Anushasana Parva: Chapter 101

ಅನುಶಾಸನ ಪರ್ವ: ದಾನಧರ್ಮ ಪರ್ವ

೧೦೧

ದೀಪಾದಿದಾನ

ತಪಸ್ವೀ ಸುವರ್ಣ ಮತ್ತು ಮನುವಿನ ಸಂವಾದ: ಪುಷ್ಪ, ಧೂಪ, ದೀಪ ಮತ್ತು ಉಪಹಾರಗಳ ದಾನದ ಮಹಿಮೆ (೧-೬೫).

13101001 ಯುಧಿಷ್ಠಿರ ಉವಾಚ|

13101001a ಆಲೋಕದಾನಂ ನಾಮೈತತ್ಕೀದೃಶಂ ಭರತರ್ಷಭ|

13101001c ಕಥಮೇತತ್ಸಮುತ್ಪನ್ನಂ ಫಲಂ ಚಾತ್ರ ಬ್ರವೀಹಿ ಮೇ||

ಯುಧಿಷ್ಠಿರನು ಹೇಳಿದನು: “ಭರತರ್ಷಭ! ದೀಪದಾನವೆಂಬ ಹೆಸರಿನ ದಾನವು ಯಾವುದು? ಅದು ಹೇಗೆ ಹುಟ್ಟಿಕೊಂಡಿತು ಮತ್ತು ಅದರ ಫಲಗಳೇನು? ಇದರ ಕುರಿತು ನನಗೆ ಹೇಳು.”

13101002 ಭೀಷ್ಮ ಉವಾಚ|

13101002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

13101002c ಮನೋಃ ಪ್ರಜಾಪತೇರ್ವಾದಂ ಸುವರ್ಣಸ್ಯ ಚ ಭಾರತ||

ಭೀಷ್ಮನು ಹೇಳಿದನು: “ಭಾರತ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಪ್ರಜಾಪತಿ ಮನು ಮತ್ತು ಸುವರ್ಣರ ಸಂವಾದವನ್ನು ಉದಾಹರಿಸುತ್ತಾರೆ.

13101003a ತಪಸ್ವೀ ಕಶ್ಚಿದಭವತ್ಸುವರ್ಣೋ ನಾಮ ನಾಮತಃ|

13101003c ವರ್ಣತೋ ಹೇಮವರ್ಣಃ ಸ ಸುವರ್ಣ ಇತಿ ಪಪ್ರಥೇ||

ಸುವರ್ಣ ಎಂಬ ಹೆಸರಿನ ತಪಸ್ವಿಯೋರ್ವನಿದ್ದನು. ಅವನ ಮೈಬಣ್ಣವು ಹೇಮವರ್ಣದ್ದಾಗಿತ್ತು. ಅದರಿಂದಾಗಿ ಅವನು ಸುವರ್ಣನೆಂದೇ ಪ್ರಥಿತನಾಗಿದ್ದನು.

13101004a ಕುಲಶೀಲಗುಣೋಪೇತಃ ಸ್ವಾಧ್ಯಾಯೇ ಚ ಪರಂ ಗತಃ|

13101004c ಬಹೂನ್ ಸ್ವವಂಶಪ್ರಭವಾನ್ಸಮತೀತಃ ಸ್ವಕೈರ್ಗುಣೈಃ||

ಉತ್ತಮ ಕುಲ ಮತ್ತು ಶೀಲಗಳಿಂದ ಕೂಡಿದ್ದ ಅವನು ಸ್ವಾಧ್ಯಾಯದಲ್ಲಿ ಪರಮರತನಾಗಿದ್ದನು. ತನ್ನದೇ ಗುಣಗಳಿಂದ ಅವನು ತನ್ನ ವಂಶದಲ್ಲಿ ಹುಟ್ಟಿದ್ದ ಅನೇಕರನ್ನು ಮೀರಿದ್ದನು.

13101005a ಸ ಕದಾ ಚಿನ್ಮನುಂ ವಿಪ್ರೋ ದದರ್ಶೋಪಸಸರ್ಪ ಚ|

13101005c ಕುಶಲಪ್ರಶ್ನಮನ್ಯೋನ್ಯಂ ತೌ ಚ ತತ್ರ ಪ್ರಚಕ್ರತುಃ||

ಒಮ್ಮೆ ಆ ವಿಪ್ರನು ತಿರುಗಾಡುತ್ತಿದ್ದ ಮನುವನ್ನು ನೋಡಿದನು. ಅನ್ಯೋನ್ಯರ ಕುಶಲ ಪ್ರಶ್ನೆಗಳನ್ನು ಕೇಳಿ ಇಬ್ಬರೂ ಒಂದಾಗಿ ಮುಂದುವರೆದರು.

13101006a ತತಸ್ತೌ ಸಿದ್ಧಸಂಕಲ್ಪೌ ಮೇರೌ ಕಾಂಚನಪರ್ವತೇ|

13101006c ರಮಣೀಯೇ ಶಿಲಾಪೃಷ್ಠೇ ಸಹಿತೌ ಸಂನ್ಯಷೀದತಾಮ್||

ಸಿದ್ಧಸಂಕಲ್ಪರಾದ ಇಬ್ಬರೂ ಕಾಂಚನ ಪರ್ವತ ಮೇರುವಿನ ರಮಣೀಯ ಶಿಲೆಯ ಮೇಲೆ ಕುಳಿತುಕೊಂಡರು.

13101007a ತತ್ರ ತೌ ಕಥಯಾಮಾಸ್ತಾಂ ಕಥಾ ನಾನಾವಿಧಾಶ್ರಯಾಃ|

13101007c ಬ್ರಹ್ಮರ್ಷಿದೇವದೈತ್ಯಾನಾಂ ಪುರಾಣಾನಾಂ ಮಹಾತ್ಮನಾಮ್||

ಅಲ್ಲಿ ಅವರಿಬ್ಬರೂ ನಾನಾ ವಿಷಯಗಳ ಕುರಿತು – ಬ್ರಹ್ಮರ್ಷಿಗಳು, ದೇವ-ದೈತ್ಯರು ಮತ್ತು ಮಹಾತ್ಮರ ಪುರಾಣಗಳ ಕುರಿತು – ಮಾತನಾಡತೊಡಗಿದರು.

13101008a ಸುವರ್ಣಸ್ತ್ವಬ್ರವೀದ್ವಾಕ್ಯಂ ಮನುಂ ಸ್ವಾಯಂಭುವಂ ಪ್ರಭುಮ್|

13101008c ಹಿತಾರ್ಥಂ ಸರ್ವಭೂತಾನಾಂ ಪ್ರಶ್ನಂ ಮೇ ವಕ್ತುಮರ್ಹಸಿ||

ಸುವರ್ಣನು ಪ್ರಭು ಸ್ವಾಯಂಬುವ ಮನುವಿಗೆ ಈ ಮಾತನ್ನಾಡಿದನು: “ಸರ್ವಭೂತಗಳ ಹಿತಾರ್ಥವಾಗಿ ನನ್ನ ಈ ಪ್ರಶ್ನೆಗೆ ಉತ್ತರಿಸಬೇಕು.

13101009a ಸುಮನೋಭಿರ್ಯದಿಜ್ಯಂತೇ ದೈವತಾನಿ ಪ್ರಜೇಶ್ವರ|

13101009c ಕಿಮೇತತ್ಕಥಮುತ್ಪನ್ನಂ ಫಲಯೋಗಂ ಚ ಶಂಸ ಮೇ||

ಪ್ರಜೇಶ್ವರ! ದೇವತೆಗಳಿಗೆ ಸುಂದರವಾದ ಅನೇಕ ವಸ್ತುಗಳನ್ನು ನೀಡುತ್ತೇವೆ. ಅದು ಹೇಗೆ ಹುಟ್ಟಿಕೊಂಡಿತು ಮತ್ತು ಅದರ ಫಲವಾದರೂ ಏನು? ಇದರ ಕುರಿತು ಉಪದೇಶಿಸು.”

13101010 ಮನುರುವಾಚ|

13101010a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

13101010c ಶುಕ್ರಸ್ಯ ಚ ಬಲೇಶ್ಚೈವ ಸಂವಾದಂ ವೈ ಸಮಾಗಮೇ||

ಮನುವು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಶುಕ್ರ ಮತ್ತು ಬಲಿ ಇವರ ಸಮಾಗಮದಲ್ಲಿ ನಡೆದ ಸಂವಾದವನ್ನು ಉದಾಹರಿಸುತ್ತಾರೆ.

