ಕೌರವ-ಪಾಂಡವರ ಗುರುಗಳು; ವಿದ್ಯಾಭ್ಯಾಸ; ಪ್ರತಿಭಾ ಪ್ರದರ್ಶನ; ಗುರುದಕ್ಷಿಣೆ

Related image

ಕೃಪ ಶಾರದ್ವತ

ಮಹರ್ಷಿ ಗೌತಮನಿಗೆ ಶರದ್ವತ ಎನ್ನುವ ಹೆಸರಿನ ಮಗನಿದ್ದನು. ಆ ಮಗನು ಶರಗಳನ್ನು ಪಡೆದೇ ಹುಟ್ಟಿದ್ದನು. ಆ ಪರಂತಪನಿಗೆ ಧನುರ್ವೇದದಲ್ಲಿ ಎಷ್ಟು ಬುದ್ದಿಯಿತ್ತೋ ಅಷ್ಟು ಬುದ್ದಿ ವೇದಾಧ್ಯಯನದಲ್ಲಿ ಇರಲಿಲ್ಲ. ಬ್ರಹ್ಮವಾದಿಗಳು ಹೇಗೆ ತಪಸ್ಸಿನಿಂದ ಪರಿಶ್ರಮಿಸಿ ವೇದಗಳನ್ನು ಪಡೆಯುತ್ತಾರೋ ಹಾಗೆ ಅವನೂ ಕೂಡ ತಪಸ್ಸಿನಿಂದಲೇ ಸರ್ವ ಅಸ್ತ್ರಗಳನ್ನೂ ಪಡೆದನು. ಶರದ್ವತನ ವಿಪುಲ ತಪಸ್ಸು ಮತ್ತು ಧನುರ್ವೇದ ಪಾಂಡಿತ್ಯವು ದೇವರಾಜನನ್ನು ಸಾಕಷ್ಟು ಕಾಡಿತು. ಆಗ ಸುರೇಶ್ವರನು ಜಾಲಪದೀ ಎಂಬ ದೇವಕನ್ಯೆಯನ್ನು ಕರೆದು

“ಅವನ ತಪಸ್ಸಿಗೆ ವಿಘ್ನವನ್ನುಂಟುಮಾಡು!”

ಎಂದು ಕಳುಹಿಸಿದನು. ಆ ಬಾಲೆಯು ಶರದ್ವತನ ರಮಣೀಯ ಆಶ್ರಮಪದವನ್ನು ಸೇರಿ, ಆ ಧನುರ್ಬಾಣಧರನಲ್ಲಿ ಆಸೆಹುಟ್ಟಿಸಲು ಪ್ರಯತ್ನಿಸಿದಳು. ಆ ವನದಲ್ಲಿ ಒಂದೇ ಒಂದು ವಸ್ತ್ರವನ್ನು ಉಟ್ಟು ಲೋಕದಲ್ಲಿಯೇ ಅಪ್ರತಿಮ ನಿಲುವನ್ನು ಹೊಂದಿದ್ದ ಅಪ್ಸರೆಯನ್ನು ಶರದ್ವತನು ತೆರೆದ ಕಣ್ಣುಗಳಿಂದ ನೋಡಿದನು. ಧನುಸ್ಸು ಮತ್ತು ಬಾಣಗಳು ಅವನ ಕೈಗಳಿಂದ ನೆಲಕ್ಕೆ ಬಿದ್ದವು ಮತ್ತು ಅವಳನ್ನು ನೋಡಿ ಅವನ ಶರೀರದಲ್ಲಿ ಕಂಪನವುಂಟಾಯಿತು. ಆದರೂ ಅವನ ಜ್ಞಾನ ಎಷ್ಟು ಮೇಲ್ಮಟ್ಟದ್ದಿತ್ತು ಮತ್ತು ತಪಸ್ಸು ಎಷ್ಟಿತ್ತೆಂದರೆ ಆ ಮಹಾಪ್ರಾಜ್ಞನು ಪರಮ ಧೈರ್ಯದಿಂದ ತನ್ನನ್ನು ತಾನೇ ಗಟ್ಟಿಯಿರಿಸಿಕೊಂಡನು. ಆದರೂ ಅವನಲ್ಲಿ ಒಮ್ಮಿಂದೊಮ್ಮಲೇ ವಿಕಾರವುಂಟಾಗಿ ಅವನಿಗೆ ತಿಳಿಯದೆಯೇ ಅವನ ರೇತವು ಹೊರಬಿದ್ದಿತು. ಆಗ ಆ ಮುನಿಯು ಆ ಆಶ್ರಮವನ್ನೂ ಅಪ್ಸರೆಯನ್ನೂ ಬಿಟ್ಟು ಹೊರಟುಹೋದನು. ಅವನ ರೇತವು ದರ್ಬೆಗಳ ಮೇಲೆ ಬಿದ್ದಿತು. ದರ್ಬೆಗಳ ಮೇಲೆ ಬಿದ್ದ ತಕ್ಷಣವೇ ಅದು ಎರಡಾಗಿ ಒಡೆಯಿತು ಮತ್ತು ಅವುಗಳಿಂದ ಗೌತಮ ಶರದ್ವತನಿಗೆ ಇಬ್ಬರು ಅವಳಿ ಮಕ್ಕಳು ಜನಿಸಿದರು.

ರಾಜ ಶಂತನುವು ಬೇಟೆಯಾಡಲು ಅಲ್ಲಿಗೆ ಹೋದಾಗ ಅವನ ಓರ್ವ ಸೇನಾಚರನು ಅರಣ್ಯದಲ್ಲಿ ಈ ಅವಳಿ ಮಕ್ಕಳನ್ನು ನೋಡಿದನು. ಅವರ ಪಕ್ಕದಲ್ಲಿ ಧನುರ್ಬಾಣಗಳನ್ನು ಮತ್ತು ಕೃಷ್ಣಾಜಿನಗಳನ್ನು ನೋಡಿ ಅವರು ಧನುರ್ವೇದಾಂತಗ ಓರ್ವ ಬ್ರಾಹ್ಮಣನ ಮಕ್ಕಳಿರಬೇಕೆಂದು ಯೋಚಿಸಿದನು. ಅವನು ಬಾಣಗಳೊಂದಿಗೆ ಆ ಅವಳಿ ಮಕ್ಕಳನ್ನು ರಾಜನಿಗೆ ತೋರಿಸಿದನು. ಕೃಪಯಾನ್ವಿತ ರಾಜನು ಆ ಅವಳಿ ಮಕ್ಕಳನ್ನು

“ಇವರು ನನ್ನ ಪುತ್ರರು. ಮನೆಗೆ ಕೊಂಡೊಯ್ಯುತ್ತೇನೆ”

ಎಂದು ತನ್ನದಾಗಿ ಸ್ವೀಕರಿಸಿದನು. ಅವರಿಗೆ ಸಂಸ್ಕಾರಗಳನ್ನೆಲ್ಲ ನೆರವೇರಿಸಿ ಬೆಳೆಸಿದನು.

ಈ ಬಾಲಕರೀರ್ವರನ್ನೂ ನಾನು ಕೃಪೆಯಿಂದ ಬೆಳೆಸಿದ್ದೇನೆ ಆದುದರಿಂದ ಅವರ ಹೆಸರೂ ಅದೇ ಆಗಲಿ!

ಎಂದನು. ತನ್ನ ತಪೋಬಲದಿಂದ ಗೌತಮ ಶರದ್ವತನು ಅವರು ಎಲ್ಲಿದ್ದಾರೆಂದು ತಿಳಿದುಕೊಂಡು ಅಲ್ಲಿಗೆ ಬಂದು ರಾಜನಿಗೆ ಅವರ ಗೋತ್ರ ಮೊದಲಾದ ಎಲ್ಲವನ್ನೂ ತಿಳಿಸಿದನು. ಅವನು ಕೃಪನಿಗೆ ಚತುರ್ವಿಧ ಧನುರ್ವೇದ ಮತ್ತು ವಿವಿಧ ಅಸ್ತ್ರಗಳ ಕುರಿತು ಎಲ್ಲವನ್ನೂ ಮತ್ತು ಅದರ ಗುಟ್ಟುಗಳೆಲ್ಲವನ್ನೂ ಹೇಳಿಕೊಟ್ಟನು. ಸ್ವಲ್ಪವೇ ಸಮಯದಲ್ಲಿ ಅವನು ಪರಮಾಚಾರ್ಯನೆನಿಸಿಕೊಂಡನು. ಎಲ್ಲ ಮಹಾರಥಿಗಳೂ-ಧೃತರಾಷ್ಟ್ರನ ಮಕ್ಕಳು, ಪಾಂಡವರು, ಮಹಾಬಲಶಾಲಿ ವೃಷ್ಣಿಗಳು ಮತ್ತು ಅನ್ಯ ನಾನಾ ದೇಶಗಳಿಂದ ಬಂದವರೆಲ್ಲರೂ ಧನುರ್ವೇದವನ್ನು ಅವನಿಂದಲೇ ಕಲಿತುಕೊಂಡರು.

ದ್ರೋಣ

ಮೊಮ್ಮಕ್ಕಳಲ್ಲಿ ವಿಶೇಷತೆ ಮತ್ತು ವಿನಯತೆಯನ್ನು ಬಯಸಿದ ಭೀಷ್ಮನು ವೀರ್ಯವಂತ ಪ್ರಸಿದ್ಧ ಅಸ್ತ್ರಜ್ಞರ ಕುರಿತು ವಿಚಾರಿಸಿದನು. ಯಾಕೆಂದರೆ ಅಲ್ಪ ಜ್ಞಾನ, ಹಿರಿತನ ಮತ್ತು ಅಸ್ತ್ರಕೋವಿದರಿಂದ ಅಥವಾ ಅಲ್ಪ ದೇವಸತ್ವವುಳ್ಳವರಿಂದ ಮಹಾಬಲಶಾಲಿ ಕುರುಗಳನ್ನು ವಿಧೇಯರನ್ನಾಗಿ ಮಾಡಲಾಗುತ್ತಿರಲಿಲ್ಲ.

ಹಿಂದೆ ಹವಿರ್ಧಾನದಲ್ಲಿ ಇರುತ್ತಿದ್ದ ಮಹರ್ಷಿ ಋಷಿ ಭರದ್ವಾಜನು ಸ್ನಾನ ಮಾಡಿ ಕೆಳಗಿಳಿಯುತ್ತಿರುವ ಅಪ್ಸರೆ ಸಾಕ್ಷಾತ್ ಘೃತಾಚಿಯನ್ನು ಕಂಡನು. ಒಮ್ಮೆಲೇ ಗಾಳಿಯು ಅವಳ ವಸ್ತ್ರವನ್ನು ಹಾರಿಸಿಕೊಂಡು ಹೋಯಿತು. ಅದನ್ನು ನೋಡಿದ ಋಷಿಯ ರೇತಸ್ಖಲನವಾಯಿತು ಮತ್ತು ಅವನು ಅದನ್ನು ಒಂದು ದ್ರೋಣದಲ್ಲಿ ಇರಿಸಿದನು. ಆ ಕಲಶದಲ್ಲಿಯೇ ಅವನಿಗೆ ದ್ರೋಣ ಎಂಬ ಧೀಮಂತ ಮಗನು ಜನಿಸಿದನು ಮತ್ತು ಅವನು ಎಲ್ಲ ವೇದ ವೇದಾಂಗಗಳನ್ನೂ ಕಲಿತುಕೊಂಡನು. ಧರ್ಮಭೃತರಲ್ಲಿ ಶ್ರೇಷ್ಠ ಪ್ರತಾಪಿ ಭರದ್ವಾಜನು ಮಹಾಭಾಗ ಅಗ್ನಿವೇಶನಿಗೆ ಆಗ್ನೇಯಾಸ್ತ್ರವನ್ನು ನೀಡಿದನು. ಅಗ್ನಿಷ್ಟಜಾತ ಆ ಮುನಿಯು ಮಹಾಸ್ತ್ರ ಆಗ್ನೇಯವನ್ನು ಭರದ್ವಾಜನ ಮಗನಿಗೆ ನೀಡಿದನು.

ಭರದ್ವಾಜನಿಗೆ ಪೃಷತ ಎಂಬ ಹೆಸರಿನ ರಾಜನು ಸಖನಾಗಿದ್ದನು. ಅವನಿಗೆ ದ್ರುಪದ ಎಂಬ ಹೆಸರಿನ ಮಗನಿದ್ದನು. ಆ ಕ್ಷತ್ರಿಯರ್ಷಭ ಪಾರ್ಷತನು ನಿತ್ಯವೂ ಅವನ ಆಶ್ರಮಕ್ಕೆ ಹೋಗಿ ದ್ರೋಣನೊಂದಿಗೆ ಆಟ-ಅಧ್ಯಯನಗಳನ್ನು ಮಾಡುತ್ತಿದ್ದನು. ಪೃಷತನ ಅವಸಾನದ ನಂತರ ನರೇಶ್ವರ ಮಹಾಬಾಹು ದ್ರುಪದನು ಉತ್ತರ ಪಾಂಚಾಲದ ರಾಜನಾದನು. ಭಗವಾನ್ ಭರದ್ವಾಜನೂ ಸ್ವರ್ಗವಾಸಿಯಾದನು. ತನ್ನ ತಂದೆಯ ಹೇಳಿಕೆಯಂತೆ ಮತ್ತು ಮಹಾಯಶಸ್ವೀ ಪುತ್ರನನ್ನು ಪಡೆಯಲೋಸುಗ ದ್ರೋಣನು ಶಾರದ್ವತೀ ಕೃಪಿಯನ್ನು ಪತ್ನಿಯನ್ನಾಗಿ ಸ್ವೀಕರಿಸಿದನು. ಅಗ್ನಿಹೋತ್ರಿಯೂ ಸತತವೂ ಧರ್ಮ ಮತ್ತು ದಮದಲ್ಲಿ ನಿರತಳಾಗಿದ್ದ ಗೌತಮಿಯು ಅಶ್ವತ್ಥಾಮ ಎಂಬ ಹೆಸರಿನ ಪುತ್ರನನ್ನು ಪಡೆದಳು. ಅವನು ಹುಟ್ಟಿದಾಕ್ಷಣವೇ ಉಚ್ಛೈಶ್ರವ ಕುದುರೆಯಂತೆ ರೋದಿಸಿದನು. ಇದನ್ನು ಕೇಳಿದ ಅಂತರಿಕ್ಷದಿಂದ ಅಂತರ್ಹಿತ ಭೂತವೊಂದು ಹೇಳಿತು:

ಇವನ ಅಳುವಿನ ನಾದವು ಅಶ್ವದ ನಾದದಂತೆ ಎಲ್ಲಕಡೆಯೂ ಪಸರಿಸಿದ್ದುದರಿಂದ ಈ ಬಾಲಕನ ಹೆಸರು ಅಶ್ವತ್ಥಾಮ ಎಂದೇ ಆಗಲಿ.

ಧೀಮಂತ ಭಾರದ್ವಾಜನು ತನ್ನ ಮಗನಿಂದ ಸುಪ್ರೀತನಾದನು ಮತ್ತು ಅಲ್ಲಿಯೇ ಇದ್ದುಕೊಂಡು ಧನುರ್ವೇದಪಾರಂಗತನಾದನು.

ಅವನು ಮಹಾತ್ಮ ಪರಂತಪಸ್ವಿ ಜಾಮದಗ್ನ್ಯನು ತನ್ನ ಎಲ್ಲ ಸಂಪತ್ತನ್ನೂ ಬ್ರಾಹ್ಮಣರಿಗೆ ಕೊಡುತ್ತಿದ್ದಾನೆ ಎಂದು ಕೇಳಿದನು. ವನವನ್ನು ಸೇರಿದ್ದ ರಾಮನಿಗೆ ಭಾರದ್ವಾಜನು ಹೇಳಿದನು:

ದ್ವಿಜರ್ಷಭ! ನಾನು ದ್ರೋಣ. ಸಂಪತ್ತನ್ನು ಬಯಸಿ ನಿನ್ನಲ್ಲಿಗೆ ಬಂದಿದ್ದೇನೆ.

ರಾಮನು ಹೇಳಿದನು:

ತಪೋಧನ! ನನ್ನಲ್ಲಿರುವ ಹಿರಣ್ಯ ಮತ್ತು ಇತರ ಸಂಪತ್ತು ಎಲ್ಲವನ್ನೂ ಬ್ರಾಹ್ಮಣರಿಗೆ ಕೊಟ್ಟುಬಿಟ್ಟಿದ್ದೇನೆ. ಇದೇ ರೀತಿ ಸಾಗರಗಳಿಂದ ಸುತ್ತುವರೆಯಲ್ಪಟ್ಟ ಈ ನಗರಮಾಲಿನೀ ದೇವಿ ಧರಿತ್ರಿ ಸರ್ವವನ್ನೂ ಕಶ್ಯಪನಿಗೆ ಕೊಟ್ಟುಬಿಟ್ಟಿದ್ದೇನೆ. ಈಗ ನನ್ನಲ್ಲಿ ಈ ಶರೀರ, ಮಹಾ ಅಸ್ತ್ರಗಳು, ವಿವಿಧ ಶಸ್ತ್ರಗಳು ಮಾತ್ರ ನನ್ನದಾಗಿ ಉಳಿದುಕೊಂಡಿವೆ. ದ್ರೋಣ! ಇವುಗಳಲ್ಲಿ ಯಾವುದನ್ನು ನೀನು ಕೇಳುತ್ತೀಯೆ, ತಕ್ಷಣ ಕೇಳು.

ದ್ರೋಣನು ಹೇಳಿದನು:

ಭಾರ್ಗವ! ನಿನ್ನಲ್ಲಿರುವ ಎಲ್ಲ ಅಸ್ತ್ರ ಶಸ್ತ್ರಗಳನ್ನೂ ಅವುಗಳನ್ನು ಬಳಸುವ ರಹಸ್ಯಗಳ ಜೊತೆ ಒಂದನ್ನೂ ಬಿಡದ ಹಾಗೆ ನನಗೆ ಕೊಡು.

