Anushasana Parva: Chapter 23

ಅನುಶಾಸನ ಪರ್ವ: ದಾನಧರ್ಮ ಪರ್ವ

೨೩

ಪಾತ್ರಪರೀಕ್ಷಾ

ಹವ್ಯ-ಕವ್ಯಗಳಿಗೆ ಮತ್ತು ದಾನಗಳಿಗೆ ಪಾತ್ರರಾದ ವಿಪ್ರರು ಯಾರೆನ್ನುವುದರ ವಿಷಯದ ಕುರಿತು ಯುಧಿಷ್ಠಿರ-ಭೀಷ್ಮರ ಸಂವಾದ (೧-೪೧).

13023001 ಯುಧಿಷ್ಠಿರ ಉವಾಚ|

13023001a ಕಿಮಾಹುರ್ಭರತಶ್ರೇಷ್ಠ ಪಾತ್ರಂ ವಿಪ್ರಾಃ ಸನಾತನಮ್|

13023001c ಬ್ರಾಹ್ಮಣಂ ಲಿಂಗಿನಂ ಚೈವ ಬ್ರಾಹ್ಮಣಂ ವಾಪ್ಯಲಿಂಗಿನಮ್||

ಯುಧಿಷ್ಠಿರನು ಹೇಳಿದನು: “ಭರತಶ್ರೇಷ್ಠ! ಸನಾತನ ವಿಪ್ರರು “ಪಾತ್ರರು” ಎಂದು ಯಾರಿಗೆ ಹೇಳುತ್ತಾರೆ? ಚಿಹ್ನೆಗಳಿರುವ ಬ್ರಾಹ್ಮಣನನ್ನೋ ಅಥವಾ ಚಿಹ್ನೆಗಳಿಲ್ಲದಿರುವ ಬ್ರಾಹ್ಮಣನನ್ನೋ?[1]

13023002 ಭೀಷ್ಮ ಉವಾಚ|

13023002a ಸ್ವವೃತ್ತಿಮಭಿಪನ್ನಾಯ ಲಿಂಗಿನೇ ವೇತರಾಯ ವಾ|

13023002c ದೇಯಮಾಹುರ್ಮಹಾರಾಜ ಉಭಾವೇತೌ ತಪಸ್ವಿನೌ||

ಭೀಷ್ಮನು ಹೇಳಿದನು: “ಮಹಾರಾಜ! ತಮ್ಮ ತಮ್ಮ ವೃತ್ತಿಯನ್ನು[2] ಆಧರಿಸಿ ಚಿಹ್ನೆಗಳಿರುವ ಬ್ರಹ್ಮಚಾರಿ ಮತ್ತು ಚಿಹ್ನೆಗಳಿಲ್ಲದಿರುವ ಗೃಹಸ್ಥ ಇಬ್ಬರೂ ತಪಸ್ವಿಗಳೇ. ಇವರಿಬ್ಬರಿಗೂ ದಾನಮಾಡಬಹುದು ಎಂದು ಹೇಳುತ್ತಾರೆ.”

13023003 ಯುಧಿಷ್ಠಿರ ಉವಾಚ|

13023003a ಶ್ರದ್ಧಯಾ ಪರಯಾ ಪೂತೋ ಯಃ ಪ್ರಯಚ್ಚೇದ್ದ್ವಿಜಾತಯೇ|

13023003c ಹವ್ಯಂ ಕವ್ಯಂ ತಥಾ ದಾನಂ ಕೋ ದೋಷಃ ಸ್ಯಾತ್ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಶ್ರದ್ಧೆಯಿಂದ ಪರಮ ಪೂತನಾದವನು ಬ್ರಾಹ್ಮಣರಿಗೆ ಹವ್ಯ, ಕವ್ಯ ಅಥವಾ ದಾನವನ್ನು ನೀಡಿದರೆ ಅವನಿಗೆ ಯಾವು ದೋಷವು ತಗಲುತ್ತದೆ?”

13023004 ಭೀಷ್ಮ ಉವಾಚ|

13023004a ಶ್ರದ್ಧಾಪೂತೋ ನರಸ್ತಾತ ದುರ್ದಾಂತೋಽಪಿ ನ ಸಂಶಯಃ|

13023004c ಪೂತೋ ಭವತಿ ಸರ್ವತ್ರ ಕಿಂ ಪುನಸ್ತ್ವಂ ಮಹೀಪತೇ||

ಭೀಷ್ಮನು ಹೇಳಿದನು: “ಮಗೂ! ಜಿತೇಂದ್ರಿಯನಾಗಿರದಿದ್ದರೂ ಶ್ರದ್ಧೆಯಿರುವ ಮನುಷ್ಯನು ಪೂತನೆನ್ನುವುದರಲ್ಲಿ ಸಂಶಯವಿಲ್ಲ. ಇನ್ನು ಇವೆರಡೂ ರೀತಿಯಲ್ಲಿ ಪೂತನಾಗಿರುವ ನಿನ್ನ ವಿಷಯದಲ್ಲಿ ಹೇಳುವುದೇನಿದೆ?”

13023005 ಯುಧಿಷ್ಠಿರ ಉವಾಚ|

13023005a ನ ಬ್ರಾಹ್ಮಣಂ ಪರೀಕ್ಷೇತ ದೈವೇಷು ಸತತಂ ನರಃ|

13023005c ಕವ್ಯಪ್ರದಾನೇ ತು ಬುಧಾಃ ಪರೀಕ್ಷ್ಯಂ ಬ್ರಾಹ್ಮಣಂ ವಿದುಃ||

ಯುಧಿಷ್ಠಿರನು ಹೇಳಿದನು: “ನರನು ದೇವಕಾರ್ಯಗಳಿಗೆ ಸತತವೂ ಬ್ರಾಹ್ಮಣನ ಪಾತ್ರತ್ವವನ್ನು ಪರೀಕ್ಷಿಸಬೇಕಾಗಿಲ್ಲವೆಂದು ಹೇಳುತ್ತಾರೆ. ಆದರೆ ಪಿತೃಕಾರ್ಯಗಳಲ್ಲಿ ಬ್ರಾಹ್ಮಣನ ಪಾತ್ರತ್ವವನ್ನು ಪರೀಕ್ಷಿಸಬೇಕೆಂದು ತಿಳಿದವರು ಹೇಳುತ್ತಾರೆ. ಇದು ಏಕೆ?[3]

