Anushasana Parva: Chapter 31

ಅನುಶಾಸನ ಪರ್ವ: ದಾನಧರ್ಮ ಪರ್ವ

೩೧

ವೀತಹವ್ಯೋಪಾಖ್ಯಾನ

ಕ್ಷತ್ರಿಯನಾಗಿದ್ದರೂ ಬ್ರಾಹ್ಮಣನಾದ ವೀತಹವ್ಯನ ಕಥೆಯನ್ನು ಹೇಳುವಂತೆ ಯುಧಿಷ್ಟಿರನು ಭೀಷ್ಮನಲ್ಲಿ ಕೇಳಿದುದು (೧-೪).  ಭೃಗುಮಹರ್ಷಿಯ ಪ್ರಸಾದದಿಂದ ಬ್ರಾಹ್ಮಣನಾದ ರಾಜಾ ವೀತಹವ್ಯನ ಕಥೆ (೫-೫೪).  ವೀತಹವ್ಯನ ಮಗ ಗೃತ್ಸಮದನ ವಂಶಾವಳಿ (೫೫-೬೪).

13031001 ಯುಧಿಷ್ಠಿರ ಉವಾಚ|

13031001a ಶ್ರುತಂ ಮೇ ಮಹದಾಖ್ಯಾನಮೇತತ್ಕುರುಕುಲೋದ್ವಹ|

13031001c ಸುದುಷ್ಪ್ರಾಪಂ ಬ್ರವೀಷಿ ತ್ವಂ ಬ್ರಾಹ್ಮಣ್ಯಂ ವದತಾಂ ವರ||

ಯುಧಿಷ್ಠಿರನು ಹೇಳಿದನು: “ಕುರುಕುಲೋದ್ವಹ! ಮಾತನಾಡುವವರಲ್ಲಿ ಶ್ರೇಷ್ಠ! ಬ್ರಾಹ್ಮಣ್ಯತ್ವವನ್ನು ಪಡೆಯುವುದು ಬಹಳ ಕಷ್ಟವೆಂದು ನೀನು ನನಗೆ ಹೇಳಿದ ಈ ಮಹದಾಖ್ಯಾನವನ್ನು ಕೇಳಿದೆ.

13031002a ವಿಶ್ವಾಮಿತ್ರೇಣ ಚ ಪುರಾ ಬ್ರಾಹ್ಮಣ್ಯಂ ಪ್ರಾಪ್ತಮಿತ್ಯುತ|

13031002c ಶ್ರೂಯತೇ ವದಸೇ ತಚ್ಚ ದುಷ್ಪ್ರಾಪಮಿತಿ ಸತ್ತಮ||

ಸತ್ತಮ! ಆದರೆ ಹಿಂದೆ ನೀನು ವಿಶ್ವಾಮಿತ್ರನು ಬ್ರಾಹ್ಮಣ್ಯವನ್ನು ಪಡೆದುಕೊಂಡನು ಎಂದೂ ಹೇಳಿದ್ದೀಯೆ. ಬ್ರಾಹ್ಮಣ್ಯವನ್ನು ಪಡೆಯಲು ಸಾಧ್ಯವಿಲ್ಲ ಎಂದು ನೀನು ಹೇಳಿದುದನ್ನೂ ಕೇಳಿದ್ದೇನೆ.

13031003a ವೀತಹವ್ಯಶ್ಚ ರಾಜರ್ಷಿಃ ಶ್ರುತೋ ಮೇ ವಿಪ್ರತಾಂ ಗತಃ|

13031003c ತದೇವ ತಾವದ್ಗಾಂಗೇಯ ಶ್ರೋತುಮಿಚ್ಚಾಮ್ಯಹಂ ವಿಭೋ||

ವಿಭೋ! ಗಾಂಗೇಯ! ರಾಜರ್ಷಿ ವೀತಹವ್ಯನು ವಿಪ್ರತ್ವವನ್ನು ಪಡೆದನು ಎಂದು ಕೇಳಿದ್ದೇವೆ. ಅದರ ಕುರಿತು ಕೇಳಬಯಸುತ್ತೇನೆ.

13031004a ಸ ಕೇನ ಕರ್ಮಣಾ ಪ್ರಾಪ್ತೋ ಬ್ರಾಹ್ಮಣ್ಯಂ ರಾಜಸತ್ತಮ|

13031004c ವರೇಣ ತಪಸಾ ವಾಪಿ ತನ್ಮೇ ವ್ಯಾಖ್ಯಾತುಮರ್ಹತಿ||

ರಾಜಸತ್ತಮ! ಅವನು ವರ ಅಥವಾ ತಪಸ್ಸು ಅಥವಾ ಯಾವ ಕರ್ಮದಿಂದ ಬ್ರಾಹ್ಮಣ್ಯತ್ವವನ್ನು ಪಡೆದುಕೊಂಡನು? ಅದನ್ನು ನನಗೆ ಹೇಳಬೇಕು?”

13031005 ಭೀಷ್ಮ ಉವಾಚ|

13031005a ಶೃಣು ರಾಜನ್ಯಥಾ ರಾಜಾ ವೀತಹವ್ಯೋ ಮಹಾಯಶಾಃ|

13031005c ಕ್ಷತ್ರಿಯಃ ಸನ್ಪುನಃ ಪ್ರಾಪ್ತೋ ಬ್ರಾಹ್ಮಣ್ಯಂ ಲೋಕಸತ್ಕೃತಮ್||

ಭೀಷ್ಮನು ಹೇಳಿದನು: “ರಾಜನ್! ಮಹಾಯಶಸ್ವಿ ರಾಜಾ ವೀತಹವ್ಯನು ಕ್ಷತ್ರಿಯನಾಗಿದ್ದರೂ ಲೋಕಸತ್ಕೃತ ಬ್ರಾಹ್ಮಣ್ಯವನ್ನು ಹೇಗೆ ಪಡೆದನು ಎನ್ನುವುದನ್ನು ಕೇಳು.

13031006a ಮನೋರ್ಮಹಾತ್ಮನಸ್ತಾತ ಪ್ರಜಾಧರ್ಮೇಣ ಶಾಸತಃ|

13031006c ಬಭೂವ ಪುತ್ರೋ ಧರ್ಮಾತ್ಮಾ ಶರ್ಯಾತಿರಿತಿ ವಿಶ್ರುತಃ||

ಮಗೂ! ಪ್ರಜೆಗಳನ್ನು ಧರ್ಮದಿಂದ ಆಳುತ್ತಿದ್ದ ಮಹಾತ್ಮ ಮನುವಿಗೆ ಧರ್ಮಾತ್ಮ ಶರ್ಯಾತಿಯೆಂಬ ಪುತ್ರನಾದನು.

