Anushasana Parva: Chapter 131

ಅನುಶಾಸನ ಪರ್ವ: ದಾನಧರ್ಮ ಪರ್ವ

೧೩೧

ಶೂದ್ರನು ಮುಂದಿನ ಜನ್ಮಗಳಲ್ಲಿ ಬ್ರಾಹ್ಮಣತ್ವವನ್ನು ಮತ್ತು ಬ್ರಾಹ್ಮಣನು ಮುಂದಿನ ಜನ್ಮಗಳಲ್ಲಿ ಶೂದ್ರತ್ವವನ್ನು ಹೇಗೆ ಪಡೆದುಕೊಳ್ಳುತ್ತಾರೆ ಎನ್ನುವುದರ ಕುರಿತು ಉಮಾಮಹೇಶ್ವರ ಸಂವಾದ (1-57).

13131001 ಉಮೋವಾಚ|

13131001a ಭಗವನ್ಭಗನೇತ್ರಘ್ನ ಪೂಷ್ಣೋ ದಶನಪಾತನ|

13131001c ದಕ್ಷಕ್ರತುಹರ ತ್ರ್ಯಕ್ಷ ಸಂಶಯೋ ಮೇ ಮಹಾನಯಮ್||

ಉಮೆಯು ಹೇಳಿದಳು: “ಭಗವನ್! ಭಗನ ಕಣ್ಣುಗಳನ್ನು ಕಿತ್ತವನೇ! ಪೂಷನ ಹಲ್ಲುಗಳನ್ನು ಬೀಳಿಸಿದವನೇ! ಧಕ್ಷಯಜ್ಞಧ್ವಂಸಕ! ಮೂರು ಕಣ್ಣುಗಳುಳ್ಳವನೇ! ನನ್ನಲ್ಲಿ ಈ ಮಹಾಸಂಶಯವು ಮೂಡಿದೆ.

13131002a ಚಾತುರ್ವರ್ಣ್ಯಂ ಭಗವತಾ ಪೂರ್ವಂ ಸೃಷ್ಟಂ ಸ್ವಯಂಭುವಾ|

13131002c ಕೇನ ಕರ್ಮವಿಪಾಕೇನ ವೈಶ್ಯೋ ಗಚ್ಚತಿ ಶೂದ್ರತಾಮ್||

ಹಿಂದೆ ಭಗವಾನ್ ಸ್ವಯಂಭುವು ಚಾತುರ್ವರ್ಣಗಳನ್ನು ಸೃಷ್ಟಿಸಿದನು. ಯಾವ ಕರ್ಮವಿಪಾಕದಿಂದ[1] ವೈಶ್ಯನು ಶೂದ್ರತ್ವವನ್ನು ಪಡೆಯುತ್ತಾನೆ?

13131003a ವೈಶ್ಯೋ ವಾ ಕ್ಷತ್ರಿಯಃ ಕೇನ ದ್ವಿಜೋ ವಾ ಕ್ಷತ್ರಿಯೋ ಭವೇತ್|

13131003c ಪ್ರತಿಲೋಮಃ ಕಥಂ ದೇವ ಶಕ್ಯೋ ಧರ್ಮೋ ನಿಷೇವಿತುಮ್||

ಅಥವಾ ಯಾವ ಕರ್ಮವಿಪಾಕದಿಂದ ಕ್ಷತ್ರಿಯನು ವೈಶ್ಯ ಅಥವಾ ಬ್ರಾಹ್ಮಣನು ಕ್ಷತ್ರಿಯನಾಗುತ್ತಾನೆ? ದೇವ! ಪ್ರತಿಲೋಮಧರ್ಮವನ್ನು[2] ತಡೆಯಲು ಹೇಗೆ ಶಕ್ಯವಾಗುತ್ತದೆ?

13131004a ಕೇನ ವಾ ಕರ್ಮಣಾ ವಿಪ್ರಃ ಶೂದ್ರಯೋನೌ ಪ್ರಜಾಯತೇ|

13131004c ಕ್ಷತ್ರಿಯಃ ಶೂದ್ರತಾಮೇತಿ ಕೇನ ವಾ ಕರ್ಮಣಾ ವಿಭೋ||

ಅಥವಾ ಯಾವ ಕರ್ಮವಿಪಾಕದಿಂದ ಬ್ರಾಹ್ಮಣನು ಶೂದ್ರಯೋನಿಯಲ್ಲಿ ಹುಟ್ಟುತ್ತಾನೆ? ಅಥವಾ ವಿಭೋ! ಯಾವ ಪಾಪಕರ್ಮದಿಂದ ಕ್ಷತ್ರಿಯನು ಶೂದ್ರನಾಗಿ ಹುಟ್ಟುತ್ತಾನೆ?

13131005a ಏತಂ ಮೇ ಸಂಶಯಂ ದೇವ ವದ ಭೂತಪತೇಽನಘ|

13131005c ತ್ರಯೋ ವರ್ಣಾಃ ಪ್ರಕೃತ್ಯೇಹ ಕಥಂ ಬ್ರಾಹ್ಮಣ್ಯಮಾಪ್ನುಯುಃ||

ದೇವ! ಭೂತಪತೇ! ಅನಘ! ಹಾಗೆಯೇ ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಈ ಮೂರು ವರ್ಣದವರು ಹೇಗೆ ಸ್ವಭಾವತಃ ಬ್ರಾಹ್ಮಣ್ಯವನ್ನು ಪಡೆಯಬಹುದು ಎಂಬ ಈ ನನ್ನ ಸಂಶಯಕ್ಕೂ ಸಮಾಧಾನವನ್ನು ಹೇಳು.”

13131006 ಮಹೇಶ್ವರ ಉವಾಚ|

13131006a ಬ್ರಾಹ್ಮಣ್ಯಂ ದೇವಿ ದುಷ್ಪ್ರಾಪಂ ನಿಸರ್ಗಾದ್ಬ್ರಾಹ್ಮಣಃ ಶುಭೇ|

13131006c ಕ್ಷತ್ರಿಯೋ ವೈಶ್ಯಶೂದ್ರೌ ವಾ ನಿಸರ್ಗಾದಿತಿ ಮೇ ಮತಿಃ||

ಮಹೇಶ್ವರನು ಹೇಳಿದನು: “ದೇವಿ! ಬ್ರಾಹ್ಮಣ್ಯವು ಸುದುರ್ಲಭವಾದುದು. ಶುಭೇ! ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಈ ನಾಲ್ಕೂ ಸ್ವಭಾವಸಿದ್ಧವಾದವುಗಳೆಂದು ನನ್ನ ಅಭಿಪ್ರಾಯ.

13131007a ಕರ್ಮಣಾ ದುಷ್ಕೃತೇನೇಹ ಸ್ಥಾನಾದ್ಭ್ರಶ್ಯತಿ ವೈ ದ್ವಿಜಃ|

13131007c ಜ್ಯೇಷ್ಠಂ ವರ್ಣಮನುಪ್ರಾಪ್ಯ ತಸ್ಮಾದ್ರಕ್ಷೇತ ವೈ ದ್ವಿಜಃ||

ದುಷ್ಕೃತಕರ್ಮಗಳಿಂದಲೇ ಬ್ರಾಹ್ಮಣನು ತನ್ನ ಸ್ಥಾನದಿಂದ ಭ್ರಷ್ಟನಾಗುತ್ತಾನೆ. ಆದುದರಿಂದ ಜ್ಯೇಷ್ಠವರ್ಣವನ್ನು ಪಡೆದವನು ಸ್ವಧರ್ಮದಿಂದ ಚ್ಯುತನಾಗದಂತೆ ತನ್ನನ್ನು ರಕ್ಷಿಸಿಕೊಳ್ಳಬೇಕು.