13101011a ಬಲೇರ್ವೈರೋಚನಸ್ಯೇಹ ತ್ರೈಲೋಕ್ಯಮನುಶಾಸತಃ|

13101011c ಸಮೀಪಮಾಜಗಾಮಾಶು ಶುಕ್ರೋ ಭೃಗುಕುಲೋದ್ವಹಃ||

ಮೂರುಲೋಕಗಳನ್ನೂ ಆಳುತ್ತಿದ್ದ ವಿರೋಚನಪುತ್ರ ಬಲಿಯ ಸಮೀಪ ಭೃಗುಕುಲೋದ್ವಹ ಶುಕ್ರನು ಆಗಮಿಸಿದನು.

13101012a ತಮರ್ಘ್ಯಾದಿಭಿರಭ್ಯರ್ಚ್ಯ ಭಾರ್ಗವಂ ಸೋಽಸುರಾಧಿಪಃ|

13101012c ನಿಷಸಾದಾಸನೇ ಪಶ್ಚಾದ್ವಿಧಿವದ್ಭೂರಿದಕ್ಷಿಣಃ||

ಅಸುರಾಧಿಪನು ಭಾರ್ಗವನನ್ನು ಅರ್ಘ್ಯಾದಿಗಳಿಂದ ಅರ್ಚಿಸಿ ಆಸನದಲ್ಲಿ ಕುಳ್ಳಿರಿಸಿ ನಂತರ ವಿಧಿವತ್ತಾಗಿ ಭೂರಿದಕ್ಷಿಣೆಗಳನ್ನಿತ್ತನು.

13101013a ಕಥೇಯಮಭವತ್ತತ್ರ ಯಾ ತ್ವಯಾ ಪರಿಕೀರ್ತಿತಾ|

13101013c ಸುಮನೋಧೂಪದೀಪಾನಾಂ ಸಂಪ್ರದಾನೇ ಫಲಂ ಪ್ರತಿ||

ಅಲ್ಲಿ ಅವರಿಬ್ಬರೂ ನೀನು ಕೇಳಿದ ಸುಮನೋಹರ ಧೂಪ-ದೀಪಗಳ ದಾನಗಳ ಫಲದ ಕುರಿತು ಮಾತನಾಡಿದರು.

13101014a ತತಃ ಪಪ್ರಚ್ಚ ದೈತ್ಯೇಂದ್ರಃ ಕವೀಂದ್ರಂ ಪ್ರಶ್ನಮುತ್ತಮಮ್|

13101014c ಸುಮನೋಧೂಪದೀಪಾನಾಂ ಕಿಂ ಫಲಂ ಬ್ರಹ್ಮವಿತ್ತಮ|

13101014e ಪ್ರದಾನಸ್ಯ ದ್ವಿಜಶ್ರೇಷ್ಠ ತದ್ಭವಾನ್ವಕ್ತುಮರ್ಹತಿ||

ಆಗ ದೈತ್ಯೇಂದ್ರನು ಕವೀಂದ್ರನಿಗೆ ಈ ಉತ್ತಮ ಪ್ರಶ್ನೆಯನ್ನು ಕೇಳಿದನು: “ಬ್ರಹ್ಮವಿತ್ತಮ! ದ್ವಿಜಶ್ರೇಷ್ಠ! ಸುಮನೋಹರ ಧೂಪ-ದೀಪದಾನಗಳ ಫಲವೇನು? ಇದರ ಕುರಿತು ನೀನು ಹೇಳಬೇಕು.”

13101015 ಶುಕ್ರ ಉವಾಚ|

13101015a ತಪಃ ಪೂರ್ವಂ ಸಮುತ್ಪನ್ನಂ ಧರ್ಮಸ್ತಸ್ಮಾದನಂತರಮ್|

13101015c ಏತಸ್ಮಿನ್ನಂತರೇ ಚೈವ ವೀರುದೋಷಧ್ಯ ಏವ ಚ||

ಶುಕ್ರನು ಹೇಳಿದನು: “ಮೊದಲು ತಪಸ್ಸು ಹುಟ್ಟಿಕೊಂಡಿತು. ಅದರ ನಂತರ ಧರ್ಮವು ಹುಟ್ಟಿಕೊಂಡಿತು. ಈ ಮಧ್ಯದಲ್ಲಿ ಬಳ್ಳಿಗಳು ಮತ್ತು ಔಷಧಗಳು ಹುಟ್ಟಿಕೊಂಡವು.

13101016a ಸೋಮಸ್ಯಾತ್ಮಾ ಚ ಬಹುಧಾ ಸಂಭೂತಃ ಪೃಥಿವೀತಲೇ|

13101016c ಅಮೃತಂ ಚ ವಿಷಂ ಚೈವ ಯಾಶ್ಚಾನ್ಯಾಸ್ತುಲ್ಯಜಾತಯಃ||

ಸೋಮರಸವನ್ನು ಹೊಂದಿದ್ದ ಅನೇಕ ರೀತಿಯ ಸಸ್ಯಗಳು ಭೂಮಿಯಮೇಲೆ ಹುಟ್ಟಿಕೊಂಡವು. ಕೆಲವು ಅಮೃತದಂತಿದ್ದವು. ಕೆಲವು ವಿಷದಂತಿದ್ದವು. ಅನ್ಯ ಕೆಲವು ಎರಡರಂತೆಯೂ ಇರಲಿಲ್ಲ.

13101017a ಅಮೃತಂ ಮನಸಃ ಪ್ರೀತಿಂ ಸದ್ಯಃ ಪುಷ್ಟಿಂ ದದಾತಿ ಚ|

13101017c ಮನೋ ಗ್ಲಪಯತೇ ತೀವ್ರಂ ವಿಷಂ ಗಂಧೇನ ಸರ್ವಶಃ||

ಅಮೃತವು ತಕ್ಷಣವೇ ಮನಸ್ಸಿಗೆ ಪ್ರೀತಿ ಮತ್ತು ಪುಷ್ಟಿಯನ್ನು ಕೊಟ್ಟಿತು. ವಿಷದ ಗಂಧದಿಂದ ಮನಸ್ಸು ಎಲ್ಲ ರೀತಿಯಲ್ಲಿಯೂ ನರಳುತ್ತದೆ.

13101018a ಅಮೃತಂ ಮಂಗಲಂ ವಿದ್ಧಿ ಮಹದ್ವಿಷಮಮಂಗಲಮ್|

13101018c ಓಷಧ್ಯೋ ಹ್ಯಮೃತಂ ಸರ್ವಂ ವಿಷಂ ತೇಜೋಽಗ್ನಿಸಂಭವಮ್||

ಅಮೃತವು ಮಂಗಲವೆಂದೂ ವಿಷವು ಮಹಾ ಅಮಂಗಲವೆಂದೂ ತಿಳಿದುಕೋ. ಎಲ್ಲ ಓಷಧಿಗಳೂ ಅಮೃತವು. ವಿಷದಲ್ಲಿರುವ ತೇಜಸ್ಸು ಅಗ್ನಿಯಿಂದ ಹುಟ್ಟಿರುವುದು.

13101019a ಮನೋ ಹ್ಲಾದಯತೇ ಯಸ್ಮಾಚ್ಚ್ರಿಯಂ ಚಾಪಿ ದಧಾತಿ ಹ|

13101019c ತಸ್ಮಾತ್ಸುಮನಸಃ ಪ್ರೋಕ್ತಾ ನರೈಃ ಸುಕೃತಕರ್ಮಭಿಃ||

ಮನಸ್ಸಿಗೆ ಆಹ್ಲಾದವನ್ನುಂಟುಮಾಡುವುದೆಲ್ಲವೂ ಶ್ರೇಯಸ್ಕರವಾದುದು. ಈ ಕಾರಣದಿಂದಲೇ ಮನುಷ್ಯರು ಸುಕೃತಕರ್ಮಗಳನ್ನು ಮಾಡಿದವರನ್ನು ಸುಮನಸರು ಎಂದು ಕರೆಯುತ್ತಾರೆ.

13101020a ದೇವತಾಭ್ಯಃ ಸುಮನಸೋ ಯೋ ದದಾತಿ ನರಃ ಶುಚಿಃ|

13101020c ತಸ್ಮಾತ್ಸುಮನಸಃ ಪ್ರೋಕ್ತಾ ಯಸ್ಮಾತ್ತುಷ್ಯಂತಿ ದೇವತಾಃ||

ಶುಚಿಯಾದ ನರರು ದೇವತೆಗಳಿಗೆ ಸುಮನಸ ವಸ್ತುಗಳನ್ನು ನೀಡುತ್ತಾರೆ. ದೇವತೆಗಳನ್ನು ತೃಪ್ತಿಗೊಳಿಸುವವುಗಳನ್ನು ಸುಮನಸಗಳೆಂದು ಹೇಳುತ್ತಾರೆ.

