Anushasana Parva: Chapter 100

ಅನುಶಾಸನ ಪರ್ವ: ದಾನಧರ್ಮ ಪರ್ವ

೧೦೦

ಬಲಿಪ್ರದಾನ

ಗೃಹಸ್ಥಧರ್ಮ ಮತ್ತು ಯಜ್ಞಗಳ ವಿಷಯದಲ್ಲಿ ಶ್ರೀಕೃಷ್ಣ-ಪೃಥ್ವೀದೇವಿಯರ ಸಂವಾದ (೧-೨೫).

13100001 ಯುಧಿಷ್ಠಿರ ಉವಾಚ|

13100001a ಗಾರ್ಹಸ್ಥ್ಯಂ ಧರ್ಮಮಖಿಲಂ ಪ್ರಬ್ರೂಹಿ ಭರತರ್ಷಭ|

13100001c ಋದ್ಧಿಮಾಪ್ನೋತಿ ಕಿಂ ಕೃತ್ವಾ ಮನುಷ್ಯ ಇಹ ಪಾರ್ಥಿವ||

ಯುಧಿಷ್ಠಿರನು ಹೇಳಿದನು: “ಭರತರ್ಷಭ! ಪಾರ್ಥಿವ! ಗೃಹಸ್ಥಾಶ್ರಮದ ಅಖಿಲ ಧರ್ಮಗಳನ್ನೂ ಹೇಳು. ಈ ಲೋಕದಲ್ಲಿ ಮನುಷ್ಯನು ಏನನ್ನು ಮಾಡಿ ಸಮೃದ್ಧಿಯನ್ನು ಪಡೆಯುತ್ತಾನೆ?”

13100002 ಭೀಷ್ಮ ಉವಾಚ|

13100002a ಅತ್ರ ತೇ ವರ್ತಯಿಷ್ಯಾಮಿ ಪುರಾವೃತ್ತಂ ಜನಾಧಿಪ|

13100002c ವಾಸುದೇವಸ್ಯ ಸಂವಾದಂ ಪೃಥಿವ್ಯಾಶ್ಚೈವ ಭಾರತ||

ಭೀಷ್ಮನು ಹೇಳಿದನು: “ಜನಾಧಿಪ! ಭಾರತ! ಈ ವಿಷಯದಲ್ಲಿ ಹಿಂದೆ ವಾಸುದೇವ ಮತ್ತು ಪೃಥ್ವಿಯರ ನಡುವೆ ನಡೆದ ಸಂವಾದವನ್ನು ಹೇಳುತ್ತೇನೆ.

13100003a ಸಂಸ್ತೂಯ ಪೃಥಿವೀಂ ದೇವೀಂ ವಾಸುದೇವಃ ಪ್ರತಾಪವಾನ್|

13100003c ಪಪ್ರಚ್ಚ ಭರತಶ್ರೇಷ್ಠ ಯದೇತತ್ಪೃಚ್ಚಸೇಽದ್ಯ ಮಾಮ್||

ಭರತಶ್ರೇಷ್ಠ! ಪ್ರತಾಪವಾನ್ ವಾಸುದೇವನು ಪೃಥ್ವೀ ದೇವಿಯನ್ನು ಸಂಸ್ತುತಿಸಿ ನೀನು ನನಗೆ ಕೇಳಿದ ಪ್ರಶ್ನೆಯನ್ನೇ ಅವಳಲ್ಲಿ ಕೇಳಿದನು.

13100004 ವಾಸುದೇವ ಉವಾಚ|

13100004a ಗಾರ್ಹಸ್ಥ್ಯಂ ಧರ್ಮಮಾಶ್ರಿತ್ಯ ಮಯಾ ವಾ ಮದ್ವಿಧೇನ ವಾ|

13100004c ಕಿಮವಶ್ಯಂ ಧರೇ ಕಾರ್ಯಂ ಕಿಂ ವಾ ಕೃತ್ವಾ ಸುಖೀ ಭವೇತ್||

ವಾಸುದೇವನು ಹೇಳಿದನು: “ಧರೇ! ಗೃಹಸ್ಥಧರ್ಮವನ್ನಾಶ್ರಯಿಸಿದ ನಾನು ಅಥವಾ ನನ್ನಂಥವರು ಅವಶ್ಯವಾದ ಯಾವ ಕಾರ್ಯವನ್ನು ಮಾಡಬೇಕು ಅಥವಾ ಯಾವುದನ್ನು ಮಾಡಿ ಸುಖಿಯಾಗಬಲ್ಲರು?”

