Anushasana Parva: Chapter 133

ಅನುಶಾಸನ ಪರ್ವ: ದಾನಧರ್ಮ ಪರ್ವ

೧೩೩

ಸ್ವರ್ಗ-ನರಕಗಳಿಗೂ, ಉತ್ತಮಾಧಮ ವರ್ಣಗಳಲ್ಲಿ ಜನ್ಮಪ್ರಾಪ್ತಿಗೂ ಕಾರಣಗಳಾದ ಕರ್ಮಗಳ ವರ್ಣನೆ (1-63).

13133001 ಉಮೋವಾಚ|

13133001a ಕಿಂಶೀಲಾಃ ಕಿಂಸಮಾಚಾರಾಃ ಪುರುಷಾಃ ಕೈಶ್ಚ ಕರ್ಮಭಿಃ|

13133001c ಸ್ವರ್ಗಂ ಸಮಭಿಪದ್ಯಂತೇ ಸಂಪ್ರದಾನೇನ ಕೇನ ವಾ||

ಉಮೆಯು ಹೇಳಿದಳು: “ಯಾವ ಶೀಲವುಳ್ಳವರು, ಯಾವ ಸದಾಚಾರವುಳ್ಳವರು ಮತ್ತು ಯಾವ ಕರ್ಮಗಳಿಂದ ಅಥವಾ ಯಾವುದನ್ನು ದಾನಮಾಡುವುದರಿಂದ ಪುರುಷರು ಸ್ವರ್ಗವನ್ನು ಪಡೆಯುತ್ತಾರೆ?”

13133002 ಮಹೇಶ್ವರ ಉವಾಚ|

13133002a ದಾತಾ ಬ್ರಾಹ್ಮಣಸತ್ಕರ್ತಾ ದೀನಾಂಧಕೃಪಣಾದಿಷು|

13133002c ಭಕ್ಷ್ಯಭೋಜ್ಯಾನ್ನಪಾನಾನಾಂ ವಾಸಸಾಂ ಚ ಪ್ರದಾಯಕಃ||

13133003a ಪ್ರತಿಶ್ರಯಾನ್ಸಭಾಃ ಕೂಪಾನ್ ಪ್ರಪಾಃ ಪುಷ್ಕರಿಣೀಸ್ತಥಾ|

13133003c ನೈತ್ಯಕಾನಿ ಚ ಸರ್ವಾಣಿ ಕಿಮಿಚ್ಚಕಮತೀವ ಚ||

13133004a ಆಸನಂ ಶಯನಂ ಯಾನಂ ಧನಂ ರತ್ನಂ ಗೃಹಾಂಸ್ತಥಾ|

13133004c ಸಸ್ಯಜಾತಾನಿ ಸರ್ವಾಣಿ ಗಾಃ ಕ್ಷೇತ್ರಾಣ್ಯಥ ಯೋಷಿತಃ||

13133005a ಸುಪ್ರತೀತಮನಾ ನಿತ್ಯಂ ಯಃ ಪ್ರಯಚ್ಚತಿ ಮಾನವಃ|

13133005c ಏವಂಭೂತೋ ಮೃತೋ ದೇವಿ ದೇವಲೋಕೇಽಭಿಜಾಯತೇ||

ಮಹೇಶ್ವರನು ಹೇಳಿದನು: “ದೇವಿ! ಬ್ರಾಹ್ಮಣರನ್ನು ಸತ್ಕರಿಸಿ ದಾನಮಾಡುವ, ದೀನಾಂಧಕೃಪಣರಿಗೆ ಭಕ್ಷ್ಯಭೋಜ್ಯಗಳನ್ನೂ, ಅನ್ನಪಾನಗಳನ್ನೂ, ವಸ್ತ್ರಗಳನ್ನೂ ನೀಡುವ, ತಂಗಲು ಧರ್ಮಶಾಲೆಗಳನ್ನು ಕಟ್ಟುವ, ಸಭಾಭವನಗಳನ್ನು ನಿರ್ಮಿಸಿ ಕೊಡುವ, ಕೆರೆ-ಬಾವಿ-ಸರೋವರಗಳನ್ನು ನಿರ್ಮಿಸುವ, ಯಾರು ಏನನ್ನು ಕೇಳಿದರೂ ಕೊಡುವ, ಸುಪ್ರತೀತ ಮನಸ್ಕನಾಗಿ ನಿತ್ಯವೂ ಆಸನ, ಶಯನ, ಯಾನ, ಧನ, ರತ್ನ, ಮನೆಗಳು, ಬೆಳೆಸಿದ ಬೆಳೆಗಳು, ಗೋವುಗಳು, ಹೊಲಗಳು ಮತ್ತು ಕನ್ಯೆಯರನ್ನು ದಾನಮಾಡುವ ಮಾನವನು ಮರಣಾನಂತರ ದೇವಲೋಕದಲ್ಲಿ ಹುಟ್ಟುತ್ತಾನೆ.

13133006a ತತ್ರೋಷ್ಯ ಸುಚಿರಂ ಕಾಲಂ ಭುಕ್ತ್ವಾ ಭೋಗಾನನುತ್ತಮಾನ್|

13133006c ಸಹಾಪ್ಸರೋಭಿರ್ಮುದಿತೋ ರಮಿತ್ವಾ ನಂದನಾದಿಷು||

ಅಲ್ಲಿ ಅವನು ಬಹುಕಾಲ ವಾಸವಾಗಿದ್ದು ಅನುತ್ತಮ ಭೋಗಗಳನ್ನು ಭೋಗಿಸಿ ಅಪ್ಸರೆಯರೊಡನೆ ನಂದನಾದಿ ವನಗಳಲ್ಲಿ ಸಂತೋಷದಿಂದ ರಮಿಸುತ್ತಾನೆ.

13133007a ತಸ್ಮಾತ್ಸ್ವರ್ಗಾಚ್ಚ್ಯುತೋ ಲೋಕಾನ್ಮಾನುಷೇಷೂಪಜಾಯತೇ|

13133007c ಮಹಾಭೋಗೇ ಕುಲೇ ದೇವಿ ಧನಧಾನ್ಯಸಮಾಚಿತೇ||

ದೇವಿ! ಸ್ವರ್ಗದಿಂದ ಚ್ಯುತನಾದ ನಂತರವೂ ಅವನು ಮನುಷ್ಯಲೋಕದಲ್ಲಿ ಧನಧಾನ್ಯಸಂಪನ್ನ ಸಮಸ್ತಭೋಗಗಳಿರುವ ಕುಲದಲ್ಲಿ ಹುಟ್ಟುತ್ತಾನೆ.

13133008a ತತ್ರ ಕಾಮಗುಣೈಃ ಸರ್ವೈಃ ಸಮುಪೇತೋ ಮುದಾ ಯುತಃ|

13133008c ಮಹಾಭೋಗೋ ಮಹಾಕೋಶೋ ಧನೀ ಭವತಿ ಮಾನವಃ||

ಆ ಮಾನವನು ಅಲ್ಲಿ ಸರ್ವ ಕಾಮಗುಣ ಸಮೋಪೇತನಾಗಿ ಮುದಾಯುತನಾಗಿ ಮಹಾಧನಿಕನೂ ಮಹಾಭೋಗಿಯೂ ಆಗುತ್ತಾನೆ.