13101021a ಯಂ ಯಮುದ್ದಿಶ್ಯ ದೀಯೇರನ್ದೇವಂ ಸುಮನಸಃ ಪ್ರಭೋ|

13101021c ಮಂಗಲಾರ್ಥಂ ಸ ತೇನಾಸ್ಯ ಪ್ರೀತೋ ಭವತಿ ದೈತ್ಯಪ||

ಪ್ರಭೋ! ದೈತ್ಯಪ! ಮಂಗಲ ಉದ್ದೇಶವನ್ನಿಟ್ಟುಕೊಂಡು ದೇವತೆಗಳಿಗೆ ಸುಮನಸ ವಸ್ತುಗಳನ್ನು ನೀಡುವವನ ಮೇಲೆ ದೇವತೆಗಳು ಪ್ರೀತರಾಗುತ್ತಾರೆ.

13101022a ಜ್ಞೇಯಾಸ್ತೂಗ್ರಾಶ್ಚ ಸೌಮ್ಯಾಶ್ಚ ತೇಜಸ್ವಿನ್ಯಶ್ಚ ತಾಃ ಪೃಥಕ್|

13101022c ಓಷಧ್ಯೋ ಬಹುವೀರ್ಯಾಶ್ಚ ಬಹುರೂಪಾಸ್ತಥೈವ ಚ||

ಓಷಧಿಗಳಲ್ಲಿ ಅನೇಕ ವೀರ್ಯಗಳಿವೆ ಮತ್ತು ಅವು ಅನೇಕ ರೂಪಗಳಲ್ಲಿವೆ. ಅವುಗಳಲ್ಲಿ ಉಗ್ರ, ಸೌಮ್ಯ ಮತ್ತು ತೇಜಸ್ವೀ ಎಂಬ ಬೇರೆ ಬೇರೆ ಪ್ರಕಾರಗಳಿವೆ.

13101023a ಯಜ್ಞಿಯಾನಾಂ ಚ ವೃಕ್ಷಾಣಾಮಯಜ್ಞಿಯಾನ್ನಿಬೋಧ ಮೇ|

13101023c ಆಸುರಾಣಿ ಚ ಮಾಲ್ಯಾನಿ ದೈವತೇಭ್ಯೋ ಹಿತಾನಿ ಚ||

ಯಜ್ಞಗಳಲ್ಲಿ ಉಪಯೋಗಿಸಬಹುದಾದ ಮತ್ತು ಉಪಯೋಗಿಸಬಾರದ ವೃಕ್ಷಗಳಿವೆ. ಅವುಗಳ ಕುರಿತು ನನ್ನನ್ನು ಕೇಳು. ಅಸುರರಿಗೆ ಮತ್ತು ದೇವತೆಗಳಿಗೆ ಹಿತವಾಗುವ ಮಾಲೆಗಳಿವೆ.

13101024a ರಾಕ್ಷಸಾನಾಂ ಸುರಾಣಾಂ ಚ ಯಕ್ಷಾಣಾಂ ಚ ತಥಾ ಪ್ರಿಯಾಃ|

13101024c ಪಿತೄಣಾಂ ಮಾನುಷಾಣಾಂ ಚ ಕಾಂತಾ ಯಾಸ್ತ್ವನುಪೂರ್ವಶಃ||

ಅನುಕ್ರಮವಾಗಿ ರಾಕ್ಷಸರಿಗೆ, ಸುರರಿಗೆ, ಯಕ್ಷರಿಗೆ, ಪಿತೃಗಳಿಗೆ ಮತ್ತು ಮನುಷ್ಯರಿಗೆ ಪ್ರಿಯವಾದ ಮತ್ತು ಹಿತವಾದವುಗಳ ಕುರಿತು ಹೇಳುತ್ತೇನೆ.

13101025a ವನ್ಯಾ ಗ್ರಾಮ್ಯಾಶ್ಚೇಹ ತಥಾ ಕೃಷ್ಟೋಪ್ತಾಃ ಪರ್ವತಾಶ್ರಯಾಃ|

13101025c ಅಕಂಟಕಾಃ ಕಂಟಕಿನ್ಯೋ ಗಂಧರೂಪರಸಾನ್ವಿತಾಃ||

ಇವು[1] ವನ್ಯ[2], ಗ್ರಾಮ್ಯ[3], ಕೃಷಿಮಾಡಬೇಕಾದ[4], ಪರ್ವತಗಳಲ್ಲಿ ಬೆಳೆಯುವ[5], ಮುಳ್ಳಿಲ್ಲದ ಮತ್ತು ಮುಳ್ಳಿರುವ ಗಂಧ-ರೂಪ-ರಸವಿರುವವು[6],[7].

13101026a ದ್ವಿವಿಧೋ ಹಿ ಸ್ಮೃತೋ ಗಂಧ ಇಷ್ಟೋಽನಿಷ್ಟಶ್ಚ ಪುಷ್ಪಜಃ|

13101026c ಇಷ್ಟಗಂಧಾನಿ ದೇವಾನಾಂ ಪುಷ್ಪಾಣೀತಿ ವಿಭಾವಯೇತ್||

ಹೂವಿನ ವಾಸನೆಯಲ್ಲಿ ಎರಡು ವಿಧಗಳಿವೆ: ಇಷ್ಟವಾದವು ಮತ್ತು ಅನಿಷ್ಟವಾದವು. ಇಷ್ಟಗಂಧವಿರುವ ಹೂವುಗಳನ್ನು ದೇವತೆಗಳಿಗೆ ಅರ್ಪಿಸಬೇಕು.

13101027a ಅಕಂಟಕಾನಾಂ ವೃಕ್ಷಾಣಾಂ ಶ್ವೇತಪ್ರಾಯಾಶ್ಚ ವರ್ಣತಃ|

13101027c ತೇಷಾಂ ಪುಷ್ಪಾಣಿ ದೇವಾನಾಮಿಷ್ಟಾನಿ ಸತತಂ ಪ್ರಭೋ[8]||

ಪ್ರಭೋ! ದೇವತೆಗಳು ಸತತವೂ ಮುಳ್ಳಿರದ ಮರಗಳಲ್ಲಿ ಆಗುವ ಬಿಳೀ ಬಣ್ಣದ ಹೂವುಗಳನ್ನೇ ಇಷ್ಟಪಡುತ್ತಾರೆ.

13101028a ಜಲಜಾನಿ ಚ ಮಾಲ್ಯಾನಿ ಪದ್ಮಾದೀನಿ ಚ ಯಾನಿ ಚ|

13101028c ಗಂಧರ್ವನಾಗಯಕ್ಷೇಭ್ಯಸ್ತಾನಿ ದದ್ಯಾದ್ವಿಚಕ್ಷಣಃ||

ದಾನಗಳ ಕುರಿತು ಚೆನ್ನಾಗಿ ತಿಳಿದಿರುವವನು ನೀರಿನಲ್ಲಿ ಹುಟ್ಟುವ ಕಮಲ ಮುಂತಾದ ಹೂಗಳ ಮಾಲೆಗಳನ್ನು ಗಂಧರ್ವರಿಗೆ, ನಾಗಗಳಿಗೆ ಮತ್ತು ಯಕ್ಷರಿಗೆ ಅರ್ಪಿಸುತ್ತಾರೆ.

13101029a ಓಷಧ್ಯೋ ರಕ್ತಪುಷ್ಪಾಶ್ಚ ಕಟುಕಾಃ ಕಂಟಕಾನ್ವಿತಾಃ|

13101029c ಶತ್ರೂಣಾಮಭಿಚಾರಾರ್ಥಮಥರ್ವಸು ನಿದರ್ಶಿತಾಃ||

ಮುಳ್ಳಿರುವ ಮತ್ತು ಕಹಿಯಾಗಿರುವ ಕೆಂಪು ಬಣ್ಣದ ಹೂವುಗಳನ್ನು ಶತ್ರುಗಳಿಗೆ ಅನಿಷ್ಟವನ್ನುಂಟುಮಾಡಲು ಬಳಸಬೇಕು ಎಂದು ಅಥರ್ವ ವೇದದಲ್ಲಿ ಹೇಳಲಾಗಿದೆ[9].