13023006 ಭೀಷ್ಮ ಉವಾಚ|

13023006a ನ ಬ್ರಾಹ್ಮಣಃ ಸಾಧಯತೇ ಹವ್ಯಂ ದೈವಾತ್ಪ್ರಸಿಧ್ಯತಿ|

13023006c ದೇವಪ್ರಸಾದಾದಿಜ್ಯಂತೇ ಯಜಮಾನಾ ನ ಸಂಶಯಃ||

ಭೀಷ್ಮನು ಹೇಳಿದನು: “ದೇವಕಾರ್ಯಗಳಾದ ಯಜ್ಞ-ಯಾಗಾದಿಗಳಲ್ಲಿ ಸಿದ್ಧಿಯು ಬ್ರಾಹ್ಮಣನ ಅಧೀನವಾಗಿರುವುದಿಲ್ಲ. ದೈವದ ಕೃಪೆಯಿದ್ದರೆ ಅವು ಸಿದ್ಧಿಸುತ್ತವೆ. ದೇವತೆಗಳ ಪ್ರಸಾದಿಂದಲೇ ಯಜಮಾನರು ಯಾಗಮಾಡುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.

13023007a ಬ್ರಾಹ್ಮಣಾ ಭರತಶ್ರೇಷ್ಠ ಸತತಂ ಬ್ರಹ್ಮವಾದಿನಃ|

13023007c ಮಾರ್ಕಂಡೇಯಃ ಪುರಾ ಪ್ರಾಹ ಇಹ ಲೋಕೇಷು ಬುದ್ಧಿಮಾನ್||

ಭರತಶ್ರೇಷ್ಠ! ಹಿಂದೆ ಬುದ್ಧಿಮಾನ್ ಮಾರ್ಕಂಡೇಯನು ಕವ್ಯವಿಧಿಗಳಲ್ಲಿ ಅರ್ಥಾತ್ ಪಿತೃಸಂಬಂಧೀ ಶ್ರಾದ್ಧಾದಿಗಳಲ್ಲಿ ವೇದವಿದ ಬ್ರಾಹ್ಮಣರನ್ನೇ ಆಮಂತ್ರಿಸಬೇಕೆಂದು ಹೇಳಿದ್ದಾನೆ[4].”

13023008 ಯುಧಿಷ್ಠಿರ ಉವಾಚ|

13023008a ಅಪೂರ್ವೋಽಪ್ಯಥ ವಾ ವಿದ್ವಾನ್ಸಂಬಂಧೀ ವಾಥ ಯೋ ಭವೇತ್|

13023008c ತಪಸ್ವೀ ಯಜ್ಞಶೀಲೋ ವಾ ಕಥಂ ಪಾತ್ರಂ ಭವೇತ್ತು ಸಃ||

ಯುಧಿಷ್ಠಿರನು ಹೇಳಿದನು: “ಅಪರಿಚಿತ, ವಿದ್ವಾಂಸ, ಸಂಬಂಧಿ, ತಪಸ್ವಿ, ಮತ್ತು ಯಜ್ಞಶೀಲ – ಇವರಲ್ಲಿ ಯಾರು ಯಾವ ವಿಧದ ಗುಣಗಳಿಂದ ಯುಕ್ತರಾಗಿದ್ದರೆ ಶ್ರಾದ್ಧಕ್ಕೆ ಮತ್ತು ದಾನಕ್ಕೆ ಉತ್ತಮಪಾತ್ರರೆನಿಸುತ್ತಾರೆ?”

13023009 ಭೀಷ್ಮ ಉವಾಚ|

13023009a ಕುಲೀನಃ ಕರ್ಮಕೃದ್ವೈದ್ಯಸ್ತಥಾ ಚಾಪ್ಯಾನೃಶಂಸ್ಯವಾನ್|

13023009c ಹ್ರೀಮಾನೃಜುಃ ಸತ್ಯವಾದೀ ಪಾತ್ರಂ ಪೂರ್ವೇ ಚ ತೇ ತ್ರಯಃ||

ಭೀಷ್ಮನು ಹೇಳಿದನು: “ಸತ್ಕುಲಪ್ರಸೂತ, ಕರ್ಮಠ, ವೇದವಿದ, ದಯಾಳು, ಲಜ್ಜಾಶೀಲ, ಸರಳ, ಸತ್ಯನಿಷ್ಠ – ಈ ಎಲ್ಲ ಗುಣಗಳಿಂದ ಸಂಪನ್ನರಾಗಿರುವ ಅಪರಿಚಿತ, ವಿದ್ವಾಂಸ ಮತ್ತು ಸಂಬಂಧಿಗಳು ಶ್ರಾದ್ಧ ಮತ್ತು ದಾನಗಳಿಗೆ ಶ್ರೇಷ್ಠಪಾತ್ರರಾಗಿರುತ್ತಾರೆ.

13023010a ತತ್ರೇದಂ ಶೃಣು ಮೇ ಪಾರ್ಥ ಚತುರ್ಣಾಂ ತೇಜಸಾಂ ಮತಮ್|

13023010c ಪೃಥಿವ್ಯಾಃ ಕಾಶ್ಯಪಸ್ಯಾಗ್ನೇರ್ಮಾರ್ಕಂಡೇಯಸ್ಯ ಚೈವ ಹಿ||

ಪಾರ್ಥ! ಈ ವಿಷಯದಲ್ಲಿ ಪೃಥ್ವಿ, ಕಾಶ್ಯಪ, ಅಗ್ನಿ ಮತ್ತು ಮಾರ್ಕಂಡೇಯ ಈ ನಾಲ್ವರು ತೇಜಸ್ವಿಗಳ ಮತವೇನೆನ್ನುವುದನ್ನು ಹೇಳುತ್ತೇನೆ. ಕೇಳು.

