Image result for flowers against white backgroundಕೌರವ-ಪಾಂಡವರ ಜನನ; ಬಾಲ್ಯ

ದುರ್ಯೋಧನಾದಿ ಕೌರವರ ಜನನ

ನಂತರ ಗಾಂಧಾರಿಯಲ್ಲಿ ಧೃತರಾಷ್ಟ್ರನ ನೂರು ಪುತ್ರರು ಮತ್ತು ನೂರಾ ಒಂದನೆಯವನು ವೈಶ್ಯೆಯೊಬ್ಬಳಲ್ಲಿ ಜನಿಸಿದರು. ಪಾಂಡುವಿಗೆ ಕುಂತಿ ಮತ್ತು ಮಾದ್ರಿಯರಲ್ಲಿ ಕುಲಸಂತಾನಾರ್ಥವಾಗಿ ದೇವತೆಗಳಿಂದ ಐವರು ಮಹಾರಥಿ ಪುತ್ರರು ಜನಿಸಿದರು.

ಒಮ್ಮೆ ಹಸಿದು ಬಳಲಿ ಬಂದಿದ್ದ ದ್ವೈಪಾಯನನನ್ನು ಗಾಂಧಾರಿಯು ತೃಪ್ತಿಗೊಳಿಸಿದಳು. ವ್ಯಾಸನು ಅವಳಿಗೆ ವರವನ್ನಿತ್ತನು. ಅವಳು ತನಗಾಗಿ ತನ್ನ ಪತಿ ಸಮಾನ ನೂರು ಪುತ್ರರನ್ನು ಕೇಳಿದಳು. ಸ್ವಲ್ಪ ಸಮಯದ ನಂತರ ಅವಳು ಧೃತರಾಷ್ಟ್ರನಿಂದ ಗರ್ಭವತಿಯಾದಳು. ಎರಡು ವರ್ಷಗಳ ಪರ್ಯಂತ ಮಕ್ಕಳನ್ನು ಹಡೆಯದೆ ಗಾಂಧಾರಿಯು ಗರ್ಭವತಿಯಾಗಿಯೇ ಇದ್ದಳು. ಇದರಿಂದ ಅವಳು ದುಃಖಿತಳಾದಳು. ಕುಂತಿಗೆ ಬಾಲಾರ್ಕಸಮತೇಜಸ್ವಿ ಸುತನು ಜನಿಸಿದನೆಂದು ಕೇಳಿದ ಅವಳು ತನ್ನ ಹೊಟ್ಟೆಯು ಇನ್ನೂ ಗಟ್ಟಿಯಾಗಿಯೇ ಇರುವುದನ್ನು ನೋಡಿ ಚಿಂತಿಸಿದಳು. ಧೃತರಾಷ್ಟ್ರನಿಗೆ ತಿಳಿಯದಂತೆ ಸಾಕಷ್ಟು ಪ್ರಯತ್ನಪಟ್ಟು ತನ್ನ ಗರ್ಭಪಾತ ಮಾಡಿಕೊಂಡು ದುಃಖದಿಂದ ಮೂರ್ಛಿತಳಾದಳು. ಹೆಪ್ಪುಗಟ್ಟಿದ ರಕ್ತದ ಹಾಗಿನ ಒಂದು ಮಾಂಸದ ಮುದ್ದೆಯು ಹೊರಬಂದಿತು. ಎರಡು ವರ್ಷಗಳು ತನ್ನ ಹೊಟ್ಟೆಯಲ್ಲಿ ಹೊತ್ತು ಬಂದಿದ್ದ ಅದನ್ನು ಬಿಸಾಡಲು ಮುಂದಾದಳು. ಇದನ್ನು ತಿಳಿದ ಜಪಿಗಳಲ್ಲಿ ಶ್ರೇಷ್ಠ ದ್ವೈಪಾಯನನು ತಕ್ಷಣವೇ ಅಲ್ಲಿಗೆ ಬಂದು ಆ ಮಾಂಸದ ಮುದ್ದೆಯನ್ನು ನೋಡಿದನು.ಏಕೆ ಹೀಗೆ ಮಾಡಿದೆ? ಎಂದು ಅವನು ಸೌಬಲಿಯಲ್ಲಿ ಕೇಳಿದನು. ಅವಳು ತನ್ನ ಮನಸ್ಸಿನಲ್ಲಿದ್ದ ಸತ್ಯವನ್ನು ಆ ಪರಮ ಋಷಿಗೆ ತಿಳಿಸಿದಳು:

ರವಿಸಮಪ್ರಭ ಜ್ಯೇಷ್ಠ ಕುಂತೀಸುತನು ಜನಿಸಿದ್ದುದನ್ನು ಕೇಳಿ ಪರಮ ದುಃಖಗೊಂಡು ನನ್ನ ಗರ್ಭವನ್ನು ಕೆಳಗುರುಳಿಸಿದೆ. ಹಿಂದೆ ನೀನು ನನಗೆ ನೂರು ಪುತ್ರರನ್ನು ವರವಾಗಿ ಕೊಟ್ಟಿದ್ದೆ. ಆದರೆ ಆ ಪುತ್ರಶತರ ಬದಲಾಗಿ ಈ ಮಾಂಸದ ಪಿಂಡಿಯು ಹುಟ್ಟಿದೆ!

ವ್ಯಾಸನು ಹೇಳಿದನು:

ಗಾಂಧಾರಿ! ಅದು ಹಾಗೆಯೇ ಆಗುತ್ತದೆ. ಬೇರೆ ಯಾವರೀತಿಯೂ ಆಗುವುದಿಲ್ಲ. ಈ ಹಿಂದೆ ತಮಾಷೆಯಾಗಿಯೂ ನಾನು ಸುಳ್ಳನ್ನು ಹೇಳಲಿಲ್ಲ. ಈಗ ತಾನೇ ಹೇಗೆ ಸುಳ್ಳನ್ನು ಹೇಳಲಿ? ತಕ್ಷಣವೇ ತುಪ್ಪದಿಂದ ತುಂಬಿದ ನೂರು ಕುಂಡಗಳನ್ನು ತರಿಸು. ಮತ್ತು ಈ ಪಿಂಡದ ಮೇಲೆ ತಣ್ಣೀರನ್ನು ಚುಮುಕಿಸು.

ಈ ರೀತಿ ನೀರಿನಿಂದ ತೋಯಿಸಿದಾಗ ಆ ಪಿಂಡವು ಒಂದೊಂದೂ ಒಂದು ಬೆರಳಿನ ಗಾತ್ರದ ಒಂದು ನೂರು ಭ್ರೂಣಗಳಾಗಿ ಒಡೆಯಿತು. ಹೀಗೆ ಒಂದರ ನಂತರ ಇನ್ನೊಂದರಂತೆ ಒಂದುನೂರಾ ಒಂದು ಪೂರ್ಣ ಗರ್ಭಗಳಾದವು. ಅವನು ಆ ಗರ್ಭಪಿಂಡಗಳನ್ನು ಪ್ರತ್ಯೇಕ ಕುಂಡಗಳಲ್ಲಿರಿಸಿ ಅವುಗಳನ್ನು ಗುಪ್ತ ಸ್ಥಳಗಳಲ್ಲಿ ಇಟ್ಟು ಕಾವಲಿರಿಸಿದನು. ಆ ಭಗವಾನನು ಸೌಬಲಿಗೆ ಎಷ್ಟು ಸಮಯದ ನಂತರ ಪುನಃ ಆ ಕುಂಡಗಳನ್ನು ಒಡೆಯ ಬೇಕು ಎನ್ನುವುದನ್ನು ಹೇಳಿ ಕೊಟ್ಟನು. ಈ ರೀತಿ ಸೂಚನೆಗಳನ್ನಿತ್ತು ಧೀಮಾನ್ ಭಗವಾನ್ ವ್ಯಾಸನು ಶಿಲೋಚ್ಚಯ ಹಿಮಾಲಯಕ್ಕೆ ತಪಸ್ಸಿಗೆಂದು ಹೋದನು.

ಕ್ರಮೇಣ ಅವುಗಳಿಂದ ನೃಪ ದುರ್ಯೋಧನನು ಜನಿಸಿದನು. ಆದರೆ ಮೊದಲೇ ಹುಟ್ಟಿದ್ದ ಜ್ಯೇಷ್ಠ ಯುಧಿಷ್ಠಿರನು ರಾಜನಾದನು. ಆ ಪುತ್ರನು ಜನಿಸಿದಾಕ್ಷಣ ಧೃತರಾಷ್ಟ್ರನು ಬಹಳ ವಿಪ್ರರು ಮತ್ತು ಭೀಷ್ಮ ವಿದುರರನ್ನು ಕರೆಯಿಸಿ ಹೇಳಿದನು:

ಕುಲವರ್ಧನ ಯುಧಿಷ್ಠಿರನು ಜ್ಯೇಷ್ಠ ರಾಜಪುತ್ರನು. ತನ್ನ ಗುಣಗಳಿಂದಾಗಿ ಅವನು ರಾಜ್ಯವನ್ನು ಪಡೆದರೆ ಅದರಲ್ಲಿ ನಾವು ಏನನ್ನೂ ಹೇಳುವಂತಿಲ್ಲ. ಆದರೆ ಅವನ ನಂತರ ಇವನು ರಾಜನಾಗುತ್ತಾನಲ್ಲವೇ? ಈ ವಿಷಯದಲ್ಲಿ ನಿಮ್ಮ ಸತ್ಯ ನಿರ್ಧಾರವೇನೆಂಬುದನ್ನು ಹೇಳಿ.

ಈ ಮಾತುಗಳನ್ನಾಡಿ ನಿಲ್ಲಿಸುತ್ತಿದ್ದಂತೆಯೇ ಎಲ್ಲ ದಿಕ್ಕುಗಳಲ್ಲಿಯೂ ಹದ್ದು ತೋಳಗಳ ಅಶುಭ ಘೋರ ಆಕ್ರಂದನಗಳು ಕೇಳಿಬಂದವು. ಎಲ್ಲೆಡೆಯೂ ಕಂಡು ಬರುತ್ತಿರುವ ಆ ಘೋರ ನಿಮಿತ್ತಗಳನ್ನು ವೀಕ್ಷಿಸಿದ ಬ್ರಾಹ್ಮಣರು ಮತ್ತು ಮಹಾಮತಿ ವಿದುರನು ಹೇಳಿದರು:

ನಿನ್ನ ಈ ಮಗನು ಕುಲದ ಅಂತ್ಯಕ್ಕೆ ಕಾರಣವಾಗುತ್ತಾನೆ ಎಂದು ವ್ಯಕ್ತವಾಗುತ್ತಿದೆ. ಅವನನ್ನು ಪರಿತ್ಯಜಿಸುವುದರಲ್ಲಿ ಶಾಂತಿ ಮತ್ತು ಪಾಲಿಸುವುದರಲ್ಲಿ ಮಹಾ ಆಪತ್ತು ಕಂಡುಬರುತ್ತಿದೆ. ತೊಂಬತ್ತೊಂಭತ್ತು ಪುತ್ರರನ್ನು ನಿನ್ನ ಹತ್ತಿರವೇ ಇಟ್ಟುಕೊಂಡು ಕುರು ಕುಲ ಮತ್ತು ಲೋಕಗಳ ಕ್ಷೇಮಾರ್ಥಕ್ಕಾಗಿ ಇದೊಂದು ಕೆಲಸವನ್ನು ಮಾಡು. ಕುಲಕ್ಕಾಗಿ ಒಂದು ಪುತ್ರನನ್ನು ತ್ಯಜಿಸು. ಗ್ರಾಮಕ್ಕಾಗಿ ಒಂದು ಕುಲವನ್ನು ತ್ಯಜಿಸು. ಜನಪದಕ್ಕಾಗಿ ಒಂದು ಗ್ರಾಮವನ್ನು ತ್ಯಜಿಸು. ಮತ್ತು ಆತ್ಮದ ಸಲುವಾಗಿ ಪೃಥ್ವಿಯನ್ನೇ ತ್ಯಜಿಸು.

ಈ ರೀತಿ ವಿದುರ ಮತ್ತು ಸರ್ವ ದ್ವಿಜೋತ್ತಮರೂ ಹೇಳಿದರು. ಆದರೆ ಪುತ್ರಸ್ನೇಹಸಮನ್ವಿತ ರಾಜನು ಏನನ್ನೂ ಮಾಡಲಿಲ್ಲ. ಒಂದು ತಿಂಗಳಿನಲ್ಲಿಯೇ ಧೃತರಾಷ್ಟ್ರನ ಎಲ್ಲ ನೂರು ಪುತ್ರರೂ ಮತ್ತು ನೂರಾ ಒಂದನೆಯ ಕನ್ಯೆಯೂ ಜನಿಸಿದರು.

ಗಾಂಧಾರಿಯ ಹೊಟ್ಟೆಯು ಬೆಳೆಯುತ್ತಿದ್ದು ಕಷ್ಟದಲ್ಲಿದ್ದಾಗ ವೈಶ್ಯೆಯೋರ್ವಳು ಮಹಾಬಾಹು ಧೃತರಾಷ್ಟ್ರನ ಸೇವೆಗೈಯುತ್ತಿದ್ದಳು. ಅದೇ ವರ್ಷದಲ್ಲಿ ಮಹಾಯಶಸ್ವಿ ನೃಪ ಧೃತರಾಷ್ಟ್ರನಿಗೆ ಆ ಕರಣಿಯಲ್ಲಿ ಧೀಮಂತ ಯುಯುತ್ಸುವು ಜನಿಸಿದನು. ಈ ಪ್ರಕಾರ ಧೀಮಂತ ಧೃತರಾಷ್ಟ್ರನಿಗೆ ನೂರು ಮಹಾರಥಿ ವೀರ ಪುತ್ರರು ಮತ್ತು ಓರ್ವ ಕನ್ಯೆ ದುಃಶಲಾ ಜನಿಸಿದರು.

ದುರ್ಯೋಧನಾದಿ ಕೌರವರ ಹೆಸರುಗಳು

. ದುರ್ಯೋಧನ ೨. ಯುಯುತ್ಸು ೩. ದುಃಶಾಸನ ೪. ದುಃಶಲ ೫. ಜಲಸಂಧ ೬. ಸಮ ೭. ಸಹ ೮. ವಿಂದ ೯. ಅನುವಿಂದ ೧೦. ದುರ್ದರ್ಶ ೧೧. ಸುಬಾಹು ೧೨. ದುಷ್ಪ್ರದರ್ಶನ ೧೩. ದುರ್ಮರ್ಶನ ೧೪. ದುರ್ಮುಖ ೧೫. ದುಷ್ಕರ್ಮ ೧೬. ಕರ್ಣ ೧೭. ವಿವಿಂಶತಿ ೧೮. ವಿಕರ್ಣ ೧೯. ಸುಲೋಚನ ೨೦. ಚಿತ್ರ ೨೧. ಉಪಚಿತ್ರ ೨೨. ಚಿತ್ರಾಕ್ಷ ೨೩. ಚಾರುಚಿತ್ರ ೨೪. ಶರಾಸನ ೨೫. ದುರ್ಮದ ೨೬. ದುಷ್ಪ್ರಗಹ ೨೭. ವಿವಿತ್ಸು ೨೮. ವಿಕಟ ೨೯. ಊರ್ಣನಾಭ ೩೦. ಸುನಭ ೩೧. ನಂದ ೩೨. ಉಪನಂದಕ ೩೩. ಸೇನಾಪತಿ ೩೪. ಸುಷೇಣ ೩೫. ಕುಂದೋದರ ೩೬. ಮಹೋದರ ೩೭. ಚಿತ್ರಬಾಣ ೩೮. ಚಿತ್ರವರ್ಮ ೩೯. ಸುವರ್ಮ ೪೦. ದುರ್ವಿಮೋಚನ ೪೧. ಅಯೋಬಾಹು ೪೨. ಮಹಾಬಾಹು ೪೩. ಚಿತ್ರಾಂಗ ೪೪. ಚಿತ್ರಕುಂಡಲ ೪೫. ಭೀಮವೇಗ ೪೬. ಭೀಮಬಲ ೪೭. ಬಲಕಿ ೪೮. ಬಲವರ್ಧನ ೪೯. ಉಗ್ರಾಯುಧ ೫೦. ಭೀಮಕರ್ಮ ೫೧. ಕನಕಾಯು ೫೨. ದೃಢಾಯುಧ ೫೩. ದೃಢವರ್ಮ ೫೪. ದೃಢಕ್ಷತ್ರ ೫೫. ಸೋಮಕೀರ್ತಿ ೫೬. ಅನುದಾರ ೫೭. ದೃಢಸಂಧ ೫೮. ಜರಾಸಂಧ ೫೯. ಸತ್ಯಸಂಧ ೬೦. ಸದಾಃಸುವಕ್ ೬೧. ಉಗ್ರಶ್ರವ ೬೨. ಅಶ್ವಸೇನ ೬೩. ಸೇನಾನಿ ೬೪. ದುಃಷ್ಪರಾಜಯ ೬೫. ಅಪರಾಜಿತ ೬೬. ಪಂದೀತಕ ೬೭. ವಿಶಾಲಾಕ್ಷ ೬೮. ದುರಾವರ ೬೯. ದೃಢಹಸ್ತ ೭೦. ಸುಹಸ್ತ ೭೧. ವಾತವೇಗ ೭೨. ಸುವರ್ಚಸ ೭೩. ಆದಿತ್ಯಕೇತು ೭೪. ಬಹ್ವಾಸಿ ೭೫. ನಾಗದಂತ ೭೬. ಉಗ್ರಯಾಯಿ ೭೭. ಕವಚಿ ೭೮. ನಿಶಾಂಗಿ ೭೯. ಪಾಸಿ ೮೦. ದಂಡಾಧರ ೮೧. ಧನುಗ್ರಹ ೮೨. ಉಗ್ರ ೮೩. ಭೀಮರಥ ೮೪. ವೀರ ೮೫. ವೀರಬಾಹು ೮೬. ಅಲುಲೋಪ ೮೭. ಅಭಯ ೮೮. ರುದ್ರಕರ್ಮ ೮೯. ದೃಢರಥ ೯೦. ಅನಾದೃಷ್ಯ ೯೧. ಕುಂಡಬೇಧಿ ೯೨. ವೀರಾವಿ ೯೩. ದೀರ್ಘಲೋಚನ ೯೪. ದೀರ್ಘಬಾಹು ೯೫. ಮಹಾಬಾಹು ೯೬. ವ್ಯುಧೋರು ೯೭. ಕನಕಧ್ವಜ ೯೮. ಕುಂಡಸಿ ೯೯. ವಿರಾಜ ೧೦೦. ದುಃಶಳ. ಇವೇ ಜನ್ಮಕ್ರಮದಂತೆ ಒಬ್ಬೊಬ್ಬ ಆ ಎಲ್ಲ ಅತಿರಥ ಶೂರ ಯುದ್ಧವಿಶಾರದರ ಹೆಸರುಗಳೆಂದು ತಿಳಿ. ಅವರೆಲ್ಲರೂ ಎಲ್ಲ ಸಂಸರ್ಗ ಮತ್ತು ಜನಶೋಭಿನ ವಿದ್ಯೆಗಳಲ್ಲಿ ಪರಿಣಿತರಿದ್ದು ವೇದವಿದರೂ ರಾಜಶಾಸ್ತ್ರಗಳಲ್ಲಿ ಕೋವಿದರೂ ಆಗಿದ್ದರು. ಧೃತರಾಷ್ಟ್ರನು ಅವರೆಲ್ಲರಿಗೂ ಸರಿ ಸಮಯಗಳಲ್ಲಿ ಅನುರೂಪ ಪತ್ನಿಯರನ್ನು ಹುಡುಕಿ ವಿಧಿವತ್ತಾಗಿ ವಿವಾಹಗಳನ್ನು ನೆರವೇರಿಸಿದನು. ಸರಿ ಸಮಯದಲ್ಲಿ ರಾಜನು ಸೌಬಲೆಯ ಅನುಮತಿಯಂತೆ ದುಃಶಲೆಯನ್ನು ಸಿಂಧುರಾಜ ಜಯದ್ರಥನಿಗೆ ವಿವಾಹ ಮಾಡಿ ಕೊಟ್ಟನು.

ಪಾಂಡು ಮೃಗಶಾಪ

ಒಮ್ಮೆ ರಾಜ ಪಾಂಡುವು ಜಿಂಕೆ ಮತ್ತು ಕ್ರೂರ ಮೃಗಗಳಿಂದೊಡಗೂಡಿದ ಮಹಾರಣ್ಯದಲ್ಲಿ ಸಂಭೋಗ ನಿರತ ಜಿಂಕೆಯ ಜೋಡಿಯನ್ನು ಕಂಡನು. ಆಗ ಪಾಂಡುವು ಗಂಡು ಮತ್ತು ಹೆಣ್ಣುಜಿಂಕೆಗಳೆರಡನ್ನೂ ಅತಿವೇಗದಲ್ಲಿ ಚಲಿಸುತ್ತಿದ್ದ, ಬಂಗಾರದ ಬಣ್ಣದ, ಐದು ಸುಂದರ ತೀಕ್ಷ್ಣಬಾಣಗಳಿಂದ ಹೊಡೆದನು. ಅವನು ತಪೋಧನ ಋಷಿಯೋರ್ವನ ಪುತ್ರನಾಗಿದ್ದು ಮಹಾತೇಜಸ್ವಿಯಾಗಿದ್ದನು. ಆ ತೇಜಸ್ವಿಯು ಜಿಂಕೆಯ ರೂಪದಲ್ಲಿ ತನ್ನ ಪತ್ನಿಯೊಡನೆ ಕೂಡುತ್ತಿದ್ದನು. ಹೆಣ್ಣು ಜಿಂಕೆಯೊಡನೆ ಕೂಡಿಕೊಂಡಿದ್ದ ಅವನು ತಕ್ಷಣವೇ ಭೂಮಿಯ ಮೇಲೆ ಬಿದ್ದು ಶಕ್ತಿಯು ಕ್ಷೀಣಿಸುತ್ತಿದ್ದಂತೆಯೇ ಮಾನವ ಧ್ವನಿಯಲ್ಲಿ ವಿಲಪಿಸಿದನು:

ಪಾಪದಲ್ಲಿಯೇ ರುಚಿಹೊಂದಿದ ನರರು ಬುದ್ಧಿರಹಿತರಾದರೂ ಕೂಡ ಕಾಮ-ಕ್ರೋಧಗಳಿಂದ ಆವೃತರಾದವರನ್ನು ಕೊಲ್ಲುವುದಿಲ್ಲ. ಪ್ರಜ್ಞೆಯು ವಿಧಿಯನ್ನು ಹಿಡಿತದಲ್ಲಿಟ್ಟುಕೊಳ್ಳುವುದಿಲ್ಲ. ವಿಧಿಯೇ ಪ್ರಜ್ಞೆಯನ್ನು ಹಿಡಿತದಲ್ಲಿಟ್ಟುಕೊಂಡಿರುತ್ತದೆ. ವಿಧಿ ನಿಶೇಧಿಸಿದ ಏನನ್ನೂ ಪ್ರಜ್ಞೆಯು ಪಡೆಯಲು ಸಾಧ್ಯವಿಲ್ಲ. ನೀನು ಸದ್ಧರ್ಮಾತ್ಮರ ಮುಖ್ಯ ಕುಲದಲ್ಲಿ ಜನಿಸಿದರೂ ಕೂಡ ಹೇಗೆ ನಿನ್ನ ಬುದ್ಧಿಯನ್ನು ಕಾಮಲೋಭದಲ್ಲಿ ತೊಡಗಿಸಿದೆ?

ಆಗ ಪಾಂಡುವು ಹೇಳಿದನು:

ಶತ್ರುಗಳನ್ನು ವಧಿಸುವಂತೆ ಮೃಗಗಳನ್ನೂ ವಧಿಸುವುದು ರಾಜ ಪ್ರವೃತ್ತಿಯೆಂದೇ ಹೇಳುತ್ತಾರೆ. ಜಿಂಕೆಯೇ! ಮೋಹದಲ್ಲಿದ್ದ ನೀನು ನನ್ನನ್ನು ದೂರುವುದು ಸರಿಯಲ್ಲ. ಮರೆಯಲ್ಲಿದ್ದುಕೊಂಡು ಅಥವಾ ಮಾಯೆಯಿಂದ ಮೃಗಗಳನ್ನು ಕೊಲ್ಲಬಾರದು ಎನ್ನುವುದು ರಾಜರ ಧರ್ಮ. ಇದು ನಿನಗೆ ತಿಳಿದಿದೆ. ಆದರೂ ನನ್ನನ್ನು ಏಕೆ ದೂರುತ್ತಿರುವೆ? ಸತ್ರನಿರತ ಋಷಿ ಅಗಸ್ತ್ಯನು ಬೇಟೆಯಾಡಲು ಅರಣ್ಯಕ್ಕೆ ಹೋದನು. ಆ ಮಹಾವನದಲ್ಲಿ ಅವನು ದೇವತೆಗಳಿಗಾಗಿ ಎಲ್ಲೆಡೆಯಲ್ಲಿಯೂ ಜಿಂಕೆಗಳ ಪ್ರೋಕ್ಷಣೆಯನ್ನೇ ಮಾಡಿದನು. ಪ್ರಮಾಣದೃಷ್ಟಧರ್ಮದ ಪ್ರಕಾರ ನನ್ನನ್ನು ಹೇಗೆ ದೂರುತ್ತೀಯೆ? ಅಗಸ್ತ್ಯನ ಅಭಿಚಾರಣೆಯಿಂದ ನೀವೆಲ್ಲರೂ ಈಗಾಗಲೇ ಆಹುತಿಗಳಾಗಿಬಿಟ್ಟಿದ್ದೀರಿ.

