Anushasana Parva: Chapter 30

ಅನುಶಾಸನ ಪರ್ವ: ದಾನಧರ್ಮ ಪರ್ವ

೩೦

ತಪಸ್ಸನ್ನು ಮುಂದುವರಿಸಿದರೂ ಮತಂಗನಿಗೆ ಬ್ರಾಹ್ಮಣತ್ವವು ದೊರೆಯದಿರಲು ಅವನು ಇಂದ್ರನಿಂದ ಅನ್ಯ ವರವನ್ನು ಪಡೆದುಕೊಂಡಿದುದು (೧-೧೬).

13030001 ಭೀಷ್ಮ ಉವಾಚ|

13030001a ಏವಮುಕ್ತೋ ಮತಂಗಸ್ತು ಭೃಶಂ ಶೋಕಪರಾಯಣಃ|

13030001c ಅತಿಷ್ಠತ ಗಯಾಂ ಗತ್ವಾ ಸೋಽಂಗುಷ್ಠೇನ ಶತಂ ಸಮಾಃ||

ಭೀಷ್ಮನು ಹೇಳಿದನು: “ಇದನ್ನು ಕೇಳಿ ಅತ್ಯಂತ ಶೋಕಪರಾಯಣನಾದ ಮತಂಗನಾದರೋ ಗಯೆಗೆ ಹೋಗಿ ನೂರು ವರ್ಷಗಳ ಕಾಲ ಅಂಗುಷ್ಠದ ಮೇಲೆ ನಿಂತುಕೊಂಡನು.

13030002a ಸುದುಷ್ಕರಂ ವಹನ್ಯೋಗಂ ಕೃಶೋ ಧಮನಿಸಂತತಃ|

13030002c ತ್ವಗಸ್ಥಿಭೂತೋ ಧರ್ಮಾತ್ಮಾ ಸ ಪಪಾತೇತಿ ನಃ ಶ್ರುತಮ್||

ದುಷ್ಕರ ಯೋಗವನ್ನಾಶ್ರಯಿಸಿ ಧಮನಿ-ಮೂಳೆಗಳು ಮಾತ್ರ ಕಾಣುವಷ್ಟು ಕೃಶನಾಗಿ, ಕೇವಲ ಚರ್ಮ-ಮೂಳೆಗಳನ್ನು ಹೊಂದಿದರೂ ಆ ಧರ್ಮಾತ್ಮನು ಬಿದ್ದನೆಂದು ನಾವು ಕೇಳಿದ್ದೇವೆ.

13030003a ತಂ ಪತಂತಮಭಿದ್ರುತ್ಯ ಪರಿಜಗ್ರಾಹ ವಾಸವಃ|

13030003c ವರಾಣಾಮೀಶ್ವರೋ ದಾತಾ ಸರ್ವಭೂತಹಿತೇ ರತಃ||

ಬೀಳುತ್ತಿರುವ ಅವನನ್ನು ವಾಸವನು ಓಡಿಹೋಗಿ ಹಿಡಿದನು. ಸರ್ವಭೂತಹಿತರತನಾದ ಆ ಈಶ್ವರನು ವರಗಳನ್ನಿತ್ತನು.

13030004 ಶಕ್ರ ಉವಾಚ|

13030004a ಮತಂಗ ಬ್ರಾಹ್ಮಣತ್ವಂ ತೇ ಸಂವೃತಂ ಪರಿಪಂಥಿಭಿಃ[1]|

13030004c ಪೂಜಯನ್ಸುಖಮಾಪ್ನೋತಿ ದುಃಖಮಾಪ್ನೋತ್ಯಪೂಜಯನ್||

ಶಕ್ರನು ಹೇಳಿದನು: “ಮತಂಗ! ನಿನ್ನ ಬ್ರಾಹ್ಮಣತ್ವವು ಪರಿಪಂಥಿಗಳಿಂದ ಸಂವೃತವಾಗಿದೆ[2]. ಬ್ರಾಹ್ಮಣತ್ವವನ್ನು ಪೂಜಿಸುವುದರಿಂದ ಸುಖವನ್ನು ಹೊಂದುತ್ತೀಯೆ. ಪೂಜಿಸದೇ ದುಃಖವನ್ನು ಹೊಂದುತ್ತೀಯೆ.

