Drona Parva: Chapter 88

ದ್ರೋಣ ಪರ್ವ: ಜಯದ್ರಥವಧ ಪರ್ವ

೮೮

ಸಾತ್ಯಕಿಯು ದ್ರೋಣನೊಡನೆ ಯುದ್ಧಮಾಡಿ ಅವನನ್ನು ಬಿಟ್ಟು ಮುಂದುವರಿದುದು (೧-೩೬). ಸಾತ್ಯಕಿ-ಕೃತವರ್ಮರ ಯುದ್ಧ; ಸಾತ್ಯಕಿಯು ಕಾಂಬೋಜರನ್ನು ಆಕ್ರಮಣಿಸಿ ಮುಂದುವರಿದುದು (೩೭-೫೨). ಭೀಮನು ಕೃತವರ್ಮನನ್ನು ಎದುರಿಸಿದುದು (೫೩-೫೯).  

07088001 ಸಂಜಯ ಉವಾಚ|

07088001a ಪ್ರಯಾತೇ ತವ ಸೈನ್ಯಂ ತು ಯುಯುಧಾನೇ ಯುಯುತ್ಸಯಾ|

07088001c ಧರ್ಮರಾಜೋ ಮಹಾರಾಜ ಸ್ವೇನಾನೀಕೇನ ಸಂವೃತಃ|

07088001e ಪ್ರಾಯಾದ್ದ್ರೋಣರಥಪ್ರೇಪ್ಸುರ್ಯುಯುಧಾನಸ್ಯ ಪೃಷ್ಠತಃ||

ಸಂಜಯನು ಹೇಳಿದನು: “ಮಹಾರಾಜ! ಯುದ್ಧಮಾಡಲು ಉತ್ಸಾಹದಿಂದ ನಿನ್ನ ಸೈನ್ಯದ ಕಡೆ ಯುಯುಧಾನನು ಹೊರಡಲು ಧರ್ಮರಾಜನು ಯುಯುಧಾನನ ಹಿಂದೆ ತನ್ನ ಸೇನೆಯಿಂದ ಪರಿವೃತನಾಗಿ ದ್ರೋಣನ ರಥದ ಕಡೆ ಹೊರಟನು.

07088002a ತತಃ ಪಾಂಚಾಲರಾಜಸ್ಯ ಪುತ್ರಃ ಸಮರದುರ್ಮದಃ|

07088002c ಪ್ರಾಕ್ರೋಶತ್ಪಾಂಡವಾನೀಕೇ ವಸುದಾನಶ್ಚ ಪಾರ್ಥಿವಃ||

ಆಗ ಪಾಂಚಾಲರಾಜನ ಮಗ ಸಮರದುರ್ಮದ ಮತ್ತು ಪಾರ್ಥಿವ ವಸುದಾನರು ಪಾಂಡವರ ಸೇನೆಗೆ ಕೂಗಿ ಹೇಳಿದರು:

07088003a ಆಗಚ್ಚತ ಪ್ರಹರತ ದ್ರುತಂ ವಿಪರಿಧಾವತ|

07088003c ಯಥಾ ಸುಖೇನ ಗಚ್ಚೇತ ಸಾತ್ಯಕಿರ್ಯುದ್ಧದುರ್ಮದಃ||

07088004a ಮಹಾರಥಾ ಹಿ ಬಹವೋ ಯತಿಷ್ಯಂತ್ಯಸ್ಯ ನಿರ್ಜಯೇ|

“ಬೇಗ ಬನ್ನಿ! ಯುದ್ಧದುರ್ಮದ ಸಾತ್ಯಕಿಯು ಸುಲಭವಾಗಿ ಹೋಗಬಲ್ಲಂತೆ ಮಾಡಲು ವೇಗದಿಂದ ಆಕ್ರಮಿಸಿ. ಅನೇಕ ಮಹಾರಥರು ಅವನನ್ನು ಜಯಿಸಲು ಪ್ರಯತ್ನಿಸುತ್ತಾರೆ!”

07088004c ಇತಿ ಬ್ರುವಂತೋ ವೇಗೇನ ಸಮಾಪೇತುರ್ಬಲಂ ತವ||

07088005a ವಯಂ ಪ್ರತಿಜಿಗೀಷಂತಸ್ತತ್ರ ತಾನ್ಸಮಭಿದ್ರುತಾಃ|

07088005c ತತಃ ಶಬ್ದೋ ಮಹಾನಾಸೀದ್ಯುಯುಧಾನರಥಂ ಪ್ರತಿ||

ಹೀಗೆ ಹೇಳುತ್ತಾ ವೇಗದಿಂದ ನಿನ್ನ ಸೇನೆಯ ಮೇಲೆ ಆಕ್ರಮಣಿಸಿ “ಅವನನ್ನು ಗೆಲ್ಲಲು ಬಯಸುವವರನ್ನು ಸೋಲಿಸುತ್ತೇವೆ!” ಎಂದು ಎರಗಿದರು. ಆಗ ಯುಯುಧಾನನ ರಥದ ಬಳಿ ಮಹಾ ಶಬ್ಧವುಂಟಾಯಿತು.

07088006a ಪ್ರಕಂಪ್ಯಮಾನಾ ಮಹತೀ ತವ ಪುತ್ರಸ್ಯ ವಾಹಿನೀ|

07088006c ಸಾತ್ವತೇನ ಮಹಾರಾಜ ಶತಧಾಭಿವ್ಯದೀರ್ಯತ||

ಮಹಾರಾಜ! ಕಂಪಿಸುತ್ತಿದ್ದ ನಿನ್ನ ಮಗನ ಮಹಾ ಸೇನೆಯು ಸಾತ್ವತನಿಂದ ನೂರು ವಾಹಿನಿಗಳಾಗಿ ಒಡೆಯಲ್ಪಟ್ಟಿತು.

07088007a ತಸ್ಯಾಂ ವಿದೀರ್ಯಮಾಣಾಯಾಂ ಶಿನೇಃ ಪೌತ್ರೋ ಮಹಾರಥಃ|

07088007c ಸಪ್ತ ವೀರಾನ್ಮಹೇಷ್ವಾಸಾನಗ್ರಾನೀಕೇ ವ್ಯಪೋಥಯತ್||

ಅವರು ಹೀಗೆ ಒಡೆದು ಹೋಗಲು ಶಿನಿಯ ಮೊಮ್ಮಗ ಮಹಾರಥನು ಸೇನೆಯ ಎದುರಿನಲ್ಲಿದ್ದ ಏಳು ಮಹೇಷ್ವಾಸ ವೀರರನ್ನು ಉರುಳಿಸಿದನು.