13133009a ಏತೇ ದೇವಿ ಮಹಾಭೋಗಾಃ ಪ್ರಾಣಿನೋ ದಾನಶೀಲಿನಃ|

13133009c ಬ್ರಹ್ಮಣಾ ವೈ ಪುರಾ ಪ್ರೋಕ್ತಾಃ ಸರ್ವಸ್ಯ ಪ್ರಿಯದರ್ಶನಾಃ||

ದೇವಿ! ಹೀಗೆ ದಾನಶೀಲ ಪ್ರಾಣಿಗಳು ಮಹಾಭೋಗಯುಕ್ತರಾಗುತ್ತಾರೆ ಮತ್ತು ಸರ್ವರಿಗೂ ಪ್ರಿಯದರ್ಶನರಾಗುತ್ತಾರೆ ಎಂದು ಬ್ರಹ್ಮನೇ ಹಿಂದೆ ಹೇಳಿದ್ದಾನೆ.

13133010a ಅಪರೇ ಮಾನವಾ ದೇವಿ ಪ್ರದಾನಕೃಪಣಾ ದ್ವಿಜೈಃ|

13133010c ಯಾಚಿತಾ ನ ಪ್ರಯಚ್ಚಂತಿ ವಿದ್ಯಮಾನೇಽಪ್ಯಬುದ್ಧಯಃ||

ದೇವಿ! ದಾನಮಾಡುವುದರಲ್ಲಿ ಕೃಪಣರಾದ ಕೆಲವು ಅಲ್ಪಬುದ್ಧಿ ಮಾನವರು ದ್ವಿಜರು ಕೇಳಿದರೆ ತಮ್ಮಲ್ಲಿದ್ದರೂ ಕೊಡುವುದಿಲ್ಲ.

13133011a ದೀನಾಂಧಕೃಪಣಾನ್ ದೃಷ್ಟ್ವಾ ಭಿಕ್ಷುಕಾನತಿಥೀನಪಿ|

13133011c ಯಾಚ್ಯಮಾನಾ ನಿವರ್ತಂತೇ ಜಿಹ್ವಾಲೋಭಸಮನ್ವಿತಾಃ||

ನಾಲಿಗೆಯ ಚಪಲವುಳ್ಳ ಅವರು ದೀನ-ಅಂಧ-ಕೃಪಣರು ಮತ್ತು ಭಿಕ್ಷುಕ-ಅತಿಥಿಗಳು ಬೇಡುವುದನ್ನು ನೋಡಿಯೂ ದೂರಹೋಗುತ್ತಾರೆ.

13133012a ನ ಧನಾನಿ ನ ವಾಸಾಂಸಿ ನ ಭೋಗಾನ್ನ ಚ ಕಾಂಚನಮ್|

13133012c ನ ಗಾವೋ ನಾನ್ನವಿಕೃತಿಂ ಪ್ರಯಚ್ಚಂತಿ ಕದಾ ಚನ||

ಅಂಥವರು ಎಂದೂ ಧನಗಳನ್ನು, ವಸ್ತ್ರಗಳನ್ನು, ಭೋಗಗಳನ್ನು, ಚಿನ್ನವನ್ನು, ಗೋವುಗಳನ್ನು ಮತ್ತು ಖಾದ್ಯಪದಾರ್ಥಗಳನ್ನು ಇತರರಿಗೆ ನೀಡುವುದಿಲ್ಲ.

13133013a ಅಪ್ರವೃತ್ತಾಸ್ತು ಯೇ ಲುಬ್ಧಾ ನಾಸ್ತಿಕಾ ದಾನವರ್ಜಿತಾಃ|

13133013c ಏವಂಭೂತಾ ನರಾ ದೇವಿ ನಿರಯಂ ಯಾಂತ್ಯಬುದ್ಧಯಃ||

ದೇವಿ! ಹೀಗೆ ಸತ್ಕರ್ಮಗಳ ಪ್ರವೃತ್ತಿಯೇ ಇಲ್ಲದ ಲುಬ್ಧ ನಾಸ್ತಿಕ ದಾನವರ್ಜಿತ ಮೂಢ ನರರು ನರಕವನ್ನು ಹೊಂದುತ್ತಾರೆ.

13133014a ತೇ ಚೇನ್ಮನುಷ್ಯತಾಂ ಯಾಂತಿ ಯದಾ ಕಾಲಸ್ಯ ಪರ್ಯಯಾತ್|

13133014c ಧನರಿಕ್ತೇ ಕುಲೇ ಜನ್ಮ ಲಭಂತೇ ಸ್ವಲ್ಪಬುದ್ಧಯಃ||

ಕಾಲದ ಪರಿವರ್ತನೆಯಾಗಿ ಆ ಅಲ್ಪಬುದ್ಧಿಗಳು ಮನುಷ್ಯತ್ವವನ್ನು ಪಡೆದುಕೊಂಡರೂ ದರಿದ್ರರ ಕುಲದಲ್ಲಿ ದರಿದ್ರರಾಗಿಯೇ ಹುಟ್ಟುತ್ತಾರೆ.

13133015a ಕ್ಷುತ್ಪಿಪಾಸಾಪರೀತಾಶ್ಚ ಸರ್ವಭೋಗಬಹಿಷ್ಕೃತಾಃ[1]|

13133015c ನಿರಾಶಾಃ ಸರ್ವಭೋಗೇಭ್ಯೋ ಜೀವಂತ್ಯಧಮಜೀವಿಕಾಮ್||

ಅಂಥವರು ಹಸಿವು ಬಾಯಾರಿಕೆಗಳಿಂದ ಬಳಲಿದವರಾಗಿ, ಸರ್ವಭೋಗಗಳಿಂದಲೂ ಬಹಿಷ್ಕೃತರಾಗಿ, ಸರ್ವಭೋಗಗಳಿಂದಲೂ ನಿರಾಶರಾಗಿ ಅಧಮಬದುಕನ್ನು ಬದುಕುತ್ತಾರೆ.

13133016a ಅಲ್ಪಭೋಗಕುಲೇ ಜಾತಾ ಅಲ್ಪಭೋಗರತಾ ನರಾಃ|

13133016c ಅನೇನ ಕರ್ಮಣಾ ದೇವಿ ಭವಂತ್ಯಧನಿನೋ ನರಾಃ||

ದೇವಿ! ಇಂಥಹ ಕರ್ಮದಿಂದ ನರರು ಅಲ್ಪಭೋಗಕುಲದಲ್ಲಿ ಹುಟ್ಟಿ ಅಲ್ಪಭೋಗರತರಾಗಿ ನಿರ್ಧನರಾಗಿಯೇ ಜೀವಕಳೆಯುತ್ತಾರೆ.

