Anushasana Parva: Chapter 22

ಅನುಶಾಸನ ಪರ್ವ: ದಾನಧರ್ಮ ಪರ್ವ

೨೨

ಸ್ತ್ರೀಯು ತಾನು ಉತ್ತರ ದಿಶೆಯೆಂದೂ, ವದಾನ್ಯನ ಕೋರಿಕೆಯಂತೆ ತಾನು ಅಷ್ಟಾವಕ್ರನನ್ನು ಪರೀಕ್ಷಿಸಿದಳೆಂದು ಹೇಳಲು ಅಷ್ಟಾವಕ್ರನು ಅವಳ ಅನುಜ್ಞೆಯನ್ನು ಪಡೆದು ಹಿಂದಿರುಗಿದುದು (೧-೧೨). ವದಾನ್ಯನ ಕನ್ಯೆಯೊಡನೆ ವಿವಾಹವಾಗಿ ಅಷ್ಟಾವಕ್ರನು ಸಂತೋಷಹೊಂದಿದುದು (೧೩-೧೯).

13022001 ಯುಧಿಷ್ಠಿರ ಉವಾಚ|

13022001a ನ ಬಿಭೇತಿ ಕಥಂ ಸಾ ಸ್ತ್ರೀ ಶಾಪಸ್ಯ ಪರಮದ್ಯುತೇಃ|

13022001c ಕಥಂ ನಿವೃತ್ತೋ ಭಗವಾಂಸ್ತದ್ಭವಾನ್ಪ್ರಬ್ರವೀತು ಮೇ||

ಯುಧಿಷ್ಠಿರನು ಹೇಳಿದನು: “ಸ್ತ್ರೀಯು ಆ ಪರಮದ್ಯುತಿಯ ಶಾಪಕ್ಕೆ ಹೇಗೆ ಭಯಪಡಲಿಲ್ಲ? ಭಗವಾನ್ ಅಷ್ಟಾವಕ್ರನಾದರೂ ಅಲ್ಲಿಂದ ಹೇಗೆ ಹಿಂದಿರುಗಿದನು ಎನ್ನುವುದನ್ನು ಹೇಳು.”

13022002 ಭೀಷ್ಮ ಉವಾಚ|

13022002a ಅಷ್ಟಾವಕ್ರೋಽನ್ವಪೃಚ್ಚತ್ತಾಂ ರೂಪಂ ವಿಕುರುಷೇ ಕಥಮ್|

13022002c ನ ಚಾನೃತಂ ತೇ ವಕ್ತವ್ಯಂ ಬ್ರೂಹಿ ಬ್ರಾಹ್ಮಣಕಾಮ್ಯಯಾ||

ಭೀಷ್ಮನು ಹೇಳಿದನು: “ಅಷ್ಟಾವಕ್ರನು ಅವಳನ್ನು ಕೇಳಿದನು: “ನಿನ್ನ ರೂಪವನ್ನು ಹೇಗೆ ಬದಲಾಯಿಸಿಕೊಂಡೆ? ಬ್ರಾಹ್ಮಣನ ಇಚ್ಛೆಯಂತೆ ಸುಳ್ಳನ್ನು ಹೇಳಬೇಡ. ನಿಜವನ್ನು ಹೇಳು!”

13022003 ಸ್ತ್ರ್ಯುವಾಚ|

13022003a ದ್ಯಾವಾಪೃಥಿವೀಮಾತ್ರೈಷಾ ಕಾಮ್ಯಾ ಬ್ರಾಹ್ಮಣಸತ್ತಮ|

13022003c ಶೃಣುಷ್ವಾವಹಿತಃ ಸರ್ವಂ ಯದಿದಂ ಸತ್ಯವಿಕ್ರಮ||

ಸ್ತ್ರೀಯು ಹೇಳಿದಳು: “ಬ್ರಾಹ್ಮಣಸತ್ತಮ! ಸತ್ಯವಿಕ್ರಮ! ದಿವಿಯಲ್ಲಾಗಲೀ ಪೃಥ್ವಿಯಲ್ಲಾಗಲೀ ಕಾಮವಿರುತ್ತದೆ. ಇದರ ಕುರಿತು ಎಲ್ಲವನ್ನೂ ವಿಹಿತನಾಗಿ ಕೇಳು.