ಹಾಗೆಯೇ ಆಗಲೆಂದು ಭಾರ್ಗವನು ಅವನಿಗೆ ಅವುಗಳನ್ನು ಬಳಸುವ ರಹಸ್ಯಗಳ ಜೊತೆಗೆ ಅಸ್ತ್ರಗಳನ್ನು ಮತ್ತು ಸಂಪೂರ್ಣ ಧನುರ್ವೇದವನ್ನು ಇತ್ತನು. ಅವೆಲ್ಲವನ್ನೂ ಸ್ವೀಕರಿಸಿ ಕೃತಾಸ್ತ್ರನಾದ ದ್ವಿಜಸತ್ತಮನು ಸುಪ್ರೀತನಾಗಿ ತನ್ನ ಪ್ರಿಯ ಸಖ ದ್ರುಪದನಲ್ಲಿಗೆ ಹೋದನು.

ದ್ರೋಣ-ದ್ರುಪದ

ಪ್ರತಾಪವಾನ್ ಭಾರದ್ವಾಜನು ದ್ರುಪದನಲ್ಲಿಗೆ ಬಂದು “ನನ್ನನ್ನು ನಿನ್ನ ಸಖನೆಂದು ತಿಳಿ!” ಎಂದು ಪಾರ್ಷತನಿಗೆ ಹೇಳಿದನು. ಆಗ ದ್ರುಪದನು ಹೇಳಿದನು:

ತಕ್ಷಣವೇ ನಾನು ನಿನ್ನ ಸಖ ಎಂದು ನನಗೆ ಹೇಳುತ್ತಿದ್ದೀಯಲ್ಲ! ದ್ವಿಜ! ನಿನ್ನ ಪ್ರಜ್ಞೆಯು ಸರಿಯಿಲ್ಲ ಅಥವಾ ನಿನಗೆ ಸಾಕಷ್ಟು ತಿಳುವಳಿಕೆಯಿಲ್ಲ!  ಉದೀರ್ಣನಾಗಿರುವ ಯಾವ ರಾಜನೂ ನಿನ್ನಂತಹ ಮಂದಾತ್ಮ, ಅಶ್ರಿಯ ಮತ್ತು ಧನರಹಿತನೊಂದಿಗೆ ಸಖ್ಯವನ್ನು ಮಾಡುವುದಿಲ್ಲ. ಕಾಲವು ಹೇಗೆ ಮನುಷ್ಯನನ್ನು ಮುದಿಗೊಳಿಸುತ್ತದೆಯೋ ಹಾಗೆಯೇ ಸೌಹಾರ್ದತೆಯನ್ನೂ ಕುಂಠಿತಗೊಳಿಸುತ್ತದೆ. ಹಿಂದೆ ನಿನ್ನೊಡನೆ ನನಗೆ ಸೌಹಾರ್ದತೆಯಿತ್ತು. ಆದರೆ ಅದು ಸಾಮರ್ಥ್ಯ ಬಂಧನವಾಗಿತ್ತು. ಲೋಕದಲ್ಲಿ ಅಜರವಲ್ಲದ ಯಾವ ಸಖ್ಯವೂ ನೋಡಲು ದೊರೆಯುವುದಿಲ್ಲ. ಕಾಮವು ಇದನ್ನು ದೂರಮಾಡುತ್ತದೆ ಮತ್ತು ಕ್ರೋಧವು ಕುಂಠಿತಗೊಳಿಸುತ್ತದೆ. ಜೀರ್ಣವಾದ ಈ ಸಖ್ಯವನ್ನು ಉಪಾಸನೆಮಾಡಬೇಡ. ಹೊಸ ಸಖ್ಯವನ್ನು ಮಾಡು. ನನಗೆ ನಿನ್ನಲ್ಲಿ ಸಖ್ಯವಿತ್ತು. ಯಾಕೆಂದರೆ ಅದು ನನ್ನ ಉದ್ದೇಶಗಳ ಸಾಧಕವಾಗಿತ್ತು. ದರಿದ್ರನು ವಸುಮತಿಯ, ಅವಿದ್ಯಾವಂತನು ವಿದುಷಿಯ ಅಥವಾ ಹೇಡಿಯು ಶೂರನ ಸಖನಾಗಲಾರ. ಹಳೆಯ ಸಖ್ಯವು ಯಾರಿಗೆ ಬೇಕು? ಸರಿಸಮ ಸಂಪತ್ತನ್ನು ಹೊಂದಿದ ಮತ್ತು ಸರಿಸಮ ಕುಲದವರಾದ ಇಬ್ಬರ ನಡುವೆ ಸಖ್ಯ ಮತ್ತು ವಿವಾಹಗಳು ನಡೆಯುತ್ತವೆ. ಶ್ರೀಮಂತ ಮತ್ತು ಬಡವನ ಮಧ್ಯೆಯಲ್ಲ. ಅಶ್ರೋತ್ರಿಯು ಶ್ರೋತ್ರಿಯೊಡನೆ ಸಖ್ಯವನ್ನು ಮಾಡುವುದಿಲ್ಲ. ಹಾಗೆಯೇ ರಥಿಯು ಅರಥಿಯೊಡನೆ ಅಥವಾ ರಾಜನು ಅರಾಜನೊಂದಿಗೆ ಸಖ್ಯವನ್ನು ಮಾಡುವುದಿಲ್ಲ. ಹಳೆಯ ಸಖ್ಯವು ಯಾರಿಗೆ ಬೇಕು?

ದ್ರುಪದನ ಈ ಮಾತುಗಳಿಂದ ಪ್ರತಾಪವಾನ್ ಭಾರದ್ವಾಜನಿಗೆ ಸಿಟ್ಟು ಉಕ್ಕಿ ಬಂದು ಒಂದು ಕ್ಷಣ ಯೋಚನೆಗೊಳಗಾದನು. ಆ ಬುದ್ಧಿವಂತನು ಪಾಂಚಾಲರ ವಿರುದ್ಧ ಮನಸ್ಸಿನಲ್ಲಿಯೇ ನಿಶ್ಚಯವನ್ನು ಮಾಡಿ ಕುರುಮುಖ್ಯರ ನಗರಿ ನಾಗಸಾಹ್ವಯಕ್ಕೆ ಹೋದನು.

ಅದೇ ಸಮಯದಲ್ಲಿ ವೀರ ಕೌರವ-ಪಾಂಡವ ಕುಮಾರರು ಎಲ್ಲರೂ ಕೂಡಿ ಗಜಸಾಹ್ವಯದ ಹೊರಗೆ ಸಂತೋಷದಿಂದ ಅಲೆದಾಡುತ್ತಾ ವೀಟೆಯೊಂದಿಗೆ ಆಡುತ್ತಿದ್ದರು. ಅವರು ಆಡುತ್ತಿರುವಾಗ ವೀಟೆಯು ಒಂದು ಬಾವಿಯಲ್ಲಿ ಬಿದ್ದಿತು. ಆ ವೀಟೆಯನ್ನು ಹೇಗೆ ತೆಗೆಯಬೇಕೆಂದು ಅವರಿಗೆ ತೋಚದಾಯಿತು. ವೀರ್ಯವಾನ್ ದ್ರೋಣನು ಕುಮಾರರನ್ನು ಮತ್ತು ಅವರ ಕಷ್ಟವನ್ನು ನೋಡಿ ನಕ್ಕು ಅವರೊಂದಿಗೆ ಮೆಲ್ಲನೆ ಮೃದುವಾಗಿ ಮಾತನಾಡಿದನು:

ಇದೇನಾಯಿತು? ಭರತ ಕುಲದಲ್ಲಿ ಜನಿಸಿದ ನಿಮಗೆ ಈ ವೀಟೆಯನ್ನು ತೆಗೆಯಲಿಕ್ಕಾಗುವುದಿಲ್ಲವೆಂದರೆ ಕ್ಷತ್ರಿಯಬಲಕ್ಕೇ ಧಿಕ್ಕಾರ. ಅವರಿಗೆ ಅಸ್ತ್ರಗಳ ಕುರಿತಿದ್ದ ಜ್ಞಾನಕ್ಕೆ ಧಿಕ್ಕಾರ. ಈ ಒಂದು ಮುಷ್ಟಿ ಹುಲ್ಲನ್ನು ನಾನು ಅಸ್ತ್ರಗಳನ್ನಾಗಿ ಅಭಿಮಂತ್ರಿಸುತ್ತೇನೆ. ಸರಿಸಾಟಿಯಿಲ್ಲದ ಅದರ ಶಕ್ತಿಯನ್ನು ನಿರೀಕ್ಷಿಸಿ. ನಾನು ವೀಟೆಯನ್ನು ಒಂದು ಹುಲ್ಲುಕಡ್ಡಿಯಿಂದ ಹೊಡೆಯುತ್ತೇನೆ, ಮತ್ತು ಆ ಕಡ್ಡಿಯನ್ನು ಇನ್ನೊಂದು ಕಡ್ಡಿಯಿಂದ ಹೊಡೆಯುತ್ತೇನೆ, ಅದಕ್ಕೆ ಮತ್ತೊಂದನ್ನು ಸೇರಿಸುತ್ತೇನೆ. ಈ ರೀತಿ ಒಂದಕ್ಕೆ ಇನ್ನೊಂದನ್ನು ಸೇರಿಸಿ ವೀಟೆಯನ್ನು ಮೇಲೆತ್ತುತ್ತೇನೆ.

ವಿಸ್ಮಿತ ಕುಮಾರರು ತೆರೆದ ಕಣ್ಣುಗಳಿಂದ ಅವನು ವೀಟೆಯನ್ನು ಹೊರ ತೆಗೆದುದನ್ನು ನೋಡಿ, ವೀಟೆಯನ್ನು ಹೊರೆತೆಗೆದವನಿಗೆ ಹೇಳಿದರು:

ಬ್ರಾಹ್ಮಣ! ನಾವು ನಿನಗೆ ನಮಸ್ಕರಿಸುತ್ತೇವೆ. ಬೇರೆ ಯಾರಿಗೂ ಇದು ತಿಳಿಯದು. ನೀನು ಯಾರು? ನಿನ್ನನ್ನು ನಾವು ಯಾರೆಂದು ತಿಳಿಯಬೇಕು? ಮತ್ತು ನಾವು ನಿನಗೆ ಏನು ಮಾಡಬಹುದು?

ದ್ರೋಣನು ಹೇಳಿದನು:

ಹಾಗಿದ್ದರೆ ನನ್ನ ರೂಪ-ಗುಣಗಳನ್ನು ಭೀಷ್ಮನಿಗೆ ಹೇಳಿ. ಆ ಮಹಾಬುದ್ಧಿವಂತನಿಗೆ ಏನು ಮಾಡಬೇಕೆಂದು ತಿಳಿಯುತ್ತದೆ.

ಹಾಗೆಯೇ ಆಗಲಿ ಎಂದು ಅವರೆಲ್ಲರೂ ಪಿತಾಮಹ ಭೀಷ್ಮನಿಗೆ ಬ್ರಾಹ್ಮಣನ ಕರ್ಮವಿಶೇಷತೆಯನ್ನು ಯಥಾವತ್ತಾಗಿ ವರದಿ ಮಾಡಿದರು. ಕುಮಾರರನ್ನು ಕೇಳಿದ ಭೀಷ್ಮನು ಅವನು ದ್ರೋಣನೆಂದು ಗುರುತಿಸಿದನು. ಅವನು ಗುರುವಿಗೆ ಯುಕ್ತರೂಪ ಎಂದು ಯೋಚಿಸಿದನು. ಸ್ವಯಂ ತಾನೇ ಅವನನ್ನು ಬರಮಾಡಿಸಿಕೊಂಡು ಸತ್ಕರಿಸಿ ಶಸ್ತ್ರಭೃತರಲ್ಲಿ ಶ್ರೇಷ್ಠ ನಿಪುಣ ಭೀಷ್ಮನು ವಿವರವಾಗಿ ಪ್ರಶ್ನಿಸಿದನು.

ದ್ರೋಣನು ಅವನು ಅಲ್ಲಿಗೆ ಬರುವುದರ ಕಾರಣ ಸರ್ವವನ್ನೂ ನಿವೇದಿಸಿದನು:

ಹಿಂದೆ ನಾನು ಅಸ್ತ್ರಾರ್ಥ ಆಗಮ ಮತ್ತು ಧನುರ್ವೇದವನ್ನು ಕಲಿಯಲು ಮಹರ್ಷಿ ಅಗ್ನಿವೇಶ್ಯನಲ್ಲಿಗೆ ಹೋಗುತ್ತಿದ್ದೆನು. ಧನುರ್ವೇದವನ್ನು ನನ್ನದಾಗಿಸಿಕೊಳ್ಳಲು ನಾನು ಅಲ್ಲಿ ಬ್ರಹ್ಮಚಾರಿಯಾಗಿ ವಿನೀತಾತ್ಮನಾಗಿ ಜಟೆಧರಿಸಿ ಬಹಳ ವರ್ಷಗಳು ವಾಸಿಸಿದೆ. ಪಾಂಚಾಲರಾಜಪುತ್ರ ಮಹಾಬಲಿ ಯಜ್ಞಸೇನನೂ ನನ್ನ ಜೊತೆಯಲ್ಲಿಯೇ ಅದೇ ಗುರುವಡಿಯಲ್ಲಿ ಬಹಳ ಶ್ರಮಪಟ್ಟು ವಿದ್ಯೆಯನ್ನು ಕಲಿಯುತ್ತಿದ್ದನು. ಅಲ್ಲಿ ಅವನು ನನ್ನ ಸಖನಾಗಿದ್ದನು. ನನ್ನ ಉಪಕಾರಿ ಮತ್ತು ಪ್ರಿಯನಾಗಿದ್ದನು. ನಾನು ಅವನ ಸಾಂಗತ್ಯವನ್ನು ಬಯಸುತ್ತಿದ್ದೆ. ಬಾಲ್ಯದಿಂದ ಬಹಳಷ್ಟು ಕಾಲ ನಾವು ಒಟ್ಟಿಗೇ ಅಧ್ಯಯನ ಮಾಡಿದೆವು. ಅವನು ನನ್ನ ಬಳಿ ಬಂದು ನನಗೆ ಪ್ರಿಯವಾದುದನ್ನು ಮಾಡುತ್ತಿದ್ದನು ಮತ್ತು ನನಗೆ ಪ್ರಿಯವಾದುದನ್ನು ಹೇಳುತ್ತಿದ್ದನು. ನನಗೆ ಅವನಲ್ಲಿ ಪ್ರಿತಿಯನ್ನು ಬೆಳೆಸುವಂತಹ ಈ ಮಾತುಗಳನ್ನು ಆಡುತ್ತಿದ್ದನು:

ದ್ರೋಣ! ನಾನು ನನ್ನ ಮಹಾತ್ಮ ತಂದೆಯ ಪ್ರೀತಿಯ ಮಗ. ಯಾವಾಗ ಪಾಂಚಾಲನು ನನ್ನನ್ನು ರಾಜ್ಯದ ರಾಜನನ್ನಾಗಿ ಮಾಡುತ್ತಾನೋ ಆಗ ನನ್ನ ರಾಜ್ಯವು ಅನುಭವಿಸಲು ನಿನ್ನದಾಗುತ್ತದೆ. ನಾನು ಸತ್ಯವನ್ನು ಹೇಳುತ್ತಿದ್ದೇನೆ. ನನ್ನ ಭೋಗ-ಸುಖ ಮತ್ತು ಸಂಪತ್ತು ಎಲ್ಲವೂ ನಿನ್ನ ಅಧೀನವಾಗುತ್ತವೆ.

ಆಗ ಅವನು ನನಗೆ ಈ ರೀತಿ ಹೇಳಿದ್ದನು. ಕೃತಾಸ್ತ್ರನಾದ ಬಳಿಕ ಧನವನ್ನು ಅರಸುತ್ತಾ ನಾನು ಹೊರಟೆ. ಅವನು ಅಭಿಷಿಕ್ತನಾಗಿದ್ದಾನೆ ಎಂದು ಕೇಳಿ ಕೃತಾರ್ಥನಾದೆ ಎಂದು ಯೋಚಿಸಿದೆ. ನಮ್ಮ ಒಗ್ಗಟ್ಟು ಮತ್ತು ಅವನ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ಸುಪ್ರೀತನಾಗಿ ಪ್ರಿಯ ಸಖನ ರಾಜ್ಯಕ್ಕೆ ಹೋದೆ. ನನ್ನ ಹಳೆಯ ಸಖ ದ್ರುಪದನಲ್ಲಿಗೆ ಹೋಗಿ ಹೇಳಿದೆ:

ಪುರುಷವ್ಯಾಘ್ರ! ನನ್ನನ್ನು ನಿನ್ನ ಸಖನೆಂದು ತಿಳಿ.

ಈ ರೀತಿ ನಾನು ಸಖನೆಂದು ಹೇಳಿ ಅವನ ಎದುರು ಹೋದಾಗ ದ್ರುಪದನು ನನ್ನನ್ನು ನಿರಾಕರಿಸುವಂತೆ ನಗುತ್ತಾ ಹೇಳಿದನು:

ತಕ್ಷಣವೇ ನಾನು ನಿನ್ನ ಸಖ ಎಂದು ನನಗೆ ಹೇಳುತ್ತಿದ್ದೀಯಲ್ಲ! ದ್ವಿಜ! ನಿನ್ನ ಪ್ರಜ್ಞೆಯು ಸರಿಯಿಲ್ಲ ಅಥವಾ ನಿನಗೆ ತಿಳುವಳಿಕೆಯು ಅಷ್ಟಿಲ್ಲ.  ಯಾವ ಉದೀರ್ಣ ರಾಜನೂ ನಿನ್ನಂತಹ ಮಂದಾತ್ಮ, ಅಶ್ರಿಯ ಮತ್ತು ಧನರಹಿತನೊಡನೆ ಸಖ್ಯ ಮಾಡುವುದಿಲ್ಲ. ಅಶ್ರೋತ್ರಿಯು ಶ್ರೋತ್ರಿಯೊಡನೆ ಸಖ್ಯವನ್ನು ಮಾಡುವುದಿಲ್ಲ. ಹಾಗೆಯೇ ರಥಿಯು ಅರಥಿಯೊಡನೆ ಅಥವಾ ರಾಜನು ಅರಾಜನೊಂದಿಗೆ ಸಖ್ಯವನ್ನು ಮಾಡುವುದಿಲ್ಲ. ಹಳೆಯ ಸಖ್ಯವು ಯಾರಿಗೆ ಬೇಕು?”

