Anushasana Parva: Chapter 108

ಅನುಶಾಸನ ಪರ್ವ: ದಾನಧರ್ಮ ಪರ್ವ

೧೦೮

ಜ್ಯೇಷ್ಠ-ಕನಿಷ್ಠ ವೃತ್ತಿ

ಅಣ್ಣ-ತಮ್ಮಂದಿರ ಪರಸ್ಪರ ವ್ಯವಹಾರ; ಮಾತಾ-ಪಿತೃ-ಗುರುಗಳನ್ನು ಗೌರವಿಸುವುದು (1-19).

13108001 ಯುಧಿಷ್ಠಿರ ಉವಾಚ|

13108001a ಯಥಾ ಜ್ಯೇಷ್ಠಃ ಕನಿಷ್ಠೇಷು ವರ್ತತೇ ಭರತರ್ಷಭ|

13108001c ಕನಿಷ್ಠಾಶ್ಚ ಯಥಾ ಜ್ಯೇಷ್ಠೇ ವರ್ತೇರಂಸ್ತದ್ಬ್ರವೀಹಿ ಮೇ||

ಯುಧಿಷ್ಠಿರನು ಹೇಳಿದನು: “ಭರತರ್ಷಭ! ಅಣ್ಣನು ತಮ್ಮನೊಂದಿಗೆ ಹೇಗೆ ವರ್ತಿಸಬೇಕು? ತಮ್ಮನು ಅಣ್ಣನೊಂದಿಗೆ ಹೇಗೆ ನಡೆದುಕೊಳ್ಳಬೇಕು? ಅದನ್ನು ನನಗೆ ಹೇಳು.”

13108002 ಭೀಷ್ಮ ಉವಾಚ|

13108002a ಜ್ಯೇಷ್ಠವತ್ತಾತ ವರ್ತಸ್ವ ಜ್ಯೇಷ್ಠೋ ಹಿ ಸತತಂ ಭವಾನ್|

13108002c ಗುರೋರ್ಗರೀಯಸೀ ವೃತ್ತಿರ್ಯಾ ಚೇಚ್ಚಿಷ್ಯಸ್ಯ ಭಾರತ||

ಭೀಷ್ಮನು ಹೇಳಿದನು: “ಮಗೂ ಭಾರತ! ನೀನು ಜ್ಯೇಷ್ಠನಾಗಿರುವೆ. ಆದುದರಿಂದ ನೀನು ಯಾವಾಗಲೂ ಜ್ಯೇಷ್ಠನಂತೆಯೇ ವರ್ತಿಸಬೇಕು. ಗುರುವು ತನ್ನ ಶಿಷ್ಯರಲ್ಲಿ ಹೇಗೆ ಗೌರವಯುಕ್ತವಾಗಿ ನಡೆದುಕೊಳ್ಳುತ್ತಾನೋ ಹಾಗೆ ನೀನೂ ಕೂಡ ನಿನ್ನ ತಮ್ಮಂದಿರೊಡನೆ ನಡೆದುಕೊಳ್ಳಬೇಕು.

13108003a ನ ಗುರಾವಕೃತಪ್ರಜ್ಞೇ ಶಕ್ಯಂ ಶಿಷ್ಯೇಣ ವರ್ತಿತುಮ್|

13108003c ಗುರೋರ್ಹಿ ದೀರ್ಘದರ್ಶಿತ್ವಂ ಯತ್ತಚ್ಚಿಷ್ಯಸ್ಯ ಭಾರತ||

ಭಾರತ! ಗುರುವು ಪ್ರಜ್ಞಾಶೀಲನಾಗಿರದಿದ್ದರೆ ಶಿಷ್ಯನಿಗೆ ಅವನನ್ನು ಅನುಸರಿಸುವುದು ಶಕ್ಯವಾಗುವುದಿಲ್ಲ. ಗುರುವು ದೀರ್ಘದರ್ಶಿಯಾಗಿದ್ದರೆ ಶಿಷ್ಯನೂ ದೀರ್ಘದರ್ಶಿಯಾಗಬಲ್ಲನು.

