Anushasana Parva: Chapter 91

ಅನುಶಾಸನ ಪರ್ವ: ದಾನಧರ್ಮ ಪರ್ವ

೯೧

ಶೋಕಾತುರನಾದ ನಿಮಿಯು ಪುತ್ರನಿಗೆ ಪಿಂಡವನ್ನಿತ್ತುದಿದು; ಶ್ರಾದ್ಧದ ಕುರಿತು ಅತ್ರಿಯ ಉಪದೇಶ; ವಿಶ್ವೇದೇವತೆಗಳ ನಾಮಧೇಯಗಳು, ಶ್ರಾದ್ಧದಲ್ಲಿ ತ್ಯಾಜ್ಯವಸ್ತುಗಳು (೧-೪೫).

13091001 ಯುಧಿಷ್ಠಿರ ಉವಾಚ|

13091001a ಕೇನ ಸಂಕಲ್ಪಿತಂ ಶ್ರಾದ್ಧಂ ಕಸ್ಮಿನ್ಕಾಲೇ ಕಿಮಾತ್ಮಕಮ್|

13091001c ಭೃಗ್ವಂಗಿರಸಕೇ ಕಾಲೇ ಮುನಿನಾ ಕತರೇಣ ವಾ||

ಯುಧಿಷ್ಠಿರನು ಹೇಳಿದನು: “ಶ್ರಾದ್ಧವನ್ನು ಮೊದಲು ಯಾರು ಸಂಕಲ್ಪಿಸಿದರು? ಯಾವಕಾಲದಲ್ಲಿ ಮತ್ತು ಯಾವ ಸ್ವರೂಪದಲ್ಲಿ ಇದು ಪ್ರಾರಂಭಗೊಂಡಿತು? ಭೃಗು-ಅಂಗಿರಸರ ಕಾಲದಲ್ಲಿಯೇ ಇದು ಪ್ರಾರಂಭಗೊಂಡಿದ್ದರೆ ಯಾವ ಮುನಿಯು ಇದನ್ನು ಪ್ರಾರಂಭಿಸಿದನು?

13091002a ಕಾನಿ ಶ್ರಾದ್ಧೇಷು ವರ್ಜ್ಯಾನಿ ತಥಾ ಮೂಲಫಲಾನಿ ಚ|

13091002c ಧಾನ್ಯಜಾತಿಶ್ಚ ಕಾ ವರ್ಜ್ಯಾ ತನ್ಮೇ ಬ್ರೂಹಿ ಪಿತಾಮಹ||

ಶ್ರಾದ್ಧಗಳಲ್ಲಿ ಯಾವುದನ್ನು ವರ್ಜಿಸಬೇಕು? ಹಾಗೆಯೇ ಶ್ರಾದ್ಧಗಳಲ್ಲಿ ಯಾವ ಫಲಮೂಲಗಳನ್ನು, ಧಾನ್ಯಜಾತಿಗಳನ್ನು ವರ್ಜಿಸಬೇಕು? ಪಿತಾಮಹ! ಅದನ್ನು ನನಗೆ ಹೇಳು.”

13091003 ಭೀಷ್ಮ ಉವಾಚ|

13091003a ಯಥಾ ಶ್ರಾದ್ಧಂ ಸಂಪ್ರವೃತ್ತಂ ಯಸ್ಮಿನ್ಕಾಲೇ ಯದಾತ್ಮಕಮ್|

13091003c ಯೇನ ಸಂಕಲ್ಪಿತಂ ಚೈವ ತನ್ಮೇ ಶೃಣು ಜನಾಧಿಪ||

ಭೀಷ್ಮನು ಹೇಳಿದನು: “ಜನಾಧಿಪ! ಶ್ರಾದ್ಧವು ಹೇಗೆ ಪ್ರಾರಂಭವಾಯಿತು, ಯಾವ ಕಾಲದಲ್ಲಿ ಯಾವ ರೂಪದಲ್ಲಿ ಯಾರಿಂದ ಸಂಕಲ್ಪಿಸಲ್ಪಟ್ಟು ಪ್ರಾರಂಭವಾಯಿತು ಎನ್ನುವುದನ್ನು ನನ್ನಿಂದ ಕೇಳು.

13091004a ಸ್ವಾಯಂಭುವೋಽತ್ರಿಃ ಕೌರವ್ಯ ಪರಮರ್ಷಿಃ ಪ್ರತಾಪವಾನ್|

13091004c ತಸ್ಯ ವಂಶೇ ಮಹಾರಾಜ ದತ್ತಾತ್ರೇಯ ಇತಿ ಸ್ಮೃತಃ||

ಕೌರವ್ಯ! ಮಹಾರಾಜ! ಸ್ವಯಂಭು ಬ್ರಹ್ಮನ ಮಗ ಅತ್ರಿಯು ಪರಮ ಋಷಿ ಪ್ರತಾಪವಂತನಾಗಿದ್ದನು. ಅವನ ವಂಶದಲ್ಲಿ ದತ್ತಾತ್ರೇಯ ಎನ್ನುವವನಾದನು ಎಂದಿದೆ.

