Anushasana Parva: Chapter 106

ಅನುಶಾಸನ ಪರ್ವ: ದಾನಧರ್ಮ ಪರ್ವ

೧೦೬

ಅನಶನಮಹಾತ್ಮೆ

ಯಜ್ಞ, ತಪಸ್ಸು, ದಾನಗಳಿಗಿಂತಲೂ ಅನಶನ ವ್ರತದ ವಿಶೇಷ ಮಹಿಮೆಯನ್ನು ಉದಾಹರಿಸುವ ಬ್ರಹ್ಮ-ಭಗೀರಥರ ಸಂವಾದ (1-42).

13106001 ಯುಧಿಷ್ಠಿರ ಉವಾಚ|

13106001a ದಾನಂ ಬಹುವಿಧಾಕಾರಂ ಶಾಂತಿಃ ಸತ್ಯಮಹಿಂಸತಾ|

13106001c ಸ್ವದಾರತುಷ್ಟಿಶ್ಚೋಕ್ತಾ ತೇ ಫಲಂ ದಾನಸ್ಯ ಚೈವ ಯತ್||

13106002a ಪಿತಾಮಹಸ್ಯ ವಿದಿತಂ ಕಿಮನ್ಯತ್ರ ತಪೋಬಲಾತ್|

13106002c ತಪಸೋ ಯತ್ಪರಂ ತೇಽದ್ಯ ತನ್ಮೇ ವ್ಯಾಖ್ಯಾತುಮರ್ಹಸಿ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ನೀನು ಅನೇಕ ಪ್ರಕಾರದ ದಾನ, ಶಾಂತಿ, ಸತ್ಯ ಮತ್ತು ಅಹಿಂಸೆಗಳ ವರ್ಣನೆಯನ್ನು ಮಾಡಿದೆ. ಸ್ವ-ಪತ್ನಿಯಲ್ಲಿಯೇ ಸಂತುಷ್ಟನಾಗಿರಬೇಕಾದ ವಿಷಯವನ್ನೂ ಹೇಳಿದೆ ಮತ್ತು ದಾನದ ಫಲಗಳನ್ನು ನಿರೂಪಿಸಿದೆ. ನಿನಗೆ ತಿಳಿದಂತೆ ತಪೋಬಲಕ್ಕಿಂತಲೂ ಹೆಚ್ಚಾದ ಬೇರೆ ಯಾವ ಬಲವಿದೆ? ನಿನ್ನ ಪ್ರಕಾರ ತಪಸ್ಸಿಗಿಂತಲೂ ಉತ್ಕೃಷ್ಟ ಸಾಧನವಿದ್ದರೆ ಅದನ್ನು ನನಗೆ ಹೇಳಬೇಕು.”

13106003 ಭೀಷ್ಮ ಉವಾಚ|

13106003a ತಪಃ ಪ್ರಚಕ್ಷತೇ ಯಾವತ್ತಾವಲ್ಲೋಕಾ ಯುಧಿಷ್ಠಿರ|

13106003c ಮತಂ ಮಮ ತು ಕೌಂತೇಯ ತಪೋ ನಾನಶನಾತ್ಪರಮ್||

ಭೀಷ್ಮನು ಹೇಳಿದನು: “ಯುಧಿಷ್ಠಿರ! ಮನುಷ್ಯನು ಎಷ್ಟು ತಪಸ್ಸನ್ನಾಚರಿಸುತ್ತಾನೋ ಅದಕ್ಕೆ ಅನುಸಾರವಾಗಿ ಅವನಿಗೆ ಉತ್ತಮ ಲೋಕಗಳು ಪ್ರಾಪ್ತವಾಗುತ್ತವೆ. ಆದರೆ, ಅನಶನಕ್ಕಿಂತಲೂ ಹೆಚ್ಚಿನ ತಪಸ್ಸು ಬೇರೆ ಯಾವುದೂ ಇಲ್ಲವೆಂದು ನನ್ನ ಅಭಿಪ್ರಾಯ.

13106004a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

13106004c ಭಗೀರಥಸ್ಯ ಸಂವಾದಂ ಬ್ರಹ್ಮಣಶ್ಚ ಮಹಾತ್ಮನಃ||

ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಮಹಾತ್ಮ ಬ್ರಹ್ಮ ಮತ್ತು ಭಗೀರಥರ ಸಂವಾದವನ್ನು ಉದಾಹರಿಸುತ್ತಾರೆ.

13106005a ಅತೀತ್ಯ ಸುರಲೋಕಂ ಚ ಗವಾಂ ಲೋಕಂ ಚ ಭಾರತ|

13106005c ಋಷಿಲೋಕಂ ಚ ಸೋಽಗಚ್ಚದ್ಭಗೀರಥ ಇತಿ ಶ್ರುತಿಃ||

ಭಾರತ! ಭಗೀರಥನು ಸುರಲೋಕ, ಗೋಲೋಕ ಮತ್ತು ಋಷಿಲೋಕಗಳನ್ನೂ ದಾಟಿ ಹೋದನೆಂದು ಕೇಳಿದ್ದೇವೆ.

13106006a ತಂ ದೃಷ್ಟ್ವಾ ಸ ವಚಃ ಪ್ರಾಹ ಬ್ರಹ್ಮಾ ರಾಜನ್ಭಗೀರಥಮ್|

13106006c ಕಥಂ ಭಗೀರಥಾಗಾಸ್ತ್ವಮಿಮಂ ದೇಶಂ ದುರಾಸದಮ್||

ರಾಜನ್! ಭಗೀರಥನನ್ನು ನೋಡಿ ಬ್ರಹ್ಮನು ಈ ಮಾತನ್ನಾಡಿದನು: “ಭಗೀರಥ! ದುರಾಸದವಾದ ಈ ಪ್ರದೇಶಕ್ಕೆ ನೀನು ಹೇಗೆ ಆಗಮಿಸಿದೆ?

