Anushasana Parva: Chapter 102

ಅನುಶಾಸನ ಪರ್ವ: ದಾನಧರ್ಮ ಪರ್ವ

೧೦೨

ನಹುಷನಿಂದ ಋಷಿಗಳ ಮೇಲೆ ಅತ್ಯಾಚಾರ; ಅದರ ಪ್ರತೀಕಾರದ ಕುರಿತು ಅಗಸ್ತ್ಯ ಮತ್ತು ಭೃಗುಮಹರ್ಷಿಗಳ ಸಂವಾದ (೧-೨೯).

13102001 ಯುಧಿಷ್ಠಿರ ಉವಾಚ|

13102001a ಶ್ರುತಂ ಮೇ ಭರತಶ್ರೇಷ್ಠ ಪುಷ್ಪಧೂಪಪ್ರದಾಯಿನಾಮ್|

13102001c ಫಲಂ ಬಲಿವಿಧಾನೇ ಚ ತದ್ಭೂಯೋ ವಕ್ತುಮರ್ಹಸಿ||

13102002a ಧೂಪಪ್ರದಾನಸ್ಯ ಫಲಂ ಪ್ರದೀಪಸ್ಯ ತಥೈವ ಚ|

13102002c ಬಲಯಶ್ಚ ಕಿಮರ್ಥಂ ವೈ ಕ್ಷಿಪ್ಯಂತೇ ಗೃಹಮೇಧಿಭಿಃ||

ಯುಧಿಷ್ಠಿರನು ಹೇಳಿದನು: “ಭರತಶ್ರೇಷ್ಠ! ಪುಷ್ಪ-ಧೂಪದಾನಗಳ ಫಲ ಮತ್ತು ಬಲಿವಿಧಾನಗಳ ಕುರಿತು ನಾನು ಕೇಳಿದೆ. ಧೂಪ ಮತ್ತು ದೀಪದಾನಗಳ ಫಲಗಳ ಕುರಿತು ಇನ್ನೂ ಹೇಳಬೇಕು. ಮತ್ತು ಗೃಹಸ್ಥರು ಬಲಿಗಳನ್ನು ನೆಲದ ಮೇಲೆ ಏಕೆ ಇಡುತ್ತಾರೆ[1]?”

13102003 ಭೀಷ್ಮ ಉವಾಚ|

13102003a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

13102003c ನಹುಷಂ ಪ್ರತಿ ಸಂವಾದಮಗಸ್ತ್ಯಸ್ಯ ಭೃಗೋಸ್ತಥಾ||

ಭೀಷ್ಮನು ಹೇಳಿದನು: “ಈ ವಿಷಯದಲ್ಲಿ ಪುರಾತನ ಇತಿಹಾಸವಾದ ನಹುಷನೊಡನೆ ಅಗಸ್ತ್ಯ ಮತ್ತು ಭೃಗುಗಳ ಸಂವಾದವನ್ನು ಉದಾಹರಿಸುತ್ತಾರೆ.

13102004a ನಹುಷೋ ಹಿ ಮಹಾರಾಜ ರಾಜರ್ಷಿಃ ಸುಮಹಾತಪಾಃ|

13102004c ದೇವರಾಜ್ಯಮನುಪ್ರಾಪ್ತಃ ಸುಕೃತೇನೇಹ ಕರ್ಮಣಾ||

ಮಹಾರಾಜ! ರಾಜರ್ಷಿ ಮಹಾತಪಸ್ವೀ ನಹುಷನು ಸುಕೃತಕರ್ಮಗಳಿಂದ ದೇವರಾಜ್ಯವನ್ನು ಪಡೆದುಕೊಂಡನು[2].

13102005a ತತ್ರಾಪಿ ಪ್ರಯತೋ ರಾಜನ್ನಹುಷಸ್ತ್ರಿದಿವೇ ವಸನ್|

13102005c ಮಾನುಷೀಶ್ಚೈವ ದಿವ್ಯಾಶ್ಚ ಕುರ್ವಾಣೋ ವಿವಿಧಾಃ ಕ್ರಿಯಾಃ||

ರಾಜನ್! ಸ್ವರ್ಗದಲ್ಲಿ ವಾಸಿಸುತ್ತಿದ್ದರೂ ನಹುಷನು ವಿವಿಧ ಮಾನುಷ ಮತ್ತು ದಿವ್ಯ ಕರ್ಮಗಳನ್ನು ಮಾಡುತ್ತಿದ್ದನು.