13023011 ಪೃಥಿವ್ಯುವಾಚ|

13023011a ಯಥಾ ಮಹಾರ್ಣವೇ ಕ್ಷಿಪ್ತಃ ಕ್ಷಿಪ್ರಂ ಲೋಷ್ಟೋ ವಿನಶ್ಯತಿ|

13023011c ತಥಾ ದುಶ್ಚರಿತಂ ಸರ್ವಂ ತ್ರಯ್ಯಾವೃತ್ತ್ಯಾ ವಿನಶ್ಯತಿ||

ಪೃಥ್ವಿಯು ಹೇಳಿದಳು: “ಸಮುದ್ರದಲ್ಲಿ ಹಾಕಿದ ಮಣ್ಣುಹೆಂಟೆಯು ಹೇಗೆ ಅತಿ ಶೀಘ್ರವಾಗಿ ಕರಗಿ ವಿನಾಶಹೊಂದುತ್ತದೆಯೋ ಹಾಗೆ ಎಲ್ಲ ದುಶ್ಚರಿತಗಳೂ ಮೂರು ವೃತ್ತಿಗಳನ್ನು[5] ಅವಲಂಬಿಸಿರುವ ಬ್ರಾಹ್ಮಣನಲ್ಲಿ ಮುಳುಗಿ ವಿನಾಶಹೊಂದುತ್ತವೆ.”

13023012 ಕಾಶ್ಯಪ ಉವಾಚ|

13023012a ಸರ್ವೇ ಚ ವೇದಾಃ ಸಹ ಷಡ್ಭಿರಂಗೈಃ

ಸಾಂಖ್ಯಂ ಪುರಾಣಂ ಚ ಕುಲೇ ಚ ಜನ್ಮ|

13023012c ನೈತಾನಿ ಸರ್ವಾಣಿ ಗತಿರ್ಭವಂತಿ

ಶೀಲವ್ಯಪೇತಸ್ಯ ನರಸ್ಯ ರಾಜನ್||

ಕಾಶ್ಯಪನು ಹೇಳಿದನು: “ರಾಜನ್! ಶಿಕ್ಷಾ-ವ್ಯಾಕರಣಾದಿ ಆರು ಅಂಗಗಳೊಂದಿಗೆ ಎಲ್ಲ ವೇದಗಳು, ಸಾಂಖ್ಯ, ಪುರಾಣ ಮತ್ತು ಉತ್ತಮ ಕುಲದಲ್ಲಿ ಜನ್ಮ ಇವೆಲ್ಲವೂ ಶೀಲವಿಲ್ಲದ ಬ್ರಾಹ್ಮಣನಿಗೆ ಸದ್ಗತಿಯನ್ನು ಕೊಡಲಾರವು[6].”

13023013 ಅಗ್ನಿರುವಾಚ|

13023013a ಅಧೀಯಾನಃ ಪಂಡಿತಂ ಮನ್ಯಮಾನೋ

ಯೋ ವಿದ್ಯಯಾ ಹಂತಿ ಯಶಃ ಪರೇಷಾಮ್|

13023013c ಬ್ರಹ್ಮನ್ಸ ತೇನಾಚರತೇ ಬ್ರಹ್ಮಹತ್ಯಾಂ

ಲೋಕಾಸ್ತಸ್ಯ ಹ್ಯಂತವಂತೋ ಭವಂತಿ||

ಅಗ್ನಿಯು ಹೇಳಿದನು: “ಅಧ್ಯಯನ ಮಾಡಿ ತಾನೇ ಮಹಾ ಪಂಡಿತನೆಂದು ಭಾವಿಸಿಕೊಳ್ಳುವವನು ಮತ್ತು ತನ್ನ ಪಾಂಡಿತ್ಯದಿಂದ ಇತರರ ಯಶಸ್ಸನ್ನು ಅಪಹರಿಸುವವನು ಧರ್ಮದಿಂದ ಭ್ರಷ್ಟನಾಗುತ್ತಾನೆ. ಅಂತಹ ಬ್ರಾಹ್ಮಣನು ಬ್ರಹ್ಮಹತ್ಯೆಯನ್ನು ಮಾಡಿದಂತೆ. ಅವನು ಪಡೆಯುವ ಲೋಕಗಳು ಶಾಶ್ವತವಾಗಿರುವುದಿಲ್ಲ.”

13023014 ಮಾರ್ಕಂಡೇಯ ಉವಾಚ|

13023014a ಅಶ್ವಮೇಧಸಹಸ್ರಂ ಚ ಸತ್ಯಂ ಚ ತುಲಯಾ ಧೃತಮ್|

13023014c ನಾಭಿಜಾನಾಮಿ ಯದ್ಯಸ್ಯ ಸತ್ಯಸ್ಯಾರ್ಧಮವಾಪ್ನುಯಾತ್||

ಮಾರ್ಕಂಡೇಯನು ಹೇಳಿದನು: “ಸಹಸ್ರ ಅಶ್ವಮೇಧಗಳ ಫಲ ಮತ್ತು ಸತ್ಯನಿಷ್ಟೆಯ ಫಲ ಇವುಗಳನ್ನು ತುಲನೆ ಮಾಡಿದರೆ ಸಹಸ್ರ ಅಶ್ವಮೇಧಗಳ ಫಲವು ತುಲನೆಯಲ್ಲಿ ಸತ್ಯದ ಅರ್ಧದಷ್ಟೂ ತೂಗುವುದೋ ಇಲ್ಲವೋ ತಿಳಿಯಲಾರೆನು!””