13106007a ನ ಹಿ ದೇವಾ ನ ಗಂಧರ್ವಾ ನ ಮನುಷ್ಯಾ ಭಗೀರಥ|

13106007c ಆಯಾಂತ್ಯತಪ್ತತಪಸಃ ಕಥಂ ವೈ ತ್ವಮಿಹಾಗತಃ||

ಭಗೀರಥ! ದೇವತೆಗಳಾಗಲೀ, ಗಂಧರ್ವರಾಗಲೀ ಮತ್ತು ಮನುಷ್ಯರಾಗಲೀ ತಪಸ್ಸನ್ನಾಚರಿಸದೇ ಇಲ್ಲಿಗೆ ಬರಲಾರರು. ಹಾಗಿರುವಾಗ ನೀನು ಹೇಗೆ ಇಲ್ಲಿಗೆ ಆಗಮಿಸಿದೆ?”

13106008 ಭಗೀರಥ ಉವಾಚ|

13106008a ನಿಃಶಂಕಮನ್ನಮದದಂ[1] ಬ್ರಾಹ್ಮಣೇಭ್ಯಃ

ಶತಂ ಸಹಸ್ರಾಣಿ ಸದೈವ ದಾನಮ್|

13106008c ಬ್ರಾಹ್ಮಂ ವ್ರತಂ ನಿತ್ಯಮಾಸ್ಥಾಯ ವಿದ್ಧಿ

ನ ತ್ವೇವಾಹಂ ತಸ್ಯ ಫಲಾದಿಹಾಗಾಮ್||

ಭಗೀರಥನು ಹೇಳಿದನು: “ನಾನು ಬ್ರಹ್ಮಚರ್ಯವ್ರತವನ್ನು ಆಶ್ರಯಿಸಿ ನಿತ್ಯವೂ ನೂರು ಸಾವಿರ ಬ್ರಾಹ್ಮಣರಿಗೆ ಸದೈವ ಅನ್ನದಾನವನ್ನು ನಿಃಶಂಕೆಯಿಂದ ಮಾಡುತ್ತಿದ್ದೆ. ಆದರೆ ನಾನು ಆ ದಾನದ ಫಲದಿಂದ ಇಲ್ಲಿಗೆ ಬಂದಿಲ್ಲ.

13106009a ದಶೈಕರಾತ್ರಾನ್ದಶ ಪಂಚರಾತ್ರಾನ್

ಏಕಾದಶೈಕಾದಶಕಾನ್ ಕ್ರತೂಂಶ್ಚ|

13106009c ಜ್ಯೋತಿಷ್ಟೋಮಾನಾಂ ಚ ಶತಂ ಯದಿಷ್ಟಂ

ಫಲೇನ ತೇನಾಪಿ ಚ ನಾಗತೋಽಹಮ್||

ನಾನು ಒಂದು ರಾತ್ರಿಯಲ್ಲಿ ಪೂರ್ಣವಾಗುವ ಹತ್ತು ಯಜ್ಞಗಳನ್ನು, ಐದು ರಾತ್ರಿಗಳಲ್ಲಿ ಪೂರ್ಣವಾಗುವ ಹತ್ತು ಯಜ್ಞಗಳನ್ನು, ಹನ್ನೊಂದು ರಾತ್ರಿಗಳಲ್ಲಿ ಸಮಾಪ್ತಗೊಳ್ಳುವ ಹನ್ನೆರಡು ಯಜ್ಞಗಳನ್ನು ಮತ್ತು ನೂರು ಜ್ಯೋತಿಷ್ಟೋಮ ಯಜ್ಞಗಳನ್ನು ಪೂರೈಸಿದ್ದೇನೆ. ಆದರೆ ಅವುಗಳ ಫಲದಿಂದಲೂ ನಾನು ಇಲ್ಲಿಗೆ ಬಂದಿಲ್ಲ.

13106010a ಯಚ್ಚಾವಸಂ ಜಾಹ್ನವೀತೀರನಿತ್ಯಃ

ಶತಂ ಸಮಾಸ್ತಪ್ಯಮಾನಸ್ತಪೋಽಹಮ್|

13106010c ಅದಾಂ ಚ ತತ್ರಾಶ್ವತರೀಸಹಸ್ರಂ

ನಾರೀಪುರಂ ನ ಚ ತೇನಾಹಮಾಗಾಮ್||

ನೂರು ವರ್ಷಗಳ ಪರ್ಯಂತ ನಾನು ಜಾಹ್ನವೀತೀರದಲ್ಲಿ ವಾಸಿಸುತ್ತಾ ತಪಸ್ಸನ್ನು ತಪಿಸುತ್ತಿರುವಾಗ ನಿತ್ಯವೂ ಸಹಸ್ರಾರು ಅಶ್ವತರಿಗಳನ್ನು ಮತ್ತು ನಾರೀಗಣಗಳನ್ನು ದಾನಮಾಡಿದುದರ ಫಲವಾಗಿಯೂ ನಾನು ಇಲ್ಲಿಗೆ ಆಗಮಿಸಿಲ್ಲ.

13106011a ದಶಾಯುತಾನಿ ಚಾಶ್ವಾನಾಮಯುತಾನಿ ಚ ವಿಂಶತಿಮ್|

13106011c ಪುಷ್ಕರೇಷು ದ್ವಿಜಾತಿಭ್ಯಃ ಪ್ರಾದಾಂ ಗಾಶ್ಚ ಸಹಸ್ರಶಃ||

13106012a ಸುವರ್ಣಚಂದ್ರೋಡುಪಧಾರಿಣೀನಾಂ

ಕನ್ಯೋತ್ತಮಾನಾಮದದಂ ಸ್ರಗ್ವಿಣೀನಾಮ್|

13106012c ಷಷ್ಟಿಂ ಸಹಸ್ರಾಣಿ ವಿಭೂಷಿತಾನಾಂ

ಜಾಂಬೂನದೈರಾಭರಣೈರ್ನ ತೇನ||

ಪುಷ್ಕರತೀರ್ಥದಲ್ಲಿ ಸಹಸ್ರಾರು ಬಾರಿ ನಾನು ಬ್ರಾಹ್ಮಣರಿಗೆ ಒಂದು ಲಕ್ಷ ಕುದುರೆಗಳನ್ನು ಮತ್ತು ಎರಡು ಲಕ್ಷ ಗೋವುಗಳನ್ನು ದಾನಮಾಡಿದುದರ ಮತ್ತು ಚಿನ್ನದ ಉತ್ತಮ ಚಂದ್ರಹಾರಗಳನ್ನು ಧರಿಸಿದ ಚಿನ್ನದ ಆಭೂಷಣಗಳಿಂದ ವಿಭೂಷಿತರಾದ ಅರವತ್ತು ಸಾವಿರ ಕನ್ಯೆಯರನ್ನು ಸಾವಿರಾರು ಬಾರಿ ದಾನಮಾಡಿದುದರ ಪುಣ್ಯದಿಂದಲೂ ನಾನು ಇಲ್ಲಿಗೆ ಆಗಮಿಸಿಲ್ಲ.

