ಥಿನಃ ಪೃಥಕ್||

ಜಟಾಜಿನಧರರು, ದಾಂತರು, ಕೆಸರನ್ನು ಬಳಿದುಕೊಂಡಿರುವ ಜಿತೇಂದ್ರಿಯರು, ಸಂನ್ಯಾಸಿಗಳು, ನೈಷ್ಠಿಕ ಬ್ರಹ್ಮಚಾರಿಗಳು ಇವರೆಲ್ಲರೂ ಧನದ ಮೇಲಿನ ಅಭಿಲಾಷೆಯಿಂದ ಪ್ರತ್ಯೇಕ ಆಶ್ರಮಗಳನ್ನು ಕಲ್ಪಿಸಿಕೊಂಡಿರುತ್ತಾರೆ.

12161016a ಕಾಷಾಯವಸನಾಶ್ಚಾನ್ಯೇ ಶ್ಮಶ್ರುಲಾ ಹ್ರೀಸುಸಂವೃತಾಃ[6]|

12161016c ವಿದ್ವಾಂಸಶ್ಚೈವ ಶಾಂತಾಶ್ಚ ಮುಕ್ತಾಃ ಸರ್ವಪರಿಗ್ರಹೈಃ||

12161017a ಅರ್ಥಾರ್ಥಿನಃ ಸಂತಿ ಕೇ ಚಿದಪರೇ ಸ್ವರ್ಗಕಾಂಕ್ಷಿಣಃ|

12161017c ಕುಲಪ್ರತ್ಯಾಗಮಾಶ್ಚೈಕೇ ಸ್ವಂ ಸ್ವಂ ಮಾರ್ಗಮನುಷ್ಠಿತಾಃ||

ಸರ್ವಪರಿಗ್ರಹಗಳಿಂದ ಮುಕ್ತರಾದ ಕಾಷಾಯವಸ್ತ್ರಗಳನ್ನು ಧರಿಸಿದ, ಗಡ್ಡ-ಮೀಸೆಗಳನ್ನು ಬೆಳೆಸಿರುವ ಸಂಕೋಚಶೀಲ, ಶಾಂತ ವಿದ್ವಾಂಸರೂ ಕೂಡ ಹಣದ ಸಂಪಾದನೆಯಲ್ಲಿಯೇ ಆಸಕ್ತರಾಗಿರುತ್ತಾರೆ. ಕುಲಪರಂಪರಾಗತ ನಿಯಮಗಳನ್ನು ಪಾಲಿಸುತ್ತಾ ತಮ್ಮ ತಮ್ಮ ವರ್ಣಾಶ್ರಮಗಳ ಧರ್ಮಗಳನ್ನು ಪಾಲಿಸುವ ಇವರೆಲ್ಲರೂ ಧನಾರ್ಥಿಗಳೇ ಆಗಿರುತ್ತಾರೆ.

12161018a ಆಸ್ತಿಕಾ ನಾಸ್ತಿಕಾಶ್ಚೈವ ನಿಯತಾಃ ಸಂಯಮೇ ಪರೇ|

12161018c ಅಪ್ರಜ್ಞಾನಂ ತಮೋಭೂತಂ ಪ್ರಜ್ಞಾನಂ ತು ಪ್ರಕಾಶತಾ||

ಆಸ್ತಿಕರೂ ಇದ್ದಾರೆ. ನಾಸ್ತಿಕರೂ ಇದ್ದಾರೆ. ಸಂಯಮ-ನಿಯಮ ಪರಾಯಣರೂ ಇದ್ದಾರೆ. ಅವರೆಲ್ಲರೂ ಧನಾಭಿಲಾಷಿಗಳೇ ಆಗಿದ್ದಾರೆ. ನನ್ನ ಅಭಿಪ್ರಾಯದಲ್ಲಿ ಅರ್ಥದ ಪ್ರಾಧಾನ್ಯತೆಯನ್ನು ಮನಗಾಣದಿರುವುದು ತಮೋಮಯ ಅಜ್ಞಾನವು. ಅರ್ಥದ ಪ್ರಾಧಾನ್ಯತೆಯನ್ನು ಮನಗಾಣುವುದೇ ಪ್ರಕಾಶಮಯ ಪ್ರಜ್ಞಾನವು.

12161019a ಭೃತ್ಯಾನ್ಭೋಗೈರ್ದ್ವಿಷೋ ದಂಡೈರ್ಯೋ ಯೋಜಯತಿ ಸೋಽರ್ಥವಾನ್|

12161019c ಏತನ್ಮತಿಮತಾಂ ಶ್ರೇಷ್ಠ ಮತಂ ಮಮ ಯಥಾತಥಮ್|

12161019e ಅನಯೋಸ್ತು ನಿಬೋಧ ತ್ವಂ ವಚನಂ ವಾಕ್ಯಕಂಠಯೋಃ||

ಭೃತ್ಯರನ್ನು ಭೋಗೋಪಭೋಗಗಳಿಂದ ಸಲಹುವ ಮತ್ತು ಶತ್ರುಗಳನ್ನು ದಂಡಪ್ರಯೋಗದಿಂದ ತನ್ನ ಅಧೀನರನ್ನಾಗಿಸಿಕೊಳ್ಳುವವನೇ ಧನವಂತನು. ಮತಿಮತರಲ್ಲಿ ಶ್ರೇಷ್ಠ! ಇದು ನನ್ನ ಯಥಾವತ್ತಾದ ಅಭಿಪ್ರಾಯವಾಗಿದೆ. ಈಗ ಈ ಇಬ್ಬರು ತಮ್ಮಂದಿರು ಮಾತನಾಡಲು ಕುತೂಹಲವುಳ್ಳವರಾಗಿದ್ದಾರೆ. ಅವರ ಮಾತುಗಳು ಈಗಾಗಲೇ ಕಂಠದವರೆಗೆ ಬಂದುಬಿಟ್ಟಿವೆ. ಅವರು ಹೇಳುವ ಮಾತುಗಳನ್ನು ಕೇಳು.”