13023015 ಭೀಷ್ಮ ಉವಾಚ|

13023015a ಇತ್ಯುಕ್ತ್ವಾ ತೇ ಜಗ್ಮುರಾಶು ಚತ್ವಾರೋಽಮಿತತೇಜಸಃ|

13023015c ಪೃಥಿವೀ ಕಾಶ್ಯಪೋಽಗ್ನಿಶ್ಚ ಪ್ರಕೃಷ್ಟಾಯುಶ್ಚ ಭಾರ್ಗವಃ||

ಭೀಷ್ಮನು ಹೇಳಿದನು: “ಈ ನಾಲ್ವರು ಅಮಿತತೇಜಸ್ವಿಗಳು – ಪೃಥ್ವೀ, ಕಾಶ್ಯಪ, ಅಗ್ನಿ ಮತ್ತು ದೀರ್ಘಾಯುಷಿ ಭಾರ್ಗವ ಮಾರ್ಕಂಡೇಯರು – ಹೀಗೆ ಹೇಳಿ ಹೊರಟುಹೋದರು.”

13023016 ಯುಧಿಷ್ಠಿರ ಉವಾಚ|

13023016a ಯದಿದಂ ಬ್ರಾಹ್ಮಣಾ ಲೋಕೇ ವ್ರತಿನೋ ಭುಂಜತೇ ಹವಿಃ|

13023016c ಭುಕ್ತಂ ಬ್ರಾಹ್ಮಣಕಾಮಾಯ ಕಥಂ ತತ್ಸುಕೃತಂ ಭವೇತ್||

ಯುಧಿಷ್ಠಿರನು ಹೇಳಿದನು: “ಒಂದು ವೇಳೆ ಲೋಕದಲ್ಲಿ ಬ್ರಹ್ಮಚರ್ಯವ್ರತದಲ್ಲಿರುವ ಬ್ರಾಹ್ಮಣನು ಶ್ರಾದ್ಧದ ಹವಿಷ್ಟಾನ್ನವನ್ನು ಭುಂಜಿಸಿದರೆ ಶ್ರೇಷ್ಠ ಬ್ರಾಹ್ಮಣನಿಗೆಂದು ಉದ್ದೇಶಿಸಿದ ಆ ಶ್ರಾದ್ಧದ ಭೋಜನವು ಹೇಗೆ ಸಫಲವಾಗುತ್ತದೆ?”

13023017 ಭೀಷ್ಮ ಉವಾಚ|

13023017a ಆದಿಷ್ಟಿನೋ ಯೇ ರಾಜೇಂದ್ರ ಬ್ರಾಹ್ಮಣಾ ವೇದಪಾರಗಾಃ|

13023017c ಭುಂಜತೇ ಬ್ರಹ್ಮಕಾಮಾಯ ವ್ರತಲುಪ್ತಾ ಭವಂತಿ ತೇ||

ಭೀಷ್ಮನು ಹೇಳಿದನು: “ರಾಜೇಂದ್ರ! ವೇದಪಾರಗರಾದ ಆದಿಷ್ಟಿ[7] ಬ್ರಾಹ್ಮಣರು ಶ್ರೇಷ್ಠಬ್ರಾಹ್ಮಣರಿಗೆಂದಿರುವ ಶ್ರಾದ್ಧಭೋಜನವನ್ನು ಭುಂಜಿಸಿದರೆ ಅವರ ವ್ರತದಲ್ಲಿ ಲೋಪವುಂಟಾಗುತ್ತದೆ[8].”

13023018 ಯುಧಿಷ್ಠಿರ ಉವಾಚ|

13023018a ಅನೇಕಾಂತಂ ಬಹುದ್ವಾರಂ ಧರ್ಮಮಾಹುರ್ಮನೀಷಿಣಃ|

13023018c ಕಿಂ ನಿಶ್ಚಿತಂ ಭವೇತ್ತತ್ರ ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಧರ್ಮದ ಸಾಧನೆಗಳಿಗೂ ಮತ್ತು ಫಲಗಳಿಗೂ ಬಹುದ್ವಾರಗಳಿವೆಯೆಂದು ಮನೀಷಿಣರು ಹೇಳುತ್ತಾರೆ. ಈ ವಿಷಯದಲ್ಲಿ ನಿಶ್ಚಿತವಾದದ್ದು ಏನು ಎನ್ನುವುದನ್ನು ನನಗೆ ಹೇಳು.”

13023019 ಭೀಷ್ಮ ಉವಾಚ|

13023019a ಅಹಿಂಸಾ ಸತ್ಯಮಕ್ರೋಧ ಆನೃಶಂಸ್ಯಂ ದಮಸ್ತಥಾ|

13023019c ಆರ್ಜವಂ ಚೈವ ರಾಜೇಂದ್ರ ನಿಶ್ಚಿತಂ ಧರ್ಮಲಕ್ಷಣಮ್||

ಭೀಷ್ಮನು ಹೇಳಿದನು: “ರಾಜೇಂದ್ರ! ಅಹಿಂಸೆ, ಸತ್ಯ, ಅಕ್ರೋಧ, ದಯೆ, ದಮ, ಸರಳತೆ – ಇವು ಧರ್ಮದ ನಿಶ್ಚಿತ ಲಕ್ಷಣಗಳು.

13023020a ಯೇ ತು ಧರ್ಮಂ ಪ್ರಶಂಸಂತಶ್ಚರಂತಿ ಪೃಥಿವೀಮಿಮಾಮ್|

13023020c ಅನಾಚರಂತಸ್ತದ್ಧರ್ಮಂ ಸಂಕರೇ ನಿರತಾಃ ಪ್ರಭೋ||

ಪ್ರಭೋ! ಧರ್ಮವನ್ನು ಪ್ರಶಂಸಿಸುತ್ತಾ ಅದರೆ ಅದೇ ಧರ್ಮವನ್ನು ಆಚರಿಸದೇ ಈ ಭೂಮಿಯಲ್ಲಿ ತಿರುಗಾಡುವವರು ಧರ್ಮಸಂಕರದಲ್ಲಿ ನಿರತರಾಗಿರುತ್ತಾರೆ.