13108004a ಅಂಧಃ ಸ್ಯಾದಂಧವೇಲಾಯಾಂ ಜಡಃ ಸ್ಯಾದಪಿ ವಾ ಬುಧಃ|

13108004c ಪರಿಹಾರೇಣ ತದ್ ಬ್ರೂಯಾದ್ಯಸ್ತೇಷಾಂ ಸ್ಯಾದ್ವ್ಯತಿಕ್ರಮಃ||

ಅಣ್ಣನು ಕುರುಡನಾಗಬೇಕಾದ ಸಮಯದಲ್ಲಿ ಕುರುಡನಂತೆಯೂ, ಜಡನಾಗಿರಬೇಕಾದಾಗ ಜಡನಂತೆಯೂ, ಕೆಲವು ಸಮಯಗಳಲ್ಲಿ ವಿದ್ವಾಂಸನಂತೆಯೂ ಇರಬೇಕಾಗುತ್ತದೆ. ತನ್ನ ಅನುಜರು ಯಾವುದೇ ಅಪರಾಧವನ್ನು ಮಾಡುತ್ತಿದ್ದರೆ ನೋಡಿಯೂ ನೋಡದವಂತಿರಬೇಕು. ಅಪರಾಧಮಾಡಿದುದನ್ನು ತಿಳಿದೂ ಏನೂ ತಿಳಿಯದ ಜಡನಂತಿರಬೇಕು. ಅವರು ಪುನಃ ಅಪರಾಧವನ್ನೆಸಗಂತೆ ಸಮಯೋಚಿತವಾಗಿ ಒಳ್ಳೆಯ ಮಾತಿನಲ್ಲಿ ಅವರಿಗೆ ಬುದ್ಧಿಹೇಳಬೇಕು.

13108005a ಪ್ರತ್ಯಕ್ಷಂ ಭಿನ್ನಹೃದಯಾ ಭೇದಯೇಯುಃ ಕೃತಂ ನರಾಃ|

13108005c ಶ್ರಿಯಾಭಿತಪ್ತಾಃ ಕೌಂತೇಯ ಭೇದಕಾಮಾಸ್ತಥಾರಯಃ||

ಕೌಂತೇಯ! ತಪ್ಪುಮಾಡಿದ ತಮ್ಮಂದಿರನ್ನು ಅಣ್ಣನು ಒಡನೆಯೇ ದಂಡಿಸಿದರೆ ಅವರ ಮನಸ್ಸಿನಲ್ಲಿ ಭೇದವುಂಟಾಗುತ್ತದೆ. ಅವರ ಐಶ್ವರ್ಯವನ್ನು ನೋಡಿ ಸಹಿಸಿಕೊಳ್ಳದೇ ಸಮಯಕಾದಿರುವ ಶತ್ರುಗಳು ಮಧ್ಯದಲ್ಲಿ ಪ್ರವೇಶಿಸಿ ಅಣ್ಣ-ತಮ್ಮಂದಿರ ಸಂಬಂಧವನ್ನು ಒಡೆಯಲು ಪ್ರಯತ್ನಿಸುತ್ತಾರೆ.

13108006a ಜ್ಯೇಷ್ಠಃ ಕುಲಂ ವರ್ಧಯತಿ ವಿನಾಶಯತಿ ವಾ ಪುನಃ|

13108006c ಹಂತಿ ಸರ್ವಮಪಿ ಜ್ಯೇಷ್ಠಃ ಕುಲಂ ಯತ್ರಾವಜಾಯತೇ||

ಜ್ಯೇಷ್ಠನಾದವನು ಕುಲವನ್ನು ವರ್ಧಿಸುತ್ತಾನೆ ಅಥವಾ ವಿನಾಶಗೊಳಿಸುತ್ತಾನೆ. ಅವನು ನೀತಿಗೆಟ್ಟು ವ್ಯವಹರಿಸಿದರೆ ಕುಲದ ಸರ್ವವನ್ನೂ ನಾಶಗೊಳಿಸುತ್ತಾನೆ.

13108007a ಅಥ ಯೋ ವಿನಿಕುರ್ವೀತ ಜ್ಯೇಷ್ಠೋ ಭ್ರಾತಾ ಯವೀಯಸಃ|

13108007c ಅಜ್ಯೇಷ್ಠಃ ಸ್ಯಾದಭಾಗಶ್ಚ ನಿಯಮ್ಯೋ ರಾಜಭಿಶ್ಚ ಸಃ||

ಹಿರಿಯಣ್ಣನಾಗಿದ್ದರೂ ತನ್ನ ತಮ್ಮಂದಿರೊಡನೆ ಸದ್ವ್ಯವಹಾರವನ್ನು ಇಟ್ಟುಕೊಂಡಿಲ್ಲದವನು ಅಣ್ಣನೂ ಆಗುವುದಿಲ್ಲ ಮತ್ತು ಜ್ಯೇಷ್ಠಾಂಶಕ್ಕೂ ಅಧಿಕಾರಿಯಾಗುವುದಿಲ್ಲ. ಅಂಥವನನ್ನು ರಾಜನು ದಂಡಿಸಬೇಕು.