13031007a ತಸ್ಯಾನ್ವವಾಯೇ ದ್ವೌ ರಾಜನ್ರಾಜಾನೌ ಸಂಬಭೂವತುಃ|

13031007c ಹೇಹಯಸ್ತಾಲಜಂಘಶ್ಚ ವತ್ಸೇಷು ಜಯತಾಂ ವರ||

ವಿಜಯಿಗಳಲ್ಲಿ ಶ್ರೇಷ್ಠ! ರಾಜನ್! ಅವನ ಕುಲದ ವತ್ಸರಲ್ಲಿ ಇಬ್ಬರು ರಾಜರು ಆದರು: ಹೇಹಯ ಮತ್ತು ತಾಲಜಂಘ.

13031008a ಹೇಹಯಸ್ಯ ತು ಪುತ್ರಾಣಾಂ ದಶಸು ಸ್ತ್ರೀಷು ಭಾರತ|

13031008c ಶತಂ ಬಭೂವ ಪ್ರಖ್ಯಾತಂ ಶೂರಾಣಾಮನಿವರ್ತಿನಾಮ್||

ಭಾರತ! ಹೇಹಯನ ಹತ್ತು ಪತ್ನಿಯರಲ್ಲಿ ಪ್ರತಿಯೊಬ್ಬರಿಗೂ ನೂರು ಪ್ರಖ್ಯಾತ, ಯುದ್ಧದಿಂದ ಹಿಂದಿರುಗದ ಶೂರ ಮಕ್ಕಳಾದರು.

13031009a ತುಲ್ಯರೂಪಪ್ರಭಾವಾಣಾಂ ವಿದುಷಾಂ ಯುದ್ಧಶಾಲಿನಾಮ್|

13031009c ಧನುರ್ವೇದೇ ಚ ವೇದೇ ಚ ಸರ್ವತ್ರೈವ ಕೃತಶ್ರಮಾಃ||

ರೂಪ-ಪ್ರಭಾವಗಳಲ್ಲಿ ಒಂದೇ ಸಮನಾಗಿದ್ದ ಅವರು ವಿದುಷರೂ, ಯುದ್ಧಶಾಲಿಗಳೂ, ಧನುರ್ವೇದ, ವೇದ ಮತ್ತು ಎಲ್ಲವುಗಳಲ್ಲಿ ಪಾರಂಗತರಾಗಿದ್ದರು.

13031010a ಕಾಶಿಷ್ವಪಿ ನೃಪೋ ರಾಜನ್ದಿವೋದಾಸಪಿತಾಮಹಃ|

13031010c ಹರ್ಯಶ್ವ ಇತಿ ವಿಖ್ಯಾತೋ ಬಭೂವ ಜಯತಾಂ ವರಃ||

ರಾಜನ್! ಕಾಶಿಯಲ್ಲಿ ಕೂಡ ದಿವೋದಾಸನ ಪಿತಾಮಹ ಹರ್ಯಶ್ವನೆಂದು ವಿಖ್ಯಾತನಾದ ವಿಜಯಿಗಳಲ್ಲಿ ಶ್ರೇಷ್ಠ ನೃಪನಿದ್ದನು.

13031011a ಸ ವೀತಹವ್ಯದಾಯಾದೈರಾಗತ್ಯ ಪುರುಷರ್ಷಭ|

13031011c ಗಂಗಾಯಮುನಯೋರ್ಮಧ್ಯೇ ಸಂಗ್ರಾಮೇ ವಿನಿಪಾತಿತಃ||

ಪುರುಷರ್ಷಭ! ವೀತಹವ್ಯ (ಹೇಹಯ) ನ ಮಕ್ಕಳು ಅವನ ಮೇಲೆ ಯುದ್ಧಮಾಡಲು ಗಂಗಾ-ಯಮುನೆಯರ ಮಧ್ಯದಲ್ಲಿ ನಡೆದ ಸಂಗ್ರಾಮದಲ್ಲಿ ಹರ್ಯಶ್ವನು ಹತನಾದನು.

13031012a ತಂ ತು ಹತ್ವಾ ನರವರಂ ಹೇಹಯಾಸ್ತೇ ಮಹಾರಥಾಃ|

13031012c ಪ್ರತಿಜಗ್ಮುಃ ಪುರೀಂ ರಮ್ಯಾಂ ವತ್ಸಾನಾಮಕುತೋಭಯಾಃ||

ಆ ನರವರನನ್ನು ಕೊಂದು ಮಹಾರಥ ಹೇಹಯರು ನಿರ್ಭಯರಾಗಿ ವತ್ಸರ ರಮ್ಯ ಪುರಿಗೆ ಹಿಂದಿರುಗಿದರು.

13031013a ಹರ್ಯಶ್ವಸ್ಯ ತು ದಾಯಾದಃ ಕಾಶಿರಾಜೋಽಭ್ಯಷಿಚ್ಯತ|

13031013c ಸುದೇವೋ ದೇವಸಂಕಾಶಃ ಸಾಕ್ಷಾದ್ಧರ್ಮ ಇವಾಪರಃ||

ಹರ್ಯಶ್ವನ ಮಗನಾದರೋ ಕಾಶಿರಾಜನಾಗಿ ಅಭಿಷಿಕ್ತನಾದನು. ದೇವಸಂಕಾಶನಾದ ಆ ಸುದೇವನು ಸಾಕ್ಷಾತ್ ಇನ್ನೊಬ್ಬ ಧರ್ಮನೋ ಎಂಬಂತಿದ್ದನು.

13031014a ಸ ಪಾಲಯನ್ನೇವ ಮಹೀಂ ಧರ್ಮಾತ್ಮಾ ಕಾಶಿನಂದನಃ|

13031014c ತೈರ್ವೀತಹವ್ಯೈರಾಗತ್ಯ ಯುಧಿ ಸರ್ವೈರ್ವಿನಿರ್ಜಿತಃ||

ಆ ಧರ್ಮಾತ್ಮಾ ಕಾಶಿನಂದನನು ಮಹಿಯನ್ನು ಪಾಲಿಸುತ್ತಿರಲು ವೀತಹವ್ಯನ ಎಲ್ಲ ಮಕ್ಕಳೂ ಯುದ್ಧದಲ್ಲಿ ಅವನನ್ನು ಸೋಲಿಸಿದರು.

13031015a ತಮಪ್ಯಾಜೌ ವಿನಿರ್ಜಿತ್ಯ ಪ್ರತಿಜಗ್ಮುರ್ಯಥಾಗತಮ್|

13031015c ಸೌದೇವಿಸ್ತ್ವಥ ಕಾಶೀಶೋ ದಿವೋದಾಸೋಽಭ್ಯಷಿಚ್ಯತ||

ಅವನನ್ನು ಗೆದ್ದು ಅವರು ಯಥಾಗತರಾಗಿ ಹಿಂದಿರುಗಿದರು. ಆಗ ಸುದೇವನ ಮಗ ದಿವೋದಾಸನು ಕಾಶೀಶನಾಗಿ ಅಭಿಷಿಕ್ತನಾದನು.

