Anushasana Parva: Chapter 152

ಅನುಶಾಸನ ಪರ್ವ: ದಾನಧರ್ಮ ಪರ್ವ

೧೫೨

ಯುಧಿಷ್ಠಿರ ಪ್ರತಿಪ್ರಯಾಣ

ಭೀಷ್ಮನ ಅನುಮತಿಯನ್ನು ಪಡೆದು ಯುಧಿಷ್ಠಿರನು ಹಸ್ತಿನಾಪುರಕ್ಕೆ ಹಿಂದಿರುಗಿದುದು (೧-೧೩).

13152001 ವೈಶಂಪಾಯನ ಉವಾಚ|

13152001a ತೂಷ್ಣೀಂಭೂತೇ ತದಾ ಭೀಷ್ಮೇ ಪಟೇ ಚಿತ್ರಮಿವಾರ್ಪಿತಮ್|

13152001c ಮುಹೂರ್ತಮಿವ ಚ ಧ್ಯಾತ್ವಾ ವ್ಯಾಸಃ ಸತ್ಯವತೀಸುತಃ|

13152001E ನೃಪಂ ಶಯಾನಂ ಗಾಂಗೇಯಮಿದಮಾಹ ವಚಸ್ತದಾ||

ವೈಶಂಪಾಯನನು ಹೇಳಿದನು: “ಭೀಷ್ಮನು ಸುಮ್ಮನಾಗಲು ಅಲ್ಲಿ ಸೇರಿದ್ದ ಎಲ್ಲರೂ ಚಿತ್ರಪಟದಲ್ಲಿ ಅಂಕಿತಗೊಂಡ ಚಿತ್ರಗಳಂತೆ ಸ್ತಬ್ಧರಾದರು. ಆಗ ಒಂದು ಕ್ಷಣ ಯೋಚಿಸಿದ ಸತ್ಯವತೀಸುತ ವ್ಯಾಸನು ಮಲಗಿದ್ದ ನೃಪ ಗಾಂಗೇಯನಿಗೆ ಈ ಮಾತನ್ನಾಡಿದನು.

13152002a ರಾಜನ್ಪ್ರಕೃತಿಮಾಪನ್ನಃ ಕುರುರಾಜೋ ಯುಧಿಷ್ಠಿರಃ|

13152002c ಸಹಿತೋ ಭ್ರಾತೃಭಿಃ ಸರ್ವೈಃ ಪಾರ್ಥಿವೈಶ್ಚಾನುಯಾಯಿಭಿಃ||

13152003a ಉಪಾಸ್ತೇ ತ್ವಾಂ ನರವ್ಯಾಘ್ರ ಸಹ ಕೃಷ್ಣೇನ ಧೀಮತಾ|

13152003c ತಮಿಮಂ ಪುರಯಾನಾಯ ತ್ವಮನುಜ್ಞಾತುಮರ್ಹಸಿ||

“ರಾಜನ್! ಕುರುರಾಜ ಯುಧಿಷ್ಠಿರನು ಈಗ ಶಾಂತ ಮತ್ತು ಸಂದೇಹರಹಿತನಾಗಿ ತನ್ನ ಪ್ರಕೃತಿಯನ್ನು ಪಡೆದುಕೊಂಡಿದ್ದಾನೆ. ನರವ್ಯಾಘ್ರ! ಅವನು ಭ್ರಾತೃಗಳೊಂದಿಗೆ, ಸರ್ವ ಪಾರ್ಥಿವರು ಮತ್ತು ಅನುಯಾಯಿಗಳೊಂದಿಗೆ, ಹಾಗೂ ಧೀಮತ ಕೃಷ್ಣನೊಂದಿಗೆ ನಿನ್ನ ಸೇವೆಯಲ್ಲಿ ಬಂದಿದ್ದಾರೆ. ಇನ್ನು ನೀನು ಅವರಿಗೆ ಹಸ್ತಿನಾಪುರಕ್ಕೆ ಹೊರಡುವ ಅನುಮತಿಯನ್ನು ನೀಡಬೇಕು.”