ಮೃಗವು ಹೇಳಿತು:

ಬಾಣಗಳನ್ನು ಬಿಡುವುದರ ಮೊದಲು ನಿನ್ನ ಶತ್ರುವಿನ ಕುರಿತು ಸ್ವಲ್ಪ ಯೋಚಿಸಬೇಕಿತ್ತು. ಅವರ ಶಕ್ತಿ ಕ್ಷೀಣಿಸುತ್ತಿರುವಾಗ ಕೊಲ್ಲುವುದು ವಿಶೇಷ ಕಾಲವೆಂದು ಹೇಳುತ್ತಾರೆ.

ಪಾಂಡುವು ಹೇಳಿದನು:

ಪ್ರಮತ್ತನಾಗಿರಲಿ ಅಥವಾ ಅಪ್ರಮತ್ತನಾಗಿರಲಿ, ಹೊರಗೆ ಕಂಡಾಗ ಅವನನ್ನು ಬಲ-ಉಪಾಯಗಳೊಂದಿಗೆ ತೀಕ್ಷ್ಣ ಬಾಣಗಳಿಂದ ಕೊಲ್ಲುತ್ತಾರೆ. ಜಿಂಕೆಯೇ! ಹೀಗಿದ್ದಾಗ ನನ್ನನ್ನೇಕೆ ದೂರುತ್ತಿದ್ದೀಯೆ?

ಮೃಗವು ಹೇಳಿತು:

ರಾಜನ್! ನೀನು ಮೃಗವನ್ನು ಕೊಂದದ್ದಕ್ಕೆ ನನ್ನನ್ನೇ ಕಾರಣವನಾಗಿಟ್ಟುಕೊಂಡು ದೂರುತ್ತಿಲ್ಲ. ಸಂಭೋಗದಲ್ಲಿ ತೊಡಗಿದ್ದ ನಾನು ಮುಗಿಸುವವರೆಗೆ ಕಾದು ನಂತರ ಹೊಡೆಯಬಹುದಿತ್ತಲ್ಲ! ಸರ್ವ ಜೀವಿಗಳಿಗೂ ಹಿತಕರವಾದ ಮತ್ತು ಸರ್ವ ಜೀವಿಗಳೂ ಬಯಸುವ ಮೈಥುನ ಕಾಲದಲ್ಲಿರುವ ವನ್ಯ ಮೃಗಗಳನ್ನು ತಿಳಿದ ಯಾರು ತಾನೆ ಕೊಂದಾರು? ಅಕ್ಲಿಷ್ಟಕರ್ಮಿ ಋಷಿ ಪೌರವರ ವಂಶದಲ್ಲಿ ಹುಟ್ಟಿದ ಕೌರವ್ಯ! ಓರ್ವನು ಬಯಸಿದ ಪುರುಷಾರ್ಥಫಲವು ದೊರೆಯದಂತೆ ಮಾಡಿದ ನಿನ್ನ ಈ ಕೃತ್ಯವು ನಿನಗೆ ಅನುರೂಪವಲ್ಲ. ಈ ಅಸ್ವರ್ಗ್ಯ, ಅಯಶಸ್ವಿ, ಅಧರ್ಮಿಷ್ಠ ಕ್ರೂರ ಕರ್ಮವನ್ನು ಸರ್ವಲೋಕವೂ ಅಲ್ಲಗಳೆಯುತ್ತದೆ. ಸ್ತ್ರೀಭೋಗಗಳ ಕುರಿತು ವಿಶೇಷವಾಗಿ ತಿಳಿದ, ಶಾಸ್ತ್ರ-ಧರ್ಮಾರ್ಥಗಳ ತತ್ವಗಳನ್ನು ತಿಳಿದ, ಸುರಸಂಕಾಶ ನೀನು ಈ ರೀತಿ ಅಸ್ವರ್ಗ್ಯ ಕೃತ್ಯವನ್ನು ಮಾಡಬಾರದಾಗಿತ್ತು. ನೀನೇ ಕ್ರೂರಕರ್ಮಿ, ಪಾಪಾಚಾರಿ ಮತ್ತು ತ್ರಿವರ್ಗಪರಿವರ್ಜಿತ ಮನುಷ್ಯರನ್ನು ನಿಗ್ರಹಿಸುವವನು. ಗಡ್ಡೆ-ಫಲಗಳನ್ನು ತಿಂದು ನಿತ್ಯವೂ ಶಮಪರಾಯಣನಾಗಿ ಅರಣ್ಯದಲ್ಲಿ ವಾಸಿಸುವ, ಮೃಗವೇಷಧರ, ಅನಾಗಸ ಮುನಿ ನನ್ನನ್ನು ಕೊಂದು ನಿನಗೆ ಏನು ದೊರೆಯಿತು? ಮೋಹಪರವಶರಾದ ಈ ನಮ್ಮ ಜೋಡಿಯನ್ನು ಹೇಗೆ ಹಿಂಸಿಸಿದ್ದೀಯೋ ಹಾಗೆ ನೀನೂ ಕೂಡ ಕಾಮ ಮೋಹಿತನಾದಾಗ ನಿನ್ನ ಜೀವವು ಕೊನೆಗೊಳ್ಳುತ್ತದೆ. ನಿಸ್ಸಂಶಯವಾಗಿಯೂ ಹೀಗೆಯೇ ಆಗುತ್ತದೆ. ನಾನು ಕಿಂದಮ ಎಂಬ ಹೆಸರಿನ ಅಪ್ರತಿಮ ತಪಸ್ವಿ ಮುನಿ. ಮನುಷ್ಯರಿಂದ ನಾಚಿಕೊಂಡು ನಾನು ಮೃಗರೂಪದಲ್ಲಿ ಮೈಥುನದಲ್ಲಿ ತೊಡಗಿದ್ದೆ. ಜಿಂಕೆಯಾಗಿ ಜಿಂಕೆಯೊಡನೆ ಈ ದಟ್ಟ ವನದಲ್ಲಿ ಸಂಚರಿಸುತ್ತೇನೆ. ಜಿಂಕೆಯ ರೂಪವನ್ನು ಧರಿಸಿ ಕಾಮಮೋಹಿತನಾದ ನನ್ನನ್ನು ತಿಳಿಯದೆಯೇ ನೀನು ಕೊಂದಿದ್ದುದರಿಂದ ನಿನಗೆ ಬ್ರಹ್ಮಹತ್ಯಾ ದೋಷವು ತಗಲುವುದಿಲ್ಲ. ಆದರೆ ನೀನೂ ಕೂಡ ಇದೇ ಫಲವನ್ನು ಪಡೆಯುತ್ತೀಯೆ. ಕಾಮವಿಮೋಹಿತನಾಗಿ ಪ್ರಿಯೆಯ ಜೊತೆ ಸಂಭೋಗ ಮಾಡುವಾಗ ನೀನೂ ಕೂಡ ಇದೇ ಅವಸ್ಥೆಯಲ್ಲಿ ಪ್ರೇತಲೋಕವನ್ನು ಸೇರುತ್ತೀಯೆ. ಅಂತ್ಯಕಾಲದಲ್ಲಿ ಯಾವ ಕಾಂತೆಯೊಡನೆ ಸಂಭೋಗದಲ್ಲಿ ತೊಡಗಿರುತ್ತೀಯೋ ಅವಳೂ ಕೂಡ ನಿನ್ನ ಮೇಲಿನ ಭಕ್ತಿಯಿಂದಾಗಿ ನಿನ್ನನ್ನೇ ಅನುಸರಿಸಿ ಸರ್ವಭೂತ ದುರತ ಪ್ರೇತರಾಜನ ವಶವನ್ನು ಹೊಂದುತ್ತಾಳೆ. ಸುಖವನ್ನು ಅನುಭವಿಸುತ್ತಿರುವಾಗ ನಿನ್ನಿಂದ ಹೇಗೆ ದುಃಖವನ್ನು ಹೊಂದಿದೆನೋ ಅದೇ ರೀತಿ ನೀನು ಸುಖವನ್ನು ಹೊಂದಿದಾಗ ಇದೇ ದುಃಖವು ನಿನಗೂ ದೊರೆಯುತ್ತದೆ.

ದುಃಖಾರ್ತನಾಗಿ ಹೀಗೆ ಹೇಳಿದ ಆ ಮೃಗವು ತನ್ನ ಜೀವವನ್ನು ತ್ಯಜಿಸಿತು. ಪಾಂಡುವಾದರೂ ಶೋಕಾರ್ತನಾಗಿ ಒಂದು ಕ್ಷಣ ಹಾಗೆಯೇ ನಿಂತುಕೊಂಡನು.

ಪಾಂಡುವು ರಾಜ್ಯವನ್ನು ತ್ಯಜಿಸಿದುದು

ತಮ್ಮ ಬಾಂಧವನ ಸಾವೋ ಎನ್ನುವಂಥ ಆ ಜಿಂಕೆಯ ಸಾವಿನಿಂದ ಶೋಕಾರ್ತ ರಾಜ ಮತ್ತು ಅವನ ಪತ್ನಿಯರು ರೋದಿಸಿದರು. ಪಾಂಡುವು ಹೇಳಿದನು:

ಸತ್ಯವಂತರ ಕುಲದಲ್ಲಿ ಹುಟ್ಟಿದವರೂ ಕೂಡ ಕಾಮಜಾಲವಿಮೋಹಿತರಾಗಿ ದುರ್ಗತಿಯನ್ನು ತರುವಂಥಹ ಕೃತ್ಯಗಳನ್ನು ಮಾಡಿ ತಮ್ಮ ಅಂತ್ಯವನ್ನು ತಾವೇ ತಂದುಕೊಳ್ಳುತ್ತಾರೆ. ಹುಟ್ಟಿನಿಂದ ಸದಾ ಧರ್ಮಾತ್ಮನಾಗಿದ್ದ ನನ್ನ ತಂದೆಯು ಕಾಮಾತ್ಮನಾಗಿದ್ದುದರಿಂದಲೇ ಬಾಲ್ಯದಲ್ಲಿಯೇ ಜೀವಿತಾಂತವನ್ನು ಪಡೆದನು ಎಂದು ಕೇಳಿದ್ದೇನೆ. ಆ ಕಾಮಾತ್ಮ ರಾಜನ ಕ್ಷೇತ್ರದಲ್ಲಿಯೇ ಸತ್ಯವಾಗ್ಮಿ ಸಾಕ್ಷಾತ್ ಭಗವಾನ್ ಋಷಿ ಕೃಷ್ಣದ್ವೈಪಾಯನನು ನನ್ನನ್ನು ಹುಟ್ಟಿಸಿದನು. ಅಂಥಹ ಜನ್ಮವನ್ನು ಪಡೆದವನಾಗಿದ್ದರೂ ನಾನು ಇಂದು ಬುದ್ಧಿವ್ಯಸನಗೊಂಡು ಅಧಮನಾಗಿ ದೇವತ್ವವನ್ನು ತ್ಯಜಿಸಿ ದುರಾತ್ಮನಾಗಿ ಬೇಟೆಯಲ್ಲಿ ತೊಡಗಿದ್ದೇನೆ. ನನ್ನ ಆ ಅವ್ಯಯ ತಂದೆಯಂತೆ ನಾನೂ ಕೂಡ ಬಂಧನವೇ ಮಹಾ ವ್ಯಸನವೆಂದು ತಿಳಿದು ಮೋಕ್ಷವನ್ನು ಅರಸುತ್ತೇನೆ. ಸುವೃತ್ತಿಯನ್ನೇ ಅನುಸರಿಸುತ್ತೇನೆ. ನನ್ನನ್ನು ನಾನು ಅತೀವ ತಪಸ್ಸಿನಲ್ಲಿ ಒಳಗೂಡಿಸಿಕೊಂಡು ನಿಸ್ಸಂಶಯವಾಗಿಯೂ ನನ್ನನ್ನು ತ್ಯಜಿಸುತ್ತೇನೆ. ನಾನು ಈ ಭೂಮಿಯಲ್ಲಿ ಏಕಾಂಗಿಯಾಗಿ, ಒಂದೊಂದು ದಿನವೂ ಒಂದೊಂದು ಮರದಡಿಯಲ್ಲಿ, ಮುನಿಗಳಂತೆ ಮುಂಡನ ಮಾಡಿಕೊಂಡು, ಭಿಕ್ಷೆ ಬೇಡುತ್ತಾ ಅಲೆಯುತ್ತೇನೆ. ಧೂಳಿನಿಂದ ತುಂಬಿಕೊಂಡು, ಯಾರೂ ವಾಸಿಸದಿದ್ದ ಮನೆಗಳಲ್ಲಿ ಅಥವಾ ಮರದಡಿಯನ್ನೇ ಹಾಸಿಗೆಯನ್ನಾಗಿ ಮಾಡಿ ವಾಸಿಸುತ್ತೇನೆ. ಪ್ರಿಯ-ಅಪ್ರಿಯವಾದುದೆಲ್ಲವನ್ನೂ ತ್ಯಜಿಸುತ್ತೇನೆ. ಶೋಚಿಸುವುದೂ ಇಲ್ಲ, ಸಂತೋಷಪಡುವುದೂ ಇಲ್ಲ. ನಿಂದೆ ಮತ್ತು ಆತ್ಮಸಂಸ್ತುತಿಗಳೆರಡನ್ನೂ ಒಂದೇ ಸಮಾನವಾಗಿ ಕಾಣುತ್ತೇನೆ. ಯಾರಿಗೂ ಆಶೀರ್ವದಿಸುವುದಿಲ್ಲ, ಯಾರಿಗೂ ನಮಸ್ಕರಿಸುವುದಿಲ್ಲ. ನನಗೆ ಯಾವ ಆಯ್ಕೆಗಳನ್ನೂ ಇಟ್ಟುಕೊಳ್ಳುವುದಿಲ್ಲ, ನನ್ನದೆನ್ನುವುದು ಯಾವುದೂ ಇರುವುದಿಲ್ಲ. ನಾನು ಯಾರನ್ನೂ ಕೀಳುಭಾವದಿಂದ ನೋಡುವುದಿಲ್ಲ, ಮತ್ತು ಯಾರ ಮೇಲೂ ಸಿಟ್ಟಾಗುವುದಿಲ್ಲ. ಸರ್ವಭೂತ ಹಿತದಲ್ಲಿ ನಿರತನಾಗಿ ನಿತ್ಯವೂ ಪ್ರಸನ್ನವದನನಾಗಿರುತ್ತೇನೆ. ಚಲಿಸುವ ಮತ್ತು ಚಲಿಸದೇ ಇರುವ ನಾಲ್ಕೂ ಪ್ರಕಾರದ ಭೂತಗಳ್ಯಾವುವನ್ನೂ ಕಡೆಗಾಣಿಸದೇ, ಉಸಿರಾಡುವ ಎಲ್ಲ ಜೀವಿಗಳೂ ನನ್ನದೇ ಮಕ್ಕಳೆಂದು ತಿಳಿದು ಸಮನಾಗಿ ಕಾಣುತ್ತೇನೆ. ನಾನು ಒಮ್ಮೆ ಏಳೇ ಏಳು ಕುಟುಂಬಗಳಿಗೆ ಭಿಕ್ಷೆಗೆಂದು ಹೋಗುತ್ತೇನೆ. ಅಲ್ಲಿ ಭಿಕ್ಷೆ ದೊರಕದಿದ್ದರೂ, ಅಥವಾ ನನಗೆ ಹಸಿವೆಯಾಗಿದ್ದರೂ ಹೆಚ್ಚಿನ ಮನೆಗಳಿಗೆ ಹೋಗುವುದಿಲ್ಲ. ಸ್ವಲ್ಪವಾದರೂ ಸರಿ, ಮೊದಲ ಬಾರಿ ಅವರು ಎಷ್ಟು ಕೊಡುತ್ತಾರೋ ಅಷ್ಟನ್ನೇ ಸ್ವೀಕರಿಸುತ್ತೇನೆ. ಪ್ರತಿನಿತ್ಯವೂ ಭಿಕ್ಷೆ ಸಿಕ್ಕಿದರೂ ಸಿಕ್ಕದಿದ್ದರೂ ಏಳು ಮನೆಗಳಿಗಿಂಥ ಹೆಚ್ಚು ಮನೆಗಳಿಂದ ಭಿಕ್ಷೆ ಬೇಡುವುದಿಲ್ಲ. ಒಬ್ಬನು ನನ್ನ ಭುಜವನ್ನು ಖಡ್ಗದಿಂದ ಕತ್ತರಿಸಿದರೆ ಮತ್ತು ಇನ್ನೊಬ್ಬನು ನನ್ನ ಭುಜಕ್ಕೆ ಚಂದನವನ್ನು ಲೇಪಿಸಿದರೆ, ಅವರಿಬ್ಬರಲ್ಲಿ ಯಾರನ್ನೂ ನಾನು ಒಳ್ಳೆಯವನು ಅಥವಾ ಕೆಟ್ಟವನೆಂದು ಪರಿಗಣಿಸುವುದಿಲ್ಲ. ನಾನು ಜೀವಂತವಾಗಿರುವುದಕ್ಕಾಗಲೀ ಅಥವಾ ಸಾಯುವುದಕ್ಕಾಗಲೀ ಏನನ್ನೂ ಮಾಡುವುದಿಲ್ಲ. ಹಾಗೆಯೇ ಮರಣವಾಗಲೀ ಜೀವನವಾಗಲೀ ಯಾವುದನ್ನೂ ದೂರವಿಡುವುದಿಲ್ಲ ಅಥವಾ ಬರಮಾಡಿಕೊಳ್ಳುವುದಿಲ್ಲ. ಜೀವಿಸಿರುವವರು ತಮ್ಮ ಅಭ್ಯುದಯಕ್ಕಾಗಿ ಮಾಡುವ ಎಲ್ಲ ಕರ್ಮಗಳನ್ನೂ ದಾಟಿ ಪ್ರತಿ ಕ್ಷಣಗಳಲ್ಲಿಯೂ ನಿಲ್ಲುತ್ತೇನೆ. ಆ ಎಲ್ಲ ಅವಸ್ಥೆಗಳಲ್ಲಿಯೂ ಸರ್ವ ಇಂದ್ರಿಯಕ್ರಿಯೆಗಳನ್ನು ಪರಿತ್ಯಜಿಸುತ್ತೇನೆ. ಎಲ್ಲವನ್ನು ಪರಿತ್ಯಜಿಸಿ ಧರ್ಮಾತ್ಮನಾಗಿ ಆತ್ಮ ಕಲ್ಮಶವನ್ನು ತೊಳೆದುಕೊಳ್ಳುತ್ತೇನೆ. ಸರ್ವ ಪಾಪ ನಿರ್ಮುಕ್ತನಾಗಿ ಸರ್ವ ಅನುರಾಗ ವ್ಯತೀತನಾಗಿ, ಯಾವುದರ ವಶಕ್ಕೂ ಸಿಗದವನಾಗಿ, ಎಲ್ಲಿಯೂ ನಿಲ್ಲದವನಾಗಿ, ಗಾಳಿಯ ಧರ್ಮವನ್ನೇ ನನ್ನ ಧರ್ಮವನ್ನಾಗಿಸುತ್ತೇನೆ. ಈ ರೀತಿ ಸತತವಾಗಿ ವರ್ತಿಸುತ್ತಾ ಇದೇ ಪ್ರಕಾರದಲ್ಲಿ ನಡೆದುಕೊಂಡು ನಿರ್ಭಯ ಮಾರ್ಗದಲ್ಲಿದ್ದು ದೇಹವನ್ನು ಧರಿಸಿಕೊಂಡಿರುತ್ತೇನೆ. ವೀರ್ಯವನ್ನು ಕಳೆದುಕೊಂಡ ನಾನು ವೀರ್ಯವರ್ಜಿತನಾಗಿ, ಸ್ವಧರ್ಮದಿಂದ ಯಾವಾಗಲೂ ಕಾಡಲ್ಪಟ್ಟು ಕಾಮ ಸುಖವನ್ನು ಹೊಂದುವ ನಾಯಿಯ ಮಾರ್ಗದಲ್ಲಿ ಚಲಿಸುವುದಿಲ್ಲ. ಸತ್ಕೃತನಾಗಿರಲಿ ಅಥವಾ ಅಸತ್ಕೃತನಾಗಿರಲಿ, ಹಸಿವಿನ ಕಣ್ಣುಗಳಿಂದ ಬೇರೆ ದಾರಿಯನ್ನು ಯಾರು ಅನುಸರಿಸುತ್ತಾನೋ ಆ ಕಾಮಾತ್ಮನು ನಾಯಿಗಳು ನಡೆದುಹೋಗುವ ಮಾರ್ಗದಲ್ಲಿ ನಡೆದಂತಾಗುತ್ತದೆ.

ದುಃಖಾರ್ತನಾಗಿ ಹೀಗೆ ಹೇಳಿದ ನೃಪನು ನಿಟ್ಟುಸಿರು ಬಿಡುತ್ತಾ ಕುಂತಿ ಮತ್ತು ಮಾದ್ರಿಯರನ್ನು ನೋಡಿ ಹೇಳಿದನು:

ಕೌಸಲ್ಯೆ, ಕ್ಷತ್ತ ವಿದುರ, ರಾಜ ಮತ್ತು ಎಲ್ಲ ಬಂಧುಗಳಿಗೂ, ಆರ್ಯಾ ಸತ್ಯವತೀ, ಭೀಷ್ಮ, ಮತ್ತು ರಾಜ ಪುರೋಹಿತರಿಗೂ, ಮಹಾತ್ಮ, ಸೋಮರಸ ಸೇವಿಸಿದ, ಸಂಶಿತವ್ರತ ಬ್ರಾಹ್ಮಣರಿಗೂ, ನಮ್ಮ ಆಶ್ರಯದಲ್ಲಿ ವಾಸಿಸುತ್ತಿರುವ ಪೌರವೃದ್ಧರಿಗೂ, ಎಲ್ಲರಿಗೂ ಪಾಂಡುವು ವನವನ್ನು ಸೇರಿದನು ಎಂದು ತಿಳಿಸಿ ಹೇಳಿ.

ವನವಾಸದಲ್ಲಿ ಧೃಢಮನಸ್ಸನ್ನಿಟ್ಟಿದ್ದ ಪತಿಯ ಈ ಮಾತುಗಳನ್ನು ಕೇಳಿದ ಕುಂತಿ ಮತ್ತು ಮಾದ್ರಿ ಈರ್ವರೂ ಒಂದೇ ಉತ್ತರವನ್ನಿತ್ತರು:

ಭರತರ್ಷಭ! ನಿನ್ನ ಧರ್ಮಪತ್ನಿಯರಾದ ನಮ್ಮಿಬ್ಬರ ಜೊತೆಗೂಡಿ ಇದನ್ನು ಶಕ್ಯಮಾಡಿಸಿಕೊಡುವಂಥ ಇನ್ನೂ ಬೇರೆ ಆಶ್ರಮಗಳು ಇವೆ. ಇದರಿಂದಲೂ ನೀನು ಮಹಾ ತಪಸ್ಸನ್ನು ಮಾಡಿ ನಿಸ್ಸಂಶಯವಾಗಿಯೂ ಸ್ವರ್ಗವನ್ನು ಪಡೆಯಲು ಸಾರ್ಥಕನಾಗುತ್ತೀಯೆ. ನಮ್ಮ ಎಲ್ಲ ಇಂದ್ರಿಯಗಳನ್ನೂ ಹಿಡಿತದಲ್ಲಿಟ್ಟುಕೊಂಡು, ಪತಿಯ ಲೋಕದಲ್ಲಿಯೇ ಪರಾಯಣರಾಗಿರುತ್ತೇವೆ. ಕಾಮ ಸುಖವನ್ನು ತ್ಯಜಿಸಿ ನಾವೂ ಕೂಡ ಕಠಿಣ ತಪಸ್ಸನ್ನು ಕೈಕೊಳ್ಳುತ್ತೇವೆ. ನೀನು ನಮ್ಮನ್ನು ತ್ಯಜಿಸಿದರೆ ನಾವು ಇಂದೇ ನಮ್ಮ ಜೀವನವನ್ನು ಕೊನೆಗೊಳಿಸುತ್ತೇವೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

ಪಾಂಡುವು ಹೇಳಿದನು:

ಧರ್ಮಸಂಹಿತಗಳಲ್ಲಿ ಹೇಳಿದಂತೆ ನೀವು ಇದರಲ್ಲಿಯೇ ಹಠವನ್ನಿಟ್ಟಿದ್ದರೆ, ನನ್ನ ತಂದೆಯ ಅವ್ಯಯ ನಡತೆಯನ್ನೇ ನನ್ನದಾಗಿಸಿಕೊಂಡು ಅನುಸರಿಸುತ್ತೇನೆ. ಗ್ರಾಮದ ಸುಖಾಚಾರಗಳನ್ನು ತ್ಯಜಿಸಿ, ಮಹಾ ತಪಸ್ಸನ್ನು ತಪಿಸುತ್ತೇನೆ; ವಲ್ಕಲವನ್ನು ಧರಿಸಿ, ಫಲಮೂಲಗಳನ್ನು ತಿಂದು ಮಹಾವನದಲ್ಲಿ ಸಂಚರಿಸುತ್ತೇನೆ. ಬೆಳಿಗ್ಗೆ-ಸಾಯಂಕಾಲ ಎರಡೂ ಹೊತ್ತು ಅಗ್ನಿಯಲ್ಲಿ ಆಹುತಿ ನೀಡುತ್ತೇನೆ; ಕೃಶನಾಗಿದ್ದು, ಮಿತ ಆಹಾರವನ್ನು ಸೇವಿಸಿಕೊಂಡು, ಚರ್ಮವನ್ನು ಧರಿಸಿ, ಜಟಾಧರನಾಗಿ ಇರುತ್ತೇನೆ. ಛಳಿ, ಗಾಳಿ, ಬಿಸಿಗಳನ್ನು ಸಹಿಸಿಕೊಂಡು, ಹಸಿವು, ಬಾಯಾರಿಕೆ, ಮತ್ತು ಆಯಾಸಗಳನ್ನು ಪರಿಗಣಿಸದೇ, ದುಷ್ಕರ ತಪಸ್ಸನ್ನು ಮಾಡಿ ಈ ಶರೀರವನ್ನು ಶೋಷಿಸುತ್ತೇನೆ; ಏಕಾಂತಶೀಲನಾಗಿ, ಹಣ್ಣು ಮತ್ತು ಕಾಯಿಗಳನ್ನು ಸೇವಿಸುತ್ತಾ, ಪಿತೃಗಳಿಗೆ, ದೇವತೆಗಳಿಗೆ, ವನದಲ್ಲಿರುವವುಗಳಿಗೆ, ಶಬ್ಧಗಳಿಗೆ ಮತ್ತು ನೀರಿಗೆ ತರ್ಪಣೆಗಳನ್ನು ನೀಡುತ್ತೇನೆ. ವಾನಪ್ರಸ್ಥ ಸ್ವೀಕರಿಸಿದ ಜನರ ದರ್ಶನವು ಕುಲವಾಸಿಗಳ್ಯಾರನ್ನೂ ದುಃಖಕ್ಕೊಳಮಾಡುವುದಿಲ್ಲ. ಇನ್ನು ಗ್ರಾಮವಾಸಿಗಳು ಹೇಗೆ ದುಃಖಕ್ಕೊಳಗಾಗುತ್ತಾರೆ? ಈ ರೀತಿ ನಾನು ಅರಣ್ಯಶಾಸ್ತ್ರದಲ್ಲಿ ಹೇಳಿದಂಥ ಉಗ್ರಾನುಗ್ರತರ ವಿಧಿಗಳನ್ನು ಸ್ವೀಕರಿಸಿ, ಅವುಗಳಿಂದ ನನ್ನ ಈ ದೇಹವನ್ನು ಕೊನೆಗೊಳ್ಳಿಸುವುದನ್ನು ಆಕಾಂಕ್ಷಿಸುತ್ತಿದ್ದೇನೆ.

