ಅನುಶಾಸನ ಪರ್ವ: ದಾನಧರ್ಮ ಪರ್ವ
Contents
Toggle೧೦೭
ಆಯುಷ್ಯಾಖ್ಯಾನ
ಆಯಸ್ಸನ್ನು ವೃದ್ಧಿಸುವ ಮತ್ತು ಕ್ಷಯಗೊಳಿಸುವ ಶುಭಾಶುಭ ಕರ್ಮಗಳ ವರ್ಣನೆಗಳ ಮೂಲಕ ಗೃಹಸ್ಥಾಶ್ರಮದ ಕರ್ತ್ಯವ್ಯಗಳ ವಿಸ್ತಾರಪೂರ್ವಕ ನಿರೂಪಣೆ (೧-೧೪೮).
13107001 ಯುಧಿಷ್ಠಿರ ಉವಾಚ|
13107001a ಶತಾಯುರುಕ್ತಃ ಪುರುಷಃ ಶತವೀರ್ಯಶ್ಚ ವೈದಿಕೇ|
13107001c ಕಸ್ಮಾನ್ಮ್ರಿಯಂತೇ ಪುರುಷಾ ಬಾಲಾ ಅಪಿ ಪಿತಾಮಹ||
ಯುಧಿಷ್ಠಿರನು ಹೇಳಿದನು: “ನೂರು ವೀರ್ಯಗಳೊಂದಿಗೆ ಜನಿಸಿದ ಮನುಷ್ಯನ ಆಯಸ್ಸು ನೂರು ವರ್ಷಗಳು ಎಂದು ವೇದಗಳಲ್ಲಿ ಹೇಳಿದ್ದಾರೆ. ಆದರೆ ಎಷ್ಟೋ ಮನುಷ್ಯರು ಬಾಲ್ಯದಲ್ಲಿಯೇ ಮರಣಹೊಂದುತ್ತಾರೆ. ಅದು ಏಕಾಗುತ್ತದೆ?
13107002a ಆಯುಷ್ಮಾನ್ಕೇನ ಭವತಿ ಸ್ವಲ್ಪಾಯುರ್ವಾಪಿ ಮಾನವಃ|
13107002c ಕೇನ ವಾ ಲಭತೇ ಕೀರ್ತಿಂ ಕೇನ ವಾ ಲಭತೇ ಶ್ರಿಯಮ್||
ಯಾವುದರಿಂದ ಮನುಷ್ಯನು ದೀರ್ಘಾಯುವಾಗುತ್ತಾನೆ ಅಥವಾ ಯಾವ ಕಾರಣದಿಂದ ಅವನ ಆಯಸ್ಸು ಕಡಿಮೆಯಾಗುತ್ತದೆ? ಯಾವುದನ್ನು ಮಾಡುವುದರಿಂದ ಅವನು ಕೀರ್ತಿಯನ್ನು ಹೊಂದುತ್ತಾನೆ ಮತ್ತು ಯಾವುದರಿಂದ ಅವನಿಗೆ ಸಂಪತ್ತು ದೊರೆಯುತ್ತದೆ?
13107003a ತಪಸಾ ಬ್ರಹ್ಮಚರ್ಯೇಣ ಜಪೈರ್ಹೋಮೈಸ್ತಥೌಷಧೈಃ|
13107003c ಜನ್ಮನಾ ಯದಿ[1] ವಾಚಾರಾತ್ತನ್ಮೇ ಬ್ರೂಹಿ ಪಿತಾಮಹ||
ಪಿತಾಮಹ! ತಪಸ್ಸು, ಬ್ರಹ್ಮಚರ್ಯ, ಜಪ, ಹೋಮ, ಮತ್ತು ಔಷಧಗಳು ಅಥವಾ ಯಾವ ಆಚಾರಗಳನ್ನು ಅವನು ಪಾಲಿಸಬೇಕು ಎನ್ನುವುದನ್ನು ನನಗೆ ಹೇಳು.”
13107004 ಭೀಷ್ಮ ಉವಾಚ|
13107004a ಅತ್ರ ತೇ ವರ್ತಯಿಷ್ಯಾಮಿ ಯನ್ಮಾಂ ತ್ವಮನುಪೃಚ್ಚಸಿ|
13107004c ಅಲ್ಪಾಯುರ್ಯೇನ ಭವತಿ ದೀರ್ಘಾಯುರ್ವಾಪಿ ಮಾನವಃ||
13107005a ಯೇನ ವಾ ಲಭತೇ ಕೀರ್ತಿಂ ಯೇನ ವಾ ಲಭತೇ ಶ್ರಿಯಮ್|
13107005c ಯಥಾ ಚ ವರ್ತನ್ಪುರುಷಃ ಶ್ರೇಯಸಾ ಸಂಪ್ರಯುಜ್ಯತೇ||
ಭೀಷ್ಮನು ಹೇಳಿದನು: “ನೀನು ನನಗೆ ಏನು ಕೇಳುತ್ತಿದ್ದೀಯೋ ಅದನ್ನು – ಯಾವುದರಿಂದ ಮಾನವನು ಅಲ್ಪಾಯು ಅಥವಾ ದೀರ್ಘಾಯುವಾಗುತ್ತಾನೆ, ಯಾವುದರಿಂದ ಕೀರ್ತಿ ಅಥವಾ ಸಂಪತ್ತು ದೊರೆಯುತ್ತದೆ ಮತ್ತು ಹೇಗೆ ವರ್ತಿಸುವುದರಿಂದ ಪುರುಷನು ಶ್ರೇಯಸ್ಸನ್ನು ಪಡೆದುಕೊಳ್ಳುತ್ತಾನೆ – ಎನ್ನುವುದನ್ನು ಹೇಳುತ್ತೇನೆ.
13107006a ಆಚಾರಾಲ್ಲಭತೇ ಹ್ಯಾಯುರಾಚಾರಾಲ್ಲಭತೇ ಶ್ರಿಯಮ್|
13107006c ಆಚಾರಾತ್ಕೀರ್ತಿಮಾಪ್ನೋತಿ ಪುರುಷಃ ಪ್ರೇತ್ಯ ಚೇಹ ಚ||
ಆಚಾರದಿಂದ ಆಯುಸ್ಸು ದೊರೆಯುತ್ತದೆ ಮತ್ತು ಆಚಾರದಿಂದ ಸಂಪತ್ತೂ ದೊರೆಯುತ್ತದೆ. ಆಚಾರದಿಂದಲೇ ಪುರುಷನು ಇಹ-ಪರಗಳಲ್ಲಿ ಕೀರ್ತಿಯನ್ನು ಹೊಂದುತ್ತಾನೆ.
13107007a ದುರಾಚಾರೋ ಹಿ ಪುರುಷೋ ನೇಹಾಯುರ್ವಿಂದತೇ ಮಹತ್|
13107007c ತ್ರಸಂತಿ ಯಸ್ಮಾದ್ಭೂತಾನಿ ತಥಾ ಪರಿಭವಂತಿ ಚ||
ಇತರ ಜೀವಿಗಳು ಹೆದರುವ ಮತ್ತು ತಿರಸ್ಕರಿಸುವ ದುರಾಚಾರಿ ಪುರುಷನು ಇಲ್ಲಿ ದೀರ್ಘ ಆಯುಸ್ಸನ್ನು ಪಡೆದುಕೊಳ್ಳುವುದಿಲ್ಲ.
13107008a ತಸ್ಮಾತ್ಕುರ್ಯಾದಿಹಾಚಾರಂ ಯ ಇಚ್ಚೇದ್ಭೂತಿಮಾತ್ಮನಃ|
13107008c ಅಪಿ ಪಾಪಶರೀರಸ್ಯ ಆಚಾರೋ ಹಂತ್ಯಲಕ್ಷಣಮ್||
ಆದುದರಿಂದ ಇಲ್ಲಿ ಕಲ್ಯಾಣವನ್ನು ಬಯಸುವವನು ಸದಾಚಾರಗಳನ್ನು ಪಾಲಿಸಬೇಕು. ಪಾಪಶರೀರಿಯಾಗಿದ್ದವನೂ ಸದಾಚಾರಯುಕ್ತನಾಗಿದ್ದರೆ ಅವನ ಪಾಪಲಕ್ಷಣಗಳನ್ನು ಅದು ಕೊನೆಗಾಣಿಸುತ್ತದೆ.
13107009a ಆಚಾರಲಕ್ಷಣೋ ಧರ್ಮಃ ಸಂತಶ್ಚಾಚಾರಲಕ್ಷಣಾಃ|
13107009c ಸಾಧೂನಾಂ ಚ ಯಥಾ ವೃತ್ತಮೇತದಾಚಾರಲಕ್ಷಣಮ್||
ಸದಾಚಾರವೇ ಧರ್ಮದ ಲಕ್ಷಣ. ಆಚಾರಗಳೇ ಸಂತರ ಲಕ್ಷಣಗಳು. ಶ್ರೇಷ್ಠ ಪುರುಷರು ಹೇಗೆ ನಡೆದುಕೊಳ್ಳುತ್ತಾರೋ ಅದೇ ಸದಾಚಾರದ ಲಕ್ಷಣವಾಗುತ್ತದೆ.
13107010a ಅಪ್ಯದೃಷ್ಟಂ ಶ್ರುತಂ ವಾಪಿ ಪುರುಷಂ ಧರ್ಮಚಾರಿಣಮ್|
13107010c ಭೂತಿಕರ್ಮಾಣಿ ಕುರ್ವಾಣಂ ತಂ ಜನಾಃ ಕುರ್ವತೇ ಪ್ರಿಯಮ್||
ಧರ್ಮಚಾರೀ ಮತ್ತು ಕಲ್ಯಾಣಕಾರೀ ಪುರುಷನನ್ನು ನೋಡದೇ ಇದ್ದರೂ ಜನರು ಅವನ ಕುರಿತು ಕೇಳಿಯೇ ಅವನಲ್ಲಿ ಪ್ರೀತಿಯನ್ನಿಡುತ್ತಾರೆ.
13107011a ಯೇ ನಾಸ್ತಿಕಾ ನಿಷ್ಕ್ರಿಯಾಶ್ಚ ಗುರುಶಾಸ್ತ್ರಾತಿಲಂಘಿನಃ|
13107011c ಅಧರ್ಮಜ್ಞಾ ದುರಾಚಾರಾಸ್ತೇ ಭವಂತಿ ಗತಾಯುಷಃ||
ನಾಸ್ತಿಕ, ನಿಷ್ಕ್ರಿಯ ಮತ್ತು ಗುರು-ಶಾಸ್ತ್ರಗಳನ್ನು ಉಲ್ಲಂಘಿಸುವ ಧರ್ಮದ ಅಜ್ಞಾನಿ ದುರಾಚಾರಿಯ ಆಯಸ್ಸು ಕಡಿಮೆಯಾಗುತ್ತಾ ಹೋಗುತ್ತದೆ.
13107012a ವಿಶೀಲಾ ಭಿನ್ನಮರ್ಯಾದಾ ನಿತ್ಯಂ ಸಂಕೀರ್ಣಮೈಥುನಾಃ|
13107012c ಅಲ್ಪಾಯುಷೋ ಭವಂತೀಹ ನರಾ ನಿರಯಗಾಮಿನಃ||
ಶೀಲರಹಿತನೂ, ನಿತ್ಯವೂ ಧರ್ಮದ ಮರ್ಯಾದೆಗಳನ್ನು ಒಡೆದು ಶೀಲರಹಿತನಾಗಿ ಅನೇಕರೊಂದಿಗೆ ಮೈಥುನಸುಖವನ್ನು ಹೊಂದುವ[2] ನರನು ಅಲ್ಪಾಯುಷಿಯಾಗುತ್ತಾನೆ ಮತ್ತು ನರಕಕ್ಕೆ ಹೋಗುತ್ತಾನೆ.
13107013a ಸರ್ವಲಕ್ಷಣಹೀನೋಽಪಿ ಸಮುದಾಚಾರವಾನ್ನರಃ|
13107013c ಶ್ರದ್ದಧಾನೋಽನಸೂಯಶ್ಚ ಶತಂ ವರ್ಷಾಣಿ ಜೀವತಿ||
ಸರ್ವಲಕ್ಷಣಗಳಿಂದ ವಿಹೀನನಾಗಿದ್ದರೂ ಸಮುದಾಚಾರಯುಕ್ತನಾದ ಶ್ರದ್ಧಾಳು ಅನಸೂಯ ನರನು ನೂರು ವರ್ಷಗಳು ಜೀವಿಸುತ್ತಾನೆ.
13107014a ಅಕ್ರೋಧನಃ ಸತ್ಯವಾದೀ ಭೂತಾನಾಮವಿಹಿಂಸಕಃ|
13107014c ಅನಸೂಯುರಜಿಹ್ಮಶ್ಚ ಶತಂ ವರ್ಷಾಣಿ ಜೀವತಿ||
ಕ್ರೋಧರಹಿತ, ಸತ್ಯವಾದೀ, ಜೀವಿಗಳನ್ನು ಹಿಂಸಿಸದ ಅನಸೂಯ ಮತ್ತು ಕಪಟಶೂನ್ಯನು ನೂರು ವರ್ಷಗಳು ಜೀವಿಸುತ್ತಾನೆ.
13107015a ಲೋಷ್ಟಮರ್ದೀ ತೃಣಚ್ಚೇದೀ ನಖಖಾದೀ ಚ ಯೋ ನರಃ|
13107015c ನಿತ್ಯೋಚ್ಚಿಷ್ಟಃ ಸಂಕುಸುಕೋ ನೇಹಾಯುರ್ವಿಂದತೇ ಮಹತ್||
ಸುಮ್ಮಸುಮ್ಮನೇ ಮಣ್ಣುಹೆಂಟೆಗಳನ್ನು ಒಡೆಯುವ, ಸುಮ್ಮ ಸುಮ್ಮನೇ ಹುಲ್ಲಿನ ಕುಡಿಗಳನ್ನು ಕತ್ತರಿಸುವ, ಉಗುರು ಕಚ್ಚುವ, ನಿತ್ಯವೂ ಅಶುದ್ಧ ಪದಾರ್ಥಗಳನ್ನು ತಿನ್ನುವ ಮತ್ತು ಚಂಚಲ ಮನಸ್ಸಿನ ನರನು ಪೂರ್ಣಾಯುಷ್ಯವನ್ನು ಹೊಂದುವುದಿಲ್ಲ.
13107016a ಬ್ರಾಹ್ಮೇ ಮುಹೂರ್ತೇ ಬುಧ್ಯೇತ ಧರ್ಮಾರ್ಥೌ ಚಾನುಚಿಂತಯೇತ್|
13107016c ಉತ್ಥಾಯಾಚಮ್ಯ ತಿಷ್ಠೇತ ಪೂರ್ವಾಂ ಸಂಧ್ಯಾಂ ಕೃತಾಂಜಲಿಃ||
ಬ್ರಾಹ್ಮೀ ಮುಹೂರ್ತ[3]ದಲ್ಲಿ ಎದ್ದು ಧರ್ಮಾರ್ಥಗಳ ಕುರಿತು ಚಿಂತಿಸಬೇಕು. ಮೇಲೆದ್ದು ಆಚಮನ ಮಾಡಿ ಕೈಮುಗಿದು ನಿಂತು ಪ್ರಾತಃಕಾಲದ ಸಂಧ್ಯೋಪಾಸನೆಯನ್ನು ಮಾಡಬೇಕು.
13107017a ಏವಮೇವಾಪರಾಂ ಸಂಧ್ಯಾಂ ಸಮುಪಾಸೀತ ವಾಗ್ಯತಃ|
13107017c ನೇಕ್ಷೇತಾದಿತ್ಯಮುದ್ಯಂತಂ ನಾಸ್ತಂ ಯಾಂತಂ ಕದಾ ಚನ[4]||
ಹೀಗೆ ಸಾಯಂಕಾಲದಲ್ಲಿಯೂ ಮೌನಿಯಾಗಿದ್ದು ಸಂಧ್ಯೋಪಾಸನೆಯನ್ನು ಮಾಡಬೇಕು. ಉದಯ ಮತ್ತು ಅಸ್ತಗಳ ಸಮಯದಲ್ಲಿ ಸೂರ್ಯನನ್ನು ಎಂದೂ ನೋಡಬಾರದು.
13107018a ಋಷಯೋ ದೀರ್ಘ[5]ಸಂಧ್ಯತ್ವಾದ್ದೀರ್ಘಮಾಯುರವಾಪ್ನುವನ್|
13107018c ತಸ್ಮಾತ್ತಿಷ್ಠೇತ್ಸದಾ ಪೂರ್ವಾಂ ಪಶ್ಚಿಮಾಂ ಚೈವ ವಾಗ್ಯತಃ||
ನಿತ್ಯವೂ ಸಂಧ್ಯಾವಂದನೆಗಳನ್ನು ಮಾಡುತ್ತಿದ್ದುದರಿಂದ ಋಷಿಗಳು ದೀರ್ಘಾಯುಷ್ಯವನ್ನು ಪಡೆದುಕೊಂಡರು. ಆದುದರಿಂದ ಮೌನಿಯಾಗಿ ನಿಂತುಕೊಂಡು ಪ್ರಾತಃಕಾಲದ ಮತ್ತು ಸಂಧ್ಯಾಕಾಲದ ಸಂಧ್ಯಾವಂದನೆಯನ್ನು ಮಾಡಬೇಕು.
13107019a ಯೇ ಚ ಪೂರ್ವಾಮುಪಾಸಂತೇ ದ್ವಿಜಾಃ ಸಂಧ್ಯಾಂ ನ ಪಶ್ಚಿಮಾಮ್|
13107019c ಸರ್ವಾಂಸ್ತಾನ್ಧಾರ್ಮಿಕೋ ರಾಜಾ ಶೂದ್ರಕರ್ಮಾಣಿ ಕಾರಯೇತ್||
ಪ್ರಾತಃಕಾಲ-ಸಂಧ್ಯಾಕಾಲಗಳಲ್ಲಿ ಸಂಧ್ಯಾವಂದನೆಯನ್ನು ಮಾಡದಿರುವ ದ್ವಿಜರಿಂದ ಧಾರ್ಮಿಕ ರಾಜನು ಶೂದ್ರರ ಕರ್ಮಗಳನ್ನು ಮಾಡಿಸಬೇಕು.
13107020a ಪರದಾರಾ ನ ಗಂತವ್ಯಾಃ ಸರ್ವವರ್ಣೇಷು ಕರ್ಹಿ ಚಿತ್|
13107020c ನ ಹೀದೃಶಮನಾಯುಷ್ಯಂ ಲೋಕೇ ಕಿಂ ಚನ ವಿದ್ಯತೇ|
13107020e ಯಾದೃಶಂ ಪುರುಷಸ್ಯೇಹ ಪರದಾರೋಪಸೇವನಮ್[6]||
ಸರ್ವವರ್ಣದವರೂ ಎಂದೂ ಪರರ ಪತ್ನಿಯೊಂದಿಗೆ ಸಂಸರ್ಗವನ್ನಿಟ್ಟುಕೊಳ್ಳಬಾರದು. ಪರಸ್ತ್ರೀಗಮನದಿಂದ ಮನುಷ್ಯನ ಆಯುಸ್ಸು ಬಹುಬೇಗ ಕ್ಷೀಣಿಸುತ್ತದೆ. ಪರಸ್ತ್ರೀಸಮಾಗಮವು ಎಷ್ಟು ಬೇಗ ಮನುಷ್ಯನ ಆಯುಸ್ಸನ್ನು ನಷ್ಟಗೊಳಿಸುತ್ತದೋ ಅಷ್ಟುಬೇಗ ಆಯುಸ್ಸನ್ನು ನಷ್ಟಗೊಳಿಸುವ ಬೇರೆ ಯಾವ ಕಾರ್ಯವೂ ಈ ಸಂಸಾರದಲ್ಲಿಲ್ಲ.
13107021a ಪ್ರಸಾಧನಂ ಚ ಕೇಶಾನಾಮಂಜನಂ ದಂತಧಾವನಮ್|
13107021c ಪೂರ್ವಾಹ್ಣ ಏವ ಕುರ್ವೀತ ದೇವತಾನಾಂ ಚ ಪೂಜನಮ್||
ಕೂದಲು ಬಾಚಿಕೊಂಡು ಸಿಂಗರಿಸಿಕೊಳ್ಳುವುದು, ಕಣ್ಣುಗಳಿಗೆ ಕಾಡಿಗೆ ಹಚ್ಚಿಕೊಳ್ಳುವುದು, ಹಲ್ಲು ತಿಕ್ಕುವುದು ಮತ್ತು ದೇವತೆಗಳ ಪೂಜನ ಇವೆಲ್ಲವನ್ನೂ ಮಧ್ಯಾಹ್ನಕ್ಕೆ ಮೊದಲೇ[7] ಮಾಡಬೇಕು.
