Bhishma Parva: Chapter 46

ಭೀಷ್ಮ ಪರ್ವ: ಭೀಷ್ಮವಧ ಪರ್ವ

೪೬

ಮೊದಲನೇ ದಿನದ ಯುದ್ಧವು ಮುಗಿಯಲು ಯುಧಿಷ್ಠಿರನು ಕೃಷ್ಣನಿಗೆ “ಭೀಷ್ಮನ ಬಾಣಗಳಿಂದ ಪೀಡಿತವಾದ ನನ್ನ ಸೈನ್ಯವು ಓಡಿಹೋಗುತ್ತಿದೆ...ಅರ್ಜುನನು ಮನಸ್ಸಿಟ್ಟು ಹೋರಾಡುತ್ತಿಲ್ಲ...ಭೀಮನೊಬ್ಬನೇ ಮನಸ್ಸಿಟ್ಟು ಹೋರಾಡುತ್ತಿದ್ದಾನೆ...ನಾನು ಅರಣ್ಯಕ್ಕೆ ತಪಸ್ಸಿಗೆಂದು ಹೋಗುತ್ತೇನೆ...”ಎಂದು ಮುಂತಾಗಿ ಹೇಳಿಕೊಂಡು ದುಃಖಿತನಾದುದು; ಅವನಿಗೆ ಕೃಷ್ಣನ ಆಶ್ವಾಸನೆ (೧-೩೦). ಯುಧಿಷ್ಠಿರ- ಧೃಷ್ಟದ್ಯುಮ್ನ ಸಂವಾದ (೩೧-೪೦). ಎರಡನೇ ದಿನದ ಯುದ್ದಕ್ಕೆ ಪಾಂಡವ ಸೇನೆಗಳ ಕ್ರೌಂಚವ್ಯೂಹ ರಚನೆ (೪೧-೫೬).

06046001 ಸಂಜಯ ಉವಾಚ|

06046001a ಕೃತೇಽವಹಾರೇ ಸೈನ್ಯಾನಾಂ ಪ್ರಥಮೇ ಭರತರ್ಷಭ|

06046001c ಭೀಷ್ಮೇ ಚ ಯುಧಿ ಸಂರಬ್ಧೇ ಹೃಷ್ಟೇ ದುರ್ಯೋಧನೇ ತಥಾ||

06046002a ಧರ್ಮರಾಜಸ್ತತಸ್ತೂರ್ಣಮಭಿಗಮ್ಯ ಜನಾರ್ದನಂ|

06046002c ಭ್ರಾತೃಭಿಃ ಸಹಿತಃ ಸರ್ವೈಃ ಸರ್ವೈಶ್ಚೈವ ಜನೇಶ್ವರೈಃ||

ಸಂಜಯನು ಹೇಳಿದನು: “ಭರತರ್ಷಭ! ಮೊದಲನೆಯ ದಿವಸ ಸೈನ್ಯವು ಹಿಂದೆಸರಿಯಲು, ಯುದ್ಧದಲ್ಲಿ ಭೀಷ್ಮನು ಉತ್ಸಾಹಿಯಾಗಿರಲು, ಹಾಗೆಯೇ ದುರ್ಯೋಧನನು ಸಂತೋಷದಿಂದಿರಲು ಧರ್ಮರಾಜನು ತಕ್ಷಣವೇ ಸಹೋದರು ಮತ್ತು ಎಲ್ಲ ಜನೇಶ್ವರರೊಡಗೂಡಿ ಜನಾರ್ದನನ ಬಳಿಸಾರಿದನು.

06046003a ಶುಚಾ ಪರಮಯಾ ಯುಕ್ತಶ್ಚಿಂತಯಾನಃ ಪರಾಜಯಂ|

06046003c ವಾರ್ಷ್ಣೇಯಮಬ್ರವೀದ್ರಾಜನ್ದೃಷ್ಟ್ವಾ ಭೀಷ್ಮಸ್ಯ ವಿಕ್ರಮಂ||

ಭೀಷ್ಮನ ವಿಕ್ರಮವನ್ನು ನೋಡಿ ಚಿಂತಾಕ್ರಾಂತನಾಗಿ ರಾಜನು ಪರಮ ಶೋಕದಿಂದ ವಾರ್ಷ್ಣೇಯನಿಗೆ ಹೇಳಿದನು:

06046004a ಕೃಷ್ಣ ಪಶ್ಯ ಮಹೇಷ್ವಾಸಂ ಭೀಷ್ಮಂ ಭೀಮಪರಾಕ್ರಮಂ|

06046004c ಶರೈರ್ದಹಂತಂ ಸೈನ್ಯಂ ಮೇ ಗ್ರೀಷ್ಮೇ ಕಕ್ಷಮಿವಾನಲಂ||

“ಕೃಷ್ಣ! ಗ್ರೀಷ್ಮದಲ್ಲಿ ಬೆಂಕಿಯು ಒಣಹುಲ್ಲನ್ನು ಸುಡುವಂತೆ ಶರಗಳಿಂದ ನನ್ನ ಸೈನ್ಯವನ್ನು ದಹಿಸುತ್ತಿರುವ ಈ ಭೀಮಪರಾಕ್ರಮಿ ಭೀಷ್ಮನನ್ನು ನೋಡು!

06046005a ಕಥಮೇನಂ ಮಹಾತ್ಮಾನಂ ಶಕ್ಷ್ಯಾಮಃ ಪ್ರತಿವೀಕ್ಷಿತುಂ|

06046005c ಲೇಲಿಹ್ಯಮಾನಂ ಸೈನ್ಯಂ ಮೇ ಹವಿಷ್ಮಂತಮಿವಾನಲಂ||

ಅಗ್ನಿಯು ಹವಿಸ್ಸುಗಳನ್ನು ನೆಕ್ಕುವಂತೆ ನನ್ನ ಸೈನ್ಯವನ್ನು ನೆಕ್ಕುತ್ತಿರುವ ಈ ಮಹಾತ್ಮನನ್ನು ನಾವು ಹೇಗೆ ನೋಡಲೂ ಕೂಡ ಶಕ್ಯರಾಗುತ್ತಿಲ್ಲ?

06046006a ಏತಂ ಹಿ ಪುರುಷವ್ಯಾಘ್ರಂ ಧನುಷ್ಮಂತಂ ಮಹಾಬಲಂ|

06046006c ದೃಷ್ಟ್ವಾ ವಿಪ್ರದ್ರುತಂ ಸೈನ್ಯಂ ಮದೀಯಂ ಮಾರ್ಗಣಾಹತಂ||

ಈ ಪುರುಷವ್ಯಾಘ್ರ ಧನುಷ್ಮಂತ ಮಹಾಬಲನ ಬಾಣಗಳಿಂದ ಪೀಡಿತವಾದ ನನ್ನ ಸೈನ್ಯವು ಓಡಿಹೋಗುತ್ತಿದೆ.

