Bhishma Parva: Chapter 45

ಭೀಷ್ಮ ಪರ್ವ: ಭೀಷ್ಮವಧ ಪರ್ವ

೪೫

ಉತ್ತರ ವಧೆ

ಭೀಷ್ಮ ಮತ್ತು ಅವನನ್ನು ರಕ್ಷಿಸುತ್ತಿದ್ದ ದುರ್ಮುಖ, ಕೃತವರ್ಮ, ಕೃಪ, ಶಲ್ಯ, ಮತ್ತು ವಿವಿಂಶತಿಯರೊಡನೆ ಅಭಿಮನ್ಯುವಿನ ಯುದ್ಧ (೧-೨೮). ಅಭಿಮನ್ಯುವನ್ನು ರಕ್ಷಿಸಲು ಬಂದ ಹತ್ತು ಮಂದಿ  - ಉತ್ತರ, ವಿರಾಟ, ಧೃಷ್ಟದ್ಯುಮ್ನ, ಭೀಮಸೇನ,ಸಾತ್ಯಕಿ, ಮತ್ತು ಐವರು ಕೇಕಯರು – ಪಾಂಡವಯೋಧರೊಡನೆ ಭೀಷ್ಮನ ಯುದ್ಧ (೨೯-೩೪). ಉತ್ತರ-ಶಲ್ಯರ ಯುದ್ಧ, ಉತ್ತರನ ವಧೆ (೩೫-೪೨). ಕೋಪದಿಂದ ಶಲ್ಯನನ್ನು ವಧಿಸಲು ಆಕ್ರಮಣಿಸಿದ ಉತ್ತರನ ಸಹೋದರ ಶಂಖನನ್ನು ಭೀಷ್ಮನಿಂದ ಅರ್ಜುನನು ರಕ್ಷಿಸಿದುದು (೪೩-೫೨). ಅರ್ಜುನನನ್ನು ಬಿಟ್ಟು ಭೀಷ್ಮನು ದ್ರುಪದ ಸೇನೆಯೊಡನೆ ಯುದ್ಧಮಾಡಿದುದು, ಪಾಂಡವ ಸೇನೆಯಲ್ಲಿ ಹಾಹಾಕಾರ, ಮೊದಲನೆಯ ದಿನದ ಯುದ್ಧಸಮಾಪ್ತಿ (೫೩-೬೩).

06045001 ಸಂಜಯ ಉವಾಚ|

06045001a ಗತಪೂರ್ವಾಹ್ಣಭೂಯಿಷ್ಠೇ ತಸ್ಮಿನ್ನಹನಿ ದಾರುಣೇ|

06045001c ವರ್ತಮಾನೇ ಮಹಾರೌದ್ರೇ ಮಹಾವೀರವರಕ್ಷಯೇ||

06045002a ದುರ್ಮುಖಃ ಕೃತವರ್ಮಾ ಚ ಕೃಪಃ ಶಲ್ಯೋ ವಿವಿಂಶತಿಃ|

06045002c ಭೀಷ್ಮಂ ಜುಗುಪುರಾಸಾದ್ಯ ತವ ಪುತ್ರೇಣ ಚೋದಿತಾಃ||

ಸಂಜಯನು ಹೇಳಿದನು: “ಆ ದಿನದ ದಾರುಣ ಪೂರ್ವಾಹ್ಣವು ಕಳೆಯಲು ಮಹಾರೌದ್ರ ಮಹಾವೀರಕ್ಷಯ ಯುದ್ಧದಲ್ಲಿ ನಿನ್ನ ಪುತ್ರನಿಂದ ಪ್ರಚೋದಿತರಾಗಿ ದುರ್ಮುಖ, ಕೃತವರ್ಮ, ಕೃಪ, ಶಲ್ಯ, ಮತ್ತು ವಿವಿಂಶತಿಯರು ಭೀಷ್ಮನ ರಕ್ಷಣೆಗಾಗಿ ನಿಂತರು.

06045003a ಏತೈರತಿರಥೈರ್ಗುಪ್ತಃ ಪಂಚಭಿರ್ಭರತರ್ಷಭ|

06045003c ಪಾಂಡವಾನಾಮನೀಕಾನಿ ವಿಜಗಾಹೇ ಮಹಾರಥಃ||

ಭರತರ್ಷಭ! ಈ ಐವರು ಅತಿರಥರಿಂದ ರಕ್ಷಿತನಾದ ಆ ಮಹಾರಥನು ಪಾಂಡವರ ಸೇನೆಗಳೊಳಗೆ ನುಗ್ಗಿದನು.

06045004a ಚೇದಿಕಾಶಿಕರೂಷೇಷು ಪಾಂಚಾಲೇಷು ಚ ಭಾರತ|

06045004c ಭೀಷ್ಮಸ್ಯ ಬಹುಧಾ ತಾಲಶ್ಚರನ್ಕೇತುರದೃಶ್ಯತ||

ಭಾರತ! ಚೇದಿ, ಕಾಶಿ, ಕರೂಷ ಮತ್ತು ಪಾಂಚಾಲರ ಮಧ್ಯೆ ಭೀಷ್ಮನ ತಾಲಚಿಹ್ನ ಭೂಷಿತ ಧ್ವಜವು ಬಹಳವಾಗಿ ತೋರಿತು.

06045005a ಶಿರಾಂಸಿ ಚ ತದಾ ಭೀಷ್ಮೋ ಬಾಹೂಂಶ್ಚಾಪಿ ಸಹಾಯುಧಾನ್|

06045005c ನಿಚಕರ್ತ ಮಹಾವೇಗೈರ್ಭಲ್ಲೈಃ ಸಂನತಪರ್ವಭಿಃ||

ಭೀಷ್ಮನು ಆಯುಧಗಳೊಡನೆ ಶಿರಗಳನ್ನೂ ಬಾಹುಗಳನ್ನೂ ಮಹಾವೇಗದ ಭಲ್ಲ-ಸಂನತಪರ್ವಗಳಿಂದ ಕತ್ತರಿಸಿದನು.

06045006a ನೃತ್ಯತೋ ರಥಮಾರ್ಗೇಷು ಭೀಷ್ಮಸ್ಯ ಭರತರ್ಷಭ|

06045006c ಕೇ ಚಿದಾರ್ತಸ್ವರಂ ಚಕ್ರುರ್ನಾಗಾ ಮರ್ಮಣಿ ತಾಡಿತಾಃ||

ಭರತರ್ಷಭ! ನೃತ್ಯಮಾಡುತ್ತಿರುವನೋ ಎನ್ನುವಂತಿದ್ದ ಭೀಷ್ಮನ ರಥಮಾರ್ಗದಲ್ಲಿ ಮರ್ಮಗಳಲ್ಲಿ ಪೆಟ್ಟುತಿಂದ ಕೆಲವು ಆನೆಗಳು ಆರ್ತಸ್ವರಗಳಿಂದ ಕೂಗಿದವು.

