Anushasana Parva: Chapter 21

ಅನುಶಾಸನ ಪರ್ವ: ದಾನಧರ್ಮ ಪರ್ವ

೨೧

ದಿನವಿಡೀ ಸ್ನಾನ-ಭೋಜನಗಳಲ್ಲಿ ನಿರತನಾಗಿದ್ದ ಅಷ್ಟಾವಕ್ರನನ್ನು ರಾತ್ರಿ ಪುನಃ ವೃದ್ಧಸ್ತ್ರೀಯು ಮೈಥುನಕ್ಕೆ ಕರೆಯಲು, ಅವನು ನಿರಾಕರಿಸಿದುದು (೧-೧೯). ವೃದ್ಧ ಸ್ತ್ರೀಯು ಸರ್ವಾಭರಣಭೂಷಿತಳಾದ ಕನ್ಯೆಯಾದುದನ್ನು ನೋಡಿದ ಅಷ್ಟಾವಕ್ರನು ವಿಸ್ಮಿತನಾದುದು (೨೦-೨೪).

13021001 ಭೀಷ್ಮ ಉವಾಚ|

13021001a ಅಥ ಸಾ ಸ್ತ್ರೀ ತಮುಕ್ತ್ವಾ ತು ವಿಪ್ರಮೇವಂ ಭವತ್ವಿತಿ|

13021001c ತೈಲಂ ದಿವ್ಯಮುಪಾದಾಯ ಸ್ನಾನಶಾಟೀಮುಪಾನಯತ್||

ಭೀಷ್ಮನು ಹೇಳಿದನು: “ವಿಪ್ರ! ಹಾಗೆಯೇ ಮಾಡುತ್ತೇನೆ!” ಎಂದು ಹೇಳಿ ಆ ಸ್ತ್ರೀಯು ಅವನಿಗೆ ದಿವ್ಯ ತೈಲವನ್ನೂ ಸ್ನಾನದ ಪಂಚೆಯನ್ನೂ ತಂದಳು.

13021002a ಅನುಜ್ಞಾತಾ ಚ ಮುನಿನಾ ಸಾ ಸ್ತ್ರೀ ತೇನ ಮಹಾತ್ಮನಾ|

13021002c ಅಥಾಸ್ಯ ತೈಲೇನಾಂಗಾನಿ ಸರ್ವಾಣ್ಯೇವಾಭ್ಯಮೃಕ್ಷಯತ್||

ಮುನಿಯ ಅನುಜ್ಞೆಯಂತೆ ಆ ಸ್ತ್ರೀಯು ಮಹಾತ್ಮನ ಸರ್ವ ಅಂಗಗಳಿಗೂ ತೈಲವನ್ನು ಹಚ್ಚಿದಳು.

13021003a ಶನೈಶ್ಚೋತ್ಸಾದಿತಸ್ತತ್ರ ಸ್ನಾನಶಾಲಾಮುಪಾಗಮತ್|

13021003c ಭದ್ರಾಸನಂ ತತಶ್ಚಿತ್ರಂ ಋಷಿರನ್ವಾವಿಶನ್ನವಮ್||

ಮೆಲ್ಲನೇ ಅವನು ಎದ್ದು ಸ್ನಾನಶಾಲೆಗೆ ಹೋಗಲು ಅಲ್ಲಿ ಋಷಿಯು ತನಗಾಗಿ ಸಿದ್ಧವಾಗಿದ್ದ ಭದ್ರಾಸನವನ್ನು ನೋಡಿದನು.

13021004a ಅಥೋಪವಿಷ್ಟಶ್ಚ ಯದಾ ತಸ್ಮಿನ್ಭದ್ರಾಸನೇ ತದಾ|

13021004c ಸ್ನಾಪಯಾಮಾಸ ಶನಕೈಸ್ತಮೃಷಿಂ ಸುಖಹಸ್ತವತ್|

13021004e ದಿವ್ಯಂ ಚ ವಿಧಿವಚ್ಚಕ್ರೇ ಸೋಪಚಾರಂ ಮುನೇಸ್ತದಾ||

ಅವನು ಆ ಭದ್ರಾಸನದಲ್ಲಿ ಕುಳಿತುಕೊಳ್ಳಲು ಸ್ತ್ರೀಯು ತನ್ನ ಸುಖಸ್ಪರ್ಶಿ ಕರಗಳಿಂದ ಮೆಲ್ಲ ಮೆಲ್ಲನೇ ಋಷಿಗೆ ಸ್ನಾನಮಾಡಿಸಿದಳು. ಹೀಗೆ ಅವಳು ವಿಧಿವತ್ತಾಗಿ ಮುನಿಯ ದಿವ್ಯ ಉಪಚಾರವನ್ನು ಮಾಡಿದಳು.

