Udyoga Parva: Chapter 166

ಉದ್ಯೋಗ ಪರ್ವ: ರಥಾಥಿರಥಸಂಖ್ಯ ಪರ್ವ

೧೬೬

ಪಾಂಡವ ಸೇನೆಯಲ್ಲಿರುವ ರಥಾತಿರಥರ ವರ್ಣನೆ

ಕರ್ಣನನ್ನು ಭೀಷ್ಮನು ಪುನಃ ನಿಂದಿಸಲು (೧-೯), ದುರ್ಯೋಧನನು ಪ್ರಸ್ತುತ ಕಾರ್ಯದ ಬಗ್ಗೆ ಭೀಷ್ಮನ ಗಮನವನ್ನು ಸೆಳೆದುದು (೧೦-೧೩). ಭೀಷ್ಮನು ಪಾಂಡವರ ಸೇನೆಯಲ್ಲಿದ್ದ ಯುಧಿಷ್ಠಿರನು ರಥೋದಾರನೆಂದೂ, ಭೀಮಸೇನನು ೮ ರಥರಿಗೆ ಸಮಾನನೆಂದೂ, ಯಮಳರಿಬ್ಬರೂ ರಥರೆಂದೂ, ಅರ್ಜುನನ ಸರಿಸಮನಾದವರು ಎರಡೂ ಸೇನೆಗಳಲ್ಲಿ ಇಲ್ಲ ಎಂದು ಹೇಳಿ ಅವರ ಪರಾಕ್ರಮವನ್ನು ವರ್ಣಿಸಿದುದು (೧೪-೩೯).

05166001 ಭೀಷ್ಮ ಉವಾಚ|

05166001a ಸಮುದ್ಯತೋಽಯಂ ಭಾರೋ ಮೇ ಸುಮಹಾನ್ಸಾಗರೋಪಮಃ|

05166001c ಧಾರ್ತರಾಷ್ಟ್ರಸ್ಯ ಸಂಗ್ರಾಮೇ ವರ್ಷಪೂಗಾಭಿಚಿಂತಿತಃ||

ಭೀಷ್ಮನು ಹೇಳಿದನು: “ಸಾಗರದಂತೆ ಬಹುಭಾರವಾಗಿರುವ ಧಾರ್ತರಾಷ್ಟ್ರನ ಈ ಸಂಗ್ರಾಮವು ನನ್ನ ಮೇಲೆ ಬಿದ್ದಿದೆ. ಇದರ ಚಿಂತೆ ಬಹಳ ವರ್ಷಗಳಿಂದ ನನಗಿತ್ತು.

05166002a ತಸ್ಮಿನ್ನಭ್ಯಾಗತೇ ಕಾಲೇ ಪ್ರತಪ್ತೇ ಲೋಮಹರ್ಷಣ|

05166002c ಮಿಥೋಭೇದೋ ನ ಮೇ ಕಾರ್ಯಸ್ತೇನ ಜೀವಸಿ ಸೂತಜ||

ರೋಮಾಂಚನಗೊಳಿಸುವ ಆ ಕಾಲವು ಪ್ರಾಪ್ತವಾಗಿರುವಾಗ ಈಗ ಭೇದವನ್ನುಂಟುಮಾಡುವ ಕಾರ್ಯವು ನನ್ನಿಂದಾಗಬಾರದು. ಸೂತಜ! ಈ ಕಾರಣದಿಂದ ನೀನು ಜೀವಿಸಿದ್ದೀಯೆ.

05166003a ನ ಹ್ಯಹಂ ನಾದ್ಯ ವಿಕ್ರಮ್ಯ ಸ್ಥವಿರೋಽಪಿ ಶಿಶೋಸ್ತವ|

05166003c ಯುದ್ಧಶ್ರದ್ಧಾಂ ರಣೇ ಚಿಂದ್ಯಾಂ ಜೀವಿತಸ್ಯ ಚ ಸೂತಜ||

ಸೂತಜ! ಇಲ್ಲದಿದ್ದರೆ ನಾನು ವೃದ್ಧನಾಗಿದ್ದರೂ ನೀನು ಶಿಶುವಂತಿದ್ದರೂ ರಣಯುದ್ಧದಲ್ಲಿ ನಿನಗಿರುವ ಶ್ರದ್ಧೆಯನ್ನು ಅಡಗಿಸಿ ಜೀವಿತವನ್ನು ಪುಡಿಮಾಡುತ್ತಿದ್ದೆ.