06045007a ಅಭಿಮನ್ಯುಃ ಸುಸಂಕ್ರುದ್ಧಃ ಪಿಶಂಗೈಸ್ತುರಗೋತ್ತಮೈಃ|

06045007c ಸಂಯುಕ್ತಂ ರಥಮಾಸ್ಥಾಯ ಪ್ರಾಯಾದ್ಭೀಷ್ಮರಥಂ ಪ್ರತಿ||

ಅಭಿಮನ್ಯುವು ಸಂಕ್ರುದ್ಧನಾಗಿ ಕಂದು ಬಣ್ಣದ ಉತ್ತಮ ಕುದುರೆಗಳನ್ನು ಕಟ್ಟಿದ ರಥದಲ್ಲಿ ನಿಂತು ಭೀಷ್ಮರಥದ ಕಡೆ ಬಂದನು.

06045008a ಜಾಂಬೂನದವಿಚಿತ್ರೇಣ ಕರ್ಣಿಕಾರೇಣ ಕೇತುನಾ|

06045008c ಅಭ್ಯವರ್ಷತ ಭೀಷ್ಮಂ ಚ ತಾಂಶ್ಚೈವ ರಥಸತ್ತಮಾನ್||

ಬಂಗಾರದ, ಬಣ್ಣಬಣ್ಣದ, ಕರ್ಣಿಕಾರ ಧ್ವಜದ ಆ ರಥಸತ್ತಮನು ಭೀಷ್ಮನ ಮೇಲೆ ಶರವರ್ಷವನ್ನು ಸುರಿಸಿದನು.

06045009a ಸ ತಾಲಕೇತೋಸ್ತೀಕ್ಷ್ಣೇನ ಕೇತುಮಾಹತ್ಯ ಪತ್ರಿಣಾ|

06045009c ಭೀಷ್ಮೇಣ ಯುಯುಧೇ ವೀರಸ್ತಸ್ಯ ಚಾನುಚರೈಃ ಸಹ||

ಆ ವೀರನು ತಾಲಕೇತು ಭೀಷ್ಮನ ಧ್ವಜವನ್ನು ತೀಕ್ಷ್ಣ ಪತ್ರಿಗಳಿಂದ ಹೊಡೆದು ಅವನ ಅನುಚರರೊಂದಿಗೆ ಯುದ್ಧಮಾಡಿದನು.

06045010a ಕೃತವರ್ಮಾಣಮೇಕೇನ ಶಲ್ಯಂ ಪಂಚಭಿರಾಯಸೈಃ|

06045010c ವಿದ್ಧ್ವಾ ನವಭಿರಾನರ್ಚಚ್ಚಿತಾಗ್ರೈಃ ಪ್ರಪಿತಾಮಹಂ||

ಕೃತವರ್ಮನನ್ನು ಒಂದು ಮತ್ತು ಶಲ್ಯನನ್ನು ಐದು ಆಯಸಗಳಿಂದ ಮತ್ತು ಪ್ರಪಿತಾಮಹನನ್ನು ಒಂಭತ್ತು ಮೊನಚಾದ ಆನರ್ಚಗಳಿಂದ ಹೊಡೆದನು.

06045011a ಪೂರ್ಣಾಯತವಿಸೃಷ್ಟೇನ ಸಮ್ಯಕ್ಪ್ರಣಿಹಿತೇನ ಚ|

06045011c ಧ್ವಜಮೇಕೇನ ವಿವ್ಯಾಧ ಜಾಂಬೂನದವಿಭೂಷಿತಂ||

ಆಕರ್ಣಾಂತವಾಗಿ ಧನುಸ್ಸನ್ನು ಸೆಳೆದು ಸರಿಯಾಗಿ ಗುರಿಯಿಟ್ಟು ಹೊಡೆದ ಒಂದೇ ಬಾಣದಿಂದ ಬಂಗಾರದಿಂದ ವಿಭೂಷಿತವಾದ ಭೀಷ್ಮನ ಧ್ವಜವನ್ನು ತುಂಡರಿಸಿದನು.

06045012a ದುರ್ಮುಖಸ್ಯ ತು ಭಲ್ಲೇನ ಸರ್ವಾವರಣಭೇದಿನಾ|

06045012c ಜಹಾರ ಸಾರಥೇಃ ಕಾಯಾಚ್ಚಿರಃ ಸಂನ್ನತಪರ್ವಣಾ||

ಎಲ್ಲ ಆವರಣಗಳನ್ನೂ ಭೇದಿಸುವ ಸಂನತಪರ್ವ ಭಲ್ಲದಿಂದ ದುರ್ಮುಖನ ಸಾರಥಿಯ ಶಿರವನ್ನು ದೇಹದಿಂದ ಕತ್ತರಿಸಿದನು.

06045013a ಧನುಶ್ಚಿಚ್ಛೇದ ಭಲ್ಲೇನ ಕಾರ್ತಸ್ವರವಿಭೂಷಿತಂ|

06045013c ಕೃಪಸ್ಯ ನಿಶಿತಾಗ್ರೇಣ ತಾಂಶ್ಚ ತೀಕ್ಷ್ಣಮುಖೈಃ ಶರೈಃ||

ಕೃಪನ ಕಾರ್ತಸ್ವರ ವಿಭೂಷಿತ ಧನುಸ್ಸನ್ನು ನಿಶಿತಾಗ್ರ ಭಲ್ಲದಿಂದ ಕತ್ತರಿಸಿ ಅವನನ್ನೂ ತೀಕ್ಷ್ಣಮುಖ ಶರಗಳಿಂದ ಹೊಡೆದನು.

06045014a ಜಘಾನ ಪರಮಕ್ರುದ್ಧೋ ನೃತ್ಯನ್ನಿವ ಮಹಾರಥಃ|

06045014c ತಸ್ಯ ಲಾಘವಮುದ್ವೀಕ್ಷ್ಯ ತುತುಷುರ್ದೇವತಾ ಅಪಿ||

ಆ ಮಹಾರಥನು ಪರಮ ಕ್ರುದ್ಧನಾಗಿ ನರ್ತಿಸುತ್ತಿರುವನೋ ಎನ್ನುವಂತೆ ಅವರನ್ನು ಪ್ರಹರಿಸಿದನು. ಅವನ ಕೈಚಳಕವನ್ನು ಕಂಡು ದೇವತೆಗಳು ಕೂಡ ಸಂತೋಷಪಟ್ಟರು.

