Anushasana Parva: Chapter 93

ಅನುಶಾಸನ ಪರ್ವ: ದಾನಧರ್ಮ ಪರ್ವ

೯೩[1]

ವಿಶೇಷ ವ್ರತಗಳು

ಗೃಹಸ್ಥಧರ್ಮದ ರಹಸ್ಯ (೧-೧೭).

13093001 ಯುಧಿಷ್ಠಿರ ಉವಾಚ|

13093001a ದ್ವಿಜಾತಯೋ ವ್ರತೋಪೇತಾ ಹವಿಸ್ತೇ ಯದಿ ಭುಂಜತೇ|

13093001c ಅನ್ನಂ ಬ್ರಾಹ್ಮಣಕಾಮಾಯ ಕಥಮೇತತ್ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ವ್ರತನಿಷ್ಠರಾದ ಬ್ರಾಹ್ಮಣರು ಬ್ರಾಹ್ಮಣನ ಸಲುವಾಗಿ ಶ್ರಾದ್ಧಾನ್ನವನ್ನು ಊಟಮಾಡಿದರೆ ನಿನಗೇನನಿಸುತ್ತದೆ?”

13093002 ಭೀಷ್ಮ ಉವಾಚ|

13093002a ಅವೇದೋಕ್ತವ್ರತಾಶ್ಚೈವ ಭುಂಜಾನಾಃ ಕಾರ್ಯಕಾರಿಣಃ|

13093002c ವೇದೋಕ್ತೇಷು ತು ಭುಂಜಾನಾ ವ್ರತಲುಪ್ತಾ ಯುಧಿಷ್ಠಿರ||

ಭೀಷ್ಮನು ಹೇಳಿದನು: “ವೇದೋಕ್ತವ್ರತದಲ್ಲಿ ಇಲ್ಲದವರು ಬ್ರಾಹ್ಮಣನ ಇಚ್ಛೆಯನ್ನು ಪೂರೈಸುವ ಸಲುವಾಗಿ ಶ್ರಾದ್ಧಾನ್ನವನ್ನು ಉಣ್ಣಬಹುದು. ಆದರೆ ಯುಧಿಷ್ಠಿರ! ವೇದೋಕ್ತ ವ್ರತಗಳಲ್ಲಿ ತೊಡಗಿರುವವರು ಹಾಗೆ ಮಾಡಿದರೆ ಅವರ ವ್ರತವು ಲುಪ್ತವಾಗುತ್ತದೆ.”

13093003 ಯುಧಿಷ್ಠಿರ ಉವಾಚ|

13093003a ಯದಿದಂ ತಪ ಇತ್ಯಾಹುರುಪವಾಸಂ ಪೃಥಗ್ಜನಾಃ|

13093003c ತಪಃ ಸ್ಯಾದೇತದಿಹ ವೈ ತಪೋಽನ್ಯದ್ವಾಪಿ ಕಿಂ ಭವೇತ್||

ಯುಧಿಷ್ಠಿರನು ಹೇಳಿದನು: “ಪ್ರತ್ಯೇಕ ಜನರು ಉಪವಾಸವೇ ತಪಸ್ಸೆಂದು ಹೇಳುತ್ತಾರೆ. ಇದು ತಪಸ್ಸೇ? ಅಥವಾ ಬೇರೆಯಾವುದಾದರೂ ತಪಸ್ಸೆನ್ನುವುದು ಇದೆಯೇ?”

13093004 ಭೀಷ್ಮ ಉವಾಚ|

13093004a ಮಾಸಾರ್ಧಮಾಸೌ ನೋಪವಸೇದ್ಯತ್ತಪೋ ಮನ್ಯತೇ ಜನಃ|

13093004c ಆತ್ಮತಂತ್ರೋಪಘಾತೀ ಯೋ ನ ತಪಸ್ವೀ ನ ಧರ್ಮವಿತ್||

ಭೀಷ್ಮನು ಹೇಳಿದನು: “ಅರ್ಧಮಾಸ ಅಥವಾ ಒಂದು ಮಾಸ ಉಪವಾಸಮಾಡುವುದನ್ನೇ ತಪಸ್ಸೆಂದು ಭಾವಿಸುವವರು ವ್ಯರ್ಥವಾಗಿ ತಮ್ಮ ಶರೀರಕ್ಕೆ ಕಷ್ಟವನ್ನು ಕೊಟ್ಟುಕೊಳ್ಳುತ್ತಾರೆ. ನಿಜವಾಗಿ ಹೇಳುವುದಾದರೆ ಕೇವಲ ಉಪವಾಸ ಮಾಡುವವನು ತಪಸ್ವಿಯೂ ಅಲ್ಲ ಧರ್ಮಜ್ಞನೂ ಅಲ್ಲ.