13107022a ಪುರೀಷಮೂತ್ರೇ ನೋದೀಕ್ಷೇನ್ನಾಧಿತಿಷ್ಠೇತ್ಕದಾ ಚನ|
13107022c ಉದಕ್ಯಯಾ ಚ ಸಂಭಾಷಾಂ ನ ಕುರ್ವೀತ ಕದಾ ಚನ||
ಮಲ-ಮೂತ್ರಗಳನ್ನು ನೋಡಬಾರದು ಮತ್ತು ಎಂದೂ ಅವುಗಳ ಮೇಲೆ ನಿಂತುಕೊಳ್ಳಬಾರದು. ಮೂತ್ರಮಾಡುವಾಗ ಎಂದೂ ಮಾತನಾಡಬಾರದು.
13107023a ನೋತ್ಸೃಜೇತ ಪುರೀಷಂ ಚ ಕ್ಷೇತ್ರೇ ಗ್ರಾಮಸ್ಯ ಚಾಂತಿಕೇ|
13107023c ಉಭೇ ಮೂತ್ರಪುರೀಷೇ ತು ನಾಪ್ಸು ಕುರ್ಯಾತ್ಕದಾ ಚನ||
ಹೊಲ ಮತ್ತು ಗ್ರಾಮಗಳ ಬಳಿಯಲ್ಲಿ ಮಲವಿಸರ್ಜನೆ ಮಾಡಬಾರದು. ಮಲ ಮತ್ತು ಮೂತ್ರ ಎರಡನ್ನೂ ನೀರಿನಲ್ಲಿ ಎಂದೂ ಮಾಡಬಾರದು.
13107024a ಪ್ರಾಙ್ಮುಖೋ ನಿತ್ಯಮಶ್ನೀಯಾದ್ವಾಗ್ಯತೋಽನ್ನಮಕುತ್ಸಯನ್|
13107024c ಪ್ರಸ್ಕಂದಯೇಚ್ಚ ಮನಸಾ ಭುಕ್ತ್ವಾ ಚಾಗ್ನಿಮುಪಸ್ಪೃಶೇತ್||
ನಿತ್ಯವೂ ಪೂರ್ವಾಭಿಮುಖವಾಗಿ ಕುಳಿತುಕೊಂಡು ಊಟಮಾಡಬೇಕು. ಊಟಮಾಡುವಾಗ ಮೌನಿಯಾಗಿರಬೇಕು. ತಿನ್ನುವ ಆಹಾರವನ್ನು ನಿಂದಿಸಬಾರದು. ಊಟಮಾಡಿದನಂತರ ಮನಸ್ಸಿನಲ್ಲಿಯೇ ಅಗ್ನಿಯನ್ನು ಮುಟ್ಟಬೇಕು.
13107025a ಆಯುಷ್ಯಂ ಪ್ರಾಙ್ಮುಖೋ ಭುಂಕ್ತೇ ಯಶಸ್ಯಂ ದಕ್ಷಿಣಾಮುಖಃ|
13107025c ಧನ್ಯಂ ಪಶ್ಚಾನ್ಮುಖೋ ಭುಂಕ್ತೇ ಋತಂ ಭುಂಕ್ತೇ ಉದಙ್ಮುಖಃ||
ಪೂರ್ವಾಭಿಮುಖವಾಗಿ ಕುಳಿತು ಊಟಮಾಡಿದರೆ ಆಯುಸ್ಸು ದೊರೆಯುತ್ತದೆ. ದಕ್ಷಿಣಾಭಿಮುಖವಾಗಿ ಕುಳಿತು ಊಟಮಾಡಿದರೆ ಯಶಸ್ಸು ದೊರೆಯುತ್ತದೆ. ಪಶ್ಚಿಮಾಭಿಮುಖವಾಗಿ ಕುಳಿತು ಊಟಮಾಡುವವನಿಗೆ ಧನವು ದೊರೆಯುತ್ತದೆ ಮತ್ತು ಉತ್ತರಾಭಿಮುಖನಾಗಿ ಕುಳಿತು ಊಟಮಾಡುವವನು ಸತ್ಯವನ್ನು ನುಡಿಯುತ್ತಾನೆ.
13107026a ನಾಧಿತಿಷ್ಠೇತ್ತುಷಾನ್ ಜಾತು ಕೇಶಭಸ್ಮಕಪಾಲಿಕಾಃ|
13107026c ಅನ್ಯಸ್ಯ ಚಾಪ್ಯುಪಸ್ಥಾನಂ ದೂರತಃ ಪರಿವರ್ಜಯೇತ್||
ತವುಡು, ಭಸ್ಮ, ಕೂದಲು, ಮತ್ತು ಸತ್ತವರ ಬುರುಡೆಗಳ ಮೇಲೆ ಎಂದೂ ಕುಳಿತುಕೊಳ್ಳಬಾರದು. ಇನ್ನೊಬ್ಬರು ಸ್ನಾನಮಾಡಿದ ನೀರನ್ನು ದೂರದಿಂದಲೇ ತ್ಯಜಿಸಬೇಕು.
13107027a ಶಾಂತಿಹೋಮಾಂಶ್ಚ ಕುರ್ವೀತ ಸಾವಿತ್ರಾಣಿ ಚ ಕಾರಯೇತ್|
13107027c ನಿಷಣ್ಣಶ್ಚಾಪಿ ಖಾದೇತ ನ ತು ಗಚ್ಚನ್ಕಥಂ ಚನ||
ಶಾಂತಿಹೋಮಗಳನ್ನು ಮಾಡಬೇಕು ಮತ್ತು ಸಾವಿತ್ರೀ ಮಂತ್ರವನ್ನು ಜಪಿಸಬೇಕು. ಕುಳಿತುಕೊಂಡೇ ಊಟಮಾಡಬೇಕು. ಉಟಮಾಡುವಾಗ ತಿರುಗಾಡುತ್ತಿರಬಾರದು.
13107028a ಮೂತ್ರಂ ನ ತಿಷ್ಠತಾ ಕಾರ್ಯಂ ನ ಭಸ್ಮನಿ ನ ಗೋವ್ರಜೇ||
13107029a ಆರ್ದ್ರಪಾದಸ್ತು ಭುಂಜೀತ ನಾರ್ದ್ರಪಾದಸ್ತು ಸಂವಿಶೇತ್|
13107029c ಆರ್ದ್ರಪಾದಸ್ತು ಭುಂಜಾನೋ ವರ್ಷಾಣಾಂ ಜೀವತೇ ಶತಮ್||
ನಿಂತುಕೊಂಡು ಮೂತ್ರವಿಸರ್ಜನೆ ಮಾಡಬಾರದು. ಭಸ್ಮದ ಮೇಲೆ ಮತ್ತು ಗೋವಿನ ಕೊಟ್ಟಿಗೆಯಲ್ಲಿ ಮೂತ್ರವಿಸರ್ಜನೆ ಮಾಡಬಾರದು. ಕಾಲುಗಳನ್ನು ತೊಳೆದ ನಂತರವೇ ಊಟಮಾಡಬೇಕು. ಆದರೆ ಒದ್ದೆಕಾಲಿನಲ್ಲಿ ಮಲಗಿಕೊಳ್ಳಬಾರದು. ಕಾಲುಗಳನ್ನು ತೊಳೆದು ಊಟಮಾಡುವವನು ನೂರು ವರ್ಷ ಜೀವಿಸುತ್ತಾನೆ.
13107030a ತ್ರೀಣಿ ತೇಜಾಂಸಿ ನೋಚ್ಚಿಷ್ಟ ಆಲಭೇತ ಕದಾ ಚನ|
13107030c ಅಗ್ನಿಂ ಗಾಂ ಬ್ರಾಹ್ಮಣಂ ಚೈವ ತಥಾಸ್ಯಾಯುರ್ನ ರಿಷ್ಯತೇ||
ಊಟ ಮಾಡಿ ಕೈತೊಳೆಯದೇ ಎಂಜಲು ಕೈಯಿಂದ ಈ ಮೂರು ತೇಜಸ್ಸುಗಳನ್ನು ಎಂದೂ ಮುಟ್ಟಬಾರದು: ಅಗ್ನಿ, ಗೋವು ಮತ್ತು ಬ್ರಾಹ್ಮಣ. ಇದನ್ನು ಆಚರಿಸುವುದರಿಂದ ಆಯುಸ್ಸು ಕ್ಷೀಣಿಸುವುದಿಲ್ಲ.
13107031a ತ್ರೀಣಿ ತೇಜಾಂಸಿ ನೋಚ್ಚಿಷ್ಟ ಉದೀಕ್ಷೇತ ಕದಾ ಚನ|
13107031c ಸೂರ್ಯಾಚಂದ್ರಮಸೌ ಚೈವ ನಕ್ಷತ್ರಾಣಿ ಚ ಸರ್ವಶಃ||
ಉಚ್ಚಿಷ್ಟನಾಗಿರುವವನು ಮೂರು ತೇಜಸ್ಸುಗಳನ್ನು ಎಂದೂ ನೋಡಬಾರದು: ಸೂರ್ಯ, ಚಂದ್ರ ಮತ್ತು ಎಲ್ಲ ನಕ್ಷತ್ರಗಳು.
13107032a ಊರ್ಧ್ವಂ ಪ್ರಾಣಾ ಹ್ಯುತ್ಕ್ರಾಮಂತಿ ಯೂನಃ ಸ್ಥವಿರ ಆಯತಿ|
13107032c ಪ್ರತ್ಯುತ್ಥಾನಾಭಿವಾದಾಭ್ಯಾಂ ಪುನಸ್ತಾನ್ ಪ್ರತಿಪದ್ಯತೇ||
ವೃದ್ಧನು ಆಗಮಿಸಿದಾಗ ಯುವಕನ ಪ್ರಾಣವು ಮೇಲೇರುತ್ತದೆ. ಮೇಲೆದ್ದು ವೃದ್ಧನನ್ನು ಅಭಿವಂದಿಸಿದಾಗ ಪುನಃ ಅವನ ಪ್ರಾಣವು ಮೊದಲಿನ ಸ್ಥಿತಿಗೇ ಬರುತ್ತದೆ.
13107033a ಅಭಿವಾದಯೇತ ವೃದ್ಧಾಂಶ್ಚ ಆಸನಂ ಚೈವ ದಾಪಯೇತ್|
13107033c ಕೃತಾಂಜಲಿರುಪಾಸೀತ ಗಚ್ಚಂತಂ ಪೃಷ್ಠತೋಽನ್ವಿಯಾತ್||
ವೃದ್ಧನನ್ನು ಅಭಿವಂದಿಸಿ ಆಸನವನ್ನೂ ನೀಡಬೇಕು. ಅವನು ಕುಳಿತುಕೊಂಡ ನಂತರ ಅಂಜಲೀ ಬದ್ಧನಾಗಿ ನಿಂತುಕೊಂಡೇ ಇರಬೇಕು. ವೃದ್ಧನು ಎದ್ದು ಹೊರಡುವಾಗ ಅವನನ್ನು ಹಿಂಬಾಲಿಸಿ ಹೋಗಬೇಕು[8].
13107034a ನ ಚಾಸೀತಾಸನೇ ಭಿನ್ನೇ ಭಿನ್ನಂ ಕಾಂಸ್ಯಂ ಚ ವರ್ಜಯೇತ್|
13107034c ನೈಕವಸ್ತ್ರೇಣ ಭೋಕ್ತವ್ಯಂ ನ ನಗ್ನಃ ಸ್ನಾತುಮರ್ಹತಿ|
13107034e ಸ್ವಪ್ತವ್ಯಂ ನೈವ ನಗ್ನೇನ ನ ಚೋಚ್ಚಿಷ್ಟೋಽಪಿ ಸಂವಿಶೇತ್||
ಒಡೆದುಹೋದ ಆಸನದ ಮೇಲೆ ಕುಳಿತುಕೊಳ್ಳಬಾರದು. ಒಡೆದು ಹೋದ ಪಾತ್ರೆಯನ್ನು ವರ್ಜಿಸಬೇಕು. ಒಂದೇ ವಸ್ತ್ರವನ್ನುಟ್ಟುಕೊಂಡು ಊಟಮಾಡಬಾರದು[9]. ನಗ್ನನಾಗಿ ಸ್ನಾನಮಾಡಬಾರದು. ನಗ್ನನಾಗಿ ಮಲಗಬಾರದು. ಇನ್ನೊಬ್ಬರು ತಿಂದು ಬಿಟ್ಟಿದ್ದುದನ್ನು ತಿನ್ನಬಾರದು.
13107035a ಉಚ್ಚಿಷ್ಟೋ ನ ಸ್ಪೃಶೇಚ್ಚೀರ್ಷಂ ಸರ್ವೇ ಪ್ರಾಣಾಸ್ತದಾಶ್ರಯಾಃ|
13107035c ಕೇಶಗ್ರಹಾನ್ ಪ್ರಹಾರಾಂಶ್ಚ ಶಿರಸ್ಯೇತಾನ್ವಿವರ್ಜಯೇತ್||
ಎಂಜಲು ಕೈಯಿಂದ ಇನ್ನೊಬ್ಬನ ಶಿರವನ್ನು ಮುಟ್ಟಬಾರದು. ಏಕೆಂದರೆ ಎಲ್ಲ ಪ್ರಾಣಗಳೂ ಶಿರದಲ್ಲಿಯೇ ಇರುತ್ತವೆ. ಇನ್ನೊಬ್ಬರ ಕೂದಲನ್ನು ಎಳೆಯಬಾರದು. ಇನ್ನೊಬ್ಬರ ತಲೆಯ ಮೇಲೆ ಹೊಡೆಯಲೂ ಬಾರದು.
13107036a ನ ಪಾಣಿಭ್ಯಾಮುಭಾಭ್ಯಾಂ ಚ ಕಂಡೂಯೇಜ್ಜಾತು ವೈ ಶಿರಃ|
13107036c ನ ಚಾಭೀಕ್ಷ್ಣಂ ಶಿರಃ ಸ್ನಾಯಾತ್ತಥಾಸ್ಯಾಯುರ್ನ ರಿಷ್ಯತೇ||
ಎರಡೂ ಕೈಗಳಿಂದ ತನ್ನ ತಲೆಯನ್ನು ತುರಿಸಿಕೊಳ್ಳಬಾರದು. ಸ್ನಾನಮಾಡುವಾಗ ತಲೆಯ ಮೇಲೆ ಮತ್ತೆ ಮತ್ತೆ ನೀರನ್ನು ಸುರಿದುಕೊಳ್ಳಬಾರದು. ಇವುಗಳ ಆಚರಣೆಯಿಂದ ಆಯಸ್ಸು ಕಡಿಮೆಯಾಗುವುದಿಲ್ಲ.
13107037a ಶಿರಃಸ್ನಾತಶ್ಚ ತೈಲೇನ ನಾಂಗಂ ಕಿಂ ಚಿದುಪಸ್ಪೃಶೇತ್|
13107037c ತಿಲಪಿಷ್ಟಂ ನ ಚಾಶ್ನೀಯಾತ್ತಥಾಯುರ್ವಿಂದತೇ ಮಹತ್[10]||
ತಲೆಗೆ ಎಣ್ಣೆಯನ್ನು ಹಚ್ಚಿಕೊಂಡ ನಂತರ ಅದೇ ಕೈಯಿಂದ ಇತರ ಅಂಗಗಳನ್ನು ಮುಟ್ಟಿಕೊಳ್ಳಬಾರದು[11] ಮತ್ತು ಎಳ್ಳಿನಿಂದ ಮಾಡಿದ ಪದಾರ್ಥಗಳನ್ನು ತಿನ್ನಬಾರದು. ಇಲ್ಲದಿದ್ದರೆ ಆಯಸ್ಸು ಬಹಳವಾಗಿ ಕಡಿಮೆಯಾಗುತ್ತದೆ[12].
13107038a ನಾಧ್ಯಾಪಯೇತ್ತಥೋಚ್ಚಿಷ್ಟೋ ನಾಧೀಯೀತ ಕದಾ ಚನ|
13107038c ವಾತೇ ಚ ಪೂತಿಗಂಧೇ ಚ ಮನಸಾಪಿ ನ ಚಿಂತಯೇತ್||
ಉಚ್ಚಿಷ್ಟನಾಗಿರುವಾಗ ಎಂದೂ ಅಧ್ಯಾಪನಮಾಡಿಸಬಾರದು ಮತ್ತು ಸ್ವಯಂ ಅಧ್ಯಯನ ಮಾಡಬಾರದು. ಗಾಳಿಯಲ್ಲಿ ದುರ್ಗಂಧವಿರುವಾಗ ಅಧ್ಯಾಪನ-ಸ್ವಾಧ್ಯಾಯಗಳ ಕುರಿತು ಮನಸ್ಸಿನಲ್ಲಿಯೂ ಯೋಚಿಸಬಾರದು.
13107039a ಅತ್ರ ಗಾಥಾ ಯಮೋದ್ಗೀತಾಃ ಕೀರ್ತಯಂತಿ ಪುರಾವಿದಃ|
13107039c ಆಯುರಸ್ಯ ನಿಕೃಂತಾಮಿ ಪ್ರಜಾಮಸ್ಯಾದದೇ ತಥಾ||
13107040a ಯ ಉಚ್ಚಿಷ್ಟಃ ಪ್ರವದತಿ[13] ಸ್ವಾಧ್ಯಾಯಂ ಚಾಧಿಗಚ್ಚತಿ|
13107040c ಯಶ್ಚಾನಧ್ಯಾಯಕಾಲೇಽಪಿ ಮೋಹಾದಭ್ಯಸ್ಯತಿ ದ್ವಿಜಃ|
13107040e ತಸ್ಮಾದ್ಯುಕ್ತೋಽಪ್ಯನಧ್ಯಾಯೇ ನಾಧೀಯೀತ ಕದಾ ಚನ||
ಹಿಂದಿನದನ್ನು ತಿಳಿದವರು ಈ ವಿಷಯದಲ್ಲಿ ಯಮಗೀತೆಯನ್ನು ಹೇಳುತ್ತಾರೆ. “ಉಚ್ಚಿಷ್ಟನಾಗಿರುವಾಗ ಮಾತನಾಡುವ ಮತ್ತು ಸ್ವಾಧ್ಯಾಯಮಾಡುವವನ ಹಾಗೂ ಮೋಹವಶನಾಗಿ ಅನಧ್ಯಾಯದ ಸಮಯದಲ್ಲಿಯೂ ಅಧ್ಯಯನ ಮಾಡುವ ದ್ವಿಜನ ಮತ್ತು ಅವನ ಸಂತಾನದ ಆಯುಸ್ಸನ್ನು ಕಡಿಯುತ್ತೇನೆ.” ಆದುದರಿಂದ ಅನಧ್ಯಾಯದ ಸಮಯದಲ್ಲಿ ಎಂದೂ ಅಧ್ಯಯನ ಮಾಡಬಾರದು.
13107041a ಪ್ರತ್ಯಾದಿತ್ಯಂ ಪ್ರತ್ಯನಿಲಂ ಪ್ರತಿ ಗಾಂ ಚ ಪ್ರತಿ ದ್ವಿಜಾನ್|
13107041c ಯೇ ಮೇಹಂತಿ ಚ ಪಂಥಾನಂ ತೇ ಭವಂತಿ ಗತಾಯುಷಃ||
ಸೂರ್ಯನ ಕಡೆ, ಅಗ್ನಿಯ ಕಡೆ, ಗೋವಿನ ಕಡೆ ಮತ್ತು ದ್ವಿಜರ ಕಡೆ ತಿರುಗಿ ಮೂತ್ರಮಾಡುವವರು ಮತ್ತು ರಸ್ತೆಗಳ ಮೇಲೆ ಮೂತ್ರಮಾಡುವವರು ಅಲ್ಪಾಯುಷಿಗಳಾಗುತ್ತಾರೆ.