06045015a ಲಬ್ಧಲಕ್ಷ್ಯತಯಾ ಕರ್ಷ್ಣೇಃ ಸರ್ವೇ ಭೀಷ್ಮಮುಖಾ ರಥಾಃ|

06045015c ಸತ್ತ್ವವಂತಮಮನ್ಯಂತ ಸಾಕ್ಷಾದಿವ ಧನಂಜಯಂ||

ಕಾರ್ಷ್ಣಿಯ ಲಕ್ಷ್ಯವೇದಿತ್ವವನ್ನು ಕಂಡು ಭೀಷ್ಮನೇ ಮೊದಲಾದ ರಥರು ಇವನು ಸಾಕ್ಷಾತ್ ಧನಂಜಯನಂತೆ ಸತ್ತ್ವವಂತನೆಂದು ಅಭಿಪ್ರಾಯಪಟ್ಟರು.

06045016a ತಸ್ಯ ಲಾಘವಮಾರ್ಗಸ್ಥಮಲಾತಸದೃಶಪ್ರಭಂ|

06045016c ದಿಶಃ ಪರ್ಯಪತಚ್ಚಾಪಂ ಗಾಂಡೀವಮಿವ ಘೋಷವತ್||

ಅವನ ಕೈಚಳಕವನ್ನು ಪ್ರದರ್ಶಿಸುವ ಧನುಸ್ಸು ದಿಕ್ಕುಗಳಲ್ಲಿ ಮೊಳಗುವ ಗಾಂಡೀವದಂತೆಯೇ ಧ್ವನಿಸುತ್ತಿತ್ತು.

06045017a ತಮಾಸಾದ್ಯ ಮಹಾವೇಗೈರ್ಭೀಷ್ಮೋ ನವಭಿರಾಶುಗೈಃ|

06045017c ವಿವ್ಯಾಧ ಸಮರೇ ತೂರ್ಣಮಾರ್ಜುನಿಂ ಪರವೀರಹಾ||

ಪರವೀರಹ ಭೀಷ್ಮನು ಸಮರದಲ್ಲಿ ಮಹಾವೇಗದಿಂದ ಆರ್ಜುನಿಯನ್ನು ತಲುಪಿ ಒಂಭತ್ತು ಆಶುಗಗಳಿಂದ ಚೆನ್ನಾಗಿ ಪ್ರಹರಿಸಿದನು.

06045018a ಧ್ವಜಂ ಚಾಸ್ಯ ತ್ರಿಭಿರ್ಭಲ್ಲೈಶ್ಚಿಚ್ಛೇದ ಪರಮೌಜಸಃ|

06045018c ಸಾರಥಿಂ ಚ ತ್ರಿಭಿರ್ಬಾಣೈರಾಜಘಾನ ಯತವ್ರತಃ||

ಆ ಪರಮೌಜಸ ಯತವ್ರತನು ಅವನ ಧ್ವಜವನ್ನು ಮೂರು ಭಲ್ಲೆಗಳಿಂದ ತುಂಡರಿಸಿದನು ಮತ್ತು ಸಾರಥಿಯನ್ನು ಮೂರು ಬಾಣಗಳಿಂದ ಹೊಡೆದನು.

06045019a ತಥೈವ ಕೃತವರ್ಮಾ ಚ ಕೃಪಃ ಶಲ್ಯಶ್ಚ ಮಾರಿಷ|

06045019c ವಿದ್ಧ್ವಾ ನಾಕಂಪಯತ್ಕಾರ್ಷ್ಣಿಂ ಮೈನಾಕಮಿವ ಪರ್ವತಂ||

ಹಾಗೆಯೇ ಕೃತವರ್ಮ, ಕೃಪ ಮತ್ತು ಶಲ್ಯರು ಅವನನ್ನು ಒಟ್ಟಿಗೇ ಹೊಡೆದರೂ ಕಾರ್ಷ್ಣಿಯು ಮೈನಾಕ ಪರ್ವತದಂತೆ ವಿಚಲಿತನಾಗಲಿಲ್ಲ.

06045020a ಸ ತೈಃ ಪರಿವೃತಃ ಶೂರೋ ಧಾರ್ತರಾಷ್ಟ್ರೈರ್ಮಹಾರಥೈಃ|

06045020c ವವರ್ಷ ಶರವರ್ಷಾಣಿ ಕಾರ್ಷ್ಣಿಃ ಪಂಚರಥಾನ್ಪ್ರತಿ||

ಧಾರ್ತರಾಷ್ಟ್ರರ ಮಹಾರಥಿಗಳಿಂದ ಸುತ್ತುವರೆಯಲ್ಪಟ್ಟ ಆ ಶೂರ ಕಾರ್ಷ್ಣನು ಆ ಐವರು ಪಂಚರಥಿಗಳ ಮೇಲೆ ಶರವರ್ಷಗಳನ್ನು ಸುರಿಸಿದನು.

06045021a ತತಸ್ತೇಷಾಂ ಮಹಾಸ್ತ್ರಾಣಿ ಸಂವಾರ್ಯ ಶರವೃಷ್ಟಿಭಿಃ|

06045021c ನನಾದ ಬಲವಾನ್ಕಾರ್ಷ್ಣಿರ್ಭೀಷ್ಮಾಯ ವಿಸೃಜಂ ಶರಾನ್||

ಆಗ ಅವರ ಮಹಾಸ್ತ್ರಗಳನ್ನೂ ಶರವೃಷ್ಟಿಯಿಂದ ನಿವಾರಿಸಿ, ಬಲವಾನ್ ಕಾರ್ಷ್ಣಿಯು ಭೀಷ್ಮನ ಮೇಲೆ ಬಾಣಗಳನ್ನು ಬಿಟ್ಟು ಸಿಂಹನಾದಮಾಡಿದನು.

06045022a ತತ್ರಾಸ್ಯ ಸುಮಹದ್ರಾಜನ್ಬಾಹ್ವೋರ್ಬಲಮದೃಶ್ಯತ|

06045022c ಯತಮಾನಸ್ಯ ಸಮರೇ ಭೀಷ್ಮಮರ್ದಯತಃ ಶರೈಃ||

ರಾಜನ್! ಅಲ್ಲಿ ಭೀಷ್ಮನನ್ನು ಶರಗಳಿಂದ ಪೀಡಿಸಿ ವಿಜಯಕ್ಕೆ ಪ್ರಯತ್ನಿಸುತ್ತಿದ್ದ ಅವನ ಬಾಹುಗಳ ಮಹಾ ಬಲವು ಗೋಚರಿಸಿತು.