13091005a ದತ್ತಾತ್ರೇಯಸ್ಯ ಪುತ್ರೋಽಭೂನ್ನಿಮಿರ್ನಾಮ ತಪೋಧನಃ|

13091005c ನಿಮೇಶ್ಚಾಪ್ಯಭವತ್ಪುತ್ರಃ ಶ್ರೀಮಾನ್ನಾಮ ಶ್ರಿಯಾ ವೃತಃ||

ದತ್ತಾತ್ರೇಯನ ಮಗನು ತಪೋಧನ ನಿಮಿ ಎಂಬ ಹೆಸರಿನವನಾದನು. ನಿಮಿಗೆ ಶ್ರೀಯಿಂದ ಕೂಡಿದ ಶ್ರೀಮಾನ್ ಎಂಬ ಪುತ್ರನಾದನು.

13091006a ಪೂರ್ಣೇ ವರ್ಷಸಹಸ್ರಾಂತೇ ಸ ಕೃತ್ವಾ ದುಷ್ಕರಂ ತಪಃ|

13091006c ಕಾಲಧರ್ಮಪರೀತಾತ್ಮಾ ನಿಧನಂ ಸಮುಪಾಗತಃ||

ದುಷ್ಕರ ತಪಸ್ಸನ್ನಾಚರಿಸಿ ಸಹಸ್ರವರ್ಷಗಳು ಪೂರ್ಣವಾಗಲು ಶ್ರೀಮಾನನು ಕಾಲಧರ್ಮಕ್ಕೊಳಗಾಗಿ ನಿಧನ ಹೊಂದಿದನು.

13091007a ನಿಮಿಸ್ತು ಕೃತ್ವಾ ಶೌಚಾನಿ ವಿಧಿದೃಷ್ಟೇನ ಕರ್ಮಣಾ|

13091007c ಸಂತಾಪಮಗಮತ್ತೀವ್ರಂ ಪುತ್ರಶೋಕಪರಾಯಣಃ||

ನಿಮಿಯಾದರೋ ವಿಧಿದೃಷ್ಟಕರ್ಮಗಳಿಂದ ಶೌಚಗಳನ್ನು ಮಾಡಿಕೊಂಡು ಪುತ್ರಶೋಕಪರಾಯಣನಾಗಿ ತೀವ್ರ ಸಂತಾಪಕ್ಕೊಳಗಾದನು.

13091008a ಅಥ ಕೃತ್ವೋಪಹಾರ್ಯಾಣಿ ಚತುರ್ದಶ್ಯಾಂ ಮಹಾಮತಿಃ|

13091008c ತಮೇವ ಗಣಯನ್ ಶೋಕಂ ವಿರಾತ್ರೇ ಪ್ರತ್ಯಬುಧ್ಯತ||

ಮಹಾಮತಿ ನಿಮಿಯು ಚತುರ್ದಶಿಯಂದು ಶ್ರಾದ್ಧದಲ್ಲಿ ಕೊಡಬೇಕಾದ ವಸ್ತುಗಳೆಲ್ಲವನ್ನೂ ಸಂಗ್ರಹಿಸಿ ಪುತ್ರಶೋಕದಲ್ಲಿಯೇ ಮಗ್ನನಾಗಿ ರಾತ್ರಿಯನ್ನು ಕಳೆದು ಬೆಳಿಗ್ಗೆ ಮೇಲೆದ್ದನು.

13091009a ತಸ್ಯಾಸೀತ್ ಪ್ರತಿಬುದ್ಧಸ್ಯ ಶೋಕೇನ ಪಿಹಿತಾತ್ಮನಃ|

13091009c ಮನಃ ಸಂಹೃತ್ಯ ವಿಷಯೇ ಬುದ್ಧಿರ್ವಿಸ್ತರಗಾಮಿನೀ||

ಅವನ ಬುದ್ಧಿಯು ಶೋಕದಿಂದ ಪೀಡಿತವಾಗಿತ್ತು. ತನ್ನ ಮನಸ್ಸನ್ನು ಆ ವಿಷಯದಿಂದ ಹಿಂತೆಗೆದುಕೊಂಡು ಬುದ್ಧಿಯನ್ನು ವಿಸ್ತರಿಸಿ ಚಿಂತಿಸಿದನು.

13091010a ತತಃ ಸಂಚಿಂತಯಾಮಾಸ ಶ್ರಾದ್ಧಕಲ್ಪಂ ಸಮಾಹಿತಃ|

13091010c ಯಾನಿ ತಸ್ಯೈವ ಭೋಜ್ಯಾನಿ ಮೂಲಾನಿ ಚ ಫಲಾನಿ ಚ||

ಆಗ ಏಕಾಗ್ರಚಿತ್ತನಾಗಿ ಶ್ರಾದ್ಧಕಲ್ಪದ ಕುರಿತು – ಯಾವ ಫಲ-ಮೂಲಗಳನ್ನು ಭೋಜನಕ್ಕೆ ನೀಡಬೇಕೆಂದು – ಚಿಂತಿಸತೊಡಗಿದನು.