13022004a ಉತ್ತರಾಂ ಮಾಂ ದಿಶಂ ವಿದ್ಧಿ ದೃಷ್ಟಂ ಸ್ತ್ರೀಚಾಪಲಂ ಚ ತೇ|

13022004c ಅವ್ಯುತ್ಥಾನೇನ ತೇ ಲೋಕಾ ಜಿತಾಃ ಸತ್ಯಪರಾಕ್ರಮ||

ಸತ್ಯಪರಾಕ್ರಮ! ನಾನು ಉತ್ತರ ದಿಶೆಯೆಂದು ತಿಳಿ. ಸ್ತ್ರೀಯ ಚಪಲತೆಯನ್ನು ನೀನು ನೋಡಿರುವೆ. ಆದರೂ ಸ್ವೇಚ್ಛಾಚಾರಿಯಾಗದೇ ಇದ್ದೆಯಾದುದರಿಂದ ಪುಣ್ಯಲೋಕಗಳನ್ನು ನೀನು ಜಯಿಸಿರುವೆ.

13022005a ಜಿಜ್ಞಾಸೇಯಂ ಪ್ರಯುಕ್ತಾ ಮೇ ಸ್ಥಿರೀಕರ್ತುಂ ತವಾನಘ|

13022005c ಸ್ಥವಿರಾಣಾಮಪಿ ಸ್ತ್ರೀಣಾಂ ಬಾಧತೇ ಮೈಥುನಜ್ವರಃ||

ಅನಘ! ನಿನ್ನ ಮನಸ್ಸನ್ನು ಸ್ಥಿರೀಕರಿಸುವ ಸಲುವಾಗಿ ನಾನೇ ಈ ಜಿಜ್ಞಾಸೆಯನ್ನು ಏರ್ಪಡಿಸಿದೆ. ವೃದ್ಧೆಯರಾದರೂ ಮೈಥುನಜ್ವರವು ಸ್ತ್ರೀಯರನ್ನು ಬಾಧಿಸುತ್ತದೆ.

13022006a ತುಷ್ಟಃ ಪಿತಾಮಹಸ್ತೇಽದ್ಯ ತಥಾ ದೇವಾಃ ಸವಾಸವಾಃ|

13022006c ಸ ತ್ವಂ ಯೇನ ಚ ಕಾರ್ಯೇಣ ಸಂಪ್ರಾಪ್ತೋ ಭಗವಾನಿಹ||

ಇಂದು ಪಿತಾಮನನು ನಿನ್ನ ಮೇಲೆ ಸಂತುಷ್ಟನಾಗಿದ್ದಾನೆ. ಹಾಗೆಯೇ ವಾಸವನೊಂದಿಗೆ ದೇವತೆಗಳೂ ಸಂತುಷ್ಟರಾಗಿದ್ದಾರೆ. ಭಗವಾನ್! ನೀನು ಯಾವ ಕಾರ್ಯದಿಂದ ಇಲ್ಲಿಗೆ ಬಂದಿದ್ದೆಯೋ ಅದು ಸಫಲವಾಗಿದೆ.

13022007a ಪ್ರೇಷಿತಸ್ತೇನ ವಿಪ್ರೇಣ ಕನ್ಯಾಪಿತ್ರಾ ದ್ವಿಜರ್ಷಭ|

13022007c ತವೋಪದೇಶಂ ಕರ್ತುಂ ವೈ ತಚ್ಚ ಸರ್ವಂ ಕೃತಂ ಮಯಾ||

ದ್ವಿಜರ್ಷಭ! ನಿನಗೆ ಉಪದೇಶವನ್ನು ನೀಡಬೇಕೆಂದು ಕನ್ಯಾಪಿತ್ರ ವಿಪ್ರನು ನಿನ್ನನ್ನು ಇಲ್ಲಿಗೆ ಕಳುಹಿಸಿದ್ದನು. ನಾನು ಅವೆಲ್ಲವನ್ನೂ ಮಾಡಿದ್ದೇನೆ.

