Anushasana Parva: Chapter 40

ಅನುಶಾಸನ ಪರ್ವ: ದಾನಧರ್ಮ ಪರ್ವ

೪೦

ವಿಪುಲೋಪಾಖ್ಯಾನ

ಬ್ರಹ್ಮನು ಹಿಂದೆ ಮೋಹರೂಪೀ ನಾರಿಯರನ್ನು ಸೃಷ್ಟಿಸಿದುದನ್ನು ಹೇಳಿ ಭೀಷ್ಮನು ಹಿಂದೆ ವಿಪುಲನು ಗುರುಪತ್ನಿಯನ್ನು ರಕ್ಷಿಸಿದುದರ ಕಥೆಯನ್ನು ಪ್ರಾರಂಭಿಸಿದುದು (೧-೧೫). ತನ್ನ ರೂಪವತೀ ಪತ್ನಿ ರುಚಿಯನ್ನು ಕಾಮುಕ ಇಂದ್ರನಿಂದ ರಕ್ಷಿಸಬೇಕೆಂದು ಯಜ್ಞಕಾರ್ಯಕ್ಕೆ ಹೋಗುತ್ತಿದ್ದ ಋಷಿ ದೇವಶರ್ಮನು ಶಿಷ್ಯ ವಿಪುಲನಿಗೆ ಹೇಳಿದುದು (೧೬-೪೦). ಆಲೋಚಿಸಿ ವಿಪುಲನು ಯೋಗಬಲದಿಂದ ರುಚಿಯ ಶರೀರವನ್ನು ಪ್ರವೇಶಿಸಿ ಅವಳನ್ನು ರಕ್ಷಿಸಿದುದು (೪೧-೫೯).

13040001 ಭೀಷ್ಮ ಉವಾಚ|

13040001a ಏವಮೇತನ್ಮಹಾಬಾಹೋ ನಾತ್ರ ಮಿಥ್ಯಾಸ್ತಿ ಕಿಂ ಚನ|

13040001c ಯಥಾ ಬ್ರವೀಷಿ ಕೌರವ್ಯ ನಾರೀಂ ಪ್ರತಿ ಜನಾಧಿಪ||

ಭೀಷ್ಮನು ಹೇಳಿದನು: “ಮಹಾಬಾಹೋ! ಕೌರವ್ಯ! ಜನಾಧಿಪ! ಅದು ಹೀಗೆಯೇ ಇದೆ. ನಾರಿಯರ ಕುರಿತು ನೀನು ಹೇಳಿದುದರಲ್ಲಿ ಸ್ವಲ್ಪವೂ ಸುಳ್ಳಿಲ್ಲ.

13040002a ಅತ್ರ ತೇ ವರ್ತಯಿಷ್ಯಾಮಿ ಇತಿಹಾಸಂ ಪುರಾತನಮ್|

13040002c ಯಥಾ ರಕ್ಷಾ ಕೃತಾ ಪೂರ್ವಂ ವಿಪುಲೇನ ಮಹಾತ್ಮನಾ||

ಇದರ ಕುರಿತು ಹಿಂದೆ ಮಹಾತ್ಮ ವಿಪುಲನು ಹೇಗೆ ಸ್ತ್ರೀಯನ್ನು ರಕ್ಷಿಸಿದನು ಎನ್ನುವ ಒಂದು ಪುರಾತನ ಇತಿಹಾಸವನ್ನು ನಾನು ನಿನಗೆ ಹೇಳುತ್ತೇನೆ.

13040003a ಪ್ರಮದಾಶ್ಚ ಯಥಾ ಸೃಷ್ಟಾ ಬ್ರಹ್ಮಣಾ ಭರತರ್ಷಭ|

13040003c ಯದರ್ಥಂ ತಚ್ಚ ತೇ ತಾತ ಪ್ರವಕ್ಷ್ಯೇ ವಸುಧಾಧಿಪ||

ಭರತರ್ಷಭ! ಅಯ್ಯಾ! ವಸುಧಾಧಿಪ! ಬ್ರಹ್ಮನು ಯಾವ ರೀತಿಯಲ್ಲಿ ಮತ್ತು ಯಾವ ಉದ್ದೇಶದಿಂದ ಯುವತಿಯರನ್ನು ಸೃಷ್ಟಿಸಿದನು ಎನ್ನುವುದನ್ನೂ ನಿನಗೆ ಹೇಳುತ್ತೇನೆ.

13040004a ನ ಹಿ ಸ್ತ್ರೀಭ್ಯ ಪರಂ ಪುತ್ರ ಪಾಪೀಯಃ ಕಿಂ ಚಿದಸ್ತಿ ವೈ|

13040004c ಅಗ್ನಿರ್ಹಿ ಪ್ರಮದಾ ದೀಪ್ತೋ ಮಾಯಾಶ್ಚ ಮಯಜಾ ವಿಭೋ|

13040004e ಕ್ಷುರಧಾರಾ ವಿಷಂ ಸರ್ಪೋ ಮೃತ್ಯುರಿತ್ಯೇಕತಃ ಸ್ತ್ರಿಯಃ||

ಪುತ್ರ! ವಿಭೋ! ಸ್ತ್ರೀಯರಿಗಿಂತಲೂ ಪರಮ ಪಾಪೀಯರು ಯಾರೂ ಇಲ್ಲ. ಯೌವನ ಮದದಿಂದ ಉನ್ಮತ್ತಳಾಗಿರುವವಳು ಉರಿಯುತ್ತಿರುವ ಅಗ್ನಿಯಂತೆ! ಇದು ಮಯನಿಂದ ಹುಟ್ಟಿರುವ ಮಾಯೆ. ಕತ್ತಿಯ ಅಲಗು, ವಿಷಸರ್ಪ ಮತ್ತು ಮೃತ್ಯು ಇವು ಒಟ್ಟಾಗಿ ಒಂದುಕಡೆಯಿದ್ದರೆ ಸ್ತ್ರೀಯರು ಇನ್ನೊಂದು ಕಡೆ.

13040005a ಇಮಾಃ ಪ್ರಜಾ ಮಹಾಬಾಹೋ ಧಾರ್ಮಿಕಾ ಇತಿ ನಃ ಶ್ರುತಮ್|

13040005c ಸ್ವಯಂ ಗಚ್ಚಂತಿ ದೇವತ್ವಂ ತತೋ ದೇವಾನಿಯಾದ್ಭಯಮ್||

ಮಹಾಬಾಹೋ! ಈ ಪ್ರಜೆಗಳು ಧಾರ್ಮಿಕರಾಗಿಯೇ ಇದ್ದರೆಂದು ನಾವು ಕೇಳಿದ್ದೇವೆ. ಅವರು ಸ್ವಯಂ ದೇವತ್ವವನ್ನು ಪಡೆದುಕೊಳ್ಳುತ್ತಾರೆಂದು ದೇವತೆಗಳಿಗೆ ಭಯವಾಯಿತು.