05166004a ಜಾಮದಗ್ನ್ಯೇನ ರಾಮೇಣ ಮಹಾಸ್ತ್ರಾಣಿ ಪ್ರಮುಂಚತಾ|

05166004c ನ ಮೇ ವ್ಯಥಾಭವತ್ಕಾ ಚಿತ್ತ್ವಂ ತು ಮೇ ಕಿಂ ಕರಿಷ್ಯಸಿ||

ಜಾಮದಗ್ನಿ ರಾಮನು ಬಿಟ್ಟ ಮಹಾಸ್ತ್ರಗಳು ನನ್ನನ್ನು ಅಲುಗಾಡಿಸಲಿಲ್ಲ[1]. ಇನ್ನು ನೀನೇನು ನನಗೆ ಮಾಡುತ್ತೀಯೆ?

05166005a ಕಾಮಂ ನೈತತ್ಪ್ರಶಂಸಂತಿ ಸಂತೋಽತ್ಮಬಲಸಂಸ್ತವಂ|

05166005c ವಕ್ಷ್ಯಾಮಿ ತು ತ್ವಾಂ ಸಂತಪ್ತೋ ನಿಹೀನ ಕುಲಪಾಂಸನ||

ಆತ್ಮಬಲವನ್ನು ಹೊಗಳಿಕೊಳ್ಳುವವರನ್ನು ಸಂತರು ಮೆಚ್ಚುವುದಿಲ್ಲ. ಕುಲಪಾಂಸನ! ಕುಪಿತನಾಗಿ ನನ್ನ ಬಗ್ಗೆ ಹೇಳಿಕೊಳ್ಳುತ್ತಿದ್ದೇನೆ.

05166006a ಸಮೇತಂ ಪಾರ್ಥಿವಂ ಕ್ಷತ್ರಂ ಕಾಶಿರಾಜ್ಞಾಃ ಸ್ವಯಂವರೇ|

05166006c ನಿರ್ಜಿತ್ಯೈಕರಥೇನೈವ ಯತ್ಕನ್ಯಾಸ್ತರಸಾ ಹೃತಾಃ||

ಕಾಶಿರಾಜನ ಸ್ವಯಂವರದಲ್ಲಿ ಸೇರಿದ್ದ ಪಾರ್ಥಿವ ಕ್ಷತ್ರಿಯರನ್ನು ಒಟ್ಟಿಗೇ ಒಂದೇ ರಥದಲ್ಲಿ ಸೋಲಿಸಿ ಕನ್ಯೆಯರರನ್ನು ಅಪಹರಿಸಿದ್ದೆನು[2].

05166007a ಈದೃಶಾನಾಂ ಸಹಸ್ರಾಣಿ ವಿಶಿಷ್ಟಾನಾಮಥೋ ಪುನಃ|

05166007c ಮಯೈಕೇನ ನಿರಸ್ತಾನಿ ಸಸೈನ್ಯಾನಿ ರಣಾಜಿರೇ||

ಹಾಗೆ ಸಹಸ್ರಾರು ವಿಶಿಷ್ಟರನ್ನು ಸೈನ್ಯಗಳೊಂದಿಗೆ ಆ ರಣದಲ್ಲಿ ಪುನಃ ನಾನು ಒಬ್ಬನೇ ಹೊಡೆದೋಡಿಸಿದೆನು.

05166008a ತ್ವಾಂ ಪ್ರಾಪ್ಯ ವೈರಪುರುಷಂ ಕುರೂಣಾಮನಯೋ ಮಹಾನ್|

05166008c ಉಪಸ್ಥಿತೋ ವಿನಾಶಾಯ ಯತಸ್ವ ಪುರುಷೋ ಭವ||

ಕುರುಗಳಲ್ಲಿ ವೈರಪುರುಷನಾದ ನಿನ್ನನ್ನು ಸೇರಿ ಇವರು ಮಹಾ ವಿನಾಶಕ್ಕೆ ಉಪಸ್ಥಿತರಾಗಿದ್ದಾರೆ. ಪ್ರಯತ್ನಿಸಿ ಪುರುಷನಾಗು.

05166009a ಯುಧ್ಯಸ್ವ ಪಾರ್ಥಂ ಸಮರೇ ಯೇನ ವಿಸ್ಪರ್ಧಸೇ ಸಹ|

05166009c ದ್ರಕ್ಷ್ಯಾಮಿ ತ್ವಾಂ ವಿನಿರ್ಮುಕ್ತಮಸ್ಮಾದ್ಯುದ್ಧಾತ್ಸುದುರ್ಮತೇ||

ದುರ್ಮತೇ! ಯಾರೊಂದಿಗೆ ಸ್ಪರ್ಧಿಸುತ್ತಿರುವೆಯೋ ಆ ಪಾಂಡವರೊಂದಿಗೆ ಸಮರದಲ್ಲಿ ಯುದ್ಧಮಾಡು. ನಮ್ಮ ಯುದ್ಧದಿಂದ ನೀನು ಓಡಿ ಹೋಗುವುದನ್ನೂ ನೋಡುತ್ತೇನೆ.””