ಈ ರೀತಿ ತನ್ನ ಬಾರ್ಯೆಯರಿಗೆ ಹೇಳಿದ ಆ ಕೌರವ ವಂಶಜ ರಾಜನು ತನ್ನ ಚೂಡಾಮಣಿ, ಅಂಗದ, ಕುಂಡಲ, ಬೆಲೆಬಾಳುವ ವಸ್ತ್ರ, ಮತ್ತು ಸ್ತ್ರೀಯರ ಆಭರಣಗಳನ್ನು ತೆಗೆದಿಟ್ಟನು. ಎಲ್ಲವನ್ನು ವಿಪ್ರರಿಗಿತ್ತು ಪಾಂಡುವು ಹೇಳಿದನು:

ನಾಗಪುರಕ್ಕೆ ಹೋಗಿ ಪಾಂಡುವು ವನವನ್ನು ಸೇರಿದನು ಎಂದು ಹೇಳಿ. ಅರ್ಥ, ಕಾಮ, ಮತ್ತು ರತಿಸುಖವನ್ನು ತ್ಯಜಿಸಿ ಎಲ್ಲವನ್ನೂ ಬಿಟ್ಟು ತನ್ನ ಪತ್ನಿಯರೊಂದಿಗೆ ಕುರುಪುಂಗವನು ವನವನ್ನು ಸೇರಿದನೆಂದು ಹೇಳಿ.

ಆ ಭರತಸಿಂಹನ ಅನುಯಾತ್ರಿ ಮತ್ತು ಪರಿಚಾರಕರು ಈ ಮಾತುಗಳನ್ನು ಕೇಳಿ ಬೇರೆ ಬೇರೆ ಕರುಣಾಜನಕ ಮಾತುಗಳಿಂದ ಘೋರ ಆರ್ತಸ್ವರಗಳಲ್ಲಿ “ಹಾ! ಹಾ!” ಎಂದು ರೋದಿಸಿದರು. ಬಿಸಿ ಕಣ್ಣೀರು ಸುರಿಸುತ್ತಾ, ಆ ಮಹೀಪತಿಯನ್ನು ಬೀಳ್ಕೊಂಡು, ಆದಷ್ಟು ಬೇಗನೇ ನಾಗಪುರಕ್ಕೆ ಅವನ ಸಂದೇಶವನ್ನು ಕೊಂಡೊಯ್ದರು. ಮಹಾವನದಲ್ಲಿ ನಡೆದುದೆಲ್ಲವನ್ನೂ ಯಥಾವತ್ತಾಗಿ ಕೇಳಿದ ನರಶ್ರೇಷ್ಠ ಧೃತರಾಷ್ಟ್ರನು ಪಾಂಡುವನ್ನು ಕುರಿತು ಶೋಚಿಸಿದನು.

ಕೌರವ ರಾಜಪುತ್ರ ಪಾಂಡುವಾದರೋ ಫಲಮೂಲಗಳನ್ನು ಸೇವಿಸುತ್ತಾ ತನ್ನ ಭಾರ್ಯೆಯರನ್ನೊಡಗೂಡಿ ನಾಗಸಭಗಿರಿಗೆ ಹೋದನು. ಅವನು ಚೈತ್ರರಥವನ್ನು ಸೇರಿ, ವಾರಿಶೇಣಿಯನ್ನು ದಾಟಿ, ಹಿಮಾಲಯವನ್ನೂ ದಾಟಿ, ಗಂಧಮಾದನವನ್ನು ಸೇರಿದನು. ಮಹಾ ಭೂತ ಸಿದ್ಧರು ಮತ್ತು ಪರಮ ಋಷಿಗಳಿಂದ ರಕ್ಷಿತ ಆ ಸಮ ವಿಷಮ ಪ್ರದೇಶದಲ್ಲಿ ರಾಜನು ವಾಸಿಸಿದನು. ಇಂದ್ರಧ್ಯುಮ್ನ ಸರೋವರವನ್ನು ಸೇರಿ, ಹಂಸಕೂಟವನ್ನು ದಾಟಿ, ಶತಶೃಂಗದಲ್ಲಿ ಮಹಾರಾಜನು ತಪಸ್ಸಿನಲ್ಲಿ ತೊಡಗಿದನು.

ಅಲ್ಲಿಯೂ ಕೂಡ ಶ್ರೇಷ್ಠ ತಪೋನಿರತ ಆ ವೀರನು ಅಲ್ಲಿರುವ ಸಿದ್ಧ ಚಾರಣಗಣಗಳ ಪ್ರಿಯದರ್ಶನನಾದನು. ವಿಧೇಯ, ಅಹಂವಾದಿಯಲ್ಲದ, ಸಂಯತಾತ್ಮ, ಜಿತೇಂದ್ರಿಯ ಭಾರತನು ತನ್ನದೇ ವೀರ್ಯದಿಂದ ಸ್ವರ್ಗದ ದಾರಿಯನ್ನು ಗಳಿಸಿದನು. ಕೆಲವರಿಗೆ ಸಹೋದರನಾಗಿದ್ದನು; ಇನ್ನು ಕೆಲವರಿಗೆ ಸಖನಾಗಿದ್ದನು. ಇನ್ನು ಕೆಲವು ಋಷಿಗಳು ಅವನನ್ನು ಪುತ್ರನಂತೆ ಪರಿಪಾಲಿಸುತ್ತಿದ್ದರು. ಆ ಭರತರ್ಷಭ ಪಾಂಡುವು ಬಹಳ ಕಾಲದ ನಂತರ ತನ್ನ ನಿಷ್ಕಲ್ಮಶ ತಪಸ್ಸಿನಿಂದ ಬ್ರಹ್ಮರ್ಷಿ ಸದೃಶ್ಯತೆಯನ್ನು ಹೊಂದಿದನು. ಸ್ವರ್ಗದ ತೀರವನ್ನು ಸೇರಲಿಚ್ಛಿಸಿದ ಅವನು ಪತ್ನಿಯರನ್ನೊಡಗೊಂಡು ಶತಶೃಂಗವನ್ನು ಮೇಲೇರಿ ಉತ್ತರಾಭಿಮುಖನಾಗಿ ಹೊರಟನು. ಆಗ ಅಲ್ಲಿದ್ದ ತಾಪಸಿಗಳು ಅವನಿಗೆ ಹೇಳಿದರು:

ಈ ಪರ್ವತ ರಾಜನ ಮೇಲೆ ಹತ್ತಿ ಹೋಗುತ್ತಿದ್ದಂತೆ ನಾವು ದೇವತೆಗಳು, ಗಂಧರ್ವರು ಮತ್ತು ಅಪ್ಸರೆಯರು ಕ್ರೀಡಿಸುವ ಅಸಾದ್ಯ ಗಿರಿ-ತಪ್ಪಲುಗಳನ್ನೂ,  ಏರು ಪೇರುಗಳ ಕುಬೇರನ ಉದ್ಯಾನಗಳನ್ನು, ಧುಮುಕುತ್ತಿರುವ ಮಹಾನದಿಗಳು, ದುರ್ಗ-ಗಿರಿಗಳು ಮತ್ತು ಗುಹೆಗಳನ್ನು ನೋಡಿದ್ದೇವೆ. ಅಲ್ಲಿ ಮರ, ಮೃಗ. ಪಕ್ಷಿಗಳ್ಯಾವುವೂ ವಾಸಿಸದಂಥಹ ನಿತ್ಯವೂ ಹಿಮದಿಂದ ಕೂಡಿದ ಪ್ರದೇಶಗಳಿವೆ. ಮತ್ತು ಅಲ್ಲಿ ಕಷ್ಟಕರ ಮಾರ್ಗಗಳನ್ನು ಹೊಂದಿದ ವಿಶಾಲ ಪ್ರದೇಶಗಳೂ ಇವೆ. ಪಕ್ಷಿಗಳು ಕೂಡ ಅದನ್ನು ದಾಟಿ ಹಾರಲು ಶಕ್ಯವಿಲ್ಲ, ಇನ್ನು ಪ್ರಾಣಿಗಳಾದರೂ ಹೇಗೆ? ವಾಯು ಮಾತ್ರ ಹೋಗಬಲ್ಲ ಅಲ್ಲಿಗೆ ಸಿದ್ಧರು ಮತ್ತು ಪರಮ ಋಷಿಗಳು ಹೋಗಬಲ್ಲರು. ಹಾಗಿರುವಾಗ, ಈ ಈರ್ವರು ರಾಜಪುತ್ರಿಯರು ಹೇಗೆ ತಾನೆ ಈ ಪರ್ವತವನ್ನು ಪಾರು ಮಾಡಿಯಾರು? ಅವರು ಈ ಕಷ್ಟಗಳಿಗೆ ಅರ್ಹರಲ್ಲ. ಹೋಗಬೇಡ!

ಪಾಂಡುವು ಹೇಳಿದನು:

ಮಹಾಭಾಗರೇ! ಮಕ್ಕಳಿಲ್ಲದವನಿಗೆ ಸ್ವರ್ಗದ ಬಾಗಿಲು ತೆರೆಯುವುದಿಲ್ಲವೆಂದು ಹೇಳುತ್ತಾರೆ. ಆದುದರಿಂದ ಮಕ್ಕಳಿಲ್ಲದ ನಾನು ತುಂಬಾ ಚಿಂತೆಗೊಳಗಾಗಿದ್ದೆನೆ. ನಿಮಗೆ ಹೇಳುತ್ತಿದ್ದೇನೆ. ಭೂಮಿಯಲ್ಲಿ ಪಿತೃ, ದೇವ, ಋಷಿ ಮತ್ತು ಮನುಷ್ಯ ಈ ನಾಲ್ವರ ನೂರಾರು ಸಹಸ್ರಾರು ಋಣಗಳನ್ನು ತೀರಿಸಲು ಮನುಷ್ಯನಿಗೆ ಮಕ್ಕಳು ಹುಟ್ಟುತ್ತಾರೆ. ಇವುಗಳನ್ನು ಯಥಾಕಾಲದಲ್ಲಿ ಯಾರು ನಡೆಸಿಕೊಳ್ಳುವುದಿಲ್ಲವೋ ಅವನಿಗೆ ಲೋಕಗಳು ದೊರೆಯುವುದಿಲ್ಲ ಎಂದು ಧರ್ಮವನ್ನು ತಿಳಿದವರು ನಿರೂಪಿಸಿದ್ದಾರೆ. ಯಜ್ಞಗಳಿಂದ ದೇವತೆಗಳು, ಸ್ವಾಧ್ಯಾಯ ಮತ್ತು ತಪಸ್ಸುಗಳಿಂದ ಮುನಿಗಳು, ಪುತ್ರರು ಮತ್ತು ಶ್ರಾದ್ಧಗಳಿಂದ ಪಿತೃಗಳು, ಮತ್ತು ಅನುಕಂಪದಿಂದ ಮಾನವರು ಸಂತುಷ್ಟಗೊಳ್ಳುತ್ತಾರೆ. ಧರ್ಮದ ಪ್ರಕಾರ ನಾನು ಋಷಿ, ದೇವ ಮತ್ತು ಮನುಷ್ಯರ ಋಣಗಳಿಂದ ಪರಿಮುಕ್ತನಾಗಿದ್ದೇನೆ. ನಾನಿನ್ನೂ ಪಿತೃಗಳ ಋಣದಿಂದ ಮುಕ್ತನಾಗಿಲ್ಲ ಎಂದು ಬೇಯುತ್ತಿದ್ದೇನೆ. ನನ್ನ ದೇಹನಾಶದಿಂದ ಪಿತೃಗಳೂ ಕೂಡ ನಾಶಹೊಂದುತ್ತಾರೆ ಎಂದು ನಿಶ್ಚಯ. ಮಕ್ಕಳನ್ನು ಪಡೆಯಲೋಸುಗವೇ ನರೋತ್ತಮರು ಜನ್ಮತಾಳುತ್ತಾರೆ. ನನ್ನ ತಂದೆಯ ಕ್ಷೇತ್ರದಲ್ಲಿ ನಾನು ಹೇಗೆ ಮಹಾತ್ಮನಿಂದ ಹುಟ್ಟಿದೆನೋ ಅದೇ ರೀತಿ ನನ್ನ ಕ್ಷೇತ್ರದಲ್ಲಿಯೂ ಮಕ್ಕಳನ್ನು ಹೇಗೆ ಪಡೆಯಬಹುದು?

ತಾಪಸರು ಹೇಳಿದರು:

ಧರ್ಮಾತ್ಮ! ನಿನಗೆ ದೇವೋಪಮ ಸುಂದರ ಮಕ್ಕಳಾಗುತ್ತಾರೆಂದು ನಮ್ಮ ದಿವ್ಯ ದೃಷ್ಟಿಯಿಂದ ತಿಳಿದಿದ್ದೇವೆ. ತನ್ನ ಕರ್ಮಗಳಿಂದ ತಂದುಕೊಂಡ ದೈವಾದಿಷ್ಟ ಕಷ್ಟದಲ್ಲಿಯೂ ಬುದ್ಧಿವಂತ ಮನುಷ್ಯನು ಉತ್ತಮ ಫಲವನ್ನು ಹುಡುಕುತ್ತಾನೆ. ಕಾಣುತ್ತಿರುವ ಆ ಫಲಕ್ಕಾಗಿ ನೀನು ಪ್ರಯತ್ನ ಮಾಡಲೇ ಬೇಕು. ಗುಣಸಂಪನ್ನ ಮಕ್ಕಳನ್ನು ಪಡೆದು ನೀನು ಸಂತೋಷವನ್ನು ಹೊಂದುತ್ತೀಯೆ.

ಪಾಂಡು-ಪೃಥೆಯರ ಸಂವಾದ

ತಪಸ್ವಿಗಳ ಆ ಮಾತುಗಳನ್ನು ಕೇಳಿ, ಜಿಂಕೆಯ ಶಾಪದಿಂದ ತಾನು ಆ ಕೆಲಸವನ್ನು ಮಾಡಲಿಕ್ಕಾಗುವುದಿಲ್ಲ ಎಂದು ತಿಳಿದಿದ್ದ ಪಾಂಡುವು ಚಿಂತಾಪರನಾದನು. ಅವನು ಏಕಾಂತದಲ್ಲಿ ತನ್ನ ಧರ್ಮಪತ್ನಿ, ಯಶಸ್ವಿನೀ ಕುಂತಿಯಲ್ಲಿ ಹೇಳಿದನು:

ಮಕ್ಕಳನ್ನು ಪಡೆಯುವ ಹಲವಾರು ರೀತಿಗಳನ್ನು ಹೇಳಲಾಗಿದೆ. ಅಪತ್ಯ ಎಂಬ ಹೆಸರೇ ಧರ್ಮಸಂಹಿತಗಳಲ್ಲಿ ಲೋಕಗಳಲ್ಲಿ ನಡೆದುಕೊಂಡು ಬರುತ್ತಿದೆ. ಕುಂತಿ! ಹೀಗೆ ಮೊದಲಿನಿಂದರೂ ಶಾಶ್ವತ ಧರ್ಮವನ್ನು ತಿಳಿದ ಧೀರರು ತಿಳಿದಿದ್ದಾರೆ. ತಾನಾಗಿಯೇ ದಾನವಾಗಿ ಕೊಟ್ಟಿದ್ದುದು, ತಪಿಸಿದ ತಪಸ್ಸು, ತಾನಾಗಿಯೇ ಅನುಷ್ಟಾನಗೊಳಿಸಿಕೊಂಡ ನಿಯಮಗಳು, ಇವೆಲ್ಲವೂ ಮಕ್ಕಳಿಲ್ಲದವನನ್ನು ಪಾವನಗೊಳಿಸುವುದಿಲ್ಲ. ಇವೆಲ್ಲವನ್ನೂ ತಿಳಿದಿದ್ದ ನಾನು ಮುಂದಿನದನ್ನು ಯೋಚಿಸುತ್ತಿದ್ದೇನೆ. ಮಕ್ಕಳಿಲ್ಲದವನು ಶುಭ ಲೋಕಗಳನ್ನು ಹೊಂದುವುದಿಲ್ಲ ಎಂದು ಚಿಂತಿಸುತ್ತಿದ್ದೇನೆ. ನಾನೇ ಮಾಡಿದ ಕರ್ಮದಿಂದ ಜಿಂಕೆಯ ಶಾಪಕ್ಕೊಳಗಾಗಿ ಮಕ್ಕಳನ್ನು ಪಡೆಯುವ ಶಕ್ತಿಯನ್ನು ಕಳೆದುಕೊಂಡಿದ್ದೇನೆ. ಈ ರೀತಿ ಕ್ರೂರ ಕರ್ಮದಿಂದ ನಾನು ಹತನಾಗಿದ್ದೇನೆ. ಧರ್ಮದರ್ಶನದ ಪ್ರಕಾರ ಒಟ್ಟು ಆರು ಪ್ರಕಾರದ ಪುತ್ರರು ಬಂಧು-ದಾಯಾದಿಗಳು ಆಗಬಲ್ಲರು ಮತ್ತು ಇನ್ನು ಆರು ಪ್ರಕಾರದ ಪುತ್ರರು ಬಂಧು ದಯಾದಿಗಳು ಎನ್ನಿಸಿಕೊಳ್ಳಲಾರರು. ಅವುಗಳ ಕುರಿತು ಹೇಳುತ್ತೇನೆ ಕೇಳು. ತನಗೇ ಹುಟ್ಟಿದ, ಬೇರೆಯವರು ಕೊಟ್ಟ, ಕ್ರಯಕ್ಕೆ ಖರೀದಿಸಿದ, ತನ್ನ ವಿಧವೆಯಲ್ಲಿ ಹುಟ್ಟಿದ, ವಿವಾಹಕ್ಕೆ ಮೊದಲೇ ಪತ್ನಿಯಲ್ಲಿ ಹುಟ್ಟಿದ ಮತ್ತು ವೇಶ್ಯೆಯಲ್ಲಿ ಹುಟ್ಟಿದ ಮಗನು ಬಂಧು ದಾಯಾದಿಯಾಗಬಲ್ಲನು. ಬೇರೆಯವರಿಗೆ ಕೊಟ್ಟ, ಮಾರಿದ, ಕೃತ್ರಿಮವಾಗಿ ಹುಟ್ಟಿದ, ತಾನಾಗಿಯೇ ಹುಟ್ಟಿದ, ಗೊತ್ತಿಲ್ಲದವನಿಗೆ ಹುಟ್ಟಿದ, ಹೀನಯೋನಿಯಲ್ಲಿ ಹುಟ್ಟಿದ ಮಗನು ಬಂಧು ದಾಯಾದಿ ಎನ್ನಿಸಿಕೊಳ್ಳಲಾರ. ಮೊದಲಿನಿಂದ ಪ್ರಾರಂಭಿಸಿ ಕೊನೆಯವರೆಗೆ ಮಕ್ಕಳನ್ನು ಪಡೆಯಲು ಪ್ರಯತ್ನಿಸಬೇಕು. ಪುತ್ರರನ್ನು ಪಡೆಯಲು ಬಯಸಿದವರು ಉತ್ತಮ ಮತ್ತು ಶ್ರೇಷ್ಠರಿಂದ ಪುತ್ರರನ್ನು ಪಡೆಯಬೇಕು. ಸ್ವಾಯಂಭು ಮನುವು ಹೇಳಿದಂತೆ ಸಾಧುಗಳು ತಮ್ಮ ವೀರ್ಯದಿಂದ ಹುಟ್ಟದಿದ್ದರೂ ಮಕ್ಕಳನ್ನು ಧರ್ಮಫಲದಾಯಕರೆಂದೂ ಶ್ರೇಷ್ಠರೆಂದೂ ತಿಳಿಯುತ್ತಾರೆ. ಆದುದರಿಂದ ಸ್ವಯಂ ಮಕ್ಕಳನ್ನು ಪಡೆಯಲು ಅಶಕ್ಯನಾದ ನಾನು ನನ್ನ ಯಶಸ್ವಿನಿ ಪತ್ನಿಯಾದ ನಿನ್ನನ್ನು ಇಂದು ಕಳುಹಿಸುತ್ತಿದ್ದೇನೆ. ನನ್ನ ಸರಿಸಮನಾದ ಅಥವಾ ನನಗಿಂಥಲೂ ಶ್ರೇಷ್ಠನಾದ ಯಾರಿಂದಲಾದರೂ ನನಗೆ ಒಂದು ಮಗುವನ್ನು ಪಡೆದುಕೊಂಡು ಬಾ. ಹಿರಿಯರಿಂದ ಮಕ್ಕಳನ್ನು ಪಡೆಯಲು ನಿಯುಕ್ತಗೊಂಡ ಆ ವೀರಪತ್ನಿ ಶಾರದಂಡಾಯನಿಯ ಕಥೆಯನ್ನು ಕೇಳು. ಅವಳು ಸ್ನಾತಳಾಗಿ ರಾತ್ರಿಯಲ್ಲಿ ನಾಲ್ಕು ರಸ್ತೆಗಳು ಕೂಡುವಲ್ಲಿ ಒಂದು ಹೂವನ್ನಿತ್ತು ಓರ್ವ ಸಿದ್ಧ ದ್ವಿಜನನ್ನು ವರಿಸಿದಳು. ಮಗನಿಗಾಗಿ ಅಗ್ನಿಯಲ್ಲಿ ಆಹುತಿ ಕರ್ಮಗಳನ್ನು ಪೂರೈಸಿ ಅವಳು ಅವನ ಜೊತೆ ವಾಸಿಸಿದಳು. ಅವನು ಅವಳಲ್ಲಿ ದುರ್ಜಯನೇ ಮೊದಲಾದ ಮೂರು ಮಹಾರಥಿಗಳನ್ನು ಪಡೆದನು. ನೀನೂ ಕೂಡ ಹಾಗೆ ನನ್ನ ಅಪ್ಪಣೆಯಂತೆ ತಪಸ್ಸಿನಲ್ಲಿ ಅತ್ಯುತ್ತಮ ಬ್ರಾಹ್ಮಣನಿಂದ ಇಂದು ಬೇಗನೇ ಮಗನನ್ನು ಪಡೆಯಬೇಕು.