12161020a ತತೋ ಧರ್ಮಾರ್ಥಕುಶಲೌ ಮಾದ್ರೀಪುತ್ರಾವನಂತರಮ್|

12161020c ನಕುಲಃ ಸಹದೇವಶ್ಚ ವಾಕ್ಯಂ ಜಗದತುಃ ಪರಮ್||

ಅನಂತರ ಧರ್ಮಾರ್ಥಕುಶಲರಾದ ಮಾದ್ರೀಪುತ್ರರಾದ ನಕುಲ-ಸಹದೇವರು ಈ ಉತ್ತಮ ಮಾತುಗಳನ್ನಾಡಿದರು:

12161021a ಆಸೀನಶ್ಚ ಶಯಾನಶ್ಚ ವಿಚರನ್ನಪಿ ಚ ಸ್ಥಿತಃ|

12161021c ಅರ್ಥಯೋಗಂ ದೃಢಂ ಕುರ್ಯಾದ್ಯೋಗೈರುಚ್ಚಾವಚೈರಪಿ||

“ಮನುಷ್ಯನು ಕುಳಿತಿರುವಾಗಲೂ, ಮಲಗಿರುವಾಗಲೂ, ತಿರುಗಾಡುತ್ತಿರುವಾಗಲೂ, ನಿಂತಿರುವಾಗಲೂ – ಎಲ್ಲ ಸಮಯಗಳಲ್ಲಿಯೂ ಬಗೆ ಬಗೆಯ ಮಾರ್ಗಗಳಿಂದ ಧನಸಂಗ್ರಹವನ್ನೇ ದೃಢನಾಗಿ ಮಾಡುತ್ತಿರಬೇಕು.

12161022a ಅಸ್ಮಿಂಸ್ತು ವೈ ಸುಸಂವೃತ್ತೇ[7] ದುರ್ಲಭೇ ಪರಮಪ್ರಿಯೇ|

12161022c ಇಹ ಕಾಮಾನವಾಪ್ನೋತಿ ಪ್ರತ್ಯಕ್ಷಂ ನಾತ್ರ ಸಂಶಯಃ||

ಧನವು ಪರಮಪ್ರಿಯವಾಗಿದ್ದರೂ ಅತ್ಯಂತ ದುರ್ಲಭವು. ಅಂತಹ ಧನವು ಪ್ರಾಪ್ತವಾದರೆ ಮನುಷ್ಯನು ಇಲ್ಲಿ ಎಲ್ಲ ಕಾಮನೆಗಳನ್ನೂ ಪಡೆದುಕೊಳ್ಳುತ್ತಾನೆ. ಇದು ಪ್ರತ್ಯಕ್ಷವು. ಇದರಲ್ಲಿ ಯಾವ ಸಂಶಯವೂ ಇಲ್ಲ.

12161023a ಯೋಽರ್ಥೋ ಧರ್ಮೇಣ ಸಂಯುಕ್ತೋ ಧರ್ಮೋ ಯಶ್ಚಾರ್ಥಸಂಯುತಃ|

12161023c ಮಧ್ವಿವಾಮೃತಸಂಯುಕ್ತಂ ತಸ್ಮಾದೇತೌ ಮತಾವಿಹ||

ಧನವು ಧರ್ಮಯುಕ್ತವಾಗಿರಬೇಕು ಮತ್ತು ಧರ್ಮವೂ ಧನಯುಕ್ತವಾಗಿರಬೇಕು. ಇದೇ ಅಮೃತಯುಕ್ತವಾಗಿರುವುದು. ಆದುದರಿಂದ ಇವೆರಡೂ ಮುಖ್ಯವಾದವುಗಳು ಎನ್ನುವುದು ನಮ್ಮ ಅಭಿಪ್ರಾಯವಾಗಿದೆ.

12161024a ಅನರ್ಥಸ್ಯ ನ ಕಾಮೋಽಸ್ತಿ ತಥಾರ್ಥೋಽಧರ್ಮಿಣಃ ಕುತಃ|

12161024c ತಸ್ಮಾದುದ್ವಿಜತೇ ಲೋಕೋ ಧರ್ಮಾರ್ಥಾದ್ಯೋ ಬಹಿಷ್ಕೃತಃ||

ನಿರ್ಧನನಿಗೆ ಯಾವ ಕಾಮನೆಗಳೂ ಪೂರ್ಣವಾಗುವುದಿಲ್ಲ. ಹಾಗೆಯೇ ಧರ್ಮಹೀನನಾದವನಿಗೆ ಅರ್ಥವಾದರೂ ಹೇಗೆ ಲಭಿಸೀತು? ಧರ್ಮಯುಕ್ತ ಐಶ್ಚರ್ಯದಿಂದ ವಂಚಿತನಾದವನ ವಿಷಯದಲ್ಲಿ ಲೋಕವೇ ಉದ್ವಿಗ್ನವಾಗುತ್ತದೆ.

12161025a ತಸ್ಮಾದ್ಧರ್ಮಪ್ರಧಾನೇನ ಸಾಧ್ಯೋಽರ್ಥಃ ಸಂಯತಾತ್ಮನಾ|

12161025c ವಿಶ್ವಸ್ತೇಷು ಚ ಭೂತೇಷು ಕಲ್ಪತೇ ಸರ್ವ ಏವ ಹಿ||

ಆದುದರಿಂದ ಮನುಷ್ಯನು ಸಂಯತಾತ್ಮನಾಗಿ ಧರ್ಮವನ್ನೇ ಪ್ರಧಾನವಾಗಿಟ್ಟುಕೊಂಡು ಅರ್ಥಸಂಗ್ರಹಣೆಯನ್ನು ಮಾಡಬೇಕು. ಧರ್ಮಪರಾಯಣನಲ್ಲಿ ಎಲ್ಲಪ್ರಾಣಿಗಳೂ ವಿಶ್ವಾಸದಿಂದಿರುತ್ತವೆ. ಈ ವಿಶ್ವಾಸವನ್ನು ಗಳಿಸಿದ ನಂತರ ಎಲ್ಲ ಇಷ್ಟಾರ್ಥಗಳನ್ನೂ ಸಾಧಿಸಿಕೊಳ್ಳಬಹುದು.

