Anushasana Parva: Chapter 132

ಅನುಶಾಸನ ಪರ್ವ: ದಾನಧರ್ಮ ಪರ್ವ

೧೩೨

ಮಾತು, ಮನಸ್ಸು ಮತ್ತು ಕ್ರಿಯೆಗಳ ಮೂಲಕ ಮನುಷ್ಯನು ಮಾಡುವ ಧರ್ಮಾಧರ್ಮಗಳಿಂದ ಪಡೆಯುವ ಗತಿಗಳ ಕುರಿತಾದ ಉಮಾಮಹೇಶ್ವರ ಸಂವಾದ (1-58).

13132001 ಉಮೋವಾಚ|

13132001a ಭಗವನ್ಸರ್ವಭೂತೇಶ ಸುರಾಸುರನಮಸ್ಕೃತ|

13132001c ಧರ್ಮಾಧರ್ಮೇ ನೃಣಾಂ ದೇವ ಬ್ರೂಹಿ ಮೇ ಸಂಶಯಂ ವಿಭೋ||

ಉಮೆಯು ಹೇಳಿದಳು: “ಭಗವನ್! ಸರ್ವಭೂತೇಶ! ಸುರಾಸುರನಮಸ್ಕೃತ! ದೇವ! ವಿಭೋ! ಮನುಷ್ಯರ ಧರ್ಮಾಧರ್ಮಗಳ ಕುರಿತು ನನಗೆ ಸಂಶಯವಿದೆ. ಅವುಗಳ ಕುರಿತು ಹೇಳು.

13132002a ಕರ್ಮಣಾ ಮನಸಾ ವಾಚಾ ತ್ರಿವಿಧಂ ಹಿ ನರಃ ಸದಾ|

13132002c ಬಧ್ಯತೇ ಬಂಧನೈಃ ಪಾಶೈರ್ಮುಚ್ಯತೇಽಪ್ಯಥ ವಾ ಪುನಃ||

ಮನುಷ್ಯನು ಕ್ರಿಯೆ, ಮನಸ್ಸು ಮತ್ತು ಮಾತು ಈ ಮೂರರಿಂದ ಸದಾ ಬಂಧನಗಳಿಂದ ಬದ್ಧನಾಗುತ್ತಾನೆ ಮತ್ತು ಪುನಃ ಅವುಗಳ ಮೂಲಕವೇ ಪಾಶಗಳಿಂದ ಮುಕ್ತನಾಗುತ್ತಾನೆ.

13132003a ಕೇನ ಶೀಲೇನ ವಾ ದೇವ ಕರ್ಮಣಾ ಕೀದೃಶೇನ ವಾ|

13132003c ಸಮಾಚಾರೈರ್ಗುಣೈರ್ವಾಕ್ಯೈಃ ಸ್ವರ್ಗಂ ಯಾಂತೀಹ ಮಾನವಾಃ||

ದೇವ! ಯಾವ ಶೀಲದಿಂದ ಅಥವಾ ಎಂಥಹ ಕರ್ಮಗಳಿಂದ ಅಥವಾ ಎಂಥಹ ಸದಾಚಾರಗಳಿಂದ ಅಥವಾ ಗುಣಗಳಿಂದ ಅಥವಾ ಮಾತುಗಳಿಂದ ಮಾನವರು ಸ್ವರ್ಗವನ್ನು ಪಡೆಯುತ್ತಾರೆ?”

13132004 ಮಹೇಶ್ವರ ಉವಾಚ|

13132004a ದೇವಿ ಧರ್ಮಾರ್ಥತತ್ತ್ವಜ್ಞೇ ಸತ್ಯನಿತ್ಯೇ ದಮೇ ರತೇ|

13132004c ಸರ್ವಪ್ರಾಣಿಹಿತಃ ಪ್ರಶ್ನಃ ಶ್ರೂಯತಾಂ ಬುದ್ಧಿವರ್ಧನಃ||

ಮಹೇಶ್ವರನು ಹೇಳಿದನು: “ದೇವಿ! ಧರ್ಮಾರ್ಥತತ್ತ್ವಜ್ಞೇ! ಸತ್ಯನಿತ್ಯೇ! ಇಂದ್ರಿಯಸಂಯಮದಲ್ಲಿ ನಿರತಳಾಗಿರುವವಳೇ! ಸರ್ವಪ್ರಾಣಿಗಳಿಗೂ ಹಿತವಾಗಿರುವ ಮತ್ತು ಬುದ್ಧಿಯನ್ನು ವರ್ಧಿಸುವ ಪ್ರಶ್ನೆಯನ್ನೇ ಕೇಳಿದ್ದೀಯೆ.

13132005a ಸತ್ಯಧರ್ಮರತಾಃ ಸಂತಃ ಸರ್ವಲಿಪ್ಸಾವಿವರ್ಜಿತಾಃ|

[1]13132005c ನಾಧರ್ಮೇಣ ನ ಧರ್ಮೇಣ ಬಧ್ಯಂತೇ ಚಿನ್ನಸಂಶಯಾಃ||

ಸರ್ವ ಆಸೆಗಳನ್ನು ತೊರೆದಿರುವ, ಮತ್ತು  ಸಂಶಯಗಳಿಲ್ಲದಿರುವ ಸತ್ಯಧರ್ಮರತ ಸಂತರು ಅಧರ್ಮ ಅಥವಾ ಧರ್ಮದಿಂದ ಬಂಧಿಸಲ್ಪಡುವುದಿಲ್ಲ.

13132006a ಪ್ರಲಯೋತ್ಪತ್ತಿತತ್ತ್ವಜ್ಞಾಃ ಸರ್ವಜ್ಞಾಃ ಸಮದರ್ಶಿನಃ|

13132006c ವೀತರಾಗಾ ವಿಮುಚ್ಯಂತೇ ಪುರುಷಾಃ ಸರ್ವಬಂಧನೈಃ||

ಉತ್ಪತ್ತಿ ಮತ್ತು ಪ್ರಲಯಗಳ ತತ್ತ್ವಗಳನ್ನು ತಿಳಿದಿರುವ, ಎಲ್ಲವನ್ನೂ ಸಮನಾಗಿ ಕಾಣುವ, ರಾಗ-ದ್ವೇಷಗಳಿಂದ ಮುಕ್ತರಾದ ಸರ್ವಜ್ಞ ಪುರುಷರು ಸರ್ವಬಂಧನಗಳಿಂದಲೂ ಮುಕ್ತರಾಗುತ್ತಾರೆ.