ಇದನ್ನು ಕೇಳಿದ ಕುಂತಿಯು ಕುರು ಋಷಭ ವೀರ ಭೂಮಿಪತಿ ತನ್ನ ಪತಿ ಪಾಂಡುವಿಗೆ ಹೇಳಿದಳು:

ಧರ್ಮಜ್ಞ! ನೀನು ನನ್ನಲ್ಲಿ ಈ ರೀತಿ ಮಾತನಾಡುವುದು ಯಾವಕಾರಣಕ್ಕೂ ಸರಿಯಲ್ಲ. ನಿನ್ನಲ್ಲಿಯೇ ಅಭಿರತ ಧರ್ಮಪತ್ನಿ ನಾನು. ಧಾರ್ಮಿಕವಾಗಿ ನೀನೇ ನನ್ನಲ್ಲಿ ವೀರ ಪುತ್ರರನ್ನು ಪಡೆಯುತ್ತೀಯೆ. ನಾನು ನಿನ್ನೊಡನೆಯೇ ಸ್ವರ್ಗವನ್ನು ಸೇರುತ್ತೇನೆ. ಮಕ್ಕಳಿಗೋಸ್ಕರ ನೀನೇ ನನ್ನಲ್ಲಿ ಬರಬೇಕು. ನಿನ್ನನ್ನು ಬಿಟ್ಟು ಬೇರೆಯವರೊಂದಿಗೆ ನಾನು ನನ್ನ ಯೋಚನೆಯಲ್ಲಿಯೂ ಹೋಗಲಾರೆ. ಈ ಭೂಮಿಯಲ್ಲಿ ನಿನಗಿಂಥ ಶ್ರೇಷ್ಠ ಬೇರೆ ಯಾವ ಮಾನವನಿದ್ದಾನೆ? ಪುರಾಣಗಳಲ್ಲಿ ಕೇಳಿದ ಈ ಧಾರ್ಮಿಕ ಕಥೆಯನ್ನು ಹೇಳುತ್ತೇನೆ ಕೇಳು. ಹಿಂದೆ ಪುರುವಂಶವಿವರ್ಧನ ಪರಮ ಧರ್ಮಿಷ್ಠ ವ್ಯುಷಿತಾಶ್ವ ಎಂಬ ವಿಖ್ಯಾತ ರಾಜನಿದ್ದನೆಂದು ಹೇಳುತ್ತಾರೆ. ಆ ಧರ್ಮಾತ್ಮ ಮಹಾತ್ಮನು ಯಜ್ಞವನ್ನು ನಡೆಸಿದಾಗ ಇಂದ್ರನೊಡಗೂಡಿ ದೇವತೆಗಳೂ ಮಹರ್ಷಿಗಳೂ ಅಲ್ಲಿಗೆ ಆಗಮಿಸಿದ್ದರು. ರಾಜರ್ಷಿ ಮಹಾತ್ಮ ವ್ಯುಷಿತಾಶ್ವನ ಆ ಯಜ್ಞದಲ್ಲಿ ಇಂದ್ರನು ಸೋಮವನ್ನು ಕುಡಿದು ಮತ್ತು ದ್ವಿಜರು ದಕ್ಷಿಣೆಗಳಿಂದ ಸಂತೃಪ್ತರಾದರು. ಛಳಿಗಾಲ ಕಳೆದ ನಂತರ ಸೂರ್ಯನು ಹೇಗೆ ಸರ್ವಭೂತಗಳನ್ನೂ ಬೆಳಗುತ್ತಾನೋ ಹಾಗೆ ರಾಜ ವ್ಯುಷಿತಾಶ್ವನು ಮಾನವರಲ್ಲಿ ಬೆಳಗತೊಡಗಿದನು. ಆ ರಾಜಸತ್ತಮನು ಪೂರ್ವ, ಉತ್ತರ, ಮಧ್ಯ ಮತ್ತು ದಕ್ಷಿಣ ದಿಕ್ಕುಗಳ ನೃಪತಿಗಳನ್ನು ಜಯಿಸಿ, ಸೆರೆಹಿಡಿದು, ತನ್ನ ಮುಂದೆ ಮೆರವಣಿಗೆ ಮಾಡಿಸಿದನು. ಪ್ರತಾಪಿ ದಶನಾಗಬಲಾನ್ವಿತ ವ್ಯುಷಿತಾಶ್ವನು ಮಹಾಯಜ್ಞ ಅಶ್ವಮೇಧದ ನಂತರ ರಾಜೇಂದ್ರನೆನಿಸಿಕೊಂಡನು. ಪುರಾಣಗಳನ್ನು ತಿಳಿದ ಜನರು ಈಗಲೂ ಅವನ ಬಗ್ಗೆ ಗಾಥೆಯನ್ನು ಹಾಡುತ್ತಾರೆ. ವ್ಯುಷಿತಾಶ್ವನು ಸಮುದ್ರದ ತುದಿಯವರೆಗೂ ವಸುಂಧರೆಯನ್ನು ಗೆದ್ದನು, ಮತ್ತು ತಂದೆಯು ತನ್ನ ಮಕ್ಕಳನ್ನು ಹೇಗೋ ಹಾಗೆ ಎಲ್ಲ ವರ್ಣದವರನ್ನೂ ಪರಿಪಾಲಿಸಿದನು. ಮಹಾಯಜ್ಞದ ಯಜಮಾನನಾಗಿ ಬ್ರಾಹ್ಮಣರಿಗೆ ಅನಂತ ರತ್ನ-ಧನಗಳನ್ನಿತ್ತು ಆ ಮಹಾಕ್ರತುವನ್ನು ನೆರವೇರಿಸಿದನು. ಬಹಳ ಸಮಯ ಅವನು ಸೋಮರಸವನ್ನು ಹಿಂಡಿ ಸೋಮ ಯಜ್ಞಗಳನ್ನು ನೆರವೇರಿಸಿದನು. ಅವನಿಗೆ ಪರಮಸಮ್ಮತ, ರೂಪದಲ್ಲಿ ಭುವಿಯಲ್ಲಿಯೇ ಆಸದೃಶಿ ಭದ್ರಾ ಕಾಕ್ಷಿವತೀ ಎಂಬ ಹೆಸರಿನ ಪತ್ನಿಯಿದ್ದಳು. ಅವರು ಪರಸ್ಪರರನ್ನು ಕಾಮಿಸಿದರು ಎಂದು ಕೇಳುತ್ತೇವೆ. ಅವನು ಅವಳಲ್ಲಿ ಕಾಮಸಮ್ಮತ್ತನಾಗಿ ಯಕ್ಷ್ಮಾಣವನ್ನು ಹೊಂದಿದನು. ಸ್ವಲ್ಪವೇ ಕಾಲದಲ್ಲಿ ಮುಳುಗುವ ಸೂರ್ಯನಂತೆ ಅವನು ಹೊರಟುಹೋದನು. ಆ ಮನುಷ್ಯೇಂದ್ರನು ತೀರಿಕೊಂಡನಂತರ ಅವನ ಪತ್ನಿಯು ಶೋಕಸಂತಪ್ತಳಾದಳು. ಮಕ್ಕಳಿಲ್ಲದ ಆ ಭದ್ರೆಯು ಪರಮ ದುಃಖಾರ್ತಳಾಗಿ ವಿಲಪಿಸಿದಳೆಂದು ಹೇಳುತ್ತಾರೆ. ಅದನ್ನು ಹೇಳುತ್ತೇನೆ ಕೇಳು.

ಪರಮಧರ್ಮಜ್ಞ! ಯಾವುದೇ ನಾರಿಯು ಪುತ್ರಳಿಲ್ಲದವಳಂತೆ ಮಾಡಿದ ಪತಿಯನ್ನು ಬಿಟ್ಟು ಜೀವಿಸಲಾರಳು; ಅವಳು ಜೀವಿಸಿದರೂ ದುಃಖಿತಳಾಗಿಯೇ ಇರುತ್ತಾಳೆ. ಪತಿಯಿಲ್ಲದ ನಾರಿಯ ಶ್ರೇಯಸ್ಸು ಕೂಡ ಮೃತಗೊಂಡಂತೆ. ನೀನು ಹೋದಲ್ಲಿಗೆ ಬರಲು ಇಚ್ಛಿಸುತ್ತೇನೆ. ನನ್ನನ್ನೂ ನಿನ್ನ ಜೊತೆ ಕರೆದುಕೊಂಡು ಹೋಗುವ ಕೃಪೆ ಮಾಡು. ನನಗೆ ನಿನ್ನನ್ನು ಬಿಟ್ಟು ಒಂದು ಕ್ಷಣವೂ ಜೀವಿಸುವ ಉತ್ಸಾಹವಿಲ್ಲ. ಇಲ್ಲಿಂದ ನನ್ನನ್ನು ಬೇಗನೆ ಕರೆದುಕೊಂಡು ಹೋಗುವ ಕೃಪೆ ಮಾಡು. ಸಮ ವಿಷಮ ಪರಿಸ್ಥಿತಿಗಳೆರಡರಲ್ಲೂ ನಾನು ನಿನ್ನನ್ನು ಹಿಂಬಾಲಿಸುತ್ತೇನೆ. ನಿನ್ನನ್ನು ಹಿಂಬಾಲಿಸಿದ ನಾನು ಪುನಃ ಹಿಂತಿರುಗಿಯೂ ನೋಡಲಾರೆ. ನೆರಳಿನಂತೆ ನಿನ್ನನ್ನು ಹಿಂಬಾಲಿಸುವೆ, ಸತತ ನಿನ್ನ ವಶದಲ್ಲಿಯೇ ಇರುವೆ. ನಿತ್ಯವೂ ನಿನ್ನ ಪ್ರಿಯಹಿತ ನಿರತಳಾಗಿರುವೆ. ನಿನ್ನನ್ನು ಕಳೆದುಕೊಂಡಾಗಿನಿಂದ ನನ್ನನ್ನು ಹೃದಯ ಬತ್ತಿಸುವ ಕಷ್ಟವು ಆವರಿಸಿದೆ. ಅಭಾಗ್ಯೆ ನಾನು ನನ್ನ ಹಿಂದಿನ ಜನ್ಮಗಳಲ್ಲಿ ಸಹಚಾರಿಣಿಗಳನ್ನು ಅಲಗಿಸಿರಬಹುದು ಅಥವಾ ಕೂಡಿದವರನ್ನು ಬೇರೆ ಮಾಡಿರಬಹುದು. ಪೂರ್ವ ಜನ್ಮಗಳಿಂದ ಸಂಚಿತಗೊಂಡ ಈ ಪಾಪ ಕರ್ಮಗಳಿಂದಲೇ ನಾನು ನಿನ್ನಿಂದ ಅಲಗಿ ಈ ದುಃಖವನ್ನು ಪಡೆದುಕೊಂಡಿದ್ದೇನೆ. ಇಂದಿನಿಂದ ನಾನು ನಿನ್ನ ದರ್ಶನವನ್ನೇ ಕಾಯುತ್ತಾ ದುಃಖಾವಿಷ್ಠಳಾಗಿ ದರ್ಭಾಸನದ ಮೇಲೆ ಮಲಗುತ್ತೇನೆ. ನನಗೆ ಕಾಣುವಂತವನಾಗು. ಈ ದುಃಖಾನ್ವಿತ ದೀನ, ಅನಾಥ, ಕೃಪಣ, ವಿಲಪಿಸುತ್ತಿರುವ ನನ್ನನ್ನು ಸಂತವಿಸು.

ಈ ರೀತಿ ಬಹುವಿಧವಾಗಿ ಅವಳು ಪುನಃ ಪುನಃ ಆ ಶವವನ್ನು ಅಪ್ಪಿಕೊಳ್ಳುತ್ತಾ ವಿಲಪಿಸುತ್ತಿರುವಾಗ ಒಂದು ಅಂತರಿಕ್ಷವಾಣಿಯು ನುಡಿಯಿತು:

ಭದ್ರೇ! ಮೇಲೇಳು! ನಿನಗೊಂದು ವರವನ್ನು ಕೊಡುತ್ತೇನೆ. ಹೋಗು. ನಿನ್ನಲ್ಲಿ ನಾನು ಮಕ್ಕಳನ್ನು ಹುಟ್ಟಿಸುತ್ತೇನೆ. ಶುಕ್ಲಪಕ್ಷದ ಎಂಟನೆಯ ಅಥವಾ ಹದಿನಾಲ್ಕನೆಯ ದಿನ ಋತುಸ್ನಾತಳಾಗಿ ನೀನು ನಿನ್ನ ಹಾಸಿಗೆಯ ಮೇಲೆ ನನ್ನೊಡನೆ ಮಲಗಿಕೋ.

ಆ ಪುತ್ರಾರ್ಥಿನಿ ದೇವಿ ಪತಿವ್ರತೆಯು ಇದನ್ನು ಕೇಳಿ ಆ ವಾಕ್ಯದಲ್ಲಿ ಹೇಳಿದ ಹಾಗೆಯೇ ನಡೆದುಕೊಂಡಳು. ಆ ಶವದಿಂದ ದೇವಿಯು ಮೂವರು ಶಾಲ್ವರನ್ನು ಮತ್ತು ನಾಲ್ವರು ಮದ್ರರನ್ನು ಮಕ್ಕಳಾಗಿ ಪಡೆದಳು. ನೀನೂ ಕೂಡ ಹೀಗೆ ನಿನ್ನ ತಪಸ್ಸು ಮತ್ತು ಯೋಗಬಲದಿಂದ ನನ್ನಲ್ಲಿ ನಿನ್ನ ಮನಸ್ಸಿನಿಂದಲೇ ಮಕ್ಕಳನ್ನು ಹುಟ್ಟಿಸಲು ಶಕ್ತನಾಗಿದ್ದೀಯೆ.

ಈ ಮಾತುಗಳನ್ನು ಕೇಳಿದ ರಾಜನು ಆ ದೇವಿಗೆ ಧರ್ಮವಿದ್ಧರ್ಮಸಂಯುಕ್ತ ಈ ಉತ್ತಮ ನುಡಿಗಳಿಂದ ಉತ್ತರಿಸಿದನು:

ಕುಂತಿ! ಹಿಂದೆ ವ್ಯುಷಿತಾಶ್ವನು ನೀನು ಹೇಳಿದ ಹಾಗೆಯೇ ಮಾಡಿದನು. ಅವನು ದೇವ ಸಮನಾಗಿದ್ದನು. ಈಗ ನಾನು ನಿನಗೆ ಪುರಾಣಗಳಲ್ಲಿ ಋಷಿಗಳು ಕಂಡ, ಮಹಾತ್ಮರು ಧರ್ಮದ ಕುರಿತು ತಿಳಿದುಕೊಂಡಿದ್ದ ಧರ್ಮವನ್ನು ಹೇಳುತ್ತೇನೆ. ನಾನು ಹೇಳುವುದನ್ನು ಕೇಳು. ಹಿಂದೆ ಸ್ತ್ರೀಯರು ಕಾಮಚಾರ ವಿಹಾರಗಳಲ್ಲಿ ಸ್ವತಂತ್ರರಾಗಿದ್ದು ಯಾವುದೇ ಕಟ್ಟುಪಾಡುಗಳಿಲ್ಲದೇ ಇರುತ್ತಿದ್ದರು. ಕೌಮಾರ್ಯದಿಂದಲೇ ಅವರು ತಮ್ಮ ಪತಿಗಳಿಗೆ ನಡೆದುಕೊಳ್ಳುತ್ತಿರಲಿಲ್ಲ ಮತ್ತು ಸಾಕಷ್ಟು ಅಧರ್ಮಿಗಳಾಗಿದ್ದರು. ಯಾಕೆಂದರೆ ಹಿಂದಿನ ಆ ಕಾಲದಲ್ಲಿ ಅದೇ ಧರ್ಮವಾಗಿತ್ತು. ಈಗಲೂ ಕೂಡ ಹಳೆಯ ಈ ಧರ್ಮವನ್ನು ಕೀಳು ಯೋನಿಗಳಲ್ಲಿ ಹುಟ್ಟಿದವುಗಳು ಕಾಮ ದ್ವೇಷ ವಿವರ್ಜಿತರಾಗಿ ಪರಿಪಾಲಿಸುತ್ತಿವೆ. ಹಿಂದೆ ನೋಡಿದ್ದ ಈ ಧರ್ಮವನ್ನು ಮಹರ್ಷಿಗಳೂ ಗೌರವಿಸುತ್ತಾರೆ. ಉತ್ತರ ಕುರುಗಳಲ್ಲಿ ಇದು ಇಂದೂ ನಡೆಯುತ್ತದೆ. ಸ್ತ್ರೀಯರಿಗೆ ಇದೇ ಅನುಗ್ರಹಕಾರಕ ಸನಾತನ ಧರ್ಮ. ಆದರೆ ಸ್ವಲ್ಪವೇ ಸಮಯದಲ್ಲಿ ಈಗಿನ ಲೋಕದಲ್ಲಿರುವ ಈ ಕಟ್ಟುಪಾಡುಗಳನ್ನು ರಚಿಸಲಾಯಿತು. ಈ ಕಟ್ಟುಪಾಡುಗಳನ್ನು ಯಾರು ಸ್ಥಾಪಿಸಿದರು ಮತ್ತು ಏಕೆ ಎನ್ನುವುದನ್ನು ವಿಸ್ತಾರವಾಗಿ ಕೇಳು. ಉದ್ದಾಲಕ ಎಂಬ ಹೆಸರಿನ ಮಹರ್ಷಿಯಿದ್ದ ಎಂದು ಕೇಳಿದ್ದೇವೆ. ಆ ಮುನಿಗೆ ಶ್ವೇತಕೇತು ಎಂದು ವಿಖ್ಯಾತ ಮಗನಿದ್ದನು. ಇವನೇ ಕೋಪದಲ್ಲಿ ಮನುಷ್ಯರಲ್ಲಿ ಈ ಕಟ್ಟುಪಾಡನ್ನು ಮಾಡಿದನು ಎಂದು ಕೇಳಿದ್ದೇವೆ. ಯಾಕೆ ಎನ್ನುವುದನ್ನು ಹೇಳುತ್ತೇನೆ ಕೇಳು. ಒಮ್ಮೆ ಶ್ವೇತಕೇತು ಮತ್ತು ಅವನ ತಂದೆಯ ಎದುರಿನಲ್ಲಿಯೇ ಓರ್ವ ಬ್ರಾಹ್ಮಣನು ಅವನ ತಾಯಿಯ ಕೈ ಹಿಡಿದು ‘ಹೋಗೋಣ!’’ಎಂದು ಹೇಳಿದನು. ಬಲವಂತವೋ ಎನ್ನುವಂತೆ ತನ್ನ ತಾಯಿಯನ್ನು ಕರೆದುಕೊಂಡು ಹೋಗುತ್ತಿರುವುದನ್ನು ನೋಡಿದ ಋಷಿಪುತ್ರನು ಉದ್ವಿಗ್ನನಾಗಿ ಕೋಪಗೊಂಡನು. ಕೃದ್ಧನಾದ ಅವನನ್ನು ನೋಡಿದ ಅವನ ತಂದೆಯು ಶ್ವೇತಕೇತುವಿಗೆ ‘ಮಗು! ಸಿಟ್ಟಾಗಬೇಡ. ಇದೇ ಸನಾತನ ಧರ್ಮ!’ ಎಂದನು.ಎಲ್ಲ ವರ್ಣದ ಅಂಗನೆಯರೂ ಈ ಭೂಮಿಯಲ್ಲಿ ಗೋವುಗಳಂತೆ ಅನಾವೃತರಾಗಿದ್ದಾರೆ. ಹೀಗೆ ಅವರವರ ವರ್ಣದ ಪ್ರಜೆಗಳು ನಡೆದುಕೊಳ್ಳುತ್ತಾರೆ. ಋಷಿಪುತ್ರ ಶ್ವೇತಕೇತುವು ಆಗ ಇರುವ ಧರ್ಮವನ್ನು ನಿರ್ಲಕ್ಷಿಸಲಿಲ್ಲ. ಆದರೆ ಈ ಭುವಿಯ ಸ್ತ್ರೀ-ಪುರುಷರಿಗೆ ಮಾತ್ರ ಈ ಕಟ್ಟುನಿಟ್ಟನ್ನು ಮಾಡಿದನು. ಇದು ಮನುಷ್ಯರಿಗೆ ಮಾತ್ರ. ಇತರ ಜಂತುಗಳಿಗೆ ಅನ್ವಯಿಸುವುದಿಲ್ಲ. ಅಂದಿನಿಂದ ಈ ಕಟ್ಟುನಿಟ್ಟು ಜಾರಿಯಲ್ಲಿದೆ ಎಂದು ಕೇಳುತ್ತೇವೆ.

ಇಂದಿನಿಂದ ನಾರಿಯು ತನ್ನ ಪತಿಯನ್ನು ಬಿಟ್ಟು ಬೇರೆಯವರೊಡನೆ ಹೋಗುವುದು ಭ್ರೂಣಹತ್ಯೆಯನ್ನು ಮಾಡುವುದರಿಂದಾಗುವ ಪಾಪಕ್ಕೆ ಸಮನಾಗುತ್ತದೆ. ಇದು ಅತ್ಯಂತ ದುಃಖವನ್ನು ತರುತ್ತದೆ. ಕೌಮಾರಿ ಬ್ರಹ್ಮಚಾರಿಣಿ ಪತಿವ್ರತಾ ಪತ್ನಿಯನ್ನು ಬಯಸುವುದೂ ಕೂಡ ಈ ಭುವಿಯಲ್ಲಿ ಪಾತಕವೆನಿಸಿಕೊಳ್ಳುತ್ತದೆ. ಮಕ್ಕಳನ್ನು ಪಡೆಯುವ ಉದ್ದೇಶದಿಂದ ಪತಿಯು ಕೂಡಲಿಚ್ಛಿಸಿದಾಗ ಪತ್ನಿಯು ನಿರಾಕರಿಸಿದರೂ ಇದೇ ರೀತಿಯ ಪಾಪವೆನಿಸಿಕೊಳ್ಳುತ್ತದೆ.

ಈ ರೀತಿ ಹಿಂದೆ ಉದ್ದಾಲಕ ಪುತ್ರ ಶ್ವೇತಕೇತುವು ಬಲವಂತವಾಗಿ ಧರ್ಮವನ್ನು ಹೊಂದಿಕೊಂಡೇ ಈ ಕಟ್ಟುನಿಟ್ಟನ್ನು ಸ್ಥಾಪಿಸಿದನು. ಸೌದಾಸನು ತನ್ನ ಪತ್ನಿ ಮದಯಂತಿಯನ್ನು ಸಂತಾನಕ್ಕಾಗಿ ನಿಯುಕ್ತಗೊಳಿಸಿದಾಗ, ಅವಳು ಮಹರ್ಷಿ ವಸಿಷ್ಠನ ಬಳಿ ಹೋದಳು ಎಂದು ಕೇಳಿಲ್ಲವೇ? ಅವನಿಂದ ಕಲ್ಮಾಷಪಾದನ ಭಾರ್ಯೆಯು ಅಶ್ಮಕ ಎಂಬ ಹೆಸರಿನ ಪುತ್ರನನ್ನು ಪಡೆದು ತನ್ನ ಪತಿಯನ್ನು ಸಂತೋಷಗೊಳಿಸಿದಳು. ನಮ್ಮ ಜನ್ಮವೂ ಕೂಡ ಕುರು ವಂಶವೃದ್ಧಿಗೋಸ್ಕರ ಕೃಷ್ಣದ್ವೈಪಾಯನನಿಂದ ಆಯಿತೆಂದು ತಿಳಿದಿದೆ. ಈ ಎಲ್ಲ ಕಾರಣಗಳನ್ನು ಸಮೀಕ್ಷಿಸಿ ನೀನು ಕೂಡ ಧರ್ಮಕ್ಕೆ ಹೊಂದಿಕೊಂಡೇ ಇರುವ ನನ್ನ ಈ ಮಾತುಗಳಂತೆ ಮಾಡುವುದು ಸರಿ. ಕಟ್ಟುನಿಟ್ಟು ವ್ರತಾದಿಗಳನ್ನು ಮಾಡುತ್ತಿರುವ ರಾಜಪುತ್ರಿ! ಧರ್ಮವನ್ನು ತಿಳಿದ ಪತಿವ್ರತೆಯರಾದ ಸ್ತ್ರೀಯರು ಪತಿಯ ಮಾತನ್ನು ಉಲ್ಲಂಘಿಸದೇ ಇರುವುದೇ ಧರ್ಮವೆಂದು ತಿಳಿಯುತ್ತಾರೆ. ಬೇರೆ ಎಲ್ಲ ಕಾಲದಲ್ಲಿಯೂ ಸ್ತ್ರೀಯು ಸ್ವತಂತ್ರಳಾಗಿದ್ದಾಳೆ ಸರಿ. ಸಂತ ಜನರು ಮತ್ತು ಪುರಾಣಗಳು ಇದನ್ನೇ ಧರ್ಮವೆಂದು ಪರಿಗಣಿಸುತ್ತಾರೆ. ಭಾರ್ಯೆಯು ತನ್ನ ಪತಿಯು ಏನು ಹೇಳುತ್ತಾನೋ - ಧರ್ಮವಾಗಿರಲಿ ಅಥವಾ ಅಧರ್ಮವಾಗಿರಲಿ - ಹಾಗೆಯೇ ನಡೆದುಕೊಳ್ಳಬೇಕು ಎಂದು ಧರ್ಮವಿದರು ತಿಳಿದಿದ್ದಾರೆ. ಈ ರೀತಿ ನಾನು ರಕ್ತಾಂಗುಲಿಗಳಡಿಯಲ್ಲಿ ಪದ್ಮಪತ್ರವನ್ನು ಹಿಡಿದಿರುವಂತೆ ನನ್ನ ತಲೆಯ ಮೇಲೆ ಕೈಜೋಡಿಸಿ ನಿನ್ನಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದೇನೆ. ನನ್ನ ನಿಯೋಗದಂತೆ ಅಧಿಕ ತಪಸ್ವಿ ದ್ವಿಜನಿಂದ ಗುಣಸಂಪನ್ನ ಯುಕ್ತ ಪುತ್ರರನ್ನು ಪಡೆಯಬೇಕು. ನಿನ್ನ ಈ ಸಹಾಯದಿಂದ ನಾನು ಮಕ್ಕಳಿರುವವರ ಗತಿಯನ್ನು ಸೇರಬಲ್ಲೆ.