07088008a ತೇ ಭೀತಾ ಮೃದ್ಯಮಾನಾಶ್ಚ ಪ್ರಮೃಷ್ಟಾ ದೀರ್ಘಬಾಹುನಾ|

07088008c ಆಯೋಧನಂ ಜಹುರ್ವೀರಾ ದೃಷ್ಟ್ವಾ ತಮತಿಮಾನುಷಂ||

ಆ ದೀರ್ಘಬಾಹುವಿನಿಂದ ಸದೆಬಡಿಯಲ್ಪಟ್ಟ ಆ ವೀರರು ಹೆದರಿ, ಅವನ ಅತಿಮಾನುಷತ್ವವನ್ನು ಕಂಡು ಯುದ್ಧಮಾಡುವುದನ್ನೇ ತೊರೆದರು.

07088009a ರಥೈರ್ವಿಮಥಿತಾಕ್ಷೈಶ್ಚ ಭಗ್ನನೀಡೈಶ್ಚ ಮಾರಿಷ|

07088009c ಚಕ್ರೈರ್ವಿಮಥಿತೈಶ್ಚಿನ್ನೈರ್ಧ್ವಜೈಶ್ಚ ವಿನಿಪಾತಿತೈಃ||

07088010a ಅನುಕರ್ಷೈಃ ಪತಾಕಾಭಿಃ ಶಿರಸ್ತ್ರಾಣೈಃ ಸಕಾಂಚನೈಃ|

07088010c ಬಾಹುಭಿಶ್ಚಂದನಾದಿಗ್ಧೈಃ ಸಾಂಗದೈಶ್ಚ ವಿಶಾಂ ಪತೇ||

07088011a ಹಸ್ತಿಹಸ್ತೋಪಮೈಶ್ಚಾಪಿ ಭುಜಗಾಭೋಗಸನ್ನಿಭೈಃ|

07088011c ಊರುಭಿಃ ಪೃಥಿವೀ ಚನ್ನಾ ಮನುಜಾನಾಂ ನರೋತ್ತಮ||

ಮಾರಿಷ! ವಿಶಾಂಪತೇ! ನರೋತ್ತಮ! ನುಚ್ಚುನೂರಾದ ರಥಗಳಿಂದ, ಮುರಿದ ನೊಗಗಳಿಂದ, ಪುಡಿಪುಡಿಯಾದ ಚಕ್ರಗಳಿಂದ, ತುಂಡಾಗಿ ಬಿದ್ದ ಧ್ವಜಗಳಿಂದ, ಅನುಕರ್ಷಗಳಿಂದ, ಪತಾಕೆಗಳಿಂದ, ಕಾಂಚನದ ಶಿರಸ್ತ್ರಾಣಗಳಿಂದ, ಚಂದನಲೇಪಿತ ಅಂಗದಗಳೊಂದಿಗಿನ, ಆನೆಯ ಸೊಂಡಲಿನಂತಿರುವ ಬಾಹುಗಳಿಂದ, ಹಾವಿನ ಹೆಡೆಗಳಂತಿರುವ ಮನುಷ್ಯರ ಭುಜಗಳಿಂದ, ತೊಡೆಗಳಿಂದ ಭೂಮಿಯು ಸುಂದರವಾಗಿ ಕಾಣುತ್ತಿತ್ತು.

07088012a ಶಶಾಂಕಸನ್ನಿಕಾಶೈಶ್ಚ ವದನೈಶ್ಚಾರುಕುಂಡಲೈಃ|

07088012c ಪತಿತೈರ್ವೃಷಭಾಕ್ಷಾಣಾಂ ಬಭೌ ಭಾರತ ಮೇದಿನೀ||

ಭಾರತ! ಬಿದ್ದಿರುವ ವೃಷಭಾಕ್ಷಣರ ಚಂದ್ರನ ಪ್ರಭೆಯುಳ್ಳ, ಸುಂದರ ಕುಂಡಲಗಳಿಂದ ಅಲಂಕೃತಗೊಂಡ ಮುಖಗಳಿಂದ ಮೇದಿನಿಯು ಶೋಭಿಸುತ್ತಿತ್ತು.

07088013a ಗಜೈಶ್ಚ ಬಹುಧಾ ಚಿನ್ನೈಃ ಶಯಾನೈಃ ಪರ್ವತೋಪಮೈಃ|

07088013c ರರಾಜಾತಿಭೃಶಂ ಭೂಮಿರ್ವಿಕೀರ್ಣೈರಿವ ಪರ್ವತೈಃ||

ಪರ್ವತೋಪಮ ಅನೇಕ ಆನೆಗಳು ನಾಶಗೊಂಡು ಮಲಗಿದ್ದಿರಲು ಭೂಮಿಯು ಪರ್ವತಗಳು ಬಿದ್ದು ಹರಡಿರುವಂತೆ ತುಂಬಾ ರಾರಾಜಿಸುತ್ತಿತ್ತು.

07088014a ತಪನೀಯಮಯೈರ್ಯೋಕ್ತ್ರೈರ್ಮುಕ್ತಾಜಾಲವಿಭೂಷಿತೈಃ|

07088014c ಉರಶ್ಚದೈರ್ವಿಚಿತ್ರೈಶ್ಚ ವ್ಯಶೋಭಂತ ತುರಂಗಮಾಃ|

07088014e ಗತಸತ್ತ್ವಾ ಮಹೀಂ ಪ್ರಾಪ್ಯ ಪ್ರಮೃಷ್ಟಾ ದೀರ್ಘಬಾಹುನಾ||

ಬಂಗಾರದಿಂದ ಮಾಡಲಟ್ಟ ಮುಕ್ತಾಜಾಲಗಳಿಂದ ವಿಭೂಷಿತವಾದ, ಬಣ್ಣ ಬಣ್ಣದ ಜೀನುಗಳಿಂದ ಶೋಭಿಸುತ್ತಿದ್ದ ತುರಂಗಮಗಳು ಆ ದೀರ್ಘಬಾಹುವಿನಿಂದ ಜೀವವನ್ನು ಕಳೆದುಕೊಂಡು ನೆಲವನ್ನು ಮುಕ್ಕಿದ್ದವು.

