ಆರಣ್ಯಕ ಪರ್ವ: ಘೋಷಯಾತ್ರಾ ಪರ್ವ
Contents
Toggle೨೩೩
ಭೀಮನನ್ನು ಮುಂದಿಟ್ಟುಕೊಂಡು ಬಂದ ನಾಲ್ವರು ಪಾಂಡವರೂ ಗಂಧರ್ವರೊಂದಿಗೆ ಹೋರಾಡಿದುದು (೧-೧೦). ಅರ್ಜುನ ಮತ್ತು ಗಂಧರ್ವರ ನಡುವೆ ಭೀಕರ ಯುದ್ಧ (೧೧-೨೧).
03233001 ವೈಶಂಪಾಯನ ಉವಾಚ|
03233001a ಯುಧಿಷ್ಠಿರವಚಃ ಶ್ರುತ್ವಾ ಭೀಮಸೇನಪುರೋಗಮಾಃ|
03233001c ಪ್ರಹೃಷ್ಟವದನಾಃ ಸರ್ವೇ ಸಮುತ್ತಸ್ಥುರ್ನರರ್ಷಭಾಃ||
ವೈಶಂಪಾಯನನು ಹೇಳಿದನು: “ಯುಧಿಷ್ಠಿರನ ಮಾತನ್ನು ಕೇಳಿ ಭೀಮಸೇನನನ್ನು ಮುಂದಿಟ್ಟುಕೊಂಡ ನರರ್ಷಭರೆಲ್ಲರೂ ಸಂತೋಷವದನರಾಗಿ ಮೇಲೆದ್ದರು.
03233002a ಅಭೇದ್ಯಾನಿ ತತಃ ಸರ್ವೇ ಸಮನಹ್ಯಂತ ಭಾರತ|
03233002c ಜಾಂಬೂನದವಿಚಿತ್ರಾಣಿ ಕವಚಾನಿ ಮಹಾರಥಾಃ||
ಭಾರತ! ಆಗ ಆ ಎಲ್ಲ ಮಹಾರಥರೂ ಬಂಗಾರದಂತೆ ಹೊಳೆಯುತ್ತಿದ್ದ ಬಣ್ಣದ ಅಭೇದ್ಯ ಕವಚಗಳನ್ನು ಧರಿಸಿದರು.
03233003a ತೇ ದಂಶಿತಾ ರಥೈಃ ಸರ್ವೇ ಧ್ವಜಿನಃ ಸಶರಾಸನಾಃ|
03233003c ಪಾಂಡವಾಃ ಪ್ರತ್ಯದೃಶ್ಯಂತ ಜ್ವಲಿತಾ ಇವ ಪಾವಕಾಃ||
ರಥವನ್ನೇರಿದ, ಧ್ವಜಗಳೊಂದಿಗೆ ಬಿಲ್ಲು ಬಾಣಗಳನ್ನು ಹಿಡಿದಿದ್ದ ಆ ಪಾಂಡವರೆಲ್ಲರೂ ಅಗ್ನಿಯಂತೆ ಪ್ರಜ್ವಲಿಸುತ್ತಿದ್ದರು.
03233004a ತಾನ್ರಥಾನ್ಸಾಧು ಸಂಪನ್ನಾನ್ಸಂಯುಕ್ತಾಂ ಜವನೈರ್ಹಯೈಃ|
03233004c ಆಸ್ಥಾಯ ರಥಶಾರ್ದೂಲಾಃ ಶೀಘ್ರಮೇವ ಯಯುಸ್ತತಃ|
ಸುಸಜ್ಜಿತವಾದ, ವೇಗವಾಗಿ ಹೋಗಬಲ್ಲ ಕುದುರೆಗಳನ್ನು ಕಟ್ಟಿದ್ದ ರಥಗಳಲ್ಲಿ ನಿಂತು ಆ ರಥಶಾರ್ದೂಲರು ಶೀಘ್ರದಲ್ಲಿಯೇ ಅಲ್ಲಿಂದ ಹೊರಟರು.
03233005a ತತಃ ಕೌರವಸೈನ್ಯಾನಾಂ ಪ್ರಾದುರಾಸೀನ್ಮಹಾಸ್ವನಃ|
03233005c ಪ್ರಯಾತಾನ್ಸಹಿತಾನ್ದೃಷ್ಟ್ವಾ ಪಾಂಡುಪುತ್ರಾನ್ಮಹಾರಥಾನ್||
ಮಹಾರಥಿ ಪಾಂಡುಪುತ್ರರು ಒಟ್ಟಿಗೇ ಹೊರಟಿದ್ದುದನ್ನು ನೋಡಿ ಕೌರವ ಸೇನೆಯಲ್ಲಿ ಮಹಾ ಘೋಷವು ಉದ್ಭವಿಸಿತು.