13040006a ಅಥಾಭ್ಯಗಚ್ಚನ್ದೇವಾಸ್ತೇ ಪಿತಾಮಹಮರಿಂದಮ|

13040006c ನಿವೇದ್ಯ ಮಾನಸಂ ಚಾಪಿ ತೂಷ್ಣೀಮಾಸನ್ನವಾಙ್ಮುಖಾಃ||

ಅರಿಂದಮ! ಆಗ ಆ ದೇವತೆಗಳು ಪಿತಾಮಹನ ಬಳಿಹೋಗಿ ತಮ್ಮ ಮನಸ್ಸಿನಲ್ಲಿರುವುದನ್ನು ನಿವೇದಿಸಿ ಮುಖವನ್ನು ಕೆಳಮಾಡಿಕೊಂಡು ಸುಮ್ಮನೇ ಕುಳಿತುಕೊಂಡರು.

13040007a ತೇಷಾಮಂತರ್ಗತಂ ಜ್ಞಾತ್ವಾ ದೇವಾನಾಂ ಸ ಪಿತಾಮಹಃ|

13040007c ಮಾನವಾನಾಂ ಪ್ರಮೋಹಾರ್ಥಂ ಕೃತ್ಯಾ ನಾರ್ಯೋಽಸೃಜತ್ಪ್ರಭುಃ||

ದೇವತೆಗಳ ಅಂತರಾಳದಲ್ಲಿ ನಡೆಯುತ್ತಿದ್ದುದನ್ನು ತಿಳಿದು ಪಿತಾಮಹ ಪ್ರಭುವು ಮಾನವರನ್ನು ಪ್ರಮೋಹಗೊಳಿಸಲೋಸುಗ ಮೋಹರೂಪ ನಾರಿಯರನ್ನು ಸೃಷ್ಟಿಸಿದನು.

13040008a ಪೂರ್ವಸರ್ಗೇ ತು ಕೌಂತೇಯ ಸಾಧ್ವ್ಯೋ ನಾರ್ಯ ಇಹಾಭವನ್|

13040008c ಅಸಾಧ್ವ್ಯಸ್ತು ಸಮುತ್ಪನ್ನಾ ಕೃತ್ಯಾ ಸರ್ಗಾತ್ಪ್ರಜಾಪತೇಃ||

ಕೌಂತೇಯ! ಸೃಷ್ಟಿಯ ಆರಂಭದಲ್ಲಿ ನಾರಿಯರು ಸಾಧ್ವಿಗಳಾಗಿಯೇ ಇರುತ್ತಿದ್ದರು. ಅಸಾಧ್ವಿಯರು ಪ್ರಜಾಪತಿಯ ಈ ಹೊಸ ಸೃಷ್ಟಿಯಿಂದ ಉತ್ಪನ್ನರಾದರು.

13040009a ತಾಭ್ಯಃ ಕಾಮಾನ್ಯಥಾಕಾಮಂ ಪ್ರಾದಾದ್ಧಿ ಸ ಪಿತಾಮಹಃ|

13040009c ತಾಃ ಕಾಮಲುಬ್ಧಾಃ ಪ್ರಮದಾಃ ಪ್ರಾಮಥ್ನಂತ ನರಾಂಸ್ತದಾ||

ಪಿತಾಮಹನು ಅವರು ಬಯಸಿದ ಕಾಮಭಾವವನ್ನು ನೀಡಿದನು. ಆ ಕಾಮಲುಬ್ಧ ಯುವತಿಯರು ನರರನ್ನು ಮಥಿಸುತ್ತಲೇ ಇರುತ್ತಾರೆ.

13040010a ಕ್ರೋಧಂ ಕಾಮಸ್ಯ ದೇವೇಶಃ ಸಹಾಯಂ ಚಾಸೃಜತ್ಪ್ರಭುಃ|

13040010c ಅಸಜ್ಜಂತ ಪ್ರಜಾಃ ಸರ್ವಾಃ ಕಾಮಕ್ರೋಧವಶಂ ಗತಾಃ||

ಪ್ರಭು ದೇವೇಶನು ಕಾಮದ ಸಹಾಯಕ್ಕೆಂದು ಕ್ರೋಧವನ್ನು ಸೃಷ್ಟಿಸಿದನು. ಇವೇ ಕಾಮ-ಕ್ರೋಧಗಳ ವಶಕ್ಕೆ ಸಿಲುಕಿ ಮನುಷ್ಯರೆಲ್ಲರೂ ಪರಸ್ಪರ ಆಕರ್ಶಿತರಾಗುತ್ತಾರೆ.

13040011a ನ ಚ ಸ್ತ್ರೀಣಾಂ ಕ್ರಿಯಾ ಕಾ ಚಿದಿತಿ ಧರ್ಮೋ ವ್ಯವಸ್ಥಿತಃ|

13040011c ನಿರಿಂದ್ರಿಯಾ ಅಮಂತ್ರಾಶ್ಚ ಸ್ತ್ರಿಯೋಽನೃತಮಿತಿ ಶ್ರುತಿಃ||

ಸ್ತ್ರೀಯರಿಗೆ ಯಾವುದೇ ರೀತಿಯ ವೈದಿಕ ಕರ್ಮಗಳನ್ನು ಮಾಡುವ ವಿಧಾನವಿಲ್ಲ. ಇದೇ ಧರ್ಮದ ವ್ಯವಸ್ಥೆ. ಸ್ತ್ರೀಯರು ನಿರಿಂದ್ರಿಯರು[1], ಅಮಂತ್ರರು[2] ಮತ್ತು ಅಸತ್ಯರು ಎಂಬ ಶೃತಿವಾಕ್ಯವಿದೆ.

13040012a ಶಯ್ಯಾಸನಮಲಂಕಾರಮನ್ನಪಾನಮನಾರ್ಯತಾಮ್|

13040012c ದುರ್ವಾಗ್ಭಾವಂ ರತಿಂ ಚೈವ ದದೌ ಸ್ತ್ರೀಭ್ಯಃ ಪ್ರಜಾಪತಿಃ||

ಪ್ರಜಾಪತಿಯು ಸ್ತ್ರೀಯರಿಗೆ ಶಯ್ಯೆ, ಆಸನ, ಅಲಂಕಾರ, ಅನ್ನ, ಪಾನ, ಅನಾರ್ಯತಾ, ದುರ್ವಚನ, ಪ್ರೀತಿ ಮತ್ತು ರತಿಸುಖವನ್ನು ನೀಡಿದನು.