06046007a ಶಕ್ಯೋ ಜೇತುಂ ಯಮಃ ಕ್ರುದ್ಧೋ ವಜ್ರಪಾಣಿಶ್ಚ ಸಂಯುಗೇ|

06046007c ವರುಣಃ ಪಾಶಭೃಚ್ಚಾಪಿ ಕುಬೇರೋ ವಾ ಗದಾಧರಃ||

06046008a ನ ತು ಭೀಷ್ಮೋ ಮಹಾತೇಜಾಃ ಶಕ್ಯೋ ಜೇತುಂ ಮಹಾಬಲಃ|

ಸಂಯುಗದಲ್ಲಿ ನಾವು ಕ್ರುದ್ಧನಾದ ಯಮನನ್ನಾದರೂ, ವಜ್ರಪಾಣಿಯನ್ನಾದರೂ, ಪಾಶಪಾಣಿ ವರುಣನನ್ನಾದರೂ ಅಥವಾ ಗದಾಧರ ಕುಬೇರನನ್ನಾದರೂ ಜಯಿಸಬಲ್ಲೆವು. ಆದರೆ ಮಹಾತೇಜಸ್ವಿ ಮಹಾಬಲ ಭೀಷ್ಮನನ್ನು ಜಯಿಸಲು ಸಾಧ್ಯವಿಲ್ಲ.

06046008c ಸೋಽಹಮೇವಂ ಗತೇ ಮಗ್ನೋ ಭೀಷ್ಮಾಗಾಧಜಲೇಽಪ್ಲವಃ||

06046009a ಆತ್ಮನೋ ಬುದ್ಧಿದೌರ್ಬಲ್ಯಾದ್ಭೀಷ್ಮಮಾಸಾದ್ಯ ಕೇಶವ|

06046009c ವನಂ ಯಾಸ್ಯಾಮಿ ಗೋವಿಂದ ಶ್ರೇಯೋ ಮೇ ತತ್ರ ಜೀವಿತುಂ||

ಕೇಶವ! ನಾನು ಬುದ್ಧಿ ದೌರ್ಬಲ್ಯದಿಂದ ಭೀಷ್ಮನನ್ನು ಆಕ್ರಮಣ ಮಾಡಿ ಭೀಷ್ಮನೆಂಬ ಅಗಾಧ ಸಮುದ್ರವನ್ನು ದಾಟಲು ಯಾವ ನೌಕೆಯೂ ಇಲ್ಲದೇ ಮುಳುಗಿ ಹೋಗುವವನಿದ್ದೇನೆ. ಗೋವಿಂದ! ನಾನು ವನಕ್ಕೆ ಹೋಗುತ್ತೇನೆ. ಅಲ್ಲಿಯ ಜೀವನವೇ ನನಗೆ ಶ್ರೇಯಸ್ಕರವಾದುದು.

06046010a ನ ತ್ವಿಮಾನ್ಪೃಥಿವೀಪಾಲಾನ್ದಾತುಂ ಭೀಷ್ಮಾಯ ಮೃತ್ಯವೇ|

06046010c ಕ್ಷಪಯಿಷ್ಯತಿ ಸೇನಾಂ ಮೇ ಕೃಷ್ಣ ಭೀಷ್ಮೋ ಮಹಾಸ್ತ್ರವಿತ್||

ಈ ಪೃಥಿವೀಪಾಲರನ್ನು ಭೀಷ್ಮನೆಂಬ ಮೃತ್ಯುವಿಗೆ ಕೊಡಲಾರೆ. ಕೃಷ್ಣ! ಮಹಾಸ್ತ್ರವಿದು ಭೀಷ್ಮನು ನನ್ನ ಈ ಸೇನೆಯನ್ನು ಧ್ವಂಸಮಾಡಿಬಿಡುತ್ತಾನೆ.

06046011a ಯಥಾನಲಂ ಪ್ರಜ್ವಲಿತಂ ಪತಂಗಾಃ ಸಮಭಿದ್ರುತಾಃ|

06046011c ವಿನಾಶಾಯೈವ ಗಚ್ಛಂತಿ ತಥಾ ಮೇ ಸೈನಿಕೋ ಜನಃ||

ಹೇಗೆ ಪತಂಗಗಳು ವಿನಾಶಕ್ಕಾಗಿಯೇ ಉರಿಯುತ್ತಿರುವ ಬೆಂಕಿಯಲ್ಲಿ ಧಾವಿಸಿ ಹೋಗುತ್ತವೆಯೋ ಹಾಗೆ ನನ್ನ ಸೈನಿಕರೂ ವಿನಾಶಹೊಂದುತ್ತಾರೆ.

06046012a ಕ್ಷಯಂ ನೀತೋಽಸ್ಮಿ ವಾರ್ಷ್ಣೇಯ ರಾಜ್ಯಹೇತೋಃ ಪರಾಕ್ರಮೀ|

06046012c ಭ್ರಾತರಶ್ಚೈವ ಮೇ ವೀರಾಃ ಕರ್ಶಿತಾಃ ಶರಪೀಡಿತಾಃ||

ವಾರ್ಷ್ಣೇಯ! ರಾಜ್ಯಕ್ಕಾಗಿ ಪರಾಕ್ರಮವನ್ನು ತೋರಿಸಲು ಹೊರಟ ನಾನು ಕ್ಷಯವನ್ನು ಹೊಂದುತ್ತಿದ್ದೇನೆ. ನನ್ನ ವೀರ ಸಹೋದರರು ಕೂಡ ಶರಪೀಡಿತರಾಗಿ ಕೃಶರಾಗಿದ್ದಾರೆ.

06046013a ಮತ್ಕೃತೇ ಭ್ರಾತೃಸೌಹಾರ್ದಾದ್ರಾಜ್ಯಾದ್ಭ್ರಷ್ಟಾಸ್ತಥಾ ಸುಖಾತ್|

06046013c ಜೀವಿತಂ ಬಹು ಮನ್ಯೇಽಹಂ ಜೀವಿತಂ ಹ್ಯದ್ಯ ದುರ್ಲಭಂ||

ನನ್ನಿಂದಾಗಿ ಭ್ರಾತೃಸೌಹಾರ್ದತೆಯಿಂದಾಗಿ ನನ್ನ ತಮ್ಮಂದಿರು ನನ್ನ ಕಾರಣ ರಾಜ್ಯ-ಸುಖಗಳಿಂದ ಭ್ರಷ್ಟರಾಗಿದ್ದಾರೆ. ಇಂದು ದುರ್ಲಭವಾದ ಜೀವಿತವನ್ನು ಬಹುವಾಗಿ ಮನ್ನಿಸುತ್ತೇನೆ.