13131008a ಸ್ಥಿತೋ ಬ್ರಾಹ್ಮಣಧರ್ಮೇಣ ಬ್ರಾಹ್ಮಣ್ಯಮುಪಜೀವತಿ|

13131008c ಕ್ಷತ್ರಿಯೋ ವಾಥ ವೈಶ್ಯೋ ವಾ ಬ್ರಹ್ಮಭೂಯಾಯ ಗಚ್ಚತಿ||

ಕ್ಷತ್ರಿಯನಾಗಲೀ ವೈಶ್ಯನಾಗಲೀ ಬ್ರಾಹ್ಮಣಧರ್ಮವನ್ನು ಪರಿಪಾಲಿಸುತ್ತಾ ಬ್ರಾಹ್ಮಣರ ಜೀವಿಕೆಯನ್ನು ನಡೆಸುತ್ತಿದ್ದರೆ ಅವನು ಮರುಜನ್ಮದಲ್ಲಿ ಬ್ರಾಹ್ಮಣನಾಗಿ ಹುಟ್ಟುತ್ತಾನೆ.

13131009a ಯಸ್ತು ವಿಪ್ರತ್ವಮುತ್ಸೃಜ್ಯ ಕ್ಷಾತ್ರಂ ಧರ್ಮಂ ನಿಷೇವತೇ|

13131009c ಬ್ರಾಹ್ಮಣ್ಯಾತ್ಸ ಪರಿಭ್ರಷ್ಟಃ ಕ್ಷತ್ರಯೋನೌ ಪ್ರಜಾಯತೇ||

ವಿಪ್ರತ್ವವನ್ನು ತೊರೆದು ಕ್ಷಾತ್ರಧರ್ಮವನ್ನು ಪಾಲಿಸುವವನು ಬ್ರಾಹ್ಮಣ್ಯದಿಂದ ಭ್ರಷ್ಟನಾಗಿ ಕ್ಷತ್ರಯೋನಿಯಲ್ಲಿ ಹುಟ್ಟುತ್ತಾನೆ.

13131010a ವೈಶ್ಯಕರ್ಮ ಚ ಯೋ ವಿಪ್ರೋ ಲೋಭಮೋಹವ್ಯಪಾಶ್ರಯಃ|

13131010c ಬ್ರಾಹ್ಮಣ್ಯಂ ದುರ್ಲಭಂ ಪ್ರಾಪ್ಯ ಕರೋತ್ಯಲ್ಪಮತಿಃ ಸದಾ||

13131011a ಸ ದ್ವಿಜೋ ವೈಶ್ಯತಾಮೇತಿ ವೈಶ್ಯೋ ವಾ ಶೂದ್ರತಾಮಿಯಾತ್|

13131011c ಸ್ವಧರ್ಮಾತ್ಪ್ರಚ್ಯುತೋ ವಿಪ್ರಸ್ತತಃ ಶೂದ್ರತ್ವಮಾಪ್ನುತೇ||

ದುರ್ಲಭವಾದ ಬ್ರಾಹ್ಮಣ್ಯವನ್ನು ಪಡೆದು ಲೋಭಮೋಹಗಳನ್ನು ಆಶ್ರಯಿಸಿ ಸದಾ ವೈಶ್ಯಕರ್ಮವನ್ನು ಮಾಡುವ ಅಲ್ಪಮತಿ ಬ್ರಾಹ್ಮಣನು ವೈಶ್ಯನಾಗಿಯೇ ಹುಟ್ಟುತ್ತಾನೆ. ವೈಶ್ಯನಾಗಿ ಹುಟ್ಟಿದವನು ಶೂದ್ರಧರ್ಮವನ್ನು ಪಾಲಿಸಿದರೆ ಮುಂದೆ ಅವನು ಶೂದ್ರನಾಗಿ ಹುಟ್ಟುತ್ತಾನೆ. ಹೀಗೆ ಸ್ವಧರ್ಮದಿಂದ ಭ್ರಷ್ಟನಾದ ಬ್ರಾಹ್ಮಣನು ಅನುಕ್ರಮವಾಗಿ ಶೂದ್ರತ್ವವನ್ನು ಹೊಂದುತ್ತಾನೆ.

13131012a ತತ್ರಾಸೌ ನಿರಯಂ ಪ್ರಾಪ್ತೋ ವರ್ಣಭ್ರಷ್ಟೋ ಬಹಿಷ್ಕೃತಃ|

13131012c ಬ್ರಹ್ಮಲೋಕಪರಿಭ್ರಷ್ಟಃ ಶೂದ್ರಃ ಸಮುಪಜಾಯತೇ||

ಶೂದ್ರಧರ್ಮವನ್ನು ಪಾಲಿಸುವ ಬ್ರಾಹ್ಮಣನು ವರ್ಣಭ್ರಷ್ಟನಾಗಿ, ಬಹಿಷ್ಕೃತನಾಗಿ, ಬ್ರಹ್ಮಲೋಕದಿಂದ ವಂಚಿತನಾಗಿ ನರಕವನ್ನು ಪಡೆಯುತ್ತಾನೆ. ನರಕವಾಸದ ನಂತರ ಶೂದ್ರಯೋನಿಯಲ್ಲಿ ಹುಟ್ಟುತ್ತಾನೆ.

13131013a ಕ್ಷತ್ರಿಯೋ ವಾ ಮಹಾಭಾಗೇ ವೈಶ್ಯೋ ವಾ ಧರ್ಮಚಾರಿಣಿ|

13131013c ಸ್ವಾನಿ ಕರ್ಮಾಣ್ಯಪಾಹಾಯ ಶೂದ್ರಕರ್ಮಾಣಿ ಸೇವತೇ||

13131014a ಸ್ವಸ್ಥಾನಾತ್ಸ ಪರಿಭ್ರಷ್ಟೋ ವರ್ಣಸಂಕರತಾಂ ಗತಃ|

13131014c ಬ್ರಾಹ್ಮಣಃ ಕ್ಷತ್ರಿಯೋ ವೈಶ್ಯಃ ಶೂದ್ರತ್ವಂ ಯಾತಿ ತಾದೃಶಃ||

ಮಹಾಭಾಗೇ! ಧರ್ಮಚಾರಿಣೀ! ಕ್ಷತ್ರಿಯನಾಗಿರಲಿ ಅಥವಾ ವೈಶ್ಯನಾಗಿರಲಿ ತಮ್ಮ ತಮ್ಮ ಕರ್ಮಗಳನ್ನು ತೊರೆದು ಶೂದ್ರಕರ್ಮಗಳನ್ನು ಸೇವಿಸಿದರೆ ಸ್ವಸ್ಥಾನಗಳಿಂದ ಭ್ರಷ್ಟರಾಗಿ ವರ್ಣಸಾಂಕರ್ಯವನ್ನು ಹೊಂದುತ್ತಾರೆ. ಹಾಗೆ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರು ಶೂದ್ರತ್ವವನ್ನು ಪಡೆದುಕೊಳ್ಳುತ್ತಾರೆ.