13102006a ಮಾನುಷ್ಯಸ್ತತ್ರ ಸರ್ವಾಃ ಸ್ಮ ಕ್ರಿಯಾಸ್ತಸ್ಯ ಮಹಾತ್ಮನಃ|

13102006c ಪ್ರವೃತ್ತಾಸ್ತ್ರಿದಿವೇ ರಾಜನ್ದಿವ್ಯಾಶ್ಚೈವ ಸನಾತನಾಃ||

ರಾಜನ್! ಸ್ವರ್ಗದಲ್ಲಿ ಆ ಮಹಾತ್ಮನ ಸನಾತನ ಮಾನುಷ ಕ್ರಿಯೆಗಳೆಲ್ಲವೂ ಮತ್ತು ದೇವಕ್ರಿಯೆಗಳೆಲ್ಲವೂ ನಡೆಯುತ್ತಿದ್ದವು.

13102007a ಅಗ್ನಿಕಾರ್ಯಾಣಿ ಸಮಿಧಃ ಕುಶಾಃ ಸುಮನಸಸ್ತಥಾ|

13102007c ಬಲಯಶ್ಚಾನ್ನಲಾಜಾಭಿರ್ಧೂಪನಂ ದೀಪಕರ್ಮ ಚ||

13102008a ಸರ್ವಂ ತಸ್ಯ ಗೃಹೇ ರಾಜ್ಞಃ ಪ್ರಾವರ್ತತ ಮಹಾತ್ಮನಃ|

13102008c ಜಪಯಜ್ಞಾನ್ಮನೋಯಜ್ಞಾಂಸ್ತ್ರಿದಿವೇಽಪಿ ಚಕಾರ ಸಃ||

ಅಗ್ನಿಕಾರ್ಯ, ಸಮಿತ್ತು, ದರ್ಭೆ, ಪುಷ್ಪಗಳು, ಬಲಿ, ಅನ್ನ, ಅರಳು, ಧೂಪ, ಮತ್ತು ದೀಪ – ಎಲ್ಲ ಕರ್ಮಗಳೂ ಆ ಮಹಾತ್ಮ ರಾಜನ ಮನೆಯಲ್ಲಿ ನಡೆಯುತ್ತಿದ್ದವು. ಜಪಯಜ್ಞ ಮತ್ತು ಮನೋಯಜ್ಞಗಳನ್ನೂ ಕೂಡ ಅವನು ಸ್ವರ್ಗದಲ್ಲಿಯೂ ನಡೆಸುತ್ತಿದ್ದನು.

13102009a ದೈವತಾನ್ಯರ್ಚಯಂಶ್ಚಾಪಿ ವಿಧಿವತ್ಸ ಸುರೇಶ್ವರಃ|

13102009c ಸರ್ವಾಣ್ಯೇವ ಯಥಾನ್ಯಾಯಂ ಯಥಾಪೂರ್ವಮರಿಂದಮ||

ಅರಿಂದಮ! ಆ ಸುರೇಶ್ವರನು ದೇವತೆಗಳ ಅರ್ಚನೆಗಳೆಲ್ಲವನ್ನೂ ವಿಧಿವತ್ತಾಗಿ ಯಥಾನ್ಯಾಯವಾಗಿ ಮೊದಲಿನಂತೆಯೇ ಮಾಡುತ್ತಿದ್ದನು.

13102010a ಅಥೇಂದ್ರಸ್ಯ ಭವಿಷ್ಯತ್ವಾದಹಂಕಾರಸ್ತಮಾವಿಶತ್|

13102010c ಸರ್ವಾಶ್ಚೈವ ಕ್ರಿಯಾಸ್ತಸ್ಯ ಪರ್ಯಹೀಯಂತ ಭೂಪತೇ||

ಆಗ “ನಾನು ಇಂದ್ರ” ಎನ್ನುವ ಅಹಂಕಾರವು ಅವನನ್ನು ಆವೇಶಿಸಿತು. ಭೂಪತೇ! ಇದರಿಂದಾಗಿ ಅವನ ಸರ್ವ ಕ್ರಿಯೆಗಳೂ ನಷ್ಟವಾಗತೊಡಗಿದವು.