13091011a ಉಕ್ತಾನಿ ಯಾನಿ ಚಾನ್ಯಾನಿ ಯಾನಿ ಚೇಷ್ಟಾನಿ ತಸ್ಯ ಹ|

13091011c ತಾನಿ ಸರ್ವಾಣಿ ಮನಸಾ ವಿನಿಶ್ಚಿತ್ಯ ತಪೋಧನಃ||

ವೇದಗಳಲ್ಲಿ ಯಾವುದನ್ನು ಹೇಳಿದ್ದಾರೆ ಮತ್ತು ಅನ್ಯ ಯಾವುದು ಅವನಿಗೆ ಇಷ್ಟಾವಾಗಿದ್ದವು ಇವೆಲ್ಲವನ್ನೂ ಆ ತಪೋಧನನು ಮನಸ್ಸಿನಲ್ಲಿಯೇ ನಿಶ್ಚಯಿಸಿದನು.

13091012a ಅಮಾವಾಸ್ಯಾಂ ಮಹಾಪ್ರಾಜ್ಞ ವಿಪ್ರಾನಾನಾಯ್ಯ ಪೂಜಿತಾನ್|

13091012c ದಕ್ಷಿಣಾವರ್ತಿಕಾಃ ಸರ್ವಾ ಬೃಸೀಃ ಸ್ವಯಮಥಾಕರೋತ್||

ಅಮವಾಸ್ಯೆಯಂದು ಮಹಾಪ್ರಾಜ್ಞನು ವಿಪ್ರರನ್ನು ಕರೆದು ಪೂಜಿಸಿ ತಾನೇ ಮಾಡಿದ ದಕ್ಷಿಣಾಗ್ರ ದರ್ಭಾಸನಗಳಲ್ಲಿ ಅವರೆಲ್ಲರನ್ನೂ ಕೂರಿಸಿದನು.

13091013a ಸಪ್ತ ವಿಪ್ರಾಂಸ್ತತೋ ಭೋಜ್ಯೇ ಯುಗಪತ್ಸಮುಪಾನಯತ್|

13091013c ಋತೇ ಚ ಲವಣಂ ಭೋಜ್ಯಂ ಶ್ಯಾಮಾಕಾನ್ನಂ ದದೌ ಪ್ರಭುಃ||

ಪ್ರಭುವು ಆ ಏಳು ವಿಪ್ರರಿಗೂ ಒಮ್ಮೆಗೇ ಭೋಜನದ ವ್ಯವಸ್ಥೆಯನ್ನು ಮಾಡಿದನು. ಉಪ್ಪಿಲ್ಲದ ಸಾಮೇಅಕ್ಕಿಯ ಅನ್ನವನ್ನು ಅವರಿಗೆ ಬಡಿಸಿದನು.

13091014a ದಕ್ಷಿಣಾಗ್ರಾಸ್ತತೋ ದರ್ಭಾ ವಿಷ್ಟರೇಷು ನಿವೇಶಿತಾಃ|

13091014c ಪಾದಯೋಶ್ಚೈವ ವಿಪ್ರಾಣಾಂ ಯೇ ತ್ವನ್ನಮುಪಭುಂಜತೇ||

13091015a ಕೃತ್ವಾ ಚ ದಕ್ಷಿಣಾಗ್ರಾನ್ವೈ ದರ್ಭಾನ್ಸುಪ್ರಯತಃ ಶುಚಿಃ|

13091015c ಪ್ರದದೌ ಶ್ರೀಮತೇ ಪಿಂಡಂ ನಾಮಗೋತ್ರಮುದಾಹರನ್||

ಆಗ ನಿಮಿಯು ವಿಪ್ರರ ಕಾಲಕೆಳಗೆ ದರ್ಭಾಸನದ ಮೇಲೆ ದಕ್ಷಿಣಾಗ್ರ ದರ್ಭೆಗಳನ್ನಿಟ್ಟನು. ಬಳಿಕ ದರ್ಭೆಗಳನ್ನು ತನ್ನ ಎದಿರು ದಕ್ಷಿಣಾಗ್ರವಾಗಿ ಇರಿಸಿದನು. ನಂತರ ಶುಚಿಯಾಗಿ ವಿನೀತನಾಗಿ ಮಗ ಶ್ರೀಮಂತನ ನಾಮ-ಗೋತ್ರಗಳನ್ನು ಹೇಳುತ್ತಾ ಎದುರಿದ್ದ ದರ್ಭೆಗಳ ಮೇಲೆ ಪಿಂಡಪ್ರದಾನ ಮಾಡಿದನು.

13091016a ತತ್ಕೃತ್ವಾ ಸ ಮುನಿಶ್ರೇಷ್ಠೋ ಧರ್ಮಸಂಕರಮಾತ್ಮನಃ|

13091016c ಪಶ್ಚಾತ್ತಾಪೇನ ಮಹತಾ ತಪ್ಯಮಾನೋಽಭ್ಯಚಿಂತಯತ್||

ಅದನ್ನು ಮಾಡಿದ ಮುನಿಶ್ರೇಷ್ಠನು ತಾನು ಧರ್ಮಸಂಕರಮಾಡಿದೆನೆಂಬ ಮಹಾ ಪಶ್ಚಾತ್ತಾಪದಿಂದ ಪರಿತಪಿಸಿ ಚಿಂತಿಸತೊಡಗಿದನು.