13021005a ಸ ತೇನ ಸುಸುಖೋಷ್ಣೇನ ತಸ್ಯಾ ಹಸ್ತಸುಖೇನ ಚ|

13021005c ವ್ಯತೀತಾಂ ರಜನೀಂ ಕೃತ್ಸ್ನಾಂ ನಾಜಾನಾತ್ಸ ಮಹಾವ್ರತಃ||

ಹಿತಕರವಾದ ಬಿಸಿನೀರಿನ ಅಭ್ಯಂಜನದಿಂದಲೂ ಮತ್ತು ಅವಳ ಕೈಯ ಸ್ಪರ್ಶಸುಖದಿಂದ ಆ ಮಹಾವ್ರತನಿಗೆ ರಾತ್ರಿಯಿಡೀ ಕಳೆದು ಹೋದದ್ದೇ ತಿಳಿಯಲಿಲ್ಲ.

13021006a ತತ ಉತ್ಥಾಯ ಸ ಮುನಿಸ್ತದಾ ಪರಮವಿಸ್ಮಿತಃ|

13021006c ಪೂರ್ವಸ್ಯಾಂ ದಿಶಿ ಸೂರ್ಯಂ ಚ ಸೋಽಪಶ್ಯದುದಿತಂ ದಿವಿ||

ಆಗ ಪರಮವಿಸ್ಮಿತನಾದ ಮುನಿಯು ಮೇಲೆದ್ದು ಪೂರ್ವದಿಕ್ಕಿನ ಆಗಸದಲ್ಲಿ ಉದಯಿಸುತ್ತಿರುವ ಸೂರ್ಯನನ್ನು ನೋಡಿದನು.

13021007a ತಸ್ಯ ಬುದ್ಧಿರಿಯಂ ಕಿಂ ನು ಮೋಹಸ್ತತ್ತ್ವಮಿದಂ ಭವೇತ್|

13021007c ಅಥೋಪಾಸ್ಯ ಸಹಸ್ರಾಂಶುಂ ಕಿಂ ಕರೋಮೀತ್ಯುವಾಚ ತಾಮ್||

ತಾನೇನಾದರೂ ಮೋಹಿತನಾಗಿರುವನೇ ಎಂಬ ಸಂಶಯವು ಅವನ ಬುದ್ಧಿಯಲ್ಲಿ ಮೂಡಿತು. “ಸಹಸ್ರಾಂಶು ಸೂರ್ಯನು ಈಗಾಗಲೇ ಉದಯಿಸಿಬಿಟ್ಟಿದ್ದಾನೆ! ನಾನು ಏನು ಮಾಡಲಿ?” ಎಂದು ಸ್ತ್ರೀಯನ್ನು ಕೇಳಿದನು.

13021008a ಸಾ ಚಾಮೃತರಸಪ್ರಖ್ಯಮೃಷೇರನ್ನಮುಪಾಹರತ್|

13021008c ತಸ್ಯ ಸ್ವಾದುತಯಾನ್ನಸ್ಯ ನ ಪ್ರಭೂತಂ ಚಕಾರ ಸಃ|

13021008e ವ್ಯಗಮಚ್ಚಾಪ್ಯಹಃಶೇಷಂ ತತಃ ಸಂಧ್ಯಾಗಮತ್ಪುನಃ||

ಆಗ ಅವಳು ಋಷಿಗೆ ಅಮೃತರಸಯುಕ್ತ ಭೋಜನವನ್ನು ಬಡಿಸಿದಳು. ಸ್ವಾದಯುಕ್ತವಾದ ಅವಳ ಭೋಜನಕ್ಕೆ ಸಾಕು ಅಥವಾ ಬೇಡ ಎಂದು ಅವನಿಗೆ ಹೇಳಲಿಕ್ಕೇ ಆಗಲಿಲ್ಲ. ಹೀಗೆ ಊಟಮಾಡುತ್ತಿರುವಾಗಲೇ ಪುನಃ ಸಂಧ್ಯಾಕಾಲವು ಪ್ರಾಪ್ತವಾಯಿತು.

