Anushasana Parva: Chapter 41

ಅನುಶಾಸನ ಪರ್ವ: ದಾನಧರ್ಮ ಪರ್ವ

೪೧

ರುಚಿಯನ್ನು ಬಯಸಿ ಸುಂದರ ರೂಪವನ್ನು ತಳೆದು ಬಂದ ಇಂದ್ರನನ್ನು ವಿಪುಲನು ಲಜ್ಜಿತನನ್ನಾಗಿ ಮಾಡಿ ಕಳುಹಿಸಿದುದು (೧-೨೭). ದೇವಶರ್ಮನಿಂದ ವರಗಳನ್ನು ಪಡೆದು ವಿಪುಲನು ತಪಸ್ಸನ್ನಾಚರಿಸಿದುದು (೨೮-೩೫).

13041001 ಭೀಷ್ಮ ಉವಾಚ|

13041001a ತತಃ ಕದಾ ಚಿದ್ದೇವೇಂದ್ರೋ ದಿವ್ಯರೂಪವಪುರ್ಧರಃ|

13041001c ಇದಮಂತರಮಿತ್ಯೇವಂ ತತೋಽಭ್ಯಾಗಾದಥಾಶ್ರಮಮ್||

ಭೀಷ್ಮನು ಹೇಳಿದನು: “ಅನಂತರ ಒಮ್ಮೆ ಇದೇ ಅವಕಾಶವೆಂದು ದೇವೇಂದ್ರನು ದಿವ್ಯರೂಪದ ವೇಷವನ್ನು ಧರಿಸಿ ಆಶ್ರಮಕ್ಕೆ ಆಗಮಿಸಿದನು.

13041002a ರೂಪಮಪ್ರತಿಮಂ ಕೃತ್ವಾ ಲೋಭನೀಯಂ ಜನಾಧಿಪ|

13041002c ದರ್ಶನೀಯತಮೋ ಭೂತ್ವಾ ಪ್ರವಿವೇಶ ತಮಾಶ್ರಮಮ್||

ಜನಾಧಿಪ! ಅಪ್ರತಿಮ ರೂಪವನ್ನು ಮಾಡಿಕೊಂಡು ಅತ್ಯಂತ ಸುಂದರನಾಗಿ ಲೋಭಗೊಳಿಸುತ್ತಾ ಆ ಆಶ್ರಮವನ್ನು ಪ್ರವೇಶಿಸಿದನು.

13041003a ಸ ದದರ್ಶ ತಮಾಸೀನಂ ವಿಪುಲಸ್ಯ ಕಲೇವರಮ್|

13041003c ನಿಶ್ಚೇಷ್ಟಂ ಸ್ತಬ್ಧನಯನಂ ಯಥಾಲೇಖ್ಯಗತಂ ತಥಾ||

13041004a ರುಚಿಂ ಚ ರುಚಿರಾಪಾಂಗೀಂ ಪೀನಶ್ರೋಣಿಪಯೋಧರಾಮ್|

13041004c ಪದ್ಮಪತ್ರವಿಶಾಲಾಕ್ಷೀಂ ಸಂಪೂರ್ಣೇಂದುನಿಭಾನನಾಮ್||

ಅಲ್ಲಿ ಅವನು ಪಟದಲ್ಲಿರುವ ಚಿತ್ರದಂತೆ ನಿಶ್ಚೇಷ್ಟವಾಗಿದ್ದ ಮತ್ತು ಸ್ತಬ್ಧನಯನವಾಗಿದ್ದ ವಿಪುಲನ ಶರೀರವನ್ನು ನೋಡಿದನು. ಹಾಗೆಯೇ ಸುಂದರಾಂಗೀ, ಪೀನಶ್ರೋಣಿಪಯೋಧರೆ, ಪದ್ಮಪತ್ರವಿಶಾಲಾಕ್ಷಿ, ಪೂರ್ಣಚಂದ್ರನಂಥಹ ಮುಖವಿದ್ದ ರುಚಿಯನ್ನೂ ನೋಡಿದನು.