13106013a ದಶಾರ್ಬುದಾನ್ಯದದಂ ಗೋಸವೇಜ್ಯಾಸ್ವ್

ಏಕೈಕಶೋ ದಶ ಗಾ ಲೋಕನಾಥ|

13106013c ಸಮಾನವತ್ಸಾಃ ಪಯಸಾ ಸಮನ್ವಿತಾಃ

ಸುವರ್ಣಕಾಂಸ್ಯೋಪದುಹಾ ನ ತೇನ||

ಲೋಕನಾಥ! ಗೋಸವ ಯಜ್ಞದಲ್ಲಿ ನಾನು ಹಾಲನ್ನೀಯುವ ನೂರು ಕೋಟಿ ಗೋವುಗಳನ್ನು ದಾನಮಾಡಿದ್ದೆ. ಆಗ ಒಬ್ಬೊಬ್ಬ ಬ್ರಾಹ್ಮಣನಿಗೂ ಹತ್ತು-ಹತ್ತು ಗೋವುಗಳನ್ನು ಕೊಟ್ಟಿದ್ದೆ. ಪ್ರತಿ ಗೋವಿನೊಂದಿಗೆ ಅದರ ಬಣ್ಣದ್ದೇ ಆಗಿದ್ದ ಕರು ಮತ್ತು ಸುವರ್ಣಮಯ ಹಾಲಿನ ಪಾತ್ರೆಯನ್ನೂ ಕೊಟ್ಟಿದ್ದೆ. ಆದರೆ ಆ ಯಜ್ಞದ ಪುಣ್ಯದಿಂದಲೂ ನಾನು ಇಲ್ಲಿಗೆ ತಲುಪಿಲ್ಲ.

13106014a ಅಪ್ತೋರ್ಯಾಮೇಷು ನಿಯತಮೇಕೈಕಸ್ಮಿನ್ದಶಾದದಮ್|

13106014c ಗೃಷ್ಟೀನಾಂ ಕ್ಷೀರದಾತ್ರೀಣಾಂ ರೋಹಿಣೀನಾಂ ನ ತೇನ[2]||

ಅನೇಕ ಬಾರಿ ನಾನು ಸೋಮಯಾಗದ ದೀಕ್ಷೆಯನ್ನು ಕೈಗೊಂಡು ಪ್ರತಿ ಬ್ರಾಹ್ಮಣನಿಗೂ ಚೊಚ್ಚಲು ಕರುವಾದ ಹಾಲು ನೀಡುವ ಹತ್ತು-ಹತ್ತು ರೋಹಿಣೀ ಜಾತಿಯ ಗೋವುಗಳನ್ನು ನೀಡಿದ್ದೆ.

13106015a ದೋಗ್ಧ್ರೀಣಾಂ ವೈ ಗವಾಂ ಚೈವ ಪ್ರಯುತಾನಿ ದಶೈವ ಹ|

13106015c ಪ್ರಾದಾಂ ದಶಗುಣಂ ಬ್ರಹ್ಮನ್ನ ಚ ತೇನಾಹಮಾಗತಃ||

ಬ್ರಹ್ಮನ್! ಅದೂ ಅಲ್ಲದೇ ನಾನು ಹತ್ತು ಬಾರಿ ಹತ್ತು-ಹತ್ತು ಲಕ್ಷ ಹಾಲನ್ನೀಯುವ ಗೋವುಗಳನ್ನು ದಾನಮಾಡಿದ್ದೆ. ಆದರೆ ಆ ಪುಣ್ಯದಿಂದಲೂ ನಾನು ಇಲ್ಲಿಗೆ ಆಗಮಿಸಿಲ್ಲ.

13106016a ವಾಜಿನಾಂ ಬಾಹ್ಲಿಜಾತಾನಾಮಯುತಾನ್ಯದದಂ ದಶ|

13106016c ಕರ್ಕಾಣಾಂ ಹೇಮಮಾಲಾನಾಂ ನ ಚ ತೇನಾಹಮಾಗತಃ||

ಬಾಹ್ಲೀಕ ದೇಶದಲ್ಲಿ ಹುಟ್ಟಿದ್ದ ಶ್ವೇತವರ್ಣದ ಒಂದು ಲಕ್ಷ ಕುದುರೆಗಳನ್ನು ಸುವರ್ಣಮಾಲೆಗಳಿಂದ ಅಲಂಕರಿಸಿ ಬ್ರಾಹ್ಮಣರಿಗೆ ದಾನಮಾಡಿದ್ದೆ. ಆದರೆ ಆ ಪುಣ್ಯದಿಂದಲೂ ನಾನು ಇಲ್ಲಿಗೆ ಆಗಮಿಸಿಲ್ಲ.

13106017a ಕೋಟೀಶ್ಚ ಕಾಂಚನಸ್ಯಾಷ್ಟೌ ಪ್ರಾದಾಂ ಬ್ರಹ್ಮನ್ದಶ ತ್ವಹಮ್|

13106017c ಏಕೈಕಸ್ಮಿನ್ ಕ್ರತೌ ತೇನ ಫಲೇನಾಹಂ ನ ಚಾಗತಃ||

ಬ್ರಹ್ಮನ್! ನಾನು ಒಂದೊಂದು ಯಜ್ಞದಲ್ಲಿಯೂ ಪ್ರತಿದಿನ ಹದಿನೆಂಟು-ಹದಿನೆಂಟು ಕೋಟಿ ಸುವರ್ಣಮುದ್ರೆಗಳನ್ನು ನೀಡಿದ್ದೆ. ಆದರೆ ಅದರ ಪುಣ್ಯದಿಂದಲೂ ನಾನು ಇಲ್ಲಿಗೆ ಆಗಮಿಸಿಲ್ಲ.