13101030a ತೀಕ್ಷ್ಣವೀರ್ಯಾಸ್ತು ಭೂತಾನಾಂ ದುರಾಲಂಭಾಃ ಸಕಂಟಕಾಃ|

13101030c ರಕ್ತಭೂಯಿಷ್ಠವರ್ಣಾಶ್ಚ ಕೃಷ್ಣಾಶ್ಚೈವೋಪಹಾರಯೇತ್||

ಮುಟ್ಟಲೂ ಕಷ್ಟವಾಗುವಷ್ಟು ಅಧಿಕ ಮುಳ್ಳಿರುವ, ಬಣ್ಣವು ಹೆಚ್ಚಾಗಿ ಕೆಂಪು ಅಥವಾ ಕಪ್ಪಾಗಿರುವ ಮತ್ತು ಕಟುವಾದ ವಾಸನೆಯಿರುವ ಹೂವುಗಳನ್ನು ತೀಕ್ಷ್ಣ ವೀರ್ಯವಿರುವ ಭೂತ-ಪ್ರೇತಗಳಿಗೆ ಅರ್ಪಿಸಬೇಕು.

13101031a ಮನೋಹೃದಯನಂದಿನ್ಯೋ ವಿಮರ್ದೇ ಮಧುರಾಶ್ಚ ಯಾಃ|

13101031c ಚಾರುರೂಪಾಃ ಸುಮನಸೋ ಮಾನುಷಾಣಾಂ ಸ್ಮೃತಾ ವಿಭೋ||

ವಿಭೋ! ಮನಸ್ಸು-ಹೃದಯಗಳಿಗೆ ಆನಂದವನ್ನು ನೀಡುವ, ತಿಕ್ಕಿದರೆ ಸಿಹಿಯಾಗಿರುವ, ಸುಂದರವಾದ ಪುಷ್ಪಗಳನ್ನು ಮನುಷ್ಯರಿಗೆ ಅರ್ಪಿಸಬೇಕು.

13101032a ನ ತು ಶ್ಮಶಾನಸಂಭೂತಾ ನ ದೇವಾಯತನೋದ್ಭವಾಃ|

13101032c ಸಂನಯೇತ್ಪುಷ್ಟಿಯುಕ್ತೇಷು ವಿವಾಹೇಷು ರಹಃಸು ಚ||

ಶ್ಮಶಾನ ಮತ್ತು ದೇವಾಲಯಗಳಲ್ಲಿ[10] ಬೆಳೆದ ಹೂವುಗಳನ್ನು ಪುಷ್ಟಿಯುಕ್ತ ವಿವಾಹ ಮತ್ತು ಏಕಾಂತ ವಿಹಾರಗಳಲ್ಲಿ ಬಳಸಬಾರದು.

13101033a ಗಿರಿಸಾನುರುಹಾಃ ಸೌಮ್ಯಾ ದೇವಾನಾಮುಪಪಾದಯೇತ್|

13101033c ಪ್ರೋಕ್ಷಿತಾಭ್ಯುಕ್ಷಿತಾಃ ಸೌಮ್ಯಾ ಯಥಾಯೋಗಂ ಯಥಾಸ್ಮೃತಿ||

ಪರ್ವತಗಳ ಮೇಲೆ ಹುಟ್ಟಿದ ಸುಂದರ ಮತ್ತು ಸುಗಂಧಿತ ಪುಷ್ಪಗಳನ್ನು ತೊಳೆದು ಅಥವಾ ಪ್ರೋಕ್ಷಣೆ ಮಾಡಿ ಧರ್ಮಶಾಸ್ತ್ರಗಳಲ್ಲಿ ಹೇಳಿದಂತೆ ಯಥಾಯೋಗ್ಯವಾಗಿ ದೇವತೆಗಳಿಗೆ ಏರಿಸಬೇಕು.

13101034a ಗಂಧೇನ ದೇವಾಸ್ತುಷ್ಯಂತಿ ದರ್ಶನಾದ್ಯಕ್ಷರಾಕ್ಷಸಾಃ|

13101034c ನಾಗಾಃ ಸಮುಪಭೋಗೇನ ತ್ರಿಭಿರೇತೈಸ್ತು ಮಾನುಷಾಃ||

ದೇವತೆಗಳು ಹೂವಿನ ಗಂಧದಿಂದ, ಯಕ್ಷ-ರಾಕ್ಷಸರು ಅದನ್ನು ನೋಡುವುದರಿಂದ, ನಾಗಗಣಗಳು ಅದನ್ನು ಮುಟ್ಟುವುದರ ಮೂಲಕ ಮತ್ತು ಮನುಷ್ಯರು ಈ ಮೂರೂ (ಗಂಧ, ದರ್ಶನ ಮತ್ತು ಸ್ಪರ್ಶ) ವಿಧಗಳಲ್ಲಿ ಸಂತುಷ್ಟರಾಗುತ್ತಾರೆ.

13101035a ಸದ್ಯಃ ಪ್ರೀಣಾತಿ ದೇವಾನ್ವೈ ತೇ ಪ್ರೀತಾ ಭಾವಯಂತ್ಯುತ|

13101035c ಸಂಕಲ್ಪಸಿದ್ಧಾ ಮರ್ತ್ಯಾನಾಮೀಪ್ಸಿತೈಶ್ಚ ಮನೋರಥೈಃ||

ಪುಷ್ಪಗಳಿಂದ ದೇವತೆಗಳು ತತ್ಕ್ಷಣವೇ ಪ್ರೀತರಾಗುತ್ತಾರೆ ಮತ್ತು ಮನುಷ್ಯರ ಎಲ್ಲ ಸಂಕಲ್ಪಗಳನ್ನೂ ಮತ್ತು ಬಯಸಿದ ಮನೋರಥಗಳನ್ನು ಪೂರೈಸುತ್ತಾರೆ.

13101036a ದೇವಾಃ ಪ್ರೀಣಂತಿ ಸತತಂ ಮಾನಿತಾ ಮಾನಯಂತಿ ಚ|

13101036c ಅವಜ್ಞಾತಾವಧೂತಾಶ್ಚ ನಿರ್ದಹಂತ್ಯಧಮಾನ್ನರಾನ್||

ಪೂಜೆಯಿಂದ ದೇವತೆಗಳು ಸತತವೂ ಪ್ರೀತರಾಗುತ್ತಾರೆ ಮತ್ತು ಪೂಜಿಸಿದವರನ್ನು ಗೌರವಿಸುತ್ತಾರೆ. ತಮ್ಮನ್ನು ಅಲ್ಲಗಳೆದಾಗ ಅವರು ಆ ಅಧಮ ಮನುಷ್ಯರನ್ನು ನಾಶಗೊಳಿಸುತ್ತಾರೆ.

13101037a ಅತಊರ್ಧ್ವಂ ಪ್ರವಕ್ಷ್ಯಾಮಿ ಧೂಪದಾನವಿಧೌ ಫಲಮ್|

13101037c ಧೂಪಾಂಶ್ಚ ವಿವಿಧಾನ್ಸಾಧೂನಸಾಧೂಂಶ್ಚ ನಿಬೋಧ ಮೇ||

ಇನ್ನು ನಾನು ಧೂಪದಾನದ ವಿಧಿ ಮತ್ತು ಫಲವನ್ನು ಹೇಳುತ್ತೇನೆ. ಧೂಪಗಳಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎಂಬ ವಿಧಗಳಿವೆ. ನನ್ನನ್ನು ಕೇಳು.

13101038a ನಿರ್ಯಾಸಃ ಸರಲಶ್ಚೈವ[11] ಕೃತ್ರಿಮಶ್ಚೈವ ತೇ ತ್ರಯಃ|

13101038c ಇಷ್ಟಾನಿಷ್ಟೋ ಭವೇದ್ಗಂಧಸ್ತನ್ಮೇ ವಿಸ್ತರತಃ ಶೃಣು||

ಧೂಪಗಳಲ್ಲಿ ಮುಖ್ಯತಃ ಮೂರು ಭೇದಗಳಿವೆ: ನಿರ್ಯಾಸ[12], ಸರಲ[13] ಮತ್ತು ಕೃತ್ರಿಮ[14]. ಅವುಗಳ ವಾಸನೆಗಳಲ್ಲಿಯೂ ಇಷ್ಟವಾದುದು ಮತ್ತು ಅನಿಷ್ಟವಾದುದು ಎಂಬ ಎರಡು ಪ್ರಭೇದಗಳಿವೆ. ಇದನ್ನು ವಿಸ್ತಾರವಾಗಿ ಕೇಳು.