13021009a ಅಥ ಸ್ತ್ರೀ ಭಗವಂತಂ ಸಾ ಸುಪ್ಯತಾಮಿತ್ಯಚೋದಯತ್|

13021009c ತತ್ರ ವೈ ಶಯನೇ ದಿವ್ಯೇ ತಸ್ಯ ತಸ್ಯಾಶ್ಚ ಕಲ್ಪಿತೇ||

ಆಗ ಆ ಸ್ತ್ರೀಯು ಭಗವಂತನನ್ನು ಮಲಗಿಕೋ ಎಂದು ಪ್ರಚೋದಿಸಿದಳು. ಅಲ್ಲಿ ಅವನಿಗೆ ಮತ್ತು ಅವಳಿಗೆ ಪ್ರತ್ಯೇಕ ದಿವ್ಯ ಶಯನಗಳು ಸಿದ್ಧವಾಗಿದ್ದವು.

13021010 ಅಷ್ಟಾವಕ್ರ ಉವಾಚ|

13021010a ನ ಭದ್ರೇ ಪರದಾರೇಷು ಮನೋ ಮೇ ಸಂಪ್ರಸಜ್ಜತಿ|

13021010c ಉತ್ತಿಷ್ಠ ಭದ್ರೇ ಭದ್ರಂ ತೇ ಸ್ವಪ ವೈ ವಿರಮಸ್ವ ಚ||

ಅಷ್ಟಾವಕ್ರನು ಹೇಳಿದನು: “ಭದ್ರೇ! ಪರಸತಿಯಲ್ಲಿ ನನ್ನ ಮನಸ್ಸು ಖಂಡಿತವಾಗಿಯೂ ಆಸಕ್ತವಾಗುವುದಿಲ್ಲ. ಭದ್ರೇ! ಏಳು. ನಿನಗೆ ಮಂಗಳವಾಗಲಿ. ನೀನೂ ಕೂಡ ಪಾಪಕರ್ಮದಿಂದ ವಿರತಳಾಗು!””

13021011 ಭೀಷ್ಮ ಉವಾಚ|

13021011a ಸಾ ತದಾ ತೇನ ವಿಪ್ರೇಣ ತಥಾ ಧೃತ್ಯಾ ನಿವರ್ತಿತಾ|

13021011c ಸ್ವತಂತ್ರಾಸ್ಮೀತ್ಯುವಾಚೈನಂ ನ ಧರ್ಮಚ್ಚಲಮಸ್ತಿ ತೇ||

ಭೀಷ್ಮನು ಹೇಳಿದನು: “ಹಾಗೆ ವಿಪ್ರನು ಅವಳನ್ನು ತಡೆಯಲು ಧೈರ್ಯದಿಂದ ಅವಳು ಹೇಳಿದಳು: “ನಾನು ಸ್ವತಂತ್ರಳಾಗಿದ್ದೇನೆ. ಪರದಾರೆಯಲ್ಲ. ಇದರಿಂದ ನಿನಗೆ ಧರ್ಮಲೋಪದ ದೋಷವು ತಗಲುವುದಿಲ್ಲ!”

13021012 ಅಷ್ಟಾವಕ್ರ ಉವಾಚ|

13021012a ನಾಸ್ತಿ ಸ್ವತಂತ್ರತಾ ಸ್ತ್ರೀಣಾಮಸ್ವತಂತ್ರಾ ಹಿ ಯೋಷಿತಃ|

13021012c ಪ್ರಜಾಪತಿಮತಂ ಹ್ಯೇತನ್ನ ಸ್ತ್ರೀ ಸ್ವಾತಂತ್ರ್ಯಮರ್ಹತಿ||

ಅಷ್ಟಾವಕ್ರನು ಹೇಳಿದನು: “ಸ್ತ್ರೀಯರಿಗೆ ಸ್ವಾತಂತ್ರ್ಯವಿಲ್ಲ. ಸ್ತ್ರೀಯರು ಯಾವಾಗಲೂ ಅಸ್ವತಂತ್ರರು. ಇದು ಪ್ರಜಾಪತಿಯ ಅಭಿಮತವೇ ಆಗಿದೆ. ಆದುದರಿಂದ ಸ್ತ್ರೀಯಾಗಿರುವವಳು ಎಂದೂ ಸ್ವತಂತ್ರಳಾಗಿರಲು ಅರ್ಹಳಲ್ಲ.”