ದ್ರುಪದನ ಈ ಮಾತುಗಳಿಂದ ನನಗೆ ಸಿಟ್ಟು ಉಕ್ಕಿ ಬಂದಿತು. ಭೀಷ್ಮ! ಗುಣಾನ್ವಿತ ಶಿಷ್ಯರನ್ನು ಹುಡುಕಿಕೊಂಡು ನಾನು ಕುರುಗಳಲ್ಲಿಗೆ ಬಂದೆ.

ಭೀಷ್ಮ ಮತ್ತು ಪಾಂಡುಪುತ್ರರೂ ಸೇರಿ ಅವನನ್ನು ಗುರುವೆಂದು ಸ್ವೀಕರಿಸಿದರು. ತನ್ನ ಸರ್ವ ಮೊಮ್ಮಕ್ಕಳನ್ನೂ ವಿವಿಧ ಸಂಪತ್ತುಗಳನ್ನೂ ಅವನಲ್ಲಿತ್ತು “ಇಕೋ ನಿನ್ನ ಶಿಷ್ಯರು!” ಎಂದು ದ್ರೋಣನಿಗೆ ವಿಧಿಪೂರ್ವಕ ಅರ್ಪಿಸಿದನು. ಆ ಮಹೇಷ್ವಾಸನು ಕೌರವರನ್ನು ಶಿಷ್ಯರನ್ನಾಗಿ ಸ್ವೀಕರಿಸಿದನು. ಅವರೆಲ್ಲರನ್ನೂ ಸ್ವೀಕರಿಸಿದ ದ್ರೋಣನು ಅವರೆಲ್ಲರೂ ಏಕಾಂತದಲ್ಲಿ ಅವನ ಪದತಳದಲ್ಲಿ ಕುಳಿತಿರುವಾಗ ರಹಸ್ಯದ ಈ ಮಾತುಗಳನ್ನಾಡಿದನು:

ನನ್ನ ಯಾವುದೋ ಒಂದು ಕಾರ್ಯವು ಆಗಬೇಕೆಂಬ ಆಕಾಂಕ್ಷೆಯು ನನ್ನ ಹೃದಯದಲ್ಲಿ ಅಡಗಿದೆ. ಅನಘರೇ! ನೀವು ಕೃತಾಸ್ತ್ರರಾದಾಗ ಅದನ್ನು ನನಗೆ ಮಾಡಿಕೊಡುತ್ತೀರಿ ಎಂದು ವಚನವನ್ನು ಕೊಡಿ.

ಅದನ್ನು ಕೇಳಿದ ಕೌರವರು ಸುಮ್ಮನಿದ್ದರು. ಆದರೆ ಅರ್ಜುನನು ಮಾತ್ರ ಅವನಿಗೆ ಪೂರ್ಣ ಭರವಸೆಯನ್ನಿತ್ತನು. ಆಗ ಅವನು ಅರ್ಜುನನನ್ನು ಬಿಗಿದಪ್ಪಿ ಪುನಃ ಪುನಃ ಅವನ ನೆತ್ತಿಯನ್ನು ಆಘ್ರಾಣಿಸಿದನು ಮತ್ತು ಪ್ರೀತಿಪೂರ್ವಕ ಸಂತೋಷ ಕಣ್ಣೀರನ್ನು ಸುರಿಸಿದನು.

ನಂತರ ವೀರ್ಯವಾನ್ ದ್ರೋಣನು ಪಾಂಡುಪುತ್ರರಿಗೆ ದೇವತೆಗಳ ಮತ್ತು ಮನುಷ್ಯರ ವಿವಿಧ ಅಸ್ತ್ರಗಳನ್ನು ನೀಡಿದನು. ಅನ್ಯ ರಾಜಪುತ್ರರೂ ಅಲ್ಲಿ ಸೇರಿದ್ದರು. ವೃಷ್ಣಿಗಳು, ಅಂಧಕರು, ಮತ್ತು ನಾನಾ ದೇಶಗಳ ರಾಜರುಗಳು ಎಲ್ಲರೂ ದ್ವಿಜಸತ್ತಮ ದ್ರೋಣನಿಂದ ಅಸ್ತ್ರಗಳನ್ನು ಪಡೆಯಲು ಬಂದಿದ್ದರು. ಸೂತಪುತ್ರ ರಾಧೇಯನೂ ಗುರು ದ್ರೋಣನಲ್ಲಿಗೆ ಬಂದನು. ಅಸೂಯಾಪರ ಸೂತಪುತ್ರನು ಪಾರ್ಥನೊಂದಿಗೆ ಸ್ಪರ್ಧಿಸುತ್ತಿದ್ದನು. ದುರ್ಯೋಧನನ ಬೆಂಬಲವನ್ನು ಪಡೆದು ಪಾಂಡವರನ್ನು ಕೀಳಾಗಿ ಕಾಣುತ್ತಿದ್ದನು.

ಗುರು ದ್ರೋಣ - ಶಿಷ್ಯ ಅರ್ಜುನ

ಅರ್ಜುನನಾದರೂ ತನ್ನ ಪರಮ ಯತ್ನದಿಂದ ಗುರುಪೂಜನೆಯಲ್ಲಿ ನಿರತನಾಗಿದ್ದನು. ಅಸ್ತ್ರಗಳಲ್ಲಿರುವ ತನ್ನ ಪರಮ ಯೋಗದ ಮೂಲಕ ದ್ರೋಣನ ಪ್ರೀತಿಪಾತ್ರನಾದನು. ದ್ರೋಣನು ಅನ್ನಸಾಧಕನನ್ನು ರಹಸ್ಯದಲ್ಲಿ ಕರೆದು

“ಕತ್ತಲೆಯಲ್ಲಿ ಎಂದೂ ಅರ್ಜುನನಿಗೆ ಏನನ್ನೂ ತಿನ್ನಲು ಕೊಡಬೇಡ!”

ಎಂದು ಹೇಳಿದನು. ನಂತರ ಒಂದು ದಿನ ಅರ್ಜುನನು ಊಟ ಮಾಡುತ್ತಿರುವಾಗ ಗಾಳಿ ಬೀಸಿ ಅವನು ಯಾವುದರ ಬೆಳಕಿನಲ್ಲಿ ಊಟಮಾಡುತ್ತಿದ್ದನೋ ಆ ದೀಪವು ಆರಿತು. ಅರ್ಜುನನು ಊಟವನ್ನು ಮುಂದುವರಿಸಿದನು ಮತ್ತು ಅವನ ಕೈಯು ನಿತ್ಯವೂ ಅನ್ನವನ್ನು ಹಿಡಿದು ಊಟಮಾಡುವ ಅಭ್ಯಾಸಬಲದಿಂದ ತಾನಾಗಿಯೇ ಬಾಯಿಯನ್ನು ಸೇರುತ್ತಿತ್ತು. ಅಭ್ಯಾಸದಿಂದ ಏನೆಲ್ಲ ಮಾಡಬಹುದು ಎಂದು ತಿಳಿದು ಆ ಪಾಂಡವನು ರಾತ್ರಿಯಲ್ಲಿಯೂ ಅಭ್ಯಾಸಮಾಡಲು ಪ್ರಾರಂಭಿಸಿದನು. ದ್ರೋಣನು ಅವನು ಬಿಲ್ಲು ಮೀಟುವ ಶಬ್ಧವನ್ನು ಕೇಳಿ, ಮೇಲೆದ್ದು ಅವನಲ್ಲಿಗೆ ಬಂದು ಬಿಗಿದಪ್ಪಿ ಹೇಳಿದನು:

ನಿನ್ನ ಸರಿಸಮ ಧನುರ್ಧರ ಅನ್ಯ ಯಾರೂ ಈ ಲೋಕದಲ್ಲಿ ಇಲ್ಲದಿರುವಂತೆ ಮಾಡಲು ಎಲ್ಲವನ್ನೂ ನಾನು ಮಾಡುತ್ತೇನೆ. ನಾನು ಸತ್ಯವನ್ನೇ ಹೇಳುತ್ತಿದ್ದೇನೆ.

ನಂತರ ದ್ರೋಣನು ಅರ್ಜುನನಿಗೆ ರಥದಮೇಲೆ, ಆನೆಯ ಮೇಲೆ, ಕುದುರೆಯ ಮೇಲೆ ಮತ್ತು ಭೂಮಿಯ ಮೇಲೂ ನಿಂತು ಯುದ್ಧಮಾಡುವುದನ್ನು ಕಲಿಸಿಕೊಟ್ಟನು. ದ್ರೋಣನು ಆ ಪಾಂಡವನಿಗೆ ಗದಾಯುದ್ಧದಲ್ಲಿ, ಖಡ್ಗಧಾರಣೆಯಲ್ಲಿ, ಕೈಯಿಂದ ಬಿಸಾಡುವ ತೋಮರ, ಪ್ರಾಸ, ಶಕ್ತಿ ಮುಂತಾದವುಗಳನ್ನು ಬಳಸುವುದರಲ್ಲಿ ಮತ್ತು ಮಿಶ್ರ ಆಯುಧಗಳಿಂದ ಯುದ್ಧಮಾಡುವುದನ್ನೂ ಕಲಿಸಿಕೊಟ್ಟನು. ಅವನ ಆ ಕೌಶಲತೆಯನ್ನು ನೋಡಿ ಸಹಸ್ರಾರು ರಾಜರು-ರಾಜಪುತ್ರರು ಧನುರ್ವೇದವನ್ನು ವಶೀಕರಿಸಿಕೊಳ್ಳಲು ಬಂದು ಸೇರಿದರು. ಹಾಗೆಯೇ ನಿಷಾದರಾಜ ಹಿರಣ್ಯಧನುಷನ ಮಗ ಏಕಲವ್ಯನೂ ದ್ರೋಣನಲ್ಲಿಗೆ ಬಂದನು. ಆದರೆ ಆ ಧರ್ಮಜ್ಞನು ಬೇರೆಯವರ ಆಸಕ್ತಿಯನ್ನು ನೋಡಿ ನೈಷಾದನೆಂದು ಯೋಚಿಸಿ ಅವನನ್ನು ಧನುರ್ವಿದ್ಯೆಗೆ ಶಿಷ್ಯನನ್ನಾಗಿ ಸ್ವೀಕರಿಸಲಿಲ್ಲ. ಆ ಪರಂತಪ ಏಕಲವ್ಯನು ದ್ರೋಣನ ಪಾದಗಳಿಗೆ ಶಿರಬಾಗಿ ನಮಸ್ಕರಿಸಿ ಅರಣ್ಯವನ್ನು ಸೇರಿದನು. ಅಲ್ಲಿ ಮಣ್ಣಿನಿಂದ ದ್ರೋಣನನ್ನೇ ಹೋಲುವ ವಿಗ್ರಹವೊಂದನ್ನು ಮಾಡಿ, ಅದನ್ನೇ ಆಚಾರ್ಯನೆಂದು ಪರಿಗಣಿಸಿ ಪರಮ ನಿಯಮ ಮತ್ತು ಯೋಗಗಳಿಂದ ಧನುರ್ವಿದ್ಯೆಯ ಅಭ್ಯಾಸ ಮಾಡತೊಡಗಿದನು. ಪರಮ ಶ್ರದ್ಧೆ ಮತ್ತು ಪರಮ ಯೋಗಗಳಿಂದ ಅವನು ಬಾಣಗಳ ಆದಾನ, ಅನುಸಂಧಾನ, ಮತ್ತು ವಿಮೋಕ್ಷಗಳಲ್ಲಿ ಪರಮ ಲಘುತ್ವವನ್ನು  ಪಡೆದನು.

ಒಮ್ಮೆ ದ್ರೋಣನ ಅಪ್ಪಣೆಯನ್ನು ಪಡೆದು ಅರಿಮರ್ದನ ಕುರುಪಾಂಡವರು ಎಲ್ಲರೂ ರಥಗಳನ್ನೇರಿ ಬೇಟೆಗೆಂದು ಹೊರಟರು. ಅಲ್ಲಿ ಪಾಂಡವರನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ನರನೊಬ್ಬನು ತನ್ನ ನಾಯಿಯನ್ನೂ ಕರೆದುಕೊಂಡು ಬಂದಿದ್ದನು. ಅವರೆಲ್ಲರೂ ಅಲ್ಲಿ ತಮ್ಮ ತಮ್ಮ ಉಪಾಯಗಳಂತೆ ತಿರುಗಾಡುತ್ತಿದ್ದಾಗ ಆ ನಾಯಿಯು ವನವನ್ನು ಸೇರಿ ದಾರಿತಪ್ಪಿ ನಿಷಾದನಿದ್ದಲ್ಲಿಗೆ ಬಂದಿತು. ಆ ವನದಲ್ಲಿ ಮಲಿನಾಂಗಿ, ಕೃಷ್ಣಾಜಿನಧರ ಕಪ್ಪು ನೈಷಧನನ್ನು ನೋಡಿದ ಆ ನಾಯಿಯು ಒಂದೇ ಸಮನೆ ಬೊಗಳ ತೊಡಗಿತು. ಆಗ ಆ ನರನು ಬೊಗಳುತ್ತಿರುವ ನಾಯಿಯ ಬಾಯಿಯಲ್ಲಿ ಒಂದೇ ವೇಳೆಯಲ್ಲಿ ಏಳು ಬಾಣಗಳನ್ನು ಬಿಟ್ಟು ತನ್ನ ಕೌಶಲ್ಯತೆಯನ್ನು ತೋರಿಸಿದನು. ಆ ನಾಯಿಯು ಬಾಯಿಯಲ್ಲಿ ಬಾಣಗಳು ತುಂಬಿಕೊಂಡಿದ್ದಂತೆ ಪಾಂಡವರಿದ್ದಲ್ಲಿಗೆ ಹೋಯಿತು. ಅದನ್ನು ನೋಡಿದ ವೀರ ಪಾಂಡವರು ಪರಮ ವಿಸ್ಮಿತರಾದರು. ಶಬ್ದವೇಧಿಯಲ್ಲಿದ್ದ ಆ ಪರಮ ಕುಶಲತೆಯನ್ನು ನೋಡಿ ಎಲ್ಲರೂ ವಿನೀತರಾಗಿ ಆ ಕೃತ್ಯವನ್ನೆಸಗಿದವನ್ನು ಪ್ರಶಂಸಿಸಿದರು. ಪಾಂಡವರು ವನದಲ್ಲಿ ಅವನನ್ನು ಅನ್ವೇಷಿಸುತ್ತಾ ಒಂದೇ ಸಮನೆ ಬಾಣಗಳನ್ನು ಬಿಡುತ್ತಿದ್ದ ಆ ವನವಾಸಿಯನ್ನು ಕಂಡರು. ವಿಕೃತವಾಗಿ ಕಾಣುತ್ತಿರುವ ಅವನನ್ನು ಗುರುತಿಸಲಾಗದೇ ಅವನನ್ನು ಕೇಳಿದರು:

ನೀನು ಯಾರು ಮತ್ತು ಯಾರವನು?”

ಏಕಲವ್ಯನು ಹೇಳಿದನು:

ನಿಷಾದಾಧಿಪತಿ ವೀರ ಹಿರಣ್ಯಧನುಷನ ಮಗನೆಂದು, ದ್ರೋಣಶಿಷ್ಯನೆಂದು, ಧನುರ್ವೇದವನ್ನು ಕಲಿಯಲು ಶ್ರಮಿಸುತ್ತಿರುವವನೆಂದೂ ನನ್ನನ್ನು ತಿಳಿಯಿರಿ.

ಆಗ ಪಾಂಡವರು ಅವನನ್ನು ಗುರುತಿಸಿದರು. ಮತ್ತು ಅವರು ಹಿಂದಿರುಗಿ ಬಂದು ಆ ಅದ್ಭುತ ಎಲ್ಲವನ್ನೂ ಯಥಾವತ್ತಾಗಿ ದ್ರೋಣನಿಗೆ ವರದಿ ಮಾಡಿದರು. ಆದರೆ ಕೌಂತೇಯ ಅರ್ಜುನನು ಏಕಲವ್ಯನ ಕುರಿತು ಚಿಂತಿಸತೊಡಗಿದನು. ಏಕಾಂತದಲ್ಲಿ ದ್ರೋಣನನ್ನು ಭೆಟ್ಟಿಯಾಗಿ ಪ್ರೇಮಾಭಾವದಿಂದ ಹೇಳಿದನು:

ಒಮ್ಮೆ ನಾನು ಒಬ್ಬನೇ ಇರುವಾಗ ನನ್ನನ್ನು ಬಿಗಿದಪ್ಪಿ ಪ್ರೀತಿಪೂರ್ವಕ ನನ್ನ ಯಾವ ಶಿಷ್ಯರೂ ಎಂದೂ ನಿನ್ನನ್ನು ಹಿಂದೆಹಾಕುವುದಿಲ್ಲ ಎಂದು ಹೇಳಿರಲಿಲ್ಲವೇ? ಹಾಗಿದ್ದಾಗ ಈಗ ಹೇಗೆ ನನಗಿಂಥಲೂ ವಿಶಿಷ್ಠ ವೀರ್ಯವಾನ್ ನಿಷಧಾಧಿಪತಿಯ ಮಗನು ನಿನ್ನ ಶಿಷ್ಯನಾಗಿದ್ದಾನೆ?