13091017a ಅಕೃತಂ ಮುನಿಭಿಃ ಪೂರ್ವಂ ಕಿಂ ಮಯೈತದನುಷ್ಠಿತಮ್|

13091017c ಕಥಂ ನು ಶಾಪೇನ ನ ಮಾಂ ದಹೇಯುರ್ಬ್ರಾಹ್ಮಣಾ ಇತಿ||

“ಋಷಿಗಳು ಹಿಂದೆಂದೂ ಮಾಡದಿದ್ದ ಕರ್ಮವನ್ನು ನಾನೇಕೆ ಇಂದು ಮಾಡಿಬಿಟ್ಟೆ? ನನ್ನ ಸ್ವೇಚ್ಛಾವರ್ತನೆಯನ್ನು ನೋಡಿ ಬ್ರಾಹ್ಮಣರು ಶಾಪಕೊಟ್ಟು ನನ್ನನ್ನು ಭಸ್ಮಮಾಡದೇ ಇರುವರೇ?”

13091018a ತತಃ ಸಂಚಿಂತಯಾಮಾಸ ವಂಶಕರ್ತಾರಮಾತ್ಮನಃ|

13091018c ಧ್ಯಾತಮಾತ್ರಸ್ತಥಾ ಚಾತ್ರಿರಾಜಗಾಮ ತಪೋಧನಃ||

ಆಗ ಅವನು ತನ್ನ ವಂಶಕರ್ತಾರನನ್ನು ಸ್ಮರಿಸಿದನು. ಸ್ಮರಿಸಿದ ಮಾತ್ರದಲ್ಲಿಯೇ ಅಲ್ಲಿಗೆ ತಪೋಧನ ಅತ್ರಿಯು ಆಗಮಿಸಿದನು.

13091019a ಅಥಾತ್ರಿಸ್ತಂ ತಥಾ ದೃಷ್ಟ್ವಾ ಪುತ್ರಶೋಕೇನ ಕರ್ಶಿತಮ್|

13091019c ಭೃಶಮಾಶ್ವಾಸಯಾಮಾಸ ವಾಗ್ಭಿರಿಷ್ಟಾಭಿರವ್ಯಯಃ||

ಪುತ್ರಶೋಕದಿಂದ ಸಂಕಟಪಡುತ್ತಿದ್ದ ನಿಮಿಯನ್ನು ನೋಡಿ ಅವ್ಯಯ ಅತ್ರಿಯು ಇಷ್ಟವಾದ ಮತ್ತು ಮದುರವಾದ ಮಾತುಗಳಿಂದ ಸಂತೈಸಿದನು:

13091020a ನಿಮೇ ಸಂಕಲ್ಪಿತಸ್ತೇಽಯಂ ಪಿತೃಯಜ್ಞಸ್ತಪೋಧನಃ|

13091020c ಮಾ ತೇ ಭೂದ್ಭೀಃ ಪೂರ್ವದೃಷ್ಟೋ ಧರ್ಮೋಽಯಂ ಬ್ರಹ್ಮಣಾ ಸ್ವಯಮ್||

“ನಿಮೇ! ತಪೋಧನ! ನೀನು ಪಿತೃಯಜ್ಞವನ್ನು ಸಂಕಲ್ಪಿಸಿ ಮಾಡಿರುವೆ. ಇದರಿಂದ ನೀನು ಭಯಪಡಬೇಡ. ಪೂರ್ವದಲ್ಲಿ ಸ್ವಯಂ ಬ್ರಹ್ಮನೇ ಈ ಧರ್ಮವನ್ನು ಕಂಡುಕೊಂಡಿದ್ದನು.

13091021a ಸೋಽಯಂ ಸ್ವಯಂಭುವಿಹಿತೋ ಧರ್ಮಃ ಸಂಕಲ್ಪಿತಸ್ತ್ವಯಾ|

13091021c ಋತೇ ಸ್ವಯಂಭುವಃ ಕೋಽನ್ಯಃ ಶ್ರಾದ್ಧೇಯಂ ವಿಧಿಮಾಹರೇತ್||

ಸ್ವಯಂಭುವಿಹಿತವಾದ ಧರ್ಮವನ್ನೇ ನೀನು ಸಂಕಲ್ಪಿಸಿ ಆಚರಿಸಿರುವೆ. ಸ್ವಯಂಭುವಲ್ಲದೇ ಬೇರೆ ಯಾರು ತಾನೇ ಶ್ರಾದ್ಧದ ವಿಧಿಯನ್ನು ಆಚರಿಸಬಲ್ಲರು?

13091022a ಆಖ್ಯಾಸ್ಯಾಮಿ ಚ ತೇ ಭೂಯಃ ಶ್ರಾದ್ಧೇಯಂ ವಿಧಿಮುತ್ತಮಮ್|

13091022c ಸ್ವಯಂಭುವಿಹಿತಂ ಪುತ್ರ ತತ್ಕುರುಷ್ವ ನಿಬೋಧ ಮೇ||

ಪುತ್ರ! ಸ್ವಯಂಭುವಿಹಿತವಾದ ಉತ್ತಮ ಶ್ರಾದ್ಧವಿಧಿಯನ್ನು ನಿನಗೂ ಹೇಳುತ್ತೇನೆ. ಅದನ್ನು ಕೇಳಿ ಅದರಂತೆಯೇ ಮಾಡು.