13041005a ಸಾ ತಮಾಲೋಕ್ಯ ಸಹಸಾ ಪ್ರತ್ಯುತ್ಥಾತುಮಿಯೇಷ ಹ|

13041005c ರೂಪೇಣ ವಿಸ್ಮಿತಾ ಕೋಽಸೀತ್ಯಥ ವಕ್ತುಮಿಹೇಚ್ಚತೀ||

ಒಮ್ಮೆಲೇ ಅವನನ್ನು ನೋಡಿ ಅವನ ರೂಪದಿಂದ ವಿಸ್ಮಿತಳಾದ ಅವಳು ಮೇಲೆದ್ದು ನಿಂತುಕೊಳ್ಳಲು ಮತ್ತು ಯಾರೆಂದು ಕೇಳಲು ಇಚ್ಛಿಸಿದಳು.

13041006a ಉತ್ಥಾತುಕಾಮಾಪಿ ಸತೀ ವ್ಯತಿಷ್ಠದ್ವಿಪುಲೇನ ಸಾ|

13041006c ನಿಗೃಹೀತಾ ಮನುಷ್ಯೇಂದ್ರ ನ ಶಶಾಕ ವಿಚೇಷ್ಟಿತುಮ್||

ಮೇಲೇಳಲು ಬಯಸಿದಂತೆ ಆ ಸತಿಯನ್ನು ವಿಪುಲನು ಹಿಡಿದುಕೊಂಡನು. ಮನುಷ್ಯೇಂದ್ರ! ಅವನ ಹಿಡಿತದಲ್ಲಿದ್ದ ಅವಳಿಗೆ ಹಂದಾಡಲೂ ಆಗಲಿಲ್ಲ.

13041007a ತಾಮಾಬಭಾಷೇ ದೇವೇಂದ್ರಃ ಸಾಮ್ನಾ ಪರಮವಲ್ಗುನಾ|

13041007c ತ್ವದರ್ಥಮಾಗತಂ ವಿದ್ಧಿ ದೇವೇಂದ್ರಂ ಮಾಂ ಶುಚಿಸ್ಮಿತೇ||

ಆಗ ದೇವೇಂದ್ರನು ಪರಮ ಮಧುರವಾಣಿಯಿಂದ ತಿಳಿಸುತ್ತಾ ಹೇಳಿದನು: “ಶುಚಿಸ್ಮಿತೇ! ನಿನಗಾಗಿ ಬಂದಿರುವ ದೇವೇಂದ್ರನು ನಾನೆಂದು ತಿಳಿ.

13041008a ಕ್ಲಿಶ್ಯಮಾನಮನಂಗೇನ ತ್ವತ್ಸಂಕಲ್ಪೋದ್ಭವೇನ ವೈ|

13041008c ತತ್ಪರ್ಯಾಪ್ನುಹಿ ಮಾಂ ಸುಭ್ರು ಪುರಾ ಕಾಲೋಽತಿವರ್ತತೇ||

ನಿನ್ನ ಕುರಿತಾದ ಸಂಕಲ್ಪದಿಂದ ಉದ್ಭವಿಸಿರುವ ಈ ಕಾಮವು ನನ್ನನ್ನು ಪೀಡಿಸುತ್ತಿದೆ. ಸುಭ್ರು! ಆದುದರಿಂದಲೇ ನಾನು ನಿನ್ನ ಬಳಿ ಬಂದಿದ್ದೇನೆ. ಇನ್ನು ತಡಮಾಡಬೇಡ! ಸಮಯವು ಕಳೆದುಹೋಗುತ್ತಿದೆ.”