ಸ್ವಲ್ಪ ಸಮಯ ಯೋಚಿಸಿದ ದ್ರೋಣನು ಒಂದು ನಿಶ್ಚಯ ಮಾಡಿ ಸವ್ಯಸಾಚಿಯನ್ನೂ ಕರೆದುಕೊಂಡು ನೈಷಾಧಿಯಿದ್ದಲ್ಲಿಗೆ ಬಂದನು. ಅಲ್ಲಿ ಮಲದಿಗ್ದಾಂಗ, ಜಟಿಲ, ಹರಕು ಬಟ್ಟೆಗಳನ್ನು ಧರಿಸಿದ್ದ, ಧನುಷ್ಪಾಣಿ ನಿರಂತರವಾಗಿ ಬಾಣಗಳನ್ನು ಬಿಡುತ್ತಿದ್ದ ಏಕಲವ್ಯನನ್ನು ಕಂಡನು. ಏಕಲವ್ಯನೂ ಕೂಡ ಬರುತ್ತಿದ್ದ ದ್ರೋಣನನ್ನು ನೋಡಿ ಅವನಲ್ಲಿಗೆ ಹೋಗಿ ಅವನ ಕಾಲುಗಳನ್ನು ಹಿಡಿದು ತನ್ನ ತಲೆಯಿಂದ ಭೂಮಿಯನ್ನು ಸ್ಪರ್ಷಿಸಿದನು. ಆ ನಿಷಾಧಜನು ದ್ರೋಣನನ್ನು ವಿಧಿವತ್ತಾಗಿ ಪೂಜಿಸಿ ತಾನು ಶಿಷ್ಯನೆಂದು ನಿವೇದಿಸಿ ಅವನ ಎದುರು ಅಂಜಲೀ ಬದ್ಧನಾಗಿ ನಿಂತುಕೊಂಡನು. ಆಗ ದ್ರೋಣನು ಎಕಲವ್ಯನಿಗೆ ಹೇಳಿದನು:

ನೀನು ನನ್ನ ಶಿಷ್ಯನೇ ಆಗಿದ್ದರೆ ತಕ್ಷಣವೇ ನನಗೆ ವೇತನವನ್ನು ನೀಡಬೇಕು.

ಇದನ್ನು ಕೇಳಿ ಏಕಲವ್ಯನು ಸಂತಸದಿಂದ ಹೇಳಿದನು:

ಭಗವನ್! ಏನನ್ನು ಕೊಡಲಿ? ನನ್ನ ಗುರುವು ಆಜ್ಞಾಪಿಸಲಿ. ನನ್ನ ಬ್ರಹ್ಮವಿತ್ತಮ ಗುರುವಿಗೆ ಕೊಡದೇ ಇರುವಂಥಹುದು ಏನೂ ಇಲ್ಲ.

ಆಗ ಅವನು

“ನನಗೆ ನಿನ್ನ ಬಲಗೈಯ ಅಂಗುಷ್ಠವನ್ನು ಕೊಡು!”

ಎಂದನು. ದ್ರೋಣನ ಆ ದಾರುಣ ಮಾತುಗಳನ್ನು ಕೇಳಿದ ಸದಾ ಸತ್ಯದಲ್ಲಿ ನಿರತ ಏಕಲವ್ಯನಾದರೂ ಸಂತೋಷದ ಮುಖದಿಂದ, ಮನಸ್ಸಿನಲ್ಲಿ ಸ್ವಲ್ಪವೂ ದೀನತೆಯಿಲ್ಲದೇ ಸ್ವಲ್ಪವೂ ಯೋಚನೆಯಿಲ್ಲದೇ ತನ್ನ ಅಂಗುಷ್ಠವನ್ನು ಕತ್ತರಿಸಿ ದ್ರೋಣನಿಗಿತ್ತು ತನ್ನ ಪ್ರತಿಜ್ಞೆಯನ್ನು ಪೂರೈಸಿದನು. ತನ್ನ ಅಂಗುಲಿಯನ್ನು ಕತ್ತರಿಸಿಕೊಟ್ಟ ನೈಷಾಧನು ಮೊದಲಿನ ಹಾಗೆ ಶಿಘ್ರವಾಗಿರಲಿಲ್ಲ. ಅರ್ಜುನನ ಜ್ವರವು ಬಿಟ್ಟು ಅವನು ಪ್ರೀತಮನಸ್ಕನಾದನು. ದ್ರೋಣನ ಮಾತೂ ಸತ್ಯವಾಗಿ ಉಳಿಯಿತು. ಬೇರೆ ಯಾರೂ ಅರ್ಜುನನನ್ನು ಹಿಂದೆ ಹಾಕಲಿಲ್ಲ.

ದ್ರೋಣನಲ್ಲಿ ಕಲಿಯುತ್ತಿದ್ದ ಕುರು ಶಿಷ್ಯರಲ್ಲಿ ದುರ್ಯೋಧನ ಮತ್ತು ಭೀಮ ಇಬ್ಬರೂ ಗದಾಯುದ್ಧದಲ್ಲಿ ವಿಶೇಷತೆಯನ್ನು ಪಡೆದರು. ಅಶ್ವತ್ಥಾಮನು ರಹಸ್ಯಾಸ್ತ್ರಗಳಲ್ಲಿ ಎಲ್ಲರಿಗಿಂಥಲೂ ಮುಂದುವರಿದಿದ್ದನು. ಹಾಗೆಯೇ ಅವಳಿ ಮಕ್ಕಳು ಖಡ್ಗವನ್ನು ಹಿಡಿಯುವುದರಲ್ಲಿ, ಯುಧಿಷ್ಠಿರನು ರಥಯುದ್ಧದಲ್ಲಿ, ಮತ್ತು ಧನಂಜಯನು ಎಲ್ಲ ಆಯುಧಗಳಲ್ಲಿ ಅನ್ಯ ಪುರುಷರಿಗಿಂಥ ಮುಂದುವರೆದಿದ್ದರು. ರಥಯೂಥಪಯೂಥಪ ಆ ಪಾಂಡವನು ಬುದ್ಧಿಯೋಗಬಲೋತ್ಸಾಹಗಳಲ್ಲಿ ಸರ್ವಾಸ್ತ್ರಗಳಲ್ಲಿ ಸಾಗರಪರ್ಯಂತವೂ ಪ್ರತಿಥನಾಗಿದ್ದನು. ಅಸ್ತ್ರಗಳಲ್ಲಿ ಮತ್ತು ಗುರುವಿನ ಮೇಲಿನ ಅನುರಾಗದಲ್ಲಿ ಅರ್ಜುನನು ವಿಶಿಷ್ಠನಾಗಿದ್ದನು. ವೀರರೆಲ್ಲರಿಗೂ ಅಸ್ತ್ರೋಪದೇಶ ಒಂದೇ ಆಗಿದ್ದರೂ ಸರ್ವ ಕುಮಾರರಲ್ಲಿ ಅರ್ಜುನನು ಎದ್ದು ಕಾಣುತ್ತಿದ್ದನು. ಬಲದಲ್ಲಿ ಅಧಿಕ ಭೀಮಸೇನ ಮತ್ತು ಕೃತವಿದ್ಯ ಧನಂಜಯನನನ್ನು ನೋಡಿ ದುರಾತ್ಮ ಧಾರ್ತರಾಷ್ಟ್ರರು ಅಸೂಯಾಪರರಾಗಿದ್ದರು.

ಅವರ ಎಲ್ಲ ಶಿಕ್ಷಣವೂ ಸಮಾಪ್ತಿಯಾದ ನಂತರ ದ್ರೋಣನು ಅವರ ಪ್ರಹರಣ ಜ್ಞಾನವನ್ನು ತಿಳಿಯಲೋಸುಗ ಎಲ್ಲರನ್ನೂ ಕರೆದು ಒಂದೆಡೆ ಸೇರಿಸಿದನು. ಶಿಲ್ಪಿಗಳಿಂದ ಮಾಡಿಸಿದ ಒಂದು ಪಕ್ಷಿಯ ಕೃತ್ರಿಮವನ್ನು ವೃಕ್ಷದ ಮೇಲೆ ಇರಿಸಿ ಆ ಲಕ್ಷ್ಯವನ್ನು ತೋರಿಸುತ್ತಾ ಕುಮಾರರಿಗೆ ಹೇಳಿದನು:

ಎಲ್ಲರೂ ತ್ವರೆ ಮಾಡಿ. ಬೇಗನೆ ನಿಮ್ಮ ನಿಮ್ಮ ಧನುಸ್ಸನ್ನು ತೆಗೆದುಕೊಳ್ಳಿ, ಬಾಣವನ್ನು ಬಿಲ್ಲಿಗೆ ಹೂಡಿ ಆ ಪಕ್ಷಿಯನ್ನು ಗುರಿಮಾಡಿ ನಿಂತುಕೊಳ್ಳಿ. ನಾನು ಹೇಳಿದ ಕೂಡಲೇ ಅದರ ತಲೆಯನ್ನು ಹೊಡೆದು ಬೀಳಿಸಿರಿ. ಮಕ್ಕಳೇ! ನಾನು ಒಬ್ಬೊಬ್ಬರಿಗೇ ಹೇಳುತ್ತೇನೆ. ಹಾಗೆಯೆ ಮಾಡಿರಿ.

ಶ್ರೇಷ್ಠ ಆಂಗಿರಸನು ಮೊಟ್ಟ ಮೊದಲು ಯುಧಿಷ್ಠಿರನ ಕುರಿತು ಹೇಳಿದನು:

ದುರ್ಧರ್ಷ! ಬಾಣವನ್ನು ಹೂಡು. ನನ್ನ ಮಾತು ಮುಗಿದಕೂಡಲೇ ಅದನ್ನು ಬಿಡು.

ಆಗ ಯುಧಿಷ್ಠಿರನು ಗುರುವಿನ ಮಾತಿನಂತೆ ಮಹಾಧ್ವನಿ ಧನುವನ್ನು ಹಿಡಿದು ಪಕ್ಷಿಯನ್ನು ಗುರಿಯನ್ನಾಗಿಟ್ಟು ನಿಂತುಕೊಂಡನು. ಈ ರೀತಿ ಧನುವನ್ನೆಳೆದು ನಿಂತಿದ್ದ ಕುರುನಂದನನಿಗೆ ಒಂದು ಮುಹೂರ್ತದ ನಂತರ ದ್ರೋಣನು ಕೇಳಿದನು:

ನರವರಾತ್ಮಜ! ಮರದಮೇಲಿನ ಪಕ್ಷಿಯು ನಿನಗೆ ಕಾಣುತ್ತಿದೆಯೇ?

ಕಾಣುತ್ತಿದೆ” ಎಂದು ಯುಧಿಷ್ಠಿರನು ಆಚಾರ್ಯನಿಗೆ ಉತ್ತರಿಸಿದನು. ಸ್ವಲ್ಪ ಹೊತ್ತಿನ ನಂತರ ದ್ರೋಣನು ಪುನಃ ಕೇಳಿದನು:

ಈಗ ನಿನಗೆ ಏನು ಕಾಣುತ್ತಿದೆ? ನಾನು ಕಾಣುತ್ತಿದ್ದೇನೋ ಅಥವಾ ಈ ಮರವೋ ಅಥವಾ ನಿನ್ನ ಸಹೋದರರೋ?

ಅದಕ್ಕೆ ಕೌಂತೇಯನು ಹೇಳಿದನು:

ಈ ಮರ ಕಾಣುತ್ತಿದೆ, ನೀವೂ ಕಾಣುತ್ತಿದ್ದೀರಿ, ಸಹೋದರರೂ ಕಾಣುತ್ತಿದ್ದಾರೆ ಮತ್ತು ಪಕ್ಷಿಯೂ ಕಾಣುತ್ತಿದೆ.

ಆಗ ಅಪ್ರೀತ ದ್ರೋಣನು

“ಆಚೆ ಸರಿ. ನಿನಗೆ ಗುರಿಯನ್ನು ಹೊಡೆಯಲು ಸಾದ್ಯವಿಲ್ಲ”

ಎಂದು ಬೈದನು. ನಂತರ ಆ ಮಹಾಯಶನು ದುರ್ಯೋಧನನೇ ಮೊದಲಾದ ಧಾರ್ತರಾಷ್ಟ್ರರನ್ನು ಕ್ರಮವಾಗಿ ಇದೇ ರೀತಿ ಪ್ರಶ್ನಿಸಿ, ಪರೀಕ್ಷಿಸಿದನು. ಭೀಮನೇ ಮೊದಲಾದ ಅನ್ಯ ಶಿಷ್ಯರನ್ನೂ ಅನ್ಯ ದೇಶದ ರಾಜರನ್ನೂ ಪರೀಕ್ಷಿಸಿದನು. ಅವರೆಲ್ಲರೂ ಇವೆಲ್ಲವೂ ಕಾಣುತ್ತಿವೆ ಎಂದಾಗ ಸಿಟ್ಟಿಗೆದ್ದು ಬೈದನು.

ಆಗ ದ್ರೋಣನು ಮುಗುಳ್ನಗುತ್ತಾ ಧನಂಜಯನಿಗೆ ಹೇಳಿದನು:

ಈಗ ನೀನು ಈ ಲಕ್ಷ್ಯವನ್ನು ಹೊಡೆದುರುಳಿಸಬೇಕು. ಕೇಳು. ನಾನು ಹೇಳಿದ ತಕ್ಷಣವೇ ಬಾಣವನ್ನು ಬಿಡಬೇಕು. ಮಗು! ಮೊದಲು ಬಿಲ್ಲಿನಲ್ಲಿ ಬಾಣವನ್ನು ಹೂಡಿ ಒಂದು ಕ್ಷಣ ಹಾಗೆಯೇ ನಿಂತುಕೋ.

ಇದನ್ನು ಕೇಳಿದ ಸವ್ಯಸಾಚಿಯು ಬಿಲ್ಲನ್ನು ವೃತ್ತಾಕಾರದಲ್ಲಿ ಬಗ್ಗಿಸಿ ಲಕ್ಷ್ಯಕ್ಕೇ ಗುರಿಯಿಟ್ಟು ಗುರುವು ಹೇಳಿದಂತೆ ನಿಂತುಕೊಂಡನು. ಸ್ವಲ್ಪ ಸಮಯದ ನಂತರ ಅವನಿಗೆ ದ್ರೋಣನು ಹೇಳಿದನು:

ನಿನಗೆ ಅಲ್ಲಿ ಕುಳಿತಿರುವ ಪಕ್ಷಿಯು ಕಾಣುತ್ತಿದೆಯೇ? ಮತ್ತು ಆ ಮರ ಮತ್ತು ನಾನು?

ಪಾರ್ಥನು ದ್ರೋಣನಿಗೆ ಉತ್ತರಿಸಿದನು:

ಪಕ್ಷಿಯು ಕಾಣುತ್ತಿದೆ. ಆದರೆ ವೃಕ್ಷವಾಗಲೀ ನೀವಾಗಲೀ ಕಾಣುತ್ತಿಲ್ಲ.

ಸಂತೋಷಗೊಂಡ ದ್ರೋಣನು ಒಂದು ಕ್ಷಣ ತಡೆದು ಪುನಃ ಆ ರಥರ್ಷಭ ದುರ್ಧರ್ಷ ಪಾಂಡವನಿಗೆ ಹೇಳಿದನು:

ಪಕ್ಷಿಯನ್ನು ನೋಡುತ್ತಿದ್ದೀಯಾದರೆ ಅದನ್ನು ನನಗೆ ವರ್ಣಿಸು.

ಅದಕ್ಕೆ ಅವನು ಹೇಳಿದನು:

ಪಕ್ಷಿಯ ತಲೆ ಮಾತ್ರ ಕಾಣುತ್ತಿದೆ. ದೇಹವು ಕಾಣುತ್ತಿಲ್ಲ.

ಅರ್ಜುನನ ಈ ಮಾತುಗಳನ್ನು ಕೇಳಿದ ದ್ರೋಣನ ದೇಹವು ಸಂತೋಷದಿಂದ ಪುಳಕಿತಗೊಂಡಿತು. ಬಾಣವನ್ನು ಬಿಡು! ಎಂದು ಹೇಳಿದನು. ಪಾಂಡವ ಪಾರ್ಥನು ಸ್ವಲ್ಪವೂ ಹಿಂಜರಿಯದೇ ಬಾಣವನ್ನು ಬಿಟ್ಟು ತನ್ನ ತೀಕ್ಷ್ಣ ಬಾಣದಿಂದ ಮರದ ಮೇಲೆ ಕುಳಿತಿದ್ದ ಪಕ್ಷಿಯ ತಲೆಯನ್ನು ಕತ್ತರಿಸಿ, ಕೆಳಗೆ ಬೀಳಿಸಿದನು. ಫಲ್ಗುಣನು ಈ ಕೃತ್ಯದಲ್ಲಿ ಯಶಸ್ವಿಯಾಗಿದ್ದುದನ್ನು ನೋಡಿದ ದ್ರೋಣನು ಅವನನ್ನು ಬಿಗಿದಪ್ಪಿ, ದ್ರುಪದ ಮತ್ತು ಅವನ ಬಂಧುಗಳು ಪರಾಜಿತಗೊಂಡರಂತೆಯೇ ಎಂದು ಯೋಚಿಸಿದನು.

ಸ್ವಲ್ಪ ದಿನಗಳ ನಂತರ ಶ್ರೇಷ್ಠ ಆಂಗಿರಸನು ತನ್ನ ಶಿಷ್ಯರಿಂದೊಡಗೂಡಿ ಸ್ನಾನಕ್ಕೆಂದು ಗಂಗಾನದಿಗೆ ಹೋದನು. ದ್ರೋಣನು ನೀರಿಗಿಳಿದಾಗ ನದಿಯಲ್ಲಿ ವಾಸಿಸುತ್ತಿದ್ದ ಬಲಶಾಲಿ ಮೊಸಳೆಯೊಂದು ಕಾಲಚೋದಿತಗೊಂಡು ಅವನ ಕಾಲನ್ನು ಹಿಡಿಯಿತು. ತನ್ನನ್ನು ಬಿಡಿಸಿಕೊಳ್ಳಲು ಸಮರ್ಥನಾಗಿದ್ದರೂ ಅವನು ತನ್ನ ಎಲ್ಲ ಶಿಷ್ಯರಿಗೂ ಆದೇಶವನ್ನಿತ್ತನು:

ಬೇಗನೆ ಈ ಮೊಸಳೆಯನ್ನು ಕೊಂದು ನನ್ನನ್ನು ಬಿಡಿಸಿ.