13133017a ಅಪರೇ ಸ್ತಂಭಿನೋ ನಿತ್ಯಂ ಮಾನಿನಃ ಪಾಪತೋ ರತಾಃ|

13133017c ಆಸನಾರ್ಹಸ್ಯ ಯೇ ಪೀಠಂ ನ ಪ್ರಯಚ್ಚಂತ್ಯಚೇತಸಃ||

ಇನ್ನು ಕೆಲವರು ನಿತ್ಯವೂ ಗರ್ವಿಷ್ಠರೂ ದುರಭಿಮಾನಿಗಳೂ ಪಾಪನಿರತರೂ ಆಗಿರುತ್ತಾರೆ. ಆ ಮಂದಬುದ್ಧಿಯವರು ಅರ್ಹನಾದವನಿಗೆ ಆಸನವನ್ನೂ ನೀಡುವುದಿಲ್ಲ.

13133018a ಮಾರ್ಗಾರ್ಹಸ್ಯ ಚ ಯೇ ಮಾರ್ಗಂ ನ ಯಚ್ಚಂತ್ಯಲ್ಪಬುದ್ಧಯಃ|

13133018c ಪಾದ್ಯಾರ್ಹಸ್ಯ ಚ ಯೇ ಪಾದ್ಯಂ ನ ದದತ್ಯಲ್ಪಬುದ್ಧಯಃ||

ಈ ಅಲ್ಪಬುದ್ಧಿಗಳು ದಾರಿಬಿಟ್ಟುಕೊಡಲು ಯೋಗ್ಯರಾದವರಿಗೂ ದಾರಿಬಿಡುವುದಿಲ್ಲ. ಈ ಅಲ್ಪಬುದ್ಧಿಗಳು ಪಾದ್ಯಕ್ಕೆ[2] ಅರ್ಹರಾದವರಿಗೂ ಪಾದ್ಯವನ್ನು ನೀಡುವುದಿಲ್ಲ.

13133019a ಅರ್ಘಾರ್ಹಾನ್ನ ಚ ಸತ್ಕಾರೈರರ್ಚಯಂತಿ ಯಥಾವಿಧಿ|

13133019c ಅರ್ಘ್ಯಮಾಚಮನೀಯಂ ವಾ ನ ಯಚ್ಚಂತ್ಯಲ್ಪಬುದ್ಧಯಃ||

ಯಥಾವಿಧಿಯಾಗಿ ಅರ್ಘ್ಯ-ಆಚಮನೀಯಗಳಿಂದ ಸತ್ಕರಿಸಲು ಯೋಗ್ಯರಾದವರಿಗೂ ಆ ಅಲ್ಪಬುದ್ಧಿಗಳು ಅರ್ಘ್ಯ-ಆಚಮನೀಯಗಳನ್ನು ನೀಡುವುದಿಲ್ಲ.

13133020a ಗುರುಂ ಚಾಭಿಗತಂ ಪ್ರೇಮ್ಣಾ ಗುರುವನ್ನ ಬುಭೂಷತೇ|

13133020c ಅಭಿಮಾನಪ್ರವೃತ್ತೇನ ಲೋಭೇನ ಸಮವಸ್ಥಿತಾಃ||

ಅಭಿಮಾನಪ್ರವೃತ್ತಿಯಿಂದ ಲೋಭದಲ್ಲಿಯೇ ಇರುವ ಅವರು ಪ್ರೇಮದಿಂದ ಬಂದ ಗುರುವನ್ನೂ ಗುರುವಿನಂತೆ ಗೌರವಿಸುವುದಿಲ್ಲ.

13133021a ಸಂಮಾನ್ಯಾಂಶ್ಚಾವಮನ್ಯಂತೇ ವೃದ್ಧಾನ್ ಪರಿಭವಂತಿ ಚ|

13133021c ಏವಂವಿಧಾ ನರಾ ದೇವಿ ಸರ್ವೇ ನಿರಯಗಾಮಿನಃ||

ಸಮ್ಮಾನಕ್ಕೆ ಅರ್ಹರಾದ ವೃದ್ಧರನ್ನೂ ಅಪಮಾನಿಸುತ್ತಾರೆ ಮತ್ತು ಅನಾದರಿಸುತ್ತಾರೆ. ದೇವಿ! ಇಂಥಹ ನರರು ನರಕಗಾಮಿಗಳು.

13133022a ತೇ ವೈ ಯದಿ ನರಾಸ್ತಸ್ಮಾನ್ನಿರಯಾದುತ್ತರಂತಿ ವೈ|

13133022c ವರ್ಷಪೂಗೈಸ್ತತೋ ಜನ್ಮ ಲಭಂತೇ ಕುತ್ಸಿತೇ ಕುಲೇ||

ಹಲವಾರು ವರ್ಷಗಳ ನಂತರ ಅಂಥಹ ನರರು ಒಂದುವೇಳೆ ನರಕದಿಂದ ಮೇಲೆದ್ದರೂ ಕುತ್ಸಿತಕುಲದಲ್ಲಿ ಜನ್ಮತಾಳುತ್ತಾರೆ.

13133023a ಶ್ವಪಾಕಪುಲ್ಕಸಾದೀನಾಂ ಕುತ್ಸಿತಾನಾಮಚೇತಸಾಮ್|

13133023c ಕುಲೇಷು ತೇಷು ಜಾಯಂತೇ ಗುರುವೃದ್ಧಾಪಚಾಯಿನಃ||

ಗುರು-ವೃದ್ಧರಿಗೆ ಅಪಚಾರ ಮಾಡಿದ ಬುದ್ಧಿಹೀನರು ಚಾಂಡಾಲ-ಪುಲ್ಕಸಾದಿ ಕುಲದಲ್ಲಿ ಹುಟ್ಟುತ್ತಾರೆ.