13102011a ಸ ಋಷೀನ್ವಾಹಯಾಮಾಸ ವರದಾನಮದಾನ್ವಿತಃ|

13102011c ಪರಿಹೀನಕ್ರಿಯಶ್ಚಾಪಿ ದುರ್ಬಲತ್ವಮುಪೇಯಿವಾನ್||

ವರಮದಾನ್ವಿತನಾದ ಅವನು ಋಷಿಗಳಿಂದಲೇ ತನ್ನ ಪಲ್ಲಕ್ಕಿಯನ್ನು ಹೊರಿಸಿದನು. ಹೀನ ಕೃತ್ಯಗಳಿಂದ ಅವನು ದುರ್ಬಲನಾಗತೊಡಗಿದನು.

13102012a ತಸ್ಯ ವಾಹಯತಃ ಕಾಲೋ ಮುನಿಮುಖ್ಯಾಂಸ್ತಪೋಧನಾನ್|

13102012c ಅಹಂಕಾರಾಭಿಭೂತಸ್ಯ ಸುಮಹಾನತ್ಯವರ್ತತ||

ಕ್ರಮೇಣ ಅವನು ತಪೋಧನ ಮುನಿಮುಖ್ಯರು ತನ್ನನ್ನು ಹೊರುವಂತೆ ಮಾಡಿದನು. ಅಹಂಕಾರದಿಂದ ತುಂಬಿದ್ದ ಅವನ ಈ ಕೃತ್ಯಗಳು ದೀರ್ಘಕಾಲದ ವರೆಗೆ ನಡೆಯಿತು.

13102013a ಅಥ ಪರ್ಯಾಯಶ ಋಷೀನ್ವಾಹನಾಯೋಪಚಕ್ರಮೇ|

13102013c ಪರ್ಯಾಯಶ್ಚಾಪ್ಯಗಸ್ತ್ಯಸ್ಯ ಸಮಪದ್ಯತ ಭಾರತ||

ಅವನು ಒಬ್ಬರಾದ ನಂತರ ಇನ್ನೊಬ್ಬರಂತೆ ಋಷಿಗಳನ್ನು ವಾಹನವನ್ನಾಗಿ ಬಳಸತೊಡಗಿದನು. ಭಾರತ! ಒಮ್ಮೆ ಅಗಸ್ತ್ಯನ ಬಾರಿಯು ಬಂದೊದಗಿತು.

13102014a ಅಥಾಗಮ್ಯ ಮಹಾತೇಜಾ ಭೃಗುರ್ಬ್ರಹ್ಮವಿದಾಂ ವರಃ|

13102014c ಅಗಸ್ತ್ಯಮಾಶ್ರಮಸ್ಥಂ ವೈ ಸಮುಪೇತ್ಯೇದಮಬ್ರವೀತ್||

ಅದೇ ಸಮಯದಲ್ಲಿ ಮಹಾತೇಜಸ್ವೀ ಬ್ರಹ್ಮವಿದರಲ್ಲಿ ಶ್ರೇಷ್ಠ ಭೃಗುವು ಆಶ್ರಮದಲ್ಲಿದ್ದ ಆಗಸ್ತ್ಯನ ಬಳಿಬಂದು ಹೀಗೆ ಹೇಳಿದನು:

13102015a ಏವಂ ವಯಮಸತ್ಕಾರಂ ದೇವೇಂದ್ರಸ್ಯಾಸ್ಯ ದುರ್ಮತೇಃ|

13102015c ನಹುಷಸ್ಯ ಕಿಮರ್ಥಂ ವೈ ಮರ್ಷಯಾಮ ಮಹಾಮುನೇ||

“ಮಹಾಮುನೇ! ದೇವೇಂದ್ರನಾಗಿರುವ ಈ ದುರ್ಮತಿ ನಹುಷನ ಅತ್ಯಾಚಾರವನ್ನು ನಾವು ಏಕೆ ಸಹಿಸಿಕೊಳ್ಳುತ್ತಿದ್ದೇವೆ?”

13102016 ಅಗಸ್ತ್ಯ ಉವಾಚ|

13102016a ಕಥಮೇಷ ಮಯಾ ಶಕ್ಯಃ ಶಪ್ತುಂ ಯಸ್ಯ ಮಹಾಮುನೇ|

13102016c ವರದೇನ ವರೋ ದತ್ತೋ ಭವತೋ ವಿದಿತಶ್ಚ ಸಃ||

ಅಗಸ್ತ್ಯನು ಹೇಳಿದನು: “ಮಹಾಮುನೇ! ವರದ ಬ್ರಹ್ಮನು ಇವನಿಗೆ ವರವನ್ನು ನೀಡಿರುವಾಗ ನಾನು ಇವನನ್ನು ಹೇಗೆ ಶಪಿಸಬಲ್ಲೆನು? ಇದು ನಿನಗೆ ತಿಳಿದಿದ್ದೇ ಆಗಿದೆ.