13093005a ತ್ಯಾಗಸ್ಯಾಪಿ ಚ ಸಂಪತ್ತಿಃ ಶಿಷ್ಯತೇ ತಪ ಉತ್ತಮಮ್|

13093005c ಸದೋಪವಾಸೀ ಚ ಭವೇದ್ಬ್ರಹ್ಮಚಾರೀ ತಥೈವ ಚ||

13093006a ಮುನಿಶ್ಚ ಸ್ಯಾತ್ಸದಾ ವಿಪ್ರೋ ದೇವಾಂಶ್ಚೈವ ಸದಾ ಯಜೇತ್|

ತ್ಯಾಗದ ಸಂಪತ್ತಿಯೇ ಎಲ್ಲ ತಪಸ್ಸುಗಳಿಗಿಂತ ಶ್ರೇಷ್ಠವಾದುದು. ಬ್ರಾಹ್ಮಣನು ಸದೋಪವಾಸಿಯಾಗಿರಬೇಕು. ಬ್ರಹ್ಮಚಾರಿಯಾಗಿರಬೇಕು. ಮುನಿಯಾಗಿರಬೇಕು ಮತ್ತು ಸದಾ ವೇದಗಳನ್ನು ಪಾರಾಯಣಮಾಡುತ್ತಿರಬೇಕು.

13093006c ಕುಟುಂಬಿಕೋ ಧರ್ಮಕಾಮಃ ಸದಾಸ್ವಪ್ನಶ್ಚ ಭಾರತ||

13093007a ಅಮೃತಾಶೀ ಸದಾ ಚ ಸ್ಯಾತ್ಪವಿತ್ರೀ ಚ ಸದಾ ಭವೇತ್[2]|

13093007c ಋತವಾದೀ ಸದಾ ಚ ಸ್ಯಾನ್ನಿಯತಶ್ಚ ಸದಾ ಭವೇತ್||

13093008a ವಿಘಸಾಶೀ ಸದಾ ಚ ಸ್ಯಾತ್ಸದಾ ಚೈವಾತಿಥಿಪ್ರಿಯಃ|

13093008c ಅಮಾಂಸಾಶೀ ಸದಾ ಚ ಸ್ಯಾತ್ಪವಿತ್ರೀ ಚ ಸದಾ ಭವೇತ್||

ಗೃಹಸ್ಥ ಬ್ರಾಹ್ಮಣನು ಸದಾ ಧರ್ಮಕಾಮನಾಗಿರಬೇಕು, ಜಾಗ್ರತನಾಗಿರಬೇಕು. ಸದಾ ಯಜ್ಞಶೇಷ ಅಮೃತವನ್ನು ಭುಂಜಿಸಬೇಕು. ಸದಾ ಪವಿತ್ರನಾಗಿರಬೇಕು. ಸದಾ ಸತ್ಯವಾದಿಯಾಗಿರಬೇಕು. ಸದಾ ಇಂದ್ರಿಯಸಂಯಮಿಯಾಗಿರಬೇಕು. ಸದಾ ಅತಿಥಿಗಳು ಊಟಮಾಡಿದ ನಂತರ ಉಳಿದ ವಿಘಸವನ್ನು ಸೇವಿಸುತ್ತಿರಬೇಕು. ಸದಾ ಅತಿಥಿಪ್ರಿಯನಾಗಿರಬೇಕು. ಸದಾ ಮಾಂಸವನ್ನು ತಿನ್ನದಿರಬೇಕು. ಮತ್ತು ಸದಾ ಪವಿತ್ರನಾಗಿರಬೇಕು.”