13041009a ತಮೇವಂವಾದಿನಂ ಶಕ್ರಂ ಶುಶ್ರಾವ ವಿಪುಲೋ ಮುನಿಃ|

13041009c ಗುರುಪತ್ನ್ಯಾಃ ಶರೀರಸ್ಥೋ ದದರ್ಶ ಚ ಸುರಾಧಿಪಮ್||

ಗುರುಪತ್ನಿಯ ಶರೀರದಲ್ಲಿದ್ದ ಮುನಿ ವಿಪುಲನು ಹಾಗೆ ಮಾತನಾಡುತ್ತಿದ್ದ ಶಕ್ರನನ್ನು ಕೇಳಿದನು ಮತ್ತು ಸುರಾಧಿಪನನ್ನು ನೋಡಿದನು ಕೂಡ.

13041010a ನ ಶಶಾಕ ಚ ಸಾ ರಾಜನ್ಪ್ರತ್ಯುತ್ಥಾತುಮನಿಂದಿತಾ|

13041010c ವಕ್ತುಂ ಚ ನಾಶಕದ್ರಾಜನ್ವಿಷ್ಟಬ್ಧಾ ವಿಪುಲೇನ ಸಾ||

ರಾಜನ್! ವಿಪುಲನಿಂದ ವಿಷ್ಟಬ್ಧಳಾಗಿದ್ದ ಆ ಅನಿಂದಿತೆಗೆ ಮೇಲೇಳಲಿಕ್ಕೂ ಆಗಲಿಲ್ಲ ಮತ್ತು ಏನನ್ನೂ ಹೇಳಲಿಕ್ಕೂ ಆಗಲಿಲ್ಲ.

13041011a ಆಕಾರಂ ಗುರುಪತ್ನ್ಯಾಸ್ತು ವಿಜ್ಞಾಯ ಸ ಭೃಗೂದ್ವಹಃ|

13041011c ನಿಜಗ್ರಾಹ ಮಹಾತೇಜಾ ಯೋಗೇನ ಬಲವತ್ಪ್ರಭೋ|

13041011e ಬಬಂಧ ಯೋಗಬಂಧೈಶ್ಚ ತಸ್ಯಾಃ ಸರ್ವೇಂದ್ರಿಯಾಣಿ ಸಃ||

ಪ್ರಭೋ! ಗುರುಪತ್ನಿಯ ಆಕಾರವನ್ನು ತಿಳಿದುಕೊಂಡ ಆ ಭೃಗೂದ್ವಹನು ತನ್ನ ಮಹಾತೇಜಸ್ವೀ ಯೋಗಬಲದಿಂದ ಅವಳನ್ನು ಹಿಡಿದಿಟ್ಟುಕೊಂಡನು. ಯೋಗಬಂಧನದಿಂದ ಅವಳ ಸರ್ವ ಇಂದ್ರಿಯಗಳನ್ನೂ ಬಂಧಿಸಿದನು.

13041012a ತಾಂ ನಿರ್ವಿಕಾರಾಂ ದೃಷ್ಟ್ವಾ ತು ಪುನರೇವ ಶಚೀಪತಿಃ|

13041012c ಉವಾಚ ವ್ರೀಡಿತೋ ರಾಜಂಸ್ತಾಂ ಯೋಗಬಲಮೋಹಿತಾಮ್||

ರಾಜನ್! ಯೋಗಬಲಮೋಹಿತಳಾದ ಅವಳು ನಿರ್ವಿಕಾರಳಾಗಿರುವುದನ್ನು ನೋಡಿ ನಾಚಿಕೊಂಡ ಶಚೀಪತಿಯು ಪುನಃ ಅವಳಿಗೆ ಹೇಳಿದನು.

13041013a ಏಹ್ಯೇಹೀತಿ ತತಃ ಸಾ ತಂ ಪ್ರತಿವಕ್ತುಮಿಯೇಷ ಚ|

13041013c ಸ ತಾಂ ವಾಚಂ ಗುರೋಃ ಪತ್ನ್ಯಾ ವಿಪುಲಃ ಪರ್ಯವರ್ತಯತ್||

“ಮೇಲೆದ್ದು ಬೇಗ ಬಾ” ಎಂದು ಅವನು ಹೇಳಲು ರುಚಿಯು ಅವನಿಗೆ ಪ್ರತ್ಯುತ್ತರವನ್ನೀಯಲು ಪ್ರಯತ್ನಿಸಿದಳು. ಆದರೆ ಗುರುಪತ್ನಿಯ ಮಾತನ್ನು ವಿಪುಲನು ಬದಲಾಯಿಸಿದನು.