13040013a ನ ತಾಸಾಂ ರಕ್ಷಣಂ ಕರ್ತುಂ ಶಕ್ಯಂ ಪುಂಸಾ ಕಥಂ ಚನ|

13040013c ಅಪಿ ವಿಶ್ವಕೃತಾ ತಾತ ಕುತಸ್ತು ಪುರುಷೈರಿಹ||

ಅಯ್ಯಾ! ವಿಶ್ವಕರ್ತಾ ಪುರುಷನೂ ಕೂಡ ಅವರ ರಕ್ಷಣೆಯನ್ನು ಮಾಡಲು ಶಕ್ಯನಾಗದಿರುವಾಗ ಇನ್ನು ಸಾಧಾರಣ ಪುರುಷರು ಎಲ್ಲಿಂದ ಅವರ ರಕ್ಷಣೆಯನ್ನು ಮಾಡಬಲ್ಲರು?

13040014a ವಾಚಾ ವಾ ವಧಬಂಧೈರ್ವಾ ಕ್ಲೇಶೈರ್ವಾ ವಿವಿಧೈಸ್ತಥಾ|

13040014c ನ ಶಕ್ಯಾ ರಕ್ಷಿತುಂ ನಾರ್ಯಸ್ತಾ ಹಿ ನಿತ್ಯಮಸಂಯತಾಃ||

ಮಾತಿನಿಂದಾಗಲೀ, ವಧೆಯಿಂದಾಗಲೀ, ಬಂಧನದಿಂದಾಗಲೀ, ಅಥವಾ ವಿವಿಧ ಕಷ್ಟಗಳನ್ನು ಕೊಡುವುದರಿಂದಾಗಲೀ ನಾರಿಯರನ್ನು ರಕ್ಷಿಸಲು ಶಕ್ಯವಿಲ್ಲ. ಏಕೆಂದರೆ ಅವರು ನಿತ್ಯವೂ ಅಸಂಯಮಶೀಲರು.

13040015a ಇದಂ ತು ಪುರುಷವ್ಯಾಘ್ರ ಪುರಸ್ತಾಚ್ಚ್ರುತವಾನಹಮ್|

13040015c ಯಥಾ ರಕ್ಷಾ ಕೃತಾ ಪೂರ್ವಂ ವಿಪುಲೇನ ಗುರುಸ್ತ್ರಿಯಃ||

ಪುರುಷವ್ಯಾಘ್ರ! ಪೂರ್ವಕಾಲದಲ್ಲಿ ವಿಪುಲನು ಗುರುಸ್ತ್ರೀಯನ್ನು ಹೇಗೆ ರಕ್ಷಿಸಿದ್ದನು ಎಂದು ಕೇಳಿದ್ದೇನೆ. ಅದನ್ನೇ ನಿನಗೂ ಹೇಳುತ್ತೇನೆ.

13040016a ಋಷಿರಾಸೀನ್ಮಹಾಭಾಗೋ ದೇವಶರ್ಮೇತಿ ವಿಶ್ರುತಃ|

13040016c ತಸ್ಯ ಭಾರ್ಯಾ ರುಚಿರ್ನಾಮ ರೂಪೇಣಾಸದೃಶೀ ಭುವಿ||

ದೇವಶರ್ಮನೆಂದು ವಿಶ್ರುತನಾದ ಮಹಾಭಾಗ ಋಷಿಯೋರ್ವನಿದ್ದನು. ಅವನಿಗೆ ರುಚಿ ಎಂಬ ಹೆಸರಿನ ಭುವಿಯಲ್ಲಿಯೇ ಅಸದೃಶ ರೂಪವತಿಯಾದ ಪತ್ನಿಯಿದ್ದಳು.

13040017a ತಸ್ಯ ರೂಪೇಣ ಸಂಮತ್ತಾ ದೇವಗಂಧರ್ವದಾನವಾಃ|

13040017c ವಿಶೇಷತಸ್ತು ರಾಜೇಂದ್ರ ವೃತ್ರಹಾ ಪಾಕಶಾಸನಃ||

ರಾಜೇಂದ್ರ! ಅವಳ ರೂಪದಿಂದ ದೇವ-ಗಂಧರ್ವ-ದಾನವರೂ, ವಿಶೇಷವಾಗಿ ವೃತ್ರಹ ಪಾಕಶಾಸನನೂ ಸಂಮತ್ತರಾಗಿದ್ದರು.

13040018a ನಾರೀಣಾಂ ಚರಿತಜ್ಞಶ್ಚ ದೇವಶರ್ಮಾ ಮಹಾಮುನಿಃ|

13040018c ಯಥಾಶಕ್ತಿ ಯಥೋತ್ಸಾಹಂ ಭಾರ್ಯಾಂ ತಾಮಭ್ಯರಕ್ಷತ||

ನಾರಿಯರ ನಡತೆಯನ್ನು ತಿಳಿದಿದ್ದ ಮಹಾಮುನಿ ದೇವಶರ್ಮನು ಯಥಾಶಕ್ತಿಯಾಗಿ ಮತ್ತು ಯಥೋತ್ಸಾಹದಿಂದ ಆ ಪತ್ನಿಯನ್ನು ರಕ್ಷಿಸಿಕೊಂಡಿದ್ದನು.

13040019a ಪುರಂದರಂ ಚ ಜಾನೀತೇ ಪರಸ್ತ್ರೀಕಾಮಚಾರಿಣಮ್|

13040019c ತಸ್ಮಾದ್ಯತ್ನೇನ ಭಾರ್ಯಾಯಾ ರಕ್ಷಣಂ ಸ ಚಕಾರ ಹ||

ಪುರಂದರನು ಪರಸ್ತ್ರೀಕಾಮಿಯೆನ್ನುವುದೂ ಅವನಿಗೆ ತಿಳಿದಿತ್ತು. ಆದುದರಿಂದ ಅವನು ಪ್ರಯತ್ನಪಟ್ಟು ಅವನಿಂದ ಪತ್ನಿಯನ್ನು ರಕ್ಷಿಸುತ್ತಿದ್ದನು.

13040020a ಸ ಕದಾ ಚಿದೃಷಿಸ್ತಾತ ಯಜ್ಞಂ ಕರ್ತುಮನಾಸ್ತದಾ|

13040020c ಭಾರ್ಯಾಸಂರಕ್ಷಣಂ ಕಾರ್ಯಂ ಕಥಂ ಸ್ಯಾದಿತ್ಯಚಿಂತಯತ್||

ಅಯ್ಯಾ! ಒಮ್ಮೆ ಋಷಿಗೆ ಯಜ್ಞಮಾಡುವ ಮನಸ್ಸಾಯಿತು. ಆಗ ಅವನು “ಪತ್ನಿಯ ಸಂರಕ್ಷಣೆಯನ್ನು ಹೇಗೆ ಮಾಡುವುದು?” ಎಂದು ಚಿಂತಿಸಿದನು.