06045023a ಪರಾಕ್ರಾಂತಸ್ಯ ತಸ್ಯೈವ ಭೀಷ್ಮೋಽಪಿ ಪ್ರಾಹಿಣೋಚ್ಚರಾನ್|

06045023c ಸ ತಾಂಶ್ಚಿಚ್ಛೇದ ಸಮರೇ ಭೀಷ್ಮಚಾಪಚ್ಯುತಾಂ ಶರಾನ್||

ಆ ಪರಾಕ್ರಾಂತನ ಮೇಲೆ ಭೀಷ್ಮನೂ ಕೂಡ ಶರಗಳನ್ನು ಪ್ರಯೋಗಿಸಿದನು. ಆದರೆ ಅವನು ಸಮರದಲ್ಲಿ ಭೀಷ್ಮಚಾಪದಿಂದ ಬಿಡಲ್ಪಟ್ಟ ಶರಗಳನ್ನು ತುಂಡರಿಸಿದನು.

06045024a ತತೋ ಧ್ವಜಮಮೋಘೇಷುರ್ಭೀಷ್ಮಸ್ಯ ನವಭಿಃ ಶರೈಃ|

06045024c ಚಿಚ್ಛೇದ ಸಮರೇ ವೀರಸ್ತತ ಉಚ್ಚುಕ್ರುಶುರ್ಜನಾಃ||

ಆಗ ವೀರನು ಸಮರದಲ್ಲಿ ಒಂಭತ್ತು ಅಮೋಘ ಶರಗಳಿಂದ ಭೀಷ್ಮನ ಧ್ವಜವನ್ನು ತುಂಡರಿಸಿದನು.

06045025a ಸ ರಾಜತೋ ಮಹಾಸ್ಕಂಧಸ್ತಾಲೋ ಹೇಮವಿಭೂಷಿತಃ|

06045025c ಸೌಭದ್ರವಿಶಿಖೈಶ್ಚಿನ್ನಃ ಪಪಾತ ಭುವಿ ಭಾರತ||

ಭಾರತ! ಆಗ ಆ ಮಹಾಸ್ಕಂಧದಮೇಲೆ ಹೊಳೆಯುತ್ತಿದ್ದ ಹೇಮವಿಭೂಷಿತ ತಾಲಧ್ವಜವು ಸೌಭದ್ರಿಯ ವಿಶಿಖಗಳಿಂದ ತುಂಡಾಗಿ ಭುವಿಯ ಮೇಲೆ ಬಿದ್ದಿತು.

06045026a ಧ್ವಜಂ ಸೌಭದ್ರವಿಶಿಖೈಃ ಪತಿತಂ ಭರತರ್ಷಭ|

06045026c ದೃಷ್ಟ್ವಾ ಭೀಮೋಽನದದ್ಧೃಷ್ಟಃ ಸೌಭದ್ರಮಭಿಹರ್ಷಯನ್||

ಭರತರ್ಷಭ! ಸೌಭದ್ರಿಯ ಬಾಣಗಳಿಂದ ಬಿದ್ದ ಧ್ವಜವನ್ನು ನೋಡಿ ಭೀಮನು ಕೂಗಿ ಸೌಭದ್ರಿಯನ್ನು ಹರ್ಷಗೊಳಿಸಿದನು.

06045027a ಅಥ ಭೀಷ್ಮೋ ಮಹಾಸ್ತ್ರಾಣಿ ದಿವ್ಯಾನಿ ಚ ಬಹೂನಿ ಚ|

06045027c ಪ್ರಾದುಶ್ಚಕ್ರೇ ಮಹಾರೌದ್ರಃ ಕ್ಷಣೇ ತಸ್ಮಿನ್ಮಹಾಬಲಃ||

ಆ ಕ್ಷಣದಲ್ಲಿ ಮಹಾಬಲ ಮಹಾರೌದ್ರ ಭೀಷ್ಮನು ಬಹಳ ದಿವ್ಯ ಮಹಾಸ್ತ್ರಗಳನ್ನು ಪ್ರಯೋಗಿಸಲು ತೊಡಗಿದನು.

06045028a ತತಃ ಶತಸಹಸ್ರೇಣ ಸೌಭದ್ರಂ ಪ್ರಪಿತಾಮಹಃ|

06045028c ಅವಾಕಿರದಮೇಯಾತ್ಮಾ ಶರಾಣಾಂ ನತಪರ್ವಣಾಂ||

ಆಗ ಪ್ರಪಿತಾಮಹನು ಅಮೇಯಾತ್ಮ ಸೌಭದ್ರನನ್ನು ಹತ್ತು ಸಾವಿರ ನತಪರ್ವ ಶರಗಳಿಂದ ಮುಚ್ಚಿದನು.

06045029a ತತೋ ದಶ ಮಹೇಷ್ವಾಸಾಃ ಪಾಂಡವಾನಾಂ ಮಹಾರಥಾಃ|

06045029c ರಕ್ಷಾರ್ಥಮಭ್ಯಧಾವಂತ ಸೌಭದ್ರಂ ತ್ವರಿತಾ ರಥೈಃ||

06045030a ವಿರಾಟಃ ಸಹ ಪುತ್ರೇಣ ಧೃಷ್ಟದ್ಯುಮ್ನಶ್ಚ ಪಾರ್ಷತಃ|

06045030c ಭೀಮಶ್ಚ ಕೇಕಯಾಶ್ಚೈವ ಸಾತ್ಯಕಿಶ್ಚ ವಿಶಾಂ ಪತೇ||

ವಿಶಾಂಪತೇ! ಆಗ ಪಾಂಡವರ ಹತ್ತು ಮಹಾರಥರು ತ್ವರೆಮಾಡಿ ರಥಗಳಲ್ಲಿ ಸೌಭದ್ರನನ್ನು ರಕ್ಷಿಸಲು ಧಾವಿಸಿದರು: ಪುತ್ರನೊಂದಿಗೆ ವಿರಾಟ, ಪಾರ್ಷತ ಧೃಷ್ಟದ್ಯುಮ್ನ, ಭೀಮ, ಐವರು ಕೇಕಯರು ಮತ್ತು ಸಾತ್ಯಕಿ.

06045031a ಜವೇನಾಪತತಾಂ ತೇಷಾಂ ಭೀಷ್ಮಃ ಶಾಂತನವೋ ರಣೇ|

06045031c ಪಾಂಚಾಲ್ಯಂ ತ್ರಿಭಿರಾನರ್ಚತ್ಸಾತ್ಯಕಿಂ ನಿಶಿತೈಃ ಶರೈಃ||

ರಣದಲ್ಲಿ ವೇಗದಿಂದ ಮೇಲೆಬೀಳುತ್ತಿದ್ದ ಪಾಂಚಾಲ್ಯ-ಸಾತ್ಯಕಿಯರನ್ನು ಶಾಂತನವ ಭೀಷ್ಮನು ಮೂರು ಬಾಣಗಳಿಂದ ಹೊಡೆದನು.