13023021a ತೇಭ್ಯೋ ರತ್ನಂ ಹಿರಣ್ಯಂ ವಾ ಗಾಮಶ್ವಾನ್ವಾ ದದಾತಿ ಯಃ|

13023021c ದಶ ವರ್ಷಾಣಿ ವಿಷ್ಠಾಂ ಸ ಭುಂಕ್ತೇ ನಿರಯಮಾಶ್ರಿತಃ||

ಅವರಿಗೆ ರತ್ನ, ಹಿರಣ್ಯ, ಗೋವು ಅಥವಾ ಅಶ್ವಗಳನ್ನು ದಾನಮಾಡುವವನು ಹತ್ತುವರ್ಷಗಳು ನರಕದಲ್ಲಿದ್ದು ಅಮೇಧ್ಯವನ್ನು ತಿನ್ನುತ್ತಾನೆ.

13023022a ಮೇದಾನಾಂ ಪುಲ್ಕಸಾನಾಂ ಚ ತಥೈವಾಂತಾವಸಾಯಿನಾಮ್|

13023022c ಕೃತಂ ಕರ್ಮಾಕೃತಂ ಚಾಪಿ ರಾಗಮೋಹೇನ ಜಲ್ಪತಾಮ್||

ಕರ್ಮಗಳನ್ನು ಮಾಡಲಿ ಅಥವಾ ಮಾಡದೇ ಇರಲಿ ಆದರೆ ರಾಗ-ಮೋಹಗಳಿಂದ ತಾವೇ ಶ್ರೇಷ್ಠರೆಂದು ಆತ್ಮಪ್ರಶಂಸೆಮಾಡಿಕೊಳ್ಳುವವರು ಸತ್ತಹಸುವಿನ ಮಾಂಸವನ್ನು ತಿನ್ನುವವರ, ಬ್ರಹ್ಮದ್ವೇಷಿಗಳ ಮತ್ತು ಚಮ್ಮಾರರ ಯೋನಿಗಳಲ್ಲಿ ಜನಿಸುತ್ತಾರೆ.

13023023a ವೈಶ್ವದೇವಂ ಚ ಯೇ ಮೂಢಾ ವಿಪ್ರಾಯ ಬ್ರಹ್ಮಚಾರಿಣೇ|

13023023c ದದತೀಹ ನ ರಾಜೇಂದ್ರ ತೇ ಲೋಕಾನ್ಭುಂಜತೇಽಶುಭಾನ್||

ರಾಜೇಂದ್ರ! ಬ್ರಹ್ಮಚಾರಿಣೀ ವಿಪ್ರರಿಗೆ ವೈಶ್ವದೇವದ ಅನ್ನವನ್ನು ಕೊಡದ ಮೂಢನು ಅಶುಭ ಲೋಕಗಳನ್ನು ಅನುಭವಿಸುತ್ತಾನೆ.”

13023024 ಯುಧಿಷ್ಠಿರ ಉವಾಚ|

13023024a ಕಿಂ ಪರಂ ಬ್ರಹ್ಮಚರ್ಯಸ್ಯ ಕಿಂ ಪರಂ ಧರ್ಮಲಕ್ಷಣಮ್|

13023024c ಕಿಂ ಚ ಶ್ರೇಷ್ಠತಮಂ ಶೌಚಂ ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಪರಮ ಬ್ರಹ್ಮಚರ್ಯವು ಯಾವುದು? ಪರಮ ಧರ್ಮಲಕ್ಷಣವು ಯಾವುದು? ಎಲ್ಲಕ್ಕಿಂತಲೂ ಶ್ರೇಷ್ಠ ಶೌಚವು ಯಾವುದು? ಅದನ್ನು ನನಗೆ ಹೇಳು.”

13023025 ಭೀಷ್ಮ ಉವಾಚ|

13023025a ಬ್ರಹ್ಮಚರ್ಯಂ ಪರಂ ತಾತ ಮಧುಮಾಂಸಸ್ಯ ವರ್ಜನಮ್|

13023025c ಮರ್ಯಾದಾಯಾಂ ಸ್ಥಿತೋ ಧರ್ಮಃ ಶಮಃ ಶೌಚಸ್ಯ ಲಕ್ಷಣಮ್||

ಭೀಷ್ಮನು ಹೇಳಿದನು: “ಮಗೂ! ಮಧು-ಮಾಂಸಗಳ ವರ್ಜನೆಯೇ ಪರಮ ಬ್ರಹ್ಮಚರ್ಯ. ಮರ್ಯಾದೆಗಳೊಳಗೆ ಇರುವುದೇ ಧರ್ಮ. ಮನಸ್ಸು-ಇಂದ್ರಿಯಗಳ ಸಂಯಮ ಶಮವೇ ಶೌಚದ ಲಕ್ಷಣ.”

13023026 ಯುಧಿಷ್ಠಿರ ಉವಾಚ|

13023026a ಕಸ್ಮಿನ್ಕಾಲೇ ಚರೇದ್ಧರ್ಮಂ ಕಸ್ಮಿನ್ಕಾಲೇಽರ್ಥಮಾಚರೇತ್|

13023026c ಕಸ್ಮಿನ್ಕಾಲೇ ಸುಖೀ ಚ ಸ್ಯಾತ್ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಯಾವಕಾಲದಲ್ಲಿ ಧರ್ಮವನ್ನು ಆಚರಿಸಬೇಕು? ಯಾವ ಕಾಲದಲ್ಲಿ ಅರ್ಥವನ್ನು ಸಂಗ್ರಹಿಸಬೇಕು? ಯಾವ ಕಾಲದಲ್ಲಿ ಸುಖವನ್ನು ಬಯಸಬೇಕು? ಅದನ್ನು ನನಗೆ ಹೇಳು.”