ಅವನು ಹೇಳುವುದನ್ನು ಮುಗಿಸುವುದರೊಳಗೇ ಇತರರು ಸಮ್ಮೂಢರಾಗಿ ಎಲ್ಲೆಲ್ಲಿಂದಲೂ ಓಡಿ ಬರುತ್ತಿರುವಾಗ ಬೀಭತ್ಸುವು ಐದು ಬಾಣಗಳನ್ನು ಬಿಟ್ಟು ನೀರಿನೊಳಗಿದ್ದ ಮೊಸಳೆಯನ್ನು ಕೊಂದನು. ಕ್ರಿಯೋಪೇತ ಪಾಂಡವನನ್ನು ನೋಡಿದ ದ್ರೋಣನು ಅವನು ಸರ್ವ ಶಿಷ್ಯರಲ್ಲಿ ವಿಶಿಷ್ಠನೆಂದು ಮನ್ನಿಸಿದನು ಮತ್ತು ತುಂಬಾ ಸಂತೋಷಗೊಂಡನು. ಪಾರ್ಥನ ಬಾಣಗಳಿಂದ ಕಡಿದು ತುಂಡಾದ ಮೊಸಳೆಯು ಆ ಮಹಾತ್ಮನ ಕಾಲನ್ನು ಬಿಟ್ಟು ಪಂಚಭೂತಗಳಲ್ಲಿ ಸೇರಿಕೊಂಡಿತು. ಆಗ ಮಹಾತ್ಮ ಭಾರದ್ವಾಜನು ಮಹಾರಥಿಗೆ ಹೇಳಿದನು:

ಮಹಾಬಾಹು! ನನ್ನಿಂದ ಈ ವಿಶಿಷ್ಠ ಅತಿದುರ್ಧರ ಭ್ರಹ್ಮಶಿರ ಎಂಬ ಹೆಸರಿನ ಅಸ್ತ್ರವನ್ನು, ಬಳಸುವ ಮತ್ತು ಹಿಂದೆ ತೆಗೆದುಕೊಳ್ಳುವ ವಿಧಾನಗಳ ಜೊತೆಗೆ ಸ್ವೀಕರಿಸು. ಇದನ್ನು ಮನುಷ್ಯರ ಮೇಲೆ ಎಂದೂ ಬಳಸಬಾರದು. ಅಲ್ಪತೇಜಸ್ವಿಯ ಮೇಲೆ ಇದನ್ನು ಬಿಟ್ಟರೆ ಇದು ಇಡೀ ಜಗತ್ತನ್ನೇ ಸುಟ್ಟುಬಿಡಬಹುದು. ಈ ರೀತಿಯ ಇನ್ನೊಂದು ಅಸ್ತ್ರವು ಈ ಮೂರೂ ಲೋಕಗಳಲ್ಲಿಯೂ ಇಲ್ಲ. ಆದುದರಿಂದ ಇದನ್ನು ನೀನು ತುಂಬಾ ಜಾಗ್ರತೆಯಲ್ಲಿ ಧರಿಸಬೇಕು. ನನ್ನ ಈ ಮಾತುಗಳನ್ನು ಕೇಳು. ಎಂದಾದರೂ ಅಮಾನುಷ ಶತ್ರುವು ನಿನ್ನನ್ನು ಎದುರಿಸಿದಾಗ ಈ ಅಸ್ತ್ರವನ್ನು ಬಳಸಿ ಅವನನ್ನು ಯುದ್ಧದಲ್ಲಿ ಕೊಲ್ಲು.

ಹಾಗೆಯೇ ಆಗಲಿ! ಎಂದು ಉತ್ತರಿಸಿದ ಬೀಭತ್ಸುವು ಅಂಜಲೀ ಬದ್ಧನಾಗಿ ಆ ಪರಮಾಸ್ತ್ರವನ್ನು ಸ್ವೀಕರಿಸಿದನು. ಗುರುವು ಪುನಃ ಹೇಳಿದನು:

ಇಡೀ ಲೋಕದಲ್ಲಿ ನಿನ್ನ ಸಮ ಧನುರ್ಧರನು ಬೇರೆ ಯಾರೂ ಇರುವುದಿಲ್ಲ.

ಪಾಂಡವ-ಕೌರವ ಪ್ರತಿಭಾ ಪ್ರದರ್ಶನ

ಧಾರ್ತರಾಷ್ಟ್ರರೂ ಪಾಂಡುಪುತ್ರರೂ ಕೃತಾಸ್ತ್ರರಾದುದನ್ನು ಕಂಡ ದ್ರೋಣನು ಜನೇಶ್ವರ ರಾಜ ಧೃತರಾಷ್ಟ್ರನಿಗೆ, ಕೃಪ, ಸೋಮದತ್ತ, ಬಾಹ್ಲೀಕ, ದೀಮಂತ ಗಾಂಗೇಯ, ವ್ಯಾಸ ಮತ್ತು ವಿದುರರ ಸನ್ನಿಧಿಯಲ್ಲಿ ಹೇಳಿದನು:

“ಕುರುಸತ್ತಮ! ನಿನ್ನ ಕುಮಾರರು ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ್ದಾರೆ. ನಿನ್ನ ಅನುಮತಿಯಿದ್ದರೆ ಅವರು ತಾವು ಪಡೆದಿರುವ ಶಿಕ್ಷಣವನ್ನು ಪ್ರದರ್ಶಿಸಬಹುದು.”

ಆಗ ಪ್ರಹೃಷ್ಟ ಮನಸ್ಕ ಮಹಾರಾಜನು ಹೇಳಿದನು:

“ದ್ವಿಜಸತ್ತಮ ಭಾರದ್ವಾಜ! ನೀನು ಒಂದು ಮಹತ್ತರ ಕಾರ್ಯವನ್ನೇ ಮುಗಿಸಿದ್ದೀಯೆ. ನೀನೇ ನಮಗೆ ಯಾವಾಗ, ಎಲ್ಲಿ, ಮತ್ತು ಯಾವ ರೀತಿಯಲ್ಲಿ ಇದನ್ನು ನಡೆಸಬೇಕೆಂದು ಅಪ್ಪಣೆ ಕೊಡಬೇಕು. ಇಂಥಹ ದಿನದಲ್ಲಿ ನಾನು ವೇದನೆಯಿಂದ ದೃಷ್ಟಿಯನ್ನು ಪಡೆದಿರುವ, ನನ್ನ ಈ ಪುತ್ರರ ಅಸ್ತ್ರಜ್ಞಾನ ಮತ್ತು ಪರಾಕ್ರಮವನ್ನು ನೋಡಬಲ್ಲಂಥಹ ಇತರ ಪುರುಷರ ಕುರಿತು ಅಸೂಯೆಪಡುತ್ತೇನೆ. ವಿದುರ! ಗುರು ಆಚಾರ್ಯನು ಹೇಳಿದಂತೆಯೇ ಮಾಡು. ಇದಕ್ಕಿಂತಲೂ ಸಂತೋಷವನ್ನು ತರುವಂಥಹುದು ಬೇರೆಯಾವುದೂ ಇಲ್ಲ ಎಂದು ನನ್ನ ಭಾವನೆ.”

ನಂತರ ರಾಜನ ಅನುಮತಿಯನ್ನು ಪಡೆದು ದ್ರೋಣನೂ ಮತ್ತು ಅವನ ಹಿಂದೆ ವಿದುರನೂ ಹೋದರು. ಮಹಾಪ್ರಾಜ್ಞ ಭಾರದ್ವಾಜನು ಮರಗಳಿಲ್ಲದ, ಗಿಡಗಂಟಿಗಳಿಲ್ಲದ, ನದಿಯ ಪಕ್ಕದಲ್ಲಿ ಸಮಪ್ರದೇಶದ ಭೂಮಿಯನ್ನು ಅಳೆಸಿದನು. ಪೂಜನೀಯ ನಕ್ಷತ್ರ ತಿಥಿಗಳಲ್ಲಿ ಆ ಭೂಮಿಗೆ ಬಲಿಯನ್ನು ಹಾಕಿಸಿದನು. ಆ ಜಾಗವು ಯಾವ ಉದ್ದೇಶಕ್ಕಿದೆಯೆಂದು ಪುರದಲ್ಲೆಲ್ಲಾ ಘೋಷಿಸಲಾಯಿತು. ಈ ರಂಗಭೂಮಿಯಲ್ಲಿ ಶಿಲ್ಪಿಗಳು ಸುವಿಪುಲ ಶಾಸ್ತ್ರಗಳಲ್ಲಿ ಹೇಳಿದಂತೆ ಯಥಾವಿಧಿ ಸುವಿಹಿತ ಸರ್ವಾಯುಧೋಪೇತ ಪ್ರೇಕ್ಷಾಗಾರವನ್ನು ರಾಜನಿಗೆ ಮತ್ತು ಸ್ತ್ರೀಯರಿಗೆ ನಿರ್ಮಿಸಿದರು. ಜಾನಪದ ಜನರಿಗೆ ಅಗಲ-ಎತ್ತರ ವಿಪುಲ ನೆರಳನ್ನು ನೀಡುವಂತೆ ಹೊದಿಕೆಗಳನ್ನು ಹೊಂದಿದ್ದ ಮಂಚಗಳನ್ನೂ ರಚಿಸಲಾಯಿತು. ಆ ದಿನವು ಬಂದಾಗ ರಾಜನು ತನ್ನ ಸಚಿವರಿಂದೊಡಗೂಡಿ, ಭೀಷ್ಮ, ಕೃಪ ಮತ್ತು ಆಚಾರ್ಯರನ್ನು ಮುಂದೆ ಮಾಡಿಕೊಂಡು, ತೆಳು ಪರದೆಯಿಂದ ಆವೃತ, ವೈಡೂರ್ಯಮಣಿಭೂಷಿತ ಶಾತಕುಂಭಗಳನ್ನು ಹೊಂದಿದ್ದ ದಿವ್ಯ ಪ್ರೇಕ್ಷಾಗಾರಕ್ಕೆ ಆಗಮಿಸಿದನು. ಆಗ ಮಹಾಭಾಗೆ ಗಾಂಧಾರಿ, ಕುಂತಿ ಮೊದಲಾದ ರಾಜನ ಸರ್ವ ಸ್ತ್ರೀಯರೂ ತಮ್ಮ ತಮ್ಮ ಪರಿಚಾರಿಕೆಯರೊಂದಿಗೆ ದೇವಸ್ತ್ರೀಯರು ಮೇರುಪರ್ವತವನ್ನು ಹೇಗೋ ಹಾಗೆ ಹರ್ಷದಿಂದ ಮಂಚಗಳನ್ನು ಏರಿದರು. ಪುರದಿಂದ ಬ್ರಾಹ್ಮಣ ಕ್ಷತ್ರಿಯರೇ ಮೊದಲಾದ ನಾಲ್ಕು ವರ್ಣದವರೂ ಕೃತಾಸ್ತ್ರ ಕುಮಾರರನ್ನು ನೋಡಲು ಬಂದು ಸೇರಿದರು. ವಾದ್ಯಘೋಷಗಳ ಅಲೆಯಲ್ಲಿ ತೇಲುತ್ತಿದ್ದ ಆ ಕುತೂಹಲ ಜನಸಂದಣಿಯು ಒಂದು ಕ್ಷುಬ್ಧ ಮಹಾಸಾಗರದಂತೆ ತೋರುತ್ತಿತ್ತು. ಆಗ ಶುಕ್ಲಾಂಬರಧಾರಿ, ಶುಕ್ಲಯಜ್ಞೋಪವೀತ ಧಾರಿಣಿ, ಬಿಳಿಕೂದಲಿನ ಬಿಳಿಗಡ್ಡದ ಶುಕ್ಲಮಾಲ್ಯಾನುಲೇಪಿತ ಆಚಾರ್ಯನು ತನ್ನ ಪುತ್ರನನ್ನೊಡಗೂಡಿ ಮಳೆ-ಮೇಘಗಳಿಲ್ಲದ ನಭದಲ್ಲಿ ಅಂಗಾರಕನೊಂದಿಗೆ ಚಂದ್ರನು ಹೇಗೋ ಹಾಗೆ ರಂಗಮಧ್ಯವನ್ನು ಪ್ರವೇಶಿಸಿದನು. ಆ ಬಲವಂತರಲ್ಲಿ ಶ್ರೇಷ್ಠ ಮಂತ್ರಜ್ಞ ಬಲಿ ಬ್ರಾಹ್ಮಣನು ಆ ಸಮಯಕ್ಕೆ ತಕ್ಕುದಾದ ಮಂಗಲಾಚರಣೆಯನ್ನು ಹೇಳಿದನು. ಪುಣ್ಯಾಹ ಘೋಷ ಪುಣ್ಯದ ನಂತರ ವಿವಿಧ ಶಸ್ತ್ರೋಪಕರಣಗಳನ್ನು ಹಿಡಿದು ಜನರು ಪ್ರವೇಶಿಸಿದರು.

ಆಗ ಸೊಂಟಕ್ಕೆ ಬಿಗಿಯಾಗಿ ಬಿಗಿದ, ಕವಚಗಳನ್ನು ಧರಿಸಿದ ಮಹಾಬಲ ಭರತರ್ಷಭರು ಧನುಸ್ಸುಗಳನ್ನು ಹಿಡಿದು ಪ್ರವೇಶಿಸಿದರು. ಯುಧಿಷ್ಠಿರನ ಮುಂದಾಳತ್ವದಲ್ಲಿ ಹಿರಿಯವನನ್ನು ಕ್ರಮವಾಗಿ ಹಿಂಬಾಲಿಸಿ ಪ್ರತಿಯೊಬ್ಬ ಮಹಾವೀರ ಕುಮಾರನೂ ತನ್ನ ತನ್ನ ಪರಮಾದ್ಭುತ ಅಸ್ತ್ರಗಳನ್ನು ಪ್ರದರ್ಶಿಸಿದರು. ದರ್ಶಕರಲ್ಲಿ ಕೆಲವರು ಬಾಣಗಳು ತಮ್ಮ ಮೇಲೆ ಬಂದು ಬೀಳುತ್ತಿವೆಯೋ ಎಂಬ ಭಯದಿಂದ ತಲೆಗಳನ್ನು ತಗ್ಗಿಸುತ್ತಿದ್ದರೆ ಇನ್ನು ಕೆಲವು ಜನರು ವಿಸ್ಮಿತರಾಗಿ ನೋಡುತ್ತಲೇ ಇದ್ದರು. ವೇಗವಾಗಿ ಕುದುರೆಗಳ ಮೇಲೆ ಹೋಗುತ್ತಿದ್ದ ಅವರು ಬಾಣಗಳಿಂದ ಗುರಿಗಳಿಗೆ ಸರಿಯಾಗಿ ಹೊಡೆದು ತಮ್ಮ ತಮ್ಮ ವಿವಿಧ ಕೌಶಲ್ಯತೆಗಳನ್ನು ತೋರಿಸಿಕೊಟ್ಟರು. ಬಿಲ್ಲು ಬಾಣಗಳನ್ನು ಹಿಡಿಯುವುದರಲ್ಲಿ ಆ ಕುಮಾರರ ಗುಂಪಿಗಿದ್ದ ಕೌಶಲತೆಯನ್ನು ನೋಡಿದ ಜನರು ಗಂಧರ್ವನಗರವನ್ನು ನೋಡಿದವರಂತೆ ವಿಸ್ಮಿತರಾದರು. ಅಲ್ಲಿ ಕಣ್ಣುಬಿಟ್ಟು ವಿಸ್ಮಿತರಾಗಿ ನೋಡುತ್ತಿದ್ದ ನೂರಾರು ಸಹಸ್ರಾರು ಜನರು “ಸಾಧು! ಸಾಧು!” ಎಂದು ಕೂಗುತ್ತಿದ್ದರು.

ಆ ಮಹಾಬಲಶಾಲಿಗಳು ಒಮ್ಮೆ ರಥದಮೇಲೆ, ನಂತರ ಆನೆಯ ಮೇಲೆ, ಕುದುರೆಯ ಮೇಲೆ ಮತ್ತು ಒಮ್ಮೆ ದ್ವಂದ್ವ ಯುದ್ಧದಲ್ಲಿ ಧನುಸ್ಸನ್ನು ಹಿಡಿದು ಪ್ರದರ್ಶಿಸಿದರು. ಖಡ್ಗ ಮತ್ತು ಚರ್ಮಾಣಗಳನ್ನು ಹಿಡಿದು ಬಾಹುಗಳಿಂದ ಬೀಸುತ್ತಾ ಆ ಮೈದಾನದಲ್ಲೆಲ್ಲಾ ಓಡಾಡಿ ಖಡ್ಗಯುದ್ಧದಲ್ಲಿ ತಮಗಿದ್ದ ಕೌಶಲ್ಯತೆಯನ್ನು ತೋರಿಸಿದರು. ಖಡ್ಗ ಚರ್ಮಣಗಳ ಪ್ರಯೋಗದಲ್ಲಿ ಅವರಿಗಿದ್ದ ಲಾಘವ, ಸೌಷ್ಠವ, ಶೋಭೆ, ಸ್ಥಿರತ್ವ ಮತ್ತು ದೃಡಮುಷ್ಠಿಯನ್ನು ಅಲ್ಲಿ ಸರ್ವರೂ ನೋಡಿದರು. ಆಗ ನಿತ್ಯಸಹೃಷ್ಠ ಸುಯೋಧನ-ವೃಕೋದರರು ಕೈಯಲ್ಲಿ ಗದೆಯನ್ನು ಹಿಡಿದು ಒಂದೇ ಶಿಖರಗಳನ್ನು ಹೊಂದಿದ ಪರ್ವತಗಳಂತೆ ಅಲ್ಲಿ ಇಳಿದರು. ಸೊಂಟವನ್ನು ಬಿಗಿದು ಪೌರುಷವನ್ನು ತೋರಿಸುತ್ತಾ ಅಲ್ಲಿ ನಿಂತಿದ್ದ ಮಹಾಬಾಹುಗಳು ಒಂದೇ ಹೆಣ್ಣು ಆನೆಗಾಗಿ ಹೊಡೆದಾಡಲು ನಿಂತಿದ್ದ ಮದಿಸಿದ ಗಂಡಾನೆಗಳಂತೆ ತೋರುತ್ತಿದ್ದರು. ಆ ಮಹಾಬಲಿಗಳು ಹೊಳೆಯುತ್ತಿರುವ ಗದೆಗಳನ್ನು ಹಿಡಿದು ಸೂರ್ಯನಂತೆ ಮಂಡಲಗಳಲ್ಲಿ ಕಾವಿಗೆ ಬಂದ ಹೋರಿಗಳಂತೆ ಪ್ರದಕ್ಷಿಣೆಮಾಡುತ್ತಿದ್ದರು. ಕುಮಾರರ ಈ ಎಲ್ಲ ವಿಚೇಷ್ಟಿತೆಗಳನ್ನೂ ವಿದುರನು ಧೃತರಾಷ್ಟ್ರ, ಗಾಂಧಾರಿ ಮತ್ತು ಕುಂತಿಗೆ ವರದಿಮಾಡುತ್ತಿದ್ದನು.