03233006a ಜಿತಕಾಶಿನಶ್ಚ ಖಚರಾಸ್ತ್ವರಿತಾಶ್ಚ ಮಹಾರಥಾಃ|
03233006c ಕ್ಷಣೇನೈವ ವನೇ ತಸ್ಮಿನ್ಸಮಾಜಗ್ಮುರಭೀತವತ್||
ಕ್ಷಣದಲ್ಲಿಯೇ ಜಯದಿಂದ ಉಬ್ಬಿದ್ದ ಗಂಧರ್ವರೂ ಮತ್ತು ವೇಗದಿಂದ ಬರುತ್ತಿದ್ದ ಆ ಮಹಾರಥಿಗಳೂ ನಿರ್ಭೀತರಾಗಿ ವನದಲ್ಲಿ ಪರಸ್ಪರರ ಎದುರಾದರು.
03233007a ನ್ಯವರ್ತಂತ ತತಃ ಸರ್ವೇ ಗಂಧರ್ವಾ ಜಿತಕಾಶಿನಃ|
03233007c ದೃಷ್ಟ್ವಾ ರಥಗತಾನ್ವೀರಾನ್ಪಾಂಡವಾಂಶ್ಚತುರೋ ರಣೇ||
ವಿಜಯದಿಂದ ಉಬ್ಬಿದ್ದ ಗಂಧರ್ವರೆಲ್ಲರೂ ರಥಗಳಲ್ಲಿ ಕುಳಿತು ರಣಕ್ಕೆ ಬರುತ್ತಿದ್ದ ವೀರ ಪಾಂಡವ ನಾಲ್ವರನ್ನು ನೋಡಿ ಹಿಂದಿರುಗಿದರು.
03233008a ತಾಂಸ್ತು ವಿಭ್ರಾಜತೋ ದೃಷ್ಟ್ವಾ ಲೋಕಪಾಲಾನಿವೋದ್ಯತಾನ್|
03233008c ವ್ಯೂಢಾನೀಕಾ ವ್ಯತಿಷ್ಠಂತ ಗಂಧಮಾದನವಾಸಿನಃ||
ಲೋಕಪಾಲರಂತೆ ಸಿದ್ಧರಾಗಿ ಬೆಳಗುತ್ತಿರುವ ಅವರನ್ನು ನೋಡಿ ಗಂಧಮಾದನವಾಸಿಗಳು ವ್ಯೂಹವನ್ನು ರಚಿಸಿ ನಿಂತರು.
03233009a ರಾಜ್ಞಸ್ತು ವಚನಂ ಶ್ರುತ್ವಾ ಧರ್ಮರಾಜಸ್ಯ ಧೀಮತಃ|
03233009c ಕ್ರಮೇಣ ಮೃದುನಾ ಯುದ್ಧಮುಪಕ್ರಾಮಂತ ಭಾರತ||
ಭಾರತ! ಧೀಮಂತ ರಾಜ ಧರ್ಮರಾಜನ ಮಾತಿನಂತೆ ಪಾಂಡವರು ಕ್ರಮವಾಗಿ ಮೊದಲು ಮೃದು ಯುದ್ಧದಲ್ಲಿ ತೊಡಗಿದರು.
03233010a ನ ತು ಗಂಧರ್ವರಾಜಸ್ಯ ಸೈನಿಕಾ ಮಂದಚೇತಸಃ|
03233010c ಶಕ್ಯಂತೇ ಮೃದುನಾ ಶ್ರೇಯಃ ಪ್ರತಿಪಾದಯಿತುಂ ತದಾ||
ಆದರೆ ಗಂಧರ್ವರಾಜನ ಮಂದಚೇತಸ ಸೈನಿಕರು ಮೃದುತ್ವದಿಂದ ಅವರಿಗೆ ಏನು ಶ್ರೇಯಸ್ಸಾಗಬಹುದು ಎನ್ನುವುದನ್ನು ತಿಳಿಯಲು ಅಶಕ್ಯರಾದರು.