13108008a ನಿಕೃತೀ ಹಿ ನರೋ ಲೋಕಾನ್ಪಾಪಾನ್ಗಚ್ಚತ್ಯಸಂಶಯಮ್|

13108008c ವಿದುಲಸ್ಯೇವ ತತ್ಪುಷ್ಪಂ ಮೋಘಂ ಜನಯಿತುಃ ಸ್ಮೃತಮ್||

ವಂಚಕ ಮನುಷ್ಯನು ನಿಸ್ಸಂಶಯವಾಗಿ ಪಾಪಿಗಳ ಲೋಕಗಳಿಗೆ ಹೋಗುತ್ತೇನೆ. ಜನ್ಮದಾತನಾದ ತಂದೆಗೆ ಅಂಥವನು ನೀರುಹಬ್ಬೇಗಿಡದ ಹೂವಿನಂತೆ[1] ನಿರರ್ಥಕನಾಗುತ್ತಾನೆ.

13108009a ಸರ್ವಾನರ್ಥಃ ಕುಲೇ ಯತ್ರ ಜಾಯತೇ ಪಾಪಪೂರುಷಃ|

13108009c ಅಕೀರ್ತಿಂ ಜನಯತ್ಯೇವ ಕೀರ್ತಿಮಂತರ್ದಧಾತಿ ಚ||

ಪಾಪಪುರುಷನು ಹುಟ್ಟಿದ ಕುಲದಲ್ಲಿ ಸರ್ವವೂ ಅನರ್ಥವಾಗುತ್ತದೆ. ಅವನು ಕುಲದ ಕೀರ್ತಿಯನ್ನು ಹಾಳುಮಾಡುವುದಲ್ಲದೇ ಅಪಕೀರ್ತಿಯನ್ನೂ ತರುತ್ತಾನೆ.

13108010a ಸರ್ವೇ ಚಾಪಿ ವಿಕರ್ಮಸ್ಥಾ ಭಾಗಂ ನಾರ್ಹಂತಿ ಸೋದರಾಃ|

13108010c ನಾಪ್ರದಾಯ ಕನಿಷ್ಠೇಭ್ಯೋ ಜ್ಯೇಷ್ಠಃ ಕುರ್ವೀತ ಯೌತಕಮ್||

ನಿಷಿದ್ಧ ಕರ್ಮಾಚರಣೆಯಲ್ಲಿ ತೊಡಗಿರುವ ಎಲ್ಲ ಸಹೋದರರೂ ಪಿತ್ರಾರ್ಜಿತ ಆಸ್ತಿಯ ಭಾಗಕ್ಕೆ ಅರ್ಹರಾಗುವುದಿಲ್ಲ. ಜ್ಯೇಷ್ಠನು ಕಿರಿಯರಿಗೆ ಪಿತ್ರಾರ್ಜಿನ ಆಸ್ತಿಯನ್ನು ಕೊಡದೇ ತಾನೇ ತೆಗೆದುಕೊಳ್ಳಬಹುದು.

13108011a ಅನುಜಂ ಹಿ ಪಿತುರ್ದಾಯೋ[2] ಜಂಘಾಶ್ರಮಫಲೋಽಧ್ವಗಃ|

13108011c ಸ್ವಯಮೀಹಿತಲಬ್ಧಂ ತು ನಾಕಾಮೋ ದಾತುಮರ್ಹತಿ||

ಜ್ಯೇಷ್ಠನು ತನ್ನ ಸ್ವಂತ ಶ್ರಮದಿಂದ ಪಿತ್ರಾರ್ಜಿತ ಆಸ್ತಿಯನ್ನು ಬಳಸದೇ, ಸಂಪತ್ತನ್ನು ಮಾಡಿಕೊಂಡರೆ ಅವನು ಅದರಲ್ಲಿನ ಭಾಗವನ್ನು ತಮ್ಮಂದಿರಿಗೆ ಕೊಡಬೇಕಾಗಿಲ್ಲ.