13031016a ದಿವೋದಾಸಸ್ತು ವಿಜ್ಞಾಯ ವೀರ್ಯಂ ತೇಷಾಂ ಮಹಾತ್ಮನಾಮ್|

13031016c ವಾರಾಣಸೀಂ ಮಹಾತೇಜಾ ನಿರ್ಮಮೇ ಶಕ್ರಶಾಸನಾತ್||

ಮಹಾತೇಜಸ್ವೀ ದಿವೋದಾಸನಾದರೋ ಆ ಮಹಾತ್ಮ ವೀತಹವ್ಯನ ಮಕ್ಕಳ ವೀರ್ಯದ ಕುರಿತು ತಿಳಿದುಕೊಂಡು ಶಕ್ರನ ಶಾಸನದಂತೆ ವಾರಾಣಸೀ ಪುರವನ್ನು ನಿರ್ಮಿಸಿದನು.

13031017a ವಿಪ್ರಕ್ಷತ್ರಿಯಸಂಬಾಧಾಂ ವೈಶ್ಯಶೂದ್ರಸಮಾಕುಲಾಮ್|

13031017c ನೈಕದ್ರವ್ಯೋಚ್ಚಯವತೀಂ ಸಮೃದ್ಧವಿಪಣಾಪಣಾಮ್||

ವಿಪ್ರ-ಕ್ಷತ್ರಿಯರ ಮತ್ತು ವೈಶ್ಯ-ಶೂದ್ರರ ಸಮಾಕುಲವಾಗಿದ್ದ ಆ ಪುರಿಯ ಭಂಡಾರಗಳಲ್ಲಿ ನಾನಾವಿಧದ ದ್ರವ್ಯಗಳು ತುಂಬಿದ್ದವು. ಅಂಗಡಿ-ಮುಂಗಟ್ಟುಗಳು ಸಮೃದ್ಧವಾಗಿದ್ದವು.

13031018a ಗಂಗಾಯಾ ಉತ್ತರೇ ಕೂಲೇ ವಪ್ರಾಂತೇ ರಾಜಸತ್ತಮ|

13031018c ಗೋಮತ್ಯಾ ದಕ್ಷಿಣೇ ಚೈವ ಶಕ್ರಸ್ಯೇವಾಮರಾವತೀಮ್||

ರಾಜಸತ್ತಮ! ಶಕ್ರನ ಅಮರಾವತಿಯಂತೆಯೇ ಇದ್ದ ವಾರಣಾಸಿಯು ಗಂಗೆಯ ಉತ್ತರ ತೀರದಿಂದ ಹಿಡಿದು ಗೋಮತಿಯ ದಕ್ಷಿಣ ತೀರದ ವರೆಗೂ ವ್ಯಾಪಿಸಿತ್ತು.

13031019a ತತ್ರ ತಂ ರಾಜಶಾರ್ದೂಲಂ ನಿವಸಂತಂ ಮಹೀಪತಿಮ್|

13031019c ಆಗತ್ಯ ಹೇಹಯಾ ಭೂಯಃ ಪರ್ಯಧಾವಂತ ಭಾರತ||

ಭಾರತ! ಅಲ್ಲಿ ವಾಸಿಸುತ್ತಿದ್ದ ಮಹೀಪತಿ ರಾಜಶಾರ್ದೂಲನನ್ನು ಹೇಹಯರು ಪುನಃ ಬಂದು ಆಕ್ರಮಣಿಸಿದರು.

13031020a ಸ ನಿಷ್ಪತ್ಯ ದದೌ ಯುದ್ಧಂ ತೇಭ್ಯೋ ರಾಜಾ ಮಹಾಬಲಃ|

13031020c ದೇವಾಸುರಸಮಂ ಘೋರಂ ದಿವೋದಾಸೋ ಮಹಾದ್ಯುತಿಃ||

ಮಹಾಬಲ ಮಹಾದ್ಯುತಿ ರಾಜಾ ದಿವೋದಾಸನು ಹೊರಬಂದು ಅವರಿಗೆ ದೇವಾಸುರಸಮ ಘೋರ ಯುದ್ಧವನ್ನೇ ನೀಡಿದನು.

13031021a ಸ ತು ಯುದ್ಧೇ ಮಹಾರಾಜ ದಿನಾನಾಂ ದಶತೀರ್ದಶ|

13031021c ಹತವಾಹನಭೂಯಿಷ್ಠಸ್ತತೋ ದೈನ್ಯಮುಪಾಗಮತ್||

ಮಹಾರಾಜ! ನೂರು ದಿನಗಳು ಸತತವಾಗಿ ನಡೆದ ಆ ಯುದ್ಧದಲ್ಲಿ ದಿವೋದಾಸನು ವಾಹನಗಳನ್ನು ಕಳೆದುಕೊಂಡು ದೈನ್ಯಾವಸ್ಥೆಗೆ ಬಂದನು.

13031022a ಹತಯೋಧಸ್ತತೋ ರಾಜನ್ ಕ್ಷೀಣಕೋಶಶ್ಚ ಭೂಮಿಪಃ|

13031022c ದಿವೋದಾಸಃ ಪುರೀಂ ಹಿತ್ವಾ ಪಲಾಯನಪರೋಽಭವತ್||

ರಾಜನ್! ಯೋಧರನ್ನು ಕಳೆದುಕೊಂಡ ಮತ್ತು ಕೋಶವನ್ನೂ ಬರಿದುಮಾಡಿಕೊಂಡ ಭೂಮಿಪ ದಿವೋದಾಸನು ವಾರಣಾಸೀ ಪುರಿಯನ್ನು ತ್ಯಜಿಸಿ ಪಲಾಯನಪರನಾದನು.

13031023a ಸ ತ್ವಾಶ್ರಮಮುಪಾಗಮ್ಯ ಭರದ್ವಾಜಸ್ಯ ಧೀಮತಃ|

13031023c ಜಗಾಮ ಶರಣಂ ರಾಜಾ ಕೃತಾಂಜಲಿರರಿಂದಮ||

ಅರಿಂದಮ! ಆ ರಾಜನು ಧೀಮತ ಭರದ್ವಾಜನ ಆಶ್ರಮಕ್ಕೆ ಬಂದು ಕೈಮುಗಿದು ಶರಣು ಹೊಕ್ಕನು.

[1]13031024 ರಾಜೋವಾಚ|

13031024a ಭಗವನ್ವೈತಹವ್ಯೈರ್ಮೇ ಯುದ್ಧೇ ವಂಶಃ ಪ್ರಣಾಶಿತಃ|

13031024c ಅಹಮೇಕಃ ಪರಿದ್ಯೂನೋ ಭವಂತಂ ಶರಣಂ ಗತಃ||

ರಾಜನು ಹೇಳಿದನು: “ಭಗವನ್! ವೀತಹವ್ಯನ ಮಕ್ಕಳು ಯುದ್ಧದಲ್ಲಿ ನನ್ನ ವಂಶವನ್ನು ನಾಶಮಾಡಿದರು. ನಾನೊಬ್ಬನೇ ಉಳಿದುಕೊಂಡು ನಿಮ್ಮ ಶರಣು ಬಂದಿದ್ದೇನೆ.