13100005 ಪೃಥಿವ್ಯುವಾಚ|

13100005a ಋಷಯಃ ಪಿತರೋ ದೇವಾ ಮನುಷ್ಯಾಶ್ಚೈವ ಮಾಧವ|

13100005c ಇಜ್ಯಾಶ್ಚೈವಾರ್ಚನೀಯಾಶ್ಚ ಯಥಾ ಚೈವಂ ನಿಬೋಧ ಮೇ||

ಪೃಥ್ವಿಯು ಹೇಳಿದಳು: “ಮಾಧವ! ಮನುಷ್ಯರು ಋಷಿಗಳನ್ನು, ಪಿತೃಗಳನ್ನು ಮತ್ತು ಅತಿಥಿಗಳನ್ನು ಪೂಜಿಸಬೇಕು ಮತ್ತು ಸತ್ಕರಿಸಬೇಕು. ಅದನ್ನು ಹೇಗೆ ಮಾಡಬೇಕೆಂದು ಹೇಳುತ್ತೇನೆ. ಕೇಳು.

13100006a ಸದಾ ಯಜ್ಞೇನ ದೇವಾಂಶ್ಚ ಆತಿಥ್ಯೇನ ಚ ಮಾನವಾನ್|

13100006c ಚಂದತಶ್ಚ ಯಥಾನಿತ್ಯಮರ್ಹಾನ್ಯುಂಜೀತ ನಿತ್ಯಶಃ|

13100006E ತೇನ ಹ್ಯ್ ಋಷಿಗಣಾಃ ಪ್ರೀತಾ ಭವಂತಿ ಮಧುಸೂದನ||

ಸದಾ ಯಜ್ಞದಿಂದ ದೇವತೆಗಳನ್ನು ಆರಾಧಿಸಬೇಕು. ಸತತವಾಗಿ ಅತಿಥಿಸತ್ಕಾರ ಮಾಡುತ್ತಾ ಮನುಷ್ಯರನ್ನು ಪೂಜಿಸಬೇಕು. ಮಧುಸೂದನ! ಇಚ್ಛಾನುಸಾರ ನಿತ್ಯವೂ ಯೋಗ್ಯ ಬ್ರಾಹ್ಮಣರಿಗೆ ಭೋಜನವನ್ನು ಮಾಡಿಸುವುದರಿಂದ ಋಷಿಗಣಗಳು ಪ್ರೀತರಾಗುತ್ತವೆ.

13100007a ನಿತ್ಯಮಗ್ನಿಂ ಪರಿಚರೇದಭುಕ್ತ್ವಾ ಬಲಿಕರ್ಮ ಚ|

13100007c ಕುರ್ಯಾತ್ತಥೈವ ದೇವಾ ವೈ ಪ್ರೀಯಂತೇ ಮಧುಸೂದನ||

13100008a ಕುರ್ಯಾದಹರಹಃ ಶ್ರಾದ್ಧಮನ್ನಾದ್ಯೇನೋದಕೇನ ವಾ|

13100008c ಪಯೋಮೂಲಫಲೈರ್ವಾಪಿ ಪಿತೄಣಾಂ ಪ್ರೀತಿಮಾಹರನ್||

ಮಧುಸೂದನ! ನಿತ್ಯವೂ ಅಗ್ನಿಹೋತ್ರವನ್ನು ಮಾಡಿ ವೈಶ್ವದೇವ-ಬಲಿಹರಣಗಳನ್ನು ಕೊಡಬೇಕು. ಅದರಿಂದ ದೇವತೆಗಳು ಸಂತುಷ್ಟರಾಗುತ್ತಾರೆ. ಪಿತೃಗಳ ಪ್ರಸನ್ನತೆಗಾಗಿ ನಿತ್ಯವೂ ಅನ್ನ, ಜಲ ಅಥವಾ ಹಾಲು, ಗೆಡ್ಡೆ-ಗೆಣಸುಗಳು ಮತ್ತು ಹಣ್ಣುಗಳ ಮೂಲಕವಾಗಿಯಾದರೂ ಶ್ರಾದ್ಧವನ್ನು ಮಾಡಬೇಕು.