06045032a ಪೂರ್ಣಾಯತವಿಸೃಷ್ಟೇನ ಕ್ಷುರೇಣ ನಿಶಿತೇನ ಚ|

06045032c ಧ್ವಜಮೇಕೇನ ಚಿಚ್ಛೇದ ಭೀಮಸೇನಸ್ಯ ಪತ್ರಿಣಾ||

ಆಕಾರ್ಣಾಂತವಾಗಿ ಧನುಸ್ಸನ್ನು ಎಳೆದು ಒಂದು ನಿಶಿತ ಪತ್ರಿ ಕ್ಷುರದಿಂದ ಭೀಮಸೇನನ ಧ್ವಜವನ್ನು ತುಂಡರಿಸಿದನು.

06045033a ಜಾಂಬೂನದಮಯಃ ಕೇತುಃ ಕೇಸರೀ ನರಸತ್ತಮ|

06045033c ಪಪಾತ ಭೀಮಸೇನಸ್ಯ ಭೀಷ್ಮೇಣ ಮಥಿತೋ ರಥಾತ್||

ನರಸತ್ತಮ! ಕೇಸರಿಯ ಚಿಹ್ನೆಯಿದ್ದ ಭೀಮಸೇನನ ಸುವರ್ಣಮಯ ಧ್ವಜವು ಭೀಷ್ಮನಿಂದ ಕತ್ತರಿಸಲ್ಪಟ್ಟು ರಥದಿಂದ ಬಿದ್ದಿತು.

06045034a ಭೀಮಸೇನಸ್ತ್ರಿಭಿರ್ವಿದ್ಧ್ವಾ ಭೀಷ್ಮಂ ಶಾಂತನವಂ ರಣೇ|

06045034c ಕೃಪಮೇಕೇನ ವಿವ್ಯಾಧ ಕೃತವರ್ಮಾಣಮಷ್ಟಭಿಃ||

ರಣದಲ್ಲಿ ಭೀಮಸೇನನು ಶಾಂತನವ ಭೀಷ್ಮನನ್ನು ಮೂರು ಬಾಣಗಳಿಂದ ಹೊಡೆದು ಕೃಪನನ್ನು ಒಂದರಿಂದಲೂ, ಕೃತವರ್ಮನನ್ನು ಎಂಟರಿಂದಲೂ ಹೊಡೆದನು.

06045035a ಪ್ರಗೃಹೀತಾಗ್ರಹಸ್ತೇನ ವೈರಾಟಿರಪಿ ದಂತಿನಾ|

06045035c ಅಭ್ಯದ್ರವತ ರಾಜಾನಂ ಮದ್ರಾಧಿಪತಿಮುತ್ತರಃ||

ಸೊಂಡಿಲನ್ನು ಮೇಲೆತ್ತಿ ಹಿಡಿದ ಆನೆಯ ಮೇಲೆ ವೈರಾಟಿ ಉತ್ತರನು ರಾಜ ಮದ್ರಾಧಿಪತಿಯ ಕಡೆ ಧಾವಿಸಿದನು.

06045036a ತಸ್ಯ ವಾರಣರಾಜಸ್ಯ ಜವೇನಾಪತತೋ ರಥೀ|

06045036c ಶಲ್ಯೋ ನಿವಾರಯಾಮಾಸ ವೇಗಮಪ್ರತಿಮಂ ರಣೇ||

ವೇಗದಿಂದ ಮೇಲೆ ಬೀಳುತ್ತಿದ್ದ ಆ ವಾರಣರಾಜನ ಅಪ್ರತಿಮ ವೇಗವನ್ನು ರಣದಲ್ಲಿ ರಥೀ ಶಲ್ಯನು ತಡೆದನು.

06045037a ತಸ್ಯ ಕ್ರುದ್ಧಃ ಸ ನಾಗೇಂದ್ರೋ ಬೃಹತಃ ಸಾಧುವಾಹಿನಃ|

06045037c ಪದಾ ಯುಗಮಧಿಷ್ಠಾಯ ಜಘಾನ ಚತುರೋ ಹಯಾನ್||

ಬಹು ಕ್ರುದ್ಧವಾದ ಆ ಗಜೇಂದ್ರವು ಒಂದು ಕಾಲನ್ನು ಅವನ ರಥದ ನೊಗದ ಮೇಲಿಟ್ಟು ರಥವನ್ನು ಎಳೆಯುತ್ತಿದ್ದ ನಾಲ್ಕೂ ಕುದುರೆಗಳನ್ನು ಏಕಕಾಲದಲ್ಲಿ ಸಂಹರಿಸಿತು.

06045038a ಸ ಹತಾಶ್ವೇ ರಥೇ ತಿಷ್ಠನ್ಮದ್ರಾಧಿಪತಿರಾಯಸೀಂ|

06045038c ಉತ್ತರಾಂತಕರೀಂ ಶಕ್ತಿಂ ಚಿಕ್ಷೇಪ ಭುಜಗೋಪಮಾಂ||

ಕುದುರೆಗಳು ಹತವಾಗಿದ್ದ ಅದೇ ರಥದಲ್ಲಿ ನಿಂತು ಮದ್ರಾಧಿಪನು ಉತ್ತರನ ಮೃತ್ಯುರೂಪವಾಗಿದ್ದ ಭುಜಗೋಪಮ ಲೋಹದ ಶಕ್ತಿಯನ್ನು ಎಸೆದನು.

06045039a ತಯಾ ಭಿನ್ನತನುತ್ರಾಣಃ ಪ್ರವಿಶ್ಯ ವಿಪುಲಂ ತಮಃ|

06045039c ಸ ಪಪಾತ ಗಜಸ್ಕಂಧಾತ್ಪ್ರಮುಕ್ತಾಂಕುಶತೋಮರಃ||

ಅದು ಅವನ ತನು-ತ್ರಾಣಗಳನ್ನು ಭೇದಿಸಲು ಅವನು ವಿಪುಲ ತಮವನ್ನು ಪ್ರವೇಶಿಸಿ, ಅಂಕುಶ ತೋಮರಗಳು ಕಳಚಿ ಬೀಳಲು ಆನೆಯ ಮೇಲಿಂದ ಕೆಳಗೆ ಬಿದ್ದನು.

06045040a ಸಮಾದಾಯ ಚ ಶಲ್ಯೋಽಸಿಮವಪ್ಲುತ್ಯ ರಥೋತ್ತಮಾತ್|

06045040c ವಾರಣೇಂದ್ರಸ್ಯ ವಿಕ್ರಮ್ಯ ಚಿಚ್ಛೇದಾಥ ಮಹಾಕರಂ||

ಅನಂತರ ಶಲ್ಯನು ಖಡ್ಗವೊಂದನ್ನು ಹಿಡಿದು ಆ ಉತ್ತಮ ರಥದಿಂದ ಕೆಳಗೆ ಹಾರಿ ಆ ವಾರಣೇಂದ್ರದ ಮಹಾ ಸೊಂಡಿಲನ್ನು ವಿಕ್ರಮದಿಂದ ಕತ್ತರಿಸಿದನು.

