Drona Parva: Chapter 87

ದ್ರೋಣ ಪರ್ವ: ಜಯದ್ರಥವಧ ಪರ್ವ

೮೭

ಅರ್ಜುನನಿದ್ದೆಡೆಗೆ ಹೋಗುತ್ತೇನೆಂದು ಸಾತ್ಯಕಿಯು ಯುಧಿಷ್ಠಿರನಿಗೆ ಹೇಳಿದುದು (೧-೫೨). ರಥವನ್ನು ಸಿದ್ಧಪಡಿಸಿ, ತಾನೂ ಸಿದ್ಧನಾಗಿ, ಭೀಮಸೇನನಿಗೆ ಯುಧಿಷ್ಠಿರನನ್ನು ರಕ್ಷಿಸುವಂತೆ ಹೇಳಿ ಬೀಳ್ಕೊಂಡು ಸಾತ್ಯಕಿಯು ಕೌರವ ಸೇನೆಯನ್ನು ಪ್ರವೇಶಿಸಿದುದು (೫೩-೭೫).

07087001 ಸಂಜಯ ಉವಾಚ|

07087001a ಧರ್ಮರಾಜಸ್ಯ ತದ್ವಾಕ್ಯಂ ನಿಶಮ್ಯ ಶಿನಿಪುಂಗವಃ|

07087001c ಪಾರ್ಥಾಚ್ಚ ಭಯಮಾಶಂಕನ್ಪರಿತ್ಯಾಗಾನ್ಮಹೀಪತೇಃ||

ಸಂಜಯನು ಹೇಳಿದನು: “ಧರ್ಮರಾಜನ ಆ ಮಾತನ್ನು ಕೇಳಿ ಶಿನಿಪುಂಗವನು ಮಹೀಪತಿಯನ್ನು ಬಿಟ್ಟುಹೋದರೆ ಪಾರ್ಥನು ಏನು ಹೇಳುವನೋ ಎಂದು ಹೆದರಿ ಶಂಕಿಸಿದನು.

07087002a ಅಪವಾದಂ ಹ್ಯಾತ್ಮನಶ್ಚ ಲೋಕಾದ್ರಕ್ಷನ್ವಿಶೇಷತಃ|

07087002c ನ ಮಾಂ ಭೀತ ಇತಿ ಬ್ರೂಯುರಾಯಾಂತಂ ಫಲ್ಗುನಂ ಪ್ರತಿ||

ಭೀತಿಯಿಂದ ನಾನು ಫಲ್ಗುನನ್ನು ರಕ್ಷಿಸಲು ಹೋಗಲಿಲ್ಲ ಎಂದು ಜನರು ನನ್ನ ಮೇಲೆ ವಿಶೇಷ ಅಪರಾಧವನ್ನು ಹೊರಿಸದಿರಲಿ ಎಂದು ಅಂದುಕೊಂಡನು.

07087003a ನಿಶ್ಚಿತ್ಯ ಬಹುಧೈವಂ ಸ ಸಾತ್ಯಕಿರ್ಯುದ್ಧದುರ್ಮದಃ|

07087003c ಧರ್ಮರಾಜಮಿದಂ ವಾಕ್ಯಮಬ್ರವೀತ್ಪುರುಷರ್ಷಭ||

ಪುರುಷರ್ಷಭ! ಬಹುವಿಧದಲ್ಲಿ ಯೋಚಿಸಿ ನಿರ್ಧರಿಸಿ ಯುದ್ಧದುರ್ಮದ ಸಾತ್ಯಕಿಯು ಧರ್ಮರಾಜನಿಗೆ ಈ ಮಾತನ್ನಾಡಿದನು:

07087004a ಕೃತಾಂ ಚೇನ್ಮನ್ಯಸೇ ರಕ್ಷಾಂ ಸ್ವಸ್ತಿ ತೇಽಸ್ತು ವಿಶಾಂ ಪತೇ|

07087004c ಅನುಯಾಸ್ಯಾಮಿ ಬೀಭತ್ಸುಂ ಕರಿಷ್ಯೇ ವಚನಂ ತವ||

“ವಿಶಾಂಪತೇ! ನಿನ್ನ ರಕ್ಷಣೆಗೆ ವ್ಯವಸ್ಥೆ ಮಾಡಿಯಾಗಿದೆ ಎಂದು ನಿನಗನ್ನಿಸಿದರೆ, ನಿನ್ನ ಮಾತಿನಂತೆ ಮಾಡುತ್ತೇನೆ. ಬೀಭತ್ಸುವನ್ನು ಅನುಸರಿಸಿ ಹೋಗುತ್ತೇನೆ. ನಿನಗೆ ಮಂಗಳವಾಗಲಿ!

07087005a ನ ಹಿ ಮೇ ಪಾಂಡವಾತ್ಕಶ್ಚಿತ್ತ್ರಿಷು ಲೋಕೇಷು ವಿದ್ಯತೇ|

07087005c ಯೋ ವೈ ಪ್ರಿಯತರೋ ರಾಜನ್ಸತ್ಯಮೇತದ್ಬ್ರವೀಮಿ ತೇ||

ರಾಜನ್! ಆ ಪಾಂಡವನಿಗಿಂತ ಪ್ರಿಯರಾದವರು ಈ ಮೂರು ಲೋಕಗಳಲ್ಲಿ ಯಾರೂ ಇಲ್ಲ. ನಿಜವನ್ನೇ ನಿನಗೆ ಹೇಳುತ್ತಿದ್ದೇನೆ.

07087006a ತಸ್ಯಾಹಂ ಪದವೀಂ ಯಾಸ್ಯೇ ಸಂದೇಶಾತ್ತವ ಮಾನದ|

07087006c ತ್ವತ್ಕೃತೇ ನ ಚ ಮೇ ಕಿಂ ಚಿದಕರ್ತವ್ಯಂ ಕಥಂ ಚನ||

ಮಾನದ! ನಿನ್ನ ಸಂದೇಶದಂತೆ ನಾನು ಅವನಿದ್ದಲ್ಲಿಗೆ ಹೋಗುತ್ತೇನೆ. ನೀನು ಏನು ಹೇಳಿದರೂ ಅದನ್ನು ನಾನು ಎಂದೂ ಮಾಡದೇ ಇರುವುದಿಲ್ಲ.

07087007a ಯಥಾ ಹಿ ಮೇ ಗುರೋರ್ವಾಕ್ಯಂ ವಿಶಿಷ್ಟಂ ದ್ವಿಪದಾಂ ವರ|

07087007c ತಥಾ ತವಾಪಿ ವಚನಂ ವಿಶಿಷ್ಟತರಮೇವ ಮೇ||

ದ್ವಿಪದರಲ್ಲಿ ಶ್ರೇಷ್ಠ! ಹಿರಿಯರ ವಾಕ್ಯವು ನನಗೆ ವಿಶಿಷ್ಟವಾದುದು. ಅದರಲ್ಲೂ ನಿನ್ನ ವಚನವು ನನಗೆ ಅತ್ಯಂತ ವಿಶಿಷ್ಟವಾದುದು.

07087008a ಪ್ರಿಯೇ ಹಿ ತವ ವರ್ತೇತೇ ಭ್ರಾತರೌ ಕೃಷ್ಣಪಾಂಡವೌ|

07087008c ತಯೋಃ ಪ್ರಿಯೇ ಸ್ಥಿತಂ ಚೈವ ವಿದ್ಧಿ ಮಾಂ ರಾಜಪುಂಗವ||

ರಾಜಪುಂಗವ! ಸಹೋದರರಾದ ಕೃಷ್ಣ-ಪಾಂಡವರು ನಿನ್ನ ಮಾತಿನಂತೆಯೇ ನಡೆದುಕೊಳ್ಳುವವರು. ನಿನಗೆ ಪ್ರಿಯವಾದುದರಲ್ಲಿಯೇ ತೊಡಗಿರುತ್ತಾರೆ. ಅದು ನನಗೆ ತಿಳಿದಿದೆ.