13132007a ಕರ್ಮಣಾ ಮನಸಾ ವಾಚಾ ಯೇ ನ ಹಿಂಸಂತಿ ಕಿಂ ಚನ|

13132007c ಯೇ ನ ಸಜ್ಜಂತಿ ಕಸ್ಮಿಂಶ್ಚಿದ್ಬಧ್ಯಂತೇ ತೇ ನ ಕರ್ಮಭಿಃ||

ಕ್ರಿಯೆ-ಮನಸ್ಸು-ಮಾತುಗಳಿಂದ ಯಾರನ್ನೂ ಹಿಂಸಿಸದೇ ಇರುವ ಮತ್ತು ಯಾವುದರಲ್ಲಿಯೂ ಆಸಕ್ತರಾಗಿರದವರು ಕರ್ಮಬಂಧನಗಳಿಗೆ ಒಳಗಾಗುವುದಿಲ್ಲ.

13132008a ಪ್ರಾಣಾತಿಪಾತಾದ್ವಿರತಾಃ ಶೀಲವಂತೋ ದಯಾನ್ವಿತಾಃ|

13132008c ತುಲ್ಯದ್ವೇಷ್ಯಪ್ರಿಯಾ ದಾಂತಾ ಮುಚ್ಯಂತೇ ಕರ್ಮಬಂಧನೈಃ||

ಪ್ರಾಣಹತ್ಯೆಯನ್ನು ಮಾಡದಿರುವ, ಶೀಲವಂತ, ದಯಾನ್ವಿತ, ಶತ್ರು-ಮಿತ್ರರನ್ನು ಸಮನಾಗಿ ಕಾಣುವ ಜಿತೇಂದ್ರಿಯರು ಕರ್ಮಬಂಧನಗಳಿಂದ ಮುಕ್ತರಾಗುತ್ತಾರೆ.

13132009a ಸರ್ವಭೂತದಯಾವಂತೋ ವಿಶ್ವಾಸ್ಯಾಃ ಸರ್ವಜಂತುಷು|

13132009c ತ್ಯಕ್ತಹಿಂಸಾಸಮಾಚಾರಾಸ್ತೇ ನರಾಃ ಸ್ವರ್ಗಗಾಮಿನಃ||

ಸರ್ವಭೂತಗಳಲ್ಲಿಯೂ ದಯಾವಂತರಾದ, ಸರ್ವಜಂತುಗಳ ವಿಶ್ವಾಸಕ್ಕೂ ಪಾತ್ರರಾದ, ಹಿಂಸಾಚಾರಗಳನ್ನು ತ್ಯಜಿಸಿದ ನರರು ಸ್ವರ್ಗಗಾಮಿಗಳು.

13132010a ಪರಸ್ವೇ ನಿರ್ಮಮಾ ನಿತ್ಯಂ ಪರದಾರವಿವರ್ಜಕಾಃ|

13132010c ಧರ್ಮಲಬ್ಧಾರ್ಥಭೋಕ್ತಾರಸ್ತೇ ನರಾಃ ಸ್ವರ್ಗಗಾಮಿನಃ||

ಇತರರ ಸ್ವತ್ತನ್ನು ಆಶಿಸದಿರುವ, ಪರಪತ್ನಿಯರಿಂದ ನಿತ್ಯವೂ ದೂರವಿರುವ, ಧರ್ಮದಿಂದ ಲಭಿಸಿದ ಸಂಪತ್ತನ್ನೇ ಭೋಗಿಸುವ ನರರು ಸ್ವರ್ಗಗಾಮಿಗಳು.

13132011a ಮಾತೃವತ್ ಸ್ವಸೃವಚ್ಚೈವ ನಿತ್ಯಂ ದುಹಿತೃವಚ್ಚ ಯೇ|

13132011c ಪರದಾರೇಷು ವರ್ತಂತೇ ತೇ ನರಾಃ ಸ್ವರ್ಗಗಾಮಿನಃ||

ಪರರ ಪತ್ನಿಯರನ್ನು ನಿತ್ಯವೂ ತಾಯಿಯಂತೆಯೋ ಅಥವಾ ಸಹೋದರಿಯರಂತೆಯೋ ಅಥವಾ ಮಗಳಂತೆಯೋ ಭಾವಿಸಿ ವ್ಯವಹರಿಸುವ ನರರು ಸ್ವರ್ಗಗಾಮಿಗಳು.

13132012a ಸ್ತೈನ್ಯಾನ್ನಿವೃತ್ತಾಃ ಸತತಂ ಸಂತುಷ್ಟಾಃ ಸ್ವಧನೇನ ಚ|

13132012c ಸ್ವಭಾಗ್ಯಾನ್ಯುಪಜೀವಂತಿ ತೇ ನರಾಃ ಸ್ವರ್ಗಗಾಮಿನಃ||

ಕಳ್ಳತನ ಮಾಡದಿರುವ, ಸತತವೂ ಸ್ವಧನದಿಂದ ಸಂತುಷ್ಟರಾಗಿರುವ ಮತ್ತು ತಮ್ಮ ಭಾಗ್ಯದಲ್ಲಿರುವುದರಿಂದಲೇ ಜೀವನ ನಡೆಸುವ ನರರು ಸ್ವರ್ಗಗಾಮಿಗಳು.

13132013a ಸ್ವದಾರನಿರತಾ ಯೇ ಚ ಋತುಕಾಲಾಭಿಗಾಮಿನಃ|

13132013c ಅಗ್ರಾಮ್ಯಸುಖಭೋಗಾಶ್ಚ ತೇ ನರಾಃ ಸ್ವರ್ಗಗಾಮಿನಃ||

ತನ್ನ ಪತ್ನಿಯಲ್ಲಿ ಮಾತ್ರ ಅಸಕ್ತನಾಗಿದ್ದು ಋತುಕಾಲದಲ್ಲಿ ಮಾತ್ರ ಅವಳನ್ನು ಕೂಡುತ್ತಾ ಗ್ರಾಮ್ಯವಾದ ಮೈಥುನ ಸುಖಭೋಗಗಳಲ್ಲಿ ತೊಡಗಿರದ ನರರು ಸ್ವರ್ಗಗಾಮಿಗಳು.

13132014a ಪರದಾರೇಷು ಯೇ ನಿತ್ಯಂ ಚಾರಿತ್ರಾವೃತಲೋಚನಾಃ|

13132014c ಯತೇಂದ್ರಿಯಾಃ ಶೀಲಪರಾಸ್ತೇ ನರಾಃ ಸ್ವರ್ಗಗಾಮಿನಃ||

ನಿತ್ಯವೂ ಪರಪತ್ನಿಯರನ್ನು ತಲೆಯೆತ್ತಿಯೂ ನೋಡದಿರುವ, ನಿಯತೇಂದ್ರಿಯ ಶೀಲಪರ ನರರು ಸ್ವರ್ಗಗಾಮಿಗಳು.