13040021a ರಕ್ಷಾವಿಧಾನಂ ಮನಸಾ ಸ ವಿಚಿಂತ್ಯ ಮಹಾತಪಾಃ|

13040021c ಆಹೂಯ ದಯಿತಂ ಶಿಷ್ಯಂ ವಿಪುಲಂ ಪ್ರಾಹ ಭಾರ್ಗವಮ್||

ರಕ್ಷಣಾವಿಧಾನವನ್ನು ಮನಸ್ಸಿನಲ್ಲಿಯೇ ಯೋಚಿಸಿ ಆ ಮಹಾತಪಸ್ವಿಯು ತನ್ನ ಪ್ರಿಯ ಶಿಷ್ಯ ಭಾರ್ಗವ ವಿಪುಲನನ್ನು ಕರೆದು ಹೇಳಿದನು:

13040022a ಯಜ್ಞಕಾರೋ ಗಮಿಷ್ಯಾಮಿ ರುಚಿಂ ಚೇಮಾಂ ಸುರೇಶ್ವರಃ|

13040022c ಪುತ್ರ ಪ್ರಾರ್ಥಯತೇ ನಿತ್ಯಂ ತಾಂ ರಕ್ಷಸ್ವ ಯಥಾಬಲಮ್||

“ಪುತ್ರ! ಯಜ್ಞಮಾಡಲು ಹೋಗುತ್ತಿದ್ದೇನೆ. ಇವಳನ್ನು ಯಥಾಬಲವಾಗಿ ರಕ್ಷಿಸು. ಏಕೆಂದರೆ ಇವಳಲ್ಲಿ ರುಚಿಯನ್ನಿಟ್ಟಿರುವ ಸುರೇಶ್ವರನು ಇವಳನ್ನು ನಿತ್ಯವೂ ಕಾಡುತ್ತಿರುತ್ತಾನೆ.

13040023a ಅಪ್ರಮತ್ತೇನ ತೇ ಭಾವ್ಯಂ ಸದಾ ಪ್ರತಿ ಪುರಂದರಮ್|

13040023c ಸ ಹಿ ರೂಪಾಣಿ ಕುರುತೇ ವಿವಿಧಾನಿ ಭೃಗೂದ್ವಹ||

ಭೃಗೂದ್ವಹ! ಪುರಂದರನ ಕುರಿತು ಸದಾ ಜಾಗರೂಕತೆಯಿಂದ ಇರಬೇಕು. ಏಕೆಂದರೆ ಅವನು ವಿವಿಧ ರೂಪಗಳನ್ನು ಧರಿಸಬಲ್ಲನು.”

13040024a ಇತ್ಯುಕ್ತೋ ವಿಪುಲಸ್ತೇನ ತಪಸ್ವೀ ನಿಯತೇಂದ್ರಿಯಃ|

13040024c ಸದೈವೋಗ್ರತಪಾ ರಾಜನ್ನಗ್ನ್ಯರ್ಕಸದೃಶದ್ಯುತಿಃ||

13040025a ಧರ್ಮಜ್ಞಃ ಸತ್ಯವಾದೀ ಚ ತಥೇತಿ ಪ್ರತ್ಯಭಾಷತ|

13040025c ಪುನಶ್ಚೇದಂ ಮಹಾರಾಜ ಪಪ್ರಚ್ಚ ಪ್ರಥಿತಂ ಗುರುಮ್||

ರಾಜನ್! ಇದನ್ನು ಕೇಳಿದ ತಪಸ್ವೀ ನಿಯತೇಂದ್ರಿಯ, ಉಗ್ರತಪಸ್ಸಿನಿಂದ ಸದೈವ ಅಗ್ನಿ-ಸೂರ್ಯರಂತೆ ಬೆಳಗುತ್ತಿದ್ದ ಧರ್ಮಜ್ಞ ಸತ್ಯವಾದೀ ವಿಪುಲನು ಹಾಗೆಯೇ ಆಗಲೆಂದು ಉತ್ತರಿಸಿದನು. ಮಹಾರಾಜ! ಹೊರಟಿದ್ದ ಗುರುವಿನಲ್ಲಿ ಅವನು ಪುನಃ ಇದನ್ನು ಕೇಳಿದನು:

13040026a ಕಾನಿ ರೂಪಾಣಿ ಶಕ್ರಸ್ಯ ಭವಂತ್ಯಾಗಚ್ಚತೋ ಮುನೇ|

13040026c ವಪುಸ್ತೇಜಶ್ಚ ಕೀದೃಗ್ವೈ ತನ್ಮೇ ವ್ಯಾಖ್ಯಾತುಮರ್ಹಸಿ||

“ಮುನೇ! ಆಗಮಿಸುವ ಇಂದ್ರನಿಗೆ ಯಾವ ರೂಪಗಳಿರುತ್ತವೆ? ಮತ್ತು ಆಗ ಅವನ ಮುಖವು ಹೇಗೆ ಹೆಚ್ಚಿನ ತೇಜಸ್ಸುಳ್ಳದ್ದಾಗುತ್ತದೆ? ಇದನ್ನು ನನಗೆ ಹೇಳಬೇಕು.”

13040027a ತತಃ ಸ ಭಗವಾಂಸ್ತಸ್ಮೈ ವಿಪುಲಾಯ ಮಹಾತ್ಮನೇ|

13040027c ಆಚಚಕ್ಷೇ ಯಥಾತತ್ತ್ವಂ ಮಾಯಾಂ ಶಕ್ರಸ್ಯ ಭಾರತ||

ಭಾರತ! ಆಗ ಆ ಭಗವಾನನು ಮಹಾತ್ಮ ವಿಪುಲನಿಗೆ ಶಕ್ರನ ಮಾಯೆಗಳನ್ನು ಇದ್ದಹಾಗೆ ಹೇಳಿದನು.

13040028a ಬಹುಮಾಯಃ ಸ ವಿಪ್ರರ್ಷೇ ಬಲಹಾ ಪಾಕಶಾಸನಃ|

13040028c ತಾಂಸ್ತಾನ್ವಿಕುರುತೇ ಭಾವಾನ್ಬಹೂನಥ ಮುಹುರ್ಮುಹುಃ||

“ವಿಪ್ರರ್ಷೇ! ಬಲಹಾ ಪಾಕಶಾಸನನಲ್ಲಿ ಅನೇಕ ಮಾಯೆಗಳಿವೆ. ಅವನು ಮತ್ತೆ ಮತ್ತೆ ಅನೇಕ ರೂಪಗಳನ್ನು ಧರಿಸುತ್ತಿರುತ್ತಾನೆ.