13091023a ಕೃತ್ವಾಗ್ನಿಕರಣಂ ಪೂರ್ವಂ ಮಂತ್ರಪೂರ್ವಂ ತಪೋಧನ|

13091023c ತತೋಽರ್ಯಮ್ಣೇ ಚ ಸೋಮಾಯ ವರುಣಾಯ ಚ ನಿತ್ಯಶಃ||

13091024a ವಿಶ್ವೇದೇವಾಶ್ಚ ಯೇ ನಿತ್ಯಂ ಪಿತೃಭಿಃ ಸಹ ಗೋಚರಾಃ|

13091024c ತೇಭ್ಯಃ ಸಂಕಲ್ಪಿತಾ ಭಾಗಾಃ ಸ್ವಯಮೇವ ಸ್ವಯಂಭುವಾ||

ತಪೋಧನ! ಮೊದಲು ಮಂತ್ರಪೂರ್ವಕವಾಗಿ ಅಗ್ನಿಕರಣವನ್ನು ಮಾಡಿ ನಂತರ ಅಗ್ನಿಗೂ, ಸೋಮನಿಗೂ, ವರುಣನಿಗೂ, ನಿತ್ಯವೂ ಪಿತೃಗಳೊಂದಿಗಿರುವ ವಿಶ್ವೇದೇವರಿಗೂ ಮಂತ್ರಪೂರ್ವಕವಾಗಿ ಹೋಮಮಾಡಬೇಕು. ಸ್ವಯಂ ಸ್ವಯಂಭುವೇ ಇವರೆಲ್ಲರಿಗೂ ಪಿತೃಯಜ್ಞದಲ್ಲಿ ಹವಿರ್ಭಾಗಗಳನ್ನು ಕಲ್ಪಿಸಿದ್ದಾನೆ.

13091025a ಸ್ತೋತವ್ಯಾ ಚೇಹ ಪೃಥಿವೀ ನಿವಾಪಸ್ಯೇಹ ಧಾರಿಣೀ|

13091025c ವೈಷ್ಣವೀ ಕಾಶ್ಯಪೀ ಚೇತಿ ತಥೈವೇಹಾಕ್ಷಯೇತಿ ಚ||

ನಂತರ ಶ್ರಾದ್ಧಕ್ಕೆ ಆಧಾರಭೂತಳಾದ ಪೃಥ್ವಿಯನ್ನು ವೈಷ್ಣವೀ, ಕಾಶ್ಯಪೀ, ಮತ್ತು ಅಕ್ಷಯ ಎಂಬ ನಾಮಗಳಿಂದ ಸ್ತುತಿಸಬೇಕು.

13091026a ಉದಕಾನಯನೇ ಚೈವ ಸ್ತೋತವ್ಯೋ ವರುಣೋ ವಿಭುಃ|

13091026c ತತೋಽಗ್ನಿಶ್ಚೈವ ಸೋಮಶ್ಚ ಆಪ್ಯಾಯ್ಯಾವಿಹ ತೇಽನಘ||

ಅನಘ! ನೀರನ್ನು ತರುವಾಗ ವಿಭು ವರುಣನನ್ನು ಸ್ತುತಿಸಬೇಕು. ಬಳಿಕ ಅಗ್ನಿಯನ್ನೂ ಸೋಮನನ್ನೂ ತೃಪ್ತಿಗೊಳಿಸಬೇಕು.

13091027a ದೇವಾಸ್ತು ಪಿತರೋ ನಾಮ ನಿರ್ಮಿತಾ ವೈ ಸ್ವಯಂಭುವಾ|

13091027c ಊಷ್ಮಪಾಃ ಸುಮಹಾಭಾಗಾಸ್ತೇಷಾಂ ಭಾಗಾಃ ಪ್ರಕಲ್ಪಿತಾಃ||

ಸ್ವಯಂಭುವನಿಂದ ಪಿತೃಗಳೆಂಬ ಹೆಸರಿನ ದೇವತೆಗಳು ನಿರ್ಮಿತರಾಗಿದ್ದಾರೆ. ಊಷ್ಮಪರೆಂಬ ಆ ಸುಮಹಾಭಾಗರಿಗೂ ಅವನು ಶ್ರಾದ್ಧದಲ್ಲಿ ಭಾಗಗಳನ್ನು ಕಲ್ಪಿಸಿದ್ದಾನೆ.

13091028a ತೇ ಶ್ರಾದ್ಧೇನಾರ್ಚ್ಯಮಾನಾ ವೈ ವಿಮುಚ್ಯಂತೇ ಹ ಕಿಲ್ಬಿಷಾತ್|

13091028c ಸಪ್ತಕಃ ಪಿತೃವಂಶಸ್ತು ಪೂರ್ವದೃಷ್ಟಃ ಸ್ವಯಂಭುವಾ||

ಶ್ರಾದ್ಧದಿಂದ ಊಷ್ಮಪರನ್ನು ಅರ್ಚಿಸಿದರೆ ಪಿತೃಗಳು ಪಾಪದಿಂದ ಮುಕ್ತರಾಗುತ್ತಾರೆ. ಹಿಂದೆ ಸ್ವಯಂಭವು ಕಂಡ ಪಿತೃವಂಶಗಳು ಏಳು.