13133024a ನ ಸ್ತಂಭೀ ನ ಚ ಮಾನೀ ಯೋ ದೇವತಾದ್ವಿಜಪೂಜಕಃ|

13133024c ಲೋಕಪೂಜ್ಯೋ ನಮಸ್ಕರ್ತಾ ಪ್ರಶ್ರಿತೋ ಮಧುರಂ ವದನ್||

13133025a ಸರ್ವವರ್ಣಪ್ರಿಯಕರಃ ಸರ್ವಭೂತಹಿತಃ ಸದಾ|

13133025c ಅದ್ವೇಷೀ ಸುಮುಖಃ ಶ್ಲಕ್ಷ್ಣಃ ಸ್ನಿಗ್ಧವಾಣೀಪ್ರದಃ ಸದಾ||

13133026a ಸ್ವಾಗತೇನೈವ ಸರ್ವೇಷಾಂ ಭೂತಾನಾಮವಿಹಿಂಸಕಃ|

13133026c ಯಥಾರ್ಹಸತ್ಕ್ರಿಯಾಪೂರ್ವಮರ್ಚಯನ್ನುಪತಿಷ್ಠತಿ||

13133027a ಮಾರ್ಗಾರ್ಹಾಯ ದದನ್ಮಾರ್ಗಂ ಗುರುಂ ಗುರುವದರ್ಚಯನ್|

13133027c ಅತಿಥಿಪ್ರಗ್ರಹರತಸ್ತಥಾಭ್ಯಾಗತಪೂಜಕಃ||

13133028a ಏವಂಭೂತೋ ನರೋ ದೇವಿ ಸ್ವರ್ಗತಿಂ ಪ್ರತಿಪದ್ಯತೇ|

13133028c ತತೋ ಮಾನುಷತಾಂ ಪ್ರಾಪ್ಯ ವಿಶಿಷ್ಟಕುಲಜೋ ಭವೇತ್||

ದೇವಿ! ಉದ್ಧಟನಲ್ಲದ, ದುರಭಿಮಾನಿಯಲ್ಲದ, ದೇವ-ದ್ವಿಜರನ್ನು ಪೂಜಿಸುವ, ಲೋಕಪೂಜ್ಯ, ನಮಸ್ಕರಿಸುವ, ವಿನಯಶೀಲ, ಮಧುರವಾಗಿ ಮಾತನಾಡುವ, ಸರ್ವವರ್ಣದವರಿಗೂ ಪ್ರಿಯವನ್ನುಂಟುಮಾಡುವ, ಸದಾ ಸರ್ವಭೂತಹಿತದಲ್ಲಿ ನಿರತನಾಗಿರುವ, ದ್ವೇಷವಿಲ್ಲದ, ಸುಮುಖ, ಸ್ನೇಹಮಯಿ, ಸದಾ ಪ್ರೀತಿಯಿಂದಲೇ ಮಾತನಾಡುವ, ಸರ್ವರನ್ನೂ ಸ್ವಾಗತಿಸುವ, ಪ್ರಾಣಿಗಳ ಅಹಿಂಸಕ, ಸತ್ಕಾರಕ್ಕೆ ಯೋಗರಾದವರನ್ನು ಮೊದಲು ನಿಂತುಕೊಂಡು ವಂದಿಸುವ, ಮಾರ್ಗಾರ್ಹರಿಗೆ ದಾರಿಬಿಟ್ಟುಕೊಡುವ, ಗುರುಗಳನ್ನು ಗುರುವಿನಂತೆ ಅರ್ಚಿಸುವ, ಮತ್ತು ಅತಿಥಿಗಳನ್ನು ಆಹ್ವಾನಿಸಿ ಸತ್ಕರಿಸುವ ನರನು ಉತ್ತಮ ಗತಿಯನ್ನು ಪಡೆಯುತ್ತಾನೆ. ಅನಂತರ ಮನುಷ್ಯತ್ವವನ್ನು ಪಡೆದು ವಿಶಿಷ್ಟಕುಲದಲ್ಲಿ ಹುಟ್ಟುತ್ತಾನೆ.

13133029a ತತ್ರಾಸೌ ವಿಪುಲೈರ್ಭೋಗೈಃ ಸರ್ವರತ್ನಸಮಾಯುತಃ|

13133029c ಯಥಾರ್ಹದಾತಾ ಚಾರ್ಹೇಷು ಧರ್ಮಚರ್ಯಾಪರೋ ಭವೇತ್||

ಆ ಜನ್ಮದಲ್ಲಿಯೂ ಕೂಡ ಅವನು ವಿಪುಲ ಭೋಗಗಳಿಂದಲೂ ಸರ್ವರತ್ನಗಳಿಂದಲೂ ಕೂಡಿದವನಾಗಿ ಅರ್ಹರಿಗೆ ಯಥಾರ್ಹವಾದ ದಾನಗಳನ್ನಿತ್ತು ಶ್ರೇಷ್ಠ ಧರ್ಮಚಾರಿಯಾಗುತ್ತಾನೆ.

13133030a ಸಂಮತಃ ಸರ್ವಭೂತಾನಾಂ ಸರ್ವಲೋಕನಮಸ್ಕೃತಃ|

13133030c ಸ್ವಕರ್ಮಫಲಮಾಪ್ನೋತಿ ಸ್ವಯಮೇವ ನರಃ ಸದಾ||

13133031a ಉದಾತ್ತಕುಲಜಾತೀಯ ಉದಾತ್ತಾಭಿಜನಃ ಸದಾ|

13133031c ಏಷ ಧರ್ಮೋ ಮಯಾ ಪ್ರೋಕ್ತೋ ವಿಧಾತ್ರಾ ಸ್ವಯಮೀರಿತಃ||

ಸರ್ವಭೂತಗಳಿಗೂ ಸಮ್ಮತನಾದ ಮತ್ತು ಸರ್ವಲೋಕ ನಮಸ್ಕೃತನಾದ ಆ ನರನು ಸ್ವಕರ್ಮಗಳ ಫಲವನ್ನು ಸದಾ ಸ್ವಯಂ ತಾನೇ ಅನುಭವಿಸುತ್ತಾನೆ. ಉದಾತ್ತ ಕುಲದಲ್ಲಿ ಹುಟ್ಟಿದ ಅವನು ಸದಾ ಉದಾತ್ತಜನರಿಂದ ಕೂಡಿರುತ್ತಾನೆ. ಸ್ವಯಂ ವಿಧಾತನು ಹೇಳಿದ ಈ ಧರ್ಮವನ್ನು ನಾನು ಹೇಳಿದ್ದೇನೆ.

13133032a ಯಸ್ತು ರೌದ್ರಸಮಾಚಾರಃ ಸರ್ವಸತ್ತ್ವಭಯಂಕರಃ|

13133032c ಹಸ್ತಾಭ್ಯಾಂ ಯದಿ ವಾ ಪದ್ಭ್ಯಾಂ ರಜ್ಜ್ವಾ ದಂಡೇನ ವಾ ಪುನಃ||

13133033a ಲೋಷ್ಟೈಃ ಸ್ತಂಭೈರುಪಾಯೈರ್ವಾ ಜಂತೂನ್ಭಾಧತಿ ಶೋಭನೇ|

13133033c ಹಿಂಸಾರ್ಥಂ ನಿಕೃತಿಪ್ರಜ್ಞಃ ಪ್ರೋದ್ವೇಜಯತಿ ಚೈವ ಹ||

13133034a ಉಪಕ್ರಾಮತಿ ಜಂತೂಂಶ್ಚ ಉದ್ವೇಗಜನನಃ ಸದಾ|

13133034c ಏವಂಶೀಲಸಮಾಚಾರೋ ನಿರಯಂ ಪ್ರತಿಪದ್ಯತೇ||

ಶೋಭನೇ! ಕೈಗಳಿಂದ ಹೊಡೆಯುತ್ತಾ, ಕಾಲಿನಿಂದ ಒದೆಯುತ್ತಾ, ಹಗ್ಗದಿಂದ ಬಿಗಿಯುತ್ತಾ, ದಂಡದಿಂದ ಹೊಡೆಯುತ್ತಾ, ಮತ್ತು ಕಲ್ಲಿನಿಂದ ಹೊಡೆಯುತ್ತಾ, ಕಂಬಕ್ಕೆಕಟ್ಟಿ ಹೊಡೆಯುತ್ತಾ ಅಥವಾ ಮಾರಕ ಆಯುಧಗಳನ್ನು ಪ್ರಹರಿಸುತ್ತಾ ಸರ್ವಸತ್ತ್ವಗಳಿಗೂ ಭಯಂಕರನಾಗಿ ಪ್ರಾಣಿಗಳನ್ನು ಬಾಧಿಸುತ್ತಾ ರೌದ್ರನಾಗಿ ನಡೆದುಕೊಳ್ಳವ ಮತ್ತು ಸದಾ ಜನರಲ್ಲಿ ಮತ್ತು ಇತರ ಪ್ರಾಣಿಗಳಲ್ಲಿ ಉದ್ವೇಗವನ್ನುಂಟುಮಾಡುವಂತೆ ನಡೆದುಕೊಳ್ಳುವವನು ನರಕವನ್ನು ಪಡೆಯುತ್ತಾನೆ.