13022008a ಕ್ಷೇಮೀ ಗಮಿಷ್ಯಸಿ ಗೃಹಾನ್ಶ್ರಮಶ್ಚ ನ ಭವಿಷ್ಯತಿ|

13022008c ಕನ್ಯಾಂ ಪ್ರಾಪ್ಸ್ಯಸಿ ತಾಂ ವಿಪ್ರ ಪುತ್ರಿಣೀ ಚ ಭವಿಷ್ಯತಿ||

ಕ್ಷೇಮದಿಂದ ನೀನು ನಿನ್ನ ಮನೆಗೆ ಹಿಂದಿರುಗುತ್ತೀಯೆ. ನಿನಗೆ ಶ್ರಮವೂ ಉಂಟಾಗುವುದಿಲ್ಲ. ವಿಪ್ರ! ಆ ಕನ್ಯೆಯನ್ನು ಪಡೆದುಕೊಳ್ಳುತ್ತೀಯೆ ಮತ್ತು ಅವಳು ಪುತ್ರವತಿಯೂ ಆಗುತ್ತಾಳೆ.

13022009a ಕಾಮ್ಯಯಾ ಪೃಷ್ಟವಾಂಸ್ತ್ವಂ ಮಾಂ ತತೋ ವ್ಯಾಹೃತಮುತ್ತರಮ್|

13022009c ಅನತಿಕ್ರಮಣೀಯೈಷಾ ಕೃತ್ಸ್ನೈರ್ಲೋಕೈಸ್ತ್ರಿಭಿಃ ಸದಾ||

ತಿಳಿಯಬೇಕೆಂದು ಬಯಸಿ ನೀನು ನನ್ನನ್ನು ಕೇಳಿದ್ದೀಯೆ. ನಾನು ಅದಕ್ಕೆ ಉತ್ತರಿಸಿದ್ದೇನೆ. ಸದಾ ಈ ಮೂರು ಲೋಕಗಳಲ್ಲಿಯೂ ಬ್ರಾಹ್ಮಣನ ಆದೇಶವನ್ನು ಅನತಿಕ್ರಮಿಸಬಾರದು.

13022010a ಗಚ್ಚಸ್ವ ಸುಕೃತಂ ಕೃತ್ವಾ ಕಿಂ ವಾನ್ಯಚ್ಛ್ರೋತುಮಿಚ್ಚಸಿ|

13022010c ಯಾವದ್ಬ್ರವೀಮಿ ವಿಪ್ರರ್ಷೇ ಅಷ್ಟಾವಕ್ರ ಯಥಾತಥಮ್||

ಉತ್ತಮವಾದುದನ್ನೇ ಮಾಡಿರುವೆ. ಹೋಗು. ಅಥವಾ ಬೇರೆ ಎನನ್ನಾದರೂ ಕೇಳಬಯಸುತ್ತೀಯೇ? ವಿಪ್ರರ್ಷೇ! ಅಷ್ಟಾವಕ್ರ! ಯಥಾವತ್ತಾಗಿ ನಾನು ನಿನಗೆ ಹೇಳುತ್ತೇನೆ.