13101039a ನಿರ್ಯಾಸಾಃ ಸಲ್ಲಕೀವರ್ಜ್ಯಾ ದೇವಾನಾಂ ದಯಿತಾಸ್ತು ತೇ|

13101039c ಗುಗ್ಗುಲುಃ ಪ್ರವರಸ್ತೇಷಾಂ ಸರ್ವೇಷಾಮಿತಿ ನಿಶ್ಚಯಃ||

ಸಲ್ಲಕೀ[15] ಯನ್ನು ಬಿಟ್ಟು ಉಳಿದ ವೃಕ್ಷಗಳ ನಿರ್ಯಾಸಗಳು ದೇವತೆಗಳಿಗೆ ಪ್ರಿಯವಾಗಿರುತ್ತವೆ. ಈ ಎಲ್ಲ ನಿರ್ಯಾಸಗಳಲ್ಲಿಯೂ ಗುಗ್ಗುಲು[16] ಮರದ ನಿರ್ಯಾಸವು ಶ್ರೇಷ್ಠವಾದುದೆಂದು ನಿಶ್ಚಿತವಾಗಿದೆ.

13101040a ಅಗುರುಃ ಸಾರಿಣಾಂ ಶ್ರೇಷ್ಠೋ ಯಕ್ಷರಾಕ್ಷಸಭೋಗಿನಾಮ್|

13101040c ದೈತ್ಯಾನಾಂ ಸಲ್ಲಕೀಜಶ್ಚ ಕಾಂಕ್ಷಿತೋ ಯಶ್ಚ ತದ್ವಿಧಃ||

ಸಾರಿಣ ಧೂಪಗಳಲ್ಲಿ ಅಗುರು[17] ಶ್ರೇಷ್ಠವಾದುದು. ಇದು ಯಕ್ಷ-ರಾಕ್ಷಸ-ಉರಗಗಳಿಗೆ ಪ್ರಿಯವಾದುದು. ದೈತ್ಯರಿಗೆ ಸಲ್ಲಕೀ ಮರದ ಮತ್ತು ಅದೇ ಜಾತಿಯ ಮರಗಳ ಧೂಪವು ಪ್ರಿಯವಾಗಿರುತ್ತವೆ.

13101041a ಅಥ ಸರ್ಜರಸಾದೀನಾಂ ಗಂಧೈಃ ಪಾರ್ಥಿವದಾರವೈಃ|

13101041c ಫಾಣಿತಾಸವಸಂಯುಕ್ತೈರ್ಮನುಷ್ಯಾಣಾಂ ವಿಧೀಯತೇ||

ಸರ್ಜ[18]ದ ರಸ ಮತ್ತು ಅಂಥಹದೇ ಮರದ ರಸಗಳನ್ನು ಹುಳಿ ಕಬ್ಬಿನ ರಸದಲ್ಲಿ ಸೇರಿಸಿ ತಯಾರಿಸಿದ ಧೂಪವನ್ನು ಮನುಷ್ಯರಿಗೆಂದು ಹೇಳಿದ್ದಾರೆ[19].

13101042a ದೇವದಾನವಭೂತಾನಾಂ ಸದ್ಯಸ್ತುಷ್ಟಿಕರಃ ಸ್ಮೃತಃ|

13101042c ಯೇಽನ್ಯೇ ವೈಹಾರಿಕಾಸ್ತೇ ತು ಮಾನುಷಾಣಾಮಿತಿ ಸ್ಮೃತಾಃ||

ದೇವ-ದಾನವ-ಭೂತಗಳು ಧೂಪಗಳಿಂದ ತಕ್ಷಣವೇ ತೃಪ್ತಿಹೊಂದುತ್ತಾರೆಂದು ಹೇಳುತ್ತಾರೆ. ಇವಲ್ಲದೇ ಅನ್ಯ ಧೂಪಗಳು ಮನುಷ್ಯರ ಭೋಗ-ವಿಲಾಸಗಳ ಉಪಯೋಗಕ್ಕೆ ಬರುತ್ತವೆ ಎಂದು ಹೇಳುತ್ತಾರೆ.

13101043a ಯ ಏವೋಕ್ತಾಃ ಸುಮನಸಾಂ ಪ್ರದಾನೇ ಗುಣಹೇತವಃ|

13101043c ಧೂಪೇಷ್ವಪಿ ಪರಿಜ್ಞೇಯಾಸ್ತ ಏವ ಪ್ರೀತಿವರ್ಧನಾಃ||

ಪುಷ್ಪದಾನದಿಂದ ಯಾವ ಲಾಭಗಳಾಗುತ್ತದೆಯೆಂದು ಹೇಳಿದ್ದಾರೋ ಅವೇ ಧೂಪ ದಾನದಿಂದಲೂ ಪ್ರಾಪ್ತವಾಗುತ್ತವೆ ಎಂದು ತಿಳಿಯಬೇಕು. ಧೂಪಗಳೂ ದೇವತೆಗಳಲ್ಲಿ ಪ್ರಸನ್ನತೆಯನ್ನು ಹೆಚ್ಚಿಸುತ್ತವೆ.

13101044a ದೀಪದಾನೇ ಪ್ರವಕ್ಷ್ಯಾಮಿ ಫಲಯೋಗಮನುತ್ತಮಮ್|

13101044c ಯಥಾ ಯೇನ ಯದಾ ಚೈವ ಪ್ರದೇಯಾ ಯಾದೃಶಾಶ್ಚ ತೇ||

ಈಗ ನಾನು ದೀಪದಾನದ ಅನುತ್ತಮ ಫಲಯೋಗದ ಕುರಿತು ಮತ್ತು ಹೇಗೆ ಯಾರಿಗೆ  ಯಾವಾಗ ದೀಪದಾನ ಮಾಡಬೇಕು ಎನ್ನುವುದನ್ನು ಹೇಳುತ್ತೇನೆ.

13101045a ಜ್ಯೋತಿಸ್ತೇಜಃ ಪ್ರಕಾಶಶ್ಚಾಪ್ಯೂರ್ಧ್ವಗಂ ಚಾಪಿ ವರ್ಣ್ಯತೇ|

13101045c ಪ್ರದಾನಂ ತೇಜಸಾಂ ತಸ್ಮಾತ್ತೇಜೋ ವರ್ಧಯತೇ ನೃಣಾಮ್||

ದೀಪದ ಪ್ರಕಾಶವು ತೇಜಸ್ಸು ಮತ್ತು ಅದು ಊರ್ಧ್ವಗವೆಂದು ವರ್ಣಿಸಿದ್ದಾರೆ. ಆದುದರಿಂದ ದೀಪದಾನದಿಂದ ಮನುಷ್ಯರ ತೇಜಸ್ಸು ವರ್ಧಿಸುತ್ತದೆ.

13101046a ಅಂಧಂ ತಮಸ್ತಮಿಸ್ರಂ ಚ ದಕ್ಷಿಣಾಯನಮೇವ ಚ|

13101046c ಉತ್ತರಾಯಣಮೇತಸ್ಮಾಜ್ಜ್ಯೋತಿರ್ದಾನಂ ಪ್ರಶಸ್ಯತೇ||

ದಕ್ಷಿಣಾಯನವು ಅಂಧಕಾರದಿಂದ ಮಿಶ್ರಿತವಾಗಿದೆ. ಆದುದರಿಂದ ಉತ್ತರಾಯಣದಲ್ಲಿ[20] ಮಾಡುವ ದೀಪದಾನವು ಪ್ರಶಸ್ತವಾದುದು.

13101047a ಯಸ್ಮಾದೂರ್ಧ್ವಗಮೇತತ್ತು ತಮಸಶ್ಚೈವ ಭೇಷಜಮ್|

13101047c ತಸ್ಮಾದೂರ್ಧ್ವಗತೇರ್ದಾತಾ ಭವೇದಿತಿ ವಿನಿಶ್ಚಯಃ||

ಊರ್ಧ್ವಗತಿಯಲ್ಲಿರುವುದರಿಂದ ದೀಪವು ಅಂಧಕಾರಕ್ಕೆ ಔಷಧಿಯು. ಆದುದರಿಂದ ದೀಪದಾನಮಾಡಿದವನು ಊರ್ಧ್ವಗತಿಯಲ್ಲಿ ಹೋಗುತ್ತಾನೆ ಎಂಬ ನಿಶ್ಚಯವಿದೆ.

