Shanti Parva: Chapter 263

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೬೩

ಕುಂಡಧಾರೋಪಖ್ಯಾನ

ಅರ್ಥ-ಕಾಮಗಳ ಭೋಗಕ್ಕಿಂತಲೂ ಧರ್ಮ-ತಪಸ್ಸುಗಳ ಉತ್ಕರ್ಷವನ್ನು ಪ್ರತಿಪಾದಿಸುವ ಬ್ರಾಹ್ಮಣ ಮತ್ತು ಕುಂಡಧಾರ ಮೇಘನ ಉಪಾಖ್ಯಾನ (1-55).

12263001 ಯುಧಿಷ್ಠಿರ ಉವಾಚ|

12263001a ಧರ್ಮಮರ್ಥಂ ಚ ಕಾಮಂ ಚ ವೇದಾಃ ಶಂಸಂತಿ ಭಾರತ|

12263001c ಕಸ್ಯ ಲಾಭೋ ವಿಶಿಷ್ಟೋಽತ್ರ ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಭಾರತ! ಪಿತಾಮಹ! ವೇದಗಳು ಧರ್ಮ, ಅರ್ಥ ಮತ್ತು ಕಾಮಗಳನ್ನು ಪ್ರಶಂಸಿಸುತ್ತವೆ. ಇವುಗಳಲ್ಲಿ ಯಾವುದನ್ನು ಪಡೆಯುವುದು ವಿಶಿಷ್ಟವು ಎನ್ನುವುದನ್ನು ನನಗೆ ಹೇಳು.”

12263002 ಭೀಷ್ಮ ಉವಾಚ|

12263002a ಅತ್ರ ತೇ ವರ್ತಯಿಷ್ಯಾಮಿ ಇತಿಹಾಸಂ ಪುರಾತನಮ್|

12263002c ಕುಂಡಧಾರೇಣ ಯತ್ ಪ್ರೀತ್ಯಾ ಭಕ್ತಾಯೋಪಕೃತಂ ಪುರಾ||

ಭೀಷ್ಮನು ಹೇಳಿದನು: “ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಕುಂಡಧಾರನು ಹಿಂದೆ ತನ್ನ ಭಕ್ತನಿಗೆ ಪ್ರೀತಿಯಿಂದ ಮಾಡಿದ ಉಪಕಾರವನ್ನು ವರ್ಣಿಸುತ್ತೇನೆ.

12263003a ಅಧನೋ ಬ್ರಾಹ್ಮಣಃ ಕಶ್ಚಿತ್ಕಾಮಾದ್ಧರ್ಮಮವೈಕ್ಷತ|

12263003c ಯಜ್ಞಾರ್ಥಂ ಸ ತತೋಽರ್ಥಾರ್ಥೀ ತಪೋಽತಪ್ಯತ ದಾರುಣಮ್||

ಹಿಂದೊಮ್ಮೆ ದರಿದ್ರ ಬ್ರಾಹ್ಮಣನೊಬ್ಬನು ಸಕಾಮನೆಯಿಂದ ಧರ್ಮಕಾರ್ಯವನ್ನು ಮಾಡಲು ಬಯಸಿ ಯಜ್ಞಕ್ಕಾಗಿ ಧನವನ್ನು ಅಪೇಕ್ಷಿಸಿ ಧನಕ್ಕಾಗಿ ದಾರುಣ ತಪಸ್ಸನ್ನು ತಪಿಸಿದನು.

12263004a ಸ ನಿಶ್ಚಯಮಥೋ ಕೃತ್ವಾ ಪೂಜಯಾಮಾಸ ದೇವತಾಃ|

12263004c ಭಕ್ತ್ಯಾ ನ ಚೈವಾಧ್ಯಗಚ್ಚದ್ಧನಂ ಸಂಪೂಜ್ಯ ದೇವತಾಃ||

ಹೀಗೆ ನಿಶ್ಚಯಿಸಿ ಅವನು ದೇವತೆಗಳನ್ನು ಪೂಜಿಸಿದನು. ಭಕ್ತಿಯಿಂದ ಪೂಜಿಸಿದರೂ ಅವನಿಗೆ ಬೇಕಾದ ಧನವು ದೊರೆಯಲಿಲ್ಲ.

12263005a ತತಶ್ಚಿಂತಾಂ ಪುನಃ ಪ್ರಾಪ್ತಃ ಕತಮದ್ದೈವತಂ ನು ತತ್|

12263005c ಯನ್ಮೇ ದ್ರುತಂ ಪ್ರಸೀದೇತ ಮಾನುಷೈರಜಡೀಕೃತಮ್||

ಆಗ ಚಿಂತಾಕುಲನಾದ ಅವನು “ಮನುಷ್ಯರಿಂದ ಜಡತ್ವವನ್ನು ನೀಗಿಕೊಂಡ ಯಾವುದಾದರೂ ದೇವತೆಯು ಬೇಗನೇ ನನಗೆ ಪ್ರಸನ್ನವಾಗಲಿ!” ಎಂದು ಪ್ರಾರ್ಥಿಸಿಕೊಂಡನು.

12263006a ಅಥ ಸೌಮ್ಯೇನ ವಪುಷಾ ದೇವಾನುಚರಮಂತಿಕೇ|

12263006c ಪ್ರತ್ಯಪಶ್ಯಜ್ಜಲಧರಂ ಕುಂಡಧಾರಮವಸ್ಥಿತಮ್||

ಕೂಡಲೇ ಅವನು ಸೌಮ್ಯ ರೂಪದ ದೇವಾನುಚರ ಕುಂಡಧಾರ ಎಂಬ ಮೇಘನು ಹತ್ತಿರ ನಿಂತಿರುವುದನ್ನು ನೋಡಿದನು.

12263007a ದೃಷ್ಟ್ವೈವ ತಂ ಮಹಾತ್ಮಾನಂ ತಸ್ಯ ಭಕ್ತಿರಜಾಯತ|

12263007c ಅಯಂ ಮೇ ಧಾಸ್ಯತಿ ಶ್ರೇಯೋ ವಪುರೇತದ್ಧಿ ತಾದೃಶಮ್||

ಆ ಮಹಾತ್ಮನನ್ನು ನೋಡಿದೊಡನೆಯೇ ಅವನ ಮೇಲಿನ ಭಕ್ತಿಯು ಹೆಚ್ಚಾಯಿತು. “ಇವನು ನನಗೆ ಶ್ರೇಯಸ್ಸನ್ನು ನೀಡುತ್ತಾನೆ. ಇವನ ಶರೀರವೇ ಅಂಥಹ ಲಕ್ಷಣಗಳಿಂದ ಕೂಡಿದೆ.