13133035a ಸ ಚೇನ್ಮಾನುಷತಾಂ ಗಚ್ಚೇದ್ಯದಿ ಕಾಲಸ್ಯ ಪರ್ಯಯಾತ್|

13133035c ಬಹ್ವಾಬಾಧಪರಿಕ್ಲಿಷ್ಟೇ ಸೋಽಧಮೇ ಜಾಯತೇ ಕುಲೇ||

ಕಾಲಪರ್ಯಯದಿಂದ ಅವನೇನಾದರೂ ಮನುಷ್ಯತ್ವವನ್ನು ಪಡೆದುಕೊಂಡರೆ ಅನೇಕ ಬಾಧ-ಪರಿಕ್ಲಿಷ್ಟಗಳಿಂದ ತುಂಬಿದ ಅಧಮ ಕುಲದಲ್ಲಿಯೇ ಹುಟ್ಟುತ್ತಾನೆ.

13133036a ಲೋಕದ್ವೇಷ್ಯೋಽಧಮಃ ಪುಂಸಾಂ ಸ್ವಯಂ ಕರ್ಮಕೃತೈಃ ಫಲೈಃ|

13133036c ಏಷ ದೇವಿ ಮನುಷ್ಯೇಷು ಬೋದ್ಧವ್ಯೋ ಜ್ಞಾತಿಬಂಧುಷು||

ದೇವಿ! ಈ ಪುರುಷನು ತಾನೇ ಮಾಡಿದ ಕರ್ಮಗಳ ಫಲವಾಗಿ ಮನುಷ್ಯರಲ್ಲಿ ಮತ್ತು ತನ್ನ ಜ್ಞಾತಿಬಾಂಧವರಲ್ಲಿ ನೀಚನೆಂದು ಭಾವಿಸಲ್ಪಡುತ್ತಾನೆ. ಲೋಕದ್ವೇಷಿಯಾಗುತ್ತಾನೆ.

13133037a ಅಪರಃ ಸರ್ವಭೂತಾನಿ ದಯಾವಾನನುಪಶ್ಯತಿ|

13133037c ಮೈತ್ರದೃಷ್ಟಿಃ ಪಿತೃಸಮೋ ನಿರ್ವೈರೋ ನಿಯತೇಂದ್ರಿಯಃ||

ದಯಾವಂತನಾದ ಮತ್ತೊಬ್ಬನು ಸರ್ವಭೂತಗಳನ್ನು ಮೈತ್ರದೃಷ್ಟಿಯಿಂದ ನೋಡುತ್ತಾನೆ. ಪಿತೃಸಮನಾಗಿ ನಿರ್ವೈರ್ಯನಾಗಿಯೂ ನಿಯತೇಂದ್ರಿಯನಾಗಿಯೂ ಇರುತ್ತಾನೆ.

13133038a ನೋದ್ವೇಜಯತಿ ಭೂತಾನಿ ನ ವಿಹಿಂಸಯತೇ ತಥಾ|

13133038c ಹಸ್ತಪಾದೈಃ ಸುನಿಯತೈರ್ವಿಶ್ವಾಸ್ಯಃ ಸರ್ವಜಂತುಷು||

ಪ್ರಾಣಿಗಳ ಉದ್ವೇಗಕ್ಕೆ ಕಾರಣನಾಗಿರುವುದಿಲ್ಲ ಮತ್ತು ಹಿಂಸಿಸುವುದಿಲ್ಲ. ಕೈ-ಕಾಲುಗಳಿಂದ ಪ್ರಹರಿಸುವುದಿಲ್ಲ. ಸರ್ವಜಂತುಗಳ ವಿಶ್ವಾಸಪಾತ್ರನಾಗಿರುತ್ತಾನೆ.

13133039a ನ ರಜ್ಜ್ವಾ ನ ಚ ದಂಡೇನ ನ ಲೋಷ್ಟೈರ್ನಾಯುಧೇನ ಚ|

13133039c ಉದ್ವೇಜಯತಿ ಭೂತಾನಿ ಶ್ಲಕ್ಷ್ಣಕರ್ಮಾ ದಯಾಪರಃ||

ಆ ಕೋಮಲಕರ್ಮಿ ದಯಾಪರನು ಹಗ್ಗದಿಂದಾಗಲೀ, ದಂಡದಿಂದಾಗಲೀ, ಅಥವಾ ಕಲ್ಲು-ಆಯುಧಗಳಿಂದಾಗಲೀ ಜೀವಿಗಳನ್ನು ಉದ್ವೇಗಗೊಳಿಸುವುದಿಲ್ಲ.

13133040a ಏವಂಶೀಲಸಮಾಚಾರಃ ಸ್ವರ್ಗೇ ಸಮುಪಜಾಯತೇ|

13133040c ತತ್ರಾಸೌ ಭವನೇ ದಿವ್ಯೇ ಮುದಾ ವಸತಿ ದೇವವತ್||

ಇಂತಹ ಶೀಲಸದಾಚಾರಸಂಪನ್ನನು ಸ್ವರ್ಗವನ್ನು ಪಡೆಯುತ್ತಾನೆ. ಅಲ್ಲಿ ದಿವ್ಯ ಭವನದಲ್ಲಿ ದೇವತೆಯಂತೆ ಮುದದಿಂದ ವಾಸಿಸುತ್ತಾನೆ.

13133041a ಸ ಚೇತ್ಕರ್ಮಕ್ಷಯಾನ್ಮರ್ತ್ಯೋ ಮನುಷ್ಯೇಷೂಪಜಾಯತೇ|

13133041c ಅಲ್ಪಾಬಾಧೋ ನಿರೀತೀಕಃ ಸ ಜಾತಃ ಸುಖಮೇಧತೇ||

ತನ್ನ ಕರ್ಮದ ಫಲಗಳು ಕ್ಷಯವಾಗಿ ಮನುಷ್ಯನಾಗಿ ಮರ್ತ್ಯಲೋಕದಲ್ಲಿ ಹುಟ್ಟಬೇಕಾದರೂ ಸತ್ಕುಲದಲ್ಲಿಯೇ ಹುಟ್ಟುತ್ತಾನೆ. ಅಲ್ಪ ಬಾಧೆಗಳನ್ನು ಹೊಂದಿ ಸುಖವನ್ನೇ ಹೊಂದುತ್ತಾನೆ.