07087009a ತವಾಜ್ಞಾಂ ಶಿರಸಾ ಗೃಹ್ಯ ಪಾಂಡವಾರ್ಥಮಹಂ ಪ್ರಭೋ|

07087009c ಭಿತ್ತ್ವೇದಂ ದುರ್ಭಿದಂ ಸೈನ್ಯಂ ಪ್ರಯಾಸ್ಯೇ ನರಸತ್ತಮ||

ಪ್ರಭೋ! ನರಸತ್ತಮ! ನಿನ್ನ ಆಜ್ಞೆಯನ್ನು ಶಿರಸಾ ಧರಿಸಿ ಪಾಂಡವನಿಗೋಸ್ಕರವಾಗಿ ನಾನು ದುರ್ಭೇದ್ಯವಾದ ಈ ಸೇನೆಯನ್ನು ಭೇದಿಸಿ ಹೋಗುತ್ತೇನೆ.

07087010a ದ್ರೋಣಾನೀಕಂ ವಿಶಾಮ್ಯೇಷ ಕ್ರುದ್ಧೋ ಝಷ ಇವಾರ್ಣವಂ|

07087010c ತತ್ರ ಯಾಸ್ಯಾಮಿ ಯತ್ರಾಸೌ ರಾಜನ್ರಾಜಾ ಜಯದ್ರಥಃ||

07087011a ಯತ್ರ ಸೇನಾಂ ಸಮಾಶ್ರಿತ್ಯ ಭೀತಸ್ತಿಷ್ಠತಿ ಪಾಂಡವಾತ್|

07087011c ಗುಪ್ತೋ ರಥವರಶ್ರೇಷ್ಠೈರ್ದ್ರೌಣಿಕರ್ಣಕೃಪಾದಿಭಿಃ||

ತಿಮಿಂಗಿಲವು ಸಮುದ್ರವನ್ನು ಹೇಗೋ ಹಾಗೆ ಈ ದ್ರೋಣಸೇನೆಯನ್ನು ಪ್ರವೇಶಿಸಿ ಎಲ್ಲಿ ಪಾಂಡವನಿಗೆ ಹೆದರಿ ರಥವರಶ್ರೇಷ್ಠರಾದ ದ್ರೌಣಿ-ಕರ್ಣ-ಕೃಪಾದಿಗಳಿಂದ ರಕ್ಷಿತನಾಗಿ, ಸೇನೆಗಳನ್ನು ಆಶ್ರಯಿಸಿ ರಾಜಾ ಜಯದ್ರಥನು ನಿಂತಿದ್ದಾನೋ ಅಲ್ಲಿಗೆ ಹೋಗುತ್ತೇನೆ.

07087012a ಇತಸ್ತ್ರಿಯೋಜನಂ ಮನ್ಯೇ ತಮಧ್ವಾನಂ ವಿಶಾಂ ಪತೇ|

07087012c ಯತ್ರ ತಿಷ್ಠತಿ ಪಾರ್ಥೋಽಸೌ ಜಯದ್ರಥವಧೋದ್ಯತಃ||

ವಿಶಾಂಪತೇ! ಜಯದ್ರಥನ ವಧೆಗೆ ಸಿದ್ಧನಾಗಿ ಪಾರ್ಥನು ನಿಂತಿರುವ ಸ್ಥಳವು ಇಲ್ಲಿಂದ ಮೂರು ಯೋಜನೆಗಳಿವೆ ಎಂದು ನನಗನ್ನಿಸುತ್ತದೆ.

07087013a ತ್ರಿಯೋಜನಗತಸ್ಯಾಪಿ ತಸ್ಯ ಯಾಸ್ಯಾಮ್ಯಹಂ ಪದಂ|

07087013c ಆಸೈಂಧವವಧಾದ್ರಾಜನ್ಸುದೃಢೇನಾಂತರಾತ್ಮನಾ||

ರಾಜನ್! ಮೂರು ಯೋಜನೆಗಳು ಹೋಗಬೇಕಾದರೂ ನಾನು ಅಂತರಾತ್ಮದಲ್ಲಿ ಸುದೃಢನಾಗಿದ್ದು ಸೈಂಧವನ ವಧೆಯಾಗುವವರೆಗೆ ಅಲ್ಲಿ ಇರುತ್ತೇನೆ.

07087014a ಅನಾದಿಷ್ಟಸ್ತು ಗುರುಣಾ ಕೋ ನು ಯುಧ್ಯೇತ ಮಾನವಃ|

07087014c ಆದಿಷ್ಟಸ್ತು ತ್ವಯಾ ರಾಜನ್ಕೋ ನ ಯುಧ್ಯೇತ ಮಾದೃಶಃ|

07087014e ಅಭಿಜಾನಾಮಿ ತಂ ದೇಶಂ ಯತ್ರ ಯಾಸ್ಯಾಮ್ಯಹಂ ಪ್ರಭೋ||

ಹಿರಿಯರ ಆದೇಶವಿಲ್ಲದೇ ಯಾವ ಮನುಷ್ಯನು ಯುದ್ಧಮಾಡುತ್ತಾನೆ? ರಾಜನ್! ನಿನ್ನಿಂದ ಆದೇಶವನ್ನು ಪಡೆದು ನನ್ನಂತಹ ಯಾರು ತಾನೇ ಯುದ್ಧಮಾಡುವುದಿಲ್ಲ? ಪ್ರಭೋ! ನಾನು ಎಲ್ಲಿಗೆ ಹೋಗುತ್ತಿರುವೆನೋ ಆ ಪ್ರದೇಶವನ್ನು ನಾನು ತಿಳಿದಿದ್ದೇನೆ.

07087015a ಹುಡಶಕ್ತಿಗದಾಪ್ರಾಸಖಡ್ಗಚರ್ಮರ್ಷ್ಟಿತೋಮರಂ|

07087015c ಇಷ್ವಸ್ತ್ರವರಸಂಬಾಧಂ ಕ್ಷೋಭಯಿಷ್ಯೇ ಬಲಾರ್ಣವಂ||

ಕೊಡಲಿ, ಶಕ್ತಿ, ಗದೆ, ಪ್ರಾಸ, ಖಡ್ಗ, ಚರ್ಮ, ಋಷ್ಟಿ, ತೋಮರ, ಮತ್ತು ಶ್ರೇಷ್ಠ ಶರಗಳಿಂದ ಈ ಸೇನಾಸಾಗರವನ್ನು ಬಾಧಿಸಿ ಕ್ಷೋಭೆಗೊಳಿಸುತ್ತೇನೆ.

07087016a ಯದೇತತ್ಕುಂಜರಾನೀಕಂ ಸಾಹಸ್ರಮನುಪಶ್ಯಸಿ|

07087016c ಕುಲಮಂಜನಕಂ ನಾಮ ಯತ್ರೈತೇ ವೀರ್ಯಶಾಲಿನಃ||

ಇದೇನು ನೋಡುತ್ತಿರುವೆಯಲ್ಲ ಆ ಸಹಸ್ರ ಆನೆಗಳ ಸೇನೆಯು ವೀರ್ಯಶಾಲಿ ಅಂಜನಕ ಎಂಬ ಹೆಸರಿನ ಕುಲದವು.

07087017a ಆಸ್ಥಿತಾ ಬಹುಭಿರ್ಮ್ಲೇಚ್ಚೈರ್ಯುದ್ಧಶೌಂಡೈಃ ಪ್ರಹಾರಿಭಿಃ|

07087017c ನಾಗಾ ಮೇಘನಿಭಾ ರಾಜನ್ ಕ್ಷರಂತ ಇವ ತೋಯದಾಃ||

ರಾಜನ್! ನೀರು ಸುರಿಸುವ ಮೋಡಗಳಂತೆ ಮದೋದಕವನ್ನು ಸುರಿಸುವ ಈ ಆನೆಗಳ ಮೇಲೆ ಅನೇಕ ಯುದ್ಧಶೌಂಡ ಪ್ರಹಾರಿ ಮ್ಲೇಚ್ಛರು ಇದ್ದಾರೆ.