05166010 ಸಂಜಯ ಉವಾಚ|

05166010a ತಮುವಾಚ ತತೋ ರಾಜಾ ಧಾರ್ತರಾಷ್ಟ್ರೋ ಮಹಾಮನಾಃ|

05166010c ಮಾಮವೇಕ್ಷಸ್ವ ಗಾಂಗೇಯ ಕಾರ್ಯಂ ಹಿ ಮಹದುದ್ಯತಂ||

ಸಂಜಯನು ಹೇಳಿದನು: “ಆಗ ಮಹಾಮನಸ್ವಿ ರಾಜಾ ಧಾರ್ತರಾಷ್ಟ್ರನು ಹೇಳಿದನು: “ಗಾಂಗೇಯ! ನನ್ನನ್ನು ನೋಡು! ಏಕೆಂದರೆ ಮಹಾ ಕಾರ್ಯವನ್ನೆಸಗಬೇಕಾಗಿದೆ.

05166011a ಚಿಂತ್ಯತಾಮಿದಮೇವಾಗ್ರೇ ಮಮ ನಿಃಶ್ರೇಯಸಂ ಪರಂ|

05166011c ಉಭಾವಪಿ ಭವಂತೌ ಮೇ ಮಹತ್ಕರ್ಮ ಕರಿಷ್ಯತಃ||

ಎಲ್ಲಕ್ಕಿಂತ ಮೊದಲು ನನಗೆ ಪರಮ ಶ್ರೇಯಸ್ಕರವಾದುದನ್ನು ಯೋಚಿಸಿ. ನೀವಿಬ್ಬರೂ ನನಗೆ ಮಹಾ ಕಾರ್ಯಗಳನ್ನು ಮಾಡುತ್ತೀರಿ.

05166012a ಭೂಯಶ್ಚ ಶ್ರೋತುಮಿಚ್ಚಾಮಿ ಪರೇಷಾಂ ರಥಸತ್ತಮಾನ್|

05166012c ಯೇ ಚೈವಾತಿರಥಾಸ್ತತ್ರ ತಥೈವ ರಥಯೂಥಪಾಃ||

ಇನ್ನು ನಾನು ಶತ್ರುಗಳ ರಥಸತ್ತಮರ, ಅವರ ಅತಿರಥರ ಮತ್ತು ರಥಯೂಥಪರ ಕುರಿತು ಕೇಳಬಯಸುತ್ತೇನೆ.

05166013a ಬಲಾಬಲಮಮಿತ್ರಾಣಾಂ ಶ್ರೋತುಮಿಚ್ಚಾಮಿ ಕೌರವ|

05166013c ಪ್ರಭಾತಾಯಾಂ ರಜನ್ಯಾಂ ವೈ ಇದಂ ಯುದ್ಧಂ ಭವಿಷ್ಯತಿ||

ಕೌರವ! ಶತ್ರುಗಳ ಬಲಾಬಲಗಳನ್ನು ಕೇಳಲು ಬಯಸುತ್ತೇನೆ. ರಾತ್ರಿ ಕಳೆದು ಬೆಳಗಾದರೆ ಯುದ್ಧ ನಡೆಯಲಿದೆ!”

05166014 ಭೀಷ್ಮ ಉವಾಚ|

05166014a ಏತೇ ರಥಾಸ್ತೇ ಸಂಖ್ಯಾತಾಸ್ತಥೈವಾತಿರಥಾ ನೃಪ|

05166014c ಯ ಚಾಪ್ಯರ್ಧರಥಾ ರಾಜನ್ಪಾಂಡವಾನಾಮತಃ ಶೃಣು||

05166015a ಯದಿ ಕೌತೂಹಲಂ ತೇಽದ್ಯ ಪಾಂಡವಾನಾಂ ಬಲೇ ನೃಪ|

05166015c ರಥಸಂಖ್ಯಾಂ ಮಹಾಬಾಹೋ ಸಹೈಭಿರ್ವಸುಧಾಧಿಪೈಃ||

ಭೀಷ್ಮನು ಹೇಳಿದನು: “ನೃಪ! ರಾಜನ್! ನಾನು ಇಲ್ಲಿರುವ ರಥರನ್ನು, ಅತಿರಥರನ್ನು ಮತ್ತು ಅರ್ಧರಥರನ್ನೂ ಎಣಿಸಿದ್ದೇನೆ. ನೃಪ! ಮಹಾಬಾಹೋ! ಈಗ ನಿನಗೆ ಕುತೂಹಲವಿದ್ದರೆ ಪಾಂಡವರಲ್ಲಿದ್ದವರ ಕುರಿತು, ಪಾಂಡವರ ಬಲದಲ್ಲಿರುವ ರಥರ ಎಣಿಕೆಯನ್ನು ವಸುಧಾಧಿಪರೊಂದಿಗೆ ಕೇಳು.