ರಂಗಸ್ಥ ಕುರುರಾಜ ಮತ್ತು ಬಲಿಗಳಲ್ಲಿಯೇ ಶ್ರೇಷ್ಠ ಭೀಮನನ್ನು ನೋಡಿದ ಜನರಲ್ಲಿ ತಮಗಿಷ್ಟವಿದ್ದವರ ಮೇಲೆ ಪಕ್ಷಪಾತ ಮಾಡುವ ಎರಡು ಪಂಗಡಗಳಾಯಿತು. “ಹಾ ವೀರ ಕುರುರಾಜ! ಹಾ ಭೀಮ!” ಎಂದು ಕೂಗುತ್ತಿರುವ ಜನರ ಕೂಗು ತಕ್ಷಣವೇ ಮೊಳಗಿಬಂದಿತು. ಈ ರೀತಿ ಕ್ಷುಬ್ಧ ಸಾಗರದಂತೆ ತೋರುತ್ತಿದ್ದ ರಂಗವನ್ನು ನೋಡಿದ ಬುದ್ಧಿವಂತ ಭಾರದ್ವಾಜನು ತನ್ನ ಪ್ರಿಯ ಪುತ್ರ ಅಶ್ವತ್ಥಾಮನಿಗೆ ಹೇಳಿದನು:

“ಚೆನ್ನಾಗಿಯೇ ತರಬೇತಿಯನ್ನು ಹೊಂದಿದ ಈ ಮಹಾವೀರರಿಬ್ಬರನ್ನೂ ನಿಲ್ಲಿಸು. ಇಲ್ಲವಾದರೆ ಭೀಮ-ದುರ್ಯೋಧನರನ್ನು ಕುರಿತು ರಂಗದಲ್ಲಿ ದಂಗೆಯುಂಟಾಗಬಹುದು.”

ಆಗ ಯುಗಾಂತಕಾಲದ ಭಿರುಗಾಳಿಯಿಂದ ಮಹಾ ಕ್ಷೋಭಣೆಗೊಳಗಾದ ಎರಡು ಸಮುದ್ರಗಳಂತೆ ಪರಸ್ಪರರನ್ನು ಎದುರಿಸಿ ನಿಂತಿರುವ ಅವರೀರ್ವರನ್ನು ಗುರುಪುತ್ರನು ನಿಲ್ಲಿಸಿದನು.

ರಂಗಾಂಗಣದಲ್ಲಿ ಇಳಿದು ದ್ರೋಣನು ಮಹಾಮೇಘನಿಭಸ್ವನವನ್ನುಂಟುಮಾಡುತ್ತಿದ್ದ ವಾದ್ಯವೃಂದವನ್ನು ನಿಲ್ಲಿಸಿ ಹೇಳಿದನು:

“ಈಗ ಸರ್ವಾಸ್ತ್ರವಿದುಷರಲ್ಲಿಯೇ ಶ್ರೇಷ್ಠ ಇಂದ್ರಾನುಜಸಮ, ನನಗೆ ನನ್ನ ಪುತ್ರನಿಗಿಂತಲೂ ಪ್ರಿಯಕರನಾದ ಐಂದ್ರಿ ಪಾರ್ಥನನ್ನು ನೋಡಿ!”

ಆಚಾರ್ಯನ ವಚನಗಳಿಂದ ಬರಮಾಡಿಕೊಂಡ ಆ ಯುವಕ ಫಲ್ಗುನನು ಗೋಧಾಂಗುಲಿತ್ರಾಣಗಳನ್ನು ಕಟ್ಟಿಕೊಂಡು, ಪೂರ್ಣ ತೂರ್ಣನಾಗಿ ಹೊಳೆಯುತ್ತಿರುವ ಕಾಂಚನದ ಕವಚವನ್ನು ಧರಿಸಿ, ಮಳೆಯನ್ನು ತರುವ ಮಿಂಚುಗಳಿಂದೊಡಗೂಡಿದ ಮೋಡದೊಂದಿಗೆ ಬೆಳಗುತ್ತಿರುವ ಬಂಗಾರದ ಬಣ್ಣದ ಸೂರ್ಯನಂತೆ ತೋರುತ್ತಾ ಪ್ರವೇಶಿಸಿದನು. ಆಗ ರಂಗದಲ್ಲಿ ಎಲ್ಲೆಡೆಯಲ್ಲಿಯೂ ಮಹಾ ಗದ್ದಲವಾಯಿತು ಮತ್ತು ಶಂಖಗಳೊಂದಿಗೆ ವಾದ್ಯಗಳು ಎಲ್ಲೆಡೆಯೂ ಮೊಳಗತೊಡಗಿದವು.

“ಇವನೇ ಕುಂತೀಸುತ! ಇವನೇ ಶ್ರೀಮಾನ್ ಪಾಂಡುವಿನ ಮಧ್ಯಮ! ಇವನೇ ಕುರುಗಳನ್ನು ರಕ್ಷಿಸುವವವನು! ಮಹೇಂದ್ರನ ಪುತ್ರ! ಇವನೇ ಅಸ್ತ್ರವಿದುಷರಲ್ಲಿ ಶ್ರೇಷ್ಠನಾದವನು! ಇವನೇ ಧರ್ಮಭೃತರಲ್ಲಿ ಶ್ರೇಷ್ಠನಾದವನು! ಇವನು ಶೀಲವಂತನೂ ಶೀಲಜ್ಞಾನನಿಧಿಯೂ, ಶ್ರೇಷ್ಠನೂ ಆಗಿದ್ದಾನೆ.”

ಪ್ರೇಕ್ಷಕರಿಂದ ಈ ರೀತಿ ಅತುಲ ಮಾತುಗಳು ಕೇಳಿಬರುತ್ತಿರುವಾಗ ಕುಂತಿಯ ಸ್ತನಗಳು ಕಣ್ಣೀರು ಮತ್ತು ಹಾಲು ಇವೆರಡರ ಮಿಶ್ರಣದಿಂದ ತೋಯ್ದವು. ಈ ಮಾತುಗಳು ಅವನ ಕಿವಿಗಳನ್ನು ತುಂಬಲಾಗಿ ಹೃಷ್ಟಮನಸ್ಕ ನರಶ್ರೇಷ್ಠ ಧೃತರಾಷ್ಟ್ರನು ವಿದುರನಲ್ಲಿ ಕೇಳಿದನು:

“ಕ್ಷತ್ತ! ಕ್ಷುಬ್ಧ ಸಾಗರದಂತೆ, ನಭಸ್ತಲವನ್ನೇ ಸೀಳುವಂತೆ ರಂಗದಿಂದ ಕೇಳಿಬರುತ್ತಿರುವ ಆ ಸುಮಹಾಸ್ವನವೇನು?”

ವಿದುರನು ಹೇಳಿದನು:

“ಮಹಾರಾಜ! ಪಾಂಡುನಂದನ ಪಲ್ಗುನ ಪಾರ್ಥನು ಕವಚವನ್ನು ಧರಿಸಿ ರಂಗಕ್ಕಿಳಿದಿದ್ದಾನೆ. ಅದರ ಕುರಿತಾಗಿ ಈ ಸುಮಹಾಸ್ವನ ಕೇಳಿ ಬರುತ್ತಿದೆ.”

ಧೃತರಾಷ್ಟ್ರನು ಹೇಳಿದನು:

“ಮಹಾಮತೇ! ಪೃಥಳಂಥಹ ಅರಣಿಯಿಂದ ಪಾಂಡವನಂಥಹ ವಹ್ನಿಯಲ್ಲಿ ಉದ್ಭವವಾದ ಈ ಮೂವರಿಂದ ನಾನು ಧನ್ಯನಾಗಿದ್ದೇನೆ! ನಾನು ಅನುಗೃಹೀತನಾಗಿದ್ದೇನೆ! ರಕ್ಷಿತನಾಗಿದ್ದೇನೆ!”

ಉಲ್ಭಣಗೊಂಡ ಆ ರಂಗವು ಹೇಗೋ ಶಾಂತವಾಗುತ್ತಿದ್ದಂತೆಯೇ ಬೀಭತ್ಸುವು ಆಚಾರ್ಯನಿಂದ ಕಲಿತ ತನ್ನ ಅಸ್ತ್ರ ಕುಶಲತೆಯನ್ನು ತೋರಿಸತೊಡಗಿದನು. ಅಗ್ನೇಯದಿಂದ ವಹ್ನಿಯನ್ನು ಸೃಷ್ಟಿದನು. ವಾರುಣದಿಂದ ನೀರನ್ನು ಸೃಷ್ಟಿಸಿದನು. ವಾಯುವ್ಯದಿಂದ ವಾಯುವನ್ನು ಸೃಷ್ಟಿಸಿದನು. ಪಾರ್ಜನ್ಯದಿಂದ ಮೋಡಗಳನ್ನು ಸೃಷ್ಟಿಸಿದನು. ಭೌಮದಿಂದ ಭೂಮಿಯನ್ನು ಪ್ರವೇಶಿಸಿದನು. ಪಾರ್ವತದಿಂದ ಗಿರಿಗಳನ್ನು ಸೃಷ್ಟಿಸಿದನು. ಅಂತರ್ಧಾನಾಸ್ತ್ರದಿಂದ ಅವೆಲ್ಲವನ್ನೂ ಅಂತರ್ಧಾನಗೊಳಿಸಿದನು. ಒಂದು ಕ್ಷಣದಲ್ಲಿ ಎತ್ತರವಾಗಿ ನಿಂತನು. ಇನ್ನೊಂದು ಕ್ಷಣದಲ್ಲಿ ಸಣ್ಣವನಾಗಿ ಕಂಡನು. ಒಂದು ಕ್ಷಣ ರಥದ ಮುಂದೆ ಕಾಣಿಸಿಕೊಂಡರೆ ಮತ್ತೊಂದು ಕ್ಷಣದಲ್ಲಿ ರಥದ ಮಧ್ಯದಲ್ಲಿ ಕುಳಿತಿದ್ದನು ಮತ್ತು ಇನ್ನೊಂದು ಕ್ಷಣದಲ್ಲಿ ನೆಲದ ಮೇಲೆ ಹಾರಿ ನಿಂತಿದ್ದನು. ಆ ಗುರುಪ್ರಿಯ ಸುಕುಮಾರನು ವಿವಿಧ ಶರಗಳಿಂದ ಸೂಕ್ಷ್ಮವಾದ ದೊಡ್ಡದಾದ ಗುರಿಗಳನ್ನು ಅತ್ಯಂತ ಕೌಶಲ್ಯದಿಂದ ಹೊಡೆದನು. ಲೋಹದ ಒಂದು ವರಾಹವನ್ನು ಎದುರಿಗೆ ತಂದಾಗ ಅದರ ಬಾಯಿಯಲ್ಲಿ ಐದು ಬಾಣಗಳನ್ನು ಒಂದೇ ಬಾಣವನ್ನೇ ಬಿಟ್ಟಿದ್ದಾನೋ ಎಂದು ಭ್ರಮಿಸುವ ಹಾಗೆ ಅತಿವೇಗದಲ್ಲಿ ಬಿಟ್ಟು ತುಂಬಿಸಿದನು. ಒಂದು ಹಗ್ಗದಿಂದ ನೇತಾಡುತ್ತಿರುವ ಗೋವಿನ ಕೊಂಬಿನೊಳಗೆ ಇಪ್ಪತ್ತೊಂದು ಬಾಣಗಳನ್ನು ತುಂಬಿಸಿದನು. ಇದೇ ರೀತಿ ಮತ್ತು ಇನ್ನೂ ಹಲವಾರು ರೀತಿಗಳಲ್ಲಿ ಅವನು ಬಿಲ್ಲುಬಾಣಗಳಲ್ಲಿ, ಖಡ್ಗದಲ್ಲಿ ಮತ್ತು ಗದೆಯಲ್ಲಿ ತನ್ನಲ್ಲಿದ್ದ ಕೌಶಲ್ಯತೆಯನ್ನು ಪ್ರದರ್ಶಿಸಿದನು.

ಆ ಪ್ರದರ್ಶನವು ಮುಗಿಯುತ್ತಾ ಬಂದಂತೆ ಮತ್ತು ಜನಸಂದಣಿಯು ಕಡಿಮೆಯಾಗುತ್ತಾ ಬಂದಂತೆ ದ್ವಾರದಲ್ಲಿ ವಜ್ರವೇ ಬಿದ್ದಹಾಗೆ, ಅದನ್ನುಂಟುಮಾಡಿದವನ ಮಹಾತ್ಮತೆ ಮತ್ತು ಬಲದ ಸೂಚಕವಾದ ಮಹಾ ಸ್ವರವೊಂದು ಕೇಳಿಬಂದಿತು. ಗಿರಿಗಳು ಕೆಳಗುರುಳುತ್ತಿವೆಯೇ? ಭೂಮಿಯು ಬಿರಿಯುತ್ತಿದೆಯೇ? ಜಲಭಾರಗೊಂಡ ಮೋಡಗಳಿಂದ ಆಕಾಶವು ತುಂಬಿಕೊಂಡಿದೆಯೇ? ಈ ರೀತಿ ರಂಗದಲ್ಲಿರುವವರು ಒಂದು ಕ್ಷಣ ಯೋಚಿಸಿದರು. ಪ್ರೇಕ್ಷಕರೆಲ್ಲರೂ ದ್ವಾರದ ಕಡೆ ನೋಡತೊಡಗಿದರು. ಐವರು ಪಾರ್ಥ ಭ್ರಾತೃಗಳಿಂದ ಪರಿವೃತ ದ್ರೋಣನು ಐದು ತಾರೆಗಳಿಂದ ಕೂಡಿದ ಸಾವಿತ್ರಿಯಲ್ಲಿದ್ದ ಚಂದ್ರಮನಂತೆ ಕಂಗೊಳಿಸಿದನು. ಅಶ್ವತ್ಥಾಮನನ್ನೂ ಸೇರಿ ಒಂದು ನೂರು ಭ್ರಾತೃಗಳು ಎದ್ದು ನಿಂತ ಅಮಿತ್ರಘ್ನ ದುರ್ಯೋಧನನನ್ನು ಸುತ್ತುವರೆದಿದ್ದರು. ಗದಾಪಾಣಿಯಾದ ಅವನು ಹಿಂದೆ ದಾನವರ ನಾಶಕಾಲದಲ್ಲಿ ಪುರಂದರನು ದೇವಗಳಿಂದ ಹೇಗೋ ಹಾಗೆ ಆಯುಧಗಳನ್ನು ಹಿಡಿದು ತಯಾರಾಗಿದ್ಡ ಭ್ರಾತೃಗಳಿಂದ ಸುತ್ತುವರೆಯಲ್ಪಟ್ಟಿದ್ದನು.

ವಿಸ್ಮಿತರಾಗಿ ತೆರೆದ ಕಣ್ಣುಗಳಿಂದ ಪ್ರೇಕ್ಷಕರು ದಾರಿ ಮಾಡಿ ಕೊಡುತ್ತಿದ್ದಂತೆ ಆ ವಿಸ್ತೀರ್ಣ ರಂಗಭೂಮಿಯನ್ನು ಹೊಳೆಯುತ್ತಿರುವ ಸಹಜ ಕವಚ ಮತ್ತು ಕುಂಡಲಗಳಿಂದ ಪ್ರಕಾಶಿತಗೊಂಡ ಮುಖವುಳ್ಳ, ಮಹಾ ಕೀರ್ತಿವಂತ, ವಿಶಾಲ ಕಣ್ಣುಗಳನ್ನು ಹೊಂದಿದ್ದ, ಪೃಥಾಳಿಗೆ ಕನ್ಯೆಯಾಗಿದ್ದಾಗಲೇ ಹುಟ್ಟಿದ್ದ, ಸೂರ್ಯನ ಅಂಶದಿಂದ ಹುಟ್ಟಿದ, ಸೂರ್ಯನಂತೆಯೇ ತೀಕ್ಷ್ಣ ಶೋಭೆಯನ್ನು ಹೊಂದಿದ್ದ, ಅರಿಗಣ ಸೂದನ, ಪರಪುರಂಜಯ ಕರ್ಣನು ಧನಸ್ಸು ಮತ್ತು ಕಟ್ಟಿಕೊಂಡ ಖಡ್ಗದೊಂದಿಗೆ ಪರ್ವತವೇ ನಡೆದು ಬರುತ್ತಿದೆಯೋ ಎನ್ನುವಂತೆ ಪ್ರವೇಶಿಸಿದನು. ವೀರ್ಯ ಮತ್ತು ಪರಾಕ್ರಮದಲ್ಲಿ ಅವನು ಸಿಂಹ, ವೃಷಭ, ಮತ್ತು ಗಜೇಂದ್ರರ ಸಮಾನನಾಗಿದ್ದನು. ಪ್ರಕಾಶ, ಕಾಂತಿ ಮತ್ತು ಹೊಳಪಿನಲ್ಲಿ ಸೂರ್ಯ, ಚಂದ್ರಮ ಮತ್ತು ಅಗ್ನಿಯಂತಿದ್ದನು. ಸಿಂಹದಂತೆ ಗಟ್ಟಿ ದೇಹದ ಆ ಯುವಕನು ಬಂಗಾರದ ತಾಳವೃಕ್ಷದಂತೆ ಎತ್ತರನಾಗಿದ್ದನು. ಭಾಸ್ಕರನ ಆತ್ಮಸಂಜಾತನಾದ ಅವನು ಅಸಂಖ್ಯ ಗುಣಗಳಿಂದ ಶ್ರೀಮಂತನಾಗಿದ್ದನು. ಆ ಮಹಾಬಾಹುವು ಸುತ್ತಲೂ ರಂಗಮಂಡಲವನ್ನು ನಿರೀಕ್ಷಿಸಿ, ಹೌದೋ ಅಲ್ಲವೋ ಎಂಬಂತೆ ದ್ರೋಣ-ಕೃಪರಿಗೆ ಪ್ರಣಾಮ ಮಾಡಿದನು. ಸಮಾಜದ ಜನರೆಲ್ಲರೂ ಅವನನ್ನೇ ನೋಡುತ್ತಾ ನಿಶ್ಚಲರಾದರು ಮತ್ತು “ಇಲ್ಲಿಗೆ ಆಗಮಿಸಿದ ಈ ಭಿರುಗಾಳಿ ಯಾರು?” ಎಂದು ಕುತೂಹಲಪರರಾದರು.