03233011a ತತಸ್ತಾನ್ಯುಧಿ ದುರ್ಧರ್ಷಃ ಸವ್ಯಸಾಚೀ ಪರಂತಪಃ|
03233011c ಸಾಂತ್ವಪೂರ್ವಮಿದಂ ವಾಕ್ಯಮುವಾಚ ಖಚರಾನ್ರಣೇ||
ಆಗ ಯುದ್ಧದಲ್ಲಿ ದುರ್ಧರ್ಷ ಪರಂತಪ ಸವ್ಯಸಾಚಿಯು ಸಾಂತ್ವಪೂರ್ವಕವಾದ ಈ ಮಾತನ್ನು ರಣದಲ್ಲಿದ್ದ ಆಕಾಶಗಾಮಿಗಳಿಗೆ ಹೇಳಿದನು.
03233012a ನೈತದ್ಗಂಧರ್ವರಾಜಸ್ಯ ಯುಕ್ತಂ ಕರ್ಮ ಜುಗುಪ್ಸಿತಂ|
03233012c ಪರದಾರಾಭಿಮರ್ಶಶ್ಚ ಮಾನುಷೈಶ್ಚ ಸಮಾಗಮಃ||
“ಪರದಾರೆಯರನ್ನು ಕಾಡಿಸುವ ಮತ್ತು ಮನುಷ್ಯರೊಂದಿಗೆ ಒಡನಾಡುವ ಈ ಜಿಗುಪ್ಸೆಯ ಕೆಲಸವು ಗಂಧರ್ವರಾಜನಿಗೆ ಸರಿಯಾದುದಲ್ಲ.
03233013a ಉತ್ಸೃಜಧ್ವಂ ಮಹಾವೀರ್ಯಾನ್ಧೃತರಾಷ್ಟ್ರಸುತಾನಿಮಾನ್|
03233013c ದಾರಾಂಶ್ಚೈಷಾಂ ವಿಮುಂಚಧ್ವಂ ಧರ್ಮರಾಜಸ್ಯ ಶಾಸನಾತ್||
ಧರ್ಮರಾಜನ ಶಾಸನದಂತೆ ಈ ಮಹಾವೀರ ಧೃತರಾಷ್ಟ್ರಸುತರನ್ನೂ ಅವರ ಪತ್ನಿಯರನ್ನೂ ಬಿಟ್ಟುಬಿಡಿ!”
03233014a ಏವಮುಕ್ತಾಸ್ತು ಗಂಧರ್ವಾಃ ಪಾಂಡವೇನ ಯಶಸ್ವಿನಾ|
03233014c ಉತ್ಸ್ಮಯಂತಸ್ತದಾ ಪಾರ್ಥಮಿದಂ ವಚನಮಬ್ರುವನ್||
ಯಶಸ್ವಿನಿ ಪಾಂಡವನು ಹೀಗೆ ಹೇಳಲು ಗಂಧರ್ವರು ಮುಗುಳ್ನಕ್ಕು ಪಾರ್ಥನಿಗೆ ಈ ಮಾತನ್ನಾಡಿದರು.
03233015a ಏಕಸ್ಯೈವ ವಯಂ ತಾತ ಕುರ್ಯಾಮ ವಚನಂ ಭುವಿ|
03233015c ಯಸ್ಯ ಶಾಸನಮಾಜ್ಞಾಯ ಚರಾಮ ವಿಗತಜ್ವರಾಃ||
“ಅಯ್ಯಾ! ಭೂಮಿಯಲ್ಲಿ ನಾವು ಒಬ್ಬನದೇ ಮಾತಿನಂತೆ ನಡೆದುಕೊಳ್ಳುತ್ತೇವೆ. ಅವನ ಶಾಸನವನ್ನು ತಿಳಿದುಕೊಂಡು ವಿಗತಜ್ವರರಾಗಿ ವಿಹರಿಸುತ್ತೇವೆ.
03233016a ತೇನೈಕೇನ ಯಥಾದಿಷ್ಟಂ ತಥಾ ವರ್ತಾಮ ಭಾರತ|
03233016c ನ ಶಾಸ್ತಾ ವಿದ್ಯತೇಽಸ್ಮಾಕಮನ್ಯಸ್ತಸ್ಮಾತ್ಸುರೇಶ್ವರಾತ್||
ಭಾರತ! ಅವನೊಬ್ಬನ ಇಷ್ಟದಂತೆ ಮಾತ್ರ ನಾವು ನಡೆದುಕೊಳ್ಳುತ್ತೇವೆ. ಸುರೇಶ್ವರನ ಹೊರತಾಗಿ ಅನ್ಯರು ಯಾರೂ ನಮ್ಮನ್ನು ಆಳುವುದಿಲ್ಲ.”