12263008a ಸಂನಿಕೃಷ್ಟಶ್ಚ ದೇವಸ್ಯ ನ ಚಾನ್ಯೈರ್ಮಾನುಷೈರ್ವೃತಃ|

12263008c ಏಷ ಮೇ ದಾಸ್ಯತಿ ಧನಂ ಪ್ರಭೂತಂ ಶೀಘ್ರಮೇವ ಚ||

ಅಲ್ಲದೇ ಈ ದೇವನು ಸಮೀಪದಲ್ಲಿಯೇ ಇದ್ದಾನೆ. ಅನ್ಯ ಮನುಷ್ಯರಿಂದ ಸುತ್ತುವರೆಯಲ್ಪಟ್ಟಿಲ್ಲ. ಇವನು ನನಗೆ ಶೀಘ್ರದಲ್ಲಿಯೇ ಅಪಾರ ಧನವನ್ನು ನೀಡುತ್ತಾನೆ.”

12263009a ತತೋ ಧೂಪೈಶ್ಚ ಗಂಧೈಶ್ಚ ಮಾಲ್ಯೈರುಚ್ಚಾವಚೈರಪಿ|

12263009c ಬಲಿಭಿರ್ವಿವಿಧೈಶ್ಚಾಪಿ ಪೂಜಯಾಮಾಸ ತಂ ದ್ವಿಜಃ||

ಹೀಗೆ ಯೋಚಿಸಿ ಆ ದ್ವಿಜನು ಧೂಪಗಳು, ಗಂಧಗಳು, ಚಿಕ್ಕ-ದೊಡ್ಡ ಮಾಲೆಗಳು, ಮತ್ತು ವಿವಿಧ ನೈವೇದ್ಯಗಳಿಂದ ಅವನನ್ನು ಪೂಜಿಸಿದನು.

12263010a ತತಃ ಸ್ವಲ್ಪೇನ ಕಾಲೇನ ತುಷ್ಟೋ ಜಲಧರಸ್ತದಾ|

12263010c ತಸ್ಯೋಪಕಾರೇ ನಿಯತಾಮಿಮಾಂ ವಾಚಮುವಾಚ ಹ||

ಅಲ್ಪಕಾಲದಲ್ಲಿಯೇ ಜಲಧರನು ತುಷ್ಟನಾದನು. ತಾನು ಅವನಿಗೆ ಉಪಕಾರ ಮಾಡುತ್ತೇನೆ ಎಂದು ಸೂಚಿಸುವ ಈ ಮಾತನ್ನಾಡಿದನು:

12263011a ಬ್ರಹ್ಮಘ್ನೇ ಚ ಸುರಾಪೇ ಚ ಚೋರೇ ಭಗ್ನವ್ರತೇ ತಥಾ|

12263011c ನಿಷ್ಕೃತಿರ್ವಿಹಿತಾ ಸದ್ಭಿಃ ಕೃತಘ್ನೇ ನಾಸ್ತಿ ನಿಷ್ಕೃತಿಃ||

“ಬ್ರಹ್ಮಘ್ನನಿಗೆ, ಸುರಾಪಾನ ಮಾಡಿದವನಿಗೆ, ಕಳ್ಳನಿಗೆ, ವ್ರತವನ್ನು ಮುರಿದವನಿಗೆ ಸತ್ಪುರುಷರು ಪ್ರಾಯಶ್ಚಿತ್ತವನ್ನು ಹೇಳಿದ್ದಾರೆ. ಆದರೆ ಕೃತಘ್ನನಿಗೆ ಪ್ರಾಯಶ್ಚಿತ್ತವೇ ಇಲ್ಲ.

12263012a ಆಶಾಯಾಸ್ತನಯೋಽಧರ್ಮಃ ಕ್ರೋಧೋಽಸೂಯಾಸುತಃ ಸ್ಮೃತಃ|

12263012c ಪುತ್ರೋ ಲೋಭೋ ನಿಕೃತ್ಯಾಸ್ತು ಕೃತಘ್ನೋ ನಾರ್ಹತಿ ಪ್ರಜಾಮ್||

ಅಧರ್ಮನು ಆಸೆಯ ಮಗ ಮತ್ತು ಕ್ರೋಧನು ಅಸೂಯೆಯ ಮಗ ಎಂದು ಹೇಳಿದ್ದಾರೆ. ಲೋಭನು ಪೀಡೆಯ ಮಗನು. ಆದರೆ ಕೃತಘ್ನನು ಸಂತಾನವನ್ನು ಪಡೆಯಲು ಯೋಗ್ಯನೇ ಅಲ್ಲ.”

12263013a ತತಃ ಸ ಬ್ರಾಹ್ಮಣಃ ಸ್ವಪ್ನೇ ಕುಂಡಧಾರಸ್ಯ ತೇಜಸಾ|

12263013c ಅಪಶ್ಯತ್ಸರ್ವಭೂತಾನಿ ಕುಶೇಷು ಶಯಿತಸ್ತದಾ||

ಅನಂತರ ಕುಂಡಧಾರನು ತನ್ನ ತೇಜಸ್ಸಿನಿಂದ ಆ ಬ್ರಾಹ್ಮಣನನ್ನು ಕುಶಗಳ ಮೇಲೆ ಮಲಗಿಸಿ ಅವನಿಗೆ ಸರ್ವಭೂತಗಳನ್ನೂ ತೋರಿಸಿದನು.

12263014a ಶಮೇನ ತಪಸಾ ಚೈವ ಭಕ್ತ್ಯಾ ಚ ನಿರುಪಸ್ಕೃತಃ|

12263014c ಶುದ್ಧಾತ್ಮಾ ಬ್ರಾಹ್ಮಣೋ ರಾತ್ರೌ ನಿದರ್ಶನಮಪಶ್ಯತ||

ಶಾಂತಿ, ತಪಸ್ಸು ಮತ್ತು ಭಕ್ತಿಸಂಪನ್ನನಾಗಿದ್ದ ಆ ಶುದ್ಧಾತ್ಮ ಬ್ರಾಹ್ಮಣನು ರಾತ್ರಿಯಲ್ಲಿ ಈ ನಿದರ್ಶನವನ್ನು ಕಂಡನು.