13107042a ಉಭೇ ಮೂತ್ರಪುರೀಷೇ ತು ದಿವಾ ಕುರ್ಯಾದುದಙ್ಮುಖಃ|
13107042c ದಕ್ಷಿಣಾಭಿಮುಖೋ ರಾತ್ರೌ ತಥಾಸ್ಯಾಯುರ್ನ ರಿಷ್ಯತೇ||
ಹಗಲಿನಲ್ಲಿ ಉತ್ತರಾಭಿಮುಖವಾಗಿ ಮತ್ತು ರಾತ್ರಿಯಲ್ಲಿ ದಕ್ಷಿಣಾಭಿಮುಖವಾಗಿ ಕುಳಿತು ಮಲ-ಮೂತ್ರಗಳನ್ನು ವಿಸರ್ಜಿಸಬೇಕು. ಹೀಗೆ ಮಾಡುವುದರಿಂದ ಆಯಸ್ಸು ಕಡಿಮೆಯಾಗುವುದಿಲ್ಲ.
13107043a ತ್ರೀನ್ ಕೃಶಾನ್ನಾವಜಾನೀಯಾದ್ದೀರ್ಘಮಾಯುರ್ಜಿಜೀವಿಷುಃ|
13107043c ಬ್ರಾಹ್ಮಣಂ ಕ್ಷತ್ರಿಯಂ ಸರ್ಪಂ ಸರ್ವೇ ಹ್ಯಾಶೀವಿಷಾಸ್ತ್ರಯಃ||
ದೀರ್ಘಾಯುವಾಗಿ ಜೀವಿಸಿರಲು ಬಯಸುವವನು ಬ್ರಾಹ್ಮಣ, ಕ್ಷತ್ರಿಯ ಮತ್ತು ಸರ್ಪ- ಈ ಮೂವರನ್ನು ಅವರು ಎಷ್ಟೇ ದುರ್ಬಲರಾಗಿದ್ದರೂ ಅಪಮಾನಿಸಬಾರದು. ಏಕೆಂದರೆ ಈ ಮೂವರಲ್ಲಿಯೂ ತೀಕ್ಷ್ಣ ವಿಷವಿರುವುದು.
13107044a ದಹತ್ಯಾಶೀವಿಷಃ ಕ್ರುದ್ಧೋ ಯಾವತ್ಪಶ್ಯತಿ ಚಕ್ಷುಷಾ|
13107044c ಕ್ಷತ್ರಿಯೋಽಪಿ ದಹೇತ್ಕ್ರುದ್ಧೋ ಯಾವತ್ ಸ್ಪೃಶತಿ ತೇಜಸಾ||
ಕ್ರುದ್ಧ ಸರ್ಪವು ತನ್ನ ನೋಟದಿಂದಲೇ ಸುಟ್ಟುಬಿಡಬಲ್ಲದು. ಕ್ರುದ್ಧ ಕ್ಷತ್ರಿಯನೂ ಕೂಡ ತನ್ನ ತೇಜಸ್ಸಿನಿಂದ ಮುಟ್ಟಿ ಸುಟ್ಟುಬಿಡಬಲ್ಲನು.
13107045a ಬ್ರಾಹ್ಮಣಸ್ತು ಕುಲಂ ಹನ್ಯಾದ್ಧ್ಯಾನೇನಾವೇಕ್ಷಿತೇನ ಚ|
13107045c ತಸ್ಮಾದೇತತ್ತ್ರಯಂ ಯತ್ನಾದುಪಸೇವೇತ ಪಂಡಿತಃ||
ಬ್ರಾಹ್ಮಣನಾದರೋ ತನ್ನ ಧ್ಯಾನ ಮತ್ತು ನೋಟಗಳಿಂದ ಕುಲವನ್ನೇ ನಾಶಪಡಿಸಬಲ್ಲನು. ಆದುದರಿಂದ ಪಂಡಿತನಾದವನು ಈ ಮೂವರನ್ನೂ ಪೂಜಿಸಲು ಪ್ರಯತ್ನಿಸಬೇಕು.
13107046a ಗುರುಣಾ ವೈರನಿರ್ಬಂಧೋ ನ ಕರ್ತವ್ಯಃ ಕದಾ ಚನ|
13107046c ಅನುಮಾನ್ಯಃ ಪ್ರಸಾದ್ಯಶ್ಚ ಗುರುಃ ಕ್ರುದ್ಧೋ ಯುಧಿಷ್ಠಿರ||
ಯುಧಿಷ್ಠಿರ! ಗುರುವಿನೊಂದಿಗೆ ಎಂದೂ ವೈರ-ನಿರ್ಬಂಧಗಳನ್ನು ಮಾಡಿಕೊಳ್ಳಬಾರದು. ಗುರುವು ಕ್ರುದ್ಧನಾದರೆ ಅವನನ್ನು ಎಲ್ಲ ರೀತಿಗಳಿಂದ ಮನ್ನಿಸಿ ಪ್ರಸನ್ನಗೊಳಿಸಬೇಕು.
13107047a ಸಮ್ಯಗ್ಮಿಥ್ಯಾಪ್ರವೃತ್ತೇಽಪಿ ವರ್ತಿತವ್ಯಂ ಗುರಾವಿಹ|
13107047c ಗುರುನಿಂದಾ ದಹತ್ಯಾಯುರ್ಮನುಷ್ಯಾಣಾಂ ನ ಸಂಶಯಃ||
ಗುರುವು ಪ್ರತಿಕೂಲವಾಗಿ ನಡೆದುಕೊಂಡರೂ ಅವನೊಂದಿಗೆ ಚೆನ್ನಾಗಿಯೇ ನಡೆದುಕೊಳ್ಳಬೇಕು. ಏಕೆಂದರೆ ಗುರುನಿಂದೆಯು ಮನುಷ್ಯರ ಆಯುಸ್ಸನ್ನು ಸುಟ್ಟುಹಾಕಿಬಿಡುತ್ತದೆ. ಇದರಲ್ಲಿ ಸಂಶಯವೇ ಇಲ್ಲ.
13107048a ದೂರಾದಾವಸಥಾನ್ಮೂತ್ರಂ ದೂರಾತ್ಪಾದಾವಸೇಚನಮ್|
13107048c ಉಚ್ಚಿಷ್ಟೋತ್ಸರ್ಜನಂ ಚೈವ ದೂರೇ ಕಾರ್ಯಂ ಹಿತೈಷಿಣಾ||
ಮನೆಯಿಂದ ದೂರದಲ್ಲಿಯೇ ಮೂತ್ರವಿಸರ್ಜನೆ ಮಾಡಬೇಕು. ದೂರದಲ್ಲಿಯೇ ಕಾಲು ತೊಳೆಯಬೇಕು. ಹಿತೈಷಿಗಳಾದವರು ಎಂಜಲನ್ನೂ ದೂರದಲ್ಲಿಯೇ ಎಸೆಯಬೇಕು.
13107049a ನಾತಿಕಲ್ಪಂ ನಾತಿಸಾಯಂ ನ ಚ ಮಧ್ಯಂದಿನೇ ಸ್ಥಿತೇ|
13107049c ನಾಜ್ಞಾತೈಃ ಸಹ ಗಚ್ಚೇತ ನೈಕೋ ನ ವೃಷಲೈಃ ಸಹ||
ಅತಿ ಮುಂಜಾನೆ, ಅತಿ ಸಾಯಂಕಾಲ ಮತ್ತು ಮಧ್ಯಾಹ್ನದ ಸಮಯದಲ್ಲಿ ಅಜ್ಞಾತರೊಂದಿಗೆ ಅಥವಾ ಒಬ್ಬಂಟಿಗನಾಗಿ ಅಥವಾ ವೃಷಲೆಯೊಂದಿಗೆ ಹೊರಗೆ ಹೋಗಬಾರದು.
13107050a ಪಂಥಾ ದೇಯೋ ಬ್ರಾಹ್ಮಣಾಯ ಗೋಭ್ಯೋ ರಾಜಭ್ಯ ಏವ ಚ|
13107050c ವೃದ್ಧಾಯ ಭಾರತಪ್ತಾಯ ಗರ್ಭಿಣ್ಯೈ ದುರ್ಬಲಾಯ ಚ||
ಬ್ರಾಹ್ಮಣ, ಗೋವು, ರಾಜ, ವೃದ್ಧ, ಭಾರವನ್ನು ಹೊತ್ತಿರುವವರು, ಗರ್ಭಿಣಿಯರು, ಮತ್ತು ದುರ್ಬಲರಿಗೆ ದಾರಿ ನೀಡಬೇಕು.
13107051a ಪ್ರದಕ್ಷಿಣಂ ಚ ಕುರ್ವೀತ ಪರಿಜ್ಞಾತಾನ್ವನಸ್ಪತೀನ್|
13107051c ಚತುಷ್ಪಥಾನ್ ಪ್ರಕುರ್ವೀತ ಸರ್ವಾನೇವ ಪ್ರದಕ್ಷಿಣಾನ್||
ಹೋಗುವಾಗ ಪರಿಚಿತವಿರುವ ಅಶ್ವತ್ಥ ಮೊದಲಾದ ವೃಕ್ಷಗಳನ್ನು ಎಡಕ್ಕೆ ಮಾಡಿಕೊಂಡು ಹೋಗಬೇಕು. ನಾಲ್ಕು ರಸ್ತೆಗಳು ಸೇರುವ ಚೌಕದಲ್ಲಿಯೂ ಪ್ರದಕ್ಷಿಣಾರೂಪದಲ್ಲಿಯೇ ಹೋಗಬೇಕು.
13107052a ಮಧ್ಯಂದಿನೇ ನಿಶಾಕಾಲೇ ಮಧ್ಯರಾತ್ರೇ ಚ ಸರ್ವದಾ|
13107052c ಚತುಷ್ಪಥಾನ್ನ ಸೇವೇತ ಉಭೇ ಸಂಧ್ಯೇ ತಥೈವ ಚ||
ಮಧ್ಯಾಹ್ನದ ಸಮಯ, ರಾತ್ರಿ, ಮಧ್ಯ ರಾತ್ರಿ ಹಾಗೂ ಎರಡೂ ಸಂಧ್ಯೆಗಳ ಸಮಯದಲ್ಲಿ ನಾಲ್ಕು ರಸ್ತೆಗಳು ಸೇರುವ ಚೌಕದಲ್ಲಿ ಇರಬಾರದು.
13107053a ಉಪಾನಹೌ ಚ ವಸ್ತ್ರಂ ಚ ಧೃತಮನ್ಯೈರ್ನ ಧಾರಯೇತ್|
13107053c ಬ್ರಹ್ಮಚಾರೀ ಚ ನಿತ್ಯಂ ಸ್ಯಾತ್ಪಾದಂ ಪಾದೇನ ನಾಕ್ರಮೇತ್||
13107054a ಅಮಾವಾಸ್ಯಾಂ ಪೌರ್ಣಮಾಸ್ಯಾಂ ಚತುರ್ದಶ್ಯಾಂ ಚ ಸರ್ವಶಃ|
13107054c ಅಷ್ಟಮ್ಯಾಂ ಸರ್ವಪಕ್ಷಾಣಾಂ ಬ್ರಹ್ಮಚಾರೀ ಸದಾ ಭವೇತ್||
13107055a ವೃಥಾ ಮಾಂಸಂ ನ ಖಾದೇತ ಪೃಷ್ಠಮಾಂಸಂ ತಥೈವ ಚ|
13107055c ಆಕ್ರೋಶಂ ಪರಿವಾದಂ ಚ ಪೈಶುನ್ಯಂ ಚ ವಿವರ್ಜಯೇತ್||
ಇನ್ನೊಬ್ಬರು ಧರಿಸಿದ್ದ ಪಾದರಕ್ಷೆ ಮತ್ತು ವಸ್ತ್ರಗಳನ್ನು ಧರಿಸಬಾರದು. ನಿತ್ಯವೂ ಬ್ರಹ್ಮಚಾರಿಯಾಗಿರಬೇಕು. ಕಾಲಿನಿಂದ ಕಾಲನ್ನು ಒತ್ತಬಾರದು[14]. ಎಲ್ಲ ಪಕ್ಷಗಳ ಅಮಾವಾಸ್ಯೆ, ಹುಣ್ಣಿಮೆ, ಚತುರ್ದಶಿ, ಮತ್ತು ಅಷ್ಟಮಿಗಳಂದು ಸದಾ ಬ್ರಹ್ಮಚಾರಿಯಾಗಿರಬೇಕು[15]. ವೃಥಾ ಮಾಂಸವನ್ನೂ ಅದರಲ್ಲೂ ಪೃಷ್ಠಭಾಗದ ಮಾಂಸವನ್ನು ತಿನ್ನಬಾರದು. ಆಕ್ರೋಶ, ನಿಂದೆ, ಚಾಡಿಹೇಳುವುದು ಮತ್ತು ಬೆನ್ನಹಿಂದೆ ಮಾತನಾಡಿಕೊಳ್ಳುವುದು ಇವುಗಳನ್ನು ವರ್ಜಿಸಬೇಕು.
13107056a ನಾರುಂತುದಃ ಸ್ಯಾನ್ನ ನೃಶಂಸವಾದೀ
ನ ಹೀನತಃ ಪರಮಭ್ಯಾದದೀತ|
13107056c ಯಯಾಸ್ಯ ವಾಚಾ ಪರ ಉದ್ವಿಜೇತ
ನ ತಾಂ ವದೇದ್ರುಶತೀಂ ಪಾಪಲೋಕ್ಯಾಮ್||
ಇನ್ನೊಬ್ಬರ ಮರ್ಮಗಳಿಗೆ ಘಾತಿಯನ್ನುಂಟುಮಾಡಬಾರದು. ಕ್ರೂರವಾಗಿ ಮಾತನಾಡಬಾರದು. ಇತರರನ್ನು ಹೀನಭಾವದಿಂದ ನೋಡಬಾರದು. ಯಾವ ಮಾತಿನಿಂದ ಇತರರಲ್ಲಿ ಉದ್ವೇಗವನ್ನುಂಟುಮಾಡುತ್ತದೆಯೋ ಅಂಥಹ ಕ್ರೂರಮಾತುಗಳು ಪಾಪಿಗಳ ಲೋಕಕ್ಕೆ ಕೊಂಡೊಯ್ಯುತ್ತವೆ. ಆದುದರಿಂದ ಅಂಥಹ ಮತುಗಳನ್ನಾಡಬಾರದು.
13107057a ವಾಕ್ಸಾಯಕಾ ವದನಾನ್ನಿಷ್ಪತಂತಿ
ಯೈರಾಹತಃ ಶೋಚತಿ ರಾತ್ರ್ಯಹಾನಿ|
13107057c ಪರಸ್ಯ ನಾಮರ್ಮಸು ತೇ ಪತಂತಿ
ತಾನ್ಪಂಡಿತೋ ನಾವಸೃಜೇತ್ಪರೇಷು||
ಬಾಯಿಯಿಂದ ಬಿದ್ದ ಮಾತಿನ ಬಾಣಗಳು ಯಾರನ್ನು ಹೊಡೆಯುತ್ತವೆಯೋ ಅವನು ದಿನ-ರಾತ್ರಿ ಶೋಕಪೀಡಿತನಾಗುತ್ತಾನೆ. ಆದುದರಿಂದ ಮರ್ಮಸ್ಥಾನಗಳನ್ನು ಗಾಯಗೊಳಿಸುವ ಮಾತುಗಳನ್ನು ವಿದ್ವಾನ್ ಪುರುಷನು ಇತರರ ಕುರಿತು ಎಂದೂ ಆಡುವುದಿಲ್ಲ.
13107058a ರೋಹತೇ ಸಾಯಕೈರ್ವಿದ್ಧಂ ವನಂ ಪರಶುನಾ ಹತಮ್|
13107058c ವಾಚಾ ದುರುಕ್ತಂ ಬೀಭತ್ಸಂ ನ ಸಂರೋಹತಿ ವಾಕ್ಕ್ಷತಮ್[16]||
ಬಾಣಗಳಿಂದ ತುಂಡರಿಸಲ್ಪಟ್ಟ ಮತ್ತು ಕೊಡಲಿಯಿಂದ ಕಡಿಯಲ್ಪಟ್ಟ ವನವು ಪುನಃ ಅಂಕುರಿಸಬಹುದು. ಆದರೆ ಆಡಿದ ಕೆಟ್ಟ ಮಾತಿನಿಂದ ಉಂಟಾದ ಭಯಂಕರ ಗಾಯವು ಎಂದೂ ಮಾಸುವುದಿಲ್ಲ.
13107059a ಹೀನಾಂಗಾನತಿರಿಕ್ತಾಂಗಾನ್ವಿದ್ಯಾಹೀನಾನ್ವಯೋಧಿಕಾನ್|
13107059c ರೂಪದ್ರವಿಣಹೀನಾಂಶ್ಚ ಸತ್ತ್ವಹೀನಾಂಶ್ಚ ನಾಕ್ಷಿಪೇತ್||
ಹೀನಾಂಗರು, ಅಧಿಕಾಂಗರು, ವಿದ್ಯಾಹೀನರು, ನಿಂದನೆಗೊಳಗಾದವರು, ಕುರೂಪರು, ನಿರ್ಧನರು ಮತ್ತು ನಿರ್ಬಲರ ಕುರಿತು ಆಕ್ಷೇಪ ಮಾಡುವುದು ಸರಿಯಲ್ಲ.
13107060a ನಾಸ್ತಿಕ್ಯಂ ವೇದನಿಂದಾಂ ಚ ದೇವತಾನಾಂ ಚ ಕುತ್ಸನಮ್|
13107060c ದ್ವೇಷಸ್ತಂಭಾಭಿಮಾನಾಂಶ್ಚ ತೈಕ್ಷ್ಣ್ಯಂ ಚ ಪರಿವರ್ಜಯೇತ್||
ನಾಸ್ತಿಕ್ಯತೆ, ವೇದನಿಂದಾ, ದೇವತೆಗಳನ್ನು ಅಪಮಾನಿಸುವುದು, ದ್ವೇಷ, ಉದ್ದಂಡತೆ, ಅಭಿಮಾನ ಮತ್ತು ಕಠೋರತೆ – ಈ ದುರ್ಗುಣಗಳನ್ನು ಪರಿತ್ಯಜಿಸಬೇಕು.
13107061a ಪರಸ್ಯ ದಂಡಂ ನೋದ್ಯಚ್ಚೇತ್ಕ್ರೋದ್ಧೋ ನೈನಂ ನಿಪಾತಯೇತ್|
13107061c ಅನ್ಯತ್ರ ಪುತ್ರಾಚ್ಚಿಷ್ಯಾದ್ವಾ ಶಿಕ್ಷಾರ್ಥಂ ತಾಡನಂ ಸ್ಮೃತಮ್||
ಮಕ್ಕಳು ಮತ್ತು ಶಿಷ್ಯರನ್ನು ಬಿಟ್ಟು ಇತರರನ್ನು ಹೊಡೆಯಬಾರದು ಮತ್ತು ನೆಲಕ್ಕೆ ಉರುಳಿಸಬಾರದು. ಮಕ್ಕಳು ಮತ್ತು ಶಿಷ್ಯರನ್ನು ಶಿಕ್ಷಾರ್ಥವಾಗಿ ಹೊಡೆಯುವುದು ಉಚಿತ ಎಂದಿದೆ.
13107062a ನ ಬ್ರಾಹ್ಮಣಾನ್ಪರಿವದೇನ್ನಕ್ಷತ್ರಾಣಿ ನ ನಿರ್ದಿಶೇತ್|
13107062c ತಿಥಿಂ ಪಕ್ಷಸ್ಯ ನ ಬ್ರೂಯಾತ್ತಥಾಸ್ಯಾಯುರ್ನ ರಿಷ್ಯತೇ[17]||
ಬ್ರಾಹ್ಮಣರನ್ನು ನೋಯಿಸಬಾರದು. ನಕ್ಷತ್ರಗಳಿಗೆ ಕೈತೋರಿಸಬಾರದು. ತಿಥಿ-ಪಕ್ಷಗಳನ್ನು ಹೇಳಬಾರದು. ಹೀಗೆ ಮಾಡುವುದರಿಂದ ಆಯುಸ್ಸು ಕಡಿಮೆಯಾಗುವುದಿಲ್ಲ.
13107063a ಕೃತ್ವಾ ಮೂತ್ರಪುರೀಷೇ ತು ರಥ್ಯಾಮಾಕ್ರಮ್ಯ ವಾ ಪುನಃ|
13107063c ಪಾದಪ್ರಕ್ಷಾಲನಂ ಕುರ್ಯಾತ್ಸ್ವಾಧ್ಯಾಯೇ ಭೋಜನೇ ತಥಾ||
ಮಲ-ಮೂತ್ರ ವಿಸರ್ಜನೆ ಮಾಡಿದ ನಂತರ ಮತ್ತು ರಸ್ತೆಯಲ್ಲಿ ಒಡಾಡಿಬಂದ ನಂತರ ಕಾಲುಗಳನ್ನು ತೊಳೆದುಕೊಳ್ಳಬೇಕು. ಸ್ವಾಧ್ಯಾಯ ಮತ್ತು ಭೋಜನಕ್ಕೆ ಮೊದಲೂ ಕೂಡ ಪಾದಗಳನ್ನು ತೊಳೆದುಕೊಳ್ಳಬೇಕು.