05166016a ಸ್ವಯಂ ರಾಜಾ ರಥೋದಾರಃ ಪಾಂಡವಃ ಕುಂತಿನಂದನಃ|

05166016c ಅಗ್ನಿವತ್ಸಮರೇ ತಾತ ಚರಿಷ್ಯತಿ ನ ಸಂಶಯಃ||

ಸ್ವಯಂ ರಾಜಾ ಪಾಂಡವ ಕುಂತಿನಂದನನು ರಥೋದಾರನು. ಮಗೂ! ಅವನು ಸಮರದಲ್ಲಿ ಅಗ್ನಿಯಂತೆ ಸಂಚರಿಸುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

05166017a ಭೀಮಸೇನಸ್ತು ರಾಜೇಂದ್ರ ರಥೋಽಷ್ಟಗುಣಸಮ್ಮಿತಃ|

05166017c ನಾಗಾಯುತಬಲೋ ಮಾನೀ ತೇಜಸಾ ನ ಸ ಮಾನುಷಃ||

ರಾಜೇಂದ್ರ! ಭೀಮಸೇನನು ಎಂಟು ರಥರ ಗುಣಸಮ್ಮಿತನಾಗಿದ್ದಾನೆ. ಸಾವಿರ ಆನೆಗಳ ಬಲವನ್ನುಳ್ಳ ಆ ಮಾನೀ ತೇಜಸ್ವಿಯು ಮನುಷ್ಯನಲ್ಲ.

05166018a ಮಾದ್ರೀಪುತ್ರೌ ತು ರಥಿನೌ ದ್ವಾವೇವ ಪುರುಷರ್ಷಭೌ|

05166018c ಅಶ್ವಿನಾವಿವ ರೂಪೇಣ ತೇಜಸಾ ಚ ಸಮನ್ವಿತೌ||

ಇಬ್ಬರು ಮಾದ್ರೀಪುತ್ರರೂ ರಥರು. ಈ ಪುರುಷರ್ಷಭರಿಬ್ಬರೂ ಅಶ್ವಿನಿಯರಂತೆ ರೂಪ ಮತ್ತು ತೇಜಸ್ಸುಗಳಿಂದ ಸಮನ್ವಿತರಾಗಿದ್ದಾರೆ.

05166019a ಏತೇ ಚಮೂಮುಖಗತಾಃ ಸ್ಮರಂತಃ ಕ್ಲೇಶಮಾತ್ಮನಃ|

05166019c ರುದ್ರವತ್ಪ್ರಚರಿಷ್ಯಂತಿ ತತ್ರ ಮೇ ನಾಸ್ತಿ ಸಂಶಯಃ||

ತಮ್ಮ ಕ್ಲೇಶಗಳನ್ನು ಸ್ಮರಿಸಿಕೊಳ್ಳುತ್ತಾ ಇವರು ಸೇನೆಗಳ ಮುಂಭಾಗದಲ್ಲಿ ರುದ್ರರಂತೆ ಸಂಚರಿಸುತ್ತಾರೆ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ.

05166020a ಸರ್ವ ಏವ ಮಹಾತ್ಮಾನಃ ಶಾಲಸ್ಕಂಧಾ ಇವೋದ್ಗತಾಃ|

05166020c ಪ್ರಾದೇಶೇನಾಧಿಕಾಃ ಪುಂಭಿರನ್ಯೈಸ್ತೇ ಚ ಪ್ರಮಾಣತಃ||

ಈ ಎಲ್ಲ ಮಹಾತ್ಮರೂ ಶಾಲಸ್ಕಂಧಗಳಂತೆ ಎತ್ತರವಾಗಿದ್ದಾರೆ. ಪ್ರಮಾಣದಲ್ಲಿ ಅವರು ಉಳಿದ ಪುರುಷರಿಗಿಂತ ಒಂದು ಅಳತೆ ಹೆಚ್ಚಿನವರು.

05166021a ಸಿಂಹಸಂಹನನಾಃ ಸರ್ವೇ ಪಾಂಡುಪುತ್ರಾ ಮಹಾಬಲಾಃ|

05166021c ಚರಿತಬ್ರಹ್ಮಚರ್ಯಾಶ್ಚ ಸರ್ವೇ ಚಾತಿತಪಸ್ವಿನಃ||

ಎಲ್ಲಾ ಪಾಂಡುಪುತ್ರರೂ ಮಹಾಬಲರು, ಸಿಂಹಸಂಹನನರು. ಎಲ್ಲರೂ ಬ್ರಹ್ಮಚರ್ಯವನ್ನು ಪಾಲಿಸುವವರು, ತಪಸ್ವಿಗಳು ಕೂಡ.