13132015a ಏಷ ದೇವಕೃತೋ ಮಾರ್ಗಃ ಸೇವಿತವ್ಯಃ ಸದಾ ನರೈಃ|

13132015c ಅಕಷಾಯಕೃತಶ್ಚೈವ ಮಾರ್ಗಃ ಸೇವ್ಯಃ ಸದಾ ಬುಧೈಃ||

ದೇವತೆಗಳು ಮಾಡಿಕೊಟ್ಟಿರುವ ಈ ಮಾರ್ಗವನ್ನು ಮನುಷ್ಯರು ಸದಾ ಅನುಸರಿಸಬೇಕು. ರಾಗದ್ವೇಷಗಳ ನಿರಸನಕ್ಕಾಗಿರುವ ಈ ಮಾರ್ಗವನ್ನು ವಿದ್ವಾಂಸರು ಸದಾ ಆಶ್ರಯಿಸಬೇಕು.

13132016a ದಾನಧರ್ಮತಪೋಯುಕ್ತಃ ಶೀಲಶೌಚದಯಾತ್ಮಕಃ|

13132016c ವೃತ್ತ್ಯರ್ಥಂ ಧರ್ಮಹೇತೋರ್ವಾ ಸೇವಿತವ್ಯಃ ಸದಾ ನರೈಃ|

13132016e ಸ್ವರ್ಗವಾಸಮಭೀಪ್ಸದ್ಭಿರ್ನ ಸೇವ್ಯಸ್ತ್ವತ ಉತ್ತರಃ||

ದಾನ-ಧರ್ಮ-ತಪೋಯುಕ್ತವಾದ ಮತ್ತು ಶೀಲ-ಶೌಚ-ದಯಾತ್ಮಕವಾದ ಈ ಮಾರ್ಗವನ್ನು ಮನುಷ್ಯರು ತಮ್ಮ ಬದುಕಿಗಾಗಿ ಅಥವಾ ಧರ್ಮಕ್ಕಾಗಿ ಆಶ್ರಯಿಸಬೇಕು. ಸ್ವರ್ಗವಾಸವನ್ನು ಬಯಸುವವರಿಗೆ ಇದಕಿಂತಲೂ ಶ್ರೇಷ್ಠ ಮಾರ್ಗವು ಇನ್ನೊಂದಿಲ್ಲ.”

13132017 ಉಮೋವಾಚ|

13132017a ವಾಚಾಥ ಬಧ್ಯತೇ ಯೇನ ಮುಚ್ಯತೇಽಪ್ಯಥ ವಾ ಪುನಃ|

13132017c ತಾನಿ ಕರ್ಮಾಣಿ ಮೇ ದೇವ ವದ ಭೂತಪತೇಽನಘ||

ಉಮೆಯು ಹೇಳಿದಳು: “ಭೂತಪತೇ! ಅನಘ! ದೇವ! ಯಾವ ಮಾತುಗಳು ಅಥವಾ ಕ್ರಿಯೆಗಳು ಬಂಧನಕ್ಕೀಡುಮಾಡುತ್ತವೆ ಮತ್ತು ಯಾವ ಮಾತು-ಕ್ರಿಯೆಗಳು ಪುನಃ ಬಂಧನಗಳಿಂದ ಮುಕ್ತಗೊಳಿಸುತ್ತವೆ? ಅದರ ಕುರಿತು ಹೇಳು.”

13132018 ಮಹೇಶ್ವರ ಉವಾಚ|

13132018a ಆತ್ಮಹೇತೋಃ ಪರಾರ್ಥೇ ವಾ ನರ್ಮಹಾಸ್ಯಾಶ್ರಯಾತ್ತಥಾ|

13132018c ಯೇ ಮೃಷಾ ನ ವದಂತೀಹ ತೇ ನರಾಃ ಸ್ವರ್ಗಗಾಮಿನಃ||

ಮಹೇಶ್ವರನು ಹೇಳಿದನು: “ತಮ್ಮ ಸಲುವಾಗಲೀ, ಇತರರ ಸಲುವಾಗಲೀ, ಹಾಸ್ಯ-ವಿನೋದಕ್ಕಾಗಲೀ ಸುಳ್ಳು ಹೇಳದಿರುವ ನರರು ಸ್ವರ್ಗಗಾಮಿಗಳು.

13132019a ವೃತ್ತ್ಯರ್ಥಂ ಧರ್ಮಹೇತೋರ್ವಾ ಕಾಮಕಾರಾತ್ತಥೈವ ಚ|

13132019c ಅನೃತಂ ಯೇ ನ ಭಾಷಂತೇ ತೇ ನರಾಃ ಸ್ವರ್ಗಗಾಮಿನಃ||

ಬದುಕಿಗಾಗಿ, ಧರ್ಮದ ಸಲುವಾಗಿ, ಮತ್ತು ಫಲದ ಆಸೆಯಿಂದಾಗಿ ಸುಳ್ಳು ಹೇಳದಿರುವ ನರರು ಸ್ವರ್ಗಗಾಮಿಗಳು.

13132020a ಶ್ಲಕ್ಷ್ಣಾಂ ವಾಣೀಂ ನಿರಾಬಾಧಾಂ ಮಧುರಾಂ ಪಾಪವರ್ಜಿತಾಮ್|

13132020c ಸ್ವಾಗತೇನಾಭಿಭಾಷಂತೇ ತೇ ನರಾಃ ಸ್ವರ್ಗಗಾಮಿನಃ||

ಸ್ನೇಹಯುಕ್ತವಾದ, ಮಧುರವಾದ, ನಿರಾತಂಕವಾದ, ಪಾಪವರ್ಜಿತವಾದ ಮತ್ತು ಸ್ವಾಗತಸತ್ಕಾರಭಾವದ ಮಾತನ್ನಾಡುವ ನರರು ಸ್ವರ್ಗಗಾಮಿಗಳು.

13132021a ಕಟುಕಾಂ ಯೇ ನ ಭಾಷಂತೇ ಪರುಷಾಂ ನಿಷ್ಠುರಾಂ ಗಿರಮ್|

13132021c ಅಪೈಶುನ್ಯರತಾಃ ಸಂತಸ್ತೇ ನರಾಃ ಸ್ವರ್ಗಗಾಮಿನಃ||

ಕಟುಕಾದ, ಕ್ರೂರವಾದ, ಮತ್ತು ನಿಷ್ಠುರವಾದ ಮಾತನ್ನಾಡದಿರುವ ಮತ್ತು ಚಾಡಿಯ ಮಾತುಗಳಲ್ಲಿ ಆಸಕ್ತರಲ್ಲದ ಸಂತ ನರರು ಸ್ವರ್ಗಗಾಮಿಗಳು.

