Anushasana Parva: Chapter 39

ಅನುಶಾಸನ ಪರ್ವ: ದಾನಧರ್ಮ ಪರ್ವ

೩೯

ದೋಷಗಳಿಂದ ಕೂಡಿರುವ ಸ್ತ್ರೀಯರನ್ನು ರಕ್ಷಿಸುವುದರ ಕುರಿತು ಯುಧಿಷ್ಠಿರನು ಭೀಷ್ಮನನ್ನು ಪ್ರಶ್ನಿಸುವುದು (೧-೧೨).

13039001 ಯುಧಿಷ್ಠಿರ ಉವಾಚ|

13039001a ಇಮೇ ವೈ ಮಾನವಾ ಲೋಕೇ ಸ್ತ್ರೀಷು ಸಜ್ಜಂತ್ಯಭೀಕ್ಷ್ಣಶಃ|

13039001c ಮೋಹೇನ ಪರಮಾವಿಷ್ಟಾ ದೈವಾದಿಷ್ಟೇನ ಪಾರ್ಥಿವ|

13039001e ಸ್ತ್ರಿಯಶ್ಚ ಪುರುಷೇಷ್ವೇವ ಪ್ರತ್ಯಕ್ಷಂ ಲೋಕಸಾಕ್ಷಿಕಮ್||

ಯುಧಿಷ್ಠಿರನು ಹೇಳಿದನು: “ಪಾರ್ಥಿವ! ಈ ಲೋಕದ ಮಾನವರು ದೈವನಿರ್ಮಿತ ಮೋಹದಿಂದ ಆವಿಷ್ಟರಾಗಿ ಸದಾ ಸ್ತ್ರೀಯರಲ್ಲಿಯೇ ಆಸಕ್ತಿಯುಳ್ಳವರಾಗಿರುತ್ತಾರೆ. ಸ್ತ್ರೀಯರೂ ಕೂಡ ಪುರುಷರಲ್ಲಿ ಆಸಕ್ತಿಯುಳ್ಳವರಾಗಿರುತ್ತಾರೆ. ಇದು ಪ್ರತ್ಯಕ್ಷವಾಗಿಯೇ ಇದೆ. ಲೋಕವೇ ಇದಕ್ಕೆ ಸಾಕ್ಷಿಯಾಗಿದೆ.

13039002a ಅತ್ರ ಮೇ ಸಂಶಯಸ್ತೀವ್ರೋ ಹೃದಿ ಸಂಪರಿವರ್ತತೇ|

13039002c ಕಥಮಾಸಾಂ ನರಾಃ ಸಂಗಂ ಕುರ್ವತೇ ಕುರುನಂದನ|

13039002e ಸ್ತ್ರಿಯೋ ವಾ ತೇಷು ರಜ್ಯಂತೇ ವಿರಜ್ಯಂತೇಽಥ ವಾ ಪುನಃ||

ಈ ವಿಷಯದಲ್ಲಿ ನನ್ನ ಹೃದಯದಲ್ಲಿ ತೀವ್ರ ಸಂಶಯವುಂಟಾಗಿದೆ. ಕುರುನಂದನ! ಇಂಥಹ ಸ್ತ್ರೀಯರೊಂದಿಗೆ ನರರು ಹೇಗೆ ಕೂಡುತ್ತಾರೆ? ಸ್ತ್ರೀಯರು ಎಂಥಹ ಪುರುಷರಲ್ಲಿ ಅನುರಕ್ತರೂ ಅಥವಾ ಪುನಃ ವಿರಕ್ತರೂ ಆಗುತ್ತಾರೆ?

13039003a ಇತಿ ತಾಃ ಪುರುಷವ್ಯಾಘ್ರ ಕಥಂ ಶಕ್ಯಾಃ ಸ್ಮ ರಕ್ಷಿತುಮ್|

13039003c ಪ್ರಮದಾಃ ಪುರುಷೇಣೇಹ ತನ್ಮೇ ವ್ಯಾಖ್ಯಾತುಮರ್ಹಸಿ||

ಪುರುಷವ್ಯಾಘ್ರ! ಯೌವನದಿಂದ ಉನ್ಮತ್ತಳಾಗಿರುವ ಸ್ತ್ರೀಯನ್ನು ಪುರುಷನು ಹೇಗೆ ತಾನೇ ರಕ್ಷಿಸಬಲ್ಲನು? ಇದನ್ನು ನನಗೆ ಹೇಳಬೇಕು.