05166022a ಹ್ರೀಮಂತಃ ಪುರುಷವ್ಯಾಘ್ರಾ ವ್ಯಾಘ್ರಾ ಇವ ಬಲೋತ್ಕಟಾಃ|

05166022c ಜವೇ ಪ್ರಹಾರೇ ಸಮ್ಮರ್ದೇ ಸರ್ವ ಏವಾತಿಮಾನುಷಾಃ|

05166022e ಸರ್ವೇ ಜಿತಮಹೀಪಾಲಾ ದಿಗ್ಜಯೇ ಭರತರ್ಷಭ||

ವಿನೀತರಾಗಿದ್ದರೂ ಈ ಪುರುಷವ್ಯಾಘ್ರರು ವ್ಯಾಘ್ರದಂತೆ ಬಲೋತ್ಕಟರು. ಎಲ್ಲರೂ ವೇಗದಲ್ಲಿ, ಎಸೆಯುವುದರಲ್ಲಿ ಮತ್ತು ಹೋರಾಡುವುದರಲ್ಲಿ ಅತಿಮಾನುಷರು. ಭರತರ್ಷಭ! ದಿಗ್ವಿಜಯದ ಸಮಯದಲ್ಲಿ ಎಲ್ಲರೂ ಮಹೀಪಾಲರನ್ನು ಗೆದ್ದವರು.

05166023a ನ ಚೈಷಾಂ ಪುರುಷಾಃ ಕೇ ಚಿದಾಯುಧಾನಿ ಗದಾಃ ಶರಾನ್|

05166023c ವಿಷಹಂತಿ ಸದಾ ಕರ್ತುಮಧಿಜ್ಯಾನ್ಯಪಿ ಕೌರವ|

05166023e ಉದ್ಯಂತುಂ ವಾ ಗದಾಂ ಗುರ್ವೀಂ ಶರಾನ್ವಾಪಿ ಪ್ರಕರ್ಷಿತುಂ||

ಕೌರವ! ಯಾವ ಪುರುಷನೂ ಅವರ ಆಯುಧಗಳನ್ನು, ಗದೆಗಳನ್ನು ಮತ್ತು ಶರಗಳನ್ನು ಬಳಸಲಾರ. ಅವರ ಧನುಸ್ಸನ್ನೂ ಕಟ್ಟಲಾರರು. ಅವರ ಗದೆಯನ್ನು ಎತ್ತಲಾರರು. ಬಾಣಗಳನ್ನು ತಡೆಹಿಡಿಯಲಾರರು.

05166024a ಜವೇ ಲಕ್ಷ್ಯಸ್ಯ ಹರಣೇ ಭೋಜ್ಯೇ ಪಾಂಸುವಿಕರ್ಷಣೇ|

05166024c ಬಾಲೈರಪಿ ಭವಂತಸ್ತೈಃ ಸರ್ವ ಏವ ವಿಶೇಷಿತಾಃ||

ಬಾಲಕರಾಗಿದ್ದಾಗ ಕೂಡ ವೇಗದಲ್ಲಿ, ಗುರಿಯಿಡುವುದರಲ್ಲಿ, ಅಪಹರಿಸಿಕೊಂಡು ಹೋಗುವುದರಲ್ಲಿ, ತಿನ್ನುವುದರಲ್ಲಿ, ಮತ್ತು ಸೆಣಸಾಡುವುದರಲ್ಲಿ ಅವರೆಲ್ಲರೂ ನಿಮಗಿಂತ ವಿಶಿಷ್ಟರಾಗಿದ್ದರು.

05166025a ತೇ ತೇ ಸೈನ್ಯಂ ಸಮಾಸಾದ್ಯ ವ್ಯಾಘ್ರಾ ಇವ ಬಲೋತ್ಕಟಾಃ|

05166025c ವಿಧ್ವಂಸಯಿಷ್ಯಂತಿ ರಣೇ ಮಾ ಸ್ಮ ತೈಃ ಸಹ ಸಂಗಮಃ||

ವ್ಯಾಘ್ರರಂತೆ ಬಲೋತ್ಕಟರಾದ ಅವರು ರಣದಲ್ಲಿ ನಿನ್ನ ಸೈನ್ಯವನ್ನು ಎದುರಿಸಿ ವಿಧ್ವಂಸಗೊಳಿಸುತ್ತಾರೆ. ಅವರನ್ನು ಎದುರಿಸುವ ಸಾಹಸ ಮಾಡಬೇಡ!

