ಜನಮೇಜಯನ ಸರ್ಪಸತ್ರದಲ್ಲಿ ವೈಶಂಪಾಯನನು ಮಹಾಭಾರತ ಕಥೆಯನ್ನು ಪ್ರಾರಂಭಿಸಿದುದು

Related imageಸರ್ವಭಕ್ಷಕನಾಗೆಂದು ಅಗ್ನಿಗೆ ಭೃಗುಋಷಿಯ ಶಾಪ

ಭೃಗುವಿಗೆ ಪುಲೋಮ ಎಂಬ ವಿಖ್ಯಾತ ಪ್ರಿಯ ಭಾರ್ಯೆಯಿದ್ದಳು. ಅವಳಲ್ಲಿ ಭೃಗುವಿನ ವೀರ್ಯಸಮುದ್ಭವ ಗರ್ಭವು ಬೆಳೆಯುತ್ತಿತ್ತು. ಧರ್ಮಪತ್ನಿ, ಯಶಸ್ವಿನಿ, ಸಮಶೀಲೆ, ಪುಲೋಮೆಯು ಗರ್ಭಿಣಿಯಾಗಿದ್ದಾಗ ಒಮ್ಮೆ ಧರ್ಮಭೃತ ಶ್ರೇಷ್ಠ ಭೃಗುವು ಸ್ನಾನಕ್ಕೆಂದು ಹೋದಾಗ ಅವನ ಆಶ್ರಮಕ್ಕೆ ರಾಕ್ಷಸ ಪುಲೋಮನು ಆಗಮಿಸಿದನು. ಆಶ್ರಮವನ್ನು ಪ್ರವೇಶಿಸಿ, ಅಲ್ಲಿ ಭೃಗುವಿನ ಅನಿಂದಿತ ಭಾರ್ಯೆಯನ್ನು ನೋಡಿ ಇಚ್ಛೆಯಿಂದ ಸಮಾವಿಷ್ಠನಾಗಿ ವಿವೇಕವೆಲ್ಲವನ್ನೂ ಕಳೆದುಕೊಂಡನು. ಚಾರುದರ್ಶಿಣಿ ಪುಲೋಮಳು ಅತಿಥಿಯಾದ ಆ ರಾಕ್ಷಸನಿಗೆ ವನದಿಂದ ತಂದ ಫಲಮೂಲಾದಿಗಳನ್ನಿತ್ತಳು. ರಾಕ್ಷಸನು ಅವಳನ್ನು ನೋಡಿ ಆಸೆಯಿಂದ ಪೀಡಿತನಾಗಿ ಆ ಅನಿಂದಿತೆಯನ್ನು ಎತ್ತಿಕೊಂಡು ಹೋಗಲು ನಿರ್ಧರಿಸಿ ಸಂತಸಪಟ್ಟನು. ರಾಕ್ಷಸನು ಅಲ್ಲಿ ಪ್ರಜ್ವಲಿಸುತ್ತಿದ್ದ ಜಾತವೇದಸನನ್ನು ನೋಡಿ, ಅಗ್ನಿಯನ್ನು ನಮಸ್ಕರಿಸಿ, ಉರಿಯುತ್ತಿರುವ ಪಾವಕನಲ್ಲಿ ಕೇಳಿದನು:

“ಅಗ್ನಿ! ದೇವತೆಗಳ ಬಾಯಿಯೂ ಸತ್ಯವಾದಿಯೂ ಆದ ನೀನು ನಾನು ಕೇಳುವ ಪ್ರಶ್ನೆಗೆ ಸತ್ಯವಾದ ಉತ್ತರವನ್ನು ಹೇಳು. ಇವಳು ನ್ಯಾಯವಾಗಿಯೂ ಯಾರ ಪತ್ನಿ? ಹಿಂದೆ ಈ ವರವರ್ಣಿನಿಯು ನನ್ನ ಹೆಂಡತಿಯೆಂದು ನಿಶ್ಚಯವಾಗಿತ್ತು. ಆದರೆ ನಂತರ ಇವಳ ತಂದೆಯು ಇವಳನ್ನು ಅನ್ಯಾಯವಾಗಿ ಭೃಗುವಿಗೆ ಕೊಟ್ಟನು. ಹೀಗಿರುವಾಗ, ಈ ವರಾರೋಹೆಯು ಸತ್ಯವಾಗಿಯೂ ಭೃಗುವಿನ ಭಾರ್ಯೆಯಾಗುತ್ತಾಳೆಯೇ? ಇವಳನ್ನು ಆಶ್ರಮದಿಂದ ಬಲವಂತವಾಗಿ ಎತ್ತಿಕೊಂಡು ಒಯ್ಯುತ್ತೇನೆ. ಮೊದಲು ನನ್ನವಳಾಗಿದ್ದವಳನ್ನು ಭೃಗುವು ಪಡೆದನೆಂಬುವುದನ್ನು ನೆನೆಸಿಕೊಂಡಾಗಲೆಲ್ಲ ನನ್ನ ಹೃದಯವು ಸಿಟ್ಟಿನಿಂದ ಉರಿಯುತ್ತದೆ ಮತ್ತು ರೋಮಗಳು ಎದ್ದು ನಿಲ್ಲುತ್ತವೆ.”

ಅವಳು ಭೃಗುವಿನ ಭಾರ್ಯೆಯೇ ಎಂದು ಶಂಕಿತನಾದ ರಾಕ್ಷಸನು ಈ ರೀತಿ ಜ್ವಲಿಸುತ್ತಿರುವ ಜಾತವೇದಸನನ್ನು ಪುನಃ ಪುನಃ ಕೇಳಿದನು:

“ಅಗ್ನಿ! ನೀನು ಸರ್ವಭೂತಗಳಲ್ಲಿ ನಿತ್ಯವೂ ಪಾಪ ಪುಣ್ಯಗಳ ಸಾಕ್ಷಿಯಾಗಿ ವಾಸಿಸುತ್ತೀಯೆ. ಈಗ ಏಕೆ ಸತ್ಯವನ್ನು ಹೇಳುತ್ತಿಲ್ಲ? ಮೊದಲು ನನ್ನ ಹೆಂಡತಿಯೆಂದಿದ್ದವಳನ್ನು ಭೃಗುವು ಅನ್ಯಾಯವಾಗಿ ಅಪಹರಿಸಿದ್ದಾನೆ. ಹಾಗಿದ್ದಾಗ ಅವಳು ಸತ್ಯವಾಗಿಯೂ ನನ್ನ ಹೆಂಡತಿಯಾಗುವುದಿಲ್ಲವೇ ಹೇಳು. ಇವಳು ಭೃಗುವಿನ ಭಾರ್ಯೆಯೋ ಅಥವಾ ನನ್ನವಳೋ ಎಂದು ನೀನು ಹೇಳಿದ ನಂತರವೇ ನಾನು ಇವಳನ್ನು ನೀನು ನೋಡುತ್ತಿದ್ದ ಹಾಗೆ ಈ ಆಶ್ರಮದಿಂದ ಎತ್ತಿಕೊಂಡು ಹೋಗುತ್ತೇನೆ. ಆದ್ದರಿಂದ ನನಗೆ ಸತ್ಯವನ್ನು ಹೇಳು.”

ಅವನ ಈ ಮಾತುಗಳನ್ನು ಕೇಳಿದ ಸಪ್ತಾರ್ಚಿಯು ದುಃಖಿತನಾದನು. ಸುಳ್ಳುಹೇಳುವ ಭಯದಷ್ಟೇ ಭೃಗುವಿನ ಶಾಪಕ್ಕೂ ಭಯಪಟ್ಟನು. ಅಂತ್ಯದಲ್ಲಿ ಈ ರೀತಿ ಹೇಳಿದನು.

ಅಗ್ನಿಯ ಆ ಮಾತುಗಳನ್ನು ಕೇಳಿ ರಾಕ್ಷಸನು ಮುಗುಳ್ನಕ್ಕು, ವರಾಹ ರೂಪವನ್ನು ತಳೆದು ಒಂದೇ ಕ್ಷಣದಲ್ಲಿ ಮನೋವೇಗದಲ್ಲಿ ಅವಳನ್ನು ಕೊಂಡೊಯ್ದನು. ಆಗ ಅವಳ ಗರ್ಭದಲ್ಲಿ ಬೆಳೆಯುತ್ತಿದ್ದ ಭೃಗುಕುಲೋದ್ಭವ ಭ್ರೂಣವು ರೋಷಗೊಂಡು ತಾಯಿಯಿಂದ ಹೊರಬಿದ್ದಿತು. ಆ ಗರ್ಭವೇ ಮುಂದೆ ಚ್ಯವನನೆಂದು ಕರೆಯಲ್ಪಟ್ಟನು. ತಾಯಿಯ ಉದರದಿಂದ ಕೆಳಗೆ ಬೀಳುತ್ತಿದ್ದ ಆ ಆದಿತ್ಯವರ್ಚಸನನ್ನು ನೋಡಿದ ರಾಕ್ಷಸನು ಭಸ್ಮವಾಗಿ ಅವಳನ್ನು ಬಿಟ್ಟು ಕೆಳಗೆ ಬಿದ್ದನು. ಆಗ ಆ ಸುಶ್ರೋಣಿ ಪುಲೋಮೆಯು ಭೃಗುನಂದನ ಚ್ಯವನ ಭಾರ್ಗವನನ್ನು ಹಿಡಿದು ದುಃಖಮೂರ್ಛಿತಳಾದಳು. ರೋದಿಸುತ್ತಿರುವ ಆ ಅನಿಂದಿತೆ, ಭೃಗುಭಾರ್ಯೆ, ಬಾಷ್ಪ ಪೂರ್ಣಾಕ್ಷಿಯನ್ನು ನೋಡಿ ಸರ್ವಲೋಕ ಪಿತಾಮಹ ಸ್ವಯಂ ಭಗವಾನ್ ಬ್ರಹ್ಮನೇ ಬಂದು ಪಿತಾಮಹನು ವಧುವನ್ನು ಸಂತವಿಸುವಂತೆ ಸಂತವಿಸಿದನು. ಅವಳ ಕಣ್ಣೀರಿನಿಂದ ಒಂದು ಮಹಾನದಿಯೇ ಹುಟ್ಟಿಕೊಂಡು ಆ ಯಶಸ್ವಿನೀ ಭೃಗುಪತ್ನಿಯನ್ನು ಹಿಂಬಾಲಿಸುತ್ತಾ ಹೊರಟಿತು. ತನ್ನ ಸೊಸೆಯ ದಾರಿಯಲ್ಲಿಯೇ ಹರಿಯುತ್ತಿರುವ ಆ ನದಿಯನ್ನು ನೋಡಿ ಲೋಕಪಿತಾಮಹನು ಭಗವಾನ್ ಚ್ಯವನನ ಆಶ್ರಮದ ಬಳಿ ಹರಿಯುತ್ತಿರುವ ಆ ನದಿಗೆ ವಧೂಸರ ಎಂಬ ಹೆಸರನ್ನಿತ್ತನು. ಈ ರೀತಿ ಭೃಗು ಪುತ್ರ ಪ್ರತಾಪಿ ಚ್ಯವನನು ಹುಟ್ಟಿದನು.

ಅಲ್ಲಿ ಅವನ ತಂದೆಯು ಚ್ಯವನ ಮತ್ತು ತನ್ನ ಪತ್ನಿಯನ್ನು ಕಂಡನು. ಕುಪಿತ ಭೃಗುವು ತನ್ನ ಭಾರ್ಯೆ ಪುಲೋಮೆಯನ್ನು ಪ್ರಶ್ನಿಸಿದನು:

“ಯಾರಿಂದ ಆ ರಾಕ್ಷಸನಿಗೆ ನಿನ್ನ ಕುರಿತು ತಿಳಿಯಿತು ಮತ್ತು ಹೇಗೆ ನಿನ್ನನ್ನು ಅಪಹರಿಸಿದನು? ಚಾರುಹಾಸಿನಿ! ನೀನು ನನ್ನ ಭಾರ್ಯೆಯೆಂದು ಅವನಿಗೆ ಹೇಳಿದವನು ಯಾರು? ರೋಷದಿಂದ ಇಂದು ಅವನನ್ನು ಶಪಿಸಲು ಇಚ್ಚಿಸುತ್ತೇನೆ. ನನ್ನ ಕೋಪದಿಂದ ಹುಟ್ಟಿದ ಶಾಪದಿಂದ ಯಾರೂ ಉಳಿಯಲು ಸಾಧ್ಯವಿಲ್ಲ.”

ಪುಲೋಮೆಯು ಹೇಳಿದಳು:

“ಭಗವನ್! ನಿನ್ನ ಕುರಿತು ರಾಕ್ಷಸನಿಗೆ ಅಗ್ನಿಯ ಮೂಲಕ ತಿಳಿಯಿತು. ನಂತರದಲ್ಲಿ ಆ ರಾಕ್ಷಸನು ಕುರಿಯಂತೆ ಕೂಗುತ್ತಿರುವ ನನ್ನನ್ನು ಎತ್ತಿಕೊಂಡು ಹೋದನು. ನಿನ್ನ ಸುತನ ಪರಮ ತೇಜಸ್ಸಿನಿಂದ ನಾನು ರಕ್ಷಿತಳಾದೆ ಮತ್ತು ಆ ರಾಕ್ಷಸನು ಭಸ್ಮೀಭೂತನಾಗಿ ನನ್ನ ಕೈಬಿಟ್ಟು ಬಿದ್ದನು.”

ಪುಲೋಮಳಿಂದ ಇದನ್ನು ಕೇಳಿದ ಭೃಗುವು ಕೃದ್ಧನಾಗಿ ಪರಮ ಕೋಪದಿಂದ ಅಗ್ನಿಯನ್ನು

“ಸರ್ವಭಕ್ಷೋ ಭವ!”

ಎಂದು ಶಪಿಸಿದನು. ಭೃಗುವಿನಿಂದ ಶಪಿತನಾದ ವಹ್ನಿಯು ಕೋಪದಿಂದ ಹೇಳಿದನು:

“ಬ್ರಾಹ್ಮಣ! ನನ್ನ ವಿರುದ್ಧ ಯಾವರೀತಿಯ ಈ ಸಾಹಸ ಕಾರ್ಯವನ್ನೆಸಗಿದೆ? ಸತ್ಯವನ್ನು ಹೇಳು ಎಂದು ಕೇಳಿಕೊಂಡಾಗ ಧರ್ಮದಲ್ಲಿ ನಡೆದು ಸತ್ಯವನ್ನು ನುಡಿದ ನಾನು ಯಾವ ವ್ಯಭಿಚಾರ್ಯವನ್ನು ಮಾಡಿದ್ದೇನೆ? ಎದಿರು ಸಾಕ್ಷಿಯಾಗಿದ್ದವನು ಸಾಕ್ಷಿಯನ್ನು ಕೇಳಿದಾಗ ತಿಳಿದಿದ್ದುದನ್ನು ಬಿಟ್ಟು ಅನ್ಯಥಾ ಹೇಳಿದರೆ ಅವನು ತನ್ನ ಪೂರ್ವಜರ ಮತ್ತು ತನ್ನ ಮುಂದಿನ ಕುಲ ಎರಡನ್ನೂ ಏಳು ಪೀಳಿಗೆಗಳವರೆಗೆ ನಾಶಮಾಡುತ್ತಾನೆ. ಕೇಳಿದಾಗ ತಿಳಿದುದ್ದದನ್ನು ಹೇಳದೇ ಇದ್ದ ತತ್ವಜ್ಞನೂ ಕೂಡ  ಇದೇ ರೀತಿಯ ಪಾಪವನ್ನು ಹೊಂದುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ. ನಾನೂ ಕೂಡ ನಿನ್ನನ್ನು ಶಪಿಸಬಹುದು. ಆದರೆ ನಾನು ಬ್ರಾಹ್ಮಣರನ್ನು ಆದರಿಸುತ್ತೇನೆ. ಇವೆಲ್ಲವೂ ನಿನಗೆ ಈ ಮೊದಲೇ ತಿಳಿದಿದ್ದರೂ ನಿನಗೆ ವ್ಯಕ್ತಪಡಿಸಲು ಹೇಳುತ್ತಿದ್ದೇನೆ. ಯೋಗದಿಂದ ನನ್ನನ್ನು ನಾನೇ ಬಹುದಾತ್ಮನನ್ನಾಗಿ ಮಾಡಿಕೊಂಡು ಅಗ್ನಿಹೋತ್ರ, ಸತ್ರ, ಕ್ರಿಯ ಮತ್ತು ಮಖಗಳಾಗಿದ್ದೇನೆ. ವೇದೋಕ್ತ ವಿಧಾನಗಳಿಂದ ನನ್ನಲ್ಲಿ ಹವಿಸ್ಸನ್ನು ಸುರಿದಾಗ ದೇವತೆಗಳು ಮತ್ತು ಪಿತೃಗಳು ತೃಪ್ತರಾಗುತ್ತಾರೆ. ಸರ್ವ ದೇವಗಣಗಳು ನೀರು ಮತ್ತು ಪಿತೃಗಣಗಳೂ ಕೂಡ ನೀರು. ದೇವ ಮತ್ತು ಪಿತೃಗಳು ಕ್ರಮವಾಗಿ ಪೂರ್ಣಿಮ ಮತ್ತು ಅಮವಾಸ್ಯೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ದೇವತೆಗಳೇ ಪಿತೃಗಳು ಮತ್ತು ಪಿತೃಗಳೇ ದೇವತೆಗಳು. ಒಂದಾದ ಅವರೀರ್ವರನ್ನೂ ಚಂದ್ರಮಾನ ಮಾಸದ ಪರ್ವಗಳೆರಡಲ್ಲಿ ಪೂಜಿಸುತ್ತಾರೆ. ದೇವತೆ-ಪಿತೃಗಳೀರ್ವರೂ ನನ್ನ ಮೂಲಕವೇ ತಿನ್ನುತ್ತಾರೆ. ಆದುದರಿಂದ ಮೂರೂ ಲೋಕಗಳಲ್ಲಿ ನನ್ನನ್ನು ದೇವಪಿತೃಗಳ ಬಾಯಿಯೆಂದು ಕರೆಯುತ್ತಾರೆ. ನನ್ನ ಬಾಯಿಯಲ್ಲಿ ಹವಿಸ್ಸನ್ನು ಹಾಕುವುದರ ಮೂಲಕ ಅಮವಾಸ್ಯೆಗಳಲ್ಲಿ ಪಿತೃಗಳು ಮತ್ತು ಪೂರ್ಣಿಮೆಗಳಲ್ಲಿ ದೇವತೆಗಳು ಊಟ ಮಾಡುತ್ತಾರೆ. ಅವರದ್ದು ಮಾತ್ರ ಬಾಯಿಯಾದ ನಾನು ಹೇಗೆ ಸರ್ವಭಕ್ಷಕನಾಗಲಿ?”

ಸ್ವಲ್ಪ ಸಮಯ ಯೋಚಿಸಿ, ವಹ್ನಿಯು ದ್ವಿಜರ ಅಗ್ನಿಹೋತ್ರ, ಯಜ್ಞ, ಸತ್ರ ಮತ್ತು ಕ್ರಿಯೆಗಳೆಲ್ಲವುಗಳಿಂದ ತನ್ನನ್ನು ಹಿಂತೆಗೆದುಕೊಂಡನು. ಓಂಕಾರ, ವಷಟ್ಕಾರ, ಸ್ವಧಾ, ಸ್ವಾಹಗಳಿಲ್ಲದೇ ಕಾರ್ಯಗಳೆಲ್ಲವೂ ನಿಂತು ಹೋಗಿ ಸರ್ವ ಪ್ರಜೆಗಳೂ ದುಃಖಿತರಾದರು. ಆಗ ಉದ್ವಿಗ್ನರಾದ ಎಲ್ಲ ಋಷಿಗಳು ದೇವತೆಗಳ ಬಳಿ ಹೋಗಿ ಹೇಳಿದರು:

“ಅನಘರೇ! ಅಗ್ನಿನಾಶದಿಂದ ಕ್ರಿಯಾಭ್ರಂಶವಾಗಿ ಮೂರೂ ಲೋಕಗಳೂ ಭ್ರಾಂತವಾಗಿವೆ. ಆದುದರಿಂದ ತಡೆಮಾಡದೇ ಉಚಿತ ಕಾರ್ಯವನ್ನು ಕೈಗೊಳ್ಳಿ.”

ಆಗ ಋಷಿಗಳು ಮತ್ತು ದೇವತೆಗಳು ಬ್ರಹ್ಮನಲ್ಲಿಗೆ ಹೋಗಿ ಅಗ್ನಿಗೆ ಬಂದ ಶಾಪ ಮತ್ತು ಅವನು ತನ್ನ ಕ್ರಿಯೆಗಳನ್ನು ನಿಲ್ಲಿಸಿದ್ದುದನ್ನು ನಿವೇದಿಸಿದರು:

“ಮಹಾಭಾಗ! ಕಾರಣಾಂತರದಿಂದ ಭೃಗುವು ಅಗ್ನಿಯನ್ನು ಶಪಿಸಿದನು. ದೇವಮುಖನಾದ, ಯಜ್ಞಗಳಲ್ಲಿ ಅಗ್ರಭುಕ್ತನಾದ ಅಗ್ನಿಯು ಹೇಗೆ ಸರ್ವಲೋಕದಲ್ಲಿ ಸರ್ವಭಕ್ಷಕನಾಗಲು ಸಾಧ್ಯ?”

ಅವರ ಆ ಮಾತುಗಳನ್ನು ಕೇಳಿದ ಲೋಕಕೃತನು ಅಗ್ನಿಯನ್ನು ಕರೆಯಿಸಿ ಆ ಭೂತಭಾವನ ಅವ್ಯಯನಿಗೆ ಈ ಮೃದು ಮಾತುಗಳನ್ನು ಹೇಳಿದನು:

“ಈ ಸರ್ವ ಲೋಕಗಳ ಕರ್ತನೂ ನೀನು. ಅಂತನೂ ನೀನು. ನೀನು ಮೂರೂ ಲೋಕಗಳನ್ನೂ, ಕ್ರಿಯೆಗಳನ್ನೂ ನಡೆಸುತ್ತೀಯೆ. ಸರ್ವೇಶ್ವರ ಹುತಾಶನ! ನೀನು ಹೇಗೆ ಈ ರೀತಿ ಮೂಢನಾಗಲು ಸಾಧ್ಯ? ಲೋಕದ ಸರ್ವಭೂತಗಳಲ್ಲಿ ನೆಲಸಿರುವ ನೀನು ಪವಿತ್ರ. ನಿನ್ನ ಸರ್ವ ಶರೀರವು ಸರ್ವಭಕ್ಷಕವಾಗುವುದಿಲ್ಲ. ನಿನ್ನ ಅಧೋಮುಖ ಜ್ವಾಲೆಗಳು ಮಾತ್ರ ಸರ್ವವನ್ನೂ ಭಕ್ಷಿಸುತ್ತವೆ. ಸೂರ್ಯನ ಕಿರಣಗಳ ಸಂಪರ್ಕದಲ್ಲಿ ಬಂದ ಸರ್ವವೂ ಹೇಗೆ ಶುಚಿಯಾಗುತ್ತವೆಯೋ ಹಾಗೆ ನಿನ್ನಲ್ಲಿ ದಗ್ಧವಾದ ಎಲ್ಲವೂ ಶುಚಿಯಾಗುತ್ತವೆ. ನೀನು ನಿನ್ನದೇ ಪ್ರಭಾವದಿಂದ ಹುಟ್ಟಿದ ಮಹಾತೇಜಸ್ಸುಳ್ಳವನು. ನಿನ್ನ ಈ ತೇಜಸ್ಸಿನಿಂದ ಈ ಶಾಪವು ಸತ್ಯವಾಗುವಹಾಗೆ ಮಾಡು. ನಿನ್ನ ಮುಖದಿಂದ ನಿನ್ನ ಮತ್ತು ದೇವತೆಗಳ ಆಹುತಿಗಳನ್ನು ಸ್ವೀಕರಿಸು.”

“ಹೀಗೆಯೇ ಆಗಲಿ” ಎಂದು ಪಿತಾಮಹನಿಗೆ ಉತ್ತರಿಸಿ ವಹ್ನಿಯು ದೇವ ಪರಮೇಷ್ಠಿಯ ಆಜ್ಞೆಯನ್ನು ಪರಿಪಾಲಿಸಲು ಮುಂದಾದನು. ದೇವ ಋಷಿಗಳು ಕೂಡ ಮುದಿತರಾಗಿ ಹಿಂದಿರುಗಿದರು. ಋಷಿಗಳು ಮತ್ತು ಸರ್ವರೂ ಹಿಂದಿನಂತೆ ಕ್ರಿಯೆಗಳಲ್ಲಿ ಮಗ್ನರಾದರು. ಸ್ವರ್ಗದಲ್ಲಿ ದೇವತೆಗಳು ಮತ್ತು ಭೂಮಿಯಲ್ಲಿ ಸರ್ವ ಭೂತಗಳು ಹರ್ಷಿತರಾದರು ಮತ್ತು ಅಗ್ನಿಯೂ ಹತಕಲ್ಮಶನಾಗಿ ಪರಮ ಸಂತಸವನ್ನು ಹೊಂದಿದನು.

ಭಾರ್ಗವ ರುರುವು ಸರ್ಪಗಳ ವಿನಾಶದ ವ್ರತವನ್ನು ಕೈಗೊಂಡಿದುದು

ಭಾರ್ಗವ ಚ್ಯವನನು ಸುಕನ್ಯೆಯಿಂದ ಮಹಾತ್ಮ ದೀಪ್ತತೇಜಸ ಪ್ರಮತಿ ಎನ್ನುವ ಸುತನನ್ನು ಪಡೆದನು. ಪ್ರಮತಿಯು ಘೃತಾಚಿಯಲ್ಲಿ ರುರು ಎಂಬ ಹೆಸರಿನ ಮಗನನ್ನು ಪಡೆದನು. ರುರುವು ಪ್ರಮದ್ವರೆಯಲ್ಲಿ ಶುನಕನನ್ನು ಪಡೆದನು.

ಹಿಂದೆ ಮಹಾ ತಪೋವಿಧ್ಯಾಸಮನ್ವಿತ, ಸರ್ವ ಭೂತಹಿತರತ ಸ್ಥೂಲಕೇಶ ಎಂಬ ಖ್ಯಾತ ಋಷಿಯೋರ್ವನಿದ್ದನು. ಅದೇ ಸಮಯದಲ್ಲಿ ಮೇನಕೆಯು ಗಂಧರ್ವರಾಜ ವಿಶ್ವಾವಸುವಿನಿಂದ ಗರ್ಭವತಿಯಾಗಿದ್ದಳು. ಸಮಯಬಂದಾಗ ಅಪ್ಸರೆ ಮೇನಕೆಯು ಆ ಗರ್ಭವನ್ನು ಸ್ಥೂಲಕೇಶನ ಆಶ್ರಮದ ಬಳಿ ಬಿಟ್ಟಳು. ರೂಪದಲ್ಲಿ ಅಮರರ ಮಗುವಿನಂತೆ ಪ್ರಜ್ವಲಿಸುತ್ತಿರುವ ಆ ಕನ್ಯೆಯನ್ನು ನದೀತೀರದಲ್ಲಿ ಬಿಟ್ಟು ಅವಳು ಹೊರಟು ಹೋದಳು. ಮಹಾನ್ ಋಷಿ ಸ್ಥೂಲಕೇಶನು ವಿಜನ ನದೀತೀರದಲ್ಲಿ ಬಂಧುವರ್ಜಿತಳಾದ ಆ ತೇಜಸ್ವಿನಿಯನ್ನು ನೋಡಿದನು. ಮುನಿಶ್ರೇಷ್ಠ ಸ್ಥೂಲಕೇಶನು ಆ ಕನ್ಯೆಯನ್ನು ನೋಡಿ ಕೃಪಾವಿಷ್ಟನಾಗಿ ಅವಳನ್ನು ಕರೆದುಕೊಂಡು ಹೋಗಿ ಪೋಷಿಸಿದನು. ಅವನ ಆಶ್ರಮದಲ್ಲಿ ಆ ವರಾರೋಹೆ ಶುಭೆಯು ಬೆಳೆದಳು. ಸರ್ವ ರೂಪಗುಣಗಳಲ್ಲಿ ಇತರರೆಲ್ಲರಿಗಿಂಥ ಶ್ರೇಷ್ಠಳಾಗಿದ್ದುದರಿಂದ ಆ ಮಹಾನ್ ಋಷಿಯು ಅವಳಿಗೆ ಪ್ರಮದ್ವರಾ ಎನ್ನುವ ಹೆಸರನ್ನಿತ್ತನು. ಆ ಆಶ್ರಮದ ಬಳಿಯಲ್ಲಿ ಪ್ರಮದ್ವರೆಯನ್ನು ನೋಡಿ ಧರ್ಮಾತ್ಮ ರುರುವು ಅವಳಲ್ಲಿ ಮದನಾನುಗತನಾದನು. ಮಿತ್ರರ ಮೂಲಕ ಈ ವಿಷಯವನ್ನು ತನ್ನ ತಂದೆ ಭಾರ್ಗವ ಪ್ರಮತಿಗೆ ತಿಳಿಸಿದನು ಮತ್ತು ಪ್ರಮತಿಯು ಸ್ಥೂಲಕೇಶನಲ್ಲಿ ಯಶಸ್ವಿನಿಯನ್ನು ಕೊಡುವಂತೆ ಕೇಳಿಕೊಂಡನು. ಕನ್ಯೆಯ ತಂದೆಯು ಪ್ರಮದ್ವರೆಯನ್ನು ರುರುವಿಗೆ ಕೊಡುವುದೆಂದು ನಿರ್ಧರಿಸಿ ಭಗದೇವತ (ಪೂರ್ವ ಪಾಲ್ಗುಣೀ) ನಕ್ಷತ್ರದಲ್ಲಿ ವಿವಾಹ ನಿಶ್ಚಯವಾಯಿತು.

ವಿವಾಹಕ್ಕೆ ಇನ್ನೂ ಕೆಲವು ದಿನಗಳಿರುವಾಗ ಆ ಕನ್ಯೆ ವರವರ್ಣಿನಿಯು ತನ್ನ ಸಖಿಗಳೊಂದಿಗೆ ಆಡುತ್ತಿದ್ದಳು. ಕಾಲಚೋದಿತಳಾದ ಅವಳು ಕಾಣದಹಾಗೆ ಸುರುಳಿಸುತ್ತಿ ಮಲಗಿದ್ದ ಹಾವೊಂದನ್ನು ಮೆಟ್ಟಿದಳು. ಕಾಲಧರ್ಮಕ್ಕೆ ತಕ್ಕಂತೆ ಅದು ತನ್ನ ವಿಷಭರಿತ ಹಲ್ಲುಗಳಿಂದ ಅವಳ ಕಾಲನ್ನು ಕಚ್ಚಿ ಕೆಳಗುರಿಳಿಸಿತು. ಅದರಿಂದ ಕಚ್ಚಲ್ಪಟ್ಟ ಅವಳು ತಕ್ಷಣವೇ ಮೂರ್ಛಿತಳಾಗಿ ಭೂಮಿಯಮೇಲೆ ಬಿದ್ದಳು, ಪರಿಸ್ಥಿತಿಯು ಅಪ್ರೇಕ್ಷಣೀಯವಾಗಿದ್ದರೂ ಅವಳ ಸೌಂದರ್ಯವು ಪ್ರೇಕ್ಷಣೀಯವಾಗಿಯೇ ಇತ್ತು. ಸರ್ಪವಿಷದಿಂದ ನೆಲದಮೇಲೆ ಮಲಗಿಕೊಂಡಿದ್ದ ಆ ತನುಮಧ್ಯಮೆಯು ಇನ್ನೂ ಹೆಚ್ಚು ಮನೋಹರೆಯಾಗಿ ಕಾಣುತ್ತಿದ್ದಳು. ಪದ್ಮವರ್ಚಸಳಾದ ಅವಳು ಮೂರ್ಛಿತಳಾಗಿ ಭೂಮಿಯ ಮೇಲೆ ಬಿದ್ದುದನ್ನು ಅವಳ ತಂದೆ ಮತ್ತು ಅನ್ಯ ತಪಸ್ವಿಗಳು ನೋಡಿದರು. ಅಲ್ಲಿಗೆ ಸ್ವಸ್ತ್ಯಾತ್ರೇಯ, ಮಹಾಜಾನು, ಕುಶಿಕ, ಶಂಖಮೇಖಲ, ಭಾರದ್ವಾಜ, ಕೌಣಕುತ್ಸ, ಆಷ್ಟಿಷೇಣ, ಗೌತಮ, ಪುತ್ರ ಸಮೇತ ಪ್ರಮತಿ ಮೊದಲಾದ ವನವಾಸಿ ಕೃಪಾನ್ವಿತ ದ್ವಿಜವರರೆಲ್ಲರೂ ಬಂದರು. ಹಾವಿನ ವಿಷದಿಂದ ನೆಲದಮೇಲೆ ಮಲಗಿದ್ದ ಕನ್ಯೆಯನ್ನು ನೋಡಿ, ಕೃಪಾವಿಷ್ಟರಾಗಿ ಎಲ್ಲರೂ ರೋದಿಸಿದರು. ಬಹು ಆರ್ತನಾದ ರುರುವು ಅಲ್ಲಿಂದ ಹೊರಟು ಹೋದನು.

ಅಲ್ಲಿ ಎಲ್ಲ ಬ್ರಾಹ್ಮಣರೂ ಸೇರಿರುವಾಗ ದುಃಖಿತ ರುರುವು ದಟ್ಟ ವನವನ್ನು ಸೇರಿ ಜೋರಾಗಿ ರೋದಿಸಿದನು. ಶೋಕಪೀಡಿತನಾದ ಅವನು ಕರುಣದಾಯಕವಾಗಿ ಬಹಳಷ್ಟು ವಿಲಪಿಸಿದನು. ಪ್ರಿಯೆ ಪ್ರಮದ್ವರೆಯ ಕುರಿತು ಚಿಂತಿಸುತ್ತಾ ಶೋಕಭರಿತನಾಗಿ ಹೇಳಿದನು:

“ಭೂಮಿಯ ಮೇಲೆ ಮಲಗಿರುವ ಆ ತನ್ವಂಗಿಯು ನನ್ನ ಶೋಕವನ್ನು ಹೆಚ್ಚಿಸುತ್ತಿದ್ದಾಳೆ. ಸರ್ವ ಬಾಂಧವರಿಗೆ ಇದಕ್ಕಿಂತ ಹೆಚ್ಚಿನ ದುಃಖವು ಯಾವುದಿರಬಹುದು? ನಾನು ಎಂದಾದರೂ ದಾನವನ್ನಿತ್ತಿದ್ದರೆ, ತಪಸ್ಸನ್ನು ತಪಿಸಿದ್ದರೆ, ಗುರುಗಳನ್ನು ಆರಾಧಿಸಿದ್ದರೆ, ಇವುಗಳೆಲ್ಲವುಗಳ ಪುಣ್ಯವು ನನ್ನ ಪ್ರಿಯೆಯನ್ನು ಪುನಃ ಬದುಕಿಸಲಿ. ಜನ್ಮ ಪ್ರಭೃತಿ ನಾನು ನನ್ನನ್ನು ಧೃಢವ್ರತನನ್ನಾಗಿರಿಸಿ ಕೊಂಡಿದ್ದರೆ ಭಾಮಿನಿ ಪ್ರಮದ್ವರೆಯು ಈಗಲೇ ಎದ್ದು ನಿಲ್ಲಲಿ.”

ಆಗ ದೇವದೂತನು ಹೇಳಿದನು:

“ರುರು! ದುಃಖದಿಂದ ಹೇಳುತ್ತಿರುವ ನಿನ್ನ ಈ ಮಾತುಗಳು ಎಂದೂ ಸತ್ಯವಾಗಲಾರವು. ಆಯುಷ್ಯ ಕಳೆದ ಮರ್ತ್ಯರ್ಯಾರೂ ಪುನಃ ಜೀವಿತರಾಗುವುದಿಲ್ಲ. ಗಂಧರ್ವ-ಅಪ್ಸರೆಯರ ಈ ಮಗಳ ಆಯುಷ್ಯರೇಖೆಯು ಮುಗಿದುಹೋಗಿದೆ. ಆದುದರಿಂದ ನಿನ್ನ ಮನಸ್ಸನ್ನು ಶೋಕಸಾಗರದಲ್ಲಿ ಮುಳುಗಿಸಬೇಡ. ಆದರೆ ಹಿಂದೆ ಮಹಾತ್ಮ ದೇವತೆಗಳ ವಿಹಿತ ಉಪಾಯವೊಂದಿದೆ. ಅದನ್ನು ಮಾಡಲು ನಿನಗೆ ಇಷ್ಟವಿದ್ದರೆ ನೀನು ಪ್ರಮದ್ವರೆಯನ್ನು ಮರಳಿ ಪಡೆಯಬಹುದು.”

ರುರುವು ಹೇಳಿದನು:

“ಖೇಚರ! ದೇವರು ಮಾಡಿಟ್ಟಿರುವ ಉಪಾಯವು ಯಾವುದು ಹೇಳು. ನಿನ್ನಿಂದ ಕೇಳಿ ಅದನ್ನೇ ಮಾಡುತ್ತೇನೆ.”

ದೇವದೂತನು ಹೇಳಿದನು:

“ಭೃಗುನಂದನ ರುರು! ನಿನ್ನ ಆಯುಷ್ಯದ ಅರ್ಧವನ್ನು ಈ ಕನ್ಯೆಗೆ ನೀಡಿದರೆ ನಿನ್ನ ಭಾರ್ಯೆ ಪ್ರಮದ್ವರೆಯು ಎದ್ದು ನಿಲ್ಲುವಳು.”

ರುರುವು ಹೇಳಿದನು:

“ಖೇಚರೋತ್ತಮ! ನನ್ನ ಆಯಸ್ಸಿನಲ್ಲಿ ಅರ್ಧವನ್ನು ಈ ಕನ್ಯೆಗೆ ಕೊಡುತ್ತೇನೆ. ಶೃಂಗಾರರೂಪಾಭರಣೆ ನನ್ನ ಪ್ರಿಯೆಯು ಏಳಲಿ.”

ನಂತರ ಸತ್ತಮ ಗಂಧರ್ವ ರಾಜ ಮತ್ತು ದೇವದೂತರೀರ್ವರೂ ಧರ್ಮರಾಜನ ಬಳಿ ಹೋಗಿ ಹೇಳಿದರು:

“ಧರ್ಮರಾಜ! ನೀನು ಬಯಸಿದರೆ ಮೃತಳಾದ ರುರುವಿನ ಭಾರ್ಯೆ ಕಲ್ಯಾಣಿ ಪ್ರಮದ್ವರೆಯು ಅವನ ಅರ್ಧ ಆಯುಸ್ಸನ್ನು ಪಡೆದು ಎದ್ದು ನಿಲ್ಲಲಿ.”

ಧರ್ಮರಾಜನು ಹೇಳಿದನು:

“ದೇವದೂತರೇ! ನಿಮ್ಮ ಇಚ್ಛೆಯಂತೆ ರುರುವಿನ ಅರ್ಧ ಆಯುಸ್ಸನ್ನು ಪಡೆದು ರುರು ಭಾರ್ಯೆ ಪ್ರಮದ್ವರೆಯು ಎದ್ದು ನಿಲ್ಲಲಿ.”

ಹೀಗೆ ಹೇಳಿದ ನಂತರ ವರವರ್ಣಿನಿ ಕನ್ಯೆ ಪ್ರಮದ್ವರೆಯು ರುರುವಿನ ಅರ್ಧ ಆಯುಸ್ಸನ್ನು ಪಡೆದು ನಿದ್ದೆಯಿಂದ ಎದ್ದವಳಂತೆ ಎಚ್ಚೆತ್ತಳು. ಉತ್ತಮತೇಜಸ ರುರುವು ಅರ್ಧವನ್ನು ಭಾರ್ಯೆಗೆ ಕೊಟ್ಟು ತನ್ನ ದೀರ್ಘ ಆಯುಸ್ಸನ್ನು ಕಡಿಮೆಮಾಡಿಕೊಂಡಿದ್ದುದು ಮುಂದೆ ಕಾಣಿಸಿಕೊಂಡಿತು. ನಂತರ ಒಳ್ಳೆಯ ದಿನದಲ್ಲಿ ಅವರೀರ್ವರ ತಂದೆಯಂದಿರು ಸಂತೋಷದಿಂದ ಅವರ ವಿವಾಹವನ್ನು ನೆರವೇರಿಸಿದರು. ಅವರೀರ್ವರೂ ಪರಸ್ಪರರ ಹಿತೈಷಿಗಳಾಗಿ ರಮಿಸಿದರು.

ಪದ್ಮದ ಎಸಳುಗಳಂತೆ ಹೊಳೆಯುತ್ತಿದ್ದ ಭಾರ್ಯೆಯನ್ನು ಬಹಳ ಕಷ್ಟದಿಂದ ಪಡೆದ ಧೃತವ್ರತನು ಸರ್ಪಗಳ ವಿನಾಶದ ವ್ರತವನ್ನು ಕೈಗೊಂಡನು. ಎಲ್ಲಿ ಯಾವಾಗ ಸರ್ಪಗಳನ್ನು ನೋಡಿದರೂ ಅತೀವ ಕೋಪಸಮನ್ವಿತನಾಗಿ ಕೈಗೆ ದೊರಕಿದ ಆಯುಧವನ್ನು ಹಿಡಿದು ಕೊಲ್ಲ ತೊಡಗಿದನು. ಒಮ್ಮೆ ವಿಪ್ರ ರುರುವು ಒಂದು ಮಹಾರಣ್ಯಕ್ಕೆ ಬಂದಾಗ ಅಲ್ಲಿ ಮಲಗಿರುವ ವೃದ್ಧ ಡುಂಡುಭವೊಂದನ್ನು ನೋಡಿದನು. ರೋಷಗೊಂಡ ವಿಪ್ರನು ಅದನ್ನು ಕೊಲ್ಲಲು ಕಾಲದಂಡದಂತಿರುವ ತನ್ನ ದಂಡವನ್ನು ಮೇಲೆತ್ತಿದಾಗ, ಡುಂಡುಭವು ಹೇಳಿತು:

“ತಪೋಧನ! ನಾನು ನಿನಗೆ ಯಾವ ಅಪರಾಧವನ್ನೂ ಎಸಗಿಲ್ಲ. ಸಿಟ್ಟಿನಿಂದ ಏಕೆ ನನ್ನನ್ನು ಕೊಲ್ಲಲು ತೊಡಗಿರುವೆ?”

ರುರುವು ಹೇಳಿದನು:

“ನನ್ನ ಪ್ರಾಣಸಮ ಪತ್ನಿಯನ್ನು ಹಿಂದೆ ಒಂದು ಸರ್ಪವು ಕಚ್ಚಿತ್ತು. ಆ ಸಮಯದಲ್ಲಿ ನಾನು ನೋಡಿದ ಸರ್ಪಗಳನ್ನೆಲ್ಲ ಕೊಲ್ಲುತ್ತೇನೆಂಬ ಘೋರ ನಿಶ್ಚಯವೊಂದನ್ನು ಕೈಗೊಂಡಿದ್ದೆ. ಆದುದರಿಂದ ನಿನ್ನನ್ನು ಕೊಂದು ಜೀವನ ಮುಕ್ತಿಯನ್ನು ಕೊಡುತ್ತಿದ್ದೇನೆ.”

ಡುಂಡುಭವು ಹೇಳಿತು:

“ವಿಪ್ರ! ಮಾನವರನ್ನು ಕಚ್ಚುವ ಸರ್ಪಗಳೇ ಬೇರೆ. ಆದುದರಿಂದ ನೀನು ಡುಂಡುಭಗಳನ್ನು ಹಿಂಸಿಸುವುದು ಸರಿಯಲ್ಲ. ಡುಂಡುಭ ಮತ್ತು ಹಾವುಗಳು ಒಂದೇ ಎಂದು ಭಾವಿಸಿದರೂ ಸುಖವನ್ನು ಅನುಭವಿಸುವಾಗ ಅವುಗಳು ಬೇರೆ ಬೇರೆಯೇ. ಡುಂಡುಭ ಮತ್ತು ಹಾವುಗಳು ಸ್ವಭಾವದಲ್ಲಿ ಬೇರೆ ಬೇರೆಯಾಗಿದ್ದರೂ ದುಃಖವನ್ನು ಅನುಭವಿಸುವಾಗ ಒಂದೇ ಎಂದು ಪರಿಗಣಿಸಲ್ಪಡುತ್ತವೆ. ನೀನು ಧರ್ಮವನ್ನು ತಿಳಿದಿದ್ದೀಯೆ. ಡುಂಡುಭಗಳನ್ನು ಹಿಂಸಿಸುವುದು ನಿನಗೆ ಸರಿಯಲ್ಲ.”

ಸರ್ಪದ ಈ ಮಾತುಗಳನ್ನು ಕೇಳಿ ಋಷಿ ರುರುವು ಭಯಸಂವಿಘ್ನನಾದ ಡುಂಡುಭನನ್ನು ಕೊಲ್ಲಲಿಲ್ಲ. ಅವನನ್ನು ಶಾಂತಗೊಳಿಸುತ್ತಾ ಭಗವಾನ್ ರುರುವು ಕೇಳಿದನು:

“ಭುಜಗ! ನೀನು ಯಾರು ಮತ್ತು ಹೇಗೆ ಈ ರೂಪವನ್ನು ಹೊಂದಿದೆ ಎನ್ನುವುದನ್ನು ನನಗೆ ಹೇಳು.”

ಡುಂಡುಭವು ಹೇಳಿತು:

“ರುರು! ಹಿಂದೆ ನಾನು ಸಹಸ್ರಪಾದ ಎಂಬ ಹೆಸರಿನ ಋಷಿಯಾಗಿದ್ದೆ. ಒಬ್ಬ ವಿಪ್ರನ ಶಾಪದಿಂದ ಭುಜಗತ್ವವನ್ನು ಹೊಂದಿದೆನು.”

ರುರುವು ಹೇಳಿದನು:

“ಭುಜಗೋತ್ತಮ! ಯಾವ ಕಾರಣಕ್ಕಾಗಿ ಕೃದ್ಧ ದ್ವಿಜನಿಂದ ನೀನು ಶಪಿಸಲ್ಪಟ್ಟೆ? ಎಷ್ಟು ಕಾಲದವರೆಗೆ ನೀನು ಈ ರೀತಿ ಇರಬೇಕಾಗುತ್ತದೆ?”

ಡುಂಡುಭವು ಹೇಳಿತು:

“ಹಿಂದೆ ಖಗಮ ಎಂಬ ಹೆಸರಿನ, ಸದಾ ಸತ್ಯವನ್ನೇ ನುಡಿಯುವ ತಪೋಬಲಸಮನ್ವಿತ ದ್ವಿಜನೋರ್ವನು ನನ್ನ ಸಖನಾಗಿದ್ದನು. ಬಾಲ್ಯದಲ್ಲಿ ಆಡುತ್ತಿರುವಾಗ ನಾನು ಒಂದು ಹುಲ್ಲುಕಡ್ಡಿಯನ್ನು ಹಾವನ್ನಾಗಿ ಮಾಡಿ ಅಗ್ನಿಹೋತ್ರದಲ್ಲಿ ಪ್ರಸಕ್ತನಾಗಿದ್ದ ಅವನನ್ನು ಹೆದರಿಸಿದಾಗ ಅದನ್ನು ನೋಡಿದ ಅವನು ಮೂರ್ಛಿತನಾದನು. ಪುನಃ ಪ್ರಜ್ಞೆಬಂದ ನಂತರ ಆ ಸತ್ಯವಾದಿ ಸಂಶಿತವ್ರತ ತಪೋಧನನು ಕೋಪದಿಂದ ನಿಹೃದಯಿಯಾಗಿ ಹೇಳಿದನು:

“ಜೀವವಿಲ್ಲದ ಸರ್ಪದಿಂದ ನನ್ನನು ಹೇಗೆ ಹೆದರಿಸಿದೆಯೋ ಹಾಗೆ ನೀನು ನನ್ನ ಕೋಪದಿಂದಾಗಿ ಹಾನಿಕಾರಕವಲ್ಲದ ಸರ್ಪವಾಗುತ್ತೀಯೆ!”

ಆ ತಪೋಧನನ ತಪಃಶಕ್ತಿಯನ್ನು ಅರಿತ ನಾನು ಉದ್ವಿಗ್ನ ಹೃದಯನಾಗಿ ದುಃಖದಿಂದ ತಲೆಬಾಗಿ ಪ್ರಾಂಜಲೀ ಬದ್ಧನಾಗಿ ನಮಸ್ಕರಿಸಿ ಹೇಳಿದೆನು:

“ಸಖನನ್ನು ಮೋಡಿಮಾಡಲೆಂದು ನಾನು ಹೀಗೆಲ್ಲ ಮಾಡಿದೆ. ಬ್ರಾಹ್ಮಣ! ಆದ್ದರಿಂದ ನನ್ನನ್ನು ಕ್ಷಮಿಸಿ ಈ ಶಾಪವನ್ನು ಹಿಂತೆಗೆದುಕೊಳ್ಳಬೇಕು.”

ದುಃಖಿತ ಮತ್ತು ಉದ್ವಿಗ್ನಚೇತಸ ನನ್ನನ್ನು ನೋಡಿದ ಆ ತಪೋಧನನು ಅನುಕಂಪಗೊಂಡು ಬಿಸಿಯುಸಿರು ಬಿಡುತ್ತಾ ಹೇಳಿದನು:

“ನಾನು ಹೇಳಿದ್ದುದು ಸುಳ್ಳಾಗುವುದಿಲ್ಲ. ಹೇಗಾದರೂ ಅದು ನಡೆದೇ ನಡೆಯುತ್ತದೆ. ಈಗ ನಾನಾಡುವ ಮಾತನ್ನು ಸರಿಯಾಗಿ ಕೇಳಿ ಇದನ್ನು ನಿನ್ನ ಹೃದಯದಲ್ಲಿ ಇರಿಸಿಕೋ. ರುರು ಎಂಬ ಹೆಸರಿನ ಪ್ರಮತಿಯ ಮಗನನ್ನು ನೀನು ನೋಡಿದಾಗ ಶಾಪವಿಮುಕ್ತನಾಗುತ್ತೀಯೆ.”