13131015a ಯಸ್ತು ಶುದ್ಧಃ ಸ್ವಧರ್ಮೇಣ ಜ್ಞಾನವಿಜ್ಞಾನವಾನ್ಶುಚಿಃ|

13131015c ಧರ್ಮಜ್ಞೋ ಧರ್ಮನಿರತಃ ಸ ಧರ್ಮಫಲಮಶ್ನುತೇ||

ಸ್ವಧರ್ಮದಿಂದ ಶುದ್ಧನಾಗಿರುವ, ಜ್ಞಾನವಿಜ್ಞಾನಗಳಿಂದ ಸಂಪನ್ನನಾಗಿರುವ, ಶುಚಿಯಾದ, ಧರ್ಮಜ್ಞ ಧರ್ಮನಿರತನು ಧರ್ಮದ ಫಲವನ್ನು ಅನುಭವಿಸುತ್ತಾನೆ.

13131016a ಇದಂ ಚೈವಾಪರಂ ದೇವಿ ಬ್ರಹ್ಮಣಾ ಸಮುದೀರಿತಮ್|

13131016c ಅಧ್ಯಾತ್ಮಂ ನೈಷ್ಠಿಕಂ ಸದ್ಭಿರ್ಧರ್ಮಕಾಮೈರ್ನಿಷೇವ್ಯತೇ||

ದೇವಿ! ಬ್ರಹ್ಮನು ಈ ವಿಷಯದಲ್ಲಿ ಒಂದು ಮಾತನ್ನು ಹೇಳಿದ್ದಾನೆ: “ಧರ್ಮಕಾಮ ಸತ್ಪುರುಷರು ನೈಷ್ಠಿಕ ಮತ್ತು ಆಧ್ಯಾತ್ಮ ಎರಡನ್ನೂ ಆಶ್ರಯಿಸಿರುತ್ತಾರೆ.”

13131017a ಉಗ್ರಾನ್ನಂ ಗರ್ಹಿತಂ ದೇವಿ ಗಣಾನ್ನಂ ಶ್ರಾದ್ಧಸೂತಕಮ್|

13131017c ಘುಷ್ಟಾನ್ನಂ[3] ನೈವ ಭೋಕ್ತವ್ಯಂ ಶೂದ್ರಾನ್ನಂ ನೈವ ಕರ್ಹಿ ಚಿತ್||

ದೇವಿ! ಉಗ್ರಸ್ವಭಾವದವನ ಅನ್ನವನ್ನು ಊಟಮಾಡುವುದು ನಿಂದ್ಯವಾದುದು. ಸಮುದಾಯದ ಅನ್ನ, ಶ್ರಾದ್ಧದ ಅನ್ನ, ಸೂತಕದ ಅನ್ನ, ಘೋಷಿಸಿ ನೀಡಿದ ಅನ್ನ ಮತ್ತು ಶೂದ್ರಾನ್ನವನ್ನು ಎಂದೂ ತಿನ್ನಬಾರದು.

13131018a ಶೂದ್ರಾನ್ನಂ ಗರ್ಹಿತಂ ದೇವಿ ದೇವದೇವೈರ್ಮಹಾತ್ಮಭಿಃ|

13131018c ಪಿತಾಮಹಮುಖೋತ್ಸೃಷ್ಟಂ ಪ್ರಮಾಣಮಿತಿ ಮೇ ಮತಿಃ||

ದೇವಿ! ದೇವದೇವರೂ ಮಹಾತ್ಮರೂ ಶೂದ್ರಾನ್ನವನ್ನು ನಿಂದಿಸುತ್ತಾರೆ. ಪಿತಾಮಹನ ಬಾಯಿಯಿಂದಲೇ ಬಂದ ಇದು ಪ್ರಮಾಣವೆಂದು ನಾನು ಭಾವಿಸುತ್ತೇನೆ.

13131019a ಶೂದ್ರಾನ್ನೇನಾವಶೇಷೇಣ ಜಠರೇ ಯೋ ಮ್ರಿಯೇತ ವೈ|

13131019c ಆಹಿತಾಗ್ನಿಸ್ತಥಾ ಯಜ್ವಾ ಸ ಶೂದ್ರಗತಿಭಾಗ್ಭವೇತ್||

ಹೊಟ್ಟೆಯಲ್ಲಿ ಶೂದ್ರಾನ್ನವಿರುವಾಗ ಸಾಯುವ ಬ್ರಾಹ್ಮಣನು ಅಗ್ನಿಹೋತ್ರಿಯೇ ಆಗಿರಲಿ ಅಥವಾ ಯಾಜ್ಞಿಕನೇ ಆಗಿರಲಿ ಶೂದ್ರಗತಿಯನ್ನು ಪಡೆಯುತ್ತಾನೆ.

13131020a ತೇನ ಶೂದ್ರಾನ್ನಶೇಷೇಣ ಬ್ರಹ್ಮಸ್ಥಾನಾದಪಾಕೃತಃ|

13131020c ಬ್ರಾಹ್ಮಣಃ ಶೂದ್ರತಾಮೇತಿ ನಾಸ್ತಿ ತತ್ರ ವಿಚಾರಣಾ||

ಮರಣಕಾಲದಲ್ಲಿ ಶೂದ್ರಾನ್ನಶೇಷವು ಇರುವ ಕಾರಣ ಅಂಥಹ ಬ್ರಾಹ್ಮಣನು ಬ್ರಹ್ಮಸ್ಥಾನದಿಂದ ವಂಚಿತನಾಗಿ ಶೂದ್ರತ್ವವನ್ನು ಹೊಂದುತ್ತಾನೆ ಎನ್ನುವುದರಲ್ಲಿ ವಿಚಾರಮಾಡಬೇಕಾಗಿಲ್ಲ.

13131021a ಯಸ್ಯಾನ್ನೇನಾವಶೇಷೇಣ ಜಠರೇ ಯೋ ಮ್ರಿಯೇತ ವೈ|

13131021c ತಾಂ ತಾಂ ಯೋನಿಂ ವ್ರಜೇದ್ವಿಪ್ರೋ ಯಸ್ಯಾನ್ನಮುಪಜೀವತಿ||

ಯಾರ ಅನ್ನಶೇಷವು ಹೊಟ್ಟೆಯಲ್ಲಿರುವಾಗ ಬ್ರಾಹ್ಮಣನು ಸಾಯುತ್ತಾನೋ ಮತ್ತು ಯಾರ ಅನ್ನದಿಂದ ಜೀವಿಕೆಯನ್ನು ನಡೆಸುತ್ತಾನೋ ಅವನ ವರ್ಣದಲ್ಲಿಯೇ ಆ ಬ್ರಾಹ್ಮಣನು ಪುನಃ ಹುಟ್ಟುತ್ತಾನೆ.

13131022a ಬ್ರಾಹ್ಮಣತ್ವಂ ಶುಭಂ ಪ್ರಾಪ್ಯ ದುರ್ಲಭಂ ಯೋಽವಮನ್ಯತೇ|

13131022c ಅಭೋಜ್ಯಾನ್ನಾನಿ ಚಾಶ್ನಾತಿ ಸ ದ್ವಿಜತ್ವಾತ್ಪತೇತ ವೈ||

ದುರ್ಲಭವಾದ ಶುಭ ಬ್ರಾಹ್ಮಣತ್ವವನ್ನು ಪಡೆದು ಅದರಿಂದ ಅಪಮಾನಗೊಂಡು ಅಭೋಜ್ಯ ಅನ್ನಗಳನ್ನು ತಿನ್ನುವವನು ದ್ವಿಜತ್ವದಿಂದ ಭ್ರಷ್ಟನಾಗುತ್ತಾನೆ.