07087018a ನೈತೇ ಜಾತು ನಿವರ್ತೇರನ್ಪ್ರೇಷಿತಾ ಹಸ್ತಿಸಾದಿಭಿಃ|

07087018c ಅನ್ಯತ್ರ ಹಿ ವಧಾದೇಷಾಂ ನಾಸ್ತಿ ರಾಜನ್ ಪರಾಜಯಃ||

ರಾಜನ್! ಮಾವುತರಿಂದ ಕಳುಹಿಸಲ್ಪಡದೇ ಇವು ಪಲಾಯನಮಾಡುವುದಿಲ್ಲ. ಇವುಗಳನ್ನು ಕೊಲ್ಲದೆಯೇ ಪರಾಜಯಗೊಳಿಸಲಾಗುವುದಿಲ್ಲ.

07087019a ಅಥ ಯಾನ್ರಥಿನೋ ರಾಜನ್ಸಮಂತಾದನುಪಶ್ಯಸಿ|

07087019c ಏತೇ ರುಕ್ಮರಥಾ ನಾಮ ರಾಜಪುತ್ರಾ ಮಹಾರಥಾಃ||

ರಾಜನ್! ಅದೋ ನೀನು ನೋಡುತ್ತಿರುವ ರಥಿಗಳ ಗುಂಪಿದೆಯಲ್ಲ ಅದು ರುಕ್ಮರಥರೆಂಬ ಹೆಸರಿನ ಮಹಾರಥ ರಾಜಪುತ್ರರು.

07087020a ರಥೇಷ್ವಸ್ತ್ರೇಷು ನಿಪುಣಾ ನಾಗೇಷು ಚ ವಿಶಾಂ ಪತೇ|

07087020c ಧನುರ್ವೇದೇ ಗತಾಃ ಪಾರಂ ಮುಷ್ಟಿಯುದ್ಧೇ ಚ ಕೋವಿದಾಃ||

ವಿಶಾಂಪತೇ! ಅವರು ರಥಯುದ್ಧದಲ್ಲಿ, ಅಸ್ತ್ರಗಳಲ್ಲಿ ಮತ್ತು ಆನೆಗಳ ಮೇಲಿಂದ ಯುದ್ಧಮಾಡುವುದರಲ್ಲಿ ನಿಪುಣರು; ಧನುರ್ವೇದದಲ್ಲಿ ಪಾರಂಗತರು ಮತ್ತು ಮುಷ್ಟಿಯುದ್ಧದಲ್ಲಿ ಕೋವಿದರು.

07087021a ಗದಾಯುದ್ಧವಿಶೇಷಜ್ಞಾ ನಿಯುದ್ಧಕುಶಲಾಸ್ತಥಾ|

07087021c ಖಡ್ಗಪ್ರಹರಣೇ ಯುಕ್ತಾಃ ಸಂಪಾತೇ ಚಾಸಿಚರ್ಮಣೋಃ||

ಗದಾಯುದ್ಧದಲ್ಲಿ ವಿಶೇಷಜ್ಞರಾದ ಅವರು ಸಮೀಪಯುದ್ಧದಲ್ಲಿಯೂ ಕುಶಲರು. ಖಡ್ಗಪ್ರಹರಣದಲ್ಲಿ ಮತ್ತು ಖಡ್ಗ-ಗುರಾಣಿಗಳ ಪ್ರಹಾರದಲ್ಲಿ ಪರಿಣತರು.

07087022a ಶೂರಾಶ್ಚ ಕೃತವಿದ್ಯಾಶ್ಚ ಸ್ಪರ್ಧಂತೇ ಚ ಪರಸ್ಪರಂ|

07087022c ನಿತ್ಯಂ ಚ ಸಮರೇ ರಾಜನ್ವಿಜಿಗೀಷಂತಿ ಮಾನವಾನ್||

ರಾಜನ್! ತರಬೇತಿ ಹೊಂದಿದ ಆ ಶೂರರು ಪರಸ್ಪರರೊಡನೆ ಸ್ಪರ್ಧಿಸುತ್ತಾರೆ. ನಿತ್ಯವೂ ಸಮರದಲ್ಲಿ ಮನುಷ್ಯರನ್ನು ಗೆಲ್ಲುತ್ತಾರೆ.

07087023a ಕರ್ಣೇನ ವಿಜಿತಾ ರಾಜನ್ದುಃಶಾಸನಮನುವ್ರತಾಃ|

07087023c ಏತಾಂಸ್ತು ವಾಸುದೇವೋಽಪಿ ರಥೋದಾರಾನ್ಪ್ರಶಂಸತಿ||

ರಾಜನ್! ಕರ್ಣನಿಂದ ಸೋಲಿಸಲ್ಪಟ್ಟ, ದುಃಶಾಸನನನ್ನು ಅನುಸರಿಸುವ ಈ ರಥೋದಾರರನ್ನು ವಾಸುದೇವನೂ ಕೂಡ ಪ್ರಶಂಸಿಸುತ್ತಾನೆ.

07087024a ಸತತಂ ಪ್ರಿಯಕಾಮಾಶ್ಚ ಕರ್ಣಸ್ಯೈತೇ ವಶೇ ಸ್ಥಿತಾಃ|

07087024c ತಸ್ಯೈವ ವಚನಾದ್ರಾಜನ್ನಿವೃತ್ತಾಃ ಶ್ವೇತವಾಹನಾತ್||

ಸತತವೂ ಕರ್ಣನ ವಶದಲ್ಲಿದ್ದುಕೊಂಡು ಅವನಿಗೆ ಪ್ರಿಯವಾದುದನ್ನೇ ಬಯಸುವ ಅವರು ಅವನದೇ ಮಾತಿನಂತೆ ಶ್ವೇತವಾಹನನೆಡೆಗೆ ತೆರಳಿದ್ದಾರೆ.

07087025a ತೇ ನ ಕ್ಷತಾ ನ ಚ ಶ್ರಾಂತಾ ದೃಢಾವರಣಕಾರ್ಮುಕಾಃ|

07087025c ಮದರ್ಥಂ ವಿಷ್ಠಿತಾ ನೂನಂ ಧಾರ್ತರಾಷ್ಟ್ರಸ್ಯ ಶಾಸನಾತ್||

ಆಯಾಸಗೊಳ್ಳದ ಮತ್ತು ಗಾಯಗೊಳ್ಳದ ಅವರು ದೃಢ ಕವಚ-ಕಾರ್ಮುಕಗಳನ್ನು ಹಿಡಿದು ಧಾರ್ತರಾಷ್ಟ್ರನ ಶಾಸನದಂತೆ ನನಗಾಗಿಯೇ ಕಾದುಕೊಂಡಿರುವಂತಿದ್ದಾರೆ.

07087026a ಏತಾನ್ಪ್ರಮಥ್ಯ ಸಂಗ್ರಾಮೇ ಪ್ರಿಯಾರ್ಥಂ ತವ ಕೌರವ|

07087026c ಪ್ರಯಾಸ್ಯಾಮಿ ತತಃ ಪಶ್ಚಾತ್ಪದವೀಂ ಸವ್ಯಸಾಚಿನಃ||

ಕೌರವ! ನಿನಗೆ ಪ್ರೀತಿಗಾಗಿ ಇವರನ್ನು ಸಂಗ್ರಾಮದಲ್ಲಿ ಮಥಿಸಿ ನಂತರ ಸವ್ಯಸಾಚಿಯ ಬಳಿಗೆ ಹೋಗುತ್ತೇನೆ.

07087027a ಯಾಂಸ್ತ್ವೇತಾನಪರಾನ್ರಾಜನ್ನಾಗಾನ್ಸಪ್ತಶತಾನಿ ಚ|

07087027c ಪ್ರೇಕ್ಷಸೇ ವರ್ಮಸಂಚನ್ನಾನ್ಕಿರಾತೈಃ ಸಮಧಿಷ್ಠಿತಾನ್||

ರಾಜನ್! ಅಲ್ಲಿರುವ ಇತರ ಏಳು ನೂರು ಆನೆಗಳನ್ನು ನೋಡು! ಕವಚಧಾರಿಗಳಾದ ಕಿರಾತರು ಅವುಗಳನ್ನು ಏರಿದ್ದಾರೆ.