ಆ ಖ್ಯಾತ ಪ್ರಮತಿಯ ಮಗನಾದ ರುರುವೇ ನೀನು. ಈಗ ನಾನು ನನ್ನ ಮೊದಲಿನ ರೂಪವನ್ನು ಪಡೆದಿದ್ದೇನೆಯಾದ್ದರಿಂದ ನಿನ್ನ ಹಿತಕ್ಕಾಗಿ ನಾನು ಹೇಳುತ್ತಿದ್ದೇನೆ. ಅಹಿಂಸೆಯೇ ಪರಮ ಧರ್ಮ. ಯಾವುದೇ ಜೀವಿಯ ಪ್ರಾಣಾಪಹರಣ ಮಾಡಬಾರದು. ಆದ್ದರಿಂದ ಬ್ರಾಹ್ಮಣನಾದವನು ಎಂದೂ ಇತರರ ಪ್ರಾಣವನ್ನು ಕೊನೆಗೊಳಿಸಬಾರದು ಮತ್ತು ಹಿಂಸಿಸಬಾರದು ಎನ್ನುತ್ತಾರೆ. ಒಂದು ಶ್ರುತಿಯ ಪ್ರಕಾರ ಬ್ರಾಹ್ಮಣನು ಸದಾ ಸೌಮ್ಯನಾಗಿರಬೇಕು ವೇದವೇದಾಂಗಗಳನ್ನು ತಿಳಿದವನಾದ ಅವನು ಸರ್ವಭೂತಗಳಿಗೆ ಅಭಯವನ್ನು ನೀಡುವಂಥವನಾಗಿರಬೇಕು. ಅಹಿಂಸೆ, ಸತ್ಯ ವಚನ, ಕ್ಷಮೆ ಮತ್ತು ವೇದಗಳನ್ನು ಅನುಸರಿಸುವುದು ಇವೆಲ್ಲವೂ ನಿಶ್ಚಯವಾಗಿ ಬ್ರಾಹ್ಮಣನ ಪರಮ ಧರ್ಮ. ನೀನು ಈಗ ಅನುಸರಿಸುತ್ತಿರುವ ಧರ್ಮವು ನಿನ್ನದಲ್ಲ. ಕ್ಷತ್ರಿಯನ ಧರ್ಮ. ದಂಡಧಾರಣ ಮಾಡುವುದು, ಕ್ರೂರಿಯಾಗಿರುವುದು ಮತ್ತು ಪ್ರಜೆಗಳನ್ನು ಪರಿಪಾಲಿಸುವುದು ಇವೆಲ್ಲವೂ ಕ್ಷತ್ರಿಯನ ಕರ್ಮಗಳು. ಹಿಂದೆ ಧರ್ಮಾತ್ಮ ಜನಮೇಜಯನು ಸರ್ಪಗಳನ್ನು ಹಿಂಸಿಸಿದುದರ ಕುರಿತು ನನ್ನನ್ನು ಕೇಳು. ಸರ್ಪಸತ್ರದಲ್ಲಿ ಭೀತಿಗೊಂಡ ಸರ್ಪಗಳನ್ನು ತಪೋವೀರ್ಯಬಲೋಪೇತ, ವೇದವೇದಾಂಗ ಪಾರಂಗತ, ದ್ವಿಜಮುಖ್ಯ ಆಸ್ತೀಕನೆಂಬ ಬ್ರಾಹ್ಮಣನು ರಕ್ಷಿಸಿದನು.”

ರುರುವು ಹೇಳಿದನು:

“ದ್ವಿಜಸತ್ತಮ! ಕ್ಷತ್ರಿಯ ಜನಮೇಜಯನು ಸರ್ಪಗಳನ್ನು ಹೇಗೆ ಮತ್ತು ಯಾವ ಕಾರಣಕ್ಕಾಗಿ ಹಿಂಸಿಸಿದನು? ಆ ಪನ್ನಗಗಳು ಏಕೆ ಆಸ್ತೀಕನಿಂದ ರಕ್ಷಿಸಲ್ಪಟ್ಟವು ವಿವರಿಸು. ಏನನ್ನೂ ಬಿಡದೇ ಕೇಳಲು ಇಚ್ಛಿಸುತ್ತೇನೆ.”

“ರುರು! ಬ್ರಾಹ್ಮಣರು ಕಥೆಯನ್ನು ಹೇಳುವಾಗ ನೀನು ಮಹತ್ತರ ಆಸ್ತೀಕಚರಿತವನ್ನು ಸಂಪೂರ್ಣವಾಗಿ ಕೇಳುತ್ತೀಯೆ”

ಎಂದು ಹೇಳಿ ಋಷಿಯು ಅಂತರ್ಧಾನನಾದನು. ರುರುವು ಆ ಋಷಿಗಾಗಿ ವನವನ್ನೆಲ್ಲಾ ಹುಡುಕಿದನು. ಹುಡುಕಾಡಿ ಬಳಲಿದ ಅವನು ಮೂರ್ಛಿತನಾಗಿ ನೆಲದ ಮೇಲೆ ಬಿದ್ದನು. ಎಚ್ಚೆತ್ತ ರುರುವು ತನ್ನ ತಂದೆಗೆ ಆ ಕಥೆಯನ್ನು ಹೇಳಲು ಕೇಳಿಕೊಂಡನು. ಆಗ ಅವನ ತಂದೆಯು ಆ ಕಥೆಯನ್ನು ಸಂಪೂರ್ಣವಾಗಿ ಹೇಳಿದನು.

ಜನಮೇಜಯನ ಯಜ್ಞದಲ್ಲಿ ಸುಟ್ಟುಹೋಗಿ ಎಂದು ಸರ್ಪಗಳಿಗೆ ತಾಯಿ ಕದ್ರುವಿನ ಶಾಪ

ಹಿಂದೆ ದೇವಯುಗದಲ್ಲಿ ಪ್ರಜಾಪತಿ ಬ್ರಹ್ಮನಿಗೆ ಈರ್ವರು ರೂಪವತಿ ಶುಭರೂ ಅನಘರೂ ಆದ ಸುತೆಯರಿದ್ದರು. ಅವರೇ ಕಶ್ಯಪನ ಭಾರ್ಯೆಯರಾದ ಕದ್ರು ಮತ್ತು ವಿನತ. ಕದ್ರುವಿನ ಮಕ್ಕಳು ಸಾವಿರ ನಾಗಗಳು ಮತ್ತು ವಿನತೆಯ ಮಕ್ಕಳು ಅರುಣ ಮತ್ತು ಗರುಡ. ಒಮ್ಮೆ ಭಗಿನಿಯರೀರ್ವರು ಅಮೃತ ಮಂಥನ ಸಮಯದಲ್ಲಿ ಹುಟ್ಟಿದ ಸರ್ವದೇವಗಣ ಪೂಜಿತ, ಹೃಷ್ಟರೂಪೀ, ಅನುತ್ತಮ, ದಿವ್ಯ, ಸರ್ವಲಕ್ಷಣ ಲಕ್ಷಿತ, ಶ್ರೀಮಂತ, ಸದಾ ಯೌವನಿ, ಅಶ್ವಗಳಲ್ಲಿಯೇ ಉತ್ತಮ, ಶ್ರೇಷ್ಠ, ಮಹುಘಬಲಶಾಲೀ ಅಶ್ವರತ್ನಉಚ್ಛೈಶ್ರವಸುವು ತಮ್ಮ ಕಡೆ ಬರುತ್ತಿರುವುದನ್ನು ಕಂಡರು. ಅದನ್ನು ವೀಕ್ಷಿಸುತ್ತಾ ಕದ್ರುವು ವಿನತೆಯನ್ನು

“ಭದ್ರೇ! ಆ ಉಚ್ಛೈಶ್ರವಸ್ಸು ಯಾವ ವರ್ಣದ್ದು ಬೇಗ ಹೇಳು”

ಎಂದು ಕೇಳಿದಳು. ಅದಕ್ಕೆ ವಿನತೆಯು

“ಈ ಅಶ್ವರಾಜನು ಬಿಳಿಯಾಗಿದ್ದಾನೆ. ಶುಭೇ! ನಿನ್ನ ಅಭಿಪ್ರಾಯವೇನು? ಇದರ ಬಣ್ಣವು ಯಾವುದು ಎಂದು ನೀನು ಹೇಳು. ಅದರ ಮೇಲೆ ಪಣವಿಡೋಣ!”

ಎಂದಳು. ಆಗ ಕದ್ರುವು

“ಶುಚಿಸ್ಮಿತೇ! ಈ ಕುದುರೆಯ ಬಾಲವು ಕಪ್ಪು ಬಣ್ಣದ್ದು ಎಂದು ನನ್ನ ಅನಿಸಿಕೆ. ಇದರಲ್ಲಿ ಸೋತವರು ಇನ್ನೊಬ್ಬರ ದಾಸಿಯಾಗಬೇಕು!”

ಎಂದು ಪಣವನ್ನಿಟ್ಟಳು. ಈ ರೀತಿ ಒಬ್ಬರಿಗೊಬ್ಬರು ದಾಸಿಯಾಗುವ ಪಣವನ್ನು ತೊಟ್ಟು

“ನಾಳೆ ಬಂದು ಕುದುರೆಯನ್ನು ನೋಡೋಣ!”

ಎಂದು ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಮೋಸಮಾಡುವ ಉದ್ದೇಶದಿಂದ ಕದ್ರುವು ತನ್ನ ಸಹಸ್ರ ಪುತ್ರರಿಗೆ

“ನಾನು ದಾಸಿಯಾಗಬಾರದೆಂದಾದರೆ ತಕ್ಷಣವೇ ಹೋಗಿ ಆ ಅಶ್ವದ ಬಾಲಕ್ಕೆ ಸುತ್ತಿಕೊಂಡು ಅದು ಕಪ್ಪಾಗಿ ಕಾಣುವಂತೆ ಮಾಡಿ!”

ಎಂದು ಆಜ್ಞಾಪಿಸಿದಳು. ಅವಳ ಮಾತನ್ನು ಪರಿಪಾಲಿಸಲು ಇಚ್ಛೆ ತೋರಿಸದೇ ಇದ್ದ ಆ ಭುಜಂಗಗಳಿಗೆ ಅವಳು

“ಧೀಮಂತ ಪಾಂಡವೇಯ ರಾಜರ್ಷಿ ಜನಮೇಜಯನು ನಡೆಸುವ ಸರ್ಪಸತ್ರದಲ್ಲಿ ನಿಮ್ಮೆಲ್ಲರನ್ನೂ ಪಾವಕನು ಸುಟ್ಟು ಭಸ್ಮಮಾಡುವನು!”

ಎಂದು ಶಾಪವನ್ನಿತ್ತಳು. ದೈವಾಧೀನ ಕದ್ರುವಿನಿಂದ ಹೊರಬಂದ ಈ ಅತಿ ಕ್ರೂರ ಶಾಪವನ್ನು ಸ್ವಯಂ ಪಿತಾಮಹನೂ ಕೇಳಿದನು. ಆದರೆ ಸರ್ಪಗಳು ವೃದ್ಧಿಯಾಗುತ್ತಿರುವುದನ್ನು ನೋಡಿ ಪ್ರಜೆಗಳ ಹಿತಕ್ಕಾಗಿ ಅವನು ಎಲ್ಲ ದೇವಗಣಗಳ ಸಹಿತ ಆ ಶಾಪವನ್ನು ಅನುಮೋದಿಸಿದನು. ಅತ್ಯಂತ ಪರಿಣಾಮಕಾರಿಯಾದ ಅವರ ವಿಷ, ಅವರ ಮಹಾ ಶಕ್ತಿ, ಕಚ್ಚುವ ಸ್ವಭಾವಗಳನ್ನು ಪರಿಗಣಿಸಿದರೆ ಪ್ರಜೆಗಳ ಹಿತಕ್ಕೆ ಇದು ಒಳ್ಳೆಯದೇ ಆಯಿತು ಎಂದು ಅವನು ಮಹಾತ್ಮ ಕಾಶ್ಯಪನಿಗೆ ವಿಷಹರಣೀ ವಿದ್ಯೆಯನ್ನು ಪ್ರದಾನಿಸಿದನು.

ನಾಗಗಳ ಸಮಾಲೋಚನೆ

ತಾಯಿಯ ಶಾಪವನ್ನು ಕೇಳಿದ ತಕ್ಷಣವೇ ಪನ್ನಗ ಸತ್ತಮ ವಾಸುಕಿಯು ಈ ಶಾಪವು ಘಟಿಸದ ಹಾಗೆ ಏನು ಮಾಡಬೇಕು ಎಂದು ಚಿಂತಿಸತೊಡಗಿದನು. ಆಗ ಅವನು ಧರ್ಮಪರಾಯಣ ಐರಾವತನೇ ಮೊದಲಾದ ತನ್ನ ಸರ್ವ ಸಹೋದರರೊಡನೆ ಮಂತ್ರಾಲೋಚನೆ ಮಾಡಿದನು:

“ಅನಘರೇ! ನಮ್ಮ ಮೇಲಿರುವ ಶಾಪದ ಕುರಿತು ನಿಮಗೆಲ್ಲ ತಿಳಿದೇ ಇದೆ. ಈ ಶಾಪದಿಂದ ಮೋಕ್ಷವನ್ನು ಹೊಂದಲು ಪ್ರಯತ್ನವನ್ನೇನಾದರೂ ಮಾಡಬೇಕು. ಎಲ್ಲ ರೀತಿಯ ಶಾಪಗಳಿಗೆ ವಿಮೋಚನೆ ಎನ್ನುವುದು ಇದೆ ಎಂದು ತಿಳಿದಿದ್ದೇವೆ. ಆದರೆ ತಾಯಿಯ ಅಭಿಶಾಪಕ್ಕೆ ಮೋಕ್ಷವೇ ಇಲ್ಲವೆಂದು ಹೇಳುತ್ತಾರೆ. ಅವ್ಯಯ, ಅಪ್ರಮೇಯ, ಮತ್ತು ಸತ್ಯನ ಮುಂದೆಯೇ ಈ ಶಾಪವನ್ನು ಉಚ್ಛರಿಸಲಾಯಿತು ಎಂದು ತಿಳಿದು ನನ್ನ ಹೃದಯವು ನಡುಗುತ್ತಿದೆ. ನಮ್ಮೆಲ್ಲರ ವಿನಾಶವು ಹತ್ತಿರವಾಗುತ್ತಿರಬೇಕು. ಇಲ್ಲವಾದರೆ ಆ ಅವ್ಯಯ ದೇವನು ಈ ರೀತಿ ಶಪಿಸುವುವವಳನ್ನು ತಡೆಯುತ್ತಿದ್ದ. ಆದ್ದರಿಂದ ಹೆಚ್ಚು ಕಾಲ ಹರಣ ಮಾಡದೇ ಸರ್ವ ನಾಗಗಳ ಒಳಿತಿನ ಕುರಿತು ಮಂತ್ರಾಲೋಚನೆ ಮಾಡೋಣ. ಸರ್ಪಗಳ ವಿನಾಶಹೇತುವಾಗುವ ಜನಮೇಜಯನ ಆ ಯಜ್ಞವೇ ನಡೆಯದಂತೆ ಏನನ್ನಾದರೂ ಮಾಡಬೇಕು.”

ಈ ಮಾತುಗಳನ್ನು ಕೇಳಿ ಅಲ್ಲಿ ನೆರೆದಿದ್ದ ಕದ್ರುವಿನ ಮಂತ್ರಬುದ್ಧಿವಿಶಾರದ ಮಕ್ಕಳು ತಮ್ಮ ತಮ್ಮ ಸೂಚನೆಗಳನ್ನಿತ್ತರು. ಅವರಲ್ಲಿ ಒಬ್ಬ ನಾಗನು ಹೇಳಿದನು:

“ನಾವು ಬ್ರಾಹ್ಮಣ ವೇಷ ಧರಿಸಿ ಜನಮೇಜಯನಲ್ಲಿ ಹೋಗಿ ಈ ಯಜ್ಞವನ್ನು ಕೈಗೊಳ್ಳಬೇಡ ಎಂದು ಬೇಡಿಕೊಳ್ಳೋಣ.”

ಇತರ ನಾಗಗಳು, ತಮ್ಮನ್ನು ತಾವೇ ಪಂಡಿತರೆಂದು ಪರಿಗಣಿಸಿ ಹೇಳಿದರು:

“ನಾವೆಲ್ಲರೂ ಅವನ ಸುಸಮ್ಮತಿಗಳನ್ನೀಯುವ ಮಂತ್ರಿಗಳಾಗೋಣ. ಆಗ ಅವನು ಸರ್ವ ಕಾರ್ಯ ವಿಷಯಗಳಲ್ಲಿ ನಮ್ಮ ಸಲಹೆಗಳನ್ನು ಕೇಳುತ್ತಾನೆ. ಆಗ ಬುದ್ಧಿಯನ್ನು ಬಳಸಿ ಈ ಯಜ್ಞವು ನಡೆಯದಂತೆ ನೋಡಿಕೊಳ್ಳಬಹುದು. ಬುದ್ಧಿವಂತರಲ್ಲಿ ಶ್ರೇಷ್ಠ ಆ ರಾಜನು ಯಜ್ಞದ ವಿಷಯದಲ್ಲಿ ನಮ್ಮ ಅಭಿಪ್ರಾಯಗಳನ್ನು ಕೇಳಿಯೇ ಕೇಳುತ್ತಾನೆ. ಆಗ ಅದನ್ನು ಮಾಡಬೇಡ ಎಂದು ಹೇಳೋಣ. ಇಹದಲ್ಲಿಯೂ ಪರದಲ್ಲಿಯೂ ಅದರಿಂದುಂಟಾಗುವ ದಾರುಣ ದೋಷಗಳನ್ನು ತೋರಿಸಿಕೊಡೋಣ. ಇದರ ಕಾರಣ-ಪರಿಣಾಮಗಳೆರಡನ್ನೂ ತಿಳಿಸಿ ಹೇಳಿ ಯಜ್ಞವು ನಡೆಯದಂತೆ ಮಾಡೋಣ. ಅಥವಾ ನಮ್ಮಲ್ಲೊಬ್ಬ ನಾಗನು ರಾಜಕಾರ್ಯಹಿತರತ ಸರ್ಪಸತ್ರದ ವಿಧಾನವನ್ನು ತಿಳಿದಿರುವ, ಕ್ರತುವಿನ ಉಪಾಧ್ಯಾಯನೊಬ್ಬನನ್ನು ಕಚ್ಚಿ ಸಾಯಿಸಲಿ. ಯಜ್ಞಕರ್ತೃವಾದ ಅವನು ತೀರಿಕೊಂಡಾಗ ಯಜ್ಞವು ಮುಂದುವರೆಯಲಾರದು. ಇಲ್ಲವಾದರೆ ಸರ್ಪಸತ್ರವನ್ನು ತಿಳಿದಿರುವ ಮತ್ತು ಮುಂದೆ ಅದರ ಋತ್ವಿಜರಾಗಬಲ್ಲ ಎಲ್ಲರನ್ನೂ ಕಚ್ಚಿ ಸಾಯಿಸೋಣ. ಈ ರೀತಿ ನಮ್ಮ ಉದ್ದೇಶವನ್ನು ಪೂರೈಸಿಕೊಳ್ಳಬಹುದು.”

ಅಲ್ಲಿಯೇ ಮಂತ್ರಾಲೋಚನೆಯಲ್ಲಿ ಕುಳಿತಿದ್ದ ಒಬ್ಬ ಧರ್ಮಾತ್ಮ ನಾಗನು ಹೇಳಿದನು:

“ನಿನ್ನ ಈ ಮಾತುಗಳು ಅಬುದ್ಧಿಯವು. ಬ್ರಹ್ಮ ಹತ್ಯೆ ಒಳ್ಳೆಯದಲ್ಲ. ಸಮ್ಯಕ್ ಸದ್ಧರ್ಮವೇ ವ್ಯಸನದಲ್ಲಿರುವವರಿಗೆ ಉತ್ತಮ ಶಾಂತಿಯ ಮೂಲ. ಅಧರ್ಮವು ಇಡೀ ಜಗತ್ತನ್ನೇ ನಾಶಪಡಿಸುತ್ತದೆ.”

ಇತರ ನಾಗಗಳು ಹೇಳಿದವು:

“ನಾವೆಲ್ಲರೂ ಮಿಂಚಿನಿಂದ ಕೂಡಿದ ಕಪ್ಪು ಮೋಡಗಳಾಗಿ ಜೋರಾಗಿ ಮಳೆಸುರಿಸಿ ಯಜ್ಞೇಶ್ವರನನ್ನು ಆರಿಸಿಬಿಡೋಣ.”

ಇನ್ನೊಬ್ಬ ಭುಜಗೋತ್ತಮನು ಹೇಳಿದನು:

“ರಾತ್ರಿಯಲ್ಲಿ ಹೋಗಿ ಯಜ್ಞದ ಆಹುತಿಗಳನ್ನು ತುಂಬಿಟ್ಟಿದ್ದ ಪಾತ್ರೆಗಳನ್ನು ಕದ್ದು ತರೋಣ. ಈ ರೀತಿ ಅದಕ್ಕೆ ವಿಘ್ನವುಂಟಾಗುತ್ತದೆ. ಅಥವಾ, ನೂರಾರು ಸಹಸ್ರಾರು ನಾಗಗಳು ಅಲ್ಲಿಗೆ ಹೋಗಿ ನೆರೆದಿದ್ದ ಜನರೆಲ್ಲರನ್ನೂ ಕಚ್ಚಿ ಭಯೋತ್ಪಾದನೆ ಮಾಡೋಣ. ಅಥವಾ ಮಡಿಯಾಗಿದ್ದ ಆಹಾರವನ್ನು ನಾಗಗಳ ಮೂತ್ರ ಮಲಗಳಿಂದ ಮೈಲಿಗೆ ಮಾಡಿ ಆಹಾರವೆಲ್ಲವನ್ನೂ ನಾಶಮಾಡೋಣ.”

ಇನ್ನು ಕೆಲವರು ಹೇಳಿದರು:

“ನಾವೆಲ್ಲರೂ ಋತ್ವಿಜರಾಗಿ ಅವನ ಬಳಿ ಹೋಗೋಣ. ದಕ್ಷಿಣೆಯನ್ನು ಕೊಡು ಎಂದು ಯಜ್ಞದಲ್ಲಿ ವಿಘ್ನವನ್ನು ಉಂಟುಮಾಡೋಣ. ಅವನು ನಮ್ಮ ವಶದಲ್ಲಿರುವುದರಿಂದ ನಾವು ಕೇಳಿದುದೆಲ್ಲವನ್ನೂ ಅವನು ಮಾಡುವನು.”

ಅಲ್ಲಿದ್ದವರಲ್ಲಿ ಇನ್ನೊಬ್ಬನು ಹೇಳಿದನು:

“ಜಲಕ್ರೀಡೆಯಲ್ಲಿ ತೊಡಗಿರುವಾಗ ರಾಜನನ್ನು ನಮ್ಮ ಮನೆಗೆ ಕರೆದುಕೊಂಡು ಹೋಗಿ ಬಂಧನದಲ್ಲಿ ಇಡೋಣ. ಹೀಗೆ ಯಜ್ಞವೇ ನಡೆಯುವುದಿಲ್ಲ.”

ಅಲ್ಲಿ ಕೆಲವು ಸುಕೃತಕಾರಿ ನಾಗಗಳಿದ್ದರು. ಅವರು ಹೇಳಿದರು:

“ತಕ್ಷಣವೇ ಹೋಗಿ ಅವನನ್ನು ಹಿಡಿದು ಕಚ್ಚಿಬಿಡುವುದರಿಂದ ಎಲ್ಲವೂ ಮುಕ್ತಾಯವಾಗುತ್ತದೆ. ಒಮ್ಮೆ ಅವನು ಸತ್ತನೆಂದಾದರೆ ನಮ್ಮೆಲ್ಲರ ಕಷ್ಟಗಳ ಮೂಲವೇ ಕಡಿದು ಹೋದಂತೆ. ಇದೇ ನಮ್ಮ ಅಂತಿಮ ಸೂಚನೆ ಮತ್ತು ಇದಕ್ಕೆ ನಮ್ಮೆಲ್ಲರ ಸಮ್ಮತಿಯಿದೆ. ನಿನ್ನ ಒಪ್ಪಿಗೆಯಿದ್ದರೆ ಕೂಡಲೇ ಇದನ್ನು ಕಾರ್ಯಗತಗೊಳಿಸೋಣ.”

ಹೀಗೆ ಹೇಳಿ ಅವರೆಲ್ಲರೂ ಪನ್ನಗೇಶ್ವರ ವಾಸುಕಿಯತ್ತ ನೋಡಿದರು. ವಾಸುಕಿಯಾದರೂ ಸ್ವಲ್ಪ ಹೊತ್ತು ಯೋಚಿಸಿ ಆ ಭುಜಂಗರಿಗೆ ಹೇಳಿದನು:

“ಭುಜಂಗಮರೇ! ನಿಮ್ಮ ಅಂತಿಮ ಸಲಹೆಯು ಕಾರ್ಯಗತಗೊಳಿಸಲು ಯೋಗ್ಯವಾದುದಲ್ಲ. ಪನ್ನಗಗಳಲ್ಲಿ ಯಾರ ಉಪಾಯವೂ ನನಗೆ ಇಷ್ಟವಾಗಲಿಲ್ಲ. ನಿಮ್ಮೆಲ್ಲರ ಒಳಿತಿಗಾಗಿ ಈಗ ಮಾಡಲಿಕ್ಕಾದರೂ ಏನಿದೆ? ಇದೇ ನನ್ನನ್ನು ಚಿಂತೆಗೊಳಪಡಿಸುತ್ತಿದೆ. ಉಳ್ಳೆಯದಾದರೂ ನನ್ನದೇ ಕೆಟ್ಟದ್ದಾದರೂ ನನ್ನದೇ.”

ಎಲ್ಲ ನಾಗಗಳು ಅವರವರ ಮಾತುಗಳನ್ನು ಹೇಳಿದುದನ್ನು ಮತ್ತು ವಾಸುಕಿಯ ಈ ಮಾತುಗಳನ್ನು ಕೇಳಿದ ಏಲಾಪತ್ರನು ಅವರನ್ನುದ್ದೇಶಿಸಿ ಹೇಳಿದನು:

“ವಿಧಿವಿಹಿತವಾದ ಈ ಯಜ್ಞವನ್ನಾಗಲೀ ಅಥವಾ ನಮ್ಮೆಲ್ಲರ ಈ ಮಹಾಭಯಕ್ಕೆ ಕಾರಣವಾಗಬಲ್ಲ ಪಾಂಡವೇಯ ಜನಮೇಜಯನನ್ನಾಗಲೀ ತಡೆಯಲು ಸಾಧ್ಯವಿಲ್ಲ. ರಾಜನ್! ದೈವ ಪೀಡಿತ ಪುರುಷನು ದೈವವನ್ನು ಮಾತ್ರ ಮೊರೆಹೊಗಬೇಕೇ ವಿನಃ ಬೇರೆ ಯಾವುದೂ ಅವನ ರಕ್ಷಣೆಗೆ ಬರುವುದಿಲ್ಲ. ನಮ್ಮೆಲ್ಲರ ಈ ಭಯವೂ ಕೂಡ ದೈವದತ್ತವಾದದ್ದು. ದೈವದ ಆಶ್ರಯವು ಮಾತ್ರ ನಮಗಿರುವ ದಾರಿ. ನನ್ನ ಈ ಮಾತುಗಳನ್ನು ಕೇಳಿ. ನಮ್ಮ ಕುರಿತು ಶಾಪವನ್ನು ಉಚ್ಛರಿಸಿದಾಗ ನಾನು ಭಯದಿಂದ ತಾಯಿಯ ತೊಡೆಯಮೇಲೇರಿ ಕುಳಿತುಕೊಂಡೆ. ಆಗ ನಾನು ದೇವಪ್ರಭುವು

"ಇದು ಬಹಳ ತೀಕ್ಷ್ಣವಾದದ್ದು! ತೀಕ್ಷ್ಣವಾದದ್ದು!’

ಎಂದು ಹೇಳುವುದನ್ನು ಕೇಳಿದೆ. ಆಗ ಆ ಮಹಾದ್ಯುತಿ ದೇವತೆಗಳು ದುಃಖಾರ್ತರಾಗಿ ಪಿತಾಮಹನ ಬಳಿ ಹೋಗಿ ಹೇಳಿದರು:

"ಪಿತಾಮಹ! ದೇವದೇವ! ಕದ್ರುವನ್ನು ಬಿಟ್ಟು ಇನ್ನು ಯಾವ ತಾಯಿಯು ಪ್ರಿಯ ಪುತ್ರರನ್ನು ಹಡೆದು ಅವರನ್ನೇ ಈ ರೀತಿ ತೀಕ್ಷ್ಣವಾಗಿ ನಿನ್ನ ಮುಂದೆಯೇ ಶಪಿಸಬಹುದು? ನೀನೂ ಕೂಡ ಹಾಗೆಯೇ ಆಗಲಿ ಎಂದು ಹೇಳಿದ್ದುದನ್ನು ಕೇಳಿದೆವು. ನೀನು ಅದನ್ನು ತಡೆಹಿಡಿಯದೇ ಇರಲು ಕಾರಣವನ್ನು ತಿಳಿಯ ಬಯಸುತ್ತೇವೆ.”

ಆಗ ಬ್ರಹ್ಮನು ಅವರಿಗೆ ಹೇಳಿದನು:

"ತೀಕ್ಷ್ಣರೂ ಭೀಮವೀರ್ಯರೂ ಆದ ವಿಷಭರಿತ ನಾಗಗಳು ಬಹಳವಾಗಿದ್ದಾರೆ. ಪ್ರಜೆಗಳೆಲ್ಲರ ಹಿತಾಸಕ್ತಿಯಿಂದ ನಾನು ಅವಳನ್ನು ತಡೆಯಲಿಲ್ಲ. ಯಾರು ಸದಾ ಕಚ್ಚುವ ಪ್ರವೃತ್ತಿಯನ್ನು ಹೊಂದಿದ್ದಾರೋ, ಸಣ್ಣ ಸಣ್ಣ ವಿಷಯಕ್ಕೂ ಕಚ್ಚುತ್ತಾರೋ, ಹೆಚ್ಚಿನ ವಿಷವನ್ನು ಹೊಂದಿರುವರೋ ಅಂಥಹ ಪಾಪಚಾರಿಗಳು ಮಾತ್ರ ವಿನಾಶ ಹೊಂದುತ್ತಾರೆ. ಧರ್ಮಚಾರಿಗಳಲ್ಲ. ಆ ಕಾಲವು ಬಂದಾಗ ನಾಗಗಳು ತಮ್ಮ ಈ ಮಹಾಭಯದಿಂದ ಹೇಗೆ ಮೋಕ್ಷವನ್ನು ಹೊಂದುತ್ತಾರೆ ಎನ್ನುವುದನ್ನು ಕೇಳಿ. ಯಾಯಾವರ ಕುಲದಲ್ಲಿ ಜರತ್ಕಾರುವೆಂದು ಖ್ಯಾತಿಗೊಳ್ಳುವ ತೇಜಸ್ವಿಯೂ ನಿಯತೇಂದ್ರಿಯನೂ ಧೀಮಂತನೂ ಆದ ಮಹಾನ್ ಋಷಿಯೊಬ್ಬನು ಹುಟ್ಟುತ್ತಾನೆ. ಜರತ್ಕಾರುವಿನಲ್ಲಿ ಜನಿಸುವ ಅವನ ಪುತ್ರ ಆಸ್ತೀಕನೆಂಬ ಹೆಸರಿನ ಮಹಾತಪಸ್ವಿಯು ಈ ಯಜ್ಞವನ್ನು ನಿಲ್ಲಿಸಿ ಧಾರ್ಮಿಕ ನಾಗಗಳ ಬಿಡುಗಡೆಮಾಡುತ್ತಾನೆ.”

ಅದಕ್ಕೆ ದೇವತೆಗಳು ಕೇಳಿದರು:

"ದೇವ! ಆ ಮುನಿಪ್ರವರ ಮಹಾತಪಸ್ವಿ ಜರತ್ಕಾರುವಿನ ಮಹಾತ್ಮ ವೀರ್ಯವಂತ ಪುತ್ರನು ಯಾರಲ್ಲಿ ಜನಿಸುತ್ತಾನೆ?"

ಬ್ರಹ್ಮನು ಹೇಳಿದನು:

"ದೇವತೆಗಳೇ! ಆ ವೀರ್ಯವಂತ ದ್ವಿಜಸತ್ತಮನು ತನ್ನ ಹೆಸರನ್ನೇ ಹೊಂದಿರುವ ಪತ್ನಿಯಲ್ಲಿ ತನ್ನ ಹಾಗೆಯೇ ವೀರ್ಯವಂತ ಮಗನನ್ನು ಪಡೆಯುತ್ತಾನೆ."

ದೇವತೆಗಳು ಪಿತಾಮಹನಿಗೆ ‘ಹಾಗೆಯೇ ಆಗಲಿ’ ಎಂದು ಹೇಳಲು ದೇವತೆಗಳಿಗೆ ಇದನ್ನೆಲ್ಲ ಹೇಳಿದ ದೇವ ಪಿತಾಮಹನು ಹೊರಟುಹೋದನು. ವಾಸುಕಿ! ಜರತ್ಕಾರುವೆಂದು ಖ್ಯಾತಳಾಗಿರುವ ನಿನ್ನ ತಂಗಿಯನ್ನು ನೋಡುತ್ತಿದ್ದೇನೆ. ನಾಗಗಳ ಭಯವನ್ನು ನಿವಾರಿಸಲೋಸುಗ ಅವಳನ್ನು ಪತ್ನಿಗಾಗಿ ಭಿಕ್ಷೆಬೇಡುತ್ತಾ ತಿರುಗುತ್ತಿರುವ ಆ ಸುವ್ರತ ಮುನಿಗೆ ಕೊಡು. ಅದೇ ನಮಗೆ ಮೋಕ್ಷದಾಯಕವೆಂದು ಕೇಳಿದ್ದೇನೆ.”

ಏಲಾಪತ್ರನ ಈ ಮಾತುಗಳನ್ನು ಕೇಳಿದ ನಾಗಗಳೆಲ್ಲರೂ ಪ್ರಹೃಷ್ಟರಾಗಿ “ಸಾಧು! ಸಾಧು!” ಎಂದು ಉದ್ಗಾರಗೈದರು. ಅಂದಿನಿಂದ ವಾಸುಕಿಯು ಆ ಕನ್ಯೆ ಜರತ್ಕಾರುವನ್ನು ರಕ್ಷಿಸುತ್ತಾ ಅವಳ ಪಾಲನೆ-ಪೋಷಣೆಯಲ್ಲಿ ತುಂಬಾ ಸಂತೋಷವನ್ನು ಹೊಂದಿದನು. ದೇವಾಸುರರೆಲ್ಲರೂ ಸೇರಿ ಸಮುದ್ರವನ್ನು ಮಥಿಸಿ ಹೆಚ್ಚು ಸಮಯವು ಕಳೆದಿರಲಿಲ್ಲ. ಆಗ ಬಲಶಾಲಿಗಳಲ್ಲಿ ಶ್ರೇಷ್ಠ ನಾಗ ವಾಸುಕಿಯು ಕಡೆಯುವ ಹಗ್ಗವಾಗಿದ್ದನು. ಆ ಕಾರ್ಯವನ್ನು ಮುಗಿಸಿದ ಅವನು ಪಿತಾಮಹನ ಬಳಿ ಹೋದನು. ವಾಸುಕಿಯ ಜೊತೆಗಿದ್ದ ದೇವತೆಗಳು ಪಿತಾಮಹನಲ್ಲಿ ವಿನಂತಿಸಿಕೊಂಡರು:

“ಭಗವನ್! ಈ ಶಾಪಭೀತ ವಾಸುಕಿಯು ತುಂಬಾ ನೋವನ್ನು ಅನುಭವಿಸುತ್ತಿದ್ದಾನೆ. ಜನನಿಯ ಶಾಪದಿಂದ ತನ್ನ ಜಾತಿಯವರ ಹಿತಾಕಾಂಕ್ಷಿಯಾದ ಇವನಲ್ಲಿ ಉದ್ಭವವಾಗಿರುವ ಈ ಶಲಾಕೆಯನ್ನು ಅವನ ಮನಸ್ಸಿನಿಂದ ಕಿತ್ತೊಗೆಯಬೇಕಾಗಿದೆ. ಈ ನಾಗರಾಜನು ಸದಾ ನಮ್ಮ ಹಿತೈಷಿಯೂ ಪ್ರಿಯಕಾರಿಯೂ ಆಗಿದ್ದಾನೆ. ಇವನ ಮನೋಜ್ವರವನ್ನು ಹೋಗಲಾಡಿಸುವ ಪ್ರಸಾದವನ್ನು ನೀಡು.”

ಬ್ರಹ್ಮನು ಹೇಳಿದನು:

“ಅಮರರೇ! ನಿಮ್ಮ ಈ ಮಾತುಗಳನ್ನು ನಾನು ಮನಸ್ಸಿನಲ್ಲಿ ಯೋಚಿಸಿದ್ದೇನೆ. ನಾಗೇಂದ್ರನು ಸಮಯ ಬಂದಾಗ ಜರತ್ಕಾರುವಿನ ಕುರಿತು ನಾಗ ಏಲಾಪತ್ರನು ಮೊದಲು ಹೇಳಿದ ಹಾಗೆಯೇ ಮಾಡಲಿ. ಇದರಿಂದ ಧರ್ಮಚಾರಿಗಳನ್ನು ಬಿಟ್ಟು ಕೇವಲ ಪಾಪಿಗಳು ಮಾತ್ರ ವಿನಾಶಹೊಂದುತ್ತಾರೆ. ಜರತ್ಕಾರುವು ಈಗಾಗಲೇ ಹುಟ್ಟಿದ್ದಾನೆ ಮತ್ತು ಆ ದ್ವಿಜನು ಉಗ್ರ ತಪಸ್ಸಿನಲ್ಲಿ ನಿರತನಾಗಿದ್ದಾನೆ. ಸರಿಯಾದ ಸಮಯದಲ್ಲಿ ಅವನಿಗೆ ತನ್ನ ತಂಗಿಯನ್ನು ಕೊಡಲಿ. ನಾಗ ಏಲಾಪತ್ರನು ಹೇಳಿದುದರಲ್ಲಿಯೇ ಪನ್ನಗಗಳ ಹಿತವಿದೆ. ಬೇರೆ ಯಾವ ರೀತಿಯಲ್ಲಿಯೂ ಇಲ್ಲ.”

ಪಿತಾಮಹನ ಈ ಮಾತುಗಳನ್ನು ಕೇಳಿದ ನಾಗೇಂದ್ರನು ಜರತ್ಕಾರುವನ್ನು ಹುಡುಕಲು ಎಲ್ಲ ಸರ್ಪಗಳಿಗೂ ಆಜ್ಞೆಯನ್ನಿತ್ತನು:

“ಯಾವಾಗ ಜರತ್ಕಾರುವು ಪತ್ನಿಗಾಗಿ ಕೇಳುತ್ತಾನೋ ಆಗ ತಕ್ಷಣವೇ ನನ್ನಲ್ಲಿ ಬಂದು ಹೇಳಿ. ನಮ್ಮೆಲ್ಲರ ಶ್ರೇಯಸ್ಸು ಇದರ ಮೇಲೆಯೇ ನಿರ್ಭರವಾಗಿದೆ.”

ಆಸ್ತೀಕನ ಜನನ

‘ಜರ’ ಎಂದರೆ ಕ್ಷಯವಾಗುವುದು ಮತ್ತು ‘ಕಾರು’ ಎಂದರೆ ಅತಿ ದೊಡ್ಡ ದೇಹ. ಆ ಧೀಮಂತನು ತೀವ್ರ ತಪಸ್ಸಿನಿಂದ ಸ್ವಲ್ಪ ಸ್ವಲ್ಪವೇ ತನ್ನ ಅತಿ ಸ್ಥೂಲ ಕಾಯವನ್ನು ಬಡಕಲು ಮಾಡಿಕೊಂಡ. ಇದೇ ಕಾರಣಕ್ಕಾಗಿ ವಾಸುಕಿಯ ತಂಗಿಯೂ ಜರತ್ಕಾರುವೆಂದು ಕರೆಯಲ್ಪಟ್ಟಳು.

ಇದೇ ಸಮಯದಲ್ಲಿ ಮಹಾತಪಸ್ವಿ ಜರತ್ಕಾರುವು ಸಾಯಂಕಾಲ ಎಲ್ಲಿರುತ್ತಾನೋ ಅಲ್ಲಿಯೇ ತಂಗುತ್ತಾ ಇಡೀ ಪೃಥ್ವಿಯನ್ನು ತಿರುಗುತ್ತಿದ್ದನು. ಮಹಾತೇಜಸ್ವಿಗಳಿಗೂ ಅಸಾಧ್ಯವೆನಿಸುವ ಕಾರ್ಯಪಾಲನೆ ಮಾಡುತ್ತಾ ಪುಣ್ಯಕ್ಷೇತ್ರಗಳಲ್ಲಿ ತೀರ್ಥಸ್ನಾನಗಳನ್ನು ಮಾಡುತ್ತಾ ಸಂಚರಿಸುತ್ತಿದ್ದನು. ನಿರಾಹಾರನಾಗಿ ಕೇವಲ ಗಾಳಿಯನ್ನೇ ಸೇವಿಸುತ್ತಾ ದಿನ ದಿನವೂ ತನ್ನ ದೇಹವನ್ನು ಒಣಗಿಸುತ್ತಿದ್ದನು. ಒಮ್ಮೆ ಅವನು ಒಂದು ಬಾವಿಯಲ್ಲಿ ತಲೆಕೆಳಗಾಗಿ ನೇಲುತ್ತಿದ್ದ ತನ್ನ ಪಿತೃಗಳನ್ನು ಕಂಡನು. ಆ ಬಿಲದಲ್ಲಿಯೇ ವಾಸಿಸುತ್ತಿದ್ದ ಇಲಿಗಳು ತಿಂದು ಜೀರ್ಣವಾದ ಒಂದೇ ಒಂದು ವೀರಣದ ಬೇರನ್ನು ಹಿಡಿದು ನೇತಾಡುತ್ತಿದ್ದರು. ಆಹಾರವಿಲ್ಲದೇ ಬಡಕಲು ಬಿದ್ದು, ಮೇಲೆ ಬರಲು ಸ್ವಲ್ಪವೂ ಶಕ್ತಿಯಿಲ್ಲದೇ ದೀನ ಅರ್ತ ದೀನರೂಪಿಗಳಾದ ದೀನರ ಬಳಿಬಂದು ಅವನು ಹೇಳಿದನು:

“ಇದೇ ಬಿಲದಲ್ಲಿ ವಾಸಿಸುತ್ತಿರುವ ಇಲಿಯಿಂದ ತಿನ್ನಲ್ಪಟ್ಟು ದುರ್ಬಲವಾಗಿರುವ ಈ ವೀರಣದ ಬೇರನ್ನು ಹಿಡಿದು ನೇತಾಡುತ್ತಿರುವ ನೀವು ಯಾರು? ನೀವು ಹಿಡಿದು ನಿಂತಿರುವ ಈ ವೀರಣ ಬೇರಿನ ದಾರವು ಇಲಿಯಿಂದ ತಿನ್ನಲ್ಪಟ್ಟು ನಿಧಾನವಾಗಿ ಹರಿದುಹೋಗುತ್ತಿದೆ. ತಲೆಕೆಳಗಾಗಿ ಈ ಆಳವಾದ ಬಾವಿಯಲ್ಲಿ ನೀವು ಬೀಳುತ್ತೀರಿ ಎನ್ನುವುದಲ್ಲಿ ಸಂಶಯವೇ ಇಲ್ಲ. ಅಧೋಮುಖರಾಗಿರುವ ನಿಮನ್ನು ನೋಡಿ ನನಗೆ ಅತೀವ ದುಃಖವಾಗುತ್ತಿದೆ. ನಿಮಗೆ ಪ್ರಿಯವಾದ ಯಾವ ಕಾರ್ಯವನ್ನು ಮಾಡಲಿ ಹೇಳಿ. ನನ್ನ ತಪಸ್ಸಿನ ಬಲದ ಕಾಲುಭಾಗದಿಂದ ಅಥವಾ ಮೂರರಲ್ಲಿ ಒಂದು ಭಾಗ ಅಥವಾ ಅರ್ಧಭಾಗದಿಂದ ನಿಮ್ಮ ಈ ಆಪತ್ತನ್ನು ನಿವಾರಿಸಬಹುದಾದರೆ ಬೇಗ ಹೇಳಿ. ಅಥವಾ, ನನ್ನ ಸಮಗ್ರ ತಪಸ್ಸಿನ ಬಲದಿಂದ ನಿಮ್ಮ ಎಲ್ಲ ಈ ಕಷ್ಟಗಳು ದೂರಾಗುವವೆಂದರೆ ಹೇಳಿ. ಅದಕ್ಕೂ ನಾನು ಸಿದ್ಧನಿದ್ದೇನೆ.”

ಪಿತೃಗಳು ಹೇಳಿದರು:

“ಬ್ರಹ್ಮಚಾರಿ! ನಮ್ಮನ್ನು ಉದ್ಧರಿಸಲು ಬಯಸುತ್ತಿದ್ದೀಯೆ. ಆದರೆ ನಿನ್ನ ತಪಸ್ಸಿನಿಂದ ನಮ್ಮನ್ನು ಉಳಿಸಲು ಶಕ್ಯವಿಲ್ಲ. ನಮ್ಮಲ್ಲಿ ಕೂಡ ತಮ್ಮ ತಪಸ್ಸಿನ ಶ್ರೇಷ್ಠ ಫಲಗಳಿವೆ. ಆದರೆ ಸಂತಾನದ ಕೊರತೆಯಿಂದಾಗಿ ನಾವು ಈ ನರಕದಲ್ಲಿ ಬೀಳುತ್ತಿದ್ದೇವೆ. ಇಲ್ಲಿ ನೇತಾಡುತ್ತಿರುವ ನಮ್ಮ ಜ್ಞಾನ ಪ್ರತಿಭೆಯು ಕುಂದುತ್ತಿದೆ. ಆದುದರಿಂದ ನೀನು ಪೌರುಷದಲ್ಲಿ ಲೋಕದಲ್ಲೆಲ್ಲಾ ವಿಖ್ಯಾತನಾಗಿದ್ದರೂ ನಮಗೆ ನಿನ್ನನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಮಹಾಭಾಗ ನೀನು ಪೂಜಿಸಲರ್ಹ. ಶೋಚಿಸುತ್ತಿರುವ ನಮ್ಮ ಸಮದುಃಖಿಯಾಗಿದ್ದೀಯೆ. ನಾವು ಯಾರು ಮತ್ತು ಯಾವ ಕಾರಣಕ್ಕಾಗಿ ಶೋಚಿಸುತ್ತಿದ್ದೇವೆ ಎನ್ನುವುದನ್ನು ಕೇಳು. ನಾವು ಸಂಶಿತವ್ರತ ಯಾಯಾವರಾ ಎಂಬ ಹೆಸರಿನ ಋಷಿಗಳು. ಸಂತಾನವಿಲ್ಲದಿರುವ ಕಾರಣದಿಂದ ನಾವು ಪುಣ್ಯಲೋಕದಿಂದ ಭ್ರಷ್ಟರಾಗಿದ್ದೇವೆ. ನಮ್ಮ ತಪಸ್ಸಿನ ಪುಣ್ಯಗಳೆಲ್ಲ ಇನ್ನೂ ನಶಿಸಿಹೋಗಿಲ್ಲ. ಆದುದರಿಂದ ನಮಗೆ ಈ ದಾರವಾದರೂ ಆಧಾರವಾಗಿದೆ. ಆದರೆ ಇದು ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ. ಮಂದಭಾಗ್ಯರಾದ ನಮ್ಮ ಕುಲದ ಏಕತ್ರ ಬಂಧುವಿನಲ್ಲಿ ನಮ್ಮ ಉಳಿದ ಅಲ್ಪಭಾಗ್ಯವಿದೆ. ಅವನು ಜರತ್ಕಾರುವೆಂದು ಖ್ಯಾತ ವೇದವೇದಾಂಗಪಾರಂಗತ, ನಿಯತಾತ್ಮ, ಸುವ್ರತ, ಸುಮಹಾತಪಸ್ವಿ ಮಹಾತ್ಮನು. ಆದರೆ ಅವನಿಗೆ ತಪಸ್ಸಿನ ಲೋಭದಿಂದಾಗಿ ನಾವು ಈ ಪರಿಸ್ಥಿತಿಯಲ್ಲಿದ್ದೇವೆ. ಅವನಿಗೆ ಹೆಂಡತಿ, ಪುತ್ರ ಅಥವಾ ಬಾಂಧವರ್ಯಾರೂ ಇಲ್ಲ. ಅದರಿಂದಾಗಿ ನಾವು ಹೀಗೆ ನಷ್ಟಸಂಜ್ಞರಾಗಿ ಅನಾಥರಂತೆ ಈ ಬಾವಿಯಲ್ಲಿ ನೇತಾಡುತ್ತಿದ್ದೇವೆ. ನೀನು ಅವನನ್ನು ಕಂಡರೆ ನಮ್ಮ ಮೇಲಿನ ಕರುಣೆಯಿಂದ ಅವನಿಗೆ ಈ ರೀತಿ ತಿಳಿಸು: ‘ನಿನ್ನ ಪಿತೃಗಳು ಒಂದು ಬಾವಿಯಲ್ಲಿ ದೀನರಾಗಿ ಅಧೋಮುಖರಾಗಿ ನೇತಾಡುತ್ತಿದ್ದಾರೆ. ಪತ್ನಿಯನ್ನು ಹೊಂದಿ, ಮಕ್ಕಳನ್ನು ಪಡೆ. ನೀನೊಬ್ಬನೇ ಅವರಿಗಿರುವ ಒಂದೇ ಒಂದು ಕುಲತಂತು.’ ಬ್ರಾಹ್ಮಣ! ನಾವು ಹಿಡಿದಿರುವ ಈ ವೀರಣದ ಬೇರು ನಮ್ಮ ಕುಲವನ್ನು ಮುಂದುವರಿಸಬಹುದಾಗಿರುವ ಒಂದೇ ಒಂದು ಕುಲಸ್ತಂಭ. ನಿನಗೆ ಕಾಣುವ ಜೀರ್ಣವಾಗಿರುವ ಈ ವೀರವದ ಬೇರನ್ನು ತಿನ್ನುತ್ತಿರುವವನೇ ಕಾಲ. ನಾವು ಹಿಡಿದು ನೇತಾಡುತ್ತಿರುವ ಅರ್ಧ ತಿಂದು ಜೀರ್ಣವಾಗಿರುವ ಈ ಬೇರೇ ತಪಸ್ಸಿನಲ್ಲಿರುವ ಅವನು. ನೀನು ನೋಡುವ ಇಲಿಯೇ ಆ ಬಹಾಬಲಿ ಕಾಲ. ಅವನು ಮಂದಾತ್ಮ, ಅಚೇತಸ, ತಪೋಲುಬ್ಧ. ತಪೋನಿರತ ಜರತ್ಕಾರುವನ್ನು ನಿಧಾನವಾಗಿ ಭಕ್ಷಿಸುತ್ತಿದ್ದಾನೆ. ಅವನ ತಪಸ್ಸು ನಮ್ಮನ್ನು ಪಾರುಮಾಡುವುದಿಲ್ಲ. ನಮ್ಮ ಮೂಲವೇ ತುಂಡಾಗಿದೆ, ಮತ್ತು ಕಾಲಾಂತರದಿಂದ ನಮ್ಮ ಮನಸ್ಸು ಘಾಯಗೊಂಡಿದೆ. ನಾವು ಹೇಗೆ ಈ ನರಕದಲ್ಲಿ ಪಾಪಿಗಳಂತೆ ಅಧೋಗತಿಗಿಳಿದಿದ್ದೀವೆ ನೋಡು! ನಮ್ಮ ಪೂರ್ವ ಪಿತಾಮಹರೊಂದಿಗೆ ನಾವು ಎಂದು ಈ ಆಳದಲ್ಲಿ ಮುಳುಗುತ್ತೇವೋ ಆಗ ಅವನೂ ಕೂಡ ಕಾಲನಿಂದ ಛಿದ್ರಛಿದ್ರನಾಗಿ ನಮ್ಮೊಂದಿಗೆ ನರಕವನ್ನು ಸೇರುತ್ತಾನೆ. ತಪಸ್ಸಾಗಲೀ, ಯಜ್ಞವಾಗಲೀ ಅಥವಾ ಬೇರೆ ಯಾವುದೇ ಮಹಾ ಪುಣ್ಯಕಾರ್ಯವಾಗಲೀ ಅವೆಲ್ಲವೂ ಸಂತತಿಗೆ ಸಮಾನವಲ್ಲ ಎನ್ನುವುದು ಸತ್ಯವಂತರ ಮತ. ತಪಸ್ವಿ ಜರತ್ಕಾರುವನ್ನು ಕಂಡರೆ ಅವನಿಗೆ ನೀನು ಇಲ್ಲಿ ನೋಡಿದುದೆಲ್ಲವನ್ನೂ ಮತ್ತು ನಮ್ಮ ಈ ಮಾತುಗಳನ್ನೂ ಯಥಾವತ್ತಾಗಿ ಹೇಳು. ಅವನು ಪತ್ನಿಯನ್ನು ಮಾಡಿಕೊಂಡು ಪುತ್ರನನ್ನು ಪಡೆದು ನಮ್ಮನ್ನು ರಕ್ಷಿಸಬೇಕೆಂದರೆ ನೀನು ಇದನ್ನು ಅವನಿಗೆ ತಿಳಿಸಬೇಕು.”