13133042a ಸುಖಭಾಗೀ ನಿರಾಯಾಸೋ ನಿರುದ್ವೇಗಃ ಸದಾ ನರಃ|

13133042c ಏಷ ದೇವಿ ಸತಾಂ ಮಾರ್ಗೋ ಬಾಧಾ ಯತ್ರ ನ ವಿದ್ಯತೇ||

ಅಂಥಹ ನರನು ಸದಾ ಸುಖಭಾಗಿಯಾಗಿಯೂ ನಿರಾಯಾಸನಾಗಿಯೂ ಮತ್ತು ನಿರುದ್ವೇಗಿಯಾಗಿಯೂ ಇರುತ್ತಾನೆ. ದೇವಿ! ಇದೇ ಬಾಧೆಗಳಿಲ್ಲದ ಸತ್ಪುರುಷರ ಮಾರ್ಗ.”

13133043 ಉಮೋವಾಚ|

13133043a ಇಮೇ ಮನುಷ್ಯಾ ದೃಶ್ಯಂತೇ ಊಹಾಪೋಹವಿಶಾರದಾಃ|

13133043c ಜ್ಞಾನವಿಜ್ಞಾನಸಂಪನ್ನಾಃ ಪ್ರಜ್ಞಾವಂತೋಽರ್ಥಕೋವಿದಾಃ|

13133043e ದುಷ್ಪ್ರಜ್ಞಾಶ್ಚಾಪರೇ ದೇವ ಜ್ಞಾನವಿಜ್ಞಾನವರ್ಜಿತಾಃ||

ಉಮೆಯು ಹೇಳಿದಳು: “ದೇವ! ಇಲ್ಲಿ ಊಹಾಪೋಹವಿಶಾರದರೂ, ಜ್ಞಾನವಿಜ್ಞಾನಸಂಪನ್ನರೂ, ಪ್ರಜ್ಞಾವಂತರೂ ಮತ್ತು ಅರ್ಥಕೋವಿದರೂ ಆದ ಮನುಷ್ಯರು ಕಾಣುತ್ತಾರೆ. ಇವರಲ್ಲದೇ ದುಷ್ಪ್ರಜ್ಞೆಯವರೂ, ಜ್ಞಾನವಿಜ್ಞಾನವರ್ಜಿತರೂ ಕಾಣುತ್ತಾರೆ.

13133044a ಕೇನ ಕರ್ಮವಿಪಾಕೇನ ಪ್ರಜ್ಞಾವಾನ್ ಪುರುಷೋ ಭವೇತ್|

13133044c ಅಲ್ಪಪ್ರಜ್ಞೋ ವಿರೂಪಾಕ್ಷ ಕಥಂ ಭವತಿ ಮಾನವಃ|

13133044e  ಏತಂ ಮೇ ಸಂಶಯಂ ಚಿಂದ್ಧಿ ಸರ್ವಧರ್ಮವಿದಾಂ ವರ||

ಸರ್ವಧರ್ಮವನ್ನು ತಿಳಿದವರಲ್ಲಿ ಶ್ರೇಷ್ಠ! ವಿರೂಪಾಕ್ಷ! ಯಾವ ಕರ್ಮವಿಪಾಕದಿಂದ ಪುರುಷನು ಪ್ರಜ್ಞವಾನನಾಗಬಹುದು? ಮಾನವನು ಹೇಗೆ ಅಲ್ಪಪ್ರಜ್ಞನಾಗುತ್ತಾನೆ? ನನ್ನ ಈ ಸಂಶಯವನ್ನು ಹೋಗಲಾಡಿಸು!

13133045a ಜಾತ್ಯಂಧಾಶ್ಚಾಪರೇ ದೇವ ರೋಗಾರ್ತಾಶ್ಚಾಪರೇ ತಥಾ|

13133045c ನರಾಃ ಕ್ಲೀಬಾಶ್ಚ ದೃಶ್ಯಂತೇ ಕಾರಣಂ ಬ್ರೂಹಿ ತತ್ರ ವೈ||

ದೇವ! ಕೆಲವರು ಅಂಧರಾಗಿಯೇ ಹುಟ್ಟುತ್ತಾರೆ. ಇನ್ನು ಕೆಲವರು ರೋಗಾರ್ತರಾಗಿರುತ್ತಾರೆ. ನಪುಂಸಕ ನರರೂ ಕಾಣುತ್ತಾರೆ. ಇವುಗಳ ಕಾರಣವೇನೆಂದು ಹೇಳು.”

13133046 ಮಹೇಶ್ವರ ಉವಾಚ|

13133046a ಬ್ರಾಹ್ಮಣಾನ್ವೇದವಿದುಷಃ ಸಿದ್ಧಾನ್ ಧರ್ಮವಿದಸ್ತಥಾ|

13133046c ಪರಿಪೃಚ್ಚಂತ್ಯಹರಹಃ ಕುಶಲಾಕುಶಲಂ ತಥಾ||

13133047a ವರ್ಜಯಂತ್ಯಶುಭಂ ಕರ್ಮ ಸೇವಮಾನಾಃ ಶುಭಂ ತಥಾ|

13133047c ಲಭಂತೇ ಸ್ವರ್ಗತಿಂ ನಿತ್ಯಮಿಹ ಲೋಕೇ ಸುಖಂ ತಥಾ||

ಮಹೇಶ್ವರನು ಹೇಳಿದನು: “ವೇದವಿದುಷ ಬ್ರಾಹ್ಮಣರ ಮತ್ತು ಧರ್ಮವಿದು ಸಿದ್ಧರ ಕುಶಲಾಕುಶಲಗಳನ್ನು ದಿನವೂ ವಿಚಾರಿಸುವವರು, ಮತ್ತು ಅಶುಭಕರ್ಮಗಳನ್ನು ವರ್ಜಿಸಿ ಶುಭಕರ್ಮಗಳನ್ನೇ ಮಾಡುವವರು ಇಹದಲ್ಲಿ ಸುಖವನ್ನೂ ಪರದಲ್ಲಿ ಸ್ವರ್ಗವನ್ನೂ ಪಡೆಯುತ್ತಾರೆ.

13133048a ಸ ಚೇನ್ಮಾನುಷತಾಂ ಯಾತಿ ಮೇಧಾವೀ ತತ್ರ ಜಾಯತೇ|

13133048c ಶ್ರುತಂ ಪ್ರಜ್ಞಾನುಗಂ ಚಾಸ್ಯ ಕಲ್ಯಾಣಮುಪಜಾಯತೇ||

ಅವರೇನಾದರೂ ಮನುಷ್ಯತ್ವವನ್ನು ಪಡೆದುಕೊಂಡರೆ ಅಲ್ಲಿ ಅವರು ಮೇಧಾವಿಗಳಾಗಿ ಹುಟ್ಟುತ್ತಾರೆ. ವಿದ್ಯೆಯು ಅವರ ಬುದ್ಧಿಯನ್ನು ಅನುಸರಿಸುತ್ತದೆ ಮತ್ತು ಅವರಿಗೆ ಕಲ್ಯಾಣವುಂಟಾಗುತ್ತದೆ.