13031025a ಶಿಷ್ಯಸ್ನೇಹೇನ ಭಗವನ್ಸ ಮಾಂ ರಕ್ಷಿತುಮರ್ಹಸಿ|

13031025c ನಿಃಶೇಷೋ ಹಿ ಕೃತೋ ವಂಶೋ ಮಮ ತೈಃ ಪಾಪಕರ್ಮಭಿಃ||

ಭಗವನ್! ಶಿಷ್ಯಸ್ನೇಹದಿಂದ ನನ್ನನ್ನು ರಕ್ಷಿಸಬೇಕು. ಆ ಪಾಪಕರ್ಮಿಗಳು ನನ್ನ ವಂಶವನ್ನೇ ನಿಃಶೇಷವನ್ನಾಗಿ ಮಾಡಿಬಿಟ್ಟರು!”

13031026a ತಮುವಾಚ ಮಹಾಭಾಗೋ ಭರದ್ವಾಜಃ ಪ್ರತಾಪವಾನ್|

13031026c ನ ಭೇತವ್ಯಂ ನ ಭೇತವ್ಯಂ ಸೌದೇವ ವ್ಯೇತು ತೇ ಭಯಮ್||

ಅವನಿಗೆ ಮಹಾಭಾಗ ಪ್ರತಾಪವಾನ್ ಭರದ್ವಾಜನು ಹೇಳಿದನು: “ಸೌದೇವ! ಹೆದರಬೇಡ! ಹೆದರಬೇಡ! ನಿನ್ನ ಭಯವನ್ನು ಕಳೆದುಕೋ!

13031027a ಅಹಮಿಷ್ಟಿಂ ಕರೋಮ್ಯದ್ಯ ಪುತ್ರಾರ್ಥಂ ತೇ ವಿಶಾಂ ಪತೇ|

13031027c ವೈತಹವ್ಯಸಹಸ್ರಾಣಿ ಯಥಾ ತ್ವಂ ಪ್ರಸಹಿಷ್ಯಸಿ||

ವಿಶಾಂಪತೇ! ನಾನು ನಿನ್ನ ಪುತ್ರನಿಗಾಗಿ ಇಂದು ಇಷ್ಟಿಯನ್ನು ಮಾಡುತ್ತೇನೆ. ಅವನಿಂದ ನೀನು ವೀತಹವ್ಯನ ಸಹಸ್ರ ಪುತ್ರರನ್ನು ಸಂಹರಿಸುತ್ತೀಯೆ.”

13031028a ತತ ಇಷ್ಟಿಂ ಚಕಾರರ್ಷಿಸ್ತಸ್ಯ ವೈ ಪುತ್ರಕಾಮಿಕೀಮ್|

13031028c ಅಥಾಸ್ಯ ತನಯೋ ಜಜ್ಞೇ ಪ್ರತರ್ದನ ಇತಿ ಶ್ರುತಃ||

ಆಗ ಆ ಋಷಿಯು ಅವನಿಗೆ ಪುತ್ರಕಾಮೇಷ್ಟಿಯನ್ನು ಮಾಡಿಸಿದನು. ಅದರಿಂದ ಅವನಿಗೆ ಪ್ರತರ್ದನ ಎಂದು ವಿಖ್ಯಾತನಾದ ಮಗನು ಜನಿಸಿದನು.

13031029a ಸ ಜಾತಮಾತ್ರೋ ವವೃಧೇ ಸಮಾಃ ಸದ್ಯಸ್ತ್ರಯೋದಶ|

13031029c ವೇದಂ ಚಾಧಿಜಗೇ ಕೃತ್ಸ್ನಂ ಧನುರ್ವೇದಂ ಚ ಭಾರತ||

ಹುಟ್ಟಿದ ಕೂಡಲೇ ಅವನು ಹದಿಮೂರು ವರ್ಷದವನಾಗಿ ಬೆಳೆದನು. ಭಾರತ! ಹುಟ್ಟುತ್ತಲೇ ಅವನಿಗೆ ಸರ್ವ ವೇದಗಳೂ ಧನುರ್ವೇದವೂ ಅಧಿಗತವಾದವು.

13031030a ಯೋಗೇನ ಚ ಸಮಾವಿಷ್ಟೋ ಭರದ್ವಾಜೇನ ಧೀಮತಾ|

13031030c ತೇಜೋ ಲೌಕ್ಯಂ ಸ ಸಂಗೃಹ್ಯ ತಸ್ಮಿನ್ದೇಶೇ ಸಮಾವಿಶತ್||

ಧೀಮತ ಭರದ್ವಾಜನು ಅವನನ್ನು ಯೋಗಶಕ್ತಿಯಿಂದಲೂ ಸಂಪನ್ನನನ್ನಾಗಿ ಮಾಡಿದನು. ಅವನ ಶರೀರದಲ್ಲಿ ಜಗತ್ತಿನ ತೇಜಸ್ಸುಗಳನ್ನೂ ಸಮಾವೇಶಗೊಳಿಸಿದನು.

13031031a ತತಃ ಸ ಕವಚೀ ಧನ್ವೀ ಬಾಣೀ ದೀಪ್ತ ಇವಾನಲಃ|

13031031c ಪ್ರಯಯೌ ಸ ಧನುರ್ಧುನ್ವನ್ವಿವರ್ಷುರಿವ ತೋಯದಃ||

ಅನಂತರ ಕವಚ-ಧನುಸ್ಸು-ಬಾಣಗಳನ್ನು ಧರಿಸಿ ಅಗ್ನಿಯಂತೆ ಬೆಳಗುತ್ತಿದ್ದ ಅವನು ಮಳೆಸುರಿಸುವ ಮೋಡದಂತೆ ಧನುಸ್ಸನ್ನು ಟೇಂಕರಿಸುತ್ತಾ ಹೊರಟನು.

13031032a ತಂ ದೃಷ್ಟ್ವಾ ಪರಮಂ ಹರ್ಷಂ ಸುದೇವತನಯೋ ಯಯೌ|

13031032c ಮೇನೇ ಚ ಮನಸಾ ದಗ್ಧಾನ್ವೈತಹವ್ಯಾನ್ಸ ಪಾರ್ಥಿವಃ||

ಅವನನ್ನು ನೋಡಿ ಸುದೇವತನಯನು ಪರಮ ಹರ್ಷಿತನಾದನು. ಆ ಪಾರ್ಥಿವನು ವೀತಹವ್ಯನ ಮಕ್ಕಳು ಸುಟ್ಟುಹೋದರೆಂದೇ ಮನಸ್ಸಿನಲ್ಲಿ ಅಂದುಕೊಂಡನು.