13021013 ಸ್ತ್ರ್ಯುವಾಚ|

13021013a ಬಾಧತೇ ಮೈಥುನಂ ವಿಪ್ರ ಮಮ ಭಕ್ತಿಂ ಚ ಪಶ್ಯ ವೈ|

13021013c ಅಧರ್ಮಂ ಪ್ರಾಪ್ಸ್ಯಸೇ ವಿಪ್ರ ಯನ್ಮಾಂ ತ್ವಂ ನಾಭಿನಂದಸಿ||

ಸ್ತ್ರೀಯು ಹೇಳಿದಳು: “ವಿಪ್ರ! ಮೈಥುನದ ಕಾಮವು ನನ್ನನ್ನು ಬಾಧಿಸುತ್ತಿದೆ. ನಿನ್ನಲ್ಲಿ ನನಗೆ ಎಷ್ಟು ಭಕ್ತಿಯಿದೆಯೆನ್ನುವುದನ್ನು ನೋಡು! ವಿಪ್ರ! ನನ್ನನ್ನು ಅಭಿನಂದಿಸದ ನೀನು ಅಧರ್ಮವನ್ನು ಹೊಂದುತ್ತೀಯೆ.”

13021014 ಅಷ್ಟಾವಕ್ರ ಉವಾಚ|

13021014a ಹರಂತಿ ದೋಷಜಾತಾನಿ ನರಂ ಜಾತಂ ಯಥೇಚ್ಚಕಮ್|

13021014c ಪ್ರಭವಾಮಿ ಸದಾ ಧೃತ್ಯಾ ಭದ್ರೇ ಸ್ವಂ ಶಯನಂ ವ್ರಜ||

ಅಷ್ಟಾವಕ್ರನು ಹೇಳಿದನು: “ಭದ್ರೇ! ಸ್ವೇಚ್ಛಾಚಾರಿಯಾದ ಮನುಷ್ಯನನ್ನು ಪಾಪಗಳು ತಮ್ಮ ಕಡೆಗೇ ಸೆಳೆದುಕೊಳ್ಳುತ್ತವೆ. ಸದಾ ಧೈರ್ಯದಿಂದ ನನ್ನನ್ನು ನಾನು ಹತೋಟಿಯಲ್ಲಿಟ್ಟುಕೊಂಡಿದ್ದೇನೆ. ನಿನ್ನ ಹಾಸಿಗೆಗೆ ಹೋಗಿ ಮಲಗು!”

13021015 ಸ್ತ್ರ್ಯುವಾಚ|

13021015a ಶಿರಸಾ ಪ್ರಣಮೇ ವಿಪ್ರ ಪ್ರಸಾದಂ ಕರ್ತುಮರ್ಹಸಿ|

13021015c ಭೂಮೌ ನಿಪತಮಾನಾಯಾಃ ಶರಣಂ ಭವ ಮೇಽನಘ||

ಸ್ತ್ರೀಯು ಹೇಳಿದಳು: “ವಿಪ್ರ! ಶಿರಸಾ ನಮಸ್ಕರಿಸುತ್ತಿದ್ದೇನೆ. ಪ್ರಸನ್ನನಾಗಬೇಕು. ಅನಘ! ಭೂಮಿಯ ಮೇಲೆ ಬಿದ್ದು ನಮಸ್ಕರಿಸುತ್ತಿರುವ ನನ್ನ ಶರಣ್ಯನಾಗು!

13021016a ಯದಿ ವಾ ದೋಷಜಾತಂ ತ್ವಂ ಪರದಾರೇಷು ಪಶ್ಯಸಿ|

13021016c ಆತ್ಮಾನಂ ಸ್ಪರ್ಶಯಾಮ್ಯದ್ಯ ಪಾಣಿಂ ಗೃಹ್ಣೀಷ್ವ ಮೇ ದ್ವಿಜ||

ಪರಪತ್ನೀ ಸಮಾಗಮದಿಂದಾಗುವ ದೋಷವುಂಟಾಗುತ್ತದೆ ಎಂದು ನೀನು ಭಾವಿಸುವೆಯಾದರೆ ನನ್ನನ್ನು ನಾನೇ ನಿನಗೆ ದಾನವಾಗಿ ಕೊಟ್ಟುಕೊಳ್ಳುತ್ತಿದ್ದೇನೆ. ದ್ವಿಜ! ನನ್ನ ಪಾಣಿಗ್ರಹಣವನ್ನು ಮಾಡು!