07087028a ಕಿರಾತರಾಜೋ ಯಾನ್ಪ್ರಾದಾದ್ಗೃಹೀತಃ ಸವ್ಯಸಾಚಿನಾ|

07087028c ಸ್ವಲಂಕೃತಾಂಸ್ತಥಾ ಪ್ರೇಷ್ಯಾನಿಚ್ಚಂ ಜೀವಿತಮಾತ್ಮನಃ||

ಅಲಂಕೃತನಾಗಿರುವ ಆ ಕಿರಾತರಾಜನು ಹಿಂದೆ ಸವ್ಯಸಾಚಿಗೆ ಸೇವಕರನ್ನಿತ್ತು ತನ್ನ ಜೀವವನ್ನು ಉಳಿಸಿಕೊಂಡಿದ್ದನು.

07087029a ಆಸನ್ನೇತೇ ಪುರಾ ರಾಜಂಸ್ತವ ಕರ್ಮಕರಾ ದೃಢಂ|

07087029c ತ್ವಾಮೇವಾದ್ಯ ಯುಯುತ್ಸಂತೇ ಪಶ್ಯ ಕಾಲಸ್ಯ ಪರ್ಯಯಂ||

ರಾಜನ್! ಹಿಂದೆ ಇವನು ನಿನ್ನ ದೃಢ ಸೇವಕನಾಗಿದ್ದನು. ಆದರೆ ಇಂದು ನಿನ್ನೊಡನೆ ಯುದ್ಧಮಾಡುತ್ತಿದ್ದಾನೆ. ಕಾಲದ ಪರ್ಯಯವನ್ನು ನೋಡು!

07087030a ತೇಷಾಮೇತೇ ಮಹಾಮಾತ್ರಾಃ ಕಿರಾತಾ ಯುದ್ಧದುರ್ಮದಾಃ|

07087030c ಹಸ್ತಿಶಿಕ್ಷಾವಿದಶ್ಚೈವ ಸರ್ವೇ ಚೈವಾಗ್ನಿಯೋನಯಃ||

ಈ ಯುದ್ಧದುರ್ಮದ ಕಿರಾತರು ದೊಡ್ಡ ದೇಹದವರು. ಆನೆಗಳನ್ನು ಪಳಗಿಸುವುದರಲ್ಲಿ ಪರಿಣಿತರು. ಎಲ್ಲರೂ ಅಗ್ನಿಯಂತಹ ಕಣ್ಣುಳ್ಳವರು.

07087031a ಏತೇ ವಿನಿರ್ಜಿತಾಃ ಸರ್ವೇ ಸಂಗ್ರಾಮೇ ಸವ್ಯಸಾಚಿನಾ|

07087031c ಮದರ್ಥಮದ್ಯ ಸಂಯತ್ತಾ ದುರ್ಯೋಧನವಶಾನುಗಾಃ||

ಇವರೆಲ್ಲರೂ ಸಂಗ್ರಾಮದಲ್ಲಿ ಸವ್ಯಸಾಚಿಯಿಂದ ಸೋತು, ದುರ್ಯೋಧನನ ವಶಕ್ಕೆ ಬಂದು ನನಗಾಗಿ ಇಂದು ಸೇರಿ ಕಾಯುತ್ತಿದ್ದಾರೆ.

07087032a ಏತಾನ್ಭಿತ್ತ್ವಾ ಶರೈ ರಾಜನ್ಕಿರಾತಾನ್ಯುದ್ಧದುರ್ಮದಾನ್|

07087032c ಸೈಂಧವಸ್ಯ ವಧೇ ಯುಕ್ತಮನುಯಾಸ್ಯಾಮಿ ಪಾಂಡವಂ||

ರಾಜನ್! ಈ ಯುದ್ಧದುರ್ಮದ ಕಿರಾತರನ್ನು ಶರಗಳಿಂದ ಭೇದಿಸಿ ಸೈಂಧವನ ವಧೆಯಲ್ಲಿ ತೊಡಗಿರುವ ಪಾಂಡವನ ಬಳಿ ಹೋಗುತ್ತೇನೆ.

07087033a ಯೇ ತ್ವೇತೇ ಸುಮಹಾನಾಗಾ ಅಂಜನಸ್ಯ ಕುಲೋದ್ಭವಾಃ|

07087033c ಕರ್ಕಶಾಶ್ಚ ವಿನೀತಾಶ್ಚ ಪ್ರಭಿನ್ನಕರಟಾಮುಖಾಃ||

ಈ ಅಂಜನ ಕುಲದಲ್ಲಿ ಹುಟ್ಟಿದ ಬಾಯಿಯಿಂದ ಮದೋದಕವನ್ನು ಸುರಿಸುತ್ತಿರುವ ಮಹಾ ಆನೆಗಳು ಕರ್ಕಶವಾಗಿವೆ ಮತ್ತು ವಿನೀತವಾದವು ಕೂಡ.

07087034a ಜಾಂಬೂನದಮಯೈಃ ಸರ್ವೈರ್ವರ್ಮಭಿಃ ಸುವಿಭೂಷಿತಾಃ|

07087034c ಲಬ್ಧಲಕ್ಷ್ಯಾ ರಣೇ ರಾಜನ್ನೈರಾವಣಸಮಾ ಯುಧಿ||

ರಾಜನ್! ಬಂಗಾರದ ಕವಚಗಳಿಂದ ವಿಭೂಷಿತಗೊಂಡ ಅವೆಲ್ಲವೂ ರಣದಲ್ಲಿ ಐರಾವತದಂತೆ ಗುರಿಯಿಟ್ಟು ಹೋರಾಡುತ್ತವೆ.

07087035a ಉತ್ತರಾತ್ಪರ್ವತಾದೇತೇ ತೀಕ್ಷ್ಣೈರ್ದಸ್ಯುಭಿರಾಸ್ಥಿತಾಃ|

07087035c ಕರ್ಕಶೈಃ ಪ್ರವರೈರ್ಯೋಧೈಃ ಕಾರ್ಷ್ಣಾಯಸತನುಚ್ಚದೈಃ||

ಅವು ಉತ್ತರ ಪರ್ವತದೇಶದಿಂದ ಬಂದಿವೆ. ಅವುಗಳನ್ನು ತೀಕ್ಷ್ಣ ಕರ್ಕಶ, ಶ್ರೇಷ್ಠಯೋಧರಾದ ದಸ್ಯುಗಳನ್ನು ಉಕ್ಕಿನ ಕವಚಗಳನ್ನು ಧರಿಸಿ ಏರಿದ್ದಾರೆ.

07087036a ಸಂತಿ ಗೋಯೋನಯಶ್ಚಾತ್ರ ಸಂತಿ ವಾನರಯೋನಯಃ|

07087036c ಅನೇಕಯೋನಯಶ್ಚಾನ್ಯೇ ತಥಾ ಮಾನುಷಯೋನಯಃ||

ಅವರಲ್ಲಿ ಗೋವಿನ ಯೋನಿಯಲ್ಲಿ, ವಾನರ ಯೋನಿಯಲ್ಲಿ, ಮತ್ತು ಅನೇಕ ಯೋನಿಗಳಲ್ಲಿ ಜನಿಸಿದ, ಮನುಷ್ಯ ಯೋನಿಯವರೂ ಇದ್ದಾರೆ.

07087037a ಅನೀಕಮಸತಾಮೇತದ್ಧೂಮವರ್ಣಮುದೀರ್ಯತೇ|

07087037c ಮ್ಲೇಚ್ಚಾನಾಂ ಪಾಪಕತೄಣಾಂ ಹಿಮವದ್ದುರ್ಗವಾಸಿನಾಂ||

ಹಿಮಾಲಯದ ದುರ್ಗಗಳಲ್ಲಿ ವಾಸಿಸುವ ಆ ಪಾಪಕರ್ಮಿಗಳ, ಕೆಟ್ಟವರ ಸೇನೆಯು ದೂರದಿಂದ ಹೊಗೆಯ ಬಣ್ಣವನ್ನು ಹೊಂದಿರುವಂತೆ ಕಾಣಿಸುತ್ತದೆ.