13132022a ಪಿಶುನಾಂ ಯೇ ನ ಭಾಷಂತೇ ಮಿತ್ರಭೇದಕರೀಂ ಗಿರಮ್|

13132022c ಋತಾಂ ಮೈತ್ರೀಂ ಪ್ರಭಾಷಂತೇ ತೇ ನರಾಃ ಸ್ವರ್ಗಗಾಮಿನಃ||

ಮಿತ್ರರಲ್ಲಿ ಭೇದವನ್ನುಂಟುಮಾಡುವ ಚಾಡಿಯ ಮಾತನ್ನಾಡದಿರುವ, ಸತ್ಯವಾದ ಮತ್ತು ಮೈತ್ರೀಭಾವದಿಂದ ಕೂಡಿದ ಮಾತನ್ನಾಡುವ ನರರು ಸ್ವರ್ಗಗಾಮಿಗಳು.

13132023a ವರ್ಜಯಂತಿ ಸದಾ ಸೂಚ್ಯಂ[2] ಪರದ್ರೋಹಂ ಚ ಮಾನವಾಃ|

13132023c ಸರ್ವಭೂತಸಮಾ ದಾಂತಾಸ್ತೇ ನರಾಃ ಸ್ವರ್ಗಗಾಮಿನಃ||

ಇತರರನ್ನು ನೋಯಿಸುವುದು ಮತ್ತು ಪರದ್ರೋಹ – ಇವುಗಳನ್ನು ಸದಾ ವರ್ಜಿಸಿದ, ಸರ್ವಭೂತಗಳನ್ನು ಸಮನಾಗಿ ಕಾಣುವ ಜಿತೇಂದ್ರಿಯ ನರರು ಸ್ವರ್ಗಗಾಮಿಗಳು.

13132024a ಶಠಪ್ರಲಾಪಾದ್ವಿರತಾ ವಿರುದ್ಧಪರಿವರ್ಜಕಾಃ|

13132024c ಸೌಮ್ಯಪ್ರಲಾಪಿನೋ ನಿತ್ಯಂ ತೇ ನರಾಃ ಸ್ವರ್ಗಗಾಮಿನಃ||

ಉದ್ಧಟತನ-ಪ್ರಲಾಪ ರಹಿತರಾದ, ವಿರೋಧಿಸುವುದನ್ನು ಬಿಟ್ಟಿರುವ, ಮತ್ತು ನಿತ್ಯವೂ ಸೌಮ್ಯವಾಗಿಯೇ ಮಾತನಾಡುವ ನರರು ಸ್ವರ್ಗಗಾಮಿಗಳು.

13132025a ನ ಕೋಪಾದ್ವ್ಯಾಹರಂತೇ ಯೇ ವಾಚಂ ಹೃದಯದಾರಣೀಮ್|

13132025c ಸಾಂತ್ವಂ ವದಂತಿ ಕ್ರುದ್ಧಾಪಿ ತೇ ನರಾಃ ಸ್ವರ್ಗಗಾಮಿನಃ||

ಕೋಪದಿಂದ ಹೃದಯವನ್ನೇ ಸೀಳುವಂಥಹ ಮಾತನ್ನಾಡದ ಮತ್ತು ಕೋಪದಲ್ಲಿಯೂ ಸಾಂತ್ವನದ ಮಾತುಗಳನ್ನೇ ಆಡುವ ನರರು ಸ್ವರ್ಗಗಾಮಿಗಳು.

13132026a ಏಷ ವಾಣೀಕೃತೋ ದೇವಿ ಧರ್ಮಃ ಸೇವ್ಯಃ ಸದಾ ನರೈಃ|

13132026c ಶುಭಃ ಸತ್ಯಗುಣೋ ನಿತ್ಯಂ ವರ್ಜನೀಯಾ ಮೃಷಾ ಬುಧೈಃ||

ದೇವಿ! ಇದು ನರರು ಸದಾ ಸೇವಿಸಬೇಕಾದ ಮಾತನಾಡುವ ಧರ್ಮವು. ಸತ್ಯವು ನಿತ್ಯವೂ ಶುಭವಾದ ಗುಣವು. ವಿದ್ವಾಂಸರು ಸುಳ್ಳನ್ನು ಸರ್ವಥಾ ವರ್ಜಿಸಬೇಕು.”

13132027 ಉಮೋವಾಚ|

13132027a ಮನಸಾ ಬಧ್ಯತೇ ಯೇನ ಕರ್ಮಣಾ ಪುರುಷಃ ಸದಾ|

13132027c ತನ್ಮೇ ಬ್ರೂಹಿ ಮಹಾಭಾಗ ದೇವದೇವ ಪಿನಾಕಧೃಕ್||

ಉಮೆಯು ಹೇಳಿದಳು: “ಮಹಾಭಾಗ! ದೇವದೇವ! ಪಿನಾಕಧೃಕ್! ಮನಸ್ಸಿನ ಯಾವ ಕರ್ಮದಿಂದ ಪುರುಷನು ಸದಾ ಬಂಧನಕ್ಕೊಳಗಾಗುತ್ತಾನೆ? ಇದರ ಕುರಿತು ಹೇಳು.”

13132028 ಮಹೇಶ್ವರ ಉವಾಚ|

13132028a ಮಾನಸೇನೇಹ ಧರ್ಮೇಣ ಸಂಯುಕ್ತಾಃ ಪುರುಷಾಃ ಸದಾ|

13132028c ಸ್ವರ್ಗಂ ಗಚ್ಚಂತಿ ಕಲ್ಯಾಣಿ ತನ್ಮೇ ಕೀರ್ತಯತಃ ಶೃಣು||

ಮಹೇಶ್ವರನು ಹೇಳಿದನು: “ಕಲ್ಯಾಣಿ! ಮನಸ್ಸಿನಲ್ಲಿ ಸದಾ ಧರ್ಮದ ಕುರಿತೇ ಯೋಚಿಸುತ್ತಿರುವ ಪುರುಷರು ಸ್ವರ್ಗಕ್ಕೆ ಹೋಗುತ್ತಾರೆ. ಈ ವಿಷಯದಲ್ಲಿ ನನ್ನ ವಿವರಣೆಯನ್ನು ಕೇಳು.

13132029a ದುಷ್ಪ್ರಣೀತೇನ ಮನಸಾ ದುಷ್ಪ್ರಣೀತತರಾಕೃತಿಃ|

13132029c ಬಧ್ಯತೇ ಮಾನವೋ ಯೇನ ಶೃಣು ಚಾನ್ಯಚ್ಚುಭಾನನೇ||

ದುರ್ವಿಚಾರವುಳ್ಳ ಮನಸ್ಸು ದುರಾಚಾರಗಳನ್ನೇ ಮಾಡಿಸುತ್ತದೆ. ಶುಭಾನನೇ! ಮಾನವನನ್ನು ಬಂಧಿಸುವುದು ಯಾವುದೆನ್ನುವುದನ್ನು ಕೇಳು.