12263015a ಮಣಿಭದ್ರಂ ಸ ತತ್ರಸ್ಥಂ ದೇವತಾನಾಂ ಮಹಾದ್ಯುತಿಮ್|

12263015c ಅಪಶ್ಯತ ಮಹಾತ್ಮಾನಂ ವ್ಯಾದಿಶಂತಂ ಯುಧಿಷ್ಠಿರ||

ಯುಧಿಷ್ಠಿರ! ಸ್ವಪ್ನದಲ್ಲಿ ಅವನು ಮಹಾದ್ಯುತಿ ಮಣಿಭದ್ರನು ಅಲ್ಲಿದ್ದ ಮಹಾತ್ಮಾ ದೇವತೆಗಳಿಗೆ ಆದೇಶನೀಡುತ್ತಿದ್ದುದನ್ನು ಕಂಡನು.

12263016a ತತ್ರ ದೇವಾಃ ಪ್ರಯಚ್ಚಂತಿ ರಾಜ್ಯಾನಿ ಚ ಧನಾನಿ ಚ|

12263016c ಶುಭೈಃ ಕರ್ಮಭಿರಾರಬ್ಧಾಃ ಪ್ರಚ್ಚಿದಂತ್ಯಶುಭೇಷು ಚ||

ಅಲ್ಲಿ ದೇವತೆಗಳು ಶುಭಕರ್ಮಿಗಳಿಗೆ ರಾಜ್ಯ-ಧನಗಳನ್ನು ಕೊಡುತ್ತಿದ್ದರು. ಮತ್ತು ಅಶುಭಕರ್ಮಿಗಳಿಂದ ಅವುಗಳನ್ನು ಹಿಂತೆಗೆದುಕೊಳ್ಳುತ್ತಿದ್ದರು.

12263017a ಪಶ್ಯತಾಮಥ ಯಕ್ಷಾಣಾಂ ಕುಂಡಧಾರೋ ಮಹಾದ್ಯುತಿಃ|

12263017c ನಿಷ್ಪತ್ಯ ಪತಿತೋ ಭೂಮೌ ದೇವಾನಾಂ ಭರತರ್ಷಭ||

ಭರತರ್ಷಭ! ಆಗ ಮಣಿಭದ್ರನು ಯಕ್ಷರ ಮಧ್ಯದಲ್ಲಿ ಮಹಾದ್ಯುತಿ ಕುಂಡಧಾರನು ದೇವತೆಗಳ ಎದಿರು ಭೂಮಿಯ ಮೇಲೆ ಬಿದ್ದು ನಮಸ್ಕರಿಸಿದುದನ್ನು ನೋಡಿದನು.

12263018a ತತಸ್ತು ದೇವವಚನಾನ್ಮಣಿಭದ್ರೋ ಮಹಾಯಶಾಃ|

12263018c ಉವಾಚ ಪತಿತಂ ಭೂಮೌ ಕುಂಡಧಾರ ಕಿಮಿಷ್ಯತೇ||

ಆಗ ದೇವತೆಗಳ ಮಾತಿನಂತೆ ಮಹಾಯಶಸ್ವೀ ಮಣಿಭದ್ರನು ಭೂಮಿಯ ಮೇಲೆ ಬಿದ್ದಿದ್ದ ಕುಂಡಧಾರನಿಗೆ “ನಿನಗೇನು ಬೇಕು?” ಎಂದು ಕೇಳಿದನು.

12263019 ಕುಂಡಧಾರ ಉವಾಚ|

12263019a ಯದಿ ಪ್ರಸನ್ನಾ ದೇವಾ ಮೇ ಭಕ್ತೋಽಯಂ ಬ್ರಾಹ್ಮಣೋ ಮಮ|

12263019c ಅಸ್ಯಾನುಗ್ರಹಮಿಚ್ಚಾಮಿ ಕೃತಂ ಕಿಂ ಚಿತ್ಸುಖೋದಯಮ್||

ಕುಂಡಧಾರನು ಹೇಳಿದನು: “ದೇವತೆಗಳೇ! ಒಂದುವೇಳೆ ನೀವು ನನ್ನ ಮೇಲೆ ಪ್ರಸನ್ನರಾಗಿದ್ದೀರಿ ಎಂದಾದರೆ ನನ್ನ ಈ ಬ್ರಾಹ್ಮಣ ಭಕ್ತನೊಬ್ಬನಿದ್ದಾನೆ. ಅವನಿಗೆ ಅನುಗ್ರಹಿಸಬೇಕೆಂದು ಬಯಸುತ್ತೇನೆ. ಅವನಿಗೆ ಏನಾದರೂ ಸುಖವಾಗುವಂತೆ ಮಾಡಬೇಕು.””

12263020 ಭೀಷ್ಮ ಉವಾಚ|

12263020a ತತಸ್ತಂ ಮಣಿಭದ್ರಸ್ತು ಪುನರ್ವಚನಮಬ್ರವೀತ್|

12263020c ದೇವಾನಾಮೇವ ವಚನಾತ್ಕುಂಡಧಾರಂ ಮಹಾದ್ಯುತಿಮ್||

ಭೀಷ್ಮನು ಹೇಳಿದನು: “ದೇವತೆಗಳ ಮಾತಿನಂತೆಯೇ ಪುನಃ ಮಣಿಭದ್ರನು ಮಹಾದ್ಯುತಿ ಕುಂಡಧಾರನಿಗೆ ಈ ಮಾತನ್ನಾಡಿದನು:

12263021a ಉತ್ತಿಷ್ಠೋತ್ತಿಷ್ಠ ಭದ್ರಂ ತೇ ಕೃತಕಾರ್ಯಃ ಸುಖೀ ಭವ|

12263021c ಯಾವದ್ಧನಂ ಪ್ರಾರ್ಥಯತೇ ಬ್ರಾಹ್ಮಣೋಽಯಂ ಸಖಾ ತವ|

12263021e ದೇವಾನಾಂ ಶಾಸನಾತ್ತಾವದಸಂಖ್ಯೇಯಂ ದದಾಮ್ಯಹಮ್||

“ಏಳು! ಮೇಲೇಳು! ನಿನಗೆ ಮಂಗಳವಾಗಲಿ! ಕೃತಾರ್ಥನಾಗಿ ಸುಖಿಯಾಗು. ನಿನ್ನ ಸಖನಾದ ಈ ಬ್ರಾಹ್ಮಣನು ಎಷ್ಟು ಧನವನ್ನು ಪ್ರಾರ್ಥಿಸುತ್ತಿದ್ದಾನೋ ಅಥವಾ ಅಸಂಖ್ಯವಾದ ಧನವನ್ನು ದೇವತೆಗಳ ಶಾಸನದಂತೆ ನಾನು ನೀಡುತ್ತೇನೆ.”