13106018a ವಾಜಿನಾಂ ಶ್ಯಾಮಕರ್ಣಾನಾಂ ಹರಿತಾನಾಂ ಪಿತಾಮಹ|

13106018c ಪ್ರಾದಾಂ ಹೇಮಸ್ರಜಾಂ ಬ್ರಹ್ಮನ್ಕೋಟೀರ್ದಶ ಚ ಸಪ್ತ ಚ||

13106019a ಈಷಾದಂತಾನ್ಮಹಾಕಾಯಾನ್ಕಾಂಚನಸ್ರಗ್ವಿಭೂಷಿತಾನ್|

13106019c ಪತ್ನೀಮತಃ ಸಹಸ್ರಾಣಿ ಪ್ರಾಯಚ್ಚಂ ದಶ ಸಪ್ತ ಚ||

13106020a ಅಲಂಕೃತಾನಾಂ ದೇವೇಶ ದಿವ್ಯೈಃ ಕನಕಭೂಷಣೈಃ|

13106020c ರಥಾನಾಂ ಕಾಂಚನಾಂಗಾನಾಂ ಸಹಸ್ರಾಣ್ಯದದಂ ದಶ|

13106020e ಸಪ್ತ ಚಾನ್ಯಾನಿ ಯುಕ್ತಾನಿ ವಾಜಿಭಿಃ ಸಮಲಂಕೃತೈಃ||

ಪಿತಾಮಹ! ಬ್ರಹ್ಮನ್! ಸುವರ್ಣಮಾಲೆಗಳಿಂದ ವಿಭೂಷಿತ ಕಪ್ಪುಕಿವಿಗಳಿದ್ದ ಎಪ್ಪತ್ತು ಕೋಟಿ ಹಸಿರು ಬಣ್ಣದ ಕುದುರೆಗಳನ್ನು, ಈಷಾದಂಡದಂಥಹ ಕೋರೆದಾಡೆಗಳಿದ್ದ, ಸ್ವರ್ಣಮಾಲಾಮಂಡಿತ ವಿಶಾಲ ಶರೀರದ, ಸಾವಿರ ಕಮಲಚಿಹ್ನಯುಕ್ತ ಆನೆಗಳನ್ನು ಹಾಗೂ ಸುವರ್ಣಚರ್ಚಿತ ದಿವ್ಯ ಆಭೂಷಣಗಳಿಂದ ವಿಭೂಷಿತ ಸ್ವರ್ಣಮಯ ಉಪಕರಣಗಳಿಂದ ಕೂಡಿದ ಮತ್ತು ಕುದುರೆಗಳನ್ನು ಕಟ್ಟಿ ಸಜ್ಜಾಗಿದ್ದ ಎಪ್ಪತ್ತು ಸಾವಿರ ರಥಗಳನ್ನು ದಾನಮಾಡಿದ್ದೆ.

13106021a ದಕ್ಷಿಣಾವಯವಾಃ ಕೇ ಚಿದ್ವೇದೈರ್ಯೇ ಸಂಪ್ರಕೀರ್ತಿತಾಃ|

13106021c ವಾಜಪೇಯೇಷು ದಶಸು ಪ್ರಾದಾಂ ತೇನಾಪಿ ನಾಪ್ಯಹಮ್||

ಇದೂ ಅಲ್ಲದೇ ದಕ್ಷಿಣೆಯ ಅವಯವಗಳೆಂದು ಯಾವ ವಸ್ತುಗಳನ್ನು ಹೇಳಿದ್ದಾರೋ ಅವುಗಳೆಲ್ಲವನ್ನೂ ಹತ್ತು ವಾಜಪೇಯ ಯಜ್ಞಗಳಲ್ಲಿ ನೀಡಿದ್ದೇನೆ.

13106022a ಶಕ್ರತುಲ್ಯಪ್ರಭಾವಾನಾಮಿಜ್ಯಯಾ ವಿಕ್ರಮೇಣ ಚ|

13106022c ಸಹಸ್ರಂ ನಿಷ್ಕಕಣ್ಠಾನಾಮದದಂ ದಕ್ಷಿಣಾಮಹಮ್||

13106023a ವಿಜಿತ್ಯ ನೃಪತೀನ್ಸರ್ವಾನ್ಮಖೈರಿಷ್ಟ್ವಾ ಪಿತಾಮಹ|

13106023c ಅಷ್ಟಭ್ಯೋ ರಾಜಸೂಯೇಭ್ಯೋ ನ ಚ ತೇನಾಹಮಾಗತಃ||

ಪಿತಾಮಹ! ಯಜ್ಞ ಮತ್ತು ವಿಕ್ರಮಗಳಲ್ಲಿ ಇಂದ್ರನ ಸಮಾನ ಪ್ರಭಾವಶಾಲಿಗಳಾಗಿದ್ದ, ಸುವರ್ಣಮಾಲೆಗಳು ಕಂಠಗಳಲ್ಲಿ ಶೋಭಿಸುತ್ತಿದ್ದ ಸಾವಿರಾರು ರಾಜರನ್ನು ಯುದ್ಧದಲ್ಲಿ ಗೆದ್ದು ವಿಪುಲ ಧನದಿಂದ ಎಂಟು ರಾಜಸೂಯಯಜ್ಞಗಳನ್ನು ಮಾಡಿ ಅವುಗಳನ್ನು ಬ್ರಾಹ್ಮಣರಿಗೆ ದಕ್ಷಿಣಾರೂಪದಲ್ಲಿ ಕೊಟ್ಟಿದ್ದೆ. ಆದರೆ ಆ ಪುಣ್ಯದಿಂದಲೂ ನಾನು ಇಲ್ಲಿಗೆ ಆಗಮಿಸಿಲ್ಲ.

13106024a ಸ್ರೋತಶ್ಚ ಯಾವದ್ಗಂಗಾಯಾಶ್ಚನ್ನಮಾಸೀಜ್ಜಗತ್ಪತೇ|

13106024c ದಕ್ಷಿಣಾಭಿಃ ಪ್ರವೃತ್ತಾಭಿರ್ಮಮ ನಾಗಾಂ ಚ ತತ್ಕೃತೇ||

ಜಗತ್ಪತೇ! ನಾನು ಕೊಟ್ಟ ದಕ್ಷಿಣೆಗಳಿಂದ ಗಂಗಾನದಿಯು ಮುಚ್ಚಿಹೋಗಿತ್ತು. ಆದರೆ ನಾನು ಆ ಕಾರಣದಿಂದಲೂ ಇಲ್ಲಿಗೆ ಬಂದಿಲ್ಲ.