13132030a ಅರಣ್ಯೇ ವಿಜನೇ ನ್ಯಸ್ತಂ ಪರಸ್ವಂ ವೀಕ್ಷ್ಯ ಯೇ ನರಾಃ|

13132030c ಮನಸಾಪಿ ನ ಹಿಂಸಂತಿ ತೇ ನರಾಃ ಸ್ವರ್ಗಗಾಮಿನಃ||

ನಿರ್ಜನ ವನದಲ್ಲಿ ಇಟ್ಟಿದ್ದ ಪರರ ಸ್ವತ್ತನ್ನು ನೋಡಿಯೂ ಯಾವ ನರರು ಮನಸಾರೆಯೂ ಅದನ್ನು ಅಪಹರಿಸಲು ಯೋಚಿಸುವುದಿಲ್ಲವೋ ಅಂತಹ ನರರು ಸ್ವರ್ಗಗಾಮಿಗಳು.

13132031a ಗ್ರಾಮೇ ಗೃಹೇ ವಾ ಯದ್ದ್ರವ್ಯಂ ಪಾರಕ್ಯಂ ವಿಜನೇ ಸ್ಥಿತಮ್|

13132031c ನಾಭಿನಂದಂತಿ ವೈ ನಿತ್ಯಂ ತೇ ನರಾಃ ಸ್ವರ್ಗಗಾಮಿನಃ||

ಗ್ರಾಮದಲ್ಲಿಯಾಗಲೀ, ಮನೆಯಲ್ಲಾಗಲೀ ಅಥವ ನಿರ್ಜನ ಸ್ಥಳದಲ್ಲಿಯಾಗಲೀ ಇಟ್ಟಿದ್ದ ಪರರ ವಸ್ತುಗಳನ್ನು ತೆಗೆದುಕೊಳ್ಳಲು ಎಂದೂ ಬಯಸದ ನರರು ಸ್ವರ್ಗಗಾಮಿಗಳು.

13132032a ತಥೈವ ಪರದಾರಾನ್ಯೇ ಕಾಮವೃತ್ತಾನ್ರಹೋಗತಾನ್|

13132032c ಮನಸಾಪಿ ನ ಹಿಂಸಂತಿ ತೇ ನರಾಃ ಸ್ವರ್ಗಗಾಮಿನಃ||

ಹಾಗೆಯೇ ಕಾಮಾಸಕ್ತಳಾಗಿ ಏಕಾಂತದಲ್ಲಿ ಸಂಧಿಸಿದ ಪರಪತ್ನಿಯನ್ನು ಮನಸ್ಸಿನಿಂದಲೂ ಕಾಮಿಸದ ನರರು ಸ್ವರ್ಗಗಾಮಿಗಳು.

13132033a ಶತ್ರುಂ ಮಿತ್ರಂ ಚ ಯೇ ನಿತ್ಯಂ ತುಲ್ಯೇನ ಮನಸಾ ನರಾಃ|

13132033c ಭಜಂತಿ ಮೈತ್ರಾಃ ಸಂಗಮ್ಯ ತೇ ನರಾಃ ಸ್ವರ್ಗಗಾಮಿನಃ||

ಮನಸಾರೆ ನಿತ್ಯವೂ ಶತ್ರು-ಮಿತ್ರರನ್ನು ಸಮನಾಗಿ ಕಾಣುವ ಮತ್ತು ಎಲ್ಲರೊಡನೆಯೂ ಮೈತ್ರೀಭಾವದಿಂದಿರುವ ನರರು ಸ್ವರ್ಗಗಾಮಿಗಳು.

13132034a ಶ್ರುತವಂತೋ ದಯಾವಂತಃ ಶುಚಯಃ ಸತ್ಯಸಂಗರಾಃ|

13132034c ಸ್ವೈರರ್ಥೈಃ ಪರಿಸಂತುಷ್ಟಾಸ್ತೇ ನರಾಃ ಸ್ವರ್ಗಗಾಮಿನಃ||

ತಮ್ಮ ಸಂಪತ್ತಿನಿಂದಲೇ ಪರಿಸಂತುಷ್ಟರಾದ ವಿದ್ಯಾವಂತ ದಯಾವಂತ ಶುಚಿ ಸತ್ಯಸಂಗರ ನರರು ಸ್ವರ್ಗಗಾಮಿಗಳು.

13132035a ಅವೈರಾ ಯೇ ತ್ವನಾಯಾಸಾ ಮೈತ್ರಚಿತ್ತಪರಾಃ ಸದಾ|

13132035c ಸರ್ವಭೂತದಯಾವಂತಸ್ತೇ ನರಾಃ ಸ್ವರ್ಗಗಾಮಿನಃ||

ವೈರವೇ ಇಲ್ಲದ, ಆಯಾಸವೇ ಇಲ್ಲದೇ, ಸದಾ ಮೈತ್ರಭಾವದಿಂದ ಪೂರ್ಣಹೃದಯರಾಗಿರುವ, ಮತ್ತು ಸರ್ವಭೂತದಯಾವಂತ ನರರು ಸ್ವರ್ಗಗಾಮಿಗಳು.

13132036a ಶ್ರದ್ಧಾವಂತೋ ದಯಾವಂತಶ್ಚೋಕ್ಷಾಶ್ಚೋಕ್ಷಜನಪ್ರಿಯಾಃ|

13132036c ಧರ್ಮಾಧರ್ಮವಿದೋ ನಿತ್ಯಂ ತೇ ನರಾಃ ಸ್ವರ್ಗಗಾಮಿನಃ||

ಶ್ರದ್ಧಾವಂತ, ದಯಾವಂತ, ಶುದ್ಧಜನಪ್ರಿಯ, ಮತ್ತು ನಿತ್ಯವೂ ಧರ್ಮಾಧರ್ಮಗಳನ್ನು ತಿಳಿದಿರುವ ನರರು ಸ್ವರ್ಗಗಾಮಿಗಳು.

13132037a ಶುಭಾನಾಮಶುಭಾನಾಂ ಚ ಕರ್ಮಣಾಂ ಫಲಸಂಚಯೇ|

13132037c ವಿಪಾಕಜ್ಞಾಶ್ಚ ಯೇ ದೇವಿ ತೇ ನರಾಃ ಸ್ವರ್ಗಗಾಮಿನಃ||

ದೇವಿ! ಶುಭಾಶುಭ ಕರ್ಮಗಳ ಫಲಸಂಚಯ ಮತ್ತು ಪಾಪಕರ್ಮಗಳ ಫಲಗಳ ಕುರಿತು ತಿಳಿದ ನರರು ಸ್ವರ್ಗಗಾಮಿಗಳು.