13133049a ಪರದಾರೇಷು ಯೇ ಮೂಢಾಶ್ಚಕ್ಷುರ್ದುಷ್ಟಂ ಪ್ರಯುಂಜತೇ|

13133049c ತೇನ ದುಷ್ಟಸ್ವಭಾವೇನ ಜಾತ್ಯಂಧಾಸ್ತೇ ಭವಂತಿ ಹ||

ಪರಪತ್ನಿಯರನ್ನು ದುಷ್ಟಭಾವದಿಂದ ನೋಡುವ ಮೂಢರು ಅವರ ದುಷ್ಟಸ್ವಭಾವಗಿಂದಾಗಿ ಅಂಧರಾಗಿ ಹುಟ್ಟುತ್ತಾರೆ.

13133050a ಮನಸಾ ತು ಪ್ರದುಷ್ಟೇನ ನಗ್ನಾಂ ಪಶ್ಯಂತಿ ಯೇ ಸ್ತ್ರಿಯಮ್|

13133050c ರೋಗಾರ್ತಾಸ್ತೇ ಭವಂತೀಹ ನರಾ ದುಷ್ಕೃತಕರ್ಮಿಣಃ||

ದುಷ್ಟ ಮನಸ್ಸಿನಿಂದ ನಗ್ನ ಸ್ತ್ರೀಯನ್ನು ನೋಡುವ ದುಷ್ಕೃತಕರ್ಮೀ ನರರು ರೋಗಾರ್ತರಾಗುತ್ತಾರೆ.

13133051a ಯೇ ತು ಮೂಢಾ ದುರಾಚಾರಾ ವಿಯೋನೌ ಮೈಥುನೇ ರತಾಃ|

13133051c ಪುರುಷೇಷು ಸುದುಷ್ಪ್ರಜ್ಞಾಃ ಕ್ಲೀಬತ್ವಮುಪಯಾಂತಿ ತೇ||

ಪಶುಯೋನಿಗಳೊಂದಿಗೆ ಮೈಥುನಮಾಡುವ ಅತ್ಯಂತ ದುರ್ಬುದ್ಧಿಯ ಮೂಢ ಪುರುಷರು ನಪುಂಸಕತ್ವವನ್ನು ಪಡೆಯುತ್ತಾರೆ.

13133052a ಪಶೂಂಶ್ಚ ಯೇ ಬಂಧಯಂತಿ[3] ಯೇ ಚೈವ ಗುರುತಲ್ಪಗಾಃ|

13133052c ಪ್ರಕೀರ್ಣಮೈಥುನಾ ಯೇ ಚ ಕ್ಲೀಬಾ ಜಾಯಂತಿ ತೇ ನರಾಃ||

ಪಶುಗಳನ್ನು ಕಟ್ಟಿಹಾಕುವ, ಗುರುಪತ್ನಿಯೊಡನೆ ಮಲಗುವ ಮತ್ತು ಸಂಕರಸ್ತ್ರೀಯೊಂದಿಗೆ ಕೂಡುವ ನರರು ನಪುಂಸಕರಾಗಿ ಹುಟ್ಟುತ್ತಾರೆ.”

13133053 ಉಮೋವಾಚ|

13133053a ಸಾವದ್ಯಂ ಕಿಂ ನು ವೈ ಕರ್ಮ ನಿರವದ್ಯಂ ತಥೈವ ಚ|

13133053c ಶ್ರೇಯಃ ಕುರ್ವನ್ನವಾಪ್ನೋತಿ ಮಾನವೋ ದೇವಸತ್ತಮ||

ಉಮೆಯು ಹೇಳಿದಳು: “ದೇವಸತ್ತಮ! ದೋಷಯುಕ್ತವಾದ ಕರ್ಮವು ಯಾವುದು ಮತ್ತು ದೋಷರಹಿತ ಕರ್ಮವು ಯಾವುದು? ಏನನ್ನು ಮಾಡಿದರೆ ಮಾನವರು ಶ್ರೇಯಸ್ಸನ್ನು ಹೊಂದುತ್ತಾರೆ?”

13133054 ಮಹೇಶ್ವರ ಉವಾಚ|

13133054a ಶ್ರೇಯಾಂಸಂ ಮಾರ್ಗಮಾತಿಷ್ಠನ್ಸದಾ[4] ಯಃ ಪೃಚ್ಚತೇ ದ್ವಿಜಾನ್|

13133054c ಧರ್ಮಾನ್ವೇಷೀ ಗುಣಾಕಾಂಕ್ಷೀ ಸ ಸ್ವರ್ಗಂ ಸಮುಪಾಶ್ನುತೇ||

ಮಹೇಶ್ವರನು ಹೇಳಿದನು: “ಶ್ರೇಯಸ್ಕರ ಮಾರ್ಗದಲ್ಲಿದ್ದುಕೊಂಡು ಸದಾ ಈ ವಿಷಯದಲ್ಲಿ ದ್ವಿಜರನ್ನು ಪ್ರಶ್ನಿಸುತ್ತಾ ಧರ್ಮಾನ್ವೇಷಿಯಾಗಿರುವ ಮತ್ತು ಗುಣಾಕಾಂಕ್ಷಿಯಾಗಿರುವವನು ಸ್ವರ್ಗವನ್ನು ಪಡೆಯುತ್ತಾನೆ.

13133055a ಯದಿ ಮಾನುಷತಾಂ ದೇವಿ ಕದಾ ಚಿತ್ಸ ನಿಗಚ್ಚತಿ|

13133055c ಮೇಧಾವೀ ಧಾರಣಾಯುಕ್ತಃ ಪ್ರಾಜ್ಞಸ್ತತ್ರಾಭಿಜಾಯತೇ[5]||

ದೇವಿ! ಯಾವಾಗಲಾದರೂ ಅವನು ಮನುಷ್ಯತ್ವವನ್ನು ಪಡೆದುಕೊಂಡರೆ ಮೇಧಾವಿಯಾಗಿಯೂ, ಧಾರಣಾಶಕ್ತಿ ಸಂಪನ್ನನಾಗಿಯೂ ಮತ್ತು ಪ್ರಾಜ್ಞನಾಗಿಯೂ ಹುಟ್ಟುತ್ತಾನೆ.

13133056a ಏಷ ದೇವಿ ಸತಾಂ ಧರ್ಮೋ ಮಂತವ್ಯೋ ಭೂತಿಕಾರಕಃ|

13133056c ನೃಣಾಂ ಹಿತಾರ್ಥಾಯ ತವ ಮಯಾ ವೈ ಸಮುದಾಹೃತಃ||

ದೇವಿ! ಇದು ಸತ್ಪುರುಷರ ಧರ್ಮವು. ಇದನ್ನು ಅಭ್ಯುದಯಕಾರಕವೆಂದು ತಿಳಿಯಬೇಕು. ಮನುಷ್ಯರ ಹಿತಾರ್ಥವಾಗಿ ನಾನು ನಿನಗೆ ಇದನ್ನು ವರ್ಣಿಸಿದ್ದೇನೆ.”