06046014a ಜೀವಿತಸ್ಯ ಹಿ ಶೇಷೇಣ ತಪಸ್ತಪ್ಸ್ಯಾಮಿ ದುಶ್ಚರಂ|

06046014c ನ ಘಾತಯಿಷ್ಯಾಮಿ ರಣೇ ಮಿತ್ರಾಣೀಮಾನಿ ಕೇಶವ||

ಕೇಶವ! ಉಳಿದ ಜೀವನದಲ್ಲಿ ದುಶ್ಚರ ತಪಸ್ಸನ್ನು ತಪಿಸುತ್ತೇನೆ. ಈ ಮಿತ್ರರನ್ನು ರಣದಲ್ಲಿ ಕೊಲೆಗೀಡುಮಾಡುವುದಿಲ್ಲ.

06046015a ರಥಾನ್ಮೇ ಬಹುಸಾಹಸ್ರಾನ್ದಿವ್ಯೈರಸ್ತ್ರೈರ್ಮಹಾಬಲಃ|

06046015c ಘಾತಯತ್ಯನಿಶಂ ಭೀಷ್ಮಃ ಪ್ರವರಾಣಾಂ ಪ್ರಹಾರಿಣಾಂ||

ನನ್ನ ಅನೇಕ ಸಹಸ್ರಾರು ರಥಗಳನ್ನು ಮಹಾಬಲ, ಪ್ರಹರಿಗಳಲ್ಲಿ ಪ್ರವರನಾದ ಭೀಷ್ಮನು ದಿವ್ಯಾಸ್ತ್ರಗಳಿಂದ ಸತತವಾಗಿ ಸಂಹರಿಸುತ್ತಲೇ ಇದ್ದಾನೆ.

06046016a ಕಿಂ ನು ಕೃತ್ವಾ ಕೃತಂ ಮೇ ಸ್ಯಾದ್ಬ್ರೂಹಿ ಮಾಧವ ಮಾಚಿರಂ|

06046016c ಮಧ್ಯಸ್ಥಮಿವ ಪಶ್ಯಾಮಿ ಸಮರೇ ಸವ್ಯಸಾಚಿನಂ||

ಯಾವ ಕಾರ್ಯವನ್ನು ನಾನು ಮಾಡಬೇಕೆನ್ನುವುದನ್ನು ಬೇಗ ಹೇಳು ಮಾಧವ! ಈ ಸಮರದಲ್ಲಿ ಸವ್ಯಸಾಚಿಯು ಮಧ್ಯಸ್ಥನಾಗಿರುವಂತೆ ನನಗೆ ಕಾಣುತ್ತಿದೆ.

06046017a ಏಕೋ ಭೀಮಃ ಪರಂ ಶಕ್ತ್ಯಾ ಯುಧ್ಯತ್ಯೇಷ ಮಹಾಭುಜಃ|

06046017c ಕೇವಲಂ ಬಾಹುವೀರ್ಯೇಣ ಕ್ಷತ್ರಧರ್ಮಮನುಸ್ಮರನ್||

ಮಹಾಭುಜ ಭೀಮನೊಬ್ಬನೇ ಪರಮ ಶಕ್ತಿಯಿಂದ, ಕ್ಷತ್ರಧರ್ಮವನ್ನು ನೆನಪಿನಲ್ಲಿಟ್ಟುಕೊಂಡು ಕೇವಲ ಬಾಹುವೀರ್ಯದಿಂದ ಯುದ್ಧಮಾಡುತ್ತಿದ್ದಾನೆ.

06046018a ಗದಯಾ ವೀರಘಾತಿನ್ಯಾ ಯಥೋತ್ಸಾಹಂ ಮಹಾಮನಾಃ|

06046018c ಕರೋತ್ಯಸುಕರಂ ಕರ್ಮ ಗಜಾಶ್ವರಥಪತ್ತಿಷು||

ವೀರರನ್ನು ಘಾತಿಗೊಳಿಸಬಲ್ಲ ಗದೆಯಿಂದ ಆ ಮಹಾಮನನು ಗಜ-ಅಶ್ವ-ಪದಾತಿಗಳೊಡನೆ ಕಷ್ಟಸಾದ್ಯವಾದ ಕೆಲಸವನ್ನು ಯಥೋತ್ಸಾಹ ಮಾಡುತ್ತಿದ್ದಾನೆ.

06046019a ನಾಲಮೇಷ ಕ್ಷಯಂ ಕರ್ತುಂ ಪರಸೈನ್ಯಸ್ಯ ಮಾರಿಷ|

06046019c ಆರ್ಜವೇನೈವ ಯುದ್ಧೇನ ವೀರ ವರ್ಷಶತೈರಪಿ||

ಆದರೆ ಇವನು ತನ್ನ ಬಲವನ್ನುಪಯೋಗಿಸಿ ಋಜುಮಾರ್ಗದಿಂದಲೇ ಯುದ್ಧಮಾಡುತ್ತಿದ್ದರೆ ಶತ್ರುಸೈನ್ಯವನ್ನು ಸಂಹರಿಸಲು ನೂರು ವರ್ಷಗಳೇ ಬೇಕಾಗಬಹುದು.

06046020a ಏಕೋಽಸ್ತ್ರವಿತ್ಸಖಾ ತೇಽಯಂ ಸೋಽಪ್ಯಸ್ಮಾನ್ಸಮುಪೇಕ್ಷತೇ|

06046020c ನಿರ್ದಹ್ಯಮಾನಾನ್ಭೀಷ್ಮೇಣ ದ್ರೋಣೇನ ಚ ಮಹಾತ್ಮನಾ||

ಈ ನಿನ್ನ ಸಖನೊಬ್ಬನೇ ನಮ್ಮ ಪಕ್ಷದಲ್ಲಿ ಮಹಾಸ್ತ್ರಗಳನ್ನು ತಿಳಿದವನಾಗಿದ್ದರೂ ಮಹಾತ್ಮ ಭೀಷ್ಮ-ದ್ರೋಣರು ಸುಡುತ್ತಿದ್ದರೂ ನಮ್ಮವರನ್ನು ಅವನು ಉಪೇಕ್ಷಿಸುತ್ತಿದ್ದಾನೆ.