13031033a ತತಸ್ತಂ ಯೌವರಾಜ್ಯೇನ ಸ್ಥಾಪಯಿತ್ವಾ ಪ್ರತರ್ದನಮ್|

13031033c ಕೃತಕೃತ್ಯಂ ತದಾತ್ಮಾನಂ ಸ ರಾಜಾ ಅಭ್ಯನಂದತ||

ಪ್ರತರ್ದನನನ್ನು ಯುವರಾಜನನ್ನಾಗಿ ಸ್ಥಾಪಿಸಿ ಆ ರಾಜನು ತನ್ನನ್ನು ತಾನೇ ಕೃತಕೃತ್ಯನಾದೆನೆಂದು ಅಭಿನಂದಿಸಿಕೊಂಡನು.

13031034a ತತಸ್ತು ವೈತಹವ್ಯಾನಾಂ ವಧಾಯ ಸ ಮಹೀಪತಿಃ|

13031034c ಪುತ್ರಂ ಪ್ರಸ್ಥಾಪಯಾಮಾಸ ಪ್ರತರ್ದನಮರಿಂದಮಮ್||

ಅನಂತರ ಆ ಮಹೀಪತಿಯು ವೀತಹವ್ಯನ ಮಕ್ಕಳ ವಧೆಗಾಗಿ ಅರಿಂದಮ ಪುತ್ರ ಪ್ರತರ್ದನನನ್ನು ಹೊರಡಿಸಿದನು.

13031035a ಸರಥಃ ಸ ತು ಸಂತೀರ್ಯ ಗಂಗಾಮಾಶು ಪರಾಕ್ರಮೀ|

13031035c ಪ್ರಯಯೌ ವೀತಹವ್ಯಾನಾಂ ಪುರೀಂ ಪರಪುರಂಜಯಃ||

ಪರಾಕ್ರಮೀ ಪರಪುರಂಜಯ ಪ್ರತರ್ದನನು ರಥಾರೂಡನಾಗಿಯೇ ಗಂಗೆಯನ್ನು ದಾಟಿ ವೀತಹವ್ಯರ ಪುರಿಗೆ ಹೋದನು.

13031036a ವೈತಹವ್ಯಾಸ್ತು ಸಂಶ್ರುತ್ಯ ರಥಘೋಷಂ ಸಮುದ್ಧತಮ್|

13031036c ನಿರ್ಯಯುರ್ನಗರಾಕಾರೈ ರಥೈಃ ಪರರಥಾರುಜೈಃ||

ಮೇಲೆದ್ದು ಕೇಳಿಬರುತ್ತಿದ್ದ ಆ ರಥಘೋಷವನ್ನು ಕೇಳಿ ವೀತಹವ್ಯನ ಮಕ್ಕಳು, ಶತ್ರುರಥಗಳನ್ನು ನಾಶಪಡಿಸುವ ನಗರಾಕಾರದ ರಥಗಳಲ್ಲಿ ಕುಳಿತು ಹೊರಬಂದರು.

13031037a ನಿಷ್ಕ್ರಮ್ಯ ತೇ ನರವ್ಯಾಘ್ರಾ ದಂಶಿತಾಶ್ಚಿತ್ರಯೋಧಿನಃ|

13031037c ಪ್ರತರ್ದನಂ ಸಮಾಜಘ್ನುಃ ಶರವರ್ಷೈರುದಾಯುಧಾಃ||

ಕವಚಧಾರಿಗಳೂ ಚಿತ್ರಯೋಧಿಗಳೂ ಆಗಿದ್ದ ಆ ನರವ್ಯಾಘ್ರರು ನಗರದಿಂದ ಹೊರಬಂದು ಶರವರ್ಶಗಳಿಂದಲೂ ಇತರ ಆಯುಧಗಳಿಂದಲೂ ಆಕ್ರಮಣಿಸಿದರು.

13031038a ಅಸ್ತ್ರೈಶ್ಚ ವಿವಿಧಾಕಾರೈ ರಥೌಘೈಶ್ಚ ಯುಧಿಷ್ಠಿರ|

13031038c ಅಭ್ಯವರ್ಷಂತ ರಾಜಾನಂ ಹಿಮವಂತಮಿವಾಂಬುದಾಃ||

ಯುಧಿಷ್ಠಿರ! ವಿವಿಧಾಕಾರದ ಅಸ್ತ್ರಗಳಿಂದ ಮತ್ತು ರಥೌಘಗಳಿಂದ ಹಿಮವಂತನನ್ನು ಮೋಡಗಳು ಹೇಗೋ ಹಾಗೆ ರಾಜನ ಮೇಲೆ ಸುರಿಸಿದರು.

13031039a ಅಸ್ತ್ರೈರಸ್ತ್ರಾಣಿ ಸಂವಾರ್ಯ ತೇಷಾಂ ರಾಜಾ ಪ್ರತರ್ದನಃ|

13031039c ಜಘಾನ ತಾನ್ಮಹಾತೇಜಾ ವಜ್ರಾನಲಸಮೈಃ ಶರೈಃ||

ಅವರ ಅಸ್ತ್ರಗಳನ್ನು ಅಸ್ತ್ರಗಳಿಂದಲೇ ತಡೆದು ರಾಜಾ ಪ್ರತರ್ದನನು ವಜ್ರಾನಲಸಮ ಶರಗಳಿಂದ ಆ ಮಹಾತೇಜಸ್ವಿಗಳನ್ನು ಸಂಹರಿಸಿದನು.

13031040a ಕೃತ್ತೋತ್ತಮಾಂಗಾಸ್ತೇ ರಾಜನ್ಭಲ್ಲೈಃ ಶತಸಹಸ್ರಶಃ|

13031040c ಅಪತನ್ರುಧಿರಾರ್ದ್ರಾಂಗಾ ನಿಕೃತ್ತಾ ಇವ ಕಿಂಶುಕಾಃ||

ಭಲ್ಲೆಗಳಿಂದ ಅವರ ಶಿರಗಳು ನೂರಾರು ಸಹಸ್ರಾರು ಚೂರುಗಳಾಗಿ ರಕ್ತಸಿಕ್ತಗೊಂಡು ಕಿಂಶುಕ ಪುಷ್ಪಗಳಂತೆ ಉದುರಿದವು.

13031041a ಹತೇಷು ತೇಷು ಸರ್ವೇಷು ವೀತಹವ್ಯಃ ಸುತೇಷ್ವಥ|

13031041c ಪ್ರಾದ್ರವನ್ನಗರಂ ಹಿತ್ವಾ ಭೃಗೋರಾಶ್ರಮಮಪ್ಯುತ||

ತನ್ನ ಮಕ್ಕಳೆಲ್ಲರೂ ಹತರಾಗಲು ವೀತಹವ್ಯನು ನಗರವನ್ನು ತೊರೆದು ಓಡಿಹೋಗಿ ಭೃಗುವಿನ ಆಶ್ರಮವನ್ನು ತಲುಪಿದನು.