13091029a ವಿಶ್ವೇ ಚಾಗ್ನಿಮುಖಾ ದೇವಾಃ ಸಂಖ್ಯಾತಾಃ ಪೂರ್ವಮೇವ ತೇ|

13091029c ತೇಷಾಂ ನಾಮಾನಿ ವಕ್ಷ್ಯಾಮಿ ಭಾಗಾರ್ಹಾಣಾಂ ಮಹಾತ್ಮನಾಮ್||

ವಿಶ್ವೇದೇವರು ಅಗ್ನಿಮುಖರು. ಅವರೂ ಶ್ರಾದ್ಧಕರ್ಮಗಳಲ್ಲಿ ಭಾಗಾರ್ಹರು ಎಂದು ಮೊದಲೇ ಹೇಳಿದ್ದೇನೆ. ಶ್ರಾದ್ಧದಲ್ಲಿ ಭಾಗಾರ್ಹರಾದ ಮಹಾತ್ಮರ ನಾಮಗಳನ್ನು ಹೇಳುತ್ತೇನೆ.

13091030a ಸಹಃ ಕೃತಿರ್ವಿಪಾಪ್ಮಾ[1] ಚ ಪುಣ್ಯಕೃತ್ಪಾವನಸ್ತಥಾ|

13091030c ಗ್ರಾಮ್ನಿಃ[2] ಕ್ಷೇಮಃ ಸಮೂಹಶ್ಚ ದಿವ್ಯಸಾನುಸ್ತಥೈವ ಚ||

13091031a ವಿವಸ್ವಾನ್ವೀರ್ಯವಾನ್ ಹ್ರೀಮಾನ್ಕೀರ್ತಿಮಾನ್ಕೃತ ಏವ ಚ|

13091031c ವಿಪೂರ್ವಃ ಸೋಮಪೂರ್ವಶ್ಚ[3] ಸೂರ್ಯಶ್ರೀಶ್ಚೇತಿ ನಾಮತಃ||

13091032a ಸೋಮಪಃ ಸೂರ್ಯಸಾವಿತ್ರೋ ದತ್ತಾತ್ಮಾ ಪುಷ್ಕರೀಯಕಃ[4]|

13091032c ಉಷ್ಣೀನಾಭೋ ನಭೋದಶ್ಚ ವಿಶ್ವಾಯುರ್ದೀಪ್ತಿರೇವ ಚ||

13091033a ಚಮೂಹರಃ ಸುವೇಷಶ್ಚ[5] ವ್ಯೋಮಾರಿಃ ಶಂಕರೋ ಭವಃ|

13091033c ಈಶಃ ಕರ್ತಾ ಕೃತಿರ್ದಕ್ಷೋ ಭುವನೋ ದಿವ್ಯಕರ್ಮಕೃತ್||

13091034a ಗಣಿತಃ ಪಂಚವೀರ್ಯಶ್ಚ ಆದಿತ್ಯೋ ರಶ್ಮಿಮಾಂಸ್ತಥಾ|

13091034c ಸಪ್ತಕೃತ್ಸೋಮವರ್ಚಾಶ್ಚ ವಿಶ್ವಕೃತ್ಕವಿರೇವ ಚ||

13091035a ಅನುಗೋಪ್ತಾ ಸುಗೋಪ್ತಾ ಚ ನಪ್ತಾ ಚೇಶ್ವರ ಏವ ಚ|

13091035c ಜಿತಾತ್ಮಾ ಮುನಿವೀರ್ಯಶ್ಚ ದೀಪ್ತಲೋಮಾ ಭಯಂಕರಃ||

13091036a ಅತಿಕರ್ಮಾ[6] ಪ್ರತೀತಶ್ಚ ಪ್ರದಾತಾ ಚಾಂಶುಮಾಂಸ್ತಥಾ|

13091036c ಶೈಲಾಭಃ ಪರಮಕ್ರೋಧೀ ಧೀರೋಷ್ಣೀ ಭೂಪತಿಸ್ತಥಾ||

13091037a ಸ್ರಜೀ ವಜ್ರೀ ವರೀ ಚೈವ ವಿಶ್ವೇದೇವಾಃ ಸನಾತನಾಃ[7]|

13091037c ಕೀರ್ತಿತಾಸ್ತೇ ಮಹಾಭಾಗಾಃ ಕಾಲಸ್ಯ ಗತಿಗೋಚರಾಃ||

ಸಹ, ಕೃತಿ, ವಿಪಾಪ್ಮಾ, ಪುಣ್ಯಕೃತ್, ಪಾವನ, ಗ್ರಾಮ್ನಿ, ಕ್ಷೇಮ, ಸಮೂಹ, ದಿವ್ಯಸಾನು, ವಿವಸ್ವಾನ್, ವೀರ್ಯವಾನ್, ಹ್ರೀಮಾನ್, ಕೀರ್ತಿಮಾನ್, ಕೃತ, ವಿಪೂರ್ವ, ಸೋಮಪೂರ್ವ, ಸೂರ್ಯಶ್ರೀ, ಸೋಮಪ, ಸೂರ್ಯಸಾವಿತ್ರ, ದತ್ತಾತ್ಮಾ, ಪುಷ್ಕರೀಯಕ, ಉಷ್ಣಿನಾಭ, ನಭೋದ, ವಿಶ್ವಾಯು, ದೀಪ್ತಿ, ಚಮೂಹರ, ಸುವೇಷ, ವ್