ಮಾತಿನಲ್ಲಿ ಶ್ರೇಷ್ಠ ಭ್ರಾತ ಸಾವಿತ್ರನು ಭ್ರಾತನೆಂದು ತಿಳಿಯದೇ ಇದ್ದ ಪಾಕಶಾಸನಿಯನ್ನುದ್ದೇಶಿಸಿ ಗುಡುಗಿನ ಸ್ವರದಲ್ಲಿ ಹೇಳಿದನು:

“ಪಾರ್ಥ! ನೀನು ಮಾಡಿದುದೆಲ್ಲಕ್ಕಿಂತಲೂ ವಿಶೇಷವಾದವುಗಳನ್ನು ಈ ಜನರು ನೋಡುತ್ತಿದ್ದಂತೆಯೇ ಮಾಡುತ್ತೇನೆ. ನಿನ್ನ ಮೇಲೆ ನೀನೇ ವಿಸ್ಮಿತನಾಗಬೇಡ!”

ಆ ಮಾತಿನಲ್ಲಿ ಶ್ರೇಷ್ಠನು ತನ್ನ ಮಾತುಗಳನ್ನು ಮುಗಿಸುವುದರೊಳಗೇ ಅಲ್ಲಿದ್ದ ಸರ್ವ ಜನರೂ ಬಾವಿಯಿಂದ ನೀರಿನ ಯಂತ್ರವು ಮೇಲೇಳುವಂತೆ ಒಂದೇ ವೇಳೆಯಲ್ಲಿ ಎದ್ದು ನಿಂತರು. ಪುರುಷವ್ಯಾಘ್ರ ದುರ್ಯೋಧನನಿಗೆ ಪ್ರೀತಿ ಉಕ್ಕಿ ಬಂದಿತು. ಆದರೆ ಬೀಭತ್ಸುವಿಗೆ ತಕ್ಷಣವೇ ಹೇಸಿಗೆ ಮತ್ತು ಸಿಟ್ಟು ಎರಡೂ ಉಕ್ಕಿ ಬಂದವು. ದ್ರೋಣನು ಅಪ್ಪಣೆಯನ್ನು ನೀಡಲಾಗಿ ಸದಾ ರಣಪ್ರಿಯ ಬಹಾಬಲಿ ಕರ್ಣನು ಪಾರ್ಥನು ಮಾಡಿ ತೋರಿಸಿದ ಎಲ್ಲವನ್ನೂ ಹಾಗೆಯೇ ಮಾಡಿ ತೋರಿಸಿದನು. ಆಗ ದುರ್ಯೋಧನನು ತನ್ನ ಸಹೋದರರೊಡಗೂಡಿ ಕರ್ಣನನ್ನು ಬಿಗಿದಪ್ಪಿ ಸಂತೋಷದಿಂದ ಹೇಳಿದನು:

“ಮಹಾಬಾಹು! ನಿನಗೆ ಸ್ವಾಗತ. ಸೌಭಾಗ್ಯವೇ ನಿನ್ನನ್ನು ಇಲ್ಲಿ ಕರೆ ತಂದಿದೆ. ನನ್ನನ್ನೂ ಈ ಕುರುರಾಜ್ಯವನ್ನೂ ಯಥೇಷ್ಟವಾಗಿ ಭೋಗಿಸು.”

ಕರ್ಣನು ಹೇಳಿದನು:

“ನಿನ್ನ ಸ್ನೇಹವೊಂದಿದ್ದರೆ ಬೇರೆ ಎಲ್ಲವೂ ಬಂದಹಾಗೆಯೇ. ಅದನ್ನೆ ಬಯಸುತ್ತೇನೆ. ಭಾರತ! ಪಾರ್ಥನೊಡನೆ ದ್ವಂದ್ವಯುದ್ಧ ಮಾಡಲು ಬಯಸುತ್ತೇನೆ.”

ದುರ್ಯೋಧನನು ಹೇಳಿದನು:

“ನನ್ನೊಡನೆ ಎಲ್ಲ ಭೋಗಗಳನ್ನು ಭೋಗಿಸು. ನಿನ್ನ ಬಂಧುಗಳ ಪ್ರಿಯಕರನಾಗು. ಅರಿಂದಮ! ನಿನಗೆ ಕೆಟ್ಟದನ್ನು ಬಯಸುವ ಎಲ್ಲರ ನೆತ್ತಿಯನ್ನು ತುಳಿ!”

ಆಗ ತನಗೆ ಅವಹೇಳನವಾಗುತ್ತಿದೆಯೆಂದು ತಿಳಿದ ಪಾರ್ಥನು ಭ್ರಾತೃಗಳ ಸಮೂಹದಲ್ಲಿ ಪರ್ವತದಂತೆ ನಿಂತಿದ್ದ ಕರ್ಣನಿಗೆ ಹೇಳಿದನು:

“ಕರ್ಣ! ನಾನು ನಿನ್ನನ್ನು ಕೊಂದು ಮುಗಿಸಿದೆನೆಂದರೆ ನೀನು ಅಹ್ವಾಸಿಸದೇ ಬಂದವರಿಗೆ ಮತ್ತು ಅಹ್ವಾಸಿಸದೇ ಮಾತನಾಡುವವರಿಗೆ ಮೀಸಲಾಗಿಟ್ಟಿರುವ ಲೋಕವನ್ನು ಹೊಂದುತ್ತೀಯೆ!”

ಕರ್ಣನು ಹೇಳಿದನು:

“ಫಲ್ಗುನ! ಸರ್ವೇ ಸಾಮಾನ್ಯವಾದ ಈ ರಂಗವು ನಿನ್ನದೇನು? ಬಲಶಾಲಿ ಮತ್ತು ವೀರ್ಯಶ್ರೇಷ್ಠ ರಾಜರನ್ನು ಧರ್ಮವು ಅನುಸರಿಸುತ್ತದೆ. ದುರ್ಬಲರ ಶ್ವಾಸವೆನ್ನಿಸಿಕೊಂಡ ಅವಹೇಳನೆ ಏಕೆ? ಗುರುವಿನ ಸಮಕ್ಷಮದಲ್ಲಿಯೇ ಶರಗಳಿಂದ ನಿನ್ನ ಶಿರವನ್ನು ಅಪಹರಿಸುತ್ತೇನೆ.”

ಆಗ ದ್ರೋಣನು ಅನುಜ್ಞೆಯನ್ನು ನೀಡಲಾಗಿ ಪರಪುರಂಜಯ ಪಾರ್ಥನು ಭ್ರಾತೃಗಳನ್ನು ಆಲಂಗಿಸಿ ರಣದಲ್ಲಿ ನುಗ್ಗಿದನು. ಭ್ರಾತೃಗಳೊಡನಿದ್ದ ದುರ್ಯೋಧನನಿಂದ ತಬ್ಬಿಕೊಳ್ಳಲ್ಪಟ್ಟ ಕರ್ಣನು ಧನುರ್ಬಾಣಗಳನ್ನು ಹಿಡಿದು ಸಮರ ಸಿದ್ಧನಾದನು. ಆಗ ಗಗನವು ಗುಡುಗು ಮಿಂಚುಗಳಿಂದೊಡಗೂಡಿದ ಬಲಾಕ ಮತ್ತು ಹಂಸ ಪಕ್ಷಿಗಳ ಸಾಲಿನಿಂದೊಡಗೂಡಿದ ಮೇಘಗಳಿಂದ ಆವೃತಗೊಂಡಿತು. ಸ್ನೇಹಭಾವದಿಂದ ರಂಗವನ್ನು ಅವಲೋಕಿಸುತ್ತಿರುವ ಹರಿಹಯನನ್ನು ನೋಡಿದ ಭಾಸ್ಕರನು ಸಮೀಪದಲ್ಲಿ ಬರುತ್ತಿರುವ ಮೋಡಗಳನ್ನು ನಾಶಪಡಿಸಿದನು. ಪಾಂಡವನು ಮೇಘಗಳಿಂದ ಮುಸುಕಲ್ಪಟ್ಟಿದ್ದಾನೋ ಎಂದು ಕಂಡನು. ಕರ್ಣನು ಸೂರ್ಯನ ಕಡುಬೆಳಕಿನಿಂದ ಆವರಿಸಿಕೊಂಡಿದ್ದಾನೋ ಎಂದು ತೋರಿದನು. ಕರ್ಣನಿದ್ದ ಸ್ಥಳದಲ್ಲಿ ಧಾರ್ತರಾಷ್ಟ್ರರು ನಿಂತಿದ್ದರು. ಭಾರದ್ವಾಜ, ಕೃಪ ಮತ್ತುಭೀಷ್ಮರು ಪಾರ್ಥನಿದ್ದಲ್ಲಿ ನಿಂತಿದ್ದರು. ರಂಗವು ಎರಡು ಭಾಗವಾಯಿತು; ಸ್ತ್ರೀಯರಲ್ಲಿ ಎರಡು ಪಂಗಡಗಳಾದವು. ಇದರ ಅರ್ಥವನ್ನು ಸರಿಯಾಗಿ ತಿಳಿದುಕೊಂಡಿದ್ದ ಕುಂತಿಭೋಜಸುತೆಯು ಮೂರ್ಛಿತಳಾದಳು. ಸರ್ವಧರ್ಮವಿದ ವಿದುರನು ಚಂದನಮಿಶ್ರಿತ ನೀರನ್ನು ಚುಮುಕಿಸಿ ಮೋಹಸಂಪನ್ನ ಕುಂತಿಯನ್ನು ಎಚ್ಚರಿಸಿದನು. ಎಚ್ಚೆತ್ತ ಅವಳು ವೈರಿಗಳಾಗಿ ನಿಂತಿದ್ದ ತನ್ನ ಎರಡು ಪುತ್ರರನ್ನೇ ದಿಟ್ಟಾಗಿ ನೋಡುತ್ತಿದ್ದಳೇ ಹೊರತು ಎಷ್ಟೇ ದುಃಖವಾದರೂ ಅವರನ್ನು ತಡೆಯಲೋಸುಗ ಏನನ್ನೂ ಮಾಡಲಿಲ್ಲ.

ಅವರೀರ್ವರೂ ಮಹಾ ಧನುಸ್ಸುಗಳನ್ನು ಮೇಲೆತ್ತುತ್ತಿರುವಾಗ ದ್ವಂದ್ವಯುದ್ಧ ಕುಶಲ ಸರ್ವಧರ್ಮವಿದ ಶಾರದ್ವತ ಕೃಪನು ಹೇಳಿದನು:

“ನಿನ್ನೊಡನೆ ದ್ವಂದ್ವಯುದ್ಧವನ್ನು ಮಾಡುವ ಇವನು ಪೃಥೆಯ ತನಯ, ಕಿರಿಯ ಪಾಂಡುನಂದನ ಕೌರವ. ಮಹಾಬಾಹೋ! ಈಗ ನೀನು ಕೂಡ ನಿನ್ನ ತಾಯಿ, ತಂದೆ, ಕುಲ, ಮತ್ತು ನೀನು ಯಾವ ನರೇಂದ್ರಕುಲವರ್ಧನ ಎನ್ನುವುದನ್ನು ಹೇಳಬೇಕು. ಅದನ್ನು ತಿಳಿದ ಪಾರ್ಥನು ನಿನ್ನೊಡನೆ ಯುದ್ಧಮಾಡಬಹುದು ಅಥವಾ ಮಾಡದಿರಬಹುದು.”

ಹೀಗೆ ಕೇಳಿದ ಕರ್ಣನು ನಾಚಿಕೊಂಡು ತನ್ನ ತಲೆ ತಗ್ಗಿಸಿದನು ಮತ್ತು ಅವನ ಮುಖವು ಮಳೆನೀರಿನಿಂದ ತೋಯ್ದ ಕಮಲದಂತೆ ಬಾಡಿತು. ದುರ್ಯೋಧನನು ಹೇಳಿದನು:

“ಆಚಾರ್ಯ! ಮೂರು ರೀತಿಯಲ್ಲಿ ರಾಜನಾಗಬಹುದು ಎಂದು ಶಾಸ್ತ್ರವಿನಿಶ್ಚಯವಿದೆ: ರಾಜನಾಗಿ ಹುಟ್ಟುವುದರಿಂದ, ಶೂರನಾಗಿರುವುದರಿಂದ ಮತ್ತು ಸೇನೆಯನ್ನು ನಡೆಸುವುದರಿಂದ. ಫಲ್ಗುಣನು ರಾಜನಲ್ಲದವನೊಡನೆ ಯುದ್ಧಮಾಡಲು ಬಯಸದಿದ್ದರೆ ನಾನು ಇವನನ್ನು ಅಂಗದೇಶದ ರಾಜನನ್ನಾಗಿ ರಾಜ್ಯಾಭಿಷೇಕವನ್ನು ಮಾಡುತ್ತೇನೆ.”

ಅದೇ ಕ್ಷಣದಲ್ಲಿ ಲಾಜಕುಸುಮ ಘಟ ಮತ್ತು ಕಾಂಚನಗಳಿಂದ ಕಾಂಚನ ಪೀಠದಲ್ಲಿ ಮಂತ್ರವಿತ್ತಾಗಿ ಮಹಾಬಲಿ, ಮಹಾರಥಿ ಕರ್ಣನು ಅಂಗರಾಜನೆಂದು ಅಭಿಷಿಕ್ತನಾದನು ಮತ್ತು ಸಂಪತ್ತನ್ನು ಪಡೆದನು. ಛತ್ರ ಚಾಮರಗಳನ್ನು ಪಡೆದ ಆ ರಾಜನು ವಿಜಯ ಶಬ್ಧಘೋಷಗಳು ನಿಲ್ಲುತ್ತಿದ್ದಂತೆಯೇ ರಾಜರ್ಷಭ ಕೌರವನಿಗೆ ಹೇಳಿದನು:

“ರಾಜಶಾರ್ದೂಲ! ಈ ರಾಜ್ಯದ ಉಡುಗೊರೆಯ ಸದೃಶವಾದ ಎನನ್ನು ನಿನಗೆ ಕೊಡಲಿ ಹೇಳು! ಅದನ್ನು ನಾನು ಮಾಡಿಕೊಡುತ್ತೇನೆ.”

ಅದಕ್ಕೆ ಸುಯೋಧನನು

“ಅತ್ಯಂತ ಸಖ್ಯವನ್ನು ಬಯಸುತ್ತೇನೆ”

ಎಂದು ಉತ್ತರಿಸಿದನು. ಅವನ ಈ ಮಾತುಗಳಿಗೆ ಕರ್ಣನು “ಹಾಗೆಯೇ ಆಗಲಿ” ಎಂದು ಉತ್ತರಿಸಿದನು. ಹರ್ಷದಿಂದ ಇಬ್ಬರೂ ಅಪ್ಪಿಕೊಂಡು ಅತ್ಯಂತ ಆನಂದಿತರಾದರು.