13031042a ಯಯೌ ಭೃಗುಂ ಚ ಶರಣಂ ವೀತಹವ್ಯೋ ನರಾಧಿಪಃ|

13031042c ಅಭಯಂ ಚ ದದೌ ತಸ್ಮೈ ರಾಜ್ಞೇ ರಾಜನ್ಭೃಗುಸ್ತಥಾ|

13031042e ತತೋ ದದಾವಾಸನಂ ಚ ತಸ್ಮೈ ಶಿಷ್ಯೋ ಭೃಗೋಸ್ತದಾ||

ರಾಜನ್! ನರಾಧಿಪ ವೀತಹವ್ಯನು ಭೃಗುವಿನ ಶರಣು ಹೊಕ್ಕನು. ಭೃಗುವು ಆಗ ಆ ರಾಜನಿಗೆ ಅಭಯವನ್ನಿತ್ತನು. ಭೃಗುವು ಅವನಿಗೆ ಶಿಷ್ಯನಾಗಿ ಅಲ್ಲಿಯೇ ಆಶ್ರಯವನ್ನಿತ್ತನು.

13031043a ಅಥಾನುಪದಮೇವಾಶು ತತ್ರಾಗಚ್ಚತ್ಪ್ರತರ್ದನಃ|

13031043c ಸ ಪ್ರಾಪ್ಯ ಚಾಶ್ರಮಪದಂ ದಿವೋದಾಸಾತ್ಮಜೋಽಬ್ರವೀತ್||

ಅವನನ್ನೇ ಹಿಂಬಾಲಿಸಿ ಬಂದ ಪ್ರತರ್ದನನು ಅಲ್ಲಿಗೇ ಹೋದನು. ಆಶ್ರಮಪದವನ್ನು ತಲುಪಿ ದಿವೋದಾಸನ ಮಗನು ಕೂಗಿ ಕೇಳಿದನು:

13031044a ಭೋ ಭೋಃ ಕೇಽತ್ರಾಶ್ರಮೇ ಸಂತಿ ಭೃಗೋಃ ಶಿಷ್ಯಾ ಮಹಾತ್ಮನಃ|

13031044c ದ್ರಷ್ಟುಮಿಚ್ಚೇ ಮುನಿಮಹಂ ತಸ್ಯಾಚಕ್ಷತ ಮಾಮಿತಿ||

“ಭೋ! ಭೋ! ಈ ಆಶ್ರಮದಲ್ಲಿ ಮಹಾತ್ಮ ಭೃಗುವಿನ ಶಿಷ್ಯರು ಯಾರಿದ್ದೀರಿ? ನಾನು ಮುನಿಯನ್ನು ನೋಡಲು ಇಚ್ಛಿಸುತ್ತೇನೆ. ನಾನೆಂದು ಅವನಿಗೆ ಹೇಳಿರಿ!”

13031045a ಸ ತಂ ವಿದಿತ್ವಾ ತು ಭೃಗುರ್ನಿಶ್ಚಕ್ರಾಮಾಶ್ರಮಾತ್ತದಾ|

13031045c ಪೂಜಯಾಮಾಸ ಚ ತತೋ ವಿಧಿನಾ ಪರಮೇಣ ಹ||

ಅವನು ಬಂದಿದ್ದಾನೆಂದು ತಿಳಿದ ಭೃಗುವು ಆಶ್ರಮದಿಂದ ಹೊರಬಂದು ಅವನನ್ನು ಪರಮ ವಿಧಿಯಿಂದ ಪೂಜಿಸಿದನು.

13031046a ಉವಾಚ ಚೈನಂ ರಾಜೇಂದ್ರ ಕಿಂ ಕಾರ್ಯಮಿತಿ ಪಾರ್ಥಿವಮ್|

13031046c ಸ ಚೋವಾಚ ನೃಪಸ್ತಸ್ಮೈ ಯದಾಗಮನಕಾರಣಮ್||

ಮತ್ತು “ರಾಜೇಂದ್ರ! ಏನು ಕಾರ್ಯವಿದೆ?” ಎಂದು ಪಾರ್ಥಿವನನ್ನು ಕೇಳಿದನು. ಆಗ ನೃಪನು ಅವನಿಗೆ ಬಂದಿರುವ ಕಾರಣವನ್ನು ಹೇಳಿದನು:

13031047a ಅಯಂ ಬ್ರಹ್ಮನ್ನಿತೋ ರಾಜಾ ವೀತಹವ್ಯೋ ವಿಸರ್ಜ್ಯತಾಮ್|

13031047c ಅಸ್ಯ ಪುತ್ರೈರ್ಹಿ ಮೇ ಬ್ರಹ್ಮನ್ಕೃತ್ಸ್ನೋ ವಂಶಃ ಪ್ರಣಾಶಿತಃ|

13031047e ಉತ್ಸಾದಿತಶ್ಚ ವಿಷಯಃ ಕಾಶೀನಾಂ ರತ್ನಸಂಚಯಃ||

ಬ್ರಹ್ಮನ್! ಇಲ್ಲಿಗೆ ಆಗಮಿಸಿರುವ ರಾಜಾ ವೀತಹವ್ಯನನ್ನು ಹೊರಹಾಕಿರಿ. ಬ್ರಹ್ಮನ್! ಇವನ ಪುತ್ರರೇ ನನ್ನ ವಂಶವೆಲ್ಲವನ್ನೂ ನಾಶಪಡಿಸಿದರು. ಕಾಶೀ ರಾಜ್ಯ ಮತ್ತು ರತ್ನಸಂಚಯಗಳೆಲ್ಲವೂ ಇವರಿಂದ ಧ್ವಂಸವಾಯಿತು.

13031048a ಏತಸ್ಯ ವೀರ್ಯದೃಪ್ತಸ್ಯ ಹತಂ ಪುತ್ರಶತಂ ಮಯಾ|

13031048c ಅಸ್ಯೇದಾನೀಂ ವಧಾದ್ಬ್ರಹ್ಮನ್ಭವಿಷ್ಯಾಮ್ಯನೃಣಃ ಪಿತುಃ||

ಬ್ರಹ್ಮನ್! ಇವನ ಬಲದರ್ಪಿತ ನೂರು ಮಕ್ಕಳನ್ನು ನಾನೀಗಲೇ ಸಂಹರಿಸಿದ್ದೇನೆ. ಇವನನ್ನೂ ಸಂಹರಿಸಿದರೆ ನನ್ನ ತಂದೆಯ ಋಣದಿಂದ ಮುಕ್ತನಾಗುತ್ತೇನೆ.”