13108012a ಭ್ರಾತೄಣಾಮವಿಭಕ್ತಾನಾಮುತ್ಥಾನಮಪಿ ಚೇತ್ಸಹ|

13108012c ನ ಪುತ್ರಭಾಗಂ ವಿಷಮಂ ಪಿತಾ ದದ್ಯಾತ್ಕಥಂ ಚನ||

ತಂದೆಯು ಜೀವಂತವಿರುವಾಗಲೇ ಮಕ್ಕಳು ಆಸ್ತಿಯಲ್ಲಿ ಪಾಲುಮಾಡಕೊಳ್ಳ ಬಯಸಿದರೆ ತಂದೆಯು ಪುತ್ರರಲ್ಲಿ ಸಮಪಾಲನ್ನೇ ಮಾಡಬೇಕು.

13108013a ನ ಜ್ಯೇಷ್ಠಾನವಮನ್ಯೇತ ದುಷ್ಕೃತಃ ಸುಕೃತೋಽಪಿ ವಾ|

13108013c ಯದಿ ಸ್ತ್ರೀ ಯದ್ಯವರಜಃ ಶ್ರೇಯಃ ಪಶ್ಯೇತ್ತಥಾಚರೇತ್|

13108013e ಧರ್ಮಂ ಹಿ ಶ್ರೇಯ ಇತ್ಯಾಹುರಿತಿ ಧರ್ಮವಿದೋ ವಿದುಃ||

ಸಾಧುವಾಗಿರಲಿ ಅಥವಾ ದುಷ್ಟನಾಗಿರಲಿ ಜ್ಯೇಷ್ಠನನ್ನು ಪಿತ್ರಾರ್ಜಿತ ಆಸ್ತಿಗೆ ಪಾಲುಗಾರನನ್ನಾಗಿ ಮಾಡಬೇಕು. ಅವನ ಪತ್ನಿಯು ದುಷ್ಟಳಾಗಿದ್ದರೂ ಅವಳ ಶ್ರೇಯಸ್ಸನ್ನೂ ಪರಿಗಣಿಸಬೇಕು. ಧರ್ಮವನ್ನು ತಿಳಿದವರು ಇದೇ ಧರ್ಮವೇ ಶ್ರೇಯಸ್ಕರವಾದುದು ಎಂದು ಹೇಳುತ್ತಾರೆ.

13108014a ದಶಾಚಾರ್ಯಾನುಪಾಧ್ಯಾಯ ಉಪಾಧ್ಯಾಯಾನ್ಪಿತಾ ದಶ|

13108014c ದಶ ಚೈವ ಪಿತೄನ್ಮಾತಾ ಸರ್ವಾಂ ವಾ ಪೃಥಿವೀಮಪಿ||

ಹತ್ತು ಆಚಾರ್ಯರಿಗಿಂತಲೂ ಉಪಾಧ್ಯಾಯನು ಶ್ರೇಷ್ಠನು. ಹತ್ತು ಉಪಾಧ್ಯಾಯರಿಗಿಂತಲೂ ತಂದೆಯು ಶ್ರೇಷ್ಠನು. ತಾಯಿಯು ಹತ್ತು ತಂದೆಯರಿಗಿಂತಲೂ ಶ್ರೇಷ್ಠಳು ಮತ್ತು ಅವಳು ಇಡೀ ಭೂಮಿಗಿಂತಲೂ ಶ್ರೇಷ್ಠಳು.

13108015a ಗೌರವೇಣಾಭಿಭವತಿ ನಾಸ್ತಿ ಮಾತೃಸಮೋ ಗುರುಃ|

13108015c ಮಾತಾ ಗರೀಯಸೀ ಯಚ್ಚ ತೇನೈತಾಂ ಮನ್ಯತೇ ಜನಃ||

ಮಾತೃಸಮ ಗುರುವಿಲ್ಲ. ಇರುವ ಎಲ್ಲ ಗೌರವಗಳೂ ಅವಳಿಗೇ ಸಲ್ಲುತ್ತವೆ. ಆದುದರಿಂದಲೇ ಜನರು ತಾಯಿಯು ಹೆಚ್ಚಿನವಳೆಂದು ಅಭಿಪ್ರಾಯಪಡುತ್ತಾರೆ.