13102017a ಯೋ ಮೇ ದೃಷ್ಟಿಪಥಂ ಗಚ್ಚೇತ್ಸ ಮೇ ವಶ್ಯೋ ಭವೇದಿತಿ|

13102017c ಇತ್ಯನೇನ ವರೋ ದೇವಾದ್ಯಾಚಿತೋ ಗಚ್ಚತಾ ದಿವಮ್||

ಸ್ವರ್ಗಲೋಕಕ್ಕೆ ಬರುವ ಸಮಯದಲ್ಲಿ ಇವನು “ನನ್ನ ದೃಷ್ಟಿಪಥದಲ್ಲಿ ಯಾರು ಬರುತ್ತಾರೋ ಅವರು ನನ್ನ ವಶವಾಗಲಿ” ಎಂದು ಬ್ರಹ್ಮದೇವನಿಂದ ವರವನ್ನು ಕೇಳಿಕೊಂಡಿದ್ದನು.

13102018a ಏವಂ ನ ದಗ್ಧಃ ಸ ಮಯಾ ಭವತಾ ಚ ನ ಸಂಶಯಃ|

13102018c ಅನ್ಯೇನಾಪ್ಯ್ ಋಷಿಮುಖ್ಯೇನ ನ ಶಪ್ತೋ ನ ಚ ಪಾತಿತಃ||

ಈ ಕಾರಣದಿಂದಲೇ ನಾನಾಗಲೀ ಮತ್ತು ನೀನಾಗಲೀ ಇವನನ್ನು ಸುಟ್ಟು ಭಸ್ಮಮಾಡಲಿಲ್ಲ ಎನ್ನುವುದರಲ್ಲಿ ಸಂಶಯವೇ ಇಲ್ಲ. ಈ ಕಾರಣದಿಂದಾಗಿಯೇ ಅನ್ಯ ಋಷಿಮುಖ್ಯರೂ ಇವನನ್ನು ಶಪಿಸಲಿಲ್ಲ ಅಥವಾ ಸ್ವರ್ಗದಿಂದ ಕೆಳಗುರಿಳಿಸಲಿಲ್ಲ.

13102019a ಅಮೃತಂ ಚೈವ ಪಾನಾಯ ದತ್ತಮಸ್ಮೈ ಪುರಾ ವಿಭೋ|

13102019c ಮಹಾತ್ಮನೇ ತದರ್ಥಂ ಚ ನಾಸ್ಮಾಭಿರ್ವಿನಿಪಾತ್ಯತೇ||

ವಿಭೋ! ಹಿಂದೆ ಮಹಾತ್ಮಾ ಬ್ರಹ್ಮನು ಇವನಿಗೆ ಕುಡಿಯಲು ಅಮೃತವನ್ನು ನೀಡಿದ್ದನು. ಇದರಿಂದಲೇ ನಾವು ಇವನನ್ನು ಕೆಳಗೆ ಉರುಳಿಸುತ್ತಿಲ್ಲ.

13102020a ಪ್ರಾಯಚ್ಚತ ವರಂ ದೇವಃ ಪ್ರಜಾನಾಂ ದುಃಖಕಾರಕಮ್|

13102020c ದ್ವಿಜೇಷ್ವಧರ್ಮಯುಕ್ತಾನಿ ಸ ಕರೋತಿ ನರಾಧಮಃ||

ಬ್ರಹ್ಮದೇವನು ಇವನಿಗಿತ್ತ ವರವು ಪ್ರಜೆಗಳಿಗೆ ದುಃಖಕಾರಕವಾಗಿಹೋಗಿದೆ. ಈ ನರಾಧಮನು ಬ್ರಾಹ್ಮಣರೊಂದಿಗೆ ಅಧರ್ಮಯುಕ್ತನಾಗಿ ವ್ಯವಹರಿಸುತ್ತಿದ್ದಾನೆ.