13133057 ಉಮೋವಾಚ|

13133057a ಅಪರೇ ಸ್ವಲ್ಪವಿಜ್ಞಾನಾ ಧರ್ಮವಿದ್ವೇಷಿಣೋ ನರಾಃ|

13133057c ಬ್ರಾಹ್ಮಣಾನ್ವೇದವಿದುಷೋ ನೇಚ್ಚಂತಿ ಪರಿಸರ್ಪಿತುಮ್||

ಉಮೆಯು ಹೇಳಿದಳು: “ಸ್ವಲ್ಪವನ್ನೇ ತಿಳಿದಿರುವ ಧರ್ಮದ್ವೇಷೀ ಇತರ ನರರು ವೇದವಿದ ಬ್ರಾಹ್ಮಣರ ಬಳಿ ಹೋಗಲು ಇಚ್ಛಿಸುವುದಿಲ್ಲ.

13133058a ವ್ರತವಂತೋ ನರಾಃ ಕೇ ಚಿಚ್ಚ್ರದ್ಧಾದಮಪರಾಯಣಾಃ|

13133058c ಅವ್ರತಾ ಭ್ರಷ್ಟನಿಯಮಾಸ್ತಥಾನ್ಯೇ ರಾಕ್ಷಸೋಪಮಾಃ||

ಕೆಲವು ನರರು ವ್ರತವಂತರಾಗಿಯೂ ಶ್ರದ್ಧ-ದಮ ಪರಾಯಣರಾಗಿಯೂ ಇರುತ್ತಾರೆ. ಅನ್ಯರು ಅವ್ರತರಾಗಿ ನಿಯಮಭ್ರಷ್ಟರಾಗಿ ರಾಕ್ಷಸರಂತಿರುತ್ತಾರೆ.

13133059a ಯಜ್ವಾನಶ್ಚ ತಥೈವಾನ್ಯೇ ನಿರ್ಹೋಮಾಶ್ಚ ತಥಾಪರೇ|

13133059c ಕೇನ ಕರ್ಮವಿಪಾಕೇನ ಭವಂತೀಹ ವದಸ್ವ ಮೇ||

ಅನ್ಯರು ಯಜ್ಞಶೀಲರಾಗಿರುತ್ತಾರೆ. ಇನ್ನು ಕೆಲವರು ನಿರ್ಹೋಮರಾಗಿರುತ್ತಾರೆ. ಯಾವ ಕರ್ಮವಿಪಾಕದಿಂದ ಹೀಗಾಗುತ್ತಾರೆನ್ನುವುದನ್ನು ನನಗೆ ಹೇಳು.”

13133060 ಮಹೇಶ್ವರ ಉವಾಚ|

13133060a ಆಗಮಾಲ್ಲೋಕಧರ್ಮಾಣಾಂ ಮರ್ಯಾದಾಃ ಪೂರ್ವನಿರ್ಮಿತಾಃ|

13133060c ಪ್ರಾಮಾಣ್ಯೇನಾನುವರ್ತಂತೇ ದೃಶ್ಯಂತೇ ಹಿ ದೃಢವ್ರತಾಃ||

ಮಹೇಶ್ವರನು ಹೇಳಿದನು: “ಆಗಮಗಳು ಲೋಕಧರ್ಮಗಳ ಮರ್ಯಾದೆಗಳನ್ನು ಮೊದಲೇ ನಿರ್ಮಿಸಿವೆ. ಆಗಮಗಳ ಪ್ರಮಾಣಗಳನ್ನೇ ಅನುಸರಿಸುವವರು ದೃಢವ್ರತರೆಂದು ತೋರುತ್ತದೆ.

13133061a ಅಧರ್ಮಂ ಧರ್ಮಮಿತ್ಯಾಹುರ್ಯೇ ಚ ಮೋಹವಶಂ ಗತಾಃ|

13133061c ಅವ್ರತಾ ನಷ್ಟಮರ್ಯಾದಾಸ್ತೇ ಪ್ರೋಕ್ತಾ ಬ್ರಹ್ಮರಾಕ್ಷಸಾಃ||

ಮೋಹವಶರಾಗಿ ಅಧರ್ಮವನ್ನೇ ಧರ್ಮವೆಂದು ಹೇಳುವ ಮರ್ಯಾದೆಗಳನ್ನು ಕಳೆದುಕೊಂಡ ಅವ್ರತರನ್ನು ಬ್ರಹ್ಮರಾಕ್ಷಸರೆಂದು ಹೇಳುತ್ತಾರೆ.

13133062a ತೇ ಚೇತ್ಕಾಲಕೃತೋದ್ಯೋಗಾತ್ಸಂಭವಂತೀಹ ಮಾನುಷಾಃ|

13133062c ನಿರ್ಹೋಮಾ ನಿರ್ವಷಟ್ಕಾರಾಸ್ತೇ ಭವಂತಿ ನರಾಧಮಾಃ||

ಕಾಲವಶಾತ್ ಅವರೇನಾದರೂ ಮಾನವರಾಗಿ ಹುಟ್ಟಿದರೆ ಅವರು ನಿರ್ಹೋಮರಾಗಿಯೂ, ನಿರ್ವಷಟ್ಕಾರರಾಗಿಯೂ ಮತ್ತು ನರಾಧಮರೂ ಆಗುತ್ತಾರೆ.

13133063a ಏಷ ದೇವಿ ಮಯಾ ಸರ್ವಃ ಸಂಶಯಚ್ಚೇದನಾಯ ತೇ|

13133063c ಕುಶಲಾಕುಶಲೋ ನೄಣಾಂ ವ್ಯಾಖ್ಯಾತೋ ಧರ್ಮಸಾಗರಃ||

ದೇವಿ! ಸರ್ವ ಸಂಶಯಗಳನ್ನೂ ಹೋಗಲಾಡಿಸುವ, ಮನುಷ್ಯರಿಗೆ ಕುಶಲ-ಅಕುಶಲವಾದವುಗಳನ್ನು ಹೇಳುವ ಈ ಧರ್ಮಸಾಗರವೆಲ್ಲವನ್ನೂ ಹೇಳಿದ್ದೇನೆ.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಉಮಾಮಹೇಶ್ವರಸಂವಾದೇ ತ್ರಿಸ್ತ್ರಿಂಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಉಮಾಮಹೇಶ್ವರಸಂವಾದ ಎನ್ನುವ ನೂರಾಮೂವತ್ಮೂರನೇ ಅಧ್ಯಾಯವು.

[1] ಸರ್ವಲೋಕಬಹಿಷ್ಕೃತಾಃ| (ಭಾರತ ದರ್ಶನ).

[2] ಕಾಲು ತೊಳೆಯುವುದು ಅಥವಾ ಕಾಲು ತೊಳೆಯಲು ನೀರನ್ನು ನೀಡುವುದು.

[3] ಘಾತಯಂತಿ (ಭಾರತ ದರ್ಶನ).

[4] ಮಾರ್ಗಮನ್ವಿಚ್ಛನ್ಸದಾ (ಭಾರತ ದರ್ಶನ).

[5] ಪ್ರಾಯಸ್ತತ್ರಾಭಿಜಾಯತೇ| (ಭಾರತ ದರ್ಶನ).

Comments are closed.