06045041a ಭಿನ್ನಮರ್ಮಾ ಶರವ್ರಾತೈಶ್ಚಿನ್ನಹಸ್ತಃ ಸ ವಾರಣಃ|

06045041c ಭೀಮಮಾರ್ತಸ್ವರಂ ಕೃತ್ವಾ ಪಪಾತ ಚ ಮಮಾರ ಚ||

ಶರವ್ರಾತದಿಂದ ಮರ್ಮಗಳಲ್ಲಿ ಪೆಟ್ಟುತಿಂದು, ಸೊಂಡಿಲು ತುಂಡಾಗಿದ್ದ ಆ ಆನೆಯು ಭಯಂಕರ ಆರ್ತಸ್ವರವನ್ನು ಕೂಗಿ ಬಿದ್ದು ಅಸುನೀಗಿತು.

06045042a ಏತದೀದೃಶಕಂ ಕೃತ್ವಾ ಮದ್ರರಾಜೋ ಮಹಾರಥಃ|

06045042c ಆರುರೋಹ ರಥಂ ತೂರ್ಣಂ ಭಾಸ್ವರಂ ಕೃತವರ್ಮಣಃ||

ಇದನ್ನು ಮಾಡಿ ಮಹಾರಥ ಮದ್ರರಾಜನು ತಕ್ಷಣವೇ ಕೃತವರ್ಮನ ಹೊಳೆಯುವ ರಥವನ್ನು ಏರಿದನು.

06045043a ಉತ್ತರಂ ನಿಹತಂ ದೃಷ್ಟ್ವಾ ವೈರಾಟಿರ್ಭ್ರಾತರಂ ಶುಭಂ|

06045043c ಕೃತವರ್ಮಣಾ ಚ ಸಹಿತಂ ದೃಷ್ಟ್ವಾ ಶಲ್ಯಮವಸ್ಥಿತಂ|

06045043e ಶಂಖಃ ಕ್ರೋಧಾತ್ಪ್ರಜಜ್ವಾಲ ಹವಿಷಾ ಹವ್ಯವಾಡಿವ||

ಉತ್ತರನು ಹತನಾದುದನ್ನು ಮತ್ತು ಶಲ್ಯನು ಕೃತವರ್ಮನೊಡನೆ ಇರುವುದನ್ನು ನೋಡಿ ವೈರಾಟಿಯ ಶುಭ ಸಹೋದರ ಶಂಖನು ಕ್ರೋಧದಿಂದ ಹವಿಸ್ಸಿನಿಂದ ಪ್ರಜ್ವಲಿಸುವ ಅಗ್ನಿಯಂತೆ ಉರಿದೆದ್ದನು.

06045044a ಸ ವಿಸ್ಫಾರ್ಯ ಮಹಚ್ಚಾಪಂ ಕಾರ್ತಸ್ವರವಿಭೂಷಿತಂ|

06045044c ಅಭ್ಯಧಾವಜ್ಜಿಘಾಂಸನ್ವೈ ಶಲ್ಯಂ ಮದ್ರಾಧಿಪಂ ಬಲೀ||

ಕಾರ್ತಸ್ವರವಿಭೂಷಿತ ಮಹಾಚಾಪವನ್ನು ಸೆಳೆದು ಆ ಬಲಿಯು ಮದ್ರಾಧಿಪ ಶಲ್ಯನನ್ನು ಸಂಹರಿಸಲು ಧಾವಿಸಿ ಬಂದನು.

06045045a ಮಹತಾ ರಥವಂಶೇನ ಸಮಂತಾತ್ಪರಿವಾರಿತಃ|

06045045c ಸೃಜನ್ಬಾಣಮಯಂ ವರ್ಷಂ ಪ್ರಾಯಾಚ್ಚಲ್ಯರಥಂ ಪ್ರತಿ||

ಮಹಾ ರಥ ಸಮೂಹಗಳಿಂದ ಸುತ್ತಲೂ ಸುತ್ತುವರೆಯಲ್ಪಟ್ಟು, ಬಾಣಮಯ ಮಳೆಯನ್ನು ಸುರಿಸುತ್ತಾ ಶಲ್ಯನ ರಥದ ಕಡೆ ಧಾವಿಸಿದನು.

06045046a ತಮಾಪತಂತಂ ಸಂಪ್ರೇಕ್ಷ್ಯ ಮತ್ತವಾರಣವಿಕ್ರಮಂ|

06045046c ತಾವಕಾನಾಂ ರಥಾಃ ಸಪ್ತ ಸಮಂತಾತ್ಪರ್ಯವಾರಯನ್|

06045046e ಮದ್ರರಾಜಂ ಪರೀಪ್ಸಂತೋ ಮೃತ್ಯೋರ್ದಂಷ್ಟ್ರಾಂತರಂ ಗತಂ||

ಮದಿಸಿದ ಆನೆಯ ವಿಕ್ರಮವುಳ್ಳ ಅವನು ಮೇಲೆ ಬೀಳಲು ನಿನ್ನವರು ಏಳು ರಥಿಕರು ಮೃತ್ಯುವಿನ ದಾಡೆಗಳ ಮಧ್ಯೆ ಹೋಗುತ್ತಿರುವ ಮದ್ರರಾಜನನ್ನು ರಕ್ಷಿಸುವ ಸಲುವಾಗಿ ಅವನನ್ನು ಎಲ್ಲ ಕಡೆಗಳಿಂದ ಸುತ್ತುವರೆದರು.

06045047a ತತೋ ಭೀಷ್ಮೋ ಮಹಾಬಾಹುರ್ವಿನದ್ಯ ಜಲದೋ ಯಥಾ|

06045047c ತಾಲಮಾತ್ರಂ ಧನುರ್ಗೃಹ್ಯ ಶಂಖಮಭ್ಯದ್ರವದ್ರಣೇ||

ಆಗ ಮಹಾಬಾಹು ಭೀಷ್ಮನು ಮೋಡದಂತೆ ಗರ್ಜಿಸುತ್ತಾ ನಾಲ್ಕು ಮೊಳ ಉದ್ದದ ಧನುಸ್ಸನ್ನು ಹಿಡಿದು ಶಂಖನ ಕಡೆಗೆ ಧಾವಿಸಿದನು.

06045048a ತಮುದ್ಯತಮುದೀಕ್ಷ್ಯಾಥ ಮಹೇಷ್ವಾಸಂ ಮಹಾಬಲಂ|

06045048c ಸಂತ್ರಸ್ತಾ ಪಾಂಡವೀ ಸೇನಾ ವಾತವೇಗಹತೇವ ನೌಃ||

ಅವನನ್ನು ಆಕ್ರಮಣಿಸಿ ಬರುತ್ತಿದ್ದ ಆ ಮಹೇಷ್ವಾಸ ಮಹಾಬಲನನ್ನು ನೋಡಿ ಪಾಂಡವ ಸೇನೆಯು ಭಿರುಗಾಳಿಗೆ ಸಿಲುಕಿದ ನಾವೆಯಂತೆ ಸಂತ್ರಸ್ತಗೊಂಡಿತು.