12263022a ವಿಚಾರ್ಯ ಕುಂಡಧಾರಸ್ತು ಮಾನುಷ್ಯಂ ಚಲಮಧ್ರುವಮ್|

12263022c ತಪಸೇ ಮತಿಮಾಧತ್ತ ಬ್ರಾಹ್ಮಣಸ್ಯ ಯಶಸ್ವಿನಃ||

ಕುಂಡಧಾರನಾದರೋ ಮನುಷ್ಯರ ಚಂಚಲತ್ವ ಮತ್ತು ಅಶಾಶ್ವತೆಯನ್ನು ವಿಚಾರಿಸಿ ಬ್ರಾಹ್ಮಣನ ತಪಸ್ಸನ್ನು ಹೆಚ್ಚಿಸಲು ನಿಶ್ಚಯಿಸಿದನು.

12263023 ಕುಂಡಧಾರ ಉವಾಚ|

12263023a ನಾಹಂ ಧನಾನಿ ಯಾಚಾಮಿ ಬ್ರಾಹ್ಮಣಾಯ ಧನಪ್ರದ|

12263023c ಅನ್ಯಮೇವಾಹಮಿಚ್ಚಾಮಿ ಭಕ್ತಾಯಾನುಗ್ರಹಂ ಕೃತಮ್||

ಕುಂಡಧಾರನು ಹೇಳಿದನು: “ಧನಪ್ರದ! ಬ್ರಾಹ್ಮಣನಿಗಾಗಿ ನಾನು ಧನವನ್ನು ಯಾಜಿಸುತ್ತಿಲ್ಲ. ಆ ಭಕ್ತನಿಗೆ ಅನುಗ್ರಹವಾಗುವಂತೆ ಬೇರೆ ಏನನ್ನಾದರೂ ಮಾಡ ಬಯಸುತ್ತೇನೆ.

12263024a ಪೃಥಿವೀಂ ರತ್ನಪೂರ್ಣಾಂ ವಾ ಮಹದ್ವಾ ಧನಸಂಚಯಮ್|

12263024c ಭಕ್ತಾಯ ನಾಹಮಿಚ್ಚಾಮಿ ಭವೇದೇಷ ತು ಧಾರ್ಮಿಕಃ||

ರತ್ನಪೂರ್ಣ ಭೂಮಿಯನ್ನಾಗಲೀ, ಮಹಾ ಧನಸಂಚಯವನ್ನಾಗಲೀ ಈ ಭಕ್ತನಿಗೆ ಕೊಡಲು ಇಚ್ಛಿಸುವುದಿಲ್ಲ. ಇವನು ಧಾರ್ಮಿಕನಾಗಿಯೇ ಇರಲಿ.

12263025a ಧರ್ಮೇಽಸ್ಯ ರಮತಾಂ ಬುದ್ಧಿರ್ಧರ್ಮಂ ಚೈವೋಪಜೀವತು|

12263025c ಧರ್ಮಪ್ರಧಾನೋ ಭವತು ಮಮೈಷೋಽನುಗ್ರಹೋ ಮತಃ||

ಇವನ ಬುದ್ಧಿಯು ಧರ್ಮದಲ್ಲಿಯೇ ರಮಿಸಲಿ. ಇವನು ಧರ್ಮದಿಂದಲೇ ಜೀವನವನ್ನು ನಡೆಸಲಿ. ಇವನಿಗೆ ಧರ್ಮವೇ ಪ್ರಧಾನವಾಗಿರಲಿ. ಇದನ್ನು ಅನುಗ್ರಹಿಸಬೇಕೆಂದು ನನಗನ್ನಿಸುತ್ತದೆ.”

12263026 ಮಣಿಭದ್ರ ಉವಾಚ|

12263026a ಯದಾ ಧರ್ಮಫಲಂ ರಾಜ್ಯಂ ಸುಖಾನಿ ವಿವಿಧಾನಿ ಚ|

12263026c ಫಲಾನ್ಯೇವಾಯಮಶ್ನಾತು ಕಾಯಕ್ಲೇಶವಿವರ್ಜಿತಃ||

ಮಣಿಭದ್ರನು ಹೇಳಿದನು: “ರಾಜ್ಯ ಮತ್ತು ವಿವಿಧ ಸುಖಗಳು ಧರ್ಮಫಲವೇ ಆಗಿರುವುದರಿಂದ ಅವನು ಕಾಯಕ್ಲೇಶಗಳಿಲ್ಲದ ಈ ಫಲಗಳನ್ನೇ ಅನುಭವಿಸಲಿ.””

12263027 ಭೀಷ್ಮ ಉವಾಚ|

12263027a ತತಸ್ತದೇವ ಬಹುಶಃ ಕುಂಡಧಾರೋ ಮಹಾಯಶಾಃ|

12263027c ಅಭ್ಯಾಸಮಕರೋದ್ಧರ್ಮೇ ತತಸ್ತುಷ್ಟಾಸ್ಯ ದೇವತಾಃ||

ಭೀಷ್ಮನು ಹೇಳಿದನು: “ಅನಂತರವೂ ಮಹಾಯಶಸ್ವೀ ಕುಂಡಧಾರನು ಬ್ರಾಹ್ಮಣನಿಗೆ ಧರ್ಮದ ಅಭ್ಯಾಸಮಾಡಿಸಲು ಅನೇಕ ಬಾರಿ ಕೇಳಿಕೊಳ್ಳಲು ದೇವತೆಗಳು ಅದರಿಂದ ತುಷ್ಟರಾದರು.