13023027 ಭೀಷ್ಮ ಉವಾಚ|

13023027a ಕಾಲ್ಯಮರ್ಥಂ ನಿಷೇವೇತ ತತೋ ಧರ್ಮಮನಂತರಮ್|

13023027c ಪಶ್ಚಾತ್ಕಾಮಂ ನಿಷೇವೇತ ನ ಚ ಗಚ್ಚೇತ್ಪ್ರಸಂಗಿತಾಮ್||

ಭೀಷ್ಮನು ಹೇಳಿದನು: “ಪೂರ್ವಾಹ್ಣದಲ್ಲಿ ಧನವನ್ನು ಸಂಗ್ರಹಿಸಬೇಕು. ಅನಂತರ ಧರ್ಮಾಚರಣೆಯನ್ನು ಮಾಡಬೇಕು. ಬಳಿಕ ಸುಖಪಡಬೇಕು. ಆದರೆ ಸುಖಕ್ಕೇ ಅಂಟಿಕೊಂಡಿರಬಾರದು.

13023028a ಬ್ರಾಹ್ಮಣಾಂಶ್ಚಾಭಿಮನ್ಯೇತ ಗುರೂಂಶ್ಚಾಪ್ಯಭಿಪೂಜಯೇತ್|

13023028c ಸರ್ವಭೂತಾನುಲೋಮಶ್ಚ ಮೃದುಶೀಲಃ ಪ್ರಿಯಂವದಃ||

ಬ್ರಾಹ್ಮಣರನ್ನು ಗೌರವಿಸಬೇಕು. ಹಿರಿಯರನ್ನು ಪೂಜಿಸಬೇಕು. ಸರ್ವಭೂತಗಳಿಗೂ ಅನುಕೂಲನಾಗಿರಬೇಕು. ಮೃದುಶೀಲನೂ ಪ್ರಿಯಂವದನೂ ಆಗಿರಬೇಕು.

13023029a ಅಧಿಕಾರೇ ಯದನೃತಂ ರಾಜಗಾಮಿ ಚ ಪೈಶುನಮ್|

13023029c ಗುರೋಶ್ಚಾಲೀಕಕರಣಂ ಸಮಂ ತದ್ಬ್ರಹ್ಮಹತ್ಯಯಾ||

ಅಧಿಕಾರದಲ್ಲಿದ್ದುಕೊಂಡು ಸುಳ್ಳುಹೇಳುವುದು, ರಾಜನಿಗೆ ಬೇರೊಬ್ಬರ ಮೇಲೆ ಚಾಡಿಹೇಳುವುದು, ಗುರುವಿನೊಂದಿಗೆ ಅಸತ್ಯವಾಗಿ ವ್ಯವಹರಿಸುವುದು ಇವು ಬ್ರಹ್ಮಹತ್ಯೆಗೆ ಸಮ.

13023030a ಪ್ರಹರೇನ್ನ ನರೇಂದ್ರೇಷು ನ ಗಾಂ ಹನ್ಯಾತ್ತಥೈವ ಚ|

13023030c ಭ್ರೂಣಹತ್ಯಾಸಮಂ ಚೈತದುಭಯಂ ಯೋ ನಿಷೇವತೇ||

ರಾಜರಿಗೆ ಹೊಡೆಯಬಾರದು. ಗೋವುಗಳನ್ನು ಕೊಲ್ಲಬಾರದು. ಈ ಎರಡನ್ನೂ ಮಾಡುವವನು ಭ್ರೂಣಹತ್ಯೆಗೆ ಸಮನಾದ ಪಾಪವನ್ನು ಅನುಭವಿಸುವನು.

13023031a ನಾಗ್ನಿಂ ಪರಿತ್ಯಜೇಜ್ಜಾತು ನ ಚ ವೇದಾನ್ಪರಿತ್ಯಜೇತ್|

13023031c ನ ಚ ಬ್ರಾಹ್ಮಣಮಾಕ್ರೋಶೇತ್ಸಮಂ ತದ್ಬ್ರಹ್ಮಹತ್ಯಯಾ||

ಅಗ್ನಿಕಾರ್ಯಗಳನ್ನು ಬಿಡಬಾರದು. ವೇದಾಧ್ಯಯನವನ್ನು ನಿಲ್ಲಿಸಬಾರದು. ಬ್ರಾಹ್ಮಣರನ್ನು ನಿಂದಿಸಬಾರದು. ಇವು ಬ್ರಹ್ಮಹತ್ಯೆಗೆ ಸಮ.”

13023032 ಯುಧಿಷ್ಠಿರ ಉವಾಚ|

13023032a ಕೀದೃಶಾಃ ಸಾಧವೋ ವಿಪ್ರಾಃ ಕೇಭ್ಯೋ ದತ್ತಂ ಮಹಾಫಲಮ್|

13023032c ಕೀದೃಶಾನಾಂ ಚ ಭೋಕ್ತವ್ಯಂ ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಸಾಧು ವಿಪ್ರರು ಹೇಗಿರುತ್ತಾರೆ? ಯಾರಿಗೆ ಕೊಟ್ಟ ದಾನವು ಹೆಚ್ಚಿನ ಫಲವನ್ನು ನೀಡುತ್ತದೆ? ಎಂಥವರಿಗೆ ಭೋಜನವನ್ನು ನೀಡಬೇಕು. ಅದನ್ನು ನನಗೆ ಹೇಳು.”

13023033 ಭೀಷ್ಮ ಉವಾಚ|

13023033a ಅಕ್ರೋಧನಾ ಧರ್ಮಪರಾಃ ಸತ್ಯನಿತ್ಯಾ ದಮೇ ರತಾಃ|

13023033c ತಾದೃಶಾಃ ಸಾಧವೋ ವಿಪ್ರಾಸ್ತೇಭ್ಯೋ ದತ್ತಂ ಮಹಾಫಲಮ್||

ಭೀಷ್ಮನು ಹೇಳಿದನು: “ಕ್ರೋಧಗೊಳ್ಳದಿರುವ ಧರ್ಮಪರ ಸತ್ಯನಿತ್ಯ ಇಂದ್ರಿಯನಿಗ್ರಹಿ ವಿಪ್ರರು ಸಾಧುಗಳು. ಅವರಿಗೆ ಕೊಟ್ಟ ದಾನವು ಹೆಚ್ಚಿನ ಫಲವನ್ನು ನೀಡುತ್ತದೆ.