13093009 ಯುಧಿಷ್ಠಿರ ಉವಾಚ|

13093009a ಕಥಂ ಸದೋಪವಾಸೀ ಸ್ಯಾದ್ಬ್ರಹ್ಮಚಾರೀ ಚ ಪಾರ್ಥಿವ|

13093009c ವಿಘಸಾಶೀ ಕಥಂ ಚ ಸ್ಯಾತ್ಕಥಂ ಚೈವಾತಿಥಿಪ್ರಿಯಃ||

ಯುಧಿಷ್ಠಿರನು ಹೇಳಿದನು: “ಪಾರ್ಥಿವ! ಸದೋಪವಾಸಿಯೂ ಬ್ರಹ್ಮಚಾರಿಯೂ ಆಗಿರುವುದು ಹೇಗೆ? ವಿಘಸಾಶಿಯೂ ಅತಿಥಿಪ್ರಿಯನೂ ಆಗಿರುವುದು ಹೇಗೆ?”

13093010 ಭೀಷ್ಮ ಉವಾಚ|

13093010a ಅಂತರಾ ಸಾಯಮಾಶಂ ಚ ಪ್ರಾತರಾಶಂ ತಥೈವ ಚ|

13093010c ಸದೋಪವಾಸೀ ಭವತಿ ಯೋ ನ ಭುಂಕ್ತೇಽಂತರಾ ಪುನಃ||

ಭೀಷ್ಮನು ಹೇಳಿದನು: “ಪ್ರಾತಃಕಾಲ-ಸಾಯಂಕಾಲಗಳಲ್ಲಿ ಮಾತ್ರ ಊಟಮಾಡುತ್ತಾ ಈ ಎರಡು ಊಟಗಳ ಮಧ್ಯೆ ಏನನ್ನೂ ತಿನ್ನದೇ ಇರುವವನು ಸದೋಪವಾಸಿಯಾಗುತ್ತಾನೆ.

13093011a ಭಾರ್ಯಾಂ ಗಚ್ಚನ್ ಬ್ರಹ್ಮಚಾರೀ ಸದಾ ಭವತಿ ಚೈವ ಹ|

13093011c ಋತವಾದೀ ಸದಾ ಚ ಸ್ಯಾದ್ದಾನಶೀಲಶ್ಚ ಮಾನವಃ||

ಭಾರ್ಯೆಯೊಡನೆ ಮಾತ್ರ ಸಮಾಗಮ ಮಾಡುವವನು ಸದಾ ಬ್ರಹ್ಮಚಾರಿಯಾಗಿರುತ್ತಾನೆ. ಮನುಷ್ಯನು ಸದಾ ಸತ್ಯವಾದಿಯೂ ದಾನಶೀಲನೂ ಆಗಿರಬೇಕು.

13093012a ಅಭಕ್ಷಯನ್ವೃಥಾ ಮಾಂಸಮಮಾಂಸಾಶೀ ಭವತ್ಯುತ|

13093012c ದಾನಂ ದದತ್ಪವಿತ್ರೀ ಸ್ಯಾದಸ್ವಪ್ನಶ್ಚ ದಿವಾಸ್ವಪನ್||

ವೃಥಾ ಮಾಂಸವನ್ನು ತಿನ್ನದವನು ಅಮಾಂಸಾಶಿಯಾಗುತ್ತಾನೆ. ದಾನವನ್ನು ಕೊಡುವವನು ಪವಿತ್ರಿಯೂ ಮತ್ತು ಹಗಲಿನಲ್ಲಿ ನಿದ್ರಿಸದವನು ಅಸ್ವಪ್ನನೂ[3] ಆಗುತ್ತಾನೆ.

13093013a ಭೃತ್ಯಾತಿಥಿಷು ಯೋ ಭುಂಕ್ತೇ ಭುಕ್ತವತ್ಸು ನರಃ ಸದಾ|

13093013c ಅಮೃತಂ ಕೇವಲಂ ಭುಂಕ್ತೇ ಇತಿ ವಿದ್ಧಿ ಯುಧಿಷ್ಠಿರ||

ಯುಧಿಷ್ಠಿರ! ಭೃತ್ಯರೂ ಅತಿಥಿಗಳೂ ಭೋಜನ ಮಾಡಿದ ನಂತರ ಅನ್ನ ಶೇಷವನ್ನು ಭುಂಜಿಸುವವನು ಕೇವಲ ಅಮೃತವನ್ನು ಊಟಮಾಡಿದಂತೆ ಎಂದು ತಿಳಿ.