07088015a ನಾನಾವಿಧಾನಿ ಸೈನ್ಯಾನಿ ತವ ಹತ್ವಾ ತು ಸಾತ್ವತಃ|

07088015c ಪ್ರವಿಷ್ಟಸ್ತಾವಕಂ ಸೈನ್ಯಂ ದ್ರಾವಯಿತ್ವಾ ಚಮೂಂ ಭೃಶಂ||

ನಿನ್ನ ನಾನಾವಿಧದ ಸೇನೆಗಳನ್ನು ನಾಶಗೊಳಿಸಿ ಸಾತ್ವತನು, ನಿನ್ನ ಸೇನೆಯನ್ನು ಪಲಾಯನಗೊಳಿಸಿ, ನಿನ್ನ ಸೇನೆಯನ್ನು ಪ್ರವೇಶಿಸಿದನು.

07088016a ತತಸ್ತೇನೈವ ಮಾರ್ಗೇಣ ಯೇನ ಯಾತೋ ಧನಂಜಯಃ|

07088016c ಇಯೇಷ ಸಾತ್ಯಕಿರ್ಗಂತುಂ ತತೋ ದ್ರೋಣೇನ ವಾರಿತಃ||

ಯಾವ ಮಾರ್ಗದಿಂದ ಧನಂಜಯನು ಹೋಗಿದ್ದನೋ ಅದೇ ಮಾರ್ಗದಲ್ಲಿ ಹೋಗಲು ಪ್ರಯತ್ನಿಸುತ್ತಿದ್ದ ಸಾತ್ಯಕಿಯನ್ನು ದ್ರೋಣನು ತಡೆದನು.

07088017a ಭರದ್ವಾಜಂ ಸಮಾಸಾದ್ಯ ಯುಯುಧಾನಸ್ತು ಮಾರಿಷ|

07088017c ನಾಭ್ಯವರ್ತತ ಸಂಕ್ರುದ್ಧೋ ವೇಲಾಮಿವ ಜಲಾಶಯಃ||

ಮಾರಿಷ! ಭರಧ್ವಾಜನನ್ನು ಎದುರಿಸಿದ ಯುಯುಧಾನನಾದರೋ ಸಂಕ್ರುದ್ಧನಾಗಿ ಅಲೆಗಳನ್ನು ಜಲಾಶಯವು ಹೇಗೋ ಹಾಗೆ ಹಿಂದೆಸರಿಯಲಿಲ್ಲ.

07088018a ನಿವಾರ್ಯ ತು ರಣೇ ದ್ರೋಣೋ ಯುಯುಧಾನಂ ಮಹಾರಥಂ|

07088018c ವಿವ್ಯಾಧ ನಿಶಿತೈರ್ಬಾಣೈಃ ಪಂಚಭಿರ್ಮರ್ಮಭೇದಿಭಿಃ||

ಮಹಾರಥ ಯುಯುಧಾನನನ್ನು ರಣದಲ್ಲಿ ತಡೆದು ದ್ರೋಣನು ಅವನನ್ನು ಐದು ಮರ್ಮಭೇದಿ ನಿಶಿತ ಬಾಣಗಳಿಂದ ಹೊಡೆದನು.

07088019a ಸಾತ್ಯಕಿಸ್ತು ರಣೇ ದ್ರೋಣಂ ರಾಜನ್ವಿವ್ಯಾಧ ಸಪ್ತಭಿಃ|

07088019c ಹೇಮಪುಂಖೈಃ ಶಿಲಾಧೌತೈಃ ಕಂಕಬರ್ಹಿಣವಾಜಿತೈಃ||

ರಾಜನ್! ಸಾತ್ಯಕಿಯಾದರೋ ರಣದಲ್ಲಿ ದ್ರೋಣನನ್ನು ಏಳು ಹೇಮಪುಂಖಗಳ ಶಿಲಾಧೌತ ಕಂಕಬರ್ಹಿಣ ಬಾಣಗಳಿಂದ ಹೊಡೆದನು.

07088020a ತಂ ಷಡ್ಭಿಃ ಸಾಯಕೈರ್ದ್ರೋಣಃ ಸಾಶ್ವಯಂತಾರಮಾರ್ದಯತ್|

07088020c ಸ ತಂ ನ ಮಮೃಷೇ ದ್ರೋಣಂ ಯುಯುಧಾನೋ ಮಹಾರಥಃ||

ದ್ರೋಣನು ಕುದುರೆ-ಸಾರಥಿಗಳೊಂದಿಗೆ ಅವನನ್ನು ಆರು ಸಾಯಕಗಳಿಂದ ಹೊಡೆದನು. ಆಗ ಮಹಾರಥ ಯುಯುಧಾನನು ದ್ರೋಣನನ್ನು ಸಹಿಸಿಕೊಳ್ಳಲಿಲ್ಲ.

07088021a ಸಿಂಹನಾದಂ ತತಃ ಕೃತ್ವಾ ದ್ರೋಣಂ ವಿವ್ಯಾಧ ಸಾತ್ಯಕಿಃ|

07088021c ದಶಭಿಃ ಸಾಯಕೈಶ್ಚಾನ್ಯೈಃ ಷಡ್ಭಿರಷ್ಟಾಭಿರೇವ ಚ||

ಆಗ ಸಿಂಹನಾದವನ್ನು ಮಾಡಿ ದ್ರೋಣನನ್ನು ಹತ್ತು ಸಾಯಕಗಳಿಂದ ಮತ್ತು ಅನ್ಯ ಹದಿನಾಲ್ಕರಿಂದ ಹೊಡೆದನು.

07088022a ಯುಯುಧಾನಃ ಪುನರ್ದ್ರೋಣಂ ವಿವ್ಯಾಧ ದಶಭಿಃ ಶರೈಃ|

07088022c ಏಕೇನ ಸಾರಥಿಂ ಚಾಸ್ಯ ಚತುರ್ಭಿಶ್ಚತುರೋ ಹಯಾನ್|

07088022e ಧ್ವಜಮೇಕೇನ ಬಾಣೇನ ವಿವ್ಯಾಧ ಯುಧಿ ಮಾರಿಷ||

ಮಾರಿಷ! ಪುನಃ ಯುಯುಧಾನನು ಹತ್ತು ಶರಗಳಿಂದ ಹೊಡೆದನು. ಒಂದರಿಂದ ಸಾರಥಿಯನ್ನೂ, ನಾಲ್ಕರಿಂದ ನಾಲ್ಕು ಕುದುರೆಗಳನ್ನೂ, ಒಂದು ಬಾಣದಿಂದ ಧ್ವಜವನ್ನೂ ಹೊಡೆದನು.