13102021a ಅತ್ರ ಯತ್ ಪ್ರಾಪ್ತಕಾಲಂ ನಸ್ತದ್ಬ್ರೂಹಿ ವದತಾಂ ವರ|

13102021c ಭವಾಂಶ್ಚಾಪಿ ಯಥಾ ಬ್ರೂಯಾತ್ಕುರ್ವೀಮಹಿ ತಥಾ ವಯಮ್||

ಮಾತನಾಡುವವರಲ್ಲಿ ಶ್ರೇಷ್ಠ! ಈಗ ನಾವೇನು ಮಾಡಬೇಕು ಎನ್ನುವುದನ್ನು ಹೇಳು. ನೀನು ಏನು ಹೇಳುತ್ತೀಯೋ ಹಾಗೆಯೇ ನಾನು ಮಾಡುತ್ತೇನೆ.”

13102022 ಭೃಗುರುವಾಚ|

13102022a ಪಿತಾಮಹನಿಯೋಗೇನ ಭವಂತಮಹಮಾಗತಃ|

13102022c ಪ್ರತಿಕರ್ತುಂ ಬಲವತಿ ನಹುಷೇ ದರ್ಪಮಾಸ್ಥಿತೇ[3]||

ಭೃಗುವು ಹೇಳಿದನು: “ಪಿತಾಮಹನ ನಿಯೋಗದಿಂದಲೇ ನಾನು ನಿನ್ನ ಬಳಿ ಬಂದಿದ್ದೇನೆ. ದರ್ಪಿತನಾಗಿರುವ ಬಲವಾನ್ ನಹುಷನಿಗೆ ಪ್ರತೀಕಾರವನ್ನು ಮಾಡಬೇಕು.

13102023a ಅದ್ಯ ಹಿ ತ್ವಾ ಸುದುರ್ಬುದ್ಧೀ ರಥೇ ಯೋಕ್ಷ್ಯತಿ ದೇವರಾಟ್|

13102023c ಅದ್ಯೈನಮಹಮುದ್ವೃತ್ತಂ ಕರಿಷ್ಯೇಽನಿಂದ್ರಮೋಜಸಾ||

ಇಂದು ದುರ್ಬುದ್ಧಿ ದೇವರಾಜನು ನಿನ್ನನ್ನು ರಥಕ್ಕೆ ಕಟ್ಟುತ್ತಾನೆ. ಆದುದರಿಂದ ಇಂದೇ ನಾನು ನನ್ನ ಓಜಸ್ಸಿನಿಂದ ಅವನನ್ನು ಇಂದ್ರಪದವಿಯಿಂದ ಭ್ರಷ್ಟನಾಗುವಂತೆ ಮಾಡುತ್ತೇನೆ.

13102024a ಅದ್ಯೇಂದ್ರಂ ಸ್ಥಾಪಯಿಷ್ಯಾಮಿ ಪಶ್ಯತಸ್ತೇ ಶತಕ್ರತುಮ್|

13102024c ಸಂಚಾಲ್ಯ ಪಾಪಕರ್ಮಾಣಮಿಂದ್ರಸ್ಥಾನಾತ್ಸುದುರ್ಮತಿಮ್||

ಇಂದು ನೀನು ನೋಡುತ್ತಿದ್ದಂತೆಯೇ ನಾನು ಈ ದುರ್ಮತಿ ಪಾಪಕರ್ಮಿಯನ್ನು ಇಂದ್ರಸ್ಥಾನದಿಂದ ಉರುಳಿಸಿ ಶತಕ್ರತುವನ್ನು ಇಂದ್ರನನ್ನಾಗಿ ಸ್ಥಾಪಿಸುತ್ತೇನೆ.

13102025a ಅದ್ಯ ಚಾಸೌ ಕುದೇವೇಂದ್ರಸ್ತ್ವಾಂ ಪದಾ ಧರ್ಷಯಿಷ್ಯತಿ|

13102025c ದೈವೋಪಹತಚಿತ್ತತ್ವಾದಾತ್ಮನಾಶಾಯ ಮಂದಧೀಃ||

ದೈವವು ಇವನ ಬುದ್ಧಿಯನ್ನು ನಾಶಗೊಳಿಸಿದೆ. ಆದುದರಿಂದ ದೇವರಾಜನಾಗಿರುವ ಈ ಮಂದಬುದ್ಧಿ ನೀಚ ನಹುಷನು ನಿನ್ನನ್ನು ಕಾಲಿನಿಂದ ಒದೆಯುತ್ತಾನೆ.