13132038a ನ್ಯಾಯೋಪೇತಾ ಗುಣೋಪೇತಾ ದೇವದ್ವಿಜಪರಾಃ ಸದಾ|

13132038c ಸಮತಾಂ ಸಮನುಪ್ರಾಪ್ತಾಸ್ತೇ[3] ನರಾಃ ಸ್ವರ್ಗಗಾಮಿನಃ||

ನ್ಯಾಯೋಪೇತ, ಗುಣೋಪೇತ, ಸದಾ ದೇವದ್ವಿಜರ ಪರರಾಗಿರುವ, ಮತ್ತು ಸಮತ್ವವನ್ನು ಪಡೆದುಕೊಂಡ ನರರು ಸ್ವರ್ಗಗಾಮಿಗಳು.

13132039a ಶುಭೈಃ ಕರ್ಮಫಲೈರ್ದೇವಿ ಮಯೈತೇ ಪರಿಕೀರ್ತಿತಾಃ|

13132039c ಸ್ವರ್ಗಮಾರ್ಗೋಪಗಾ ಭೂಯಃ ಕಿಮನ್ಯಚ್ಚ್ರೋತುಮಿಚ್ಚಸಿ||

ದೇವಿ! ಶುಭಕರ್ಮಫಲಗಳಿಂದ ಸ್ವರ್ಗಮಾರ್ಗದಲ್ಲಿ ಹೋಗುವವರ ಕುರಿತು ಹೇಳಿದ್ದೇನೆ. ಇನ್ನೂ ಬೇರೆ ಏನನ್ನು ಕೇಳಬಯಸುತ್ತೀಯೆ?”

13132040 ಉಮೋವಾಚ|

13132040a ಮಹಾನ್ಮೇ ಸಂಶಯಃ ಕಶ್ಚಿನ್ಮರ್ತ್ಯಾನ್ ಪ್ರತಿ ಮಹೇಶ್ವರ|

13132040c ತಸ್ಮಾತ್ತಂ ನೈಪುಣೇನಾದ್ಯ ಮಮಾಖ್ಯಾತುಂ ತ್ವಮರ್ಹಸಿ||

ಉಮೆಯು ಹೇಳಿದಳು: “ಮಹೇಶ್ವರ! ಮನುಷ್ಯರ ಕುರಿತು ನನ್ನಲ್ಲಿ ಒಂದು ಮಹಾ ಸಂಶಯವಿದೆ. ನೈಪುಣ್ಯದಿಂದ ನೀನು ನನಗೆ ಅದರ ಕುರಿತು ಹೇಳಬೇಕು.

13132041a ಕೇನಾಯುರ್ಲಭತೇ ದೀರ್ಘಂ ಕರ್ಮಣಾ ಪುರುಷಃ ಪ್ರಭೋ|

13132041c ತಪಸಾ ವಾಪಿ ದೇವೇಶ ಕೇನಾಯುರ್ಲಭತೇ ಮಹತ್||

ಪ್ರಭೋ! ಮನುಷ್ಯನು ಯಾವ ಕರ್ಮಗಳಿಂದ ದೀರ್ಘಾಯುಸ್ಸನ್ನು ಪಡೆಯುತ್ತಾನೆ? ಅಥವಾ ಎಂಥಹ ತಪಸ್ಸಿನಿಂದ ದೀರ್ಘಾಯುಸ್ಸು ದೊರೆಯುತ್ತದೆ?

13132042a ಕ್ಷೀಣಾಯುಃ ಕೇನ ಭವತಿ ಕರ್ಮಣಾ ಭುವಿ ಮಾನವಃ|

13132042c ವಿಪಾಕಂ ಕರ್ಮಣಾಂ ದೇವ ವಕ್ತುಮರ್ಹಸ್ಯನಿಂದಿತ||

ದೇವ! ಅನಿಂದಿತ! ಭುವಿಯಲ್ಲಿ ಮಾನವನು ಯಾವ ಕರ್ಮಗಳಿಂದ ಅಲ್ಪಾಯುವಾಗುತ್ತಾನೆ? ಕರ್ಮಗಳ ಪರಿಣಾಮಗಳ ಕುರಿತು ಹೇಳಬೇಕು.

13132043a ಅಪರೇ ಚ ಮಹಾಭೋಗಾ ಮಂದಭೋಗಾಸ್ತಥಾಪರೇ[4]|

13132043c ಅಕುಲೀನಾಸ್ತಥಾ ಚಾನ್ಯೇ ಕುಲೀನಾಶ್ಚ ತಥಾಪರೇ||

ಕೆಲವರು ಮಹಾಭೋಗ್ಯರಾಗಿರುತ್ತಾರೆ. ಇನ್ನು ಕೆಲವರು ಮಂದಭೋಗ್ಯರಾಗಿರುತ್ತಾರೆ. ಕೆಲವರು ಉತ್ತಮ ಕುಲೀನರಾಗಿದ್ದರೆ ಕೆಲವರು ದುಷ್ಕುಲದಲ್ಲಿ ಹುಟ್ಟುತ್ತಾರೆ.

13132044a ದುರ್ದರ್ಶಾಃ ಕೇ ಚಿದಾಭಾಂತಿ ನರಾಃ ಕಾಷ್ಠಮಯಾ ಇವ|

13132044c ಪ್ರಿಯದರ್ಶಾಸ್ತಥಾ ಚಾನ್ಯೇ ದರ್ಶನಾದೇವ ಮಾನವಾಃ||

ಕೆಲವರು ಮರದ ಕಟ್ಟಿಗೆಯೋ ಎನ್ನುವಂತೆ ದುರ್ದರ್ಶರಾಗಿ ಕಾಣುತ್ತಾರೆ. ಇನ್ನು ಕೆಲವು ಮಾನವರು ಪ್ರಿಯದರ್ಶನರಾಗಿರುತ್ತಾರೆ.

13132045a ದುಷ್ಪ್ರಜ್ಞಾಃ ಕೇ ಚಿದಾಭಾಂತಿ ಕೇ ಚಿದಾಭಾಂತಿ ಪಂಡಿತಾಃ|

13132045c ಮಹಾಪ್ರಜ್ಞಾಸ್ತಥೈವಾನ್ಯೇ ಜ್ಞಾನವಿಜ್ಞಾನದರ್ಶಿನಃ||

ಕೆಲವರು ಪ್ರಜ್ಞೆಯೇ ಇಲ್ಲದವರಂತೆ ತೋರುತ್ತಾರೆ. ಇನ್ನು ಕೆಲವರು ಪಂಡಿತರಾಗಿ ತೋರುತ್ತಾರೆ. ಇನ್ನು ಕೆಲವರು ಮಹಾಪ್ರಾಜ್ಞರೂ ಜ್ಞಾನವಿಜ್ಞಾನದರ್ಶಿಗಳೂ ಆಗಿರುತ್ತಾರೆ.