13101048a ದೇವಾಸ್ತೇಜಸ್ವಿನೋ ಯಸ್ಮಾತ್ ಪ್ರಭಾವಂತಃ ಪ್ರಕಾಶಕಾಃ|

13101048c ತಾಮಸಾ ರಾಕ್ಷಸಾಶ್ಚೇತಿ ತಸ್ಮಾದ್ದೀಪಃ ಪ್ರದೀಯತೇ||

ಬೆಳಕಿನಿಂದಲೇ ದೇವತೆಗಳು ತೇಜಸ್ಸು, ಪ್ರಭಾವ ಮತ್ತು ಪ್ರಕಾಶಗಳನ್ನು ಪಡೆದುಕೊಳ್ಳುತ್ತಾರೆ. ರಾಕ್ಷಸರು ಇವುಗಳನ್ನು ಅಂಧಕಾರದಿಂದ ಪಡೆದುಕೊಳ್ಳುತ್ತಾರೆ. ಆದುದರಿಂದ ದೀಪದಾನ ಮಾಡಬೇಕು[21].

13101049a ಆಲೋಕದಾನಾಚ್ಚಕ್ಷುಷ್ಮಾನ್ ಪ್ರಭಾಯುಕ್ತೋ ಭವೇನ್ನರಃ|

13101049c ತಾನ್ದತ್ತ್ವಾ ನೋಪಹಿಂಸೇತ ನ ಹರೇನ್ನೋಪನಾಶಯೇತ್[22]||

ದೀಪದಾನದಿಂದ ಮನುಷ್ಯನ ಕಣ್ಣುಗಳ ತೇಜಸ್ಸು ವೃದ್ಧಿಯಾಗುತ್ತದೆ ಮತ್ತು ಅವನು ಪ್ರಭಾಯುಕ್ತನಾಗುತ್ತಾನೆ. ದೀಪದಾನದ ನಂತರ ಆ ದೀಪವನ್ನು ಆರಿಸಬಾರದು, ಅಥವಾ ಎತ್ತಿ ಬೇರೆಕಡೆ ಇಡಬಾರದು ಅಥವಾ ನಾಶಗೊಳಿಸಬಾರದು.

13101050a ದೀಪಹರ್ತಾ ಭವೇದಂಧಸ್ತಮೋಗತಿರಸುಪ್ರಭಃ|

13101050c ದೀಪಪ್ರದಃ ಸ್ವರ್ಗಲೋಕೇ ದೀಪಮಾಲೀ ವಿರಾಜತೇ||

ದೀಪವನ್ನು ಕದ್ದವನು ಅಂಧನಾಗುತ್ತಾನೆ ಮತ್ತು ಮರಣಾನಂತರ ಅಂಧಕಾರಮಯ ನರಕದಲ್ಲಿ ಬೀಳುತ್ತಾನೆ. ದೀಪದಾನಮಾಡಿದವನು ಸ್ವರ್ಗಲೋಕದಲ್ಲಿ ದೀಪಮಾಲೆಯಂತೆ ವಿರಾಜಿಸುತ್ತಾನೆ.

13101051a ಹವಿಷಾ ಪ್ರಥಮಃ ಕಲ್ಪೋ ದ್ವಿತೀಯಸ್ತ್ವೌಷಧೀರಸೈಃ|

13101051c ವಸಾಮೇದೋಸ್ಥಿನಿರ್ಯಾಸೈರ್ನ ಕಾರ್ಯಃ ಪುಷ್ಟಿಮಿಚ್ಚತಾ||

ತುಪ್ಪದ ದೀಪವು ಪ್ರಥಮ ದರ್ಜೆಯ ದೀಪವೆನಿಸಿಕೊಂಡಿದೆ. ಔಷಧಿಗಳ ರಸ ಅರ್ಥಾತ್ ಎಳ್ಳು-ಸಾಸಿವೆ ಮೊದಲಾದವುಗಳ ಎಣ್ಣೆಯಿಂದ ಹೊತ್ತಿಸಿದ ದೀಪವು ಎರಡನೇ ದರ್ಜೆಯದು. ಪುಷ್ಟಿಯನ್ನು ಇಚ್ಛಿಸುವವನು ಕೊಬ್ಬು, ಮೇದ ಮತ್ತು ಎಲುಬುಗಳಿಂದ ತೆಗೆದ ಎಣ್ಣೆಯ ದೀಪಗಳನ್ನು ಕೊಡಬಾರದು.

13101052a ಗಿರಿಪ್ರಪಾತೇ ಗಹನೇ ಚೈತ್ಯಸ್ಥಾನೇ ಚತುಷ್ಪಥೇ|

[23]13101052c ದೀಪದಾತಾ ಭವೇನ್ನಿತ್ಯಂ ಯ ಇಚ್ಚೇದ್ಭೂತಿಮಾತ್ಮನಃ||

ತನ್ನ ಉನ್ನತಿಯನ್ನು ಇಚ್ಛಿಸುವವನು ನಿತ್ಯವೂ ಗಿರಿಪ್ರಪಾತಗಳಲ್ಲಿ, ನಿರ್ಜನ ಮಾರ್ಗಗಳಲ್ಲಿ, ದೇವಾಲಯಗಳಲ್ಲಿ ಮತ್ತು ಅಡ್ಡದಾರಿಗಳಲ್ಲಿ ದೀಪಗಳನ್ನು ಇಡಬೇಕು.

13101053a ಕುಲೋದ್ದ್ಯೋತೋ ವಿಶುದ್ಧಾತ್ಮಾ ಪ್ರಕಾಶತ್ವಂ ಚ ಗಚ್ಚತಿ|

13101053c ಜ್ಯೋತಿಷಾಂ ಚೈವ ಸಾಲೋಕ್ಯಂ ದೀಪದಾತಾ ನರಃ ಸದಾ||

ದೀಪದಾನ ಮಾಡಿದ ನರನು ಸದಾ ತನ್ನ ಕುಲವನ್ನು ಉದ್ಧರಿಸುವ ವಿಶುದ್ಧಾತ್ಮನಾಗಿ ಪ್ರಕಾಶತ್ವವನ್ನು ಪಡೆದುಕೊಳ್ಳುತ್ತಾನೆ. ಮರಣಾನಂತರ ಅವನು ನಕ್ಷತ್ರ ಲೋಕವನ್ನು ಹೊಂದುತ್ತಾನೆ.

13101054a ಬಲಿಕರ್ಮಸು ವಕ್ಷ್ಯಾಮಿ ಗುಣಾನ್ಕರ್ಮಫಲೋದಯಾನ್|

13101054c ದೇವಯಕ್ಷೋರಗನೃಣಾಂ ಭೂತಾನಾಮಥ ರಕ್ಷಸಾಮ್||

ಈಗ ನಾನು ದೇವ-ಯಕ್ಷ-ಉರಗ-ಮನುಷ್ಯರು ಮತ್ತು ರಾಕ್ಷಸ-ಭೂತಗಳಿಗೆ ಬಲಿನೀಡುವುದರ ಗುಣಗಳನ್ನೂ ಕರ್ಮಫಲಗಳನ್ನೂ ಹೇಳುತ್ತೇನೆ.

13101055a ಯೇಷಾಂ ನಾಗ್ರಭುಜೋ ವಿಪ್ರಾ ದೇವತಾತಿಥಿಬಾಲಕಾಃ|

13101055c ರಾಕ್ಷಸಾನೇವ ತಾನ್ವಿದ್ಧಿ ನಿರ್ವಷಟ್ಕಾರಮಂಗಲಾನ್[24]||

ಯಾರು ವಿಪ್ರರು, ದೇವತೆಗಳು, ಅತಿಥಿಗಳು ಮತ್ತು ಬಾಲಕರಿಗಿಂತಲೂ ಮೊದಲು ಊಟಮಾಡುತ್ತಾರೋ ಅವರು ವಷಟ್ಕಾರಗಳಿಲ್ಲದ ಅಮಂಗಲಕರ ರಾಕ್ಷಸರೆಂದೇ ತಿಳಿ.

13101056a ತಸ್ಮಾದಗ್ರಂ ಪ್ರಯಚ್ಚೇತ ದೇವೇಭ್ಯಃ ಪ್ರತಿಪೂಜಿತಮ್|

13101056c ಶಿರಸಾ ಪ್ರಣತಶ್ಚಾಪಿ ಹರೇದ್ಬಲಿಮತಂದ್ರಿತಃ||

ಆದುದರಿಂದ ಆಲಸ್ಯರಹಿತನಾಗಿ ಮತ್ತು ಶುದ್ಧಚಿತ್ತನಾಗಿ ಮೊದಲು ದೇವತೆಗಳನ್ನು ಪ್ರತಿಪೂಜಿಸಿ ಶಿರಸಾ ನಮಸ್ಕರಿಸಿ ಅವರಿಗೆ ಬಲಿಯನ್ನು ನೀಡಬೇಕು.