13031049a ತಮುವಾಚ ಕೃಪಾವಿಷ್ಟೋ ಭೃಗುರ್ಧರ್ಮಭೃತಾಂ ವರಃ|

13031049c ನೇಹಾಸ್ತಿ ಕ್ಷತ್ರಿಯಃ ಕಶ್ಚಿತ್ಸರ್ವೇ ಹೀಮೇ ದ್ವಿಜಾತಯಃ||

ಆಗ ಕೃಪಾವಿಷ್ಟನಾದ ಧರ್ಮಭೃತರಲ್ಲಿ ಶ್ರೇಷ್ಠ ಭೃಗುವು ಅವನಿಗೆ ಹೇಳಿದನು: “ಇಲ್ಲಿ ಕ್ಷತ್ರಿಯರ್ಯಾರೂ ಇಲ್ಲ. ಇಲ್ಲಿರುವವರೆಲ್ಲರೂ ಬ್ರಾಹ್ಮಣರೇ ಆಗಿದ್ದಾರೆ!”

13031050a ಏವಂ ತು ವಚನಂ ಶ್ರುತ್ವಾ ಭೃಗೋಸ್ತಥ್ಯಂ ಪ್ರತರ್ದನಃ|

13031050c ಪಾದಾವುಪಸ್ಪೃಶ್ಯ ಶನೈಃ ಪ್ರಹಸನ್ವಾಕ್ಯಮಬ್ರವೀತ್||

ಭೃಗುವಿನ ಆ ತಥ್ಯ ವಚನವನ್ನು ಕೇಳಿ ಪ್ರತರ್ದನನು ಮೆಲ್ಲನೇ ಅವನ ಪಾದಗಳನ್ನು ಮುಟ್ಟಿ ನಗುತ್ತಾ ಈ ಮಾತನ್ನಾಡಿದನು:

13031051a ಏವಮಪ್ಯಸ್ಮಿ ಭಗವನ್ ಕೃತಕೃತ್ಯೋ ನ ಸಂಶಯಃ|

13031051c ಯದೇಷ ರಾಜಾ ವೀರ್ಯೇಣ ಸ್ವಜಾತಿಂ ತ್ಯಾಜಿತೋ ಮಯಾ||

“ಭಗವನ್! ಇದು ಹಾಗೆಯೇ ಆಗಿದ್ದರೆ ನಾನು ನಿಸ್ಸಂಶಯವಾಗಿಯೂ ಕೃತಕೃತ್ಯನಾಗಿದ್ದೇನೆ. ನನ್ನ ವೀರ್ಯದಿಂದ ಈ ರಾಜನು ತನ್ನ ಜಾತಿಯನ್ನೇ ತ್ಯಜಿಸುವಂತೆ ಮಾಡಿದೆನು!

13031052a ಅನುಜಾನೀಹಿ ಮಾಂ ಬ್ರಹ್ಮನ್ಧ್ಯಾಯಸ್ವ ಚ ಶಿವೇನ ಮಾಮ್|

13031052c ತ್ಯಾಜಿತೋ ಹಿ ಮಯಾ ಜಾತಿಮೇಷ ರಾಜಾ ಭೃಗೂದ್ವಹ||

ಭೃಗೂದ್ವಹ! ಬ್ರಹ್ಮನ್! ನನಗೆ ಅನುಮತಿಯನ್ನು ನೀಡಿರಿ ಮತ್ತು ಮಂಗಳವಾಗಲೆಂದು ಹರಸಿರಿ. ನನ್ನಿಂದಾಗಿ ಈ ರಾಜನು ತನ್ನ ಜಾತಿಯನ್ನೇ ತೊರೆದಂತಾಯಿತು!”

13031053a ತತಸ್ತೇನಾಭ್ಯನುಜ್ಞಾತೋ ಯಯೌ ರಾಜಾ ಪ್ರತರ್ದನಃ|

13031053c ಯಥಾಗತಂ ಮಹಾರಾಜ ಮುಕ್ತ್ವಾ ವಿಷಮಿವೋರಗಃ||

ಮಹಾರಾಜ! ಅನಂತರ ಅವನಿಂದ ಅನುಮತಿಯನ್ನು ಪಡೆದು ರಾಜಾ ಪ್ರತರ್ದನನು ವಿಷವನ್ನು ಕಕ್ಕಿದ ಹಾವಿನಂತೆ ಕ್ರೋಧವನ್ನು ತ್ಯಜಿಸಿ ಬಂದ ದಾರಿಯನ್ನೇ ಹಿಡಿದು ಹೊರಟುಹೋದನು.

13031054a ಭೃಗೋರ್ವಚನಮಾತ್ರೇಣ ಸ ಚ ಬ್ರಹ್ಮರ್ಷಿತಾಂ ಗತಃ|

13031054c ವೀತಹವ್ಯೋ ಮಹಾರಾಜ ಬ್ರಹ್ಮವಾದಿತ್ವಮೇವ ಚ||

ಮಹಾರಾಜ! ಭೃಗುವಿನ ವಚನಮಾತ್ರದಿಂದ ವೀತಹವ್ಯನು ಬ್ರಹ್ಮರ್ಷಿಯಾದನು. ಬ್ರಹ್ಮವಾದಿಯೂ ಆದನು.

13031055a ತಸ್ಯ ಗೃತ್ಸಮದಃ ಪುತ್ರೋ ರೂಪೇಣೇಂದ್ರ ಇವಾಪರಃ|

13031055c ಶಕ್ರಸ್ತ್ವಮಿತಿ ಯೋ ದೈತ್ಯೈರ್ನಿಗೃಹೀತಃ ಕಿಲಾಭವತ್||

ವೀತಹವ್ಯನಿಗೆ ಗೃತ್ಸಮದನೆಂಬ ಪುತ್ರನಾದನು. ಅವನು ಇನ್ನೊಬ್ಬ ಇಂದ್ರನಂತೆಯೇ ರೂಪವಂತನಾಗಿದ್ದನು. ಅವನು ಇಂದ್ರನೆಂದೇ ತಿಳಿದು ದೈತ್ಯರು ಅವನನ್ನು ಹಿಡಿದಿಟ್ಟಿದ್ದರಲ್ಲವೇ?

13031056a ಋಗ್ವೇದೇ ವರ್ತತೇ ಚಾಗ್ರ್ಯಾ ಶ್ರುತಿರತ್ರ ವಿಶಾಂ ಪತೇ|

13031056c ಯತ್ರ ಗೃತ್ಸಮದೋ ಬ್ರಹ್ಮನ್ಬ್ರಾಹ್ಮಣೈಃ ಸ ಮಹೀಯತೇ||

ವಿಶಾಂಪತೇ! ಋಗ್ವೇದದಲ್ಲಿ ಇವನ ಕುರಿತು ಒಂದು ಶ್ರೇಷ್ಟ ಋಕ್ಕೇ ಇದೆ. ಇದರಂತೆ ಬ್ರಹ್ಮನ್ ಗೃತ್ಸಮದನು ಬ್ರಾಹ್ಮಣ್ಯದಿಂದ ಮೆರೆಯುತ್ತಿದ್ದನು.