13107064a ತ್ರೀಣಿ ದೇವಾಃ ಪವಿತ್ರಾಣಿ ಬ್ರಾಹ್ಮಣಾನಾಮಕಲ್ಪಯನ್|
13107064c ಅದೃಷ್ಟಮದ್ಭಿರ್ನಿರ್ಣಿಕ್ತಂ ಯಚ್ಚ ವಾಚಾ ಪ್ರಶಸ್ಯತೇ||
ದೇವತೆಗಳು ಈ ಮೂರನ್ನು ಬ್ರಾಹ್ಮಣರಿಗೆ ಪವಿತ್ರವಾದವು ಎಂದು ಕಲ್ಪಿಸಿದ್ದಾರೆ: ಕಣ್ಣಿಗೆ ಕಾಣದೇ ಇರುವುದು, ನೀರಿನಿಂದ ತೊಳೆದಿರುವುದು ಮತ್ತು ಮಾತಿನ ಮೂಲಕ ಪ್ರಶಂಸೆಗೊಂಡಿದ್ದು.
13107065a ಸಂಯಾವಂ ಕೃಸರಂ ಮಾಂಸಂ ಶಷ್ಕುಲೀ ಪಾಯಸಂ ತಥಾ|
13107065c ಆತ್ಮಾರ್ಥಂ ನ ಪ್ರಕರ್ತವ್ಯಂ ದೇವಾರ್ಥಂ ತು ಪ್ರಕಲ್ಪಯೇತ್||
ಗೋಧಿಹಿಟ್ಟಿನ ತಂಬಿಟ್ಟು, ಎಳ್ಳನ್ನ, ಮಾಂಸ, ಚಕ್ಕುಲಿ, ಪಾಯಸ ಮೊದಲಾದವುಗಳನ್ನು ತಾನೇ ತಿನ್ನುವ ಸಲುವಾಗಿ ಮಾಡಬಾರದು. ದೇವರ ನೈವೇದ್ಯಕ್ಕಾಗಿ ಮಾಡಬೇಕು.
13107066a ನಿತ್ಯಮಗ್ನಿಂ ಪರಿಚರೇದ್ಭಿಕ್ಷಾಂ ದದ್ಯಾಚ್ಚ ನಿತ್ಯದಾ|
13107066c ವಾಗ್ಯತೋ ದಂತಕಾಷ್ಠಂ ಚ ನಿತ್ಯಮೇವ ಸಮಾಚರೇತ್|
[18]13107066e ನ ಚಾಭ್ಯುದಿತಶಾಯೀ ಸ್ಯಾತ್ಪ್ರಾಯಶ್ಚಿತ್ತೀ ತಥಾ ಭವೇತ್||
ನಿತ್ಯವೂ ಅಗ್ನಿಯ ಸೇವೆಮಾಡಬೇಕು. ನಿತ್ಯವೂ ಭಿಕ್ಷೆ ನೀಡಬೇಕು. ನಿತ್ಯವೂ ಮೌನಿಯಾಗಿದ್ದು ದಂತಕಾಷ್ಠ[19]ವನ್ನು ಬಳಸಬೇಕು. ಸೂರ್ಯೋದಯವಾಗುವವರೆಗೆ ಎಂದೂ ಮಲಗಿಕೊಂಡಿರಬಾರದು. ಒಂದು ವೇಳೆ ಹಾಗಿ ಆಗಿಹೋದರೆ ಅದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು.
13107067a ಮಾತಾಪಿತರಮುತ್ಥಾಯ ಪೂರ್ವಮೇವಾಭಿವಾದಯೇತ್|
13107067c ಆಚಾರ್ಯಮಥ ವಾಪ್ಯೇನಂ ತಥಾಯುರ್ವಿಂದತೇ ಮಹತ್||
ಬೆಳಿಗ್ಗೆ ಎದ್ದು ಮೊದಲು ತಾಯಿ-ತಂದೆಯರನ್ನು ನಮಸ್ಕರಿಸಬೇಕು. ನಂತರ ಆಚಾರ್ಯ ಮತ್ತು ಇತರ ಹಿರಿಯರನ್ನು ನಮಸ್ಕರಿಸಬೇಕು. ಇದರಿಂದ ದೀರ್ಘಾಯು ಪ್ರಾಪ್ತವಾಗುತ್ತದೆ.
13107068a ವರ್ಜಯೇದ್ದಂತಕಾಷ್ಠಾನಿ ವರ್ಜನೀಯಾನಿ ನಿತ್ಯಶಃ|
13107068c ಭಕ್ಷಯೇಚ್ಚಾಸ್ತ್ರದೃಷ್ಟಾನಿ ಪರ್ವಸ್ವಪಿ ಚ ವರ್ಜಯೇತ್||
ಬಳಸಿದ ನಂತರ ದಂತಕಾಷ್ಠವನ್ನು ಎಸೆಯಬೇಕು ಮತ್ತು ನಿತ್ಯವೂ ಹೊಸ ದಂತಕಾಷ್ಠವನ್ನು ಬಳಸಬೇಕು. ಶಾಸ್ತ್ರಗಳು ಹೇಳಿರುವ ಪ್ರಕಾರವೇ ಆಹಾರವನ್ನು ಸೇವಿಸಬೇಕು. ಪರ್ವಕಾಲಗಳಲ್ಲಿ ಉಪವಾಸ ಮಾಡಬೇಕು[20].
13107069a ಉದಙ್ಮುಖಶ್ಚ ಸತತಂ ಶೌಚಂ ಕುರ್ಯಾತ್ಸಮಾಹಿತಃ||
[21]13107070a ಅಕೃತ್ವಾ ದೇವತಾಪೂಜಾಂ ನಾನ್ಯಂ ಗಚ್ಚೇತ್ಕದಾ ಚನ|
13107070c ಅನ್ಯತ್ರ ತು ಗುರುಂ ವೃದ್ಧಂ ಧಾರ್ಮಿಕಂ ವಾ ವಿಚಕ್ಷಣಮ್||
ಸತತವೂ ಉತ್ತರ ದಿಕ್ಕಿಗೆ ಮುಖಮಾಡಿ ಸಮಾಹಿತನಾಗಿ ಮಲ-ಮೂತ್ರಗಳನ್ನು ವಿಸರ್ಜಿಸಬೇಕು. ದೇವಪೂಜೆಯನ್ನು ಮಾಡದೇ ಹೊರಗೆ ಹೋಗಬಾರದು. ಇನ್ನೊಂದೆಡೆ ಗುರು, ವೃದ್ಧರು, ಧಾರ್ಮಿಕರು ಮತ್ತು ವಿದ್ವಾಂಸರನ್ನು ನಮಸ್ಕರಿಸದೇ ಎಲ್ಲಿಗೂ ಹೋಗಬಾರದೆಂದು ಹೇಳಿದ್ದಾರೆ.[22]
13107071a ಅವಲೋಕ್ಯೋ ನ ಚಾದರ್ಶೋ ಮಲಿನೋ ಬುದ್ಧಿಮತ್ತರೈಃ|
13107071c ನ ಚಾಜ್ಞಾತಾಂ ಸ್ತ್ರಿಯಂ ಗಚ್ಚೇದ್ಗರ್ಭಿಣೀಂ ವಾ ಕದಾ ಚನ||
ಬುದ್ಧಿವಂತನಾದವನು ಕೊಳಕಾದ ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿಕೊಳ್ಳುವುದಿಲ್ಲ. ಪರಿಚಯವಿಲ್ಲದ ಮತ್ತು ಗರ್ಭಿಣೀ ಸ್ತ್ರೀಯೊಡನೆ ಸಂಭೋಗಮಾಡುವುದಿಲ್ಲ.
[23]13107072a ಉದಕ್ಶಿರಾ ನ ಸ್ವಪೇತ ತಥಾ ಪ್ರತ್ಯಕ್ಶಿರಾ ನ ಚ|
13107072c ಪ್ರಾಕ್ಶಿರಾಸ್ತು ಸ್ವಪೇದ್ವಿದ್ವಾನಥ ವಾ ದಕ್ಷಿಣಾಶಿರಾಃ||
ಉತ್ತರ ಮತ್ತು ಪಶ್ಚಿಮ ದಿಕ್ಕುಗಳಿಗೆ ತಲೆಹಾಕಿ ಮಲಗಬಾರದು. ವಿದ್ವಾನನು ಪೂರ್ವ ಅಥವಾ ದಕ್ಷಿಣ ದಿಕ್ಕಿಗೆ ತಲೆಹಾಕಿ ಮಲಗಬೇಕು.
13107073a ನ ಭಗ್ನೇ ನಾವದೀರ್ಣೇ[24] ವಾ ಶಯನೇ ಪ್ರಸ್ವಪೇತ ಚ|
13107073c ನಾಂತರ್ಧಾನೇ ನ ಸಂಯುಕ್ತೇ ನ ಚ ತಿರ್ಯಕ್ಕದಾ ಚನ||
ಒಡೆದು ಹೋಗಿರುವ ಅಥವಾ ಶಿಥಿಲವಾಗಿರುವ ಮಂಚದ ಮೇಲೆ ಮಲಗಬಾರದು. ಹೊದಿಕೆಯಿಲ್ಲದೇ ಹಾಸಿಗೆಯ ಮೇಲೆ ಮಲಗಿಕೊಳ್ಳಬಾರದು[25] ಮತ್ತು ಹಾಸಿಗೆಯ ಮೇಲೆ ಅಡ್ಡಾದಿಡ್ಡಿಯಾಗಿ ಮಲಗಿಕೊಳ್ಳಬಾರದು.
[26]13107074a ನ ನಗ್ನಃ ಕರ್ಹಿ ಚಿತ್ ಸ್ನಾಯಾನ್ನ ನಿಶಾಯಾಂ ಕದಾ ಚನ|
13107074c ಸ್ನಾತ್ವಾ ಚ ನಾವಮೃಜ್ಯೇತ ಗಾತ್ರಾಣಿ ಸುವಿಚಕ್ಷಣಃ||
ವಿದ್ವಾಂಸನು ಎಂದೂ ನಗ್ನನಾಗಿ ಸ್ನಾನಮಾಡಬಾರದು. ರಾತ್ರಿಯಲ್ಲಿ ಎಂದೂ ಸ್ನಾನಮಾಡಬಾರದು. ಸ್ನಾನಮಾಡಿದ ನಂತರ ಅಂಗಾಂಗಗಳಿಗೆ ಎಣ್ಣೆಯನ್ನು ಹಚ್ಚಿಕೊಳ್ಳಬಾರದು.
13107075a ನ ಚಾನುಲಿಂಪೇದಸ್ನಾತ್ವಾ ಸ್ನಾತ್ವಾ ವಾಸೋ ನ ನಿರ್ಧುನೇತ್|
13107075c ಆರ್ದ್ರ ಏವ ತು ವಾಸಾಂಸಿ ನಿತ್ಯಂ ಸೇವೇತ ಮಾನವಃ|
13107075e ಸ್ರಜಶ್ಚ ನಾವಕರ್ಷೇತ ನ ಬಹಿರ್ಧಾರಯೇತ ಚ||
ಸ್ನಾನಮಾಡದೆಯೇ ಗಂಧಾದಿ ಲೇಪನಗಳನ್ನು ಹಚ್ಚಿಕೊಳ್ಳಬಾರದು. ಸ್ನಾನಮಾಡಿದ ನಂತರ ಒದ್ದೆ ಬಟ್ಟೆಯನ್ನು ಕುಡುಗಬಾರದು. ಮಾನವನು ಎಂದೂ ಒದ್ದೆ ವಸ್ತ್ರವನ್ನು ಉಟ್ಟುಕೊಳ್ಳಬಾರದು. ಕೊರಳಲ್ಲಿ ತೊಟ್ಟಿರುವ ಮಾಲೆಯನ್ನು ಎಂದೂ ಎಳೆಯಬಾರದು. ಅದನ್ನು ಹೊರಗೆ ಕಾಣುವಂತೆ ಧರಿಸಬಾರದು.
[27]13107076a ರಕ್ತಮಾಲ್ಯಂ ನ ಧಾರ್ಯಂ ಸ್ಯಾಚ್ಚುಕ್ಲಂ ಧಾರ್ಯಂ ತು ಪಂಡಿತೈಃ|
13107076c ವರ್ಜಯಿತ್ವಾ ತು ಕಮಲಂ ತಥಾ ಕುವಲಯಂ ವಿಭೋ||
ವಿಭೋ! ಪಂಡಿತನಾದವನು ಕಮಲ ಮತ್ತು ಕುವಲ ಪುಷ್ಪಗಳನ್ನು ಬಿಟ್ಟು ಇತರ ಕೆಂಪು ಹೂವುಗಳಲ್ಲ ಬಿಳೀ ಹೂವುಗಳ ಮಾಲೆಯನ್ನು ಧರಿಸಬೇಕು.
13107077a ರಕ್ತಂ ಶಿರಸಿ ಧಾರ್ಯಂ ತು ತಥಾ ವಾನೇಯಮಿತ್ಯಪಿ|
13107077c ಕಾಂಚನೀ ಚೈವ ಯಾ ಮಾಲಾ ನ ಸಾ ದುಷ್ಯತಿ ಕರ್ಹಿ ಚಿತ್|
13107077e ಸ್ನಾತಸ್ಯ ವರ್ಣಕಂ ನಿತ್ಯಮಾರ್ದ್ರಂ ದದ್ಯಾದ್ವಿಶಾಂ ಪತೇ||
ವಿಶಾಂಪತೇ! ಕೆಂಪು ಬಣ್ಣದ ಮತ್ತು ವನ್ಯ ಪುಷ್ಪಗಳನ್ನು ತಲೆಯಲ್ಲಿ ಧರಿಸಬೇಕು. ಚಿನ್ನದ ಹಾರವನ್ನು ಧರಿಸುವುದರಿಂದ ಎಂದೂ ಅಶುದ್ಧವಾಗುವುದಿಲ್ಲ. ಸ್ನಾನಾನಂತರ ನಿತ್ಯವೂ ಹಸೀ ಚಂದನವನ್ನು ಹಚ್ಚಿಕೊಳ್ಳಬೇಕು.
13107078a ವಿಪರ್ಯಯಂ ನ ಕುರ್ವೀತ ವಾಸಸೋ ಬುದ್ಧಿಮಾನ್ನರಃ|
13107078c ತಥಾ ನಾನ್ಯಧೃತಂ ಧಾರ್ಯಂ ನ ಚಾಪದಶಮೇವ ಚ||
ಬುದ್ಧಿಮಾನ್ ಮನುಷ್ಯನು ತನ್ನ ಬಟ್ಟೆಗಳನ್ನು ಎಂದೂ ಅದಲುಬದಲು ಮಾಡಿ ಉಡುವುದಿಲ್ಲ[28]. ಇನ್ನೊಬ್ಬರು ತೊಟ್ಟಿರುವ ಬಟ್ಟೆಯನ್ನು ಉಡಬಾರದು. ದಡಿಯಿಲ್ಲದ ವಸ್ತ್ರವನ್ನೂ ಉಡಬಾರದು.
13107079a ಅನ್ಯದೇವ ಭವೇದ್ವಾಸಃ ಶಯನೀಯೇ ನರೋತ್ತಮ|
13107079c ಅನ್ಯದ್ರಥ್ಯಾಸು ದೇವಾನಾಮರ್ಚಾಯಾಮನ್ಯದೇವ ಹಿ||
ನರೋತ್ತಮ! ಮಲಗಲು ಬೇರೆಯೇ ಬಟ್ಟೆಯನ್ನು ಉಪಯೋಗಿಸಬೇಕು. ರಸ್ತೆಗಳಲ್ಲಿ ಹೋಗುವಾಗ ಇನ್ನೊಂದು ಬಟ್ಟೆಯನ್ನು ಉಡಬೇಕು ಮತ್ತು ದೇವರ ಪೂಜೆಗೆ ಬೇರೊಂದು ಬಟ್ಟೆಯನ್ನು ಉಡಬೇಕು.
13107080a ಪ್ರಿಯಂಗುಚಂದನಾಭ್ಯಾಂ ಚ ಬಿಲ್ವೇನ ತಗರೇಣ ಚ|
13107080c ಪೃಥಗೇವಾನುಲಿಂಪೇತ ಕೇಸರೇಣ ಚ ಬುದ್ಧಿಮಾನ್||
ಬುದ್ಧಿವಂತನಾದವನು ಪ್ರಿಯಂಗು[29]-ಚಂದನಗಳ ಬಿಲ್ವ-ತಗರ[30]ಗಳ ಮತ್ತು ಕೇಸರಗಳ ಲೇಪನಗಳನ್ನು ಪ್ರತ್ಯೇಕವಾಗಿ ಹಚ್ಚಿಕೊಳ್ಳಬೇಕು.
13107081a ಉಪವಾಸಂ ಚ ಕುರ್ವೀತ ಸ್ನಾತಃ ಶುಚಿರಲಂಕೃತಃ|
13107081c ಪರ್ವಕಾಲೇಷು ಸರ್ವೇಷು ಬ್ರಹ್ಮಚಾರೀ ಸದಾ ಭವೇತ್||
ಪರ್ವಕಾಲಗಳಲ್ಲಿ ಸ್ನಾನಮಾಡಿ ಶುಚಿಯಾಗಿ ವಸ್ತ್ರಾಲಂಕಾರಗಳನ್ನು ಮಾಡಿಕೊಂಡು ಉಪವಾಸವನ್ನು ಆಚರಿಸಬೇಕು ಮತ್ತು ಸದಾ ಬ್ರಹ್ಮಚಾರಿಯಾಗಿರಬೇಕು.
[31]13107082a ನಾಲೀಢಯಾ ಪರಿಹತಂ ಭಕ್ಷಯೀತ ಕದಾ ಚನ|
13107082c ತಥಾ ನೋದ್ಧೃತಸಾರಾಣಿ ಪ್ರೇಕ್ಷತಾಂ ನಾಪ್ರದಾಯ ಚ||
ಮುಟ್ಟಾಗಿರುವ ಸ್ತ್ರೀಯು ಮುಟ್ಟಿ ದೂಷಿತಗೊಳಿಸಿದ ಆಹಾರವನ್ನು ಎಂದೂ ತಿನ್ನಬಾರದು. ಸಾರವನ್ನು ತೆಗೆದಿರುವ ಆಹಾರವನ್ನು ತಿನ್ನಬಾರದು. ಇನ್ನೊಬ್ಬನು ಯಾಚನಾ ದೃಷ್ಟಿಯಿಂದ ಆಹಾರವನ್ನು ನೋಡುತ್ತಿರುವಾಗ ಅದನ್ನು ಅವನಿಗೆ ಕೊಡದೇ ತಿನ್ನಬಾರದು.
13107083a ನ ಸಂನಿಕೃಷ್ಟೋ ಮೇಧಾವೀ ನಾಶುಚಿರ್ನ ಚ ಸತ್ಸು ಚ|
13107083c ಪ್ರತಿಷಿದ್ಧಾನ್ನ ಧರ್ಮೇಷು ಭಕ್ಷಾನ್ ಭುಂಜೀತ ಪೃಷ್ಠತಃ||
ಮೇಧಾವಿಯಾದವನು ಯಾರೇ ಅಶುಚಿಯ ಹತ್ತಿರ ಕುಳಿತು ಅಥವಾ ಸತ್ಪುರುಷನ ಎದುರು ಕುಳಿತು ಊಟಮಾಡಬಾರದು. ಧರ್ಮಶಾಸ್ತ್ರಗಳಲ್ಲಿ ಯಾವುದನ್ನು ನಿಷೇದಿಸಿದ್ದಾರೋ ಆ ಭಕ್ಷಗಳನ್ನು ಬಚ್ಚಿಕೊಂಡೂ ತಿನ್ನಬಾರದು.