13021017a ನ ದೋಷೋ ಭವಿತಾ ಚೈವ ಸತ್ಯೇನೈತದ್ಬ್ರವೀಮ್ಯಹಮ್|

13021017c ಸ್ವತಂತ್ರಾಂ ಮಾಂ ವಿಜಾನೀಹಿ ಯೋಽಧರ್ಮಃ ಸೋಽಸ್ತು ವೈ ಮಯಿ||

ಹೀಗೆ ಮಾಡುವುದರಿಂದ ನಿನಗೆ ಯಾವುದೇ ದೋಷವುಂಟಾಗುವುದಿಲ್ಲ. ಸತ್ಯವನ್ನೇ ಹೇಳುತ್ತಿದ್ದೇನೆ. ನಾನೋರ್ವಳು ಸ್ವತಂತ್ರಳೆಂದು ತಿಳಿದುಕೋ. ಇದರಿಂದ ಅಧರ್ಮವಾದರೂ ಅದು ನನ್ನ ಪಾಲಿಗಿರಲಿ!”

13021018 ಅಷ್ಟಾವಕ್ರ ಉವಾಚ|

13021018a ಸ್ವತಂತ್ರಾ ತ್ವಂ ಕಥಂ ಭದ್ರೇ ಬ್ರೂಹಿ ಕಾರಣಮತ್ರ ವೈ|

13021018c ನಾಸ್ತಿ ಲೋಕೇ ಹಿ ಕಾ ಚಿತ್ಸ್ತ್ರೀ ಯಾ ವೈ ಸ್ವಾತಂತ್ರ್ಯಮರ್ಹತಿ||

ಅಷ್ಟಾವಕ್ರನು ಹೇಳಿದನು: “ಭದ್ರೇ! ನೀನು ಹೇಗೆ ಸ್ವತಂತ್ರಳೆನ್ನುವುದರ ಕಾರಣವನ್ನು ಹೇಳು. ಲೋಕದಲ್ಲಿ ಯಾವ ಸ್ತ್ರೀಯೂ ಸ್ವತಂತ್ರಳಾಗಿರಲು ಅರ್ಹಳಲ್ಲ.

13021019a ಪಿತಾ ರಕ್ಷತಿ ಕೌಮಾರೇ ಭರ್ತಾ ರಕ್ಷತಿ ಯೌವನೇ|

13021019c ಪುತ್ರಾಶ್ಚ ಸ್ಥವಿರೀಭಾವೇ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ||

ಕೌಮಾರ್ಯದಲ್ಲಿ ತಂದೆಯು ಅವಳನ್ನು ರಕ್ಷಿಸುತ್ತಾನೆ. ಯೌವನದಲ್ಲಿ ಪತಿಯು ಅವಳನ್ನು ರಕ್ಷಿಸುತ್ತಾನೆ. ವೃದ್ಧಾಪ್ಯದಲ್ಲಿ ಪುತ್ರರು ಅವಳನ್ನು ರಕ್ಷಿಸುತ್ತಾರೆ. ಸ್ತ್ರೀಯು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ!”

13021020 ಸ್ತ್ರ್ಯುವಾಚ|

13021020a ಕೌಮಾರಂ ಬ್ರಹ್ಮಚರ್ಯಂ ಮೇ ಕನ್ಯೈವಾಸ್ಮಿ ನ ಸಂಶಯಃ|

13021020c ಕುರು ಮಾ ವಿಮತಿಂ ವಿಪ್ರ ಶ್ರದ್ಧಾಂ ವಿಜಹಿ ಮಾ ಮಮ||

ಸ್ತ್ರೀಯು ಹೇಳಿದಳು: “ಬ್ರಹ್ಮಚರ್ಯದಲ್ಲಿರುವ ನಾನು ಕೌಮಾರ್ಯದಲ್ಲಿಯೇ ಇರುವ ಕನ್ಯೆ ಎನ್ನುವುದರಲ್ಲಿ ಸಂಶಯವಿಲ್ಲ. ವಿಪ್ರ! ನನ್ನನ್ನು ತಿರಸ್ಕರಿಸಬೇಡ. ನಿನ್ನಲ್ಲಿಟ್ಟಿರುವ ನನ್ನ ಶ್ರದ್ಧೆಯನ್ನು ನಾಶಗೊಳಿಸಬೇಡ!”