13100009a ಸಿದ್ಧಾನ್ನಾದ್ವೈಶ್ವದೇವಂ ವೈ ಕುರ್ಯಾದಗ್ನೌ ಯಥಾವಿಧಿ|

13100009c ಅಗ್ನೀಷೋಮಂ ವೈಶ್ವದೇವಂ ಧಾನ್ವಂತರ್ಯಮನಂತರಮ್||

13100010a ಪ್ರಜಾನಾಂ ಪತಯೇ ಚೈವ ಪೃಥಗ್ಘೋಮೋ ವಿಧೀಯತೇ|

13100010c ತಥೈವ ಚಾನುಪೂರ್ವ್ಯೇಣ ಬಲಿಕರ್ಮ ಪ್ರಯೋಜಯೇತ್||

ಸಿದ್ಧಾನ್ನದಿಂದ ಅಗ್ನಿಯಲ್ಲಿ ಯಥಾವಿಧಿಯಾಗಿ ವೈಶ್ವದೇವವನ್ನು ಮಾಡಬೇಕು. ಮೊದಲು ಅಗ್ನೀಷೋಮರಿಗೂ ನಂತರ ವಿಶ್ವೇದೇವತೆಗಳಿಗೂ, ಧನ್ವಂತಿರಿಗೂ ಮತ್ತು ನಂತರ ಪ್ರತಿಯೊಬ್ಬ ಪ್ರಜಾಪತಿಗೂ ಪ್ರತ್ಯೇಕ ಪ್ರತ್ಯೇಕವಾಗಿ ಹೋಮಮಾಡಬೇಕೆಂಬ ವಿಧಿನಿಯಮವಿದೆ. ಅದೇ ಕ್ರಮದಲ್ಲಿ ಬಲಿಕರ್ಮವನ್ನೂ ಮಾಡಬೇಕು.

13100011a ದಕ್ಷಿಣಾಯಾಂ ಯಮಾಯೇಹ ಪ್ರತೀಚ್ಯಾಂ ವರುಣಾಯ ಚ|

13100011c ಸೋಮಾಯ ಚಾಪ್ಯುದೀಚ್ಯಾಂ ವೈ ವಾಸ್ತುಮಧ್ಯೇ ದ್ವಿಜಾತಯೇ[1]||

13100012a ಧನ್ವಂತರೇಃ ಪ್ರಾಗುದೀಚ್ಯಾಂ ಪ್ರಾಚ್ಯಾಂ ಶಕ್ರಾಯ ಮಾಧವ|

13100012c ಮನೋರ್ವೈ[2] ಇತಿ ಚ ಪ್ರಾಹುರ್ಬಲಿಂ ದ್ವಾರೇ ಗೃಹಸ್ಯ ವೈ|

13100012e ಮರುದ್ಭ್ಯೋ ದೇವತಾಭ್ಯಶ್ಚ ಬಲಿಮಂತರ್ಗೃಹೇ ಹರೇತ್||

ಮಾಧವ! ದಕ್ಷಿಣದಲ್ಲಿ ಯಮನಿಗೂ, ಪಶ್ಚಿಮದಲ್ಲಿ ವರುಣನಿಗೂ, ಉತ್ತರದಲ್ಲಿ ಸೋಮನಿಗೂ, ವಾಸ್ತುಮಧ್ಯದಲ್ಲಿ ಪ್ರಜಾಪತಿಗಳಿಗೂ, ಈಶಾನ್ಯದಲ್ಲಿ ಧನ್ವಂತರಿಗೂ, ಮತ್ತು ಪೂರ್ವದಲ್ಲಿ ಶಕ್ರನಿಗೂ ಬಲಿಯನ್ನು ಸಪರ್ಪಿಸಬೇಕು. ಮನೆಯ ಬಾಗಿಲಿನಲ್ಲಿ ಮನುವಿಗೆ ಬಲಿಯನ್ನು ಹಾಕಬೇಕೆಂದು ಹೇಳುತ್ತಾರೆ. ಮರುದ್ಗಣಗಳಿಗೂ ದೇವತೆಗಳಿಗೂ ಬಲಿಯನ್ನು ಮನೆಯೊಳಗೆ ಸಮರ್ಪಿಸಬೇಕು.