13132046a ಅಲ್ಪಾಬಾಧಾಸ್ತಥಾ ಕೇ ಚಿನ್ಮಹಾಬಾಧಾಸ್ತಥಾಪರೇ|

13132046c ದೃಶ್ಯಂತೇ ಪುರುಷಾ ದೇವ ತನ್ಮೇ ಶಂಸಿತುಮರ್ಹಸಿ||

ಕೆಲವರಿಗೆ ಅಲ್ಪವೇ ಬಾಧೆಗಳಾಗುತ್ತವೆ. ಇನ್ನು ಕೆಲವರಿಗೆ ಮಹಾ ಬಾಧೆಗಳುಂಟಾಗುತ್ತವೆ. ಹೀಗೆ ಅನೇಕ ವಿಧದಲ್ಲಿ ಮನುಷ್ಯರು ಕಾಣುತ್ತಾರೆ. ಅದರ ಕುರಿತು ಹೇಳಬೇಕು.”

13132047 ಮಹೇಶ್ವರ ಉವಾಚ|

13132047a ಹಂತ ತೇಽಹಂ ಪ್ರವಕ್ಷ್ಯಾಮಿ ದೇವಿ ಕರ್ಮಫಲೋದಯಮ್|

13132047c ಮರ್ತ್ಯಲೋಕೇ ನರಾಃ ಸರ್ವೇ ಯೇನ ಸ್ವಂ ಭುಂಜತೇ ಫಲಮ್||

ಮಹೇಶ್ವರನು ಹೇಳಿದನು: “ದೇವಿ! ನಿಲ್ಲು! ನಿನಗೆ ಮರ್ತ್ಯಲೋಕದಲ್ಲಿ ಮನುಷ್ಯರೆಲ್ಲರೂ ಯಾವುದರಿಂದ ಯಾವ ಫಲಗಳನ್ನು ಅನುಭವಿಸುತ್ತಾರೋ ಆ ಫಲೋದಯದ ಕುರಿತು ಹೇಳುತ್ತೇನೆ.

13132048a ಪ್ರಾಣಾತಿಪಾತೀ ಯೋ ರೌದ್ರೋ ದಂಡಹಸ್ತೋದ್ಯತಸ್ತಥಾ|

13132048c ನಿತ್ಯಮುದ್ಯತದಂಡಶ್ಚ ಹಂತಿ ಭೂತಗಣಾನ್ನರಃ||

13132049a ನಿರ್ದಯಃ ಸರ್ವಭೂತಾನಾಂ ನಿತ್ಯಮುದ್ವೇಗಕಾರಕಃ|

13132049c ಅಪಿ ಕೀಟಪಿಪೀಲಾನಾಮಶರಣ್ಯಃ ಸುನಿರ್ಘೃಣಃ||

13132050a ಏವಂಭೂತೋ ನರೋ ದೇವಿ ನಿರಯಂ ಪ್ರತಿಪದ್ಯತೇ|

13132050c ವಿಪರೀತಸ್ತು ಧರ್ಮಾತ್ಮಾ ರೂಪವಾನಭಿಜಾಯತೇ||

ದೇವಿ! ಪ್ರಾಣಿಗಳನ್ನು ಕೊಲ್ಲುವ ಸಲುವಾಗಿ ಸದಾ ಕೈಯಲ್ಲಿ ದಂಡವನ್ನು ಹಿಡಿದು ರೌದ್ರನಾಗಿರುವ, ನಿತ್ಯವೂ ಶಸ್ತ್ರವನ್ನು ಹಿಡಿದು ಭೂತಗಣಗಳನ್ನು ಕೊಲ್ಲುವ, ಸರ್ವಭೂತಗಳಿಗೂ ನಿರ್ದಯನಾಗಿರುವ, ನಿತ್ಯವೂ ಉದ್ವೇಗವನ್ನುಂಟುಮಾಡುವ, ಕೀಟ-ಇರುವೆಗಳಿಗೂ ಆಶ್ರಯವನ್ನು ನೀಡದ ಕ್ರೂರಿ ನರನು ನರಕವನ್ನು ಪಡೆಯುತ್ತಾನೆ. ಇದಕ್ಕೆ ವಿಪರೀತವಾಗಿ ನಡೆದುಕೊಳ್ಳುವ ಧರ್ಮಾತ್ಮನು ರೂಪವಂತನಾಗಿ ಹುಟ್ಟುತ್ತಾನೆ.

13132051a ನಿರಯಂ ಯಾತಿ ಹಿಂಸಾತ್ಮಾ ಯಾತಿ ಸ್ವರ್ಗಮಹಿಂಸಕಃ|

13132051c ಯಾತನಾಂ ನಿರಯೇ ರೌದ್ರಾಂ ಸ ಕೃಚ್ಚ್ರಾಂ ಲಭತೇ ನರಃ||

ಅಹಿಂಸಕನು ಸ್ವರ್ಗಕ್ಕೆ ಹೋಗುತ್ತಾನೆ ಮತ್ತು ಹಿಂಸಾತ್ಮನು ನರಕಕ್ಕೆ ಹೋಗುತ್ತಾನೆ. ನರಕದಲ್ಲಿ ಆ ನರನು ಕಷ್ಟಕರ ರೌದ್ರ ಯಾತನೆಯನ್ನು ಅನುಭವಿಸುತ್ತಾನೆ.

13132052a ಅಥ ಚೇನ್ನಿರಯಾತ್ತಸ್ಮಾತ್ಸಮುತ್ತರತಿ ಕರ್ಹಿ ಚಿತ್|

13132052c ಮಾನುಷ್ಯಂ ಲಭತೇ ಚಾಪಿ ಹೀನಾಯುಸ್ತತ್ರ ಜಾಯತೇ||

ಹಾಗೆ ನರಕದಲ್ಲಿ ಬಿದ್ದವರಲ್ಲಿ ಯಾರಾದರೂ ಯಾವಾಗಲಾದರೂ ಮೇಲೆದ್ದು ಮನುಷ್ಯನಾಗಿ ಹುಟ್ಟಿದರೂ ಅವನು ಅಲ್ಪಾಯುವಾಗಿಯೇ ಹುಟ್ಟುತ್ತಾನೆ.