13030005a ಬ್ರಾಹ್ಮಣೇ ಸರ್ವಭೂತಾನಾಂ ಯೋಗಕ್ಷೇಮಃ ಸಮಾಹಿತಃ|

13030005c ಬ್ರಾಹ್ಮಣೇಭ್ಯೋಽನುತೃಪ್ಯಂತಿ ಪಿತರೋ ದೇವತಾಸ್ತಥಾ||

ಬ್ರಾಹ್ಮಣನು ಸರ್ವಭೂತಗಳ ಯೋಗ-ಕ್ಷೇಮಗಳಲ್ಲಿ ನಿರತನಾಗಿರುತ್ತಾನೆ. ಬ್ರಾಹ್ಮಣರಿಂದ ಪಿತೃಗಳು ಮತ್ತು ದೇವತೆಗಳು ತೃಪ್ತಿಗೊಳ್ಳುತ್ತಾರೆ.

13030006a ಬ್ರಾಹ್ಮಣಃ ಸರ್ವಭೂತಾನಾಂ ಮತಂಗ ಪರ ಉಚ್ಯತೇ|

13030006c ಬ್ರಾಹ್ಮಣಃ ಕುರುತೇ ತದ್ಧಿ ಯಥಾ ಯದ್ಯಚ್ಚ ವಾಂಚತಿ||

ಮತಂಗ! ಸರ್ವಭೂತಗಳಲ್ಲಿ ಬ್ರಾಹ್ಮಣನು ಉತ್ತಮನೆಂದು ಹೇಳುತ್ತಾರೆ. ಬ್ರಾಹ್ಮಣನು ಬಯಸಿದುದನ್ನು ಅದೇ ರೀತಿಯಲ್ಲಿ ಪಡೆದುಕೊಳ್ಳುತ್ತಾನೆ.

13030007a ಬಹ್ವೀಸ್ತು ಸಂಸರನ್ಯೋನೀರ್ಜಾಯಮಾನಃ ಪುನಃ ಪುನಃ|

13030007c ಪರ್ಯಾಯೇ ತಾತ ಕಸ್ಮಿಂಶ್ಚಿದ್ಬ್ರಾಹ್ಮಣ್ಯಮಿಹ ವಿಂದತಿ||

ಮಗೂ! ಜೀವವು ಸಂಸಾರ ಯೋನಿಗಳಲ್ಲಿ ಪುನಃ ಪುನಃ ಹುಟ್ಟು-ಸಾವುಗಳನ್ನು ಅನುಭವಿಸಿ, ಅಂಥಹ ಎಷ್ಟೋ ಜನ್ಮ-ಮರಣಗಳ ಪರ್ಯಾಯದಲ್ಲಿ ಬ್ರಾಹ್ಮಣತ್ವವನ್ನು ಹೊಂದುತ್ತಾನೆ.”

[3]13030008 ಮತಂಗ ಉವಾಚ|

13030008a ಕಿಂ ಮಾಂ ತುದಸಿ ದುಃಖಾರ್ತಂ ಮೃತಂ ಮಾರಯಸೇ ಚ ಮಾಮ್|

13030008c ತಂ ತು ಶೋಚಾಮಿ ಯೋ ಲಬ್ಧ್ವಾ ಬ್ರಾಹ್ಮಣ್ಯಂ ನ ಬುಭೂಷತೇ||

ಮತಂಗನು ಹೇಳಿದನು: “ದುಃಖಾರ್ತನಾಗಿರುವ ನನ್ನನ್ನು ನಿನ್ನ ಈ ಮಾತುಗಳಿಂದ ಏಕೆ ಸಂಕಟಪಡಿಸುತ್ತಿರುವೆ? ಬ್ರಾಹ್ಮಣ್ಯವನ್ನು ಪಡೆದೂ ನೀನು ಅದಕ್ಕೆ ಭೂಷಣನಾಗಿ ವರ್ತಿಸುತ್ತಿಲ್ಲ ಎಂದು ನನಗೆ ದುಃಖವಾಗುತ್ತಿದೆ!

13030009a ಬ್ರಾಹ್ಮಣ್ಯಂ ಯದಿ ದುಷ್ಪ್ರಾಪಂ ತ್ರಿಭಿರ್ವರ್ಣೈಃ ಶತಕ್ರತೋ|

13030009c ಸುದುರ್ಲಭಂ ತದಾವಾಪ್ಯ ನಾನುತಿಷ್ಠಂತಿ ಮಾನವಾಃ||

ಶತಕ್ರತೋ! ಮೂರು ವರ್ಣದವರಿಗೂ ಬ್ರಾಹ್ಮಣ್ಯವು ಪ್ರಾಪ್ತವಾಗುವುದಿಲ್ಲವೆಂದಾದರೆ ಸುದುರ್ಲಭವಾದ ಅದನ್ನು ಪಡೆದ ಮಾನವರೂ ಅದರಂತೆ ನಡೆದುಕೊಳ್ಳುತ್ತಿಲ್ಲ.