07088023a ತಂ ದ್ರೋಣಃ ಸಾಶ್ವಯಂತಾರಂ ಸರಥಧ್ವಜಮಾಶುಗೈಃ|

07088023c ತ್ವರನ್ಪ್ರಾಚ್ಚಾದಯದ್ಬಾಣೈಃ ಶಲಭಾನಾಮಿವ ವ್ರಜೈಃ||

ದ್ರೋಣನು ತ್ವರೆಮಾಡಿ ಅವನನ್ನು, ಕುದುರೆ-ಸಾರಥಿ-ರಥ-ಧ್ವಜಗಳನ್ನು ಮಿಡಿತೆಯ ಹಿಂಡಿನಂತಿರುವ ಆಶುಗ ಬಾಣಗಳಿಂದ ಮುಚ್ಚಿಬಿಟ್ಟನು.

07088024a ತಥೈವ ಯುಯುಧಾನೋಽಪಿ ದ್ರೋಣಂ ಬಹುಭಿರಾಶುಗೈಃ|

07088024c ಪ್ರಾಚ್ಚಾದಯದಸಂಭ್ರಾಂತಸ್ತತೋ ದ್ರೋಣ ಉವಾಚ ಹ||

ಹಾಗೆಯೇ ಯುಯುಧಾನನೂ ಕೂಡ ಅನೇಕ ಆಶುಗಗಳಿಂದ ದ್ರೋಣನನ್ನು ಮುಸುಕಿದನು. ಆಗ ಸಂಭ್ರಾಂತನಾದ ದ್ರೋಣನು ಹೇಳಿದನು:

07088025a ತವಾಚಾರ್ಯೋ ರಣಂ ಹಿತ್ವಾ ಗತಃ ಕಾಪುರುಷೋ ಯಥಾ|

07088025c ಯುಧ್ಯಮಾನಂ ಹಿ ಮಾಂ ಹಿತ್ವಾ ಪ್ರದಕ್ಷಿಣಮವರ್ತತ||

“ನಿನ್ನ ಆಚಾರ್ಯನು ಕಾಪುರುಷನಂತೆ ರಣವನ್ನು ತೊರೆದು ಹೊರಟುಹೋದನು. ಯುದ್ಧಮಾಡುತ್ತಿದ್ದ ನನ್ನನ್ನು ಪ್ರದಕ್ಷಿಣೆಮಾಡಿ ಮುಂದೆಸಾರಿದನು.

07088026a ತ್ವಂ ಹಿ ಮೇ ಯುಧ್ಯತೋ ನಾದ್ಯ ಜೀವನ್ಮೋಕ್ಷ್ಯಸಿ ಮಾಧವ|

07088026c ಯದಿ ಮಾಂ ತ್ವಂ ರಣೇ ಹಿತ್ವಾ ನ ಯಾಸ್ಯಾಚಾರ್ಯವದ್ದ್ರುತಂ||

ಮಾಧವ! ಒಂದುವೇಳೆ ನಿನ್ನ ಆಚಾರ್ಯನಂತೆ ನನ್ನನ್ನು ರಣದಲ್ಲಿ ಬಿಟ್ಟು ಹೋಗದೇ ನನ್ನೊಡನೆ ಯುದ್ಧಮಾಡಿದರೆ ಇಂದು ನೀನು ಜೀವಂತ ಉಳಿಯುವುದಿಲ್ಲ!”

07088027 ಸಾತ್ಯಕಿರುವಾಚ|

07088027a ಧನಂಜಯಸ್ಯ ಪದವೀಂ ಧರ್ಮರಾಜಸ್ಯ ಶಾಸನಾತ್|

07088027c ಗಚ್ಚಾಮಿ ಸ್ವಸ್ತಿ ತೇ ಬ್ರಹ್ಮನ್ನ ಮೇ ಕಾಲಾತ್ಯಯೋ ಭವೇತ್||

ಸಾತ್ಯಕಿಯು ಹೇಳಿದನು: “ಬ್ರಹ್ಮನ್! ನಿನಗೆ ಮಂಗಳವಾಗಲಿ! ಧರ್ಮರಾಜನ ಶಾಸನದಂತೆ ಧನಂಜಯನ ಬಳಿ ಹೋಗುತ್ತಿದ್ದೇನೆ. ಕಾಲವು ಕಳೆದುಹೋಗುತ್ತಿದೆ!””

07088028 ಸಂಜಯ ಉವಾಚ|

07088028a ಏತಾವದುಕ್ತ್ವಾ ಶೈನೇಯ ಆಚಾರ್ಯಂ ಪರಿವರ್ಜಯನ್|

07088028c ಪ್ರಯಾತಃ ಸಹಸಾ ರಾಜನ್ಸಾರಥಿಂ ಚೇದಮಬ್ರವೀತ್||

ಸಂಜಯನು ಹೇಳಿದನು: “ರಾಜನ್! ಶೈನೇಯನು ಹೀಗೆ ಹೇಳಿ ಆಚಾರ್ಯನನ್ನು ಅಲ್ಲಿಯೇ ಬಿಟ್ಟು ಒಮ್ಮೆಲೇ ಹೊರಟು ಹೋಗುವಾಗ ಸಾರಥಿಗೆ ಇದನ್ನು ಹೇಳಿದನು:

07088029a ದ್ರೋಣಃ ಕರಿಷ್ಯತೇ ಯತ್ನಂ ಸರ್ವಥಾ ಮಮ ವಾರಣೇ|

07088029c ಯತ್ತೋ ಯಾಹಿ ರಣೇ ಸೂತ ಶೃಣು ಚೇದಂ ವಚಃ ಪರಂ||

“ಸೂತ! ನನ್ನನ್ನು ತಡೆಯುವಲ್ಲಿ ದ್ರೋಣನು ಸರ್ವಥಾ ಪ್ರಯತ್ನಮಾಡುತ್ತಾನೆ. ಪ್ರಯತ್ನ ಪಟ್ಟು ರಣದಲ್ಲಿ ಓಡಿಸು! ಇನ್ನೂ ಹೆಚ್ಚಿನ ಈ ಮಾತನ್ನು ಕೇಳು!