ಇದನ್ನೆಲ್ಲ ಕೇಳಿದ ಜರತ್ಕಾರುವು ದುಃಖಶೋಕಪರಾಯಣನಾಗಿ, ದುಃಖದಿಂದ ಬಾಷ್ಪಸಂದಿಗ್ಧ ಸ್ವರದಲ್ಲಿ ತನ್ನ ಪಿತೃಗಳಿಗೆ ಹೇಳಿದನು:

“ನಾನೇ ಆ ತಪ್ಪಿತಸ್ಥ ನಿಮ್ಮ ಸುತ ಜರತ್ಕಾರು. ನಾನು ಓರ್ವ ಪಾಪಿ. ಪಾಪಾತ್ಮನಾದ ನನಗೆ ಶಿಕ್ಷೆಯನ್ನು ವಿಧಿಸಿ.”

ಪಿತೃಗಳು ಹೇಳಿದರು:

“ಇದೇ ಸ್ಥಳಕ್ಕೆ ನೀನು ತಿರುಗಾಡುತ್ತಾ ಬಂದಿದ್ದೀಯೆ ಎಂದರೆ ಅದೃಷ್ಠವೇ ಸರಿ. ನೀನು ಇದೂವರೆಗೂ ಪತ್ನಿಯನ್ನು ಪಡೆಯದೇ ಇರಲು ಕಾರಣವೇನು?”

ಜರತ್ಕಾರುವು ಹೇಳಿದನು:

“ಪಿತೃಗಳೇ! ನನ್ನ ವೀರ್ಯವನ್ನು ಹಿಡಿದಿಟ್ಟುಕೊಂಡು ಇದೇ ಶರೀರವನ್ನು ಹೊತ್ತು ಅಪರ ಲೋಕವನ್ನು ಸೇರಬೇಕೆಂಬುದು ಸದಾ ನನ್ನ ಹೃದಯದಲ್ಲಿ ಇದ್ದ ಬಯಕೆ. ಆದರೆ ಶಕುಂತ ಪಕ್ಷಿಗಳಂತೆ ನೇತಾಡುತ್ತಿರುವ ನಿಮ್ಮನ್ನು ನೋಡಿ ನನ್ನ ಬುದ್ಧಿಯು ಬ್ರಹ್ಮಚರ್ಯದಿಂದ ಹಿಂದಿರುಗಿದೆ. ನಿಮಗೆ ಪ್ರಿಯ ಕಾರ್ಯವನ್ನು ನಿಸ್ಸಂಶಯವಾಗಿಯೂ ಮಾಡುತ್ತೇನೆ: ನನ್ನ ಹೆಸರನ್ನೇ ಹೊಂದಿರುವ ಕನ್ಯೆ ಯಾರಾದರೂ ನನಗೆ ದೊರೆತರೆ, ಯಾರಾದರೂ ಅವಳನ್ನು ನನಗೆ ಸ್ವಯಂ ಬಂದು ಭಿಕ್ಷಾರೂಪದಲ್ಲಿ ಕೊಟ್ಟರೆ, ಮತ್ತು ನಾನು ಪಾಲನೆ ಮಾಡಬೇಕಾಗಿಲ್ಲದವಳು ಸಿಕ್ಕರೆ ಅವಳನ್ನು ಪತ್ನಿಯನ್ನಾಗಿ ಸ್ವೀಕರಿಸುತ್ತೇನೆ. ಈ ವಿಧದಲ್ಲಿ ಮಾತ್ರ ನಾನು ಮದುವೆಯಾಗುತ್ತೇನೆ. ಅನ್ಯಥಾ ನಾನು ಮದುವೆ ಮಾಡಿಕೊಳ್ಳುವುದಿಲ್ಲ. ನಾನು ಸತ್ಯವನ್ನೇ ನುಡಿಯುತ್ತಿದ್ದೇನೆ.”

ತನ್ನ ಪಿತೃಗಳಿಗೆ ಹೀಗೆ ಹೇಳಿದ ಮುನಿಯು ಇಡೀ ಪೃಥ್ವಿಯನ್ನು ಸಂಚರಿಸಿದನು. ಮುದುಕನಾಗಿದ್ದಾನೆಂದು ಅವನಿಗೆ ಪತ್ನಿಯೇ ದೊರೆಯಲಿಲ್ಲ. ಒಮ್ಮೆ ಅವನು ತನ್ನ ಪಿತೃಗಳ ಕಾರ್ಯವನ್ನು ನೆರವೇರಿಸಲು ಅಸಮರ್ಥನಾದೆನೆಂದು ನಿರಾಶೆಗೊಂಡು, ಒಂದು ಮಹದಾರಣ್ಯವನ್ನು ಹೊಕ್ಕು ದುಃಖದಿಂದ ಪೀಡಿತನಾಗಿ ಜೋರಾಗಿ ಕೂಗಿಕೊಂಡನು:

“ಇಲ್ಲಿರುವ ಚಲಿಸುವ ಮತ್ತು ಚಲಿಸದೇ ಇರುವ, ಕಾಣುವ ಮತ್ತು ಕಾಣದೇ ಇರುವ ಎಲ್ಲರೂ ನನ್ನ ಈ ಮಾತುಗಳನ್ನು ಕೇಳಿ. ಉಗ್ರತಪಸ್ಸಿನಲ್ಲಿ ನಿರತನಾದ ನಾನು ನನ್ನ ದುಃಖಾರ್ತ ಪಿತೃಗಳ ಅಪ್ಪಣೆಯಂತೆ ಅವರಿಗೆ ಪ್ರಿಯಕಾರ್ಯವನ್ನು ಮಾಡಲು ಹೊರಟಿದ್ದೇನೆ. ಪಿತೃಗಳ ಸೂಚನೆಯಂತೆ ದರಿದ್ರ ಮತ್ತು ದುಃಖಶೀಲನಾದ ನಾನು ಇಡೀ ಭೂಮಿಯನ್ನು ಕನ್ಯಾಭಿಕ್ಷಾರ್ಚನೆ ಮಡುತ್ತಾ ತಿರುಗುತ್ತಿದ್ದೇನೆ. ಇಲ್ಲಿ ನನ್ನ ಕೂಗು ಕೇಳುತ್ತಿರುವ ಯಾರಲ್ಲಿಯಾದರೂ ಓರ್ವ ಕನ್ಯೆಯಿದ್ದರೆ ಸರ್ವ ದಿಶೆಯಲ್ಲಿ ತಿರುಗುತ್ತಿರುವ ನನಗೆ ಅವಳನ್ನು ನೀಡಿ. ನನ್ನ ಹೆಸರನ್ನೇ ಹೊಂದಿರುವ ಕನ್ಯೆಯನ್ನು ಭಿಕ್ಷೆಯಾಗಿ ಕೊಡಿ. ನಾನು ಪಾಲಿಸಬೇಕಾಗಿದಂಥ ಕನ್ಯೆಯನ್ನು ನೀಡಿ.”

ಆಗ ಜರತ್ಕಾರುವಿನ ಮೇಲೆ ಕಣ್ಣಿಟ್ಟಿದ್ದ ಪನ್ನಗಗಳು ಅವನ ಪ್ರವೃತ್ತಿಯನ್ನು ವಾಸುಕಿಗೆ ಬಂದು ವರದಿಮಾಡಿದರು. ಅವರನ್ನು ಕೇಳಿದ ಆ ಪನ್ನಗ ನಾಗೇಂದ್ರನು ಸಮಲಂಕೃತ ಕನ್ಯೆಯನ್ನು ಕರೆದುಕೊಂಡು ಆ ಅರಣ್ಯದಲ್ಲಿ ಅವನ ಸಮೀಪ ಬಂದನು. ನಾಗೇಂದ್ರ ವಾಸುಕಿಯು ಅ ಕನ್ಯೆಯನ್ನು ಮಹಾತ್ಮನಿಗೆ ಭಿಕ್ಷವಾಗಿತ್ತರೂ ಅವನು ಅವಳನ್ನು ತಕ್ಷಣವೇ ಸ್ವೀಕರಿಸಲಿಲ್ಲ. ತನ್ನ ಹೆಸರನ್ನೇ ಅವಳು ಹೊಂದಿರಲಿಕ್ಕಿಲ್ಲ ಮತ್ತು ಅವಳನ್ನು ಪಾಲಿಸುವವರು ಯಾರು ಎಂದು ಅನುಮಾನಿಸಿ ದ್ವಂದ್ವೀಭೂತನಾಗಿ ಅವಳನ್ನು ಸ್ವೀಕರಿಸಲು ಹಿಂಜರಿದನು. ಅವನು ವಾಸುಕಿಗೆ ಆ ಕನ್ಯೆಯ ಹೆಸರೇನೆಂದು ಕೇಳಿ ನಾನು ಅವಳ ಜೀವನವನ್ನು ನೋಡಿಕೊಳ್ಳುವುದಿಲ್ಲ ಎಂದನು. ಆಗ ವಾಸುಕಿಯು ಋಷಿ ಜರತ್ಕಾರುವಿಗೆ ಹೇಳಿದನು:

“ನನ್ನ ಈ ತಪಸ್ವಿನಿ ತಂಗಿಯು ನಿನ್ನ ಹೆಸರನ್ನೇ ಹೊಂದಿದ್ದಾಳೆ. ದ್ವಿಜೋತ್ತಮ! ಇವಳನ್ನು ನಿನ್ನ ಭಾರ್ಯೆಯಾಗಿ ಸ್ವೀಕರಿಸು. ನಾನೇ ಅವಳ ಜೀವನವನ್ನು ನೋಡಿಕೊಳ್ಳುತ್ತೇನೆ. ನನ್ನ ಸರ್ವ ಶಕ್ತಿಗಳನ್ನೂ ಉಪಯೋಗಿಸಿ ಅವಳ ರಕ್ಷಣೆಯನ್ನು ಮಾಡುತ್ತೇನೆ.”

ತನ್ನ ತಂಗಿಯನ್ನು ತಾನೇ ನೋಡಿಕೊಳ್ಳುತ್ತೇನೆ ಎಂದು ನಾಗನಿಂದ ಅಶ್ವಾಸನೆಯನ್ನು ಪಡೆದ ನಂತರ ಜರತ್ಕಾರುವು ಆ ನಾಗನ ಮನೆಗೆ ಹೋದನು. ಅಲ್ಲಿ ಮಂತ್ರವಿಧ್ವಾಂಸಿ, ಶ್ರೇಷ್ಠ ತಪೋವೃದ್ಧ, ಮಹಾವ್ರತ ಧರ್ಮಾತ್ಮನು ವಿಧಿಮಂತ್ರಪೂರಕವಾಗಿ ಅವಳ ಕೈ ಹಿಡಿದನು. ಪನ್ನಗೇಂದ್ರನ ಸಮ್ಮತಿಯಂತೆ ಪತ್ನಿಯನ್ನು ಪಡೆದು ಮಹರ್ಷಿಗಳೆಲ್ಲರೂ ಸ್ತುತಿಸುತ್ತಿರಲು ಶುಭ್ರ ವಾಸಗೃಹವನ್ನು ತೆರಳಿದನು. ಆಲ್ಲಿ ಜರತ್ಕಾರುವು ಅಮೂಲ್ಯ ರತ್ನಗಳಿಂದ ಸಜ್ಜಿತ ಹಾಸಿಗೆಯ ಮೇಲೆ ತನ್ನ ಭಾರ್ಯೆಯೊಡನೆ ಮಲಗುತ್ತಿದ್ದನು. ಆ ಸತ್ತಮನು ತನ್ನ ಪತ್ನಿಯೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡನು:

“ಎಂದೂ ನನಗೆ ಅಪ್ರಿಯ ಕಾರ್ಯವನ್ನಾಗಲೀ ಮಾತನ್ನಾಗಲೀ ಮಾಡಬಾರದು ಆಡಬಾರದು. ಹಾಗೇನಾದರೂ ಮಾಡಿದರೆ ನಾನು ನಿನ್ನನ್ನು ಬಿಟ್ಟು ಹೋಗುತ್ತೇನೆ ಮತ್ತು ನಿನ್ನ ಈ ಮನೆಯಲ್ಲಿ ಎಂದೂ ವಾಸಿಸುವುದಿಲ್ಲ. ನನ್ನ ಈ ಮಾತುಗಳನ್ನು ಯಾವಾಗಲೂ ನಿನ್ನ ಮನಸ್ಸಿನಲ್ಲಿಟ್ಟಿಕೋ.”

ಅವನ ಮಾತುಗಳಿಂದ ಪರಮ ಸಂವಿಗ್ನಳಾದ ನಾಗಪತಿಯ ತಂಗಿಯು ಅತಿ ದುಃಖಸಮನ್ವಿತಳಾಗಿ

“ಹಾಗೆಯೇ ಆಗಲಿ”

ಎಂದು ವಚನವನ್ನಿತ್ತಳು. ಆ ಯಶಸ್ವಿನಿಯಾದರೂ ಶ್ವೇತಕಾಕೀಯ ಉಪಾಯಗಳಿಂದ ಎಷ್ಟೇ ಕಷ್ಟವಾದರೂ ತನ್ನ ಪತಿಗೆ ಪ್ರಿಯಕರವಾದುದನ್ನೇ ಮಾಡುತ್ತಿದ್ದಳು.

ಒಮ್ಮೆ ವಾಸುಕಿಯ ತಂಗಿಯು ಋತುಕಾಲದ ನಂತರ ಸ್ನಾನಮಾಡಿ ನ್ಯಾಯದಂತೆ ಮಹಾಮುನಿ ಪತಿಯ ಬಳಿ ಹೋದಳು. ಆಗ ಅವಳು ಗರ್ಭವತಿಯಾದಳು. ಅತ್ಯಂತ ತಪೋಬಲವನ್ನು ಹೊಂದಿ ಪ್ರಜ್ವಲ ಪ್ರಭೆಯಿಂದ ಕೂಡಿದ್ದ ಆ ಗರ್ಭವು ವೈಶ್ವಾನರನ ಸಮಾನ ಕಾಂತಿಯನ್ನು ಹೊಂದಿದ್ದು ಶುಕ್ಲಪಕ್ಷದ ಚಂದ್ರನಂತೆ ಬೆಳೆಯತೊಡಗಿತು. 

ಕೆಲವು ದಿನಗಳ ನಂತರ ಮಹಾತಪಸ್ವಿ ಜರತ್ಕಾರುವು ಆಯಾಸಗೊಂಡು ತನ್ನ ಪತ್ನಿಯ ತೊಡೆಯಮೇಲೆ ತಲೆಯನ್ನಿಟ್ಟು ನಿದ್ರಿಸುತ್ತಿದ್ದನು. ಈ ರೀತಿ ಆ ವಿಪ್ರೇಂದ್ರನು ಮಲಗಿರುವಾಗ ಸೂರ್ಯನು ಗಿರಿಗಳಲ್ಲಿ ಅಸ್ತಮನಾಗತೊಡಗಿದನು. ಹಗಲು ಕಳೆಯುತ್ತಾ ಬಂದಿರುವುದರಿಂದ ವಾಸುಕಿಯ ತಂಗಿ ಮನಸ್ವಿನಿಯು ಬ್ರಾಹ್ಮಣನ ಧರ್ಮಲೋಪವಾಗುವುದೆಂದು ಭೀತಳಾದಳು:

“ಈಗ ನಾನು ಏನು ಮಾಡಲಿ? ನನ್ನ ಪತಿಯನ್ನು ಎಚ್ಚರಿಸಲೇ ಅಥವಾ ಬೇಡವೇ? ಈ ಧರ್ಮಾತ್ಮನಿಗೆ ಅಪರಾಧವಾಗದ ರೀತಿಯಲ್ಲಿ ದುಃಖಶೀಲಳಾದ ನಾನು ಏನು ಮಾಡಲಿ? ಅವನು ಕುಪಿತನಾಗುತ್ತಾನೆ ಅಥವಾ ಆ ಧರ್ಮಶೀಲನು ಧರ್ಮಲೋಪನಾಗುತ್ತಾನೆ. ಆದರೆ ನನ್ನ ಪ್ರಕಾರ ಈ ಎರಡರಲ್ಲಿ ಧರ್ಮಲೋಪವೇ ದೊಡ್ಡ ಅಪರಾಧ. ಅವನನ್ನು ನಾನು ಎಬ್ಬಿಸಿದರೆ ನಿಶ್ಚಿತವಾಗಿಯೂ ಅವನು ಕೋಪಗೊಳ್ಳುತ್ತಾನೆ. ಇಲ್ಲವಾದರೆ ಸಂಧ್ಯಾವಂದನೆಯ ಸಮಯವು ಕಳೆದುಹೋದಮೇಲೆ ಅವನ ಧರ್ಮಲೋಪವಾಗುವುದೂ ನಿಶ್ಚಯವೇ.”

ಈ ರೀತಿ ಯೋಚಿಸಿದ ನಾಗಕನ್ಯೆ ಜರತ್ಕಾರುವು ದೀಪ್ತತಪಸ್ವಿ ಅಗ್ನಿಯಂತೆ ಮಲಗಿರುವ ಋಷಿಗೆ ಮಧುರ ಮತ್ತು ಶ್ಲಾಘನೀಯ ಮಾತುಗಳನ್ನಾಡಿದಳು:

“ಮಹಾಭಾಗ! ಎದ್ದೇಳು! ಸೂರ್ಯಸ್ತವಾಗುತ್ತಿದೆ. ನಿನ್ನ ವ್ರತನಿಯಮದಂತೆ ನೀರನ್ನು ಮುಟ್ಟಿ ಸಂಧ್ಯಾ ಉಪಾಸನೆಯನ್ನು ಮಾಡು. ಸಾಯಂಕಾಲದ ಅಗ್ನಿಹೋತ್ರದ ಮುಹೂರ್ತವು ಬಂದಿದೆ. ಪಶ್ಚಿಮ ದಿಕ್ಕಿನಲ್ಲಿ ರಮ್ಯ ಮತ್ತು ದಾರುಣ ಸಂಧ್ಯೆಯು ಆವರಿಸುತ್ತಿದೆ.”

ಹೀಗೆ ಕರೆಯಲ್ಪಟ್ಟ ಮಹಾತಪಸ್ವಿ ಭಗವಾನ್ ಜರತ್ಕಾರುವು ಕೋಪದಿಂದ ತುಟಿಗಳನ್ನು ನಡುಗಿಸುತ್ತಾ ತನ್ನ ಭಾರ್ಯೆಗೆ ಹೇಳಿದನು:

“ನಾಗಕನ್ಯೆ! ನಿನ್ನಿಂದ ನನ್ನ ಅಪಮಾನವಾಗಿದೆ. ನಿನ್ನೊಡನೆ ನಾನಿನ್ನು ವಾಸಿಸಲಾರೆ. ನಾನು ಎಲ್ಲಿಂದ ಬಂದಿದ್ದೆನೋ ಅಲ್ಲಿಗೆ ಹೋಗುತ್ತಿದ್ದೇನೆ. ನಾನು ಮಲಗಿರುವಾಗ ನಿರ್ದಿಷ್ಟ ವೇಳೆಯಲ್ಲಿಯೇ ಅಸ್ತವಾಗಲು ಸೂರ್ಯನಿಗೂ ಧೈರ್ಯವಿಲ್ಲ ಎಂದು ನನಗೆ ನಿಶ್ಚಯವಾಗಿಯೂ ತಿಳಿದಿದೆ. ಅಪಮಾನವನ್ನು ಹೊಂದಿದ ಯಾರೂ ಇರಲು ಬಯಸುವುದಿಲ್ಲ. ಹಾಗಿದ್ದಾಗ ಇನ್ನು ಧರ್ಮಶೀಲನಾದ ನನ್ನಂಥವನು ಹೇಗೆ ಇದ್ದಾನು?”

ತನ್ನ ಮನೆಯಲ್ಲಿ ಪತಿಯ ಈ ಹೃದಯಕಂಪನ ಮಾತುಗಳನ್ನು ಕೇಳಿದ ವಾಸುಕಿಯ ತಂಗಿ ಜರತ್ಕಾರುವು ಹೇಳಿದಳು:

“ನಿನಗೆ ಅವಮಾನಿಸಲು ನಿನ್ನನ್ನು ಎಬ್ಬಿಸಲಿಲ್ಲ. ವಿಪ್ರ! ನೀನು ಧರ್ಮಲೋಪನಾಗಬಾರದೆಂದು ನಾನು ಈ ರೀತಿ ಮಾಡಿದೆ.”

ಪತ್ನಿಯು ಹೀಗೆ ಹೇಳಲಾಗಿ ಮಹಾತಪಸ್ವಿ ಋಷಿ ಜರತ್ಕಾರುವು ಆ ನಾಗಕನ್ಯೆಯನ್ನು ತೊರೆಯುವ ಉದ್ದೇಶದಿಂದ ಕೋಪಸಮಾವಿಷ್ಟನಾಗಿ ಹೇಳಿದನು:

“ಭುಜಂಗಮೇ! ನಾನು ಎಂದೂ ಅಸತ್ಯವನ್ನು ನುಡಿದಿಲ್ಲ. ಆದುದರಿಂದ ನಾನು ಹೋಗುತ್ತಿದ್ದೇನೆ. ನಾವಿಬ್ಬರೂ ಮೊದಲೇ ಈ ಒಪ್ಪಂದವನ್ನು ಮಾಡಿಕೊಂಡಿದ್ದೆವು. ನಿನ್ನ ಜೊತೆ ನನ್ನ ಜೀವನವು ಸುಖಕರವಾಗಿತ್ತು. ನಾನು ಹೋದ ಬಳಿಕ ನಿನ್ನ ಅಣ್ಣನಿಗೆ ಭಗವಾನನು ಹೊರಟುಹೋದನೆಂದು ಹೇಳು. ನಾನು ಹೊರಟು ಹೋದ ಮೇಲೆ ನೀನು ನನಗಾಗಿ ಶೋಕಿಸಬಾರದು.”

ಇದನ್ನು ಕೇಳಿದ ಆ ಅನವಧ್ಯಾಂಗಿ ವರಾರೋಹೆ ಜರತ್ಕಾರುವು ಚಿಂತಶೋಕಪರಾಯಣಳಾಗಿ, ಬಾಷ್ಪಗದ್ಗದಳಾಗಿ, ಮುಖದ ಬಣ್ಣವನ್ನೇ ಕಳೆದುಕೊಂಡು ಕಣ್ಣಲ್ಲಿ ಕಣ್ಣೀರನ್ನು ತುಂಬಿಕೊಂಡು, ಅಂಜಲೀ ಬದ್ಧಳಾಗಿ, ಹೃದಯವು ಢವಢವಿಸುತ್ತಿದ್ದರೂ ಧೈರ್ಯತಾಳಿ ಜರತ್ಕಾರುವಿಗೆ ಹೇಳಿದಳು:

“ಧರ್ಮಜ್ಞ! ತಪ್ಪನ್ನೇನೂ ಮಾಡದಿದ್ದ ನನ್ನನ್ನು ಈ ರೀತಿ ಬಿಟ್ಟು ಹೋಗುವುದು ಸರಿಯಲ್ಲ. ಧರ್ಮದಲ್ಲಿ ನೆಲಸಿರುವ ನೀನು ಸದಾ ನಿನ್ನ ಪ್ರಿಯಹಿತ ನಿರತಳಾಗಿ ಧರ್ಮದಲ್ಲಿಯೇ ಇರುವ ನನ್ನನ್ನು ಬಿಟ್ಟುಹೋಗಬೇಡ. ಯಾವ ಕಾರಣಕ್ಕಾಗಿ ನನ್ನನ್ನು ನಿನಗೆ ಕೊಡಲಾಗಿತ್ತೋ ಅದು ಇನ್ನೂ ಪೂರ್ತಿಯಾಗಿಲ್ಲ. ನನ್ನನ್ನು ಮೂಢಳೆಂದು ತಿಳಿಯುವ ವಾಸುಕಿಗೆ ಏನು ಹೇಳಲಿ? ಮಾತೃಶಾಪಕ್ಕೊಳಗಾದ ನನ್ನ ಬಾಂಧವರು ಬಯಸುತ್ತಿರುವ ನಿನ್ನಿಂದ ನನ್ನಲ್ಲಿ ಹುಟ್ಟುವ ಮಗನು ಇನ್ನೂ ಕಾಣುತ್ತಿಲ್ಲ. ನಿನ್ನಿಂದ ಹುಟ್ಟುವ ಈ ಸಂತತಿಯಿಂದಲೇ ನನ್ನ ಬಾಂಧವರಿಗೆ ಮಂಗಳವಾಗುತ್ತದೆ. ಇದೇ ಉದ್ದೇಶದಿಂದ ನಿನ್ನೊಡನೆ ಕೂಡಿದುದನ್ನು ನಿಷ್ಫಲಗೊಳಿಸಬೇಡ. ಬಾಂಧವರ ಹಿತವನ್ನು ಬಯಸುವ ನನಗೆ ಕರುಣಿಸು. ನನಗೆ ಗರ್ಭವನ್ನು ನೀಡಿ ಇನ್ನೂ ಅದು ತೋರಿಸಿಕೊಳ್ಳದಿರುವಾಗಲೇ ಅನಪರಾಧಿಯಾದ ನನ್ನನ್ನು ಬಿಟ್ಟು ಹೇಗೆ ಹೋಗುತ್ತಿದ್ದೀಯೆ?”

ಇದನ್ನು ಕೇಳಿದ ತಪೋಧನ ಮುನಿ ಜರತ್ಕಾರುವು ಭಾರ್ಯೆಗೆ ಈ ಅನುರೂಪ ಮಾತನ್ನು ಹೇಳಿದನು:

“ಸುಭಗೇ! ನಿನ್ನ ಗರ್ಭದಲ್ಲಿ ವೈಶ್ವಾನರನಂತಿರುವ ವೇದವೇದಾಂಗ ಪಾರಂಗತ ಪರಮಧರ್ಮಾತ್ಮ ಋಷಿಯಿರುವನು.”

ಹೀಗೆ ಹೇಳಿ ಆ ಧರ್ಮಾತ್ಮ ಮಹಾನ್ ಋಷಿ ಜರತ್ಕಾರುವು ಉಗ್ರ ತಪಸ್ಸನ್ನು ಕೈಗೊಳ್ಳಲು ನಿರ್ಧರಿಸಿ ಹೊರಟುಹೋದನು.

ಪತಿಯು ಹೊರಟುಹೋದ ನಂತರ ಜರತ್ಕಾರುವು ತಕ್ಷಣವೇ ತನ್ನ ಅಣ್ಣನಲ್ಲಿಗೆ ಹೋಗಿ ನಡೆದದೆಲ್ಲವನ್ನೂ ವರದಿಮಾಡಿದಳು. ಈ ಮಹದಪ್ರಿಯ ಮಾತುಗಳನ್ನು ಕೇಳಿದ ಭುಜಗಶ್ರೇಷ್ಠನು ಸ್ವಯಂ ದೀನತರನಾಗಿ ದೀನಳಾಗಿದ್ದ ತಂಗಿಗೆ ಹೇಳಿದನು:

“ಭದ್ರೇ! ನಿನ್ನನ್ನು ಅವನಿಗೆ ಯಾವ ಕಾರಣಕ್ಕಾಗಿ ಕೊಟ್ಟಿದ್ದೆವೆಂದು ನಿನಗೆ ತಿಳಿದಿದೆ. ನಾಗಗಳ ಹಿತಕ್ಕೋಸ್ಕರವಾಗಿ ಅವನಿಂದ ನಿನ್ನಲ್ಲಿ ಪುತ್ರನಾಗಬೇಕಿತ್ತು. ಆ ವೀರ್ಯವಂತನು ಸರ್ಪಸತ್ರದಿಂದ ನಮ್ಮನ್ನೆಲ್ಲ ಮೋಕ್ಷಗೊಳಿಸುವನು ಎಂದು ಹಿಂದೆ ನಾನು ಸುರರೊಂದಿಗಿದ್ದಾಗ ಪಿತಾಮಹನು ಹೇಳಿದ್ದನು. ಆ ಮುನಿಸತ್ತಮನಿಂದ ನೀನು ಗರ್ಭವನ್ನು ಧರಿಸಿದ್ದೀಯಾ? ನಿನ್ನ ಈ ಮದುವೆಯು ನಿಷ್ಫಲವಾಗಬಾರದು ಎನ್ನುವುದೇ ನನ್ನ ಇಚ್ಛೆ. ಈ ವಿಷಯದ ಕುರಿತು ಈ ರೀತಿ ನಿನ್ನನ್ನು ಪ್ರಶ್ನಿಸುವುದು ನಿಜವಾಗಿಯೂ ಸರಿಯಲ್ಲ. ಆದರೂ ವಿಷಯವು ಮಹತ್ತರವಾದುರಿಂದ ನಿನ್ನಲ್ಲಿ ಈ ರೀತಿ ಕೇಳಬೇಕಾಗಿದೆ. ನಿನ್ನ ಅತಿತಪಸ್ವಿ ಪತಿಯು ಬೇಗ ಸಿಟ್ಟಿಗೇಳುತ್ತಾನೆ ಎನ್ನುವುದನ್ನು ನಾನು ತಿಳಿದಿದ್ದೇನೆ. ಆದುದರಿಂದ ಅವನ ಹಿಂದೆ ಹೋಗಲು ಆಗುವುದಿಲ್ಲ. ಅವನು ನನಗೆ ಶಾಪವನ್ನೂ ಕೊಡಬಲ್ಲ. ನಿನ್ನ ಮತ್ತು ನಿನ್ನ ಪತಿಯ ನಡುವೆ ನಡೆದುದೆಲ್ಲವನ್ನೂ ಹೇಳಿ ನನ್ನ ಹೃದಯದಲ್ಲಿ ಬಹಳ ಕಾಲದಿಂದ ಹುದುಗಿರುವ ಘೋರ ಶೂಲವನ್ನು ಕಿತ್ತೊಗೆ.”

ಈ ಮಾತುಗಳನ್ನು ಕೇಳಿದ ಜರತ್ಕಾರುವು ಸಂತಪ್ತ ಪನ್ನಗೇಶ್ವರ ವಾಸುಕಿಯನ್ನು ಸಂತವಿಸುತ್ತಾ ಉತ್ತರಿಸಿದಳು:

“ಮಗುವಿನ ಕುರಿತು ನಾನು ಕೇಳಿದಾಗ ಆ ಮಹಾತಪಸ್ವಿ ಮಹಾತ್ಮನು ನನ್ನ ಉದರವನ್ನು ತೋರಿಸಿ, ‘ಅಲ್ಲಿ ಇದೆ!’ಎಂದು ಹೇಳಿ ಹೊರಟು ಹೋದನು. ತಮಾಷೆಯಲ್ಲಿಯೂ ಅವನು ಹುಸಿಮಾತನ್ನಾಡಿದ್ದುದು ನೆನಪಿಲ್ಲ. ಹಾಗಿದ್ದಾಗ ಈ ಮಹತ್ತರ ವಿಷಯದ ಕುರಿತು ಅವನು ಏಕೆ ಸುಳ್ಳಾಡುತ್ತಾನೆ? ಅವನು ‘ಭುಜಂಗಮೇ! ನಿನ್ನ ಕಾರ್ಯದ ಕುರಿತು ಸಂತಾಪಪಡಬೇಡ. ಅಗ್ನಿ-ಸೂರ್ಯರ ಸಮಾನ ಪ್ರಭೆಯನ್ನುಳ್ಳ ಪುತ್ರನೋರ್ವನು ನಿನ್ನಲ್ಲಿ ಜನಿಸುತ್ತಾನೆ.’ ಅಣ್ಣ! ಹೀಗೆ ಹೇಳಿ ನನ್ನ ಪತಿಯು ತಪೋವನಕ್ಕೆ ಹೊರಟುಹೋದನು. ಆದುದರಿಂದ ನಿನ್ನ ಮನಸ್ಸಿನಲ್ಲಿರುವ ಪರಮ ದುಃಖ ವೇದನೆಯನ್ನು ತೆಗೆದುಹಾಕು.”

ಇದನ್ನು ಕೇಳಿದ ನಾಗೇಂದ್ರ ವಾಸುಕಿಯು ಪರಮ ಹರ್ಷಿತನಾಗಿ “ಹಾಗೆಯೇ ಆಗಲಿ” ಎಂದು ತಂಗಿಯ ಮಾತುಗಳನ್ನು ಸ್ವೀಕರಿಸಿದನು. ಆ ಪನ್ನಗೋತ್ತಮನು ತನ್ನ ಸೋದರಿಯನ್ನು ಸಂತವಿಸಿ, ಗೌರವಿಸಿ, ಉಡುಗೊರೆ, ಮತ್ತು ಇನ್ನೂ ಇತರ ಪೂಜಾ ವಸ್ತುಗಳಿಂದ ಸತ್ಕರಿಸಿದನು. ಅವಳಲ್ಲಿರುವ ರವಿಪ್ರಭ ಮಹಾತೇಜಸ್ವಿ ದ್ವಿಜಶ್ರೇಷ್ಠನು ಆಕಾಶದಲ್ಲಿ ಶುಕ್ಲಪಕ್ಷದ ಚಂದ್ರನಂತೆ ಬೆಳೆಯತೊಡಗಿದನು. ಸಮಯ ಪ್ರಾಪ್ತಿಯಾದಾಗ ನಾಗನ ಸಹೋದರಿಯು ದೇವಗರ್ಭದಂತೆ ಹೊಳೆಯುತ್ತಿದ್ದ ಪಿತೃ ಮತ್ತು ಮಾತೃ ಭಯಾಪಹ ಬ್ರಾಹ್ಮಣ ಕುಮಾರನಿಗೆ ಜನ್ಮವಿತ್ತಳು. ನಾಗರಾಜನ ಮನೆಯಲ್ಲಿಯೇ ಅವನು ಬೆಳೆದನು ಮತ್ತು ಚ್ಯವನಾತ್ಮಜ ಭಾರ್ಗವನಿಂದ ವೇದ-ವೇದಾಂಗಗಳನ್ನು ಕಲಿತನು. ಬಾಲಕನಾಗಿದ್ದರೂ ವ್ರತಗಳನ್ನು ಅನುಸರಿಸುತ್ತಿದ್ದ ಆ ಬುದ್ಧಿವಂತ ಸತ್ವಗುಣಾನ್ವಿತನು ಆಸ್ತೀಕ ಎನ್ನುವ ಹೆಸರಿನಿಂದ ಲೋಕಗಳಲ್ಲೆಲ್ಲಾ ಖ್ಯಾತನಾದನು. ಅವನು ಇನ್ನೂ ಗರ್ಭದಲ್ಲಿರುವಾಗ ಅವನ ತಂದೆಯು “ಅಸ್ತಿ” ಎಂದು ಹೇಳಿ ಹೊರಟು ಹೋಗಿದ್ದನು. ಆದುದರಿಂದಲೇ ಅವನು ಆಸ್ತೀಕ ಎಂಬ ಹೆಸರಿನಿಂದ ಕರೆಯಲ್ಪಟ್ಟನು. ಬಾಲಕನಾಗಿದ್ದರೂ ಧೃಢನಾಗಿದ್ದ ಅತಿ ಬುದ್ಧಿವಂತನಾಗಿದ್ದ ಅವನು ಪನ್ನಗರಾಜನ ಮನೆಯಲ್ಲಿ ಅತ್ಯಂತ ಜಾಗರೂಕತೆಯಿಂದ ರಕ್ಷಣೆ ಪಡೆದಿದ್ದನು. ಅವನು ಶೂಲಪಾಣಿ ಹಿರಣ್ಯ ದೇವೇಶ ಭಗವಂತನಂತೆ ತೋರುತ್ತಿದ್ದು ಆ ನಾಗಗಳಿಗೆಲ್ಲ ಸಂತಸವನ್ನು ನೀಡುತ್ತಾ ಬೆಳೆದನು.

ಪರಿಕ್ಷಿತ

ಬಹಳಷ್ಟು ಸಮಯವು ಕಳೆದನಂತರ, ಕಾಲ ಪ್ರಾಪ್ತವಾದ ಹಾಗೆ, ಕೌರವ ವಂಶದಲ್ಲಿ ಪರಿಕ್ಷಿತನೆಂದು ಖ್ಯಾತ ರಾಜನು ಜನಿಸಿದನು. ತನ್ನ ಪುರಾತನ ಪ್ರಪಿತಾಮಹ ಅರ್ಜುನನಂತೆ ಅವನು ಮಹಾಬಾಹುವೂ, ಭೂಮಂಡಲದ ಧನುರ್ಧರರಲ್ಲಿ ಶ್ರೇಷ್ಠನೂ ಮತ್ತು ಮೃಗಯಾಶೀಲನೂ ಆಗಿದ್ದನು. ಆ ಪೃಥಿವೀಪತಿಯು ಜಿಂಕೆ, ವರಾಹ, ಹಯೀನ, ಕಾಡೆಮ್ಮೆಗಳು ಮತ್ತು ಇತರ ಹಲವಾರು ವನ್ಯ ಮೃಗಗಳನ್ನು ಬೇಟೆಯಾಡುತ್ತಾ ಸಂಚರಿಸುತ್ತಿದ್ದನು. ಒಮ್ಮೆ ಒಂದು ಜಿಂಕೆಯನ್ನು ಬಾಣದಿಂದ ಹೊಡೆದ ಅವನು ತನ್ನ ಧನುಸ್ಸನ್ನು ಭುಜದ ಮೇಲೇರಿಸಿ ಅದರ ಹಿಂದೆ ಹೋಗುತ್ತಾ ದಟ್ಟ ವನವನ್ನು ಪ್ರವೇಶಿಸಿದನು. ಭಗವಾನ್ ರುದ್ರನು ಸ್ವರ್ಗಲೋಕದಲ್ಲಿ ಯಜ್ಞಮೃಗವನ್ನು ಅರಸಿದಂತೆ ಆ ಧನುಷ್ಪಾಣಿಯು ಅದನ್ನು ಅಲ್ಲಿ ಇಲ್ಲಿ ಅರಸ ತೊಡಗಿದನು. ಇದರ ಹಿಂದೆ ಅವನು ಹೊಡೆದ ಯಾವ ಮೃಗವೂ ಜೀವಂತವಾಗಿ ಹೋಗಿರಲಿಲ್ಲ. ಈಗ ಕಳೆದುಹೋದ ಆ ಮೃಗವು ರಾಜ ಪರೀಕ್ಷಿತನ ಸಾವನ್ನು ಸೂಚಿಸುವಂತಿತ್ತು. ಜಿಂಕೆಯನ್ನು ಹಿಂಬಾಲಿಸುತ್ತಾ ಬಹುದೂರ ಹೋದ ಮಹೀಪತಿಯು ಆಯಾಸಗೊಂಡು ಬಾಯಾರಿಕೆಯಿಂದ ಬಳಲಿ ಆ ವನದಲ್ಲಿ ಒಂದು ಗೋಶಾಲೆಯಲ್ಲಿ ಕರುಗಳು ಹಾಲು ಕುಡಿಯುವಾಗ ಅವರ ಬಾಯಿಯಿಂದ ಹೊರಚೆಲ್ಲುತ್ತಿದ್ದ ಹಾಲಿನ ನೊರೆಯನ್ನೇ ಕುಡಿಯುತ್ತಿದ್ದ ಓರ್ವ ಮುನಿಯನ್ನು ಕಂಡನು. ವೇಗದಿಂದ ಅವನ ಬಳಿ ಬಂದು, ಧನುಸ್ಸನ್ನು ಮೇಲೇರಿಸಿ, ಹಸಿವು ಬಾಯಾರಿಕೆಗಳಿಂದ ಬಳಲುತ್ತಿದ್ದ ರಾಜನು ಆ ಸಂಶಿತವ್ರತ ಮುನಿಯನ್ನು ಕೇಳಿದನು: “ಬ್ರಾಹ್ಮಣ! ನಾನು ಅಭಿಮನ್ಯುವಿನ ಮಗ ರಾಜ ಪರಿಕ್ಷಿತ. ನನ್ನಿಂದ ಹೊಡೆಯಲ್ಪಟ್ಟ ಜಿಂಕೆಯೊಂದು ಕಳೆದು ಹೋಗಿದೆ. ನೀನು ಅದು ಎಲ್ಲಿ ಹೋಯಿತೆಂದು ಕಂಡಿದ್ದೀಯಾ?” ಮೌನವ್ರತ ಪಾಲಿಸುತ್ತಿದ್ದ ಆ ಮುನಿಯು ಅವನಿಗೆ ಯಾವುದೇ ಉತ್ತರವನ್ನೂ ಕೊಡಲಿಲ್ಲ. ಇದರಿಂದ ಕ್ರೋಧಿತನಾದ ರಾಜನು ತನ್ನ ಧನುಸ್ಸಿನ ಕೊನೆಯಿಂದ ಸತ್ತ ಸರ್ಪವೊಂದನ್ನು ಎತ್ತಿ ಅವನ ಕೊರಳಲ್ಲಿ ಹಾಕಿದನು. ಆಗಲೂ ಕೂಡ ಅವನು ಒಳ್ಳೆಯ ಅಥವಾ ಕೆಟ್ಟ ಯಾವ ಮಾತನ್ನೂ ಆಡಲಿಲ್ಲ. ಋಷಿಯನ್ನು ಆ ಅವಸ್ಥೆಯಲ್ಲಿ ನೋಡಿದ ರಾಜನು ಕೋಪವನ್ನು ಬಿಟ್ಟು ಬೇಸರದಿಂದ ತನ್ನ ನಗರಕ್ಕೆ ತೆರಳಿದನು.

ಆ ಮುನಿಗೆ ಮಹಾ ತೇಜಸ್ವಿ, ಮಹಾತಪಸ್ವಿ, ಮಹಾ ಕ್ರೋಧಿ, ಮಹಾವ್ರತ ಮತ್ತು ಒಲಿಸಲು ದುಷ್ಕರ ಶೃಂಗಿ ಎಂಬ ಹೆಸರಿನ ತರುಣ ಮಗನಿದ್ದನು. ಆ ಸರ್ವಭೂತಹಿತರತನು ಕಾಲ ಕಾಲದಲ್ಲಿ ಸುಸಂಯಮನಾಗಿ ತನ್ನ ಆಸನದಲ್ಲಿ ಕುಳಿತುಕೊಂಡು ಪರಮೀಷಾನ ಬ್ರಹ್ಮದೇವನನ್ನು ಉಪಾಸಿಸುತ್ತಿದ್ದನು. ಬ್ರಹ್ಮನ ಅಪ್ಪಣೆಯಂತೆ ಅವನು ತನ್ನ ಮನೆಗೆ ಬಂದನು. ವಿಷಸಮಾನ ಅತಿಕೋಪವನ್ನು ಹೊಂದಿದ್ದ ಆ ಋಷಿಸುತನಿಗೆ ಇನ್ನೊಬ್ಬ ಋಷಿಯ ಮಗ ಕೃಶ ಎನ್ನುವ ಸಖನು ನಗುನಗುತ್ತಾ ಹಾಸ್ಯದಲ್ಲಿ ಹೇಳಿದನು:

“ಶೃಂಗಿ! ನಿನ್ನ ಗರ್ವವನ್ನು ಬಿಡು. ನೀನು ತಪಸ್ವಿಯೂ ತೇಜಸ್ವಿಯೂ ಆಗಿರಬಹುದು. ಆದರೆ ನಿನ್ನ ತಂದೆಯು ತನ್ನ ಹೆಗಲಮೇಲೆ ಒಂದು ಶವವನ್ನು ಹೊತ್ತಿದ್ದಾನೆ. ತಪಸ್ವಿಗಳೂ, ಸಿದ್ಧರೂ, ಬ್ರಹ್ಮವಿದರೂ ಆದ ನಮ್ಮಂತಹ ಋಷಿಪುತ್ರರಲ್ಲಿ ನೀನು ಯಾವ ವ್ಯವಹಾರವನ್ನೂ ಮಾಡಬೇಕಾಗಿಲ್ಲ. ನಿನ್ನ ತಂದೆಯು ಒಂದು ಶವವನ್ನು ಹೊತ್ತಿರುವುದನ್ನು ನೋಡಿದಾಗ ನಿನ್ನ ಪುರುಷಮಾನಿತ್ವ ಎಲ್ಲಿದೆ ಮತ್ತು ನಿನ್ನ ದರ್ಪದ ಮಾತುಗಳು ಎಲ್ಲಿ ಹೋಗುತ್ತವೆ?”

ಆ ತೇಜಸ್ವಿ ಶೃಂಗಿಯು ತನ್ನ ಗುರುವು ಒಂದು ಮೃತಶರೀರವನ್ನು ಧರಿಸಿದ್ದಾನೆ ಎಂದು ಕೇಳಿ ಕೋಪಸಮನ್ವಿತನಾಗಿ ಸಿಟ್ಟಿನಲ್ಲಿ ಉರಿದೆದ್ದನು. ಆಗ ಅವನು ಎಲ್ಲ ಮೃದು ಮಾತುಗಳನ್ನು ಬದಿಗೊತ್ತಿ ಕೃಶನಲ್ಲಿ

“ನನ್ನ ತಂದೆಯು ಇಂದು ಯಾವ ಕಾರಣಕ್ಕಾಗಿ ಮೃತಶರೀರವನ್ನು ಹೊತ್ತಿದ್ದಾನೆ?”

ಎಂದು ಕೇಳಿದನು. ಕೃಶನು ಹೇಳಿದನು:

“ಬೇಟೆಯಾಡುತ್ತಾ ಬಂದ ರಾಜಾ ಪರೀಕ್ಷಿತನು ಸತ್ತ ಒಂದು ಸರ್ಪವನ್ನು ನಿನ್ನ ತಂದೆಯ ಭುಜದ ಮೇಲೇರಿಸಿದನು.”

ಆಗ ಶೃಂಗಿಯು ಹೇಳಿದನು:

“ಆ ದುರಾತ್ಮ ರಾಜನಿಗೆ ನನ್ನ ತಂದೆಯು ಯಾವ ಅನಿಷ್ಟ ಕಾರ್ಯವನ್ನು ಮಾಡಿದನು? ಕೃಶ! ಅದನ್ನು ನನಗೆ ಹೇಳು ಮತ್ತು ನಂತರ ನನ್ನ ತಪೋಬಲವನ್ನು ನೋಡು.”