13131023a ಸುರಾಪೋ ಬ್ರಹ್ಮಹಾ ಕ್ಷುದ್ರಶ್ಚೌರೋ ಭಗ್ನವ್ರತೋಽಶುಚಿಃ|

13131023c ಸ್ವಾಧ್ಯಾಯವರ್ಜಿತಃ ಪಾಪೋ ಲುಬ್ಧೋ ನೈಕೃತಿಕಃ ಶಠಃ||

13131024a ಅವ್ರತೀ ವೃಷಲೀಭರ್ತಾ ಕುಂಡಾಶೀ ಸೋಮವಿಕ್ರಯೀ|

13131024c ನಿಹೀನಸೇವೀ ವಿಪ್ರೋ ಹಿ ಪತತಿ ಬ್ರಹ್ಮಯೋನಿತಃ||

ಸುರಾಪಾನಮಾಡುವ, ಬ್ರಹ್ಮಹತ್ಯೆಮಾಡಿದ, ನೀಚ, ಕಳ್ಳ, ವ್ರತವನ್ನು ಮುರಿದ, ಅಶುಚಿ, ಸ್ವಾಧ್ಯಾಯವರ್ಜಿತ, ಪಾಪಿ, ಲುಬ್ಧ, ಕಪಟಿ, ಶಠ, ಅಡುಗೆಮಾಡಿದ ಪಾತ್ರೆಯಲ್ಲಿಯೇ ಊಟಮಾಡುವ, ಸೋಮವನ್ನು ಮಾರುವ, ನೀಚರ ಸೇವೆಗೈಯುವ ವಿಪ್ರನು ಬ್ರಹ್ಮಯೋನಿಯಿಂದ ಭ್ರಷ್ಟನಾಗುತ್ತಾನೆ.

13131025a ಗುರುತಲ್ಪೀ ಗುರುದ್ವೇಷೀ ಗುರುಕುತ್ಸಾರತಿಶ್ಚ ಯಃ|

13131025c ಬ್ರಹ್ಮದ್ವಿಟ್ಚಾಪಿ ಪತತಿ ಬ್ರಾಹ್ಮಣೋ ಬ್ರಹ್ಮಯೋನಿತಃ||

ಗುರುಪತ್ನಿಯೊಡನೆ ಕೂಡಿದ, ಗುರುದ್ವೇಷೀ, ಗುರುವನ್ನು ತಾತ್ಸಾರವಾಗಿ ಕಾಣುವ ಬ್ರಾಹ್ಮಣನು ವೇದಪರಾಯಣನಾಗಿದ್ದರೂ ಬ್ರಹ್ಮಯೋನಿಯಿಂದ ಭ್ರಷ್ಟನಾಗುತ್ತಾನೆ.

13131026a ಏಭಿಸ್ತು ಕರ್ಮಭಿರ್ದೇವಿ ಶುಭೈರಾಚರಿತೈಸ್ತಥಾ|

13131026c ಶೂದ್ರೋ ಬ್ರಾಹ್ಮಣತಾಂ ಗಚ್ಚೇದ್ವೈಶ್ಯಃ ಕ್ಷತ್ರಿಯತಾಂ ವ್ರಜೇತ್||

ದೇವಿ! ಮುಂದೆ ಹೇಳುವ ಶುಭಕರ್ಮ ಸದಾಚಾರಗಳಿಂದ ಶೂದ್ರನು ಅನುಕ್ರಮವಾಗಿ ಬ್ರಾಹ್ಮಣತ್ವವನ್ನು ಪಡೆಯುತ್ತಾನೆ ಮತ್ತು ವೈಶ್ಯನು ಕ್ಷತ್ರಿಯನಾಗಿ ಹುಟ್ಟುತ್ತಾನೆ.

13131027a ಶೂದ್ರಕರ್ಮಾಣಿ ಸರ್ವಾಣಿ ಯಥಾನ್ಯಾಯಂ ಯಥಾವಿಧಿ|

13131027c ಶುಶ್ರೂಷಾಂ ಪರಿಚರ್ಯಾಂ ಚ ಜ್ಯೇಷ್ಠೇ ವರ್ಣೇ ಪ್ರಯತ್ನತಃ|

13131027e ಕುರ್ಯಾದವಿಮನಾಃ ಶೂದ್ರಃ ಸತತಂ ಸತ್ಪಥೇ ಸ್ಥಿತಃ||

ಶೂದ್ರಕರ್ಮಗಳೆಲ್ಲವನ್ನೂ ಯಥಾನ್ಯಾಯವಾಗಿ ಯಥಾವಿಧಿಯಾಗಿ ಮಾಡಬೇಕು. ಜ್ಯೇಷ್ಠವರ್ಣದವರ ಶುಶ್ರೂಷೆ ಪರಿಚರ್ಯೆಗಳನ್ನು ಪ್ರಯತ್ನಪೂರ್ವಕವಾಗಿ ಮಾಡಬೇಕು. ಶೂದ್ರನು ಮನಸ್ಸಿಟ್ಟು ಕೆಲಸಮಾಡಬೇಕು ಮತ್ತು ಸತತವೂ ಸತ್ಪಥದಲ್ಲಿಯೇ ನೆಲೆಸಿರಬೇಕು.

13131028a ದೈವತದ್ವಿಜಸತ್ಕರ್ತಾ ಸರ್ವಾತಿಥ್ಯಕೃತವ್ರತಃ|

13131028c ಋತುಕಾಲಾಭಿಗಾಮೀ ಚ ನಿಯತೋ ನಿಯತಾಶನಃ||

ದೇವ-ದ್ವಿಜರನ್ನು ಸತ್ಕರಿಸಬೇಕು. ಸರ್ವಾತಿಥ್ಯಗಳನ್ನೂ ಮಾಡುವ ವ್ರತವನ್ನು ಕೈಗೊಂಡಿರಬೇಕು. ಋತುಕಾಲದಲ್ಲಿ ಮಾತ್ರ ಪತ್ನಿಯೊಡನೆ ಸಮಾಗಮಿಸಬೇಕು. ನಿಯಮಪೂರ್ವಕವಾಗಿ ನಿಯತ ಆಹಾರವನ್ನು ಸೇವಿಸಬೇಕು.

13131029a ಚೌಕ್ಷಶ್ಚೌಕ್ಷಜನಾನ್ವೇಷೀ ಶೇಷಾನ್ನಕೃತಭೋಜನಃ|

13131029c ವೃಥಾಮಾಂಸಾನ್ಯಭುಂಜಾನಃ ಶೂದ್ರೋ ವೈಶ್ಯತ್ವಮೃಚ್ಚತಿ||

ಶುಚನಾಗಿದ್ದು ಸತ್ಪುರುಷರನ್ನು ಹುಡುಕುತ್ತಿರಬೇಕು. ಅತಿಥಿಗಳು ಮತ್ತು ಕುಟುಂಬದವರು ಊಟಮಾಡಿದ ನಂತರ ಉಳಿದುದನ್ನು ಊಟಮಾಡಬೇಕು. ವೃಥಾ ಮಾಂಸವನ್ನು ತಿನ್ನಬಾರದು. ಇಂತಹ ನಿಯಮಗಳಿಂದಿರುವ ಶೂದ್ರನು ವೈಶ್ವತ್ವವನ್ನು ಪಡೆಯುತ್ತಾನೆ.