ಇದನ್ನು ಕೇಳಿದ ಪ್ರಿಯಹಿತರತೆ ವರಾರೋಹೆ ಕುಂತಿಯು ಪರಪುರಂಜಯ ಪಾಂಡುವಿಗೆ ಈ ರೀತಿ ಉತ್ತರಿಸಿದಳು:

ನನ್ನ ತಂದೆಯ ಮನೆಯಲ್ಲಿ ಬಾಲಕಿಯಾಗಿದ್ದಾಗ ಅತಿಥಿ ಪೂಜೆಯಲ್ಲಿ ನಿಯುಕ್ತಗೊಂಡಿದ್ದೆನು. ಆಗ ಅಲ್ಲಿಗೆ ಸಂಶಿತವ್ರತ, ಉಗ್ರ, ಪರ್ಯಚರ, ಧರ್ಮದ ವಿಷಯದಲ್ಲಿ ನಿಗೂಢ ನಿಶ್ಚಯಗಳನ್ನೀಡುವ, ವಿದ್ವಾಂಸ ಬ್ರಾಹ್ಮಣ ದುರ್ವಾಸನು ಬಂದನು. ನಾನು ಆ ಸಂಶಿತಾತ್ಮನನ್ನು ಸರ್ವ ಯತ್ನಗಳಿಂದ ತೃಪ್ತಿಗೊಳಿಸಿದೆನು. ಸುಲಭವಾಗಿ ತೃಪ್ತಿಗೊಳ್ಳದ ಆ ಶ್ರೇಷ್ಠ ಭಗವಾನನನ್ನು ನನ್ನ ಎಲ್ಲ ಪ್ರಯತ್ನಗಳಿಂದ ಸಂತುಷ್ಟಗೊಳಿಸಿದೆನು. ಅದಕ್ಕೆ ಅವನು ನನಗೆ ಒಂದು ಮಂತ್ರಗ್ರಾಮವನ್ನು ನೀಡಿ ಈ ಮಾತುಗಳನ್ನಾಡಿದನು:

ಈ ಮಂತ್ರಗಳಿಂದ ನೀನು ಯಾವ ಯಾವ ದೇವತೆಯನ್ನು ಅಹ್ವಾನಿಸುತ್ತೀಯೋ ಅವನು ಇಷ್ಟವಿರಲಿ ಅಥವಾ ಇಷ್ಟವಿಲ್ಲದಿರಲ್ಲಿ ನಿನ್ನ ವಶನಾಗುತ್ತಾನೆ.

ನನ್ನ ತಂದೆಯ ಮನೆಯಲ್ಲಿ ಅವನು ನನಗೆ ಈ ರೀತಿ ಹೇಳಿದನು. ಬ್ರಾಹ್ಮಣನು ನೀಡಿದ ವಚನವು ಸತ್ಯ ಮತ್ತು ಅದರ ಸಮಯವು ಈಗ ಬಂದೊದಗಿದೆ. ನಿನ್ನ ಅನುಜ್ಞೆಯಂತೆ ಆ ಮಂತ್ರದಿಂದ ನಾನು ಓರ್ವ ದೇವತೆಯನ್ನು ಕರೆಯುತ್ತೇನೆ. ಇದರಿಂದ ನಮಗೆ ಮಕ್ಕಳಾಗಬಹುದು. ಯಾವ ದೇವತೆಯನ್ನು ಆವಾಹಿಸಲಿ ಹೇಳು. ನಿನ್ನ ಅನುಜ್ಞೆಯಿದೆಯೆಂದಾದರೆ ನಾನು ಇದಕ್ಕೆ ಸಿದ್ಧಳಿದ್ದೇನೆ.

ಪಾಂಡುವು ಹೇಳಿದನು:

ವರಾರೋಹೆ! ಇಂದೇ ನೀನು ಯಥಾವಿಧಿಯಾಗಿ ಇದನ್ನು ಪ್ರಯತ್ನಿಸು. ದೇವತೆಗಳ ಪುಣ್ಯಭಾಗಿ ಧರ್ಮನನ್ನು ಆವಾಹಿಸು. ಇದು ಅಧರ್ಮವೆನಿಸಿದರೆ ಧರ್ಮನು ಎಂದೂ ಇದರಲ್ಲಿ ಪಾಲ್ಗೊಳ್ಳುವುದಿಲ್ಲ. ಜನರು ಇದನ್ನೇ ಧರ್ಮವೆಂದು ಮನ್ನಿಸುತ್ತಾರೆ. ಅವನು ನಿಸ್ಸಂಶಯವಾಗಿಯೂ ಕುರುಗಳಿಗೆ ಧರ್ಮದ ದಾರಿದೀಪನಾಗುತ್ತಾನೆ. ಧರ್ಮನಿಂದ ಕೊಡಲ್ಪಟ್ಟ ಅವನ ಮನಸ್ಸು ಅಧರ್ಮದ ಕಡೆ ಹೋಗಲು ಸಾಧ್ಯವೇ ಇಲ್ಲ.  ಆದುದರಿಂದ ಧರ್ಮನನ್ನು ಪುರಸ್ಕರಿಸು. ನಿಯತ್ತು ಮತ್ತು ಉಪಚಾರ ಅಭಿಚಾರಗಳಿಂದ ಧರ್ಮನನ್ನು ಆರಾಧಿಸು.

ಹಾಗೆಯೇ ಆಗಲಿ” ಎಂದು ತನ್ನ ಪತಿಗೆ ಹೇಳಿದ ಆ ವರಾಂಗನೆಯು ಅವನಿಗೆ ಪ್ರದಕ್ಷಿಣೆಮಾಡಿ ನಮಸ್ಕರಿಸಿ ಅಪ್ಪಣೆಯನ್ನು ಪಡೆದಳು.

ಕುಂತೀಪುತ್ರರ ಜನನ

ಗಾಂಧಾರಿಯು ಒಂದು ವರ್ಷದ ಗರ್ಭಿಣಿಯಾಗಿರುವಾಗ ಕುಂತಿಯು ಗರ್ಭಕ್ಕಾಗಿ ಅಚ್ಯುತ ಧರ್ಮನನ್ನು ಆಹ್ವಾನಿಸಿದಳು. ಆ ದೇವಿಯು ಕೂಡಲೇ ಬಲಿಗಳನ್ನಿತ್ತು ಧರ್ಮನನ್ನು ಪೂಜಿಸಿ ಹಿಂದೆ ದುರ್ವಾಸನು ಕೊಟ್ಟಿದ್ದ ಜಪವನ್ನು ವಿಧಿವತ್ತಾಗಿ ಜಪಿಸಿದಳು. ಯೋಗಮೂರ್ತಿಧರ ಧರ್ಮನನ್ನು ಸೇರಿ ಆ ವರಾರೋಹೆಯು ಪುಣ್ಯೋಭಿಪೂಜಿತ ಶುಕ್ಲಪಕ್ಷ ಅಷ್ಟಮಿ ತಿಥಿಯಲ್ಲಿ ಆಕಾಶದಲ್ಲಿ ಸೂರ್ಯನು ಮಧ್ಯಗತಿಯ ಅಭಿಜಿತ್ ಮುಹೂರ್ತದಲ್ಲಿರುವಾಗ ಇಂದ್ರನ ದಿನದಂದು ಉಸಿರಾಡುವ ಎಲ್ಲ ಜೀವಿಗಳಲ್ಲಿಯೂ ಶ್ರೇಷ್ಠ ಪುತ್ರನನ್ನು ಪಡೆದಳು.   ಕುಂತಿಯು ಸಮೃದ್ಧ ಯಶಸ್ವಿ ಪುತ್ರನಿಗೆ ಜನ್ಮವಿತ್ತ ವೇಳೆಯಲ್ಲಿ ಮಗನು ಹುಟ್ಟಿದಾಕ್ಷಣವೇ ಅಶರೀರ ವಾಣಿಯೊಂದು ಹೇಳಿತು:

ಇವನು ಧರ್ಮಭೃತರಲ್ಲಿಯೇ ಶ್ರೇಷ್ಠನಾಗುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಪಾಂಡುವಿನ ಪ್ರಥಮ ಸುತನು ಯುಧಿಷ್ಠಿರ ಎಂದು ವಿಖ್ಯಾತನಾಗುತ್ತಾನೆ. ಮೂರೂ ಲೋಕಗಳಲ್ಲಿ ವಿಶೃತ ಯಶಸ್ಸು, ತೇಜಸ್ಸು ಮತ್ತು ಉತ್ತಮ ನಡವಳಿಕೆಗಳನ್ನು ಹೊಂದಿದ ರಾಜನೆಂದು ಪ್ರಥಿತನಾಗುತ್ತಾನೆ.

ಧಾರ್ಮಿಕ ಸುತನನ್ನು ಪಡೆದ ಪಾಂಡುವು ಪುನಃ ಹೇಳಿದನು:

ಕ್ಷತ್ರಿಯನಿಗೆ ಬಲವೇ ಶ್ರೇಷ್ಠವೆಂದು ಹೇಳುತ್ತಾರೆ. ಬಲಜ್ಯೇಷ್ಠ ಪುತ್ರನನ್ನು ಕೇಳು.

ಪತಿಯ ಮಾತುಗಳಂತೆ ಅವಳು ವಾಯುವನ್ನು ಆಹ್ವಾನಿಸಿದಳು ಮತ್ತು ಅವನಿಂದ ಭೀಮ ಪರಾಕ್ರಮಿ, ಮಹಾಬಾಹು ಭೀಮನು ಜನಿಸಿದನು. ಆ ಅತಿಬಲಶಾಲಿಯು ಹುಟ್ಟಿದಾಗ ಅಶರೀರವಾಣಿಯೊಂದು

“ಇವನು ಎಲ್ಲ ಬಲಶಾಲಿಗಳಿಗಿಂಥ ಬಲಶಾಲಿಯಾಗಲು ಜನಿಸಿದ್ದಾನೆ!”

ಎಂದು ಹೇಳಿತು. ವೃಕೋದರನು ಹುಟ್ಟಿದಾಕ್ಷಣವೇ ಒಂದು ಅಧ್ಭುತವು ನಡೆಯಿತು. ಅವನು ತಾಯಿಯ ತೊಡೆಯಿಂದ ಉರುಳಿ ಬಿದ್ದಾಗ ದೊಡ್ಡ ಗಾತ್ರದ ಶಿಲೆಯೇ ಪುಡಿಪುಡಿಯಾಯಿತು. ಒಂದು ಹುಲಿಯ ಭಯದಿಂದ ಕುಂತಿಯು ಅವಸರದಲ್ಲಿ ತನ್ನ ತೊಡೆಯ ಮೇಲೆ ಮಲಗಿದ್ದ ವೃಕೋದರನನ್ನು ಮರೆತು ಎದ್ದು ನಿಂತಳು. ಆ ವಜ್ರಸಂಘಾತ ಕುಮಾರನು ಗಿರಿಯ ಮೇಲೆ ಬಿದ್ದನು. ಅವನು ಬೀಳುವಾಗ ಕೆಳಗಿದ್ದ ಶಿಲೆಯು ನೂರಾರು ಚೂರುಗಳಾಗಿ ಒಡೆಯಿತು. ಈ ರೀತಿ ಪುಡಿಯಾದ ಶಿಲೆಯನ್ನು ನೋಡಿದ ಪಾಂಡುವು ವಿಸ್ಮಿತನಾದನು. ಯಾವ ದಿನದಂದು ಭೀಮನು ಹುಟ್ಟಿದನೋ ಅದೇ ದಿನದಲ್ಲಿ ವಸುಧಾಧಿಪ ದುರ್ಯೋಧನನೂ ಹುಟ್ಟಿದನು.

ವೃಕೋದರನು ಹುಟ್ಟಿದ ನಂತರದಲ್ಲಿ ಪಾಂಡುವು

“ನಾನು ಹೇಗೆ ಉತ್ತಮ, ಲೋಕಶ್ರೇಷ್ಠ ಪುತ್ರನನ್ನು ಪಡೆಯಲಿ?”

ಎಂದು ಪುನಃ ಚಿಂತಿಸತೊಡಗಿದನು.

ಯಾಕೆಂದರೆ ಈ ಲೋಕವು ದೈವ ಮತ್ತು ಪುರುಷಕರ್ಮ ಇವೆರಡರ ಮೇಲೂ ನಡೆಯುತ್ತದೆ. ಆ ದೈವ ಎನ್ನುವುದು ವಿಧಿ ಮತ್ತು ಕಾಲಗಳು ಸೇರಿ ಬಂದಾಗ ದೊರೆಯುತ್ತದೆ. ದೇವತೆಗಳಿಗಳೆಲ್ಲ ಪ್ರಧಾನನಾದವನು ಅಪ್ರಮೇಯ ಬಲೋತ್ಸಾಹಿ, ವೀರ್ಯವಾನ, ಅಮಿತದ್ಯುತಿ ರಾಜ ಇಂದ್ರನೆಂದು ಕೇಳಿಲ್ಲವೇ?  ಅವನನ್ನು ತಪಸ್ಸಿನಿಂದ ತೃಪ್ತಿಗೊಳಿಸಿ ಮಹಾಬಲಶಾಲಿ ಪುತ್ರನನ್ನು ಪಡೆಯುತ್ತೇನೆ. ನನಗೆ ಅವನು ಕೊಡುವ ಪುತ್ರನು ಶ್ರೇಷ್ಠನಾಗುತ್ತಾನೆ. ಆದುದರಿಂದ ನನ್ನ ಕರ್ಮ, ಮನಸ್ಸು ಮತ್ತು ಮಾತುಗಳಿಂದ ಮಹಾತಪಸ್ಸನ್ನು ತಪಿಸುತ್ತೇನೆ.

ನಂತರ ಮಹಾತೇಜಸ್ವಿ ಕೌರವ್ಯ ಪಾಂಡುವು ಮಹರ್ಷಿಗಳೊಂದಿಗೆ ಸಮಾಲೋಚಿಸಿ, ಕುಂತಿಗೆ ಒಂದು ವರ್ಷಪರ್ಯಂತದ ಶುಭ ವ್ರತವನ್ನನುಸರಿಸಲು ನಿರ್ದೇಶಿಸಿದನು. ಆ ಮಹಾಬಾಹುವು ಸ್ವತಃ ಒಂದೇ ಕಾಲಮೇಲೆ ನಿಂತು ಹೆಚ್ಚಿನ ಏಕಾಗ್ರತೆಯಿಂದ ಉಗ್ರ ತಪಸ್ಸನ್ನು ಕೈಗೊಂಡನು. ಆ ಧರ್ಮಾತ್ಮನು ತ್ರಿದಶರ ಈಶ್ವರ ದೇವನನ್ನು ಸೂರ್ಯನನ್ನೇ ಹಿಂಬಾಲಿಸಿ ಆರಾಧಿಸಿದನು. ಬಹಳ ಕಾಲದ ನಂತರ ವಾಸವನು ಉತ್ತರಿಸಿದನು:

ಮೂರೂ ಲೋಕಗಳಲ್ಲಿ ವಿಶ್ರುತ ಪುತ್ರನನ್ನು ನಿನಗೆ ಕೊಡುತ್ತೇನೆ. ದೇವತೆಗಳ, ಬ್ರಾಹ್ಮಣರ ಮತ್ತು ಸುಹೃದಯರ ಉದ್ದೇಶಗಳನ್ನು ಸಾಧಿಸುವ, ತನ್ನ ಎಲ್ಲ ಶತ್ರುಗಳನ್ನೂ ನಾಶಪಡಿಸುವ ಶ್ರೇಷ್ಠ ಸುತನನ್ನು ನೀಡುತ್ತೇನೆ.

ರಾಜ ಕೌರವನಿಗೆ ಮಹಾತ್ಮ ವಾಸವನು ಈ ರೀತಿ ಹೇಳಿದ ನಂತರ ದೇವರಾಜನ ಮಾತನ್ನು ಸ್ಮರಿಸುತ್ತಾ ಆ ಧರ್ಮಾತ್ಮನು ಕುಂತಿಗೆ ಹೇಳಿದನು:

ನೀತಿಮಂತನೂ, ಮಹಾತ್ಮನೂ, ಆದಿತ್ಯಸಮತೇಜಸ್ವಿಯೂ, ದುರಾಧರ್ಷನೂ, ಕ್ರಿಯಾವಂತನೂ, ಅತೀವ ಅದ್ಭುತ ದರ್ಶನನೂ ಆದ ಕ್ಷತ್ರಿಯ ತೇಜಸ್ವಿಗಳ ಧಾಮ ಪುತ್ರನನ್ನು ಪಡೆ ಸುಶ್ರೋಣಿ! ದೇವೇಂದ್ರನ ಪ್ರಸಾದವಾಗಿದೆ, ಅವನನ್ನು ಆಹ್ವಾನಿಸು.

ಇದನ್ನು ಕೇಳಿದ ಆ ಯಶಸ್ವಿನಿಯು ಶಕ್ರನನ್ನು ಕರೆದಳು. ಆಗ ದೇವೇಂದ್ರನು ಆಗಮಿಸಿ ಅರ್ಜುನನನ್ನು ಹುಟ್ಟಿಸಿದನು. ಆ ಕುಮಾರನು ಹುಟ್ಟುತ್ತಿದ್ದಂತೆಯೇ ಅಶರೀರ ವಾಣಿಯೊಂದು ನಭದಲ್ಲೆಲ್ಲಾ ಪ್ರತಿಧ್ವನಿಸಿದ ಮಹಾಗಂಭೀರ ಸ್ವರದಲ್ಲಿ ಈ ರೀತಿ ಘೋಷಿಸಿತು:

ಕುಂತಿ! ವೀರ್ಯದಲ್ಲಿ ಕಾರ್ತಿವೀರ್ಯನ ಸಮ, ಪ್ರರಾಕ್ರಮದಲ್ಲಿ ಶಿಬಿಯನ್ನು ಹೋಲುವ, ಶಕ್ರನಂತೆ ಅಜೇಯನಾಗಿರುವ ಇವನು ನಿನ್ನ ಯಶಸ್ಸನ್ನು ಪಸರಿಸುತ್ತಾನೆ. ವಿಷ್ಣುವಿನಿಂದ ಅದಿತಿಯ ಸಂತೋಷವು ಹೇಗೆ ವೃದ್ಧಿಯಾಗಿತ್ತೋ ಹಾಗೆ ವಿಷ್ಣುಸಮನಾದ ಈ ಅರ್ಜುನನು ನಿನ್ನ ಸಂತೋಷವನ್ನೂ ವರ್ಧಿಸುತ್ತಾನೆ. ಇವನು ಮದ್ರ, ಕೇಕಯ, ಕಾಶಿ, ಕರೂಷ, ಇವರೆಲ್ಲರನ್ನೂ ಗೆದ್ದು, ಕುರು ರಾಜ್ಯಕ್ಕೆ ಸೇರಿಸುತ್ತಾನೆ, ಮತ್ತು ಕುರುಗಳ ಸಂಪತ್ತನ್ನು ವೃದ್ಧಿಸುತ್ತಾನೆ. ತನ್ನ ಭುಜಬಲದಿಂದ ಖಾಂಡವ ವನದಲ್ಲಿರುವ ಸರ್ವಭೂತಗಳ ಕೊಬ್ಬಿನಿಂದ ಹವ್ಯವಾಹನನಿಗೆ ಪರಮ ತೃಪ್ತಿಯನ್ನು ತರುತ್ತಾನೆ. ಈ ಮಹಾಬಲಶಾಲಿಯು ಮಹೀಪಾಲರನ್ನೆಲ್ಲ ಗೆದ್ದು ಭ್ರಾತೃಗಳ ಸಮೇತ ಮೂರು ಯಜ್ಞಗಳನ್ನು ನೆರವೇರಿಸುತ್ತಾನೆ. ಜಾಮದಗ್ನಿಯ ಸಮನಾದ, ಪರಾಕ್ರಮದಲ್ಲಿ ವಿಷ್ಣುವನ್ನು ಹೋಲುವ ಈ ವೀರ್ಯವಂತ ಶ್ರೇಷ್ಠನು ಅಪರಾಜಿತನಾಗುತ್ತಾನೆ. ಅವನಿಗೆ ಎಲ್ಲ ದಿವ್ಯಾಸ್ತ್ರಗಳು ದೊರೆಯುತ್ತವೆ ಮತ್ತು ಈ ಪುರುಷರ್ಷಭನು ಕಳೆದು ಹೋದ ಸಂಪತ್ತನ್ನು ಪುನಃ ಪಡೆಯುತ್ತಾನೆ.

ಕುಂತೀಪುತ್ರನ ಜನನ ಸಮಯದಲ್ಲಿ ಈ ಅದ್ಭುತ ಮಾತುಗಳು ಆಕಾಶದಲ್ಲಿ ವಾಯುವಿನಿಂದ ಕೇಳಿಬಂದಿತು. ಕುಂತಿಯು ಈ ಮಾತುಗಳನ್ನು ಅವನಿಂದಲೇ ಕೇಳಿದಳು. ಆ ಉಚ್ಛಸ್ವರದಲ್ಲಿ ಹೇಳಿದ ಮಾತುಗಳನ್ನು ಶತಶೃಂಗದಲ್ಲಿ ವಾಸಿಸುತ್ತಿದ್ದ ತಪಸ್ವಿಗಳೆಲ್ಲರೂ ಕೇಳಿ ಪರಮ ಹರ್ಷಿತರಾದರು. ಆಗ ಆಕಾಶದಲ್ಲಿ ದೇವಋಷಿಗಳ, ಇಂದ್ರರ ಮತ್ತು ದಿವೌಕಸರ ದುಂದುಭಿಗಳ ತುಮುಲವು ಕೇಳಿಬಂದಿತು. ದೇವಗಣಗಳು ಪಾರ್ಥನನ್ನು ಗೌರವಿಸಲು ನೆರೆದಾಗ ಪುಷ್ಪವೃಷ್ಠಿಗಳಿಂದೊಡಗೂಡಿದ ಮಹಾಘೋಷವು ಕೇಳಿಬಂದಿತು. ಕದ್ರುವಿನ ಮಕ್ಕಳು, ವಿನತೆಯ ಮಕ್ಕಳು, ಗಂಧರ್ವರು, ಅಪ್ಸರೆಯರು, ಸರ್ವ ಪ್ರಜೆಗಳ ನಾಯಕರು, ಮತ್ತು ಸಪ್ತ ಮಹರ್ಷಿಗಳು - ಭರದ್ವಾಜ, ಕಶ್ಯಪ, ಗೌತಮ, ವಿಶ್ವಾಮಿತ್ರ, ಜಮದಗ್ನಿ, ವಸಿಷ್ಠ, ಮತ್ತು ಭಾಸ್ಕರನ ಉದಯದೊಂದಿಗೆ ಕಾಣಿಸಿಕೊಳ್ಳುವ ಮತ್ತು ಅವನ ಅಸ್ತದೊಂದಿಗೆ ಮರೆಯಾಗುವ ಭಗವಾನ ಅತ್ರಿ -ಎಲ್ಲರೂ ಬಂದು ಸೇರಿದರು. ದಿವ್ಯ ಮಾಲಾಂಬರಗಳನ್ನು ಧರಿಸಿ ಸರ್ವಾಲಂಕಾರ ಭೂಷಿತೆ ಅಪ್ಸರೆಯರು ಬೀಭತ್ಸುವನ್ನು ಸುತ್ತುವರೆದು ಹಾಡುತ್ತಾ ನೃತ್ಯಮಾಡಿದರು. ಗಂಧರ್ವರನ್ನೊಡಗೊಂಡು ಶ್ರೀಮಾನ್ ತುಂಬುರುವು ಹಾಡಿದನು. ಈ ಎಲ್ಲ ಗಂಧರ್ವರು ಆ ನರರ್ಷಭನನ್ನು ಹಾಡಿ ಹೊಗಳಿದರು: ಭೀಮಸೇನ, ಉಗ್ರಸೇನ, ಊರ್ಣಾಯು, ಅನಘ, ಗೋಪತಿ, ಧೃತರಾಷ್ಟ್ರ, ಏಳನೆಯ ಸೂರ್ಯವರ್ಚಾಕ್ಷ, ಯುಗಪ, ತೃಣಪ, ಕಾರ್ಷ್ಣಿ, ನಂದಿ, ಚಿತ್ರರಥ, ಹದಿಮೂರನೆಯವನು ಶಾಲಿಶಿರ, ಹದಿನಾಲ್ಕನೆಯವನು ಪರ್ಜ್ಯನ್ಯ, ಹದಿನೈದನೆಯ ಕಲಿ, ಹದಿನಾರನೆಯ ನಾರದ, ಮಹಾಯಶಸ್ವಿ ಸದ್ದಾ, ಬೃಹದಾ, ಬೃಹಕ, ಕರಾಲ, ಬ್ರಹ್ಮಚಾರಿ, ಬಹುಗುಣ, ವಿಶೃತ ಸುಪರ್ಣ, ವಿಶ್ವಾವಸು, ಭುಮನ್ಯು, ಹತ್ತನೆಯ ಸುಚಂದ್ರ, ಮತ್ತು ಗೀತಮಾಧುರ್ಯ ಸಂಪನ್ನ ವಿಖ್ಯಾತ ಹಹ ಮತ್ತು ಆಹುಃ. ಆಯತಲೋಚನೆ ಮಹಾಭಾಗೆ ಅಪ್ಸರೆಯರೂ ಕೂಡ ಸಹರ್ಷದಿಂದ ಸರ್ವಾಲಂಕಾರ ಭೂಷಿತೆಯರಾಗಿ ಹಾಡಿ ಕುಣಿದರು. ಅನುನ, ಅನವದ್ಯ, ಪ್ರಿಯಮುಖ್ಯ, ಗುಣವರ, ಅದ್ರಿಕ, ಶಚಿ, ಮಿಶ್ರಕೇಶಿ, ಅಲಂಬುಷ, ಮರೀಚಿ, ಶಿಚುಕ, ವಿದ್ಯುತ್ಪರ್ಣ, ತಿಲೋತ್ತಮ, ಅಗ್ನಿಕ, ಲಕ್ಷಣಾ, ಕ್ಷೇಮ, ದೇವಿ ರಂಭಾ, ಮನೋರಮಾ, ಅಸಿತಾ, ಸುಬಾಹು, ಸುಪ್ರಿಯ, ಸುವಪು, ಪುಂಡರೀಕಾ, ಸುಗಂಧಾ, ಸುರಥಾ, ಪ್ರಮಥಿನೀ, ಕಾಮ್ಯ, ಶರದ್ವತೀ, ಇವರೆಲ್ಲರೂ ಅಲ್ಲಿ ನೃತ್ಯಗೈದರು. ಮೇನಕಾ, ಸಹಜನ್ಯ, ಪರ್ಣಿಕಾ, ಪುಂಜಿಕಸ್ಥಲಾ, ಕ್ರತುಸ್ಥಲಾ, ಘೃತಾಚೀ, ವಿಶ್ವಾಚೀ, ಪೂರ್ವಚಿತ್ತಾ, ಉಮ್ಲೋಚಾ, ಹತ್ತನೆಯ ಪ್ರಮ್ಲೋಚಾ, ಹನ್ನೊಂದನೆಯ ಉರ್ವಶಿ, ಈ ಎಲ್ಲ ಆಯತಲೋಚನೆಯರೂ ಹಾಡಿ ಕುಣಿದರು. ಪಾಂಡವನ ಮಹಿಮೆಯನ್ನು ವರ್ಧಿಸಲೋಸುಗ ಅಂಬರದಲ್ಲಿ ಪಾವಕನನ್ನೂ ಕೂಡಿ ಧಾತಾರ, ಯಮ, ಮಿತ್ರ, ವರುಣ, ಅಂಶ, ಭಗ, ಇಂದ್ರ, ವಿವಸ್ವಾನ್, ಪೂಷ, ತ್ವಷ್ಟ, ಸವಿತ, ಪರ್ಜನ್ಯ, ವಿಷ್ಣು ಮೊದರಾದ ಆದಿತ್ಯರು ನೆರೆದಿದ್ದರು. ಅಲ್ಲಿ ಮೃಗವ್ಯಾಧ, ಶರ್ವ, ನಿರೃತ್ತಿ, ಮಹಾಯಶಸ್ವಿ ಅಜ, ಏಕಪಾದ, ಬುರ್ಧ್ನ್ಯ, ಪರಂತಪಿ ಪಿನಾಕೀ, ದಹನ, ಈಶ್ವರ, ಕಪಾಲೀ, ಸ್ಥಾಣು, ಭಗವನ್ ಭಾವ, ಮೊದಲಾದ ರುದ್ರರೂ ನೆರೆದಿದ್ದರು. ಅಶ್ವಿನಿ ದೇವತೆಗಳು, ಅಷ್ಟ ವಸುಗಳು, ಮಹಾಬಲಶಾಲಿ ಮರುತರು, ವಿಶ್ವೇದೇವರು, ಮತ್ತು ಸಾದ್ಯರು ಅಲ್ಲಿ ಸುತ್ತುವರೆದಿದ್ದರು. ಮಹಾಬಲಶಾಲಿ, ಮಹಾಕ್ರೋಧಿ, ತಮ್ಮ ತೇಜಸ್ಸಿನಿಂದ ಸುಡುತ್ತಿದ್ದ ಕಾರ್ಕೋಟಕ, ಶೇಷ, ಭುಜಂಗಮ ವಾಸುಕಿ, ಕಚ್ಛಪ, ಅಪಕುಂಡ, ಮಹೋರಗ ತಕ್ಷಕ ಮೊದಲಾದ ಬಹಳಷ್ಟು ನಾಗಗಳು ಅಲ್ಲಿ ಸೇರಿದ್ದರು. ಅಲ್ಲಿ ವಿನತೆಯ ಮಕ್ಕಳಾದ ತಾರ್ಕ್ಷ್ಯ, ಅರಿಷ್ಠನೇಮಿ, ಗರುಡ, ಅಸಿತಧ್ವಜ, ಅರುಣ ಮತ್ತು ಅರುಣಿಯರೂ ಸೇರಿದ್ದರು. ಆ ಮಹದಾಶ್ವರ್ಯವನ್ನು ನೋಡಿ ವಿಸ್ಮಿತರಾದ ಮುನಿಸತ್ತಮರು ಆ ಪಾಂಡವನ ಕುರಿತು ಇನ್ನೂ ಅಧಿಕ ಗೌರವವನ್ನು ತೋರಿಸಿದರು.