ಕೃಶನು ಹೇಳಿದನು:

“ಅಭಿಮನ್ಯುವಿನ ಮಗ ರಾಜಾ ಪರೀಕ್ಷಿತನು ತನ್ನ ಬಾಣದ ಹೊಡೆತ ತಿಂದು ಪಲಾಯನಗೈದ ಜಿಂಕೆಯೊಂದನ್ನು ಏಕಾಕಿಯಾಗಿ ಅರಸುತ್ತಾ ಬಂದನು. ಈ ಮಹಾವನದಲ್ಲಿ ಆ ಜಿಂಕೆಯನ್ನು ಕಾಣದೇ ಅದನ್ನು ಹುಡುಕುತ್ತಾ ಬರುತ್ತಿರುವಾಗ ನಿನ್ನ ತಂದೆಯನ್ನು ಕಂಡು ಅವನಲ್ಲಿ ಕೇಳಿದನು. ಹಸಿವು, ಬಾಯರಿಕೆ ಮತ್ತು ಆಯಾಸಗಳಿಂದ ಬಳಲಿದ ಅವನು ತನ್ನ ಸ್ಥಾನದಲ್ಲಿಯೇ ನಿಂತಿದ್ದ ನಿನ್ನ ತಂದೆಯನ್ನು ಕಳೆದುಹೋದ ಜಿಂಕೆಯ ಕುರಿತು ಮೇಲಿಂದ ಮೇಲೆ ಕೇಳಿದನು. ಆದರೆ ಮೌನವ್ರತ ಪಾಲಿಸುತ್ತಿದ್ದ ಅವನು ಉತ್ತರವನ್ನು ಕೊಡದೇ ಇದ್ದಾಗ ರಾಜನು ತನ್ನ ಧನುಸ್ಸಿನ ತುದಿಯಿಂದ ಸರ್ಪವೊಂದನ್ನು ಅವನ ಭುಜದ ಮೇಲೇರಿಸಿದನು. ಶೃಂಗಿ! ವ್ರತನಿರತ ನಿನ್ನ ತಂದೆಯು ಈಗಲೂ ಅದೇ ಅವಸ್ಥೆಯಲ್ಲಿ ಇದ್ದಾನೆ. ರಾಜನು ತನ್ನ ನಗರ ಹಸ್ತಿನಾಪುರಕ್ಕೆ ತೆರಳಿದ್ದಾನೆ.”

ಇದನ್ನು ಕೇಳಿದ ಋಷಿಪುತ್ರನು ಆಕಾಶದ ಕಂಬದಂತೆ ಸ್ತಬ್ಧನಾಗಿ ನಿಂತನು. ಕೋಪದಿಂದ ಅವನ ಕಣ್ಣುಗಳು ಕೆಂಪಾದವು ಮತ್ತು ಸಿಟ್ಟಿನಿಂದ ಭುಗಿಲೆಂದು ಉರಿದೆದ್ದನು. ಕೋಪಾವಿಷ್ಟನಾಗಿ ಕ್ರೋಧದ ವೇಗ ಬಲಗಳಿಂದ ಚೋದಿತನಾಗಿ ಆ ತೇಜಸ್ವಿಯು ನೀರನ್ನು ಮುಟ್ಟಿ ಆ ನೃಪತಿಗೆ ಶಾಪವನ್ನಿತ್ತನು:

“ವೃದ್ಧನೂ, ಕೃಶನೂ ಆದ ನನ್ನ ತಂದೆಯ ಭುಜಗಳ ಮೇಲೆ ಮೃತ ಸರ್ಪವನ್ನು ಹಾಕಿ ದ್ವಿಜನನ್ನು ಅಪಮಾನಿಸಿ ಕುರುಗಳ ಯಶಸ್ಸನ್ನು ಹಾಳುಮಾಡಿದ ಆ ರಾಜಕಿಲ್ಬಿಷಿ, ಪಾಪ ಮತಿಯು ಇಂದಿನಿಂದ ಏಳು ರಾತ್ರಿಯೊಳಗೆ ನನ್ನ ವಾಕ್ಬಲದಿಂದ ಪ್ರೇರಿತ ಅತಿವಿಷಸಮಾವಿತ ತಿಗ್ಮತೀಜಸ್ವಿ ಪನ್ನಗೋತ್ತಮ ತಕ್ಷಕನಿಂದ ಯಮಸದನಕ್ಕೆ ಒಯ್ಯಲ್ಪಡುತ್ತಾನೆ.”

ಸಿಟ್ಟಿನಲ್ಲಿ ಈ ರೀತಿ ರಾಜನನ್ನು ಶಪಿಸಿದ ಶೃಂಗಿಯು ಹಿಂದಿರುಗಿ ಸರ್ಪಶವವನ್ನು ಹೊತ್ತು ಗೋಶಾಲೆಯಲ್ಲಿ ಕುಳಿತಿದ್ದ ತನ್ನ ತಂದೆಯನ್ನು ನೋಡಿದನು. ತಂದೆಯ ಭುಜಗಳ ಮೇಲೆ ಇನ್ನೂ ಸರ್ಪದ ಶವವು ಇರುವುದನ್ನು ನೋಡಿ ಪುನಃ ಅವನು ಕ್ರೋಧದಿಂದ ಉರಿದೆದ್ದನು. ದುಃಖದಿಂದ ಕಣ್ಣೀರಿಡುತ್ತಾ ತಂದೆಗೆ ಹೇಳಿದನು:

“ತಂದೇ! ಆ ದುರಾತ್ಮನಿಂದ ನಿನಗಾದ ಅಪಮಾನವನ್ನು ಕೇಳಿದ ನಾನು ಕೋಪಗೊಂಡು ಆ ರಾಜ ಪರಿಕ್ಷಿತನಿಗೆ ಶಾಪವನ್ನು ಕೊಟ್ಟಿದ್ದೇನೆ. ಆ ಕುರುಕುಲಾಧಮ ನೃಪನು ನನ್ನ ಈ ಉಗ್ರ ಶಾಪಕ್ಕೆ ಅರ್ಹನಾಗಿದ್ದಾನೆ. ಇಂದಿನಿಂದ ಏಳು ದಿನಗಳಲ್ಲಿ ಪನ್ನಗೋತ್ತಮ ತಕ್ಷಕನು ಆ ಪಾಪಿಯನ್ನು ವೈವಸ್ವತನ ಪರಮದಾರುಣ ಭವನಕ್ಕೆ ಕರೆದೊಯ್ಯುತ್ತಾನೆ.”

ಆಗ ಆ ಕೋಪಸಮನ್ವಿತ ಬ್ರಾಹ್ಮಣನಿಗೆ ಅವನ ತಂದೆಯು ಹೇಳಿದನು:

“ನನ್ನ ಮಗನೇ! ನೀನು ಮಾಡಿದ ಕೆಲಸ ನನಗೆ ಇಷ್ಟವಾಗಲಿಲ್ಲ. ಧರ್ಮತಪಸ್ವಿಗಳಿಗೆ ಇದು ತಕ್ಕುದಲ್ಲ. ನಾವು ಆ ನರೇಂದ್ರನ ಗಡಿಯೊಳಗೇ ವಾಸಿಸುತ್ತಿದ್ದೇವೆ. ಅವನು ನ್ಯಾಯದಿಂದ ನಮ್ಮನ್ನು ರಕ್ಷಿಸುತ್ತಿದ್ದಾನೆ, ನಾವು ಅವನಿಗೆ ಕೆಟ್ಟದ್ದನ್ನು ಯೋಚಿಸಬಾರದಿತ್ತು. ವರ್ತಮಾನದಲ್ಲಿರುವ ರಾಜನನ್ನು ನಮ್ಮಂಥವರು ಸರ್ವಥಾ ಕ್ಷಮಿಸಬೇಕು. ಧರ್ಮವನ್ನು ನಾಶಪಡಿಸಿದರೆ ಧರ್ಮವೇ ನಮ್ಮನ್ನು ನಾಶಪಡಿಸುತ್ತದೆ. ಒಂದುವೇಳೆ ರಾಜನು ನಮ್ಮನ್ನು ರಕ್ಷಿಸುವುದಿಲ್ಲವಾದರೆ ನಾವು ಹಲವಾರು ಮಹತ್ತರ ಪೀಡೆಗಳನ್ನು ಅನುಭವಿಸಬೇಕಾಗುತ್ತದೆ. ಇಷ್ಟೊಂದು ಸುಖದಿಂದ ನಾವು ಧರ್ಮದಲ್ಲಿ ನಡೆಯಲು ಶಕ್ಯವಾಗುತ್ತಿರಲಿಲ್ಲ. ರಾಜನಿಂದ ರಕ್ಷಣೆಯನ್ನು ಪಡೆದ ನಾವು ಶಾಸ್ತ್ರದೃಷ್ಟಿಯಲ್ಲಿ ಜೀವಿಸಿ ವಿಪುಲ ಧರ್ಮವನ್ನು ಗಳಿಸುತ್ತೇವೆ ಮತ್ತು ಅದರಲ್ಲಿನ ಒಂದು ಅಂಶವು ಅವನಿಗೂ ಸೇರುತ್ತದೆ. ವಿಶೇಷವಾಗಿ ಪರಿಕ್ಷಿತನು ತನ್ನ ಪ್ರಪಿತಾಮಹನಂತೆ ರಾಜನಾದವನು ತನ್ನ ಪ್ರಜೆಗಳನ್ನು ಹೇಗೆ ರಕ್ಷಿಸಬೇಕೋ ಹಾಗೆ ನಮ್ಮನ್ನೂ ರಕ್ಷಿಸುತ್ತಿದ್ದಾನೆ. ಬಾಯಾರಿಕೆ ಆಯಾಸಗಳಿಂದ ಬಳಲಿದ ಆ ತಪಸ್ವಿ ರಾಜನಿಗೆ ನಾನು ಈ ವ್ರತವನ್ನು ಮಾಡುತ್ತಿದ್ದೇನೆ ಎಂದು ಗೊತ್ತಾಗಲಿಲ್ಲ ಎನ್ನುವುದು ಅಸಂಶಯವೇ ಸರಿ. ಆದುದರಿಂದ ಬಾಲಕನಾದ ನೀನು ಆತುರದಲ್ಲಿ ಮಾಡಿದ ಈ ಕೆಲಸವು ದುಷ್ಕೃತವಾದದ್ದು. ಆ ನೃಪನು ನಮ್ಮಿಂದ ಸರ್ವಥಾ ಈ ಶಾಪವನ್ನು ಪಡೆಯಲು ಅರ್ಹನಲ್ಲ.”

ಶೃಂಗಿಯು ಹೇಳಿದನು:

“ತಂದೆ! ನಾನು ಮಾಡಿದ ಕೆಲಸವು ಆತುರದಲ್ಲಿದ್ದಿರಬಹುದು ಅಥವಾ ಕೆಟ್ಟದ್ದಾಗಿರಬಹುದು. ಅದು ಪ್ರಿಯವಾಗಿರಲಿ ಅಥವಾ ಅಪ್ರಿಯವಾಗಿರಲಿ ನಾನು ಆಡಿದ ಮಾತು ಸುಳ್ಳಾಗಲಾರದು. ನಾನು ನಿನಗೆ ಹೇಳುತ್ತೇನೆ, ಇದು ಅನ್ಯಥಾ ಅಗುವುದಿಲ್ಲ. ಶಾಪ ಕೊಡುವಾಗ ಬಿಡು, ಹಾಸ್ಯದಲ್ಲಿಯೂ ನಾನು ಸುಳ್ಳನ್ನು ಹೇಳುವುದಿಲ್ಲ.”

ಶಮೀಕನು ಹೇಳಿದನು:

“ಪುತ್ರ! ನೀನು ಉಗ್ರಪ್ರಭಾವಿ ಮತ್ತು ಸತ್ಯವಾದಿ ಎನ್ನುವುದನ್ನು ನಾನು ತಿಳಿದಿದ್ದೇನೆ. ಈ ಹಿಂದೆ ನೀನು ಅಸತ್ಯವನ್ನು ನುಡಿಯಲೇ ಇಲ್ಲ ಮತ್ತು ಇದು ಸುಳ್ಳಾಗುವುದೇ ಇಲ್ಲ. ಆದರೆ ವಯಸ್ಕನಾದರೂ ಸದ್ಗುಣಸಂಯುಕ್ತನಾಗಿ ಮಹಾ ಯಶಸ್ಸನ್ನು ಹೊಂದಬೇಕೆಂದು ಮಗನಿಗೆ ತಂದೆಯು ಸತತ ಸಲಹೆಗಳನ್ನು ಕೊಡುತ್ತಿರಬೇಕು. ನೀನಾದರೂ ಇನ್ನೂ ಬಾಲಕ. ನಿನಗಿಷ್ಟು ಬೇಕಾಗಿರಲಿಕ್ಕಿಲ್ಲ. ನೀನು ನಿನ್ನ ತಪಸ್ಸಿನಿಂದ ಪ್ರಭಾವಿತನಾಗಿದ್ದೀಯೆ. ತೇಜಸ್ಸು ವೃದ್ಧಿಯಾದಂತೆ ಕೋಪವೂ ಅತೀವವಾಗುತ್ತದೆ. ನೀನು ನನ್ನ ಮಗ ಮತ್ತು ಇನ್ನೂ ಬಾಲಕನೆಂದು ತಿಳಿದು, ನೀನು ದುಡುಕುವುದನ್ನು ಕಂಡು ನಿನಗೆ ಸಲಹೆ ನೀಡಬೇಕೆಂದು ತೋರುತ್ತಿದೆ. ನೀನು ಶಮಯುತನಾಗಿ ವನದಲ್ಲಿರುವ ಆಹಾರಗಳನ್ನು ಸೇವಿಸು. ಈ ಕ್ರೋಧವನ್ನು ತೊರೆದು ಧರ್ಮವನ್ನು ತೊರೆಯದೇ ನಡೆದುಕೋ. ಯತಿಗಳು ಬಹು ಕಷ್ಟ ಪಟ್ಟು ಪಡೆದ ಧರ್ಮವನ್ನು ಕ್ರೋಧವು ನಾಶಮಾಡುತ್ತದೆ. ಧರ್ಮವಿಹೀನರಿಗೆ ಅವರ ಮಾರ್ಗದ ಗುರಿಯೇ ತಿಳಿಯುವುದಿಲ್ಲ. ಕ್ಷಮಿಸುವ ಯತಿಗಳಿಗೆ ಶಾಂತಿಯೇ ಸಿದ್ಧಕಾರಕವು. ಕ್ಷಮಾವಂತರಿಗೆ ಈ ಲೋಕ ಮತ್ತು ಪರಲೋಕ ಎರಡರಲ್ಲಿಯೂ ಒಳ್ಳೆಯದಾಗುತ್ತದೆ. ಆದುದರಿಂದ ನೀನು ಸತತವೂ ಕ್ಷಮಾಶೀಲನಾಗಿ ಮತ್ತು ಜಿತೇಂದ್ರಿಯನಾಗಿ ನಡೆದುಕೊಳ್ಳಬೇಕು. ಬ್ರಾಹ್ಮಣರೂ ಪಡೆಯಲಸಾಧ್ಯವಾದ ಲೋಕವನ್ನು ಕ್ಷಮೆಯಿಂದಲೇ ಪಡೆಯುತ್ತೀಯೆ. ಶಾಂತಿಮಾರ್ಗವನ್ನು ಆರಿಸಿದ ನಾನು ನನಗೆ ಶಕ್ಯವಾದುದನ್ನು ಮಾಡುತ್ತೇನೆ. ನೃಪನಿಗೆ ನಾನು ಈ ಸಂದೇಶವನ್ನು ಕಳುಹಿಸುತ್ತೇನೆ: ‘ರಾಜನ್! ನೀನು ನನಗೆ ಮಾಡಿದ ಅಪಮಾನವನ್ನು ನೋಡಿ ಕೋಪಗೊಂಡ, ಬುದ್ಧಿಯು ಇನ್ನೂ ಬೆಳೆಯದ ಬಾಲಕ ನನ್ನ ಪುತ್ರನಿಂದ ನೀನು ಶಪಿಸಲ್ಪಟ್ಟಿದ್ದೀಯೆ.’”

ಆ ಸುವ್ರತ ದಯಾವಂತ ಮಹಾತಪಸ್ವಿಯು ತನ್ನ ಶಿಷ್ಯನೊಬ್ಬನಿಗೆ ಈ ರೀತಿಯ ಆದೇಶವನ್ನಿತ್ತು ನೃಪತಿ ಪರಿಕ್ಷಿತನ ಬಳಿ ಕಳುಹಿಸಿದನು. ಕುಶಲಪ್ರಶ್ನೆ ಮತ್ತು ಕಾರ್ಯ ವೃತ್ತಾಂತಗಳನ್ನೊಳಗೊಂಡ ಸಂದೇಶದೊಂದಿಗೆ ಶೀಲವಂತನಾದ ಗೌರಮುಖ ಎಂಬ ಹೆಸರಿನ ಶಿಷ್ಯನನ್ನು ಕಳುಹಿಸಿದನು. ಅವನು ಹೊರಟು ಶೀಘ್ರವಾಗಿ ಕುರುವರ್ಧಕ ನರೇಂದ್ರನ ಭವನವನ್ನು ಪ್ರವೇಶಿಸಿ ದ್ವಾರಪಾಲಕರ ಮೂಲಕ ಪೂರ್ವ ಸಂದೇಶವನ್ನು ಕಳುಹಿಸಿದನು. ನರೇಂದ್ರನಿಂದ ಸತ್ಕರಿಸಲ್ಪಟ್ಟ ದ್ವಿಜ ಗೌರಮುಖನು ಸ್ವಲ್ಪ ವಿಶ್ರಾಂತಿಯನ್ನು ಪಡೆದು ಶಮೀಕನ ಆ ಘೋರ ಮಾತುಗಳನ್ನು ಇದ್ದಹಾಗೆ ಏನನ್ನೂ ಬಿಡದೇ ಸರ್ವವನ್ನು ಮಂತ್ರಿಗಳ ಸನ್ನಿಧಿಯಲ್ಲಿ ರಾಜನಿಗೆ ಹೇಳಿದನು:

“ರಾಜೇಂದ್ರ! ನಿನ್ನ ರಾಜ್ಯದಲ್ಲಿ ಶಮೀಕ ಎಂಬ ಹೆಸರಿನ ಪರಮ ಧರ್ಮಾತ್ಮ, ತನ್ನ ಭಾವೋದ್ವೇಗಗಳನ್ನು ಹಿಡಿತದಲ್ಲಿಟ್ಟುಕೊಂಡ, ಶಾಂತ ಮಹಾ ತಪಸ್ವಿ ಋಶಿಯು ವಾಸಿಸುತ್ತಿದ್ದಾನೆ. ಅವನ ಭುಜಗಳ ಮೇಲೆ ನೀನು ಧನುಸ್ಸಿನ ತುದಿಯಿಂದ ಸತ್ತುಹೋಗಿದ್ದ ಒಂದು ಸರ್ಪವನ್ನು ಏರಿಸಿದ್ದೆ. ಅವನು ಈ ಕಾರ್ಯಗೈದ ನಿನ್ನನ್ನು ಕ್ಷಮಿಸಿದ್ದರೂ ಅವನ ಮಗನು ನಿನ್ನನ್ನು ಕ್ಷಮಿಸಲಿಲ್ಲ. ಅವನ ತಂದೆಗೆ ತಿಳಿಸದೆಯೇ ಅವನು ಮುಂದಿನ ಏಳು ರಾತ್ರಿಗಳಲ್ಲಿ ತಕ್ಷಕನಿಂದ ನಿನ್ನ ಮೃತ್ಯುವಾಗುತ್ತದೆ ಎಂದು ಶಪಿಸಿದ್ದಾನೆ. ನಿನ್ನ ರಕ್ಷಣೆಯನ್ನು ಮಾಡು ಎಂದು ಪುನಃ ಪುನಃ ಕೇಳಿಕೊಂಡರೂ ಅವನ ಈ ಮಾತುಗಳನ್ನು ಯಾರಿಂದಲೂ ಸುಳ್ಳಾಗಿಸಲು ಸಾಧ್ಯವಿಲ್ಲ. ತನ್ನ ಕೋಪಸಮನ್ವಿತ ಪುತ್ರನನ್ನು ಸಂಯಮಿಸಲು ಅಶಕ್ತನಾದ ಅವನು ನಿನ್ನ ಹಿತವನ್ನೇ ಬಯಸಿ ನನ್ನನ್ನು ನಿನ್ನಲ್ಲಿಗೆ ಕಳುಹಿಸಿದ್ದಾನೆ.”

ಈ ರೀತಿಯ ಘೋರ ಮಾತುಗಳನ್ನು ಕೇಳಿದ ಕುರುನಂದನ ಮಹಾತಪಸ್ವಿ ರಾಜನು ತಾನು ಮಾಡಿದ ಕೆಲಸಕ್ಕಾಗಿ ಬಹಳಷ್ಟು ನೊಂದನು. ಅಂದು ಮುನಿವರನು ಮೌನವ್ರತವನ್ನು ಪಾಲಿಸುತ್ತಿದ್ದನೆಂದು ಕೇಳಿ ರಾಜನು ಇನ್ನೂ ಹೆಚ್ಚು ಶೋಕಸಂತಪ್ತನಾದನು. ತನ್ನ ಮೇಲೆ ಶಮೀಕನು ತೋರಿದ ಅನುಕಂಪವನ್ನು ಮತ್ತು ಅಂದು ತಾನು ಆ ಮುನಿಗೆ ಮಾಡಿದ ಪಾಪ ಕೃತ್ಯವನ್ನು ನೆನೆಸಿಕೊಂಡು ರಾಜನು ಪರಿತಾಪಗೊಂಡನು. ಅಮರನಂತೆ ತೋರುತ್ತಿದ್ದ ಆ ರಾಜನು ತಾನು ಗೈದ ಕರ್ಮದ ಕುರಿತು ದುಃಖಿಸುವಷ್ಟು ತನ್ನ ಮೃತ್ಯುವಿನ ಕುರಿತು ಕೇಳಿದುದಕ್ಕೆ ಶೋಕಿಸಲಿಲ್ಲ.

“ಭಗವಾನ್ ಮುನಿಯು ನನಗೆ ತೋರಿಸಿದ ದಯೆಯು ನನಗೆ ಪ್ರಸಾದವಾಗಲಿ”

ಎಂದು ಹೇಳಿ ರಾಜನು ಗೌರಮುಖನನ್ನು ಕಳುಹಿಸಿಕೊಟ್ಟನು. ಗೌರಮುಖನು ಹೊರಟುಹೋದೊಡನೆಯೇ ರಾಜನು ಸಂವಿಗ್ನ ಮನಸ್ಕನಾಗಿ ಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿದನು. ಮಂತ್ರಿಗಳೊಂದಿಗೆ ಸಮಾಲೋಚಿಸಿ ಒಂದು ಸ್ತಂಭದಮೇಲೆ ಸುರಕ್ಷಿತ ಭವನವನ್ನು ಕಟ್ಟಲು ನಿಶ್ಚಯಿಸಿದನು. ತನ್ನ ರಕ್ಷಣೆಗೆಂದು ಸುತ್ತಲೂ ವೈದ್ಯರು, ಔಷಧಗಳು, ಬ್ರಾಹ್ಮಣರು ಮತ್ತು ಸಿದ್ಧಮಂತ್ರಿಗಳನ್ನು ಇರಿಸಿದನು. ಈ ರೀತಿ ಎಲ್ಲ ಕಡೆಯಿಂದಲೂ ರಕ್ಷಣೆಯನ್ನು ಪಡೆದು ಅವನು ಅಲ್ಲಿಯೇ ಎಲ್ಲ ಮಂತ್ರಿಗಳು ಮತ್ತು ಧರ್ಮಜ್ಞರಿಂದ ಸುತ್ತುವರೆಯಲ್ಪಟ್ಟು ರಾಜಕಾರ್ಯಗಳನ್ನು ನೆರವೇರಿಸುತ್ತಿದ್ದನು.

ಆ ಏಳನೆಯು ದಿನವು ಪ್ರಾಪ್ತವಾದಾಗ ದ್ವಿಜಸತ್ತಮನೂ ವಿದ್ವಾಂಸನೂ ಆದ ಕಾಶ್ಯಪನೋರ್ವನು ರಾಜನಿಗೆ ಚಿಕಿತ್ಸೆಕೊಡುವ ಉದ್ದೇಶದಿಂದ ಬರುತ್ತಿದ್ದನು. ಪನ್ನಗಶ್ರೇಷ್ಠ ತಕ್ಷಕನು ಆ ರಾಜಸತ್ತಮನನ್ನು ಯಮಸಾದನಕ್ಕೆ ಒಯ್ಯುತ್ತಾನೆ ಎನ್ನುವುದನ್ನು ಮತ್ತು ಅಲ್ಲಿಯವರೆಗೆ ನಡೆದುದೆಲ್ಲವನ್ನೂ ಅವನು ಕೇಳಿದ್ದನು. ಪನ್ನಗೇಂದ್ರನು ಕಚ್ಚಿದಾಗ ಅವನನ್ನು ನಾನು ಗುಣಪಡಿಸುತ್ತೇನೆ ಮತ್ತು ಇದರಿಂದ ನಾನು ಧರ್ಮ ಮತ್ತು ಅರ್ಥ ಇವೆರಡನ್ನೂ ಗಳಿಸಬಲ್ಲೆ ಎಂದು ಅವನು ಯೋಚಿಸಿದ್ದನು. ಏಕಮನಸ್ಕನಾಗಿ ಹೋಗುತ್ತಿದ್ದ ಕಾಶ್ಯಪನನ್ನು ನೋಡಿದ ನಾಗೇಂದ್ರ ತಕ್ಷಕನು ಓರ್ವ ಬ್ರಾಹ್ಮಣನ ರೂಪತಾಳಿ ಅವನ ಎದುರು ಬಂದನು. ಪನ್ನಗೇಂದ್ರನು ಮುನಿಪುಂಗವ ಕಾಶ್ಯಪನಿಗೆ ಕೇಳಿದನು:

“ಇಷ್ಟೊಂದು ವೇಗದಲ್ಲಿ ಎಲ್ಲಿಗೆ ಹೋಗುತ್ತಿರುವೆ ಮತ್ತು ಅಲ್ಲಿ ಹೋಗಿ ಏನು ಮಾಡುತ್ತೀಯೆ?”

ಆಗ ಕಾಶ್ಯಪನು ಹೇಳಿದನು:

“ಕುರುಕುಲೋತ್ಪನ್ನ ಅರಿಂದಮ ನೃಪ ಪರಿಕ್ಷಿತನನ್ನು ಇಂದು ಪನ್ನಗಶ್ರೇಷ್ಠ ತಕ್ಷಕನು ಕಚ್ಚಲಿದ್ದಾನೆ. ಸೌಮ್ಯ! ಅಗ್ನಿಸಮಾನ ತೇಜಸ್ಸನ್ನುಳ್ಳ ಪನ್ನಗೇಂದ್ರನಿಂದ ಕಚ್ಚಲ್ಪಡುವ ಪಾಂಡವರ ಕುಲಕರ, ಅಮಿತತೇಜಸ ರಾಜನನ್ನು ಉಳಿಸಲೋಸುಗ ನಾನು ಈಗ ಅವಸರದಲ್ಲಿ ಹೋಗುತ್ತಿದ್ದೇನೆ.”

ತಕ್ಷಕನು ಹೇಳಿದನು:

“ಬ್ರಾಹ್ಮಣ! ಆ ಮಹೀಪತಿಯನ್ನು ಸಾಯಿಸುವ ತಕ್ಷಕನೇ ನಾನು. ಹಿಂದಿರುಗು. ನನ್ನಿಂದ ಕಚ್ಚಲ್ಪಟ್ಟವರಿಗೆ ನೀನು ಚಿಕಿತ್ಸೆ ನೀಡಲಾರೆ.”

ಕಾಶ್ಯಪನು ಹೇಳಿದನು:

“ನಾಗ! ವಿದ್ಯಾಬಲನಾದ ನಾನು ನೀನು ಕಚ್ಚುವ ಆ ನೃಪತಿಗೆ ಉಪಚಾರ ನೀಡಬಲ್ಲೆ ಎಂದು ನನ್ನ ಧೃಢ ನಂಬಿಕೆ.”

ತಕ್ಷಕನು ಹೇಳಿದನು:

“ಕಾಶ್ಯಪ! ನನ್ನಿಂದ ಕಚ್ಚಲ್ಪಟ್ಟ ಯಾರನ್ನೂ ನೀನು ಗುಣಪಡಿಸಬಲ್ಲೆಯೆಂದಾದರೆ ನಾನು ಕಚ್ಚುವ ಈ ವೃಕ್ಷವನ್ನು ಪುನರ್ಜೀವಗೊಳಿಸು. ನಿನ್ನ ಕಣ್ಣೆದಿರೇ ಈ ಆಲದ ಮರವನ್ನು ಸುಟ್ಟು ಭಸ್ಮಮಾಡುತ್ತೇನೆ. ಆಗ ನಿನ್ನ ವಿಶೇಷ ಮಂತ್ರಬಲವನ್ನು ತೋರಿಸು.”

ಕಾಶ್ಯಪನು ಹೇಳಿದನು:

“ನಾಗೇಂದ್ರ! ನಿನಗೆ ಇಷ್ಟವಾದರೆ ಈ ವೃಕ್ಷವನ್ನು ಕಚ್ಚು. ಭುಜಂಗಮ! ನೀನು ನೋಡುತ್ತಿದ್ದ ಹಾಗೆಯೇ ಅದನ್ನು ನಾನು ಬದುಕಿಸುತ್ತೇನೆ.”

ಮಹಾತ್ಮ ಕಾಶ್ಯಪನಿಂದ ಹೀಗೆ ಹೇಳಲ್ಪಟ್ಟ ನಾಗೇಂದ್ರ ಪನ್ನಗೋತ್ತಮನು ಅಲ್ಲಿದ್ದ ನ್ಯಗ್ರೋಧ ವೃಕ್ಷವನ್ನು ಕಚ್ಚಿದನು. ಆ ಮಹಾದ್ಯುತಿಯಿಂದ ಕಚ್ಚಲ್ಪಟ್ಟ ವೃಕ್ಷವು ವಿಷವನ್ನುಂಡು ಎಲ್ಲಾ ಕಡೆಯಿಂದಲೂ ಸುಟ್ಟು ಉರಿಯತೊಡಗಿತು. ಆ ಮರವನ್ನು ಸುಟ್ಟುಹಾಕಿದ ನಾಗನು ಕಾಶ್ಯಪನಿಗೆ ಪುನಃ ಹೇಳಿದನು:

“ದ್ವಿಜಶ್ರೇಷ್ಠ! ಈ ವನಸ್ಪತಿಯನ್ನು ಜೀವಗೊಳಿಸಲು ನಿನ್ನ ಪ್ರಯತ್ನ ಮಾಡು.”

ಪನ್ನಗೇಂದ್ರನ ತೇಜಸ್ಸಿನಿಂದ ಭಸ್ಮೀಭೂತ ಆ ವೃಕ್ಷದ ಎಲ್ಲ ಭಸ್ಮವನ್ನು ತೆಗೆದುಕೊಂಡು ಕಾಶ್ಯಪನು ಈ ವಾಕ್ಯಗಳನ್ನು ಹೇಳಿದನು:

“ಪನ್ನಗೇಂದ್ರ! ನೋಡು! ನನ್ನ ವಿದ್ಯಾಬಲದಿಂದ ಈ ವನಸ್ಪತಿಯನ್ನು ಈಗ ಸಜೀವಗೊಳಿಸುತ್ತೇನೆ. ನೋಡುತ್ತಿರು ಭುಜಂಗಮ!”

ಆಗ ಆ ಭಗವಾನ್ ವಿದ್ವಾನ್ ದ್ವಿಜಸತ್ತಮ ಕಾಶ್ಯಪನು ಭಸ್ಮದ ರಾಶಿಯಾಗಿದ್ದ ವೃಕ್ಷವನ್ನು ತನ್ನ ವಿದ್ಯೆಯಿಂದ ಸಜೀವಗೊಳಿಸಿದನು. ಮೊದಲು ಅವನು ಅಂಕುರವನ್ನು ಮಾಡಿದನು, ಅದಕ್ಕೆ ಎರಡು ಎಲೆಗಳನ್ನಿತ್ತನು, ಮತ್ತು ಪಲಾಶ ರೆಂಬೆಗಳನ್ನಿತ್ತು ಪುನಃ ಅದನ್ನು ಮೊದಲಿನ ಮರದಂತೆಯೇ ಮಾಡಿದನು. ಮಹಾತ್ಮ ಕಾಶ್ಯಪನಿಂದ ಜೀವಿತಗೊಂಡ ಆ ವೃಕ್ಷವನ್ನು ನೋಡಿದ ತಕ್ಷಕನು ಹೇಳಿದನು:

“ಬ್ರಾಹ್ಮಣ! ನಿನ್ನ ಈ ಕೃತಿಯು ಅತ್ಯದ್ಭುತವೇ ಸರಿ. ನೀನು ನನ್ನ ಈ ವಿಷ ಅಥವಾ ಇನ್ನ್ಯಾವುದೂ ವಿಷವನ್ನು ನಾಶಪಡಿಸಬಲ್ಲೆ. ನೀನು ಹೋಗುತ್ತಿರುವಲ್ಲಿ ಎಷ್ಟು ಸಂಪತ್ತನ್ನು ಅಪೇಕ್ಷಿಸುತ್ತಿದ್ದೀಯೆ? ನೃಪೋತ್ತಮನಿಂದ ನೀನು ಬಯಸುವ ಪರಿಹಾರವನ್ನು ಎಷ್ಟು ಕಷ್ಟವಾದರೂ ನಾನೇ ನಿನಗೆ ಕೊಡುತ್ತೇನೆ. ಬ್ರಾಹ್ಮಣನ ಶಾಪಕ್ಕೊಳಗಾದ ಕ್ಷೀಣಾಯುಷಿ ಆ ನರಾಧಿಪನನ್ನು ಉಳಿಸುವ ನಿನ್ನ ಪ್ರಯತ್ನ ಯಶಸ್ವಿಯಾಗುವುದು ಸಂಶಯವೇ. ಅದರಿಂದ ಮೂರೂ ಲೋಕಗಳಲ್ಲಿ ವಿಶೃತ ದೇದೀಪ್ಯಮಾನ ನಿನ್ನ ಈ ಯಶಸ್ಸು ಸೂರ್ಯನಕಿರಣಗಳನ್ನು ಕಿತ್ತುಕೊಂಡರೆ ಹೇಗೋ ಹಾಗೆ ನಂದಿಹೋಗುತ್ತದೆ.”

ಕಾಶ್ಯಪನು ಹೇಳಿದನು:

“ಹಣಕ್ಕೋಸ್ಕರವೇ ನಾನು ಅಲ್ಲಿಗೆ ಹೋಗುತ್ತಿದ್ದೇನೆ. ಭುಜಂಗಮ! ನೀನು ನನಗೆ ಅದನ್ನೇ ನೀಡುವುದಾದರೆ ನಿನ್ನಿಂದ ಅದನ್ನು ಸ್ವೀಕರಿಸಿ ಮನೆಗೆ ಹಿಂದಿರುಗುತ್ತೇನೆ.”

ತಕ್ಷಕನು ಹೇಳಿದನು:

“ರಾಜನಿಂದ ಎಷ್ಟು ಧನವನ್ನು ಕೇಳಬಯಸುತ್ತೀಯೋ ಅದಕ್ಕೂ ಅಧಿಕ ಧನವನ್ನು ನಾನು ನಿನಗೆ ಕೊಡುತ್ತೇನೆ. ದ್ವಿಜೋತ್ತಮ! ಹಿಂದಿರುಗು.”

ತಕ್ಷಕನ ಮಾತುಗಳನ್ನು ಕೇಳಿದ ಮಹಾತೇಜಸ್ವಿ ಬುದ್ಧಿವಂತ ದ್ವಿಜಸತ್ತಮ ಕಾಶ್ಯಪನು ರಾಜನ ಕುರಿತು ಯೋಚಿಸಿ ತನ್ನ ದಿವ್ಯಜ್ಞಾನದಿಂದ ಪಾಂಡವ ಕುಲದಲ್ಲಿ ಜನಿಸಿದ ಆ ನೃಪತಿಯು ಕ್ಷೀಣಾಯುಷಿಯೆಂದು ತಿಳಿದನು. ಆಗ ಆ ಮುನಿವರನು ತಕ್ಷಕನಿಂದ ತನಗಿಷ್ಟವೆನಿಸಿದಷ್ಟು ವಿತ್ತವನ್ನು ಪಡೆದು ಹಿಂದಿರುಗಿದನು. ಒಪ್ಪಂದದಂತೆ ಆ ಮಹಾತ್ಮ ಕಾಶ್ಯಪನು ಅಲ್ಲಿಂದ ಮರಳಲಾಗಿ ತಕ್ಷಕನು ಅವಸರದಲ್ಲಿ ನಾಗಸಾಹ್ವಯ ನಗರಕ್ಕೆ ಬಂದನು. ಹೋಗುತ್ತಿರುವಾಗ ತಕ್ಷಕನು ಆ ಜಗತ್ಪತಿಯು ವಿಷಹರ ಮಂತ್ರೌಷಧಿಗಳಿಂದ ಬಹು ಜಾಗರೂಕನಾಗಿ ರಕ್ಷಿಸಲ್ಪಟ್ಟಿದ್ದಾನೆ ಎಂದು ಕೇಳಿದನು. ಅವನು

“ರಾಜನನ್ನು ಮಾಯ ಯೋಗದಿಂದ ವಂಚಿಸಬೇಕು. ಅದರ ಉಪಾಯವಾದರೂ ಏನು?”

ಎಂದು ಚಿಂತಿಸತೊಡಗಿದನು. ಆಗ ನಾಗ ತಕ್ಷಕನು ಕೆಲವು ಸರ್ಪಗಳನ್ನು ತಾಪಸರ ರೂಪದಲ್ಲಿ ರಾಜನಿಗೆ ಫಲ ಪತ್ರ ಉದಕಗಳನ್ನು ಕೊಟ್ಟು ಕಳುಹಿಸಿದನು. ತಕ್ಷಕನು ಹೇಳಿದನು:

“ರಾಜನಲ್ಲಿ ಒಂದು ಮುಖ್ಯ ಕಾರ್ಯವಿದೆಯೆಂದು ನೀವೆಲ್ಲರೂ ಅವನಲ್ಲಿ ಹೋಗಿ ರಾಜನು ಫಲಪತ್ರೋದಕಗಳನ್ನು ಸ್ವೀಕರಿಸುವಂತೆ ಒತ್ತಾಯಿಸಿ.”

ತಕ್ಷಕನ ಮಾತಿನಂತೆ ಆ ಸರ್ಪಗಳು ರಾಜನಿಗೆ ದರ್ಭೆ, ನೀರು ಮತ್ತು ಫಲಗಳನ್ನು ಹಿಡಿದು ಹೊರಟವು. ವೀರ್ಯವಾನ್ ರಾಜೇಂದ್ರನು ಅವರು ತಂದ ಸರ್ವವನ್ನೂ ಸ್ವೀಕರಿಸಿ ಅವರ ಕೆಲಸವು ಮುಗಿದ ಬಳಿಕ ಅವರಿಗೆ ಹಿಂದಿರುಗಲು ಹೇಳಿದನು. ತಾಪಸರ ರೂಪ ತಳೆದಿದ್ದ ಆ ನಾಗಗಳು ಹೋದ ಬಳಿಕ ತನ್ನ ಅಮಾತ್ಯರು ಮತ್ತು ಸುಹೃದಯರಿಗೆ ಹೇಳಿದನು:

“ತಾಪಸರು ತಂದಿರುವ ಈ ಸ್ವಾಧಿಷ್ಟ ಫಲಗಳನ್ನು ನೀವೆಲ್ಲರೂ ನನ್ನ ಜೊತೆ ಸೇರಿ ಸೇವಿಸಿರಿ.”

ರಾಜನು ತನ್ನ ಸಚಿವರೊಂದಿಗೆ ಹಣ್ಣುಗಳನ್ನು ತಿನ್ನಲು ಬಯಸಿದಾಗ, ರಾಜನು ಹಿಡಿದ ಫಲದಿಂದ ಅಣುವಿನಷ್ಟು ಚಿಕ್ಕ, ಕಪ್ಪು ಕಣ್ಣುಗಳ ತಾಮ್ರ ವರ್ಣದ ಕ್ರಿಮಿಯೊಂದು ಕಾಣಿಸಿಕೊಂಡಿತು. ಅದನ್ನು ಹಿಡಿದ ನೃಪಶ್ರೇಷ್ಠನು ತನ್ನ ಸಚಿವರನ್ನುದ್ದೇಶಿಸಿ ಹೇಳಿದನು:

“ಸೂರ್ಯಾಸ್ತವಾಗುತ್ತಿದೆ. ಇನ್ನು ನನಗೆ ವಿಷದ ಭಯವಿಲ್ಲ. ಆ ಮುನಿಯ ಮಾತನ್ನು ಸತ್ಯವನ್ನಾಗಿಸಲೋಸುಗ ಈ ಕ್ರಿಮಿಯು ತಕ್ಷಕನಾಗಿ ನನ್ನನ್ನು ಕಚ್ಚಲಿ. ಈ ರೀತಿ ಸತ್ಯವನ್ನು ಸುಳ್ಳಾಗದಂತೆ ತಡೆಗಟ್ಟಲಿ!”

ಕಾಲಚೋದಿತ ಮಂತ್ರಿಗಳು ಅವನ ಈ ಮಾತನ್ನು ಪ್ರಶಂಸಿಸಿದರು. ಹೀಗೆ ಹೇಳಿದ ರಾಜೇಂದ್ರನು ಜೋರಾಗಿ ನಗುತ್ತಾ ಆ ಕ್ರಿಮಿಯನ್ನು ತನ್ನ ಕುತ್ತಿಗೆಯ ಮೇಲೆ ಇಟ್ಟಾಕ್ಷಣವೇ ತನ್ನ ಚೇತನವನ್ನು ಕಳೆದುಕೊಂಡು ಮೂರ್ಛಿತನಾದನು. ರಾಜನು ನಗುತ್ತಿರುವಾಗ ಆ ಫಲದಿಂದ ಹೊರಬಂದ ತಕ್ಷಕನು ಅವನನ್ನು ಸುತ್ತಿಹಾಕಿಕೊಂಡಿದ್ದನು.

ಸರ್ಪವು ಸುತ್ತಿಹಾಕಿಕೊಂಡ ಅವನನ್ನು ನೋಡಿದ ಮಂತ್ರಿಗಳೆಲ್ಲರೂ ವಿವರ್ಣವದನರಾಗಿ ದುಃಖಪೀಡಿತರಾಗಿ ರೋದಿಸಿದರು. ಅವನ ಅಟ್ಟಹಾಸವನ್ನು ಕೇಳಿದ ಮಂತ್ರಿಗಳು ಎಲ್ಲಕಡೆ ಪಲಾಯನ ಮಾಡತೊಡಗಿದರು. ಶೋಕಪರಾಯಣರಾಗಿ ಓಡುತ್ತಿರುವಾಗ ಆ ಅದ್ಭುತ ನಾಗ ಪನ್ನಗಶ್ರೇಷ್ಠ ತಕ್ಷಕನು ಆಕಾಶವನ್ನು ಸೀಳುತ್ತಿರುವಂತೆ ಪದ್ಮವರ್ಚಸ ಗೆರೆಯನ್ನುಂಟುಮಾಡುತ್ತಾ ಹೋಗುವುದನ್ನು ಕಂಡರು. ಆ ಗೃಹವು ಸರ್ಪದ ವಿಷಾಗ್ನಿಯಿಂದ ಹತ್ತಿ ಉರಿಯತೊಡಗಿತು. ಮಿಂಚು ಹೊಡೆದವನಂತೆ ಕೆಳಗುರುಳಿದ ರಾಜನನ್ನು ಅಲ್ಲಿಯೇ ಬಿಟ್ಟು ಭಯದಿಂದ ಅವರೆಲ್ಲರೂ ದಿಕ್ಕುಪಾಲಾದರು. ಈ ರೀತಿ ರಾಜನು ತಕ್ಷಕನ ತೇಜಸ್ಸಿನಿಂದ ಹತನಾದ ನಂತರ ಆ ನೃಪನ ಮಂತ್ರಿಗಳು ಪುಣ್ಯ ದ್ವಿಜರು ಮತ್ತು ರಾಜಪುರೋಹಿತರೊಂದಿಗೆ ಅವನ ಎಲ್ಲ ಪರಲೋಕಸತ್ಕ್ರಿಯೆಗಳನ್ನೂ ನೆರವೇರಿಸಿದರು. ಸರ್ವ ಪುರವಾಸಿ ಜನರೂ ಸೇರಿ ನೃಪನ ಬಾಲಕ ಮಗನನ್ನು ಪ್ರತಿಷ್ಠಾಪಿಸಿದರು. ಶತ್ರುಘಾತಿ ಕುರುಪ್ರವೀರ ನೃಪನನ್ನು ಜನರು ಜನಮೇಜಯನೆಂದು ಕರೆದರು.

ಬಾಲಕನಾಗಿದ್ದರೂ ಆ ನೃಪೋತ್ತಮನು ವಿವೇಕಿಯೂ ಬುದ್ಧಿವಂತನೂ ಆಗಿದ್ದನು. ಅವನ ಮಂತ್ರಿ ಮತ್ತು ಪುರೋಹಿತರೊಡನೆ ಕುರುಪುಂಗವಾಗ್ರಜನು ತನ್ನ ವೀರ ಪ್ರಪಿತಾಮಹನಂತೆ ರಾಜ್ಯವನ್ನು ಆಳಿದನು. ರಾಜನು ತನ್ನ ಶತ್ರುಗಳನ್ನು ತಡೆಗಟ್ಟಬಲ್ಲ ಎನ್ನುವುದನ್ನು ನೋಡಿದ ನೃಪನ ಮಂತ್ರಿಗಳು ಕಾಶೀರಾಜ ಸುವರ್ಣವರ್ಮನಲ್ಲಿ ಅವನ ಮಗಳು ವಪುಷ್ಠಮೆಯನ್ನು ಅವನಿಗೆ ವಧುವಾಗಿ ಕೇಳಿದರು. ಧಾರ್ಮಿಕವಾಗಿ ಅವನನ್ನು ಪರೀಕ್ಷಿಸಿ ರಾಜನು ಕುರುಪ್ರವೀರನಿಗೆ ವಪುಷ್ಟಮೆಯನ್ನು ಕೊಟ್ಟನು. ಅವಳನ್ನು ಪಡೆದ ಅವನೂ ಕೂಡ ಸಂತಸಗೊಂಡನು. ಇದಕ್ಕೂ ಮೊದಲು ಅವನು ತನ್ನ ಮನಸ್ಸನ್ನು ಯಾರಿಗೂ ಕೊಟ್ಟಿರಲಿಲ್ಲ. ಆ ವೀರ್ಯವಂತನು ಸರೋವರ ಮತ್ತು ಪುಷ್ಪಭರಿತ ವನಗಳಲ್ಲಿ ಪ್ರಸನ್ನ ಮನಸ್ಕನಾಗಿ ವಿಹರಿಸಿದನು. ಹಿಂದೆ ಪುರೂರವನು ಊರ್ವಶಿಯನ್ನು ಹೊಂದಿ ಹೇಗೆ ಆನಂದವನ್ನು ಅನುಭವಿಸಿದನೋ ಹಾಗೆ ಅವನೂ ಸುಖವನ್ನು ಅನುಭವಿಸಿದನು. ಅತೀವ ಸುಂದರಿ ವಪುಷ್ಟಮೆಯಾದರೂ ತನ್ನ ಹಾಗೆಯೇ ರೂಪವಂತನಾದ ಭೂಮಿಪ ಶ್ರೇಷ್ಠ ಪತಿಯನ್ನು ಪಡೆದು ಅಧಿಕ ಪ್ರೇಮದಿಂದ ಅವನನ್ನು ಸಂತೋಷಗೊಳಿಸಿದಳು.

ಜನಮೇಜಯನಿಗೆ ಸರಮೆಯ ಶಾಪ

ಪಾರಿಕ್ಷಿತ ಜನಮೇಜಯನು ಕುರುಕ್ಷೇತ್ರದಲ್ಲಿ ಸಹೋದರರೊಡನೆ ಒಂದು ದೀರ್ಘಯಾಗದಲ್ಲಿ ತೊಡಗಿದ್ದನು. ಶೃತಸೇನ, ಉಗ್ರಸೇನ ಮತ್ತು ಭೀಮಸೇನ ಎನ್ನುವವರು ಅವನ ಮೂವರು ಸಹೋದರರು. ಅವರು ಆ ಸತ್ರದಲ್ಲಿ ಉಪಸ್ಥಿತರಿರಲು ಅಲ್ಲಿಗೆ ಶ್ವಾನ ಸಾರಮೇಯನು ಆಗಮಿಸಿದನು. ಜನಮೇಜಯನ ತಮ್ಮಂದಿರಿಂದ ಪೆಟ್ಟುತಿಂದ ಅವನು ರೋಧಿಸುತ್ತಾ ತನ್ನ ತಾಯಿಯ ಬಳಿ ಹೋದನು. ರೋಧಿಸುತ್ತಿರುವ ಮಗನನ್ನುದ್ದೇಶಿಸಿ ತಾಯಿ ಸರಮೆಯು ಕೇಳಿದಳು:

“ಏಕೆ ರೋಧಿಸುತ್ತಿರುವೆ? ನಿನಗೆ ಹೊಡೆದರು?”

ತಾಯಿಯು ಹೀಗೆ ಕೇಳಲು ಅವನು ಉತ್ತರಿಸಿದನು:

“ಜನಮೇಜಯನ ತಮ್ಮಂದಿರು ನನ್ನನ್ನು ಹೊಡೆದರು.”

ತಾಯಿಯು ಅವನಿಗೆ ಪುನಃ ಹೇಳಿದಳು:

“ನೀನು ನಿಜಯಾಗಿಯೂ ಏನೋ ಅಪರಾಧವನ್ನು ಮಾಡಿರುವುದರಂದಲೇ ಅವರು ನಿನಗೆ ಹೊಡೆದಿರಬಹುದು.”

ಅವನು ಅವಳಿಗೆ ಪುನಃ ಹೇಳಿದನು:

“ನಾನೇನೂ ಅಪರಾಧವನ್ನು ಮಾಡಿಲ್ಲ. ನಾನು ಅವಿಸ್ಸಿನ ಕಡೆಗೂ ನೋಡಲಿಲ್ಲ, ಅದನ್ನು ನೆಕ್ಕಲೂ ಇಲ್ಲ.”