13041014a ಭೋಃ ಕಿಮಾಗಮನೇ ಕೃತ್ಯಮಿತಿ ತಸ್ಯಾಶ್ಚ ನಿಃಸೃತಾ|

13041014c ವಕ್ತ್ರಾಚ್ಚಶಾಂಕಪ್ರತಿಮಾದ್ವಾಣೀ ಸಂಸ್ಕಾರಭೂಷಿತಾ||

ಚಂದ್ರೋಪಮವಾಗಿದ್ದ ಅವಳ ಸುಂದರ ಮುಖದಿಂದ ಸಂಸ್ಕಾರವಿಭೂಷಿತವಾದ “ಭೋ! ನಿನ್ನ ಆಗಮನದ ಕಾರಣವೇನು?” ಎಂಬ ವಾಣಿಯು ಹೊರಬಿದ್ದಿತು.

13041015a ವ್ರೀಡಿತಾ ಸಾ ತು ತದ್ವಾಕ್ಯಮುಕ್ತ್ವಾ ಪರವಶಾ ತದಾ|

13041015c ಪುರಂದರಶ್ಚ ಸಂತ್ರಸ್ತೋ ಬಭೂವ ವಿಮನಾಸ್ತದಾ||

ಪರವಶಳಾಗಿದ್ದ ಅವಳು ಆ ಮಾತನ್ನು ಆಡಿ ಬಹಳವಾಗಿ ನಾಚಿಕೊಂಡಳು. ಪುರಂದರನೂ ಕೂಡ ಸಂತ್ರಸ್ತನಾಗಿ ದುಃಖಿತನಾದನು.

13041016a ಸ ತದ್ವೈಕೃತಮಾಲಕ್ಷ್ಯ ದೇವರಾಜೋ ವಿಶಾಂ ಪತೇ|

13041016c ಅವೈಕ್ಷತ ಸಹಸ್ರಾಕ್ಷಸ್ತದಾ ದಿವ್ಯೇನ ಚಕ್ಷುಷಾ||

ವಿಶಾಂಪತೇ! ಆ ವೈಕೃತ್ಯವನ್ನು ಗಮನಿಸಿದ ದೇವರಾಜ ಸಹಸ್ರಾಕ್ಷನು ತನ್ನ ದಿವ್ಯ ದೃಷ್ಠಿಯಿಂದ ನೋಡಿದನು.

13041017a ದದರ್ಶ ಚ ಮುನಿಂ ತಸ್ಯಾಃ ಶರೀರಾಂತರಗೋಚರಮ್|

13041017c ಪ್ರತಿಬಿಂಬಮಿವಾದರ್ಶೇ ಗುರುಪತ್ನ್ಯಾಃ ಶರೀರಗಮ್||

ಅವಳ ಶರೀರದ ಒಳಗೆ ಗೋಚರನಾಗಿದ್ದ ಆ ಮುನಿಯನ್ನು ನೋಡಿದನು. ಗುರುಪತ್ನಿಯ ಶರೀರದಲ್ಲಿದ್ದ ಅವನು ಪ್ರತಿಬಿಂಬದಂತೆ ಕಂಡನು.

13041018a ಸ ತಂ ಘೋರೇಣ ತಪಸಾ ಯುಕ್ತಂ ದೃಷ್ಟ್ವಾ ಪುರಂದರಃ|

13041018c ಪ್ರಾವೇಪತ ಸುಸಂತ್ರಸ್ತಃ ಶಾಪಭೀತಸ್ತದಾ ವಿಭೋ||

ವಿಭೋ! ಘೋರ ತಪಸ್ಸಿನಿಂದ ಯುಕ್ತನಾದ ಅವನನ್ನು ನೋಡಿ ಪುರಂದರನು ಶಾಪಭೀತಿಯಿಂದ ಪೀಡಿತನಾಗಿ ನಡುಗತೊಡಗಿದನು.