03233017a ಏವಮುಕ್ತಸ್ತು ಗಂಧರ್ವೈಃ ಕುಂತೀಪುತ್ರೋ ಧನಂಜಯಃ|
03233017c ಗಂಧರ್ವಾನ್ಪುನರೇವೇದಂ ವಚನಂ ಪ್ರತ್ಯಭಾಷತ||
ಗಂಧರ್ವರು ಹೀಗೆ ಹೇಳಲು ಕುಂತೀಪುತ್ರ ಧನಂಜಯನು ಗಂಧರ್ವರಿಗೆ ಪುನಃ ಈ ಮಾತುಗಳಿಂದ ಉತ್ತರಿಸಿದನು.
03233018a ಯದಿ ಸಾಮ್ನಾ ನ ಮೋಕ್ಷಧ್ವಂ ಗಂಧರ್ವಾ ಧೃತರಾಷ್ಟ್ರಜಂ|
03233018c ಮೋಕ್ಷಯಿಷ್ಯಾಮಿ ವಿಕ್ರಮ್ಯ ಸ್ವಯಮೇವ ಸುಯೋಧನಂ||
“ಗಂಧರ್ವರೇ! ಸಾಮದಿಂದ ಧೃತರಾಷ್ಟ್ರಜನನ್ನು ಬಿಡದಿದ್ದರೆ ವಿಕ್ರಮದಿಂದ ನಾನೇ ಸುಯೋಧನನನ್ನು ಬಿಡುಗಡೆಗೊಳಿಸುತ್ತೇನೆ.”
03233019a ಏವಮುಕ್ತ್ವಾ ತತಃ ಪಾರ್ಥಃ ಸವ್ಯಸಾಚೀ ಧನಂಜಯಃ|
03233019c ಸಸರ್ಜ ನಿಶಿತಾನ್ಬಾಣಾನ್ಖಚರಾನ್ಖಚರಾನ್ಪ್ರತಿ||
ಹೀಗೆ ಹೇಳಿ ಸವ್ಯಸಾಚೀ ಧನಂಜಯನು ಆಕಾಶದಲ್ಲಿ ಹಾರುವ ಹರಿತ ಬಾಣಗಳನ್ನು ಆಕಾಶದಲ್ಲಿ ಸಂಚರಿಸುವ ಅವರ ಮೇಲೆ ಪ್ರಯೋಗಿಸಿದನು.
03233020a ತಥೈವ ಶರವರ್ಷೇಣ ಗಂಧರ್ವಾಸ್ತೇ ಬಲೋತ್ಕಟಾಃ|
03233020c ಪಾಂಡವಾನಭ್ಯವರ್ತಂತ ಪಾಂಡವಾಶ್ಚ ದಿವೌಕಸಃ||
ಹಾಗೆಯೇ ಬಲೋತ್ಕಟ ಗಂಧರ್ವರು ಪಾಂಡವರ ಮೇಲೆ ಮತ್ತು ಪಾಂಡವರು ದಿವೌಕಸರ ಮೇಲೆ ಶರಗಳ ಮಳೆಯನ್ನು ಸುರಿಸಿದರು.
03233021a ತತಃ ಸುತುಮುಲಂ ಯುದ್ಧಂ ಗಂಧರ್ವಾಣಾಂ ತರಸ್ವಿನಾಂ|
03233021c ಬಭೂವ ಭೀಮವೇಗಾನಾಂ ಪಾಂಡವಾನಾಂ ಚ ಭಾರತ||
ಭಾರತ! ಆಗ ತರಸ್ವಿ ಗಂಧರ್ವರ ಮತ್ತು ಭೀಮವೇಗಿ ಪಾಂಡವರ ನಡುವೆ ಯುದ್ಧವು ನಡೆಯಿತು.”
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ಪಾಂಡವಗಂಧರ್ವಯುದ್ಧೇ ತ್ರ್ಯಸ್ತ್ರಿಂಶದಧಿಕದ್ವಿಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ಪಾಂಡವಗಂಧರ್ವಯುದ್ಧದಲ್ಲಿ ಇನ್ನೂರಾಮೂವತ್ಮೂರನೆಯ ಅಧ್ಯಾಯವು.