12263028 ಮಣಿಭದ್ರ ಉವಾಚ|

12263028a ಪ್ರೀತಾಸ್ತೇ ದೇವತಾಃ ಸರ್ವಾ ದ್ವಿಜಸ್ಯಾಸ್ಯ ತಥೈವ ಚ|

12263028c ಭವಿಷ್ಯತ್ಯೇಷ ಧರ್ಮಾತ್ಮಾ ಧರ್ಮೇ ಚಾಧಾಸ್ಯತೇ ಮತಿಃ||

ಮಣಿಭದ್ರನು ಹೇಳಿದನು: “ನಿನ್ನ ಮತ್ತು ಬ್ರಾಹ್ಮಣನ ವಿಷಯದಲ್ಲಿ ದೇವತೆಗಳು ಸುಪ್ರೀತರಾಗಿದ್ದಾರೆ. ಇವನು ಧರ್ಮಾತ್ಮನಾಗುತ್ತಾನೆ ಮತ್ತು ಇವನ ಬುದ್ಧಿಯು ಧರ್ಮದಲ್ಲಿಯೇ ಸ್ಥಿರವಾಗಿರುತ್ತದೆ.””

12263029 ಭೀಷ್ಮ ಉವಾಚ|

12263029a ತತಃ ಪ್ರೀತೋ ಜಲಧರಃ ಕೃತಕಾರ್ಯೋ ಯುಧಿಷ್ಠಿರ|

12263029c ಈಪ್ಸಿತಂ ಮನಸೋ ಲಬ್ಧ್ವಾ ವರಮನ್ಯೈಃ ಸುದುರ್ಲಭಮ್||

ಭೀಷ್ಮನು ಹೇಳಿದನು: “ಯುಧಿಷ್ಠಿರ! ನಂತರ ಮೇಘ ಕುಂಡಧಾರನು ಅನ್ಯರಿಗೆ ತುಂಬಾ ದುರ್ಲಭವಾಗಿದ್ದ ಮತ್ತು ಮನಸ್ಸಿನಲ್ಲಿ ಬಯಸಿದ್ದ ವರವನ್ನು ಪಡೆದು ಕಾರ್ಯಸಿದ್ಧಿಯಾಯಿತೆಂದು ಪ್ರೀತನಾದನು.

12263030a ತತೋಽಪಶ್ಯತ ಚೀರಾಣಿ ಸೂಕ್ಷ್ಮಾಣಿ ದ್ವಿಜಸತ್ತಮಃ|

12263030c ಪಾರ್ಶ್ವತೋಽಭ್ಯಾಗತೋ ನ್ಯಸ್ತಾನ್ಯಥ ನಿರ್ವೇದಮಾಗತಃ||

ಆಗ ಎಚ್ಚೆತ್ತ ದ್ವಿಜಸತ್ತಮನು ಸೂಕ್ಷ್ಮ ನಾರುಬಟ್ಟೆಗಳನ್ನು ನೋಡಿದನು. ಅಕ್ಕಪಕ್ಕದಲ್ಲಿರಿಸಿದ್ದ ಅವುಗಳನ್ನು ನೋಡಿ ಅವನಿಗೆ ಕೂಡಲೇ ವೈರಾಗ್ಯವುಂಟಾಯಿತು.

12263031 ಬ್ರಾಹ್ಮಣ ಉವಾಚ|

12263031a ಅಯಂ ನ ಸುಕೃತಂ ವೇತ್ತಿ ಕೋ ನ್ವನ್ಯೋ ವೇತ್ಸ್ಯತೇ ಕೃತಮ್|

12263031c ಗಚ್ಚಾಮಿ ವನಮೇವಾಹಂ ವರಂ ಧರ್ಮೇಣ ಜೀವಿತುಮ್||

ಬ್ರಾಹ್ಮಣನು ಹೇಳಿದನು: “ಇವನೇ ನನ್ನ ಸುಕೃತಗಳನ್ನು ತಿಳಿಯದೇ ಇದ್ದ ಮೇಲೆ ಬೇರೆ ಯಾರು ತಾನೇ ನನ್ನ ಕೃತ್ಯಗಳನ್ನು ತಿಳಿದುಕೊಂಡಾರು? ನಾನು ವನಕ್ಕೆ ಹೋಗುತ್ತೇನೆ ಮತ್ತು ಶ್ರೇಷ್ಠ ಧರ್ಮದಿಂದ ಜೀವಿಸುತ್ತೇನೆ.””

12263032 ಭೀಷ್ಮ ಉವಾಚ|

12263032a ನಿರ್ವೇದಾದ್ದೇವತಾನಾಂ ಚ ಪ್ರಸಾದಾತ್ಸ ದ್ವಿಜೋತ್ತಮಃ|

12263032c ವನಂ ಪ್ರವಿಶ್ಯ ಸುಮಹತ್ತಪ ಆರಬ್ಧವಾಂಸ್ತದಾ||

ಭೀಷ್ಮನು ಹೇಳಿದನು: “ಆ ದ್ವಿಜೋತ್ತಮನು ವನವನ್ನು ಪ್ರವೇಶಿಸಿ ಮಹಾ ತಪಸ್ಸನ್ನು ಆರಂಭಿಸಿದನು. ವೈರಾಗ್ಯದಿಂದ ದೇವತೆಗಳನ್ನು ಪ್ರಸನ್ನಗೊಳಿಸಿದನು.

12263033a ದೇವತಾತಿಥಿಶೇಷೇಣ ಫಲಮೂಲಾಶನೋ ದ್ವಿಜಃ|

12263033c ಧರ್ಮೇ ಚಾಪಿ ಮಹಾರಾಜ ರತಿರಸ್ಯಾಭ್ಯಜಾಯತ||

ಮಹಾರಾಜ! ದೇವತೆಗಳು ಮತ್ತು ಅತಿಥಿಗಳಿಗೆ ಅರ್ಪಿಸಿ ಉಳಿದ ಫಲಮೂಲಗಳನ್ನೇ ತಿನ್ನುತ್ತಾ ಇದ್ದ ಅವನಿಗೆ ಧರ್ಮದಲ್ಲಿ ಸುಖಸಂತೋಷವು ಹುಟ್ಟಿಕೊಂಡಿತು.

12263034a ತ್ಯಕ್ತ್ವಾ ಮೂಲಫಲಂ ಸರ್ವಂ ಪರ್ಣಾಹಾರೋಽಭವದ್ದ್ವಿಜಃ|

12263034c ಪರ್ಣಂ ತ್ಯಕ್ತ್ವಾ ಜಲಾಹಾರಸ್ತದಾಸೀದ್ದ್ವಿಜಸತ್ತಮಃ||

ಆ ದ್ವಿಜನು ಫಲಮೂಲಗಳೆಲ್ಲವನ್ನೂ ತ್ಯಜಿಸಿ ಪರ್ಣಾಹಾರಿಯಾದನು. ನಂತರ ಆ ದ್ವಿಜಸತ್ತಮನು ಪರ್ಣಗಳನ್ನು ತ್ಯಜಿಸಿ ಜಲಾಹಾರಿಯಾದನು.