13152004a ಏವಮುಕ್ತೋ ಭಗವತಾ ವ್ಯಾಸೇನ ಪೃಥಿವೀಪತಿಃ|

13152004c ಯುಧಿಷ್ಠಿರಂ ಸಹಾಮಾತ್ಯಮನುಜಜ್ಞೇ ನದೀಸುತಃ||

ಭಗವಂತ ವ್ಯಾಸನು ಹೀಗೆ ಹೇಳಲು ಪೃಥಿವೀಪತಿ ನದೀಸುತನು ಅಮಾತ್ಯರೊಡನಿದ್ದ ಯುಧಿಷ್ಠಿರನಿಗೆ ಅನುಮತಿಯನ್ನು ನೀಡಿದನು.

13152005a ಉವಾಚ ಚೈನಂ ಮಧುರಂ ತತಃ ಶಾಂತನವೋ ನೃಪಃ|

13152005c ಪ್ರವಿಶಸ್ವ ಪುರಂ ರಾಜನ್ವ್ಯೇತು ತೇ ಮಾನಸೋ ಜ್ವರಃ||

ಆಗ ನೃಪ ಶಾಂತನವನು ಮಧುರವಾಗಿ ಅವನಿಗೆ ಹೇಳಿದನು ಕೂಡ: “ರಾಜನ್! ಪುರವನ್ನು ಪ್ರವೇಶಿಸು. ನಿನ್ನ ಮಾನಸ ಜ್ವರವು ಕಳೆಯಲಿ.

13152006a ಯಜಸ್ವ ವಿವಿಧೈರ್ಯಜ್ಞೈರ್ಬಹ್ವನ್ನೈಃ ಸ್ವಾಪ್ತದಕ್ಷಿಣೈಃ|

13152006c ಯಯಾತಿರಿವ ರಾಜೇಂದ್ರ ಶ್ರದ್ಧಾದಮಪುರಃಸರಃ||

ರಾಜೇಂದ್ರ! ಯಾಯಾತಿಯಂತೆ ನೀನು ಶ್ರದ್ಧೆ ಮತ್ತು ಇಂದ್ರಿಯನಿಗ್ರಹಗಳೊಂದಿಗೆ ಅನೇಕ ಆಪ್ತದಕ್ಷಿಣೆಗಳನ್ನಿತ್ತು ವಿವಿಧ ಯಜ್ಞಗಳನ್ನು ಮಾಡು.

13152007a ಕ್ಷತ್ರಧರ್ಮರತಃ ಪಾರ್ಥ ಪಿತೄನ್ದೇವಾಂಶ್ಚ ತರ್ಪಯ|

13152007c ಶ್ರೇಯಸಾ ಯೋಕ್ಷ್ಯಸೇ ಚೈವ ವ್ಯೇತು ತೇ ಮಾನಸೋ ಜ್ವರಃ||

ಪಾರ್ಥ! ಕ್ಷತ್ರಧರ್ಮರತನಾಗಿ ಪಿತೃ-ದೇವತೆಗಳನ್ನು ತೃಪ್ತಿಪಡಿಸು. ಶ್ರೇಯಸ್ಸನ್ನು ಹೊಂದುತ್ತೀಯೆ ಮತ್ತು ಮಾನಸ ಜ್ವರವನ್ನೂ ಕಳೆದುಕೊಳ್ಳುತ್ತೀಯೆ.

13152008a ರಂಜಯಸ್ವ ಪ್ರಜಾಃ ಸರ್ವಾಃ ಪ್ರಕೃತೀಃ ಪರಿಸಾಂತ್ವಯ|

13152008c ಸುಹೃದಃ ಫಲಸತ್ಕಾರೈರಭ್ಯರ್ಚಯ ಯಥಾರ್ಹತಃ||

ಸರ್ವಪ್ರಜೆಗಳನ್ನೂ ರಂಜಿಸು. ಮಂತ್ರಿಗಳೇ ಮೊದಲಾದ ಪ್ರಕೃತಿಗಳನ್ನು ಸಂತವಿಸು. ಯಥಾರ್ಹವಾಗಿ ಸುಹೃದಯರನ್ನು ಫಲ-ಸತ್ಕಾರಗಳಿಂದ ಗೌರವಿಸು.