06046021a ದಿವ್ಯಾನ್ಯಸ್ತ್ರಾಣಿ ಭೀಷ್ಮಸ್ಯ ದ್ರೋಣಸ್ಯ ಚ ಮಹಾತ್ಮನಃ|

06046021c ಧಕ್ಷ್ಯಂತಿ ಕ್ಷತ್ರಿಯಾನ್ಸರ್ವಾನ್ಪ್ರಯುಕ್ತಾನಿ ಪುನಃ ಪುನಃ||

ಮಹಾತ್ಮ ಭೀಷ್ಮನ ಮತ್ತು ದ್ರೋಣನ ದಿವ್ಯಾಸ್ತ್ರಗಳು ಪುನಃ ಪುನಃ ಸರ್ವ ಕ್ಷತ್ರಿಯರನ್ನೂ ದಹಿಸುತ್ತಿವೆ.

06046022a ಕೃಷ್ಣ ಭೀಷ್ಮಃ ಸುಸಂರಬ್ಧಃ ಸಹಿತಃ ಸರ್ವಪಾರ್ಥಿವೈಃ|

06046022c ಕ್ಷಪಯಿಷ್ಯತಿ ನೋ ನೂನಂ ಯಾದೃಶೋಽಸ್ಯ ಪರಾಕ್ರಮಃ||

ಕೃಷ್ಣ! ಸುಸಂರಬ್ಧನಾಗಿರುವ ಭೀಷ್ಮನು ಸರ್ವ ಪಾರ್ಥಿವರೊಂದಿಗೆ ನಮ್ಮನ್ನು ಬೇಗನೇ ವಿನಾಶಗೊಳಿಸುತ್ತಾನೆ. ಇವನ ಪರಾಕ್ರಮವೇ ಅಂಥಹುದು.

06046023a ಸ ತ್ವಂ ಪಶ್ಯ ಮಹೇಷ್ವಾಸಂ ಯೋಗೀಶ್ವರ ಮಹಾರಥಂ|

06046023c ಯೋ ಭೀಷ್ಮಂ ಶಮಯೇತ್ಸಂಖ್ಯೇ ದಾವಾಗ್ನಿಂ ಜಲದೋ ಯಥಾ||

ಯೋಗೀಶ್ವರ! ಮಹಾರಥ ಮಹೇಷ್ವಾಸ ಭೀಷ್ಮನೆಂಬುವ ದಾವಾಗ್ನಿಯನ್ನು ಆರಿಸಬಲ್ಲ ಮೋಡವು ರಣದಲ್ಲಿದ್ದರೆ ನೀನು ತೋರಿಸು.

06046024a ತವ ಪ್ರಸಾದಾದ್ಗೋವಿಂದ ಪಾಂಡವಾ ನಿಹತದ್ವಿಷಃ|

06046024c ಸ್ವರಾಜ್ಯಮನುಸಂಪ್ರಾಪ್ತಾ ಮೋದಿಷ್ಯಂತಿ ಸಬಾಂಧವಾಃ||

ಗೋವಿಂದ! ನಿನ್ನ ಪ್ರಸಾದದಿಂದ ಪಾಂಡವರು ದ್ವೇಷಿಗಳನ್ನು ಸಂಹರಿಸಿ ಸ್ವರಾಜ್ಯವನ್ನು ಹಿಂದೆ ಪಡೆದು ಬಾಂಧವರೊಂದಿಗೆ ಸಂತೋಷದಿಂದಿರಬಲ್ಲರು.”

06046025a ಏವಮುಕ್ತ್ವಾ ತತಃ ಪಾರ್ಥೋ ಧ್ಯಾಯನ್ನಾಸ್ತೇ ಮಹಾಮನಾಃ|

06046025c ಚಿರಮಂತರ್ಮನಾ ಭೂತ್ವಾ ಶೋಕೋಪಹತಚೇತನಃ||

ಹೀಗೆ ಹೇಳಿ ಮಹಾಮನಸ್ವಿ ಪಾರ್ಥನು ಶೋಕದಿಂದ ಹತಚೇತನನಾಗಿ, ಮನಸ್ಸನ್ನು ಒಳಸೆಳೆದುಕೊಂಡು ಬಹಳ ಹೊತ್ತಿನವರೆಗೆ ಧ್ಯಾನಮಗ್ನನಾದನು.

06046026a ಶೋಕಾರ್ತಂ ಪಾಂಡವಂ ಜ್ಞಾತ್ವಾ ದುಃಖೇನ ಹತಚೇತಸಂ|

06046026c ಅಬ್ರವೀತ್ತತ್ರ ಗೋವಿಂದೋ ಹರ್ಷಯನ್ಸರ್ವಪಾಂಡವಾನ್||

ದುಃಖದಿಂದ ಹತಚೇತಸನಾದ ಶೋಕಾರ್ತ ಪಾಂಡವನನ್ನು ಅರ್ಥಮಾಡಿಕೊಂಡು ಗೋವಿಂದನು ಸರ್ವಪಾಂಡವರನ್ನೂ ಹರ್ಷಗೊಳಿಸುತ್ತಾ ಅಲ್ಲಿ ಹೇಳಿದನು:

06046027a ಮಾ ಶುಚೋ ಭರತಶ್ರೇಷ್ಠ ನ ತ್ವಂ ಶೋಚಿತುಮರ್ಹಸಿ|

06046027c ಯಸ್ಯ ತೇ ಭ್ರಾತರಃ ಶೂರಾಃ ಸರ್ವಲೋಕಸ್ಯ ಧನ್ವಿನಃ||

“ಭರತಶ್ರೇಷ್ಠ! ಶೋಕಿಸಬೇಡ! ಸರ್ವಲೋಕಗಳ ಧನ್ವಿಗಳಾದ ಈ ಶೂರರು ತಮ್ಮಂದಿರಾಗಿರುವ ನೀನು ಶೋಕಿಸಬಾರದು.