12263035a ವಾಯುಭಕ್ಷಸ್ತತಃ ಪಶ್ಚಾದ್ಬಹೂನ್ವರ್ಷಗಣಾನಭೂತ್|

12263035c ನ ಚಾಸ್ಯ ಕ್ಷೀಯತೇ ಪ್ರಾಣಸ್ತದದ್ಭುತಮಿವಾಭವತ್||

ಅನಂತರ ವಾಯುಭಕ್ಷಕನಾಗಿ ಅನೇಕ ವರ್ಷಗಳು ಕಳೆದವು. ಆದರೂ ಅವನ ಪ್ರಾಣವು ಕ್ಷಣಿಸಲಿಲ್ಲ. ಅದೊಂದು ಅದ್ಭುತವಾಗಿತ್ತು.

12263036a ಧರ್ಮೇ ಚ ಶ್ರದ್ದಧಾನಸ್ಯ ತಪಸ್ಯುಗ್ರೇ ಚ ವರ್ತತಃ|

12263036c ಕಾಲೇನ ಮಹತಾ ತಸ್ಯ ದಿವ್ಯಾ ದೃಷ್ಟಿರಜಾಯತ||

ಧರ್ಮದಲ್ಲಿಯೇ ಶ್ರದ್ಧೆಯನ್ನಿಟ್ಟು ಉಗ್ರ ತಪಸ್ಸನ್ನು ನಡೆಸಿ ಮಹಾ ಕಾಲವು ಕಳೆಯಲು ಅವನಿಗೆ ದಿವ್ಯದೃಷ್ಟಿಯುಂಟಾಯಿತು.

12263037a ತಸ್ಯ ಬುದ್ಧಿಃ ಪ್ರಾದುರಾಸೀದ್ಯದಿ ದದ್ಯಾಂ ಮಹದ್ಧನಮ್|

12263037c ತುಷ್ಟಃ ಕಸ್ಮೈ ಚಿದೇವಾಹಂ ನ ಮಿಥ್ಯಾ ವಾಗ್ಭವೇನ್ಮಮ||

ಅವನಲ್ಲಿ ಈ ಯೋಚನೆಯು ಮೂಡಿತು: “ಒಂದು ವೇಳೆ ನಾನು ತುಷ್ಟನಾಗಿ ಯಾರಿಗಾದರೂ ಮಹಾ ಧನವನ್ನು ಕೊಡುತ್ತೇನೆಂದು ಹೇಳಿದರೆ ನನ್ನ ಮಾತು ಮಿಥ್ಯವಾಗಲಾರದು!”

12263038a ತತಃ ಪ್ರಹೃಷ್ಟವದನೋ ಭೂಯ ಆರಬ್ಧವಾಂಸ್ತಪಃ|

12263038c ಭೂಯಶ್ಚಾಚಿಂತಯತ್ಸಿದ್ಧೋ ಯತ್ಪರಂ ಸೋಽಭ್ಯಪದ್ಯತ||

ಸಂತೋಷದಿಂದ ಅವನು ಇನ್ನೂ ತಪಸ್ಸನ್ನು ಆರಂಭಿಸಿದನು. ಮೊತ್ತೊಂದು ಸಿದ್ಧಿಯನ್ನು ಪಡೆದುಕೊಂಡ ನಂತರ ಅವನು ಮತ್ತೆ ಯೋಚಿಸಿದನು:

12263039a ಯದಿ ದದ್ಯಾಮಹಂ ರಾಜ್ಯಂ ತುಷ್ಟೋ ವೈ ಯಸ್ಯ ಕಸ್ಯ ಚಿತ್|

12263039c ಸ ಭವೇದಚಿರಾದ್ರಾಜಾ ನ ಮಿಥ್ಯಾ ವಾಗ್ಭವೇನ್ಮಮ||

“ಒಂದು ವೇಳೆ ನಾನು ತುಷ್ಟನಾಗಿ ಯಾರಿಗಾದರೂ ರಾಜ್ಯವನ್ನು ಕೊಡುತ್ತೇನೆ ಎಂದು ಹೇಳಿದರೆ ನನ್ನ ಮಾತು ಸುಳ್ಳಾಗಲಾರದು!”

12263040a ತಸ್ಯ ಸಾಕ್ಷಾತ್ಕುಂಡಧಾರೋ ದರ್ಶಯಾಮಾಸ ಭಾರತ|

12263040c ಬ್ರಾಹ್ಮಣಸ್ಯ ತಪೋಯೋಗಾತ್ ಸೌಹೃದೇನಾಭಿಚೋದಿತಃ||

ಭಾರತ! ಬ್ರಾಹ್ಮಣನ ತಪೋಯೋಗದಿಂದ ಮತ್ತು ಸೌಹಾರ್ದತೆಯಿಂದ ಪ್ರಚೋದಿತನಾಗಿ ಸಾಕ್ಷಾತ್ ಕುಂಡಧಾರನೇ ಅವನಿಗೆ ಕಾಣಿಸಿಕೊಂಡನು.

12263041a ಸಮಾಗಮ್ಯ ಸ ತೇನಾಥ ಪೂಜಾಂ ಚಕ್ರೇ ಯಥಾವಿಧಿ|

12263041c ಬ್ರಾಹ್ಮಣಃ ಕುಂಡಧಾರಸ್ಯ ವಿಸ್ಮಿತಶ್ಚಾಭವನ್ನೃಪ||

ನೃಪ! ಕುಂಡಧಾರನನ್ನು ನೋಡಿ ಬ್ರಾಹ್ಮಣನು ವಿಸ್ಮಿತನಾದನು ಮತ್ತು ಆಗಮಿಸಿದ ಅವನನ್ನು ಯಥಾವಿಧಿಯಾಗಿ ಪೂಜಿಸಿದನು.

