Anushasana Parva: Chapter 92

ಅನುಶಾಸನ ಪರ್ವ: ದಾನಧರ್ಮ ಪರ್ವ

೯೨

ಶ್ರಾದ್ಧಾನ್ನವನ್ನು ಜೀರ್ಣಿಸಿಕೊಳ್ಳಲಾಗದೇ ಪಿತೃದೇವತೆಗಳು ಮತ್ತು ದೇವತೆಗಳು ಪಿತಾಮಹನಲ್ಲಿಗೆ ಹೋದುದು; ಅಗ್ನಿಯು ಅವರ ಅಜೀರ್ಣವನ್ನು ನಿವಾರಿಸಿದುದು; ಶ್ರಾದ್ಧದಲ್ಲಿ ತೃಪ್ತರಾದ ಪಿತೃಗಳ ಆಶೀರ್ವಾದ (೧-೨೨).

13092001 ಭೀಷ್ಮ ಉವಾಚ|

13092001a ತಥಾ ವಿಧೌ ಪ್ರವೃತ್ತೇ ತು ಸರ್ವ ಏವ ಮಹರ್ಷಯಃ|

13092001c ಪಿತೃಯಜ್ಞಾನಕುರ್ವಂತ ವಿಧಿದೃಷ್ಟೇನ ಕರ್ಮಣಾ||

ಭೀಷ್ಮನು ಹೇಳಿದನು: “ಹೀಗೆ ನಿಮಿಯು ಶ್ರಾದ್ಧವಿಧಿಯನ್ನು ಪ್ರಾರಂಭಿಸಲು ಸರ್ವ ಮಹರ್ಷಿಗಳು ವಿಧಿದೃಷ್ಟ ಕರ್ಮಗಳಿಂದ ಪಿತೃಯಜ್ಞವನ್ನು ಮಾಡತೊಡಗಿದರು.

13092002a ಋಷಯೋ ಧರ್ಮನಿತ್ಯಾಸ್ತು ಕೃತ್ವಾ ನಿವಪನಾನ್ಯುತ|

13092002c ತರ್ಪಣಂ ಚಾಪ್ಯಕುರ್ವಂತ ತೀರ್ಥಾಂಭೋಭಿರ್ಯತವ್ರತಾಃ||

ಧರ್ಮನಿತ್ಯಋಷಿಗಳು ಯತವ್ರತರಾಗಿ ಪಿತೃಯಜ್ಞದಲ್ಲಿ ಪಿಂಡಪ್ರದಾನವನ್ನು ಮಾಡಿ ಪುಣ್ಯತೀರ್ಥಗಳ ಜಲಗಳಿಂದ ತರ್ಪಣವನ್ನೂ ಕೊಡುತ್ತಿದ್ದರು.

13092003a ನಿವಾಪೈರ್ದೀಯಮಾನೈಶ್ಚ ಚಾತುರ್ವರ್ಣ್ಯೇನ ಭಾರತ|

13092003c ತರ್ಪಿತಾಃ ಪಿತರೋ ದೇವಾಸ್ತೇ ನಾನ್ನಂ ಜರಯಂತಿ ವೈ||

ಭಾರತ! ಕಾಲಾನುಕ್ರಮವಾಗಿ ಚಾತುರ್ವರ್ಣ್ಯದವರೂ ಶ್ರಾದ್ಧದಲ್ಲಿ ಪಿತೃಗಳಿಗೂ ದೇವತೆಗಳಿಗೂ ಅನ್ನವನ್ನು ನೀಡತೊಡಗಿದರು. ಒಂದೇ ಸಮನೆ ಶ್ರಾದ್ಧದಲ್ಲಿ ಭೋಜನಮಾಡುತ್ತಾ ಪಿತೃಗಳು ಮತ್ತು ದೇವತೆಗಳು ತೃಪ್ತರಾದರು. ಆಗ ಅವರು ಅನ್ನವನ್ನು ಜೀರ್ಣಿಸಿಕೊಳ್ಳಲು ಪ್ರಯತ್ನಿಸಿದರು.