13100013a ತಥೈವ ವಿಶ್ವೇದೇವೇಭ್ಯೋ ಬಲಿಮಾಕಾಶತೋ ಹರೇತ್|

13100013c ನಿಶಾಚರೇಭ್ಯೋ ಭೂತೇಭ್ಯೋ ಬಲಿಂ ನಕ್ತಂ ತಥಾ ಹರೇತ್||

ಹಾಗೆಯೇ ವಿಶ್ವೇದೇವರಿಗೆ ಬಲಿಯನ್ನು ಆಕಾಶದಲ್ಲಿ ಹಾಕಬೇಕು. ನಿಶಾಚರ ಭೂತಗಳಿಗೆ ಬಲಿಯನ್ನು ರಾತ್ರಿ ಕೊಡಬೇಕು.

13100014a ಏವಂ ಕೃತ್ವಾ ಬಲಿಂ ಸಮ್ಯಗ್ದದ್ಯಾದ್ಭಿಕ್ಷಾಂ ದ್ವಿಜಾತಯೇ|

13100014c ಅಲಾಭೇ ಬ್ರಾಹ್ಮಣಸ್ಯಾಗ್ನಾವಗ್ರಮುತ್ಕ್ಷಿಪ್ಯ ನಿಕ್ಷಿಪೇತ್||

ಹೀಗೆ ಎಲ್ಲ ದೇವತೆಗಳಿಗೂ ಬಲಿಯನ್ನು ಸಮರ್ಪಿಸಿ ನಂತರ ಬ್ರಾಹ್ಮಣನಿಗೆ ವಿಧಿಪೂರ್ವಕವಾಗಿ ಭಿಕ್ಷೆಯನ್ನು ನೀಡಬೇಕು. ಬ್ರಾಹ್ಮಣನು ಸಿಗದಿದ್ದರೆ ಅನ್ನದ ಅಗ್ರಗ್ರಾಸವನ್ನು ಅಗ್ನಿಯಲ್ಲಿ ಹೋಮಮಾಡಬೇಕು.

13100015a ಯದಾ ಶ್ರಾದ್ಧಂ ಪಿತೃಭ್ಯಶ್ಚ ದಾತುಮಿಚ್ಚೇತ ಮಾನವಃ|

13100015c ತದಾ ಪಶ್ಚಾತ್ಪ್ರಕುರ್ವೀತ ನಿವೃತ್ತೇ ಶ್ರಾದ್ಧಕರ್ಮಣಿ||

13100016a ಪಿತೄನ್ಸಂತರ್ಪಯಿತ್ವಾ ತು ಬಲಿಂ ಕುರ್ಯಾದ್ವಿಧಾನತಃ|

13100016c ವೈಶ್ವದೇವಂ ತತಃ ಕುರ್ಯಾತ್ಪಶ್ಚಾದ್ಬ್ರಾಹ್ಮಣವಾಚನಮ್||

ಪಿತೃಗಳಿಗೆ ಶ್ರಾದ್ಧವನ್ನು ನೀಡಲು ಬಯಸಿದವನು ಮೊದಲು ಶ್ರಾದ್ಧಕರ್ಮವನ್ನು ಮುಗಿಸಬೇಕು. ಪಿತೃಗಳನ್ನು ತೃಪ್ತಿಗೊಳಿಸಿದ ನಂತರ ವಿಧಿಪೂರ್ವಕವಾಗಿ ಬಲಿಹರಣ, ವೈಶ್ವದೇವಗಳನ್ನು ಮಾಡಿ, ಬ್ರಾಹ್ಮಣರಿಗೆ ಭೋಜನ ಮಾಡಿಸಿ ಅವರಿಂದ ಸ್ವಸ್ತಿವಾಚನವನ್ನು ಮಾಡಿಸಬೇಕು.

13100017a ತತೋಽನ್ನೇನಾವಶೇಷೇಣ[3] ಭೋಜಯೇದತಿಥೀನಪಿ|

13100017c ಅರ್ಚಾಪೂರ್ವಂ ಮಹಾರಾಜ ತತಃ ಪ್ರೀಣಾತಿ ಮಾನುಷಾನ್||

ಮಹಾರಾಜ! ಅನಂತರ ಉಳಿದ ಅನ್ನದಿಂದ ಮೊದಲು ಅತಿಥಿಗಳಿಗೆ ಸತ್ಕರಿಸಿ ಭೋಜನವನ್ನು ನೀಡಬೇಕು. ಇದು ಮನುಷ್ಯರನ್ನೂ ತೃಪ್ತಿಗೊಳಿಸುತ್ತದೆ.