06046028a ಅಹಂ ಚ ಪ್ರಿಯಕೃದ್ರಾಜನ್ಸಾತ್ಯಕಿಶ್ಚ ಮಹಾರಥಃ|

06046028c ವಿರಾಟದ್ರುಪದೌ ವೃದ್ಧೌ ಧೃಷ್ಟದ್ಯುಮ್ನಶ್ಚ ಪಾರ್ಷತಃ||

06046029a ತಥೈವ ಸಬಲಾಃ ಸರ್ವೇ ರಾಜಾನೋ ರಾಜಸತ್ತಮ|

06046029c ತ್ವತ್ಪ್ರಸಾದಂ ಪ್ರತೀಕ್ಷಂತೇ ತ್ವದ್ಭಕ್ತಾಶ್ಚ ವಿಶಾಂ ಪತೇ||

ರಾಜನ್! ರಾಜಸತ್ತಮ! ವಿಶಾಂಪತೇ! ನಿನಗೆ ಪ್ರಿಯವಾದುದನ್ನು ಮಾಡಲೆಂದೇ ನಾನು, ಮಹಾರಥ ಸಾತ್ಯಕಿ, ವೃದ್ಧರಾದ ವಿರಾಟ-ದ್ರುಪದರಿಬ್ಬರು, ಪಾರ್ಷತ ಧೃಷ್ಟದ್ಯುಮ್ನ, ಹಾಗೆಯೇ ಸರ್ವ ರಾಜರೂ ಸೇನೆಗಳೊಂದಿಗೆ ನಿನ್ನ ಪ್ರಸನ್ನತೆಯನ್ನು ನಿರೀಕ್ಷಿಸುತ್ತಿದ್ದೇವೆ ಮತ್ತು ನಿನ್ನ ಭಕ್ತರಾಗಿದ್ದೇವೆ.

06046030a ಏಷ ತೇ ಪಾರ್ಷತೋ ನಿತ್ಯಂ ಹಿತಕಾಮಃ ಪ್ರಿಯೇ ರತಃ|

06046030c ಸೇನಾಪತ್ಯಮನುಪ್ರಾಪ್ತೋ ಧೃಷ್ಟದ್ಯುಮ್ನೋ ಮಹಾಬಲಃ|

06046030e ಶಿಖಂಡೀ ಚ ಮಹಾಬಾಹೋ ಭೀಷ್ಮಸ್ಯ ನಿಧನಂ ಕಿಲ||

ಈ ಪಾರ್ಷತ ಮಹಾಬಲ ಧೃಷ್ಟದ್ಯುಮ್ನನು ನಿತ್ಯವೂ ನಿನ್ನ ಹಿತವನ್ನು ಬಯಸಿ, ಪ್ರಿಯರತನಾಗಿ ಸೇನಾಪತ್ಯವನ್ನು ವಹಿಸಿಕೊಂಡಿದ್ದಾನೆ. ಮಹಾಬಾಹೋ! ಈ ಶಿಖಂಡಿಯೂ ಕೂಡ ಭೀಷ್ಮನ ಸಾವಿಗಾಗಿಯೇ ಅಲ್ಲವೇ?”

06046031a ಏತಚ್ಚ್ರುತ್ವಾ ತತೋ ರಾಜಾ ಧೃಷ್ಟದ್ಯುಮ್ನಂ ಮಹಾರಥಂ|

06046031c ಅಬ್ರವೀತ್ಸಮಿತೌ ತಸ್ಯಾಂ ವಾಸುದೇವಸ್ಯ ಶೃಣ್ವತಃ||

ಇದನ್ನು ಕೇಳಿ ರಾಜನು ವಾಸುದೇವನು ಕೇಳುವಂತೆ ಆ ಸಮಿತಿಯಲ್ಲಿ ಮಹಾರಥ ಧೃಷ್ಟದ್ಯುಮ್ನನಿಗೆ ಹೇಳಿದನು:

06046032a ಧೃಷ್ಟದ್ಯುಮ್ನ ನಿಬೋಧೇದಂ ಯತ್ತ್ವಾ ವಕ್ಷ್ಯಾಮಿ ಮಾರಿಷ|

06046032c ನಾತಿಕ್ರಮ್ಯಂ ಭವೇತ್ತಚ್ಚ ವಚನಂ ಮಮ ಭಾಷಿತಂ||

“ಧೃಷ್ಟದ್ಯುಮ್ನ! ನಾನು ಹೇಳುವುದನ್ನು ಮನಸ್ಸಿಟ್ಟು ಕೇಳು. ಈಗ ನಾನು ಹೇಳಲಿರುವ ಮಾತನ್ನು ಅತಿಕ್ರಮಿಸಬಾರದು.

06046033a ಭವಾನ್ಸೇನಾಪತಿರ್ಮಹ್ಯಂ ವಾಸುದೇವೇನ ಸಮ್ಮತಃ|

06046033c ಕಾರ್ತ್ತಿಕೇಯೋ ಯಥಾ ನಿತ್ಯಂ ದೇವಾನಾಮಭವತ್ಪುರಾ|

06046033e ತಥಾ ತ್ವಮಪಿ ಪಾಂಡೂನಾಂ ಸೇನಾನೀಃ ಪುರುಷರ್ಷಭ||

ಪುರುಷರ್ಷಭ! ವಾಸುದೇವನ ಸಮ್ಮತಿಯಂತೆ ಹಿಂದೆ ದೇವತೆಗಳಿಗೆ ಕಾರ್ತಿಕೇಯನು ಹೇಗೆ ನಿತ್ಯ ಸೇನಾಪತಿಯಾಗಿದ್ದನೋ ಹಾಗೆ ನೀನೂ ಕೂಡ ಪಾಂಡವರ ಸೇನಾನಿಯಾಗಿದ್ದೀಯೆ.

06046034a ಸ ತ್ವಂ ಪುರುಷಶಾರ್ದೂಲ ವಿಕ್ರಮ್ಯ ಜಹಿ ಕೌರವಾನ್|

06046034c ಅಹಂ ಚ ತ್ವಾನುಯಾಸ್ಯಾಮಿ ಭೀಮಃ ಕೃಷ್ಣಶ್ಚ ಮಾರಿಷ||

06046035a ಮಾದ್ರೀಪುತ್ರೌ ಚ ಸಹಿತೌ ದ್ರೌಪದೇಯಾಶ್ಚ ದಂಶಿತಾಃ|

06046035c ಯೇ ಚಾನ್ಯೇ ಪೃಥಿವೀಪಾಲಾಃ ಪ್ರಧಾನಾಃ ಪುರುಷರ್ಷಭ||

ಪುರುಷಶಾರ್ದೂಲ! ವಿಕ್ರಮದಿಂದ ನೀನು ಕೌರವರನ್ನು ಜಯಿಸು. ನಾನು ಮತ್ತು ಹಾಗೆಯೇ ಭೀಮ, ಕೃಷ್ಣ, ಮಾದ್ರೀಪುತ್ರರಿಬ್ಬರು, ಜೊತೆಗೆ ಕವಚಗಳನ್ನು ಧರಿಸಿದ ದ್ರೌಪದೇಯರೂ, ಮತ್ತು ಅನ್ಯ ಪ್ರಥಾನ ಪೃಥಿವೀಪಾಲರೂ ನಿನ್ನನ್ನು ಅನುಸರಿಸುತ್ತೇವೆ.”