12263042a ತತೋಽಬ್ರವೀತ್ಕುಂಡಧಾರೋ ದಿವ್ಯಂ ತೇ ಚಕ್ಷುರುತ್ತಮಮ್|

12263042c ಪಶ್ಯ ರಾಜ್ಞಾಂ ಗತಿಂ ವಿಪ್ರ ಲೋಕಾಂಶ್ಚಾವೇಕ್ಷ ಚಕ್ಷುಷಾ||

ಆಗ ಕುಂಡಧಾರನು ಹೇಳಿದನು: “ವಿಪ್ರ! ನಿನಗೆ ಉತ್ತಮ ದಿವ್ಯದೃಷ್ಟಿಯಿದೆ. ಆ ಕಣ್ಣುಗಳಿಂದ ಹಿಂದಿನ ರಾಜರು ಯಾವ ಲೋಕಗಳಿಗೆ ಹೋಗಿದ್ದಾರೆನ್ನುವುದನ್ನು ನೋಡು.”

12263043a ತತೋ ರಾಜ್ಞಾಂ ಸಹಸ್ರಾಣಿ ಮಗ್ನಾನಿ ನಿರಯೇ ತದಾ|

12263043c ದೂರಾದಪಶ್ಯದ್ವಿಪ್ರಃ ಸ ದಿವ್ಯಯುಕ್ತೇನ ಚಕ್ಷುಷಾ||

ಆಗ ವಿಪ್ರನು ದಿವ್ಯದೃಷ್ಟಿಯಿಂದ ಸಹಸ್ರಾರು ರಾಜರು ನರಕದಲ್ಲಿ ಮುಳುಗಿರುವುದನ್ನು ದೂರದಿಂದಲೇ ಕಂಡನು.

12263044 ಕುಂಡಧಾರ ಉವಾಚ|

12263044a ಮಾಂ ಪೂಜಯಿತ್ವಾ ಭಾವೇನ ಯದಿ ತ್ವಂ ದುಃಖಮಾಪ್ನುಯಾಃ|

12263044c ಕೃತಂ ಮಯಾ ಭವೇತ್ಕಿಂ ತೇ ಕಶ್ಚ ತೇಽನುಗ್ರಹೋ ಭವೇತ್||

ಕುಂಡಧಾರನು ಹೇಳಿದನು: “ಭಕ್ತಿಯಿಂದ ನನ್ನನ್ನು ಪೂಜಿಸಿದ ನಿನಗೆ ನಾನು ದುಃಖವನ್ನೇ ದೊರಕಿಸಿದ್ದರೆ ನಾನು ಏನು ಮಾಡಿದಂತಾಯಿತು? ನಿನಗೆ ಯಾವ ಅನುಗ್ರಹವುಂಟಾಗುತ್ತದೆ?

12263045a ಪಶ್ಯ ಪಶ್ಯ ಚ ಭೂಯಸ್ತ್ವಂ ಕಾಮಾನಿಚ್ಚೇತ್ಕಥಂ ನರಃ|

12263045c ಸ್ವರ್ಗದ್ವಾರಂ ಹಿ ಸಂರುದ್ಧಂ ಮಾನುಷೇಷು ವಿಶೇಷತಃ||

ಪುನಃ ಪುನಃ ನೋಡು. ಇದನ್ನು ನೋಡಿದ ನರನು ಹೇಗೆ ತಾನೇ ಕಾಮನೆಗಳನ್ನು ಬಯಸುತ್ತಾನೆ? ಕಾಮನೆಗಳನ್ನು ಬಯಸುವ ಮನುಷ್ಯರಿಗೆ ವಿಶೇಷವಾಗಿ ಸ್ವರ್ಗದ ಬಾಗಿಲು ಮುಚ್ಚಿರುತ್ತದೆ.””

12263046 ಭೀಷ್ಮ ಉವಾಚ|

12263046a ತತೋಽಪಶ್ಯತ್ಸ ಕಾಮಂ ಚ ಕ್ರೋಧಂ ಲೋಭಂ ಭಯಂ ಮದಮ್|

12263046c ನಿದ್ರಾಂ ತಂದ್ರೀಂ ತಥಾಲಸ್ಯಮಾವೃತ್ಯ ಪುರುಷಾನ್ ಸ್ಥಿತಾನ್||

ಭೀಷ್ಮನು ಹೇಳಿದನು: “ಆಗ ಬ್ರಾಹ್ಮಣನು ಅಲ್ಲಿದ್ದ ಪುರುಷರನ್ನು ಕಾಮ, ಕ್ರೋಧ, ಲೋಭ, ಭಯ, ಮದ, ನಿದ್ರೆ ಮತ್ತು ಆಲಸ್ಯಗಳು ಆಕ್ರಮಿಸಿರುವುದನ್ನು ನೋಡಿದನು.

12263047 ಕುಂಡಧಾರ ಉವಾಚ|

12263047a ಏತೈರ್ಲೋಕಾಃ ಸುಸಂರುದ್ಧಾ ದೇವಾನಾಂ ಮಾನುಷಾದ್ಭಯಮ್|

12263047c ತಥೈವ ದೇವವಚನಾದ್ವಿಘ್ನಂ ಕುರ್ವಂತಿ ಸರ್ವಶಃ||

ಕುಂಡಧಾರನು ಹೇಳಿದನು: “ಈ ಲೋಕಗಳು ಇವುಗಳಿಂದ ಬಂಧಿತವಾಗಿದೆ. ದೇವತೆಗಳ ಎಲ್ಲ ವಚನಗಳಿಗೂ ವಿರುದ್ಧವಾಗಿಯೇ ನಡೆಯುವ ಮನುಷ್ಯರಿಗೆ ದೇವತೆಗಳೂ ಹೆದರುತ್ತಾರೆ.

12263048a ನ ದೇವೈರನನುಜ್ಞಾತಃ ಕಶ್ಚಿದ್ಭವತಿ ಧಾರ್ಮಿಕಃ|

12263048c ಏಷ ಶಕ್ತೋಽಸಿ ತಪಸಾ ರಾಜ್ಯಂ ದಾತುಂ ಧನಾನಿ ಚ||

ದೇವತೆಗಳ ಅನುಜ್ಞೆಯಿಲ್ಲದೇ ಯಾರೂ ಧಾರ್ಮಿಕನಾಗುವುದಿಲ್ಲ. ಈ ತಪಸ್ಸಿನಿಂದ ನೀನು ರಾಜ್ಯ ಮತ್ತು ಧನಗಳನ್ನು ನೀಡಲು ಶಕ್ತನಾಗಿದ್ದೀಯೆ.””