13100018a ಅನಿತ್ಯಂ ಹಿ ಸ್ಥಿತೋ ಯಸ್ಮಾತ್ತಸ್ಮಾದತಿಥಿರುಚ್ಯತೇ|

13100019a ಆಚಾರ್ಯಸ್ಯ ಪಿತುಶ್ಚೈವ ಸಖ್ಯುರಾಪ್ತಸ್ಯ ಚಾತಿಥೇಃ|

13100019c ಇದಮಸ್ತಿ ಗೃಹೇ ಮಹ್ಯಮಿತಿ ನಿತ್ಯಂ ನಿವೇದಯೇತ್||

13100020a ತೇ ಯದ್ವದೇಯುಸ್ತತ್ಕುರ್ಯಾದಿತಿ ಧರ್ಮೋ ವಿಧೀಯತೇ|

ನಿತ್ಯವೂ ಸ್ಥಿರನಾಗಿ ಒಂದೇ ಕಡೆ ಇರದಿರುವವನನ್ನು ಅತಿಥಿಯೆಂದು ಕರೆಯುತ್ತಾರೆ. ಗೃಹಸ್ಥನು ಆಚಾರ್ಯ, ತಂದೆ, ಆಪ್ತಮಿತ್ರ ಮತ್ತು ಅತಿಥಿಗೆ ಇಂತಹ ವಸ್ತುವು ನನ್ನಲ್ಲಿದೆ. ಇದನ್ನು ಸ್ವೀಕರಿಸಿರಿ ಎಂದು ಪ್ರತಿನಿತ್ಯವೂ ನಿವೇದಿಸಿಕೊಳ್ಳಬೇಕು. ಅವರು ಹೇಳಿದಂತೆ ಮಾಡುವುದು ಧರ್ಮವೆಂದು ಹೇಳಲಾಗಿದೆ.

13100020c ಗೃಹಸ್ಥಃ ಪುರುಷಃ ಕೃಷ್ಣ ಶಿಷ್ಟಾಶೀ ಚ ಸದಾ ಭವೇತ್||

13100021a ರಾಜರ್ತ್ವಿಜಂ ಸ್ನಾತಕಂ ಚ ಗುರುಂ ಶ್ವಶುರಮೇವ ಚ|

13100021c ಅರ್ಚಯೇನ್ಮಧುಪರ್ಕೇಣ ಪರಿಸಂವತ್ಸರೋಷಿತಾನ್||

ಗೃಹಸ್ಥನು ಯಾವಾಗಲೂ ಯಜ್ಞಶಿಷ್ಟ ಅನ್ನವನ್ನೇ ಉಣ್ಣಬೇಕು. ರಾಜರು, ಋತ್ವಿಜರು, ಸ್ನಾತಕರು, ಗುರು ಮತ್ತು ಹೆಣ್ಣುಕೊಟ್ಟ ಮಾವ – ಇವರು ಒಂದು ವರ್ಷ ಕಳೆದನಂತರ ಮನೆಗೆ ಆಗಮಿಸಿದರೆ ಅವರನ್ನು ಮಧುಪರ್ಕ[4]ದಿಂದ ಅರ್ಚಿಸಬೇಕು.

13100022a ಶ್ವಭ್ಯಶ್ಚ ಶ್ವಪಚೇಭ್ಯಶ್ಚ ವಯೋಭ್ಯಶ್ಚಾವಪೇದ್ಭುವಿ|

13100022c ವೈಶ್ವದೇವಂ ಹಿ ನಾಮೈತತ್ಸಾಯಂಪ್ರಾತರ್ವಿಧೀಯತೇ||

ನಾಯಿಗಳಿಗೆ, ಚಾಂಡಾಲರಿಗೆ ಮತ್ತು ಪಕ್ಷಿಗಳಿಗೆ ಭೂಮಿಯ ಮೇಲೆ ಅನ್ನವನ್ನಿಡಬೇಕು. ಈ ಕರ್ಮಕ್ಕೆ ವೈಶ್ವದೇವವೆಂದು ಹೆಸರು. ಇದನ್ನು ಬೆಳಿಗ್ಗೆ ಮತ್ತು ಸಂಜೆ ಮಾಡಬೇಕು.