06046036a ತತ ಉದ್ಧರ್ಷಯನ್ಸರ್ವಾನ್ಧೃಷ್ಟದ್ಯುಮ್ನೋಽಭ್ಯಭಾಷತ|

06046036c ಅಹಂ ದ್ರೋಣಾಂತಕಃ ಪಾರ್ಥ ವಿಹಿತಃ ಶಂಭುನಾ ಪುರಾ||

ಆಗ ಧೃಷ್ಟದ್ಯುಮ್ನನು ಎಲ್ಲರನ್ನೂ ಹರ್ಷಗೊಳಿಸುತ್ತಾ ಹೇಳಿದನು: “ಪಾರ್ಥ! ಹಿಂದೆ ಶಂಭುವು ವಿಹಿಸಿದ ದ್ರೋಣಾಂತಕನು ನಾನು.

06046037a ರಣೇ ಭೀಷ್ಮಂ ತಥಾ ದ್ರೋಣಂ ಕೃಪಂ ಶಲ್ಯಂ ಜಯದ್ರಥಂ|

06046037c ಸರ್ವಾನದ್ಯ ರಣೇ ದೃಪ್ತಾನ್ಪ್ರತಿಯೋತ್ಸ್ಯಾಮಿ ಪಾರ್ಥಿವ||

ಪಾರ್ಥಿವ! ರಣದಲ್ಲಿ ಭೀಷ್ಮನನ್ನೂ ಮತ್ತು ಹಾಗೆಯೇ ಕೊಬ್ಬಿರುವ ದ್ರೋಣ, ಕೃಪ, ಶಲ್ಯ, ಜಯದ್ರಥ ಎಲ್ಲರನ್ನೂ ಇಂದು ರಣದಲ್ಲಿ ಎದುರಿಸಿ ಯುದ್ಧಮಾಡುತ್ತೇನೆ.”

06046038a ಅಥೋತ್ಕ್ರುಷ್ಟಂ ಮಹೇಷ್ವಾಸೈಃ ಪಾಂಡವೈರ್ಯುದ್ಧದುರ್ಮದೈಃ|

06046038c ಸಮುದ್ಯತೇ ಪಾರ್ಥಿವೇಂದ್ರೇ ಪಾರ್ಷತೇ ಶತ್ರುಸೂದನೇ||

06046039a ತಮಬ್ರವೀತ್ತತಃ ಪಾರ್ಥಃ ಪಾರ್ಷತಂ ಪೃತನಾಪತಿಂ|

ಆಗ ಶತ್ರುಸೂದನ ಪಾರ್ಥಿವೇಂದ್ರ ಪಾರ್ಷತನು ಯುದ್ಧೋದ್ಯುಕ್ತನಾಗಲು ಮಹೇಷ್ವಾಸ ಯುದ್ಧ ದುರ್ಮದ ಪಾಂಡವರು ಜೋರಾಗಿ ರಣಘೋಷಗೈದರು. ಆಗ ಪಾರ್ಥನು ಸೇನಾಪತಿ ಪಾರ್ಷತನಿಗೆ ಹೇಳಿದನು:

06046039c ವ್ಯೂಹಃ ಕ್ರೌಂಚಾರುಣೋ ನಾಮ ಸರ್ವಶತ್ರುನಿಬರ್ಹಣಃ||

06046040a ಯಂ ಬೃಹಸ್ಪತಿರಿಂದ್ರಾಯ ತದಾ ದೇವಾಸುರೇಽಬ್ರವೀತ್|

06046040c ತಂ ಯಥಾವತ್ಪ್ರತಿವ್ಯೂಹ ಪರಾನೀಕವಿನಾಶನಂ||

06046040e ಅದೃಷ್ಟಪೂರ್ವಂ ರಾಜಾನಃ ಪಶ್ಯಂತು ಕುರುಭಿಃ ಸಹ||

“ಸರ್ವಶತ್ರುಗಳನ್ನು ನಾಶಗೊಳಿಸಬಲ್ಲ ಕ್ರೌಂಚಾರುಣವೆಂಬ ಹೆಸರಿನ ವ್ಯೂಹವನ್ನು ಆಗ ದೇವಾಸುರಯುದ್ಧದಲ್ಲಿ ಬೃಹಸ್ಪತಿಯು ಇಂದ್ರನಿಗೆ ಹೇಳಿದ್ದನು. ಪರ ಸೇನೆಯ ವಿನಾಶಕ್ಕಾಗಿ ಅದೇ ವ್ಯೂಹವನ್ನು ರಚಿಸು. ಹಿಂದೆ ಎಂದೂ ನೋಡಿರದ ಅದನ್ನು ಕುರುಗಳೊಂದಿಗೆ ರಾಜರು ನೋಡಲಿ.”

06046041a ತಥೋಕ್ತಃ ಸ ನೃದೇವೇನ ವಿಷ್ಣುರ್ವಜ್ರಭೃತಾ ಇವ|

06046041c ಪ್ರಭಾತೇ ಸರ್ವಸೈನ್ಯಾನಾಮಗ್ರೇ ಚಕ್ರೇ ಧನಂಜಯಂ||

06046042a ಆದಿತ್ಯಪಥಗಃ ಕೇತುಸ್ತಸ್ಯಾದ್ಭುತಮನೋರಮಃ|

06046042c ಶಾಸನಾತ್ಪುರುಹೂತಸ್ಯ ನಿರ್ಮಿತೋ ವಿಶ್ವಕರ್ಮಣಾ||

ಆ ನರದೇವನು ವಿಷ್ಣುವಿಗೆ ವಜ್ರಭೃತನು ಹೇಳಿದಂತೆ ಹೇಳಲು, ಪ್ರಭಾತದಲ್ಲಿ ಸರ್ವ ಸೈನ್ಯಗಳ ಅಗ್ರಸ್ಥಾನದಲ್ಲಿ ಧನಂಜಯನನ್ನು ನಿಲ್ಲಿಸಿದನು. ಸೂರ್ಯನ ಪಥದಲ್ಲಿ ಹೋಗುತ್ತಿರುವ ಅವನ ಧ್ವಜವು ಅದ್ಭುತವೂ ಮನೋರಮವೂ ಆಗಿತ್ತು. ಪುರುಹೂತನ ಶಾಸನದಂತೆ ವಿಶ್ವಕರ್ಮನು ಅದನ್ನು ನಿರ್ಮಿಸಿದ್ದನು.