13107084a ಪಿಪ್ಪಲಂ ಚ ವಟಂ ಚೈವ ಶಣಶಾಕಂ ತಥೈವ ಚ|
13107084c ಉದುಂಬರಂ ನ ಖಾದೇಚ್ಚ ಭವಾರ್ಥೀ ಪುರುಷೋತ್ತಮಃ||
ಏಳ್ಗೆಯನ್ನು ಬಯಸುವ ಪುರುಷೋತ್ತಮನು ಅರಳಿ, ಆಲ, ಅಥವಾ ಅತ್ತಿಯ ಹಣ್ಣುಗಳನ್ನು ತಿನ್ನಬಾರದು ಮತ್ತು ಶಣಬಿನ ತರಕಾರಿ (ನುಗ್ಗೇ ಕಾಯಿ) ಯನ್ನು ತಿನ್ನಬಾರದು.
13107085a ಆಜಂ ಗವ್ಯಂ ಚ ಯನ್ಮಾಂಸಂ ಮಾಯೂರಂ ಚೈವ ವರ್ಜಯೇತ್|
13107085c ವರ್ಜಯೇಚ್ಚುಷ್ಕಮಾಂಸಂ ಚ ತಥಾ ಪರ್ಯುಷಿತಂ ಚ ಯತ್||
ಆಡು, ಗೋವು ಮತ್ತು ನವಿಲಿನ ಮಾಂಸವನ್ನೂ, ಒಣಗಿದ ಮಾಂಸವನ್ನೂ ಮತ್ತು ಹಳಸಿದ ಮಾಂಸವನ್ನೂ ಪರಿತ್ಯಜಿಸಬೇಕು.
13107086a ನ ಪಾಣೌ ಲವಣಂ ವಿದ್ವಾನ್ ಪ್ರಾಶ್ನೀಯಾನ್ನ ಚ ರಾತ್ರಿಷು|
13107086c ದಧಿಸಕ್ತೂನ್ನ ಭುಂಜೀತ ವೃಥಾಮಾಂಸಂ ಚ ವರ್ಜಯೇತ್||
ವಿದ್ವಾಂಸನಾದವನು ಉಪ್ಪನ್ನು ಕೈಯಲ್ಲಿಟ್ಟುಕೊಂಡು ನೆಕ್ಕಬಾರದು. ರಾತ್ರಿಯಲ್ಲಿ ಮೊಸರಿನಿಂದ ಕಲಸಿದ ಹಿಟ್ಟನ್ನು ತಿನ್ನಬಾರದು. ವೃಥಾ[32] ಮಾಂಸತಿನ್ನುವುದನ್ನು ವರ್ಜಿಸಬೇಕು.
13107087a ವಾಲೇನ ತು ನ ಭುಂಜೀತ ಪರಶ್ರಾದ್ಧಂ ತಥೈವ ಚ|
13107087c ಸಾಯಂ ಪ್ರಾತಶ್ಚ ಭುಂಜೀತ ನಾಂತರಾಲೇ ಸಮಾಹಿತಃ||
ಕೂದಲು ಬಿದ್ದಿರುವ ಆಹಾರವನ್ನು ಸೇವಿಸಬಾರದು. ಇತರರ ಶ್ರಾದ್ಧದ ಅನ್ನವನ್ನು ಸೇವಿಸಬಾರದು. ಬೆಳಿಗ್ಗೆ ಮತ್ತು ಸಾಯಂಕಾಲ ಮಾತ್ರ ಸಮಾಹಿತನಾಗಿ ಊಟಮಾಡಬೇಕು. ಮಧ್ಯದಲ್ಲಿ ಏನನ್ನೂ ತಿನ್ನಬಾರದು.
13107088a ವಾಗ್ಯತೋ ನೈಕವಸ್ತ್ರಶ್ಚ ನಾಸಂವಿಷ್ಟಃ ಕದಾ ಚನ|
13107088c ಭೂಮೌ ಸದೈವ ನಾಶ್ನೀಯಾನ್ನಾನಾಸೀನೋ ನ ಶಬ್ದವತ್||
ಮೌನದಿಂದ ಊಟಮಾಡಬೇಕು. ಮೇಲುಹೊದ್ದಿಕೆಯಿಲ್ಲದೇ ಏಕವಸ್ತ್ರನಾಗಿ ಊಟಮಾಡಬಾರದು. ಸರಿಯಾಗಿ ಕುಳಿತುಕೊಳ್ಳದೇ ಊಟಮಾಡಬಾರದು. ನೆಲದ ಮೇಲೆ ಬಿದ್ದಿರುವ ಆಹಾರವನ್ನು ತಿನ್ನಬಾರದು. ನಿಂತುಕೊಂಡು ಊಟಮಾಡಬಾರದು. ಶಬ್ದಮಾಡುತ್ತಾ ಊಟಮಾಡಬಾರದು.
13107089a ತೋಯಪೂರ್ವಂ ಪ್ರದಾಯಾನ್ನಮತಿಥಿಭ್ಯೋ ವಿಶಾಂ ಪತೇ|
13107089c ಪಶ್ಚಾದ್ ಭುಂಜೀತ ಮೇಧಾವೀ ನ ಚಾಪ್ಯನ್ಯಮನಾ ನರಃ||
ವಿಶಾಂಪತೇ! ಮೊದಲು ಅತಿಥಿಗಳಿಗೆ ನೀರು ಆಹಾರಗಳನ್ನು ನೀಡಬೇಕು. ಮೇಧಾವೀ ಮನುಷ್ಯನು ನಂತರವೇ ಏಕಾಗ್ರಚಿತ್ತನಾಗಿ ಊಟಮಾಡಬೇಕು.
13107090a ಸಮಾನಮೇಕಪಂಕ್ತ್ಯಾಂ ತು ಭೋಜ್ಯಮನ್ನಂ ನರೇಶ್ವರ|
13107090c ವಿಷಂ ಹಾಲಾಹಲಂ ಭುಂಕ್ತೇ ಯೋಽಪ್ರದಾಯ ಸುಹೃಜ್ಜನೇ||
ನರೇಶ್ವರ! ಒಂದು ಪಂಕ್ತಿಯಲ್ಲಿ ಕುಳಿತಿರುವ ಎಲ್ಲರೂ ಒಂದೇ ಸಮಾನ ಭೋಜನವನ್ನು ಮಾಡಬೇಕು. ತನ್ನ ಸುಹೃದ್ ಜನರಿಗೆ ಕೊಡದೇ ಊಟಮಾಡುವವನು ಹಾಲಾಹಲ ವಿಷವನ್ನೇ ತಿಂದಂತೆ.
13107091a ಪಾನೀಯಂ ಪಾಯಸಂ ಸರ್ಪಿರ್ದಧಿಸಕ್ತುಮಧೂನ್ಯಪಿ|
13107091c ನಿರಸ್ಯ ಶೇಷಮೇತೇಷಾಂ ನ ಪ್ರದೇಯಂ ತು ಕಸ್ಯ ಚಿತ್||
ನೀರು, ಪಾಯಸ, ಹಿಟ್ಟಿನುಂಡೆ, ಮೊಸರು, ತುಪ್ಪ ಮತ್ತು ಜೇನುತುಪ್ಪ ಇವುಗಳನ್ನು ಬಿಟ್ಟು ಬೇರೆ ಯಾವ ಆಹಾರಪದಾರ್ಥಗಳಲ್ಲಿ ತಿಂದು ಉಳಿದಿದ್ದುದನ್ನು ಇತರರಿಗೆ ಬಡಿಸಬಾರದು[33].
13107092a ಭುಂಜಾನೋ ಮನುಜವ್ಯಾಘ್ರ ನೈವ ಶಂಕಾಂ ಸಮಾಚರೇತ್|
13107092c ದಧಿ ಚಾಪ್ಯನುಪಾನಂ ವೈ ನ ಕರ್ತವ್ಯಂ ಭವಾರ್ಥಿನಾ||
ಮನುಜವ್ಯಾಘ್ರ! ತಿನ್ನುವ ಆಹಾರದ ಕುರಿತು ಯಾವುದೇ ಶಂಕೆಯನ್ನಿಟ್ಟು ಊಟಮಾಡಬಾರದು. ತನ್ನ ಏಳ್ಗೆಯನ್ನು ಬಯಸುವವನು ಊಟದ ಕೊನೆಯಲ್ಲಿ ಮೊಸರನ್ನು ಕುಡಿಯಬಾರದು.
13107093a ಆಚಮ್ಯ ಚೈವ ಹಸ್ತೇನ ಪರಿಸ್ರಾವ್ಯ ತಥೋದಕಮ್|
13107093c ಅಂಗುಷ್ಠಂ ಚರಣಸ್ಯಾಥ ದಕ್ಷಿಣಸ್ಯಾವಸೇಚಯೇತ್||
ಊಟವಾದನಂತರ ಕೈ-ಬಾಯಿಗಳನ್ನು ತೊಳೆದುಕೊಂಡು ಆಚಮನ ಮಾಡಿ ಒಂದು ಕೈಯಿಂದ (ಬಲಗೈಯಿಂದ) ಬಲಗಾಲಿನ ಹೆಬ್ಬೆರಳನ್ನು ನೀರಿನಿಂದ ತೋಯಿಸಬೇಕು[34].
13107094a ಪಾಣಿಂ ಮೂರ್ಧ್ನಿ ಸಮಾಧಾಯ ಸ್ಪೃಷ್ಟ್ವಾ ಚಾಗ್ನಿಂ ಸಮಾಹಿತಃ|
13107094c ಜ್ಞಾತಿಶ್ರೈಷ್ಠ್ಯಮವಾಪ್ನೋತಿ ಪ್ರಯೋಗಕುಶಲೋ ನರಃ||
ಪ್ರಯೋಗಕುಶಲನಾದ ನರನು ಭೋಜನಾನಂತರ ಕೈಯನ್ನು ತನ್ನ ತಲೆಯಮೇಲಿಟ್ಟುಕೊಂಡು ಏಕಾಗ್ರಚಿತ್ತನಾಗಿ ಮನಸ್ಸಿನಿಂದಲೇ ಅಗ್ನಿಯನ್ನು ಮುಟ್ಟಬೇಕು. ಇದರಿಂದ ಅವನು ಕುಟುಂಬದ ಜನರಲ್ಲಿ ಶ್ರೇಷ್ಠತೆಯನ್ನು ಪಡೆಯುತ್ತಾನೆ.
13107095a ಅದ್ಭಿಃ ಪ್ರಾಣಾನ್ಸಮಾಲಭ್ಯ ನಾಭಿಂ ಪಾಣಿತಲೇನ ಚ|
13107095c ಸ್ಪೃಶಂಶ್ಚೈವ ಪ್ರತಿಷ್ಠೇತ ನ ಚಾಪ್ಯಾರ್ದ್ರೇಣ ಪಾಣಿನಾ||
ಅನಂತರ ನೀರಿನಿಂದ ಕಣ್ಣು-ಮೂಗು-ಕಿವಿ ಮೊದಲಾದ ಇಂದ್ರಿಯಗಳನ್ನೂ, ನಾಭಿಯನ್ನೂ, ಅಂಗೈಗಳನ್ನೂ ಸ್ಪರ್ಶಿಸಬೇಕು. ಕೈ ಒದ್ದೆಯಾಗಿರುವಾಗ ಹೊರಡಬಾರದು. ಕೈಯನ್ನು ವಸ್ತ್ರದಿಂದ ಚೆನ್ನಾಗಿ ಒರೆಸಿಕೊಂಡು ಪ್ರಯಾಣಮಾಡಬೇಕು.
13107096a ಅಂಗುಷ್ಠಸ್ಯಾಂತರಾಲೇ ಚ ಬ್ರಾಹ್ಮಂ ತೀರ್ಥಮುದಾಹೃತಮ್|
13107096c ಕನಿಷ್ಠಿಕಾಯಾಃ ಪಶ್ಚಾತ್ತು ದೇವತೀರ್ಥಮಿಹೋಚ್ಯತೇ||
ಹೆಬ್ಬೆರಳಿನ ಮೂಲಸ್ಥಾನಕ್ಕೆ ಬ್ರಹ್ಮತೀರ್ಥವೆಂದು ಹೇಳುತ್ತಾರೆ. ಕಿರುಬೆರಳು ಮತ್ತು ಇತರ ಬೆರಳುಗಳ ಅಗ್ರಭಾಗಗಳನ್ನು ದೇವತೀರ್ಥವೆಂದು ಹೇಳುತ್ತಾರೆ.
13107097a ಅಂಗುಷ್ಠಸ್ಯ ಚ ಯನ್ಮಧ್ಯಂ ಪ್ರದೇಶಿನ್ಯಾಶ್ಚ ಭಾರತ|
13107097c ತೇನ ಪಿತ್ರ್ಯಾಣಿ ಕುರ್ವೀತ ಸ್ಪೃಷ್ಟ್ವಾಪೋ ನ್ಯಾಯತಸ್ತಥಾ||
ಭಾರತ! ಅಂಗುಷ್ಠ ಮತ್ತು ತರ್ಜನಿಯ ಮಧ್ಯಭಾಗಕ್ಕೆ ಪಿತೃತೀರ್ಥವೆಂದು ಹೇಳುತ್ತಾರೆ. ಶಾಸ್ತ್ರವಿಧಿಯಂತೆ ಹೆಬ್ಬೆರಳು ಮತ್ತು ತೋರುಬೆರಳುಗಳ ಮಧ್ಯೆ ನೀರನ್ನು ತೆಗೆದುಕೊಂಡು ತರ್ಪಣಾದಿ ಪಿತೃಕಾರ್ಯಗಳನ್ನು ಮಾಡಬೇಕು.
13107098a ಪರಾಪವಾದಂ ನ ಬ್ರೂಯಾನ್ನಾಪ್ರಿಯಂ ಚ ಕದಾ ಚನ|
13107098c ನ ಮನ್ಯುಃ ಕಶ್ಚಿದುತ್ಪಾದ್ಯಃ ಪುರುಷೇಣ ಭವಾರ್ಥಿನಾ||
ತನ್ನ ಏಳ್ಗೆಯನ್ನು ಬಯಸುವವನು ಪರನಿಂದೆಯನ್ನು ಮಾಡಬಾರದು. ಇತರರಿಗೆ ಅಪ್ರಿಯವಾದುದನ್ನು ಹೇಳಬಾರದು. ಮತ್ತು ಇನ್ನೊಬ್ಬರಿಗೆ ಸಿಟ್ಟನ್ನೂ ಬರಿಸಬಾರದು.
13107099a ಪತಿತೈಸ್ತು ಕಥಾಂ ನೇಚ್ಚೇದ್ದರ್ಶನಂ ಚಾಪಿ ವರ್ಜಯೇತ್|
13107099c ಸಂಸರ್ಗಂ ಚ ನ ಗಚ್ಚೇತ ತಥಾಯುರ್ವಿಂದತೇ ಮಹತ್||
ಪತಿತರೊಂದಿಗೆ ಮಾತುಕಥೆಗಳನ್ನಾಡಬಾರದು. ಅವರನ್ನು ನೋಡುವ ಇಚ್ಛೆಯನ್ನೂ ಬಿಡಬೇಕು. ಅವರೊಡನೆ ಯಾವ ಸಂಪರ್ಕವನ್ನೂ ಇಟ್ಟುಕೊಳ್ಳಬಾರದು. ಹೀಗೆ ಮಾಡುವುದರಿಂದ ಮನುಷ್ಯನು ದೀರ್ಘಾಯುಸ್ಸನ್ನು ಪಡೆಯುತ್ತಾನೆ.
13107100a ನ ದಿವಾ ಮೈಥುನಂ ಗಚ್ಚೇನ್ನ ಕನ್ಯಾಂ ನ ಚ ಬಂಧಕೀಮ್|
13107100c ನ ಚಾಸ್ನಾತಾಂ ಸ್ತ್ರಿಯಂ ಗಚ್ಚೇತ್ತಥಾಯುರ್ವಿಂದತೇ ಮಹತ್||
ಹಗಲಿನಲ್ಲಿ ಮೈಥುನವನ್ನು ಮಾಡಬಾರದು. ಕನ್ಯೆಯೊಡನೆ[35] ಮತ್ತು ವ್ಯಭಿಚಾರಿಣಿಯೊಡನೆ ಸಂಭೋಗ ಮಾಡಬಾರದು. ರಜಸ್ವಲೆಯಾಗಿ ಮೂರು ರಾತ್ರಿಗಳು ಕಳೆದು ಸ್ನಾನಮಾಡಿ ಶುದ್ಧಳಾಗಿಲ್ಲದಿರುವ ಪತ್ನಿಯೊಡನೆಯೂ ಸಂಭೋಗ ಮಾಡಬಾರದು. ಹೀಗೆ ಮಾಡುವುದರಿಂದ ಮನುಷ್ಯನು ದೀರ್ಘಾಯುಸ್ಸನ್ನು ಹೊಂದುತ್ತಾನೆ.
13107101a ಸ್ವೇ ಸ್ವೇ ತೀರ್ಥೇ ಸಮಾಚಮ್ಯ ಕಾರ್ಯೇ ಸಮುಪಕಲ್ಪಿತೇ|
13107101c ತ್ರಿಃ ಪೀತ್ವಾಪೋ ದ್ವಿಃ ಪ್ರಮೃಜ್ಯ ಕೃತಶೌಚೋ ಭವೇನ್ನರಃ||
ಕಾರ್ಯವನ್ನು ಪ್ರಾರಂಭಿಸುವ ಮೊದಲು ತಮ್ಮ ತಮ್ಮ ತೀರ್ಥಗಳಿಂದ[36] ಮೂರು ಬಾರಿ ಆಚಮನಮಾಡಿ ನೀರನ್ನು ಕುಡಿಯಬೇಕು ಮತ್ತು ಎರಡು ಬಾರಿ ತುಟಿಗಳನ್ನು ಒರೆಸಿಕೊಳ್ಳಬೇಕು. ಇದರಿಂದ ಮನುಷ್ಯನು ಶುದ್ಧನಾಗುತ್ತಾನೆ.
13107102a ಇಂದ್ರಿಯಾಣಿ ಸಕೃತ್ ಸ್ಪೃಶ್ಯ ತ್ರಿರಭ್ಯುಕ್ಷ್ಯ ಚ ಮಾನವಃ|
13107102c ಕುರ್ವೀತ ಪಿತ್ರ್ಯಂ ದೈವಂ ಚ ವೇದದೃಷ್ಟೇನ ಕರ್ಮಣಾ||
ಅನಂತರ ಕಣ್ಣು-ಕಿವಿ ಮೊದಲಾದ ಇಂದ್ರಿಯಗಳೆಲ್ಲವನ್ನೂ ಸ್ಪರ್ಶಿಸಿ ಮೂರು ಬಾರಿ ನೀರಿನಿಂದ ಪ್ರೋಕ್ಷಣೆ ಮಾಡಿಕೊಂಡು ಮನುಷ್ಯನು ವೇದೋಕ್ತ ವಿಧಿಯಿಂದ ದೇವ-ಪಿತೃಕರ್ಮಗಳನ್ನು ಮಾಡಬೇಕು.
13107103a ಬ್ರಾಹ್ಮಣಾರ್ಥೇ ಚ ಯಚ್ಚೌಚಂ ತಚ್ಚ ಮೇ ಶೃಣು ಕೌರವ|
13107103c ಪ್ರವೃತ್ತಂ ಚ ಹಿತಂ ಚೋಕ್ತ್ವಾ ಭೋಜನಾದ್ಯಂತಯೋಸ್ತಥಾ||
ಕೌರವ! ಬ್ರಾಹ್ಮಣರಿಗೆ ಊಟದ ಮೊದಲು ಮತ್ತು ನಂತರ ಪವಿತ್ರವೂ ಹಿತಕರವೂ ಆದ ಶುದ್ಧಿಯ ವಿಧಾನವನ್ನು ಹೇಳುತ್ತೇನೆ. ಕೇಳು.
13107104a ಸರ್ವಶೌಚೇಷು ಬ್ರಾಹ್ಮೇಣ ತೀರ್ಥೇನ ಸಮುಪಸ್ಪೃಶೇತ್|
13107104c ನಿಷ್ಠೀವ್ಯ ತು ತಥಾ ಕ್ಷುತ್ವಾ ಸ್ಪೃಶ್ಯಾಪೋ ಹಿ ಶುಚಿರ್ಭವೇತ್||
ಸರ್ವಶುದ್ಧಿಕ್ರಿಯೆಗಳಲ್ಲಿ ಬ್ರಾಹ್ಮಣನು ಬ್ರಹ್ಮತೀರ್ಥದಿಂದ ಆಚಮನ ಮಾಡಬೇಕು. ಎಂಜಲನ್ನು ಉಗಿದ ಮತ್ತು ಸೀನಿದ ನಂತರ ಆಚಮನ ಮಾಡುವುದರಿಂದ ಬ್ರಾಹ್ಮಣನು ಶುದ್ಧನಾಗುತ್ತಾನೆ.