12263049 ಭೀಷ್ಮ ಉವಾಚ|

12263049a ತತಃ ಪಪಾತ ಶಿರಸಾ ಬ್ರಾಹ್ಮಣಸ್ತೋಯಧಾರಿಣೇ|

12263049c ಉವಾಚ ಚೈನಂ ಧರ್ಮಾತ್ಮಾ ಮಹಾನ್ಮೇಽನುಗ್ರಹಃ ಕೃತಃ||

ಭೀಷ್ಮನು ಹೇಳಿದನು: “ಆಗ ಧರ್ಮಾತ್ಮಾ ಬ್ರಾಹ್ಮಣನು ಮೇಘನಿಗೆ ಶಿರಸಾ ನಮಸ್ಕರಿಸಿ ಹೇಳಿದನು: “ನೀನು ನನ್ನಮೇಲೆ ಮಹಾ ಅನುಗ್ರಹವನ್ನೇ ಮಾಡಿದ್ದೀಯೆ.

12263050a ಕಾಮಲೋಭಾನುಬಂಧೇನ ಪುರಾ ತೇ ಯದಸೂಯಿತಮ್|

12263050c ಮಯಾ ಸ್ನೇಹಮವಿಜ್ಞಾಯ ತತ್ರ ಮೇ ಕ್ಷಂತುಮರ್ಹಸಿ||

ಕಾಮಲೋಭದಿಂದ ಬಂಧಿತನಾಗಿದ್ದ ಮತ್ತು ಅಸೂಯಾಪರನಾಗಿದ್ದ ನಾನು ಮೊದಲು ನಿನ್ನ ಪ್ರೀತಿಯನ್ನು ಗುರುತಿಸಲಿಲ್ಲ. ಅದಕ್ಕೆ ನನ್ನನ್ನು ಕ್ಷಮಿಸಬೇಕು.”

12263051a ಕ್ಷಾಂತಮೇವ ಮಯೇತ್ಯುಕ್ತ್ವಾ ಕುಂಡಧಾರೋ ದ್ವಿಜರ್ಷಭಮ್|

12263051c ಸಂಪರಿಷ್ವಜ್ಯ ಬಾಹುಭ್ಯಾಂ ತತ್ರೈವಾಂತರಧೀಯತ||

“ನಾನು ನಿನ್ನನ್ನು ಕ್ಷಮಿಸಿದ್ದೇನೆ” ಎಂದು ಹೇಳಿ ಕುಂಡಧಾರನು ದ್ವಿಜರ್ಷಭನನ್ನು ತನ್ನ ಬಾಹುಗಳಿಂದ ಬಿಗಿದಪ್ಪಿ ಅಲ್ಲಿಯೇ ಅಂತರ್ಧಾನನಾದನು.

12263052a ತತಃ ಸರ್ವಾನಿಮಾಽಲ್ಲೋಕಾನ್ಬ್ರಾಹ್ಮಣೋಽನುಚಚಾರ ಹ|

12263052c ಕುಂಡಧಾರಪ್ರಸಾದೇನ ತಪಸಾ ಯೋಜಿತಃ ಪುರಾ||

ಕುಂಡಧಾರನ ಪ್ರಸಾದದಿಂದ ಮತ್ತು ತಪಸ್ಸಿನಿಂದ ಯುಕ್ತನಾದ ಆ ಬ್ರಾಹ್ಮಣನು ಹಿಂದೆ ಈ ಸರ್ವ ಲೋಕಗಳಲ್ಲಿಯೂ ಸಂಚರಿಸಿದನು.

12263053a ವಿಹಾಯಸಾ ಚ ಗಮನಂ ತಥಾ ಸಂಕಲ್ಪಿತಾರ್ಥತಾ|

12263053c ಧರ್ಮಾಚ್ಚಕ್ತ್ಯಾ ತಥಾ ಯೋಗಾದ್ಯಾ ಚೈವ ಪರಮಾ ಗತಿಃ||

ಧರ್ಮ ಮತ್ತು ಯೋಗಗಳಿಂದ ಪರಮ ಗತಿಯನ್ನು ಪಡೆದುಕೊಳ್ಳಬಹುದು. ಬೇಕಾದಲ್ಲಿಗೆ ಹೋಗಬಹುದು ಮತ್ತು ಸಂಕಲ್ಪಿಸಿದುದನ್ನು ಪಡೆದುಕೊಳ್ಳಬಹುದು.

12263054a ದೇವತಾ ಬ್ರಾಹ್ಮಣಾಃ ಸಂತೋ ಯಕ್ಷಾ ಮಾನುಷಚಾರಣಾಃ|

12263054c ಧಾರ್ಮಿಕಾನ್ಪೂಜಯಂತೀಹ ನ ಧನಾಢ್ಯಾನ್ನ ಕಾಮಿನಃ||

ಧಾರ್ಮಿಕರನ್ನು ದೇವತೆಗಳೂ, ಬ್ರಾಹ್ಮಣರೂ, ಸಂತರೂ, ಯಕ್ಷರೂ, ಮನುಷ್ಯರೂ, ಚಾರಣರೂ ಪೂಜಿಸುತ್ತಾರೆ. ಆದರೆ ಧನಾಢ್ಯರನ್ನು ಮತ್ತು ಕಾಮಿಗಳನ್ನಲ್ಲ.

12263055a ಸುಪ್ರಸನ್ನಾ ಹಿ ತೇ ದೇವಾ ಯತ್ತೇ ಧರ್ಮೇ ರತಾ ಮತಿಃ|

12263055c ಧನೇ ಸುಖಕಲಾ ಕಾ ಚಿದ್ಧರ್ಮೇ ತು ಪರಮಂ ಸುಖಮ್||

ನಿನ್ನ ಮತಿಯು ಧರ್ಮರತವಾಗಿರುವುದರಿಂದ ದೇವತೆಗಳು ನಿನ್ನ ಮೇಲೆ ಪ್ರಸನ್ನರಾಗಿದ್ದಾರೆ. ಧನದಲ್ಲಿ ಸುಖವು ಅಲ್ಪಮಾತ್ರವು. ಆದರೆ ಧರ್ಮದಲ್ಲಿ ಪರಮ ಸುಖವಿದೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಕುಂಡಧಾರೋಪಾಖ್ಯಾನೇ ತ್ರಿಷಷ್ಟ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಕುಂಡಧಾರೋಪಾಖ್ಯಾನ ಎನ್ನುವ ಇನ್ನೂರಾಅರವತ್ಮೂರನೇ ಅಧ್ಯಾಯವು.

Comments are closed.