07087038a ಏತದ್ದುರ್ಯೋಧನೋ ಲಬ್ಧ್ವಾ ಸಮಗ್ರಂ ನಾಗಮಂಡಲಂ|

07087038c ಕೃಪಂ ಚ ಸೌಮದತ್ತಿಂ ಚ ದ್ರೋಣಂ ಚ ರಥಿನಾಂ ವರಂ||

07087039a ಸಿಂಧುರಾಜಂ ತಥಾ ಕರ್ಣಮವಮನ್ಯತ ಪಾಂಡವಾನ್|

07087039c ಕೃತಾರ್ಥಮಥ ಚಾತ್ಮಾನಂ ಮನ್ಯತೇ ಕಾಲಚೋದಿತಃ||

ಇವರ ಈ ಸಮಗ್ರ ಗಜಸೇನೆಯನ್ನು ಪಡೆದು, ಮತ್ತು ಕೃಪ, ಸೌಮದತ್ತಿ, ರಥಿಗಳಲ್ಲಿ ಶ್ರೇಷ್ಠ ದ್ರೋಣ, ಸಿಂಧುರಾಜ, ಮತ್ತು ಕರ್ಣರನ್ನು ಪಡೆದು ದುರ್ಯೋಧನನು ಪಾಂಡವರನ್ನು ಕೀಳಾಗಿ ಕಾಣುತ್ತಾನೆ. ಕಾಲದಿಂದ ಪ್ರಚೋದಿತನಾಗಿ ತನ್ನನ್ನು ತಾನೇ ಕೃತಾರ್ಥನಾದೆನೆಂದು ತಿಳಿದುಕೊಂಡಿದ್ದಾನೆ.

07087040a ತೇ ಚ ಸರ್ವೇಽನುಸಂಪ್ರಾಪ್ತಾ ಮಮ ನಾರಾಚಗೋಚರಂ|

07087040c ನ ವಿಮೋಕ್ಷ್ಯಂತಿ ಕೌಂತೇಯ ಯದ್ಯಪಿ ಸ್ಯುರ್ಮನೋಜವಾಃ||

ಇವರೆಲ್ಲರೂ ನನ್ನ ನಾರಾಚಗಳ ದಾರಿಯಲ್ಲಿ ಬರುತ್ತಾರೆ. ಕೌಂತೇಯ! ಒಂದುವೇಳೆ ಇವರು ಮನೋವೇಗವನ್ನು ಹೊಂದಿದ್ದರೂ ನನ್ನಿಂದ ತಪ್ಪಿಸಿಕೊಳ್ಳಲಾರರು.

07087041a ತೇನ ಸಂಭಾವಿತಾ ನಿತ್ಯಂ ಪರವೀರ್ಯೋಪಜೀವಿನಾ|

07087041c ವಿನಾಶಮುಪಯಾಸ್ಯಂತಿ ಮಚ್ಚರೌಘನಿಪೀಡಿತಾಃ||

ನಿತ್ಯವೂ ಇತರರ ವೀರ್ಯವನ್ನವಲಂಬಿಸಿ ಜೀವಿಸುವ ಅವನನ್ನು ಸೇರಿರುವ ಅವರು ನನ್ನ ಶರೌಘಗಳಿಂದ ಪೀಡಿತನಾಗಿ ವಿನಾಶಹೊಂದುತ್ತಾನೆ.

07087042a ಯೇ ತ್ವೇತೇ ರಥಿನೋ ರಾಜನ್ದೃಶ್ಯಂತೇ ಕಾಂಚನಧ್ವಜಾಃ|

07087042c ಏತೇ ದುರ್ವಾರಣಾ ನಾಮ ಕಾಂಬೋಜಾ ಯದಿ ತೇ ಶ್ರುತಾಃ||

ರಾಜನ್! ಈ ಮೂವರು ಕಾಂಚನಧ್ವಜವುಳ್ಳ ರಥಿಗಳು ಕಾಣುತ್ತಾರಲ್ಲಾ ಅವರು ತಡೆಯಲಸಾದ್ಯವಾದ  ಕಾಂಬೋಜರೆಂಬ ಹೆಸರುಳ್ಳವರು. ನೀನು ಇವರ ಕುರಿತು ಕೇಳಿರಬಹುದು.

07087043a ಶೂರಾಶ್ಚ ಕೃತವಿದ್ಯಾಶ್ಚ ಧನುರ್ವೇದೇ ಚ ನಿಷ್ಠಿತಾಃ|

07087043c ಸಂಹತಾಶ್ಚ ಭೃಶಂ ಹ್ಯೇತೇ ಅನ್ಯೋನ್ಯಸ್ಯ ಹಿತೈಷಿಣಃ||

ಅವರು ಶೂರರು, ವಿದ್ಯಾವಂತರು, ಧನುರ್ವೇದದಲ್ಲಿ ನಿಷ್ಠೆಯನ್ನಿಟ್ಟುಕೊಂಡಿರುವವರು. ಅನ್ಯೋನ್ಯರ ಹಿತೈಷಿಗಳಾದ ಇವರು ತುಂಬಾ ಸಂಘಟಿತರಾಗಿದ್ದಾರೆ.

07087044a ಅಕ್ಷೌಹಿಣ್ಯಶ್ಚ ಸಂರಬ್ಧಾ ಧಾರ್ತರಾಷ್ಟ್ರಸ್ಯ ಭಾರತ|

07087044c ಯತ್ತಾ ಮದರ್ಥಂ ತಿಷ್ಠಂತಿ ಕುರುವೀರಾಭಿರಕ್ಷಿತಾಃ||

ಭಾರತ! ಕುರುವೀರರಿಂದ ರಕ್ಷಿತವಾದ ಧಾರ್ತರಾಷ್ಟ್ರನ ಅಕ್ಷೌಹಿಣಿಯೂ ಕೂಡ ಸಂರಬ್ಧವಾಗಿ ನನಗಾಗಿ ಪ್ರಯತ್ನಿಸಿ ನಿಂತಿದೆ.

07087045a ಅಪ್ರಮತ್ತಾ ಮಹಾರಾಜ ಮಾಮೇವ ಪ್ರತ್ಯುಪಸ್ಥಿತಾಃ|

07087045c ತಾಂಸ್ತ್ವಹಂ ಪ್ರಮಥಿಷ್ಯಾಮಿ ತೃಣಾನೀವ ಹುತಾಶನಃ||

ಮಹಾರಾಜ! ನನ್ನ ಮೇಲೆಯೇ ಕಣ್ಣನ್ನಿಟ್ಟು ಜಾಗರೂಕರಾಗಿ ಕಾಯುತ್ತಿದ್ದಾರೆ. ಹುತಾಶನನು ಹುಲ್ಲುಮೆದೆಯನ್ನು ಹೇಗೋ ಹಾಗೆ ನಾನು ಅವರನ್ನು ನಾಶಗೊಳಿಸುತ್ತೇನೆ.

07087046a ತಸ್ಮಾತ್ಸರ್ವಾನುಪಾಸಂಗಾನ್ಸರ್ವೋಪಕರಣಾನಿ ಚ|

07087046c ರಥೇ ಕುರ್ವಂತು ಮೇ ರಾಜನ್ಯಥಾವದ್ರಥಕಲ್ಪಕಾಃ||

ಆದುದರಿಂದ ರಾಜನ್! ರಥವನ್ನು ಸಿದ್ಧಗೊಳಿಸುವವರು ಎಲ್ಲ ಉಪಕರಣಗಳನ್ನೂ, ಆಯುಧಗಳನ್ನೂ ಇರಿಸಿ ರಥವನ್ನು ಸಿದ್ಧಪಡಿಸಲಿ.

07087047a ಅಸ್ಮಿಂಸ್ತು ಖಲು ಸಂಗ್ರಾಮೇ ಗ್ರಾಹ್ಯಂ ವಿವಿಧಮಾಯುಧಂ|

07087047c ಯಥೋಪದಿಷ್ಟಮಾಚಾರ್ಯೈಃ ಕಾರ್ಯಃ ಪಂಚಗುಣೋ ರಥಃ||

ಈ ಸಂಗ್ರಾಮದಲ್ಲಿ ವಿವಿಧ ಆಯುಧಗಳನ್ನು ಹಿಡಿದು ಹೋಗಿರಬೇಕು. ಆಚಾರ್ಯರು ಒಂದು ರಥದಲ್ಲಿ ಎಷ್ಟಿರಬೇಕೆಂದು ಉಪದೇಶಿಸುತ್ತಾರೋ ಅದಕ್ಕೂ ಐದು ಪಟ್ಟು ನನ್ನ ರಥದಲ್ಲಿರಿಸಲಿ.