13092004a ಅಜೀರ್ಣೇನಾಭಿಹನ್ಯಂತೇ ತೇ ದೇವಾಃ ಪಿತೃಭಿಃ ಸಹ|

13092004c ಸೋಮಮೇವಾಭ್ಯಪದ್ಯಂತ ನಿವಾಪಾನ್ನಾಭಿಪೀಡಿತಾಃ||

ಪಿಂಡಗಳನ್ನು ಜೀರ್ಣಿಸಿಕೊಳ್ಳಲಾಗದೇ ಅಜೀರ್ಣದಿಂದ ಪೀಡಿತರಾದ ದೇವತೆಗಳು ಪಿತೃಗಳೊಂದಿಗೆ ಸೋಮನ ಬಳಿ ಹೋದರು.

13092005a ತೇಽಬ್ರುವನ್ಸೋಮಮಾಸಾದ್ಯ ಪಿತರೋಽಜೀರ್ಣಪೀಡಿತಾಃ|

13092005c ನಿವಾಪಾನ್ನೇನ ಪೀಡ್ಯಾಮಃ ಶ್ರೇಯೋ ನೋಽತ್ರ ವಿಧೀಯತಾಮ್||

ಸೋಮನ ಬಳಿಹೋಗಿ ಅಜೀರ್ಣದಿಂದ ಪೀಡಿತರಾದ ಪಿತೃಗಳು ಹೇಳಿದರು: “ಪಿಂಡಗಳಿಂದ ನಾವು ಪೀಡಿತರಾಗಿದ್ದೇವೆ. ಶ್ರೇಯವಾಗುವಂತೆ ವಿಧಿಯನ್ನು ತಿಳಿಸಬೇಕು.”

13092006a ತಾನ್ಸೋಮಃ ಪ್ರತ್ಯುವಾಚಾಥ ಶ್ರೇಯಶ್ಚೇದೀಪ್ಸಿತಂ ಸುರಾಃ|

13092006c ಸ್ವಯಂಭೂಸದನಂ ಯಾತ ಸ ವಃ ಶ್ರೇಯೋ ವಿಧಾಸ್ಯತಿ||

ಸೋಮನಿಗೆ ಅವರಿಗೆ ಉತ್ತರಿಸಿದನು: “ಸುರರೇ! ಶ್ರೇಯಸ್ಸನ್ನು ಬಯಸುವುದಾದರೆ ಸ್ವಯಂಭುವಿನ ಸದನಕ್ಕೆ ಹೋಗಿ. ಅವನು ನಿಮಗೆ ಶ್ರೇಯವಾದುದನ್ನು ತಿಳಿಸುತ್ತಾನೆ.”

13092007a ತೇ ಸೋಮವಚನಾದ್ದೇವಾಃ ಪಿತೃಭಿಃ ಸಹ ಭಾರತ|

13092007c ಮೇರುಶೃಂಗೇ ಸಮಾಸೀನಂ ಪಿತಾಮಹಮುಪಾಗಮನ್||

ಭಾರತ! ಸೋಮನ ವಚನವನ್ನು ಕೇಳಿ ದೇವತೆಗಳು ಪಿತೃಗಳೊಂದಿಗೆ ಮೇರುಶೃಂಗದಲ್ಲಿ ಕುಳಿತಿದ್ದ ಪಿತಾಮಹನ ಬಳಿಸಾರಿದರು.

13092008 ಪಿತರ ಊಚುಃ|

13092008a ನಿವಾಪಾನ್ನೇನ ಭಗವನ್ ಭೃಶಂ ಪೀಡ್ಯಾಮಹೇ ವಯಮ್|

13092008c ಪ್ರಸಾದಂ ಕುರು ನೋ ದೇವ ಶ್ರೇಯೋ ನಃ ಸಂವಿಧೀಯತಾಮ್||

ಪಿತೃಗಳು ಹೇಳಿದರು: “ಭಗವನ್! ಪಿಂಡಾನ್ನದಿಂದ ನಾವು ತುಂಬಾ ಪೀಡೆಗೊಳಗಾಗಿದ್ದೇವೆ. ದೇವ! ಪ್ರಸನ್ನನಾಗಿ ನಮಗೆ ಶ್ರೇಯವಾದುದನ್ನು ಹೇಳಬೇಕು.”