13040029a ಕಿರೀಟೀ ವಜ್ರಭೃದ್ಧನ್ವೀ ಮುಕುಟೀ ಬದ್ಧಕುಂಡಲಃ|

13040029c ಭವತ್ಯಥ ಮುಹೂರ್ತೇನ ಚಂಡಾಲಸಮದರ್ಶನಃ||

ಕಿರೀಟೀ, ವಜ್ರಧಾರಿ, ಧನ್ವೀ, ಮುಕುಟೀ ಮತ್ತು ಬದ್ಧಕುಂಡಲನಾಗಿದ್ದವನು ಮುಹೂರ್ತದಲ್ಲಿಯೇ ಚಂಡಾಲನಂತೆ ಕಾಣುತ್ತಾನೆ.

13040030a ಶಿಖೀ ಜಟೀ ಚೀರವಾಸಾಃ ಪುನರ್ಭವತಿ ಪುತ್ರಕ|

13040030c ಬೃಹಚ್ಚರೀರಶ್ಚ ಪುನಃ ಪೀವರೋಽಥ ಪುನಃ ಕೃಶಃ||

ಪುತ್ರಕ! ಪುನಃ ಶಿಖೀ, ಜಟೀ ಮತ್ತು ಚೀರವಾಸಸನಾಗುತ್ತಾನೆ. ದೊಡ್ಡ ಕಾಯದವನಾಗಿದ್ದವನು ಪುನಃ ದೃಢಕಾಯದವನಾಗಿ ಮತ್ತು ಪುನಃ ಕೃಶಶರೀರದವನಾಗಿ ಕಾಣಿಸಿಕೊಳ್ಳುತ್ತಾನೆ.

13040031a ಗೌರಂ ಶ್ಯಾಮಂ ಚ ಕೃಷ್ಣಂ ಚ ವರ್ಣಂ ವಿಕುರುತೇ ಪುನಃ|

13040031c ವಿರೂಪೋ ರೂಪವಾಂಶ್ಚೈವ ಯುವಾ ವೃದ್ಧಸ್ತಥೈವ ಚ||

ಗೌರವರ್ಣದವನಾಗಿದ್ದವನು ಪುನಃ ಶ್ಯಾಮಲ ವರ್ಣದವನನ್ನಾಗಿಯೂ ಕೃಷ್ಣವರ್ಣದವನನ್ನಾಗಿಯೂ ಮಾಡಿಕೊಳ್ಳುತ್ತಾನೆ. ವಿರೂಪನಾಗಿಯೂ ರೂಪವಂತನಾಗಿಯೂ ಯುವಕನಾಗಿಯೂ ವೃದ್ಧನಾಗಿಯೂ ಮಾಡಿಕೊಳ್ಳುತ್ತಾನೆ.

13040032a ಪ್ರಾಜ್ಞೋ ಜಡಶ್ಚ ಮೂಕಶ್ಚ ಹ್ರಸ್ವೋ ದೀರ್ಘಸ್ತಥೈವ ಚ|

13040032c ಬ್ರಾಹ್ಮಣಃ ಕ್ಷತ್ರಿಯಶ್ಚೈವ ವೈಶ್ಯಃ ಶೂದ್ರಸ್ತಥೈವ ಚ|

13040032e ಪ್ರತಿಲೋಮಾನುಲೋಮಶ್ಚ ಭವತ್ಯಥ ಶತಕ್ರತುಃ||

ಶತಕ್ರತುವು ಪ್ರಾಜ್ಞ, ಜಡ, ಮೂಕ, ಗಿಡ್ಡ, ಮತ್ತು ಎತ್ತರನಾಗಿರುವವನಾಗಬಲ್ಲ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರನಾಗಬಲ್ಲ. ಪ್ರತಿಲೋಮನೂ ಅನುಲೋಮನೂ ಆಗಬಲ್ಲನು.

13040033a ಶುಕವಾಯಸರೂಪೀ ಚ ಹಂಸಕೋಕಿಲರೂಪವಾನ್|

13040033c ಸಿಂಹವ್ಯಾಘ್ರಗಜಾನಾಂ ಚ ರೂಪಂ ಧಾರಯತೇ ಪುನಃ||

ಗಿಳಿ-ಹದ್ದಿನ ರೂಪಿಯಾಗಬಲ್ಲ. ಹಂಸ-ಕೋಕಿಲೆಗಳ ರೂಪವನ್ನೂ ಧರಿಸಬಲ್ಲ. ಪುನಃ ಸಿಂಹ-ಹುಲಿ-ಆನೆಗಳ ರೂಪವನ್ನೂ ಧರಿಸಬಲ್ಲ.

13040034a ದೈವಂ ದೈತ್ಯಮಥೋ ರಾಜ್ಞಾಂ ವಪುರ್ಧಾರಯತೇಽಪಿ ಚ|

13040034c ಸುಕೃಶೋ ವಾಯುಭಗ್ನಾಂಗಃ ಶಕುನಿರ್ವಿಕೃತಸ್ತಥಾ||

ದೇವತೆಯ, ದೈತ್ಯನ, ರಾಜನ ಮತ್ತು ಹಾಗೆಯೇ ದಷ್ಟಪುಷ್ಟನ, ವಾಯುದೋಷದಿಂದ ಭಗ್ನನಾದವನ ಮತ್ತು ವಿಕೃತ ಪಕ್ಷಿಯ ರೂಪವನ್ನು ಧರಿಸಬಲ್ಲನು.

13040035a ಚತುಷ್ಪಾದ್ಬಹುರೂಪಶ್ಚ ಪುನರ್ಭವತಿ ಬಾಲಿಶಃ|

13040035c ಮಕ್ಷಿಕಾಮಶಕಾದೀನಾಂ ವಪುರ್ಧಾರಯತೇಽಪಿ ಚ||

ನಾಲ್ಕು ಕಾಲುಗಳ ಪ್ರಾಣಿಯೂ, ಬಹುರೂಪಿಯೂ ಮತ್ತೆ ಪುನಃ ಬಾಲಿಷನೂ ಆಗುತ್ತಾನೆ. ಅವನು ನೊಣ ಮತ್ತು ಸೊಳ್ಳೆಗಳೇ ಮೊದಲಾದವುಗಳ ರೂಪವನ್ನೂ ಧರಿಸುತ್ತಾನೆ.

13040036a ನ ಶಕ್ಯಮಸ್ಯ ಗ್ರಹಣಂ ಕರ್ತುಂ ವಿಪುಲ ಕೇನ ಚಿತ್|

13040036c ಅಪಿ ವಿಶ್ವಕೃತಾ ತಾತ ಯೇನ ಸೃಷ್ಟಮಿದಂ ಜಗತ್||

ವಿಪುಲ! ಅಯ್ಯಾ! ಅವನನ್ನು ಹಿಡಿಯಲು ಯಾರಿಗೂ ಶಕ್ಯವಿಲ್ಲ. ಈ ಜಗತ್ತನ್ನು ಸೃಷ್ಟಿಸಿದ ವಿಶ್ವಕೃತನಿಗೂ ಶಕ್ಯವಿಲ್ಲ.