13023034a ಅಮಾನಿನಃ ಸರ್ವಸಹಾ ದೃಷ್ಟಾರ್ಥಾ ವಿಜಿತೇಂದ್ರಿಯಾಃ|

13023034c ಸರ್ವಭೂತಹಿತಾ ಮೈತ್ರಾಸ್ತೇಭ್ಯೋ ದತ್ತಂ ಮಹಾಫಲಮ್||

ದುರಭಿಮಾನಿಯಾಗಿರದ, ಸರ್ವವನ್ನೂ ಸಹಿಸಿಕೊಳ್ಳುವ, ಅರ್ಥವನ್ನು ಕಂಡುಕೊಂಡಿರುವ, ವಿಜಿತೇಂದ್ರಿಯರಾದ, ಸರ್ವಭೂತಗಳ ಹಿತಾಸಕ್ತರೂ ಮಿತ್ರರೂ ಆದವರಿಗೆ ಕೊಟ್ಟ ದಾನವು ಅಧಿಕ ಫಲವನ್ನು ನೀಡುತ್ತದೆ.

13023035a ಅಲುಬ್ಧಾಃ ಶುಚಯೋ ವೈದ್ಯಾ ಹ್ರೀಮಂತಃ ಸತ್ಯವಾದಿನಃ|

13023035c ಸ್ವಕರ್ಮನಿರತಾ ಯೇ ಚ ತೇಭ್ಯೋ ದತ್ತಂ ಮಹಾಫಲಮ್||

ಲುಬ್ಧರಲ್ಲದ, ಶುಚಿಗಳಾದ, ವಿದ್ಯಾವಂತರಾದ, ಲಜ್ಜಾಸ್ವಭಾವದ, ಸತ್ಯವಾದಿಗಳೂ ಮತ್ತು ಸ್ವಕರ್ಮನಿರತರೂ ಆದವರಿಗೆ ಕೊಟ್ಟ ದಾನವು ಮಹಾಫಲವನ್ನು ನೀಡುತ್ತದೆ.

13023036a ಸಾಂಗಾಂಶ್ಚ ಚತುರೋ ವೇದಾನ್ಯೋಽಧೀಯೀತ ದ್ವಿಜರ್ಷಭಃ|

13023036c ಷಡ್ಭ್ಯೋ ನಿವೃತ್ತಃ ಕರ್ಮಭ್ಯಸ್ತಂ ಪಾತ್ರಮೃಷಯೋ ವಿದುಃ||

ಅಂಗಗಳೊಂದಿಗೆ ನಾಲ್ಕೂ ವೇದಗಳನ್ನು ಅಧ್ಯಯನಮಾಡಿರುವ ಮತ್ತು ಷಟ್ಕರ್ಮ[9]ಗಳಲ್ಲಿ ನಿರತನಾಗಿರುವ ದ್ವಿಜರ್ಷಭನು ದಾನಗಳಿಗೆ ಪಾತ್ರನೆಂದು ಋಷಿಗಳು ತಿಳಿದುಕೊಂಡಿದ್ದಾರೆ.

13023037a ಯೇ ತ್ವೇವಂಗುಣಜಾತೀಯಾಸ್ತೇಭ್ಯೋ ದತ್ತಂ ಮಹಾಫಲಮ್|

13023037c ಸಹಸ್ರಗುಣಮಾಪ್ನೋತಿ ಗುಣಾರ್ಹಾಯ ಪ್ರದಾಯಕಃ||

ಈ ಹಿಂದೆ ಹೇಳಿದ ಗುಣ-ಗುಂಪುಗಳಿರುವ ಗುಣಾರ್ಹನಿಗೆ ಕೊಡುವ ದಾನದ ಮಹಾಫಲವು ಸಹಸ್ರಪಟ್ಟಾಗುತ್ತದೆ.

13023038a ಪ್ರಜ್ಞಾಶ್ರುತಾಭ್ಯಾಂ ವೃತ್ತೇನ ಶೀಲೇನ ಚ ಸಮನ್ವಿತಃ|

13023038c ತಾರಯೇತ ಕುಲಂ ಕೃತ್ಸ್ನಮೇಕೋಽಪೀಹ ದ್ವಿಜರ್ಷಭಃ||

ಉತ್ತಮ ಪ್ರಜ್ಞೆ, ಶಾಸ್ತ್ರಜ್ಞಾನ, ಸದಾಚಾರ ಮತ್ತು ಸೌಶೀಲ್ಯ – ಇವುಗಳಿಂದ ಸಂಪನ್ನನಾದ ಬ್ರಾಹ್ಮಣಶ್ರೇಷ್ಠನು ದಾನಕೊಟ್ಟವನ ಕುಲವನ್ನೇ ಉದ್ಧಾರಮಾಡುತ್ತಾನೆ.

13023039a ಗಾಮಶ್ವಂ ವಿತ್ತಮನ್ನಂ ವಾ ತದ್ವಿಧೇ ಪ್ರತಿಪಾದಯೇತ್|

13023039c ದ್ರವ್ಯಾಣಿ ಚಾನ್ಯಾನಿ ತಥಾ ಪ್ರೇತ್ಯಭಾವೇ ನ ಶೋಚತಿ||

ಆಂಥಹವನಿಗೆ ಗೋವನ್ನಾಗಲೀ, ಕುದುರೆಯನ್ನಾಗಲೀ, ವಿತ್ತವನ್ನಾಗಲೀ ಅಥವಾ ಅನ್ಯ ದ್ರವ್ಯಗಳನ್ನಾಗಲೀ ನೀಡುವುದರಿಂದ ಮರಣಾನಂತರ ದುಃಖಪಡಬೇಕಾಗುವುದಿಲ್ಲ.