ಆದರೆ ಮಹಾಯಶಸ್ವಿ ಪುತ್ರರನ್ನು ಪಡೆಯುವ ಆಸೆಯಿಂದ ಪಾಂಡುವು ಪುನಃ ದರ್ಶನೀಯ ಪತ್ನಿ ಕುಂತಿಯನ್ನು ಕೇಳಿದನು. ಆಗ ಅವಳು ಅವನಿಗೆ ಹೇಳಿದಳು:

ಆಪತ್ತಿನಲ್ಲಿಯೂ ನಾಲ್ಕನೆಯ ಮಗನ ಕುರಿತು ಮಾತನಾಡುವುದಿಲ್ಲ. ಮೂರು ಮಕ್ಕಳ ನಂತರ ಅವಳು ಚಾರಿಣಿ ಮತ್ತು ನಾಲ್ಕರ ನಂತರ ಬಂಧಕೀ ಎಂದು ಎನ್ನಿಸಿಕೊಳ್ಳುತ್ತಾಳೆ. ಈ ಧರ್ಮವನ್ನು ತಿಳಿದಿರುವ ನೀನು ಅದನ್ನು ಅತಿಕ್ರಮಿಸಿ ಬುದ್ಧಿಗಮ್ಯನಾಗಿ ನನಗೆ ಇನ್ನೂ ಮಕ್ಕಳನ್ನು ಪಡೆಯಲು ಹೇಗೆ ಹೇಳುತ್ತೀಯೆ?

ಮಾದ್ರೀಪುತ್ರರ ಜನನ

ಕುಂತೀ ಪುತ್ರರು ಮತ್ತು ಧೃತರಾಷ್ಟ್ರಾತ್ಮಜರು ಹುಟ್ಟಿದ ನಂತರ ಮದ್ರರಾಜ ಸುತೆಯು ಏಕಾಂತದಲ್ಲಿ ಪಾಂಡುವಿಗೆ ಈ ಮಾತುಗಳನ್ನು ಹೇಳಿದಳು:

ಪರಂತಪ! ನೀನು ನನ್ನೊಡನೆ ಒಳ್ಳೆಯದಾಗಿ ನಡೆದುಕೊಳ್ಳುತ್ತಿಲ್ಲ ಎಂದಾಗಲೀ ಅಥವಾ ನಾನು ನಿತ್ಯವೂ ನಿನ್ನ ಮೊದಲನೆಯ ಪತ್ನಿಯ ಕೆಳಸ್ಥಾನವನ್ನು ಹೊಂದಿದ್ದೇನೆ ಎಂದಾಗಲೀ ದುಃಖಿಸುತ್ತಿಲ್ಲ. ಗಾಂಧಾರಿಯೂ ಕೂಡ ನೂರು ಪುತ್ರರನ್ನು ಪಡೆದಳೆಂದು ಕೇಳಿಯೂ ನನಗೆ ದುಃಖವಾಗುತ್ತಿಲ್ಲ. ಆದರೆ ನಾನು ಮತ್ತು ಕುಂತಿ ಇಬ್ಬರಿಗೂ ಮಕ್ಕಳಾಗದಂತಿದ್ದರೂ ನೀನು ಅವಳೊಬ್ಬಳಿಂದ ಮಾತ್ರ ಮಕ್ಕಳನ್ನು ಪಡೆಯುವ ಹಾಗೆ ಆಯಿತಲ್ಲ ಎಂದು ಬಹಳ ದುಃಖವಾಗುತ್ತಿದೆ. ಕುಂತಿರಾಜಸುತೆಯು ನಾನು ಕೂಡ ಮಕ್ಕಳನ್ನು ಪಡೆಯುವಂತೆ ಮಾಡಿದರೆ ನನಗೆ ಅನುಗ್ರಹವಾದಂತಾಗುತ್ತದೆ ಮತ್ತು ನಿನಗೂ ಹಿತವಾಗುತ್ತದೆ. ಅವಳ ಸಪತ್ನಿಯಾದ ನನಗೆ ಕುಂತಿಸುತೆಯಲ್ಲಿ ಈ ಮಾತುಗಳನ್ನು ಹೇಳಲು ಕಷ್ಟವಾಗುತ್ತಿದೆ. ಆದರೆ ನೀನು ನನ್ನ ಮೇಲೆ ಪ್ರಸನ್ನನಾಗಿದ್ದೀಯಾದರೆ ನೀನೇ ಅವಳಿಗೆ ಹೇಳಿ ತಯಾರಿಸು.

ಪಾಂಡುವು ಹೇಳಿದನು:

ಮಾದ್ರಿ! ನಾನೂ ಕೂಡ ಈ ವಿಷಯವನ್ನು ಸದಾ ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೆ. ನಿನಗೆ ಬೇಸರವಾಗಬಹುದೆಂದು ನಾನು ನಿನ್ನಲ್ಲಿ ಹೇಳಿಕೊಳ್ಳಲಾಗಲಿಲ್ಲ. ಈಗ ನಿನ್ನ ಮನಸ್ಸಿನಲ್ಲಿರುವುದು ನನಗೆ ತಿಳಿದಿದೆಯಾದುದರಿಂದ ಈಗಲೇ ನಾನು ಕಾರ್ಯಗತನಾಗುತ್ತೇನೆ. ನನ್ನ ಮಾತಿನಂತೆಯೇ ಅವಳು ನಡೆಯುತ್ತಾಳೆ ಎಂದು ನನಗೆ ವಿಶ್ವಾಸವಿದೆ.

ನಂತರ ಪಾಂಡುವು ಏಕಾಂತದಲ್ಲಿದ್ದಾಗ ಕುಂತಿಯಲ್ಲಿ ಹೇಳಿದನು:

ನನ್ನ ಕುಲಕ್ಕೆ ಸಂತಾನವನ್ನೂ ಮತ್ತು ಲೋಕಕ್ಕೆ ಪ್ರಿಯವಾದುದನ್ನೂ ಮಾಡು. ಕಲ್ಯಾಣಿ! ನಾನು ಮತ್ತು ನನ್ನ ಪೂರ್ವಜರು ಅಪಿಂಡರಾಗಬಾರದೆಂದು, ನನ್ನ ಪ್ರೀತಿಗೋಸ್ಕರ ಈ ಉತ್ತಮ ಕಲ್ಯಾಣ ಕಾರ್ಯವನ್ನು ಮಾಡು. ನಿನ್ನ ಯಶಸ್ಸಿಗೋಸ್ಕರವೂ ಒಂದು ದುಷ್ಕರ ಕೆಲಸವನ್ನು ಮಾಡು. ಒಡೆತನವನ್ನು ಪಡೆದ ಇಂದ್ರನೂ ಕೂಡ ತನ್ನ ಯಶಸ್ಸಿಗೋಸ್ಕರ ಯಜ್ಞಗಳನ್ನು ಕೈಗೊಳ್ಳುತ್ತಾನೆ. ಹೀಗೆ ಮಂತ್ರಗಳನ್ನು ತಿಳಿದ ದುಷ್ಕರ ತಪಸ್ಸುಗಳನ್ನು ಗೈದ ವಿಪ್ರರೂ ಕೂಡ ತಮ್ಮ ಯಶಸ್ಸಿಗೋಸ್ಕರ ಹೊಸ ಗುರುಗಳನ್ನು ಅರಸಿ ಹೋಗುತ್ತಾರೆ. ಹಾಗೆಯೇ ಸರ್ವ ರಾಜರ್ಷಿಗಳೂ, ಬ್ರಾಹ್ಮಣರೂ, ತಪೋಧನರೂ ತಮ್ಮ ಯಶಸ್ಸಿಗೋಸ್ಕರ ಹೆಚ್ಚು ಹೆಚ್ಚು ಮೇಲ್ಮಟ್ಟದ ದುಷ್ಕರ ಕರ್ಮಗಳನ್ನು ಎಸಗುತ್ತಾರೆ. ಅನಿಂದಿತೇ! ನೀನು ಮಾದ್ರಿಯನ್ನು ನಮ್ಮ ಈ ಹಡಗಿನಿಂದ ಪಾರುಮಾಡಿಸಬೇಕು. ಅವಳಿಗೆ ಮಕ್ಕಳನ್ನು ನೀಡುವುದರಿಂದ ನೀನು ಅತ್ಯಂತ ಕೀರ್ತಿಯನ್ನು ಪಡೆಯುತ್ತೀಯೆ.

ತಕ್ಷಣವೇ ಅವಳು ಮಾದ್ರಿಯನ್ನು ಕರೆದು ಹೇಳಿದಳು:

ಮಾದ್ರಿ! ಯಾರಾದರೂ ದೇವತೆಯನ್ನು ಒಮ್ಮೆ ಮಾತ್ರ ಯೋಚಿಸು. ಅವನಿಂದ ಅನುರೂಪ ಪುತ್ರನನ್ನು ಪಡೆಯುತ್ತೀಯೆ. ಸಂಶಯವೇ ಇಲ್ಲ.

ನಂತರ ಮಾದ್ರಿಯು ವಿಚಾರಮಾಡಿ ಮನಸಾ ಅಶ್ವಿನಿಯರಲ್ಲಿ ಹೋದಳು. ಅವರು ಬಂದು ಅವಳಲ್ಲಿ ರೂಪದಲ್ಲಿ ಭೂಮಿಯಲ್ಲಿಯೇ ಅಪ್ರತಿಮ ನಕುಲ-ಸಹದೇವರೆಂಬ ಅವಳಿ ಮಕ್ಕಳನ್ನು ಹುಟ್ಟಿಸಿದರು. ಈ ಅವಳಿ ಮಕ್ಕಳು ಹುಟ್ಟಿದಾಗಲೂ ಅಶರೀರವಾಣಿಯೊಂದು ಹೇಳಿತು:

ಅನ್ಯ ಜನರಿಗಿಂತ ಅಧಿಕ ರೂಪ ಸತ್ವ ಗುಣೋಪೇತರಾದ ಇವರು ಅವರ ತೇಜಸ್ಸು, ರೂಪ ಮತ್ತು ದ್ರವಿಣ ಸಂಪತ್ತಿನಿಂದ ಬೆಳಗುತ್ತಾರೆ!

ಶತಶೃಂಗವಾಸಿಗಳು ಅವರಿಗೆ ಹೆಸರುಗಳನ್ನಿತ್ತರು ಮತ್ತು ಭಕ್ತಿ ಕರ್ಮಗಳಿಂದ ಅಶೀರ್ವದಿಸಿದರು. ಜ್ಯೇಷ್ಠನನ್ನು ಯುಧಿಷ್ಠಿರನೆಂದು ಕರೆದರು, ಮಧ್ಯಮನನ್ನು ಭೀಮಸೇನ ಎಂದು, ತೃತೀಯನನ್ನು ಅರ್ಜುನನೆಂದೂ ಹೀಗೆ ಕುಂತೀ ಪುತ್ರರಿಗೆ ಹೆಸರುಗಳನ್ನಿಟ್ಟರು. ಪ್ರೀತಮನಸ್ಕ ವಿಪ್ರರು ಮಾದ್ರೀಪುತ್ರರಿಗೂ ಹೆಸರುಗಳನ್ನಿಟ್ಟರು: ಹಿರಿಯವನನ್ನು ನಕುಲನೆಂದೂ ಮತ್ತು ಕಿರಿಯವನನ್ನು ಸಹದೇವನೆಂದೂ ಕರೆದರು. ಈ ಕುರುಸತ್ತಮರು ಒಂದೊಂದು ವರ್ಷದ ಅಂತರದಲ್ಲಿ ಹುಟ್ಟಿದ್ದರು.

ಪಾಂಡುವು ಮಾದ್ರಿಯ ಪರವಾಗಿ ಏಕಾಂತದಲ್ಲಿ ರಹಸ್ಯದಲ್ಲಿ ಕುಂತಿಯಲ್ಲಿ ಪುನಃ ಕೇಳಿಕೊಂಡನು. ಆದರೆ ಪೃಥಾಳು ರಾಜನಿಗೆ ಈ ರೀತಿ ಉತ್ತರಿಸಿದಳು:

ನಾನು ಅವಳಿಗೆ ಒಂದೇ ಬಾರಿ ಕೊಡುತ್ತೇನೆ ಎಂದರೂ ಅವಳು ಈರ್ವರನ್ನು ಪಡೆದು ನನಗೆ ವಂಚನೆ ಮಾಡಿದಳು. ನನ್ನನ್ನು ಹಿಂದೆಹಾಕುವಳು ಎಂಬ ಭಯವಿದೆ. ನಾರಿಯರ ಸ್ವಭಾವವೇ ಇದು. ಎರಡು ದೇವತೆಗಳನ್ನು ಕರೆದು ಎರಡು ಮಕ್ಕಳನ್ನು ಪಡೆಯಬಹುದೆಂದು ಮೂಢಳಾದ ನಾನು ತಿಳಿದಿರಲಿಲ್ಲ. ಆದುದರಿಂದ ಇದರ ಕುರಿತು ನನಗೆ ಪುನಃ ಅಪ್ಪಣೆಮಾಡಬೇಡ. ಇದೇ ನಿನ್ನಿಂದ ನನಗೆ ಬೇಕಾದ ವರ.

ಈ ರೀತಿ ಮಹಾಬಲಶಾಲಿ, ಕುರುವಂಶವಿವರ್ಧನ, ಕೀರ್ತಿವಂತ, ದೇವದತ್ತ ಆ ಐವರು ಸುತರು ಪಾಂಡುವಿಗೆ ಜನಿಸಿದರು. ಆ ಶುಭಲಕ್ಷಣಸಂಪನ್ನ, ಚಂದ್ರನಂತೆ ಸುಂದರ, ಸಿಂಹದರ್ಪ, ಮಹೇಷ್ವಾಸ, ಸಿಂಹವಿಕ್ರಾಂತಗಾಮಿ, ಸಿಂಹಗ್ರೀವ ಮನುಷ್ಯೇಂದ್ರರು ದೇವ ವಿಕ್ರಮಿಗಳಾಗಿ ಬೆಳೆದರು. ಆ ಪುಣ್ಯಕರ ಹಿಮಾಲಯ ಪರ್ವತದಲ್ಲಿ ಬೆಳೆಯುತ್ತಿರುವ ಅವರು ಅಲ್ಲಿ ಸೇರಿದ್ದ ಮಹರ್ಷಿಗಳಿಗೆ ವಿಸ್ಮಯವನ್ನುಂಟುಮಾಡಿದರು. ಈ ಐವರು ಮತ್ತು ಇತರ ನೂರು ಗುರುವಂಶವಿವರ್ಧನ ಸರ್ವರೂ ಸರೋವರದಲ್ಲಿದ್ದ ಕಮಲಗಳಂತೆ ಸ್ವಲ್ಪ ಕಾಲದಲ್ಲಿಯೇ ಬೆಳೆದು ದೊಡ್ಡವರಾದರು.

ಪಾಂಡುವಿನ ಮರಣ

ತನ್ನ ಐವರು ಸುಂದರ ಪುತ್ರರು ಆ ಪರ್ವತದ ಮಹಾವನದಲ್ಲಿ ಬಾಹುಬಲದಿಂದ ರಕ್ಷಿತರಾಗಿ ಬೆಳೆಯುತ್ತಿರುವುದನ್ನು ನೋಡಿದ ಪಾಂಡುವು ಅತ್ಯಂತ ಹರ್ಷಿತನಾದನು. ಒಮ್ಮೆ ಎಲ್ಲ ಜೀವಿಗಳೂ ಸಮ್ಮೋಹನಗೊಂಡಿರುವ, ವನವೆಲ್ಲ ಪುಷ್ಪಭರಿತ ಕಾಲ ಮಧುಮಾಸದಲ್ಲಿ ರಾಜನು ತನ್ನ ಪತ್ನಿಯರೊಂದಿಗೆ ವನದಲ್ಲಿ ಸಂಚರಿಸುತ್ತಿದ್ದನು. ಪಲಾಶ, ತಿಲಕ, ಚೂತ, ಚಂಪಕ, ಪಾರಿಭದ್ರಕ ಮತ್ತು ಇತರ ಬಹು ವೃಕ್ಷಗಳಿಂದ ಫಲಪುಷ್ಪಸಮೃದ್ಧವಾದ, ವಿವಿಧ ಜಲಸ್ಥಾನಗಳಿಂದೊಡಗೂಡಿದ, ಶೋಭನೀಯ ಪದ್ಮಿನಿಗಳಿಂದೊಡಗೂಡಿದ ಆ ವನವನ್ನು ಕಂಡ ಪಾಂಡುವಿನ ಹೃದಯದಲ್ಲಿ ಕಾಮವು ಬೆಳೆಯಿತು. ಅಮರನಂತೆ ಪ್ರಹೃಷ್ಟಮನಸ್ಕನಾಗಿ ಅಲ್ಲಿ ವಿಹರಿಸುತ್ತಿರುವ ಅವನನ್ನು ಒಂದೇ ಒಂದು ತುಂಡು ಬಟ್ಟೆಯನ್ನು ಉಟ್ಟ ಸುಂದರಿ ಮಾದ್ರಿಯು ಹಿಂಬಾಲಿಸಿದಳು. ತನ್ನ ಆ ಸುಂದರ ದೇಹವನ್ನು ಚಿಕ್ಕ ವಸ್ತ್ರದಿಂದ ಮುಚ್ಚಿಕೊಂಡಿದ್ದ ಅವಳನ್ನು ನೋಡಿ ಅವನಲ್ಲಿ ದಟ್ಟ ಅಗ್ನಿಯಂತೆ ಕಾಮವು ಭುಗಿಲೆದ್ದಿತು. ತನ್ನಹಾಗಿನ ಯೋಚನೆಯಲ್ಲಿಯೇ ಇದ್ದ ಆ ರಾಜೀವಲೋಚನೆಯನ್ನು ನೋಡಿದ ರಾಜನು ತನ್ನ ಕಾಮವನ್ನು ನಿಯಂತ್ರಿಸಲು ಅಸಮರ್ಥನಾಗಲು ಕಾಮ ಬಲವು ಅವನನ್ನು ಆವರಿಸಿತು. ಆ ನಿರ್ಜನ ವನದಲ್ಲಿ ರಾಜನು ತನ್ನ ಪತ್ನಿಯನ್ನು ಬಲವಂತವಾಗಿ ಹಿಡಿದು, ಆ ದೇವಿಯು ತನ್ನ ಶಕ್ತಿಯನ್ನು ಬಳಸಿ ಬಿಡಿಸಿಕೊಂಡು ನುಣುಚಿ ಹೋಗಲು ಪ್ರಯತ್ನಿಸಿದರೂ, ಸೇರಿದನು. ಆ ಕಾಮಪರೀತಾತ್ಮನು ತನ್ನ ಮೇಲಿದ್ದ ಶಾಪವನ್ನು ಮರೆತು ಬಲವಂತವಾಗಿ ಮಾದ್ರಿಯನ್ನು ಸೇರಲು ಹೋದನು. ಶಾಪದಿಂದುಂಟಾದ ಭಯವನ್ನು ಕಿತ್ತು ಬಿಸುಟು, ಮನ್ಮಥನ ವಶನಾಗಿ ತನ್ನ ಜೀವನವನ್ನೇ ಅಂತ್ಯಗೊಳಿಸಿಕೊಳ್ಳುವ ಕೌರವ್ಯನು ತನ್ನ ಪ್ರೇಮಿಕೆಯಲ್ಲಿ ಬಲವಂತವಾಗಿ ಹೋದನು. ಆ ಕಾಮಾತ್ಮನ ಬುದ್ಧಿಯು ಸಾಕ್ಷಾತ್ ಕಾಲದಿಂದ ಮೋಹಿತವಾಗಿತ್ತು. ಇಂದ್ರಿಯಗಳಿಂದ ಕಡೆಯಲ್ಪಟ್ಟ ಅವನ ಚೇತನವು ಅಲ್ಲಿಯೇ ನಷ್ಟವಾಯಿತು. ಪರಮ ಧರ್ಮಾತ್ಮ ಕುರುನಂದನ ಪಾಂಡುವು ತನ್ನ ಭಾರ್ಯೆಯನ್ನು ಕೂಡಿ ಕಾಲಧರ್ಮಕ್ಕೊಳಗಾದನು.

ತೀರಿಕೊಂಡ ರಾಜನ ದೇಹವನ್ನು ಆಲಿಂಗಿಸಿ ಮಾದ್ರಿಯು ಪುನಃ ಪುನಃ ದುಃಖಪೂರ್ಣ ಕೂಗನ್ನು ಕೂಗಿದಳು. ತಕ್ಷಣವೇ ಕುಂತಿಯು ತನ್ನ ಪುತ್ರ ಪಾಂಡವರು ಮತ್ತು ಮಾದ್ರಿಯ ಎರಡು ಮಕ್ಕಳನ್ನೊಡಗೂಡಿ ರಾಜನು ತೀರಿಕೊಂಡಿದ್ದ ಸ್ಥಳಕ್ಕೆ ಧಾವಿಸಿದಳು. ಆಗ ಆರ್ತ ಮಾದ್ರಿಯು ಕುಂತಿಗೆ ಕೂಗಿ ಹೇಳಿದಳು:

ಮಕ್ಕಳನ್ನು ಅಲ್ಲಿಯೇ ನಿಲ್ಲಿಸಿ ನೀನೊಬ್ಬಳೇ ಇಲ್ಲಿಗೆ ಬಾ!