07088030a ಏತದಾಲೋಕ್ಯತೇ ಸೈನ್ಯಮಾವಂತ್ಯಾನಾಂ ಮಹಾಪ್ರಭಂ|

07088030c ಅಸ್ಯಾನಂತರತಸ್ತ್ವೇತದ್ದಾಕ್ಷಿಣಾತ್ಯಂ ಮಹಾಬಲಂ||

ಇಲ್ಲಿಂದ ಮಹಾಪ್ರಭೆಯುಳ್ಳ ಅವಂತಿಯವ ಸೇನೆಯು ಕಾಣುತ್ತಿದೆ. ಅದರ ನಂತರ ದಾಕ್ಷಿಣಾತ್ಯರ ಮಹಾಸೇನೆಯಿದೆ.

07088031a ತದನಂತರಮೇತಚ್ಚ ಬಾಹ್ಲಿಕಾನಾಂ ಬಲಂ ಮಹತ್|

07088031c ಬಾಹ್ಲಿಕಾಭ್ಯಾಶತೋ ಯುಕ್ತಂ ಕರ್ಣಸ್ಯಾಪಿ ಮಹದ್ಬಲಂ||

ಅದರ ನಂತರವಿರುವುದು ಬಾಹ್ಲಿಕರ ಮಹಾ ಸೇನೆ. ಬಾಹ್ಲಿಕರ ಹತ್ತಿರವಿರುವುದು ಕರ್ಣನಿಂದೊಡಗೂಡಿದ ಮಹಾಸೇನೆ.

07088032a ಅನ್ಯೋನ್ಯೇನ ಹಿ ಸೈನ್ಯಾನಿ ಭಿನ್ನಾನ್ಯೇತಾನಿ ಸಾರಥೇ|

07088032c ಅನ್ಯೋನ್ಯಂ ಸಮುಪಾಶ್ರಿತ್ಯ ನ ತ್ಯಕ್ಷ್ಯಂತಿ ರಣಾಜಿರಂ||

ಸಾರಥೇ! ಆ ಸೇನೆಗಳು ಒಂದಕ್ಕಿಂದ ಒಂದು ಭಿನ್ನವಾಗಿವೆ. ಅನ್ಯೋನ್ಯರನ್ನು ಅವಲಂಬಿಸಿಕೊಂಡಿರುವುದರಿಂದ ಅವು ರಣರಂಗವನ್ನು ಬಿಟ್ಟುಕೊಡುವುದಿಲ್ಲ.

07088033a ಏತದಂತರಮಾಸಾದ್ಯ ಚೋದಯಾಶ್ವಾನ್ಪ್ರಹೃಷ್ಟವತ್|

07088033c ಮಧ್ಯಮಂ ಜವಮಾಸ್ಥಾಯ ವಹ ಮಾಮತ್ರ ಸಾರಥೇ||

07088034a ಬಾಹ್ಲಿಕಾ ಯತ್ರ ದೃಶ್ಯಂತೇ ನಾನಾಪ್ರಹರಣೋದ್ಯತಾಃ|

07088034c ದಾಕ್ಷಿಣಾತ್ಯಾಶ್ಚ ಬಹವಃ ಸೂತಪುತ್ರಪುರೋಗಮಾಃ||

07088035a ಹಸ್ತ್ಯಶ್ವರಥಸಂಬಾಧಂ ಯಚ್ಚಾನೀಕಂ ವಿಲೋಕ್ಯತೇ|

07088035c ನಾನಾದೇಶಸಮುತ್ಥೈಶ್ಚ ಪದಾತಿಭಿರಧಿಷ್ಠಿತಂ||

ಸಾರಥೇ! ಇವುಗಳ ಮಧ್ಯದ ಜಾಗವನ್ನು ಬಳಸಿ ಸಂತೋಷದಿಂದ ಕುದುರೆಗಳನ್ನು ಓಡಿಸು. ಮಧ್ಯಮವೇಗವನ್ನು ಬಳಲಿ ನನ್ನನ್ನು ಅಲ್ಲಿಗೆ - ಎಲ್ಲಿ ನಾನಾಪ್ರಹರಣಗಳನ್ನು ಎತ್ತಿಹಿಡಿದಿರುವ ಬಾಹ್ಲಿಕರು ಕಾಣುತ್ತಾರೋ, ಅನೇಕ ದಾಕ್ಷಿಣಾತ್ಯರು ಇರುವರೋ, ಸೂತಪುತ್ರನ ನಾಯಕತ್ವದಲ್ಲಿ ಕಾಣುತ್ತಿರುವ ಆನೆ-ಕುದುರೆ-ರಥಗಳಿಂದ ಕೂಡಿದ ನಾನಾ ದೇಶಗಳಿಂದ ಒಂದುಗೂಡಿಸಿದ ಪದಾತಿಗಳಿಂದ ಕೂಡಿದ ಯಾವ ಸೇನೆಯು ಕಾಣಿಸುತ್ತದೆಯೋ ಅಲ್ಲಿಗೆ - ಕೊಂಡೊಯ್ಯಿ.”

07088036a ಏತಾವದುಕ್ತ್ವಾ ಯಂತಾರಂ ಬ್ರಹ್ಮಾಣಂ ಪರಿವರ್ಜಯನ್|

07088036c ಸ ವ್ಯತೀಯಾಯ ಯತ್ರೋಗ್ರಂ ಕರ್ಣಸ್ಯ ಸುಮಹದ್ಬಲಂ||

ಹೀಗೆ ಸಾರಥಿಗೆ ಹೇಳಿ ಬ್ರಾಹ್ಮಣನನ್ನು ಪರಿತ್ಯಜಿಸಿ ಅವನು ಎಲ್ಲಿ ಕರ್ಣನ ಉಗ್ರ ಮಹಾಸೇನೆಯಿದೆಯೋ ಅಲ್ಲಿಗೆ ಹೊರಟನು.

07088037a ತಂ ದ್ರೋಣೋಽನುಯಯೌ ಕ್ರುದ್ಧೋ ವಿಕಿರನ್ವಿಶಿಖಾನ್ಬಹೂನ್|

07088037c ಯುಯುಧಾನಂ ಮಹಾಬಾಹುಂ ಗಚ್ಚಂತಮನಿವರ್ತಿನಂ||

ಹಾಗೆ ಹೋಗುತ್ತಿರುವ ಆ ಮಹಾಬಾಹು ಯುಯುಧಾನನನ್ನು ಕ್ರುದ್ಧನಾದ ದ್ರೋಣನು ಅನೇಕ ವಿಶಿಖಗಳನ್ನು ಹರಡುತ್ತಾ ಹಿಂಬಾಲಿಸಿ ಹೋದನು.