13106025a ವಾಜಿನಾಂ ಚ ಸಹಸ್ರೇ ದ್ವೇ ಸುವರ್ಣಶತಭೂಷಿತೇ|

13106025c ವರಂ ಗ್ರಾಮಶತಂ ಚಾಹಮೇಕೈಕಸ್ಯ ತ್ರಿಧಾದದಮ್|

ಆ ಯಜ್ಞದಲ್ಲಿ ನಾನು ಪ್ರತ್ಯೇಕ ಬ್ರಾಹ್ಮಣನಿಗೂ ಮೂರು-ಮೂರು ಬಾರಿ ನೂರಾರು ಸುವರ್ಣಾಭರಣಗಳಿಂದ ವಿಭೂಷಿತ ಸಾವಿರ ಕುದುರೆಗಳನ್ನು ಮತ್ತು ನೂರು-ನೂರು ಶ್ರೇಷ್ಠ ಗೋವುಗಳನ್ನು ನೀಡಿದ್ದೆ.

13106025e ತಪಸ್ವೀ ನಿಯತಾಹಾರಃ ಶಮಮಾಸ್ಥಾಯ ವಾಗ್ಯತಃ||

13106026a ದೀರ್ಘಕಾಲಂ ಹಿಮವತಿ ಗಂಗಾಯಾಶ್ಚ ದುರುತ್ಸಹಾಮ್|

13106026c ಮೂರ್ಧ್ನಾ ಧಾರಾಂ ಮಹಾದೇವಃ ಶಿರಸಾ ಯಾಮಧಾರಯತ್|

13106026e ನ ತೇನಾಪ್ಯಹಮಾಗಚ್ಚಂ ಫಲೇನೇಹ ಪಿತಾಮಹ||

ಪಿತಾಮಹ! ಮಿತಾಹಾರಿಯಾಗಿ ಮೌನ ಮತ್ತು ಶಾಂತಭಾವದಿಂದ ನಾನು ಹಿಮಾಲಯ ಪರ್ವತದ ಮೇಲೆ ಸುದೀರ್ಘ ಸಮಯದವರೆಗೆ ತಪಸ್ಸನ್ನಾಚರಿಸಿದೆ. ಅದರಿಂದ ಪ್ರಸನ್ನನಾದ ಮಹಾದೇವನು ಗಂಗೆಯ ದುಃಸಹ ಧಾರೆಗಳನ್ನು ತನ್ನ ಮಸ್ತಕದಲ್ಲಿ ಧರಿಸಿದ್ದನು. ಆದರೆ ಆ ತಪಸ್ಸಿನ ಫಲದಿಂದಲೂ ನಾನು ಇಲ್ಲಿಗೆ ಆಗಮಿಸಿಲ್ಲ.

13106027a ಶಮ್ಯಾಕ್ಷೇಪೈರಯಜಂ ಯಚ್ಚ ದೇವಾನ್

ಸದ್ಯಸ್ಕಾನಾಮಯುತೈಶ್ಚಾಪಿ ಯತ್ತತ್|

13106027c ತ್ರಯೋದಶದ್ವಾದಶಾಹಾಂಶ್ಚ ದೇವ

ಸಪೌಂಡರೀಕಾನ್ನ ಚ ತೇಷಾಂ ಫಲೇನ||

ದೇವ! ನಾನು ಅನೇಕ ಬಾರಿ ಶಮ್ಯಾಕ್ಷೇಪ[3] ಯಾಗವನ್ನು ಮಾಡಿದೆ. ಹತ್ತು ಸಾವಿರ ಸಾದ್ಯಸ್ಕ ಯಾಗಗಳನ್ನೂ ಪೂರೈಸಿದ್ದೇನೆ. ಎಷ್ಟೋ ಬಾರಿ ಹದಿಮೂರು ಮತ್ತು ಹನ್ನೆರಡು ದಿನಗಳಲ್ಲಿ ಪೂರ್ಣಗೊಳ್ಳುವ ಯಾಗ ಮತ್ತು ಪುಂಡರೀಕ ಯಜ್ಞವನ್ನು ಪೂರೈಸಿದ್ದೇನೆ. ಅದರೆ ಅವುಗಳ ಫಲದಿಂದಲೂ ನಾನು ಇಲ್ಲಿಗೆ ಆಗಮಿಸಿಲ್ಲ.

13106028a ಅಷ್ಟೌ ಸಹಸ್ರಾಣಿ ಕಕುದ್ಮಿನಾಮಹಂ

ಶುಕ್ಲರ್ಷಭಾಣಾಮದದಂ ಬ್ರಾಹ್ಮಣೇಭ್ಯಃ|

13106028c ಏಕೈಕಂ ವೈ ಕಾಂಚನಂ ಶೃಂಗಮೇಭ್ಯಃ

ಪತ್ನೀಶ್ಚೈಷಾಮದದಂ ನಿಷ್ಕಕಂಠೀಃ||

ಇಷ್ಟೇ ಅಲ್ಲದೇ ನಾನು ಎತ್ತರ ಹೀಳಿರುವ ಬಿಳೀವರ್ಣದ ಎಂಟುಸಾವಿರ ಎತ್ತುಗಳನ್ನೂ ಬ್ರಾಹ್ಮಣರಿಗೆ ದಾನಮಾಡಿದ್ದೆನು. ಅವುಗಳಲ್ಲಿ ಪ್ರತಿಯೊಂದಕ್ಕೂ ಸುವರ್ಣಯುಕ್ತ ಕೋಡುಗಳಿದ್ದವು ಮತ್ತು ಅವುಗಳ ಪತ್ನಿರೂಪದಲ್ಲಿ ಸುವರ್ಣಹಾರವಿಭೂಷಿತ ಗೋವುಗಳನ್ನೂ ನೀಡಿದ್ದೆನು.