13092009a ಇತಿ ತೇಷಾಂ ವಚಃ ಶ್ರುತ್ವಾ ಸ್ವಯಂಭೂರಿದಮಬ್ರವೀತ್|

13092009c ಏಷ ಮೇ ಪಾರ್ಶ್ವತೋ ವಹ್ನಿರ್ಯುಷ್ಮಚ್ಚ್ರೇಯೋ ವಿಧಾಸ್ಯತಿ||

ಅವರ ಈ ಮಾತನ್ನು ಕೇಳಿ ಸ್ವಯಂಭುವು ಹೇಳಿದನು: “ನನ್ನ ಪಕ್ಕದಲ್ಲಿರುವ ಈ ಅಗ್ನಿಯು ನಿಮಗೆ ಶ್ರೇಯಸ್ಸನ್ನುಂಟುಮಾಡುತ್ತಾನೆ.”

13092010 ಅಗ್ನಿರುವಾಚ|

13092010a ಸಹಿತಾಸ್ತಾತ ಭೋಕ್ಷ್ಯಾಮೋ ನಿವಾಪೇ ಸಮುಪಸ್ಥಿತೇ|

13092010c ಜರಯಿಷ್ಯಥ ಚಾಪ್ಯನ್ನಂ ಮಯಾ ಸಾರ್ಧಂ ನ ಸಂಶಯಃ||

ಅಗ್ನಿಯು ಹೇಳಿದನು: “ಶ್ರಾದ್ಧದ ಸಮಯದಲ್ಲಿ ನಾವೆಲ್ಲರೂ ಒಟ್ಟಿಗೆ ಭೋಜನಮಾಡೋಣ. ನನ್ನೊಡನೆ ಭೋಜನ ಮಾಡುವ ನೀವು ಪಿಂಡಾನ್ನವನ್ನು ಅರಗಿಸಿಕೊಳ್ಳುವಿರಿ. ಅದರಲ್ಲಿ ಸಂಶಯವಿಲ್ಲ.”

13092011a ಏತಚ್ಚ್ರುತ್ವಾ ತು ಪಿತರಸ್ತತಸ್ತೇ ವಿಜ್ವರಾಭವನ್|

13092011c ಏತಸ್ಮಾತ್ಕಾರಣಾಚ್ಚಾಗ್ನೇಃ ಪ್ರಾಕ್ತನಂ ದೀಯತೇ ನೃಪ||

ನೃಪ! ಇದನ್ನು ಕೇಳಿ ಪಿತೃಗಳು ನಿಶ್ಚಿಂತರಾದರು. ಈ ಕಾರಣದಿಂದಲೇ ಶ್ರಾದ್ಧದಲ್ಲಿ ಮೊದಲು ಅಗ್ನಿಗೆ ಹವಿರ್ಭಾಗವನ್ನು ಕೊಡುತ್ತಾರೆ.

13092012a ನಿವಪ್ತೇ ಚಾಗ್ನಿಪೂರ್ವೇ ವೈ ನಿವಾಪೇ ಪುರುಷರ್ಷಭ|

13092012c ನ ಬ್ರಹ್ಮರಾಕ್ಷಸಾಸ್ತಂ ವೈ ನಿವಾಪಂ ಧರ್ಷಯಂತ್ಯುತ|

13092012e ರಕ್ಷಾಂಸಿ ಚಾಪವರ್ತಂತೇ ಸ್ಥಿತೇ ದೇವೇ ವಿಭಾವಸೌ||

ಪುರುಷರ್ಷಭ! ಮೊದಲು ಅಗ್ನಿಗೆ ಹವಿರ್ಭಾಗವನ್ನು ಕೊಟ್ಟನಂತರ ಪಿತೃಗಳಿಗೆ ಪಿಂಡಪ್ರದಾನ ಮಾಡುವುದರಿಂದ ಅಂತಹ ಪಿಂಡವನ್ನು ಬ್ರಹ್ಮರಾಕ್ಷಸರು ದೂಷಿತಗೊಳಿಸುವುದಿಲ್ಲ. ಶ್ರಾದ್ಧದಲ್ಲಿ ಅಗ್ನಿಯು ವಿರಾಜಮಾನನಾಗಿರುವಾಗ ರಾಕ್ಷಸರು ಓಡಿ ಹೋಗುತ್ತಾರೆ.