13152009a ಅನು ತ್ವಾಂ ತಾತ ಜೀವಂತು ಮಿತ್ರಾಣಿ ಸುಹೃದಸ್ತಥಾ|

13152009c ಚೈತ್ಯಸ್ಥಾನೇ ಸ್ಥಿತಂ ವೃಕ್ಷಂ ಫಲವಂತಮಿವ ದ್ವಿಜಾಃ||

ಅಯ್ಯಾ! ದೇವಸ್ಥಾನಗಳಲ್ಲಿ ಇರುವ ಫಲವಂತ ವೃಕ್ಷವನ್ನು ಪಕ್ಷಿಗಳು ಹೇಗೆ ಆಶ್ರಯಿಸುತ್ತವೆಯೋ ಹಾಗೆ ನಿನ್ನನ್ನು ಅವಲಂಬಿಸಿ ನಿನ್ನ ಮಿತ್ರರು ಮತ್ತು ಸುಹೃದಯರು ಜೀವಿಸುವಂತಾಗಲಿ.

13152010a ಆಗಂತವ್ಯಂ ಚ ಭವತಾ ಸಮಯೇ ಮಮ ಪಾರ್ಥಿವ|

13152010c ವಿನಿವೃತ್ತೇ ದಿನಕರೇ ಪ್ರವೃತ್ತೇ ಚೋತ್ತರಾಯಣೇ||

ಪಾರ್ಥಿವ! ದಿನಕರನು ದಕ್ಷಿಣಾಯನದಿಂದ ಹಿಂದಿರುಗಿ ಉತ್ತರಾಯಣಕ್ಕೆ ಬರುವ ಸಮಯದಲ್ಲಿ ನೀನು ನನ್ನ ಬಳಿ ಬರಬೇಕು.”

13152011a ತಥೇತ್ಯುಕ್ತ್ವಾ ತು ಕೌಂತೇಯಃ ಸೋಽಭಿವಾದ್ಯ ಪಿತಾಮಹಮ್|

13152011c ಪ್ರಯಯೌ ಸಪರೀವಾರೋ ನಗರಂ ನಾಗಸಾಹ್ವಯಮ್||

ಹಾಗೆಯೇ ಆಗಲೆಂದು ಹೇಳಿ ಪಿತಾಮಹನಿಗೆ ನಮಸ್ಕರಿಸಿ ಕೌಂತೇಯನು ಸಪರಿವಾರನಾಗಿ ನಾಗಸಾಹ್ವಯ ನಗರಿಗೆ ಹೊರಟನು.

13152012a ಧೃತರಾಷ್ಟ್ರಂ ಪುರಸ್ಕೃತ್ಯ ಗಾಂಧಾರೀಂ ಚ ಪತಿವ್ರತಾಮ್|

13152012c ಸಹ ತೈರೃಷಿಭಿಃ ಸರ್ವೈರ್ಭ್ರಾತೃಭಿಃ ಕೇಶವೇನ ಚ||

13152013a ಪೌರಜಾನಪದೈಶ್ಚೈವ ಮಂತ್ರಿವೃದ್ಧೈಶ್ಚ ಪಾರ್ಥಿವಃ|

13152013c ಪ್ರವಿವೇಶ ಕುರುಶ್ರೇಷ್ಠ ಪುರಂ ವಾರಣಸಾಹ್ವಯಮ್||

ಧೃತರಾಷ್ಟ್ರ ಮತ್ತು ಪತಿವ್ರತೆ ಗಾಂಧಾರಿಯರನ್ನು ಮುಂದಿಟ್ಟುಕೊಂಡು ಋಷಿಗಳು, ಸರ್ವ ಭ್ರಾತೃಗಳು ಮತ್ತು ಕೇಶವರೊಡನೆ, ಪೌರಜಾನಪದರು ಮತ್ತು ಮಂತ್ರಿವೃದ್ಧರೊಡನೆ ಕುರುಶ್ರೇಷ್ಠ ಪಾರ್ಥಿವನು ವಾರಣಸಾಹ್ವಯ ಪುರವನ್ನು ಪ್ರವೇಶಿಸಿದನು.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಭೀಷ್ಮಾನುಜ್ಞಾಯಾಂ ದ್ವಿಪಂಚಾಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಭೀಷ್ಮಾನುಜ್ಞಾಯ ಎನ್ನುವ ನೂರಾಐವತ್ತೆರಡನೇ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವವು|

ಇದೂವರೆಗಿನ ಒಟ್ಟು ಮಹಾಪರ್ವಗಳು – ೧೨/೧೮, ಉಪಪರ್ವಗಳು-೮೭/೧೦೦, ಅಧ್ಯಾಯಗಳು-೧೮೩೩/೧೯೯೫, ಶ್ಲೋಕಗಳು-೬೯೩೨೩/೭೩೭೮೪

Related image

Comments are closed.