13101057a ಗೃಹ್ಯಾ ಹಿ ದೇವತಾ ನಿತ್ಯಮಾಶಂಸಂತಿ ಗೃಹಾತ್ಸದಾ|

13101057c ಬಾಹ್ಯಾಶ್ಚಾಗಂತವೋ ಯೇಽನ್ಯೇ ಯಕ್ಷರಾಕ್ಷಸಪನ್ನಗಾಃ||

13101058a ಇತೋ ದತ್ತೇನ ಜೀವಂತಿ ದೇವತಾಃ ಪಿತರಸ್ತಥಾ|

13101058c ತೇ ಪ್ರೀತಾಃ ಪ್ರೀಣಯಂತ್ಯೇತಾನಾಯುಷಾ ಯಶಸಾ ಧನೈಃ||

ದೇವತೆಗಳು ಬಲಿಯನ್ನು ಸ್ವೀಕರಿಸಿ ನಿತ್ಯವೂ ಗೃಹಸ್ಥನಿಗೆ ಆಶೀರ್ವದಿಸುತ್ತಾರೆ. ದೇವತೆಗಳು, ಪಿತೃಗಳು, ಯಕ್ಷ-ರಾಕ್ಷಸ-ಪನ್ನಗಗಳು ಮತ್ತು ಹೊರಗಿನಿಂದ ಬಂದ ಅತಿಥಿಗಳು ಗೃಹಸ್ಥನು ನೀಡಿದ ಅನ್ನದಿಂದಲೇ ಜೀವನವನ್ನು ನಡೆಸುತ್ತಾರೆ ಮತ್ತು ಪ್ರಸನ್ನರಾಗಿ ಅವನಿಗೆ ಆಯಸ್ಸು, ಯಶಸ್ಸು ಮತ್ತು ಧನವನ್ನಿತ್ತು ಸಂತುಷ್ಟಿಗೊಳಿಸುತ್ತಾರೆ.

13101059a ಬಲಯಃ ಸಹ ಪುಷ್ಪೈಸ್ತು ದೇವಾನಾಮುಪಹಾರಯೇತ್|

13101059c ದಧಿದ್ರಪ್ಸಯುತಾಃ ಪುಣ್ಯಾಃ ಸುಗಂಧಾಃ ಪ್ರಿಯದರ್ಶನಾಃ||

ದೇವತೆಗಳಿಗೆ ನೀಡುವ ಬಲಿಯು ಹಾಲು-ಮೊಸರಿನಿಂದ ಮಾಡಿದ್ದಾಗಿರಬೇಕು. ಪರಮ ಪವಿತ್ರವೂ, ಸುಗಂಧಿತವೂ, ನೋಡಲು ಸುಂದರವೂ ಮತ್ತು ಹೂಗಳಿಂದ ಸುಶೋಭಿತವೂ ಆಗಿರಬೇಕು.

13101060a ಕಾರ್ಯಾ ರುಧಿರಮಾಂಸಾಢ್ಯಾ ಬಲಯೋ ಯಕ್ಷರಕ್ಷಸಾಮ್|

13101060c ಸುರಾಸವಪುರಸ್ಕಾರಾ ಲಾಜೋಲ್ಲೇಪನಭೂಷಿತಾಃ||

ಯಕ್ಷ-ರಾಕ್ಷಸರಿಗೆ ನೀಡುವ ಬಲಿಯು ರಕ್ತ-ಮಾಂಸಗಳಿಂದ ಕೂಡಿದ್ದು, ಸುರೆ ಮತ್ತು ಆಸವಗಳನ್ನು ಸೇರಿಸಿ, ಅರಳಿನಿಂದ ವಿಭೂಷಿತವಾಗಿರಬೇಕು.

13101061a ನಾಗಾನಾಂ ದಯಿತಾ ನಿತ್ಯಂ ಪದ್ಮೋತ್ಪಲವಿಮಿಶ್ರಿತಾಃ|

13101061c ತಿಲಾನ್ಗುಡಸುಸಂಪನ್ನಾನ್ಭೂತಾನಾಮುಪಹಾರಯೇತ್||

ನಾಗಗಳಿಗೆ ನಿತ್ಯವೂ ಪದ್ಮಗಳಿಂದ ಮಿಶ್ರಿತ ಬಲಿಯು ಪ್ರಿಯವಾದುದು. ಭೂತಗಳಿಗೆ ಎಳ್ಳು ಮತ್ತು ಬೆಲ್ಲದಿಂದ ಮಿಶ್ರಿತವಾದ ಬಲಿಯನ್ನು ನೀಡಬೇಕು.

13101062a ಅಗ್ರದಾತಾಗ್ರಭೋಗೀ ಸ್ಯಾದ್ಬಲವರ್ಣಸಮನ್ವಿತಃ|

13101062c ತಸ್ಮಾದಗ್ರಂ ಪ್ರಯಚ್ಚೇತ ದೇವೇಭ್ಯಃ ಪ್ರತಿಪೂಜಿತಮ್||

ಮೊದಲು ದೇವತೆಗಳಿಗೆ ಕೊಟ್ಟು ನಂತರ ಉಣ್ಣುವವನು ಬಲ ಮತ್ತು ವರ್ಣಸಮನ್ವಿತನಾಗುತ್ತಾನೆ. ಆದುದರಿಂದ ಮೊದಲು ದೇವತೆಗಳನ್ನು ಪೂಜಿಸಿ ಅವರಿಗೆ ಬಲಿಯನ್ನು ನೀಡಬೇಕು.

13101063a ಜ್ವಲತ್ಯಹರಹೋ ವೇಶ್ಮ ಯಾಶ್ಚಾಸ್ಯ ಗೃಹದೇವತಾಃ|

13101063c ತಾಃ ಪೂಜ್ಯಾ ಭೂತಿಕಾಮೇನ ಪ್ರಸೃತಾಗ್ರಪ್ರದಾಯಿನಾ||

ಗೃಹದೇವತೆಗಳಿಂದಲೇ ಮನೆಯು ಪ್ರಕಾಶಮಾನವಾಗಿರುತ್ತದೆ. ಅಭಿವೃದ್ದಿಯನ್ನು ಬಯಸುವವನು ಮೊದಲು ಅವರನ್ನು ಪೂಜಿಸಿ ಅಗ್ರಬಲಿಯನ್ನು ಅವರಿಗೆ ನೀಡಬೇಕು.”

13101064a ಇತ್ಯೇತದಸುರೇಂದ್ರಾಯ ಕಾವ್ಯಃ ಪ್ರೋವಾಚ ಭಾರ್ಗವಃ|

13101064c ಸುವರ್ಣಾಯ ಮನುಃ ಪ್ರಾಹ ಸುವರ್ಣೋ ನಾರದಾಯ ಚ||

13101065a ನಾರದೋಽಪಿ ಮಯಿ ಪ್ರಾಹ ಗುಣಾನೇತಾನ್ಮಹಾದ್ಯುತೇ|

13101065c ತ್ವಮಪ್ಯೇತದ್ವಿದಿತ್ವೇಹ ಸರ್ವಮಾಚರ ಪುತ್ರಕ||

ಪುತ್ರಕ! ಮಹಾದ್ಯುತೇ! ಹೀಗೆ ಭಾರ್ಗವ ಕಾವ್ಯನು ಅಸುರೇಂದ್ರ ಬಲಿಗೆ ಹೇಳಿದನು. ಮನುವು ಇದನ್ನು ಸುವರ್ಣನಿಗೆ ಹೇಳಿದನು. ಸುವರ್ಣನು ನಾರದನಿಗೆ ಹೇಳಿದನು. ನಾರದನಾದರೋ ಈ ಫಲಗಳನ್ನು ನನಗೆ ಹೇಳಿದನು. ನೀನೂ ಕೂಡ ಹೀಗೆ ವಿಧಿವತ್ತಾಗಿ ಎಲ್ಲವನ್ನೂ ಆಚರಿಸು.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಸುವರ್ಣಮನುಸಂವಾದೋ ನಾಮ ಏಕಾಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಸುವರ್ಣಮನುಸಂವಾದ ಎನ್ನುವ ನೂರಾಒಂದನೇ ಅಧ್ಯಾಯವು.

[1] ಇಲ್ಲಿ ವಿವಿಧ ರೀತಿಯ ಪುಷ್ಪಗಳ ವರ್ಣನೆಯಿದೆ.

[2] ಕಾಡುಹೂವುಗಳು. ಇವು ರಾಕ್ಷಸರಿಗೆ ಪ್ರಿಯವಾದವುಗಳು.

[3] ಹಳ್ಳಿಗಳಲ್ಲಿ ತಾವಾಗಿಯೇ ಬೆಳೆಯುವ ಹೂವುಗಳು. ಇವು ಸುರರಿಗೆ ಪ್ರಿಯವಾದವುಗಳು.