ಅದನ್ನು ಕೇಳಿದ ಸರಮೆಯು ಪುತ್ರಶೋಕಾರ್ತಳಾಗಿ ತಮ್ಮಂದಿರೊಂದಿಗೆ ದೀರ್ಘಸತ್ರದಲ್ಲಿ ತೊಡಗಿದ್ದ ಜನಮೇಜಯನಲ್ಲಿಗ ಆಗಮಿಸಿದಳು. ಕೃದ್ಧಳಾದ ಅವಳು ಅವನಿಗೆ ಹೇಳಿದಳು:

“ಈ ನನ್ನ ಪುತ್ರನು ಯಾವ ಅಪರಾಧವನ್ನೂ ಮಾಡಿಲ್ಲ. ಆದರೂ ಅವನನ್ನು ಏಕೆ ಹೊಡೆದಿರಿ? ಏನೂ ತಪ್ಪು ಮಾಡದ ಇವನನ್ನು ಹೇಗೆ ಹೊಡೆದಿರೋ ಹಾಗೆ ಭವಿಷ್ಯದಲ್ಲಿ ನೀವೂ ಕೂಡ ನಿರೀಕ್ಷೆಪಟ್ಟಿರದ ಭಯವನ್ನು ಅನುಭವಿಸುತ್ತೀರಿ!”

ದೇವತೆಗಳ ನಾಯಿ ಸರಮೆಯು ಹೀಗೆ ಹೇಳಲು ಜನಮೇಜಯನು ಅತೀವ ವಿಷಣ್ಣನಾಗಿ ಯೋಚನೆಗೊಳಗಾದನು. ಆ ಸತ್ರವನ್ನು ಸಮಾಪ್ತಿಗೊಳಿಸಿ ಅವನು ಹಸ್ತಿನಾಪುರಕ್ಕೆ ಮರಳಿ, ತನ್ನ ಪಾಪಕೃತ್ಯಗಳನ್ನು ಶಾಂತಗೊಳಿಸಿ ಶಾಪದಿಂದ ಮುಕ್ತಿಸ್ ದೊರಕಿಸುವ ಅನುರೂಪ ಪುರೋಹಿತನನ್ನು ಪಡೆಯುವ ಪರಮ ಯತ್ನವನ್ನು ಮಾಡಿದನು.

ಒಮ್ಮೆ ಬೇಟೆಗೆಂದು ಹೋಗಿದ್ದ ಜನಮೇಜಯನು ತನ್ನ ರಾಜ್ಯದ ಗಡಿಯ ಒಳಗೇ ಇದ್ದ ಒಂದು ಆಶ್ರಮವನ್ನು ಕಂಡನು. ಅಲ್ಲಿ ಶೃತಶ್ರವ ಎಂಬ ಹೆಸರಿನ ಓರ್ವ ಋಷಿಯೊಬ್ಬನು ಸೋಮಶ್ರವ ಎಂಬ ಪುತ್ರನೊಂದಿಗೆ ವಾಸಿಸುತ್ತಿದ್ದನು. ಅವನ ಆ ಮಗನನ್ನು ಜನಮೇಜಯನು ಪೌರೋಹಿತ್ಯಕ್ಕಾಗಿ ಕೇಳಿದನು. ಆ ಋಷಿಯನ್ನು ನಮಸ್ಕರಿಸಿ ಹೇಳಿದನು:

“ಭಗವನ್! ನಿನ್ನ ಪುತ್ರನು ನನ್ನ ಪುರೋಹಿತನಾಗಲಿ!”

ಈ ಕೇಳಿಕೆಗೆ ಶೃತಶ್ರವನು ಉತ್ತರಿಸಿದನು:

ಜನಮೇಜಯ! ನನ್ನ ತಪೋವೀರ್ಯದಿಂದ ಹುಟ್ಟಿದ, ನನ್ನ ವೀರ್ಯವನ್ನು ಕುಡಿದ ಸರ್ಪವೊಂದರ ಗರ್ಭದಲ್ಲಿ ಜನಿಸಿದ ನನ್ನ ಈ ಮಗನು ಮಹಾತಪಸ್ವಿ ಮತ್ತು ಸ್ವಾಧ್ಯಾಯಸಂಪನ್ನನಾಗಿದ್ದಾನೆ. ಮಹಾದೇವನ ವಿರುದ್ಧ ಕರ್ಮಗಳನ್ನು ಬಿಟ್ಟು ಉಳಿದೆಲ್ಲ ಪಾಪಕೃತ್ಯಗಳನ್ನೂ ಶಾಂತಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ದಾನೆ. ಆದರೆ ಅವನು ಒಂದೇ ಒಂದು ವ್ರತವನ್ನು ಕಟ್ಟುನಿಟ್ಟಾಗಿ ಪರಿಪಾಲಿಸುತ್ತಾನೆ. ಬ್ರಾಹ್ಮಣ ಯಾರೇ ಆಗಿರಲಿ, ಯಾವಾಗ ಏನು ಕೇಳಿದರೂ ಅದನ್ನು ಕೊಟ್ಟುಬಿಡುತ್ತಾನೆ. ಅವನು ಈ ನಿಯಮವನ್ನು ಪಲಿಸಲು ನಿನಗೆ ಅಡ್ಡಿಯಿಲ್ಲವಾದರೆ ಅವನನ್ನ ಕರೆದುಕೊಂಡು ಹೋಗು!”

ಜನಮೇಜಯನು “ನೀನು ಹೇಳಿದ ಹಾಗೆಯೇ ಆಗಲಿ" ಎಂದು ಉತ್ತರಿಸಿ, ಸೋಮಶ್ರವನನ್ನು ತನ್ನ ಪುರೋಹಿತನನ್ನಾಗಿ ಸ್ವೀಕರಿಸಿ ಹಿಂದಿರುಗಿ ಬಂದು

“ಇವನನ್ನು ನಮ್ಮ ಉಪಾಧ್ಯಾಯನನ್ನಾಗಿ ಆರಿಸಿದ್ದೇನೆ. ಅವನು ಹೇಳಿದುದೆಲ್ಲವನ್ನೂ ವಿಚಾರಮಾಡದೇ ನಡೆಸಿಕೊಡಬೇಕು!”

ಎಂದು ತನ್ನ ತಮ್ಮಂದಿರಿಗೆ ಆದೇಶವನ್ನಿತ್ತನು. ಅವನ ಸಹೋದರರು ಹೇಳಿದ ಹಾಗೆಯೇ ನಡೆದುಕೊಂಡರು. ಈ ರೀತಿ ತಮ್ಮಂದಿರಿಗೆ ಆದೇಶವನ್ನಿತ್ತು ಅವನು ತಕ್ಷಶಿಲೆಗೆ ಆ ದೇಶದಲ್ಲಿ ತನ್ನ ಆಡಳಿತವನ್ನು ಸ್ಥಾಪಿಸಲು ಹೊರಟು ಹೋದನು.

ಉತ್ತಂಕನು ತಕ್ಷಕನ ಮೇಲಿನ ಕೋಪದಿಂದ ಜನಮೇಜಯನನ್ನು ಸರ್ಪಸತ್ರಕ್ಕೆ ಉತ್ತೇಜಿಸಿದುದು

ಈ ಮದ್ಯದಲ್ಲಿ ಧೌಮ್ಯ ಎನ್ನುವ ಹೆಸರಿನ ಋಷಿಯೋರ್ವನು ಉಪಮನ್ಯು, ಆರುಣಿ ಮತ್ತು ವೇದ ಎಂಬ ಹೆಸರಿನ ಮೂವರು ಶಿಷ್ಯರೊಂದಿಗಿದ್ದನು. ಅಯೋದ ಧೌಮ್ಯನ ತನ್ನ ಶಿಷ್ಯ ವೇದನಿಗೆ ಈ ರೀತಿ ಆದೇಶಿಸಿದನು:

“ವತ್ಸ! ವೇದ! ಇಲ್ಲಿ ಬಾ. ನೀನು ನನ್ನ ಮನೆಯಲ್ಲಿ ಕೆಲವು ಕಾಲ ಶುಶ್ರೂಷೆ ಮಾಡಬೇಕಾಗುತ್ತದೆ. ನಿನಗೆ ಶ್ರೇಯಸ್ಸಾಗುತ್ತದೆ.”

ಇದನ್ನು ಕೇಳಿದ ಅವನು ದೀರ್ಘಕಾಲ ಗುರುಕುಲದಲ್ಲಿ ಗುರು ಶುಶ್ರೂಷಣೆಯಲ್ಲಿ ನಿರತನಾದನು. ನಿತ್ಯವೂ, ಏನೂ ದೂರಿಲ್ಲದೇ, ಭಾರದ ಹೊರೆಯನ್ನು ಹೊರಲು ಕಟ್ಟಿದ್ದ ಎತ್ತಿನ ಹಾಗೆ ಶೀತ-ಉಷ್ಣ, ಹಸಿವು-ಬಾಯಾರಿಕೆಗಳ ದುಃಖವನ್ನು ಸಹಿಸಿದನು. ಬಹಳ ಕಾಲವು ಕಳೆದನಂತರ ಅವನ ಗುರುವು ಸಂತೃಪ್ತನಾದನು. ಅವನ ತೃಪ್ತಿಯಿಂದಾಗಿ ಶ್ರೇಯಸ್ಸು ಮತ್ತು ಸರ್ವ ಜ್ಞಾನವನ್ನು ಹೊಂದಿದನು.

ಗುರುಕುಲವಾಸವನ್ನು ಪೂರೈಸಿ ಉಪಾಧ್ಯಾಯನಿಂದ ಅನುಮತಿಯನ್ನು ಪಡೆದು ಅವನು ಗೃಹಸ್ಥಾಶ್ರಮವನ್ನು ಪ್ರವೇಶಿಸಿದನು. ಅವನ ಮನೆಯಲ್ಲಿಯೂ ಕೂಡ ಮೂವರು ಶಿಷ್ಯರು ವಾಸಿಸುತ್ತಿದ್ದರು. ಅವನು ಒಮ್ಮೆಯೂ ತನ್ನ ಶಿಷ್ಯರಿಗೆ ಕೆಲಸವನ್ನು ಮಾಡು ಅಥವಾ ಗುರುಶುಶ್ರೂಷೆಯನ್ನು ಮಾಡು ಎಂದು ಹೇಳಲಿಲ್ಲ. ಗುರುಕುಲವಾಸದ ದುಃಖಗಳನ್ನು ತಿಳಿದಿದ್ದ ಅವನು ತನ್ನ ಶಿಷ್ಯರಿಗೆ ಕಷ್ಟ ಕೊಡಲು ಬಯಸುತ್ತಿರಲಿಲ್ಲ. ಒಮ್ಮೊಮ್ಮೆ ಕ್ಷತ್ರಿಯ ಜನಮೇಜಯ ಮತ್ತು ಪೌಷ್ಯರು ಬಂದು ವೇದನನ್ನು ಉಪಾಧ್ಯಾಯನನ್ನಾಗಿ ನಿಯುಕ್ತಿಸುತ್ತಿದ್ದರು. ಒಂದು ದಿನ ಯಜ್ಞಕಾರ್ಯಕ್ಕೆಂದು ಹೊರಡುವಾಗ ಉತ್ತಂಕ ಎಂಬ ಹೆಸರಿನ ಶಿಷ್ಯನನ್ನು ಕರೆದು

“ಉತ್ತಂಕ! ನನ್ನ ಮನೆಯಲ್ಲಿ ಏನೆಲ್ಲ ಮಾಡಬೇಕಾದ್ದುದು ಇವೆಯೋ ಅವೆಲ್ಲವನ್ನೂ ನೀನು ಕಡೆಗಣಿಸದೇ ಮಾಡು”

ಎಂದು ನಿಯೋಜಿಸಿದನು. ಗುರುಶುಶ್ರೂಷೆ ಮತ್ತು ಗುರುನಿಯೋಗದಲ್ಲಿ ಮನಸ್ಸನ್ನಿಟ್ಟಿದ್ದ ಉತ್ತಂಕನು ಗುರುಕುಲದಲ್ಲಿ ವಾಸಿಸುತ್ತಿದ್ದನು. ಅವನು ಅಲ್ಲಿ ವಾಸಿಸುತ್ತಿರುವಾಗ ಒಂದು ದಿನ ಉಪಾಧ್ಯಾಯನ ಮನೆಯ ಸ್ತ್ರೀಯರು ಬಂದು ಹೇಳಿದರು:

“ನಿನ್ನ ಉಪಾಧ್ಯಾಯನಿಯು ಋತುಮತಿಯಾಗಿದ್ದಾಳೆ. ಉಪಾಧ್ಯಾಯನು ಇಲ್ಲ. ಅವಳ ಋತುಕಾಲವು ನಿಷ್ಪ್ರಯೋಜಕವಾಗದ ಹಾಗೆ ಮಾಡು.”

ಹೀಗೆ ಹೇಳಿದ ಸ್ತ್ರೀಯರಿಗೆ ಅವನು ಉತ್ತರಿಸಿದನು:

“ಸ್ತ್ರೀಯರ ಮಾತನ್ನು ಕೇಳಿ ಕಾರ್ಯಗೈಯುವುದು ನನಗೆ ಸೂಕ್ತವಲ್ಲ. ಯಾವ ಅಕಾರ್ಯವೂ ನಿನ್ನಿಂದ ನಡೆಯಬಾರದು ಎಂದು ಉಪಾಧ್ಯಾಯನು ನನಗೆ ಸಂದೇಶವನ್ನಿತ್ತಿದ್ದಾನೆ.”

ಕಾಲಾನಂತರದಲ್ಲಿ ತನ್ನ ಪ್ರವಾಸದಿಂದ ಅವನ ಉಪಾಧ್ಯಾಯನು ಮನೆಗೆ ಹಿಂದಿರುಗಿದನು. ನಡೆದುದೆಲ್ಲವನ್ನೂ ಕೇಳಿ ಸಂತೋಷಪಟ್ಟು ಹೇಳಿದನು:

“ವತ್ಸ ಉತ್ತಂಕ! ನಿನಗೆ ಇಷ್ಟವಾದ ಏನನ್ನು ಮಾಡಲಿ? ನೀನು ನನ್ನನ್ನು ಧರ್ಮದಿಂದ ಶುಶ್ರೂಷೆ ಮಾಡುತ್ತಿರುವೆ. ಇದರಿಂದ ಪರಸ್ಪರರ ಪ್ರೀತಿಯು ಹೆಚ್ಚಾಗಿದೆ. ನಿನಗೆ ಹೋಗಲು ಅನುಮತಿಯಿದೆ. ನಿನಗೆ ಎಲ್ಲವೂ ಸಿದ್ಧಿಯಾಗಲಿ. ಹೋಗು.”

ಇದನ್ನು ಕೇಳಿದ ಅವನು ಉತ್ತರಿಸಿದನು:

“ಅಧರ್ಮದಿಂದ ಏನನ್ನು ಕೊಟ್ಟರೂ ಅಥವಾ ಅಧರ್ಮದಿಂದ ಏನನ್ನು ಗೆದ್ದುಕೊಂಡರೂ ಅವರೀರ್ವರ ನಡುವೆ ದ್ವೇಷ ಉಂಟಾಗುತ್ತದೆ ಅಥವಾ ಅವರಲ್ಲಿ ಒಬ್ಬನು ಸಾಯುತ್ತಾನೆ ಎಂಬ ಮಾತಿದೆ. ಆದುದರಿಂದ ನಿನ್ನ ಅನುಜ್ಞೆಯನ್ನು ಪಡೆದು ನಿನಗೆ ಇಷ್ಟವಾದ ಗುರುದಕ್ಷಿಣೆಯನ್ನು ಕೊಡಲು ಬಯಸುತ್ತೇನೆ. ನಿನಗೆ ಇಷ್ಟವಾದ ಏನನ್ನು ಮಾಡಲಿ?”

ಉಪಾಧ್ಯಾಯನು ಹೇಳಿದನು:

“ವತ್ಸ ಉತ್ತಂಕ! ಹಾಗಾದರೆ ಇನ್ನೂ ಸ್ವಲ್ಪ ಸಮಯ ನಿಲ್ಲು.”

ಕೆಲವು ಸಮಯದ ನಂತರ ಉತ್ತಂಕನು ಪುನಃ ಕೇಳಿದನು:

“ನಿಮ್ಮ ದಕ್ಷಿಣೆಗಾಗಿ ನಿಮಗೆ ಪ್ರಿಯವಾದ ಏನನ್ನು ಮಾಡಲಿ? ಅಜ್ಞಾಪಿಸಿ.”

ಉಪಾಧ್ಯಾಯನು ಉತ್ತರಿಸಿದನು:

“ವತ್ಸ ಉತ್ತಂಕ! ಗುರುದಕ್ಷಿಣೆಯ ಕುರಿತು ನೀನು ಬಹಳಷ್ಟು ಬಾರಿ ನನ್ನಲ್ಲಿ ಕೇಳಿದ್ದೀಯೆ. ಹಾಗಾದರೆ ಹೋಗು. ನಿನ್ನ ಉಪಾಧ್ಯಾಯನಿಯಲ್ಲಿ ಗುರುದಕ್ಷಿಣೆಯಾಗಿ ಏನನ್ನು ಅವಳು ಬಯಸುತ್ತಾಳೆ ಎಂದು ಕೇಳಿ, ಅವಳು ಹೇಳಿದುದನ್ನು ತೆಗೆದುಕೊಂಡು ಬಾ.”

ಉಪಾಧ್ಯಾಯನ ಈ ಮಾತುಗಳನ್ನು ಕೇಳಿ ಅವನು ಉಪಾಧ್ಯಾನಿಯಲ್ಲಿಗೆ ಹೋಗಿ ಕೇಳಿದನು:

“ನನ್ನ ಉಪಾಧ್ಯಾಯರು ಮನೆಗೆ ಹೋಗಿ ನಿಮ್ಮಲ್ಲಿ ಗುರುದಕ್ಷಿಣೆಯಾಗಿ ಏನನ್ನು ಬಯಸುತ್ತೀರೆಂದು ಕೇಳಲು ಕಳುಹಿಸಿದ್ದಾರೆ. ಗುರುದಕ್ಷಿಣೆಯಾಗಿ ಏನನ್ನು ಬಯಸುತ್ತೀರಿ ಹೇಳಿ.”

ಇದನ್ನು ಕೇಳಿದ ಉಪಾಧ್ಯಾಯಿನಿಯು ಉತ್ತಂಕನಿಗೆ ಉತ್ತರಿಸಿದಳು:

“ಪೌಷ್ಯರಾಜನಲ್ಲಿಗೆ ಹೋಗಿ ಅವನ ಕ್ಷಾತ್ರಿಣಿಯ ಕರ್ಣಕುಂಡಲಗಳನ್ನು ಕೇಳಿ ಅವುಗಳನ್ನು ತೆಗೆದುಕೊಂಡು ಬಾ. ಇಂದಿನಿಂದ ನಾಲ್ಕನೆಯ ದಿನ ಪುಣ್ಯಕ ವ್ರತದ ದಿನ. ಆದಿನ ನಾನು ಆ ಕುಂಡಲಗಳನ್ನು ಧರಿಸಿ ಬ್ರಾಹ್ಮಣರಿಗೆ ಭೋಜನವನ್ನು ನೀಡಲು ಬಯಸುತ್ತೇನೆ. ನಿನಗೆ ಶ್ರೇಯಸ್ಸಾಗಲಿ. ತ್ವರೆ ಮಾಡು.”

ಉಪಾಧ್ಯಾಯನಿಯು ಈ ರೀತಿ ಹೇಳಲು ಉತ್ತಂಕನು ಹೊರಟನು. ದಾರಿಯಲ್ಲಿ ಅವನು ಬೃಹದಾಕರದ ಪುರುಷನೊಬ್ಬನು ಬೃಹದಾಕಾರದ ಹೋರಿಯನ್ನೇರಿ ಹೋಗುತ್ತಿರುವ ದೃಶ್ಯವನ್ನು ಕಂಡನು. ಆ ಪುರುಷನು ಉತ್ತಂಕನಿಗೆ ಹೇಳಿದನು:

“ಉತ್ತಂಕ! ಈ ಹೋರಿಯ ಸಗಣಿಯನ್ನು ತಿನ್ನು.”

ಅವನು ನಿರಾಕರಿಸಿದಾಗ, ಆ ಪುರುಷನು ಪುನಃ ಹೇಳಿದನು:

“ಉತ್ತಂಕ! ಇದನ್ನು ತಿನ್ನು. ವಿಚಾರ ಮಾಡಬೇಡ. ಈ ಹಿಂದೆ ನಿನ್ನ ಉಪಾಧ್ಯಾಯನೂ ಇದನ್ನು ತಿಂದಿದ್ದಾನೆ.”

ಇದನ್ನು ಕೇಳಿದ ಉತ್ತಂಕನು “ಆಯಿತು” ಎಂದು ಆ ಹೋರಿಯ ಸಗಣಿ ಮತ್ತು ಮೂತ್ರವನ್ನು ಸೇವಿಸಿ ಕ್ಷತ್ರಿಯ ಪೌಷ್ಯನಲ್ಲಿಗೆ ಮುಂದುವರೆದನು.

ಅವನು ಕುಳಿತಿರುವುದನ್ನು ನೋಡಿದ ಉತ್ತಂಕನು ಅವನಿಗೆ ಆಶೀರ್ವಚನಗಳಿಂದ ಅಭಿನಂದಿಸಿ ಹೇಳಿದನು:

“ನಿನ್ನಲ್ಲಿ ಏನೋ ಒಂದನ್ನು ಕೇಳಲು ಬಂದಿದ್ದೇನೆ.”

ಆಗ ಅವನನ್ನು ಅಭಿನಂದಿಸಿ

“ಭಗವನ್! ನಾನು ಪೌಷ್ಯ. ಏನನ್ನು ಮಾಡಲಿ?”

ಎಂದು ಕೇಳಿದನು. ಉತ್ತಂಕನು ಹೇಳಿದನು:

“ಗುರುದಕ್ಷಿಣೆಯಾಗಿ ಕುಂಡಲಗಳನ್ನು ತೆಗೆದುಕೊಂಡು ಹೋಗಲು ಇಲ್ಲಿಗೆ ಬಂದಿದ್ದೇನೆ. ನೀನು ನಿನ್ನ ಕ್ಷತ್ರಿಣಿಯ ಕರ್ಣಕುಂಡಲಗಳನ್ನು ಕೊಡಬೇಕು.”

ಪೌಷ್ಯನು ಅವನಿಗೆ ಉತ್ತರಿಸಿದನು:

“ಅಂತಃಪುರವನ್ನು ಪ್ರವೇಶಿಸಿ ನನ್ನ ಕ್ಷತ್ರಿಣಿಯನ್ನು ಕೇಳು.”

ಹೀಗೆ ಕೇಳಿದ ಅವನು ಅಂತಃಪುರವನ್ನು ಪ್ರವೇಶಿಸಿದನು. ಆದರೆ ಅಲ್ಲಿ ಅವನಿಗೆ ಕ್ಷತ್ರಾಣಿಯು ಕಾಣಲಿಲ್ಲ. ಅವನು ಪೌಷ್ಯನಿಗೆ ಪುನಃ ಹೇಳಿದನು:

“ನೀನು ಈ ರೀತಿ ನನ್ನಲ್ಲಿ ಸುಳ್ಳಾಡುವುದು ಸರಿಯಲ್ಲ. ಅಂತಃಪುರಕ್ಕೆ ಹೋದರೂ ಅಲ್ಲಿ ನಿನ್ನ ಕ್ಷತ್ರಾಣಿಯು ಕಾಣಲಿಲ್ಲ.”

ಆಗ ಪೌಷ್ಯನು ಉತ್ತರಿಸಿದನು:

“ನಿನಗೆ ಮೈಲಿಗೆಯಾಗಿರಬಹುದು. ನೆನಪುಮಾಡಿಕೋ. ಉಚ್ಛಿಷ್ಟರಾದವರು ಅಥವಾ ಅಶುಚಿಯಾದವರು ಆ ಕ್ಷಾತ್ರಣಿಯನ್ನು ನೋಡಲು ಸಾಧ್ಯವಿಲ್ಲ. ಅವಳ ಪಾತಿವ್ರತ್ಯದಿಂದ ಅವಳು ಅಶುಚಿಯಾದವರಿಗೆ ಕಂಡು ಬರುವುದಿಲ್ಲ.”

ಸ್ವಲ್ಪಹೊತ್ತು ಯೋಚಿಸಿ ಉತ್ತಂಕನು ಹೇಳಿದನು:

“ಬರುವ ಅವಸರದಲ್ಲಿ ನಿಂತೇ ಮೂತ್ರ ಮಾಡಿರುವುದರಿಂದ ಉಚ್ಛಿಷ್ಟನಾಗಿರಬಹುದು.”

ಅದಕ್ಕೆ ಪೌಷ್ಯನು ಉತ್ತರಿಸಿದನು:

“ನಡೆಯುವಾಗ ಅಥವಾ ನಿಂತು ಮೂತ್ರಮಾಡುವುದು ಸರಿಯಲ್ಲ.

ಆಗ ಉತ್ತಂಕನು ಪೂರ್ವಾಭಿಮುಖವಾಗಿ ಕುಳಿತು, ಕೈಕಾಲು ಮುಖಗಳನ್ನು ಸರಿಯಾಗಿ ತೊಳೆದು ಶಬ್ಧಮಾಡದೇ ಹೃದಯವನ್ನು ತಲುಪುವಷ್ಟು ಮಾತ್ರ ನೀರನ್ನು ಮೂರು ಸಾರಿ ಕುಡಿದು, ಎರಡು ಸಾರಿ ಮುಖ, ಕಣ್ಣು, ಕಿವಿ ಮತ್ತು ಮೂಗುಗಳನ್ನು ನೀರಿನಿಂದ ಮುಟ್ಟಿ, ಅಂತಃಪುರವನ್ನು ಪ್ರವೇಶಿಸಿದನು. ಆಗ ಕ್ಷಾತ್ರಣಿಯು ಕಾಣಿಸಿಕೊಂಡಳು. ಉತ್ತಂಕನನ್ನು ನೋಡಿ ಅವಳು ಎದ್ದುನಿಂತು ನಮಸ್ಕರಿಸಿ

“ಭಗವನ್! ನಿನಗೆ ಸ್ವಾಗತ. ನನ್ನಿಂದ ಏನಾಗಬೇಕು ಅಜ್ಞಾಪಿಸು”

ಎಂದಳು. ಆಗ ಅವನು ಹೇಳಿದನು:

“ನಿನ್ನ ಈ ಕುಂಡಲಗಳನ್ನು ಗುರುದಕ್ಷಿಣೆಗಾಗಿ ಬೇಡುತ್ತಿದ್ದೇನೆ. ಕೊಡಬೇಕು.”

ಅವನ ಸದ್ಭಾವದಿಂದ ಪ್ರೀತಳಾಗಿ, ಇವನು ಪಾತ್ರನಾಗಿರುವುದರಿಂದ ನಿರಾಕರಿಸಲು ಸಾಧ್ಯವಿಲ್ಲ ಎಂದು ತಿಳಿದು ಕುಂಡಲಗಳನ್ನು ಬಿಚ್ಚಿ ಅವನಿಗೆ ಕೊಟ್ಟ ಅವಳು ಹೇಳಿದಳು:

“ಈ ಕುಂಡಲಗಳನ್ನು ನಾಗರಾಜ ತಕ್ಷಕನೂ ಕೂಡ ಕೇಳಿದ್ದಾನೆ. ಅದ್ದರಿಂದ ಇವುಗಳನ್ನು ಜಾಗ್ರತೆಯಲ್ಲಿ ಕೊಂಡೊಯ್ಯಿ.”

ಕ್ಷಾತ್ರಣಿಯಿಂದ ಈ ರೀತಿ ಕೇಳಿದ ಅವನು ಉತ್ತರಿಸಿದನು:

“ಇದರ ಕುರಿತು ಯೋಚಿಸಬೇಡ. ನಾಗರಾಜ ತಕ್ಷಕನಿಗೆ ನನ್ನನ್ನು ಸೋಲಿಸಲು ಸಾಧ್ಯವಿಲ್ಲ.”

ಕ್ಷಾತ್ರಿಣಿಗೆ ಹೀಗೆ ಹೇಳಿ, ಅವನು ಪೌಷ್ಯನಲ್ಲಿಗೆ ಬಂದನು. ಅವನನ್ನು ನೋಡಿ ಹೇಳಿದನು:

“ಪೌಷ್ಯ! ನಾನು ಪ್ರೀತನಾಗಿದ್ದೇನೆ.”

ಪೌಷ್ಯನು ಉತ್ತರಿಸಿದನು:

“ನಿನ್ನಂಥಹ ಪಾತ್ರವುಳ್ಳವನಿಗೆ ದಾನ ಕೊಡುವ ಅವಕಾಶವು ದುರ್ಲಭ. ನೀನೊಬ್ಬ ಗುಣವಂತ ಅತಿಥಿ. ಆದ್ದರಿಂದ ಶ್ರಾದ್ಧ ಮಾಡಲು ಬಯಸುತ್ತೇನೆ. ಸ್ವಲ್ಪ ಹೊತ್ತು ನಿಲ್ಲು.”

ಅವನಿಗೆ ಉತ್ತಂಕನು ಉತ್ತರಿಸಿದನು:

“ಅವಸರದಲ್ಲಿದ್ದೇನೆ. ಆದ್ದರಿಂದ ಬೇಕಾಗುವ ಅನ್ನ ಮುಂತಾದವುಗಳು ಶೀಘ್ರವಾಗಿ ಬರಲಿ ಎಂದು ಬಯಸುತ್ತೇನೆ.”

ಇದಕ್ಕೆ ಒಪ್ಪಿಕೊಂಡು ಅವನಿಗೆ ಅನುಕೂಲವಾದ ಆಹಾರದಿಂದ ಭೋಜನವನ್ನು ನೀಡಿದನು. ತಂಗಳ ಅನ್ನದಲ್ಲಿ ಕೂದಲನ್ನು ಕಂಡ ಉತ್ತಂಕನು ಅಶುಚಿಯಾದೆನೆಂದು ತಿಳಿದು ಪೌಷ್ಯನಿಗೆ ಹೇಳಿದನು:

“ನನಗೆ ಅಶುಚಿ ಅನ್ನವನ್ನು ಉಣಿಸಿರುವುದರಿಂದ ನೀನು ಭವಿಷ್ಯದಲ್ಲಿ ಅಂಧನಾಗುವೆ.”

ಅದಕ್ಕೆ ಪೌಷ್ಯನು ಉತ್ತರಿಸಿದನು:

“ಶುದ್ಧ ಅನ್ನವನ್ನು ದೂಷಿಸಿರುವುದರಿಂದ ನಿನಗೆ ಮಕ್ಕಳೇ ಆಗುವುದಿಲ್ಲ.”

ನಂತರ ನೀಡಿದ ಅನ್ನವನ್ನು ಪರೀಕ್ಷಿಸಿ ಅದು ನಿಜವಾಗಿಯೂ ತಣ್ಣಗಿದೆ ಮತ್ತು ಆ ಅನ್ನವನ್ನು ಮುಕ್ತಕೇಶ ಸ್ತ್ರೀಯೊಬ್ಬಳು ತಯಾರಿಸಿದುದರಿಂದ ಅದರಲ್ಲಿ ಕೂದಲಿದೆ ಎಂದು ಖಾತ್ರಿಮಾಡಿಕೊಂಡ ಪೌಷ್ಯನು:

“ಭಗವನ್! ಅಜ್ಞಾನದಿಂದ ನಿನಗೆ ಕೂದಲಿದ್ದ ತಂಗಳನ್ನವನ್ನು ನೀಡಿದೆ. ಕ್ಷಮಿಸಬೇಕು. ನಾನು ಅಂಧನಾಗದಂತೆ ಮಾಡು.”

ಆಗ ಉತ್ತಂಕನು ಹೇಳಿದನು:

“ನಾನು ಹೇಳಿದ್ದುದು ಸುಳ್ಳಾಗುವುದಿಲ್ಲ. ನೀನು ಅಂಧನಾದ ಸ್ವಲ್ಪ ಸಮಯದಲ್ಲಿ ಅನಂಧನಾಗುತ್ತೀಯೆ. ನೀನು ನನಗೆ ಕೊಟ್ಟ ಶಾಪವೂ ನಡೆಯದಂತೆ ಮಾಡು.”

ಆಗ ಪೌಷ್ಯನು ಹೇಳಿದನು:

“ಶಾಪವನ್ನು ಹಿಂದೆ ತೆಗೆದುಕೊಳ್ಳಲು ನನಗೆ ಸಾಧ್ಯವಿಲ್ಲ. ನನ್ನ ಸಿಟ್ಟು ಇನ್ನೂ ಕಡಿಮೆಯಾಗಲಿಲ್ಲ. ನಿನಗೆ ಇದು ತಿಳಿದಿಲ್ಲವೇ? ಬ್ರಾಹ್ಮಣನ ಹೃದಯವು ಬೆಣ್ಣೆಯಂತೆ ಆದರೆ ಮಾತು ಒಂದು ಹರಿತ ಖಡ್ಗದಂತೆ. ತದ್ವಿರುದ್ಧವಾಗಿ ಒಬ್ಬ ಕ್ಷತ್ರಿಯನ ಮಾತು ಬೆಣ್ಣೆಯ ಹಾಗೆ ಮತ್ತು ಹೃದಯ ತೀಕ್ಷ್ಣ ಖಡ್ಗದ ಹಾಗೆ. ನನ್ನ ಹೃದಯವು ಇನ್ನೂ ಹರಿತಾಗಿರುವುದರಿಂದ ಶಾಪವನ್ನು ಹಿಂದೆ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ನೀನು ಈಗ ಹೋಗಬಹುದು.”

ಉತ್ತಂಕನು ಹೇಳಿದನು:

“ನನಗೆ ನೀಡಿದ್ದ ಅನ್ನವು ಅಶುಚಿಯಾದದ್ದು ಎಂದು ನೀನೇ ನೋಡಿದ್ದೀಯೆ. ಆದುದರಿಂದ ಅದುಷ್ಟ ಅನ್ನವನ್ನು ದೂಷಿಸಿರುವುದರಿಂದ ಅನಪತ್ಯನಾಗುತ್ತೀಯೆ ಎಂದು ನೀನು ನನಗಿತ್ತ ಶಾಪವು ಪರಿಣಾಮಕಾರಿಯಾಗುವುದಿಲ್ಲ.”

ಹೀಗೆ ಹೇಳಿ ಉತ್ತಂಕನು ಕುಂಡಲಗಳನ್ನು ತೆಗೆದುಕೊಂಡು ಹೋದನು. ದಾರಿಯಲ್ಲಿ ಒಬ್ಬ ನಗ್ನ ಭಿಕ್ಷುಕನು ಅವನ ಕಡೆ ಬರುತ್ತಿರುವುದನ್ನು, ಮತ್ತು ಅವನು ಒಂದು ಕ್ಷಣ ಕಂಡರೆ ಮತ್ತೊಂದು ಕ್ಷಣ ಮರೆಯಾಗುತ್ತಿರುವುದನ್ನು ನೋಡಿದನು. ಆಗ ಉತ್ತಂಕನು ಕುಂಡಲಗಳನ್ನು ಭೂಮಿಯಮೇಲೆ ಇಟ್ಟು ನೀರಿಗೆ ಹೋದನು. ಈ ಮಧ್ಯ ಆ ಭಿಕ್ಷುಕನು ಬೇಗ ಬಂದು ಕುಂಡಲಗಳನ್ನು ಎತ್ತಿಕೊಂಡು ಓಡಿಹೋದನು. ಇದನ್ನು ನೋಡಿ ಉತ್ತಂಕನೂ ಕೂಡ ಅವನನ್ನು ಬೆನ್ನಟ್ಟಿ ಓಡಿದನು. ಆಗ ಅವನು ತನ್ನ ರೂಪವನ್ನು ಬಿಟ್ಟು ತಕ್ಷಕನ ರೂಪವನ್ನು ತಾಳಿ ತಕ್ಷಣವೇ ನೆಲದಲ್ಲಿಯ ಒಂದು ದೊಡ್ಡ ಬಿಲವನ್ನು ಹೊಕ್ಕನು. ಬಿಲವನ್ನು ಪ್ರವೇಶಿಸಿ ನಾಗಲೋಕದಲ್ಲಿರುವ ತನ್ನ ಮನೆಗೆ ಹೋದನು. ಉತ್ತಂಕನೂ ಅದೇ ಬಿಲವನ್ನು ಪ್ರವೇಶಿಸಿದನು. ನಾಗಲೋಗವನ್ನು ಪ್ರವೇಶಿಸಿ ಈ ಶ್ಲೋಕಗಳಿಂದ ನಾಗಗಳನ್ನು ಪ್ರಾರ್ಥಿಸತೊಡಗಿದನು.

“ಮಿಂಚಿನಿಂದೊಡಗೂಡಿದ ಮೋಡಗಳು ಗಾಳಿಯಿಂದ ತಳ್ಳಲ್ಪಟ್ಟು ಮಳೆಸುರಿಸುವಂತೆ ಯುದ್ಧದಲ್ಲಿ ಶೋಭಿಸುವ ಐರಾವತ ರಾಜನ ಸರ್ಪಗಳೇ! ಸುಂದರ ರೂಪವುಳ್ಳವರೇ! ಬೇರೆ ಬೇರೆ ರೂಪಗಳನ್ನು ಧರಿಸಬಲ್ಲವರೇ! ಬಣ್ಣ ಬಣ್ಣದ ಕುಂಡಲಗಳನ್ನು ಧರಿಸಿದವರೇ! ಆಕಾಶದಲ್ಲಿ ಆದಿತ್ಯನಂತೆ ಹೊಳೆಯುತ್ತಿರುವವರೇ! ಐರಾವತನ ಮಕ್ಕಳೇ! ಗಂಗಾತೀರದ ಉತ್ತರದಲ್ಲಿ ಬಹಳ ಸಾಲುಗಳಲ್ಲಿರುವ ನಾಗಗಳೇ! ಐರಾವತನನ್ನು ಬಿಟ್ಟು ಯಾರು ಸುಡುತ್ತಿರುವ ಸೂರ್ಯನ ಕಿರಣಗಳಡಿಯಲ್ಲಿ ಸಂಚರಿಸಲು ಇಚ್ಛಿಸುವರು? ದೃತರಾಷ್ಟ್ರನು ಹೊರಟರೆ ಅವನ ಹಿಂದೆ ೨೮,೦೦೦ ನಾಗಗಳೂ ಹೋಗುತ್ತವೆ. ಹತ್ತಿರದಲ್ಲಿರಲಿ ಅಥವಾ ದೂರವಿರಲಿ, ಐರಾವತವನ್ನು ತಮ್ಮ ಅಣ್ಣನನ್ನಾಗಿ ಹೊಂದಿರುವ ಎಲ್ಲ ನಾಗಗಳಿಗೂ ನನ್ನ ನಮನಗಳು. ಮೊದಲು ಕುರುಕ್ಷೇತ್ರ ಮತ್ತು ಖಾಂಡವಗಳಲ್ಲಿ ವಾಸಿಸಿದ ನಾಗರಾಜ ತಕ್ಷಕನು ನನಗೆ ನನ್ನ ಕುಂಡಲಗಳನ್ನು ಹಿಂದಿರುಗಿಸಲು ಪ್ರಾರ್ಥಿಸುತ್ತೇನೆ. ತಕ್ಷಕ ಮತ್ತು ಅಶ್ವಸೇನರು ಕುರುಕ್ಷೇತ್ರದಲ್ಲಿ ನದಿ ಇಕ್ಷುಮತಿಯ ತಟದಲ್ಲಿ ವಾಸಿಸುತ್ತಿರುವಾಗ ನಿತ್ಯವೂ ಸಹಚರರಿದ್ದರು. ತಕ್ಷಕನ ಜಘನ್ಯಜ ಶೃತಸೇನನೆಂದು ಕರೆಯಲ್ಪಡುವ, ಮಹಾದ್ಯುಮ್ನಿ ಎಂಬಲ್ಲಿ ನಾಗಮುಖ್ಯನಾಗಲು ಪ್ರಾರ್ಥಿಸುತ್ತ ವಾಸಿಸುತ್ತಿದ್ದ ಆ ಮಹಾತ್ಮನಿಗೂ ನಾನು ನಮಸ್ಕರಿಸುತ್ತಿದ್ದೇನೆ.”

ಈ ರೀತಿ ನಾಗಗಳ ಸ್ತುತಿಗೈದರೂ ಕುಂಡಲಗಳು ದೊರೆಯದೇ ಇದ್ದಾಗ ಅವನು ಒಂದು ಮಗ್ಗವನ್ನೇರಿ ವಸ್ತ್ರವೊಂದನ್ನು ನೇಯುತ್ತಿರುವ ಇಬ್ಬರು ಸ್ತ್ರೀಯರನ್ನು ಕಂಡನು. ಅದರ ಮೇಲೆ ಕಪ್ಪು ಮತ್ತು ಬಿಳುಪಿನ ನೂಲುಗಳಿದ್ದವು. ಅಲ್ಲಿ ಅವನು ಆರು ಕುಮಾರರು ಒಂದು ಚಕ್ರವನ್ನು ತಿರುಗಿಸುತ್ತಿರುವುದನ್ನೂ ಮತ್ತು ಕುದುರೆಯನ್ನೇರಿದ ಪುರುಷನೊಬ್ಬನನ್ನೂ ನೋಡಿದನು. ಆಗ ಅವರೆಲ್ಲರನ್ನೂ ಸಂತುಷ್ಟಿಗೊಳಿಸಲೋಸುಗ ಮಂತ್ರಶ್ಲೋಕಗಳಿಂದ ಈ ರೀತಿ ಸ್ತುತಿಸಿದನು:

“ಅವಿರತವಾಗಿ ನಿರ್ದಿಷ್ಠವಾಗಿ ಆರು ಕುಮಾರರಿಂದ ತಿರುಗಿಸಲ್ಪಡುತ್ತಿರುವ ಈ ಚಕ್ರದ ಪರಿಧಿಯು ಪರ್ವಯೋಗಗಳನ್ನು ಸೂಚಿಸುವ ೨೪ ಗುರುತುಗಳನ್ನು ಹೊಂದಿದೆ ಮತ್ತು ಮಧ್ಯದಲ್ಲಿ ೩೦೦ ಹಲ್ಲುಗಳಿಂದ ಕೂಡಿದೆ. ವಿಶ್ವರೂಪಿ ಈ ಯುವತಿಯರೀರ್ವರು ಕಪ್ಪು ಮತ್ತು ಬಿಳುಪಿನ ನೂಲುಗಳಿಂದ ವಸ್ತ್ರವನ್ನು ಸತತವಾಗಿ ನೇಯುವುದರ ಮೂಲಕ ಅಸಂಖ್ಯ ವಿಶ್ವಗಳನ್ನು ಅಸಂಖ್ಯ ಜೀವಿಗಳನ್ನು ಸೃಷ್ಠಿಸುತ್ತಿದ್ದಾರೆ. ವಜ್ರದ ಒಡೆಯ! ಭುವನ ರಕ್ಷಕ! ವೃತ್ರ ಹಂತಕ! ನಮೂಚಿ ಹಂತಕ! ಕಪ್ಪು ವಸ್ತ್ರವನ್ನು ಧರಿಸಿದ ಮಹಾತ್ಮ! ಲೋಕದಲ್ಲಿ ಸತ್ಯ ಮತ್ತು ಅಸತ್ಯಗಳನ್ನು ತೋರಿಸಿಕೊಡುವವನೇ! ಹಿಂದೆ ಸಮುದ್ರದ ಗರ್ಭದಿಂದ ತೆಗೆದ, ವೈಶ್ವಾನರನಂತಿರುವ ಅಶ್ವವನ್ನು ವಾಹನವನ್ನಾಗಿ ಬಳಸಿದ, ಲೋಕತ್ರಯಗಳ ಈಶ! ಪುರಂದರ! ಜಗದೀಶ್ವರ! ನಿನಗೆ ನನ್ನ ನಮನಗಳು."

ಆಗ ಆ ಪುರುಷನು ಅವನಿಗೆ ಹೇಳಿದನು:

“ನಿನ್ನ ಸ್ತೋತ್ರಗಳಿಂದ ನಾನು ಪ್ರೀತನಾಗಿದ್ದೇನೆ. ನಿನಗೆ ಪ್ರಿಯವಾದ ಏನನ್ನು ಮಾಡಲಿ?”

ಅವನು ಹೇಳಿದನು:

“ನಾಗಗಳು ನನ್ನ ವಶದಲ್ಲಿ ಬರುವಂತಾಗಲಿ.”

ಪುರುಷನು ಹೇಳಿದನು:

“ಈ ಕುದುರೆಯ ಗುದದ್ವಾರದಲ್ಲಿ ಊದು.”

ಅವನು ಕುದುರೆಯ ಗುದದ್ವಾರದಲ್ಲಿ ಊದಿದನು. ಕುದುರೆಯ ಎಲ್ಲ ರಂಧ್ರಗಳಿಂದಲೂ ಹೊಗೆಯಿಂದೊಡಗೂಡಿದ ಬೆಂಕಿಯ ಜ್ವಾಲೆಗಳು ಹೊರಹೊಮ್ಮಿದವು. ಇಡೀ ನಾಗಲೋಕವೇ ಸುಟ್ಟು ಭಸ್ಮವಾಗುವುದರಲ್ಲಿತ್ತು. ಆಗ ಅಗ್ನಿತೇಜೋಭಯದಿಂದ ಸಂಭ್ರಾಂತಿಹೊಂದಿ ವಿಷಣ್ಣನಾದ ತಕ್ಷಕನು ಅವಸರದಲ್ಲಿ ಕುಂಡಲಗಳನ್ನು ಹಿಡಿದು ಸ್ವಭವನದಿಂದ ಹೊರಬಿದ್ದು ಉತ್ತಂಕನಿಗೆ

“ನಿನ್ನ ಈ ಕುಂಡಲಗಳನ್ನು ಪ್ರತಿಗ್ರಹಿಸಬೇಕು”

ಎಂದನು. ಉತ್ತಂಕನು ಆ ಕುಂಡಲಗಳನ್ನು ಸ್ವೀಕರಿಸಿ ಯೋಚಿಸಿದನು:

“ಇಂದು ಉಪಾಧ್ಯಾಯಿನಿಯು ಹೇಳಿದ ಪುಣ್ಯದಿನ. ಆದರೆ ನಾನು ತುಂಬಾ ದೂರ ಬಂದುಬಿಟ್ಟಿದ್ದೇನೆ. ಇವುಗಳನ್ನು ಅವಳಿಗೆ ತೆಗೆದುಕೊಂಡುಹೋಗಲು ಹೇಗೆ ಸಾಧ್ಯ?”

ಈ ರೀತಿ ಚಿಂತಿಸುತ್ತಿದ್ದಾಗ ಆ ಪುರುಷನು ಹೇಳಿದನು:

“ಉತ್ತಂಕ! ಈ ಅಶ್ವವನ್ನೇರು. ಇದು ನಿನ್ನನ್ನು ಕ್ಷಣಮಾತ್ರದಲ್ಲಿ ಉಪಾಧ್ಯಾಯನ ಮನೆಗೆ ತಲುಪಿಸುತ್ತದೆ.”

ಇದನ್ನು ಕೇಳಿ ಅವನು ಆ ಕುದುರೆಯನ್ನೇರಿ ಉಪಾಧ್ಯಾಯನ ಮನೆಯನ್ನು ತಲುಪಿದನು. ಸ್ನಾನ ಮಾಡಿ ತಲೆಗೂದಲನ್ನು ಸಿಂಗರಿಸಿಕೊಳ್ಳುತ್ತಿದ್ದ ಉಪಾಧ್ಯಾಯನಿಯು

“ಉತ್ತಂಕನು ಇನ್ನೂ ಬಂದಿಲ್ಲವಲ್ಲ”

ಎಂದು ಅವನನ್ನು ಶಪಿಸುವವಳಿದ್ದಳು. ಅದೇ ವೇಳೆಗೆ ಉತ್ತಂಕನು ಪ್ರವೇಶಿಸಿ ಉಪಾಧ್ಯಾಯಿನಿಯನ್ನು ನಮಸ್ಕರಿಸಿ ಹೇಳಿದನು:

“ನೀವು ಕೇಳಿದ ಕುಂಡಲಗಳಿವು.”

ಅವಳು ಉತ್ತರಿಸಿದಳು:

“ಉತ್ತಂಕ! ನೀನು ಸರಿಯಾದ ಹೊತ್ತಿಗೆ ಇಲ್ಲಿಗೆ ಬಂದಿದ್ದೀಯೆ. ನಿನಗೆ ಸ್ವಾಗತ. ಒಳ್ಳೆಯದಾಯಿತು ನಾನು ನಿನ್ನನ್ನು ಶಪಿಸಲಿಲ್ಲ. ನಿನಗೆ ಶ್ರೇಯಸ್ಸಾಗುತ್ತದೆ. ನಿನ್ನ ಆಸೆಗಳು ಸಿದ್ಧಿಯಾಗಲಿ.”

ತರುವಾಯ ಉತ್ತಂಕನು ಉಪಾಧ್ಯಾಯನಲ್ಲಿಗೆ ಹೋಗಿ ನಮಸ್ಕರಿಸಿದನು. ಉಪಾಧ್ಯಾಯನು ಕೇಳಿದನು:

“ವತ್ಸ ಉತ್ತಂಕ! ಸ್ವಾಗತವು ನಿನಗೆ. ನಿನ್ನ ಕೆಲಸವು ಏಕೆ ತಡವಾಯಿತು?”