13107105a ವೃದ್ಧೋ ಜ್ಞಾತಿಸ್ತಥಾ ಮಿತ್ರಂ ದರಿದ್ರೋ ಯೋ ಭವೇದಪಿ|
[37]13107105c ಗೃಹೇ ವಾಸಯಿತವ್ಯಾಸ್ತೇ ಧನ್ಯಮಾಯುಷ್ಯಮೇವ ಚ||
ಕುಟುಂಬದ ವೃದ್ಧನನ್ನು ಮತ್ತು ದರಿದ್ರ ಮಿತ್ರನನ್ನು ತನ್ನ ಮನೆಯಲ್ಲಿರಿಸಿಕೊಂಡು ಕಾಪಾಡಬೇಕು. ಇದರಿಂದ ಅವನ ಧನ ಮತ್ತು ಆಯುಷ್ಯಗಳು ವೃದ್ಧಿಯಾಗುತ್ತವೆ.
13107106a ಗೃಹೇ ಪಾರಾವತಾ ಧನ್ಯಾಃ ಶುಕಾಶ್ಚ ಸಹಸಾರಿಕಾಃ|
13107106c ಗೃಹೇಷ್ವೇತೇ ನ ಪಾಪಾಯ ತಥಾ ವೈ ತೈಲಪಾಯಿಕಾಃ||
ಪಾರಿವಾಳ, ಗಿಳಿ ಮತ್ತು ಮೈನಾ ಹಕ್ಕಿಗಳು ಮನೆಯಲ್ಲಿರುವುದರಿಂದ ಧನ-ಧಾನ್ಯಗಳ ವೃದ್ಧಿಯಾಗುತ್ತದೆ. ಹೊಡೆಮೂಗುಹಕ್ಕಿ ಅಥವಾ ಜಿರಲೆಗಳಂತೆ ಇವು ಅಮಂಗಲವನ್ನುಂಟುಮಾಡುವುದಿಲ್ಲ.
[38]13107107a ಉದ್ದೀಪಕಾಶ್ಚ ಗೃಧ್ರಾಶ್ಚ ಕಪೋತಾ ಭ್ರಮರಾಸ್ತಥಾ|
13107107c ನಿವಿಶೇಯುರ್ಯದಾ ತತ್ರ ಶಾಂತಿಮೇವ ತದಾಚರೇತ್||
ಮಿಣುಕುಹುಳುಗಳು, ರಣಹದ್ದುಗಳು, ಕಪೋತಗಳು, ದುಂಬಿಗಳು ಮನೆಯೊಳಕ್ಕೆ ಬಂದರೆ ಶಾಂತಿಯನ್ನೇ ಮಾಡಬೇಕು.
13107108a ಅಮಂಗಲ್ಯಾನಿ ಚೈತಾನಿ ತಥಾಕ್ರೋಶೋ ಮಹಾತ್ಮನಾಮ್|
13107108c ಮಹಾತ್ಮನಾಂ ಚ ಗುಹ್ಯಾನಿ ನ ವಕ್ತವ್ಯಾನಿ ಕರ್ಹಿ ಚಿತ್||
ಏಕೆಂದರೆ ಇವು ಅಮಂಗಳಕಾರಿಗಳು. ಮಹಾತ್ಮರನ್ನು ನಿಂದಿಸುವುದೂ ಅಮಂಗಳಕಾರಕವಾಗುತ್ತದೆ. ಮಹಾತ್ಮರ ಗುಟ್ಟಿನ ವಿಷಯಗಳನ್ನು ಎಂದೂ ಯಾವಕಾರಣಕ್ಕೂ ಬಹಿರಂಗಪಡಿಸಬಾರದು.
13107109a ಅಗಮ್ಯಾಶ್ಚ ನ ಗಚ್ಚೇತ ರಾಜಪತ್ನೀಃ ಸಖೀಸ್ತಥಾ|
13107109c ವೈದ್ಯಾನಾಂ ಬಾಲವೃದ್ಧಾನಾಂ ಭೃತ್ಯಾನಾಂ ಚ ಯುಧಿಷ್ಠಿರ||
13107110a ಬಂಧೂನಾಂ ಬ್ರಾಹ್ಮಣಾನಾಂ ಚ ತಥಾ ಶಾರಣಿಕಸ್ಯ ಚ|
13107110c ಸಂಬಂಧಿನಾಂ ಚ ರಾಜೇಂದ್ರ ತಥಾಯುರ್ವಿಂದತೇ ಮಹತ್||
ಯುಧಿಷ್ಠಿರ! ಸಮಾಗಮಕ್ಕೆ ಅನರ್ಹರಾದ ಪರಸ್ತ್ರೀಯರು, ರಾಜಪತ್ನಿಯರು ಮತ್ತು ಅವರ ಸಖಿಯರ ಬಳಿ ಹೋಗಬಾರದು. ವೈದ್ಯರ, ಬಾಲಕರ, ವೃದ್ಧರ, ಸೇವಕರ, ಬಂಧುಗಳ, ಬ್ರಾಹ್ಮಣರ, ಶರಣಾಗತರಾದವರ ಮತ್ತು ಸಂಬಂಧಿಗಳ ಪತ್ನಿಯರ ಸಮೀಪಕ್ಕೂ ಹೋಗಬಾರದು. ಹೀಗೆ ಮಾಡುವುದರಿಂದ ಮನುಷ್ಯನು ದೀರ್ಘಾಯುಸ್ಸನ್ನು ಹೊಂದುತ್ತಾನೆ.
13107111a ಬ್ರಾಹ್ಮಣಸ್ಥಪತಿಭ್ಯಾಂ ಚ ನಿರ್ಮಿತಂ ಯನ್ನಿವೇಶನಮ್|
13107111c ತದಾವಸೇತ್ಸದಾ ಪ್ರಾಜ್ಞೋ ಭವಾರ್ಥೀ ಮನುಜೇಶ್ವರ||
ಮನುಜೇಶ್ವರ! ಏಳ್ಗೆಯನ್ನು ಬಯಸುವ ಪ್ರಾಜ್ಞನು ಗೃಹಶಿಲ್ಪಿಯು ಕಟ್ಟಿದ ಮತ್ತು ಬ್ರಾಹ್ಮಣನು ವಾಸ್ತುಪೂಜನಪೂರ್ವಕ ಆರಂಭಿಸಿದ ಮನೆಯಲ್ಲಿಯೇ ಸದಾ ನಿವಾಸಿಸಬೇಕು.
13107112a ಸಂಧ್ಯಾಯಾಂ ನ ಸ್ವಪೇದ್ರಾಜನ್ವಿದ್ಯಾಂ ನ ಚ ಸಮಾಚರೇತ್|
13107112c ನ ಭುಂಜೀತ ಚ ಮೇಧಾವೀ ತಥಾಯುರ್ವಿಂದತೇ ಮಹತ್||
ರಾಜನ್! ಮೇಧಾವಿಯಾದವನು ಸಂಧ್ಯಾಕಾಲದಲ್ಲಿ ಮಲಗಬಾರದು. ವಿದ್ಯೆಯನ್ನು ಅಭ್ಯಾಸಮಾಡಬಾರದು. ಊಟ ಮಾಡಬಾರದು. ಇದರಿಂದ ದೀರ್ಘಾಯುವನ್ನು ಪಡೆಯುತ್ತಾನೆ.
13107113a ನಕ್ತಂ ನ ಕುರ್ಯಾತ್ಪಿತ್ರ್ಯಾಣಿ ಭುಕ್ತ್ವಾ ಚೈವ ಪ್ರಸಾಧನಮ್|
13107113c ಪಾನೀಯಸ್ಯ ಕ್ರಿಯಾ ನಕ್ತಂ ನ ಕಾರ್ಯಾ ಭೂತಿಮಿಚ್ಚತಾ||
ಏಳ್ಗೆಯನ್ನು ಬಯಸುವವನು ರಾತ್ರಿ ಪಿತೃಕಾರ್ಯಗಳನ್ನು ಮಾಡಬಾರದು. ಊಟ ಮಾಡಿದ ನಂತರ ತಲೆಬಾಚಿಕೊಳ್ಳಬಾರದು[39]. ರಾತ್ರಿಯಲ್ಲಿ ಸ್ನಾನಮಾಡಬಾರದು.
13107114a ವರ್ಜನೀಯಾಶ್ಚ ವೈ ನಿತ್ಯಂ ಸಕ್ತವೋ ನಿಶಿ ಭಾರತ|
13107114c ಶೇಷಾಣಿ ಚಾವದಾತಾನಿ ಪಾನೀಯಂ ಚೈವ ಭೋಜನೇ||
ಭಾರತ! ನಿತ್ಯವೂ ರಾತ್ರಿವೇಳೆಯಲ್ಲಿ ಹಿಟ್ಟನ್ನು ತಿನ್ನಬಾರದು. ಊಟಮಾಡುವಾಗ[40] ಬೇರೆಯವರು ಕುಡಿದು ಬಿಟ್ಟಿರುವ ಪಾನೀಯಗಳನ್ನಾಗಲೀ ನೀರನ್ನಾಗಲೀ ಕುಡಿಯಬಾರದು.
13107115a ಸೌಹಿತ್ಯಂ ಚ ನ ಕರ್ತವ್ಯಂ ರಾತ್ರೌ ನೈವ ಸಮಾಚರೇತ್|
13107115c ದ್ವಿಜಚ್ಚೇದಂ ನ ಕುರ್ವೀತ ಭುಕ್ತ್ವಾ ನ ಚ ಸಮಾಚರೇತ್[41]||
ರಾತ್ರಿವೇಳೆ ಹೊಟ್ಟೆ ಬಿರಿಯುವಷ್ಟು ಊಟಮಾಡಬಾರದು. ಬೇರೆಯವರಿಗೂ ಮಾಡಿಸಬಾರದು. ಊಟದ ನಂತರ ಹಲ್ಲನ್ನು ಕೀಳಬಾರದು[42].
13107116a ಮಹಾಕುಲಪ್ರಸೂತಾಂ ಚ ಪ್ರಶಸ್ತಾಂ ಲಕ್ಷಣೈಸ್ತಥಾ|
13107116c ವಯಃಸ್ಥಾಂ ಚ ಮಹಾಪ್ರಾಜ್ಞ ಕನ್ಯಾಮಾವೋಢುಮರ್ಹತಿ||
ಮಹಾಪ್ರಾಜ್ಞನು ಮಹಾಕುಲದಲ್ಲಿ ಹುಟ್ಟಿದ, ಪ್ರಶಸ್ತ ಲಕ್ಷಣಗಳಿಂದ ಕೂಡಿದ, ವಿವಾಹಯೋಗ್ಯ ವಯಸ್ಕಳಾದ ಕನ್ಯೆಯನ್ನು ವಿವಾಗವಾಗಬೇಕು.
13107117a ಅಪತ್ಯಮುತ್ಪಾದ್ಯ ತತಃ ಪ್ರತಿಷ್ಠಾಪ್ಯ ಕುಲಂ ತಥಾ|
13107117c ಪುತ್ರಾಃ ಪ್ರದೇಯಾ ಜ್ಞಾನೇಷು ಕುಲಧರ್ಮೇಷು ಭಾರತ||
ಭಾರತ! ಅವಳಲ್ಲಿ ಸಂತಾನವನ್ನು ಹುಟ್ಟಿಸಿ ಕುಲವನ್ನು ಪ್ರತಿಷ್ಠಾಪಿಸಬೇಕು. ಜ್ಞಾನ ಮತು ಕುಲಧರ್ಮಗಳನ್ನು ಪಡೆಯಲು ಪುತ್ರರನ್ನು ಗುರುಕುಲಕ್ಕೆ ಕಳುಹಿಸಬೇಕು.
13107118a ಕನ್ಯಾ ಚೋತ್ಪಾದ್ಯ ದಾತವ್ಯಾ ಕುಲಪುತ್ರಾಯ ಧೀಮತೇ|
13107118c ಪುತ್ರಾ ನಿವೇಶ್ಯಾಶ್ಚ ಕುಲಾದ್ ಭೃತ್ಯಾ ಲಭ್ಯಾಶ್ಚ ಭಾರತ||
ಕನ್ಯೆಯನ್ನು ಹುಟ್ಟಿಸಿ ಸತ್ಕುಲಪ್ರಸೂತ ಧೀಮಂತನಿಗೆ ವಿವಾಹಮಾಡಿ ಕೊಡಬೇಕು. ಪುತ್ರನಿಗೆ ವಧುವನ್ನೂ ಉತ್ತಮ ಕುಲದಿಂದ ತರಬೇಕು ಮತ್ತು ಸೇವಕರನ್ನೂ ಉತ್ತಮ ಕುಲದಿಂದಲೇ ಆರಿಸಿ ತರಬೇಕು.
13107119a ಶಿರಃಸ್ನಾತೋಽಥ ಕುರ್ವೀತ ದೈವಂ ಪಿತ್ರ್ಯಮಥಾಪಿ ಚ|
13107119c ನಕ್ಷತ್ರೇ ನ ಚ ಕುರ್ವೀತ ಯಸ್ಮಿನ್ ಜಾತೋ ಭವೇನ್ನರಃ|
13107119e ನ ಪ್ರೋಷ್ಠಪದಯೋಃ ಕಾರ್ಯಂ ತಥಾಗ್ನೇಯೇ ಚ ಭಾರತ||
ತಲೆಸ್ನಾನ ಮಾಡಿಯೇ ದೇವ-ಪಿತೃಕಾರ್ಯಗಳನ್ನು ಮಾಡಬೇಕು. ಭಾರತ! ತನ್ನ ಜನ್ಮನಕ್ಷತ್ರದಲ್ಲಿ, ಪೂರ್ವಾಭಾದ್ರಪದಾ-ಉತ್ತರಾಭಾದ್ರಪದಾ ನಕ್ಷತ್ರಗಳಲ್ಲಿ ಮತ್ತು ಅಗ್ನಿಯ ನಕ್ಷತ್ರವಾದ ಕೃತ್ತಿಕೆಯಲ್ಲಿ ದೇವ-ಪಿತೃಕಾರ್ಯಗಳನ್ನು ಮಾಡಬಾರದು.
13107120a ದಾರುಣೇಷು ಚ ಸರ್ವೇಷು ಪ್ರತ್ಯಹಂ ಚ ವಿವರ್ಜಯೇತ್|
13107120c ಜ್ಯೋತಿಷೇ ಯಾನಿ ಚೋಕ್ತಾನಿ ತಾನಿ ಸರ್ವಾಣಿ ವರ್ಜಯೇತ್||
ದಾರುಣ ನಕ್ಷತ್ರಗಳೆಲ್ಲವನ್ನೂ[43] ಮತ್ತು ಪ್ರತ್ಯಕ್ತಾರೆಯಿರುವ ನಕ್ಷತ್ರ[44]ವನ್ನೂ ಬಿಡಬೇಕು. ಜ್ಯೋತಿಷ್ಯದಲ್ಲಿ ಯಾವ ನಕ್ಷತ್ರಗಳು ದೇವ-ಪಿತೃಕಾರ್ಯಗಳಿಗೆ ನಿಷಿದ್ಧವೆಂದು ಹೇಳಲಾಗಿದೆಯೋ ಅವೆಲ್ಲವನ್ನೂ ವರ್ಜಿಸಬೇಕು.
13107121a ಪ್ರಾಙ್ಮುಖಃ ಶ್ಮಶ್ರುಕರ್ಮಾಣಿ ಕಾರಯೇತ ಸಮಾಹಿತಃ|
13107121c ಉದಙ್ಮುಖೋ ವಾ ರಾಜೇಂದ್ರ ತಥಾಯುರ್ವಿಂದತೇ ಮಹತ್||
ರಾಜೇಂದ್ರ! ಪೂರ್ವಾಭಿಮುಖವಾಗಿ ಅಥವಾ ಉತ್ತರಾಭಿಮುಖವಾಗಿ ಏಕಾಗ್ರಚಿತ್ತನಾಗಿ ಕುಳಿತು ಕ್ಷೌರವನ್ನು ಮಾಡಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಮನುಷ್ಯನು ದೀರ್ಘಾಯುಸ್ಸನ್ನು ಹೊಂದುತ್ತಾನೆ.
[45]13107122a ಪರಿವಾದಂ ನ ಚ ಬ್ರೂಯಾತ್ಪರೇಷಾಮಾತ್ಮನಸ್ತಥಾ|
13107122c ಪರಿವಾದೋ ನ ಧರ್ಮಾಯ ಪ್ರೋಚ್ಯತೇ ಭರತರ್ಷಭ||
ಭರತರ್ಷಭ! ಪರನಿಂದೆಯನ್ನು ಮಾಡಬಾರದು. ಆತ್ಮನಿಂದೆಯನ್ನೂ ಮಾಡಿಕೊಳ್ಳಬಾರದು. ನಿಂದೆಯು ಅಧರ್ಮಕ್ಕೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ.
13107123a ವರ್ಜಯೇದ್ವ್ಯಂಗಿನೀಂ ನಾರೀಂ ತಥಾ ಕನ್ಯಾಂ ನರೋತ್ತಮ|
13107123c ಸಮಾರ್ಷಾಂ ವ್ಯಂಗಿತಾಂ ಚೈವ ಮಾತುಃ ಸ್ವಕುಲಜಾಂ ತಥಾ||
ನರೋತ್ತಮ! ಅಂಗವಿಕಲ ಅಥವಾ ಅಧಿಕಾಂಗಳಿರುವ ನಾರಿಯನ್ನು ಮದುವೆಯಾಗಬಾರದು. ಸಮಾನಗೋತ್ರ-ಪ್ರವರವಿರುವವಳನ್ನೂ ಮಾತೃಕುಲದಲ್ಲಿ ಹುಟ್ಟಿದವಳನ್ನೂ ಮದುವೆಯಾಗಬಾರದು.
13107124a ವೃದ್ಧಾಂ ಪ್ರವ್ರಜಿತಾಂ ಚೈವ ತಥೈವ ಚ ಪತಿವ್ರತಾಮ್|
13107124c ತಥಾತಿಕೃಷ್ಣವರ್ಣಾಂ ಚ[46] ವರ್ಣೋತ್ಕೃಷ್ಟಾಂ ಚ ವರ್ಜಯೇತ್||
ವೃದ್ಧೆಯನ್ನೂ, ಸಂನ್ಯಾಸಿಯಾದವಳನ್ನೂ ಮತ್ತು ಪತಿವ್ರತೆಯನ್ನೂ ಮದುವೆಯಾಗಬಾರದು. ಹಾಗೆಯೇ ಅತಿಯಾಗಿ ಕಪ್ಪಾಗಿರುವ ಮತ್ತು ಉತ್ಕೃಷ್ಟ ಬಣ್ಣದವಳನ್ನೂ ಮದುವೆಯಾಗಬಾರದು.
13107125a ಅಯೋನಿಂ ಚ ವಿಯೋನಿಂ ಚ ನ ಗಚ್ಚೇತ ವಿಚಕ್ಷಣಃ|
13107125c ಪಿಂಗಲಾಂ ಕುಷ್ಠಿನೀಂ ನಾರೀಂ ನ ತ್ವಮಾವೋಢುಮರ್ಹಸಿ||
ಯಾರ ಕುಲ-ಗೋತ್ರಗಳು ತಿಳಿದಿಲ್ಲವೋ ಮತ್ತು ಯಾರು ನೀಚಕುಲದಲ್ಲಿ ಹುಟ್ಟಿರುವಳೋ ಅಂಥವಳ ಸಹವಾಸವನ್ನು ವಿದ್ವಾಂಸನಾದವನು ಮಾಡಬಾರದು. ಕಂದುಹಳದಿ ಬಣ್ಣದವಳನ್ನೂ, ಕುಷ್ಠರೋಗವಿರುವವಳನ್ನೂ ಯಾವುದೇ ಕಾರಣದಿಂದಲೂ ಮದುವೆಯಾಗಬಾರದು.
13107126a ಅಪಸ್ಮಾರಿಕುಲೇ ಜಾತಾಂ ನಿಹೀನಾಂ ಚೈವ ವರ್ಜಯೇತ್|
13107126c ಶ್ವಿತ್ರಿಣಾಂ ಚ ಕುಲೇ ಜಾತಾಂ ತ್ರಯಾಣಾಂ ಮನುಜೇಶ್ವರ||
ಮೂರ್ಛೆರೋಗವಿರುವ ಕುಲದಲ್ಲಿ ಹುಟ್ಟಿದವಳನ್ನೂ, ನೀಚಕುಲದವಳನ್ನೂ, ತೊನ್ನುರೋಗವಿರುವ ಕುಲದವಳನ್ನೂ, ಕ್ಷಯರೋಗವಿರುವ ಕುಲದವಳನ್ನೂ ವಿವಾಹವಾಗಬಾರದು.