ಯೋಮಾರಿ, ಶಂಕರ, ಭವ, ಈಶ, ಕರ್ತಾ, ಕೃತಿ, ದಕ್ಷ, ಭುವನ, ದಿವ್ಯಕರ್ಮಕೃತ್, ಗಣಿತ, ಪಂಚವೀರ್ಯ, ಆದಿತ್ಯ, ರಶ್ಮಿಮಾನ್, ಸಪ್ತಕೃತ್, ಸೋಮವರ್ಚ, ವಿಶ್ವಕೃತ್, ಕವಿ, ಅನುಗೋಪ್ತಾ, ಸುಗೋಪ್ತಾ, ನಪ್ತಾ, ಈಶ್ವರ, ಜಿತಾತ್ಮಾ, ಮುನಿವೀರ್ಯ, ದೀಪ್ತಲೋಮ, ಭಯಂಕರ, ಅತಿಕರ್ಮಾ, ಪ್ರತೀತ, ಪ್ರದಾತಾ, ಅಂಶುಮಾನ್, ಶೈಲಾಭ, ಪರಮಕ್ರೋಧೀ, ಧೀರೋಷ್ಣಿ, ಭೂಪತಿ, ಸ್ರಜೀ, ವಜ್ರೀ, ವರ – ಇವರೆಲ್ಲರೂ ಸನಾತನ ವಿಶ್ವೇದೇವರು. ಕಾಲದ ಗತಿಗೋಚರರಾದ ಈ ಮಹಾಭಾಗರ ಕುರಿತು ಹೇಳಿದ್ದೇನೆ.

13091038a ಅಶ್ರಾದ್ಧೇಯಾನಿ ಧಾನ್ಯಾನಿ ಕೋದ್ರವಾಃ ಪುಲಕಾಸ್ತಥಾ|

13091038c ಹಿಂಗು ದ್ರವ್ಯೇಷು ಶಾಕೇಷು ಪಲಾಂಡುಂ ಲಶುನಂ ತಥಾ||

13091039a ಪಲಾಂಡುಃ ಸೌಭಂಜನಕಸ್ತಥಾ ಗೃಂಜನಕಾದಯಃ|

13091039c ಕೂಷ್ಮಾಂಡಜಾತ್ಯಲಾಬುಂ ಚ ಕೃಷ್ಣಂ ಲವಣಮೇವ ಚ||

13091040a ಗ್ರಾಮ್ಯಂ ವಾರಾಹಮಾಂಸಂ ಚ ಯಚ್ಚೈವಾಪ್ರೋಕ್ಷಿತಂ ಭವೇತ್|

13091040c ಕೃಷ್ಣಾಜಾಜೀ ವಿಡಶ್ಚೈವ ಶೀತಪಾಕೀ ತಥೈವ ಚ|

13091040e ಅಂಕುರಾದ್ಯಾಸ್ತಥಾ ವರ್ಜ್ಯಾ ಇಹ ಶೃಂಗಾಟಕಾನಿ ಚ||

ಹಾರಕ ಧಾನ್ಯಗಳನ್ನಾಗಲೀ, ಕ್ಷುದ್ರಧಾನ್ಯಗಳನ್ನಾಗಲೀ ಶ್ರಾದ್ಧದಲ್ಲಿ ಉಪಯೋಗಿಸಬಾರದು. ಒಗ್ಗರಣೆಯಲ್ಲಿ ಹಿಂಗನ್ನು ಉಪಯೋಗಿಸಬಾರದು. ತರಕಾರಿಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ, ನುಗ್ಗೇಕಾಯಿ, ಕೆಂಚನಾಳ ಕಾಯಿ, ಗಜ್ಜರಿ, ಬೂದಿಗುಂಬುಳ, ಸೋರೆ ಮೊದಲಾದವು, ಕಪ್ಪು ಬಣ್ಣದ ಉಪ್ಪು, ಗ್ರಾಮವಾಸೀ ಹಂದಿಯ ಮಾಂಸ, ಅಪ್ರೋಕ್ಷಿತ ಪದಾರ್ಥಗಳು, ಕಪ್ಪುಜೀರಿಗೆ, ನಿಂಬುಪ್ಪು, ಶೀತಪಾಕೀ, ಮೊಳಕೆಬಂದಿರುವ ಧಾನ್ಯಗಳು, ಶೃಂಗಾಟಕ ಮೊದಲಾದ ಬಳ್ಳಿಗಳು – ಇವುಗಳನ್ನು ಶ್ರಾದ್ಧದಲ್ಲಿ ಉಪಯೋಗಿಸಬಾರದು.

13091041a ವರ್ಜಯೇಲ್ಲವಣಂ ಸರ್ವಂ ತಥಾ ಜಂಬೂಫಲಾನಿ ಚ|

13091041c ಅವಕ್ಷುತಾವರುದಿತಂ ತಥಾ ಶ್ರಾದ್ಧೇಷು ವರ್ಜಯೇತ್||

ಎಲ್ಲ ವಿಧದ ಉಪ್ಪನ್ನೂ ನೇರಳೆಯ ಹಣ್ಣನ್ನೂ ವರ್ಜಿಸಬೇಕು. ಸೀನು ಮತ್ತು ಕಣ್ಣೀರಿನಿಂದ ದೂಷಿತ ಪದಾರ್ಥಗಳನ್ನು ಶ್ರಾದ್ಧದಲ್ಲಿ ವರ್ಜಿಸಬೇಕು.