06046043a ಇಂದ್ರಾಯುಧಸವರ್ಣಾಭಿಃ ಪತಾಕಾಭಿರಲಂಕೃತಃ|

06046043c ಆಕಾಶಗ ಇವಾಕಾಶೇ ಗಂಧರ್ವನಗರೋಪಮಃ||

06046043e ನೃತ್ಯಮಾನ ಇವಾಭಾತಿ ರಥಚರ್ಯಾಸು ಮಾರಿಷ||

06046044a ತೇನ ರತ್ನವತಾ ಪಾರ್ಥಃ ಸ ಚ ಗಾಂಡೀವಧನ್ವನಾ|

06046044c ಬಭೂವ ಪರಮೋಪೇತಃ ಸ್ವಯಂಭೂರಿವ ಭಾನುನಾ||

ಕಾಮನಬಿಲ್ಲಿನ ಬಣ್ಣಗಳಿಂದ ಕೂಡಿದ್ದ, ಪತಾಕೆಗಳಿಂದ ಅಲಂಕೃತವಾಗಿದ್ದ, ಆಕಾಶದಲ್ಲಿ ಹಾರಾಡುವ ಪಕ್ಷಿಯಂತಿದ್ದ, ಗಂಧರ್ವನಗರದಂತಿದ್ದ, ನೃತ್ಯಮಾಡುತ್ತಿರುವಂತೆ ಚಲಿಸುತ್ತಿದ್ದ ಆ ರತ್ನವತ ರಥವು ಗಾಂಡೀವಧನ್ವಿ ಪಾರ್ಥನಿಂದ ಭಾನುವಿನಿಂದ ಸ್ವಯಂಭುವು ಹೇಗೋ ಹಾಗೆ ಪರಮೋಪೇತವಾಗಿತ್ತು.

06046045a ಶಿರೋಽಭೂದ್ದ್ರುಪದೋ ರಾಜಾ ಮಹತ್ಯಾ ಸೇನಯಾ ವೃತಃ|

06046045c ಕುಂತಿಭೋಜಶ್ಚ ಚೈದ್ಯಶ್ಚ ಚಕ್ಷುಷ್ಯಾಸ್ತಾಂ ಜನೇಶ್ವರ||

ಜನೇಶ್ವರ! ಮಹಾ ಸೇನೆಯಿಂದ ಆವೃತನಾದ ರಾಜಾ ದ್ರುಪದನು ಅದರ ಶಿರವಾದನು. ಕುಂತಿಭೋಜ-ಚೈದ್ಯರು ಅದರ ಕಣ್ಣುಗಳಾದರು.

06046046a ದಾಶಾರ್ಣಕಾಃ ಪ್ರಯಾಗಾಶ್ಚ ದಾಶೇರಕಗಣೈಃ ಸಹ|

06046046c ಅನೂಪಗಾಃ ಕಿರಾತಾಶ್ಚ ಗ್ರೀವಾಯಾಂ ಭರತರ್ಷಭ||

ಭರತರ್ಷಭ! ದಾಶಾರ್ಣಕರು, ಪ್ರಯಾಗರು, ದಾಶೇರಕಗಣಗಳೊಂದಿಗೆ ಅನುಸರಿಸಿ ಹೋಗುತ್ತಿದ್ದ ಕಿರಾತರೂ ಕುತ್ತಿಗೆಯ ಭಾಗದಲ್ಲಿದ್ದರು.

06046047a ಪಟಚ್ಚರೈಶ್ಚ ಹುಂಡೈಶ್ಚ ರಾಜನ್ಪೌರವಕೈಸ್ತಥಾ|

06046047c ನಿಷಾದೈಃ ಸಹಿತಶ್ಚಾಪಿ ಪೃಷ್ಠಮಾಸೀದ್ಯುಧಿಷ್ಠಿರಃ||

ರಾಜನ್! ಪಟಚ್ಚರರು, ಹುಂಡರು, ಪೌರವಕರು, ಮತ್ತು ನಿಷಾದರ ಸಹಿತ ಯುಧಿಷ್ಠಿರನು ಅದರ ಪೃಷ್ಠಭಾಗದಲ್ಲಿದ್ದನು.

06046048a ಪಕ್ಷೌ ತು ಭೀಮಸೇನಶ್ಚ ಧೃಷ್ಟದ್ಯುಮ್ನಶ್ಚ ಪಾರ್ಷತಃ|

06046048c ದ್ರೌಪದೇಯಾಭಿಮನ್ಯುಶ್ಚ ಸಾತ್ಯಕಿಶ್ಚ ಮಹಾರಥಃ||

06046049a ಪಿಶಾಚಾ ದರದಾಶ್ಚೈವ ಪುಂಡ್ರಾಃ ಕುಂಡೀವಿಷೈಃ ಸಹ|

06046049c ಮಡಕಾ ಲಡಕಾಶ್ಚೈವ ತಂಗಣಾಃ ಪರತಂಗಣಾಃ||

06046050a ಬಾಹ್ಲಿಕಾಸ್ತಿತ್ತಿರಾಶ್ಚೈವ ಚೋಲಾಃ ಪಾಂಡ್ಯಾಶ್ಚ ಭಾರತ|

06046050c ಏತೇ ಜನಪದಾ ರಾಜನ್ದಕ್ಷಿಣಂ ಪಕ್ಷಮಾಶ್ರಿತಾಃ||

ಭಾರತ! ರಾಜನ್! ಭೀಮಸೇನ ಮತ್ತು ಪಾರ್ಷತ ಧೃಷ್ಟದ್ಯುಮ್ನನು ಅದರ ಎರಡು ರೆಕ್ಕೆಗಳಾಗಿದ್ದರು. ದ್ರೌಪದೇಯರು, ಅಭಿಮನ್ಯು, ಮಹಾರಥ ಸಾತ್ಯಕಿ, ಪಿಶಾಚರು, ದರದರು, ಪುಂಡ್ರರು, ಕುಂಡೀವಿಷರೊಂದಿಗೆ ಮಡಕ, ಲಡಕ, ತಂಗಣ, ಪರತಂಗಣರು, ಬಾಹ್ಲಿಕರು, ತಿತ್ತಿರರು, ಚೋಲರು, ಮತ್ತು ಪಾಂಡ್ಯ ಜನಪದದವರು ವ್ಯೂಹದ ಬಲಭಾಗದಲ್ಲಿದ್ದರು.