12161026a ಧರ್ಮಂ ಸಮಾಚರೇತ್ಪೂರ್ವಂ ತಥಾರ್ಥಂ ಧರ್ಮಸಂಯುತಮ್|

12161026c ತತಃ ಕಾಮಂ ಚರೇತ್ಪಶ್ಚಾತ್ಸಿದ್ಧಾರ್ಥಸ್ಯ ಹಿ ತತ್ಫಲಮ್||

ಮೊದಲು ಧರ್ಮದಿಂದ ನಡೆದುಕೊಳ್ಳಬೇಕು. ಅನಂತರ ಧರ್ಮಸಂಯುತ ಧನವನ್ನು ಸಂಗ್ರಹಿಸಬೇಕು. ಅನಂತರ ಕಾಮನೆಗಳನ್ನು ಪೂರೈಸಿಕೊಳ್ಳಬೇಕು. ಹೀಗೆ ತ್ರಿವರ್ಗವನ್ನೂ ಸಂಗ್ರಹಿಸುವುದರಿಂದ ಮನುಷ್ಯನು ಸಿದ್ಧಾರ್ಥನಾಗುತ್ತಾನೆ.”

12161027a ವಿರೇಮತುಸ್ತು ತದ್ವಾಕ್ಯಮುಕ್ತ್ವಾ ತಾವಶ್ವಿನೋಃ ಸುತೌ|

12161027c ಭೀಮಸೇನಸ್ತದಾ ವಾಕ್ಯಮಿದಂ ವಕ್ತುಂ ಪ್ರಚಕ್ರಮೇ||

ಅಶ್ವಿನೀದೇವತೆಗಳ ಮಕ್ಕಳು ಈ ಮಾತನ್ನಾಡಿ ವಿರಮಿಸಿದ ನಂತರ ಭೀಮಸೇನನು ಈ ಮಾತನ್ನಾಡಲು ಪ್ರಾರಂಭಿಸಿದನು:

12161028a ನಾಕಾಮಃ ಕಾಮಯತ್ಯರ್ಥಂ ನಾಕಾಮೋ ಧರ್ಮಮಿಚ್ಚತಿ|

12161028c ನಾಕಾಮಃ ಕಾಮಯಾನೋಽಸ್ತಿ ತಸ್ಮಾತ್ಕಾಮೋ ವಿಶಿಷ್ಯತೇ||

“ಕಾಮವಿಲ್ಲದೇ ಇರುವವನು ಅರ್ಥವನ್ನೂ ಬಯಸುವುದಿಲ್ಲ. ಧರ್ಮವನ್ನೂ ಇಚ್ಛಿಸುವುದಿಲ್ಲ. ಯಾವ ಕಾಮನೆಗಳನ್ನೂ ಅಪೇಕ್ಷಿಸುವುದಿಲ್ಲ. ಆದುದರಿಂದ ಕಾಮವೇ ಧರ್ಮಾರ್ಥಗಳಿಗಿಂತಲೂ ಶ್ರೇಷ್ಠವಾದುದು.

12161029a ಕಾಮೇನ ಯುಕ್ತಾ ಋಷಯಸ್ತಪಸ್ಯೇವ ಸಮಾಹಿತಾಃ|

12161029c ಪಲಾಶಫಲಮೂಲಾಶಾ ವಾಯುಭಕ್ಷಾಃ ಸುಸಂಯತಾಃ||

ಕಾಮಯುಕ್ತರಾಗಿಯೇ ಋಷಿಗಳು ಸಮಾಹಿತರಾಗಿದ್ದು ತಪಸ್ಸನ್ನು ತಪಿಸುತ್ತಾರೆ. ಪಲಾಶ-ಫಲ-ಮೂಲಗಳನ್ನು ತಿಂದುಕೊಂಡು ವಾಯುಭಕ್ಷಿಗಳಾಗಿ ಸುಸಂಯತರಾಗಿರುತ್ತಾರೆ.

12161030a ವೇದೋಪವಾದೇಷ್ವಪರೇ[8] ಯುಕ್ತಾಃ ಸ್ವಾಧ್ಯಾಯಪಾರಗಾಃ|

12161030c ಶ್ರಾದ್ಧಯಜ್ಞಕ್ರಿಯಾಯಾಂ ಚ ತಥಾ ದಾನಪ್ರತಿಗ್ರಹೇ||

ಕಾಮನೆಯಿಂದಲೇ ಇತರರು ಸ್ವಾಧ್ಯಾಯಮಾಡಿ ವೇದೋಪವೇದಗಳ ಪಾರಂಗತರಾಗುತ್ತಾರೆ. ಶ್ರಾದ್ಧ-ಯಜ್ಞಕ್ರಿಯೆಗಳನ್ನೂ ಮಾಡುತ್ತಾರೆ ಮತ್ತು ದಾನ-ಪ್ರತಿಗ್ರಹಗಳನ್ನು ಕೈಗೊಳ್ಳುತ್ತಾರೆ.

12161031a ವಣಿಜಃ ಕರ್ಷಕಾ ಗೋಪಾಃ ಕಾರವಃ ಶಿಲ್ಪಿನಸ್ತಥಾ|

12161031c ದೈವಕರ್ಮಕೃತಶ್ಚೈವ ಯುಕ್ತಾಃ ಕಾಮೇನ ಕರ್ಮಸು||

ಕಾಮಯುಕ್ತರಾಗಿಯೇ ವರ್ತಕರು, ಕೃಷಿಕರು, ಗೋಪಾಲಕರು, ಕಾರ್ಮಿಕರು, ಶಿಲ್ಪಿಗಳು, ದೈವಕರ್ಮವನ್ನು ಮಾಡುವವರು ಎಲ್ಲರೂ ತಮ್ಮ ತಮ್ಮ ಕರ್ಮಗಳಲ್ಲಿ ತೊಡಗಿರುತ್ತಾರೆ.