13106029a ಹಿರಣ್ಯರತ್ನನಿಚಿತಾನದದಂ ರತ್ನಪರ್ವತಾನ್|

13106029c ಧನಧಾನ್ಯಸಮೃದ್ಧಾಂಶ್ಚ ಗ್ರಾಮಾನ್ ಶತಸಹಸ್ರಶಃ||

13106030a ಶತಂ ಶತಾನಾಂ ಗೃಷ್ಟೀನಾಮದದಂ ಚಾಪ್ಯತಂದ್ರಿತಃ|

13106030c ಇಷ್ಟ್ವಾನೇಕೈರ್ಮಹಾಯಜ್ಞೈರ್ಬ್ರಾಹ್ಮಣೇಭ್ಯೋ ನ ತೇನ ಚ||

ಆಲಸ್ಯರಹಿತನಾಗಿ ನಾನು ಅನೇಕ ದೊಡ್ಡ ದೊಡ್ಡ ಯಜ್ಞಗಳನ್ನು ಮಾಡಿ ಅವುಗಳಲ್ಲಿ ಚಿನ್ನ ಮತ್ತು ರತ್ನಗಳ ರಾಶಿಗಳನ್ನು, ರತ್ನಮಯ ಪರ್ವತಗಳನ್ನು, ಧನಧಾನ್ಯಸಮೃದ್ಧ ಸಾವಿರಾರು ಗ್ರಾಮಗಳನ್ನು ಮತ್ತು ಸಾವಿರಾರು ಚೊಚ್ಚಲ ಹಸುಗಳನ್ನೂ ಬ್ರಾಹ್ಮಣರಿಗೆ ದಾನಮಾಡಿದ್ದೆ. ಆದರೆ ಅವುಗಳ ಪುಣ್ಯದಿಂದಲೂ ನಾನು ಇಲ್ಲಿಯವರೆಗೆ ಬಂದಿಲ್ಲ.

13106031a ಏಕಾದಶಾಹೈರಯಜಂ ಸದಕ್ಷಿಣೈರ್

ದ್ವಿರ್ದ್ವಾದಶಾಹೈರಶ್ವಮೇಧೈಶ್ಚ ದೇವ|

13106031c ಆರ್ಕಾಯಣೈಃ ಷೋಡಶಭಿಶ್ಚ ಬ್ರಹ್ಮಂಸ್

ತೇಷಾಂ ಫಲೇನೇಹ ನ ಚಾಗತೋಽಸ್ಮಿ||

ದೇವ! ಬ್ರಹ್ಮನ್! ನಾನು ಹನ್ನೊಂದು ದಿನಗಳ ಮತ್ತು ಇಪ್ಪತ್ನಾಲ್ಕು ದಿನಗಳ ಯಜ್ಞಗಳನ್ನು ದಕ್ಷಿಣೆಗಳ ಸಹಿತ ಪೂರೈಸಿದ್ದೇನೆ. ಅನೇಕ ಅಶ್ವಮೇಧ ಯಜ್ಞಗಳನ್ನೂ ಮಾಡಿದ್ದೇನೆ ಮತ್ತು ಹದಿನಾರು ಬಾರಿ ಆರ್ಕಾಯಣ ಯಜ್ಞಗಳನ್ನು ಮಾಡಿದ್ದೇನೆ. ಆದರೆ ಆ ಯಜ್ಞಗಳ ಫಲದಿಂದ ನಾನು ಇಲ್ಲಿಗೆ ಬಂದಿಲ್ಲ.

13106032a ನಿಷ್ಕೈಕಕಂಠಮದದಂ ಯೋಜನಾಯತಂ

ತದ್ವಿಸ್ತೀರ್ಣಂ ಕಾಂಚನಪಾದಪಾನಾಮ್|

13106032c ವನಂ ಚೂತಾನಾಂ ರತ್ನವಿಭೂಷಿತಾನಾಂ

ನ ಚೈವ ತೇಷಾಮಾಗತೋಽಹಂ ಫಲೇನ||

ಪ್ರತಿಯೊಂದು ಮರದಲ್ಲಿಯೂ ರತ್ನಗಳನ್ನು ಜೋಡಿಸಲಾಗಿದ್ದ, ವಸ್ತ್ರಗಳಿಂದ ಮುಚ್ಚಿದ್ದ ಮತ್ತು ಕಂಠದಲ್ಲಿ ಸ್ವರ್ಣಮಾಲೆಗಳನ್ನು ಹಾಕಿದ್ದ ನಾಲ್ಕು ಕೋಶ ಚೌಕದ ಒಂದು ಚಂಪಾವೃಕ್ಷಗಳ ವನವನ್ನೇ ನಾನು ದಾನಮಾಡಿದ್ದೆ. ಆದರೆ ಅದರ ಫಲದಿಂದಲೂ ನಾನು ಇಲ್ಲಿಗೆ ಬಂದಿಲ್ಲ.

13106033a ತುರಾಯಣಂ ಹಿ ವ್ರತಮಪ್ರಧೃಷ್ಯಮ್

ಅಕ್ರೋಧನೋಽಕರವಂ ತ್ರಿಂಶತೋಽಬ್ದಾನ್|

13106033c ಶತಂ ಗವಾಮಷ್ಟ ಶತಾನಿ ಚೈವ

ದಿನೇ ದಿನೇ ಹ್ಯದದಂ ಬ್ರಾಹ್ಮಣೇಭ್ಯಃ||

ನಾನು ಮೂವತ್ತು ವರ್ಷಗಳು ಕ್ರೋಧರಹಿತನಾಗಿ ತುರಾಯಣ ಎಂಬ ದುಷ್ಕರ ವ್ರತವನ್ನು ಪಾಲಿಸುತ್ತಿದ್ದೆ. ಆಗ ಪ್ರತಿದಿನ ಒಂಬೈನೂರು ಗೋವುಗಳನ್ನು ಬ್ರಾಹ್ಮಣರಿಗೆ ದಾನಮಾಡುತ್ತಿದ್ದೆ.

13106034a ಪಯಸ್ವಿನೀನಾಮಥ ರೋಹಿಣೀನಾಂ

ತಥೈವ ಚಾಪ್ಯನಡುಹಾಂ ಲೋಕನಾಥ|

13106034c ಪ್ರಾದಾಂ ನಿತ್ಯಂ ಬ್ರಾಹ್ಮಣೇಭ್ಯಃ ಸುರೇಶ

ನೇಹಾಗತಸ್ತೇನ ಫಲೇನ ಚಾಹಮ್||

ಲೋಕನಾಥ! ಸುರೇಶ! ಇದೂ ಅಲ್ಲದೇ ರೋಹಿಣೀ ಜಾತಿಯ ಅನೇಕ ಹಾಲನ್ನೀಯುವ ಗೋವುಗಳನ್ನೂ, ಬಹುಸಂಖ್ಯೆಗಳಲ್ಲಿ ಎತ್ತುಗಳನ್ನೂ ನಾನು ಪ್ರತಿದಿನ ಬ್ರಾಹ್ಮಣರಿಗೆ ದಾನಮಾಡುತ್ತಿದ್ದೆ. ಆದರೆ ಅವುಗಳ ಫಲದಿಂದಲೂ ನಾನು ಇಲ್ಲಿಗೆ ಬಂದಿಲ್ಲ.