07088038a ಕರ್ಣಸ್ಯ ಸೈನ್ಯಂ ಸುಮಹದಭಿಹತ್ಯ ಶಿತೈಃ ಶರೈಃ|

07088038c ಪ್ರಾವಿಶದ್ಭಾರತೀಂ ಸೇನಾಮಪರ್ಯಂತಾಂ ಸ ಸಾತ್ಯಕಿಃ||

ಕರ್ಣನ ಸೇನೆಯನ್ನು ನಿಶಿತ ಶರಗಳಿಂದ ಜೋರಾಗಿ ಹೊಡೆದು ಆ ಸಾತ್ಯಕಿಯು ಅಪಾರವಾದ ಭಾರತೀಸೇನೆಯನ್ನು ಪ್ರವೇಶಿಸಿದನು.

07088039a ಪ್ರವಿಷ್ಟೇ ಯುಯುಧಾನೇ ತು ಸೈನಿಕೇಷು ದ್ರುತೇಷು ಚ|

07088039c ಅಮರ್ಷೀ ಕೃತವರ್ಮಾ ತು ಸಾತ್ಯಕಿಂ ಪರ್ಯವಾರಯತ್||

ಯುಯುಧಾನನು ಪ್ರವೇಶಿಸಿಸಲು ಸೈನಿಕರು ಓಡತೊಡಗಿದರು. ಆಗ ಅಸಹನಶೀಲ ಕೃತವರ್ಮನು ಸಾತ್ಯಕಿಯನ್ನು ಮುತ್ತಿದನು.

07088040a ತಮಾಪತಂತಂ ವಿಶಿಖೈಃ ಷಡ್ಭಿರಾಹತ್ಯ ಸಾತ್ಯಕಿಃ|

07088040c ಚತುರ್ಭಿಶ್ಚತುರೋಽಸ್ಯಾಶ್ವಾನಾಜಘಾನಾಶು ವೀರ್ಯವಾನ್||

ಮೇಲೆ ಎರಗುತ್ತಿದ್ದ ಅವನನ್ನು ಸಾತ್ಯಕಿಯು ಆರು ವಿಶಿಖಗಳಿಂದ ಹೊಡೆದನು ಮತ್ತು ಆ ವೀರ್ಯವಾನನು ನಾಲ್ಕರಿಂದ ಅವನ ನಾಲ್ಕು ಕುದುರೆಗಳನ್ನು ಹೊಡೆದನು.

07088041a ತತಃ ಪುನಃ ಷೋಡಶಭಿರ್ನತಪರ್ವಭಿರಾಶುಗೈಃ|

07088041c ಸಾತ್ಯಕಿಃ ಕೃತವರ್ಮಾಣಂ ಪ್ರತ್ಯವಿಧ್ಯತ್ ಸ್ತನಾಂತರೇ||

ಅನಂತರ ಪುನಃ ಹದಿನಾರು ನತಪರ್ವ ಆಶುಗಗಳಿಂದ ಸಾತ್ಯಕಿಯು ಕೃತವರ್ಮನ ಎದೆಗೆ ಹೊಡೆದನು.

07088042a ಸ ತುದ್ಯಮಾನೋ ವಿಶಿಖೈರ್ಬಹುಭಿಸ್ತಿಗ್ಮತೇಜನೈಃ|

07088042c ಸಾತ್ವತೇನ ಮಹಾರಾಜ ಕೃತವರ್ಮಾ ನ ಚಕ್ಷಮೇ||

ಮಹಾರಾಜ! ಸಾತ್ವತನ ಬಹಳ ತೀಕ್ಷ್ಣ ತೇಜಸ್ಸುಳ್ಳ ಅನೇಕ ವಿಶಿಖಗಳಿಂದ ಪೆಟ್ಟುತಿಂದ ಕೃತವರ್ಮನು ಸಹಿಸಿಕೊಳ್ಳಲಿಲ್ಲ.

07088043a ಸ ವತ್ಸದಂತಂ ಸಂಧಾಯ ಜಿಹ್ಮಗಾನಲಸನ್ನಿಭಂ|

07088043c ಆಕೃಷ್ಯ ರಾಜನ್ನಾಕರ್ಣಾದ್ವಿವ್ಯಾಧೋರಸಿ ಸಾತ್ಯಕಿಂ||

ರಾಜನ್! ಅವನು ಅಗ್ನಿಯ ಜ್ವಾಲೆಗೆ ಸಮನಾದ ವತ್ಸದಂತವನ್ನು ಹೂಡಿ ಕಿವಿಯವರೆಗೂ ಎಳೆದು ಸಾತ್ಯಕಿಯ ಎದೆಗೆ ಹೊಡೆದನು.

07088044a ಸ ತಸ್ಯ ದೇಹಾವರಣಂ ಭಿತ್ತ್ವಾ ದೇಹಂ ಚ ಸಾಯಕಃ|

07088044c ಸಪತ್ರಪುಂಖಃ ಪೃಥಿವೀಂ ವಿವೇಶ ರುಧಿರೋಕ್ಷಿತಃ||

ಅದು ಅವನ ದೇಹದ ಕವಚವನ್ನು ಮತ್ತು ಶರೀರವನ್ನು ಭೇದಿಸಿ ಪತ್ರಪುಂಖಗಳೊಂದಿಗೆ ರಕ್ತದಲ್ಲಿ ತೋಯ್ದು ಭೂಮಿಯನ್ನು ಪ್ರವೇಶಿಸಿತು.

07088045a ಅಥಾಸ್ಯ ಬಹುಭಿರ್ಬಾಣೈರಚ್ಚಿನತ್ಪರಮಾಸ್ತ್ರವಿತ್|

07088045c ಸಮಾರ್ಗಣಗುಣಂ ರಾಜನ್ಕೃತವರ್ಮಾ ಶರಾಸನಂ||

ರಾಜನ್! ಆಗ ಪರಮಾಸ್ತ್ರವಿದು ಕೃತವರ್ಮನು ಅನೇಕ ಬಾಣಗಳಿಂದ ಮಾರ್ಗಣಗಳಿಂದೊಡಗೂಡಿದ ಅವನ ಧನುಸ್ಸನ್ನು ಕತ್ತರಿಸಿದನು.