12161032a ಸಮುದ್ರಂ ಚಾವಿಶಂತ್ಯನ್ಯೇ ನರಾಃ ಕಾಮೇನ ಸಂಯುತಾಃ|

12161032c ಕಾಮೋ ಹಿ ವಿವಿಧಾಕಾರಃ ಸರ್ವಂ ಕಾಮೇನ ಸಂತತಮ್||

ಕಾಮಯುಕ್ತರಾದ ಅನ್ಯ ಮನುಷ್ಯರು ಸಮುದ್ರದಲ್ಲಿಯೂ ಮುಳುಗುತ್ತಾರೆ. ಕಾಮವು ವಿವಿಧಾಕಾರದಲ್ಲಿದೆ. ಎಲ್ಲವೂ ಕಾಮದಿಂದಲೇ ವ್ಯಾಪ್ತವಾಗಿದೆ.

12161033a ನಾಸ್ತಿ ನಾಸೀನ್ನಾಭವಿಷ್ಯದ್ಭೂತಂ ಕಾಮಾತ್ಮಕಾತ್ಪರಮ್|

12161033c ಏತತ್ಸಾರಂ ಮಹಾರಾಜ ಧರ್ಮಾರ್ಥಾವತ್ರ ಸಂಶ್ರಿತೌ||

ಮಹಾರಾಜ! ಕಾಮನೆಯಿಲ್ಲದ ಪ್ರಾಣಿಯು ಈ ಪ್ರಪಂಚದಲ್ಲಿ ಈಗಲೂ ಇಲ್ಲ, ಹಿಂದೆಯೂ ಇರಲಿಲ್ಲ ಮತ್ತು ಮುಂದೆಯೂ ಇರುವುದಿಲ್ಲ. ತ್ರಿವರ್ಗದಲ್ಲಿ ಕಾಮವೇ ಸಾರವು. ಧರ್ಮಾರ್ಥಗಳೆರಡೂ ಕಾಮದಲ್ಲಿ ಅಡಕವಾಗಿವೆ.

12161034a ನವನೀತಂ ಯಥಾ ದಧ್ನಸ್ತಥಾ ಕಾಮೋಽರ್ಥಧರ್ಮತಃ|

12161034c ಶ್ರೇಯಸ್ತೈಲಂ ಚ ಪಿಣ್ಯಾಕಾದ್ಧೃತಂ ಶ್ರೇಯ ಉದಶ್ವಿತಃ||

12161035a ಶ್ರೇಯಃ ಪುಷ್ಪಫಲಂ ಕಾಷ್ಠಾತ್ಕಾಮೋ ಧರ್ಮಾರ್ಥಯೋರ್ವರಃ|

12161035c ಪುಷ್ಪತೋ ಮಧ್ವಿವ ರಸಃ ಕಾಮಾತ್ಸಂಜಾಯತೇ ಸುಖಮ್[9]||

ಬೆಣ್ಣೆಯು ಹೇಗೆ ಮೊಸರಿನ ಸಾರವೋ ಹಾಗೆ ಕಾಮವು ಧರ್ಮಾರ್ಥಗಳ ಸಾರವು. ಎಣ್ಣೆಯು ಹೇಗೆ ಹಿಂಡಿಗಿಂತ ಶ್ರೇಷ್ಠವೋ, ತುಪ್ಪವು ಹೇಗೆ ಮಜ್ಜಿಗೆಗಿಂತ ಶ್ರೇಷ್ಠವೋ, ಕಟ್ಟಿಗೆಗಳಿಗಿಂತಲೂ ಫಲ-ಪುಷ್ಪಗಳು ಹೇಗೆ ಶ್ರೇಷ್ಠವೋ ಹಾಗೆ ಕಾಮವು ಧರ್ಮಾರ್ಥಗಳಿಗಿಂತಲೂ ಶ್ರೇಷ್ಠವು. ಪುಷ್ಪದಲ್ಲಿರುವ ರಸದಿಂದ ಜೇನುತುಪ್ಪವು ಹೇಗೆ ಉಂಟಾಗುತ್ತದೆಯೋ ಹಾಗೆ ಕಾಮದಿಂದ ಸುಖವುಂಟಾಗುತ್ತದೆ.

[10]12161036a ಸುಚಾರುವೇಷಾಭಿರಲಂಕೃತಾಭಿರ್

ಮದೋತ್ಕಟಾಭಿಃ ಪ್ರಿಯವಾದಿನೀಭಿಃ|

12161036c ರಮಸ್ವ ಯೋಷಾಭಿರುಪೇತ್ಯ ಕಾಮಂ

ಕಾಮೋ ಹಿ ರಾಜಂಸ್ತರಸಾಭಿಪಾತೀ||

ರಾಜನ್! ಕಾಮವನ್ನೇ ಆಶ್ರಯಿಸಿ ನೀನು ಸುಂದರ ವೇಷ-ಭೂಷಣಗಳನ್ನು ಧರಿಸು. ಅಲಂಕೃತರಾದ ಸುಂದರ ಪ್ರಿಯವಾದಿನೀ ಮದೋತ್ಕಟ ಯುವತಿಯರೊಡನೆ ಯಥೇಚ್ಛವಾಗಿ ವಿಹರಿಸು. ಧರ್ಮಾರ್ಥಗಳಿಗಿಂತಲೂ ಕಾಮವೇ ನಮ್ಮ ಪರಮಶ್ರೇಷ್ಠ ಪುರುಷಾರ್ಥವಾಗಲಿ.