13023040a ತಾರಯೇತ ಕುಲಂ ಕೃತ್ಸ್ನಮೇಕೋಽಪೀಹ ದ್ವಿಜೋತ್ತಮಃ|

13023040c ಕಿಮಂಗ ಪುನರೇಕಂ ವೈ ತಸ್ಮಾತ್ಪಾತ್ರಂ ಸಮಾಚರೇತ್||

ಅಂಥಹ ಒಬ್ಬ ದ್ವಿಜೋತ್ತಮನೇ ದಾನವನ್ನು ನೀಡಿದವನ ಕುಲ ಸರ್ವವನ್ನೂ ಉದ್ಧರಿಸುತ್ತಾನೆಂದ ಮೇಲೆ ಅಂಥಹ ಅನೇಕ ಬ್ರಾಹ್ಮಣರ ವಿಷಯದಲ್ಲಿ ಹೇಳುವುದೇನಿದೆ? ಆದುದರಿಂದ ಸತ್ಪಾತ್ರರನ್ನು ಹುಡುಕಿ ದಾನಮಾಡಬೇಕು.

13023041a ನಿಶಮ್ಯ ಚ ಗುಣೋಪೇತಂ ಬ್ರಾಹ್ಮಣಂ ಸಾಧುಸಂಮತಮ್|

13023041c ದೂರಾದಾನಾಯಯೇತ್ಕೃತ್ಯೇ ಸರ್ವತಶ್ಚಾಭಿಪೂಜಯೇತ್||

ಬ್ರಾಹ್ಮಣನು ಗುಣೋಪೇತನೂ ಸಾಧುಸಮ್ಮತನೂ ಎನ್ನುವುದನ್ನು ಕೇಳಿ ಅವನು ದೂರದಲ್ಲಿದ್ದರೂ ಕರೆತರಿಸಿ ಸರ್ವತಃ ಪೂಜಿಸಬೇಕು.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಬಹುಪ್ರಾಶ್ನಿಕೇ ತ್ರ್ಯೋವಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಬಹುಪ್ರಾಶ್ನಿಕ ಎನ್ನುವ ಇಪ್ಪತ್ಮೂರನೇ ಅಧ್ಯಾಯವು.

Related image

[1] ದಂಡ-ಕಮಂಡಲು ಮೊದಲಾದ ಚಿಹ್ನೆಗಳಿರುವ ಬ್ರಹ್ಮಚಾರಿಯನ್ನೋ ಅಥವಾ ಯಾವುದೇ ಚಿಹ್ನೆಗಳಿಲ್ಲದ ಗೃಹಸ್ಥನನ್ನೋ?

[2] ಅಂದರೆ ಆಶ್ರಮಧರ್ಮವನ್ನು ಆಧರಿಸಿ.

[3] ಮನುಸ್ಮೃತಿಯಲ್ಲಿ ಈ ಅಭಿಪ್ರಾಯವಿದೆ: ನ ಬ್ರಾಹ್ಮಣಂ ಪರೀಕ್ಷೇತ ದೈವೇ ಕರ್ಮಣಿ ಧರ್ಮವಿತ್| ಪಿತ್ರ್ಯೇ ಕರ್ಮಣಿ ತು ಪ್ರಾಪ್ತೇ ಪರೀಕ್ಷೇತ ಪ್ರಯತ್ನತಃ||

[4] ಶ್ರಾದ್ಧಾದಿಗಳ ಸಿದ್ಧಿಯು ಸತ್ಪಾತ್ರ ಬ್ರಾಹ್ಮಣರನ್ನೇ ಅವಲಂಬಿಸಿದೆ.

[5] ಯಾಜನ, ಅಧ್ಯಾಪನ ಮತ್ತು ಪ್ರತಿಗ್ರಹ.

[6] ಶೀಲವೇ ಎಲ್ಲಕ್ಕಿಂತ ಉತ್ತಮ ಗುಣವು.

[7] ಹನ್ನೆರಡು ವರ್ಷಪರ್ಯಂತ ಬ್ರಹ್ಮಚರ್ಯವ್ರತಾನುಷ್ಟಾನದಲ್ಲಿರುವಂತೆ ಗುರುವಿನ ಆದೇಶವಾಗಿರುವವರು ಆದಿಷ್ಟಿಗಳು.

[8] ೧೬ ಮತ್ತು ೧೭ನೇ ಶ್ಲೋಕಗಳಲ್ಲಿ ಬಳಸಿರುವ ವ್ರತಿನಃ ಮತ್ತು ಆದಿಷ್ಟಿನಃ ಎಂಬ ಪದಗಳಿಗೆ ಬ್ರಹ್ಮಚಾರಿಗಳು ಎಂದು ಅರ್ಥೈಸಿದ್ದಾರೆ. “ಬ್ರಹ್ಮಚಾರಿಗಳಿಗೆ ಶ್ರಾದ್ಧಭೋಜನವನ್ನು ನೀಡಬಹುದೇ?” ಎನ್ನುವ ಪ್ರಶ್ನೆಗೆ “ನೀಡಬಹುದು, ಆದರೆ ಅವರ ಬ್ರಹ್ಮಚರ್ಯವ್ರತಕ್ಕೆ ಲೋಪವಾಗುತ್ತದೆ” ಎಂಬ ಉತ್ತರವಿದೆ. ಸಾಂಪ್ರದಾಯಿಕವಾಗಿ ಶ್ರಾದ್ಧಕರ್ಮಗಳಿಗೆ ಬ್ರಹ್ಮಚಾರಿಗಳನ್ನು ಆಮಂತ್ರಿಸುವುದಿಲ್ಲ.

[9] ಯಜನ-ಯಾಜನ, ಅಧ್ಯಯನ-ಅಧ್ಯಾಪನ ಮತ್ತು ದಾನ-ಪ್ರತಿಗ್ರಹಗಳೇ ಬ್ರಾಹ್ಮಣರ ಷಟ್ಕರ್ಮಗಳು.

Comments are closed.