07087048a ಕಾಂಬೋಜೈರ್ಹಿ ಸಮೇಷ್ಯಾಮಿ ಕ್ರುದ್ಧೈರಾಶೀವಿಷೋಪಮೈಃ|

07087048c ನಾನಾಶಸ್ತ್ರಸಮಾವಾಪೈರ್ವಿವಿಧಾಯುಧಯೋಧಿಭಿಃ||

ಏಕೆಂದರೆ ಕ್ರುದ್ಧ ಸರ್ಪಗಳ ವಿಷದಂತಿರುವ, ನಾನಾ ಶಸ್ತ್ರಗಳಿಂದ ಕೂಡಿರುವ, ವಿವಿಧ ಆಯುಧಗಳನ್ನು ಹಿಡಿದ ಯೋಧರಿಂದ ಕೂಡಿದ ಕಾಂಬೋಜರನ್ನು ಎದುರಿಸುತ್ತೇನೆ.

07087049a ಕಿರಾತೈಶ್ಚ ಸಮೇಷ್ಯಾಮಿ ವಿಷಕಲ್ಪೈಃ ಪ್ರಹಾರಿಭಿಃ|

07087049c ಲಾಲಿತೈಃ ಸತತಂ ರಾಜ್ಞಾ ದುರ್ಯೋಧನಹಿತೈಷಿಭಿಃ||

ರಾಜಾ ದುರ್ಯೋಧನನ ಹಿತೈಷಿಗಳಾದ, ಅವನಿಂದ ಲಾಲಿಸಲ್ಪಟ್ಟ, ವಿಷಸಮಾನ ಪ್ರಹಾರಿಗಳಾದ ಕಿರಾತರನ್ನು ಎದುರಿಸುವವನಿದ್ದೇನೆ.

07087050a ಶಕೈಶ್ಚಾಪಿ ಸಮೇಷ್ಯಾಮಿ ಶಕ್ರತುಲ್ಯಪರಾಕ್ರಮೈಃ|

07087050c ಅಗ್ನಿಕಲ್ಪೈರ್ದುರಾಧರ್ಷೈಃ ಪ್ರದೀಪ್ತೈರಿವ ಪಾವಕೈಃ||

ಪಾವಕನಂತೆ ಉರಿಯುತ್ತಿರುವ, ಅಗ್ನಿಯಂತೆ ದುರಾಧರ್ಷರಾಗಿರುವ, ಶಕ್ರನ ಸಮನಾದ ಪರಾಕ್ರಮವುಳ್ಳ ಶಕರನ್ನು ಕೂಡ ಎದುರಿಸಲಿದ್ದೇನೆ.

07087051a ತಥಾನ್ಯೈರ್ವಿವಿಧೈರ್ಯೋಧೈಃ ಕಾಲಕಲ್ಪೈರ್ದುರಾಸದೈಃ|

07087051c ಸಮೇಷ್ಯಾಮಿ ರಣೇ ರಾಜನ್ಬಹುಭಿರ್ಯುದ್ಧದುರ್ಮದೈಃ||

ರಾಜನ್! ರಣದಲ್ಲಿ ಕಾಲನಂತೆ ದುರಾಸದರಾಗಿರುವ ಇನ್ನೂ ಅನ್ಯ ವಿವಿಧ ಯೋಧರೊಂದಿಗೆ ಮತ್ತು ಅನೇಕ ಯುದ್ಧ ದುರ್ಮದರೊಂದಿಗೆ ಹೋರಾಡುವವನಿದ್ದೇನೆ.

07087052a ತಸ್ಮಾದ್ವೈ ವಾಜಿನೋ ಮುಖ್ಯಾ ವಿಶ್ರಾಂತಾಃ ಶುಭಲಕ್ಷಣಾಃ|

07087052c ಉಪಾವೃತ್ತಾಶ್ಚ ಪೀತಾಶ್ಚ ಪುನರ್ಯುಜ್ಯಂತು ಮೇ ರಥೇ||

ಆದುದರಿಂದ ನನ್ನ ರಥಕ್ಕೆ ಪ್ರಮುಖ ಶುಭಲಕ್ಷಣಗಳನ್ನು ಹೊಂದಿದ, ವಿಶ್ರಾಂತಿಹೊಂದಿರುವ, ತಿನಿಸು-ಪಾನೀಯಗಳನ್ನು ತೆಗೆದುಕೊಂಡಿರುವ ಕುದುರೆಗಳನ್ನು ಪುನಃ ಕಟ್ಟಲಿ.”

07087053a ತಸ್ಯ ಸರ್ವಾನುಪಾಸಂಗಾನ್ಸರ್ವೋಪಕರಣಾನಿ ಚ|

07087053c ರಥೇ ಪ್ರಾಸ್ಥಾಪಯದ್ರಾಜಾ ಶಸ್ತ್ರಾಣಿ ವಿವಿಧಾನಿ ಚ||

ಅನಂತರ ರಾಜನು ಅವನ ರಥದಲ್ಲಿ ಸರ್ವ ಉಪಾಸಂಗಗಳನ್ನೂ, ಸರ್ವ ಉಪಕರಣಗಳನ್ನೂ, ಮತ್ತು ವಿವಿಧ ಶಸ್ತ್ರಗಳನ್ನೂ ಇರಿಸಿದನು.

07087054a ತತಸ್ತಾನ್ಸರ್ವತೋ ಮುಕ್ತ್ವಾ ಸದಶ್ವಾಂಶ್ಚತುರೋ ಜನಾಃ|

07087054c ರಸವತ್ಪಾಯಯಾಮಾಸುಃ ಪಾನಂ ಮದಸಮೀರಿಣಂ||

ಜನರು ಎಲ್ಲಕಡೆಗಳಿಂದ ಆ ನಾಲ್ಕು ಉತ್ತಮ ಕುದುರೆಗಳನ್ನು ಬಿಚ್ಚಿ, ರಸವತ್ತಾದ ಪಾನೀಯವನ್ನು ಕುಡಿಸಿದರು.

07087055a ಪೀತೋಪವೃತ್ತಾನ್ಸ್ನಾತಾಂಶ್ಚ ಜಗ್ಧಾನ್ನಾನ್ಸಮಲಂಕೃತಾನ್|

07087055c ವಿನೀತಶಲ್ಯಾಂಸ್ತುರಗಾಂಶ್ಚತುರೋ ಹೇಮಮಾಲಿನಃ||

ಕುಡಿಸಿದ ನಂತರ ತಿರುಗಾಡಿಸಿ, ಬಾಣಗಳನ್ನು ಕಿತ್ತು, ಸ್ನಾನಮಾಡಿಸಿ ಆ ನಾಲ್ಕೂ ಕುದುರೆಗಳನ್ನು ಬಂಗಾರದ ಮಾಲೆಗಳಿಂದ ಅಲಂಕರಿಸಿದರು.

07087056a ತಾನ್ಯತ್ತಾನ್ರುಕ್ಮವರ್ಣಾಭಾನ್ವಿನೀತಾಂ ಶೀಘ್ರಗಾಮಿನಃ|

07087056c ಸಂಹೃಷ್ಟಮನಸೋಽವ್ಯಗ್ರಾನ್ವಿಧಿವತ್ಕಲ್ಪಿತೇ ರಥೇ||

ಆ ಬೆಳ್ಳಿಯಬಣ್ಣದಿಂದ ಹೊಳೆಯುತ್ತಿದ್ದ, ವಿನೀತರಾದ, ಶೀಘ್ರಗಾಮಿಗಳಾದ, ಸಂಹೃಷ್ಟ ಮನಸ್ಕರಾದ, ಆ ಅವ್ಯಗ್ರ ಕುದುರೆಗಳನ್ನು ವಿಧಿವತ್ತಾಗಿ ರಥಕ್ಕೆ ಕಟ್ಟಲಾಯಿತು.