13039004a ಏತಾ ಹಿ ಮಯಮಾಯಾಭಿರ್ವಂಚಯಂತೀಹ ಮಾನವಾನ್|

13039004c ನ ಚಾಸಾಂ ಮುಚ್ಯತೇ ಕಶ್ಚಿತ್ಪುರುಷೋ ಹಸ್ತಮಾಗತಃ|

13039004e ಗಾವೋ ನವತೃಣಾನೀವ ಗೃಹ್ಣಂತ್ಯೇವ ನವಾನ್ನವಾನ್||

ಗೋವುಗಳು ಹೊಸ ಹುಲ್ಲುಗಳನ್ನು ಹೇಗೋ ಹಾಗೆ ಸ್ತ್ರೀಯರು ಹೊಸ ಹೊಸ ಪುರುಷರನ್ನು ಹುಡುಕುತ್ತಲೇ ಇರುತ್ತಾರೆ. ಸ್ವೇಚ್ಛಾಚಾರೀ ಸ್ತ್ರೀಯರು ಹೀಗೆ ಪತಿಯನ್ನು ವಂಚಿಸುತ್ತಲೇ ಇರುತ್ತಾರೆ. ಅಂಥವರ ಕೈಗೆ ಸಿಲುಕಿದ ಪುರುಷನಿಗೆ ಬಿಡುಗಡೆಯೆನ್ನುವುದೇ ಇರುವುದಿಲ್ಲ.

13039005a ಶಂಬರಸ್ಯ ಚ ಯಾ ಮಾಯಾ ಯಾ ಮಾಯಾ ನಮುಚೇರಪಿ|

13039005c ಬಲೇಃ ಕುಂಭೀನಸೇಶ್ಚೈವ ಸರ್ವಾಸ್ತಾ ಯೋಷಿತೋ ವಿದುಃ||

ಮಾಯಾವಿಗಳಾಗಿದ್ದ ಶಂಬರ, ನಮುಚಿ, ಬಲಿ, ಕುಂಭೀನಸ ಇವರು ತಿಳಿದಿದ್ದ ಎಲ್ಲ ಮಾಯೆಗಳನ್ನೂ ಸ್ತ್ರೀಯರು ತಿಳಿದುಕೊಂಡಿರುತ್ತಾರೆ.

13039006a ಹಸಂತಂ ಪ್ರಹಸಂತ್ಯೇತಾ ರುದಂತಂ ಪ್ರರುದಂತಿ ಚ|

13039006c ಅಪ್ರಿಯಂ ಪ್ರಿಯವಾಕ್ಯೈಶ್ಚ ಗೃಹ್ಣತೇ ಕಾಲಯೋಗತಃ||

ನಗುವವನೊಡನೆ ನಗುತ್ತಾರೆ. ಅಳುವವನೊಡನೆ ಅಳುತ್ತಾರೆ. ಸಮಯ ಬಂದರೆ ಅಪ್ರಿಯನಾದವನನ್ನೂ ಪ್ರಿಯಮಾತುಗಳಿಂದ ಸೆಳೆದುಕೊಳ್ಳುತ್ತಾರೆ.

13039007a ಉಶನಾ ವೇದ ಯಚ್ಚಾಸ್ತ್ರಂ ಯಚ್ಚ ವೇದ ಬೃಹಸ್ಪತಿಃ|

13039007c ಸ್ತ್ರೀಬುದ್ಧ್ಯಾ ನ ವಿಶಿಷ್ಯೇತೇ ತಾಃ ಸ್ಮ ರಕ್ಷ್ಯಾಃ ಕಥಂ ನರೈಃ||

ಉಶನ ಶುಕ್ರನು ತಿಳಿದಿರುವ ಮತ್ತು ಬೃಹಸ್ಪತಿಯು ತಿಳಿದಿರುವ ಶಾಸ್ತ್ರಗಳಿಗಿಂತಲೂ ಸ್ತ್ರೀಬುದ್ಧಿಯು ಹೆಚ್ಚಿನದು. ಅಂತವರನ್ನು ಹೇಗೆ ನರರು ರಕ್ಷಿಸಬಲ್ಲರು?

13039008a ಅನೃತಂ ಸತ್ಯಮಿತ್ಯಾಹುಃ ಸತ್ಯಂ ಚಾಪಿ ತಥಾನೃತಮ್|

13039008c ಇತಿ ಯಾಸ್ತಾಃ ಕಥಂ ವೀರ ಸಂರಕ್ಷ್ಯಾಃ ಪುರುಷೈರಿಹ||

ವೀರ! ಸುಳ್ಳನ್ನು ಸತ್ಯವೆನ್ನುತ್ತಾರೆ. ಸತ್ಯವನ್ನು ಸುಳ್ಳೆನ್ನುತ್ತಾರೆ. ಹೀಗಿರುವವರನ್ನು ಪುರುಷರು ಹೇಗೆ ರಕ್ಷಿಸಬಲ್ಲರು?