13041019a ವಿಮುಚ್ಯ ಗುರುಪತ್ನೀಂ ತು ವಿಪುಲಃ ಸುಮಹಾತಪಾಃ|

13041019c ಸ್ವಂ ಕಲೇವರಮಾವಿಶ್ಯ ಶಕ್ರಂ ಭೀತಮಥಾಬ್ರವೀತ್||

ಸುಮಹಾತಪ ವಿಪುಲನಾದರೋ ಗುರುಪತ್ನಿಯನ್ನು ಬಿಟ್ಟು ತನ್ನ ಶರೀರವನ್ನು ಪ್ರವೇಶಿಸಿ ಭೀತನಾಗಿದ್ದ ಶಕ್ರನಿಗೆ ಇಂತೆಂದನು:

13041020a ಅಜಿತೇಂದ್ರಿಯ ಪಾಪಾತ್ಮನ್ಕಾಮಾತ್ಮಕ ಪುರಂದರ|

13041020c ನ ಚಿರಂ ಪೂಜಯಿಷ್ಯಂತಿ ದೇವಾಸ್ತ್ವಾಂ ಮಾನುಷಾಸ್ತಥಾ||

“ಅಜಿತೇಂದ್ರಿಯ! ಪಾಪಾತ್ಮ! ಕಾಮಾತ್ಮಕ ಪುರಂದರ! ದೇವತೆಗಳು ಮತ್ತು ಮನುಷ್ಯರು ಹೆಚ್ಚುಕಾಲ ನಿನ್ನನ್ನು ಪೂಜಿಸುವುದಿಲ್ಲ.

13041021a ಕಿಂ ನು ತದ್ವಿಸ್ಮೃತಂ ಶಕ್ರ ನ ತನ್ಮನಸಿ ತೇ ಸ್ಥಿತಮ್|

13041021c ಗೌತಮೇನಾಸಿ ಯನ್ಮುಕ್ತೋ ಭಗಾಂಕಪರಿಚಿಹ್ನಿತಃ||

ಶರೀರದಾದ್ಯಂತ ಯೋನಿಗಳಿಂದ ಪರಿಚಿಹ್ನಿತನಾಗಿ ಗೌತಮನಿಂದ ಬಿಡುಗಡೆ ಹೊಂದಿದುದು ನಿನಗೆ ನೆನಪಿಲ್ಲವೇ? ಅದು ನಿನ್ನ ಮನಸ್ಸಿನಲ್ಲಿ ಉಳಿದುಕೊಂಡಿಲ್ಲವೇ?

13041022a ಜಾನೇ ತ್ವಾಂ ಬಾಲಿಶಮತಿಮಕೃತಾತ್ಮಾನಮಸ್ಥಿರಮ್|

13041022c ಮಯೇಯಂ ರಕ್ಷ್ಯತೇ ಮೂಢ ಗಚ್ಚ ಪಾಪ ಯಥಾಗತಮ್||

ನೀನು ಬಾಲಿಶಮತಿಯು, ಅಕೃತಾತ್ಮನು ಮತ್ತು ಅಸ್ಥಿರನು ಎಂದು ನನಗೆ ತಿಳಿದಿದೆ. ಮೂಢ! ನಾನು ಇವಳನ್ನು ರಕ್ಷಿಸುತ್ತಿದ್ದೇನೆ. ಪಾಪಿ! ಎಲ್ಲಿಂದ ಬಂದಿದ್ದೀಯೋ ಅಲ್ಲಿಗೆ ಹೊರಟುಹೋಗು!