07087057a ಮಹಾಧ್ವಜೇನ ಸಿಂಹೇನ ಹೇಮಕೇಸರಮಾಲಿನಾ|

07087057c ಸಂವೃತೇ ಕೇತನೈರ್ಹೇಮೈರ್ಮಣಿವಿದ್ರುಮಚಿತ್ರಿತೈಃ|

07087057e ಪಾಂಡುರಾಭ್ರಪ್ರಕಾಶಾಭಿಃ ಪತಾಕಾಭಿರಲಂಕೃತೇ||

ರಥವನ್ನು ಸಿಂಹದ ಮಹಾಧ್ವಜದಿಂದ, ಹೇಮಕೇಸರ ಮಾಲೆಗಳಿಂದ, ಬಂಗಾರ-ಮಣಿ-ವಿದ್ರುಮ-ಚಿತ್ರಗಳಿಂದ ಕೂಡಿದ ಕೇತುಗಳಿಂದ, ಬಿಳಿಯ ಮೋಡಗಳಂತೆ ಪ್ರಕಾಶಿಸುವ ಪತಾಕೆಗಳಿಂದ ಅಲಂಕರಿಸಿದರು.

07087058a ಹೇಮದಂಡೋಚ್ಚ್ರಿತಚ್ಚತ್ರೇ ಬಹುಶಸ್ತ್ರಪರಿಚ್ಚದೇ|

07087058c ಯೋಜಯಾಮಾಸ ವಿಧಿವದ್ಧೇಮಭಾಂಡವಿಭೂಷಿತಾನ್||

ಬಂಗಾರದ ದಂಡದ ಮೇಲೆ ಚತ್ರವಿದ್ದಿತು. ಬಹುಶಸ್ತ್ರಗಳಿಂದ ತುಂಬಿದ್ದ ಅದಕ್ಕೆ ವಿಧಿವತ್ತಾಗಿ ಬಂಗಾರದ ತಗಡನ್ನು ಮುಚ್ಚಲಾಯಿತು.

07087059a ದಾರುಕಸ್ಯಾನುಜೋ ಭ್ರಾತಾ ಸೂತಸ್ತಸ್ಯ ಪ್ರಿಯಃ ಸಖಾ|

07087059c ನ್ಯವೇದಯದ್ರಥಂ ಯುಕ್ತಂ ವಾಸವಸ್ಯೇವ ಮಾತಲಿಃ||

ವಾಸವನಿಗೆ ಮಾತಲಿಯು ಹೇಗೋ ಹಾಗೆ ದಾರುಕನ ತಮ್ಮ, ಅವನ ಪ್ರಿಯಸಖ, ಸೂತನು ರಥವು ಸಿದ್ಧವಾಗಿದೆಯೆಂದು ನಿವೇದಿಸಿದನು.

07087060a ತತಃ ಸ್ನಾತಃ ಶುಚಿರ್ಭೂತ್ವಾ ಕೃತಕೌತುಕಮಂಗಲಃ|

07087060c ಸ್ನಾತಕಾನಾಂ ಸಹಸ್ರಸ್ಯ ಸ್ವರ್ಣನಿಷ್ಕಾನದಾಪಯತ್|

07087060e ಆಶೀರ್ವಾದೈಃ ಪರಿಷ್ವಕ್ತಃ ಸಾತ್ಯಕಿಃ ಶ್ರೀಮತಾಂ ವರಃ||

ಅನಂತರ ಶ್ರೀಮತರಲ್ಲಿ ಶ್ರೇಷ್ಠ ಸಾತ್ಯಕಿಯು ಸ್ನಾನಮಾಡಿ ಶುಚಿರ್ಭೂತನಾಗಿ, ಕೌತುಕಮಂಗಲವನ್ನು ಮಾಡಿಕೊಂಡು, ಸಾವಿರ ಸ್ನಾತಕರಿಗೆ ಬಂಗಾರದ ಮೊಹರುಗಳನ್ನಿತ್ತು ಅವರ ಆಶೀರ್ವಾದಗಳಿಂದ ಆವೃತನಾದನು.

07087061a ತತಃ ಸ ಮಧುಪರ್ಕಾರ್ಹಃ ಪೀತ್ವಾ ಕೈಲಾವತಂ ಮಧು|

07087061c ಲೋಹಿತಾಕ್ಷೋ ಬಭೌ ತತ್ರ ಮದವಿಹ್ವಲಲೋಚನಃ||

ಆಗ ಅವನು ಮಧುಪರ್ಕವನ್ನು ಸೇವಿಸಿ, ಕೈಲಾವತ ಮಧುವನ್ನು ಕುಡಿದು ಮದವಿಹ್ವಲಲೋಚನನಾಗಿ ಲೋಹಿತಾಕ್ಷನಾದನು.

07087062a ಆಲಭ್ಯ ವೀರಕಾಂಸ್ಯಂ ಚ ಹರ್ಷೇಣ ಮಹತಾನ್ವಿತಃ|

07087062c ದ್ವಿಗುಣೀಕೃತತೇಜಾ ಹಿ ಪ್ರಜ್ವಲನ್ನಿವ ಪಾವಕಃ|

07087062e ಉತ್ಸಂಗೇ ಧನುರಾದಾಯ ಸಶರಂ ರಥಿನಾಂ ವರಃ||

ವೀರರು ಮುಟ್ಟಬೇಕಾದ ಕಂಚಿನ ಪಾತ್ರೆಯನ್ನು ಮುಟ್ಟಿ ಹರ್ಷದಿಂದ ಉಬ್ಬಿ ತೇಜಸ್ಸಿನಲ್ಲಿ ದ್ವಿಗುಣಿತನಾಗಿ ಪಾವಕನಂತೆ ಪ್ರಜ್ವಲಿಸಿದನು. ಅನಂತರ ಆ ರಥಿಗಳಲ್ಲಿ ಶ್ರೇಷ್ಠನು ಶರದೊಂದಿಗೆ ಧನುಸ್ಸನ್ನೆತ್ತಿಕೊಂಡನು.

07087063a ಕೃತಸ್ವಸ್ತ್ಯಯನೋ ವಿಪ್ರೈಃ ಕವಚೀ ಸಮಲಂಕೃತಃ|

07087063c ಲಾಜೈರ್ಗಂಧೈಸ್ತಥಾ ಮಾಲ್ಯೈಃ ಕನ್ಯಾಭಿಶ್ಚಾಭಿನಂದಿತಃ|

ವಿಪ್ರರಿಂದ ಸ್ವಸ್ತಿವಾಚನಗಳನ್ನು ಮಾಡಿಸಿಕೊಂಡು ಕವಚದಿಂದ ಸಮಲಂಕೃತಗೊಂಡು ಕನ್ಯೆಯರಿಂದ ಲಾಜ-ಗಂಧ-ಮಾಲೆಗಳಿಂದ ಅಭಿನಂದಿತನಾದನು.

07087064a ಯುಧಿಷ್ಠಿರಸ್ಯ ಚರಣಾವಭಿವಾದ್ಯ ಕೃತಾಂಜಲಿಃ|

07087064c ತೇನ ಮೂರ್ಧನ್ಯುಪಾಘ್ರಾತ ಆರುರೋಹ ಮಹಾರಥಂ||

ಯುಧಿಷ್ಠಿರನ ಚರಣಗಳಿಗೆ ಕೈಮುಗಿದು ಅಭಿವಂದಿಸಿ, ಅವನು ನೆತ್ತಿಯನ್ನು ಆಘ್ರಾಣಿಸಲು, ಮಹಾರಥವನ್ನು ಏರಿದನು.

07087065a ತತಸ್ತೇ ವಾಜಿನೋ ಹೃಷ್ಟಾಃ ಸುಪುಷ್ಟಾ ವಾತರಂಹಸಃ|

07087065c ಅಜಯ್ಯಾ ಜೈತ್ರಮೂಹುಸ್ತಂ ವಿಕುರ್ವಂತಃ ಸ್ಮ ಸೈಂಧವಾಃ||

ಆಗ ಅವನ ಹೃಷ್ಟ ಸುಪುಷ್ಟ ಗಾಳಿಯ ವೇಗವುಳ್ಳ ಅಜೇಯ ಸಿಂಧುದೇಶದ ಕುದುರೆಗಳು ಕೆನೆದವು.