ಆಗ ಉತ್ತರಪಟವನ್ನು ಕೆಳಗೆ ಬೀಳಿಸುತ್ತಾ ಬೆವರಿ ನಡಗುತ್ತಾ ಕೋಲನ್ನು ಹಿಡಿದು ದುರ್ಬಲ ಕಾಲುಗಳನ್ನೆಳೆಯುತ್ತಾ ಅಧಿರಥನು ರಂಗವನ್ನು ಪ್ರವೇಶಿಸಿದನು. ಅವನನ್ನು ನೋಡಿ, ಧನುಸ್ಸನ್ನು ಕೆಳಗಿಟ್ಟು, ಪಿತೃಗೌರವಾನ್ವಿತ ಕರ್ಣನು ಅಭಿಷೇಕದಿಂದ ಇನ್ನೂ ಒದ್ದೆಯಾಗಿಯೇ ಇದ್ದ ಶಿರದಿಂದ ಅವನನ್ನು ವಂದಿಸಿದನು. ವಿಭ್ರಾಂತಿಗೊಂಡ ಆ ರಥಸಾರಥಿಯು ತನ್ನ ಪಂಚೆಯ ಅಂಚಿನಿಂದ ಕಾಲುಗಳನ್ನು ಮುಚ್ಚಿಕೊಳ್ಳುತ್ತಾ ಪರಿಪೂರ್ಣಾರ್ಥನಾದವನಿಗೆ “ಹಾ ಪುತ್ರ!” ಎಂದನು. ಸ್ನೇಹಭಾವದಿಂದ ಕಂಪಿತನಾಗಿ ಅವನನ್ನು ಬಿಗಿದಪ್ಪಿ ನೆತ್ತಿಗೆ ಮುತ್ತನ್ನಿಟ್ಟನು, ಮತ್ತು ಅಂಗರಾಜ್ಯಾಭಿಷೇಕದಿಂದ ಇನ್ನೂ ಒದ್ದೆಯಾಗಿದ್ದ ಅವನ ತಲೆಗೆ ತನ್ನ ಕಣ್ಣೀರಿನಿಂದ ಪುನಃ ಸಿಂಚಿಸಿದನು. ಅವನನ್ನು ನೋಡಿದ ಪಾಂಡವ ಭೀಮನು ಇವನು ಸೂತಪುತ್ರನೆಂದು ನಿಶ್ಚಯಿಸಿ ನಗುತ್ತಾ ಹೇಳಿದನು:

“ಸೂತಪುತ್ರ! ರಣದಲ್ಲಿ ನೀನು ಪಾರ್ಥನಿಂದ ವಧಿಸಲ್ಪಡಲು ಅರ್ಹನಲ್ಲ. ನಿನ್ನ ಕುಲಕ್ಕೆ ಸದೃಶವಾದ ಬಾರಿಕೋಲನ್ನೇ ಹಿಡಿಯುವುದು ಸರಿ! ಹೇಗೆ ನಾಯಿಗೆ ಅಧ್ವರದಲ್ಲಿ ಹುತಾಶನನ ಸಮೀಪದ ಹವಿಸ್ಸಿನ ಅರ್ಹತೆ ಇಲ್ಲವೋ ಹಾಗೆ ಅಂಗರಾಜ್ಯವನ್ನು ಉಪಭೋಗಿಸುವ ಅರ್ಹತೆ ನಿನಗಿಲ್ಲ.”

ಇದನ್ನು ಕೇಳಿದ ಕರ್ಣನ ಕೆಳತುಟಿಯು ನಡುಗತೊಡಗಿತು. ನಿಟ್ಟುಸಿರು ಬಿಡುತ್ತಾ ಆಕಾಶದಲ್ಲಿರುವ ಸೂರ್ಯನನ್ನು ತಲೆಯೆತ್ತಿ ನೋಡಿದನು. ಆಗ ಮಹಾಬಲಿ ದುರ್ಯೋಧನನು ಕೋಪಗೊಂಡು ಕಮಲದ ಸರೋವರದಿಂದ ಮತ್ತಗಜವೊಂದು ಮೇಲೇಳುವಂತೆ ತನ್ನ ಸಹೋದರರ ಮಧ್ಯದಿಂದ ಮೇಲೆದ್ದು ಭೀಮಕರ್ಮಣಿ ಭೀಮಸೇನನಿಗೆ ಹೇಳಿದನು:

“ವೃಕೋದರ! ಈ ರೀತಿ ಮಾತನಾಡುವುದು ನಿನಗೆ ಯುಕ್ತವಲ್ಲ. ಕ್ಷತ್ರಿಯರಿಗೆ ಬಲವೇ ದೊಡ್ಡದು. ಕ್ಷತ್ರಬಂಧುವಿನೊಂದಿಗೆ ಯುದ್ಧ ಮಾಡಲೇ ಬೇಕು. ಶೂರರ ಮತ್ತು ನದಿಗಳ ಹುಟ್ಟು ನಿಜವಾಗಿಯೂ ತಿಳಿಯದಂಥಾದ್ದು. ಚರಾಚರಗಳನ್ನು ವ್ಯಾಪಿಸಿರುವ ವಹ್ನಿಯು ನೀರಿನಿಂದ ಹುಟ್ಟಿದ್ದುದು. ದಾನವರನ್ನು ಸಂಹರಿಸುವ ವಜ್ರವು ದಧೀಚಿಯ ಅಸ್ತಿಗಳಿಂದ ಮಾಡಲ್ಪಟ್ಟಿದೆ. ಭಗವಾನ್ ದೇವ ಗುಹನು ಸಂಪೂರ್ಣವಾಗಿ ಗುಹ್ಯ ಎಂದು ಕೇಳಿದ್ದೇವೆ; ಅವನು ಆಗ್ನೇಯನಿರಬಹುದು, ಕೃತ್ತಿಕಾ ಪುತ್ರನಿರಬಹುದು, ರುದ್ರನ ಮಗನಿರಬಹುದು ಅಥವಾ ಗಂಗೆಯ ಮಗನಿರಬಹುದು. ಕ್ಷತ್ರಿಯರಲ್ಲಿ ಹುಟ್ಟಿದವರು ಬ್ರಾಹ್ಮಣರಾದರೆಂದೂ ಕೇಳಿದ್ದೇವೆ. ಆಚಾರ್ಯನು ಕಲಶದಲ್ಲಿ ಮತ್ತು ಗುರು ಕೃಪನು ಶರಸ್ತಂಭದಲ್ಲಿ ಜನಿಸಿದರು. ನಿಮ್ಮೆಲ್ಲರ ಜನ್ಮವೂ ಹೇಗಾಯಿತೆಂದು ಎಲ್ಲ ನೃಪರಿಗೂ ತಿಳಿದಿದ್ದುದೇ. ಕುಂಡಲಗಳನ್ನೂ ಕವಚವನ್ನೂ ಧರಿಸಿದ್ದ ದಿವ್ಯ ಲಕ್ಷಣ ಲಕ್ಷಿತ, ಆದಿತ್ಯ ಸಂಕಾಶ ಈ ಹುಲಿಗೆ ಹೇಗೆ ತಾನೆ ಒಂದು ಜಿಂಕೆಯು ಜನ್ಮ ನೀಡಬಲ್ಲದು? ತನ್ನ ಈ ಬಾಹುವೀರ್ಯದಿಂದ ಮತ್ತು ಅವನ ಅನುಜ್ಞೆಯಂತೆ ನಡೆದುಕೊಳ್ಳುವ ನನ್ನಿಂದ ಈ ನರೇಶ್ವರನು ಕೇವಲ ಅಂಗರಾಜ್ಯ ಮಾತ್ರವಲ್ಲ ಇಡೀ ಪೃಥ್ವಿಯನ್ನೇ ಆಳುವ ಅರ್ಹತೆಯನ್ನು ಹೊಂದಿದ್ದಾನೆ. ನಾನು ಮಾಡಿದುದು ಯಾರಿಗೆ ಒಪ್ಪಿಗೆಯಿಲ್ಲವೋ ಆ ಮನುಷ್ಯನು ರಥವನ್ನೇರಿಯಾಗಲೀ ಅಥವಾ ಕಾಲಮೇಲಾಗಲೀ ಇದನ್ನು ಪ್ರತಿಭಟಿಸಬೇಕು.”

ರಂಗದ ಎಲ್ಲೆಡೆಯಲ್ಲಿಯೂ ಜೋರಾಗಿ “ಸಾಧು! ಸಾಧು!” ಎಂಬ ಹಾಹಾಕಾರವೆದ್ದಿತು. ಅಷ್ಟರಲ್ಲಿ ಸೂರ್ಯನು ಮುಳುಗಿದನು. ಆಗ ದುರ್ಯೋಧನನು ನೃಪ ಕರ್ಣನ ಕೈಯನ್ನು ಹಿಡಿದುಕೊಂಡು ದೀವಟಿಕೆಗಳ ಬೆಂಕಿಯ ಬೆಳಕಿನಲ್ಲಿ ಆ ರಂಗದಿಂದ ನಿರ್ಗಮಿಸಿದನು. ಪಾಂಡವರು ದ್ರೋಣ, ಕೃಪ ಮತ್ತು ಭೀಷ್ಮರೊಂದಿಗೆ ಮತ್ತು ಎಲ್ಲರೂ ತಮ್ಮ ತಮ್ಮ ನಿವೇಶನಗಳಿಗೆ ತೆರಳಿದರು. ದಾರಿಯಲ್ಲಿ ಕೆಲವು ಜನರು “ಅರ್ಜುನ!”ಎಂದೂ ಕೆಲವರು “ಕರ್ಣ!” ಎಂದೂ ಇನ್ನು ಕೆಲವರು “ದುರ್ಯೋಧನ!” ಎಂದೂ ಘೋಷಿಸುತ್ತಿದ್ದರು. ಕುಂತಿಯು ಅಂಗೇಶ್ವರನ ದಿವ್ಯಲಕ್ಷಣಗಳನ್ನು ನೋಡಿ ಅವನು ತನ್ನ ಪುತ್ರನೆಂದು ಗುರುತಿಸಿದಳು ಮತ್ತು ಅವನ ಕುರಿತು ಅಡಗಿಸಿಟ್ಟಿದ್ದ ಸ್ನೇಹ ಪ್ರೀತಿ ಭಾವಗಳು ಅವಳಲ್ಲಿ ಹೆಚ್ಚಾದವು. ಕರ್ಣನನ್ನು ಪಡೆದ ದುರ್ಯೋಧನನು ಅರ್ಜುನನಿಂದ ತನ್ನಲ್ಲುಂಟಾಗಿದ್ದ ಭಯವನ್ನು ಕಳೆದುಕೊಂಡನು. ತನ್ನ ಶ್ರಮದಿಂದ ಅಸ್ತ್ರಗಳನ್ನು ತನ್ನದಾಗಿಸಿಕೊಂಡ ಆ ವೀರನಾದರೂ ಸುಯೋಧನನನ್ನು ಅತ್ಯಂತ ಒಳ್ಳೆಯ ಮಾತುಗಳಿಂದ ಹೊಗಳಿದನು. ಆ ವೇಳೆಯಲ್ಲಿ ಯುಧಿಷ್ಠಿರನೂ ಕೂಡ “ಕರ್ಣನಿಗೆ ಸಮಾನ ಧನುರ್ಧರನು ಭೂಮಿಯಲ್ಲೇ ಯಾರೂ ಇಲ್ಲ!” ಎಂದು ಯೋಚಿಸಿದನು.

ಕುರು-ಪಾಂಡವರ ಗುರುದಕ್ಷಿಣೆ

ಆಚಾರ್ಯ ದ್ರೋಣನು ಶಿಷ್ಯರೆಲ್ಲರನ್ನೂ ಸೇರಿಸಿ ಯಾರನ್ನೂ ಬಿಡದೇ ಎಲ್ಲರಲ್ಲಿಯೂ ಗುರುದಕ್ಷಿಣೆಗಾಗಿ ಪ್ರಚೋದಿಸಿದನು:

“ಪಾಂಚಾಲರಾಜ ದ್ರುಪದದನ್ನು ರಣಭೂಮಿಯಿಂದ ಹಿಡಿದು ತನ್ನಿ. ಅದೇ ಪರಮ ದಕ್ಷಿಣೆ. ನಿಮಗೆ ಮಂಗಳವಾಗಲಿ.”

“ಹಾಗೆಯೇ ಆಗಲಿ” ಎಂದು ಅವರೆಲ್ಲರೂ ಆಯುಧಗಳನ್ನು ಹಿಡಿದು ರಥಗಳನ್ನೇರಿ ಗುರುದಕ್ಷಿಣೆಯನ್ನು ತರಲು ದ್ರೋಣನನ್ನೊಡಗೂಡಿ ಹೊರಟರು. ಆ ನರರ್ಷಭರು ಪಾಂಚಾಲರ ಮೇಲೆ ಧಾಳಿಯಿಕ್ಕಿ, ಅವರನ್ನು ಹದೆಬಡಿದು, ಮಹೌಜಸ ದ್ರುಪದನ ನಗರವನ್ನು ಪುಡಿಮಾಡಿದರು. ಆ ಭರತರ್ಷಭರು ರಣಭೂಮಿಯಲ್ಲಿ ಯಜ್ಞಸೇನ ದ್ರುಪದನನ್ನು ಅವನ ಅಮಾತ್ಯರೊಂದಿಗೆ ಸೆರೆಹಿಡಿದು ದ್ರೋಣನ ಬಳಿ ಕರೆತಂದರು. ವೈರವನ್ನು ಮನಸ್ಸಿನಲ್ಲಿಯೇ ನೆನಪಿಸಿಕೊಂಡು ದ್ರೋಣನು ಸೆರೆಹಿಡಿಯಲ್ಪಟ್ಟ ಭಗ್ನದರ್ಪ ಹೃತಧನ ದ್ರುಪದನಿಗೆ ಇಂತೆಂದನು:

“ಸೇಡಿನಿಂದ ನಿನ್ನ ರಾಷ್ಟ್ರ ಮತ್ತು ಪುರವನ್ನು ನಾನು ಗಳಿಸಿದ್ದೇನೆ. ಜೀವಂತವಿದ್ದರೂ ರಿಪುವಶದಲ್ಲಿರುವ ಹಳೆಯ ಸ್ನೇಹಿತನು ಯಾರಿಗೆ ಬೇಕು?”

ಹೀಗೆ ಹೇಳಿ ಜೋರಾಗಿ ನಕ್ಕ ಅವನು ಒಂದು ನಿಶ್ಚಯಕ್ಕೆ ಬಂದು ಪುನಃ ಹೇಳಿದನು:

“ರಾಜನ್! ನನ್ನಲ್ಲಿ ನಿನ್ನ ಪ್ರಾಣಕ್ಕೆ ಭಯಪಡಬೇಡ. ನಾವು ಬ್ರಾಹ್ಮಣರು ಕ್ಷಮಾವಂತರು. ಬಾಲ್ಯದಲ್ಲಿ ಆಶ್ರಮದಲ್ಲಿ ನನ್ನೊಡನೆ ಆಡುತ್ತಿದ್ದಾಗ ನನಗೆ ನಿನ್ನಲ್ಲಿ ಸ್ನೇಹವು ಬೆಳೆಯಿತು. ಪುನಃ ಇನ್ನೊಮ್ಮೆ ನಿನ್ನ ಸಖ್ಯವನ್ನು ಪ್ರಾರ್ಥಿಸುತ್ತಿದ್ದೇನೆ. ನಿನಗೆ ಅರ್ಧರಾಜ್ಯದ ವರವನ್ನು ನೀಡುತ್ತಿದ್ದೇನೆ. ತೆಗೆದುಕೋ. ರಾಜ್ಯವಿದ್ದವನು ರಾಜ್ಯವಿಲ್ಲದವನ ಸಖನಾದರೂ ಹೇಗೆ ಆಗಬಲ್ಲನು? ಆದುದರಿಂದ ನಿನ್ನ ರಾಜ್ಯವನ್ನು ನಾನು ಗಳಿಸಿದ್ದೇನೆ. ಭಾಗೀರಥಿಯ ದಕ್ಷಿಣಕ್ಕೆ ನೀನು ಮತ್ತು ಅದರ ಉತ್ತರಕ್ಕೆ ನಾನು ರಾಜರಾಗೋಣ. ನಿನಗೆ ಒಪ್ಪಿಗೆಯಾದರೆ ನಾನು ನಿನ್ನನ್ನು ಸಖನೆಂದು ಪರಿಗಣಿಸುತ್ತೇನೆ.”

ದ್ರುಪದನು ಹೇಳಿದನು:

“ಬ್ರಹ್ಮನ್! ಈ ಮಹಾತ್ಮ ವಿಕ್ರಾಂತರಿಂದಾದ ಇದು ಆಶ್ಚರ್ಯಕರವಾದುದೇನೂ ಅಲ್ಲ. ನಾನು ನಿನ್ನ ಮಿತ್ರನಾಗುತ್ತೇನೆ. ನಾನು ನಿನ್ನಿಂದ ಶಾಶ್ವತ ಪ್ರೀತಿಯನ್ನು ಬಯಸುತ್ತೇನೆ.”

ಇದನ್ನು ಕೇಳಿದ ದ್ರೋಣನು ಅವನನ್ನು ಸತ್ಕರಿಸಿ ಸಂತೋಷದಿಂದ ಅರ್ಧ ರಾಜ್ಯವನ್ನು ನೀಡಿ ಬಿಡುಗಡೆ ಮಾಡಿದನು. ದೀನಮನಸ್ಕನಾದ ದ್ರುಪದನು ಗಂಗಾತೀರದಲ್ಲಿರುವ ಮಾಕಂದಿಯ ಜನಪದ ಕಾಂಪಿಲ್ಯವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು, ದಕ್ಷಿಣ ಪಾಂಚಾಲವನ್ನು ಚರ್ಮಣ್ವತೀ ನದಿಯವರೆಗೂ ಆಳತೊಡಗಿದನು. ದ್ರೋಣನೊಂದಿಗಿದ್ದ ವೈರತ್ವವನ್ನು ನೆನಪಿಸಿಕೊಳ್ಳುತ್ತಿದ್ದ ದ್ರುಪದನಿಗೆ ಶಾಂತಿಯೇ ದೊರೆಯಲಿಲ್ಲ. ತನ್ನ ಕ್ಷತ್ರಿಯ ಬಲದಿಂದ ಅವನನ್ನು ಪರಾಜಯಗೊಳಿಸುವ ದಾರಿಯನ್ನೇ ಕಾಣಲಿಲ್ಲ. ಬ್ರಾಹ್ಮಣನ ಬಲಕ್ಕಿಂತ ತನ್ನ ಬಲವು ಹೀನವಾದದ್ದು ಎಂದು ತಿಳಿದನು. ಅದನ್ನು ಸಹಿಸಿಕೊಂಡ ರಾಜನು ಪುತ್ರನ ಜನ್ಮಕ್ಕಾಗಿ ಕಾಯುತ್ತಿದ್ದನು. ಅಹಿಚ್ಛತ್ರದಲ್ಲಿ ದ್ರೋಣನು ನೆಲೆಸಿದನು. ಈ ರೀತಿ ಪಾರ್ಥನು ಜನಪದಗಳಿಂದ ಆವೃತ ಅಹಿಚ್ಛತ್ರ ಪುರಿಯನ್ನು ಯುದ್ಧದಲ್ಲಿ ಗೆದ್ದು ದ್ರೋಣನಿಗೆ ದಕ್ಷಿಣೆಯನ್ನಾಗಿತ್ತನು.

Leave a Reply

Your email address will not be published. Required fields are marked *