07088046a ವಿವ್ಯಾಧ ಚ ರಣೇ ರಾಜನ್ಸಾತ್ಯಕಿಂ ಸತ್ಯವಿಕ್ರಮಂ|

07088046c ದಶಭಿರ್ವಿಶಿಖೈಸ್ತೀಕ್ಷ್ಣೈರಭಿಕ್ರುದ್ಧಃ ಸ್ತನಾಂತರೇ||

ರಾಜನ್! ರಣದಲ್ಲಿ ಕ್ರುದ್ಧನಾಗಿ ಅವನು ಸತ್ಯವಿಕ್ರಮಿ ಸಾತ್ಯಕಿಯ ಎದೆಗೆ ಹತ್ತು ತೀಕ್ಷ್ಣ ವಿಶಿಖಗಳಿಂದ ಹೊಡೆದನು.

07088047a ತತಃ ಪ್ರಶೀರ್ಣೇ ಧನುಷಿ ಶಕ್ತ್ಯಾ ಶಕ್ತಿಮತಾಂ ವರಃ|

07088047c ಅಭ್ಯಹನ್ದಕ್ಷಿಣಂ ಬಾಹುಂ ಸಾತ್ಯಕಿಃ ಕೃತವರ್ಮಣಃ||

ಧನುಸ್ಸು ತುಂಡಾಗಿ ಹೋಗಲು ಶಕ್ತಿಮತರಲ್ಲಿ ಶ್ರೇಷ್ಠ ಸಾತ್ಯಕಿಯು ಶಕ್ತಿಯಿಂದ ಕೃತವರ್ಮನ ಬಲತೋಳಿಗೆ ಹೊಡೆದನು.

07088048a ತತೋಽನ್ಯತ್ಸುದೃಢಂ ವೀರೋ ಧನುರಾದಾಯ ಸಾತ್ಯಕಿಃ|

07088048c ವ್ಯಸೃಜದ್ವಿಶಿಖಾಂಸ್ತೂರ್ಣಂ ಶತಶೋಽಥ ಸಹಸ್ರಶಃ||

ಅನಂತರ ವೀರ ಸಾತ್ಯಕಿಯು ತಕ್ಷಣವೇ ಇನ್ನೊಂದು ಸುದೃಢವಾದ ಧನುಸ್ಸನ್ನು ತೆಗೆದುಕೊಂಡು ನೂರಾರು ಸಹಸ್ರಾರು ವಿಶಿಖಗಳನ್ನು ಬಿಟ್ಟನು.

07088049a ಸರಥಂ ಕೃತವರ್ಮಾಣಂ ಸಮಂತಾತ್ಪರ್ಯವಾಕಿರತ್|

07088049c ಚಾದಯಿತ್ವಾ ರಣೇಽತ್ಯರ್ಥಂ ಹಾರ್ದಿಕ್ಯಂ ತು ಸ ಸಾತ್ಯಕಿಃ||

ಕೃತವರ್ಮನ ರಥವನ್ನು ಎಲ್ಲ ಕಡೆಗಳಿಂದ ಆಕ್ರಮಣಿಸಿ, ಆ ಸಾತ್ಯಕಿಯು ರಣದಲ್ಲಿ ಹಾರ್ದಿಕ್ಯನನ್ನು ಸಂಪೂರ್ಣವಾಗಿ ಮುಚ್ಚಿಬಿಟ್ಟನು.

07088050a ಅಥಾಸ್ಯ ಭಲ್ಲೇನ ಶಿರಃ ಸಾರಥೇಃ ಸಮಕೃಂತತ|

07088050c ಸ ಪಪಾತ ಹತಃ ಸೂತೋ ಹಾರ್ದಿಕ್ಯಸ್ಯ ಮಹಾರಥಾತ್||

ಆಗ ಭಲ್ಲದಿಂದ ಸಾರಥಿಯ ಶಿರವನ್ನು ಕತ್ತರಿಸಲು ಹಾರ್ದಿಕ್ಯನ ಸೂತನು ಮಹಾರಥದಿಂದ ಹತನಾಗಿ ಬಿದ್ದನು.

07088050e ತತಸ್ತೇ ಯಂತರಿ ಹತೇ ಪ್ರಾದ್ರವಂಸ್ತುರಗಾ ಭೃಶಂ||

07088051a ಅಥ ಭೋಜಸ್ತ್ವಸಂಭ್ರಾಂತೋ ನಿಗೃಹ್ಯ ತುರಗಾನ್ಸ್ವಯಂ|

07088051c ತಸ್ಥೌ ಶರಧನುಷ್ಪಾಣಿಸ್ತತ್ಸೈನ್ಯಾನ್ಯಭ್ಯಪೂಜಯನ್||

07088052a ಸ ಮುಹೂರ್ತಮಿವಾಶ್ವಸ್ಯ ಸದಶ್ವಾನ್ಸಮಚೋದಯತ್|

07088052c ವ್ಯಪೇತಭೀರಮಿತ್ರಾಣಾಮಾವಹತ್ ಸುಮಹದ್ಭಯಂ|

ಸಾರಥಿಯು ಹತನಾಗಲು ಕುದುರೆಗಳು ತುಂಬಾ ಓಡತೊಡಗಿದವು. ಆಗ ಭೋಜನು ಸಂಭ್ರಾಂತನಾಗದೇ ಸ್ವಯಂ ತಾನೇ ಕುದುರೆಗಳನ್ನು ನಿಯಂತ್ರಿಸಿ, ಧನುಸ್ಸನ್ನು ಹಿಡಿದು ರಥದಲ್ಲಿ ಕುಳಿತನು. ಅವನನ್ನು ಸೇನೆಗಳು ಶ್ಲಾಘಿಸಿದವು. ಕ್ಷಣಕಾಲ ಸುಧಾರಿಸಿಕೊಂಡು ಕುದುರೆಗಳನ್ನು ಚಪ್ಪರಿಸಿ, ಹೇಡಿಗಳಿಗೂ ಶತ್ರುಗಳಿಗೂ ಮಹಾಭಯವನ್ನುಂಟುಮಾಡಿದನು.

07088052e ಸಾತ್ಯಕಿಶ್ಚಾಭ್ಯಗಾತ್ತಸ್ಮಾತ್ಸ ತು ಭೀಮಮುಪಾದ್ರವತ್||

07088053a ಯುಯುಧಾನೋಽಪಿ ರಾಜೇಂದ್ರ ದ್ರೋಣಾನೀಕಾದ್ವಿನಿಃಸೃತಃ|

07088053c ಪ್ರಯಯೌ ತ್ವರಿತಸ್ತೂರ್ಣಂ ಕಾಂಬೋಜಾನಾಂ ಮಹಾಚಮೂಂ||

ಅಷ್ಟರಲ್ಲಿಯೇ ಸಾತ್ಯಕಿಯು ಅಲ್ಲಿಂದ ಹೋದನು. ಆದರೆ ಭೀಮನು ಕೃತವರ್ಮನನ್ನು ಆಕ್ರಮಣಿಸಿದನು. ರಾಜೇಂದ್ರ! ಯುಯುಧಾನನಾದರೋ ದ್ರೋಣನ ಸೇನೆಯಿಂದ ಬಿಡುಗಡೆಹೊಂದಿ ತಕ್ಷಣವೇ ತ್ವರೆಮಾಡಿ ಕಾಂಬೋಜರ ಮಹಾಸೇನೆಯತ್ತ ತೆರಳಿದನು.