13131030a ಋತವಾಗನಹಂವಾದೀ ನಿರ್ದ್ವಂದ್ವಃ ಶಮಕೋವಿದಃ|

13131030c ಯಜತೇ ನಿತ್ಯಯಜ್ಞೈಶ್ಚ ಸ್ವಾಧ್ಯಾಯಪರಮಃ ಶುಚಿಃ||

ವೈಶ್ಯನಾಗಿ ಹುಟ್ಟಿದವನು ಸತ್ಯನಿಷ್ಠನಾಗಿ, ಅಹಂಕಾರಶೂನ್ಯನಾಗಿ, ನಿರ್ದ್ವಂದ್ವನೂ, ಶಮಕೋವಿದನೂ, ನಿತ್ಯಯಜ್ಞಗಳನ್ನು ಮಾಡುವವನೂ, ಸ್ವಾಧ್ಯಾಯ ನಿರತನೂ ಮತ್ತು ಪರಮ ಶುಚಿಯೂ ಆಗಿರಬೇಕು.

13131031a ದಾಂತೋ ಬ್ರಾಹ್ಮಣಸತ್ಕರ್ತಾ ಸರ್ವವರ್ಣಬುಭೂಷಕಃ|

13131031c ಗೃಹಸ್ಥವ್ರತಮಾತಿಷ್ಠನ್ ದ್ವಿಕಾಲಕೃತಭೋಜನಃ||

ಇಂದ್ರಿಯನಿಗ್ರಹಿಯಾಗಿದ್ದು, ಬ್ರಾಹ್ಮಣರನ್ನು ಸತ್ಕರಿಸುತ್ತಾ ಸರ್ವವರ್ಣದವರ ಉನ್ನತಿಯನ್ನೂ ಅಶಿಸುವನಾಗಿರಬೇಕು. ಗೃಹಸ್ಥವ್ರತವನ್ನಾಶ್ರಯಿಸಿ ದಿನವೂ ಎರಡು ಸಲ ಭೋಜನ ಮಾಡಬೇಕು.

13131032a ಶೇಷಾಶೀ ವಿಜಿತಾಹಾರೋ ನಿಷ್ಕಾಮೋ ನಿರಹಂವದಃ|

13131032c ಅಗ್ನಿಹೋತ್ರಮುಪಾಸಂಶ್ಚ ಜುಹ್ವಾನಶ್ಚ ಯಥಾವಿಧಿ||

ಯಜ್ಞಶೇಷವನ್ನು ಊಟಮಾಡಬೇಕು. ನಿಯಮಿತ ಆಹಾರವನ್ನು ಸೇವಿಸಬೇಕು. ನಿಷ್ಕಾಮನೂ ನಿರಹಂಕಾರಿಯೂ ಆಗಿರಬೇಕು. ಯಥಾವಿಧಿಯಾಗಿ ಆಹುತಿಗಳನ್ನು ನೀಡುತ್ತಾ ಅಗ್ನಿಹೋತ್ರದಲ್ಲಿ ತೊಡಗಿರಬೇಕು.

13131033a ಸರ್ವಾತಿಥ್ಯಮುಪಾತಿಷ್ಠನ್ ಶೇಷಾನ್ನಕೃತಭೋಜನಃ|

13131033c ತ್ರೇತಾಗ್ನಿಮಂತ್ರವಿಹಿತೋ ವೈಶ್ಯೋ ಭವತಿ ವೈ ಯದಿ|

13131033e ಸ ವೈಶ್ಯಃ ಕ್ಷತ್ರಿಯಕುಲೇ ಶುಚೌ ಮಹತಿ ಜಾಯತೇ||

ಸರ್ವಾತಿಥ್ಯಗಳನ್ನೂ ನೀಡಿ, ಶೇಷಾನ್ನವನ್ನು ಭುಂಜಿಸಬೇಕು. ಗಾರ್ಹಪತ್ಯಾದಿ ಅಗ್ನಿತ್ರಯವನ್ನು ಮಂತ್ರಪೂರ್ವಕವಾಗಿ ಪೂಜಿಸಬೇಕು. ವೈಶ್ಯನಾದವನು ಈ ರೀತಿ ಇದ್ದರೆ ಆ ವೈಶ್ಯನು ಶುಚಿಯಾದ ಮಹಾ ಕ್ಷತ್ರಿಯಕುಲದಲ್ಲಿ ಜನಿಸುತ್ತಾನೆ.

13131034a ಸ ವೈಶ್ಯಃ ಕ್ಷತ್ರಿಯೋ ಜಾತೋ ಜನ್ಮಪ್ರಭೃತಿ ಸಂಸ್ಕೃತಃ|

13131034c ಉಪನೀತೋ ವ್ರತಪರೋ ದ್ವಿಜೋ ಭವತಿ ಸತ್ಕೃತಃ||

ಕ್ಷತ್ರಿಯನಾಗಿ ಹುಟ್ಟಿದ ಆ ವೈಶ್ಯನು ಜನ್ಮಪ್ರಭೃತಿ ಸಂಸ್ಕಾರಗಳಿಂದ ಸಂಸ್ಕೃತನಾಗಿ ಉಪನಯನದ ನಂತರ ಬ್ರಹ್ಮಚರ್ಯವ್ರತ ತತ್ಪರನಾಗಿ ದ್ವಿಜನೆಂದು ಸತ್ಕೃತನಾಗುತ್ತಾನೆ.

13131035a ದದಾತಿ ಯಜತೇ ಯಜ್ಞೈಃ ಸಂಸ್ಕೃತೈರಾಪ್ತದಕ್ಷಿಣೈಃ|

13131035c ಅಧೀತೇ ಸ್ವರ್ಗಮನ್ವಿಚ್ಚಂಸ್ತ್ರೇತಾಗ್ನಿಶರಣಃ ಸದಾ||

ಆಪ್ತದಕ್ಷಿಣೆಗಳಿಂದ ಸಂಸ್ಕೃತವಾದಯಜ್ಞಗಳನ್ನು ಯಜಿಸುತ್ತಾನೆ ಮತ್ತು ದಾನಗಳನ್ನು ನೀಡುತ್ತಾನೆ. ಸ್ವರ್ಗವನ್ನು ಬಯಸಿ ಸದಾ ತ್ರೇತಾಗ್ನಿಗಳನ್ನು ಆಶ್ರಯಿಸಿರುತ್ತಾನೆ.

13131036a ಆರ್ತಹಸ್ತಪ್ರದೋ ನಿತ್ಯಂ ಪ್ರಜಾ ಧರ್ಮೇಣ ಪಾಲಯನ್|

13131036c ಸತ್ಯಃ ಸತ್ಯಾನಿ ಕುರುತೇ ನಿತ್ಯಂ ಯಃ ಸುಖದರ್ಶನಃ||

ಆರ್ತರಿಗೆ ಅಭಯಹಸ್ತವನ್ನು ನೀಡುತ್ತಾನೆ. ನಿತ್ಯವೂ ಪ್ರಜೆಗಳನ್ನು ಧರ್ಮದಿಂದ ಪಾಲಿಸುತ್ತಾನೆ. ನಿತ್ಯವೂ ಸತ್ಯನಿಷ್ಠನಾಗಿದ್ದು ಸತ್ಯವ್ಯವಹಾರಗಳನ್ನೇ ಮಾಡುತ್ತಾನೆ. ದರ್ಶನಮಾತ್ರದಿಂದಲೇ ಪ್ರಜೆಗಳಿಗೆ ಸುಖದಾಯಕನಾಗುತ್ತಾನೆ.