13022011a ಋಷಿಣಾ ಪ್ರಸಾದಿತಾ ಚಾಸ್ಮಿ ತವ ಹೇತೋರ್ದ್ವಿಜರ್ಷಭ|

13022011c ತಸ್ಯ ಸಂಮಾನನಾರ್ಥಂ ಮೇ ತ್ವಯಿ ವಾಕ್ಯಂ ಪ್ರಭಾಷಿತಮ್||

ದ್ವಿಜರ್ಷಭ! ನಿನ್ನ ಸಲುವಾಗಿಯೇ ಋಷಿ ವದಾನ್ಯನು ನನ್ನನ್ನು ಪ್ರಸನ್ನಗೊಳಿಸಿದ್ದನು. ಅವನನ್ನು ಗೌರವಿಸುವ ಸಲುವಾಗಿಯೇ ನಾನು ನಿನಗೆ ಎಲ್ಲ ವಿಷಯಗಳನ್ನೂ ಹೇಳಿದ್ದೇನೆ.”

13022012a ಶ್ರುತ್ವಾ ತು ವಚನಂ ತಸ್ಯಾಃ ಸ ವಿಪ್ರಃ ಪ್ರಾಂಜಲಿಃ ಸ್ಥಿತಃ|

13022012c ಅನುಜ್ಞಾತಸ್ತಯಾ ಚಾಪಿ ಸ್ವಗೃಹಂ ಪುನರಾವ್ರಜತ್||

ಅವಳ ಆ ಮಾತನ್ನು ಕೇಳಿ ವಿಪ್ರನು ಕೈಮುಗಿದು ನಿಂತನು. ಅವಳಿಂದ ಅನುಜ್ಞೆಯನ್ನು ಪಡೆದು ಸ್ವಗೃಹಕ್ಕೆ ಮರಳಿದನು.

13022013a ಗೃಹಮಾಗಮ್ಯ ವಿಶ್ರಾಂತಃ ಸ್ವಜನಂ ಪ್ರತಿಪೂಜ್ಯ ಚ|

13022013c ಅಭ್ಯಗಚ್ಚತ ತಂ ವಿಪ್ರಂ ನ್ಯಾಯತಃ ಕುರುನಂದನ||

ಕುರುನಂದನ! ಮನೆಗೆ ಬಂದು ವಿಶ್ರಾಂತಿಯನ್ನು ಪಡೆದು ಸ್ವಜನರನ್ನು ಪೂಜಿಸಿ ನ್ಯಾಯತಃ ವಿಪ್ರ ವದಾನ್ಯನಲ್ಲಿಗೆ ಹೋದನು.

13022014a ಪೃಷ್ಟಶ್ಚ ತೇನ ವಿಪ್ರೇಣ ದೃಷ್ಟಂ ತ್ವೇತನ್ನಿದರ್ಶನಮ್|

13022014c ಪ್ರಾಹ ವಿಪ್ರಂ ತದಾ ವಿಪ್ರಃ ಸುಪ್ರೀತೇನಾಂತರಾತ್ಮನಾ||

ವಿಪ್ರ ವದಾನ್ಯನು ಕೇಳಲು ವಿಪ್ರ ಅಷ್ಟಾವಕ್ರನು ಪ್ರಸನ್ನಚಿತ್ತನಾಗಿ ತನ್ನ ಪ್ರಯಾಣಕಾಲದಲ್ಲಿ ತಾನು ನೋಡಿದುದೆಲ್ಲವನ್ನೂ ಸಮಗ್ರವಾಗಿ ಹೇಳಲು ಉಪಕ್ರಮಿಸಿದನು:

13022015a ಭವತಾಹಮನುಜ್ಞಾತಃ ಪ್ರಸ್ಥಿತೋ ಗಂಧಮಾದನಮ್|

13022015c ತಸ್ಯ ಚೋತ್ತರತೋ ದೇಶೇ ದೃಷ್ಟಂ ತದ್ದೈವತಂ ಮಹತ್||

“ನಿನ್ನಿಂದ ಅನುಜ್ಞಾತನಾಗಿ ನಾನು ಗಂಧಮಾದನದ ಕಡೆ ಹೋದೆನು. ಅದರ ಉತ್ತರ ಪ್ರದೇಶದಲ್ಲಿ ನಾನು ಒಂದು ಮಹಾ ದೇವತೆಯನ್ನು ನೋಡಿದೆನು.