13108016a ಜ್ಯೇಷ್ಠೋ ಭ್ರಾತಾ ಪಿತೃಸಮೋ ಮೃತೇ ಪಿತರಿ ಭಾರತ|

13108016c ಸ ಹ್ಯೇಷಾಂ ವೃತ್ತಿದಾತಾ ಸ್ಯಾತ್ಸ ಚೈತಾನ್ಪರಿಪಾಲಯೇತ್||

ಭಾರತ! ತಂದೆಯು ತೀರಿಹೋದ ನಂತರ ಜ್ಯೇಷ್ಠ ಭ್ರಾತನು ಪಿತೃಸಮನಾಗುತ್ತಾನೆ. ಅವನೇ ಎಲ್ಲರಿಗೂ ವೃತ್ತಿದಾತನಗುತ್ತಾನೆ ಮತ್ತು ಎಲ್ಲರನ್ನೂ ಪರಿಪಾಲಿಸುತ್ತಾನೆ.

13108017a ಕನಿಷ್ಠಾಸ್ತಂ ನಮಸ್ಯೇರನ್ಸರ್ವೇ ಚಂದಾನುವರ್ತಿನಃ|

13108017c ತಮೇವ ಚೋಪಜೀವೇರನ್ಯಥೈವ ಪಿತರಂ ತಥಾ||

ಕಿರಿಯವರೆಲ್ಲರೂ ಅವನಿಗೆ ನಮಸ್ಕರಿಸಬೇಕು ಮತ್ತು ಅವನ ಆಜ್ಞೆಗಳನ್ನು ಪರಿಪಾಲಿಸಬೇಕು. ತಂದೆಯಂತೆ ಅವನೇ ಅವರಿಗೆ ಉಪಜೀವನವನ್ನು ದೊರಕಿಸುತ್ತಾನೆ.

13108018a ಶರೀರಮೇತೌ ಸೃಜತಃ ಪಿತಾ ಮಾತಾ ಚ ಭಾರತ|

13108018c ಆಚಾರ್ಯಶಾಸ್ತಾ ಯಾ ಜಾತಿಃ ಸಾ ಸತ್ಯಾ ಸಾಜರಾಮರಾ||

ಭಾರತ! ಈ ಶರೀರವು ತಂದೆ-ತಾಯಿಯರಿಂದ ಸೃಷ್ಟಿಸಲ್ಪಟ್ಟಿದೆ. ಆದರೆ ಆಚಾರ್ಯನ ಉಪದೇಶವೇ ನಿಜವಾದ ಜನ್ಮವು. ಅದಕ್ಕೆ ಮುಪ್ಪೂ ಇಲ್ಲ. ಸಾವೂ ಇಲ್ಲ.

13108019a ಜ್ಯೇಷ್ಠಾ ಮಾತೃಸಮಾ ಚಾಪಿ ಭಗಿನೀ ಭರತರ್ಷಭ|

13108019c ಭ್ರಾತುರ್ಭಾರ್ಯಾ ಚ ತದ್ವತ್ಸ್ಯಾದ್ಯಸ್ಯಾ ಬಾಲ್ಯೇ ಸ್ತನಂ ಪಿಬೇತ್||

ಭರತರ್ಷಭ! ಜ್ಯೇಷ್ಠ ಅಕ್ಕಳೂ ಕೂಡ ಮಾತೃಸಮಳು. ಅಣ್ಣನ ಪತ್ನಿಯೂ ಮತ್ತು ಬಾಲ್ಯದಲ್ಲಿ ಹಾಲುಣಿಸಿ ಸಾಕಿದವಳೂ ಮಾತೃಸಮಾನರಾಗುತ್ತಾರೆ[3].”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಜ್ಯೇಷ್ಠಕನಿಷ್ಠವೃತ್ತಿರ್ನಾಮ ಅಷ್ಟಾಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಜ್ಯೇಷ್ಠಕನಿಷ್ಠವೃತ್ತಿ ಎನ್ನುವ ನೂರಾಎಂಟನೇ ಅಧ್ಯಾಯವು.

[1] “ವಿದುಲ ಪುಷ್ಪ”ಕ್ಕೆ ಬಿದಿರಿನ ಹೂವು ಎಂಬ ಅನುವಾದವೂ ಇದೆ (ಬಿಬೇಕ್ ದೆಬ್ರೋಯ್).

[2] ಅನುಪಘ್ನನ್ ಪಿತುರ್ದಾಯಂ (ಭಾರತ ದರ್ಶನ/ಗೀತಾ ಪ್ರೆಸ್).

[3] The wife of the elder borther is also like that, since in infancy, the younger brother is suckled at her breast (Bibek Debroy).

Comments are closed.