13041023a ನಾಹಂ ತ್ವಾಮದ್ಯ ಮೂಢಾತ್ಮನ್ದಹೇಯಂ ಹಿ ಸ್ವತೇಜಸಾ|

13041023c ಕೃಪಾಯಮಾಣಸ್ತು ನ ತೇ ದಗ್ಧುಮಿಚ್ಚಾಮಿ ವಾಸವ||

ಮೂಢಾತ್ಮ! ಇಂದು ನಾನು ನಿನ್ನನ್ನು ನನ್ನ ತೇಜಸ್ಸಿನಿಂದ ದಹಿಸುವುದಿಲ್ಲ. ವಾಸವ! ಕೃಪೆಮಾಡಬೇಕೆಂದು ನಿನ್ನನ್ನು ಭಸ್ಮಮಾಡಲು ಬಯಸುವುದಿಲ್ಲ.

13041024a ಸ ಚ ಘೋರತಪಾ ಧೀಮಾನ್ಗುರುರ್ಮೇ ಪಾಪಚೇತಸಮ್|

13041024c ದೃಷ್ಟ್ವಾ ತ್ವಾಂ ನಿರ್ದಹೇದದ್ಯ ಕ್ರೋಧದೀಪ್ತೇನ ಚಕ್ಷುಷಾ||

ಆದರೆ ನನ್ನ ಧೀಮಾನ್ ಗುರುವು ಘೋರತಪಸ್ವಿಯು. ಪಾಪಚೇತಸನಾದ ನಿನ್ನನ್ನು ನೋಡಿ ಇಂದು ಕ್ರೋಧದಿಂದ ಉರಿಯುವ ಕಣ್ಣುಗಳಿಂದ ನಿನ್ನನ್ನು ಸುಟ್ಟುಹಾಕಬಹುದು.

13041025a ನೈವಂ ತು ಶಕ್ರ ಕರ್ತವ್ಯಂ ಪುನರ್ಮಾನ್ಯಾಶ್ಚ ತೇ ದ್ವಿಜಾಃ|

13041025c ಮಾ ಗಮಃ ಸಸುತಾಮಾತ್ಯೋಽತ್ಯಯಂ ಬ್ರಹ್ಮಬಲಾರ್ದಿತಃ||

ಶಕ್ರ! ಪುನಃ ಇಂತಹ ಕರ್ತವ್ಯವನ್ನು ಮಾಡಬಾರದು. ದ್ವಿಜರನ್ನು ನೀನು ಗೌರವಿಸಬೇಕು. ಬ್ರಹ್ಮಬಲದಿಂದ ಪೀಡಿತನಾಗಿ ಸುತ-ಅಮಾತ್ಯರೊಂದಿಗೆ ನಾಶಹೊಂದಬೇಡ!

13041026a ಅಮರೋಽಸ್ಮೀತಿ ಯದ್ಬುದ್ಧಿಮೇತಾಮಾಸ್ಥಾಯ ವರ್ತಸೇ|

13041026c ಮಾವಮಂಸ್ಥಾ ನ ತಪಸಾಮಸಾಧ್ಯಂ ನಾಮ ಕಿಂ ಚನ||

“ನಾನು ಅಮರನಾಗಿದ್ದೇನೆ” ಎಂಬ ಬುದ್ಧಿಯಿಂದ ನೀನು ಈ ರೀತಿಯಾಗಿ ವರ್ತಿಸುತ್ತಿದ್ದೀಯೆ. ನಮ್ಮನ್ನು ಅಪಮಾನಿಸಬೇಡ. ತಪಸ್ಸಿನಿಂದ ಅಸಾಧ್ಯವಾದುದು ಯಾವುದೂ ಇಲ್ಲ.”