ಉತ್ತಂಕನು ಉಪಾಧ್ಯಾಯನಿಗೆ ಉತ್ತರಿಸಿದನು:

“ಸ್ವಾಮಿ! ನನ್ನ ಕಾರ್ಯದಲ್ಲಿ ವಿಘ್ನವನ್ನು ತಂದೊಡ್ಡಿದ ನಾಗರಾಜ ತಕ್ಷಕನಿಂದ ನಾನು ನಾಗಲೋಕದವರೆಗೆ ಎಳೆದೊಯ್ಯಲ್ಪಟ್ಟೆ. ಅಲ್ಲಿ ನಾನು ಸ್ತ್ರೀಯರೀರ್ವರು ಕಪ್ಪು ಮತ್ತು ಬಿಳಿ ನೂಲುಗಳಿಂದ ಬಟ್ಟೆಯನ್ನು ನೇಯುತ್ತಿರುವುದನ್ನು ನೋಡಿದೆ. ಅವರ್ಯಾರಿದ್ದರು? ಮತ್ತು ಅಲ್ಲಿ ಹನ್ನೆರಡು ಅರಗಳಿರುವ ಚಕ್ರವನ್ನು ಆರು ಕುಮಾರರು ತಿರುಗಿಸುತ್ತಿರುವುದನ್ನೂ ನೋಡಿದೆ. ಅವರು ಯಾರಿದ್ದರು? ಅಶ್ವವನ್ನೇರಿದ್ದ ಪುರುಷನೋರ್ವನನ್ನೂ ನೋಡಿದೆ. ಅವನು ಯಾರಿದ್ದನು? ಕುದುರೆಯು ಬಹಳ ದೊಡ್ಡದಾಗಿತ್ತು. ಅದು ಏನಿತ್ತು? ಹೋಗುವಾಗ ದಾರಿಯಲ್ಲಿ ಒಂದು ಹೋರಿಯನ್ನು ನೋಡಿದೆ. ಅದನ್ನು ಒಬ್ಬ ಪುರುಷನು ಸವಾರಿಮಾಡುತ್ತಿದ್ದನು. ಅವನು ನನಗೆ ಪ್ರೀತಿಯಿಂದ ಉತ್ತಂಕ! ಹೋರಿಯ ಸಗಣಿಯನ್ನು ತಿನ್ನು ಎಂದನು. ಅದೂ ಕೂಡ ಏನೆಂದು ನಿನ್ನಿಂದ ತಿಳಿಯಲು ಬಯಸುತ್ತೇನೆ.”

ಉಪಾಧ್ಯಾಯನು ಉತ್ತರಿಸಿದನು:

“ಆ ಸ್ತ್ರೀಯರು ಧಾತಾ ಮತ್ತು ವಿಧಾತರು. ಆ ಕಪ್ಪು ಮತ್ತು ಬಿಳಿ ತಂತುಗಳು ರಾತ್ರಿ ಹಗಲುಗಳು. ಆರು ಕುಮಾರರಿಂದ ತಿರುಗಿಸಲ್ಪಡುತ್ತಿದ್ದ ಹನ್ನೆರಡು ಅರಗಳ ಆ ಚಕ್ರವು ವರ್ಷ ಮತ್ತು ಆರು ಋತುಗಳು. ಆ ಪುರುಷನು ಪರ್ಜನ್ಯ ಮತ್ತು ಕುದುರೆಯು ಅಗ್ನಿ. ಹೋಗುವಾಗ ದಾರಿಯಲ್ಲಿ ನೀನು ನೋಡಿದ ಹೋರಿಯು ಆನೆಗಳ ರಾಜ ಐರಾವತ. ಅದರ ಮೇಲೆ ಸವಾರಿಮಾಡುತ್ತಿದ್ದವನು ಇಂದ್ರ. ಮತ್ತು ನೀನು ಭಕ್ಷಿಸಿದ ಆ ಹೋರಿಯ ಸಗಣಿ ಅಮೃತ. ನನ್ನ ಸಖ ಇಂದ್ರನ ಸಹಾಯದಿಂದ ನೀನು ನಾಗಭವನದಲ್ಲಿ ಏನೂ ತೊಂದರೆಯನ್ನು ಅನುಭವಿಸಲಿಲ್ಲ. ಅವನ ಅನುಗ್ರಹದಿಂದಲೇ ನೀನು ಕುಂಡಲಗಳನ್ನು ತೆಗೆದುಕೊಂಡು ಹಿಂದಿರುಗಿರುವೆ. ಇನ್ನು ನೀನು ಹೋಗಬಹುದು. ನಿನಗೆ ನನ್ನ ಅನುಮತಿ ಇದೆ. ನಿನಗೆ ಶ್ರೇಯಸ್ಸಾಗುತ್ತದೆ.”

ಉಪಾಧ್ಯಾಯನನ್ನು ಬೀಳ್ಕೊಂಡು, ತಕ್ಷಕನ ಮೇಲೆ ಸಿಟ್ಟಿಗೆದ್ದ ಉತ್ತಂಕನು ಅವನ ಮೇಲೆ ಸೇಡು ತೀರಿಸುವ ಉದ್ದೇಶದಿಂದ ಹಸ್ತಿನಾಪುರಕ್ಕೆ ಹೊರಟನು. ಹಸ್ತಿನಾಪುರವನ್ನು ತಲುಪಿದ ತಕ್ಷಣವೇ ಆ ದ್ವಿಜಸತ್ತಮ ಉತ್ತಂಕನು ರಾಜ ಜನಮೇಜಯನ ಬಳಿ ಹೋದನು. ತಕ್ಷಶಿಲೆಯನ್ನು ಗೆದ್ದು ಹಿಂದಿರುಗಿ, ಸಾಮಂತರು ಮತ್ತು ಮಂತ್ರಿಗಳಿಂದ ಸುತ್ತುವರೆದಿದ್ದ ಆ ವಿಜಯಿಯನ್ನು ಕಂಡು ಸರಿಯಾದ ಸಮಯವನ್ನು ನೋಡಿ ಶಬ್ಧ ಸಂಪನ್ನ ವಾಣಿಯಲ್ಲಿ ಹೇಳಿದನು:

“ಪಾರ್ಥಿವಸತ್ತಮ! ಮಾಡಬೇಕಾದ ಮುಖ್ಯ ಕಾರ್ಯವನ್ನು ಬಿಟ್ಟು ಬಾಲಕನಂತೆ ಬೇರೆ ಏನನ್ನೋ ಮಾಡುತ್ತ ಸುಮ್ಮನೆ ಕಾಲಹರಣ ಮಾಡುತ್ತಿರುವೆ.”

ಆ ವಿಪ್ರನು ಈ ರೀತಿ ಹೇಳಲು ಪ್ರಸನ್ನಾತ್ಮ ರಾಜ ಜನಮೇಜಯನು ಮುನಿಯನ್ನು ಸರಿಯಾದ ರೀತಿಯಲ್ಲಿ ಪೂಜಿಸಿ ಉತ್ತರಿಸಿದನು:

“ಪ್ರಜೆಗಳನ್ನು ಪರಿಪಾಲಿಸುವ ನನ್ನ ಕ್ಷಾತ್ರಧರ್ಮವನ್ನು ಪರಿಪಾಲಿಸುತ್ತಿದ್ದೇನೆ. ದ್ವಿಜೇಂದ್ರ! ನೀನು ಯಾವ ಕಾರ್ಯದ ಕುರಿತು ಹೇಳುತ್ತಿರುವೆ ಎನ್ನುವುದನ್ನು ವಿವರಿಸಿ ಹೇಳು”

ನೃಪೋತ್ತಮನ ಈ ಮಾತುಗಳನ್ನು ಕೇಳಿ ಪುಣ್ಯಕೃತರಲ್ಲಿ ವರಿಷ್ಠ ದ್ವಿಜೋತ್ತಮನು ರಾಜನಿಗೆ ಹೇಳಿದನು:

“ನೃಪತಿ! ನಿನ್ನದೇ ಆದ ಒಂದು ಕಾರ್ಯವಿದೆ. ನಿನ್ನ ತಂದೆಯು ಯಾವ ನಾಗೇಂದ್ರ ತಕ್ಷಕನಿಂದ ಹಿಂಸೆಗೊಳಗಾಗಿದ್ದನೋ ಆ ದುರಾತ್ಮ ಪನ್ನಗನ ಮೇಲೆ ನೀನು ಪ್ರತೀಕಾರ ಮಾಡಬೇಕು. ನನ್ನ ವಿಚಾರದಲ್ಲಿ ನಿನ್ನ ಮಹಾತ್ಮ ತಂದೆಯ ಮರಣದ ಸೇಡನ್ನು ತೀರಿಸಿಕೊಳ್ಳುವ ಕಾಲವು ಬಂದಿದೆ. ಅನಪರಾಧಿಯಾದ ಆ ರಾಜನು ದುಷ್ಟಾಂತರಾತ್ಮನಿಂದ ಕಡಿಯಲ್ಪಟ್ಟು ಮಿಂಚಿನಿಂದ ಹೊಡೆಯಲ್ಪಟ್ಟ ವೃಕ್ಷದಂತೆ ಪಂಚಭೂತಗಳಲ್ಲಿ ಒಂದಾದನು. ತನ್ನ ಬಲದರ್ಪದಿಂದ ಉನ್ಮತ್ತನಾದ ಆ ಪನ್ನಗಾಧಮ ತಕ್ಷಕನು ನಿನ್ನ ತಂದೆಯನ್ನು ಕಚ್ಚುವ ಪಾಪ ಕಾರ್ಯವನ್ನು ಮಾಡಿದ್ದಾನೆ. ರಾಜರ್ಷಿಗಳ ವಂಶೋದ್ಧಾರಕ ಅಮರಪ್ರತಿಮ ನೃಪನನ್ನು ರಕ್ಷಿಸಲು ಬರುತ್ತಿದ್ದ ಕಾಶ್ಯಪನನ್ನು ಕೂಡ ಹಿಂದೆ ಕಳುಹಿಸಿದನು. ನಿನ್ನಿಂದ ನೆರವೇರಿಸಲ್ಪಡುವ ಸರ್ಪಸತ್ರದಲ್ಲಿ ಆ ಪಾಪಿಯನ್ನು ಪ್ರಜ್ವಲಿಸುತ್ತಿರುವ ಅಗ್ನಿಯಲ್ಲಿ ಸುಟ್ಟುಹಾಕಬೇಕು. ಇದರಿಂದ ನಿನ್ನ ತಂದೆಯ ಮರಣದ ಸೇಡು ತೀರುತ್ತದೆ ಮತ್ತು ನನಗೆ ಪ್ರಿಯವಾದ ಒಂದು ದೊಡ್ಡ ಕೆಲಸವನ್ನು ಮಾಡಿಕೊಟ್ಟಹಾಗೂ ಆಗುತ್ತದೆ. ಒಮ್ಮೆ ನಾನು ಗುರುದಕ್ಷಿಣೆಯನ್ನು ತರುವಾಗ ಆ ದುರಾತ್ಮನು ವಿಘ್ನವನ್ನು ತಂದೊಡ್ಡಿದ್ದನು.”

ಉತ್ತಂಕನ ಈ ಮಾತುಗಳನ್ನು ಕೇಳಿದ ನೃಪತಿಯು ಅಗ್ನಿಯಲ್ಲಿ ತುಪ್ಪವನ್ನು ಹವಿಸ್ಸನ್ನಾಗಿ ಹಾಕಿದಾಗ ಅದು ಹೇಗೆ ಪ್ರಜ್ವಲಿಸುತ್ತದೆಯೋ ಹಾಗೆ ತಕ್ಷಕನ ಮೇಲೆ ಸಿಟ್ಟಿಗೆದ್ದನು. ಬಹು ದುಃಖಿತನಾದ ರಾಜನು ಉತ್ತಂಕನ ಸನ್ನಿಧಿಯಲ್ಲಿಯೇ ತನ್ನ ತಂದೆಯು ಸ್ವರ್ಗಗತಿಯನ್ನು ಪಡೆದುದರ ಕುರಿತು ತನ್ನ ಮಂತ್ರಿಗಳಲ್ಲಿ ಕೇಳಿದನು. ಉತ್ತಂಕನಿಂದ ತನ್ನ ತಂದೆಯ ವೃತ್ತಾಂತವನ್ನು ಕೇಳಿದ ರಾಜೇಂದ್ರನು ದುಃಖಶೋಕದಲ್ಲಿ ಮುಳುಗಿದನು.

ಜನಮೇಜಯನಿಗೆ ಅವನ ತಂದೆಯ ಸ್ವರ್ಗಗತಿಯ ಬಗ್ಗೆ ತಿಳಿದುದು

ಪರಿಕ್ಷಿತನ ನಿಧನದ ಕುರಿತು ನೃಪತಿಯು ಮಂತ್ರಿಗಳಲ್ಲಿ ಏನನ್ನು ಕೇಳಿದನು:

“ನನ್ನ ತಂದೆ ಮಹಾಯಶಸ್ವಿಯು ಹೇಗಿದ್ದ ಮತ್ತು ಅವನು ಹೇಗೆ ಸಾವನ್ನಪ್ಪಿದ ಎನ್ನುವುದನ್ನು ನೀವು ಯಥವತ್ತಾಗಿ ತಿಳಿದಿದ್ದೀರಿ. ತಂದೆಯ ಕುರಿತು ಎಲ್ಲವನ್ನೂ ನಿಮ್ಮಿಂದ ಕೇಳಿದ ನಂತರವೇ ಯಾವುದು ಕಲ್ಯಾಣಕರವಾದುದೋ ಅದನ್ನು ಮಾಡುತ್ತೇನೆ. ಅನ್ಯಥಾ ಇಲ್ಲ.”

ಆ ಮಾಹಾತ್ಮ ರಾಜ ಜನಮೇಜಯನ ಮಾತುಗಳನ್ನು ಕೇಳಿದ ಸರ್ವ ಧರ್ಮವಿದ ಪ್ರಾಜ್ಞ ಮಂತ್ರಿಗಳು ಹೇಳಿದರು:

“ನಿನ್ನ ತಂದೆಯು ಧರ್ಮಾತ್ಮನೂ, ಮಹಾತ್ಮನೂ, ಪ್ರಜಾಪಾಲಕನೂ ಆಗಿದ್ಡನು. ಆ ಮಹಾತ್ಮನು ಹೇಗೆ ನಡೆದುಕೊಳ್ಳುತ್ತಿದ್ದನು ಎನ್ನುವುದನ್ನು ಕೇಳು. ಸ್ವಧರ್ಮದಲ್ಲಿ ನಿಷ್ಠನಾಗಿದ್ದು ನಾಲ್ಕೂವರ್ಣದವರನ್ನು ರಕ್ಷಿಸುತ್ತಿದ್ದನು. ಧರ್ಮನಂತೆಯೇ ರಾಜನು ಧರ್ಮವತ್ತಾಗಿ ಧಾರ್ಮಿಕನಾಗಿದ್ದನು.  ಶ್ರೀಮಂತನೂ ಅತುಲ ವಿಕ್ರಮಿಯೂ ಆದ ಅವನು ಪೃಥ್ವೀ ದೇವಿಯನ್ನು ರಕ್ಷಿಸುತ್ತಿದ್ದನು. ಅವನಿಗೆ ಯಾರ ಮೇಲೂ ದ್ವೇಷವಿರಲಿಲ್ಲ ಮತ್ತು ಯಾರೂ ಅವನನ್ನು ದ್ವೇಷಿಸುತ್ತಿರಲಿಲ್ಲ. ಪ್ರಜಾಪತಿಯಂತೆ ಸರ್ವರನ್ನೂ ಒಂದೇಸಮನಾಗಿ ಕಾಣುತ್ತಿದ್ದನು. ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರೆಲ್ಲರೂ ತಮ್ಮ ತಮ್ಮ ಕರ್ಮಗಳಲ್ಲಿ ನಿರತರಾಗಿದ್ದು, ಸುಖಮನಸ್ಕರಾಗಿ, ರಾಜನ ರಾಜ್ಯಭಾರದಿಂದ ಸುರಕ್ಷಿತರಾಗಿದ್ದರು. ವಿಧವೆಯರ, ಅನಾಥರ ಮತ್ತು ಬಡವರ ಜೀವನ ಜವಾಬ್ದಾರಿಯನ್ನು ಹೊತ್ತ ಆ ಸುಂದರನು ಸರ್ವರಿಗೂ ಚಂದ್ರನಂತಿದ್ದನು. ಜನರೆಲ್ಲರೂ ತುಷ್ಟಪುಷ್ಟರೂ, ಶ್ರೀಮಂತರೂ, ಸತ್ಯವಂತರೂ, ದೃಢವಿಕ್ರಮಿಗಳೂ ಆಗಿದ್ದರು. ಧನುರ್ವೇದದ ಶಿಷ್ಯನಾದ ನೃಪನು ಶಾರದ್ವತನಂತಿದ್ದನು. ಜನಮೇಜಯ! ಗೋವಿಂದನ ಪ್ರಿಯಕರನಾಗಿದ್ದ ನಿನ್ನ ತಂದೆಯು ಲೋಕದಲ್ಲಿ ಸರ್ವರ ಪ್ರಿಯಕರನಾಗಿ ಮಹಾ ಯಶಸ್ವಿಯಾಗಿದ್ದನು. ಕುರುಗಳ ಪರಿಕ್ಷೀಣವಾದಾಗ ಉತ್ತರೆಯಲ್ಲಿ ಹುಟ್ಟಿದ ಆ ಅಭಿಮನ್ಯುವಿನ ಬಲಶಾಲಿ ಮಗನನ್ನು ಪರಿಕ್ಷಿತ ಎಂದು ಕರೆದರು. ರಾಜಧರ್ಮಾರ್ಥ ಕುಶಲನಾಗಿದ್ದ ಆ ರಾಜನು ಸರ್ವಗುಣ ಸಂಪನ್ನನೂ. ಸ್ವತಃ ಜಿತೇಂದ್ರಿಯನೂ, ಮೇಧಾವಿಯೂ, ವೃದ್ಧರ ಸೇವನಿರತನೂ ಆಗಿದ್ದನು. ಷಡ್ವರ್ಗಗುಣಯುಕ್ತನಾದ ಮಹಾಬುದ್ಧಿಶಾಲಿಯೂ, ನೀತಿಧರ್ಮ ವಿದುತ್ತಮನೂ ಆದ ನಿನ್ನ ತಂದೆಯು ಅರವತ್ತು ವರ್ಷಗಳ ಕಾಲ ಪ್ರಜಾಪಾಲನೆಯನ್ನು ಮಾಡಿದನು. ನಂತರ ಅವನಿಗೆ ಒಂದು ಸರ್ಪದಿಂದ ತಡೆಗಟ್ಟಲಾಗದಂಥಹ ಆಪತ್ತು ಸಂಭವಿಸಿತು. ಅವನ ನಂತರ ಪುರುಷಶ್ರೇಷ್ಠನಾದ ನೀನು ಸಹಸ್ರಾರು ವರ್ಷಗಳಿಂದ ಕುರುಕುಲಾಗತವಾಗಿದ್ದ ಈ ರಾಜ್ಯವನ್ನು ದರ್ಮಪೂರ್ವಕವಾಗಿ ಪಡೆದೆ. ಸರ್ವಭೂತಾನುಪಾಲಕ! ನೀನು ಬಾಲಕನಾಗಿರುವಾಗಲೇ ನಿನ್ನನ್ನು ಅಭಿಷಿಕ್ತನನ್ನಾಗಿ ಮಾಡಲಾಗಿತ್ತು.”

ಜನಮೇಜಯನು ಹೇಳಿದನು:

“ಪ್ರಜೆಗಳ ಹಿತವನ್ನಾಗಲೀ ಅವರಿಗೆ ಬೇಕಾಗಿದ್ದುದನ್ನಾಗಲೀ ಮಾಡದೇ ಇದ್ದ ರಾಜರು ಯಾರೂ ನನ್ನ ಈ ಕುಲದಲ್ಲಿ ಹುಟ್ಟಲಿಲ್ಲ. ವಿಶೇಷವಾಗಿ ನನ್ನ ಪಿತಾಮಹರು ಮಹಾ ಕಾರ್ಯಗಳನ್ನೆಸಗಿದವರು. ಹೀಗಿರುವಾಗ ನನ್ನ ತಂದೆಯಾದರೂ ಹೇಗೆ ಸಾವೆಂಬ ಆಪತ್ತಿಗೆ ಒಳಗಾದನು? ನನಗೆ ವಿವರಿಸಿ. ಯಥಾವತ್ತಾಗಿ ಕೇಳಲು ಬಯಸುತ್ತೇನೆ.”

ಈ ರೀತಿ ರಾಜನಿಂದ ಆಜ್ಞೆಯಾದಾಗ ಮಂತ್ರಿಗಳು ಪ್ರಿಯಹಿತ ನಿರತ ರಾಜ ನರಾಧಿಪನಿಗೆ ಎಲ್ಲವನ್ನೂ ವರದಿಮಾಡಿದರು:

“ರಾಜನ್! ಯುದ್ಧದಲ್ಲಿ ಮಹಾಭಾಗ ಪಾಂಡುವಿನಂತೆ ಶ್ರೇಷ್ಠ ಧನುರ್ಧರನಾದ ನಿನ್ನ ತಂದೆಯು ಸದಾ ಮೃಗಯಾಶೀಲನಾಗಿ ರಾಜಕಾರ್ಯಗಳೊಂದನ್ನೂ ಬಿಡದೇ ಎಲ್ಲವನ್ನು ನಮಗೊಪ್ಪಿಸಿದ್ದನು. ಒಮ್ಮೆ ಅವನು ವನದಲ್ಲಿ ಸಂಚರಿಸುತ್ತಿದ್ದ ಮೃಗವೊಂದನ್ನು ಬಾಣದಿಂದ ಹೊಡೆದು, ಖಡ್ಗ ಮತ್ತು ಧನುಸ್ಸು ಭತ್ತಳಿಗೆಗಳನ್ನು ಹಿಡಿದು ಕಾಲ್ನಡುಗೆಯಲ್ಲಿಯೇ ಹೊಡೆತ ತಿಂದ ಮೃಗವನ್ನು ಆ ದಟ್ಟಡವಿಯಲ್ಲಿ ಹಿಂಬಾಲಿಸುತ್ತಾ ಹೋದನು. ಆದರೆ ನಿನ್ನ ತಂದೆಗೆ ಆ ಮೃಗವು ದೊರೆಯಲೇ ಇಲ್ಲ. ಅರವತ್ತು ವರ್ಷ ವಯಸ್ಸಿನ ವೃದ್ದನಾಗಿದ್ದ ಅವನು ಆಯಾಸಗೊಂಡು ಹಸಿವು ಬಾಯಾರಿಕೆಗಳಿಂದ ಬಳಲಿ, ಆ ಮಹಾರಣ್ಯದಲ್ಲಿ ಓರ್ವ ಮುನಿಯನ್ನು ಕಂಡನು. ಆ ಸಮಯದಲ್ಲಿ ಮೌನವ್ರತವನ್ನಾಚರಿಸುತ್ತಿದ್ದ ಆ ಮುನಿಯನ್ನು ರಾಜೇಂದ್ರನು ಕೇಳಿದನು. ಪುನಃ ಪುನಃ ಕೇಳಿದರೂ ಆ ಮುನಿಯು ಯಾವ ಉತ್ತರವನ್ನೂ ನೀಡಲಿಲ್ಲ. ಹಸಿವು ಬಾಯಾರಿಕೆಗಳಿಂದ ಬಳಲಿದ್ದ ರಾಜನು ಮೌನವ್ರತಧರನಾಗಿ ಶಾಂತವಾಗಿ ಅಲುಗಾಡದೇ ಕುಳಿತಿದ್ದ ಮುನಿಯನ್ನು ಕಂಡು ಸಿಟ್ಟಿಗೆದ್ದನು. ಮುನಿಯು ಮೌನವ್ರತವನ್ನು ಪಾಲಿಸುತ್ತಿದ್ದಾನೆಂದು ತಿಳಿಯದೇ ನಿನ್ನ ತಂದೆ ರಾಜನು ಸಿಟ್ಟಿನ ಆವೇಶದಲ್ಲಿ ಅವನನ್ನು ಅಪಮಾನಿಸಿದನು. ಭರತಸತ್ತಮನು ತನ್ನ ಧನುಸ್ಸಿನ ತುದಿಯಿಂದ ನೆಲದ ಮೇಲೆ ಸತ್ತು ಬಿದ್ದಿದ್ದ ಸರ್ಪವನ್ನು ಮೇಲೆತ್ತಿ ಆ ಶುದ್ಧಾತ್ಮನ ಭುಜಗಳ ಮೇಲೆ ಹಾಕಿದನು. ಆದರೂ ಆ ಮೇಧಾವಿಯು ಒಳ್ಳೆಯದಾಗಲೀ ಕೆಟ್ಟುದಾಗಲೀ ಒಂದು ಮಾತನ್ನೂ ಆಡಲಿಲ್ಲ. ಸರ್ಪವನ್ನು ತನ್ನ ಭುಜದ ಮೇಲೆ ಹೊತ್ತು ಹಾಗೆಯೇ ನಿಂತುಕೊಂಡಿದ್ದನು. ಹಸಿದು ಆಯಾಸಗೊಂಡಿದ್ದ ರಾಜೇಂದ್ರನು ಆ ಮುನಿಯ ಭುಜದ ಮೇಲೆ ಸರ್ಪವನ್ನು ಏರಿಸಿ ತನ್ನ ನಗರಿಗೆ ಮರಳಿದನು. ಆ ಋಷಿಗೆ ಹಸುವಿನಲ್ಲಿ ಹುಟ್ಟಿದ್ದ ಮಹಾಯಶಸ್ವಿ, ಮಹಾತೇಜಸ್ವಿ, ತಿಗ್ಮವೀರ್ಯ, ಮತ್ತು ಅತಿಕೋಪಿ ಶೃಂಗಿ ಎಂಬ ಹೆಸರಿನ ಮಗನಿದ್ದನು. ಆ ಮುನಿಯು ಬ್ರಹ್ಮನಲ್ಲಿಗೆ ಹೋಗಿ ಅವನ ಪೂಜೆಯನ್ನು ಮಾಡುತ್ತಿದ್ದನು. ಒಮ್ಮೆ ಅವನು ಮರಳಿ ಬರುತ್ತಿರುವಾಗ ಅವನ ಗೆಳೆಯನು ನಿನ್ನ ತಂದೆಯು ಮೃತ ಸರ್ಪವೊಂದನ್ನು ಭುಜಗಳ ಮೇಲಿರಿಸಿಕೊಂಡಿದ್ದಾನೆ ಎಂದು ಅವನ ತಂದೆಗೆ ಆದ ಅಪಮಾನದ ಕುರಿತು ಹೇಳಿದನು. ನಿನ್ನ ತಂದೆಯು ಓರ್ವ ಮುನಿಪ್ರವರ, ಜಿತೇಂದ್ರಿಯ, ವಿಶುದ್ಧ, ಅದ್ಭುತಕರ್ಮನಿರತ, ತಪಸ್ಸಿನಿಂದ ಆತ್ಮ ಮತ್ತು ಅಂಗಗಳು ಕಾಂತಿಯುಕ್ತವಾಗಿರುವ, ಶುಭಾಚಾರಿ, ಶುಭವಾಚಕ, ಸುಸ್ಥಿರ, ತಮಲೋಲುಪ, ಅಕ್ಷುದ್ರ, ಅನಸೂಯ, ವೃಧ್ಧ, ಮೌನವ್ರತದಲ್ಲಿದ್ದ, ಸರ್ವಭೂತಗಳ ಶರಣ್ಯನಾದ ಆ ಉಗ್ರತಪಸ್ವಿಯನ್ನು ಅಪಮಾನಿಸಿದ್ದನು. ಇದನ್ನು ಕೇಳಿ ರೋಷಾನ್ವಿತನಾಗಿ ಬಾಲಕನಾಗಿದ್ದರೂ ಶ್ರೇಷ್ಠನಾಗಿದ್ದ ಮಹಾತೇಜಸ್ವಿ ಋಷಿಪುತ್ರನು ನಿನ್ನ ತಂದೆಯನ್ನು ಶಪಿಸಿದನು. ತಕ್ಷಣವೇ ಅವನು ನೀರನ್ನು ಸ್ಪರ್ಷಿಸಿ ರೋಷದಿಂದ ಪ್ರಜ್ವಲಿಸುವ ತೇಜಸ್ಸುಳ್ಳವನಾಗಿ ನಿನ್ನ ತಂದೆಯನ್ನುದ್ದೇಶಿಸಿ ಹೇಳಿದನು:

"ಮೃತಸರ್ಪವನ್ನು ಯಾವ ಪಾಪಿಯು ನನ್ನ ಗುರುವಿಗೆ ತೊಡಿಸಿದ್ದಾನೆಯೋ ಅವನನ್ನು ನಾಗ ತಕ್ಷಕನು ಇಂದಿನಿಂದ ಏಳು ರಾತ್ರಿಗಳೊಳಗೆ ತನ್ನ ವಿಷದಿಂದ ಸುಟ್ಟುಹಾಕುತ್ತಾನೆ. ನನ್ನ ತಪೋಬಲವನ್ನು ಆ ಪಾಪಿಯು ನೋಡಲಿ."

ಹೀಗೆ ಹೇಳಿ ಅವನು ತನ್ನ ತಂದೆಯಿದ್ದಲ್ಲಿಗೆ ಬಂದು ಅವನನ್ನು ಕಂಡು ಶಾಪದ ಕುರಿತು ವರದಿ ಮಾಡಿದನು. ಆಗ ಆ ಮುನಿಶಾರ್ದೂಲನು ನಿನ್ನ ತಂದೆಗೆ ಒಂದು ಸಂದೇಶವನ್ನು ಕಳುಹಿಸಿದನು:

"ಮಹೀಪತೇ! ನೀನು ನನ್ನ ಪುತ್ರನಿಂದ ಶಪಿಸಲ್ಪಟ್ಟಿದ್ದೀಯೆ. ತಕ್ಷಕನು ತನ್ನ ತೇಜಸ್ಸಿನಿಂದ ನಿನ್ನನ್ನು ಸುಡಲಿದ್ದಾನೆ."

ಆ ಘೋರ ವಚನಗಳನ್ನು ಕೇಳಿದ ನಿನ್ನ ತಂದೆಯು ಪನ್ನಗೋತ್ತಮ ತಕ್ಷಕನಿಂದ ತಪ್ಪಿಸಿಕೊಳ್ಳಲು ಎಲ್ಲಾ ತರಹದ ಮುಂಜಾಗರೂಕತೆಯನ್ನೂ ತೆಗೆದುಕೊಂಡನು. ಏಳನೆಯ ದಿವಸವು ಬಂದಾಗ ರಾಜನ ಬಳಿಗೆ ಬ್ರಹ್ಮರ್ಷಿ ಕಾಶ್ಯಪನು ಬರಲು ಉತ್ಸುಕನಾಗಿದ್ದನು. ಆಗ ನಾಗೇಂದ್ರ ತಕ್ಷಕನು ಕಾಶ್ಯಪನನ್ನು ನೋಡಿದನು. ಅವಸರದಲ್ಲಿ ಬರುತ್ತಿದ್ದ ಕಾಶ್ಯಪನಲ್ಲಿ ಪನ್ನಗೇಂದ್ರನು ಕೇಳಿದನು:

"ಇಷ್ಟೊಂದು ಅವಸರದಲ್ಲಿ ನೀನು ಎಲ್ಲಿಗೆ ಹೋಗುತ್ತಿರುವೆ ಮತ್ತು ಅಲ್ಲಿ ಏನು ಕೆಲಸವಿದೆ?"

ಕಾಶ್ಯಪನು ಹೇಳಿದನು:

"ದ್ವಿಜನೇ! ನಾಗ ತಕ್ಷಕನು ಕಚ್ಚಲಿರುವ ಪರಿಕ್ಷಿತನೆಂಬ ಹೆಸರಿನ ಕುರುಶ್ರೇಷ್ಠ ರಾಜನಲ್ಲಿಗೆ ಅವನು ಆ ಸರ್ಪದ ಕಡಿತದಿಂದ ಸಾಯದ ಹಾಗೆ ಚಿಕಿತ್ಸೆಯನ್ನು ನೀಡಲು ಅವಸರದಲ್ಲಿ ಹೋಗುತ್ತಿದ್ದೇನೆ."

ತಕ್ಷಕನು ಹೇಳಿದನು:

"ನಾನು ಕಚ್ಚುವವನನ್ನು ನೀನು ಬದುಕಿಸಲು ಏಕೆ ಬಯಸುತ್ತೀಯೆ? ನಿನ್ನ ಆಸೆಯೇನೆಂಬುದನ್ನು ಹೇಳು. ನೀನು ಅಲ್ಲಿಗೆ ಯಾವುದರ ಆಸೆಯಿಂದ ಹೋಗುತ್ತಿದ್ದೀಯೋ ಅದನ್ನು ನಾನೇ ಕೊಡುತ್ತೇನೆ."

"ಹಣದ ಆಸೆಯಿಂದ ಅಲ್ಲಿಗೆ ಹೋಗುತ್ತಿದ್ದೇನೆ" ಎಂದು ಹೇಳಲು ಅವನು ಆ ಮಹಾತ್ಮನಿಗೆ ಗೌರವಯುಕ್ತ ಶ್ಲಾಘನೀಯ ಮಾತುಗಳನ್ನಾಡಿದನು:

"ಅನಘ! ನೀನು ರಾಜನಿಂದ ಎಷ್ಟು ಧನವನ್ನು ಕೇಳ ಬಯಸುತ್ತೀಯೋ ಅದಕ್ಕೂ ಅಧಿಕವಾದ ಧನವನ್ನು ನನ್ನಿಂದ ಸ್ವೀಕರಿಸಿ ಹಿಂದಿರುಗು."

ನಾಗೇಂದ್ರನ ಈ ಮಾತುಗಳನ್ನು ಕೇಳಿ ದ್ವಿಜಶ್ರೇಷ್ಠ ಕಾಶ್ಯಪನು ತನಗೆ ಬೇಕಾದ್ದಷ್ಟು ಧನವನ್ನು ತಕ್ಷಕನಿಂದ ಪಡೆದು ಹಿಂದಿರುಗಿದನು. ಆ ವಿಪ್ರನು ಹೊರಟುಹೋದ ನಂತರ ತಕ್ಷಕನು ಅರಮನೆಯಲ್ಲಿದ್ದ ನಿನ್ನ ತಂದೆ ನೃಪತಿಶ್ರೇಷ್ಠ ಧಾರ್ಮಿಕ ನೃಪನಲ್ಲಿಗೆ ರೂಪ ಬದಲಾಯಿಸಿಕೊಂಡು ಹೋಗಿ, ಅವನನ್ನು ತನ್ನ ವಿಷಾಗ್ನಿಯಿಂದ ಸುಟ್ಟುಹಾಕಿದನು. ಇದರ ನಂತರ ನಿನಗೆ ರಾಜಾಭಿಷೇಕವನ್ನು ಮಾಡಲಾಯಿತು. ನಾವು ನೋಡಿದ್ದುದನ್ನು ಮತ್ತು ಕೇಳಿದ್ದುದೆಲ್ಲವನ್ನೂ ದಾರುಣವಾಗಿದ್ದರೂ ಯಥಾವತ್ತಾಗಿ ನಿನಗೆ ತಿಳಿಸಿದ್ದೇವೆ. ಪಾರ್ಥಿವನ ಮತ್ತು ನಂತರ ಋಷಿ ಉತ್ತಂಕನ ಪರಾಭವಗಳ ಕುರಿತು ಕೇಳಿದ್ದೀಯೆ. ನಿನಗೆ ಯುಕ್ತವೆನಿಸಿದ್ದುದನ್ನು ಮಾಡು.”

ಜನಮೇಜಯನು ಹೇಳಿದನು:

“ನೀವು ಈಗತಾನೆ ವರದಿ ಮಾಡಿದ ಅಡವಿಯ ನಿರ್ಜನ ವನದಲ್ಲಿ ಪನ್ನಗೇಂದ್ರ ಮತ್ತು ಕಾಶ್ಯಪನ ನಡುವಿನ ಸಂವಾದವನ್ನು ಯಾರು ನೋಡಿದ್ದರು ಅಥವಾ ಕೇಳಿದ್ದರು ಎನ್ನುವುದನ್ನು ಕೇಳಲು ಬಯಸುತ್ತೇನೆ. ಅದನ್ನು ಕೇಳಿದ ನಂತರ ನಾಗಗಳ ವಿನಾಶದ ಕುರಿತು ನನ್ನ ನಿರ್ಧಾರವನ್ನು ತಿಳಿಸುತ್ತೇನೆ.”

ಮಂತ್ರಿಗಳು ಹೇಳಿದರು:

“ರಾಜನ್! ಈ ಹಿಂದೆ ದ್ವಿಜೇಂದ್ರ ಮತ್ತು ಪನ್ನಗೇಂದ್ರನ ಮಧ್ಯೆ ನಡೆದ ಸಂವಾದವನ್ನು ನಾವು ಯಾರಿಂದ ಕೇಳಿದೆವೆನ್ನುವುದನ್ನು ಕೇಳು. ಇಂಧನಾರ್ಥವಾಗಿ ಯಾವನೋ ಒಬ್ಬನು ಒಂದು ವೃಕ್ಷವನ್ನು ಹತ್ತಿ ವೃಕ್ಷದಲ್ಲಿರುವ ಒಣರೆಂಬೆಗಳನ್ನು ಕಟ್ಟಿಗೆಗಳನ್ನಾಗಿ ಕಡಿಯುತ್ತಿದ್ದನು. ಆದರೆ ಆ ವೃಕ್ಷದಲ್ಲಿದ್ದ ಅವನನ್ನು ಪನ್ನಗನಾಗಲೀ ದ್ವಿಜನಾಗಲೀ ನೋಡಲಿಲ್ಲ. ಆ ವೃಕ್ಷದ ಜೊತೆಗೆ ಅವನೂ ಕೂಡ ಭಸ್ಮೀಭೂತನಾಗಿದ್ದ ಮತ್ತು ಅದೇ ಮರದ ಜೊತೆಗೆ ಆ ದ್ವಿಜನ ಪ್ರಭಾವದಿಂದ ಪುನಃ ಜೀವಿತಗೊಂಡಿದ್ದ. ಅವನೇ ಈ ನಗರಕ್ಕೆ ಬಂದು ತಕ್ಷಕ ಮತ್ತು ದ್ವಿಜನ ಕುರಿತು ಎಲ್ಲವನ್ನೂ ಯಥಾವತ್ತಾಗಿ ವರದಿ ಮಾಡಿದನು. ಹೀಗೆ ನಾವು ನಡೆದುದ್ದನ್ನು ಮತ್ತು ಕೇಳಿದ್ದುದನ್ನು ವರದಿಮಾಡಿದ್ದೇವೆ. ಇದನ್ನು ಕೇಳಿದ ನೀನು ಬಯಸಿದ ಹಾಗೆ ಮಾಡು.”

ಮಂತ್ರಿಗಳ ಆ ಮಾತನ್ನು ಕೇಳಿದ ರಾಜ ಜನಮೇಜಯನು ಕೈ ಹಿಂಡಿಕೊಳ್ಳುತ್ತಾ ದುಃಖಾರ್ತನಾಗಿ ರೋದಿಸಿದನು. ಆ ರಾಜೀವಲೋಚನ ರಾಜ ಮಹೀಪಾಲನು ದೀರ್ಘವಾದ ಬಿಸಿ ನಿಟ್ಟುಸಿರು ಬಿಟ್ಟು ಕಣ್ಣುಗಳಿಂದ ಕಣ್ಣೀರು ಸುರಿಸುತ್ತಾ, ದುಃಖಶೋಕಸಮನ್ವಿತನಾಗಿ ಹೇಳಿದನು:

“ನನ್ನ ತಂದೆಯು ಸ್ವರ್ಗಗತಿಯನ್ನು ಹೇಗೆ ಪಡೆದ ಎನ್ನುವುದನ್ನು ನಿಮ್ಮಿಂದ ಕೇಳಿದೆ. ಈಗ ನನ್ನ ಮನಸ್ಸಿನ ಧೃಢ ನಿಶ್ವಯವನ್ನು ತಿಳಿಯಿರಿ. ನನ್ನ ತಂದೆಗೆ ಹಿಂಸೆಕೊಟ್ಟ ದುರಾತ್ಮ ತಕ್ಷಕನಿಗೆ ಪ್ರತೀಕಾರವನ್ನೆಸಗುವ ಕಾರ್ಯದಲ್ಲಿ ವಿಳಂಬಮಾಡಬಾರದು. ಅವನೇ ಋಷಿ ಶೃಂಗಿಯ ಮಾತುಗಳು ನಿಜವಾಗುವಂತೆ ಮಾಡಿದನು ಮತ್ತು ನನ್ನ ತಂದೆಯನ್ನು ಸುಟ್ಟುಹಾಕಿದನು. ಈ ಪಾಪಿಯು ಹೊರಟು ಹೋಗಿದ್ದರೆ ನನ್ನ ತಂದೆಯು ಬದುಕಿರುತ್ತಿದ್ದನು. ಕಾಶ್ಯಪನ ಅನುಗ್ರಹದಿಂದ ಮತ್ತು ಮಂತ್ರಿಗಳ ಕಾಳಜಿಯಂತೆ ಪಾರ್ಥಿವನು ಬದುಕಿದ್ದರೆ ಅವನು ಏನನ್ನು ಕಳೆದುಕೊಳ್ಳುತ್ತಿದ್ದ? ಅಪರಾಜಿತ ರಾಜನಿಗೆ ಪುನರ್ಜೀವನವನ್ನು ಕೊಡಲು ಬರುತ್ತಿದ್ದ ದ್ವಿಜಸತ್ತಮ ಕಾಶ್ಯಪನನ್ನು ಅವನೇ ಮೋಹದಿಂದ ತಡೆಗಟ್ಟಿದನು. ನೃಪನನ್ನು ಬದುಕಿಸಬಾರದೆಂದು ಆ ದ್ವಿಜನಿಗೆ ಸಂಪತ್ತನ್ನಿತ್ತ ದುರಾತ್ಮ ತಕ್ಷಕನ ದುಷ್ಕರ್ಮವು ಮಹತ್ತರವಾದದ್ದು. ಉತ್ತಂಕನಿಗೆ ಪ್ರಿಯವಾದದನ್ನು ಮಾಡಲು, ನಿಮ್ಮನ್ನೆಲ್ಲ ಮತ್ತು ನನ್ನನ್ನು ಸಂತಸಗೊಳಿಸಲೋಸುಗ ನಾನು ನನ್ನ ತಂದೆಯ ಸೇಡನ್ನು ತೀರಿಸಿಕೊಳ್ಳುತ್ತೇನೆ.”

ಹೀಗೆ ಹೇಳಿ ಮಂತ್ರಿಗಳಿಂದ ಅನುಮೋದಿಸಲ್ಪಟ್ಟ ಶ್ರೀಮಾನ್ ಪಾರ್ಥಿವನು ಸರ್ಪಸತ್ರದ ಪ್ರತಿಜ್ಞೆಯನ್ನು ಕೈಗೊಂಡನು. ಭರತಶಾರ್ದೂಲ ಪರಿಕ್ಷಿತನ ಮಗ ವಸುಧಾಧಿಪ ರಾಜನು ಪುರೋಹಿತರನ್ನೂ ಮತ್ತು ಯಾಗ ಪ್ರವೀಣ ಋತ್ವಿಜರನ್ನೂ ಕರೆಯಿಸಿ ಈ ಸಂಪನ್ನ ಮಾತುಗಳನ್ನು ಹೇಳಿದನು:

“ನನ್ನ ತಂದೆಗೆ ಹಿಂಸೆಯನ್ನಿತ್ತ ದುರಾತ್ಮ ತಕ್ಷಕನ ಸೇಡನ್ನು ತೀರಿಸಿಕೊಳ್ಳಲು ಏನು ಮಾಡಬೇಕು ಎನ್ನುವುದನ್ನು ನೀವು ನನಗೆ ಹೇಳಿ. ಬಂಧುಗಳ ಸಮೇತ ಪನ್ನಗ ತಕ್ಷಕನನ್ನು ಹಿಂದೆ ತನ್ನ ವಿಷಾಗ್ನಿಯಲ್ಲಿ ನನ್ನ ತಂದೆಯನ್ನು ಹೇಗೆ ಸುಟ್ಟನೋ ಹಾಗೆಯೇ ಉರಿಯುತ್ತಿರುವ ಅಗ್ನಿಯಲ್ಲಿ ಎಳೆದು ತಂದು ಹಾಕಬಲ್ಲ ಯೋಜನೆಯನ್ನು ಹೇಳಿ. ಆ ಪಾಪಿ ಪನ್ನಗನನ್ನು ನಾನೂ ಕೂಡ ಭಸ್ಮಮಾಡಲು ಬಯಸುತ್ತೇನೆ.”

ಋತ್ವಿಜರು ಹೇಳಿದರು:

“ನಿನಗಾಗಿಯೇ ದೇವನಿರ್ಮಿತ ಮಹಾಸತ್ರವೊಂದಿದೆ ರಾಜನ್! ಇದು ಸರ್ಪಸತ್ರವೆಂದು ಪುರಾಣಗಳಲ್ಲಿ ವರ್ಣಿತಗೊಂಡಿದೆ. ನಿನ್ನನ್ನು ಬಿಟ್ಟು ಬೇರೆ ಯಾರೂ ಈ ಸತ್ರವನ್ನು ಕೈಗೊಳ್ಳಲು ಅಸಮರ್ಥರು ಎಂದು ಪೌರಾಣಿಕರು ಹೇಳುತ್ತಾರೆ ಮತ್ತು ಇದನ್ನು ನಡೆಸುವ ಕ್ರಮವು ನಮ್ಮಲ್ಲಿದೆ.”

ಇದನ್ನು ಕೇಳಿದ ರಾಜರ್ಷಿ ಸತ್ತಮನು ಆ ಸರ್ಪ ತಕ್ಷಕನು ಉರಿಯುತ್ತಿರುವ ಅಗ್ನಿಯಲ್ಲಿ ಬೀಳುತ್ತಿರುವುದನ್ನು ಕಲ್ಪಿಸಿಕೊಂಡನು. ಆಗ ಮಂತ್ರವಿದ್ವಾಂಸಿ ಬ್ರಾಹ್ಮಣರನ್ನುದ್ದೇಶಿಸಿ ರಾಜನು ಹೇಳಿದನು:

“ಆ ಸತ್ರವನ್ನು ನಾನು ಕೈಗೊಳ್ಳುತ್ತೇನೆ. ಅದಕ್ಕೆ ಬೇಕಾದ ಸಲಕರಣೆಗಳನ್ನು ಸಂಗ್ರಹಿಸಿರಿ.”

ಜನಮೇಜಯನ ಸರ್ಪಸತ್ರ

ಅನಂತರ ವಿಧಿ ವಿಧಾನಗಳನ್ನು ತಿಳಿದಿದ್ದ ದ್ವಿಜಸತ್ತಮ ಋತ್ವಿಜರು ಉತ್ಸಾಹದಿಂದ ಯಜ್ಞಾರ್ಥವಾಗಿ ಒಂದು ಆಯತ ಪ್ರದೇಶವನ್ನು ಶಾಸ್ತ್ರೋಕ್ತವಾಗಿ ಅಳೆದರು. ಅತ್ಯುತ್ತಮವಾಗಿ ಸಿಂಗರಿಸಲ್ಪಟ್ಟ ಆ ಪುಣ್ಯ ಪ್ರದೇಶವು ದ್ವಿಜಗಣಗಳಿಂದ ತುಂಬಿಕೊಂಡಿದ್ದು ಧನ-ದಾನ್ಯಗಳಿಂದ ಸುಂದರವಾಗಿ ರಚಿಸಲ್ಪಟ್ಟಿತ್ತು. ಈ ರೀತಿ ವಿಧಿವತ್ತಾಗಿ ಯಜ್ಞಶಾಲೆಯನ್ನು ನಿರ್ಮಿಸಿ ಅಲ್ಲಿ ರಾಜನಿಗೆ ಸರ್ಪಸತ್ರದ ದೀಕ್ಷೆಯನ್ನು ಕೊಡಿಸಿದರು. ಆದರೆ ಸರ್ಪಸತ್ರವು ನಡೆಯುವುದರ ಮೊದಲೇ ಯಜ್ಞಕ್ಕೆ ವಿಘ್ನವನ್ನು ಸೂಚಿಸುವ ಮಹತ್ತರ ಶಕುನವು ಕಾಣಿಸಿಕೊಂಡಿತು. ಯಜ್ಞಶಾಲೆಯನ್ನು ಅಳೆಯುತ್ತಿರುವಾಗ ಅಲ್ಲಿಯೇ ನಿಂತಿದ್ದ ಓರ್ವ ಬುದ್ಧಿಸಂಪನ್ನ ವಾಸ್ತುವಿಧ್ಯಾವಿಶಾರದ ಸೂತ್ರಧಾರ ಸೂತ ಪೌರಾಣಿಕನು ಹೇಳಿದನು:

“ಯಾವ ಕಾಲ ಪ್ರದೇಶದಲ್ಲಿ ಅಳತೆಯನ್ನು ತೆಗೆದುಕೊಳ್ಳಲಾಗುತ್ತಿದೆಯೋ ಅಲ್ಲಿ ಓರ್ವ ಬ್ರಾಹ್ಮಣನ ಕಾರಣದಿಂದಾಗಿ ಸರ್ಪಸತ್ರವು ಸಂಪೂರ್ಣವಾಗುವುದಿಲ್ಲ.”

ಇದನ್ನು ಕೇಳಿದ ರಾಜನು ದೀಕ್ಷೆ ತೆಗೆದುಕೊಳ್ಳುವ ಮೊದಲೇ

“ನನಗೆ ಅನುಜ್ಞೆಯಿಲ್ಲದೇ ಯಾರಿಗೂ ಈ ಸ್ಥಳಕ್ಕೆ ಪ್ರವೇಷವಿಲ್ಲ!”

ಎಂದು ಹೇಳಿದನು.