13102026a ವ್ಯುತ್ಕ್ರಾಂತಧರ್ಮಂ ತಮಹಂ ಧರ್ಷಣಾಮರ್ಷಿತೋ ಭೃಶಮ್|

13102026c ಅಹಿರ್ಭವಸ್ವೇತಿ ರುಷಾ ಶಪ್ಸ್ಯೇ ಪಾಪಂ ದ್ವಿಜದ್ರುಹಮ್||

ನಿನ್ನ ಮೇಲೆ ಮಾಡಿದ ಈ ಅತ್ಯಾಚಾರದಿಂದ ಅತ್ಯಂತ ಕ್ರೋಧಿತನಾಗಿ ನಾನು ಧರ್ಮವನ್ನು ಉಲ್ಲಂಘಿಸಿದ ಆ ದ್ವಿಜದ್ರೋಹೀ ಪಾಪಿಗೆ ರೋಷಪೂರ್ವಕವಾಗಿ “ನೀನು ಸರ್ಪವಾಗು” ಎಂದು ಶಪಿಸುತ್ತೇನೆ.

13102027a ತತ ಏನಂ ಸುದುರ್ಬುದ್ಧಿಂ ಧಿಕ್ಶಬ್ದಾಭಿಹತತ್ವಿಷಮ್|

13102027c ಧರಣ್ಯಾಂ ಪಾತಯಿಷ್ಯಾಮಿ ಪ್ರೇಕ್ಷತಸ್ತೇ ಮಹಾಮುನೇ||

13102028a ನಹುಷಂ ಪಾಪಕರ್ಮಾಣಮೈಶ್ವರ್ಯಬಲಮೋಹಿತಮ್|

13102028c ಯಥಾ ಚ ರೋಚತೇ ತುಭ್ಯಂ ತಥಾ ಕರ್ತಾಸ್ಮ್ಯಹಂ ಮುನೇ||

ಮಹಾಮುನೇ! ಆಗ ಆ ದುರ್ಬುದ್ಧಿಯು ನಾಲ್ಕೂ ದಿಕ್ಕುಗಳಿಂದ ಧಿಕ್ಕಾರದ ಶಬ್ದಗಳನ್ನು ಕೇಳಿ ಶ್ರೀಹೀನನಾಗುತ್ತಾನೆ ಮತ್ತು ನೀನು ನೋಡುತ್ತಿರುವಂತೆಯೇ ಪಾಪಕರ್ಮಿ ಐಶ್ವರ್ಯಬಲಮೋಹಿತ ನಹುಷನನ್ನು ಭೂಮಿಯ ಮೇಲೆ ಬೀಳಿಸುತ್ತೇನೆ. ಮುನೇ! ನೀನು ಏನನ್ನು ಬಯಸುತ್ತೀಯೋ ಅದನ್ನೇ ನಾನು ಮಾಡುತ್ತೇನೆ”

13102029a ಏವಮುಕ್ತಸ್ತು ಭೃಗುಣಾ ಮೈತ್ರಾವರುಣಿರವ್ಯಯಃ|

13102029c ಅಗಸ್ತ್ಯಃ ಪರಮಪ್ರೀತೋ ಬಭೂವ ವಿಗತಜ್ವರಃ||

ಭೃಗುವು ಹೀಗೆ ಹೇಳಲು ಮೈತ್ರಾವರುಣಿ ಅವ್ಯಯ ಅಗಸ್ತ್ಯನು ಪರಮಪ್ರೀತನೂ ವಿತಗಜ್ವರನೂ ಆದನು.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಅಗಸ್ತ್ಯಭೃಗುಸಂವಾದೋ ನಾಮ ದ್ವಾಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಅಗಸ್ತ್ಯಭೃಗುಸಂವಾದ ಎನ್ನುವ ನೂರಾಎರಡನೇ ಅಧ್ಯಾಯವು.

[1] ಅಥವಾ ಎಸೆಯುತ್ತಾರೆ?

[2] ನಹುಷನು ದೇವರಾಜ್ಯವನ್ನು ಪಡೆದುಕೊಂಡ ಕಥೆಯು ಉದ್ಯೋಗಪರ್ವದ ಅಧ್ಯಾಯ ೯ರಿಂದ ೧೭ರಲ್ಲಿ ಬರುತ್ತದೆ.

[3] ದೈವಮೋಹಿತೇ (ಗೀತಾ ಪ್ರೆಸ್).

Comments are closed.