12161037a ಬುದ್ಧಿರ್ಮಮೈಷಾ ಪರಿಷತ್ ಸ್ಥಿತಸ್ಯ

ಮಾ ಭೂದ್ವಿಚಾರಸ್ತವ ಧರ್ಮಪುತ್ರ|

12161037c ಸ್ಯಾತ್ಸಂಹಿತಂ ಸದ್ಭಿರಫಲ್ಗುಸಾರಂ

ಸಮೇತ್ಯ ವಾಕ್ಯಂ ಪರಮಾನೃಶಂಸ್ಯಮ್||

ಧರ್ಮಪುತ್ರ! ಬಹುವಾಗಿ ಆಲೋಚಿಸಿ ನಾನು ಈ ನಿಶ್ಚಯಕ್ಕೆ ಬಂದಿದ್ದೇನೆ. ನೀನು ಈ ವಿಷಯದಲ್ಲಿ ಪುನಃ ವಿಚಾರಮಾಡಬೇಕಾದ ಅವಶ್ಯಕತೆಯೇ ಇಲ್ಲ. ನನ್ನ ಈ ಮಾತು ಉತ್ತಮವಾದುದು, ಕೋಮಲವಾದುದು, ಶ್ರೇಷ್ಠವಾದುದು, ಸತ್ತ್ವಯುಕ್ತವಾದುದು, ಸಾರಯುಕ್ತವಾದುದು, ನಿಷ್ಠುರತೆಯಿಂದ ವಿಹೀನವಾದುದು. ಶ್ರೇಷ್ಠಪುರುಷರೂ ಅಂಗೀಕರಿಸಬಹುದಾದುದು.

12161038a ಧರ್ಮಾರ್ಥಕಾಮಾಃ ಸಮಮೇವ ಸೇವ್ಯಾ

ಯಸ್ತ್ವೇಕಸೇವೀ ಸ ನರೋ ಜಘನ್ಯಃ|

12161038c ದ್ವಯೋಸ್ತು ದಕ್ಷಂ ಪ್ರವದಂತಿ ಮಧ್ಯಂ

ಸ ಉತ್ತಮೋ ಯೋ ನಿರತಸ್ತ್ರಿವರ್ಗೇ||

ಧರ್ಮ-ಅರ್ಥ-ಕಾಮಗಳನ್ನು ಸಮಾನವಾಗಿಯೇ ಆಚರಿಸಬೇಕು. ಒಂದನ್ನೇ ಸೇವಿಸುವ ಮನುಷ್ಯನು ಅಧಮನು. ಎರಡು ಪುರುಷಾರ್ಥಗಳಲ್ಲಿ ಆಸಕ್ತನಾದವನು ಮಧ್ಯಮನು[11]. ಮೂರು ಪುರುಷಾರ್ಥಗಳಲ್ಲಿಯೂ ಸಮಾನ ಆಸಕ್ತಿಯಿರುವವನು ಉತ್ತಮನು.”

12161039a ಪ್ರಾಜ್ಞಃ ಸುಹೃಚ್ಚಂದನಸಾರಲಿಪ್ತೋ

ವಿಚಿತ್ರಮಾಲ್ಯಾಭರಣೈರುಪೇತಃ|

12161039c ತತೋ ವಚಃ ಸಂಗ್ರಹವಿಗ್ರಹೇಣ

ಪ್ರೋಕ್ತ್ವಾ ಯವೀಯಾನ್ವಿರರಾಮ ಭೀಮಃ||

ಚಂದನಸಾರಲೇಪಿತನಾಗಿದ್ದ ಪ್ರಾಜ್ಞ ಸುಹೃದ ವಿಚಿತ್ರ ಮಾಲ್ಯಾಭರಣಭೂಷಿತ ಭೀಮನು ವೀರ ಸೋದರರೊಡನೆ ಧರ್ಮಾರ್ಥಕಾಮಗಳ ವಿಷಯವನ್ನು ಸಂಕ್ಷೇಪವಾಗಿಯೂ ವಿಸ್ತಾರವಾಗಿಯೂ ಹೇಳಿ ವಿರಮಿಸಿದನು.

12161040a ತತೋ ಮುಹೂರ್ತಾದಥ ಧರ್ಮರಾಜೋ

ವಾಕ್ಯಾನಿ ತೇಷಾಮನುಚಿಂತ್ಯ ಸಮ್ಯಕ್|

12161040c ಉವಾಚ ವಾಚಾವಿತಥಂ ಸ್ಮಯನ್ ವೈ

ಬಹುಶ್ರುತೋ ಧರ್ಮಭೃತಾಂ ವರಿಷ್ಠಃ||

ಅನಂತರ ಮುಹೂರ್ತಮಾತ್ರದಲ್ಲಿ ಬಹುಶ್ರುತ ಧರ್ಮಭೃತರಲ್ಲಿ ವರಿಷ್ಠ ಧರ್ಮರಾಜನು ಅವರ ಮಾತುಗಳನ್ನು ಚೆನ್ನಾಗಿ ಆಲೋಚಿಸಿ ಮುಗುಳ್ನಗುತ್ತಾ ಯಥಾರ್ಥವಾದ ಈ ಮಾತುಗಳನ್ನಾಡಿದನು:

12161041a ನಿಃಸಂಶಯಂ ನಿಶ್ಚಿತಧರ್ಮಶಾಸ್ತ್ರಾಃ

ಸರ್ವೇ ಭವಂತೋ ವಿದಿತಪ್ರಮಾಣಾಃ|

12161041c ವಿಜ್ಞಾತುಕಾಮಸ್ಯ ಮಮೇಹ ವಾಕ್ಯಮ್

ಉಕ್ತಂ ಯದ್ವೈ ನೈಷ್ಠಿಕಂ ತಚ್ಚ್ರುತಂ ಮೇ|

12161041e ಇಹ ತ್ವವಶ್ಯಂ ಗದತೋ ಮಮಾಪಿ

ವಾಕ್ಯಂ ನಿಬೋಧಧ್ವಮನನ್ಯಭಾವಾಃ||

ನೀವೆಲ್ಲರೂ ನಿಃಸಂಶಯವಾಗಿಯೂ ಧರ್ಮಶಾಸ್ತ್ರಗಳಲ್ಲಿ ನಿಶ್ಚಿತವಾಗಿರುವ ಪ್ರಮಾಣಗಳಿಂದ ತಿಳಿಯಬಹುದಾದ ವಿಷಯಗಳನ್ನೇ ಹೇಳಿದ್ದೀರಿ. ಇದರ ಕುರಿತು ನಿಮ್ಮ ನಿಶ್ಚಿತ ಅಭಿಪ್ರಾಯಗಳನ್ನು ತಿಳಿಯಬೇಕೆಂದಿದ್ದೆ. ಅದರಂತೆ ನೀವೆಲ್ಲರೂ ನಿಮ್ಮ ನಿಮ್ಮ ಅಭಿಪ್ರಾಯಗಳನ್ನು ಖಚಿತಪಡಿಸಿರುವಿರಿ. ಅವೆಲ್ಲವನ್ನೂ ನಾನು ಕೇಳಿದೆ. ನಾನು ಇದೇ ವಿಷಯದ ಕುರಿತು ಕೆಲವು ಮಾತುಗಳನ್ನು ಆಡುತ್ತೇನೆ. ನೀವೆಲ್ಲರೂ ಅನನ್ಯಚಿತ್ತರಾಗಿ ಕೇಳಿರಿ.

12161042a ಯೋ ವೈ ನ ಪಾಪೇ ನಿರತೋ ನ ಪುಣ್ಯೇ

ನಾರ್ಥೇ ನ ಧರ್ಮೇ ಮನುಜೋ ನ ಕಾಮೇ|

12161042c ವಿಮುಕ್ತದೋಷಃ ಸಮಲೋಷ್ಟಕಾಂಚನಃ

ಸ ಮುಚ್ಯತೇ ದುಃಖಸುಖಾರ್ಥಸಿದ್ಧೇಃ||

ಪಾಪ ಅಥವಾ ಪುಣ್ಯಕರ್ಮಗಳಲ್ಲಿ ತೊಡಗದೇ ಇರುವ, ಧರ್ಮ-ಅರ್ಥ-ಕಾಮಗಳಲ್ಲಿ ಆಸಕ್ತನಾಗಿರದ ಮನುಷ್ಯನು ದೋಷವಿಮುಕ್ತನಾಗುತ್ತಾನೆ. ಲೋಷ್ಟ-ಕಾಂಚನಗಳನ್ನು ಸಮನಾಗಿ ಕಾಣುವವನು ಸುಖ-ದುಃಖದಾಯಕವಾದ ಅರ್ಥಸಿದ್ಧಿಯಿಂದಲೂ ಮುಕ್ತನಾಗುತ್ತಾನೆ.

12161043a ಭೂತಾನಿ ಜಾತೀಮರಣಾನ್ವಿತಾನಿ

ಜರಾವಿಕಾರೈಶ್ಚ ಸಮನ್ವಿತಾನಿ|

12161043c ಭೂಯಶ್ಚ ತೈಸ್ತೈಃ ಪ್ರತಿಬೋಧಿತಾನಿ

ಮೋಕ್ಷಂ ಪ್ರಶಂಸಂತಿ ನ ತಂ ಚ ವಿದ್ಮಃ||

ಪೂರ್ವಜನ್ಮಗಳ ಸ್ಮರಣೆಗಳನ್ನಿಟ್ಟುಕೊಂಡಿರುವ, ವೃದ್ಧಾಪ್ಯ-ವಿಕಾರಗಳಿಂದ ಕೂಡಿರುವ, ಸಾಂಸಾರಿಕ ದುಃಖಗಳಿಂದ ಪೀಡಿಸಲ್ಪಟ್ಟು ಸದಾ ಅವುಗಳಿಂದ ಎಚ್ಚರಗೊಳಿಸಲ್ಪಡುತ್ತಿರುವವರು ಮೋಕ್ಷವನ್ನೇ ಪ್ರಶಂಸಿಸುತ್ತಾರೆ. ಆದರೆ ಮೋಕ್ಷವೆನ್ನುವುದು ನಮಗೂ ತಿಳಿಯದಾಗಿದೆ.

12161044a ಸ್ನೇಹೇ ನಬದ್ಧಸ್ಯ ನ ಸಂತಿ ತಾನೀತ್ಯ್[12]

ಏವಂ ಸ್ವಯಂಭೂರ್ಭಗವಾನುವಾಚ|

12161044c ಬುಧಾಶ್ಚ ನಿರ್ವಾಣಪರಾ ವದಂತಿ

ತಸ್ಮಾನ್ನ ಕುರ್ಯಾತ್ ಪ್ರಿಯಮಪ್ರಿಯಂ ಚ||

ಸ್ನೇಹಯುಕ್ತನಾಗಿರುವವನಿಗೆ ಮುಕ್ತಿಯಿಲ್ಲ ಎಂದು ಸ್ವಯಂಭೂ ಭಗವಂತನೇ ಹೇಳಿದ್ದಾನೆ. ಸ್ನೇಹಶೂನ್ಯರಾದ ಜ್ಞಾನಿಗಳು ಮೋಕ್ಷವನ್ನು ಹೊಂದುತ್ತಾರೆ. ಆದುದರಿಂದ ಮೋಕ್ಷಾರ್ಥಿಗಳು ಯಾರಿಗೂ ಪ್ರಿಯವನ್ನಾಗಲೀ ಅಪ್ರಿಯವನ್ನಾಗಲೀ ಮಾಡಬಾರದು.