13041027a ತಚ್ಚ್ರುತ್ವಾ ವಚನಂ ಶಕ್ರೋ ವಿಪುಲಸ್ಯ ಮಹಾತ್ಮನಃ|

13041027c ಅಕಿಂಚಿದುಕ್ತ್ವಾ ವ್ರೀಡಿತಸ್ತತ್ರೈವಾಂತರಧೀಯತ||

ಮಹಾತ್ಮ ವಿಪುಲನ ಆ ಮಾತನ್ನು ಕೇಳಿ ಶಕ್ರನು ನಾಚಿಕೊಂಡು ಏನನ್ನೂ ಮಾತನಾಡದೇ ಅಲ್ಲಿಯೇ ಅಂತರ್ಧಾನನಾದನು.

13041028a ಮುಹೂರ್ತಯಾತೇ ಶಕ್ರೇ ತು ದೇವಶರ್ಮಾ ಮಹಾತಪಾಃ|

13041028c ಕೃತ್ವಾ ಯಜ್ಞಂ ಯಥಾಕಾಮಮಾಜಗಾಮ ಸ್ವಮಾಶ್ರಮಮ್||

ಶಕ್ರನು ಹೊರಟು ಹೋದ ಸ್ವಲ್ಪ ಸಮಯದಲ್ಲಿಯೇ ಮಹಾತಪಸ್ವೀ ದೇವಶರ್ಮನು ಬಯಸಿದ ಯಜ್ಞವನ್ನು ಮಾಡಿ ತನ್ನ ಅಶ್ರಮಕ್ಕೆ ಹಿಂದಿರುಗಿದನು.

13041029a ಆಗತೇಽಥ ಗುರೌ ರಾಜನ್ವಿಪುಲಃ ಪ್ರಿಯಕರ್ಮಕೃತ್|

13041029c ರಕ್ಷಿತಾಂ ಗುರವೇ ಭಾರ್ಯಾಂ ನ್ಯವೇದಯದನಿಂದಿತಾಮ್||

ರಾಜನ್! ಗುರುವು ಬರಲು ಪ್ರಿಯಕರ್ಮವನ್ನು ಮಾಡಿದ್ದ ವಿಪುಲನು ತಾನು ರಕ್ಷಿಸಿದ ಗುರುವಿನ ಪತ್ನಿ ಅನಿಂದಿತೆಯನ್ನು ಅವನಿಗೆ ಒಪ್ಪಿಸಿದನು.

13041030a ಅಭಿವಾದ್ಯ ಚ ಶಾಂತಾತ್ಮಾ ಸ ಗುರುಂ ಗುರುವತ್ಸಲಃ|

13041030c ವಿಪುಲಃ ಪರ್ಯುಪಾತಿಷ್ಠದ್ಯಥಾಪೂರ್ವಮಶಂಕಿತಃ||

ಗುರುವನ್ನು ನಮಸ್ಕರಿಸಿ ಗುರುವತ್ಸಲ ಶಾಂತಾತ್ಮಾ ವಿಪುಲನು ಹಿಂದಿನಂತೆಯೇ ಯಾವ ಶಂಕೆಯೂ ಇಲ್ಲದೇ ಅವನ ಸೇವೆಯಲ್ಲಿ ನಿರತನಾದನು.

13041031a ವಿಶ್ರಾಂತಾಯ ತತಸ್ತಸ್ಮೈ ಸಹಾಸೀನಾಯ ಭಾರ್ಯಯಾ|

13041031c ನಿವೇದಯಾಮಾಸ ತದಾ ವಿಪುಲಃ ಶಕ್ರಕರ್ಮ ತತ್||

ವಿಶ್ರಾಂತಿಪಡೆದು ಪತ್ನಿಯೊಂದಿಗೆ ಕುಳಿತುಕೊಂಡಿರುವಾಗ ಅವನಿಗೆ ವಿಪುಲನು ಶಕ್ರನು ಮಾಡಿದುದರ ಕುರಿತು ನಿವೇದಿಸಿದನು.