13030010a ಯಃ ಪಾಪೇಭ್ಯಃ ಪಾಪತಮಸ್ತೇಷಾಮಧಮ ಏವ ಸಃ|

13030010c ಬ್ರಾಹ್ಮಣ್ಯಂ ಯೋಽವಜಾನೀತೇ ಧನಂ ಲಬ್ಧ್ವೇವ ದುರ್ಲಭಮ್||

ದುರ್ಲಭ ಧನವನ್ನು ಪಡೆದವನಂತೆ ಬ್ರಾಹ್ಮಣತ್ವವನ್ನು ಹೊಂದಿಯೂ ಅದರ ಹಿರಿಮೆಯನ್ನು ಅರಿಯದೇ ಸ್ವಭಾವ ಜನ್ಮವಾದ ಗುಣಗಳನ್ನು ಹೊಂದಿರದೇ ಇದ್ದರೆ ಅವನು ಪಾಪಿಗಳಲ್ಲಿ ಅಧಮನಾಗುತ್ತಾನೆ.

13030011a ದುಷ್ಪ್ರಾಪಂ ಖಲು ವಿಪ್ರತ್ವಂ ಪ್ರಾಪ್ತಂ ದುರನುಪಾಲನಮ್|

13030011c ದುರವಾಪಮವಾಪ್ಯೈತನ್ನಾನುತಿಷ್ಠಂತಿ ಮಾನವಾಃ||

ವಿಪ್ರತ್ವವನ್ನು ಪಡೆಯುವುದಕ್ಕಿಂತಲೂ ಅದನ್ನು ಪಡೆದ ನಂತರ ಅದರ ಅನುಪಾಲನೆಮಾಡುವುದು ಇನ್ನೂ ಕಷ್ಟಕರವು. ಇಂಥಹ ಪಡೆದುಕೊಳ್ಳಲು ಕಷ್ಟಸಾಧ್ಯವಾದ ಬ್ರಾಹ್ಮಣತ್ವವನ್ನು ಪಡೆದೂ ಮಾನವರು ಬ್ರಾಹ್ಮಣರಂತೆ ನಡೆದುಕೊಳ್ಳುವುದಿಲ್ಲ.

13030012a ಏಕಾರಾಮೋ ಹ್ಯಹಂ ಶಕ್ರ ನಿರ್ದ್ವಂದ್ವೋ ನಿಷ್ಪರಿಗ್ರಹಃ|

13030012c ಅಹಿಂಸಾದಮದಾನಸ್ಥಃ ಕಥಂ ನಾರ್ಹಾಮಿ ವಿಪ್ರತಾಮ್||

ಶಕ್ರ! ನಾನು ಏಕಾಂತಪ್ರಿಯನು. ನಿರ್ದ್ವಂದ್ವನೂ ನಿಷ್ಪರಿಗ್ರಹನೂ ಆಗಿದ್ದೇನೆ. ಅಹಿಂಸೆ, ದಮ, ದಾನಗಳಲ್ಲಿ ನಿರತನಾಗಿದ್ದೇನೆ. ಹೀಗಿರುವಾಗ ನಾನು ಹೇಗೆ ವಿಪ್ರತ್ವಕ್ಕೆ ಅರ್ಹನಾಗುವುದಿಲ್ಲ?

13030013a ಯಥಾಕಾಮವಿಹಾರೀ ಸ್ಯಾಂ ಕಾಮರೂಪೀ ವಿಹಂಗಮಃ|

13030013c ಬ್ರಹ್ಮಕ್ಷತ್ರಾವಿರೋಧೇನ ಪೂಜಾಂ ಚ ಪ್ರಾಪ್ನುಯಾಮಹಮ್||

13030013E ಯಥಾ ಮಮಾಕ್ಷಯಾ ಕೀರ್ತಿರ್ಭವೇಚ್ಚಾಪಿ ಪುರಂದರ||

ಪುರಂದರ! ನಾನು ಕಾಮರೂಪಿಯಾಗಿ ಸ್ವೇಚ್ಛೆಯಿಂದ ಆಕಾಶದಲ್ಲಿ ಸಂಚರಿಸುವಂತವನಾಗಲಿ. ಬ್ರಾಹ್ಮಣ-ಕ್ಷತ್ರಿಯರಿಗೆ ವಿರೋಧವಾಗದಂತೆ ನಾನು ಗೌರವವನ್ನು ಪಡೆದುಕೊಳ್ಳುವಂತಾಗಲಿ. ನನ್ನ ಕೀರ್ತಿಯು ಅಕ್ಷಯವಾಗಲಿ.”