13093014a ಅಭುಕ್ತವತ್ಸು ನಾಶ್ನಾತಿ ಬ್ರಾಹ್ಮಣೇಷು ತು ಯೋ ನರಃ|

13093014c ಅಭೋಜನೇನ ತೇನಾಸ್ಯ ಜಿತಃ ಸ್ವರ್ಗೋ ಭವತ್ಯುತ||

ಬ್ರಾಹ್ಮಣರು ಊಟಮಾಡುವವರೆಗೂ ಊಟಮಾಡದೇ ಇರುವ ಮನುಷ್ಯನು ಈ ಅಭೋಜನವ್ರತದಿಂದ ಸ್ವರ್ಗವನ್ನು ಜಯಿಸುತ್ತಾನೆ.

13093015a ದೇವೇಭ್ಯಶ್ಚ ಪಿತೃಭ್ಯಶ್ಚ ಭೃತ್ಯೇಭ್ಯೋಽತಿಥಿಭಿಃ ಸಹ|

13093015c ಅವಶಿಷ್ಟಾನಿ ಯೋ ಭುಂಕ್ತೇ ತಮಾಹುರ್ವಿಘಸಾಶಿನಮ್||

ದೇವತೆಗಳಿಗೂ ಪಿತೃಗಳಿಗೂ ನೈವೇದ್ಯಮಾಡಿದ ನಂತರ ಮತ್ತು ಆಶ್ರಿತಜನರು ಊಟಮಾಡಿದ ನಂತರ ಉಳಿದಿರುವುದನ್ನು ಊಟ ಮಾಡುವವನನ್ನು ವಿಘಸಾಶೀ ಎನ್ನುತ್ತಾರೆ.

13093016a ತೇಷಾಂ ಲೋಕಾ ಹ್ಯಪರ್ಯಂತಾಃ ಸದನೇ ಬ್ರಹ್ಮಣಃ ಸ್ಮೃತಾಃ|

13093016c ಉಪಸ್ಥಿತಾ ಹ್ಯಪ್ಸರೋಭಿರ್ಗಂಧರ್ವೈಶ್ಚ ಜನಾಧಿಪ||

ಜನಾಧಿಪ! ಅವನಿಗೆ ಬ್ರಹ್ಮಸದನದಲ್ಲಿ ಅಕ್ಷಯ ಲೋಕಗಳು ದೊರೆಯುತ್ತವೆ ಎನ್ನುತ್ತಾರೆ. ಅಪ್ಸರೆಯರು ಗಂಧರ್ವರೊಡಗೂಡಿ ಅವರ ಸೇವೆಗೈಯುತ್ತಾರೆ.

13093017a ದೇವತಾತಿಥಿಭಿಃ ಸಾರ್ಧಂ ಪಿತೃಭಿಶ್ಚೋಪಭುಂಜತೇ|

13093017c ರಮಂತೇ ಪುತ್ರಪೌತ್ರೈಶ್ಚ ತೇಷಾಂ ಗತಿರನುತ್ತಮಾ||

ದೇವತೆಗಳು, ಅತಿಥಿಗಳು ಮತ್ತು ಪಿತೃಗಳಿಗೂ ಕೊಟ್ಟನಂತರ ಊಟಮಾಡುವವನು ಪುತ್ರಪೌತ್ರರನ್ನು ಪಡೆದು ಸಂತೋಷದಿಂದಿರುತ್ತಾನೆ. ಅವಸಾನಾನಂತರ ಅವನಿಗೆ ಉತ್ತಮ ಗತಿಯೂ ದೊರೆಯುತ್ತದೆ.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ವಿಸಸ್ತೈನ್ಯೋಪಾಖ್ಯಾನೇ ತ್ರಿನವತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ವಿಸಸ್ತೈನ್ಯೋಪಾಖ್ಯಾನ ಎನ್ನುವ ತೊಂಭತ್ಮೂರನೇ ಅಧ್ಯಾಯವು.

[1] ಭಾರತ ದರ್ಶನ ಮತ್ತು ಗೀತಾ ಪ್ರೆಸ್ ಸಂಪುಟಗಳಲ್ಲಿ ಮುಂದಿನ ಅಧ್ಯಾಯವನ್ನೂ ಈ ಅಧ್ಯಾಯದೊಂದಿಗೆ ಸೇರಿಸಿದ್ದಾರೆ.

[2] ಪಠೇತ್ (ಭಾರತ ದರ್ಶನ/ಗೀತಾ ಪ್ರೆಸ್).

[3] ನಿದ್ರೆಯನ್ನು ಬಿಟ್ಟವನು (ಭಾರತ ದರ್ಶನ).

Comments are closed.