13040037a ಪುನರಂತರ್ಹಿತಃ ಶಕ್ರೋ ದೃಶ್ಯತೇ ಜ್ಞಾನಚಕ್ಷುಷಾ|

13040037c ವಾಯುಭೂತಶ್ಚ ಸ ಪುನರ್ದೇವರಾಜೋ ಭವತ್ಯುತ||

ಪುನಃ ಅಂತರ್ಹಿತನಾದ ಶಕ್ರನು ಜ್ಞಾನದ ಕಣ್ಣುಗಳಿಗೆ ಕಾಣುತ್ತಾನೆ. ಪುನಃ ಅವನು ವಾಯುಭೂತನಾಗಿ ಪುನಃ ದೇವರಾಜನಾಗುತ್ತಾನೆ.

13040038a ಏವಂ ರೂಪಾಣಿ ಸತತಂ ಕುರುತೇ ಪಾಕಶಾಸನಃ|

13040038c ತಸ್ಮಾದ್ವಿಪುಲ ಯತ್ನೇನ ರಕ್ಷೇಮಾಂ ತನುಮಧ್ಯಮಾಮ್||

13040039a ಯಥಾ ರುಚಿಂ ನಾವಲಿಹೇದ್ದೇವೇಂದ್ರೋ ಭೃಗುಸತ್ತಮ|

13040039c ಕ್ರತಾವುಪಹಿತಂ ನ್ಯಸ್ತಂ ಹವಿಃ ಶ್ವೇವ ದುರಾತ್ಮವಾನ್||

ವಿಪುಲ! ಭೃಗುಸತ್ತಮ! ಪಾಕಶಾಸನನು ಸತತವೂ ಈ ರೂಪಗಳನ್ನು ಧರಿಸಿಕೊಳ್ಳುತ್ತಿರುತ್ತಾನೆ. ಆದುದರಿಂದ ಯಜ್ಞದ ಹವಿಸ್ಸನ್ನು ನೆಕ್ಕಲು ಕಾತರ ನಾಯಿಯಂತಿರುವ ಆ ದುರಾತ್ಮ ದೇವೇಂದ್ರನಿಂದ ಈ ತನುಮಧ್ಯಮೆ ರುಚಿಯನ್ನು ಪ್ರಯತ್ನಪಟ್ಟು ರಕ್ಷಿಸಬೇಕು.”

13040040a ಏವಮಾಖ್ಯಾಯ ಸ ಮುನಿರ್ಯಜ್ಞಕಾರೋಽಗಮತ್ತದಾ|

13040040c ದೇವಶರ್ಮಾ ಮಹಾಭಾಗಸ್ತತೋ ಭರತಸತ್ತಮ||

ಭರತಸತ್ತಮ! ಹೀಗೆ ಹೇಳಿ ಮಹಾಭಾಗ ಮುನಿ ದೇವಶರ್ಮನು ಯಜ್ಞವನ್ನು ಮಾಡಲು ಹೊರಟುಹೋದನು.

13040041a ವಿಪುಲಸ್ತು ವಚಃ ಶ್ರುತ್ವಾ ಗುರೋಶ್ಚಿಂತಾಪರೋಽಭವತ್|

13040041c ರಕ್ಷಾಂ ಚ ಪರಮಾಂ ಚಕ್ರೇ ದೇವರಾಜಾನ್ಮಹಾಬಲಾತ್||

ಗುರುವಿನ ಮಾತನ್ನು ಕೇಳಿದ ವಿಪುಲನಾದರೋ ಅತ್ಯಂತ ಚಿಂತಾಪರನಾದನು. ಮಹಾಬಲವನ್ನುಪಯೋಗಿಸಿ ದೇವರಾಜನಿಂದ ಅವಳಿಗೆ ಪರಮ ರಕ್ಷಣೆಯನ್ನು ಮಾಡಿದನು.

13040042a ಕಿಂ ನು ಶಕ್ಯಂ ಮಯಾ ಕರ್ತುಂ ಗುರುದಾರಾಭಿರಕ್ಷಣೇ|

13040042c ಮಾಯಾವೀ ಹಿ ಸುರೇಂದ್ರೋಽಸೌ ದುರ್ಧರ್ಷಶ್ಚಾಪಿ ವೀರ್ಯವಾನ್||

“ಗುರುಪತ್ನಿಯನ್ನು ರಕ್ಷಿಸಲು ನಾನು ಹೇಗೆ ಶಕ್ಯನಾಗುತ್ತೇನೆ. ಏಕೆಂದರೆ ಸುರೇಂದ್ರನು ಮಾಯಾವಿಯಲ್ಲದೇ ದುರ್ಧರ್ಷನೂ ವೀರ್ಯವಾನನೂ ಆಗಿದ್ದಾನೆ.

13040043a ನಾಪಿಧಾಯಾಶ್ರಮಂ ಶಕ್ಯೋ ರಕ್ಷಿತುಂ ಪಾಕಶಾಸನಃ|

13040043c ಉಟಜಂ ವಾ ತಥಾ ಹ್ಯಸ್ಯ ನಾನಾವಿಧಸರೂಪತಾ||

ಬಾಗಿಲನ್ನು ಮುಚ್ಚಿ ಪಾಕಶಾಸನನಿಂದ ಈ ಆಶ್ರಮವನ್ನು ರಕ್ಷಿಸಲು ಶಕ್ಯವಿಲ್ಲ. ಅವನು ನಾನಾ ರೂಪಗಳನ್ನು ಧರಿಸಿ ಬರಬಲ್ಲನು.

13040044a ವಾಯುರೂಪೇಣ ವಾ ಶಕ್ರೋ ಗುರುಪತ್ನೀಂ ಪ್ರಧರ್ಷಯೇತ್|

13040044c ತಸ್ಮಾದಿಮಾಂ ಸಂಪ್ರವಿಶ್ಯ ರುಚಿಂ ಸ್ಥಾಸ್ಯೇಽಹಮದ್ಯ ವೈ||

ಅಥವಾ ಶಕ್ರನು ವಾಯುರೂಪದಲ್ಲಿ ಗುರುಪತ್ನಿಯನ್ನು ದೂಷಿಸಬಲ್ಲನು. ಆದುದರಿಂದ ಇಂದು ನಾನು ರುಚಿಯನ್ನು ಪ್ರವೇಶಿಸಿ ಅವಳಲ್ಲಿಯೇ ವಾಸಿಸುತ್ತೇನೆ.