13030014 ಇಂದ್ರ ಉವಾಚ|

13030014a ಚಂದೋದೇವ ಇತಿ ಖ್ಯಾತಃ ಸ್ತ್ರೀಣಾಂ ಪೂಜ್ಯೋ ಭವಿಷ್ಯಸಿ|

ಇಂದ್ರನು ಹೇಳಿದನು: “ಚಂದೋದೇವನೆಂದು ಖ್ಯಾತನಾಗಿ ಸ್ತ್ರೀಯರಿಗೆ ಪೂಜ್ಯನಾಗುತ್ತೀಯೆ!””

13030015 ಭೀಷ್ಮ ಉವಾಚ|

13030015a ಏವಂ ತಸ್ಮೈ ವರಂ ದತ್ತ್ವಾ ವಾಸವೋಽಂತರಧೀಯತ|

13030015c ಪ್ರಾಣಾಂಸ್ತ್ಯಕ್ತ್ವಾ ಮತಂಗೋಽಪಿ ಪ್ರಾಪ ತತ್ಸ್ಥಾನಮುತ್ತಮಮ್||

ಭೀಷ್ಮನು ಹೇಳಿದನು: “ಈ ರೀತಿ ವರವನ್ನಿತ್ತು ವಾಸವನು ಅಂತರ್ಧಾನನಾದನು. ಮತಂಗನಾದರೋ ಪ್ರಾಣಗಳನ್ನು ತ್ಯಜಿಸಿ ಆ ಉತ್ತಮ ಸ್ಥಾನವನ್ನು ಪಡೆದುಕೊಂಡನು.

13030016a ಏವಮೇತತ್ಪರಂ ಸ್ಥಾನಂ ಬ್ರಾಹ್ಮಣ್ಯಂ ನಾಮ ಭಾರತ|

13030016c ತಚ್ಚ ದುಷ್ಪ್ರಾಪಮಿಹ ವೈ ಮಹೇಂದ್ರವಚನಂ ಯಥಾ||

ಭಾರತ! ಬ್ರಾಹ್ಮಣ್ಯವೆನ್ನುವುದು ಅತ್ಯಂತ ಉತ್ತಮ ಸ್ಥಾನವು. ಮಹೇಂದ್ರನು ಹೇಳಿದಂತೆ ಅದನ್ನು ಇಲ್ಲಿ ಪಡೆಯುವುದು ಸಾಧ್ಯವಿಲ್ಲ.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಇಂದ್ರಮತಂಗಸಂವಾದೇ ತ್ರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಇಂದ್ರಮತಂಗಸಂವಾದ ಎನ್ನುವ ಮೂವತ್ತನೇ ಅಧ್ಯಾಯವು.

Related image

[1] ಮತಂಗ ಬ್ರಾಹ್ಮಣತ್ವಂ ತೇ ವಿರುದ್ಧಮಿಹ ದೃಶ್ಯತೇ| ಬ್ರಾಹ್ಮಣ್ಯಂ ದುರ್ಲಭತರಂ ಸಂವೃತಂ ಪರಿಪಂಥಿಭಿಃ|| ಎಂಬ ಪಾಠಾಂತರವಿದೆ (ಭಾರತ ದರ್ಶನ).

[2] ಸಂವೃತಂ ಪರಿಪಂಥಿಭಿಃ ಅಂದರೆ ಶತ್ರುಗಳಿಂದ ಸಮಾವೃತವಾದುದು ಎಂದರ್ಥ.

[3] ಭಾರತ ದರ್ಶನದಲ್ಲಿ ಇದಕ್ಕೆ ಮೊದಲು ಈ ಅಧಿಕ ಶ್ಲೋಕವಿದೆ: ತದುತ್ಸೃಜ್ಯೇಹ ದುಷ್ಪ್ರಾಪಂ ಬ್ರಾಹ್ಮಣ್ಯಮಕೃತಾತ್ಮಭಿಃ| ಅನ್ಯಂ ವರಂ ವೃಣೀಷ್ವ ತ್ವಂ ದುರ್ಲಭೋಽಯಂ ಹಿ ತೇ ವರಃ||

Comments are closed.