ಈ ಮಾತುಗಳನ್ನು ಕೇಳಿದ ಅವಳು ಮಕ್ಕಳನ್ನು ಅಲ್ಲಿಯೇ ಬಿಟ್ಟು “ಹತಳಾದೆ!””ಎಂದು ತೀವ್ರವಾಗಿ ಕೂಗುತ್ತಾ ಹತ್ತಿರಕ್ಕೆ ಓಡಿ ಬಂದಳು. ಧರಣೀತಲದಲ್ಲಿ ಮಲಗಿದ್ದ ಪಾಂಡು ಮತ್ತು ಮಾದ್ರಿಯನ್ನು ನೋಡಿದ ಕುಂತಿಯು ಶೋಕಪರೀತಾಂಗಿಯಾಗಿ ದುಃಖಿತಳಾಗಿ ವಿಲಪಿಸಿದಳು:

ನಾನು ನಿತ್ಯವೂ ಈ ವೀರನನ್ನು ರಕ್ಷಿಸುತ್ತಿದ್ದೆ ಮತ್ತು ಅವನೂ ಕೂಡ ಸತತವೂ ತನ್ನನ್ನು ತಾನೇ ನಿಯಂತ್ರಣದಲ್ಲಿಟ್ಟುಕೊಳ್ಳುತ್ತಿದ್ದ. ಹಾಗಿರುವಾಗ, ವನವಾಸಿಯ ಶಾಪವನ್ನು ತಿಳಿದೂ ಕೂಡ ನೀನು ಹೇಗೆ ಅವನನ್ನು ಅತಿಕ್ರಮಿಸಿದೆ? ಮಾದ್ರಿ! ಜನಾಧಿಪನನ್ನು ರಕ್ಷಿಸುವುದು ನಿನ್ನ ಕರ್ತವ್ಯವೂ ಆಗಿರಲಿಲ್ಲವೇ? ಹಾಗಿರುವಾಗ ನೀನು ಹೇಗೆ ಈ ನಿರ್ಜನವನದಲ್ಲಿ ನರಾಧಿಪನನ್ನು ಲೋಭಗೊಳಿಸಿದೆ? ಜನಾಧಿಪನನ್ನು ರಕ್ಷಿಸುವುದು ನಿನ್ನ ಕರ್ತವ್ಯವೂ ಆಗಿರಲಿಲ್ಲವೇ? ಹಾಗಿರುವಾಗ ನೀನು ಹೇಗೆ ಈ ನಿರ್ಜನವನದಲ್ಲಿ ನರಾಧಿಪನನ್ನು ಲೋಭಗೊಳಿಸಿದೆ? ನೀನೇ ಧನ್ಯೆ ಮತ್ತು ನನಗಿಂತಲೂ ಭಾಗ್ಯವಂತೆ. ಮಹೀಪತಿಯ ಪ್ರಹೃಷ್ಟ ಮುಖವನ್ನು ನೋಡಿಯಾದರೂ ಸಂತಸಗೊಂಡೆ.

ಮಾದ್ರಿಯು ಹೇಳಿದಳು:

ಅವನೇ ನನ್ನನ್ನು ಪ್ರಚೋದಿಸಿದನು. ನಾನು ಅವನನ್ನು ತಡೆಯಲು ಪುನಃ ಪುನಃ ಪ್ರಯತ್ನಿಸಿದೆ. ಆದರೆ ನಾನು ಅವನಿಂದ ದೂರವಾಗಿರಲು ಸಾದ್ಯವಾಗಲಿಲ್ಲ. ಅವನು ತನಗಿರುವ ಗಂಡಾಂತರವನ್ನು ಸತ್ಯಮಾಡಿಸಲೇ ತೊಡಗಿದ್ದನಂತಿದ್ದನು.

ಕುಂತಿಯು ಹೇಳಿದಳು:

ನಾನು ಜ್ಯೇಷ್ಠ ಧರ್ಮಪತ್ನಿ ಮತ್ತು ನನಗೇ ಹೆಚ್ಚಿನ ದರ್ಮಫಲವು ದೊರೆಯಬೇಕು. ಅವಶ್ಯವಾಗಿ ಆಗಬೇಕಾದುದು ಆಗಲಿ. ಮಾದ್ರಿ! ನನ್ನನ್ನು ನೀನು ತಡೆಯಬೇಡ! ನನ್ನ ಪ್ರೇತವಶ ಪತಿಯನ್ನು ಇಲ್ಲಿಯೇ ಹಿಂಬಾಲಿಸುತ್ತೇನೆ. ಅವನನ್ನು ಬಿಟ್ಟು ಮೇಲೇಳು. ಈ ಮಕ್ಕಳನ್ನು ನೋಡಿಕೋ.

ಮಾದ್ರಿಯು ಹೇಳಿದಳು:

ಇಲ್ಲ. ಅವನು ಹೋಗುವುದರೊಳಗಾಗಿ ನಾನೇ ನನ್ನ ಪತಿಯನ್ನು ಹಿಂಬಾಲಿಸುತ್ತೇನೆ. ಯಾಕೆಂದರೆ ನನ್ನ ಆಸೆಗಳು ಇನ್ನೂ ತೃಪ್ತವಾಗಿಲ್ಲ. ಹಿರಿಯವಳಾದ ನೀನು ನನಗೆ ಅನುಮತಿ ನೀಡಬೇಕು. ನನ್ನೊಡನೆ ಮಲಗಿರುವಾಗ ಈ ಭರತಸತ್ತಮನ ಕಾಮಕ್ಷೀಣವಾಯಿತು. ಹಾಗಿರುವಾಗ ಯಮಸದನದಲ್ಲಿ ಅವನ ಕಾಮವನ್ನು ನಾನು ಹೇಗೆ ತಾನೆ ಪೂರೈಸದೇ ಇರಲಿ? ನಾನು ಜೀವಂತವಿದ್ದರೂ ನನ್ನ ಮತ್ತು ನಿನ್ನ ಮಕ್ಕಳನ್ನು ಒಂದೇ ಸಮನಾಗಿ ನೋಡಿಕೊಳ್ಳಲಾರೆ. ಅದರಿಂದಲೂ ನನಗೆ ಪಾಪವು ಬಾರದೇ ಇರುವುದಿಲ್ಲ. ಆದುದರಿಂದ ಕುಂತಿ! ನನ್ನ ಪುತ್ರರನ್ನು ನಿನ್ನ ಮಕ್ಕಳಂತೆಯೇ ನೋಡಿಕೋ. ನನ್ನನ್ನು ಬಯಸುತ್ತಲೇ ರಾಜನು ಪ್ರೇತವಶನಾದನು. ನನ್ನನ್ನು ಇಷ್ಟೊಂದು ಚೆನ್ನಾಗಿ ಆವರಿಸಿರುವ ರಾಜನ ಶರೀರದ ಜೊತೆ ನನ್ನ ಈ ಶರೀರವನ್ನು ಸುಟ್ಟುಹಾಕಿ ನನಗೊಂದು ಒಳ್ಳೆಯ ಕಾರ್ಯವನ್ನು ಮಾಡಿಕೊಡು. ಮಕ್ಕಳನ್ನು ಸರಿಯಾಗಿ ನೋಡಿಕೋ. ನನ್ನ ಹಿತವನ್ನೇ ಚಿಂತಿಸು. ನಿನ್ನನ್ನು ನಿಂದಿಸುವ ಕಾರಣವೇನೂ ನನಗೆ ತೋರುತ್ತಿಲ್ಲ.

ಹೀಗೆ ಹೇಳಿ ನರರ್ಷಭನ ಆ ಧರ್ಮಪತ್ನಿ, ಮದ್ರರಾಜನ ಮಗಳು ಯಶಸ್ವಿನಿಯು ಕೂಡಲೇ ಅವನ ಚಿತಾಗ್ನಿಯನ್ನು ಏರಿದಳು.

ಋಷಿಗಳು ಪಾಂಡವರನ್ನು ಹಸ್ತಿನಾಪುರಕ್ಕೆ ಕರೆತಂದುದು

ದೇವಕಲ್ಪಿ ಮಹರ್ಷಿಗಳು ಪಾಂಡುವಿನ ಅಂತ್ಯಕ್ರಿಯೆಗಳನ್ನು ನೆರವೇರಿಸಿದರು. ನಂತರ ತಪಸ್ವಿಗಳು ಒಂದುಗೂಡಿ ಸಮಾಲೋಚಿಸಿದರು:

ಆ ಮಹಾತ್ಮ ಮಹಾತಪಸ್ವಿಯು ರಾಜ್ಯ ಮತ್ತು ರಾಷ್ಟ್ರಗಳನ್ನು ತ್ಯಜಿಸಿ ಈ ಸ್ಥಾನದಲ್ಲಿ ತಪಸ್ಸನ್ನು ತಪಿಸಲು ತಾಪಸರ ಶರಣಾಗಿ ಬಂದಿದ್ದನು. ಈಗಷ್ಟೇ ಜನಿಸಿದ ಮಕ್ಕಳನ್ನು ಮತ್ತು ಪತ್ನಿಯನ್ನು ನಮ್ಮ ರಕ್ಷಣೆಯಲ್ಲಿಟ್ಟು ರಾಜ ಪಾಂಡುವು ಸ್ವರ್ಗವನ್ನು ಸೇರಿದ್ದಾನೆ.

ಸರ್ವ ಜೀವಿಗಳ ಹಿತೋರತ, ಉದಾರ ಮನಸ್ಕ, ಮನಸ್ಸಿನಲ್ಲಿಯೇ ಪ್ರಯಾಣಿಸುವ, ಆ ಸಿದ್ಧರು ಪರಸ್ಪರರಲ್ಲಿ ಸಮಾಲೋಚನೆಗೈದು ಪಾಂಡುವಿನ ಪುತ್ರರನ್ನು ಮುಂದಿಟ್ಟುಕೊಂಡು, ಪಾಂಡವರನ್ನು ಭೀಷ್ಮ ಮತ್ತು ಧೃತರಾಷ್ಟ್ರನಿಗೆ ಒಪ್ಪಿಸಲೋಸುಗ ನಾಗಸಾಹ್ವಯ ನಗರಕ್ಕೆ ಹೊರಟರು. ಅದೇ ಕ್ಷಣದಲ್ಲಿ ಸರ್ವ ತಾಪಸರೂ ಪಾಂಡುವಿನ ಪತ್ನಿ, ಮಕ್ಕಳು ಮತ್ತು ಶರೀರವನ್ನು ತೆಗೆದುಕೊಂಡು ಹೊರಟರು. ಹಿಂದೆ ಸುಖವನ್ನೇ ಕಂಡಿದ್ದ ಕುಂತಿಯು ಸತತವೂ ಪುತ್ರವತ್ಸಳಲಾಗಿದ್ದು ದೀರ್ಘ ಪ್ರಯಾಣವನ್ನು ಸಂಕ್ಷಿಪ್ತವಾದಂತೆ ಕಂಡಳು. ಹೆಚ್ಚು ಸಮಯವನ್ನು ತೆಗೆದುಕೊಳ್ಳದೇ ಆ ಯಶಸ್ವಿನಿಯು ಕುರುಜಂಗಲವನ್ನು ಸೇರಿ ವರ್ಧಮಾನ ಪುರದ್ವಾರವನ್ನು ತಲುಪಿದಳು. ನಾಗಪುರವಾಸಿಗಳು ಸಹಸ್ರಾರು ಚಾರಣ-ಮುನಿಗಳು ಆಗಮಿಸಿದ್ದಾರೆ ಎಂದು ಕೇಳಿ ವಿಸ್ಮಿತರಾದರು. ಸೂರ್ಯೋದಯ ಮುಹೂರ್ತದಲ್ಲಿಯೇ ಎಲ್ಲ ಧರ್ಮ ಪುರಸ್ಕೃತ ಪುರವಾಸಿಗಳು ತಮ್ಮ ಪತ್ನಿಯರನ್ನೊಡಗೂಡಿ ತಾಪಸಿಗಳನ್ನು ನೋಡಲು ಹೊರಬಂದರು. ಸ್ತ್ರೀಯರ ಗುಂಪುಗಳು, ಕ್ಷತ್ರಿಯರ ಗುಂಪುಗಳು, ಬಂಡಿಗಳ ಸಾಲುಗಳು, ಬ್ರಾಹ್ಮಣರು ಮತ್ತು ಬ್ರಾಹ್ಮಣ ಪತ್ನಿಯರು ಎಲ್ಲರೂ ಹೊರಬಂದರು. ಅಲ್ಲಿ ಶೂದ್ರರ ಮತ್ತು ವೈಶ್ಯರ ಬಹುದೊಡ್ಡ ಗುಂಪೇ ಇತ್ತು. ಯಾರಲ್ಲಿಯೂ ಅಸೂಯೆಭಾವನೆಯಿರಲಿಲ್ಲ. ಎಲ್ಲರ ಮನಸ್ಸೂ ಧರ್ಮದಮೇಲೆಯೇ ಇತ್ತು. ಭೀಷ್ಮ ಶಾಂತನವ, ಬಾಹ್ಲೀಕ ಸೋಮದತ್ತ, ಪ್ರಜ್ಞಾಚಕ್ಷುಷಿ ರಾಜರ್ಷಿ, ಸ್ವಯಂ ಕ್ಷತ್ತ ವಿದುರ, ದೇವಿ ಸತ್ಯವತೀ, ಯಶಸ್ವಿನೀ ಕೌಸಲ್ಯಾ, ರಾಜಕುಮಾರರಿಂದ ಸುತ್ತುವರೆಯಲ್ಪಟ್ಟ ಗಾಂಧಾರೀ ಇವರೆಲ್ಲರೂ ಹೊರಬಂದರು. ದುರ್ಯೋಧನನ ಮುಂದಾಳುತನದಲ್ಲಿದ್ದ ಧೃತರಾಷ್ಟ್ರನ ಮಕ್ಕಳು, ಸುಂದರ ಭೂಷಣಗಳಿಂದ ಭೂಷಿತರಾಗಿ ನೂರು ಸಂಖ್ಯೆಯಲ್ಲಿ ಹೊರಬಂದರು. ಆ ಸರ್ವ ಮಹರ್ಷಿಗಣಕ್ಕೆ ಶಿರಬಾಗಿ ನಮಸ್ಕರಿಸಿದ ಸರ್ವ ಕೌರವರೂ ಸಪುರೋಹಿತರಾಗಿ ಅವರಿಗಿಂಥ ಕೆಳಸ್ಥಾನದಲ್ಲಿ ಕುಳಿತುಕೊಂಡರು. ಹಾಗೆಯೇ ಭೂಮಿಗೆ ತಲೆಬಾಗಿಸಿ ನಮಸ್ಕರಿಸಿದ ಸರ್ವ ಪೌರಜರನೂ ಕೂಡ ಕುಳಿತುಕೊಂಡರು. ಅಲ್ಲಿ ನೆರೆದಿರುವ ಸರ್ವ ಜನಸಂದಣಿಯೂ ಮೌನಗೊಂಡಾಗ, ಭೀಷ್ಮನು ರಾಜ್ಯ ಮತ್ತು ರಾಷ್ಟ್ರವನ್ನು ಆ ಮಹರ್ಷಿಗಳಿಗೆ ಅರ್ಪಿಸಿದನು. ಆಗ ಅವರಲ್ಲಿಯೇ ಹಿರಿಯವನಾದ, ಇತರ ಮಹರ್ಷಿಗಳ ಮನಸ್ಸನ್ನು ಅರಿತಿದ್ದ, ಜಟಾಜಿನಿಧಾರಿಣಿ ವೃದ್ಧ ಮಹರ್ಷಿಯೊಬ್ಬನು ಎದ್ದು ನಿಂತು ಹೇಳಿದನು:

ಕೌರವ್ಯದಾಯಾದಿ ಪಾಂಡುವೆನ್ನುವ ನರಾಧಿಪನು ಕಾಮಭೋಗಗಳನ್ನು ಪರಿತ್ಯಜಿಸಿ ಶತಶೃಂಗವನ್ನು ಸೇರಿದನು. ಆ ಬ್ರಹ್ಮಚರ್ಯವ್ರತಸ್ಥನಿಗೆ ದಿವ್ಯ ಕಾರಣ ಸಾಕ್ಷಾತ್ ದರ್ಮನಿಂದ ಈ ಪುತ್ರ ಯುಧಿಷ್ಠಿರನು ಜನಿಸಿದನು. ಇದೇ ರೀತಿ ಆ ಶ್ರೇಷ್ಠ ಮಹಾತ್ಮ ರಾಜನಿಗೆ ವಾಯುದೇವನು ಭೀಮ ಎಂಬ ಹೆಸರಿನ ಮಹಾಬಲಶಾಲಿ ಪುತ್ರನನ್ನು ಕೊಟ್ಟನು. ಪುರುಹೂತನಿಂದ ಕುಂತಿಯಲ್ಲಿ ಸತ್ಯಪರಾಕ್ರಮಿ, ಮಹೇಷ್ವಾಸರಲ್ಲಿ ಶ್ರೇಷ್ಠನೆನಿಸಿಕೊಳ್ಳುವ ಈ ಕಿರೀಟಿಯು ಜನಿಸಿದನು. ಅಶ್ವಿನಿಯರಿಂದ ಮಾದ್ರಿಯಲ್ಲಿ ಜನಿಸಿದ ಮಹೇಷ್ವಾಸ ಕುರುಸತ್ತಮ ಅವಳಿ ಪುತ್ರರೂ ಇಲ್ಲಿ ನಿಂತಿದ್ದಾರೆ. ನಿತ್ಯವೂ ಧರ್ಮಚರಿತನಾಗಿದ್ದ ಆ ವನವಾಸಿ ಯಶಸ್ವಿ ಪಾಂಡುವಿನಿಂದ ಅವನ ಪಿತಾಮಹನ ವಂಶವು ಪುನರುತ್ಥಾನವಾಗಿದೆ. ಪುತ್ರರ ಜನನ, ವೃದ್ಧಿ, ವೈದಿಕ, ಅದ್ಯಯನ ಇವುಗಳನ್ನೆಲ್ಲ ನೋಡಿದ ಪಾಂಡುವು ಸತತವಾಗಿಯೂ ಸಂತೋಷದಿಂದಿರುತ್ತಿದ್ದನು. ಸತ್ಯ ನಡವಳಿಕೆಯಲ್ಲಿಯೇ ನಿರತನಾಗಿದ್ದು ಪುತ್ರಲಾಭವನ್ನು ಪಡೆದ ಆ ಪಾಂಡುವು ಹದಿನೇಳು ದಿವಸಗಳ ಹಿಂದೆ ಪಿತೃಲೋಕವನ್ನು ಸೇರಿದನು. ವೈಶ್ವಾನಮುಖದಲ್ಲಿ ಹುತನಾಗುತ್ತಿದ್ದ ಅವನನ್ನು ನೋಡಿದ ಮಾದ್ರಿಯು ತನ್ನ ಜೀವನವನ್ನೂ ತ್ಯಜಿಸಿ ಪಾವಕವನ್ನು ಪ್ರವೇಶಿಸಿದಳು. ಅವನ ಹಿಂದೆಯೇ ಅವಳು ತನ್ನ ಪತಿಲೋಕವನ್ನು ಅನುಸರಿಸಿದಳು. ಅವನ ಮತ್ತು ಅವಳ ಅಂತ್ಯಕಾರ್ಯವನ್ನು ನೆರವೇರಿಸಿ. ಇದೋ ಅವರೀರ್ವರ ಶರೀರ ಮತ್ತು ಅವರ ಶ್ರೇಷ್ಠ ಮಕ್ಕಳು. ಈ ಪರಂತಪರನ್ನು ಮತ್ತು ಅವರ ತಾಯಿಯನ್ನು ಸ್ವೀಕರಿಸಿ. ಸರ್ವಧರ್ಮಜ್ಞ ಕುರುಕುಲೋದ್ವಹ ಪಾಂಡುವಿಗೆ ಪ್ರೇತಕಾರ್ಯದ ನಂತರ ಮಹಾಯಶಸ್ಸನ್ನು ನೀಡುವ ಪಿತೃಮೇಧವೂ ದೊರೆಯಲಿ.

ಈ ರೀತಿ ಅಲ್ಲಿ ಸೇರಿರುವ ಕುರುಗಳೆಲ್ಲರಿಗೂ ಹೇಳಿ ಕುರುಗಳು ನೋಡುತ್ತಿದ್ದಂತೆಯೇ ಕ್ಷಣಮಾತ್ರದಲ್ಲಿ ಸರ್ವ ಚಾರಣ-ಗುಹ್ಯಕರೂ ಒಟ್ಟಿಗೇ ಅಂತರ್ಧಾನರಾದರು. ಗಂಧರ್ವನಗರದಂತೆ ಅಲ್ಲಿಯೇ ಅಂತರ್ಧಾನರಾದ ಆ ಋಷಿ-ಸಿದ್ದಗಣಗಳನ್ನು ನೋಡಿದ ಪುರಜನರು ಪುನಃ ಪರಮ ವಿಸ್ಮಿತರಾದರು.

ಧೃತರಾಷ್ಟ್ರನು ಹೇಳಿದನು:

ವಿದುರ! ಪಾಂಡು ಮತ್ತು ಮಾದ್ರಿಯರಿಗೆ ರಾಜಸಿಂಹನಿಗೆ ತಕ್ಕುದಾದ ರಾಜರೀತಿಯ ಸರ್ವ ಪ್ರೇತಕಾರ್ಯಗಳನ್ನೂ ಮಾಡಿಸು. ಪಾಂಡು ಮತ್ತು ಮಾದ್ರಿಯರ ಕಡೆಯಿಂದ ಯಾರ್ಯಾರು ಎಷ್ಟೆಷ್ಟು ಕೇಳುತ್ತಾರೋ ಅಷ್ಟು ವಿವಿಧ ಪಶು, ವಸ್ತ್ರ, ರತ್ನ ಮತ್ತು ಸಂಪತ್ತುಗಳನ್ನು ಕೊಡು. ಕುಂತಿಯು ಮಾದ್ರಿಗೆ ಹೇಗೆ ಸತ್ಕಾರ ಮಾಡುವವಳೋ ಹಾಗೆಯೇ ನಡೆಯಲಿ. ವಾಯುವಾಗಲೀ ಆದಿತ್ಯನಾಗಲೀ ನೋಡಲಾರದಂತೆ ಅವಳ ಅಲಂಕಾರವಾಗಲಿ. ಅನಘ ಪಾಂಡುವಿಗಾಗಿ ಯಾರೂ ಶೋಕಿಸಬಾರದು. ಸುರಸುತೋಪಮ ವೀರ ಐವರು ಮಕ್ಕಳನ್ನು ಪಡೆದ ಆ ನರಾಧಿಪನಿಗೆ ಪ್ರಶಂಸೆಯೇ ಇರಲಿ.

ಹೇಳಿದುದೆಲ್ಲವನ್ನೂ ವಿದುರನು ಭೀಷ್ಮನ ಸಹಾಯದಿಂದ ನೆರವೇರಿಸಿದನು. ಎಲ್ಲಕಡೆಯಿಂದಲೂ ರಕ್ಷಿಸಲ್ಪಟ್ಟ ಪ್ರದೇಶದಲ್ಲಿ ಪಾಂಡುವಿಗೆ ಸಂಸ್ಕಾರ ಕಾರ್ಯಗಳನ್ನು ನೆರವೇರಿಸಿದನು. ನಂತರ ರಾಜಪುರೋಹಿತರು ಪಾಂಡುವಿಗೆ ನಗರದಿಂದ ಆಜ್ಯಹೋಮಪುರಸ್ಕೃತ ಉರಿಯುತ್ತಿರುವ ಬೆಂಕಿಯನ್ನು ತಂದರು. ನಂತರ ಅವನನ್ನು ಕಟ್ಟಿಗೆ ರಾಶಿಯ ಮೇಲೆ ಮಲಗಿಸಿ ಎಲ್ಲ ಕಡೆಯಿಂದಲೂ ಬಟ್ಟೆಯನ್ನು ಸುತ್ತಿ, ವಿವಿಧ ಶ್ರೇಷ್ಠ ಗಂಧ-ಮಾಲೆಗಳಿಂದ ಸಿಂಗರಿಸಿದರು. ಈ ರೀತಿ ಮಾಲೆಗಳಿಂದ ಮತ್ತು ಅಮೂಲ್ಯ ವಸ್ತ್ರಗಳಿಂದ ಸಿಂಗರಿಸಿದ ನಂತರ ಅಮಾತ್ಯರು, ನೆಂಟರಿಷ್ಟರು ಮತ್ತು ಸ್ನೇಹಿತರು ಮಾದ್ರಿಯ ಸಮೇತ ಆ ನರಸಿಂಹನನ್ನು ಸುಂದರವಾಗಿ ಅಲಂಕರಿಸಿದ, ನರರಿಂದ ಎಳೆಯಲ್ಪಟ್ಟ, ಎಲ್ಲಕಡೆಯಿಂದಲೂ ಸುರಕ್ಷಿತವಾದ ಯಾನದಲ್ಲಿರಿಸಿ ಹೊರಟರು. ಬಿಳಿ ಛತ್ರ ಮತ್ತು ಚಾಮರಗಳನ್ನು ಅದಕ್ಕೆ ಕಟ್ಟಿದ್ದರು. ಎಲ್ಲ ರೀತಿಯ ವಾದ್ಯಗಳ ನಾದದೊಂದಿಗೆ ಮೆರವಣಿಗೆಯಲ್ಲಿ ಹೊರಟರು. ಪಾಂಡುವಿನ ದೇಹವನ್ನು ತೆಗೆದು ಕೊಂಡೊಯ್ಯುತ್ತಿರುವಾಗ ಜನರು ನೂರಾರು ಸಂಖ್ಯೆಗಳಲ್ಲಿ ರತ್ನಗಳನ್ನು ಹಿಡಿದು ಬೇಡುವವರಿಗೆ ಕೊಟ್ಟರು. ಕೌರವನ ಪರವಾಗಿ ಶುಭ್ರ ಶ್ವೇತ ವರ್ಣದ ಛತ್ರಗಳನ್ನು ಮತ್ತು ಸುಂದರ ವಸ್ತ್ರಗಳನ್ನು ಹಂಚಿದರು. ಶ್ವೇತವರ್ಣದ ಬಟ್ಟೆಗಳನ್ನು ಧರಿಸಿದ್ದ ಯಾಜಕರು ಸ್ವಲಂಕೃತ ಶರೀರವನ್ನು ಹಾಕುವುದರ ಮೊದಲು ಉರಿಯುತ್ತಿರುವ ಹುತಾಶನನಲ್ಲಿ ಆಹುತಿಯನ್ನು ಹಾಕಿದರು. ಶೋಕಸಂತಪ್ತರಾಗಿ ರೋದಿಸುತ್ತಿರುವ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರು ಸಹಸ್ರಾರು ಸಂಖ್ಯೆಗಳಲ್ಲಿ ನರಾಧಿಪನನ್ನು ಹಿಂಬಾಲಿಸಿದರು.