13131037a ಧರ್ಮದಂಡೋ ನ ನಿರ್ದಂಡೋ ಧರ್ಮಕಾರ್ಯಾನುಶಾಸಕಃ|

13131037c ಯಂತ್ರಿತಃ ಕಾರ್ಯಕರಣೇ ಷಡ್ಭಾಗಕೃತಲಕ್ಷಣಃ||

ಧರ್ಮಾನುಸಾರವಾಗಿ ದಂಡನೆಯನ್ನು ನೀಡಬೇಕು. ದಂಡವನ್ನು ತ್ಯಜಿಸಬಾರದು. ಧರ್ಮಕಾರ್ಯಗಳನ್ನು ಆಜ್ಞಾಪಿಸಬೇಕು. ಪ್ರಜೆಗಳ ಆದಾಯದಲ್ಲಿ ಆರನೆಯ ಒಂದು ಭಾಗವನ್ನು ತೆಗೆದುಕೊಂಡು ಕಾರ್ಯಕಲಾಪಗಳಲ್ಲಿ ಧರ್ಮದಿಂದ ನಿಯಂತ್ರಿತನಾಗಿರಬೇಕು.

13131038a ಗ್ರಾಮ್ಯಧರ್ಮಾನ್ನ ಸೇವೇತ ಸ್ವಚ್ಚಂದೇನಾರ್ಥಕೋವಿದಃ|

13131038c ಋತುಕಾಲೇ ತು ಧರ್ಮಾತ್ಮಾ ಪತ್ನೀಂ ಸೇವೇತ ನಿತ್ಯದಾ||

ಅರ್ಥಕೋವಿದ ಕ್ಷತ್ರಿಯಮು ಸ್ವಚ್ಚಂದವಾಗಿ ಮೈಥುನಸುಖದಲ್ಲಿ ಆಸಕ್ತನಾಗಿರಬಾರದು. ಆ ಧರ್ಮಾತ್ಮನು ನಿತ್ಯವೂ ಋತುಕಾಲದಲ್ಲಿ ಮಾತ್ರ ಪತ್ನಿಯನ್ನು ಸೇರಬೇಕು.

13131039a ಸರ್ವೋಪವಾಸೀ[4] ನಿಯತಃ ಸ್ವಾಧ್ಯಾಯಪರಮಃ ಶುಚಿಃ|

13131039c ಬರ್ಹಿಷ್ಕಾಂತರಿತೇ ನಿತ್ಯಂ ಶಯಾನೋಽಗ್ನಿಗೃಹೇ ಸದಾ||

ನಿಯತನಾಗಿ ಎರಡೇ ಹೊತ್ತು ಊಟಮಾಡುತ್ತಾ ಮಧ್ಯೆ ಏನನ್ನೂ ತಿನ್ನದೇ ಸರ್ವೋಪವಾಸಿಯಾಗಿರಬೇಕು. ಪರಮ ಶುಚಿಯಾಗಿ ಸ್ವಾಧ್ಯಯನಿರತನಾಗಿರಬೇಕು. ನಿತ್ಯವೂ ಅಗ್ನಿಗೃಹದಲ್ಲಿ ದರ್ಭೆಯ ಮೇಲೆ ಮಲಗಬೇಕು.

13131040a ಸರ್ವಾತಿಥ್ಯಂ ತ್ರಿವರ್ಗಸ್ಯ ಕುರ್ವಾಣಃ ಸುಮನಾಃ ಸದಾ|

13131040c ಶೂದ್ರಾಣಾಂ ಚಾನ್ನಕಾಮಾನಾಂ ನಿತ್ಯಂ ಸಿದ್ಧಮಿತಿ ಬ್ರುವನ್||

ಮೂರು ವರ್ಣದವರಿಗೂ ಸದಾ ಸುಮನಸ್ಕನಾಗಿ ಸರ್ವಾತಿಥ್ಯಗಳನ್ನೂ ಮಾಡಬೇಕು. ಅನ್ನವನ್ನು ಬಯಸುವ ಶ್ರೂದ್ರರಿಗೆ ನಿತ್ಯವೂ ಭೋಜನವು ಸಿದ್ಧವಾಗಿದೆ ಎಂದು ಹೇಳಿ ನೀಡಬೇಕು.

13131041a ಸ್ವಾರ್ಥಾದ್ವಾ[5] ಯದಿ ವಾ ಕಾಮಾನ್ನ ಕಿಂ ಚಿದುಪಲಕ್ಷಯೇತ್|

13131041c ಪಿತೃದೇವಾತಿಥಿಕೃತೇ ಸಾಧನಂ ಕುರುತೇ ಚ ಯಃ||

ಪಿತೃಗಳು, ದೇವತೆಗಳು ಮತ್ತು ಅತಿಥಿಗಳ ಪ್ರೀತ್ಯರ್ಥವಾಗಿ ಸಾಧನೆಯನ್ನು ಮಾಡುವ ಕ್ಷತ್ರಿಯನು ಸ್ವಾರ್ಥಕ್ಕಾಗಿಯಾಗಲೀ ಅಥವಾ ಕಾಮಕ್ಕಾಗಿಯಾಗಲೀ ಧರ್ಮವನ್ನು ಉಪಲಕ್ಷಿಸಬಾರದು.

13131042a ಸ್ವವೇಶ್ಮನಿ ಯಥಾನ್ಯಾಯಮುಪಾಸ್ತೇ ಭೈಕ್ಷಮೇವ ಚ|

13131042c ತ್ರಿಕಾಲಮಗ್ನಿಹೋತ್ರಂ ಚ ಜುಹ್ವಾನೋ ವೈ ಯಥಾವಿಧಿ||

ತನ್ನ ಮನೆಯಲ್ಲಿ ಯಥಾನ್ಯಾಯವಾಗಿ ಭೋಜನ ಮಾಡಬೇಕು. ಮೂರುಹೊತ್ತೂ ಯಥಾವಿಧಿಯಾಗಿ ಅಗ್ನಿಹೋತ್ರವನ್ನು ಮಾಡಬೇಕು.

13131043a ಗೋಬ್ರಾಹ್ಮಣಹಿತಾರ್ಥಾಯ ರಣೇ ಚಾಭಿಮುಖೋ ಹತಃ|

13131043c ತ್ರೇತಾಗ್ನಿಮಂತ್ರಪೂತಂ ವಾ ಸಮಾವಿಶ್ಯ ದ್ವಿಜೋ ಭವೇತ್||

ಗೋ-ಬ್ರಾಹ್ಮಣರ ಹಿತಾರ್ಥವಾಗಿ ರಣದಲ್ಲಿ ಸೇನಾಮುಖನಾಗಿ ಹತನಾದ ಅಥವಾ ಮಂತ್ರಪೂತ ತ್ರೇತಾಗ್ನಿಯನ್ನು ಪ್ರವೇಶಿಸಿದ ಕ್ಷತ್ರಿಯನು ಬ್ರಾಹ್ಮಣನಾಗುತ್ತಾನೆ.

13131044a ಜ್ಞಾನವಿಜ್ಞಾನಸಂಪನ್ನಃ ಸಂಸ್ಕೃತೋ ವೇದಪಾರಗಃ|

13131044c ವಿಪ್ರೋ ಭವತಿ ಧರ್ಮಾತ್ಮಾ ಕ್ಷತ್ರಿಯಃ ಸ್ವೇನ ಕರ್ಮಣಾ||

ಜ್ಞಾನವಿಜ್ಞಾನಸಂಪನ್ನ, ಸಂಸ್ಕಾರಗಳಿಂದ ಸುಸಂಸ್ಕೃತ, ವೇದಪಾರಂಗತ, ಧರ್ಮಾತ್ಮಾ ಕ್ಷತ್ರಿಯನು ತನ್ನದೇ ಕರ್ಮಗಳಿಂದ ವಿಪ್ರನಾಗುತ್ತಾನೆ.