13091042a ನಿವಾಪೇ ಹವ್ಯಕವ್ಯೇ ವಾ ಗರ್ಹಿತಂ ಚ ಶ್ವದರ್ಶನಮ್|

13091042c ಪಿತರಶ್ಚೈವ ದೇವಾಶ್ಚ ನಾಭಿನಂದಂತಿ ತದ್ಧವಿಃ||

ಪಿತೃತರ್ಪಣದ ಸಮಯದಲ್ಲಾಗಲೀ, ಹವ್ಯ-ಕವ್ಯಗಳ ಸಮಯದಲ್ಲಾಗಲೀ ನಾಯಿಯ ದರ್ಶನವು ಗರ್ಹಿತವಾದುದು. ನಾಯಿಯು ನೋಡಿದ ಹವಿಸ್ಸನ್ನು ಪಿತೃಗಳಾಗಲೀ ದೇವತೆಗಳಾಗಲೀ ಇಷ್ಟಪಡುವುದಿಲ್ಲ.

13091043a ಚಂಡಾಲಶ್ವಪಚೌ ವರ್ಜ್ಯೌ ನಿವಾಪೇ ಸಮುಪಸ್ಥಿತೇ|

13091043c ಕಾಷಾಯವಾಸೀ ಕುಷ್ಠೀ ವಾ ಪತಿತೋ ಬ್ರಹ್ಮಹಾಪಿ ವಾ||

13091044a ಸಂಕೀರ್ಣಯೋನಿರ್ವಿಪ್ರಶ್ಚ ಸಂಬಂಧೀ ಪತಿತಶ್ಚ ಯಃ|

13091044c ವರ್ಜನೀಯಾ ಬುಧೈರೇತೇ ನಿವಾಪೇ ಸಮುಪಸ್ಥಿತೇ||

ಪಿಂಡಪ್ರದಾನದ ಸಮಯದಲ್ಲಿ ಚಂಡಾಲನಾಗಲೀ ಶ್ವಪಚನಾಗಲೀ ಇರಬಾರದು. ಕಾಷಾಯವಸ್ತ್ರವನ್ನು ಧರಿಸಿದವನು, ಕುಷ್ಠರೋಗಿ, ಪತಿತ, ಬ್ರಹ್ಮಹತ್ಯೆಮಾಡಿದವನು, ಸಂಕರಯೋನಿಯಲ್ಲಿ ಹುಟ್ಟಿದ ಬ್ರಾಹ್ಮಣ, ಧರ್ಮಭ್ರಷ್ಟ ಸಂಬಂಧಿ – ಇವರುಗಳನ್ನು ವಿದ್ವಾಂಸರು ಶ್ರಾದ್ಧದಲ್ಲಿ ವರ್ಜಿಸಬೇಕು.”

13091045a ಇತ್ಯೇವಮುಕ್ತ್ವಾ ಭಗವಾನ್ ಸ್ವವಂಶಜಮೃಷಿಂ ಪುರಾ|

13091045c ಪಿತಾಮಹಸಭಾಂ ದಿವ್ಯಾಂ ಜಗಾಮಾತ್ರಿಸ್ತಪೋಧನಃ||

ಹಿಂದೆ ಸ್ವವಂಶಜನಾದ ಋಷಿಗೆ ಹೀಗೆ ಹೇಳಿ ತಪೋಧನ ಭಗವಾನ್ ಅತ್ರಿಯು ಪಿತಾಮಹನ ದಿವ್ಯ ಸಭೆಗೆ ತೆರಳಿದನು.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಶ್ರಾದ್ಧಕಲ್ಪೇ ಏಕನವತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಶ್ರಾದ್ಧಕಲ್ಪ ಎನ್ನುವ ತೊಂಭತ್ತೊಂದನೇ ಅಧ್ಯಾಯವು.

[1] ಬಲಂ ಧೃತಿರ್ವಿಪಾಪ್ಮಾ (ಭಾರತ ದರ್ಶನ/ಗೀತಾ ಪ್ರೆಸ್).

[2] ಪಾರ್ಷ್ಣಿಃ (ಭಾರತ ದರ್ಶನ/ಗೀತಾ ಪ್ರೆಸ್).

[3] ವಿದ್ಯುದ್ವರ್ಚಾಃ ಸೋಮವರ್ಚಾಃ (ಭಾರತ ದರ್ಶನ/ಗೀತಾ ಪ್ರೆಸ್).

[4] ಪುಂಡರೀಯಕಃ (ಭಾರತ ದರ್ಶನ/ಗೀತಾ ಪ್ರೆಸ್).

[5] ಸುರೇಶಶ್ಚ (ಭಾರತ ದರ್ಶನ/ಗೀತಾ ಪ್ರೆಸ್).

[6] ಅನುಕರ್ಮಾ (ಭಾರತ ದರ್ಶನ/ಗೀತಾ ಪ್ರೆಸ್).

[7] ಈ ಒಂದು ಶ್ಲೋಕವು ಭಾರತ ದರ್ಶನ/ಗೀತಾ ಪ್ರೆಸ್ ಗಳಲ್ಲಿ ಇಲ್ಲ.

Comments are closed.