06045049a ತತ್ರಾರ್ಜುನಃ ಸಂತ್ವರಿತಃ ಶಂಖಸ್ಯಾಸೀತ್ಪುರಃಸರಃ|

06045049c ಭೀಷ್ಮಾದ್ರಕ್ಷ್ಯೋಽಯಮದ್ಯೇತಿ ತತೋ ಯುದ್ಧಮವರ್ತತ||

ಭೀಷ್ಮನಿಂದ ಅವನನ್ನು ರಕ್ಷಿಸಲೋಸುಗ ಅರ್ಜುನನು ತ್ವರೆಮಾಡಿ ಶಂಖನ ಮುಂದೆ ಬಂದು ನಿಲ್ಲಲು ಯುದ್ಧವು ನಡೆಯಿತು.

06045050a ಹಾಹಾಕಾರೋ ಮಹಾನಾಸೀದ್ಯೋಧಾನಾಂ ಯುಧಿ ಯುಧ್ಯತಾಂ|

06045050c ತೇಜಸ್ತೇಜಸಿ ಸಂಪೃಕ್ತಮಿತ್ಯೇವಂ ವಿಸ್ಮಯಂ ಯಯುಃ||

ಯುದ್ಧದಲ್ಲಿ ಯುದ್ಧಮಾಡುತ್ತಿರುವ ಯೋಧರಲ್ಲಿ ಮಹಾ ಹಾಹಾಕಾರವುಂಟಾಯಿತು. ತೇಜಸ್ಸು ತೇಜಸ್ಸನ್ನು ಸೇರಿದಂತೆ ಎಂದು ವಿಸ್ಮಿತರಾದರು.

06045051a ಅಥ ಶಲ್ಯೋ ಗದಾಪಾಣಿರವತೀರ್ಯ ಮಹಾರಥಾತ್|

06045051c ಶಂಖಸ್ಯ ಚತುರೋ ವಾಹಾನಹನದ್ಭರತರ್ಷಭ||

ಭರತರ್ಷಭ! ಆಗ ಗದಾಪಾಣಿ ಶಲ್ಯನು ಮಹಾರಥದಿಂದ ಕೆಳಗಿಳಿದು ಶಂಖನ ನಾಲ್ಕೂ ಕುದುರೆಗಳನ್ನು ವಧಿಸಿದನು.

06045052a ಸ ಹತಾಶ್ವಾದ್ರಥಾತ್ತೂರ್ಣಂ ಖಡ್ಗಮಾದಾಯ ವಿದ್ರುತಃ|

06045052c ಬೀಭತ್ಸೋಃ ಸ್ಯಂದನಂ ಪ್ರಾಪ್ಯ ತತಃ ಶಾಂತಿಮವಿಂದತ||

ಒಡನೆಯೇ ಶಂಖನು ಖಡ್ಗವನ್ನು ಹಿಡಿದು ಅಶ್ವಗಳು ಹತವಾಗಿದ್ದ ರಥದಿಂದ ಹಾರಿ ಬೀಭತ್ಸುವಿನ ರಥವನ್ನು ಏರಿ ಶಾಂತನಾದನು.

06045053a ತತೋ ಭೀಷ್ಮರಥಾತ್ತೂರ್ಣಮುತ್ಪತಂತಿ ಪತತ್ರಿಣಃ|

06045053c ಯೈರಂತರಿಕ್ಷಂ ಭೂಮಿಶ್ಚ ಸರ್ವತಃ ಸಮವಸ್ತೃತಂ||

ಆಗ ಭೀಷ್ಮನ ರಥದಿಂದ ವೇಗವಾಗಿ ಬರುತ್ತಿದ್ದ ಪತತ್ರಿಗಳು ಅಂತರಿಕ್ಷ-ಭೂಮಿಗಳನ್ನು ಎಲ್ಲಕಡೆಗಳಿಂದಲೂ ಮುಸುಕಿಬಿಟ್ಟವು.

06045054a ಪಾಂಚಾಲಾನಥ ಮತ್ಸ್ಯಾಂಶ್ಚ ಕೇಕಯಾಂಶ್ಚ ಪ್ರಭದ್ರಕಾನ್|

06045054c ಭೀಷ್ಮಃ ಪ್ರಹರತಾಂ ಶ್ರೇಷ್ಠಃ ಪಾತಯಾಮಾಸ ಮಾರ್ಗಣೈಃ||

ಪ್ರಹರಿಗಳಲ್ಲಿ ಶ್ರೇಷ್ಠ ಭೀಷ್ಮನು ಮಾರ್ಗಣಗಳಿಂದ ಪಾಂಚಾಲ, ಮತ್ಸ್ಯ, ಕೇಕಯ ಮತ್ತು ಪ್ರಭದ್ರಕರನ್ನು ಉರುಳಿಸಿದನು.

06045055a ಉತ್ಸೃಜ್ಯ ಸಮರೇ ತೂರ್ಣಂ ಪಾಂಡವಂ ಸವ್ಯಸಾಚಿನಂ|

06045055c ಅಭ್ಯದ್ರವತ ಪಾಂಚಾಲ್ಯಂ ದ್ರುಪದಂ ಸೇನಯಾ ವೃತಂ|

06045055e ಪ್ರಿಯಂ ಸಂಬಂಧಿನಂ ರಾಜನ್ ಶರಾನವಕಿರನ್ಬಹೂನ್||

ಅವನು ಅನಂತರ ಸಮರದಲ್ಲಿ ಪಾಂಡವ ಸವ್ಯಸಾಚಿಯನ್ನು ಬಿಟ್ಟು ಪಾಂಚಾಲ್ಯ ದ್ರುಪದನ ಸೇನೆಗೆ ಮುತ್ತಿಗೆ ಹಾಕಿ, ಆ ಪ್ರಿಯ ಸಂಬಂಧಿಯನ್ನು ಬಹಳ ಶರಗಳಿಂದ ಮುಚ್ಚಿದನು.