13132053a ಪಾಪೇನ ಕರ್ಮಣಾ ದೇವಿ ಬದ್ಧೋ[5] ಹಿಂಸಾರತಿರ್ನರಃ|

13132053c ಅಪ್ರಿಯಃ ಸರ್ವಭೂತಾನಾಂ ಹೀನಾಯುರುಪಜಾಯತೇ||

ದೇವಿ! ಹಿಂಸಾರತಿ ನರನು ಪಾಪಕರ್ಮಗಳಿಂದ ಬದ್ಧನಾಗಿ ಸರ್ವಭೂತಗಳಿಗೂ ಅಪ್ರಿಯನಾಗಿ ಮತ್ತು ಅಲ್ಪಾಯುವಾಗಿ ಹುಟ್ಟುತ್ತಾನೆ.

13132054a ಯಸ್ತು ಶುಕ್ಲಾಭಿಜಾತೀಯಃ ಪ್ರಾಣಿಘಾತವಿವರ್ಜಕಃ|

13132054c ನಿಕ್ಷಿಪ್ತದಂಡೋ ನಿರ್ದಂಡೋ ನ ಹಿನಸ್ತಿ ಕದಾ ಚನ||

13132055a ನ ಘಾತಯತಿ ನೋ ಹಂತಿ ಘ್ನಂತಂ ನೈವಾನುಮೋದತೇ|

13132055c ಸರ್ವಭೂತೇಷು ಸಸ್ನೇಹೋ ಯಥಾತ್ಮನಿ ತಥಾಪರೇ||

13132056a ಈದೃಶಃ ಪುರುಷೋತ್ಕರ್ಷೋ ದೇವಿ ದೇವತ್ವಮಶ್ನುತೇ|

13132056c ಉಪಪನ್ನಾನ್ಸುಖಾನ್ ಭೋಗಾನುಪಾಶ್ನಾತಿ ಮುದಾ ಯುತಃ||

ಇದಕ್ಕೆ ವ್ಯತಿರಿಕ್ತವಾಗಿ ಸತ್ಕುಲಪ್ರಸೂತ, ಪ್ರಾಣಿಹಿಂಸೆಯನ್ನು ವರ್ಜಿಸಿರುವ, ಶಸ್ತ್ರ-ದಂಡಗಳನ್ನು ತ್ಯಜಿಸಿರುವ, ಯಾವುದೇ ಕಾರಣದಿಂದಲೂ ಯಾವಾಗಲೂ ಪ್ರಾಣಿಗಳನ್ನು ಹಿಂಸಿಸದ, ಪ್ರಾಣಿಗಳನ್ನು ಗಾಯಗೊಳಿಸದ, ಕೊಲ್ಲಲು ಮತ್ತೊಬ್ಬರಿಗೆ ಹೇಳದ, ತಾನೂ ಕೊಲ್ಲದ, ಕೊಲ್ಲುವವನನ್ನೂ ಅನುಮೋದಿಸದ, ಎಲ್ಲಪ್ರಾಣಿಗಳ ವಿಷಯದಲ್ಲಿಯೂ ಸ್ನೇಹಪರನಾಗಿರುವ, ತನ್ನಂತೆಯೇ ಬೇರೆಯವರೆಂದು ತಿಳಿದಿರುವ ಪುರುಷಶ್ರೇಷ್ಠನು ದೇವತ್ವವನ್ನು ಹೊಂದುತ್ತಾನೆ. ದೇವಲೋಕದಲ್ಲಿ ದೊರೆಯುವ ಸುಖೋಪಭೋಗಗಳನ್ನು ಸಂತೋಷದಿಂದ ಅನುಭವಿಸುತ್ತಾನೆ.

13132057a ಅಥ ಚೇನ್ಮಾನುಷೇ ಲೋಕೇ ಕದಾ ಚಿದುಪಪದ್ಯತೇ|

13132057c ತತ್ರ ದೀರ್ಘಾಯುರುತ್ಪನ್ನಃ ಸ ನರಃ ಸುಖಮೇಧತೇ||

ಅಂಥವನೇನಾದರೂ ಯಾವಾಗಲಾದರೂ ಮನುಷ್ಯಲೋಕದಲ್ಲಿ ಹುಟ್ಟಿದ್ದೇ ಆದರೆ ಅವನು ದೀರ್ಘಾಯುವಾಗಿ ಇಹ-ಪರಗಳೆರಡರಲ್ಲೂ ಸುಖವನ್ನು ಅನುಭವಿಸುತ್ತಾನೆ ಮತ್ತು ವೃದ್ಧಿಹೊಂದುತ್ತಾನೆ.

13132058a ಏವಂ ದೀರ್ಘಾಯುಷಾಂ ಮಾರ್ಗಃ ಸುವೃತ್ತಾನಾಂ ಸುಕರ್ಮಣಾಮ್|

13132058c ಪ್ರಾಣಿಹಿಂಸಾವಿಮೋಕ್ಷೇಣ ಬ್ರಹ್ಮಣಾ ಸಮುದೀರಿತಃ||

ಇದು ಬ್ರಹ್ಮನೇ ಉಪದೇಶಿಸಿರುವ ಸದಾಚಾರೀ ಪುಣ್ಯವಂತ ದೀರ್ಘಾಯುಷಿಗಳ ಮಾರ್ಗವು. ಪ್ರಾಣಿಹಿಂಸೆಯನ್ನು ತ್ಯಜಿಸುವುದರಿಂದ ಈ ಮಾರ್ಗವು ದೊರೆಯುತ್ತದೆ.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಉಮಾಮಹೇಶ್ವರಸಂವಾದೇ ದ್ವಿತ್ರಿಂಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಉಮಾಮಹೇಶ್ವರಸಂವಾದ ಎನ್ನುವ ನೂರಾಮೂವತ್ತೆರಡನೇ ಅಧ್ಯಾಯವು.

[1] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಧರ್ಮಲಬ್ಧಾರ್ಥಭೋಕ್ತಾರಸ್ತೇ ನರಾಃ ಸ್ವರ್ಗಗಾಮಿನಃ| (ಭಾರತ ದರ್ಶನ).

[2] ಯೇ ವರ್ಜಯಂತಿ ಪರುಷಂ (ಭಾರತ ದರ್ಶನ).

[3] ಸಮುತ್ಥಾನಮನುಪ್ರಾಪ್ತಾಸ್ತೇ (ಭಾರತ ದರ್ಶನ).

[4] ಅಪರೇ ಚ ಮಹಾಭಾಗ್ಯಾ ಮಂದಭಾಗ್ಯಾಸ್ತಥಾಪರೇ| (ಭಾರತ ದರ್ಶನ).

[5] ವಧ್ಯೋ (ಭಾರತ ದರ್ಶನ).

Comments are closed.