13039009a ಸ್ತ್ರೀಣಾಂ ಬುದ್ಧ್ಯುಪನಿಷ್ಕರ್ಷಾದರ್ಥಶಾಸ್ತ್ರಾಣಿ ಶತ್ರುಹನ್|

13039009c ಬೃಹಸ್ಪತಿಪ್ರಭೃತಿಭಿರ್ಮನ್ಯೇ ಸದ್ಭಿಃ ಕೃತಾನಿ ವೈ||

ಶತ್ರುಹನ್! ಸ್ತ್ರೀಯರ ಬುದ್ಧಿಯು ಇಂತಹುದೇ ಎಂದು ನಿಷ್ಕರ್ಷಿಸಿ ಬೃಹಸ್ಪತಿ ಮೊದಲಾದ ಸತ್ಪುರುಷರು ಅದಕ್ಕೆ ತಕ್ಕುದಾದ ನೀತಿಶಾಸ್ತ್ರಗಳನ್ನು ರಚಿಸಿರಬಹುದು.

13039010a ಸಂಪೂಜ್ಯಮಾನಾಃ ಪುರುಷೈರ್ವಿಕುರ್ವಂತಿ ಮನೋ ನೃಷು|

13039010c ಅಪಾಸ್ತಾಶ್ಚ ತಥಾ ರಾಜನ್ವಿಕುರ್ವಂತಿ ಮನಃ ಸ್ತ್ರಿಯಃ||

ರಾಜನ್! ಪುರುಷರಿಂದ ಸಂಪೂಜ್ಯರಾಗಿದ್ದರೂ  ಅಥವಾ ಅವರಿಂದ ತಿರಸ್ಕೃತಗೊಂಡರೂ ಸ್ತ್ರೀಯರು ಮನುಷ್ಯರ ಮನಸ್ಸನ್ನು ವಿಕಾರಗೊಳಿಸುತ್ತಾರೆ.

13039011a ಕಸ್ತಾಃ ಶಕ್ತೋ ರಕ್ಷಿತುಂ ಸ್ಯಾದಿತಿ ಮೇ ಸಂಶಯೋ ಮಹಾನ್|

13039011c ತನ್ಮೇ ಬ್ರೂಹಿ ಮಹಾಬಾಹೋ ಕುರೂಣಾಂ ವಂಶವರ್ಧನ||

ಅವರ ರಕ್ಷಣೆಯನ್ನು ಭಲಾ ಯಾರು ಮಾಡಬಲ್ಲರು? ಇದೇ ನನ್ನಲ್ಲಿರುವ ಮಹಾ ಸಂಶಯವು. ಮಹಾಬಾಹೋ! ಕುರುಗಳ ವಂಶವರ್ಧನ! ಅದರ ಕುರಿತು ನನಗೆ ಹೇಳು.

13039012a ಯದಿ ಶಕ್ಯಾ ಕುರುಶ್ರೇಷ್ಠ ರಕ್ಷಾ ತಾಸಾಂ ಕಥಂ ಚನ|

13039012c ಕರ್ತುಂ ವಾ ಕೃತಪೂರ್ವಾ ವಾ ತನ್ಮೇ ವ್ಯಾಖ್ಯಾತುಮರ್ಹಸಿ||

ಕುರುಶ್ರೇಷ್ಠ! ಒಂದು ವೇಳೆ ಅವರನ್ನು ರಕ್ಷಿಸಬಹುದಾದರೂ ಅದು ಹೇಗೆ ಎನ್ನುವುದನ್ನು ಹೇಳು. ಇದರ ಮೊದಲು ಯಾರಾದರೂ ಹಾಗೆ ಮಾಡಿದ್ದರೆ ಅದನ್ನೂ ನನಗೆ ಹೇಳಬೇಕು.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಸ್ತ್ರೀಸ್ವಭಾವಕಥನೇ ಏಕೋನಚತ್ವಾರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಸ್ತ್ರೀಸ್ವಭಾವಕಥನ ಎನ್ನುವ ಮೂವತ್ತೊಂಭತ್ತನೇ ಅಧ್ಯಾಯವು.

Related image

Comments are closed.