13022016a ತಯಾ ಚಾಹಮನುಜ್ಞಾತೋ ಭವಾಂಶ್ಚಾಪಿ ಪ್ರಕೀರ್ತಿತಃ|

13022016c ಶ್ರಾವಿತಶ್ಚಾಪಿ ತದ್ವಾಕ್ಯಂ ಗೃಹಮಭ್ಯಾಗತಃ ಪ್ರಭೋ||

ಪ್ರಭೋ! ಅವಳ ವಾಕ್ಯವನ್ನು ಕೇಳಿದೆ. ಅವಳು ನಿನ್ನ ಕುರಿತು ಕೂಡ ಹೇಳಿದಳು. ಅವಳ ಅನುಜ್ಞೆಯನ್ನು ಪಡೆದು ಮನೆಗೆ ಹಿಂದಿರುಗಿದ್ದೇನೆ.”

13022017a ತಮುವಾಚ ತತೋ ವಿಪ್ರಃ ಪ್ರತಿಗೃಹ್ಣೀಷ್ವ ಮೇ ಸುತಾಮ್|

13022017c ನಕ್ಷತ್ರತಿಥಿಸಂಯೋಗೇ ಪಾತ್ರಂ ಹಿ ಪರಮಂ ಭವಾನ್||

ಆಗ ವಿಪ್ರನು ಅವನಿಗೆ “ನಕ್ಷತ್ರತಿಥಿಸಂಯೋಗದಲ್ಲಿ ನನ್ನ ಸುತೆಯನ್ನು ಸ್ವೀಕರಿಸು! ನೀನು ಇದಕ್ಕೆ ಪರಮ ಪಾತ್ರನಾಗಿದ್ದೀಯೆ!” ಎಂದನು.”

13022018 ಭೀಷ್ಮ ಉವಾಚ|

13022018a ಅಷ್ಟಾವಕ್ರಸ್ತಥೇತ್ಯುಕ್ತ್ವಾ ಪ್ರತಿಗೃಹ್ಯ ಚ ತಾಂ ಪ್ರಭೋ|

13022018c ಕನ್ಯಾಂ ಪರಮಧರ್ಮಾತ್ಮಾ ಪ್ರೀತಿಮಾಂಶ್ಚಾಭವತ್ತದಾ||

ಭೀಷ್ಮನು ಹೇಳಿದನು: “ಪ್ರಭೋ! ಹಾಗೆಯೇ ಆಗಲೆಂದು ಹೇಳಿ ಅಷ್ಟಾವಕ್ರನು ಆ ಕನ್ಯೆಯನ್ನು ಸ್ವೀಕರಿಸಿ ಪರಮಧರ್ಮಾತ್ಮನೂ ಪ್ರೀತಿಮಾನನೂ ಆದನು.

13022019a ಕನ್ಯಾಂ ತಾಂ ಪ್ರತಿಗೃಹ್ಯೈವ ಭಾರ್ಯಾಂ ಪರಮಶೋಭನಾಮ್|

13022019c ಉವಾಸ ಮುದಿತಸ್ತತ್ರ ಆಶ್ರಮೇ ಸ್ವೇ ಗತಜ್ವರಃ||

ಆ ಪರಮ ಶೋಭನೆ ಕನ್ಯೆಯನ್ನು ಸ್ವೀಕರಿಸಿ ಮುದಿತನಾಗಿ ನಿಶ್ಚಿಂತನಾಗಿ ತನ್ನ ಆಶ್ರಮದಲ್ಲಿ ವಾಸಿಸಿದನು.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಅಷ್ಟಾವಕ್ರಾದಿಕ್ಸಂವಾದೇ ದ್ವಾವಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಅಷ್ಟಾವಕ್ರಾದಿಕ್ಸಂವಾದ ಎನ್ನುವ ಇಪ್ಪತ್ತೆರಡನೇ ಅಧ್ಯಾಯವು.

Related image

Comments are closed.