13106035a ತ್ರಿಂಶದಗ್ನಿಮಹಂ ಬ್ರಹ್ಮನ್ನಯಜಂ ಯಚ್ಚ ನಿತ್ಯದಾ|

13106035c ಅಷ್ಟಾಭಿಃ ಸರ್ವಮೇಧೈಶ್ಚ ನರಮೇಧೈಶ್ಚ ಸಪ್ತಭಿಃ||

13106036a ದಶಭಿರ್ವಿಶ್ವಜಿದ್ಭಿಶ್ಚ ಶತೈರಷ್ಟಾದಶೋತ್ತರೈಃ|

13106036c ನ ಚೈವ ತೇಷಾಂ ದೇವೇಶ ಫಲೇನಾಹಮಿಹಾಗತಃ||

ಬ್ರಹ್ಮನ್! ನಾನು ಪ್ರತಿದಿನ ಒಂದೊಂದರಂತೆ ಮೂವತ್ತು ಬಾರಿ ಅಗ್ನಿಚಯನ ಮತ್ತು ಯಜನಗಳನ್ನು ಮಾಡಿದ್ದೇನೆ. ಎಂಟು ಬಾರಿ ಸರ್ವಮೇಧ, ಏಳು ಬಾರಿ ನರಮೇಧ, ಮತ್ತು ನೂರಾಇಪ್ಪತ್ತೆಂಟು ಬಾರಿ ವಿಶ್ವಜಿತ್ ಯಜ್ಞಗಳನ್ನು ಮಾಡಿದ್ದೇನೆ. ಆದರೆ ದೇವೇಶ! ಆ ಯಜ್ಞಗಳ ಫಲದಿಂದಲೂ ನಾನು ಇಲ್ಲಿಗೆ ಬಂದಿಲ್ಲ.

13106037a ಸರಯ್ವಾಂ ಬಾಹುದಾಯಾಂ ಚ ಗಂಗಾಯಾಮಥ ನೈಮಿಷೇ|

13106037c ಗವಾಂ ಶತಾನಾಮಯುತಮದದಂ ನ ಚ ತೇನ ವೈ||

ಸರಯೂ, ಬಹುದಾ, ಗಂಗಾ ಮತ್ತು ನೈಮಿಷಾರಣ್ಯ ತೀರ್ಥಗಳಿಗೆ ಹೋಗಿ ನಾನು ಹತ್ತು ಲಕ್ಷ ಗೋದಾನಗಳನ್ನು ಮಾಡಿದ್ದೇನೆ. ಆದರೆ ಅವುಗಳ ಫಲದಿಂದಲೂ ನಾನು ಇಲ್ಲಿಗೆ ಬಂದಿಲ್ಲ. (ಕೇವಲ ಅನಶನವ್ರತದ ಪ್ರಭಾವದಿಂದ ನನಗೆ ಈ ದುರ್ಲಭ ಲೋಕವು ಪ್ರಾಪ್ತವಾಗಿದೆ.)

13106038a ಇಂದ್ರೇಣ ಗುಹ್ಯಂ ನಿಹಿತಂ ವೈ ಗುಹಾಯಾಂ

ಯದ್ಭಾರ್ಗವಸ್ತಪಸೇಹಾಭ್ಯವಿಂದತ್|

13106038c ಜಾಜ್ವಲ್ಯಮಾನಮುಶನಸ್ತೇಜಸೇಹ

ತತ್ಸಾಧಯಾಮಾಸ ಮಹಂ ವರೇಣ್ಯಮ್||

ಮೊದಲು ಇಂದ್ರನು ಅನಶನವ್ರತವನ್ನು ನಡೆಸಿ ಅದನ್ನು ಗುಪ್ತವಾಗಿರಿಸಿದ್ದನು. ನಂತರ ಭಾರ್ಗವ ಶುಕ್ರಾಚಾರ್ಯನು ತಪಸ್ಸಿನ ಮೂಲಕ ಅದರ ಜ್ಞಾನವನ್ನು ಪಡೆದುಕೊಂಡನು. ನಂತರ ಅವನ ತೇಜಸ್ಸಿನಿಂದಲೇ ಇದರ ಮಾಹಾತ್ಮ್ಯವು ಸರ್ವತ್ರ ಪ್ರಕಾಶಿತಗೊಂಡಿತು. ನಾನೂ ಕೂಡ ಅಂತ್ಯದಲ್ಲಿ ಅದೇ ಶ್ರೇಷ್ಠ ಅನಶನವ್ರತವನ್ನು ಪ್ರಾರಂಭಿಸಿದೆನು.