13040045a ಅಥ ವಾ ಪೌರುಷೇಣೇಯಮಶಕ್ಯಾ ರಕ್ಷಿತುಂ ಮಯಾ|

13040045c ಬಹುರೂಪೋ ಹಿ ಭಗವಾನ್ಚ್ರೂಯತೇ ಹರಿವಾಹನಃ||

ಅಥವಾ ಪೌರುಷದಿಂದ ನಾನು ಇವಳನ್ನು ರಕ್ಷಿಸಲು ಶಕ್ಯನಿಲ್ಲ. ಏಕೆಂದರೆ ಭಗವಾನ್ ಹರಿವಾಹನನು ಬಹುರೂಪಿಯೆಂದು ಕೇಳಿದ್ದೇವೆ.

13040046a ಸೋಽಹಂ ಯೋಗಬಲಾದೇನಾಂ ರಕ್ಷಿಷ್ಯೇ ಪಾಕಶಾಸನಾತ್|

13040046c ಗಾತ್ರಾಣಿ ಗಾತ್ರೈರಸ್ಯಾಹಂ ಸಂಪ್ರವೇಕ್ಷ್ಯೇಽಭಿರಕ್ಷಿತುಮ್||

ಆದುದರಿಂದ ನಾನು ಯೋಗಬಲದಿಂದಲೇ ಇವಳನ್ನು ಪಾಕಶಾಸನನಿಂದ ರಕ್ಷಿಸಬಲ್ಲೆನು. ಅವಳನ್ನು ರಕ್ಷಿಸಲು ನಾನು ನನ್ನ ಅಂಗಗಳನ್ನು ಅವಳ ಅಂಗಗಳೊಂದಿಗೆ ಒಂದಾಗಿಸುತ್ತೇನೆ.

13040047a ಯದ್ಯುಚ್ಚಿಷ್ಟಾಮಿಮಾಂ ಪತ್ನೀಂ ರುಚಿಂ ಪಶ್ಯೇತ ಮೇ ಗುರುಃ|

13040047c ಶಪ್ಸ್ಯತ್ಯಸಂಶಯಂ ಕೋಪಾದ್ದಿವ್ಯಜ್ಞಾನೋ ಮಹಾತಪಾಃ||

ಪತ್ನಿ ರುಚಿಯು ಉಚ್ಚಿಷ್ಟಳಾದುದನ್ನು ನನ್ನ ಗುರುವು ಕಂಡರೆ ನಿಸ್ಸಂಶಯವಾಗಿ ಆ ದಿವ್ಯಜ್ಞಾನೀ ಮಹಾತಪಸ್ವಿಯು ಕೋಪದಿಂದ ನನ್ನನ್ನು ಶಪಿಸುತ್ತಾನೆ.

13040048a ನ ಚೇಯಂ ರಕ್ಷಿತುಂ ಶಕ್ಯಾ ಯಥಾನ್ಯಾ ಪ್ರಮದಾ ನೃಭಿಃ|

13040048c ಮಾಯಾವೀ ಹಿ ಸುರೇಂದ್ರೋಽಸಾವಹೋ ಪ್ರಾಪ್ತೋಽಸ್ಮಿ ಸಂಶಯಮ್||

ಇವಳನ್ನು ಅನ್ಯ ನರರಿಂದಲೂ ರಕ್ಷಿಸಲು ನಾನು ಶಕ್ಯನಾಗಿಲ್ಲ. ಏಕೆಂದರೆ ಸುರೇಂದ್ರನು ಮಾಯಾವಿಯು! ಅಯ್ಯೋ! ಎಂಥಹ ಸಂಶಯ ಸ್ಥಿತಿಗೆ ನಾನು ಬಂದುಬಿಟ್ಟೆ!

13040049a ಅವಶ್ಯಕರಣೀಯಂ ಹಿ ಗುರೋರಿಹ ಹಿ ಶಾಸನಮ್|

13040049c ಯದಿ ತ್ವೇತದಹಂ ಕುರ್ಯಾಮಾಶ್ಚರ್ಯಂ ಸ್ಯಾತ್ಕೃತಂ ಮಯಾ||

ಗುರುವಿನ ಶಾಶನದಂತೆ ನಾನು ಅವಶ್ಯವಾಗಿ ಮಾಡಬೇಕಾಗಿದೆ. ಒಂದು ವೇಳೆ ಇದನ್ನು ಮಾಡಿದರೆ ನಾನು ಒಂದು ಆಶ್ಚರ್ಯಕರ ಕಾರ್ಯವನ್ನು ಮಾಡಿದಂತೆ!

13040050a ಯೋಗೇನಾನುಪ್ರವಿಶ್ಯೇಹ ಗುರುಪತ್ನ್ಯಾಃ ಕಲೇವರಮ್|

13040050c ನಿರ್ಮುಕ್ತಸ್ಯ ರಜೋರೂಪಾನ್ನಾಪರಾಧೋ ಭವೇನ್ಮಮ||

ಯೋಗದಿಂದ ನಾನು ಗುರುಪತ್ನಿಯ ಶರೀರವನ್ನು ಪ್ರವೇಶಿಸುತ್ತೇನೆ. ರಜೋರೂಪದಿಂದ ನಿರ್ಮುಕ್ತನಾದ ನನ್ನಿಂದ ಅಪರಾಧವುಂಟಾಗುವುದಿಲ್ಲ.

13040051a ಯಥಾ ಹಿ ಶೂನ್ಯಾಂ ಪಥಿಕಃ ಸಭಾಮಧ್ಯಾವಸೇತ್ಪಥಿ|

13040051c ತಥಾದ್ಯಾವಾಸಯಿಷ್ಯಾಮಿ ಗುರುಪತ್ನ್ಯಾಃ ಕಲೇವರಮ್||

ದಾರಿಯಲ್ಲಿರುವ ಶೂನ್ಯ ಸಭಾಮಧ್ಯದಲ್ಲಿ ಪಥಿಕನು ವಾಸಿಸುವಂತೆ ನಾನು ಗುರುಪತ್ನಿಯ ಈ ಶರೀರದಲ್ಲಿ ವಾಸಿಸುತ್ತೇನೆ.

13040052a ಅಸಕ್ತಃ ಪದ್ಮಪತ್ರಸ್ಥೋ ಜಲಬಿಂದುರ್ಯಥಾ ಚಲಃ|

13040052c ಏವಮೇವ ಶರೀರೇಽಸ್ಯಾ ನಿವತ್ಸ್ಯಾಮಿ ಸಮಾಹಿತಃ||

ಪದ್ಮಪತ್ರದ ಮೇಲಿರುವ ಜಲಬಿಂದುವು ಅದಕ್ಕೆ ಹೇಗೆ ಅಂಟಿಕೊಳ್ಳದೇ ಇರುವುದೋ ಹಾಗೆಯೇ ನಾನು ಇವಳ ಶರೀರದಲ್ಲಿ ಸಮಾಹಿತನಾಗಿ ವಾಸಿಸಿಕೊಂಡಿರುತ್ತೇನೆ.”