13021021 ಅಷ್ಟಾವಕ್ರ ಉವಾಚ|

13021021a ಯಥಾ ಮಮ ತಥಾ ತುಭ್ಯಂ ಯಥಾ ತವ ತಥಾ ಮಮ|

13021021c ಜಿಜ್ಞಾಸೇಯಮೃಷೇಸ್ತಸ್ಯ ವಿಘ್ನಃ ಸತ್ಯಂ ನು ಕಿಂ ಭವೇತ್||

ಅಷ್ಟಾವಕ್ರನು ಹೇಳಿದನು: “ನನಗಾಗುತ್ತಿರುವುದೇ ನಿನಗೂ ಆಗುತ್ತಿದೆ. ನಿನಗಾಗುತ್ತಿರುವುದು ನನಗೂ ಆಗುತ್ತಿದೆ. ಆದರೆ ವದಾನ್ಯ ಋಷಿಯು ಹೇಳಿದುದರ ಕುರಿತು ವಿಚಾರಿಸುತ್ತಿದ್ದೇನೆ. ಆ ಸತ್ಯಕ್ಕೆ ವಿಘ್ನವು ಹೇಗಾಗುತ್ತದೆ?

13021022a ಆಶ್ಚರ್ಯಂ ಪರಮಂ ಹೀದಂ ಕಿಂ ನು ಶ್ರೇಯೋ ಹಿ ಮೇ ಭವೇತ್|

13021022c ದಿವ್ಯಾಭರಣವಸ್ತ್ರಾ ಹಿ ಕನ್ಯೇಯಂ ಮಾಮುಪಸ್ಥಿತಾ||

ಇದೇನು ಪರಮಾಶ್ಚರ್ಯ? ಇದರಿಂದ ನನಗೆ ಶ್ರೇಯಸ್ಸೇ ಆಗುತ್ತದೆಯೇ? ದಿವ್ಯಾಭರಣವಸ್ತ್ರಗಳನ್ನು ಧರಿಸಿರುವ ಕನ್ಯೆಯು ನನ್ನ ಬಳಿ ನಿಂತಿದ್ದಾಳಲ್ಲ!

13021023a ಕಿಂ ತ್ವಸ್ಯಾಃ ಪರಮಂ ರೂಪಂ ಜೀರ್ಣಮಾಸೀತ್ಕಥಂ ಪುನಃ|

13021023c ಕನ್ಯಾರೂಪಮಿಹಾದ್ಯೈವ ಕಿಮಿಹಾತ್ರೋತ್ತರಂ ಭವೇತ್||

ಇವಳ ಇಂಥಹ ಪರಮ ರೂಪವು ಮೊದಲು ಹೇಗೆ ಜೀರ್ಣವಾಗಿ ಹೋಗಿತ್ತು? ಪುನಃ ಕನ್ಯಾರೂಪವನ್ನು ಹೊಂದಿರುವ ಇವಳಿಗೆ ಏನು ಉತ್ತರವನ್ನು ನೀಡಲಿ?

13021024a ಯಥಾ ಪರಂ ಶಕ್ತಿಧೃತೇರ್ನ ವ್ಯುತ್ಥಾಸ್ಯೇ ಕಥಂ ಚನ|

13021024c ನ ರೋಚಯೇ ಹಿ ವ್ಯುತ್ಥಾನಂ ಧೃತ್ಯೈವಂ ಸಾಧಯಾಮ್ಯಹಮ್||

ನನ್ನಲ್ಲಿರುವ ಪರಮ ಧೈರ್ಯದಿಂದ ಇವಳನ್ನು ಎದಿರುಸುತ್ತೇನೆ. ಹಿಂದೆ ವರಿಸಿದ್ದ ಮುನಿಕನ್ಯೆಯನ್ನೇ ನಾನು ಮದುವೆಯಾಗುತ್ತೇನೆ. ಇವಳು ಹೇಳಿದಂತೆ ಮಾಡಲು ಮನಸ್ಸಾಗುತ್ತಿಲ್ಲ. ಸತ್ಯದ ಆಧಾರದಿಂದಲೇ ಇದನ್ನು ನಾನು ಸಾಧಿಸುತ್ತೇನೆ.””

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಅಷ್ಟಾವಕ್ರಾದಿಕ್ಸಂವಾದೇ ಏಕವಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಅಷ್ಟಾವಕ್ರಾದಿಕ್ಸಂವಾದ ಎನ್ನುವ ಇಪ್ಪತ್ತೊಂದನೇ ಅಧ್ಯಾಯವು.

Image result for indian motifs

Comments are closed.