13092013a ಪೂರ್ವಂ ಪಿಂಡಂ ಪಿತುರ್ದದ್ಯಾತ್ತತೋ ದದ್ಯಾತ್ಪಿತಾಮಹೇ|

13092013c ಪ್ರಪಿತಾಮಹಾಯ ಚ ತತ ಏಷ ಶ್ರಾದ್ಧವಿಧಿಃ ಸ್ಮೃತಃ||

13092014a ಬ್ರೂಯಾಚ್ಚ್ರಾದ್ಧೇ ಚ ಸಾವಿತ್ರೀಂ ಪಿಂಡೇ ಪಿಂಡೇ ಸಮಾಹಿತಃ|

13092014c ಸೋಮಾಯೇತಿ ಚ ವಕ್ತವ್ಯಂ ತಥಾ ಪಿತೃಮತೇತಿ ಚ||

ಮೊದಲು ತಂದೆಗೆ ಪಿಂಡಪ್ರದಾನ ಮಾಡಬೇಕು. ನಂತರ ಪಿತಾಮಹನಿಗೆ ಮತ್ತು ನಂತರ ಪ್ರಪಿತಾಮಹನಿಗೆ ಪಿಂಡಪ್ರದಾನ ಮಾಡಬೇಕು. ಇದನ್ನೇ ಶ್ರಾದ್ಧವಿಧಿಯೆನ್ನುತ್ತಾರೆ. ಶ್ರಾದ್ಧದಲ್ಲಿ ಒಂದೊಂದು ಪಿಂಡವನ್ನೀಡುವಾಗಲೂ ಗಾಯತ್ರೀ ಮಂತ್ರವನ್ನು ಉಚ್ಛರಿಸಬೇಕು. ಸೋಮಾಯ ಪಿತೃಮತೇ ಎಂದು ಹೇಳಬೇಕು[1].

13092015a ರಜಸ್ವಲಾ ಚ ಯಾ ನಾರೀ ವ್ಯಂಗಿತಾ ಕರ್ಣಯೋಶ್ಚ ಯಾ|

13092015c ನಿವಾಪೇ ನೋಪತಿಷ್ಠೇತ ಸಂಗ್ರಾಹ್ಯಾ ನಾನ್ಯವಂಶಜಾಃ||

ಶ್ರಾದ್ಧದ ಸಮಯದಲ್ಲಿ ರಜಸ್ವಲೆಯೂ, ಕಿವುಡಿಯೂ, ಮತ್ತು ಅನ್ಯವಂಶಕ್ಕೆ ಸೇರಿದ ಸ್ತ್ರೀಯರೂ ಇರಬಾರದು.

13092016a ಜಲಂ ಪ್ರತರಮಾಣಶ್ಚ ಕೀರ್ತಯೇತ ಪಿತಾಮಹಾನ್|

13092016c ನದೀಮಾಸಾದ್ಯ ಕುರ್ವೀತ ಪಿತೄಣಾಂ ಪಿಂಡತರ್ಪಣಮ್||

ನೀರನ್ನು ದಾಟುತ್ತಿರುವಾಗ ಪಿತಾಮಹರ ಶುಭನಾಮಗಳನ್ನು ಕೀರ್ತನಮಾಡಬೇಕು. ನದೀತೀರಕ್ಕೆ ಹೋಗಿ ಪಿತೃಗಳಿಗೆ ಪಿಂಡಪ್ರದಾನ ಮಾಡಿ ತರ್ಪಣವನ್ನು ಕೊಡಬೇಕು.

13092017a ಪೂರ್ವಂ ಸ್ವವಂಶಜಾನಾಂ ತು ಕೃತ್ವಾದ್ಭಿಸ್ತರ್ಪಣಂ ಪುನಃ|

13092017c ಸುಹೃತ್ಸಂಬಂಧಿವರ್ಗಾಣಾಂ ತತೋ ದದ್ಯಾಜ್ಜಲಾಂಜಲಿಮ್||

ಮೊದಲು ತನ್ನ ಮಾತಾ-ಪಿತೃವರ್ಗದವರಿಗೆ ಜಲತರ್ಪಣವನ್ನಿತ್ತು ನಂತರ ಸುಹೃದರಿಗೂ ಮಾತುಲಾದಿ ಸಂಬಂಧಿವರ್ಗದವರಿಗೂ ಜಲಾಂಜಲಿಯನ್ನು ನೀಡಬೇಕು.