13107127a ಲಕ್ಷಣೈರನ್ವಿತಾ ಯಾ ಚ ಪ್ರಶಸ್ತಾ ಯಾ ಚ ಲಕ್ಷಣೈಃ|
13107127c ಮನೋಜ್ಞಾ ದರ್ಶನೀಯಾ ಚ ತಾಂ ಭವಾನ್ವೋಢುಮರ್ಹತಿ||
ಉತ್ತಮ ಲಕ್ಷಣಗಳಿಂದ ಕೂಡಿದ, ಶ್ರೇಷ್ಠ ಆಚರಣೆಯಿಂದ ಎಲ್ಲರ ಪ್ರಶಂಸೆಗೂ ಪಾತ್ರಳಾದ, ಮನೋಹಾರಿಣಿ ಸುಂದರಿ ಕನ್ಯೆಯನ್ನು ನೀನು ವಿವಾಹಮಾಡಿಕೊಳ್ಳುವುದು ಯೋಗ್ಯವಾಗಿದೆ.
13107128a ಮಹಾಕುಲೇ ನಿವೇಷ್ಟವ್ಯಂ ಸದೃಶೇ ವಾ ಯುಧಿಷ್ಠಿರ|
13107128c ಅವರಾ ಪತಿತಾ ಚೈವ ನ ಗ್ರಾಹ್ಯಾ ಭೂತಿಮಿಚ್ಚತಾ||
ಯುಧಿಷ್ಠಿರ! ಏಳ್ಗೆಯನ್ನು ಬಯಸುವವನು ತನಗಿಂತಲೂ ಶ್ರೇಷ್ಠವಾದ ಅಥವಾ ತನಗೆ ಸಮಾನ ಕುಲದ ಕನ್ಯೆಯನ್ನು ಮದುವೆಮಾಡಿಕೊಳ್ಳಬೇಕು. ತನಗಿಂತಲೂ ಹೀನ ಕುಲದವಳನ್ನಾಗಲೀ ಪತಿತಳನ್ನಾಗಲೀ ಮದುವೆಯಾಗಬಾರದು.
13107129a ಅಗ್ನೀನುತ್ಪಾದ್ಯ ಯತ್ನೇನ ಕ್ರಿಯಾಃ ಸುವಿಹಿತಾಶ್ಚ ಯಾಃ|
13107129c ವೇದೇಷು ಬ್ರಾಹ್ಮಣೈಃ ಪ್ರೋಕ್ತಾಸ್ತಾಶ್ಚ ಸರ್ವಾಃ ಸಮಾಚರೇತ್||
ಅರಣಿಗಳನ್ನು ಕಡೆದು ಅಗ್ನಿಯನ್ನು ಉತ್ಪಾದಿಸಿ ಪ್ರತಿಷ್ಠಾಪಿಸಿ ಬ್ರಾಹ್ಮಣರು ಹೇಳುವ ವೇದವಿಹಿತ ಕರ್ಮಗಳೆಲ್ಲವನ್ನೂ ಪ್ರಯತ್ನಪೂರ್ವಕವಾಗಿ ಮಾಡಿ ವಿವಾಹವನ್ನು ಮಾಡಿಕೊಳ್ಳಬೇಕು.
13107130a ನ ಚೇರ್ಷ್ಯಾ ಸ್ತ್ರೀಷು ಕರ್ತವ್ಯಾ ದಾರಾ ರಕ್ಷ್ಯಾಶ್ಚ ಸರ್ವಶಃ|
13107130c ಅನಾಯುಷ್ಯಾ ಭವೇದೀರ್ಷ್ಯಾ ತಸ್ಮಾದೀರ್ಷ್ಯಾಂ ವಿವರ್ಜಯೇತ್||
ಸರ್ವೋಪಾಯಗಳಿಂದಲೂ ಪತ್ನಿಯನ್ನು ರಕ್ಷಿಸಬೇಕು. ಸ್ತ್ರೀಯರ ವಿಷಯದಲ್ಲಿ ಈರ್ಷೆ[47]ಯನ್ನು ಇಟ್ಟುಕೊಳ್ಳಬಾರದು. ಈರ್ಷೆಯಿಂದ ಆಯುಸ್ಸು ಕ್ಷೀಣಿಸುತ್ತದೆ. ಆದುದರಿಂದ ಈರ್ಷೆಯನ್ನು ಸರ್ವಥಾ ವರ್ಜಿಸಬೇಕು.
13107131a ಅನಾಯುಷ್ಯೋ ದಿವಾಸ್ವಪ್ನಸ್ತಥಾಭ್ಯುದಿತಶಾಯಿತಾ|
13107131c ಪ್ರಾತರ್ನಿಶಾಯಾಂ ಚ ತಥಾ ಯೇ ಚೋಚ್ಚಿಷ್ಟಾಃ ಸ್ವಪಂತಿ ವೈ||
ಹಗಲಿನಲ್ಲಿ ಮಲಗುವುದರಿಂದಲೂ ಸೂರ್ಯೋದಯದ ನಂತರವೂ ಮಲಗಿಕೊಂಡಿರುವುದರಿಂದಲೂ ಆಯುಸ್ಸು ಕ್ಷೀಣಿಸುತ್ತದೆ. ಪ್ರಾತಃ ಸಂಧ್ಯೆಯಲ್ಲಿಯೂ ರಾತ್ರಿಯ ಆರಂಭದಲ್ಲಿಯೂ ಮಲಗಬಾರದು. ಸತ್ಪುರುಷರು ಅಪವಿತ್ರರಾಗಿ ಮಲಗಿಕೊಳ್ಳುವುದಿಲ್ಲ.
13107132a ಪಾರದಾರ್ಯಮನಾಯುಷ್ಯಂ ನಾಪಿತೋಚ್ಚಿಷ್ಟತಾ ತಥಾ|
13107132c ಯತ್ನತೋ ವೈ ನ ಕರ್ತವ್ಯಮಭ್ಯಾಸಶ್ಚೈವ ಭಾರತ||
ಪರಸ್ತ್ರೀಸಮಾಗಮ ಮತ್ತು ಕ್ಷೌರಮಾಡಿಕೊಂಡು ಸ್ನಾನಮಾಡದೇ ಇರುವುದು ಇವು ಆಯುಸ್ಸನ್ನು ಕ್ಷೀಣಿಸುತ್ತವೆ. ಅಪವಿತ್ರ ಸ್ಥಾನದಲ್ಲಿ ಅಪವಿತ್ರನಾಗಿ ವೇದಾಧ್ಯಯನವನ್ನು ಮಾಡಬಾರದು.
13107133a ಸಂಧ್ಯಾಂ ನ ಭುಂಜೇನ್ನ ಸ್ನಾಯಾನ್ನ ಪುರೀಷಂ ಸಮುತ್ಸೃಜೇತ್[48]|
13107133c ಪ್ರಯತಶ್ಚ ಭವೇತ್ತಸ್ಯಾಂ ನ ಚ ಕಿಂ ಚಿತ್ಸಮಾಚರೇತ್||
ಸಂಧ್ಯಾಕಾಲದ ಸಮಯದಲ್ಲಿ ಸ್ನಾನವನ್ನಾಗಲೀ, ಊಟವನ್ನಾಗಲೀ, ಮಲವಿಸರ್ಜನೆಯನ್ನಾಗಲೀ ಮಾಡಬಾರದು. ಆ ಸಮಯದಲ್ಲಿ ಪ್ರಯತ್ನಿಸಿ ಏನನ್ನೂ ಮಾಡದಿರಬೇಕು. ಧ್ಯಾನೋಪಾಸನೆಗಳನ್ನು ಮಾಡಬೇಕು.
13107134a ಬ್ರಾಹ್ಮಣಾನ್ ಪೂಜಯೇಚ್ಚಾಪಿ ತಥಾ ಸ್ನಾತ್ವಾ ನರಾಧಿಪ|
13107134c ದೇವಾಂಶ್ಚ ಪ್ರಣಮೇತ್ಸ್ನಾತೋ ಗುರೂಂಶ್ಚಾಪ್ಯಭಿವಾದಯೇತ್||
ನರಾಧಿಪ! ಸ್ನಾನಮಾಡಿದ ನಂತರವೇ ಬ್ರಾಹ್ಮಣರನ್ನು ಪೂಜಿಸಬೇಕು. ದೇವತೆಗಳಿಗೆ ನಮಸ್ಕರಿಸಬೇಕು ಮತ್ತು ಗುರುಗಳನ್ನೂ ಅಭಿವಂದಿಸಬೇಕು.
13107135a ಅನಿಮಂತ್ರಿತೋ ನ ಗಚ್ಚೇತ ಯಜ್ಞಂ ಗಚ್ಚೇತ್ತು ದರ್ಶಕಃ|
13107135c ಅನಿಮಂತ್ರಿತೇ[49] ಹ್ಯನಾಯುಷ್ಯಂ ಗಮನಂ ತತ್ರ ಭಾರತ||
ಭಾರತ! ಆಹ್ವಾನಿತನಾಗದೇ ಹೋಗಬಾರದು. ಆದರೆ ಯಜ್ಞವನ್ನು ನೋಡಲು ಆಹ್ವಾನಿತನಾಗಿರದಿದ್ದರೂ ಹೋಗಬಹುದು. ಆಹ್ವಾನಿತನಾಗದೇ ಹೋಗುವುದರಿಂದ ಆಯುಷ್ಯವು ಕ್ಷೀಣಿಸುತ್ತದೆ.
13107136a ನ ಚೈಕೇನ ಪರಿವ್ರಾಜ್ಯಂ ನ ಗಂತವ್ಯಂ ತಥಾ ನಿಶಿ|
13107136c ಅನಾಗತಾಯಾಂ ಸಂಧ್ಯಾಯಾಂ ಪಶ್ಚಿಮಾಯಾಂ ಗೃಹೇ ವಸೇತ್||
ಏಕಾಕಿಯಾಗಿ ಪರದೇಶಕ್ಕೆ ಹೋಗಬಾರದು. ರಾತ್ರಿ ಪ್ರಯಾಣ ಮಾಡಬಾರದು. ಯಾವುದಾದರೂ ಕಾರ್ಯಕ್ಕಾಗಿ ಹೊರಗೆ ಹೋದರೆ ಸಾಯಂಕಾಲವಾಗುವ ಮೊದಲೇ ಮನೆಗೆ ಹಿಂದಿರುಗಬೇಕು.
13107137a ಮಾತುಃ ಪಿತುರ್ಗುರೂಣಾಂ ಚ ಕಾರ್ಯಮೇವಾನುಶಾಸನಮ್|
13107137c ಹಿತಂ ವಾಪ್ಯಹಿತಂ ವಾಪಿ ನ ವಿಚಾರ್ಯಂ ನರರ್ಷಭ||
ನರರ್ಷಭ! ಮಾತಾ-ಪಿತೃ ಮತ್ತು ಗುರುಗಳ ಆಜ್ಞೆಗಳನ್ನು ಪರಿಪಾಲಿಸಲೇ ಬೇಕು. ಅವರ ಆಜ್ಞೆಯನ್ನು ಪರಿಪಾಲಿಸುವುದರಿಂದ ಹಿತವಾಗುವುದೇ ಅಹಿತವಾಗುವುದೇ ಎಂದು ವಿಚಾರಮಾಡಲೂ ಬಾರದು.
13107138a ಧನುರ್ವೇದೇ ಚ ವೇದೇ ಚ ಯತ್ನಃ ಕಾರ್ಯೋ ನರಾಧಿಪ|
13107138c ಹಸ್ತಿಪೃಷ್ಠೇಽಶ್ವಪೃಷ್ಠೇ ಚ ರಥಚರ್ಯಾಸು ಚೈವ ಹ|
13107138e ಯತ್ನವಾನ್ ಭವ ರಾಜೇಂದ್ರ ಯತ್ನವಾನ್ಸುಖಮೇಧತೇ||
ನರಾಧಿಪ! ರಾಜೇಂದ್ರ! ಧನುರ್ವೇದ ಮತ್ತು ವೇದಗಳನ್ನು ಕಲಿಯಲು ಪ್ರಯತ್ನಿಸಬೇಕು. ಆನೆ ಸವಾರಿ, ಕುದುರೆ ಸವಾರಿ ಮತ್ತು ರಥಗಳನ್ನು ಓಡಿಸುವುದನ್ನೂ ಕಲಿಯಬೇಕು. ಪ್ರಯತ್ನಶೀಲನಾಗು. ಪ್ರಯತ್ನಶೀಲನಿಗೆ ಸುಖವು ದೊರೆಯುತ್ತದೆ.
13107139a ಅಪ್ರಧೃಷ್ಯಶ್ಚ ಶತ್ರೂಣಾಂ ಭೃತ್ಯಾನಾಂ ಸ್ವಜನಸ್ಯ ಚ|
13107139c ಪ್ರಜಾಪಾಲನಯುಕ್ತಶ್ಚ ನ ಕ್ಷತಿಂ ಲಭತೇ ಕ್ವ ಚಿತ್||
ಅಂಥವನು ಶತ್ರುಗಳಿಗೆ, ಸ್ವಜನರಿಗೆ ಮತ್ತು ಸೇವಕರಿಗೆ ದುರ್ಧರ್ಷನಾಗುತ್ತಾನೆ. ಪ್ರಜಾಪಾಲನಯುಕ್ತ ರಾಜನಿಗೆ ಎಂದೂ ಕ್ಷತಿಯುಂಟಾಗುವುದಿಲ್ಲ.
13107140a ಯುಕ್ತಿಶಾಸ್ತ್ರಂ ಚ ತೇ ಜ್ಞೇಯಂ ಶಬ್ದಶಾಸ್ತ್ರಂ ಚ ಭಾರತ|
13107140c ಗಂಧರ್ವಶಾಸ್ತ್ರಂ ಚ ಕಲಾಃ ಪರಿಜ್ಞೇಯಾ ನರಾಧಿಪ||
ಭಾರತ! ನರಾಧಿಪ! ತರ್ಕಶಾಸ್ತ್ರ ಮತ್ತು ಶಬ್ದಶಾಸ್ತ್ರಗಳನ್ನೂ ತಿಳಿದುಕೊಂಡಿರಬೇಕು. ಗಂಧರ್ವಶಾಸ್ತ್ರ ಮತ್ತು ಕಲೆಗಳನ್ನೂ ತಿಳಿದುಕೊಂಡಿರಬೇಕು.
13107141a ಪುರಾಣಮಿತಿಹಾಸಾಶ್ಚ ತಥಾಖ್ಯಾನಾನಿ ಯಾನಿ ಚ|
13107141c ಮಹಾತ್ಮನಾಂ ಚ ಚರಿತಂ ಶ್ರೋತವ್ಯಂ ನಿತ್ಯಮೇವ ತೇ||
ನಿತ್ಯವೂ ನೀನು ಪುರಾಣ-ಇತಿಹಾಸಗಳನ್ನೂ, ಅವುಗಳಲ್ಲಿರುವ ಆಖ್ಯಾನಗಳನ್ನೂ, ಮಹಾತ್ಮರ ಚರಿತ್ರೆಗಳನ್ನೂ ಕೇಳುತ್ತಿರಬೇಕು.
13107142a ಪತ್ನೀಂ ರಜಸ್ವಲಾಂ ಚೈವ ನಾಭಿಗಚ್ಚೇನ್ನ ಚಾಹ್ವಯೇತ್|
13107142c ಸ್ನಾತಾಂ ಚತುರ್ಥೇ ದಿವಸೇ ರಾತ್ರೌ ಗಚ್ಚೇದ್ವಿಚಕ್ಷಣಃ||
ಪತ್ನಿಯು ರಜಸ್ವಲೆಯಾಗಿರುವಾಗ ಅವಳ ಸಮೀಪಕ್ಕೆ ಹೋಗಬಾರದು. ಅವಳನ್ನು ಹತ್ತಿರಕ್ಕೂ ಕರೆಯಬಾರದು. ವಿದ್ವಾಂಸನಾದವನು ನಾಲ್ಕನೆಯ ದಿವಸ ಅವಳು ಸ್ನಾನಮಾಡಿದ ನಂತರ ಅಂದಿನ ರಾತ್ರಿ ಅವಳೊಡನೆ ಕೂಡಬಹುದು.
13107143a ಪಂಚಮೇ ದಿವಸೇ ನಾರೀ ಷಷ್ಠೇಽಹನಿ ಪುಮಾನ್ ಭವೇತ್|
13107143c ಏತೇನ ವಿಧಿನಾ ಪತ್ನೀಮುಪಗಚ್ಚೇತ ಪಂಡಿತಃ||
ರಜಸ್ವಲೆಯಾದ ಐದನೆಯ ದಿನದಲ್ಲಿ ಗರ್ಭಾದಾನಮಾಡಿದರೆ ಹೆಣ್ಣುಮಗುವೂ ಆರನೆಯ ದಿನ ಗರ್ಭಾದಾನ ಮಾಡಿದರೆ ಗಂಡುಮಗುವೂ ಹುಟ್ಟುತ್ತದೆ. ಪಂಡಿತನಾದವನು ಈ ವಿಧಿಯಿಂದಲೇ ಪತ್ನಿಯನ್ನು ಕೂಡಬೇಕು.
13107144a ಜ್ಞಾತಿಸಂಬಂಧಿಮಿತ್ರಾಣಿ ಪೂಜನೀಯಾನಿ ನಿತ್ಯಶಃ|
13107144c ಯಷ್ಟವ್ಯಂ ಚ ಯಥಾಶಕ್ತಿ ಯಜ್ಞೈರ್ವಿವಿಧದಕ್ಷಿಣೈಃ|
13107144e ಅತಊರ್ಧ್ವಮರಣ್ಯಂ ಚ ಸೇವಿತವ್ಯಂ ನರಾಧಿಪ||
ಕುಟುಂಬದವರನ್ನೂ, ಸಂಬಂಧಿಗಳನ್ನೂ ಮತ್ತು ಮಿತ್ರರನ್ನೂ ಸದಾ ಸತ್ಕರಿಸಬೇಕು. ನರಾಧಿಪ! ಯಥಾಶಕ್ತಿಯಾಗಿ ವಿವಿಧ ದಕ್ಷಿಣೆಗಳಿಂದ ಯಜ್ಞಗಳನ್ನು ಮಾಡಿಸಬೇಕು. ಗೃಹಸ್ಥಾಶ್ರಮದ ನಂತರ ಅರಣ್ಯದ ಜೀವನವನ್ನು ನಡೆಸಬೇಕು.
13107145a ಏಷ ತೇ ಲಕ್ಷಣೋದ್ದೇಶ ಆಯುಷ್ಯಾಣಾಂ ಪ್ರಕೀರ್ತಿತಃ|
13107145c ಶೇಷಸ್ತ್ರೈವಿದ್ಯವೃದ್ಧೇಭ್ಯಃ ಪ್ರತ್ಯಾಹಾರ್ಯೋ ಯುಧಿಷ್ಠಿರ||
ಯುಧಿಷ್ಠಿರ! ಹೀಗೆ ನಿನಗೆ ಆಯುಸ್ಸನ್ನು ವೃದ್ಧಿಗೊಳಿಸುವ ಲಕ್ಷಣಗಳ ಕುರಿತು ಹೇಳಿದ್ದೇನೆ. ಇನ್ನೂ ಉಳಿದುದನ್ನು ಮೂರುವೇದಗಳನ್ನು ತಿಳಿದ ವೃದ್ಧರಿಂದ ತಿಳಿದುಕೋ.
13107146a ಆಚಾರೋ ಭೂತಿಜನನ ಆಚಾರಃ ಕೀರ್ತಿವರ್ಧನಃ|
13107146c ಆಚಾರಾದ್ವರ್ಧತೇ ಹ್ಯಾಯುರಾಚಾರೋ ಹಂತ್ಯಲಕ್ಷಣಮ್||
ಆಚಾರವು ಕಲ್ಯಾಣವನ್ನುಂಟುಮಾಡುತ್ತದೆ. ಆಚಾರವು ಕೀರ್ತಿಯನ್ನು ಹೆಚ್ಚಿಸುತ್ತದೆ. ಆಚಾರವು ಆಯುಸ್ಸನ್ನು ವರ್ಧಿಸುತ್ತದೆ ಮತ್ತು ದುರ್ಲಕ್ಷಣಗಳನ್ನು ನಾಶಗೊಳಿಸುತ್ತದೆ.