07088054a ಸ ತತ್ರ ಬಹುಭಿಃ ಶೂರೈಃ ಸನ್ನಿರುದ್ಧೋ ಮಹಾರಥೈಃ|

07088054c ನ ಚಚಾಲ ತದಾ ರಾಜನ್ಸಾತ್ಯಕಿಃ ಸತ್ಯವಿಕ್ರಮಃ||

ಅಲ್ಲಿ ಅವನು ಶೂರರಾದ ಅನೇಕ ಮಹಾರಥರಿಂದ ತಡೆಯಲಟ್ಟನು. ರಾಜನ್! ಆಗ ಸತ್ಯವಿಕ್ರಮಿ ಸಾತ್ಯಕಿಯು ಸ್ವಲ್ಪವೂ ವಿಚಲಿತನಾಗಲಿಲ್ಲ.

07088055a ಸಂಧಾಯ ಚ ಚಮೂಂ ದ್ರೋಣೋ ಭೋಜೇ ಭಾರಂ ನಿವೇಶ್ಯ ಚ|

07088055c ಅನ್ವಧಾವದ್ರಣೇ ಯತ್ತೋ ಯುಯುಧಾನಂ ಯುಯುತ್ಸಯಾ||

ದ್ರೋಣನು ಸೇನೆಗಳನ್ನು ಒಂದುಗೂಡಿಸಿ ಅವುಗಳ ಭಾರವನ್ನು ಭೋಜನಿಗೆ ಒಪ್ಪಿಸಿ ಯುಯುಧಾನನೊಡನೆ ಯುದ್ಧಮಾಡಲು ಬಯಸಿ ಅವನ ಹಿಂದೆ ಹೋದನು.

07088056a ತಥಾ ತಮನುಧಾವಂತಂ ಯುಯುಧಾನಸ್ಯ ಪೃಷ್ಠತಃ|

07088056c ನ್ಯವಾರಯಂತ ಸಂಕ್ರುದ್ಧಾಃ ಪಾಂಡುಸೈನ್ಯೇ ಬೃಹತ್ತಮಾಃ||

ಹಾಗೆ ಯುಯುಧಾನನ ಹಿಂದೆ ಹೋಗುತ್ತಿದ್ದ ಅವನನ್ನು ಪಾಂಡವರ ಬೃಹತ್ತಮ ಸಂಕ್ರುದ್ಧ ಸೇನೆಯು ತಡೆಯಿತು.

07088057a ಸಮಾಸಾದ್ಯ ತು ಹಾರ್ದಿಕ್ಯಂ ರಥಾನಾಂ ಪ್ರವರಂ ರಥಂ|

07088057c ಪಾಂಚಾಲಾ ವಿಗತೋತ್ಸಾಹಾ ಭೀಮಸೇನಪುರೋಗಮಾಃ|

07088057e ವಿಕ್ರಮ್ಯ ವಾರಿತಾ ರಾಜನ್ವೀರೇಣ ಕೃತವರ್ಮಣಾ||

ರಾಜನ್! ರಥಿಗಳಲ್ಲಿ ಪ್ರವರನಾದ ಹಾರ್ದಿಕ್ಯನ ರಥದ ಬಳಿ ಭೀಮಸೇನನನ್ನು ಮುಂದಿಟ್ಟುಕೊಂಡು ಹೋದ ಪಾಂಚಾಲರು ವೀರ ಕೃತವರ್ಮನ ವಿಕ್ರಮದಿಂದ ತಡೆಯಲ್ಪಟ್ಟು ಉತ್ಸಾಹವನ್ನು ಕಳೆದುಕೊಂಡರು.

07088058a ಯತಮಾನಾಂಸ್ತು ತಾನ್ಸರ್ವಾನೀಷದ್ವಿಗತಚೇತಸಃ|

07088058c ಅಭಿತಸ್ತಾಂ ಶರೌಘೇಣ ಕ್ಲಾಂತವಾಹಾನವಾರಯತ್||

ಪ್ರಯತ್ನಿಸುತ್ತಿದ್ದ ಆ ಎಲ್ಲ ಸೇನೆಗಳನ್ನೂ ಅವನು ಶರೌಘಗಳಿಂದ ಹೊಡೆದು ಮೂರ್ಛೆಗೊಳಿಸಿ ಸೋಲಿಸಿ ತಡೆದನು.

07088059a ನಿಗೃಹೀತಾಸ್ತು ಭೋಜೇನ ಭೋಜಾನೀಕೇಪ್ಸವೋ ರಣೇ|

07088059c ಅತಿಷ್ಠನ್ನಾರ್ಯವದ್ವೀರಾಃ ಪ್ರಾರ್ಥಯಂತೋ ಮಹದ್ಯಶಃ||

ಭೋಜ ಕೃತವರ್ಮನಿಂದ ಹೀಗೆ ತಡೆಹಿಡಿಯಲ್ಪಟ್ಟ ಆ ವೀರರು ಮಹಾಯಶಸ್ಸನ್ನು ಬಯಸುತ್ತಾ ರಣದಲ್ಲಿ ಭೋಜನ ಸೇನೆಯೊಂದಿಗೆ ಯುದ್ಧಮಾಡತೊಡಗಿದರು.”

ಇತಿ ಶ್ರೀ ಮಹಾಭಾರತೇ ದ್ರೋಣಪರ್ವಣಿ ಜಯದ್ರಥವಧಪರ್ವಣಿ ಸಾತ್ಯಕಿಪ್ರವೇಶೇ ಅಷ್ಠಾಶೀತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣಪರ್ವದಲ್ಲಿ ಜಯದ್ರಥವಧಪರ್ವದಲ್ಲಿ ಸಾತ್ಯಕಿಪ್ರವೇಶ ಎನ್ನುವ ಎಂಭತ್ತೆಂಟನೇ ಅಧ್ಯಾಯವು.

Related image

Comments are closed.