[4] ಕೃಷಿಮಾಡಿ ಬೆಳೆಸಬೇಕಾದ ಹೂವುಗಳು ಯಕ್ಷರಿಗೆ ಪ್ರಿಯವಾದವುಗಳು.

[5] ಪರ್ವತಗಳಲ್ಲಿ ಬೆಳೆಯುವ ಹೂವುಗಳು ಪಿತೃಗಳಿಗೆ ಪ್ರಿಯವಾದವುಗಳು.

[6] ಈ ಹೂವುಗಳು ಮನುಷ್ಯರಿಗೆ ಪ್ರಿಯವಾದವುಗಳು.

[7] ಈ ಶ್ಲೋಕಕ್ಕೆ ಇನ್ನೊಂದು ಅನುವಾದವೂ ಇದೆ: ಹೂಬಿಡುವ ಅನೇಕ ವೃಕ್ಷಗಳು ಗ್ರಾಮಗಳಲ್ಲಿರುತ್ತವೆ ಮತ್ತು ವನಗಳಲ್ಲಿ ಇರುತ್ತವೆ. ಅನೇಕ ವೃಕ್ಷಗಳನ್ನು ಭೂಮಿಯನ್ನು ಊಳಿ ನೆಡುತ್ತಾರೆ. ಮತ್ತು ಅನೇಕ ಅನ್ಯ ವೃಕ್ಷಗಳು ಪರ್ವತಗಳಲ್ಲಿ ತಾವೇ ಹುಟ್ಟಿಕೊಳ್ಳುತ್ತವೆ. ಈ ವೃಕ್ಷಗಳಲ್ಲಿ ಕೆಲವೊಂದಕ್ಕೆ ಮುಳ್ಳುಗಳಿರುತ್ತವೆ ಮತ್ತು ಇನ್ನು ಕೆಲವೊಂದಕ್ಕೆ ಮುಳ್ಳುಗಳಿರುವುದಿಲ್ಲ. ಇವೆಲ್ಲವುಗಳಲ್ಲಿ ರೂಪ, ರಸ ಮತ್ತು ಗಂಧಗಳು ಇರುತ್ತವೆ. (ಗೀತಾ ಪ್ರೆಸ್).

[8] ದಕ್ಷಿಣಾತ್ಯ ಪಾಠದಲ್ಲಿ ಇದರ ನಂತರ ಈ ಒಂದು ಅಧಿಕ ಶ್ಲೋಕಾರ್ಧವಿದೆ: ಪದ್ಮಂ ಚ ತುಲಸೀ ಜಾತಿರಪಿ ಸರ್ವೇಷು ಪೂಜಿತಾ| ಅರ್ಥಾತ್: ಕಮಲ, ತುಲಸಿ ಮತ್ತು ಮಲ್ಲಿಗೆ – ಇವು ಎಲ್ಲ ಹೂವುಗಳಿಗಿಂತ ಅಧಿಕ ಪ್ರಶಸ್ತವಾಗಿವೆ. (ಗೀತಾ ಪ್ರೆಸ್)

[9] ಈ ಶ್ಲೋಕದ ಅನುವಾದವು ಬಿಬೇಕ್ ಡೆಬ್ರೋಯ್ ಅವರ ಆಂಗ್ಲಭಾಷೆಯ ಅನುವಾದದಲ್ಲಿ ಬಂದಿಲ್ಲ.

[10] ಜೀರ್ಣ-ಶೀರ್ಣವಾದ ದೇವಾಲಯಗಳಲ್ಲಿ (ಗೀತಾ ಪ್ರೆಸ್).

[11] ಸಾರಿಣಶ್ಚೈವ (ಗೀತಾ ಪ್ರೆಸ್/ಭಾರತ ದರ್ಶನ).

[12] ಮರದಿಂದ ಸೋರುವ ಹಾಲು ಹೆಪ್ಪುಗಟ್ಟಿದುದಕ್ಕೆ ನಿರ್ಯಾಸ ಎನ್ನುತ್ತಾರೆ. ಬಿಬೇಕ್ ದೆಬ್ರೋಯ್ ಇದನ್ನು extractions ಎಂದು ಅನುವಾದಿಸಿದ್ದಾರೆ.

[13] ಮರದ ತುಂಡನ್ನು ಸುಟ್ಟಾಗ ಬರುವ ಸುಗಂಧಯುಕ್ತ ಧೂಪಕ್ಕೆ ಸಾರಣ ಅಥವಾ ಸಾರಿ ಎನ್ನುತ್ತಾರೆ.

[14] ಪ್ರಾಕೃತಿಕವಾಗಿಲ್ಲದೇ ಇರುವ ಧೂಪ; ಕೃತ್ರಿಮವಾಗಿ ತಯಾರಿಸಿದ ಧೂಪ.

[15] ಆನೇಬೇಲ ಮರ (ಭಾರತ ದರ್ಶನ); Frankincense, Boswellia serrata (ವಿವೇಕ್ ದೆಬ್ರೋಯ್). https://en.wikipedia.org/wiki/Boswellia_serrata

[16] ಹಾಲುಮಡ್ಡಿ ಗಿಡ (ಭಾರತ ದರ್ಶನ); https://en.wikipedia.org/wiki/Commiphora_wightii

[17] https://www.wisdomlib.org/definition/aguru

[18] ಶಾಲ ವೃಕ್ಷ https://www.wisdomlib.org/definition/sarja

[19] ಈ ಶ್ಲೋಕಕ್ಕೆ ಈ ಒಂದು ಅನುವಾದವೂ ಇದೆ: ಕಾಕಂಬಿಯಿಂದಲೂ ಮತ್ತು ಆಸವದಿಂದಲೂ ಯುಕ್ತವಾದ ರಾಳವೇ ಮೊದಲಾದ ಸುಗಂಧಚೂರ್ಣಗಳಿಂದಲೂ, ಚಂದನಾದಿ ಕಾಷ್ಠಗಳ ಚೂರ್ಣಗಳಿಂದಲೂ ಮಾಡಲ್ಪಟ್ಟ ಧೂಪಕ್ಕೆ ಕೃತ್ರಿಮವೆನ್ನುತ್ತಾರೆ. ಅಂತಹ ಕೃತಕವಾದ ಧೂಪಗಳು (ಊದುಬತ್ತಿಗಳು) ಮನುಷ್ಯರಿಗೆ ಪ್ರಿಯವಾಗಿರುತ್ತವೆ (ಭಾರತ ದರ್ಶನ/ಗೀತಾ ಪ್ರೆಸ್).

[20] ದಕ್ಷಿಣಾಯನದಲ್ಲಿ ಮೃತರಾದವರನ್ನು ಉದ್ಧರಿಸಲು (ಬಿಬೇಕ್ ದೆಬ್ರೋಯ್).

[21] ಈ ಶ್ಲೋಕಕ್ಕೆ ಇನ್ನೊಂದು ಅರ್ಥಬರುವ ಅನುವಾದವೂ ಇದೆ: ದೇವತೆಗಳು ತಸ್ವಿಗಳಾಗಿರುವುದರಿಂದ ಪ್ರಭಾವಂತರೂ ಪ್ರಕಾಶಕರೂ ಆಗಿರುತ್ತಾರೆ. ರಾಕ್ಷಸರು ಅಂಧಕಾರಪ್ರಿಯರಾಗಿರುತ್ತಾರೆ. ಆದುದರಿಂದ ದೇವತೆಗಳನ್ನು ಪ್ರಸನ್ನಗೊಳಿಸಲು ದೀಪದಾನವನ್ನು ಮಾಡಬೇಕು. (ಗೀತಾ ಪ್ರೆಸ್).

[22] Such a donor should not be injured and the lamp must not be stolen or destroyed. (ಬಿಬೇಕ್ ದೆಬ್ರೋಯ್)

[23] ಇದಕ್ಕೆ ಮೊದಲು ದಕ್ಷಿಣಾತ್ಯ ಪಾಠದಲ್ಲಿ ಈ ಒಂದು ಅಧಿಕ ಶ್ಲೋಕಾರ್ಧವಿದೆ: ಗೋಬ್ರಾಹ್ಮಣಾಲಯೇ ದುರ್ಗೇ ದೀಪೋ ಭೂತಿಪ್ರದಃ ಶುಚಿಃ| (ಗೀತಾ ಪ್ರೆಸ್).

[24] ನಿರ್ವಿಶಂಕಾನಮಂಗಲಾನ್ (ಗೀತಾ ಪ್ರೆಸ್).

Comments are closed.