05166026a ಏಕೈಕಶಸ್ತೇ ಸಂಗ್ರಾಮೇ ಹನ್ಯುಃ ಸರ್ವಾನ್ಮಹೀಕ್ಷಿತಃ|

05166026c ಪ್ರತ್ಯಕ್ಷಂ ತವ ರಾಜೇಂದ್ರ ರಾಜಸೂಯೇ ಯಥಾಭವತ್||

ಒಬ್ಬೊಬ್ಬರನ್ನಾಗಿ ಅವರು ಸಂಗ್ರಾಮದಲ್ಲಿ ಎಲ್ಲ ಮಹೀಕ್ಷಿತರನ್ನು ಕೊಲ್ಲಬಲ್ಲರು. ರಾಜೇಂದ್ರ! ರಾಜಸೂಯದಲ್ಲಿ ಏನಾಯಿತೆನ್ನುವುದನ್ನು ಪ್ರತ್ಯಕ್ಷವಾಗಿ ನೀನು ನೋಡಿದ್ದೀಯೆ.

05166027a ದ್ರೌಪದ್ಯಾಶ್ಚ ಪರಿಕ್ಲೇಶಂ ದ್ಯೂತೇ ಚ ಪರುಷಾ ಗಿರಃ|

05166027c ತೇ ಸಂಸ್ಮರಂತಃ ಸಂಗ್ರಾಮೇ ವಿಚರಿಷ್ಯಂತಿ ಕಾಲವತ್||

ದ್ಯೂತದಲ್ಲಿ ದ್ರೌಪದಿಗಾದ ಪರಿಕ್ಲೇಶವನ್ನು ಮತ್ತು ಹೀಯಾಳಿಸಿದ ಮಾತುಗಳನ್ನು ಸ್ಮರಿಸಿಕೊಂಡು ಅವರು ಸಂಗ್ರಾಮದಲ್ಲಿ ಕಾಲರಂತೆ ಸಂಚರಿಸುತ್ತಾರೆ.

05166028a ಲೋಹಿತಾಕ್ಷೋ ಗುಡಾಕೇಶೋ ನಾರಾಯಣಸಹಾಯವಾನ್|

05166028c ಉಭಯೋಃ ಸೇನಯೋರ್ವೀರ ರಥೋ ನಾಸ್ತೀಹ ತಾದೃಶಃ||

ವೀರ! ನಾರಾಯಣನ ಸಹಾಯವನ್ನು ಪಡೆದಿರುವ ಲೋಹಿತಾಕ್ಷ ಗುಡಾಕೇಶನ ಸದೃಶನಾಗಿರುವ ರಥನು ಎರಡೂ ಸೇನೆಗಳಲ್ಲಿ ಕಂಡುಬರುವುದಿಲ್ಲ.

05166029a ನ ಹಿ ದೇವೇಷು ವಾ ಪೂರ್ವಂ ದಾನವೇಷೂರಗೇಷು ವಾ|

05166029c ರಾಕ್ಷಸೇಷ್ವಥ ಯಕ್ಷೇಷು ನರೇಷು ಕುತ ಏವ ತು||

05166030a ಭೂತೋಽಥ ವಾ ಭವಿಷ್ಯೋ ವಾ ರಥಃ ಕಶ್ಚಿನ್ಮಯಾ ಶ್ರುತಃ|

05166030c ಸಮಾಯುಕ್ತೋ ಮಹಾರಾಜ ಯಥಾ ಪಾರ್ಥಸ್ಯ ಧೀಮತಃ||

ಮಹಾರಾಜ! ಹಿಂದೆ ದೇವತೆಗಳಲ್ಲಿಯಾಗಲೀ, ದಾನವರಲ್ಲಿಯಾಗಲೀ, ಉರಗರಲ್ಲಿಯಾಗಲೀ, ರಾಕ್ಷಸರಲ್ಲಿಯಾಗಲೀ, ಯಕ್ಷರಲ್ಲಿಯಾಗಲೀ, ಇನ್ನು ನರರಲ್ಲೇನು ಧೀಮಂತ ಪಾರ್ಥನಂತೆ ಸಮಾಯುಕ್ತನಾಗಿರುವ ರಥನನ್ನು ಭೂತದಲ್ಲಿಯಾಗಲೀ ಅಥವಾ ಭವಿಷ್ಯದಲ್ಲಿಯಾಗಲೀ ಇರುವರೆಂದು ನಾನು ಕೇಳಿಲ್ಲ.

05166031a ವಾಸುದೇವಶ್ಚ ಸಮ್ಯಂತಾ ಯೋದ್ಧಾ ಚೈವ ಧನಂಜಯಃ|

05166031c ಗಾಂಡೀವಂ ಚ ಧನುರ್ದಿವ್ಯಂ ತೇ ಚಾಶ್ವಾ ವಾತರಂಹಸಃ||

ವಾಸುದೇವನು ಸಾರಥಿ. ಧನಂಜಯನು ಯೋದ್ಧ. ಗಾಂಡೀವವು ದಿವ್ಯ ಧನುಸ್ಸು. ಕುದುರೆಗಳು ಗಾಳಿಯಂತೆ ಹೋಗಬಲ್ಲವುಗಳು.