13131045a ಏತೈಃ ಕರ್ಮಫಲೈರ್ದೇವಿ ನ್ಯೂನಜಾತಿಕುಲೋದ್ಭವಃ|

13131045c ಶೂದ್ರೋಽಪ್ಯಾಗಮಸಂಪನ್ನೋ ದ್ವಿಜೋ ಭವತಿ ಸಂಸ್ಕೃತಃ||

ದೇವಿ! ಈ ಕರ್ಮಫಲಗಳಿಂದ ನ್ಯೂನಜಾತಿಕುಲದಲ್ಲಿ ಹುಟ್ಟಿದ ಶೂದ್ರನೂ ಕೂಡ ಅನುಕ್ರಮವಾಗಿ ಸುಸಂಸ್ಕೃತನಾಗಿ ಆಗಮಸಂಪನ್ನ ದ್ವಿಜನಾಗುತ್ತಾನೆ.

13131046a ಬ್ರಾಹ್ಮಣೋ ವಾಪ್ಯಸದ್ವೃತ್ತಃ ಸರ್ವಸಂಕರಭೋಜನಃ|

13131046c ಬ್ರಾಹ್ಮಣ್ಯಂ ಪುಣ್ಯಮುತ್ಸೃಜ್ಯ ಶೂದ್ರೋ ಭವತಿ ತಾದೃಶಃ||

ಬ್ರಾಹ್ಮಣನೂ ಕೂಡ ದುರಾಚಾರಿಯಾಗಿ, ಸರ್ವ ಸಂಕರ ಭೋಜನಗಳನ್ನು ಮಾಡಿ ಬ್ರಾಹ್ಮಣ್ಯದ ಪುಣ್ಯವನ್ನು ತ್ಯಜಿಸಿ ಶೂದ್ರನಾಗುತ್ತಾನೆ.

13131047a ಕರ್ಮಭಿಃ ಶುಚಿಭಿರ್ದೇವಿ ಶುದ್ಧಾತ್ಮಾ ವಿಜಿತೇಂದ್ರಿಯಃ|

13131047c ಶೂದ್ರೋಽಪಿ ದ್ವಿಜವತ್ಸೇವ್ಯ ಇತಿ ಬ್ರಹ್ಮಾಬ್ರವೀತ್ಸ್ವಯಮ್||

ದೇವಿ! ಕರ್ಮಗಳಿಂದ ಶುಚಿಯಾಗಿರುವ ಶುದ್ಧಾತ್ಮಾ ಜಿತೇಂದ್ರಿಯ ಶೂದ್ರನನ್ನೂ ಕೂಡ ದ್ವಿಜನಂತೆಯೇ ಸೇವಿಸಬೇಕು ಎಂದು ಸ್ವಯಂ ಬ್ರಹ್ಮನೇ ಹೇಳಿದ್ದಾನೆ.

13131048a ಸ್ವಭಾವಕರ್ಮ ಚ ಶುಭಂ ಯತ್ರ ಶೂದ್ರೇಽಪಿ ತಿಷ್ಠತಿ|

13131048c ವಿಶುದ್ಧಃ ಸ ದ್ವಿಜಾತಿರ್ವೈ ವಿಜ್ಞೇಯ ಇತಿ ಮೇ ಮತಿಃ||

ಒಳ್ಳೆಯ ಸ್ವಭಾವದ ಮತ್ತು ಸಾತ್ವಿಕ ಕರ್ಮಗಳನ್ನು ಮಾಡುತ್ತಿರುವ ಶೂದ್ರನು ಸ್ವರ್ಕರ್ಮಭ್ರಷ್ಟರಾದ ಬ್ರಾಹ್ಮಣ-ಕ್ಷತ್ರಿಯ-ವೈಶ್ಯರಿಗಿಂತಲೂ ಶ್ರೇಷ್ಠ ಎಂದು ನನ್ನ ಅಭಿಪ್ರಾಯ.

13131049a ನ ಯೋನಿರ್ನಾಪಿ ಸಂಸ್ಕಾರೋ ನ ಶ್ರುತಂ ನ ಚ ಸಂನತಿಃ|

13131049c ಕಾರಣಾನಿ ದ್ವಿಜತ್ವಸ್ಯ ವೃತ್ತಮೇವ ತು ಕಾರಣಮ್||

ಬ್ರಾಹ್ಮಣಯೋನಿಯಲ್ಲಿ ಹುಟ್ಟುವುದಾಗಲೀ, ಜಾತಕರ್ಮಾದಿ ಸಂಸ್ಕಾರಗಳಾಗಲೀ, ವೇದಾಧ್ಯಯನವಾಗಲೀ, ಸನ್ನತಿಯಾಗಲೀ ದ್ವಿಜತ್ವಕ್ಕೆ ಕಾರಣಗಳಲ್ಲ. ಸಚ್ಚಾರಿತ್ರ್ಯವೇ ದ್ವಿಜತ್ವಕ್ಕೆ ಕಾರಣ.

13131050a ಸರ್ವೋಽಯಂ ಬ್ರಾಹ್ಮಣೋ ಲೋಕೇ ವೃತ್ತೇನ ತು ವಿಧೀಯತೇ|

13131050c ವೃತ್ತೇ ಸ್ಥಿತಶ್ಚ ಸುಶ್ರೋಣಿ[6] ಬ್ರಾಹ್ಮಣತ್ವಂ ನಿಗಚ್ಚತಿ||

ಈ ಲೋಕದಲ್ಲಿರುವ ಸರ್ವ ಬ್ರಾಹ್ಮಣರೂ ಚಾರಿತ್ರ್ಯದಿಂದಲೇ ಬ್ರಾಹ್ಮಣರಾಗಿದ್ದಾರೆ ಎಂದು ವಿಧಾಯಕವಾಗಿದೆ. ಸುಶ್ರೋಣಿ! ಸಚ್ಚಾರಿತ್ರ್ಯದಲ್ಲಿರುವ ಎಲ್ಲರೂ ಬ್ರಾಹ್ಮಣತ್ವವನ್ನು ಹೊಂದುತ್ತಾರೆ.

13131051a ಬ್ರಾಹ್ಮಃ ಸ್ವಭಾವಃ ಕಲ್ಯಾಣಿ ಸಮಃ ಸರ್ವತ್ರ ಮೇ ಮತಿಃ|

13131051c ನಿರ್ಗುಣಂ ನಿರ್ಮಲಂ ಬ್ರಹ್ಮ ಯತ್ರ ತಿಷ್ಠತಿ ಸ ದ್ವಿಜಃ||

ಕಲ್ಯಾಣಿ! ಬ್ರಹ್ಮಸ್ವಭಾವವು ಎಲ್ಲರಲ್ಲಿಯೂ ಸಮಾನವಾಗಿಯೇ ಇದೆ ಎಂದು ನನ್ನ ಅಭಿಪ್ರಾಯವು. ನಿರ್ಗುಣ ನಿರ್ಮಲ ಬ್ರಹ್ಮವು ಯಾರಲ್ಲಿ ಪ್ರಕಾಶಿತಗೊಳ್ಳುತ್ತದೆಯೋ ಅವನೇ ದ್ವಿಜನು.

13131052a ಏತೇ ಯೋನಿಫಲಾ ದೇವಿ ಸ್ಥಾನಭಾಗನಿದರ್ಶಕಾಃ|

13131052c ಸ್ವಯಂ ಚ ವರದೇನೋಕ್ತಾ ಬ್ರಹ್ಮಣಾ ಸೃಜತಾ ಪ್ರಜಾಃ||

ದೇವಿ! ಚಾತುರ್ವಣಗಳ ಸ್ಥಾನ-ವಿಭಾಗಗಳನ್ನು ತೋರಿಸುವ ಇವುಗಳೇ ಆಯಾ ವರ್ಣದಲ್ಲಿ ಹುಟ್ಟುವ ಫಲಗಳಾಗಿವೆ. ಪ್ರಜೆಗಳನ್ನು ಸೃಷ್ಟಿಸುವ ಕಾಲದಲ್ಲಿ ವರದ ಬ್ರಹ್ಮನೇ ಇದನ್ನು ಹೇಳಿದ್ದಾನೆ.