07087066a ಅಥ ಹರ್ಷಪರೀತಾಂಗಃ ಸಾತ್ಯಕಿರ್ಭೀಮಮಬ್ರವೀತ್|

07087066c ತ್ವಂ ಭೀಮ ರಕ್ಷ ರಾಜಾನಮೇತತ್ಕಾರ್ಯತಮಂ ಹಿ ತೇ||

ಆಗ ಹರ್ಷಪರೀತಾಂಗನಾದ ಸಾತ್ಯಕಿಯು ಭೀಮನಿಗೆ ಹೇಳಿದನು: “ಭೀಮ! ನೀನು ರಾಜನನ್ನು ರಕ್ಷಿಸು. ಈಗ ಇದೇ ನಿನ್ನ ಅತಿಮುಖ್ಯ ಕಾರ್ಯವಾಗಿದೆ.

07087067a ಅಹಂ ಭಿತ್ತ್ವಾ ಪ್ರವೇಕ್ಷ್ಯಾಮಿ ಕಾಲಪಕ್ವಮಿದಂ ಬಲಂ|

07087067c ಆಯತ್ಯಾಂ ಚ ತದಾತ್ವೇ ಚ ಶ್ರೇಯೋ ರಾಜ್ಞೋಽಭಿರಕ್ಷಣಂ||

ಸಮಯವು ಮುಗಿದಿರುವ ಈ ಸೇನೆಯನ್ನು ಭೇದಿಸಿ ಪ್ರವೇಶಿಸುತ್ತೇನೆ. ಈಗ ಮತ್ತು ಅನಂತರ ರಾಜನನ್ನು ರಕ್ಷಿಸುವುದು ಶ್ರೇಯಸ್ಕರವಾದುದು.

07087068a ಜಾನೀಷೇ ಮಮ ವೀರ್ಯಂ ತ್ವಂ ತವ ಚಾಹಮರಿಂದಮ|

07087068c ತಸ್ಮಾದ್ಭೀಮ ನಿವರ್ತಸ್ವ ಮಮ ಚೇದಿಚ್ಚಸಿ ಪ್ರಿಯಂ||

ಅರಿಂದಮ! ನನ್ನ ವೀರ್ಯವು ನಿನಗೆ ತಿಳಿದಿದೆ. ನಿನ್ನದು ನನಗೆ ತಿಳಿದಿದೆ. ಆದುದರಿಂದ ಭೀಮ! ನನಗೆ ಪ್ರಿಯವಾದುದನ್ನು ಬಯಸುವೆಯಾದರೆ ಹಿಂದಿರುಗು!”

07087069a ತಥೋಕ್ತಃ ಸಾತ್ಯಕಿಂ ಪ್ರಾಹ ವ್ರಜ ತ್ವಂ ಕಾರ್ಯಸಿದ್ಧಯೇ|

07087069c ಅಹಂ ರಾಜ್ಞಃ ಕರಿಷ್ಯಾಮಿ ರಕ್ಷಾಂ ಪುರುಷಸತ್ತಮ||

ಆಗ ಅವನು ಸಾತ್ಯಕಿಗೆ ಹೇಳಿದನು: “ನಿನ್ನ ಕಾರ್ಯಸಿದ್ಧಿಗೆ ಹೊರಡು! ಪುರುಷಸತ್ತಮ! ನಾನು ರಾಜನ ರಕ್ಷಣೆಯನ್ನು ಮಾಡುತ್ತೇನೆ.”

07087070a ಏವಮುಕ್ತಃ ಪ್ರತ್ಯುವಾಚ ಭೀಮಸೇನಂ ಸ ಮಾಧವಃ|

07087070c ಗಚ್ಚ ಗಚ್ಚ ದ್ರುತಂ ಪಾರ್ಥ ಧ್ರುವೋಽದ್ಯ ವಿಜಯೋ ಮಮ||

ಹೀಗೆ ಹೇಳಲು ಮಾಧವನು ಭೀಮಸೇನನಿಗೆ ಉತ್ತರಿಸಿದನು: “ಪಾರ್ಥ! ಹೋಗು! ಹೋಗು! ಇಂದು ನನ್ನ ವಿಜಯವು ನಿಶ್ಚಿತವಾಗಿದೆ.

07087071a ಯನ್ಮೇ ಸ್ನಿಗ್ಧೋಽನುರಕ್ತಶ್ಚ ತ್ವಮದ್ಯ ವಶಗಃ ಸ್ಥಿತಃ|

07087071c ನಿಮಿತ್ತಾನಿ ಚ ಧನ್ಯಾನಿ ಯಥಾ ಭೀಮ ವದಂತಿ ಮೇ||

ನನ್ನಲ್ಲೇ ಅನುರಕ್ತನಾದ ನೀನು ಇಂದು ನನ್ನ ವಶದಲ್ಲಿ ಬಂದಿದ್ದೀಯೆ. ಭೀಮ! ನಿಮಿತ್ತಗಳು ಕೂಡ ಧನ್ಯನಾಗುವೆನೆಂದೇ ನನಗೆ ಹೇಳುತ್ತಿವೆ.

07087072a ನಿಹತೇ ಸೈಂಧವೇ ಪಾಪೇ ಪಾಂಡವೇನ ಮಹಾತ್ಮನಾ|

07087072c ಪರಿಷ್ವಜಿಷ್ಯೇ ರಾಜಾನಂ ಧರ್ಮಾತ್ಮಾನಂ ನ ಸಂಶಯಃ||

ಪಾಪಿ ಸೈಂಧವನು ಮಹಾತ್ಮ ಪಾಂಡವನಿಂದ ಹತನಾದನಂತರ ಧರ್ಮಾತ್ಮ ರಾಜನನ್ನು ಅಪ್ಪಿಕೊಳ್ಳುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ.”

07087073a ಏತಾವದುಕ್ತ್ವಾ ಭೀಮಂ ತು ವಿಸೃಜ್ಯ ಚ ಮಹಾಮನಾಃ|

07087073c ಸಂಪ್ರೈಕ್ಷತ್ತಾವಕಂ ಸೈನ್ಯಂ ವ್ಯಾಘ್ರೋ ಮೃಗಗಣಾನಿವ||

ಹೀಗೆ ಹೇಳಿ ಭೀಮನನ್ನು ಬೀಳ್ಕೊಂಡು ಆ ಮಹಾಮನನು ಹುಲಿಯೊಂದು ಜಿಂಕೆಗಳ ಹಿಂಡನ್ನು ಎವೆಯಿಕ್ಕದೇ ನಿನ್ನ ಸೇನೆಯನ್ನು ನೋಡಿದನು.

07087074a ತಂ ದೃಷ್ಟ್ವಾ ಪ್ರವಿವಿಕ್ಷಂತಂ ಸೈನ್ಯಂ ತವ ಜನಾಧಿಪ|

07087074c ಭೂಯ ಏವಾಭವನ್ಮೂಢಂ ಸುಭೃಶಂ ಚಾಪ್ಯಕಂಪತ||

ಜನಾಧಿಪ! ಅವನು ಹಾಗೆ ನಿನ್ನ ಸೇನೆಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಿರಲು ಅದು ಮೂಢವಾಗಿ ಪುನಃ ಏನು ಮಾಡಬೇಕೆಂದು ತೋಚದೇ ಕಂಪಿಸಿತು.

07087075a ತತಃ ಪ್ರಯಾತಃ ಸಹಸಾ ಸೈನ್ಯಂ ತವ ಸ ಸಾತ್ಯಕಿಃ|

07087075c ದಿದೃಕ್ಷುರರ್ಜುನಂ ರಾಜನ್ಧರ್ಮರಾಜಸ್ಯ ಶಾಸನಾತ್||

ರಾಜನ್! ಧರ್ಮರಾಜನ ಶಾಸನದಂತೆ ಅರ್ಜುನನನ್ನು ಕಾಣಲು ಒಮ್ಮೆಲೇ ಸಾತ್ಯಕಿಯು ನಿನ್ನ ಸೇನೆಯ ಮೇಲೆರಗಿದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಾತ್ಯಕಿಪ್ರವೇಶೇ ಸಪ್ತಾಶೀತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಾತ್ಯಕಿಪ್ರವೇಶ ಎನ್ನುವ ಎಂಭತ್ತೇಳನೇ ಅಧ್ಯಾಯವು.

Related image

Comments are closed.