13041032a ತಚ್ಚ್ರುತ್ವಾ ಸ ಮುನಿಸ್ತುಷ್ಟೋ ವಿಪುಲಸ್ಯ ಪ್ರತಾಪವಾನ್|

13041032c ಬಭೂವ ಶೀಲವೃತ್ತಾಭ್ಯಾಂ ತಪಸಾ ನಿಯಮೇನ ಚ||

ಅದನ್ನು ಕೇಳಿ ಪ್ರತಾಪವಾನ್ ಮುನಿಯು ವಿಪುಲನ ಶೀಲ-ವರ್ತನೆಗಳಿಂದ ಮತ್ತು ತಪಸ್ಸು-ನಿಯಮಗಳಿಂದ ಸಂತುಷ್ಟನಾದನು.

13041033a ವಿಪುಲಸ್ಯ ಗುರೌ ವೃತ್ತಿಂ ಭಕ್ತಿಮಾತ್ಮನಿ ಚ ಪ್ರಭುಃ|

13041033c ಧರ್ಮೇ ಚ ಸ್ಥಿರತಾಂ ದೃಷ್ಟ್ವಾ ಸಾಧು ಸಾಧ್ವಿತ್ಯುವಾಚ ಹ||

ಗುರುವೊಂದಿಗೆ ವಿಪುಲನು ನಡೆದುಕೊಂಡಿದ್ದುದು, ತನ್ನಲ್ಲಿ ಅವನಿಗಿದ್ದ ಭಕ್ತಿ, ಮತ್ತು ಧರ್ಮದಲ್ಲಿ ಅವನ ಸ್ಥಿರತೆ ಇವುಗಳನ್ನು ನೋಡಿ ದೇವಶರ್ಮನು “ಸಾಧು! ಸಾಧು!” ಎಂದು ಹೇಳಿದನು.

13041034a ಪ್ರತಿನಂದ್ಯ ಚ ಧರ್ಮಾತ್ಮಾ ಶಿಷ್ಯಂ ಧರ್ಮಪರಾಯಣಮ್|

13041034c ವರೇಣ ಚ್ಚಂದಯಾಮಾಸ ಸ ತಸ್ಮಾದ್ಗುರುವತ್ಸಲಃ|

13041034E ಅನುಜ್ಞಾತಶ್ಚ ಗುರುಣಾ ಚಚಾರಾನುತ್ತಮಂ ತಪಃ||

ಆ ಧರ್ಮಪರಾಯಣ ಶಿಷ್ಯನನ್ನು ಪ್ರತಿನಂದಿಸಿ ಗುರುವತ್ಸಲ ಧರ್ಮಾತ್ಮನು ವರಗಳಿಂದ ಅವನನ್ನು ಸಂತೋಷಪಡಿಸಿದನು. ಗುರುವಿನಿಂದ ಅನುಜ್ಞೆಯನ್ನು ಪಡೆದು ವಿಪುಲನು ಅನುತ್ತಮ ತಪಸ್ಸನ್ನು ಆಚರಿಸತೊಡಗಿದನು.

13041035a ತಥೈವ ದೇವಶರ್ಮಾಪಿ ಸಭಾರ್ಯಃ ಸ ಮಹಾತಪಾಃ|

13041035c ನಿರ್ಭಯೋ ಬಲವೃತ್ರಘ್ನಾಚ್ಚಚಾರ ವಿಜನೇ ವನೇ||

ಹಾಗೆಯೇ ಮಹಾತಪಸ್ವೀ ದೇವಶರ್ಮನೂ ಕೂಡ ಭಾರ್ಯೆಯೊಡನೆ ಬಲವೃತ್ತನಿಂದ ನಿರ್ಭಯನಾಗಿ ವಿಜನ ವನದಲ್ಲಿ ಸಂಚರಿಸಿದನು.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ವಿಪುಲೋಪಾಖ್ಯಾನೇ ಏಕಚತ್ವಾರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ವಿಪುಲೋಪಾಖ್ಯಾನ ಎನ್ನುವ ನಲ್ವತ್ತೊಂದನೇ ಅಧ್ಯಾಯವು.

Image result for flowers against white background

Comments are closed.