13131053a ಬ್ರಾಹ್ಮಣೋ ಹಿ ಮಹತ್ಕ್ಷೇತ್ರಂ ಲೋಕೇ ಚರತಿ ಪಾದವತ್|

13131053c ಯತ್ತತ್ರ ಬೀಜಂ ವಪತಿ ಸಾ ಕೃಷಿಃ ಪಾರಲೌಕಿಕೀ||

ಈ ಲೋಕದಲ್ಲಿ ಬ್ರಾಹ್ಮಣನೇ ತಿರುಗಾಡುವ ಮಹಾ ಕ್ಷೇತ್ರವು. ಇದರಲ್ಲಿ ಬಿತ್ತಿದ ಬೀಜವು ಪಾರಲೌಕಿಕ ಫಲವನ್ನು ನೀಡುತ್ತದೆ.

13131054a ಮಿತಾಶಿನಾ[7] ಸದಾ ಭಾವ್ಯಂ ಸತ್ಪಥಾಲಂಬಿನಾ ಸದಾ|

13131054c ಬ್ರಾಹ್ಮಮಾರ್ಗಮತಿಕ್ರಮ್ಯ ವರ್ತಿತವ್ಯಂ ಬುಭೂಷತಾ||

ಕಲ್ಯಾಣವನ್ನು ಬಯಸುವ ಬ್ರಾಹ್ಮಣನು ಸತ್ಪುರುಷರ ಮಾರ್ಗವನ್ನು ಅನುಸರಿಸಬೇಕು. ಮಿತ ಆಹಾರವನ್ನು ಸೇವಿಸಬೇಕು. ವೇದೋಕ್ತ ಮಾರ್ಗವನ್ನೇ ಆಶ್ರಯಿಸಿ ವ್ಯವಹರಿಸಬೇಕು.

13131055a ಸಂಹಿತಾಧ್ಯಾಯಿನಾ ಭಾವ್ಯಂ ಗೃಹೇ ವೈ ಗೃಹಮೇಧಿನಾ|

13131055c ನಿತ್ಯಂ ಸ್ವಾಧ್ಯಾಯಯುಕ್ತೇನ ದಾನಾಧ್ಯಯನಜೀವಿನಾ||

ಗೃಹಸ್ಥ ಬ್ರಾಹ್ಮಣನು ಮನೆಯಲ್ಲಿದ್ದುಕೊಂಡು ನಿತ್ಯವೂ ಸ್ವಾಧ್ಯಾಯಯುಕ್ತನಾಗಿ ವೇದ ಸಂಹಿತೆಗಳ ಅಧ್ಯಯನಮಾಡಬೇಕು. ಆದರೆ ದಾನ-ಅಧ್ಯಯನಗಳನ್ನು ಜೀವಿಕೆಯ ಸಾಧನಗಳನ್ನಾಗಿ ಮಾಡಿಕೊಳ್ಳಬಾರದು.

13131056a ಏವಂಭೂತೋ ಹಿ ಯೋ ವಿಪ್ರಃ ಸತತಂ ಸತ್ಪಥೇ ಸ್ಥಿತಃ|

13131056c ಆಹಿತಾಗ್ನಿರಧೀಯಾನೋ ಬ್ರಹ್ಮಭೂಯಾಯ ಕಲ್ಪತೇ||

ಹೀಗೆ ಸತತವೂ ಸತ್ಪಥದಲ್ಲಿದ್ದುಕೊಂಡು ಆಹಿತಾಗ್ನಿಯಾಗಿರುವವನು ಬ್ರಹ್ಮಭಾವವನ್ನು ಹೊಂದುತ್ತಾನೆ.

13131057a ಬ್ರಾಹ್ಮಣ್ಯಮೇವ ಸಂಪ್ರಾಪ್ಯ ರಕ್ಷಿತವ್ಯಂ ಯತಾತ್ಮಭಿಃ|

13131057c ಯೋನಿಪ್ರತಿಗ್ರಹಾದಾನೈಃ ಕರ್ಮಭಿಶ್ಚ ಶುಚಿಸ್ಮಿತೇ||

ಶುಚಿಸ್ಮಿತೇ! ಬ್ರಾಹ್ಮಣ್ಯವನ್ನು ಪಡೆದುಕೊಂಡ ನಂತರ ಮನಸ್ಸನ್ನೂ ಮತ್ತು ಇಂದ್ರಿಯಗಳನ್ನೂ ಹತೋಟಿಯಲ್ಲಿಟ್ಟುಕೊಂಡು ಕುತ್ಸಿತ ಯೋನಿಯಲ್ಲಿ ಹುಟ್ಟಿದ ಸ್ತ್ರೀಯರೊಡನೆ ಸಂಬಂಧಬೆಳೆಸದೇ, ನೀಚರಿಂದ ದಾನವನ್ನು ಸ್ವೀಕರಿಸದೇ, ಶುಭಕರ್ಮಗಳಿಂದ ಬ್ರಾಹ್ಮಣತ್ವವನ್ನು ರಕ್ಷಿಸಿಕೊಳ್ಳಬೇಕು.

13131058a ಏತತ್ತೇ ಸರ್ವಮಾಖ್ಯಾತಂ ಯಥಾ ಶೂದ್ರೋ ಭವೇದ್ದ್ವಿಜಃ|

13131058c ಬ್ರಾಹ್ಮಣೋ ವಾ ಚ್ಯುತೋ ಧರ್ಮಾದ್ಯಥಾ ಶೂದ್ರತ್ವಮಾಪ್ನುತೇ||

ಶೂದ್ರನು ಹೇಗೆ ದ್ವಿಜನಾಗುತ್ತಾನೆ ಮತ್ತು ಬ್ರಾಹ್ಮಣನು ಹೇಗೆ ಧರ್ಮದಿಂದ ಚ್ಯುತನಾಗಿ ಶೂದ್ರತ್ವವನ್ನು ಪಡೆಯುತ್ತಾನೆ ಈ ಸರ್ವವನ್ನೂ ಹೇಳಿದ್ದೇನೆ.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಉಮಾಮಹೇಶ್ವರಸಂವಾದೇ ಏಕತ್ರಿಂಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಉಮಾಮಹೇಶ್ವರಸಂವಾದ ಎನ್ನುವ ನೂರಾಮೂವತ್ತೊಂದನೇ ಅಧ್ಯಾಯವು.

[1] ಪಾಪಕರ್ಮದಿಂದ.

[2] ಉಚ್ಚವರ್ಣದವನು ನೀಚವರ್ಣದಲ್ಲಿ ಹುಟ್ಟುವ ಕ್ರಮ.

[3] ದುಷ್ಟಾನ್ನಂ (ಭಾರತ ದರ್ಶನ).

[4] ಸದೋಪವಾಸೀ (ಭಾರತ ದರ್ಶನ).

[5] ಅರ್ಥದ್ವಾ (ಭಾರತ ದರ್ಶನ).

[6] ಶೂದ್ರೋಪಿ (ಭಾರತ ದರ್ಶನ).

[7] ವಿಘಸಾಶಿನಾ (ಭಾರತ ದರ್ಶನ).

Comments are closed.