13040053a ಇತ್ಯೇವಂ ಧರ್ಮಮಾಲೋಕ್ಯ ವೇದವೇದಾಂಶ್ಚ ಸರ್ವಶಃ|

13040053c ತಪಶ್ಚ ವಿಪುಲಂ ದೃಷ್ಟ್ವಾ ಗುರೋರಾತ್ಮನ ಏವ ಚ||

13040054a ಇತಿ ನಿಶ್ಚಿತ್ಯ ಮನಸಾ ರಕ್ಷಾಂ ಪ್ರತಿ ಸ ಭಾರ್ಗವಃ|

13040054c ಆತಿಷ್ಠತ್ಪರಮಂ ಯತ್ನಂ ಯಥಾ ತಚ್ಚೃಣು ಪಾರ್ಥಿವ||

ಈ ರೀತಿಯಲ್ಲಿ ಧರ್ಮವನ್ನು ಅವಲೋಕಿಸಿ, ಸಂಪೂರ್ಣ ವೇದಶಾಸ್ತ್ರಗಳನ್ನು ಅವಲೋಕಿಸಿ, ಗುರುವಿನ ಮತ್ತು ತನ್ನ ವಿಪುಲ ತಪಸ್ಸನ್ನು ನೋಡಿ ಆ ಭಾರ್ಗವನು ಅವಳ ರಕ್ಷಣೆಯ ಕುರಿತು ನಿಶ್ಚಯಿಸಿ ಪರಮ ಯತ್ನಮಾಡುತ್ತಾ ನಿಂತನು. ಪಾರ್ಥಿವ! ಅದರ ಕುರಿತು ಕೇಳು.

13040055a ಗುರುಪತ್ನೀಮುಪಾಸೀನೋ ವಿಪುಲಃ ಸ ಮಹಾತಪಾಃ|

13040055c ಉಪಾಸೀನಾಮನಿಂದ್ಯಾಂಗೀಂ ಕಥಾಭಿಃ ಸಮಲೋಭಯತ್||

ಆ ಮಹಾತಪಸ್ವೀ ವಿಪುಲನು ಕುಳಿತಿದ್ದ ಗುರುಪತ್ನಿಯ ಹತ್ತಿರ ಕುಳಿತುಕೊಂಡು ಮಾತುಕಥೆಗಳಿಂದ ಆ ಅನವದ್ಯಾಂಗಿಯನ್ನು ಲೋಭಿಸತೊಡಗಿದನು.

13040056a ನೇತ್ರಾಭ್ಯಾಂ ನೇತ್ರಯೋರಸ್ಯಾ ರಶ್ಮೀನ್ಸಂಯೋಜ್ಯ ರಶ್ಮಿಭಿಃ|

13040056c ವಿವೇಶ ವಿಪುಲಃ ಕಾಯಮಾಕಾಶಂ ಪವನೋ ಯಥಾ||

ಅವಳ ಕಣ್ಣುಗಳಲ್ಲಿ ತನ್ನ ಕಣ್ಣುಗಳನ್ನಿಟ್ಟು ಅವಳ ಕಣ್ಣುಗಳ ಕಿರಣಗಳೊಂದಿಗೆ ತನ್ನ ಕಣ್ಣುಗಳ ಕಿರಣಗಳನ್ನು ಜೋಡಿಸಿ ಅದೇ ಮಾರ್ಗವಾಗಿ ವಾಯುವು ಆಕಾಶವನ್ನು ಹೇಗೋ ಹಾಗೆ ವಿಪುಲನು ಅವಳನ್ನು ಪ್ರವೇಶಿಸಿದನು.

13040057a ಲಕ್ಷಣಂ ಲಕ್ಷಣೇನೈವ ವದನಂ ವದನೇನ ಚ|

13040057c ಅವಿಚೇಷ್ಟನ್ನತಿಷ್ಠದ್ವೈ ಚಾಯೇವಾಂತರ್ಗತೋ ಮುನಿಃ||

ಯಾವ ಚೇಷ್ಟೆಗಳನ್ನೂ ಮಾಡದೇ ಆ ಮುನಿಯು ಲಕ್ಷಣದಿಂದ ಲಕ್ಷಣವನ್ನೂ ವದನದಿಂದ ವದನವನ್ನೂ ಪ್ರವೇಶಿಸಿ ಅಂತರ್ಗತನಾಗಿಯೇ ಇದ್ದನು.

13040058a ತತೋ ವಿಷ್ಟಭ್ಯ ವಿಪುಲೋ ಗುರುಪತ್ನ್ಯಾಃ ಕಲೇವರಮ್|

13040058c ಉವಾಸ ರಕ್ಷಣೇ ಯುಕ್ತೋ ನ ಚ ಸಾ ತಮಬುಧ್ಯತ||

ಆಗ ವಿಪುಲನು ಗುರುಪತ್ನಿಯ ಶರೀರವನ್ನು ಪ್ರವೇಶಿಸಿ ಅವಳ ರಕ್ಷಣೆಯಲ್ಲಿ ಯುಕ್ತನಾಗಿ ವಾಸಿಸತೊಡಗಿದನು. ಆದರೆ ಇದು ಅವಳಿಗೆ ತಿಳಿಯಲಿಲ್ಲ.

13040059a ಯಂ ಕಾಲಂ ನಾಗತೋ ರಾಜನ್ಗುರುಸ್ತಸ್ಯ ಮಹಾತ್ಮನಃ|

13040059c ಕ್ರತುಂ ಸಮಾಪ್ಯ ಸ್ವಗೃಹಂ ತಂ ಕಾಲಂ ಸೋಽಭ್ಯರಕ್ಷತ||

ರಾಜನ್! ಎಲ್ಲಿಯವರೆಗೆ ಮಹಾತ್ಮ ಗುರುವು ಯಜ್ಞವನ್ನು ಸಮಾಪ್ತಗೊಳಿಸಿ ಸ್ವಗೃಹಕ್ಕೆ ಹಿಂದಿರುಗಿ ಬರಲಿಲ್ಲವೋ ಅಲ್ಲಿಯವರೆಗೆ  ಅವನು ಅವಳನ್ನು ರಕ್ಷಿಸುತ್ತಿದ್ದನು.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ವಿಪುಲೋಪಾಖ್ಯಾನೇ ಚತ್ವಾರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ವಿಪುಲೋಪಾಖ್ಯಾನ ಎನ್ನುವ ನಲ್ವತ್ತನೇ ಅಧ್ಯಾಯವು.

Related image

[1] ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಳ್ಳಲು ಅಸಮರ್ಥರು

[2] ಶಾಸ್ತ್ರಜ್ಞಾನರಹಿತರು

Comments are closed.