12161045a ಏತತ್ ಪ್ರಧಾನಂ ನ ತು ಕಾಮಕಾರೋ

ಯಥಾ ನಿಯುಕ್ತೋಽಸ್ಮಿ ತಥಾ ಚರಾಮಿ|

12161045c ಭೂತಾನಿ ಸರ್ವಾಣಿ ವಿಧಿರ್ನಿಯುಂಕ್ತೇ

ವಿಧಿರ್ಬಲೀಯಾನಿತಿ ವಿತ್ತ ಸರ್ವೇ||

ಈ ವಿಚಾರವೇ ಮೋಕ್ಷಪ್ರಾಪ್ತಿಗೆ ಪ್ರಧಾನ ಉಪಾಯವು. ಪ್ರಾಣಿಯು ತನ್ನ ಇಚ್ಛೆಯಂತೆಯೇ ನಡೆಯಲು ಸಾಧ್ಯವಿಲ್ಲ. ಬ್ರಹ್ಮನು ನನ್ನನ್ನು ಯಾವ ಕಾರ್ಯದಲ್ಲಿ ನಿಯೋಜಿಸಿದ್ದಾನೆಯೋ ಅದೇ ಕಾರ್ಯವನ್ನು ನಾನು ಶ್ರದ್ಧೆಯಿಂದ ಮಾಡುತ್ತೇನೆ. ವಿಧಿಯು ಎಲ್ಲರನ್ನೂ ಭಿನ್ನ-ಭಿನ್ನ ಕಾರ್ಯಗಳಲ್ಲಿ ನಿಯೋಜಿಸಿರುತ್ತಾನೆ. ಆದುದರಿಂದ ನೀವೆಲ್ಲರೂ ವಿಧಿಯೇ ಪ್ರಬಲನೆಂದು ತಿಳಿಯಿರಿ.

12161046a ನ ಕರ್ಮಣಾಪ್ನೋತ್ಯನವಾಪ್ಯಮರ್ಥಂ

ಯದ್ಭಾವಿ ಸರ್ವಂ ಭವತೀತಿ ವಿತ್ತ|

12161046c ತ್ರಿವರ್ಗಹೀನೋಽಪಿ ಹಿ ವಿಂದತೇಽರ್ಥಂ

ತಸ್ಮಾದಿದಂ ಲೋಕಹಿತಾಯ ಗುಹ್ಯಮ್||

ಮನುಷ್ಯನು ಎಷ್ಟೇ ಮತ್ತು ಯಾವುದೇ ಕಾರ್ಯವನ್ನು ಮಾಡಿದರೂ ತಾನು ಯಾವುದನ್ನು ಎಷ್ಟು ಪ್ರಮಾಣದಲ್ಲಿ ಪಡೆದುಕೊಳ್ಳಬೇಕು ಎಂದು ವಿಧಿಯು ನಿಶ್ಚಯಿಸಿರುತ್ತದೆಯೋ ಅಷ್ಟನ್ನೇ ಪಡೆದುಕೊಳ್ಳಬಹುದು. ಅದಕ್ಕಿಂತಲೇ ಹೆಚ್ಚು ಅಥವಾ ಕಡಿಮೆ ಪಡೆದುಕೊಳ್ಳಲಾರನು. ವಿಧಿನಿಯಮದಂತೆ ಯಾವುದು ಹೇಗೆ ಆಗಬೇಕೆಂದಿರುವುದೋ ಅದು ಹಾಗೆಯೇ ಆಗುವುದೆನ್ನುವುದನ್ನು ನೀವೆಲ್ಲರೂ ತಿಳಿಯಿರಿ. ಧರ್ಮಾರ್ಥಕಾಮಗಳಲ್ಲಿ ಯಾವುದನ್ನೂ ಆಶ್ರಯಿಸದೇ ಇರುವವನೂ ಕೂಡ ವಿಧಿಯ ಅನುಗ್ರಹವಿದ್ದರೆ ಅರ್ಥವನ್ನು ಪಡೆದುಕೊಳ್ಳಬಲ್ಲನು. ಆದುದರಿಂದ ಅತ್ಯಂತ ನಿಗೂಢವಾದ ಮೋಕ್ಷಮಾರ್ಗವನ್ನು ಲೋಕಹಿತಕ್ಕಾಗಿ ಆಶ್ರಯಿಸಬೇಕು.”

12161047a ತತಸ್ತದಗ್ರ್ಯಂ ವಚನಂ ಮನೋನುಗಂ

ಸಮಸ್ತಮಾಜ್ಞಾಯ ತತೋಽತಿಹೇತುಮತ್|

12161047c ತದಾ ಪ್ರಣೇದುಶ್ಚ ಜಹರ್ಷಿರೇ ಚ ತೇ

ಕುರುಪ್ರವೀರಾಯ ಚ ಚಕ್ರುರಂಜಲೀನ್||

ಆ ಉತ್ತಮವಾದ ಮನಸ್ಸಿಗೆ ಹಿಡಿಸುವಂತಹ ಯುಕ್ತಿಯುಕ್ತವಾದ ಮಾತನ್ನು ಕೇಳಿ ಅದರ ಸಂಪೂರ್ಣತತ್ತ್ವವನ್ನು ತಿಳಿದುಕೊಂಡ ಭೀಮಾದಿಗಳು ಹರ್ಷೋದ್ಗಾರಮಾಡುತ್ತಾ ಬದ್ಧಾಂಜಲಿಗಳಾಗಿ ಕುರುಪ್ರವೀರನನ್ನು ಪ್ರಣಮಿಸಿದರು.