ಅನಂತರ ವಿಧಿವತ್ತಾಗಿ ಸರ್ಪಸತ್ರದ ಕರ್ಮಗಳು ಪ್ರಾರಂಭವಾದವು. ಪ್ರತಿಯೊಬ್ಬ ಯಾಜಕನೂ ತನ್ನ ತನ್ನ ಕರ್ಮಾಂಗಗಳನ್ನು ವಿಧಿವತ್ತಾಗಿ ಮಾಡತೊಡಗಿದನು. ಎಲ್ಲರೂ ಕಪ್ಪು ಬಟ್ಟೆಗಳನ್ನು ಉಟ್ಟಿದ್ದರು ಮತ್ತು ಹೊಗೆಯಿಂದ ಅವರ ಕಣ್ಣುಗಳು ಕೆಂಪಾಗಿದ್ದವು. ಅವರು ಮಂತ್ರೋಚ್ಛಾರಣೆ ಮಾಡುತ್ತಾ ಸಮಿತ್ತನ್ನು ಜಾತವೇದಸನಲ್ಲಿ ಹಾಕುತ್ತಿದ್ದರು. ಸರ್ಪಗಳನ್ನೆಲ್ಲವನ್ನೂ ಅಗ್ನಿಯ ಬಾಯಿಯಲ್ಲಿ ಆಹುತಿಯನ್ನಾಗಿ ಹಾಕುತ್ತಾ ಸರ್ವ ಸರ್ಪಗಳ ಮನಸ್ಸಿನಲ್ಲಿ ಆತಂಕವನ್ನು ಹುಟ್ಟಿಸಿದರು. ಆರ್ತರಾಗಿ ಪರಸ್ಪರರನ್ನು ಕೂಗಿ ಕರೆಯುತ್ತಾ, ಒಬ್ಬರಿಗೊಬ್ಬರು ಸುತ್ತಿಕೊಂಡ ಸರ್ಪಗಳು ಒಂದೊಂದೇ ಉರಿಯುತ್ತಿರುವ ಹವ್ಯವಾಹನನಲ್ಲಿ ಬಂದು ಬೀಳತೊಡಗಿದವು. ಭುಸಗುಟ್ಟುತ್ತಾ, ಉಬ್ಬಿಕೊಂಡು, ತಲೆಗಳಿಂದ ಅಥವಾ ಬಾಲಗಳಿಂದ ಒಬ್ಬರನ್ನೊಬ್ಬರು ಸುತ್ತಿಕೊಳ್ಳುತ್ತಾ, ತಲೆ ಮುಂದಾಗಿ ಅಥವಾ ಬಾಲ ಮುಂದಾಗಿ ಉರಿಯುತ್ತಿರುವ ಬೆಂಕಿಗೆ ಬಂದು ಬೀಳತೊಡಗಿದವು. ಬಿಳಿದಾದ, ಕಪ್ಪಾದ, ನೀಲವರ್ಣದ, ಮುದಿಯಾದ, ಹರಯದ ಸರ್ಪಗಳು ರೋದಿಸುತ್ತಾ ಭೈರವ ನಿನಾದಗೈಯುತ್ತಾ, ಭುಗಿಲೆನ್ನುತ್ತಿರುವ ಬೆಂಕಿಗೆ ಬಂದು ಬೀಳತೊಡಗಿದರು. ಈ ರೀತಿ ಲಕ್ಷಗಟ್ಟಲೆ ಕೋಟಿಗಟ್ಟಲೆ ಸರ್ಪಗಳು ನಿಶ್ಯಕ್ತರಾಗಿ ವಿನಾಶಹೊಂದಿದರು. ಕೆಲವು ಇಲಿಗಳಂತೆ ಸಣ್ಣವಾಗಿದ್ದರೆ ಕೆಲವು ಆನೆಗಳಷ್ಟು ದೊಡ್ಡವಾಗಿದ್ದವು, ಮಾತಂಗಗಳಂತೆ ಉನ್ಮತ್ತರಾಗಿ ಮಹಾಬಲಶಾಲಿಗಳೂ ಮಹಾಕಾಯರೂ ಆಗಿದ್ದರು. ನಾನಾ ಬಣ್ಣದ, ಕಡುವಿಷಗಳಿಂದ ಘೋರ, ಕಬ್ಬಿಣದ ಹಲ್ಲುಗಳನ್ನು ಹೊಂದಿ ಪರಿಘಗಳಂತಿರುವ, ತಾಯಿಯ ಶಾಪದಿಂದ ಪೀಡಿತ ಬಹಳಷ್ಟು ಮಹಾಬಲಶಾಲೀ ಸರ್ಪಗಳು ಸುಟ್ಟು ಭಸ್ಮವಾದವು.

ಆ ನೃಪತಿಗೆ ಋತ್ವಿಜರು ಮತ್ತು ಸದಸ್ಯರಾಗಿದ್ದವರ ಹೆಸರುಗಳು ಈ ರೀತಿಯಿದ್ದವು: ಚ್ಯವನನ ಕುಲದಲ್ಲಿ ಹುಟ್ಟಿ ವೇದವಿದರಲ್ಲಿ ಶ್ರೇಷ್ಠನಾದ, ಖ್ಯಾತ ಬ್ರಾಹ್ಮಣ ಚಂಡಭಾರ್ಗವನು ಅಲ್ಲಿದ್ದನು. ವೃದ್ಧನೂ ವಿದ್ವಾಂಸನೂ ಆದ ಬ್ರಾಹ್ಮಣ ಕೌತ್ಸರ್ಯ ಜೈಮಿನಿಯು ಉದ್ಗಾತನಾಗಿದ್ದನು. ಸೃಂಗಾರವನು ಬ್ರಾಹ್ಮಣನೂ ಮತ್ತು ಬೋಧಪಿಂಗಲನು ಅಧ್ವರ್ಯಿಯೂ ಆಗಿದ್ದರು. ಪುತ್ರ ಮತ್ತು ಶಿಷ್ಯರಿಂದೊಡಗೂಡಿದ ವ್ಯಾಸನು ಸದಸ್ಯನಾಗಿದ್ದನು. ಉದ್ದಾಲಕ, ಶಮಟಕ, ಶ್ವೇತಕೇತು, ಪಂಚಮ, ಆಸ್ತೀಕ ದೇವಲ, ನಾರದ, ಪರ್ವತ, ಆತ್ರೇಯ, ಕುಂಡಜಠರ, ದ್ವಿಜ ಕುಟಿಘಟ, ವಾತ್ಸ್ಯ, ವೃದ್ಧ ತಪಸ್ವಿ ಸ್ವಾಧ್ಯಾಯಶೀಲ ಶೃತಶ್ರವ, ಕಹೋಡ, ದೇವಶರ್ಮ, ಮೌದ್ಗಲ್ಯ, ಶಮಸೌಭರ, ಮತ್ತು ಇನ್ನೂ ಇತರ ಬಹಳಷ್ಟು ಸಂಶಿತವ್ರತ ಬ್ರಾಹ್ಮಣರು ಪಾರಿಕ್ಷಿತನ ಆ ಸತ್ರದಲ್ಲಿ ಸದಸ್ಯರಾಗಿದ್ದರು. ಋತ್ವಿಜರು ಆ ಮಹಾಕ್ರತು ಸರ್ಪ ಸತ್ರದಲ್ಲಿ ಆಹುತಿಗಳನ್ನು ಹಾಕುತ್ತಿದ್ದಂತೆ, ಪ್ರಾಣಿಗಳಿಗೆ ಭಯಕಾರಕ ಘೋರ ಸರ್ಪಗಳು ಉರಿಯುತ್ತಿರುವ ಬೆಂಕಿಯಲ್ಲಿ ಬಂದು ಬೀಳುತ್ತಿದ್ದವು. ನಾಗಗಳ ಕೊಬ್ಬು-ಮಾಂಸಗಳ ಹೊಳೆಯೇ ಹರಿದಿತ್ತು ಮತ್ತು ಒಂದೇ ಸಮನೆ ಸುಡುತ್ತಿದ್ದ ಅವುಗಳ ದುರ್ಗಂಧವು ಎಲ್ಲೆಡೆಯೂ ಹರಡಿ ತಡೆಯಲಸಾಧ್ಯವಾಗಿತ್ತು. ಬೀಳುತ್ತಿರುವ, ಆಕಾಶದಲ್ಲಿಯೇ ನಿಂತಿದ್ದ ಮತ್ತು ಅಗ್ನಿಯಲ್ಲಿ ಬೇಯುತ್ತಿದ್ದ ನಾಗಗಳ ಆಕ್ರೋಶವು ಎಲ್ಲೆಡೆಯೂ ಕೇಳಿಬರುತ್ತಿತ್ತು.

ರಾಜ ಜನಮೇಜಯನು ದೀಕ್ಷೆಗೊಂಡಿರುವನೆಂದು ತಿಳಿದಾಕ್ಷಣವೇ ನಾಗೇಂದ್ರ ತಕ್ಷಕನು ಪುರಂದರನ ಅರಮನೆಯನ್ನು ಸೇರಿಕೊಂಡನು. ಭೀತ ಭುಜಗೋತ್ತಮನು ಪುರಂದರನಿಗೆ ಶರಣುಬಂದು ಅವನಿಗೆ ಸರ್ವವನ್ನೂ ಯಥಾವತ್ತಾಗಿ ವರದಿ ಮಾಡಿದನು. ಸುಪ್ರೀತ ಇಂದ್ರನು ಅವನಿಗೆ ಹೇಳಿದನು:

“ನಾಗೇಂದ್ರ ತಕ್ಷಕ! ಇಲ್ಲಿ ನೀನು ಸರ್ಪಸತ್ರದಿಂದ ಯಾವುದೇ ರೀತಿಯ ಭಯಪಟ್ಟುಕೊಳ್ಳುವ ಅವಶ್ಯಕತೆಯಿಲ್ಲ. ಪೂರ್ವದಲ್ಲಿ ನಿನ್ನ ಪರವಾಗಿ ನಾನು ಪಿತಾಮಹನನ್ನು ಬೇಡಿಕೊಂಡಿದ್ದೆ. ಆದುದರಿಂದ ನೀನು ಭಯಪಡಬೇಕಾದ್ದೇನೂ ಇಲ್ಲ. ನಿನ್ನ ಮನಸ್ಸಿನಿಂದ ಈ ಜ್ವರವನ್ನು ತೆಗೆದುಹಾಕು.”

ಅವನಿಂದ ಈ ರೀತಿಯ ಆಶ್ವಾಸನೆಯನ್ನು ಪಡೆದ ಆ ಭುಜಗೋತ್ತಮನು ಶಕ್ರನ ಭವನದಲ್ಲಿಯೇ ಸುಖ-ಸಂತೋಷದಿಂದ ವಾಸಿಸಿದನು.

ಆದರೆ ಅಗ್ನಿಯಲ್ಲಿ ಸತತವಾಗಿ ನಾಗಗಳು ಬೀಳುತ್ತಿರಲು ವಾಸುಕಿಯು ಕ್ಷೀಣವಾಗುತ್ತಿರುವ ತನ್ನ ವಂಶವನ್ನು ನೋಡಿ ದುಃಖದಿಂದ ನೊಂದು ಪರಿತಪಿಸಿದನು. ಪನ್ನಗೇಶ್ವರ ವಾಸುಕಿಯಲ್ಲಿ ಒಂದು ಕೀಳು ವಿಚಾರವು ಬಂದಿತು. ಕಂಪಿಸುತ್ತಿರುವ ಹೃದಯದಿಂದ ಅವನು ತನ್ನ ತಂಗಿಯಲ್ಲಿ ಹೇಳಿದನು:

“ಭದ್ರೇ! ನನ್ನ ಅಂಗಾಂಗಗಳು ಸುಡುತ್ತಿವೆ ಮತ್ತು ದಿಕ್ಕೇ ತೋಚದಂತಾಗಿದೆ. ಮೂರ್ಛೆಗೊಂಡಂತೆ ಕುಸಿಯುತ್ತಿದ್ದೇನೆ ಮತ್ತು ನನ್ನ ಮನಸ್ಸು ಭ್ರಮಿಸುತ್ತಿದೆ. ನನ್ನ ದೃಷ್ಟಿಯು ಭ್ರಮಿಸುತ್ತಿದೆ, ಹೃದಯವು ಒಡೆದುಹೋಗುತ್ತಿದೆ. ಯಾವುದೇ ರೀತಿಯ ಪ್ರತಿಭಟನೆಯನ್ನೂ ಮಾಡದೇ ನಾನು ಆ ಉರಿಯುತ್ತಿರುವ ಬೆಂಕಿಯಲ್ಲಿ ಬೀಳುವವನಿದ್ದೇನೆ. ನಮ್ಮ ಕುಲದ ವಿನಾಶಕ್ಕಾಗಿ ಪಾರಿಕ್ಷಿತನ ಯಜ್ಞವು ಪ್ರಾರಂಭವಾಗಿದೆ. ನಾನೂ ಕೂಡ ಪಿತೃರಾಜನ ಮನೆಗೆ ಹೋಗುತ್ತೇನೆನ್ನುವುದು ಖಚಿತವಾಗಿದೆ. ತಂಗಿ! ನಿನ್ನನ್ನು ಯಾವ ಕಾರಣಕ್ಕಾಗಿ ಹಿಂದೆ ಜರತ್ಕಾರುವಿಗೆ ಕೊಟ್ಟಿದ್ದೆನೋ ಅದರ ಕಾಲ ಸಂಪ್ರಾಪ್ತಿಯಾಗಿದೆ. ಬಾಂಧವರೆಲ್ಲರೊಡನೆ ನಮ್ಮನ್ನು ರಕ್ಷಿಸು. ಪೂರ್ವದಲ್ಲಿ ಪಿತಾಮಹನು ಸ್ವಯಂ ನನಗೆ ಆಸ್ತೀಕನೊಬ್ಬನೇ ನಡೆಯುತ್ತಿರುವ ಈ ಯಜ್ಞವನ್ನು ನಿಲ್ಲಿಸಬಲ್ಲನಿಂದು ಹೇಳಿದ್ದನು. ಆದುದರಿಂದ ವೃದ್ಧರಿಂದಲೂ ಗೌರವಿಸಲ್ಪಡುತ್ತಿರುವ ನಿನ್ನ ಪ್ರೀತಿಯ ವೇದವಿತ್ತಮ ಮಗನಿಗೆ ಅವನನ್ನೇ ಅವಲಂಬಿಸಿರುವ ನಮ್ಮೆಲ್ಲರನ್ನೂ ಇಂದು ಬಿಡುಗಡೆಮಾಡಲು ಹೇಳು.”

ಆಗ ಭುಜಂಗಮೆ ಜರತ್ಕಾರುವು ತನ್ನ ಪುತ್ರನನ್ನು ಕರೆದು ನಾಗರಾಜ ವಾಸುಕಿಯ ಈ ಮಾತುಗಳನ್ನು ತಿಳಿಸಿದಳು:

“ಯಾವ ಉದ್ದೇಶಕ್ಕಾಗಿ ನನ್ನ ಅಣ್ಣನು ನನ್ನನ್ನು ನಿನ್ನ ತಂದೆಗೆ ಕೊಟ್ಟಿದ್ದನೋ ಅದನ್ನು ಪೂರೈಸುವ ಕಾಲವು ಪ್ರಾಪ್ತವಾಗಿದೆ. ಆದುದರಿಂದ ಏನಾಗಬೇಕೋ ಅದನ್ನು ಮಾಡಬೇಕಾಗಿದೆ.”

ಆಸ್ತೀಕನು ಹೇಳಿದನು:

“ನನ್ನ ಸೋದರ ಮಾವನು ಯಾವ ಕಾರಣಕ್ಕಾಗಿ ನಿನ್ನನ್ನು ನನ್ನ ತಂದೆಗೆ ಕೊಟ್ಟ? ಅದನ್ನೆಲ್ಲ ನನಗೆ ಹೇಳು. ಅದನ್ನು ಕೇಳಿ ನಾನು ಬೇಕಾದುದನ್ನು ಮಾಡಬಲ್ಲೆ.”

ಬಾಂಧವಹಿತೈಷಿಣಿ ನಾಗರಾಜನ ತಂಗಿ ಜರತ್ಕಾರುವು ಅವರಿಗಿದ್ದ ಆತಂಕದಿಂದ ಪ್ರಚೋದಿತಳಾಗಿ ಹೇಳಿದಳು:

“ಮಗನೇ! ಎಲ್ಲಾ ನಾಗಗಳ ತಾಯಿ ಕದ್ರುವೆಂದು ಕೇಳಿದ್ದೇವೆ. ಅವಳು ರೋಷಗೊಂಡು ತನ್ನ ಮಕ್ಕಳಿಗೆ ಶಾಪವನ್ನಿತ್ತಳು. ಅದಕ್ಕೆ ಕಾರಣವನ್ನು ಕೇಳು.

“ಮಕ್ಕಳೇ! ನಾನು ವಿನತಳೊಟ್ಟಿಗೆ ದಾಸತ್ವದ ಪಣತೊಟ್ಟಾಗ ನೀವು ಅಶ್ವರಾಜ ಉಚ್ಛೈಶ್ರವನನ್ನು ಸುಳ್ಳುಮಾಡಲು ಒಪ್ಪಲಿಲ್ಲ. ಆದುದರಿಂದ ಜನಮೇಜಯನ ಯಜ್ಞದಲ್ಲಿ ಅನಿಲಸಾರಥಿಯು ನಿಮ್ಮನ್ನು ಸುಟ್ಟುಹಾಕುತ್ತಾನೆ. ಈ ರೀತಿ ನೀವು ಪಂಚಭೂತಗಳಲ್ಲಿ ಒಂದಾಗಿ ಪ್ರೇತಲೋಕವನ್ನು ಸೇರುವಿರಿ.”

ಹೀಗೆ ಅವಳು ಶಪಿಸುತ್ತಿರುವಾಗ ಸಾಕ್ಷಾತ್ ಲೋಕಪಿತಾಮಹನೂ ‘ಹಾಗೆಯೇ ಆಗಲಿ!’ ಎಂದು ಆ ವಾಖ್ಯಗಳನ್ನು ಅನುಮೋದಿಸಿದನು. ಇದನ್ನು ಮತ್ತು ಪಿತಾಮಹನ ಮಾತುಗಳನ್ನು ಕೇಳಿದ ವಾಸುಕಿಯು ಅಮೃತ ಮಂಥನದ ನಂತರ ದೇವತೆಗಳಲ್ಲಿ ಶರಣುಹೋದನು. ಆಗ ಅನುತ್ತಮ ಅಮೃತವನ್ನು ಪಡೆದ ಸರ್ವ ಸುರರೂ ನನ್ನ ಅಣ್ಣನನ್ನು ಪುರಸ್ಕರಿಸಿ ಪ್ರಜಾಪತಿಯ ಬಳಿ ಬಂದರು. ಅವನು ಮತ್ತು ಎಲ್ಲ ದೇವತೆಗಳು ಪಿತಾಮಹನಲ್ಲಿ ಕೇಳಿಕೊಂಡರು:

‘ಈ ಶಾಪವು ರಾಜ ವಾಸುಕಿಗೆ ತಗುಲದೇ ಇರಲಿ. ನಾಗರಾಜ ಈ ವಾಸುಕಿಯು ತನ್ನ ಜಾತಿಗೋಸ್ಕರವಾಗಿ ದುಃಖಿತನಾಗಿದ್ದಾನೆ. ಭಗವನ್! ಹೇಗೆ ಆ ತಾಯಿಯ ಶಾಪವು ಸುಳ್ಳಾಗುವಂತೆ ಮಾಡಬಹುದು?’

ಆಗ ಬ್ರಹ್ಮನು ಹೇಳಿದನು:

‘ಜರತ್ಕಾರುವು ಜರತ್ಕಾರುವೆನ್ನುವವಳನ್ನು ಪತ್ನಿಯನ್ನಾಗಿ ಸ್ವೀಕರಿಸುವನು. ಅವರಲ್ಲಿ ಹುಟ್ಟಿದ ದ್ವಿಜನು ನಾಗಗಳನ್ನು ಶಾಪದಿಂದ ಮುಕ್ತಿಗೊಳಿಸುವನು.’

ಈ ಮಾತುಗಳನ್ನು ಕೇಳಿದ ಪನ್ನಗೇಶ್ವರ ವಾಸುಕಿಯು ನನ್ನನ್ನು ನಿನ್ನ ತಂದೆ ಮಹಾತ್ಮನಿಗೆ ಕೊಟ್ಟನು ಮತ್ತು ಸಮಯಾನುಸಾರವಾಗಿ ನೀನು ನನ್ನಲ್ಲಿ ಜನಿಸಿದೆ. ಈಗ ಸಮಯವು ಪ್ರಾಪ್ತವಾಗಿದೆ. ನಮ್ಮನ್ನು ಈ ಭಯದಿಂದ ರಕ್ಷಿಸು! ನನ್ನ ಅಣ್ಣನನ್ನು ಪಾವಕನಿಂದ ರಕ್ಷಿಸು! ನನ್ನನ್ನು ನಿನ್ನ ತಂದೆಗೆ ಕೊಟ್ಟಿದ್ದುದು ನಿಷ್ಫಲವಾಗುವಂತೆ ಮಾಡಬೇಡ. ಅಥವಾ ನಿನ್ನ ಯೋಚನೆ ಬೇರೆ ಏನಾದರೂ ಇದೆಯೇ?”

ಇದನ್ನು ಕೇಳಿದ ಆಸ್ತೀಕನು “ಹಾಗೆಯೇ ಆಗಲಿ” ಎಂದು ತನ್ನ ತಾಯಿಗೆ ಹೇಳಿ, ದುಃಖಸಂತಪ್ತ ವಾಸುಕಿಗೆ ಪುನರ್ಜೀವವನ್ನು ನೀಡುವಂತಹ ಈ ಮಾತುಗಳನ್ನು ಹೇಳಿದನು:

“ಪನ್ನಗೋತ್ತಮ ವಾಸುಕಿ! ನಾನು ನಿನ್ನನ್ನು ಆ ಶಾಪದಿಂದ ವಿಮುಕ್ತಗೊಳಿಸುತ್ತೇನೆ. ನಾನು ಸತ್ಯವನ್ನು ಹೇಳುತ್ತಿದ್ದೇನೆ. ಸ್ವಸ್ಥಮಾನನಾಗಿರು. ನಿನಗೆ ಯಾವ ಭಯವೂ ಇಲ್ಲ. ನಿನ್ನ ಶ್ರೇಯಸ್ಸಿಗೇ ಪ್ರಯತ್ನಿಸುತ್ತೇನೆ. ಚೇಷ್ಟೆಯಲ್ಲಿಯೂ ಕೂಡ ಎಂದೂ ನನ್ನ ಮಾತು ಸುಳ್ಳಾಗಲಾರದು. ದೀಕ್ಷೆಯಲ್ಲಿರುವ ಆ ನೃಪವರ ಜನಮೇಜಯನಲ್ಲಿ ಹೋಗಿ ಮಂಗಲಯುಕ್ತ ಮಾತುಗಳಿಂದ ಅವನನ್ನು ತೃಪ್ತಿಗೊಳಿಸಿ ನೃಪತಿಯ ಯಜ್ಞವು ಕೊನೆಗೊಳ್ಳುವಹಾಗೆ ಮಾಡುತ್ತೇನೆ. ನಿನ್ನ ಎಲ್ಲ ವಿಶ್ವಾಸವನ್ನೂ ನನ್ನಲ್ಲಿ ಇಡು ಮತ್ತು ನನ್ನಲ್ಲಿ ನೀನಿಟ್ಟ ವಿಶ್ವಾಸವು ಎಂದೂ ಸುಳ್ಳಾಗುವುದಿಲ್ಲ.”

ವಾಸುಕಿಯು ಹೇಳಿದನು:

“ಆಸ್ತೀಕ! ಈ ಬ್ರಹ್ಮದಂಡ ಪೀಡಿತನಾದ ನಾನು ನಡುಗುತ್ತಿದ್ದೇನೆ ಮತ್ತು ನನ್ನ ಹೃದಯವು ಒಡೆಯುತ್ತಿದೆ. ನನಗೆ ದಿಕ್ಕೇ ತೋಚದಂತಾಗಿದೆ.”

ಆಸ್ತೀಕನು ಹೇಳಿದನು:

“ಪನ್ನಗೋತ್ತಮ! ನೀನು ಯಾವುದಕ್ಕೂ ಭಯ ಪಡಬೇಡ. ಉರಿಯುತ್ತಿರುವ ಅಗ್ನಿಯಿಂದ ನಿನಗುಂಟಾಗಿರುವ ಈ ಭಯವನ್ನು ನಾಶಪಡಿಸುತ್ತೇನೆ. ಕಾಲಾಗ್ನಿಯಂತೆ ಉರಿಯುತ್ತಿರುವ ಈ ಮಹಾಘೋರ ಬ್ರಹ್ಮದಂಡವನ್ನು ನಾಶಪಡಿಸುತ್ತೇನೆ. ಯಾವುದೇ ರೀತಿಯ ಭಯಪಡಬೇಡ.”

ನಂತರ, ವಾಸುಕಿಯ ಘೋರ ಮನೋಜ್ಚರವನ್ನು ಕಿತ್ತು ತನ್ನ ಭುಜದಮೇಲಿತ್ತಿಕೊಂಡು ಆ ದ್ವಿಜಸತ್ತಮ ಆಸ್ತೀಕನು ತ್ವರೆಯಲ್ಲಿ ಹೊರಟು ಭುಜಗೇಂದ್ರರ ಮೋಕ್ಷಾರ್ಥವಾಗಿ ಸರ್ವಗುಣ ಸುಮುದಿತ ಆ ಜನಮೇಜಯನ ಯಜ್ಞದಲ್ಲಿಗೆ ಅವಸರದಲ್ಲಿ ಧಾವಿಸಿದನು.

ಅಲ್ಲಿ ಹೋಗಿ ಆಸ್ತೀಕನು ಅನೇಕ ಸೂರ್ಯವಹ್ನಿಸಮಪ್ರಭ ಸದಸ್ಯರಿಂದ ಆವೃತಗೊಂಡ ಉತ್ತಮ ಯಜ್ಞಾಯತವನ್ನು ಕಂಡನು. ಆ ದ್ವಿಜಸತ್ತಮನು ಅಲ್ಲಿಗೆ ಪ್ರವೇಶಿಸುತ್ತಿರಲು ದ್ವಾರಪಾಲಕರು ಅವನನ್ನು ತಡೆಗಟ್ಟಿದರು. ಆದರೆ ಆ ಪ್ರವೇಶಾರ್ಥಿ ದ್ವಿಜೋತ್ತಮನು ಉಚ್ಛ ಧ್ವನಿಯಲ್ಲಿ ಆ ಯಜ್ಞವನ್ನು ಪ್ರಶಂಸಿಸತೊಡಗಿದನು:

“ಪಾರಿಕ್ಷಿತ! ನಿನಗೆ ಮತ್ತು ನಿನ್ನ ಮಿತ್ರರಿಗೆ ಮಂಗಳವಾಗಲಿ. ನಿನ್ನ ಈ ಯಜ್ಞವು ಸೋಮನ ಯಜ್ಞ, ವರುಣನ ಯಜ್ಞ, ಮತ್ತು ಪ್ರಯಾಗದಲ್ಲಿ ಪ್ರಜಾಪತಿಯು ನಡೆಸಿದ ಯಜ್ಞಗಳ ಹಾಗೆಯೇ ಇದೆ. ನಿನಗೆ ಮತ್ತು ನಿನ್ನ ಮಿತ್ರರಿಗೆ ಮಂಗಳವಾಗಲಿ. ಶಕ್ರನ ಯಜ್ಞಗಳು ನೂರೆಂದು ಹೇಳುತ್ತಾರೆ. ನಿನ್ನ ಈ ಯಜ್ಞವು ಸಂಖ್ಯೆಯಲ್ಲಿ ನೂರಕ್ಕಿಂತಲೂ ಹೆಚ್ಚಿನಂತಿದೆ. ನಿನಗೆ ಮತ್ತು ನಿನ್ನ ಮಿತ್ರರಿಗೆ ಮಂಗಳವಾಗಲಿ. ನಿನ್ನ ಈ ಯಜ್ಞವು ಯಮನ ಮತ್ತು ಹರಿಮೇಧನ ಯಜ್ಞಗಳಂತೆ ಮತ್ತು ರಾಜ ರಂತಿದೇವನ ಯಜ್ಞದಂತಿದೆ. ನಿನಗೆ ಮತ್ತು ನಿನ್ನ ಮಿತ್ರರಿಗೆ ಮಂಗಳವಾಗಲಿ. ನಿನ್ನ ಈ ಯಜ್ಞವು ಗಯ ಮತ್ತು ರಾಜ ಶಶಬಿಂದುವಿನ ಯಜ್ಞ ಮತ್ತು ರಾಜ ವೈಶ್ರವಣನ ಯಜ್ಞಗಳಂತಿದೆ. ನಿನಗೆ ಮತ್ತು ನಿನ್ನ ಮಿತ್ರರಿಗೆ ಮಂಗಳವಾಗಲಿ. ನಿನ್ನ ಈ ಯಜ್ಞವು ನೃಗ ಮತ್ತು ಅಜಮೀಡನ ಯಜ್ಞಗಳಂತೆ ಮತ್ತು ರಾಜ ದಾಶರಥಿಯ ಯಜ್ಞಗಳಂತಿದೆ. ನಿನಗೆ ಮತ್ತು ನಿನ್ನ ಮಿತ್ರರಿಗೆ ಮಂಗಳವಾಗಲಿ. ನಿನ್ನ ಈ ಯಜ್ಞವು ಸ್ವರ್ಗದಲ್ಲಿಯೂ ಪ್ರಸಿದ್ಧ ದೇವಸೂನು, ಅಜಮೀಡನ ವಂಶದಲ್ಲಿದ್ದ ರಾಜ ಯುಧಿಷ್ಠಿರನ ಯಜ್ಞದಂತಿದೆ. ನಿನಗೆ ಮತ್ತು ನಿನ್ನ ಮಿತ್ರರಿಗೆ ಮಂಗಳವಾಗಲಿ. ನಿನ್ನ ಈ ಯಜ್ಞವು ಸ್ವಯಂ ತಾನೇ ಕರ್ಮಚಾರಿಯಾಗಿದ್ದ ಸತ್ಯವತೀಸುತ ಕೃಷ್ಣನ ಯಜ್ಞದಂತಿದೆ. ಸೂರ್ಯಾಗ್ನಿ ವರ್ಚಸ್ಸಿನ ಇಲ್ಲಿ ಸೇರಿರುವವರು ದೇವೇಂದ್ರನ ಕ್ರತುವಲ್ಲಿ ಸೇರಿರುವರಹಾಗಿದ್ದಾರೆ. ಅವರಿಗೆ ತಿಳಿಯದೇ ಇದ್ದ ಜ್ಞಾನವೇ ಇಲ್ಲ. ಅವರಿಗೆ ಕೊಟ್ಟ ಏನೂ ನಿಷ್ಫಲವಾಗುವುದಿಲ್ಲ. ಋತ್ವಿಜ ದ್ವೈಪಾಯನನ ಸಮನಾಗಿರುವವರು ಲೋಕಗಳಲ್ಲೆಲ್ಲೂ ಇಲ್ಲ ಎಂದು ನನ್ನ ನಿಶ್ಚಯ. ಸ್ವಕರ್ಮ ದಕ್ಷರಾದ ಅವನ ಶಿಷ್ಯರು ಇಡೀ ಭೂಮಿಯನ್ನು ಸಂಚರಿಸುತ್ತಾರೆ. ಮಹಾತ್ಮ ವಿಭಾವಸು ಚಿತ್ರಭಾನು ಹಿರಣ್ಯರೇತ, ವಿಶ್ವಭುಕ್, ಮತ್ತು ಯಾರ ದಾರಿ ಕಪ್ಪಾಗಿದೆಯೋ ಆ ಪ್ರದೀಪ್ತಮಾನ ಅಗ್ನಿ ದೇವನು ಆಹುತಿಯನ್ನು ಭಕ್ಷಿಸಲು ಕಾತರಿಸಿದ್ದಾನೆ. ಈ ಜೀವಲೋಕ ಪ್ರಜೆಗಳನ್ನು ಪಾಲಿಸುವ ನಿನ್ನ ಸಮನಾದ ಇನ್ನೊಬ್ಬ ನೃಪನಿಲ್ಲ. ರಾಜ! ಧೃಢತೆಯಲ್ಲಿ ಧರ್ಮರಾಜ ಅಥವಾ ಯಮನನ್ನು ಹೋಲುವ ನಿನ್ನಿಂದ ಸಂತಸಗೊಂಡಿದ್ದೇನೆ. ನೀನು ಲೋಕದ ಎಲ್ಲ ಪ್ರಜೆಗಳನ್ನು ಪಾಲಿಸುವ ಸಾಕ್ಷಾತ್ ವಜ್ರಪಾಣಿ ಶಕ್ರನಂತಿದ್ದೀಯೆ. ನಿನ್ನಂತಹ ಪುರುಷೇಂದ್ರನು ಈ ಲೋಕದಲ್ಲಿ ಇನ್ನೊಬ್ಬನಿಲ್ಲ, ಹಾಗೆಯೇ ನಿನ್ನಂತಹ ಯಜ್ಞ ಗೃಹಪತಿಯು ಇನ್ನೊಬ್ಬನ್ನಿಲ್ಲ. ಖಟ್ವಾಂಗ, ನಾಭಾಗ ಅಥವಾ ದಿಲೀಪನಂತಿರುವ, ಪ್ರಭಾವದಲ್ಲಿ ಯಯಾತಿ ಮತ್ತು ಮಾಂಧಾತರ ಸಮಾನನಾದ, ಆದಿತ್ಯನ ತೇಜಸ್ಸಿನ ಸಮಾನ ತೇಜಸ್ಸನ್ನುಳ್ಳ ನೀನು ಭೀಷ್ಮನ ಹಾಗೆ ಬೆಳಗುತ್ತಿದ್ದೀಯೆ. ನನ್ನ ಮತದಲ್ಲಿ ವಾಲ್ಮೀಕಿಯಂತೆ ನಿನ್ನ ಸುಧೈರ್ಯವು ನಿಭೃತವಾದದ್ದು, ವಸಿಷ್ಠನಂತೆ ನಿನ್ನ ಕೋಪವು ನಿಯತವಾದದ್ದು. ನಿನ್ನ ಪ್ರಭುತ್ವವು ಇಂದ್ರನಂತಿದೆ ಮತ್ತು ದ್ಯುತಿಯು ನಾರಾಯಣನಂತಿದೆ. ಯಮನ ಹಾಗೆ ನೀನು ಧರ್ಮವಿನಿಶ್ಚಯಜ್ಞನಾಗಿದ್ದೀಯೆ. ಕೃಷ್ಣನ ಹಾಗೆ ಸರ್ವಗುಣೋಪಪನ್ನನಾಗಿದ್ದೀಯೆ. ವಸುಗಳ ನಿವಾಸದಲ್ಲಿರುವ ಹಾಗೆ ಸಂಪತ್ತು ನಿನ್ನಲ್ಲಿದೆ. ಮತ್ತು ಎಲ್ಲ ಕ್ರತುಗಳು ನಿನ್ನಿಂದಲೇ ನಡೆಯಲ್ಪಡುತ್ತಿವೆ. ಬಲದಲ್ಲಿ ನೀನು ದಂಭೋದ್ಭವ ಸಮನಾಗಿದ್ದೀಯೆ, ಶಸ್ತ್ರಾಸ್ತ್ರ ಜ್ಞಾನದಲ್ಲಿ ರಾಮನ ಸಮನಾಗಿದ್ದೀಯೆ, ತೇಜಸ್ಸಿನಲ್ಲಿ ಔರ್ವ ಮತ್ತು ತ್ರಿತರ ಸಮಾನನಾಗಿದ್ದೀಯೆ, ಮತ್ತು ಭಗೀರಥನಂತೆ ದುಷ್ಪ್ರೇಕ್ಷಣೀಯನಾಗಿದ್ದೀಯೆ.”

ಹೀಗೆ ಸ್ತುತಿಸಲ್ಪಟ್ಟ ರಾಜ, ಸದಸ್ಯರು, ಋತ್ವಿಜರು ಮತ್ತು ಹವ್ಯವಾಹನ ಸರ್ವರೂ ಪ್ರಸನ್ನರಾದರು. ಅವರೆಲ್ಲರೂ ಹೊರತೋರಿಸಿದ ಇಂಗಿತವನ್ನು ಗಮನಿಸಿದ ರಾಜ ಜನಮೇಜಯನು ಹೇಳಿದನು:

“ಬಾಲಕನಾಗಿದ್ದರೂ ಅವನು ಹಿರಿಯವರಂತೆ ಮಾತನಾಡುತ್ತಿದ್ದಾನೆ. ನನ್ನ ಮತದಲ್ಲಿ ಇವನು ಬಾಲಕನಲ್ಲ. ಇವನೋರ್ವ ಸ್ಥಾವಿರ. ಇವನಿಗೆ ಒಂದು ವರವನ್ನು ಕೊಡಲು ಬಯಸುತ್ತೇನೆ. ವಿಪ್ರರೇ! ನನಗೆ ನಿಮ್ಮ ಸಮ್ಮತಿಯನ್ನು ನೀಡಿ.”

ಸದಸ್ಯರು ಹೇಳಿದರು:

“ಬಾಲಕನಾಗಿದ್ದರೂ ವಿಪ್ರನು ರಾಜನ ಮಾನ್ಯತೆಗೆ ಅರ್ಹನು. ವಿದ್ವಾಂಸನಾಗಿದ್ದರೆ ಇನ್ನೂ ಹೆಚ್ಚು. ಅವನ ಎಲ್ಲ ಬಯಕೆಗಳೂ ಪೂರೈಸಲು ಅರ್ಹವೇ ಸರಿ. ಆದರೆ ತಕ್ಷಕನು ಇಲ್ಲಿಗೆ ಬಂದ ಕೂಡಲೇ.”

ಆ ದ್ವಿಜನಿಗೆ ವರವನ್ನು ನೀಡಲು ಬಯಸಿದ ರಾಜನು “ವರವನ್ನು ಕೇಳು” ಎಂದಾಗ ಹೋತನು ಅಸಂತೋಷದಿಂದ “ತಕ್ಷಕನು ಇನ್ನೂ ಯಜ್ಞಕುಂಡಕ್ಕೆ ಬಂದಿಲ್ಲ” ಎಂದನು. ಜನಮೇಜಯನು ಹೇಳಿದನು:

“ತಕ್ಷಕನು ಶೀಘ್ರವಾಗಿ ಬಂದು ನನ್ನ ಈ ಕರ್ಮವು ಸಮಾಪ್ತಿಯಾಗುವಂತೆ ಪ್ರಯತ್ನಿಸು. ನಿನ್ನ ಎಲ್ಲ ಶಕ್ತಿಯನ್ನೂ ಸೇರಿಸಿ ನನ್ನ ಆ ಶತ್ರುವು ತಡಮಾಡದೇ ಇಲ್ಲಿಗೆ ಬರುವ ಹಾಗೆ ಮಾಡು.”

ಋತ್ವಿಜರು ಹೇಳಿದರು:

“ಭಯಪೀಡಿತ ರಾಜ ತಕ್ಷಕನು ಇಂದ್ರನ ಭವನದಲ್ಲಿದ್ದಾನೆ ಎಂದು ಶಾಸ್ತ್ರಗಳು ಹೇಳುತ್ತಿವೆ ಮತ್ತು ಪಾವಕನು ತೋರಿಸುತ್ತಿದ್ದಾನೆ.”

ರಾಜನು ಈ ರೀತಿ ಹೇಳಿದಾಗ ಎಲ್ಲವನ್ನೂ ಮೊದಲೇ ತಿಳಿದಿದ್ದ ಪೌರಾಣಿಕ ಮಹಾತ್ಮ ಸೂತ ಲೋಹಿತಾಕ್ಷನು ಹೇಳಿದನು:

“ದೇವ! ವಿಪ್ರನು ಹೇಳಿದ್ದುದು ಸರಿ. ಪುರಾಣಗಳನ್ನು ಅಧ್ಯಯನ ಮಾಡಿದ್ದೇನಾದುದರಿಂದ ನಾನು ನಿನಗೆ ಹೇಳುತ್ತಿದ್ದೇನೆ. ಇಂದ್ರನು ‘ನನ್ನ ಪಕ್ಕದಲ್ಲಿಯೇ ನೀನು ಅಡಗಿ ವಾಸಿಸು. ಇಲ್ಲಿ ಅಗ್ನಿಯು ನಿನ್ನನ್ನು ಸುಡುವುದಿಲ್ಲ’ ಎಂದು ಅವನಿಗೆ ಒಂದು ವರವನ್ನು ಕೊಟ್ಟಿದ್ದಾನೆ.”

ಇದನ್ನು ಕೇಳಿದ ದೀಕ್ಷಿತನು ಉರಿದೆದ್ದು ಅಲ್ಲಿರುವ ಹೋತಾರನನ್ನು ಆ ಕಾಲಕ್ಕೆ ತಕ್ಕ ಕರ್ಮಗಳನ್ನು ಮಾಡಲು ಚೋದಿಸಿದನು. ಹೋತಾರನು ಮಂತ್ರಗಳನ್ನು ಉಚ್ಛರಿಸುತ್ತಾ ಹವಿಸ್ಸನ್ನು ಹಾಕಿದಾಗ ಸ್ವಯಂ ಇಂದ್ರನೇ ಅಲ್ಲಿಗೆ ಬಂದನು. ವಿಮಾನಾರೂಢನಾಗಿದ್ದ ಆ ಮಹಾನುಭಾವನನ್ನು ಸರ್ವದೇವತೆಗಳೂ ಸುತ್ತುವರೆದಿದ್ದರು; ಮಹತ್ತರವಾದ ಮೋಡಗಳು ಹಿಂಬಾಲಿಸುತ್ತಿದ್ದವು; ವಿಧ್ಯಾಧರ ಮತ್ತು ಅಪ್ಸರೆಯರ ಗಣಗಳು ಜೊತೆಗೂಡಿದ್ದವು. ಅವನ ಉತ್ತರೀಯದಲ್ಲಿ ಬೇರೆಲ್ಲು ಹೋಗಲು ಸ್ಥಳವಿಲ್ಲದೇ ಭಯೋದ್ವಿಗ್ನ ನಾಗನು ಅಡಗಿದ್ದನು. ಆಗ ತಕ್ಷಕನ ಅಂತ್ಯವನ್ನು ಇಚ್ಛಿಸುತ್ತಿದ್ದ ರಾಜನು ಪುನಃ ಮಂತ್ರವಿದರಲ್ಲಿ ಈ ಕೋಪದ ಮಾತುಗಳನ್ನು ಹೇಳಿದನು:

“ವಿಪ್ರರೇ! ನಾಗ ತಕ್ಷಕನು ಇಂದ್ರನ ಭವನದಲ್ಲಿದ್ದರೆ ಇಂದ್ರನ ಸಮೇತ ಅವನನ್ನು ಅಗ್ನಿಯಲ್ಲಿ ಬೀಳಿಸಿರಿ.”

ಋತ್ವಿಜರು ಹೇಳಿದರು:

“ರಾಜ! ತಕ್ಷಕನು ನಮ್ಮ ವಶದಲ್ಲಿ ಬಂದಂತೆ ತೋರುತ್ತಿದೆ. ಭಯದಿಂದ ಕೂಗುತ್ತಿರುವ ಅವನ ಭೈರವ ಮಹಾನಾದವು ಕೇಳಿಬರುತ್ತಿದೆ. ವಜ್ರಧಾರಿಯು ಆ ನಾಗನನ್ನು ಬಿಟ್ಟುಹಾಕಿದ್ದಾನೆ. ಮಂತ್ರಪ್ರಭಾವದಿಂದ ಅವನು ಶಂಕಭ್ರಷ್ಠನೂ ವಿಸ್ರಸ್ತಕಾಯನೂ ಆಗಿದ್ದಾನೆ. ಮೂರ್ಛೆಹೋಗಿ, ತೀವ್ರ ನಿಟ್ಟಿಸುರುಗಳನ್ನು ಬಿಡುತ್ತಾ ಪನ್ನಗೇಂದ್ರನು ಆಕಾಶದಲ್ಲಿ ಮೂರ್ಛೆತಪ್ಪಿ ಬರುತ್ತಿದ್ದಾನೆ. ನಿನ್ನ ಈ ಕರ್ಮವು ವಿಧಿವತ್ತಾಗಿ ಕೊನೆಗೊಳ್ಳುತ್ತಿದೆ. ಇನ್ನು ನೀನು ಆ ದ್ವಿಜಮುಖ್ಯನಿಗೆ ವರವನ್ನು ನೀಡಬಹುದು.”

ಜನಮೇಜಯನು ಹೇಳಿದನು:

“ಬಾಲಕರೂಪಿ ಶ್ರೇಷ್ಠನೇ! ನಿನಗೆ ಅನುರೂಪ ವರವೊಂದನ್ನು ನೀಡಲು ಬಯಸುತ್ತೇನೆ. ನಿನ್ನ ಹೃದಯದಲ್ಲಿ ನೆಲೆಸಿರುವ ಅಭಿಮತವೇನಿದ್ದರೂ ಕೇಳು. ಅದೇಯವಾಗಿದ್ದರೂ ನಾನು ಅದನ್ನು ನಿನಗೆ ಪ್ರದಾನಿಸುತ್ತೇನೆ.”

ನಾಗೇಂದ್ರ ತಕ್ಷಕನು ಇನ್ನೇನು ಅಗ್ನಿಯಲ್ಲಿ ಬೀಳುತ್ತಿದ್ದಾನೆ ಎನ್ನುವಾಗ, ಆ ಒಂದು ಅಂತರದಲ್ಲಿಯೇ ಆಸ್ತೀಕನು ಹೇಳಿದನು:

“ಜನಮೇಜಯ! ನನಗೆ ವರವನ್ನು ಕೊಡಲು ಬಯಸುವೆಯಾದರೆ ಈ ಸತ್ರವನ್ನು ನಿಲ್ಲಿಸು ಮತ್ತು ಇನ್ನು ಯಾವ ನಾಗಗಳೂ ಈ ಅಗ್ನಿಯಲ್ಲಿ ಬೀಳದಿರಲಿ.”

ಈ ಮಾತುಗಳನ್ನು ಕೇಳಿದ ರಾಜ ಪಾರಿಕ್ಷಿತನು ಸ್ವಲ್ಪವೂ ಸಂತಸಗೊಳ್ಳದೇ ಆಸ್ತೀಕನಿಗೆ ಹೇಳಿದನು:

“ವಿಪ್ರ! ಸುವರ್ಣ, ರಜತ, ಗೋವುಗಳು, ಅಥವಾ ಇನ್ನೇನನ್ನಾದರೂ ನಿನಗಿಷ್ಟವಾದದ್ದನ್ನು ಕೇಳು. ಈ ಕ್ರತುವನ್ನು ನಿಲ್ಲಿಸಬೇಡ.”

ಆಸ್ತೀಕನು ಹೇಳಿದನು:

“ರಾಜನ್! ಸುವರ್ಣ, ರಜತ ಅಥವಾ ಗೋವುಗಳು ಇವ್ಯಾವುವೂ ನನಗೆ ಬೇಡ. ನಿನ್ನ ಈ ಸತ್ರವನ್ನು ನಿಲ್ಲಿಸಿ ನನ್ನ ಮಾತೃಕುಲಕ್ಕೆ ಮಂಗಳವನ್ನುಂಟುಮಾಡು.”

ಆಸ್ತೀಕನು ಹೀಗೆ ಹೇಳಲು ರಾಜ ಪಾರಿಕ್ಷಿತನು ಪುನಃ ಪುನಃ ಮಾತುಗಾರರಲ್ಲಿ ಶ್ರೇಷ್ಠ ಆಸ್ತೀಕನಲ್ಲಿ ಕೇಳಿಕೊಂಡನು.

“ದ್ವಿಜವರೋತ್ತಮ! ಅನ್ಯ ಯಾವುದಾದರೂ ಒಳ್ಳೆಯ ವರವನ್ನು ಕೇಳಿಕೋ.”

ಆದರೆ ಅವನು ಬೇರೆ ಯಾವ ವರವನ್ನೂ ಕೇಳಲಿಲ್ಲ. ಆಗ ಅಲ್ಲಿರುವ ಎಲ್ಲ ವೇದವಿದಿತ ಸದಸ್ಯರೂ ಸೇರಿ “ಬ್ರಾಹ್ಮಣನಿಗೆ ವರವನ್ನು ನೀಡು!” ಎಂದು ಕೇಳಿಕೊಂಡರು. ರಾಜ ಪಾರಿಕ್ಷಿತನು ಆಸ್ತೀಕನಿಗೆ ವರವನ್ನು ಕೊಡುತ್ತಾನೆನ್ನುವಾಗ ಇಂದ್ರನ ಕೈಯಿಂದ ಜಾರಿದ ನಾಗ ತಕ್ಷಕನು ಕೆಳಗೆ ಬೀಳದೆಯೇ ಆಕಾಶದಲ್ಲಿಯೇ ನಿಂತಾಗ ರಾಜ ಜನಮೇಜಯನು ಚಿಂತಾಪರನಾದನು. ಉರಿಯುತ್ತಿರುವ ಅಗ್ನಿಯಲ್ಲಿ ವಿಧಿವತ್ತಾಗಿ ಹವಿಸ್ಸುಗಳು ಬೀಳುತ್ತಿದ್ದರೂ ಭಯಪೀಡಿತನಾಗಿ ಮೂರ್ಛಿತ ತಕ್ಷಕನು ವಹ್ನಿಯಲ್ಲಿ ಬೀಳಲಿಲ್ಲ. ಇಂದ್ರನ ಕೈಯಿಂದ ಜಾರಿ ಮೂರ್ಛಿತನಾಗಿ ಬೀಳುತ್ತಿದ್ದ ಪನ್ನಗೋತ್ತಮನಿಗೆ ಆಸ್ತೀಕನು “ನಿಲ್ಲು! ನಿಲ್ಲು!” ಎಂದು ಮೂರು ಬಾರಿ ಕೂಗಿ ಹೇಳಿದನು. ಹೃದಯದಲ್ಲಿ ನೋವನ್ನು ಅನುಭವಿಸುತ್ತಿದ್ದ ಅವನು ಸ್ವರ್ಗ ಮತ್ತು ಭೂಮಿಯ ನಡುವೆ ನೇತಾಡುತ್ತಿರುವ ವ್ಯಕ್ತಿಯಂತೆ ಅಲ್ಲಿಯೇ ಅಂತರಕ್ಷದಲ್ಲಿ ನಿಂತುಬಿಟ್ಟನು. ಮೇಲಿಂದ ಮೇಲೆ ಸದಸ್ಯರಿಂದ ಒತ್ತಡಬಂದಾಗ ರಾಜನು “ಅಸ್ತೀಕನ ಬಯಕೆಯಲ್ಲಿದ್ದುದು ನಡೆಯಲಿ” ಎಂದನು.