06045056a ಅಗ್ನಿನೇವ ಪ್ರದಗ್ಧಾನಿ ವನಾನಿ ಶಿಶಿರಾತ್ಯಯೇ|

06045056c ಶರದಗ್ಧಾನ್ಯದೃಶ್ಯಂತ ಸೈನ್ಯಾನಿ ದ್ರುಪದಸ್ಯ ಹ|

06045056e ಅತಿಷ್ಠತ ರಣೇ ಭೀಷ್ಮೋ ವಿಧೂಮ ಇವ ಪಾವಕಃ||

ಛಳಿಗಾಲದ ಅಂತ್ಯದಲ್ಲಿ ಕಾಡ್ಗಿಚ್ಚು ವನಗಳನ್ನು ಸುಟ್ಟುಹಾಕುವಂತೆ ಅವನ ಶರಗಳು ದ್ರುಪದನ ಸೇನೆಯನ್ನು ಸುಟ್ಟುಬಿಟ್ಟಂತೆ ತೋರಿತು. ರಣದಲ್ಲಿ ಭೀಷ್ಮನು ಹೊಗೆಯಿಲ್ಲದ ಬೆಂಕಿಯಂತೆ ನಿಂತಿದ್ದನು.

06045057a ಮಧ್ಯಂದಿನೇ ಯಥಾದಿತ್ಯಂ ತಪಂತಮಿವ ತೇಜಸಾ|

06045057c ನ ಶೇಕುಃ ಪಾಂಡವೇಯಸ್ಯ ಯೋಧಾ ಭೀಷ್ಮಂ ನಿರೀಕ್ಷಿತುಂ||

ಮಧ್ಯಾಹ್ನದಲ್ಲಿ ತೇಜಸ್ಸಿನಿಂದ ಉರಿಯುತ್ತಿರುವ ಸೂರ್ಯನನ್ನು ಹೇಗೋ ಹಾಗೆ ಭೀಷ್ಮನನ್ನು ನೋಡಲು ಪಾಂಡವರ ಯೋಧರಿಗೆ ಶಕ್ಯವಾಗಲಿಲ್ಲ.

06045058a ವೀಕ್ಷಾಂ ಚಕ್ರುಃ ಸಮಂತಾತ್ತೇ ಪಾಂಡವಾ ಭಯಪೀಡಿತಾಃ|

06045058c ತ್ರಾತಾರಂ ನಾಧ್ಯಗಚ್ಛಂತ ಗಾವಃ ಶೀತಾರ್ದಿತಾ ಇವ||

ಛಳಿಯಿಂದ ಆರ್ದಿತರಾದ ಹಸುಗಳು ತ್ರಾತಾರನನ್ನು ಪಡೆಯದೇ ಹುಡುಕಾಡುವಂತೆ ಭಯಪೀಡಿತರಾದ ಪಾಂಡವರು ಎಲ್ಲಕಡೆ ನೋಡತೊಡಗಿದರು.

06045059a ಹತವಿಪ್ರದ್ರುತೇ ಸೈನ್ಯೇ ನಿರುತ್ಸಾಹೇ ವಿಮರ್ದಿತೇ|

06045059c ಹಾಹಾಕಾರೋ ಮಹಾನಾಸೀತ್ಪಾಂಡುಸೈನ್ಯೇಷು ಭಾರತ||

ಭಾರತ! ಪಾಂಡುಸೈನ್ಯಗಳಲ್ಲಿ ಹತರಾಗದೇ ಉಳಿದ ಸೇನೆಯಲ್ಲಿ ನಿರುತ್ಸಾಹವುಂಟಾಗಿ ಮಹಾ ಹಾಹಾಕಾರವುಂಟಾಯಿತು.

06045060a ತತೋ ಭೀಷ್ಮಃ ಶಾಂತನವೋ ನಿತ್ಯಂ ಮಂಡಲಕಾರ್ಮುಕಃ|

06045060c ಮುಮೋಚ ಬಾಣಾನ್ದೀಪ್ತಾಗ್ರಾನಹೀನಾಶೀವಿಷಾನಿವ||

ಆಗ ಶಾಂತನವ ಭೀಷ್ಮನು ನಿಲ್ಲಿಸದೇ ಧನುಸ್ಸನ್ನು ಮಂಡಲಾಕಾರವಾಗಿ ಸೆಳೆದು ಉರಿಯುತ್ತಿದ್ದ ತೀಕ್ಷ್ಣಮೊನೆಗಳಿಂದ ಕೂಡಿದ ಸರ್ಪಗಳಂತಿರುವ ಬಾಣಗಳನ್ನು ಬಿಡುತ್ತಲೇ ಇದ್ದನು.

06045061a ಶರೈರೇಕಾಯನೀಕುರ್ವನ್ದಿಶಃ ಸರ್ವಾ ಯತವ್ರತಃ|

06045061c ಜಘಾನ ಪಾಂಡವರಥಾನಾದಿಶ್ಯಾದಿಶ್ಯ ಭಾರತ||

ಭಾರತ! ಆ ಯತವ್ರತನು ಎಲ್ಲ ದಿಕ್ಕುಗಳನ್ನೂ ಒಂದೇ ಮಾರ್ಗವಾಗಿ ಮಾಡುತ್ತಾ ಪಾಂಡವರಥಿಕರನ್ನು ಕರೆ ಕರೆದು ಹೊಡೆದನು.

06045062a ತತಃ ಸೈನ್ಯೇಷು ಭಗ್ನೇಷು ಮಥಿತೇಷು ಚ ಸರ್ವಶಃ|

06045062c ಪ್ರಾಪ್ತೇ ಚಾಸ್ತಂ ದಿನಕರೇ ನ ಪ್ರಾಜ್ಞಾಯತ ಕಿಂ ಚನ||

ಅವನಿಂದ ಸದೆಬಡಿಯಲ್ಪಟ್ಟ ಆ ಸೇನೆಯು ಭಗ್ನವಾಗಲು ದಿನಕರನು ಅಸ್ತನಾದನು. ಎಲ್ಲಕಡೆ ಏನೂ ಕಾಣುತ್ತಿರಲಿಲ್ಲ.

06045063a ಭೀಷ್ಮಂ ಚ ಸಮುದೀರ್ಯಂತಂ ದೃಷ್ಟ್ವಾ ಪಾರ್ಥಾ ಮಹಾಹವೇ|

06045063c ಅವಹಾರಮಕುರ್ವಂತ ಸೈನ್ಯಾನಾಂ ಭರತರ್ಷಭ||

ಭರತರ್ಷಭ! ಭೀಷ್ಮನು ನಿಲ್ಲಿಸದೇ ಇದ್ದುದನ್ನು ನೋಡಿ ಪಾಂಡವರು ತಮ್ಮ ಸೇನೆಗಳನ್ನು ಮಹಾಹವದಿಂದ ಹಿಂದೆ ತೆಗೆದುಕೊಂಡರು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಪ್ರಥಮದಿವಸಾವಹಾರೇ ಪಂಚಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಪ್ರಥಮದಿವಸಾವಹಾರ ಎನ್ನುವ ನಲ್ವತ್ತೈದನೇ ಅಧ್ಯಾಯವು.

Image result for flowers against white background

Comments are closed.