13031057a ಸ ಬ್ರಹ್ಮಚಾರೀ ವಿಪ್ರರ್ಷಿಃ ಶ್ರೀಮಾನ್ ಗೃತ್ಸಮದೋಽಭವತ್|

13031057c ಪುತ್ರೋ ಗೃತ್ಸಮದಸ್ಯಾಪಿ ಸುಚೇತಾ ಅಭವದ್ದ್ವಿಜಃ||

ಶ್ರೀಮಾನ್ ಗೃತ್ಸಮದನು ಬ್ರಹ್ಮಚಾರಿಯೂ ವಿಪ್ರರ್ಷಿಯೂ ಆಗಿದ್ದನು. ಗೃತ್ಸಮದನಿಗೆ ದ್ವಿಜ ಸುಚೇತನು ಪುತ್ರನಾದನು.

13031058a ವರ್ಚಾಃ ಸುತೇಜಸಃ ಪುತ್ರೋ ವಿಹವ್ಯಸ್ತಸ್ಯ ಚಾತ್ಮಜಃ|

13031058c ವಿಹವ್ಯಸ್ಯ ತು ಪುತ್ರಸ್ತು ವಿತತ್ಯಸ್ತಸ್ಯ ಚಾತ್ಮಜಃ||

ಸುಚೇತಸನ ಮಗನು ಮಹಾತೇಜಸ್ವಿ ವರ್ಚಸನು. ವರ್ಚಸನ ಮಗನು ವಿಹವ್ಯನು. ವಿಹವ್ಯನ ಪುತ್ರನು ವಿತತ್ಯನು.

13031059a ವಿತತ್ಯಸ್ಯ ಸುತಃ ಸತ್ಯಃ ಸಂತಃ ಸತ್ಯಸ್ಯ ಚಾತ್ಮಜಃ|

13031059c ಶ್ರವಾಸ್ತಸ್ಯ ಸುತಶ್ಚರ್ಷಿಃ ಶ್ರವಸಶ್ಚಾಭವತ್ತಮಃ||

ವಿತತ್ಯನ ಮಗನು ಸತ್ಯ. ಸಂತನು ಸತ್ಯನ ಮಗ. ಶ್ರವಾಸನು ಸಂತನ ಮಗ. ತಮಸನು ಆ ಋಷಿಯ ಮಗನಾದನು.

13031060a ತಮಸಶ್ಚ ಪ್ರಕಾಶೋಽಭೂತ್ತನಯೋ ದ್ವಿಜಸತ್ತಮಃ|

13031060c ಪ್ರಕಾಶಸ್ಯ ಚ ವಾಗಿಂದ್ರೋ ಬಭೂವ ಜಯತಾಂ ವರಃ||

ತಮಸನ ಮಗನು ದ್ವಿಜಸತ್ತಮ ಪ್ರಕಾಶನು. ಪ್ರಕಾಶನ ಮಗ ವಾಗೀಂದ್ರನು ಜಯಶಾಲಿಗಳಲ್ಲಿ ಶ್ರೇಷ್ಠನಾಗಿದ್ದನು.

13031061a ತಸ್ಯಾತ್ಮಜಶ್ಚ ಪ್ರಮತಿರ್ವೇದವೇದಾಂಗಪಾರಗಃ|

13031061c ಘೃತಾಚ್ಯಾಂ ತಸ್ಯ ಪುತ್ರಸ್ತು ರುರುರ್ನಾಮೋದಪದ್ಯತ||

ವೇದವೇದಾಂಗ ಪಾರಂಗತ ಪ್ರಮತಿಯು ಅವನ ಮಗನು. ಘೃತಾಚಿಯಲ್ಲಿ ಅವನಿಗೆ ರುರು ಎಂಬ ಹೆಸರಿನ ಪುತ್ರನಾದನು.

13031062a ಪ್ರಮದ್ವರಾಯಾಂ ತು ರುರೋಃ ಪುತ್ರಃ ಸಮುದಪದ್ಯತ|

13031062c ಶುನಕೋ ನಾಮ ವಿಪ್ರರ್ಷಿರ್ಯಸ್ಯ ಪುತ್ರೋಽಥ ಶೌನಕಃ||

ಪ್ರಮದ್ವರೆಯಲ್ಲಿ ರುರುವಿಗೆ ಶುನಕ ಎಂಬ ಹೆಸರಿನ ಪುತ್ರನಾದನು. ಆ ವಿಪ್ರರ್ಷಿಯ ಪುತ್ರನೇ ಶೌನಕ.

13031063a ಏವಂ ವಿಪ್ರತ್ವಮಗಮದ್ವೀತಹವ್ಯೋ ನರಾಧಿಪಃ|

13031063c ಭೃಗೋಃ ಪ್ರಸಾದಾದ್ರಾಜೇಂದ್ರ ಕ್ಷತ್ರಿಯಃ ಕ್ಷತ್ರಿಯರ್ಷಭ||

ರಾಜೇಂದ್ರ! ಕ್ಷತ್ರಿಯರ್ಷಭ! ಹೀಗೆ ಭೃಗುವಿನ ಪ್ರಸಾದದಿಂದ ನರಾಧಿಪ ವೀತಹವ್ಯನು ವಿಪ್ರತ್ವವನ್ನು ಪಡೆದುಕೊಂಡನು.

13031064a ತಥೈವ ಕಥಿತೋ ವಂಶೋ ಮಯಾ ಗಾರ್ತ್ಸಮದಸ್ತವ|

13031064c ವಿಸ್ತರೇಣ ಮಹಾರಾಜ ಕಿಮನ್ಯದನುಪೃಚ್ಚಸಿ||

ಹಾಗೆಯೇ ಗಾರ್ತ್ಸಮದನ ವಂಶವನ್ನೂ ವಿಸ್ತಾರವಾಗಿ ಹೇಳಿದ್ದೇನೆ. ಮಹಾರಾಜ! ಬೇರೆ ಏನನ್ನು ಕೇಳಬಯಸುತ್ತೀಯೆ?”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ವೀತಹವ್ಯೋಪಖ್ಯಾನಂ ನಾಮ ಏಕತ್ರಿಂಶೋಽಧ್ಯಾಯಃ|

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ವೀತಹವ್ಯೋಪಾಖ್ಯಾನ ಎನ್ನುವ ಮೂವತ್ತೊಂದನೇ ಅಧ್ಯಾಯವು.

Related image

[1] ಭಾರತ ದರ್ಶನದಲ್ಲಿ ಇದಕ್ಕೆ ಮೊದಲು ಈ ಒಂದು ಶ್ಲೋಕವಿದೆ: ಭಾರದ್ವಾಜ ಉವಾಚ| ಕಿಮಾಗಮನಕೃತ್ಯಂ ತೇ ಸರ್ವಂ ಪ್ರಬ್ರೂಹಿ ಮೇ ನೃಪ| ಯತ್ತೇ ಪ್ರಿಯಂ ತತ್ಕರಿಷ್ಯೇ ನ ಮೇಽತ್ರಾಸ್ತಿ ವಿಚಾರಣಾ||

Comments are closed.