05166032a ಅಭೇದ್ಯಂ ಕವಚಂ ದಿವ್ಯಮಕ್ಷಯ್ಯೌ ಚ ಮಹೇಷುಧೀ|

05166032c ಅಸ್ತ್ರಗ್ರಾಮಶ್ಚ ಮಾಹೇಂದ್ರೋ ರೌದ್ರಃ ಕೌಬೇರ ಏವ ಚ||

05166033a ಯಾಮ್ಯಶ್ಚ ವಾರುಣಶ್ಚೈವ ಗದಾಶ್ಚೋಗ್ರಪ್ರದರ್ಶನಾಃ|

05166033c ವಜ್ರಾದೀನಿ ಚ ಮುಖ್ಯಾನಿ ನಾನಾಪ್ರಹರಣಾನಿ ವೈ||

ಅವನ ದಿವ್ಯ ಕವಚವು ಅಭೇದ್ಯವಾದುದು. ಎರಡು ಮಹಾ ಭತ್ತಳಿಕೆಗಳು ಅಕ್ಷಯವಾದವುಗಳು. ಅವನ ಅಸ್ತ್ರಗುಚ್ಛಗಳು ಮಹೇಂದ್ರನದು, ರುದ್ರನದು, ಕುಬೇರನದು, ಯಮನದು, ವರುಣನದು. ಅವನ ಗದೆಯು ನೋಡಲು ಉಗ್ರವಾದುದು. ಅವನಲ್ಲಿ ಮುಖ್ಯವಾಗಿ ವಜ್ರಾದಿ ನಾನಾ ಪ್ರಹರಣಗಳಿವೆ.

05166034a ದಾನವಾನಾಂ ಸಹಸ್ರಾಣಿ ಹಿರಣ್ಯಪುರವಾಸಿನಾಂ|

05166034c ಹತಾನ್ಯೇಕರಥೇನಾಜೌ ಕಸ್ತಸ್ಯ ಸದೃಶೋ ರಥಃ||

ಒಂದೇ ರಥದಲ್ಲಿ ಸಹಸ್ರಾರು ಹಿರಣ್ಯಪುರವಾಸಿನಿ ದಾನವರನ್ನು ಸಂಹರಿಸಿದನು[3]. ಇವನ ಸದೃಶರಾದ ರಥರು ಯಾರಿದ್ದಾರೆ?

05166035a ಏಷ ಹನ್ಯಾದ್ಧಿ ಸಂರಂಭೀ ಬಲವಾನ್ಸತ್ಯವಿಕ್ರಮಃ|

05166035c ತವ ಸೇನಾಂ ಮಹಾಬಾಹುಃ ಸ್ವಾಂ ಚೈವ ಪರಿಪಾಲಯನ್||

ಈ ಸಂರಂಭೀ, ಬಲವಾನ್, ಸತ್ಯವಿಕ್ರಮಿ ಮಹಾಬಾಹುವು ತನ್ನ ಸೇನೆಯನ್ನು ರಕ್ಷಿಸಿಕೊಂಡು ನಿನ್ನ ಸೇನೆಯನ್ನು ಹೊಡೆದುರುಳಿಸಬಲ್ಲನು.

05166036a ಅಹಂ ಚೈನಂ ಪ್ರತ್ಯುದಿಯಾಮಾಚಾರ್ಯೋ ವಾ ಧನಂಜಯಂ|

05166036c ನ ತೃತೀಯೋಽಸ್ತಿ ರಾಜೇಂದ್ರ ಸೇನಯೋರುಭಯೋರಪಿ||

ಧನಂಜಯನನ್ನು ನಾನು ಅಥವಾ ಆಚಾರ್ಯನು ಎದುರಿಸಬಲ್ಲೆವು. ರಾಜೇಂದ್ರ! ಎರಡೂ ಸೇನೆಗಳಲ್ಲಿ ಮೂರನೆಯವರು ಯಾರೂ ಇಲ್ಲ.

05166036e ಯ ಏನಂ ಶರವರ್ಷಾಣಿ ವರ್ಷಂತಮುದಿಯಾದ್ರಥೀ|

05166037a ಜೀಮೂತ ಇವ ಘರ್ಮಾಂತೇ ಮಹಾವಾತಸಮೀರಿತಃ||

ಆ ರಥಿಯು ಬಾಣಗಳ ಮಳೆಯನ್ನು ಸುರಿಸಿ ಬೇಸಿಗೆಯ ಕೊನೆಯಲ್ಲಿ ಮಹಾ ಭಿರುಗಾಳಿಯಿಂದ ಎಬ್ಬಿಸಲ್ಪಟ್ಟ ಮೋಡಗಳಂತೆ ಮೇಲೇರುತ್ತಾನೆ.