12161048a ಸುಚಾರುವರ್ಣಾಕ್ಷರಶಬ್ದಭೂಷಿತಾಂ

ಮನೋನುಗಾಂ ನಿರ್ಧುತವಾಕ್ಯಕಂಟಕಾಮ್|

12161048c ನಿಶಮ್ಯ ತಾಂ ಪಾರ್ಥಿವ ಪಾರ್ಥಭಾಷಿತಾಂ

ಗಿರಂ ನರೇಂದ್ರಾಃ ಪ್ರಶಶಂಸುರೇವ ತೇ|

12161048e ಪುನಶ್ಚ ಪಪ್ರಚ್ಚ ಸರಿದ್ವರಾಸುತಂ

ತತಃ ಪರಂ ಧರ್ಮಮಹೀನಸತ್ತ್ವಃ||

ಯುಧಿಷ್ಠಿರನಾಡಿದ ಆ ಮನೋಜ್ಞವಾದ, ಸ್ವರ-ವ್ಯಂಜನಗಳಿಂದ ಅಲಂಕೃತವಾಗಿದ್ದ, ಮನಸ್ಸನ್ನು ಮುಟ್ಟುವಂತಹ ದೋಷರಹಿತ ಮಾತನ್ನು ಕೇಳಿ ಅಲ್ಲಿ ನೆರೆದಿದ್ದ ರಾಜರೆಲ್ಲರೂ ಪ್ರಶಂಸಿಸಿದರು.  ಅನಂತರ ಪುನಃ ಯುಧಿಷ್ಠಿರನು ಧರ್ಮರಹಸ್ಯಗಳನ್ನು ತಿಳಿಯಲು ಗಂಗಾಪುತ್ರ ಮಹಾಸತ್ತ್ವಶಾಲೀ ಭೀಷ್ಮನನ್ನು  ಪ್ರಶ್ನಿಸಿದನು.

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಷಡ್ಜಗೀತಾಯಾಂ ಏಕಷಷ್ಟ್ಯಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ಷಡ್ಜಗೀತಾ ಎನ್ನುವ ನೂರಾಅರವತ್ತೊಂದನೇ ಅಧ್ಯಾಯವು.

[1] ಪಪ್ರಚ್ಛಾವಸಥಂ ಗತ್ವಾ (ಗೀತಾ ಪ್ರೆಸ್).

[2] ವವೃಧುಃ (ಗೀತಾ ಪ್ರೆಸ್).

[3] ಇದರ ನಂತರದ ಅಧಿಕ ಅರ್ಧಶ್ಲೋಕ: ತಥಾ ಚ ಸರ್ವಭೂತೇಷು ವರ್ತಿತವ್ಯಂ ಯಥಾತ್ಮನಿ| (ಗೀತಾ ಪ್ರೆಸ್).

[4] ಪಾರ್ಥೋ ಧರ್ಮಾರ್ಥತತ್ತ್ವಜ್ಞೋ ಜಗೌ ವಾಕ್ಯಂ ಪ್ರಚೋದಿತಃ| (ಗೀತಾ ಪ್ರೆಸ್).

[5] ವಿಷಯೈಃ (ಗೀತಾ ಪ್ರೆಸ್).

[6] ಹ್ರೀನಿಷೇವಣಃ (ಗೀತಾ ಪ್ರೆಸ್/ಭಾರತ ದರ್ಶನ).

[7] ವಿನಿರ್ವೃತ್ತೇ (ಗೀತಾ ಪ್ರೆಸ್/ಭಾರತ ದರ್ಶನ).

[8] ವೇದೋಪವೇದೇಷ್ವಪರೇ (ಗೀತಾ ಪ್ರೆಸ್/ಭಾರತ ದರ್ಶನ).

[9] ಪುಷ್ಪತೋ ಮಧ್ವಿವ ರಸಃ ಕಾಮ ಆಭ್ಯಾಂ ತಥಾ ಸ್ಮೃತಃ| ಕಾಮೋ ಧರ್ಮಾರ್ಥಯೋರ್ಯೋನಿಃ ಕಾಮಶ್ಚಾಥ ತದಾತ್ಮಕಃ|| (ಗೀತಾ ಪ್ರೆಸ್/ಭಾರತ ದರ್ಶನ).

[10] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ನಾಕಾಮತೋ ಬ್ರಾಹ್ಮಣಾಃ ಸ್ವನ್ನಮರ್ಥಾನ್ನಾಕಮತೋ ದದತಿ ಬ್ರಾಹ್ಮಣೇಭ್ಯಃ| ನಾಕಾಮತೋ ವಿವಿಧಾ ಲೋಕಚೇಷ್ಟಾ ತಸ್ಮಾತ್ಕಾಮಃ ಪ್ರಾಕ್ತ್ರಿವರ್ಗಸ್ಯ ದೃಷ್ಟಃ|| ಅರ್ಥಾತ್: ಕಾಮನೆಯಿಲ್ಲದೇ ಬ್ರಾಹ್ಮಣರು ಒಳ್ಳೆಯ ಭೋಜನವನ್ನು ಮಾಡುವುದಿಲ್ಲ. ಕಾಮನೆಯಿಲ್ಲದೇ ಯಾರೂ ಬ್ರಾಹ್ಮಣರಿಗೆ ದಾನಮಾಡುವುದಿಲ್ಲ. ಕಾಮನೆಯಿಲ್ಲದೇ ವಿವಿಧ ಲೋಕವ್ಯವಹಾರಗಳೂ ನಡೆಯುವುದಿಲ್ಲ. ಆದುದರಿಂದ ತ್ರಿವರ್ಗದಲ್ಲಿ ಕಾಮಕ್ಕೇ ಅಗ್ರಸ್ಥಾನವನ್ನು ಕೊಟ್ಟಿರುವುದು ಕಾಣುತ್ತದೆ (ಗೀತಾ ಪ್ರೆಸ್/ಭಾರತ ದರ್ಶನ).

[11] ಧರ್ಮಾರ್ಥಗಳಲ್ಲಿ ಸಾಮರ್ಥ್ಯವು ಅರ್ಥಕ್ಕೆ ಕಾರಣವಾದುದರಿಂದ ಅದು ಮಧ್ಯಮವು. ಅರ್ಥಕ್ಕಿಂತಲೂ ಕಾಮವು ಶ್ರೇಷ್ಠ ಎನ್ನುವುದು ಸಿದ್ಧವಾಗಿಯೇ ಇದೆ.

[12] ಸ್ನೇಹೇನ ಯುಕ್ತಸ್ಯ ನ ಚಾಸ್ತಿ ಮುಕ್ತಿ (ಗೀತಾ ಪ್ರೆಸ್/ಭಾರತ ದರ್ಶನ).

Comments are closed.