13100023a ಏತಾಂಸ್ತು ಧರ್ಮಾನ್ಗಾರ್ಹಸ್ಥಾನ್ಯಃ ಕುರ್ಯಾದನಸೂಯಕಃ|

13100023c ಸ ಇಹರ್ದ್ಧಿಂ ಪರಾಂ ಪ್ರಾಪ್ಯ ಪ್ರೇತ್ಯ ನಾಕೇ ಮಹೀಯತೇ[5]||

ಅನಸೂಯಕನಾಗಿ ಈ ಗೃಹಸ್ಥಧರ್ಮಗಳನ್ನು ಪಾಲಿಸುವವನು ಈ ಲೋಕದಲ್ಲಿ ಪರಮ ಶ್ರೇಯಸ್ಸನ್ನು ಪಡೆದು ಅವಸಾನಾನಂತರದಲ್ಲಿ ಸ್ವರ್ಗದಲ್ಲಿ ಮೆರೆಯುತ್ತಾನೆ.””

13100024 ಭೀಷ್ಮ ಉವಾಚ|

13100024a ಇತಿ ಭೂಮೇರ್ವಚಃ ಶ್ರುತ್ವಾ ವಾಸುದೇವಃ ಪ್ರತಾಪವಾನ್|

13100024c ತಥಾ ಚಕಾರ ಸತತಂ ತ್ವಮಪ್ಯೇವಂ ಸಮಾಚರ||

ಭೀಷ್ಮನು ಹೇಳಿದನು: “ಭೂಮಿಯ ಈ ಮಾತನ್ನು ಕೇಳಿ ಪ್ರತಾಪವಾನ್ ವಾಸುದೇವನು ಹಾಗೆಯೇ ಮಾಡಿದನು. ನೀನೂ ಕೂಡ ಸತತವೂ ಇದನ್ನೇ ಆಚರಿಸು.

13100025a ಏವಂ ಗೃಹಸ್ಥಧರ್ಮಂ ತ್ವಂ ಚೇತಯಾನೋ ನರಾಧಿಪ|

13100025c ಇಹಲೋಕೇ ಯಶಃ ಪ್ರಾಪ್ಯ ಪ್ರೇತ್ಯ ಸ್ವರ್ಗಮವಾಪ್ಸ್ಯಸಿ||

ನರಾಧಿಪ! ಈ ಗೃಹಸ್ಥಧರ್ಮವನ್ನೂ ನೀನೂ ಕೂಡ ನಡೆಸಿದರೆ ಇಹಲೋಕದಲ್ಲಿ ಯಶಸ್ಸನ್ನು ಹೊಂದಿ ಮರಣಾನಂತರ ಸ್ವರ್ಗವನ್ನು ಸೇರುತ್ತೀಯೆ.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಬಲಿದಾನವಿಧಿರ್ನಾಮ ಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಬಲಿದಾನವಿಧಿ ಎನ್ನುವ ನೂರನೇ ಅಧ್ಯಾಯವು.

[1] ಪ್ರಜಾಪತೇಃ (ಭಾರತ ದರ್ಶನ/ಗೀತಾ ಪ್ರೆಸ್).

[2] ಮನುಷ್ಯೇಭ್ಯ ಅರ್ಥಾತ್ ಸನಕಾದಿ ಮನುಷ್ಯರಿಗೆ (ಭಾರತ ದರ್ಶನ).

[3] ತತೋಽನೇನ ವಿಶೇಷೇಣ ಅರ್ಥಾತ್ ನಂತರ ಪ್ರತ್ಯೇಕವಾಗಿ ಮಾಡಿದ ಅನ್ನದಿಂದ (ಭಾರತ ದರ್ಶನ/ಗೀತಾ ಪ್ರೆಸ್).

[4] ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆ ಇವುಗಳ ಮಿಶ್ರಣ.

[5] ಸ ಇಹರ್ಷಿವರಾನ್ಪ್ರಾಪ್ಯ ಪ್ರೇತ್ಯಲೋಕೇ ಮಹೀಯತೇ| (ಭಾರತ ದರ್ಶನ/ಗೀತಾ ಪ್ರೆಸ್).

Comments are closed.