13107147a ಆಗಮಾನಾಂ ಹಿ ಸರ್ವೇಷಾಮಾಚಾರಃ ಶ್ರೇಷ್ಠ ಉಚ್ಯತೇ|
13107147c ಆಚಾರಪ್ರಭವೋ ಧರ್ಮೋ ಧರ್ಮಾದಾಯುರ್ವಿವರ್ಧತೇ||
ಆಚಾರವೇ ಎಲ್ಲಕ್ಕಿಂತಲೂ ಶ್ರೇಷ್ಠವೆಂದು ಆಗಮಗಳಲ್ಲಿ ಹೇಳಲಾಗಿದೆ. ಆಚರದಿಂದಲೇ ಧರ್ಮವು ಹುಟ್ಟಿಕೊಂಡಿದೆ. ಧರ್ಮದಿಂದ ಆಯುಸ್ಸು ವರ್ಧಿಸುತ್ತದೆ.
13107148a ಏತದ್ಯಶಸ್ಯಮಾಯುಷ್ಯಂ ಸ್ವರ್ಗ್ಯಂ ಸ್ವಸ್ತ್ಯಯನಂ ಮಹತ್|
13107148c ಅನುಕಂಪತಾ ಸರ್ವವರ್ಣಾನ್ಬ್ರಹ್ಮಣಾ ಸಮುದಾಹೃತಮ್||
ಹಿಂದೆ ಸರ್ವವರ್ಣದವರ ಮೇಲಿನ ಅನುಕಂಪದಿಂದ ಬ್ರಹ್ಮನು ಈ ಸದಾಚಾರಧರ್ಮವನ್ನು ಉಪದೇಶಿಸಿದನು. ಇದು ಕೀರ್ತಿಕರವಾದುದು. ಆಯಸ್ಸನ್ನು ವರ್ಧಿಸುವಂಥಹುದು. ಮತ್ತು ಸ್ವರ್ಗಪ್ರಾಪಕವಾದುದು. ಮನುಷ್ಯನ ಕಲ್ಯಾಣಕ್ಕೆ ಪರಮಾಶ್ರಯವಾದುದು.”
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಆಯುಷ್ಯಾಖ್ಯಾನೇ ಸಪ್ತಾಧಿಕಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಆಯುಷ್ಯಾಖ್ಯಾನ ಎನ್ನುವ ನೂರಾಏಳನೇ ಅಧ್ಯಾಯವು.
[1] ಕರ್ಮಣಾ ಮನಸಾ (ಗೀತಾ ಪ್ರೆಸ್).
[2] ಸಂಕೀರ್ಣಮೈಥುನಾಃ ಎನ್ನುವುದಕ್ಕೆ ಇತರ ವರ್ಣದ ಸ್ತ್ರೀಯರೊಂದನೆ ಸಂಪರ್ಕವನ್ನಿಟ್ಟುಕೊಂಡಿರುವವರು ಎಂಬ ಅನುವಾದವೂ ಇದೆ (ಗೀತಾ ಪ್ರೆಸ್).
[3] ಸೂರ್ಯೋದಯಕ್ಕೂ ಎರಡು ಗಂಟೆ ಮೊದಲು (ಗೀತಾ ಪ್ರೆಸ್).
[4] ಇದರ ನಂತರ ಈ ಒಂದು ಅಧಿಕ ಶ್ಲೋಕಾರ್ಧವಿದೆ: ನೋಪಸೃಷ್ಟಂ ನ ವಾರಿಸ್ಥಂ ನ ಮಢ್ಯಂ ನಭಸೋ ಗತಮ್| ಅರ್ಥಾತ್ ಗ್ರಹಣಸಮಯದಲ್ಲಿಯೂ ಸೂರ್ಯನನ್ನು ನೋಡಬಾರದು. ನೀರಿನಲ್ಲಿ ಪ್ರತಿಬಿಂಬಿಸಿರುವಾಗಲೂ ಸೂರ್ಯನನ್ನು ನೋಡಬಾರದು. (ಭಾರತ ದರ್ಶನ/ ಗೀತಾ ಪ್ರೆಸ್).
[5] ನಿತ್ಯ (ಭಾರತ ದರ್ಶನ/ ಗೀತಾ ಪ್ರೆಸ್).
[6] ಇದರ ನಂತರ ಈ ಒಂದು ಅಧಿಕ ಶ್ಲೋಕವಿದೆ: ಯಾವಂತೋ ರೋಮಕೂಪಾಃ ಸ್ಯುಃ ಸ್ತ್ರೀಣಾಂ ಗಾತ್ರೇಷು ನಿರ್ಮಿತಾಃ| ತಾವದ್ವರ್ಷಸಹಸ್ರಾಣಿ ನರಕಂ ಪರ್ಯುಪಾಸತೇ|| ಅರ್ಥಾತ್: ಪರಸ್ತ್ರೀಗಮನ ಮಾಡಿದ ಪುರುಷನು ಆ ಸ್ತ್ರೀಯಲ್ಲಿ ಎಷ್ಟು ರೂಪಕೂಪಗಳಿವೆಯೋ ಅಷ್ಟು ಸಾವಿರ ವರ್ಷಗಳ ಕಾಲ ನರಕವನ್ನು ಅನುಭವಿಸುತ್ತಾನೆ (ಭಾರತ ದರ್ಶನ/ ಗೀತಾ ಪ್ರೆಸ್).
[7] ಪೂರ್ವಾಹ್ನಃ ಎನ್ನುವುದನ್ನು ಹಗಲಿನ ಮೂರು ಭಾಗಗಳಲ್ಲಿ ಮೊದಲನೆಯ ಭಾಗ (ಭಾರತ ದರ್ಶನ) ಎಂದೂ ದಿನದ ಮೊದಲನೇ ಪ್ರಹರ (ಗೀತಾ ಪ್ರೆಸ್) ಎಂದೂ ಅನುವಾದಿಸಿದ್ದಾರೆ.
[8] ಯುವಕನು ವೃದ್ಧನ ಮುಂದೆ ಮುಂದೆ ಹೋಗಬಾರದು. ವೃದ್ಧನನ್ನು ಮುಂದೆ ಬಿಟ್ಟುಕೊಟ್ಟು ಅವನ ಹಿಂದೆಯೇ ನಡೆಯಬೇಕು.
[9] ಶರೀರದ ಮೇಲ್ಭಾಗಕ್ಕೆ ಏನನ್ನಾದರೂ ಹೊದೆದುಕೊಂಡೇ ಊಟಮಾಡಬೇಕು.
[10] ತಿಲಸೃಷ್ಟಂ ನ ಚಾಶ್ನೀಯಾತ್ತಥಾಸ್ಯಾಯುರ್ನ ರಿಷ್ಯತೇ| (ಗೀತಾ ಪ್ರೆಸ್/ಭಾರತ ದರ್ಶನ).
[11] ತಲೆಸ್ನಾನ ಮಡಿದ ನಂತರ ಅಂಗಾಂಗಳಿಗೆ ಎಣ್ಣೆಯನ್ನು ಹಚ್ಚಿಕೊಳ್ಳಬಾರದು ಅಥವಾ ನೀರನ್ನು ಮುಟ್ಟಬಾರದು – After washing the head, one should not apply oil to the limbs or touch the water again. (ಬಿಬೇಕ್ ದೆಬ್ರೋಯ್).
[12] ಊಟಮಾಡುವುದಕ್ಕೆ ಮೊದಲು ಸ್ವಲ್ಪ ಎಳ್ಳನ್ನು ಜಜ್ಜಿ ತಿನ್ನಬೇಕು. ಇದರಿಂದ ಮಹಾನತೆಯು ದೊರೆಯುತ್ತದೆ – Before eating, one should eat some crushed sesamum. One will then obtain greatness (ಬಿಬೇಕ್ ದೆಬ್ರೋಯ್).
[13] ಪ್ರಾದ್ರವತಿ (ಗೀತಾ ಪ್ರೆಸ್).
[14] One must never cross one’s legs (Bibek Debroy).
[15] ಇದು ಮದುವೆಯಾದವರಿಗೆ.
[16] ಇದರ ನಂತರ ಈ ಒಂದು ಅಧಿಕ ಶ್ಲೋಕವಿದೆ: ಕರ್ಣಿನಾಲೀಕನಾರಾಚಾನ್ನಿರ್ಹರಂತಿ ಶರೀರತಃ| ವಾಕ್ಶೂಲ್ಯಸ್ತು ನ ನಿರ್ಹರ್ತುಂ ಶಕ್ಯೋ ಹೃದಿಶಯೋ ಹಿ ಸಃ|| (ಗೀತಾ ಪ್ರೆಸ್).
[17] ಇದರ ನಂತರ ಈ ಒಂದು ಅಧಿಕ ಶ್ಲೋಕವಿದೆ: ಅಮಾವಾಸ್ಯಾಮೃತೇ ನಿತ್ಯಂ ದಂತಧಾವನಮಾಚರೇತ್| ಇತಿಹಾಸಪುರಾಣಾನಿ ದಾನಂ ವೇದಂ ಚ ನಿತ್ಯಶಃ| ಗಾಯತ್ರೀಮನನಂ ನಿತ್ಯಂ ಕುರ್ಯಾತ್ ಸಂಧ್ಯಾಂ ಸಮಾಹಿತಃ|| (ಗೀತಾ ಪ್ರೆಸ್).
[18] ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ನ ಸಂಧ್ಯಾಯಾಂ ಸ್ವಪೇನ್ನಿತ್ಯಂ ಸ್ನಾಯಾಚ್ಛುದ್ಧಃ ಸದಾ ಭವೇತ್| (ಗೀತಾ ಪ್ರೆಸ್).
[19] ಹಲ್ಲುಜ್ಜಲು ಬಳಸುವ ಮರದ/ಗಿಡದ ಕಡ್ಡಿ.
[20] ಶಾಸ್ತ್ರಗಳಲ್ಲಿ ಯಾವ ಕಡ್ಡಿಗಳನ್ನು ನಿಷೇದಿಸಿದ್ದಾರೋ ಅವುಗಳನ್ನು ಸದಾ ವರ್ಜಿಸಬೇಕು. ಶಾಸ್ತ್ರವಿಹಿತ ಕಾಷ್ಠದಿಂದಲೇ ಹಲ್ಲನ್ನು ಉಜ್ಜಿಕೊಳ್ಳಬೇಕು. ಆದರೆ ಪರ್ವಕಾಲಗಳಲಿ ಅದನ್ನೂ ಬಿಡಬೇಕು (ಗೀತಾ ಪ್ರೆಸ್).
[21] ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಅಕೃತ್ವಾ ದೇವಪೂಜಾಂ ಚ ನಾಚರೇದ್ದಂತಧಾವನಮ್| (ಗೀತಾ ಪ್ರೆಸ್).
[22] ಈ ಶ್ಲೋಕಕ್ಕೆ ಇನ್ನೊಂದು ಅನುವಾದವೂ ಇದೆ: ದೇವಪೂಜೆಯನ್ನು ಮಾಡದೇ ಗುರು, ವೃದ್ಧ, ಧಾರ್ಮಿಕ ಮತ್ತು ವಿದ್ವಾಂಸರನ್ನು ಬಿಟ್ಟು ಬೇರೆ ಯಾರಬಳಿಯೂ ಹೋಗಬಾರದು (ಗೀತಾ ಪ್ರೆಸ್).
[23] ಇದಕ್ಕೆ ಮೊದಲು ಈ ಎರಡು ಅಧಿಕ ಶ್ಲೋಕಗಳಿವೆ: ದಾರಸಂಗ್ರಹಣಾತ್ಪೂರ್ವೇ ನಾಚರೇನ್ಮೈಥುನಂ ಬುಧಃ| ಅನ್ಯಥಾ ತ್ವವಕೀರ್ಣಃ ಸ್ಯಾತ್ ಪ್ರಾಯಶ್ಚಿತ್ತಂ ಸಮಾಚರೇತ್|| ನೋದೀಕ್ಷೇತ್ ಪರದಾರಾಂಶ್ಚ ರಹಸ್ಯೇಕಾಸನೋ ಭವೇತ್| ಇಂದ್ರಿಯಾಣಿ ಸದಾಯಚ್ಛೇತ್ ಸ್ವಪ್ನೇಶುದ್ಧಮನಾಭವೇತ್|| (ಗೀತಾ ಪ್ರೆಸ್).
[24] ನಾವಶೀರ್ಣೇ (ಗೀತಾ ಪ್ರೆಸ್).
[25] ಒಂದೇ ಹಾಸಿಗೆಯ ಮೇಲೆ ಇನ್ನೊಬ್ಬರೊಂದಿಗೆ ಮಲಗಿಕೊಳ್ಳಬಾರದು ಎಂಬ ಭಾಷಾಂತರವೂ ಇದೆ (ಗೀತಾ ಪ್ರೆಸ್).
[26] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ನ ಚಾಪಿ ಗಚ್ಛೇತ್ ಕಾರ್ಯೇಣ ಸಮಯಾದ್ ವಾಪಿ ನಾಸ್ತಿಕೈಃ| ಆಸನಂ ತು ಪದಾಽಽಕೃಷ್ಯ ನ ಪ್ರಸಜ್ಜೇತ್ತಥಾ ನರಃ|| (ಗೀತಾ ಪ್ರೆಸ್).
[27] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಉದಕ್ಯಯಾ ಚ ಸಂಭಾಷಾಂ ನ ಕುರ್ವೀತ ಕದಾಚನ| (ಗೀತಾ ಪ್ರೆಸ್).
[28] ಮೇಲೆ ಉಡಬೇಕಾದುದನ್ನು ಕೆಳಗೆ ಉಡುವುದಿಲ್ಲ. ಕೆಳಗೆ ಉಡಬೇಕಾದುದನ್ನು ಮೇಲೆ ಹೊದೆದುಕೊಳ್ಳುವುದಿಲ್ಲ.
[29] ಪ್ರೇಂಖಣ ಗಿಡದ ಗಂಧ (ಭಾರತ ದರ್ಶನ).
[30] ನಂದಬಟ್ಟಲು ಗಿಡದ ಗಂಧ (ಭಾರತ ದರ್ಶನ).
[31] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಸಮಾನಮೇಕಪಾತ್ರೇ ತು ಭುಂಜೇನ್ನಾನ್ನಂ ಜನೇಶ್ವರ| (ಗೀತಾ ಪ್ರೆಸ್).
[32] ಯಜ್ಞಗಳಲ್ಲಿ ಸಿದ್ಧಪಡಿಸಿದ ಮಾಂಸವನ್ನು ಬಿಟ್ಟು ಅನ್ಯ ಮಾಂಸಗಳನ್ನು ತಿನ್ನಬಾರದು.
[33] ದೊಡ್ಡ ಪಾತ್ರೆಯಲ್ಲಿ ಸಂಗ್ರಹಿಸಿಟ್ಟಿರುವ ನೀರು, ಪಾಯಸ, ಹಿಟ್ಟು, ಮೊಸರು, ತುಪ್ಪ, ಜೇನುತುಪ್ಪ – ಇವುಗಳಿಗೆ ಶೇಷದೋಷವಿಲ್ಲ. ಉಳಿದ ಪದಾರ್ಥಗಳಿಗೆ ಶೇಷದೋಷವುಂಟು. (ಭಾರತ ದರ್ಶನ)
[34] ಭೋಜನಾನಂತರ ಉತ್ತರ ಮಾಧ್ಯಾಹ್ನಿಕವನ್ನು ಮಾಡಬೇಕು. ಅದರ ಅಂಗವಾಗಿ “ಅಂಗುಷ್ಠಮಾತ್ರಃ ಪುರುಷೋಽಂಗುಷ್ಟಂ ಚ ಸಮಾಶ್ರಿತ ಈಶಃ ಸರ್ವಸ್ಯ ಜಗತಃ ಪ್ರಭುಃ ಪ್ರೀಣಾತಿ ವಿಶ್ವಭುಕ್” ಎಂಬ ಮಂತ್ರದಿಂದ ಬಲಗಾಲಿನ ಹೆಬ್ಬೆರಳಿನ ಮೇಲೆ ಬಲಗೈಯಿಂದ ನೀರನ್ನು ಬಿಡಬೇಕು. (ಭಾರತ ದರ್ಶನ)
[35] ಋತುಮತಿಯಾಗದವಳೊಡನೆ (ಭಾರತ ದರ್ಶನ).
[36] ತಮ್ಮ ತಮ್ಮ ಉದ್ಧರಣೆಗಳ ನೀರಿನಿಂದ
[37] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಕುಲೀನಃ ಪಂಡಿತ ಇತಿ ರಕ್ಷ್ಯಾ ನಿಃಸ್ವಾಃ ಸ್ವಶಕ್ತಿತಃ| (ಗೀತಾ ಪ್ರೆಸ್).
[38] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ದೇವತಾ ಪ್ರತಿಮಾಽಽದರ್ಶಾಶ್ಚಂದನಾಃ ಪುಷ್ಪವಲ್ಲಿಕಾಃ| ಶುದ್ಧಂ ಜಲಂ ಸುವರ್ಣಂ ಚ ರಜತಂ ಗೃಹಮಂಗಲಮ್|| (ಗೀತಾ ಪ್ರೆಸ್).
[39] ಊಟ ಮಾಡಿದ ನಂತರ ಚೌರವನ್ನು ಮಾಡಿಸಿಕೊಳ್ಳಬಾರದು ಎಂಬ ಅನುವಾದವೂ ಇದೆ (ಗೀತಾ ಪ್ರೆಸ್).
[40] ಊಟದ ನಂತರ ಎಂಬ ಅನುವಾದವೂ ಇದೆ (ಗೀತಾ ಪ್ರೆಸ್).
[41] ಭುಕ್ತ್ವಾ ಪಾನಂ ಸಮಾಚರೇತ್ (ಭಾರತ ದರ್ಶನ).
[42] ದ್ವಿಜಚ್ಛೇದಂ ಎನ್ನುವುದಕ್ಕೆ ಬ್ರಾಹ್ಮಣವಧೆ ಎಂಬ ಅನುವಾದವೂ ಇದೆ (ಗೀತಾ ಪ್ರೆಸ್).
[43] ಆಶ್ಲೇಷಾ, ಆರ್ದ್ರಾ, ಜ್ಯೇಷ್ಠಾ ಮತ್ತು ಮೂಲಾ ನಕ್ಷತ್ರಗಳು ದಾರುಣ ನಕ್ಷತ್ರಗಳು (ಭಾರತ ದರ್ಶನ/ಗೀತಾ ಪ್ರೆಸ್).
[44] ಜನ್ಮನಕ್ಷತ್ರದ ಮೊದಲ್ಗೊಂಡು ಆ ತಿಥಿಯಿರುವ ನಕ್ಷತ್ರವರೆಗೆ ಎಣಿಸಿ ಬಂದ ಸಂಖ್ಯೆಯನ್ನು 9ರಿಂದ ಭಾಗಿಸಿ ಶೇಷವು 5 ಉಳಿದರೆ ಅದಕ್ಕೆ ಪ್ರತ್ಯುಕ್ತಾರೆ ಎಂದು ಹೇಳುತ್ತಾರೆ (ಭಾರತ ದರ್ಶನ/ಗೀತಾ ಪ್ರೆಸ್).
[45] ಇದಕ್ಕೆ ಮೊದಲೂ ಈ ಒಂದು ಶ್ಲೋಕಾರ್ಧವಿದೆ: ಸತಾಂ ಗುರೂಣಾಂ ವೃದ್ಧಾನಾಂ ಕುಲಸ್ತ್ರೀಣಾಂ ವಿಶೇಷತಃ| (ಗೀತಾ ಪ್ರೆಸ್).
[46] ತಥಾ ನಿಕೃಷ್ಟವರ್ಣಾಂ ಚ (ಭಾರತ ದರ್ಶನ/ಗೀತಾ ಪ್ರೆಸ್).
[47] ಅಸಹನೆ ಎಂಬ ಅನುವಾದವೂ ಇದೆ (ಭಾರತ ದರ್ಶನ).
[48] ಸಂಧ್ಯಾಯಾಂ ಚ ನ ಭುಂಜೇತ ನ ಸ್ನಾಯೇನ್ನ ತಥಾ ಪಠೇತ್| (ಭಾರತ ದರ್ಶನ/ಗೀತಾ ಪ್ರೆಸ್).
[49] ಅನರ್ಚಿತೇ (ಭಾರತ ದರ್ಶನ/ಗೀತಾ ಪ್ರೆಸ್).