ನಮ್ಮೆಲ್ಲರ ಪರೋನಾಥ ನರಾಧಿಪನು ನಮ್ಮೆಲ್ಲರನ್ನೂ ಬಿಟ್ಟು, ಈ ಶಾಶ್ವತ ದುಃಖದಲ್ಲಿ ಮುಳುಗಿಸಿ, ಅನಾಥರನ್ನಾಗಿ ಮಾಡಿ ಎಲ್ಲಿಗೆ ಹೋದನು?

ಕ್ರೋಶಾಂತ ಪಾಂಡವರು, ಭೀಷ್ಮ, ವಿದುರ ಮೊದಲಾದ ಸರ್ವರೂ ಆ ಸತ್ಯವಾದಿ, ಅಕ್ಲಿಷ್ಟಕರ್ಮಿ, ನರಸಿಂಹನ ಮತ್ತು ಅವನ ಪತ್ನಿಯ ಶಿಬಿಕೆಗಳನ್ನು ಶುಭ ಗಂಗಾತೀರದ ರಮಣೀಯ ಸಮತಟ್ಟು ವನಪ್ರದೇಶದಲ್ಲಿ ತಂದಿರಿಸಿದರು. ನಂತರ ಅವನ ಶರೀರವನ್ನು ಸರ್ವ ಸುಗಂಧಗಳಿಂದ ಬಳಿದು ಶುಚಿಯಾದ ಕಾಲೀಯಕವನ್ನು ಸವರಿ, ಶ್ರೇಷ್ಠ ತೈಲಗಳನ್ನು ಹಚ್ಚಿ, ಬಂಗಾರದ ಕೊಡಗಳಿಂದ ಶುದ್ಧ ನೀರನ್ನು ಸುರಿಸಿದರು. ಶ್ರೇಷ್ಠ ಬಿಳಿ ಚಂದನ, ಕಾಲಾಗುರು ಮತ್ತು ತುಂಗರಸಗಳ ಮಿಶ್ರಣವನ್ನು ಲೇಪಿಸಿದರು. ನಂತರ ಅವನನ್ನು ಬಿಳಿ ಹತ್ತಿಯ ವಸ್ತ್ರದಿಂದ ಸುತ್ತಿದರು. ವಸ್ತ್ರದಿಂದ ಸುತ್ತಲ್ಪಟ್ಟ ಅ ನರರ್ಷಭ ಪುರುಷವ್ಯಾಘ್ರನು ಅಮೂಲ್ಯ ಶಯನಕ್ಕೆ ಅರ್ಹನಾಗಿ ಜೀವಂತವಿದ್ದವನಂತೆ ಕಂಡನು. ಪ್ರೇತಕರ್ಮ ನಿರತ ಯಾಜಕರು ಅಪ್ಪಣೆಕೊಟ್ಟ ನಂತರ ತುಂಗ-ಪದ್ಮಕ ಮಿಶ್ರಣ, ಮತ್ತು ಸುಗಂಧಯುಕ್ತ ಚಂದನದಿಂದ ಮತ್ತು ಇತರ ವಿವಿಧ ಗಂಧಗಳಿಂದ ಸ್ವಲಂಕೃತರಾದ ಮಾದ್ರಿ ಸಹಿತ ರಾಜನ ಮೇಲೆ ತುಪ್ಪವನ್ನು ಸುರಿದು ಅಗ್ನಿಯನ್ನಿಟ್ಟರು. ಅವರೀರ್ವರ ಶರೀರಗಳನ್ನು ನೋಡಿ ಕೌಸಲ್ಯೆಯು “ಹಾಹಾ ಪುತ್ರ!””ಎಂದು ಮೂರ್ಛಿತಳಾಗಿ ಕೆಳಗೆ ಬಿದ್ದಳು. ಕೆಳಗೆ ಬಿದ್ದ ತಾಯಿಯನ್ನು ನೋಡಿದ ನಗರ ಗ್ರಾಮೀಣಪ್ರದೇಶದ ಜನರೆಲ್ಲರೂ ರಾಜಭಕ್ತಿಯಲ್ಲಿ ಕೃಪಾನ್ವಿತರಾಗಿ ಒಂದೇ ಸ್ವರದಲ್ಲಿ ರೋದಿಸಿದರು. ಮನುಷ್ಯರ ಈ ಆರ್ತನಾದದ ಜೊತೆಗೆ ವನ್ಯಮೃಗಗಳನ್ನೂ ಸೇರಿ ಸರ್ವ ಭೂತಗಳೂ ರೋದಿಸಿದವು. ಹಾಗೆಯೇ ಶಾಂತನವ ಭೀಷ್ಮನೂ ಮಹಾಮತಿ ವಿದುರನೂ ಮತ್ತು ಸರ್ವ ಕೌರವರೂ ದುಃಖಿತರಾಗಿ ರೋದಿಸಿದರು. ನಂತರ ಭೀಷ್ಮ, ವಿದುರ ಮತ್ತು ರಾಜರು ಎಲ್ಲ ಕುರು ಸ್ತ್ರೀಯರು ಮತ್ತು ಇತರ ಬಂಧುಗಳನ್ನೊಡಗೂಡಿ ಉದಕವನ್ನಿತ್ತರು. ಪಾಂಡವನಿಗಾಗಿ ಶೋಕಕರ್ಶಿತರಾದ ಸರ್ವ ಪ್ರಜೆಗಳೂ ಶೋಚಿಸುತ್ತಾ ಉದಕ ಕೊಡುವವರನ್ನು ಆವರಿಸಿದರು. ಪಾಂಡವರು ತಮ್ಮ ಬಂಧುಗಳ ಸಮೇತ ನೆಲದ ಮೇಲೆಯೇ ಮಲಗಿದರು ಮತ್ತು ಅವರಂತೆ ಬ್ರಾಹ್ಮಣರೇ ಮೊದರಾದ ಇತರ ನಾಗರೀಕರೂ ಅಲ್ಲಿಯೇ ಮಲಗಿದರು. ಹನ್ನೆರಡು ರಾತ್ರಿಗಳ ವರೆಗೆ ನಗರದ ಸಣ್ಣ ಬಾಲಕನವರೆಗೆ ಎಲ್ಲರೂ ದುಃಖ ಸಂತಪ್ತರಾಗಿ ಅಸ್ವಸ್ತರಾಗಿದ್ದರು.

ಅನಂತರ ಕ್ಷತ್ತ, ರಾಜ ಮತ್ತು ಭೀಷ್ಮರು ತಮ್ಮ ಬಂಧು ಸಹಿತ ಪಾಂಡುವಿಗೆ ಸ್ವಾಧಾಮೃತಮಯ ಶ್ರಾದ್ಧವನ್ನು ನೀಡಿದರು. ಸಹಸ್ರಾರು ಕುರುಗಳಿಗೆ ಮತ್ತು ವಿಪ್ರಮುಖ್ಯರಿಗೆ ಭೋಜನಗಳನ್ನಿತ್ತರು. ಶ್ರೇಷ್ಠ ಗ್ರಾಮಗಳನ್ನು ರತ್ನದ ರಾಶಿಗಳನ್ನು ದ್ವಿಜಪ್ರಮುಖರಿಗೆ ದಾನವಿತ್ತರು. ಪೌರಜನರು ಶುಚಿರ್ಭೂತ ಭರತರ್ಷಭ ಪಾಂಡವರನ್ನು ಕರೆದುಕೊಂಡು ವಾರಣಸಾಹ್ವಯ ಪುರವನ್ನು ಪ್ರವೇಶಿಸಿದರು. ನಗರ ಮತ್ತು ಗ್ರಾಮೀಣ ಪ್ರದೇಶದ ಜನರೆಲ್ಲರೂ ಆ ಭರತರ್ಷಭನಿಗಾಗಿ ಮೃತನಾದವನು ತಮ್ಮದೇ ಬಂಧುವೇನೋ ಎನ್ನುವಂತೆ ಸತತ ಶೋಕಿಸಿದರು. ಶ್ರಾದ್ಧ ಕರ್ಮಗಳು ಸಮಾಪ್ತಿಯಾದ ನಂತರ ದುಃಖಿತ ಜನರನ್ನು ನೋಡಿದ ವ್ಯಾಸನು ಸಮ್ಮೂಢಳಾಗಿದ್ದ ದುಃಖಶೋಕಾರ್ತ ತಾಯಿಗೆ ಹೇಳಿದನು:

ಸುಖದ ಕಾಲಗಳು ಕಳೆದುಹೋದವು. ದಾರುಣ ಕಾಲಗಳು ಮುಂದೆ ಬರಲಿವೆ. ಯೌವನವನ್ನು ಕಳೆದುಕೊಳ್ಳುತ್ತಿರುವ ಈ ಪೃಥ್ವಿಯಲ್ಲಿ ಮುಂದಿನ ಒಂದೊಂದು ದಿನವೂ ಹಿಂದಿನ ದಿನಕ್ಕಿಂಥ ಪಾಪಿಯಾಗಿರುತ್ತದೆ.  ಬಹುಮಾಯೆಯಿಂದ ಸಮಾಕೀರ್ಣಗೊಂಡು ನಾನಾತರಹದ ದೋಷಗಳನ್ನೊಡಗೂಡಿ ಧರ್ಮಕ್ರಿಯಾಚಾರಗಳನ್ನು ಕಳೆದುಕೊಂಡ ಘೋರ ಕಾಲವು ಬರುತ್ತದೆ. ಇವೆಲ್ಲವನ್ನೂ ತ್ಯಜಿಸಿ ಹೊರಟುಹೋಗು. ತಪೋವನದಲ್ಲಿ ವಾಸಿಸು. ಈ ಕುಲದ ಘೋರ ಸಂಕ್ಷಯವನ್ನು ನೀನು ನೋಡುವುದು ಸರಿಯಲ್ಲ.

ಹಾಗೆಯೇ ಆಗಲಿ” ಎಂದು ಒಪ್ಪಿಕೊಂಡು ಅವಳು ಸೊಸೆಯ ಅಂತಃಪುರವನ್ನು ಪ್ರವೇಶಿಸಿ ಹೇಳಿದಳು:

“ಅಂಬಿಕಾ! ನಿನ್ನ ಪುತ್ರನ ದುರ್ನೀತಿಯಿಂದ ಭಾರತರೆಲ್ಲರೂ ಅವರ ಮೊಮ್ಮಕ್ಕಳು ಮತ್ತು ಅನುಯಾಯಿಗಳ ಸಹಿತ ವಿನಾಶಹೊಂದುತ್ತಾರೆ ಎಂದು ಕೇಳಿದ್ದೇನೆ. ಆದುದರಿಂದ, ನಿನ್ನ ಒಪ್ಪಿಗೆಯಿದ್ದರೆ, ನಾನು ಪುತ್ರಶೋಕ ಪೀಡಿತೆ ಕೌಸಲ್ಯೆಯನ್ನು ಕರೆದುಕೊಂಡು ವನವನ್ನು ಸೇರುತ್ತೇನೆ. ನಿನಗೆ ಮಂಗಳವಾಗಲಿ.

ಅಂಬಿಕೆಯು ಅನುಮೋದಿಸಲು ಭೀಷ್ಮನನ್ನು ಬೀಳ್ಕೊಂಡು ಆ ಸುವ್ರತೆ ಸತ್ಯವತಿಯು ತನ್ನ ಇಬ್ಬರೂ ಸೊಸೆಯರೊಂದಿಗೆ ವನವನ್ನು ಸೇರಿದಳು. ಆ ದೇವಿಯರು ಅತಿಘೋರ ತಪಸ್ಸು ಮಾಡಿ ದೇವವನ್ನು ತ್ಯಜಿಸಿ ಮಹಾಯಾತ್ರೆಯನ್ನು ಕೈಗೊಂಡರು.

ಪಾಂಡವ-ಕೌರವರ ಬಾಲ್ಯ

ಪಾಂಡವರು ವೇದೋಕ್ತ ಸಂಸ್ಕಾರಗಳನ್ನು ಪಡೆದು ತಂದೆಯ ಮನೆಯಲ್ಲಿ ಸುಖವನ್ನು ಅನುಭವಿಸುತ್ತಾ ಬೆಳೆದರು. ತಮ್ಮ ತಂದೆಯ ಮನೆಯಲ್ಲಿ ಒಟ್ಟಿಗೆ ಅಡುತ್ತಿರುವಾಗ ಎಲ್ಲ ಬಾಲಕ್ರೀಡೆಗಳಲ್ಲಿಯೂ ಪಾಂಡವರು ಧೃತರಾಷ್ಟ್ರನ ಮಕ್ಕಳಿಗಿಂತ ವಿಶಿಷ್ಟರಾಗಿದ್ದರು. ಓಡುವುದರಲ್ಲಿ, ಗುರಿಯನ್ನು ಹೊಡೆಯುವುದರಲ್ಲಿ, ಊಟಮಾಡುವುದರಲ್ಲಿ ಮತ್ತು ಎಳೆದಾಡುವುದರಲ್ಲಿ ಭೀಮಸೇನನು ಧೃತರಾಷ್ಟ್ರನ ಎಲ್ಲ ಮಕ್ಕಳನ್ನೂ ಮೀರಿಸಿದನು. ಪಾಂಡವನು ಆಡುತ್ತಿರುವಾಗ ಖುಶಿಯಲ್ಲಿ ಅವರ ಕೂದಲನ್ನು ಹಿಡಿದು ಮೇಲೆತ್ತಿ ಪರಸ್ಪರರ ತಲೆಗಳು ಹೊಡೆದಾಡುವಂತೆ ಮಾಡುತ್ತಿದ್ದನು. ನೂರಾ ಒಂದು ಮಹೌಜಸ ಕುಮಾರರನ್ನೂ ವೃಕೋದರನು ಒಬ್ಬನೇ ಸ್ವಲ್ಪವೂ ಕಷ್ಟವಿಲ್ಲದೇ ಕಾಡುತ್ತಿದ್ದನು. ಅವರ ಕಾಲುಗಳನ್ನು ಹಿಡಿದು ಜೋರಾಗಿ ನೆಲದ ಧೂಳಿನಲ್ಲಿ ಬೀಳಿಸಿ ಅವರ ತಲೆ ತೊಡೆಗಳು ನೋವಾಗಿ ಕೂಗುವವರೆಗೆ ಆ ಬಲಿಯು ಅವರ ಮೇಲೆ ಬಿದ್ದು ಉರುಳುತ್ತಿದ್ದನು. ನೀರಿನಲ್ಲಿ ಆಡುತ್ತಿರುವಾಗ ತನ್ನ ಭುಜದಿಂದ ಹತ್ತು ಬಾಲಕರನ್ನು ಹಿಡಿದು ನೀರಿನಲ್ಲಿ ಮುಳುಗಿಸಿ ಅವರು ಇನ್ನೇನು ಮುಳುಗಿಹೋಗುತ್ತಾರೆ ಎನ್ನುವಾಗ ಮೇಲೆ ಎತ್ತುತ್ತಿದ್ದನು. ಅವರು ಹಣ್ಣುಗಳನ್ನು ಕೀಳಲು ಮರ ಏರಿರುವಾಗ ಭೀಮನು ಕಾಲಿನಿಂದ ಮರವನ್ನು ಒದೆದು ಅಲುಗಾಡಿಸಿಸುತ್ತಿದ್ದನು. ಹೊಡೆತದ ಬಲಕ್ಕೆ ಅಲುಗಾಡಿದ ಮರದಿಂದ ಹಣ್ಣುಗಳ ಜೊತೆಗೆ ಕುಮಾರರೂ ಕೆಳಗೆ ಬೀಳುತ್ತಿದ್ದರು. ಹೊಡೆದಾಟದಲ್ಲಿಯಾಗಲೀ ಓಟದಲ್ಲಿಯಾಗಲೀ ಅಥವಾ ಯೋಗದಲ್ಲಿಯಾಗಲೀ ಸ್ಪರ್ಧಿಸುತ್ತಿರುವ ಕುಮಾರರು ವೃಕೋದರನನ್ನು ಎಂದೂ ಮೀರಿಸಲಿಕ್ಕಾಗುತ್ತಿರಲಿಲ್ಲ. ಈ ರೀತಿ ಸ್ಪರ್ಧಿಸುತ್ತಿರುವ - ಬಾಲ್ಯತನದಿಂದ ದ್ರೋಹಭಾವದಿಂದಲ್ಲ - ವೃಕೋದರನು ಧಾರ್ತರಾಷ್ಟ್ರರಿಗೆ ಬಹಳ ಅಪ್ರಿಯನಾದನು.

ಭೀಮಸೇನನ ಅತಿಖ್ಯಾತ ಬಲವನ್ನು ತಿಳಿದ ಪ್ರತಾಪಿ ಧಾರ್ತರಾಷ್ಟ್ರನು ತನ್ನ ದುಷ್ಟಭಾವವನ್ನು ತೋರಿಸತೊಡಗಿದನು. ಧರ್ಮವನ್ನು ನಿರ್ಲಕ್ಷಿಸಿ ಪಾಪ ಮಾಡುವುದನ್ನೇ ನೋಡುತ್ತಿದ್ದ ಆ ಐಶ್ವರ್ಯ ಲೋಭ ಮೋಹಿತನ ಮನಸ್ಸಿನಲ್ಲಿ ಕೆಟ್ಟ ವಿಚಾರಗಳು ಹುಟ್ಟಿದವು: ಬಲವಂತರಲ್ಲಿ ಶ್ರೇಷ್ಠ, ಪಾಂಡುಪುತ್ರರ ಮಧ್ಯಮ ಈ  ಕುಂತಿಪುತ್ರ ವೃಕೋದರನ್ನು ಮೋಸದಿಂದ ಮಾತ್ರ ಕೊಲ್ಲಬಹುದು. ನಂತರ ಅವನ ತಮ್ಮಂದಿರನ್ನು ಮತ್ತು ಜ್ಯೇಷ್ಠ ಯುಧಿಷ್ಠಿರನನ್ನು ಬಂಧನದಲ್ಲಿ ಬಂಧಿಸಿ ಈ ವಸುಂಧರೆಯ ಪ್ರಶಾಸನ ಮಾಡುತ್ತೇನೆ. ಈ ರೀತಿ ಪಾಪ ನಿಶ್ಚಯ ಮಾಡಿದ ದುರ್ಯೋಧನನು ಮಹಾತ್ಮ ಭೀಮನನ್ನು ಪಡೆಯಲು ನಿತ್ಯವೂ ಕಾಯುತ್ತಿದ್ದನು. ಜಲವಿಹಾರಾರ್ಥವಾಗಿ ಪ್ರಮಾಣಕೋಟಿಯ ಬಳಿ ನೀರಿನ ಬಳಿಯಲ್ಲಿಯೇ ಬಣ್ಣ ಬಣ್ಣದ ಕಂಬಳಿಯ ಅತಿ ದೊಡ್ಡ ಡೇರೆಯನ್ನು ನಿರ್ಮಿಸಿದನು. ಆಟವಾಡಿ ಎಲ್ಲರೂ ಶುಭ್ರವಸ್ತ್ರಗಳನ್ನು ಧರಿಸಿ ಅಲಂಕೃತರಾಗಿ ಸರ್ವಕಾಮ ಸಮೃದ್ಧ ಭೋಜನವನ್ನು ಸವಿಯುತ್ತಿದ್ದರು. ರಾತ್ರಿಯಾಗುತ್ತಿದ್ದಂತೆ ಪರಿಶ್ರಾಂತ ವೀರ ಕುರುಕುಮಾರರು ಡೇರೆಯ ಹೊರಗೆ ಮಲಗಲು ಬಯಸಿದರು. ಕುಮಾರರನ್ನು ನೀರಿನಲ್ಲಿ ಹೊತ್ತು ಆಡಿಸಿದುದರ ಅಧಿಕ ವ್ಯಾಯಾಮದಿಂದ ಬಳಲಿದ ಬಲವಾನ್ ಭೀಮನು ಪುಣ್ಯಕೋಟಿಯ ದಡವನ್ನು ಸೇರಿ, ಮಲಗಲು ಒಂದು ಸ್ಥಳವನ್ನು ಆರಿಸಿ ಅಲ್ಲಿಯೇ ನಿದ್ರಿಸಿದನು. ಬಿಳಿಯ ವಸ್ತ್ರವನ್ನು ಹೊದೆದು ಬಳಲಿದ್ದ ಆ ಪಾಂಡವನು ಸ್ವಲ್ಪವೂ ಅಲುಗಾಡದೇ ಮೃತಶರೀರದಂತೆ ಮಲಗಿದ್ದನು. ಆಗ ದುರ್ಯೋಧನನು ಅವನನ್ನು ಬಳ್ಳಿಗಳಿಂದ ಮಾಡಿದ ಹಗ್ಗದಿಂದ ನಿಧಾನವಾಗಿ ಕಟ್ಟಿ ದಡದಿಂದ ವೇಗ ಮತ್ತು ಗಂಭೀರವಾಗಿ ಹರಿಯುತ್ತಿದ್ದ ನೀರಿಗೆ ಮೆಲ್ಲನೆ ಉರುಳಿಸಿದನು. ಹೋರಾಟಗಾರರಲ್ಲೇ ಶ್ರೇಷ್ಠ ಕೌಂತೇಯ ಭೀಮನು ಎಲ್ಲ ಕಟ್ಟುಗಳನ್ನೂ ಹರಿದು ನೀರಿನಿಂದ ಮೇಲೆದ್ದು ಬಂದನು.

ಇನ್ನೊಮ್ಮೆ ಮಲಗಿದ್ದಾಗ ಮಹಾ ವಿಷದ ತೀಕ್ಷ ಹಲ್ಲುಗಳ ಸರ್ಪಗಳಿಂದ ಅವನ ಮರ್ಮಾಂಗಗಳಲ್ಲಿ ಕಚ್ಚಿಸಿದನು.   ಆದರೆ ಆ ಸರ್ಪಗಳ ತೀಕ್ಷ್ಣ ದಂಷ್ಟ್ರಗಳು ಅವನ ಮರ್ಮಸ್ಥಾನಗಳನ್ನು ಕಚ್ಚುತ್ತಿದ್ದರೂ ಆ ಪೃಥುವಕ್ಷಸನ ಚರ್ಮವನ್ನೂ ಹರಿದು ಒಳಗೆ ಹೋಗಲು ಆಗಲಿಲ್ಲ. ಎಚ್ಚರವಾದಾಗ ಭೀಮನು ಸರ್ವ ಸರ್ಪಗಳನ್ನೂ ಅರೆದು ಕೊಂದನು ಮತ್ತು ತನ್ನ ಪ್ರಿಯ ಸಾರಥಿಯ ಬೆನ್ನಮೇಲೆ ತನ್ನ ಕೈಯಿಂದ ಹೊಡೆದನು. ಪುನಃ ಭೀಮಸೇನನ ಭೋಜನದಲ್ಲಿ ನಿವಿರೇಳಿಸುವ ತೀಕ್ಷ್ಣ ಕಾಲಕೂಟ ವಿಷವನ್ನು ಸೇರಿಸಿದ್ದನು. ಪಾರ್ಥರ ಹಿತಕಾಮಿ ವೈಶ್ಯಾಪುತ್ರನು ಅವರಿಗೆ ಹೇಳಿದನು. ಆದರೂ ವೃಕೋದರನು ಅದನ್ನು ತಿಂದು ಏನೂ ಕೆಟ್ಟಪರಿಣಾಮವಿಲ್ಲದೆ ಜೀರ್ಣಿಸಿಕೊಂಡನು. ಆ ವಿಷವು ಭೀಮಸಂಹನ ಭೀಮನಲ್ಲಿ ಸ್ವಲ್ಪವೂ ವಿಕಾರಗಳನ್ನುಂಟುಮಾಡಲಿಲ್ಲ; ಅದನ್ನು ಸುಮ್ಮನೇ ಜೀರ್ಣಿಸಿಬಿಟ್ಟನು. ಈ ರೀತಿ ದುರ್ಯೋಧನ, ಕರ್ಣ ಮತ್ತು ಸೌಬಲ ಶಕುನಿಯರು ಪಾಂಡವರನ್ನು ಕೊಲ್ಲಲು ಅನೇಕ ಪ್ರಯತ್ನಗಳನ್ನು ಮಾಡಿದರು. ಅರಿಂದಮ ಪಾಂಡವರಾದರೂ ಅವೆಲ್ಲವನ್ನೂ ತಿಳಿದಿದ್ದರೂ ವಿದುರನ ಅನುಮತಿಯಂತೆ ಅವುಗಳನ್ನು ಬಹಿರಂಗ ಪಡಿಸಲಿಲ್ಲ.

Leave a Reply

Your email address will not be published. Required fields are marked *