13106039a ತತೋ ಮೇ ಬ್ರಾಹ್ಮಣಾಸ್ತುಷ್ಟಾಸ್ತಸ್ಮಿನ್ಕರ್ಮಣಿ ಸಾಧಿತೇ|

13106039c ಸಹಸ್ರಮೃಷಯಶ್ಚಾಸನ್ಯೇ ವೈ ತತ್ರ ಸಮಾಗತಾಃ|

13106039e ಉಕ್ತಸ್ತೈರಸ್ಮಿ ಗಚ್ಚ ತ್ವಂ ಬ್ರಹ್ಮಲೋಕಮಿತಿ ಪ್ರಭೋ||

13106040a ಪ್ರೀತೇನೋಕ್ತಃ ಸಹಸ್ರೇಣ ಬ್ರಾಹ್ಮಣಾನಾಮಹಂ ಪ್ರಭೋ|

13106040c ಇಮಂ ಲೋಕಮನುಪ್ರಾಪ್ತೋ ಮಾ ಭೂತ್ತೇಽತ್ರ ವಿಚಾರಣಾ||

ಆ ವ್ರತವು ಪೂರ್ಣಗೊಂಡಾಗ ಸಾವಿರಾರು ಬ್ರಾಹ್ಮಣ-ಋಷಿಗಳು ನನ್ನ ಬಳಿ ಬಂದರು. ಅವರೆಲ್ಲರೂ ನನ್ನ ಮೇಲೆ ಸಂತುಷ್ಟರಾಗಿದ್ದರು. ಪ್ರಭೋ! ಅವರು ಪ್ರಸನ್ನರಾಗಿ ನನಗೆ “ಬ್ರಹ್ಮಲೋಕಕ್ಕೆ ಹೋಗು!” ಎಂದು ಆಜ್ಞೆಯನ್ನಿತ್ತರು. ಪ್ರೀತರಾದ ಆ ಬ್ರಾಹ್ಮಣರ ಆಶೀರ್ವಾದದಿಂದ ನಾನು ಇಲ್ಲಿಗೆ ಬಂದಿದ್ದೇನೆ. ಇದರ ಕುರಿತು ನೀನು ಬೇರೆ ಏನು ವಿಚಾರವನ್ನೂ ಮಾಡಬಾರದು.

13106041a ಕಾಮಂ ಯಥಾವದ್ವಿಹಿತಂ ವಿಧಾತ್ರಾ

ಪೃಷ್ಟೇನ ವಾಚ್ಯಂ ತು ಮಯಾ ಯಥಾವತ್|

13106041c ತಪೋ ಹಿ ನಾನ್ಯಚ್ಚಾನಶನಾನ್ಮತಂ ಮೇ

ನಮೋಽಸ್ತು ತೇ ದೇವವರ ಪ್ರಸೀದ||

ದೇವವರ! ನಿನಗೆ ನಮಸ್ಕಾರ! ಪ್ರಸೀದನಾಗು. ನಾನು ಸ್ವ-ಇಚ್ಛೆಯಿಂದ ವಿಧಿಪೂರ್ವಕವಾಗಿ ಅನಶನವ್ರತವನ್ನು ಪರಿಪಾಲಿಸಿದ್ದೇನೆ. ನೀನು ಕೇಳಿದ್ದರಿಂದ ನಾನು ಯಥಾವತ್ತಾಗಿ ಎಲ್ಲವನ್ನೂ ಹೇಳಿದ್ದೇನೆ. ವಿಧಾತಾ! ನನ್ನ ದೃಷ್ಟಿಯಲ್ಲಿ ಅನಶನಕ್ಕಿಂತಲೂ ಹೆಚ್ಚಾದ ಬೇರೆ ಯಾವ ತಪಸ್ಸೂ ಇಲ್ಲ.””

13106042 ಭೀಷ್ಮ ಉವಾಚ|

13106042a ಇತ್ಯುಕ್ತವಂತಂ ತಂ ಬ್ರಹ್ಮಾ ರಾಜಾನಂ ಸ್ಮ ಭಗೀರಥಮ್|

13106042c ಪೂಜಯಾಮಾಸ ಪೂಜಾರ್ಹಂ ವಿಧಿದೃಷ್ಟೇನ ಕರ್ಮಣಾ[4]||

ಭೀಷ್ಮನು ಹೇಳಿದನು: “ರಾಜಾ ಭಗೀರಥನು ಹೀಗೆ ಹೇಳಲು ಬ್ರಹ್ಮನು ವಿಧಿದೃಷ್ಟ ಕರ್ಮಗಳಿಂದ ಪೂಜಾರ್ಹನಾದ ಅವನನ್ನು ಪೂಜಿಸಿದನು.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಬ್ರಹ್ಮಭಗೀರಥಸಂವಾದೇ ಷಡಾಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಬ್ರಹ್ಮಭಗೀರಥಸಂವಾದ ಎನ್ನುವ ನೂರಾಆರನೇ ಅಧ್ಯಾಯವು.

[1] ನಿಷ್ಕಾಣಾಂ ವೈ ಹ್ಯದದಂ (ಗೀತಾ ಪ್ರೆಸ್).

[2] ರೋಹಿಣಾನಾಂ ಶತಾನಿ ಚ| (ಗೀತಾ ಪ್ರೆಸ್).

[3] ಯಜ್ಞಕರ್ತನು ಶಮ್ಯಾ ಎಂಬ ಹೆಸರಿನ ಒಂದು ಗಿಡದ ಕೋಲನ್ನು ಅತಿ ಜೋರಾದ ಬಲವನ್ನುಪಯೋಗಿಸಿ ಎಸೆಯುತ್ತಾನೆ ಮತ್ತು ಅದು ಎಷ್ಟು ದೂರದಲ್ಲಿ ಹೋಗಿ ಬೀಳುತ್ತದೆಯೋ ಅಷ್ಟು ದೂರದಲ್ಲಿ ಯಜ್ಞದ ವೇದಿಯನ್ನು ಮಾಡಲಾಗುತ್ತದೆ. ಆ ವೇದಿಯಲ್ಲಿ ಮಾಡುವ ಯಜ್ಞವನ್ನು “ಶಮ್ಯಾಕ್ಷೇಪ” ಅಥವಾ “ಶಮ್ಯಾಪ್ರಾಸ” ಯಜ್ಞ ಎಂದು ಹೇಳುತ್ತಾರೆ. (ಗೀತಾ ಪ್ರೆಸ್)

[4] ಇದರ ನಂತರ ಈ ಅಧಿಕ ಶ್ಲೋಕಗಳಿವೆ: ತಸ್ಮಾದನಶನೈರ್ಯುಕ್ತೋ ವಿಪ್ರಾನ್ಪೂಜಯ ನಿತ್ಯದಾ| ವಿಪ್ರಾಣಾಂ ವಚನಾತ್ಸರ್ವಂ ಪರತ್ರೇಹ ಚ ಸಿಧ್ಯತಿ|| ವಾಸೋಭಿರನ್ನೈರ್ಗೋಭಿಶ್ಚ ಶುಭೈರೈವೇಶಕೈರಪಿ| ಶುಭೈಃ ಸುರಗಣೈಶ್ಚಾಪಿ ಸ್ತೋಷ್ಯಾ ಏವ ದ್ವಿಜಸ್ತಥಾ| ಏತದೇವ ಪರಂ ಗುಹ್ಯಮಲೋಬೇನ ಸಮಾಚರ|| (ಗೀತಾ ಪ್ರೆಸ್).

Comments are closed.