13092018a ಕಲ್ಮಾಷಗೋಯುಗೇನಾಥ ಯುಕ್ತೇನ ತರತೋ ಜಲಮ್|

13092018c ಪಿತರೋಽಭಿಲಷಂತೇ ವೈ ನಾವಂ ಚಾಪ್ಯಧಿರೋಹತಃ|

13092018e ಸದಾ ನಾವಿ ಜಲಂ ತಜ್ಜ್ಞಾಃ ಪ್ರಯಚ್ಚಂತಿ ಸಮಾಹಿತಾಃ||

ಚಿತ್ರವರ್ಣದ ಎರಡು ಎತ್ತುಗಳನ್ನು ಕಟ್ಟಿದ ಗಾಡಿಯಲ್ಲಿ ಕುಳಿತು ನದಿಯನ್ನು ದಾಟುವವನಿಂದಲೂ ಮತ್ತು ನಾವೆಯನ್ನು ಹತ್ತುತ್ತಿರುವನಿಂದಲೂ ಪಿತೃಗಳು ತರ್ಪಣವನ್ನು ಅಪೇಕ್ಷಿಸುತ್ತಾರೆ. ತರ್ಪಣಗಳ ವಿಷಯವನ್ನು ತಿಳಿದಿರುವವರು ಸದಾ ನಾವೆಯಲ್ಲಿಂದಲೇ ಪಿತೃಗಳಿಗೆ ತರ್ಪಣಗಳನ್ನು ನೀಡುತ್ತಾರೆ.

13092019a ಮಾಸಾರ್ಧೇ ಕೃಷ್ಣಪಕ್ಷಸ್ಯ ಕುರ್ಯಾನ್ನಿವಪನಾನಿ ವೈ|

13092019c ಪುಷ್ಟಿರಾಯುಸ್ತಥಾ ವೀರ್ಯಂ ಶ್ರೀಶ್ಚೈವ ಪಿತೃವರ್ತಿನಃ||

ಕೃಷ್ಣಪಕ್ಷದ ಮಾಸಾರ್ಧದಂದು[2] ಪಿತೃಗಳಿಗೆ ಶ್ರಾದ್ಧ-ತರ್ಪಣಾದಿಗಳನ್ನು ಮಾಡಬೇಕು. ಪಿತೃವರ್ತಿಗಳಾಗಿ ಶ್ರಾದ್ಧವನ್ನು ಮಾಡಿದವರಿಗೆ ಪುಷ್ಟಿ, ಆಯುಸ್ಸು, ವೀರ್ಯ ಮತ್ತು ಶ್ರೀಗಳು ವೃದ್ಧಿಯಾಗುತ್ತವೆ.

13092020a ಪಿತಾಮಹಃ ಪುಲಸ್ತ್ಯಶ್ಚ ವಸಿಷ್ಠಃ ಪುಲಹಸ್ತಥಾ|

13092020c ಅಂಗಿರಾಶ್ಚ ಕ್ರತುಶ್ಚೈವ ಕಶ್ಯಪಶ್ಚ ಮಹಾನೃಷಿಃ|

13092020e ಏತೇ ಕುರುಕುಲಶ್ರೇಷ್ಠ ಮಹಾಯೋಗೇಶ್ವರಾಃ ಸ್ಮೃತಾಃ||

ಕುರುಕುಲಶ್ರೇಷ್ಠ! ಪಿತಾಮಹ ಬ್ರಹ್ಮ, ಪುಲಸ್ತ್ಯ, ವಸಿಷ್ಠ, ಪುಲಹ, ಅಂಗಿರ, ಕ್ರತು, ಮಹಾನೃಷಿ ಕಶ್ಯಪ, ಇವರು ಮಹಾಯೋಗೇಶ್ವರರೆಂದು ಹೇಳಲ್ಪಟ್ಟಿದ್ದಾರೆ.