05166037c ಸಮಾಯುಕ್ತಸ್ತು ಕೌಂತೇಯೋ ವಾಸುದೇವಸಹಾಯವಾನ್|

05166037e ತರುಣಶ್ಚ ಕೃತೀ ಚೈವ ಜೀರ್ಣಾವಾವಾಮುಭಾವಪಿ||

ಆದರೆ ವಾಸುದೇವನ ಸಹಾಯವನ್ನು ಪಡೆದ ಕೌಂತೇಯನು ತರುಣ ಮತ್ತು ಕೌಶಲಿ. ನಾವಿಬ್ಬರೂ ವಯಸ್ಸಾದವರು, ಜೀರ್ಣರಾದವರು.””

05166038 ಸಂಜಯ ಉವಾಚ|

05166038a ಏತಚ್ಚ್ರುತ್ವಾ ತು ಭೀಷ್ಮಸ್ಯ ರಾಜ್ಞಾಂ ದಧ್ವಂಸಿರೇ ತದಾ|

05166038c ಕಾಂಚನಾಂಗದಿನಃ ಪೀನಾ ಭುಜಾಶ್ಚಂದನರೂಷಿತಾಃ||

05166039a ಮನೋಭಿಃ ಸಹ ಸಾವೇಗೈಃ ಸಂಸ್ಮೃತ್ಯ ಚ ಪುರಾತನಂ|

05166039c ಸಾಮರ್ಥ್ಯಂ ಪಾಂಡವೇಯಾನಾಂ ಯಥಾಪ್ರತ್ಯಕ್ಷದರ್ಶನಾತ್||

ಸಂಜಯನು ಹೇಳಿದನು: “ಭೀಷ್ಮನ ಈ ಮಾತುಗಳನ್ನು ಕೇಳಿ, ಪಾಂಡವೇಯರ ಪುರಾತನ ಸಾಮರ್ಥ್ಯವನ್ನು ತಮ್ಮ ಕಣ್ಮುಂದೆಯೇ ನಡೆಯಿತೋ ಎನ್ನುವಂತೆ ನೆನಪಿಸಿಕೊಂಡು, ಆವೇಗ ಚಿಂತೆಗಳಿಂದ ಕೂಡಿ ರಾಜರ ಕಾಂಚನಾಂಗದಿ, ಚಂದನ ರೂಷಿತ, ತುಂಬಿದ ಬಾಹುಗಳು ಸಡಿಲವಾಗಿ ಜೋತುಬಿದ್ದವು.

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ರಥಾಥಿರಥಸಂಖ್ಯಾನ ಪರ್ವಣಿ ಪಾಂಡವರಥಾಥಿರಥಸಂಖ್ಯಾಯಾಂ ಷಡ್‌ಷಷ್ಟ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ರಥಾಥಿರಥಸಂಖ್ಯಾನ ಪರ್ವದಲ್ಲಿ ಪಾಂಡವರಥಾಥಿರಥಸಂಖ್ಯೆಯಲ್ಲಿ ನೂರಾಅರವತ್ತಾರನೆಯ ಅಧ್ಯಾಯವು.

Image result for flowers against white background"

[1] ಅಂಬೆಯ ಕಾರಣದಿಂದಾಗಿ ಭೀಷ್ಮ ಮತ್ತು ಪರಶುರಾಮರ ನಡುವೆ ನಡೆದ ಯುದ್ಧದ ಕುರಿತು ಮುಂದೆ ಉದ್ಯೋಗ ಪರ್ವದ ಅಧ್ಯಾಯ ದಲ್ಲಿ ಭೀಷ್ಮನೇ ದುರ್ಯೋಧನನಿಗೆ ವರ್ಣಿಸುತ್ತಾನೆ.

[2] ಈ ಪ್ರಕರಣದ ವರ್ಣನೆಯು ಹಿಂದೆ ಆದಿ ಪರ್ವದ ಅಧ್ಯಾಯ ೯೬ರಲ್ಲಿ ಬಂದಿದೆ. ಪುನಃ ಇದರ ವರ್ಣನೆಯನ್ನು ಉದ್ಯೋಗ ಪರ್ವದ ಅಧ್ಯಾಯ ೧೭೦ರಲ್ಲಿ ಭೀಷ್ಮನು ದುರ್ಯೋಧನನಿಗೆ ನೀಡುತ್ತಾನೆ.

[3] ಅರ್ಜುನನು ಹಿರಣ್ಯಪುರಿಯನ್ನು ನಾಶಪಡಿಸಿದ ಪ್ರಕರಣದ ವರ್ಣನೆಯು ಹಿಂದೆ ಅರಣ್ಯಕ ಪರ್ವದ ಅಧ್ಯಾಯ ೧೭೦ರಲ್ಲಿ ಬಂದಿದೆ.

Comments are closed.