06046051a ಅಗ್ನಿವೇಷ್ಯಾ ಜಗತ್ತುಂಡಾಃ ಪಲದಾಶಾಶ್ಚ ಭಾರತ|

06046051c ಶಬರಾಸ್ತುಂಬುಪಾಶ್ಚೈವ ವತ್ಸಾಶ್ಚ ಸಹ ನಾಕುಲೈಃ||

06046051e ನಕುಲಃ ಸಹದೇವಶ್ಚ ವಾಮಂ ಪಾರ್ಶ್ವಂ ಸಮಾಶ್ರಿತಾಃ||

ಭಾರತ! ಅಗ್ನಿವೇಷ್ಯ, ಜಗತ್ತುಂಡ, ಪಲದಾಶರು, ಶಬರರು, ತುಂಬುಪಾಶರು, ವತ್ಸರು, ನಾಕುಲರೊಂದಿಗೆ ನಕುಲ-ಸಹದೇವರು ವ್ಯೂಹದ ಎಡಭಾಗದಲ್ಲಿದ್ದರು.

06046052a ರಥಾನಾಮಯುತಂ ಪಕ್ಷೌ ಶಿರಶ್ಚ ನಿಯುತಂ ತಥಾ|

06046052c ಪೃಷ್ಠಮರ್ಬುದಮೇವಾಸೀತ್ಸಹಸ್ರಾಣಿ ಚ ವಿಂಶತಿಃ|

06046052e ಗ್ರೀವಾಯಾಂ ನಿಯುತಂ ಚಾಪಿ ಸಹಸ್ರಾಣಿ ಚ ಸಪ್ತತಿಃ||

ವ್ಯೂಹದ ಎರಡೂ ರೆಕ್ಕೆಗಳಲ್ಲಿ ಹತ್ತುಸಾವಿರ ರಥಗಳೂ, ಶಿರಸ್ಸಿನಲ್ಲಿ ಲಕ್ಷ ರಥಗಳೂ, ಪೃಷ್ಠಭಾಗದಲ್ಲಿ ಹತ್ತುಕೋಟಿ ಇಪ್ಪತ್ತು ಸಾವಿರ ರಥಗಳೂ, ಕತ್ತಿನಲ್ಲಿ ಒಂದು ಲಕ್ಷ ಎಪ್ಪತ್ತು ಸಾವಿರ ರಥಗಳೂ ಇದ್ದವು.

06046053a ಪಕ್ಷಕೋಟಿಪ್ರಪಕ್ಷೇಷು ಪಕ್ಷಾಂತೇಷು ಚ ವಾರಣಾಃ|

06046053c ಜಗ್ಮುಃ ಪರಿವೃತಾ ರಾಜಂಶ್ಚಲಂತ ಇವ ಪರ್ವತಾಃ||

ರಾಜನ್! ರೆಕ್ಕೆಗಳ ಅಗ್ರಭಾಗಗಳಲ್ಲಿ ಮತ್ತು ಚಿಕ್ಕ ಚಿಕ್ಕ ಪುಕ್ಕಗಳ ಪ್ರದೇಶದಲ್ಲಿ ಮತ್ತು ರೆಕ್ಕೆಗಳ ಅಂತ್ಯದಲ್ಲಿ ಆನೆಗಳು ಗುಂಪು-ಗುಂಪಾಗಿ ಪರ್ವತೋಪಾದಿಗಳಲ್ಲಿ ಚಲಿಸುತ್ತಿದ್ದವು.

06046054a ಜಘನಂ ಪಾಲಯಾಮಾಸ ವಿರಾಟಃ ಸಹ ಕೇಕಯೈಃ|

06046054c ಕಾಶಿರಾಜಶ್ಚ ಶೈಬ್ಯಶ್ಚ ರಥಾನಾಮಯುತೈಸ್ತ್ರಿಭಿಃ||

ಕೇಕಯ, ಕಾಶಿರಾಜ ಮತ್ತು ಶೈಬ್ಯರೊಂದಿಗೆ ವಿರಾಟನು ಮೂವತ್ತು ಸಾವಿರ ರಥಗಳೊಂದಿಗೆ ಆ ವ್ಯೂಹದ ಕಟಿಪ್ರದೇಶವನ್ನು ರಕ್ಷಿಸುತ್ತಿದ್ದನು.

06046055a ಏವಮೇತಂ ಮಹಾವ್ಯೂಹಂ ವ್ಯೂಹ್ಯ ಭಾರತ ಪಾಂಡವಾಃ|

06046055c ಸೂರ್ಯೋದಯನಮಿಚ್ಛಂತಃ ಸ್ಥಿತಾ ಯುದ್ಧಾಯ ದಂಶಿತಾಃ||

ಭಾರತ! ಹೀಗೆ ಪಾಂಡವರು ಮಹಾವ್ಯೂಹವನ್ನು ರಚಿಸಿ ಕವಚಗಳನ್ನು ಧರಿಸಿ ಸೂರ್ಯೋದಯವನ್ನು ಬಯಸಿ ಯುದ್ಧಸನ್ನದ್ಧರಾಗಿ ನಿಂತಿದ್ದರು.

06046056a ತೇಷಾಮಾದಿತ್ಯವರ್ಣಾನಿ ವಿಮಲಾನಿ ಮಹಾಂತಿ ಚ|

06046056c ಶ್ವೇತಚ್ಛತ್ರಾಣ್ಯಶೋಭಂತ ವಾರಣೇಷು ರಥೇಷು ಚ||

ಅವರ ಆನೆಗಳು ಮತ್ತು ರಥಗಳ ಮೇಲೆ ಸೂರ್ಯನಂತೆ ಪ್ರಕಾಶಮಾನವಾಗಿ ಶುಭ್ರ ಮಹಾ ಶ್ವೇತ ಛತ್ರಗಳು ಶೋಭಿಸುತ್ತಿದ್ದವು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವ ಧಪರ್ವಣಿ ಕ್ರೌಂಚವ್ಯೂಹನಿರ್ಮಾಣೇ ಷಟ್ಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವ ಧಪರ್ವದಲ್ಲಿ ಕ್ರೌಂಚವ್ಯೂಹನಿರ್ಮಾಣ ಎನ್ನುವ ನಲ್ವತ್ತಾರನೇ ಅಧ್ಯಾಯವು.

Image result for flowers against white background

Comments are closed.