13092021a ಏತೇ ಚ ಪಿತರೋ ರಾಜನ್ನೇಷ ಶ್ರಾದ್ಧವಿಧಿಃ ಪರಃ|

13092021c ಪ್ರೇತಾಸ್ತು ಪಿಂಡಸಂಬಂಧಾನ್ಮುಚ್ಯಂತೇ ತೇನ ಕರ್ಮಣಾ||

ರಾಜನ್! ಇವರೇ ಪಿತೃಗಳು. ಇದೇ ಪರಮ ಶ್ರಾದ್ಧವಿಧಿಯು. ಪಿಂಡಸಂಬಂಧ ಕರ್ಮಗಳಿಂದಲೇ ಪ್ರೇತರೂಪದಲ್ಲಿರುವ ಪಿತೃಗಳು ಮುಕ್ತರಾಗುತ್ತಾರೆ.

13092022a ಇತ್ಯೇಷಾ ಪುರುಷಶ್ರೇಷ್ಠ ಶ್ರಾದ್ಧೋತ್ಪತ್ತಿರ್ಯಥಾಗಮಮ್|

13092022c ಖ್ಯಾಪಿತಾ ಪೂರ್ವನಿರ್ದಿಷ್ಟಾ ದಾನಂ ವಕ್ಷ್ಯಾಮ್ಯತಃ ಪರಮ್||

ಪುರುಷಶ್ರೇಷ್ಠ! ಹೀಗೆ ಶ್ರಾದ್ಧದ ಉತ್ಪತ್ತಿಯ ವಿಷಯವಾಗಿ ಹೇಳಿದ್ದೇನೆ. ಇನ್ನು ಮುಂದೆ ಪೂರ್ವನಿರ್ದಿಷ್ಟ ಪರಮ ದಾನದ ಕುರಿತು ಹೇಳುತ್ತೇನೆ.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಶ್ರಾದ್ಧಕಲ್ಪೇ ದ್ವಿನವತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಶ್ರಾದ್ಧಕಲ್ಪ ಎನ್ನುವ ತೊಂಭತ್ತೆರಡನೇ ಅಧ್ಯಾಯವು.

[1] ಸೋಮಾಯೇತಿ ಚ ವಕ್ತವ್ಯಂ ತಥಾ ಪಿತೃಮತೇತಿ ಚ| ಎನ್ನುವುದಕ್ಕೆ ಬೇರೆ ಅನುವಾದವೂ ಇದೆ: ಪಿಂಡಪ್ರದಾನದ ಮೊದಲು ಅಗ್ನಿಗೂ ಮತ್ತು ಸೋಮನಿಗೂ ಹೋಮದ ಮೂಲಕ ಹವಿರ್ಭಾಗಗಳನ್ನು ಕೊಡಬೇಕು. ಅದರ ಮಂತ್ರವು ಕ್ರಮವಾಗಿ ಹೀಗಿದೆ: ಅಗ್ನಯೇ ಕವ್ಯವಾಹನಾಯ ಸ್ವಾಹಾ| ಸೋಮಾಯ ಪಿತೃಮತೇ ಸ್ವಾಹಾ|

[2] ಕೃಷ್ಣಪಕ್ಷಸ್ಯ ಮಾಸಾರ್ಧೇ ಎನ್ನುವುದಕ್ಕಿ ಅಮವಾಸ್ಯೆ ಎಂದು ಅರ್ಥೈಸಲಾಗಿದೆ. ಆದರೆ ಶುಕ್ಲಪಕ್ಷದಿಂದ ಮಾಸವನ್ನು ಎಣಿಸಿದರೆ ಮಾಸಾರ್ಧವು ಹುಣ್ಣಿಮೆಯಾಗುತ್ತದೆ. ಹಿಂದೆ ಕೃಷ್ಣಪಕ್ಷದಿಂದಲೇ ಮಾಸದ ಎಣಿಕೆಯಿತ್ತು. ಈಗಲೂ ಉತ್ತರ ಭಾರತದಲ್ಲಿ ಕೃಷ್ಣಪಕ್ಷದಿಂಡಲೇ ಮಾಸವು ಪ್ರಾರಂಭವಾಗುತ್ತದೆ (ಭಾರತ ದರ್ಶನ).

Comments are closed.