“ಈ ಕಾರ್ಯವು ನಿಲ್ಲಲಿ. ನಾಗಗಳು ಬದುಕಲಿ. ಆಸ್ತೀಕನು ಬಯಸಿದಂತೆಯೇ ಆಗಲಿ ಮತ್ತು ಸೂತನ ಮಾತು ಸತ್ಯವಾಗಲಿ.”

ಆಸ್ತೀಕನ ವರವನ್ನಿತ್ತಾಕ್ಷಣ ಎಲ್ಲಕಡೆಯಿಂದಲೂ ಸಂತೋಷದ ಹಲಹಲ ಶಬ್ಧವು ಕೇಳಿಬಂದಿತು. ಪಾಂಡವೇಯ ರಾಜ ಪಾರಿಕ್ಷಿತನ ಯಜ್ಞವು ಸಮಾಪ್ತಿಯಾಯಿತು ಮತ್ತು ಭಾರತ ರಾಜ ಜನಮೇಜಯನು ತನ್ನ ಕುರಿತು ಸಂತಸಗೊಂಡನು. ಅಲ್ಲಿ ಸಮಾಗತ ಋತ್ವಿಜ ಮತ್ತು ಸದಸ್ಯರಿಗೆ ನೂರು ನೂರು ಮತ್ತು ಸಹಸ್ರಾರು ಸಂಖ್ಯೆಗಳಲ್ಲಿ ಸಂಪತ್ತನ್ನು ನೀಡಿಲಾಯಿತು. ವಾಸ್ತುಶಾಸ್ತ್ರವನ್ನು ತಿಳಿದಿದ್ದ ಮತ್ತು ಸತ್ರದ ಪ್ರಾರಂಭದಲ್ಲಿಯೇ ಈ ಯಜ್ಞವು ಓರ್ವ ಬ್ರಾಹ್ಮಣನ ಕಾರಣದಿಂದ ನಿಲ್ಲುತ್ತದೆ ಎಂದು ಹೇಳಿದ್ದ ಸೂತ ಲೋಹಿತಾಕ್ಷನಿಗೂ ಬಹಳಷ್ಟು ಸಂಪತ್ತನ್ನು ದಾನವಾಗಿ ನೀಡಲಾಯಿತು. ನಂತರ ವಿಧಿಪೂರ್ವಕ ಅವಭೃತ ಕಾರ್ಯವೂ ನಡೆಯಿತು. ಈ ಒಳ್ಳೆಯ ಕಾರ್ಯವು ಕೃತಕೃತ್ಯವಾಯಿತೆಂದು ಸಂತೋಷಗೊಂಡ ರಾಜನು ಆಸ್ತೀಕನನ್ನು ಸತ್ಕರಿಸಿ ಮನೆಗೆ ಕಳುಹಿಸಿಕೊಟ್ಟನು.

“ಪುನಃ ಬಂದು ನನ್ನ ಮುಂದಿನ ಕಾರ್ಯ ಮಹಾಕ್ರತು ಅಶ್ವಮೇಧದಲ್ಲಿ ಸದಸ್ಯನಾಗಬೇಕು”

ಎಂದನು. “ಹಾಗೆಯೇ ಆಗಲಿ” ಎಂದು ತನ್ನ ಕಾರ್ಯದಿಂದಾಗಿ ಮಾತುಲ ಪಾರ್ಥಿವನಿಗೆ ಅತೀವ ಸಂತೋಷವಾಯಿತಲ್ಲ ಎಂದು ಸಂತುಷ್ಟಗೊಂಡು ಆಸ್ತೀಕನು ಮರಳಿದನು.

ಪರಮ ಸಂತಸಗೊಂಡು ತನ್ನ ತಾಯಿ ಮತ್ತು ಮಾವನ ಬಳಿ ಹೋಗಿ ಅವರಿಗೆ ಅಭಿನಂದಿಸಿ ನಡೆದುದೆಲ್ಲವನ್ನೂ ನಿವೇದಿಸಿದನು. ಇದನ್ನೆಲ್ಲಾ ಕೇಳಿ ಅಲ್ಲಿ ಸೇರಿದ್ದ ಪನ್ನಗಗಳೆಲ್ಲರೂ ತಮ್ಮ ತಮ್ಮ ಭಯವನ್ನು ಕಳೆದುಕೊಂದು ಸಂತಸಗೊಂಡರು. ಆಸ್ತೀಕನಿಂದ ಬಹಳ ಸಂತಸಗೊಂಡ ಅವರು “ನಿನಗಿಷ್ಟವಾದ ವರವನ್ನು ಕೇಳಿಕೋ!” ಎಂದರು. ಅಲ್ಲಿದ್ದ ಎಲ್ಲರೂ ಮೇಲಿಂದ ಮೇಲೆ

“ವಿದ್ವನ್! ನಿನಗೇನು ಇಷ್ಟವಿದೆ? ನಾವೇನು ಮಾಡಬೇಕು? ವತ್ಸ! ನಮ್ಮೆಲ್ಲರನ್ನು ನೀನು ರಕ್ಷಿಸಿದುದಕ್ಕಾಗಿ ನಾವು ಸಂತಸಗೊಂಡಿದ್ದೇವೆ. ಇಂದು ನಾವು ನಿನಗಾಗಿ ಏನನ್ನು ಮಾಡಬೇಕು ಎಂದು ಕೇಳು.”

ಆಸ್ತೀಕನು ಹೇಳಿದನು:

“ಈ ಲೋಕದಲ್ಲಿ ಯಾವ ವಿಪ್ರ ಅಥವಾ ಅನ್ಯ ಮಾನವನು ಸುಪ್ರಸನ್ನನಾಗಿ ಆತ್ಮರೂಪನಾಗಿ ಸಾಯಂಕಾಲ ಅಥವಾ ಪ್ರಾತಃಕಾಲದಲ್ಲಿ ಈ ಧರ್ಮಾಖ್ಯಾನವನ್ನು ಕೇಳುತ್ತಾನೋ ಅವನಿಗೆ ನಿಮ್ಮಿಂದ ಯಾವ ರೀತಿಯ ಭಯವೂ ಬಾರದಿರಲಿ.”

ಅವರೂ ಕೂಡ ಸಂತೋಷದಿಂದ ಹೇಳಿದರು:

“ತಂಗಿಯ ಮಗನೇ! ನೀನು ಕೇಳಿಕೊಂಡ ಈ ಕೆಲಸವನ್ನು ಸತ್ಯವಾಗಿಯೂ ನಡೆಸಿಕೊಡುತ್ತೇವೆ. ನಿನಗಿಷ್ಟವಾದ ಎಲ್ಲವನ್ನೂ ನಾವು ಸಂತಸದಿಂದ ಮಾಡಿಕೊಡುತ್ತೇವೆ. ಜರತ್ಕಾರುವಿನಿಂದ ಜರತ್ಕಾರುವಿನಲ್ಲಿ ಹುಟ್ಟಿ ನಾಗಗಳನ್ನು ರಕ್ಷಿಸಿದ ಆ ಮಹಾಯಶ ಸತ್ಯಸಂಧ ಆಸ್ತೀಕನನ್ನು ಯಾರು ಅಸಿತ, ಆರ್ತಿಮಂತ ಮತ್ತು ಸುನೀಥನೆಂದು ಹಗಲು ಅಥವಾ ರಾತ್ರಿಯಲ್ಲಿ ಸ್ಮರಿಸುತ್ತಾರೋ ಅವರಿಗೆ ಸರ್ಪಭಯವೇ ಇರುವುದಿಲ್ಲ.”

ನಾಗಗಳನ್ನು ಸರ್ಪಸತ್ರದಿಂದ ರಕ್ಷಿಸಿದ ಆ ಧರ್ಮಾತ್ಮನು ಕಾಲಕ್ರಮೇಣವಾಗಿ ತನ್ನ ಪುತ್ರಪೌತ್ರರನ್ನು ತೊರೆದು ಕಾಲವಶನಾದನು.

ಕರ್ಮಾಂಗಗಳಿಂದ ಬಿಡುವ ದೊರೆತಾಗ ದ್ವಿಜರು ವೇದಗಳನ್ನು ಆಧಾರಿಸಿದ ಕಥೆಗಳನ್ನು ಹೇಳುತ್ತಿದ್ದರು. ವ್ಯಾಸನು ಮಹಾಭಾರತದ ಕಥೆಯನ್ನು ನಿತ್ಯವೂ ಹೇಳುತ್ತಿದ್ದನು.

ಜನಮೇಜಯನ ಸರ್ಪಸತ್ರದಲ್ಲಿ ವ್ಯಾಸನ ಆಗಮನ

ಸರ್ಪಸತ್ರಕ್ಕೆ ಜನಮೇಜಯನು ದೀಕ್ಷಿತನಾಗಿದ್ದಾನೆಂದು ಕೇಳಿದ ಋಷಿವಿದ್ವಾಂಸ ಕೃಷ್ಣದ್ವೈಪಾಯನನು ಅಲ್ಲಿಗೆ ಬಂದನು. ಪಾಂಡವ ಪಿತಾಮಹನು ಯಮುನಾನದಿಯ ಒಂದು ದ್ವೀಪದಲ್ಲಿ ಗುಪ್ತವಾಗಿ ಶಕ್ತಿಪುತ್ರ ಪರಾಶರನಿಗೆ ಓರ್ವ ಕನ್ಯೆಯಲ್ಲಿ ಜನಿಸಿದ್ದನು. ಹುಟ್ಟಿದ ತಕ್ಷಣವೇ ತನ್ನ ಇಷ್ಟಮಾತ್ರದಿಂದ ದೇಹವನ್ನು ಬೆಳೆಯಿಸಿಕೊಂಡ ಆ ಮಹಾಯಶನು ವೇದ-ವೇದಾಂಗಗಳನ್ನು ಮತ್ತು ಇತಿಹಾಸಗಳನ್ನು ಗೆದ್ದಿದ್ದನು. ತಪಸ್ಸಿನಲ್ಲಿ, ವೇದಾಧ್ಯಯನದಲ್ಲಿ, ವ್ರತೋಪವಾಸಗಳಲ್ಲಿ, ಸಂತಾನದಲ್ಲಿ ಅಥವಾ ಸಿಟ್ಟಿನಲ್ಲಿ ಅವನನ್ನು ಮೀರಿದವರ್ಯಾರೂ ಇರಲಿಲ್ಲ. ಶುಚಿಯೂ, ಸತ್ಯವ್ರತನೂ, ಕವಿಯೂ, ಬ್ರಹ್ಮರ್ಷಿಯೂ, ಪರಾವರಜ್ಞನೂ, ವೇದವಿದರಲ್ಲಿ ಶ್ರೇಷ್ಠನೂ ಆದ ಅವನು ವೇದವನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಿದನು. ಪಾಂಡು, ಧೃತರಾಷ್ಟ್ರ, ಮತ್ತು ವಿದುರರಿಗೆ ಜನ್ಮವಿತ್ತು ಅವನು ಮಹಾಯಶಸ್ವಿ ಪುಣ್ಯಕೀರ್ತಿಮಯ ಶಂತನು ಸಂತತಿಯನ್ನು ಮುಂದುವರಿಸಿದನು. ತನ್ನ ವೇದವೇದಾಂಗಪಾರಂಗತ ಶಿಷ್ಯರೊಂದಿಗೆ ಅವನು ರಾಜರ್ಷಿ ಜನಮೇಜಯನ ಯಜ್ಞಶಾಲೆಯನ್ನು ಪ್ರವೇಶಿಸಿದನು. ಅಲ್ಲಿ ದೇವತೆಗಳಿಂದ ಸುತ್ತುವರಿದ ಪುರಂದರನಂತೆ ಅನೇಕ ಸದಸ್ಯರಿಂದ, ಮೂರ್ಧಾವಸಿಕ್ತ ನಾನಾ ಜನಪದೇಶ್ವರರಿಂದ, ಮತ್ತು ಯಜ್ಞಕಾರ್ಯ ಕುಶಲ ದೇವಕಲ್ಪ ಋತ್ವಿಜರಿಂದ ಆವೃತನಾಗಿ ಕುಳಿತಿದ್ದ ರಾಜ ಜನಮೇಜಯನನ್ನು ಕಂಡನು. ಭರತಸತ್ತಮ ರಾಜರ್ಷಿ ಜನಮೇಜಯನು ಆಗಮಿಸುತ್ತಿದ್ದ ಋಷಿಯನ್ನು ಕಂಡು ಅತ್ಯಂತ ಹರ್ಷಿತನಾಗಿ ತನ್ನ ಸಂಗಾತಿಗಳೊಂದಿಗೆ ಮುಂದೆಬಂದು ಬರಮಾಡಿಕೊಂಡನು. ಸದಸ್ಯರ ಅನುಮತಿಯಂತೆ ಶಕ್ರನು ಬೃಹಸ್ಪತಿಗೆ ನೀಡುವ ಹಾಗೆ ಪ್ರಭುವು ಅವನಿಗೆ ಕಾಂಚನ ಆಸನವನ್ನಿತ್ತನು. ಅಲ್ಲಿ ಕುಳಿತುಕೊಂಡ ದೇವರ್ಷಿಗಣಪೂಜಿತ ವರದನನ್ನು ರಾಜೇಂದ್ರನು ಶಾಸ್ತ್ರೋಕ್ತ ಕರ್ಮಗಳಿಂದ ಪೂಜಿಸಿದನು. ಪಿತಾಮಹ ಕೃಷ್ಣನಿಗೆ ವಿಧಿವತ್ತಾಗಿ ಪಾದ್ಯ, ಆಚಮನೀಯ, ಅರ್ಘ್ಯ ಮತ್ತು ಗೋವುಗಳನ್ನು ನಿವೇದಿಸಿದನು. ಸುಪ್ರೀತ ವ್ಯಾಸನು ಪಾಂಡವ್ಯ ಜನಮೇಜಯನ ಪೂಜೆ-ಗೋವುಗಳನ್ನು ಪ್ರತಿಗ್ರಹಿಸಿದನು. ಪ್ರಪಿತಾಮಹನನ್ನು ಈ ರೀತಿಯಾಗಿ ಪೂಜಿಸಿ, ಅವನ ಕೆಳಗಿನ ಸ್ಥಾನದಲ್ಲಿ ಕುಳಿತುಕೊಂಡು ಅನಾಮಯನ ಕುಶಲವನ್ನು ವಿಚಾರಿಸಿದನು. ಆ ಭಗವಾನನೂ ಕೂಡ ಅವನನ್ನು ನೋಡಿ ಕುಶಲವನ್ನು ವಿಚಾರಿಸಿ, ತನ್ನನ್ನು ಪೂಜಿಸಿದ ಸರ್ವ ಸದಸ್ಯರುಗಳಿಗೆ ನಮಸ್ಕರಿಸಿದನು. ಎಲ್ಲ ಸದಸ್ಯರುಗಳು ದ್ವಿಜಶ್ರೇಷ್ಠನನ್ನು ಸತ್ಕರಿಸಿದ ನಂತರ ಜನಮೇಜಯನು ಅಂಜಲೀಬದ್ಧನಾಗಿ ಕೇಳಿಕೊಂಡನು:

“ಕುರುಗಳನ್ನೂ ಪಾಂಡವರನ್ನೂ ನೀನು ಪ್ರತ್ಯಕ್ಷವಾಗಿ ನೋಡಿದ್ದೀಯೆ. ದ್ವಿಜ! ನಿನ್ನಿಂದ ಅವರ ಚರಿತ್ರೆಯನ್ನು ಕೇಳಲು ಬಯಸುತ್ತೇನೆ. ಆ ಅಕ್ಲಿಷ್ಟಕರ್ಮಿಗಳಲ್ಲಿ ಭೇದವು ಹೇಗೆ ಉಂಟಾಯಿತು? ಸರ್ವ ಭೂತಾಂತಕಾರಕ ಆ ಮಹಾಯುದ್ಧವು ನನ್ನ ದೈವಪ್ರೇರಿತ ಚೇತನ ಪಿತಾಮಹರ ಮಧ್ಯೆ ಹೇಗೆ ನಡೆಯುಮತಾಯಿತು? ಅವೆಲ್ಲವನ್ನೂ ನನಗೆ ಹೇಳು. ಯಾಕೆಂದರೆ ನಿನಗೊಬ್ಬನಿಗೇ ಇವೆಲ್ಲ ಚೆನ್ನಾಗಿ ತಿಳಿದಿವೆ.”

ಅವನ ಆ ಮಾತುಗಳನ್ನು ಕೇಳಿದ ಕೃಷ್ಣದ್ವೈಪಾಯನನು ಅಲ್ಲಿಯೇ ಕುಳಿತಿದ್ದ ಶಿಷ್ಯ ವೈಶಂಪಾಯನನಿಗೆ ಆದೇಶವನ್ನಿತ್ತನು:

“ಹಿಂದೆ ಕುರು-ಪಾಂಡವರಲ್ಲಿ ಹೇಗೆ ಭೇದವುಂಟಾಯಿತು ಎನ್ನುವುದೆಲ್ಲವನ್ನೂ ನಾನು ನಿನಗೆ ಹೇಗೆ ಹೇಳಿದ್ದೆನೋ ಹಾಗೆಯೇ ಹೇಳು.”

ಗುರುವಿನ ವಚನವನ್ನು ಸ್ವೀಕರಿಸಿದ ಆ ವಿಪ್ರರ್ಷಭನು ಕುರು-ಪಾಂಡವರಲ್ಲಾದ ಭೇದ ಮತ್ತು ನಂತರದ ರಾಜ್ಯವಿನಾಶದ ಸಹಿತ ಆ ಪುರಾತನ ಇತಿಹಾಸ ಸರ್ವವನ್ನೂ ಅಲ್ಲಿ ನೆರೆದಿದ್ದ ಸದಸ್ಯರು ಮತ್ತು ಕ್ಷತ್ರಿಯ ರಾಜರೆಲ್ಲರಿಗೆ ಹೇಳತೊಡಗಿದನು.

ವೈಶಂಪಾಯನನಿಂದ ಮಹಾಭಾರತ ಕಥಾರಂಭ

ವೈಶಂಪಾಯನನು ಹೇಳಿದನು:

“ಮನಸ್ಸು, ಬುದ್ಧಿ ಮತ್ತು ಸಮಾಧಿ ಪೂರ್ವಕ ಗುರುವಿಗೆ ನಮಸ್ಕರಿಸಿ ಇಲ್ಲಿರುವ ಸರ್ವ ದ್ವಿಜ-ವಿದುಷಿಗಳನ್ನು ಸಂಪೂಜಿಸಿ, ಸರ್ವಲೋಕವಿಶೃತ ಧೀಮಂತ ಅಮಿತತೇಜಸ ಮಹರ್ಷಿ ವ್ಯಾಸನಿಂದ ಕೇಳಿದುದೆಲ್ಲವನ್ನೂ ಸಂಪೂರ್ಣವಾಗಿ ಹೇಳುತ್ತೇನೆ. ರಾಜ! ಈ ಭಾರತದ ಕಥೆಯನ್ನು ಕೇಳಲು ಪಾತ್ರನಾಗಿರುವ ನಿನಗೆ ಗುರುವಿನ ಆದೇಶ ಮತ್ತು ಪ್ರೋತ್ಸಾಹಗಳಿಂದ ಇದನ್ನು ಹೇಳಲು ತುಂಬಾ ಉತ್ಸುಕನಾಗಿದ್ದೇನೆ. ಕುರುಪಾಂಡವರ ಮಧ್ಯೆ ಭೇದವು ಹೇಗೆ ಉಂಟಾಯಿತು ಮತ್ತು ಹೇಗೆ ರಾಜ್ಯಕ್ಕೋಸ್ಕರ ದ್ಯೂತ-ವನವಾಸಗಳಾದವು ಎನ್ನುವುದನ್ನು ಕೇಳು. ನೀನು ಕೇಳಿದಂತೆ ಪೃಥ್ವಿಕ್ಷಯಕಾರಕ ಯುದ್ಧವು ಹೇಗೆ ನಡೆಯಿತು ಎನ್ನುವುದನ್ನು ಹೇಳುತ್ತೇನೆ. ತಂದೆಯ ಮರಣದ ಬಳಿಕ ಆ ವೀರರು ವನದಿಂದ ತಮ್ಮ ಅರಮನೆಗೆ ಆಗಮಿಸಿ ಸ್ವಲ್ಪವೇ ಸಮಯದಲ್ಲಿ ವೇದ-ಧನುರ್ವಿಧ್ಯಾ ವಿದ್ವಾಂಸರಾದರು. ಶ್ರೀಯಶೋಭೃತ, ರೂಪವೀರ್ಯಜ, ಸಂಪನ್ನ, ಮತ್ತು ಪೌರಸಮ್ಮತ ಪಾಂಡವರನ್ನು ನೋಡಿ ಕೌರವರು ಅಸೂಯೆಗೊಂಡರು. ಕ್ರೂರ ದುರ್ಯೋಧನನು ಕರ್ಣ-ಸೌಬಲರೊಡಗೂಡಿ ಅವರನ್ನು ನಿಗ್ರಹಿಸಲು ಮತ್ತು ನಿರ್ವಾಸರನ್ನಾಗಿ ಮಾಡಲು ವಿವಿಧ ಯೋಜನೆಗಳನ್ನು ನಡೆಸಿದರು. ಧೃತರಾಷ್ಟ್ರನ ಪಾಪಿಷ್ಟ ಮಕ್ಕಳು ಭೀಮನಿಗೆ ವಿಷವನ್ನಿತ್ತರು. ಆದರೆ ಆ ವೀರ ವೃಕೋದರನು ಅದನ್ನು ಜೀರ್ಣಿಸಿ ಸಹಿಸಿಕೊಂಡನು. ಗಂಗಾತಟದಲ್ಲಿ ಮಲಗಿದ್ದ ಭೀಮನನ್ನು ಕಟ್ಟಿ ನೀರಿನಲ್ಲಿ ಹಾಕಿ ಪುರಕ್ಕೆ ತೆರಳಿದರು. ಪ್ರಬುದ್ಧ ಕೌಂತೇಯ ಭೀಮಸೇನನು ಕಟ್ಟನ್ನು ಹರಿದು ತನ್ನನ್ನು ತಾನೇ ಬಿಡುಗಡೆಮಾಡಿಕೊಂಡನು.  ನಿದ್ದೆಯಲ್ಲಿದ್ದಾಗ ಸರ್ವ ದೇಹಾಂಗಗಳನ್ನು ಮಹಾವಿಷಭರಿತ ಕೃಷ್ಣಸರ್ಪಗಳು ಕಚ್ಚಿದ್ದರೂ ಆ ಶತ್ರುಹನು ಸಾಯಲಿಲ್ಲ. ಮಹಾಮತಿ ವಿದುರನು ಅವರು ಕಷ್ಟದಲ್ಲಿದ್ದಾಗಲೆಲ್ಲಾ ಅವರ ಹಿತವನ್ನೇ ಬಯಸಿ ಅವರನ್ನು ಉಳಿಸುವ ಯೋಜನೆಗಳನ್ನು ಮಾಡುತ್ತಿದ್ದನು. ಸ್ವರ್ಗದಲ್ಲಿ ಇಂದ್ರನು ಜೀವಲೋಕಗಳಿಗೆ ಸುಖವನ್ನು ತರುವ ಹಾಗೆ ವಿದುರನು ನಿತ್ಯವೂ ಪಾಂಡವರ ಸುಖವನ್ನು ಬಯಸುತ್ತಿದ್ದನು. ವಿವಿಧ ಗೌಪ್ಯ ಅಥವಾ ಬಾಹ್ಯ ಉಪಾಯಗಳಿಂದಲೂ ಆ ದೈವಭಾವ್ಯ ರಕ್ಷಿತರನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಆಗ ವೃಷ ದುಃಶಾಸನ ಮೊದಲಾದ ಸಚಿವರು ಸಮಾಲೋಚಿಸಿ ಧೃತರಾಷ್ಟ್ರನ ಅನುಜ್ಞೆಯನ್ನು ಪಡೆದು ಒಂದು ಜಾತುಗೃಹವನ್ನು ನಿರ್ಮಿಸಿದರು. ಅಮಿತೌಜಸ ಪಾಂಡವರು ಅಲ್ಲಿ ವಾಸಿಸುವಂತೆ ಏರ್ಪಡಿಸಿದರು ಮತ್ತು ಅವರಿಗೆ ಸ್ವಲ್ಪವೂ ಅನುಮಾನಬಾರದ ಹಾಗೆ ಅವರೊಂದಿಗೆ ಆ ಮನೆಯನ್ನು ಬೆಂಕಿಹಚ್ಚಿ ಸುಟ್ಟುಹಾಕಿದರು. ವಿದುರನ ಮಾತಿನಂತೆ ಅಲ್ಲಿ ಒಂದು ಕಣಿವೆಯನ್ನು ಅಗೆಯಲಾಗಿತ್ತು ಮತ್ತು ಅದರ ಸಹಾಯದಿಂದ ಅವರು ಅದೃಷ್ಠವಶಾತ್ ಆ ಭಯದಿಂದ ಮುಕ್ತರಾದರು. ನಂತರ ಆ ಮಹಾವನದಲ್ಲಿ ಭುವಿಯಲ್ಲೇ ಭೀಮಪರಾಕ್ರಮಿ ಕೃದ್ಧ ಭೀಮಸೇನನು ಹಿಡಿಂಬ ಎಂಬ ಹೆಸರಿನ ಘೋರ ರಾಕ್ಷಸನನ್ನು ಸಂಹರಿಸಿದನು. ಆ ಪರಂತಪ ವೀರರು ಎಲ್ಲರ ಒಪ್ಪಿಗೆಯಂತೆ ಏಕಚಕ್ರ ನಗರಿಗೆ ಹೋಗಿ ಅಲ್ಲಿ ಬ್ರಾಹ್ಮಣ ರೂಪ ಧರಿಸಿ ತಾಯಿಯೊಂದಿಗಿದ್ದರು. ಅಲ್ಲಿ ಆ ಬ್ರಾಹ್ಮಣನಿಗೋಸ್ಕರ ಮಹಾಬಲ ಬಕನನ್ನು ಸಂಹರಿಸಿ ಬ್ರಾಹ್ಮಣರ ಸಹಿತ ಪಾಂಚಾಲನಗರಿಗೆ ಹೋದರು. ಅಲ್ಲಿ ಅವರು ದ್ರೌಪದಿಯನ್ನು ಪಡೆದು ಒಂದು ವರ್ಷಪರ್ಯಂತ ಅಲ್ಲಿಯೇ ವಾಸಿಸಿದರು. ಆ ಅರಿಂದಮರ ಕುರಿತು ತಿಳಿದ ನಂತರ ಅವರು ಹಸ್ತಿನಾಪುರಕ್ಕೆ ಹಿಂದಿರುಗಿದರು. ಅಲ್ಲಿ ಅವರಿಗೆ ರಾಜ ಧೃತರಾಷ್ಟ್ರ ಮತ್ತು ಶಾಂತನವ ಹೇಳಿದರು: “ಮಕ್ಕಳೇ! ನೀವು ಮತ್ತು ನಿಮ್ಮ ಭ್ರಾತೃಗಳ ಮಧ್ಯೆ ಯಾವುದೇ ರೀತಿಯ ಒಡಕು ಉಂಟಾಗಬಾರದೆಂದು ನಾವು ಖಾಂಡವಪ್ರಸ್ಥವು ನಿಮಗಿರಲಿ ಎಂದು ಯೋಚಿಸಿದ್ದೇವೆ. ಆದುದರಿಂದ ಹಿಂದಿನ ಅಸೂಯೆಗಳನ್ನೆಲ್ಲ ತ್ಯಜಿಸಿ ಹಲವಾರು ಜನಪದ ಮಹಾಪಥಗಳಿಂದ ಕೂಡಿದ ಖಾಂಡವಪ್ರಸ್ಥದಲ್ಲಿ ವಾಸಮಾಡಿ.” ಈ ವಚನದಂತೆ ಅವರು ಎಲ್ಲ ಸುಹೃಜ್ಜನರೊಡಗೂಡಿ ಹಲವಾರು ರತ್ನಗಳೊಂದಿಗೆ ಖಾಂಡವಪ್ರಸ್ಥ ನಗರಿಗೆ ಹೋದರು. ಅಲ್ಲಿ ಅವರು ಹಲವಾರು ವರ್ಷಗಳು ವಾಸಿಸಿದರು ಮತ್ತು ತಮ್ಮ ಶಸ್ತ್ರಪ್ರತಾಪದಿಂದ ಅನ್ಯ ಮಹೀಕ್ಷಿತರನ್ನು ವಶಪಡಿಸಿಕೊಂಡರು. ಈ ರೀತಿ ಆ ಸತ್ಯವ್ರತಪರಾಯಣರು ಧರ್ಮಪ್ರಧಾನರಾಗಿದ್ಡು, ಸಿಟ್ಟಿಗೇಳದೇ, ಶಾಂತರಾಗಿ ಅಹಿತಗಳನ್ನು ತುಳಿದು ರಾಜ್ಯವಾಳಿದರು. ಮಹಾಬಲ ಭೀಮಸೇನನು ಪಶ್ಚಿಮ ದಿಕ್ಕನ್ನು ಜಯಿಸಿದನು. ವೀರ ಅರ್ಜುನನು ಉತ್ತರ ದಿಕ್ಕನ್ನು, ನಕುಲನು ಪಶ್ಚಿಮವನ್ನು, ಮತ್ತು ಸಹದೇವನು ದಕ್ಷಿಣವನ್ನು ಜಯಿಸಿ, ಆ ಪರವೀರರು ಈ ವಸುಂಧರೆಯಲ್ಲಿ ಸರ್ವರನ್ನೂ ತಮ್ಮ ವಶಮಾಡಿಕೊಂಡರು. ಸೂರ್ಯನೊಂದಿಗೆ ಸೂರ್ಯಸಂಕಾಶ ಐವರು ಪಾಂಡವರೂ ಸೇರಿ ಆರು ಸತ್ಯವಿಕ್ರಮಿ ಸೂರ್ಯರನ್ನು ಪೃಥ್ವಿಯು ಹೊಂದಿದಂತೆ ತೋರುತ್ತಿತ್ತು. ನಂತರ ಯಾವುದೋ ಒಂದು ಕಾರಣದಿಂದ ಧರ್ಮರಾಜ ಯುಧಿಷ್ಠಿರನು ಸಹೋದರ ಧನಂಜಯನನ್ನು ವನಕ್ಕೆ ಕಳುಹಿಸಬೇಕಾಗಿ ಬಂದಿತು. ವನದಲ್ಲಿ ಒಂದು ವರ್ಷ ಒಂದು ತಿಂಗಳು ಇದ್ದು ಅವನು ಹೃಷೀಕೇಶಕ್ಕೆ ಹೋಗಿ ಅಲ್ಲಿಂದ ಒಮ್ಮೆ ದ್ವಾರವತಿಗೂ ಹೋದನು. ಅಲ್ಲಿ ಬೀಭತ್ಸುವು ವಾಸುದೇವನ ಅನುಜೆ ರಾಜೀವಲೋಚನೆ, ಭದ್ರಭಾಷಿಣೀ ಸುಭದ್ರೆಯನ್ನು ಪತ್ನಿಯಾಗಿ ಪಡೆದನು. ಶಚಿಯು ಮಹೇಂದ್ರನೊಂದಿಗೆ ಮತ್ತು ಶ್ರೀಯು ಕೃಷ್ಣನೊಂದಿಗೆ ಹೇಗೋ ಹಾಗೆ ಸುಭದ್ರೆಯು ಪಾಂಡವ ಅರ್ಜುನನನ್ನು ಸೇರಿ ಸಂತೋಷಗೊಂಡಳು. ನಂತರ ಕೌಂತೇಯ ಬೀಭತ್ಸುವು ವಾಸುದೇವನ ಸಹಿತ ಖಾಂಡವವನ್ನು ಹವ್ಯವಾಹನನಿಗಿತ್ತು ಅವನನ್ನು ಸಂತೃಪ್ತಿಗೊಳಿಸಿದನು. ಕೇಶವನ ಸಹಾಯದಿಂದ ಪಾರ್ಥನಿಗೆ ಈ ಕೆಲಸವು ಅತಿಭಾರವೆನ್ನಿಸಲಿಲ್ಲ. ಯಾಕೆಂದರೆ ವಿಷ್ಣುವಿಗೆ ಶತ್ರುವಧೆಯು ಮಹಾಕಾರ್ಯವೇನಲ್ಲ. ಅಗ್ನಿಯು ಪಾರ್ಥನಿಗೆ ಉತ್ತಮ ಗಾಂಡೀವ ಧನಸ್ಸು, ಅಕ್ಷಯ ಬಾಣಗಳುಳ್ಳ ಬತ್ತಳಿಕೆ ಮತ್ತು ಕಪಿಲಕ್ಷಣ ರಥವನ್ನು ನೀಡಿದನು. ಆ ಸಮಯದಲ್ಲಿ ಬೀಭತ್ಸುವು ಮಹಾಸುರ ಮಯನನ್ನು ರಕ್ಷಿಸಿದನು ಮತ್ತು ಅವನು ಸರ್ವರತ್ಸಸಮಾಚಿತ ದಿವ್ಯ ಸಭೆಯೊಂದನ್ನು ನಿರ್ಮಿಸಿದನು. ಮಂದ ಮತ್ತು ದುರ್ಮತಿ ದುರ್ಯೋಧನನು ಅದನ್ನು ಪಡೆಯಲು ಬಯಸಿದನು. ಮತ್ತು ಸೌಬಲನ ಸಹಾಯದಿಂದ ದ್ಯೂತದಲ್ಲಿ ಯುಧಿಷ್ಠಿರನನ್ನು ಗೆದ್ದು ಒಟ್ಟು ಹದಿಮೂರು ವರ್ಷ ವನಕ್ಕೆ ಹೋಗುವಂತೆ - ಹನ್ನೆರಡು ವರ್ಷ ವನದಲ್ಲಿ ಮತ್ತು ಒಂದು ವರ್ಷ ಯಾವುದಾದರೂ ರಾಷ್ಟ್ರದಲ್ಲಿ ಅಜ್ಞಾತವಾಸ ಮಾಡುವಂತೆ ಮಾಡಿದನು.  ಹದಿನಾಲ್ಕನೆಯ ವರ್ಷ ತಮ್ಮ ಆಸ್ತಿಯನ್ನು ಹಿಂದೆ ಕೇಳಿದಾಗಲೂ ದೊರೆಯದಿದ್ದಾಗ, ಯುದ್ಧವು ನಡೆಯಿತು. ಆಗ ಪಾಂಡವರು ನೃಪ ದುರ್ಯೋಧನನನ್ನು ಕೊಂದು ರಾಜ್ಯವನ್ನು ಹಿಂದೆ ಪಡೆದರು. ಇದೇ ಹಿಂದೆ ಆ ಅಕ್ಲಿಷ್ಟಕರ್ಮಿಗಳ ನಡುವೆ ನಡೆದ ಭೇದ, ರಾಜ್ಯವಿನಾಶ ಮತ್ತು ವಿಜಯಿಗಳಲ್ಲಿ ಶ್ರೇಷ್ಠರಾದವರ ಜಯ.”

ಜನಮೇಜಯನು ಹೇಳಿದನು:

“ದ್ವಿಜೋತ್ತಮ! ಕುರುಗಳ ಮಹಾ ಚರಿತ್ರೆ ಮಹಾಭಾರತ ಆಖ್ಯಾನವನ್ನು ಸಂಕ್ಷಿಪ್ತರೂಪದಲ್ಲಿ ನೀನು ಹೇಳಿದ್ದೀಯೆ. ಚಿತ್ರಾರ್ಥಗಳನ್ನುಳ್ಳ ಈ ಕಥೆಯನ್ನು ನಿನ್ನಿಂದ ವಿಸ್ತಾರವಾಗಿ ಕೇಳುವ ಅತೀವ ಕುತೂಹಲವು ನನ್ನಲ್ಲಿ ಉಂಟಾಗಿದೆ. ನೀನು ಪುನಃ ಇದನ್ನು ವಿಸ್ತಾರವಾಗಿ ಹೇಳಬೇಕು. ಈಗ ಹೇಳಿದ ಮಹಾ ಚರಿತ್ರೆಯನ್ನು ಕೇಳಿ ನಾನು ತೃಪ್ತಿ ಹೊಂದಲಿಲ್ಲ. ಧರ್ಮಜ್ಞ ಪಾಂಡವರು ಆ ಅಲ್ಪ ಕಾರಣಕ್ಕಾಗಿ ವಧೆಗೆ ಅರ್ಹರಲ್ಲದ ಸರ್ವರನ್ನೂ ಸಂಹರಿಸಿದರು. ಆದರೂ ಜನರ ಪ್ರಶಂಸೆಗೆ ಪಾತ್ರರಾದರು. ಸಂತರೂ, ಶಕ್ತರೂ, ತಪ್ಪಿಲ್ಲದವರೂ ಆದ ಆ ನರವ್ಯಾಘ್ರರು ದುರಾತ್ಮರಿಂದ ತಮಗೊದಗಿದ ಸಂಕ್ಲೇಷಗಳನ್ನು ಏಕೆ ವಿರೋಧಿಸಿದೇ ಸಹಿಸಿದರು? ಆನೆಗಳ ಬಲವುಳ್ಳ ಬಾಹುಶಾಲಿ ವೃಕೋದರನು ಪರಿಕ್ಲಿಷ್ಟಗಳೊದಗಿದರೂ ಹೇಗೆ ತನ್ನ ಕ್ರೋಧವನ್ನು ಸಹಿಸಿಕೊಂಡನು? ದುರಾತ್ಮರಿಂದ ಕಷ್ಟಕ್ಕೊಳಗಾದ ದ್ರೌಪದಿ ಕೃಷ್ಣೆಯು ಶಕ್ತಳಾಗಿದ್ದರೂ ಏಕೆ ತನ್ನ ಘೋರ ಕಣ್ಣುಗಳಿಂದ ಆ ಧಾರ್ತರಾಷ್ಟ್ರರನ್ನು ಸುಟ್ಟು ಭಸ್ಮಮಾಡಲಿಲ್ಲ? ಈರ್ವರು ಪಾರ್ಥರು ಮತ್ತು ಈರ್ವರು ಮಾದ್ರೀಸುತರು ದ್ಯೂತದಲ್ಲಿ ದುರಾತ್ಮರಿಂದ ವಂಚನೆಗೊಳಗಾಗುತ್ತಿದ್ದಾಗಲೂ ಆ ನರವ್ಯಾಘ್ರನನ್ನು ಹೇಗೆ ಅನುಸರಿಸಿದರು? ಧರ್ಮಸುತ ಧರ್ಮಭೃತರಲ್ಲಿ ಶ್ರೇಷ್ಠ ಧರ್ಮವಿತ್ ಯುಧಿಷ್ಠಿರನು ಏಕೆ ಅನರ್ಹನಾಗಿದ್ದರೂ ಆ ಪರಮ ಕ್ಲೇಷವನ್ನು ಅನುಭವಿಸಿದನು?  ಬಹುಸಂಖ್ಯೆಯಲ್ಲಿ ಸರ್ವ ಸೇನೆಗಳನ್ನೂ ಒಬ್ಬನೇ ಪಿತೃಲೋಕಕ್ಕೆ ಕಳುಹಿಸಬಲ್ಲ ಕೃಷ್ಣಸಾರಥಿ ಪಾಂಡವ ಧನಂಜಯನು ಕೂಡ ಹೇಗೆ ಸಹಿಸಿದನು? ಇವೆಲ್ಲವನ್ನೂ ಹೇಗೆ ನಡೆಯಿತೋ ಹಾಗೆ ಹೇಳು - ಪ್ರತಿಯೊಂದು ಕ್ಷಣದಲ್ಲೂ ಆ ಮಹಾರಥಿಗಳು ನಿರ್ವಹಿಸಿದ ಕಾರ್ಯಗಳನ್ನು ಹೇಳು.”

ಆಗ ವೈಶಂಪಾಯನನು ಹೇಳಿದನು:

“ಸರ್ವಲೋಕಪೂಜಿತ ಮಹಾತ್ಮ ಅಮಿತತೇಜಸ ಮಹರ್ಷಿ ವ್ಯಾಸನ ಕೃತಿಯನ್ನು ಸಂಪೂರ್ಣವಾಗಿ ಹೇಳುತ್ತೇನೆ. ಅಮಿತೌಜಸ ಸತ್ಯವತಿಯ ಆತ್ಮಜನು ಆಖ್ಯಾಯಿಸಿದ ಈ ಪುಣ್ಯಕೃತಿಯು ನೂರುಸಾವಿರ ಶ್ಲೋಕಗಳನ್ನು ಹೊಂದಿದೆ. ಇದನ್ನು ಓದುವ ವಿದ್ವಾಂಸ ಮತ್ತು ಕೇಳುವ ನರನು ದೇವಮಾನ ಬ್ರಹ್ಮಸ್ಥಾನವನ್ನು ಪಡೆಯುತ್ತಾರೆ. ವೇದಗಳಷ್ಟೇ ಪವಿತ್ರ, ಋಷಿಸಂಸ್ತುತ ಈ ಪುರಾಣವು ಕೇಳಬೇಕಾಗಿದ್ದುದರಲ್ಲೆಲ್ಲಾ ಉತ್ತಮವಾದದ್ದು. ಇದರಲ್ಲಿ ಅರ್ಥ-ಧರ್ಮಗಳನ್ನು ಸಂಪೂರ್ಣವಾಗಿ ಉಪದೇಶಿಸಲಾಗಿದೆ ಮತ್ತು ಈ ಮಹಾಪುಣ್ಯಕರ ಇತಿಹಾಸವು ಮೋಕ್ಷವನ್ನು ಬಯಸುವ ಬುದ್ಧಿಯನ್ನು ನೀಡುತ್ತದೆ. ಕೃಷ್ಣನ ಈ ವೇದವನ್ನು ಅಕ್ಷುದ್ರರಿಗೆ, ದಾನಶೀಲರಿಗೆ, ಸತ್ಯಶೀಲರಿಗೆ ಮತ್ತು ಆಸ್ತಿಕರಿಗೆ ಓದಿ ಹೇಳಿದ ವಿದ್ವಾಂಸನು ಸಂಪತ್ತನ್ನು ಪಡೆಯುವನು. ಈ ಇತಿಹಾಸವನ್ನು ಕೇಳಿ ಪುರುಷನು ಸುದಾರುಣ ಭ್ರೂಣಹತ್ಯಾ ಪಾಪವನ್ನೂ ಕೂಡ ನಿಸ್ಸಂಶಯವಾಗಿ ಕಳೆದುಕೊಳ್ಳಬಹುದು. ವಿಜಯಾಕಾಂಕ್ಷಿಗಳು ಜಯ ನಾಮದ ಈ ಇತಿಹಾಸವನ್ನು ಕೇಳಬೇಕು; ಅಂಥವನು ಸರ್ವ ಶತ್ರುಗಳನ್ನೂ ಪರಾಜಯಗೊಳಿಸಿ ಮಹಿಯನ್ನೇ ಜಯಿಸಬಹುದು. ರಾಣಿ ಯುವರಾಜರೀರ್ವರೂ ಇದನ್ನು ಬಹುಬಾರಿ ಕೇಳಿದರೆ ಶ್ರೇಷ್ಠ ಸಂತಾನವನ್ನು ಪಡೆದು ಮಹತ್ತರ ಕಲ್ಯಾಣವನ್ನು ಹೊಂದುತ್ತಾರೆ. ಇದು ಪುಣ್ಯಕರ ಅರ್ಥಶಾಸ್ತ್ರ ಮತ್ತು ಶ್ರೇಷ್ಠ ಧರ್ಮಶಾಸ್ತ್ರ. ಅಮಿತಬುದ್ದಿಶಾಲಿ ವ್ಯಾಸನು ಹೇಳಿದಹಾಗೆ ಇದು ಮೋಕ್ಷಶಾಸ್ತ್ರವೂ ಹೌದು. ಈಗ ಇದನ್ನು ಹೇಳಲಾಗುತ್ತಿದೆ ಮತ್ತು ಇದರ ನಂತರವೂ ಕಥಿಸಲಾಗುತ್ತದೆ. ಮಾತನ್ನು ಕೇಳುವ ಪುತ್ರರು ಜನಿಸುತ್ತಾರೆ ಮತ್ತು ಪ್ರಿಯಕಾರ್ಯಗಳನ್ನು ಮಾಡುವ ಸೇವಕರು ದೊರೆಯುತ್ತಾರೆ. ಇದನ್ನು ಸದಾ ಕೇಳುವ ನರನನ್ನು ಅವನು ವಾಚಾ, ಮನಸಾ ಅಥವಾ ಶರೀರದಿಂದ ಮಾಡಿದ ಪಾಪಗಳೆಲ್ಲವೂ ತಕ್ಷಣವೇ ತ್ಯಜಿಸಿಬಿಡುತ್ತವೆ. ದೂಷಿಸದೇ ಯಾರು ಭಾರತರ ಮಹಾಜನ್ಮದ ಕುರಿತು ಕೇಳುತ್ತಾರೋ ಅವರಿಗೆ ಯಾವುದೇ ವ್ಯಾಧಿಭಯವೂ ಇರುವುದಿಲ್ಲ, ಪರಲೋಕದ ಭಯವು ಎಲ್ಲಿಂದ? ಒಳ್ಳೆಯದನ್ನು ಮಾಡಲೋಸುಗ ಕೃಷ್ಣದ್ವೈಪಾಯನನು ಧನ್ಯತೆ, ಯಶಸ್ಸು, ಆಯಷ್ಯ, ಸ್ವರ್ಗ ಮತ್ತು ಪುಣ್ಯಗಳನ್ನು ತರುವಂಥಹ ಇದನ್ನು ರಚಿಸಿ, ಭೂರಿದ್ರವಿಣತೇಜಸ ಮಹಾತ್ಮ ಪಾಂಡವರ ಮತ್ತು ಇನ್ನೂ ಇತರ ಕ್ಷತ್ರಿಯರ ಕೀರ್ತಿಯನ್ನು ಲೋಕಗಳಲ್ಲಿ ಪ್ರಸರಿಸಿದನು. ಭಗವಾನ್ ಸಮುದ್ರ ಮತ್ತು ಹಿಮವತ್ಪರ್ವತಗಳು ರತ್ನನಿಧಿಗಳೆಂದು ಹೇಗೆ ಖ್ಯಾತರಾಗಿದ್ದಾರೋ ಹಾಗೆ ಭಾರತವೂ ಖ್ಯಾತಿಗೊಂಡಿದೆ. ಇಲ್ಲಿ ಇದನ್ನು ಹುಣ್ಣಿಮೆಯಲ್ಲಿ ಬ್ರಾಹ್ಮಣರಿಗೆ ಹೇಳಿದ ವಿದ್ವಾಂಸನು ಪರಲೋಕದಲ್ಲಿ ಸ್ವರ್ಗವನ್ನು ಗೆದ್ದು ಬ್ರಹ್ಮಲೋಕವನ್ನೂ ಸೇರುತ್ತಾರೆ. ಶ್ರಾದ್ಧದಲ್ಲಿ ಇದರ ಒಂದು ಶ್ಲೋಕವನ್ನಾದರೂ ಬ್ರಾಹ್ಮಣರಿಗೆ ಕೇಳಿಸುವಂತೆ ಹೇಳಿದರೆ ಅವನ ಶ್ರಾದ್ಧವು ಅಕ್ಷಯವಾಗುತ್ತದೆ ಮತ್ತು ಪಿತೃಗಳೂ ಕೂಡ ಸಂತೃಪ್ತರಾಗುತ್ತಾರೆ. ಅಜ್ಞಾನದಿಂದ ದಿನದಲ್ಲಿ ನರನು ಮಾಡಿದ ಪಾಪವು ಭಾರತದ ಆಖ್ಯಾನವನ್ನು ಕೇಳುತ್ತಿದ್ದಂತೆ ನಶಿಸಿಹೋಗುತ್ತದೆ. ಭಾರತರ ಮಹಾಜನ್ಮವೇ ಮಹಾಭಾರತವೆಂದು ಕರೆಯಲ್ಪಟ್ಟಿದೆ. ಈ ನಿರುಕ್ತವನ್ನು ತಿಳಿದವನು ಸರ್ವಪಾಪಗಳಿಂದ ವಿಮುಕ್ತನಾಗುತ್ತಾನೆ. ಮೂರುವರ್ಷಗಳು ಪ್ರತಿದಿನವೂ ಎದ್ದು ಮುನಿ ಕೃಷ್ಣದ್ವೈಪಾಯನನು ಈ ಅನುತ್ತಮ ಮಹಾಭಾರತ ಆಖ್ಯಾನವನ್ನು ರಚಿಸಿದನು. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳ ಕುರಿತು ಇದರಲ್ಲಿ ಏನಿವೆಯೋ ಅವು ಎಲ್ಲೆಡೆಯಲ್ಲಿಯೂ ಇವೆ. ಆದರೆ ಇಲ್ಲಿ ಇಲ್ಲದಿದ್ದದ್ದು ಎಲ್ಲಿಯೂ ಇಲ್ಲ.”

ಹೀಗೆ ಹೇಳಿ ವೈಶಂಪಾಯನನು ಜನಮೇಜಯನಿಗೆ ಮಹಾಭಾರತ ಇತಿಹಾಸ ಕಥನವನ್ನು ಪ್ರಾರಂಭಿಸಿದನು.

4 Comments

  1. bahal mandattuva maha bhartha nannge tubmbane istvaitu e booka mukantra odiddu dhanyvadglu gurudeva

  2. Dhanyavada, Nanu Kannada anuvadita mahabharatha e Book hudukutidde . Nemma e book tumbane arthapurna vagide, Edarinda namma grantada bagge ennu purnavagi tiludukoluva hagaeitu.

    Nemma e shramakke nanna hrutpurvaka dhanyavadagalu.

    Namaste.

Leave a Reply

Your email address will not be published. Required fields are marked *